Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹಿರಿಯಡ್ಕ ಗೋಪಾಲರಾವ್

ನಾಡೋಜ ಹಿರಿಯಡ್ಕ ಗೋಪಾಲರಾವ್ ನಾಡು ಕಂಡ ಅನನ್ಯ ಮದ್ದಳೆಗಾರ, ಯಕ್ಷಗಾನವನ್ನು ಪ್ರಪ್ರಥಮಬಾರಿಗೆ ವಿದೇಶಕ್ಕೆ ಕೊಂಡೊಯ್ದ ಮದ್ದಳೆಯ ಮಾಂತ್ರಿಕ.
೧೯೧೯ರಲ್ಲಿ ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾವ್ ಅವರ ಕಲಾಪ್ರೇಮಕ್ಕೆ ತಂದೆಯೇ ಸ್ಫೂರ್ತಿ. ೧೬ನೇ ವಯಸ್ಸಿನಲ್ಲೇ ತಂದೆಯಿಂದ ಮದ್ದಳೆ ಅಭ್ಯಾಸ. ೧೯೩೪ರಲ್ಲಿ ಹಿರಿಯಡ್ಕ ಮೇಳದಲ್ಲಿ ಪ್ರಾತಧಾರಿಯಾಗಿ ಕಲಾಲೋಕಕ್ಕೆ ಪಾದಾರ್ಪಣೆ. ಆನಂತರ ಉಪಮದ್ದಳೆಗಾರ, ಮದ್ದಳೆಗಾರರಾಗಿ ರೂಪಾಂತರು. ಕಡಲತೀರಭಾರ್ಗವ ಡಾ. ಶಿವರಾಮಕಾರಂತರ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ. ಆನಂತರ ನಿರಂತರ ಕಲಾಪ್ರದರ್ಶನ, ಮಂದಾರ್ತಿ ಕಲಾಮೇಳ, ಬ್ರಹ್ಮಾವರದ ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ಕಲಾಸೇವೆ. ರಾಜ್ಯಾದ್ಯಂತ ಮಾತ್ರವಲ್ಲದೆ, ಈಶಾನ್ಯ ಭಾರತ, ಜರ್ಮನಿ ಸೇರಿ ಹಲವು ವಿದೇಶಗಳಲ್ಲಿ ಮದ್ದಳೆಯ ನಾದವೈಭವದ ದರ್ಶನ. ವಿದೇಶಿಗರಿಗೆ ಯಕ್ಷಗಾನ ಕಲಿಸಿದ ಈ ಗುರುವಿಗೆ ಈಗ ೯೯ರ ಇಳಿವಯಸ್ಸು. ಆದರೂ ಬತ್ತದ ಉತ್ಸಾಹ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಹಾಗೂ ನಾಡೋಜ ಗೌರವಕ್ಕೆ ಪಾತ್ರರು.