Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಜಯರಾಮ ಬನನ್

ಭಾರತೀಯ ಹೋಟೆಲ್ ಉದ್ಯಮದಲ್ಲಿ ವಿಕ್ರಮಗಳನ್ನು ದಾಖಲಿಸಿದ ವಿಶಿಷ್ಟ ಉದ್ಯಮಿ ಜಯರಾಮ ಬನನ್, ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದ ಸಮಾಜಮುಖಿ, ಸಾವಿರಾರು ಮಂದಿಯ ಸ್ವಾವಲಂಬಿ ಬದುಕಿಗೆ ಪ್ರೇರಕಶಕ್ತಿ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಠದಬೆಟ್ಟುವಿನಲ್ಲಿ ೧೯೫೫ರಲ್ಲಿ ಜನಿಸಿದ ಜಯರಾಮ್ ೧೩ನೇ ವಯಸ್ಸಿನಲ್ಲಿ ಮನೆ-ಊರು ತೊರೆದು ಮುಂಬಯಿಗೆ ವಲಸೆ ಹೋದರೂ ಎರಡೊತ್ತಿನ ಊಟಕ್ಕೂ ತತ್ವಾರಪಟ್ಟು ಘಾಜಿಯಾಬಾದ್‌ಗೆ ಗುಳೆ. ಅಲ್ಪದುಡಿಮೆಯ ಐದು ಸಾವಿರ ರೂಪಾಯಿ ಹಣ ಹೂಡಿ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ “ಸಾಗರ ರತ್ನ” ಹೋಟೆಲ್ ತೆರೆದರು. ಸತತ ಶ್ರಮ, ಶುದ್ಧ ಆಹಾರ, ಸ್ವಚ್ಛವಾತಾವರಣ ಮತ್ತು ಗ್ರಾಹಕಸ್ನೇಹಿ ನಡೆಯಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡ ಜಯರಾಮ್‌ ಆನಂತರ ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ತೆಗೆದದ್ದು ಇತಿಹಾಸ. ದೇಶಾದ್ಯಂತ ಸದ್ಯ ೧೦೫ಕ್ಕೂ ಹೆಚ್ಚು ಶಾಖೆಗಳು ಮತ್ತು ಸ್ವಾಗತ್ ಹೋಟೆಲ್‌ಗಳ ಮಾಲೀಕರು, ಬನನ್ ಸದಾ ಸಮಾಜಸೇವಾನಿರತರು. ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಭರಿಸುವ ಅವರು ಸಂಘಸಂಸ್ಥೆ, ದೇವಾಲಯಗಳು, ಸಂಘಸಂಸ್ಥೆಗಳಿಗೆ ದೇಣಿಗೆ ನೀಡುವ ಕೊಡುಗೈ ದಾನಿ. ಜಿಆರ್‌ಬಿ ಕಂಪನಿ ಮೂಲಕ ಕರ್ನಾಟಕದ ೨ ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಿರುವ, ಕಾರ್ಮಿಕ ಮಕ್ಕಳ ಶಿಕ್ಷಣ–ಮದುವೆಗಳಿಗೆ ನೆರವಾಗುವ ಜಯರಾಮ ಹೃದಯವಂತಿಕೆ, ಸರಳತೆ, ಮಾನವೀಯತೆವುಳ್ಳ ವಿರಳ ಉದ್ಯಮಿ.