Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸರಸ್ವತಿ ಚಿಮ್ಮಲಗಿ

ವಿಜಯಪುರದವರಾದ ಡಾ. ಸರಸ್ವತಿ ಚಿಮ್ಮಲಗಿ ಅವರು ಬಹುಮುಖ ಪ್ರತಿಭೆಯ ಲೇಖಕಿ. ಮಹಿಳಾ ಸಂಘಟಕಿ, ಉಪನ್ಯಾಸಕಿ ಹಾಗೂ ಹೋರಾಟಗಾರ್ತಿಯಾಗಿಯೂ ಹೆಜ್ಜೆಗುರುತು ಮೂಡಿಸಿದ ಸಾಧಕಿ.
ವಿಜಯಪುರದಲ್ಲಿ ೧೯೫೦ರ ಡಿಸೆಂಬರ್ ೨೪ರಂದು ಜನಿಸಿದ ಸರಸ್ವತಿ ಚಿಮ್ಮಲಗಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು, ಕನ್ನಡ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದವರು, ಬಂಡಾಯದ ಮನೋಧರ್ಮದಿಂದಲೇ ಬರವಣಿಗೆಗೆ ಧುಮುಕಿದವರು. ನಾವು ನಿಮ್ಮವರೇ ಸ್ವಾಮಿ, ಸಾಹಿತ್ಯ ವಿಹಾರ, ಮುಳ್ಳುಬೇಲಿ, ಹಡೆದವ್ವ, ಬಾಳು ಕೊಡವ್ವ ನೋವಾಮಿ, ರಂಗಾರೇರು, ಹಳೆ ನೆನಪು ಹಸಿರಾದಾಗ ಮುಂತಾದ ಕೃತಿಗಳ ರಚನಕಾರರು.ರಂಗಭೂಮಿಯಲ್ಲೂ ತೊಡಗಿಕೊಂಡಿರುವ ಚಿಮ್ಮಲಗಿ ನಟಿಯೂ ಸಹ.ಕತ್ತಲೆ ಬೆಳಕು, ಅಮ್ಮಾವ್ರ ಗಂಡ, ಕಾಡುಕುದುರೆ ಮುಂತಾದ ನಾಟಕ, ಹಳ್ಳಿಹಳ್ಳಿಯ ಕಥೆ, ನೋಸಿಲಾ ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಕವಯತ್ರಿಯರ ಸಮ್ಮೇಳನ, ಟರ್ಕಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿರುವ ಅವರು ಸಮಾಜಸೇವಾ ಕಾರ್ಯದಲ್ಲೂ ಸದಾ ಮುಂದು.ಅಂತಾರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ, ಆದರ್ಶ ಸ್ತ್ರೀರತ್ನ ಪ್ರಶಸ್ತಿ, ಅತ್ತಿಮಬ್ಬೆ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರತಿಭಾವಂತರು.