Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ.ರಾಮು

ಸಹಕಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ದುಡಿದವರು ಸಿ. ರಾಮು, ರಾಮನಗರ ಜಿಲ್ಲೆಯ ವಿಶಿಷ್ಟ ಪ್ರತಿಭೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುಪ್ಪೆಪಾಳ್ಯದವರಾದ ಸಿ.ರಾಮು ಅವರು ಬಿಸ್ಕೂರ್ನಲ್ಲಿ ಪ್ರಾಥಮಿಕ, ಕುದೂರಿನಲ್ಲಿ ಪ್ರೌಢಶಾಲಾ ಶಿಕ್ಷಣ, ಬೆಂಗಳೂರಿನಲ್ಲಿ ಐಟಿಐ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದವರು. ೧೯೬೫ರಲ್ಲಿ ಹೆಚ್ ಎಂ.ಟಿ ಗಡಿಯಾರ ಕಾರ್ಖಾನೆಗೆ ಸಾಮಾನ್ಯ ನೌಕರರಾಗಿ ಸೇರಿ ಕಾರ್ಮಿಕ ನಾಯಕರಾಗಿ ರೂಪಗೊಂಡವರು, ಕಾರ್ಖಾನೆಯ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ೧೯೯೨ರಲ್ಲಿ ಪೀಣ್ಯದಲ್ಲಿ ಸ್ವಂತ ಕಾರ್ಖಾನೆಯನ್ನು ತೆರೆದು ಹೆಚ್ ಎಂ ಟಿ ಕಾರ್ಖಾಣೆಗೆ ಬಿಡಿಭಾಗಗಳನ್ನು ಸರಬರಾಜು ಮಾಡುತ್ತಿದ್ದ ಅವರು ಆತ್ಮೀಯ ಗೆಳೆಯರ ಬಳಗ ಎಂಬ ಗೃಹ ನಿರ್ಮಾಣ ಸಂಸ್ಥೆ ಆರಂಭಿಸಿ ೪೦೦ಕ್ಕೂ ಹೆಚ್ಚು ನಿವೇಶನ ಹಂಚಿದವರು. ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಜನತಾ ಸೇವಾ ಕೋಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ೧೯ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬ್ಯಾಂಕ್ ಅನ್ನು ಆರ್ಥಿಕವಾಗಿ ಸದೃಢಗೊಳಿಸಿದವರು. ಉತ್ತಮ ಸಹಕಾರಿ ಪ್ರಶಸ್ತಿಯನ್ನೂ ಪಡೆದಿರುವ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕುವೆಂಪು ಪ್ರಶಸ್ತಿ, ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.