Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಸಮಾಜಮುಖಿ ಯೋಜಕ – ಕೆ. ಕೆ. ಪೈ

“ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯಿದೆ. ಜತೆಗೆ ವಾಣಿಜ್ಯ, ವಿದ್ಯೆ ಮುಂತಾದ ಅಭಿವೃದ್ಧಿ ಪೂರಕ ವಿಭಾಗಗಳಲ್ಲಿ ಈ ಪ್ರದೇಶ ಅಳಿಸಲಾಗದ ಹೆಜ್ಜೆಗಳನ್ನು ಮೂಡಿಸಿ ಭಾರತದ ಇತಿಹಾಸದಲ್ಲಿ ಗಣನೀಯ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ. ಪರಸ್ಪರ ಸಾಮರಸ್ಯ ಹಾಗೂ ವಿವಿಧ ಭಾಷೆಗಳ ಬಗ್ಗೆ ಒಲವು ಈ ಪ್ರದೇಶದ ಹೆಗ್ಗಳಿಕೆ. ಈ ಎಲ್ಲ ಸಿದ್ಧಿ ಸಾಧನೆಗಳ ಪರಿಚಯ ನಾಡಿನ ಜನತೆಗೆ ಈ ಸಮ್ಮೇಳನ ಮೂಲಕ ಆಗಬೇಕೆಂದು ನನ್ನ ಬಯಕೆ. 2007ರ ದಶಂಬರ ತಿಂಗಳ ಮಧ್ಯ ಭಾಗದಲ್ಲಿ ಉಡುಪಿಯಲ್ಲಿ ಜರಗಿದ ಅಖಿಲಭಾರತ ಕನ್ನಡ ಸಮ್ಮೇಳನದ ಕುರಿತು ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ಕೆ.ಕೆ. ಪೈಗಳು ಸಮ್ಮೇಳನದ ಸ್ಮರಣ ಸಂಚಿಕೆ ‘ಮೋಹನ ಮುರಳಿಯಲ್ಲಿ ವ್ಯಕ್ತಪಡಿಸಿದ ಅವರ ಅಂತರಾಳದಿಂದ ಮೂಡಿಬಂದ ಈ ಮಾತುಗಳು ಇವರ ಒಟ್ಟಾರೆ ಕಾಳಜಿಗೆ ಕನ್ನಡಿ ಹಿಡಿಯುತ್ತವೆ.

Categories
ಕೃಷಿ ಪುಸ್ತಕಗಳಿಂದ

ಶತಶೃಂಗದ ಸಾಲಿನಲ್ಲಿ… ಕೃಷಿ ಬರಹಗಳ ಸಂಕಲನ

ಕೃತಿ: ಶತಶೃಂಗದ ಸಾಲಿನಲ್ಲಿ… ಕೃಷಿ ಬರಹಗಳ ಸಂಕಲನ

ಲೇಖಕರು:ಆನಂದತೀರ್ಥ ಪ್ಯಾಟಿ

ಕೃತಿಯನ್ನು ಓದಿ

Categories
ಅಡ್ಡೂರು ಕೃಷ್ಣರಾವ್ ಜಲಕೊಯ್ಲು ಪರಿಸರ

ಅಂಕಣಗಳು – ಅಡ್ಡೂರು ಕೃಷ್ಣರಾವ್

ಕೃತಿ: ಅಂಕಣಗಳು – ಅಡ್ಡೂರು ಕೃಷ್ಣರಾವ್

ಲೇಖಕರು:ಅಡ್ಡೂರು ಕೃಷ್ಣರಾವ್

ಕೃತಿಯನ್ನು ಓದಿ     |     Download

Categories
ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು ಕೃಷಿ ಪುಸ್ತಕಗಳಿಂದ ಸಹಜ ಸಮೃದ್ಧ ಪ್ರಕಾಶನ

ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು : ಇದೆಂಥ ವಿಪರ್ಯಾಸ ನೋಡಿ ! : ಪ್ರೊ. ದೇವೇಂದ್ರ ಶರ್ಮ : ಕನ್ನಡಕ್ಕೆ: ನಾಗೇಶ ಹೆಗಡೆ

ಇದೆಂಥ ವಿಪರ್ಯಾಸ ನೋಡಿ !

ಜಾಗತೀಕರಣದ ನಂತರ ಇಡೀ ದೇಶ ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದತೊಡಗಿದೆ ಎಂದು ಅಧಿಕಾರದ ಪೀಠದಲ್ಲಿರುವ ಎಲ್ಲರೂ ಹೇಳುತ್ತಿದ್ದಾರೆ. ನಗರಗಳಲ್ಲಿ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಏರುತ್ತಿದೆ. ಶೇರು ಮಾರುಕಟ್ಟೆಯ ಸೂಚ್ಯಂಕ ಏರುತ್ತಿದೆ. ಹಣದ ವಹಿವಾಟಿನ ಮೊತ್ತ ಏರುತ್ತಿದೆ. ವಿದೇಶೀ ಸಾಮಗ್ರಿಗಳ ರಾಶಿ ಏರುತ್ತಿದೆ. ಕೋಟ್ಯಧೀಶರ ಧನರಾಶಿ ಏರುತ್ತಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ಸಾಮಾನ್ಯ ರೈತರ ಸಂಕಟಗಳೂ ಏರುತ್ತಿವೆ. ವಾಸ್ತವ ಚಿತ್ರಣ ಏನು ಎಂಬುದನ್ನು ಕೃಷಿ ತಜ್ಞ  ಡಾ. ದೇವೇಂದ್ರ ಶರ್ಮಾ ಇಲ್ಲಿ ವಿವರಿಸಿದ್ದಾರೆ.

Categories
ಕೃಷಿ

ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನಗಳು

ಕೃತಿ: ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನಗಳು

ಲೇಖಕರು: ಮಲ್ಲಿಕಾರ್ಜುನ ಹೊಸಪಾಳ್ಯ

ಕೃತಿಯನ್ನು ಓದಿ     |     Download

Categories
ಪರಿಸರ

ಮರ ಏರುವ ವಿಜ್ಞಾನ

ಅಕ್ಟೊಬರ್ 17 ರಂದು ನಮ್ಮ ತಲ­ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿ­ದ್ದಾಗ, ಅತ್ತ ಮಾಲ್ಡೀವ್ಸ್ ಎಂಬ ದ್ವೀಪ­ರಾಷ್ಟ್ರದ ಹನ್ನೆರಡು ಸಂಸದರು ಸಮುದ್ರ ತಳದಲ್ಲಿ ಕೂತು ಸಂಪುಟ ಸಭೆ ನಡೆಸಿದರು. ಮೈತುಂಬ ರಬ್ಬರ್ ಉಡುಗೆ ಧರಿಸಿ, ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಬಿಗಿದು, ಕಾಲಿಗೆ ಜಾಲಪಾದರಕ್ಷೆ ಸಿಕ್ಕಿಸಿಕೊಂಡು, ನೀರೊಳಕ್ಕೆ ಮುಳುಗಿ ಕೈಸನ್ನೆಗಳ ಮೂಲಕ ಹನ್ನೆರಡು ನಿಮಿಷಗಳ ಸಾಂಕೇತಿಕ ಸಭೆ ನಡೆಸಿ ಮೇಲೆದ್ದು ಬಂದರು. ‘ಭೂಮಿಯ ತಾಪಮಾನ ಹೀಗೆಯೇ ಏರುತ್ತಿದ್ದರೆ ನಮ್ಮ ಇಡೀ ದೇಶ ಮುಳುಗಿ ಹೋಗುತ್ತದೆ; ನಮ್ಮನ್ನು ನಡುನೀರಲ್ಲಿ ಕೈಬಿಡಬೇಡಿ’ ಎಂಬ ಆರ್ತ ಸಂದೇಶವನ್ನು ಜಗತ್ತಿಗೆ ಬಿತ್ತರಿಸಿದರು.
ಜನಪ್ರತಿನಿಧಿಗಳೆಂದರೆ ತಮ್ಮ ಹಿತಕ್ಕಾಗಿ ದೇಶವನ್ನೇ ಮುಳುಗಿಸಲೂ ಹಿಂದೆಮುಂದೆ ನೋಡು­ವುದಿಲ್ಲ ಎಂಬ ಭಾವನೆಯನ್ನು ತೊಡೆದು ಹಾಕುವಂತೆ ಈ ಪುಟ್ಟ ರಾಷ್ಟ್ರದ ಸಂಸ­ದರು ಮೈಚಳಿ ಬಿಟ್ಟು ನೀರಿಗೆ ಧುಮುಕಿದ್ದು ವಿಶೇಷ­ವೇನೊ ಹೌದು. ಆದರೆ ಅದು ಏಕಮೇವಾದ್ವಿತೀಯವೇನೂ ಅಲ್ಲ. ಇಂಥ­ದೊಂದು ಸಾಹಸ ಹಿಂದೆಯೂ ನಡೆದಿತ್ತು.
ಏಳು ವರ್ಷಗಳ ಹಿಂದೆ ಅಮೆರಿಕದ ವಾಷಿಂಗ್ಟನ್ ರಾಜ್ಯದ 12 ಶಾಸಕರು ಒಟ್ಟಾಗಿ ಒಂದೇ ಮರವನ್ನು ಏರಿದ್ದರು. ದಟ್ಟ ಮಳೆ­ಕಾಡಿನಲ್ಲಿ 60 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ, ಹಗ್ಗ ಮತ್ತು ರಾಟೆಯ ಮೂಲಕ ಒಬ್ಬೊ­ಬ್ಬರನ್ನಾಗಿ ಮೇಲಕ್ಕೆಳೆದು ಕೂರಿಸ­ಲಾಗಿತ್ತು. ಅಟ್ಟಣಿಗೆಯ ಮೇಲೆ ಅವರೆಲ್ಲರ ಒಂದು ಪುಟ್ಟ ಸಮ್ಮೇಳನವನ್ನು ಏರ್ಪ­ಡಿ­ಸಲಾಗಿತ್ತು. ಜತೆಗಿದ್ದ ವೃಕ್ಷವಿಜ್ಞಾನಿಗಳು ಈ ಶಾಸಕರಿಗೆ ಅಲ್ಲೇ ಅರಣ್ಯ ಜೀವಜಾಲದ ಪಾಠ ಹೇಳಿದರು. ಮಳೆಕಾಡುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಹೇಳಿದರು. ಬರಲಿರುವ ಬಿಸಿ ಪ್ರಳಯದ ಸಂದರ್ಭದಲ್ಲಿ ಈ ವೃಕ್ಷಗಳು ಹೇಗೆ ಋತುಮಾನ ರಕ್ಷಣೆ ಹಾಗೂ ಜೀವ­ಸಂರಕ್ಷಣೆಯ ಅಂತಿಮ ಆಸರೆ ಆಗಬಹುದು ಎಂದು ವಿವರಿಸಿದರು.

ಮರಗಳ ಮಹತ್ವವನ್ನು ಸಾರಲೆಂದು ಮುಂದಿನವಾರ ವಿಶಿಷ್ಟ ‘ಕ್ಯಾನೊಪಿ ಸಮ್ಮೇಳನ’ ಬೆಂಗಳೂರಿನಲ್ಲಿ ನಡೆಯಲಿದೆ. ನಾಡಿನ ಇಕಾಲಜಿ ಮತ್ತು ಜೀವಸಂಪತ್ತಿನ ಅಧ್ಯಯನ ನಡೆಸುತ್ತಿರುವ ‘ಏಟ್ರೀ’ ಸಂಸ್ಥೆಯ ಆಶ್ರಯದಲ್ಲಿ ಏಷ್ಯದಲ್ಲೇ ಮೊದಲ ಬಾರಿಗೆ ಏರ್ಪಾಟಾಗಿರುವ ಈ ಅಂತರರಾಷ್ಟ್ರೀಯ ಮೇಳಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ವೃಕ್ಷತಜ್ಞರು ಬರತೊಡಗಿದ್ದಾರೆ. ಮರ ಏರುವಲ್ಲಿ ನಿಷ್ಣಾತರೆನಿಸಿದ ಇಬ್ಬರು ಹಿರಿಯ ಮಹಿಳಾ ವಿಜ್ಞಾನಿಗಳೂ ಬರುತ್ತಿದ್ದಾರೆ.
ಮರಗಳ ಮೇಲ್ಛಾವಣಿಯ ಜಗತ್ತು ಈಚಿನವರೆಗೂ ವಿಜ್ಞಾನಕ್ಕೆ ಅಪರಿಚಿತವಾಗಿಯೇ ಉಳಿದಿತ್ತು. ಇದಕ್ಕೊಂದು ವಿಲಕ್ಷಣ ಕಾರ­ಣವಿದೆ: ವಾನರನೆಂಬ ಪ್ರಾಣಿ ಮರದಿಂದ ಇಳಿದ ನಂತರವೇ ಮನುಷ್ಯನಾದ ತಾನೆ? ಕಾಡಿನಿಂದ ದೂರ ಹೋದಷ್ಟೂ ಮನುಷ್ಯ ‘ನಾಗರಿಕ’ ಎನ್ನಿಸಿಕೊಳ್ಳುತ್ತಾನೆ. ಈಗಲೂ ಮರ ಏರುವ ಸಾಮರ್ಥ್ಯ ಇರುವುದು ಮಣ್ಣಿನ ಮಕ್ಕಳಿಗೆ ಮಾತ್ರ. ಯಾವುದೇ ಹಳ್ಳಿಯ ಹೈದ ಪ್ಯಾಂಟ್ ಏರಿಸಿದ ಎಂದರೆ ಮರ ಏರುವುದನ್ನು ಮರೆತ ಎಂತಲೇ ಅರ್ಥ.
ಕಾಲೇಜು ಮೆಟ್ಟಿಲು ಹತ್ತಿ­ದ­ರಂತೂ ಮುಗಿಯಿತು. ಹೀಗಿರುವಾಗ ವಿಜ್ಞಾನಿ­ಗಳು ಮರ ಏರುವುದುಂಟೆ? ಅವರು ಯಂತ್ರಗಳ ಮೂಲಕ ಗಗನಚುಂಬಿ ಕಟ್ಟಡಗಳನ್ನು ಏರ­ಬಹುದು; ಅಥವಾ ಆಳದ ಗಣಿಗಳಲ್ಲಿ ಇಳಿ­ಯ­ಬಹುದು. ಗಗನ ನೌಕೆ ಏರಬಹುದು; ಸಬ್‌ಮರೀನ್‌ನಲ್ಲಿ ಕೂತು ಸಾಗರದ ತಳವನ್ನು ತಡಕಾಡಬಹುದು. ಆದರೆ ಮರಗಳನ್ನು ಏರಬಲ್ಲ ಯಂತ್ರ ಎಲ್ಲಿದೆ? ಯಂತ್ರವಿದ್ದರೂ ಮರ ಏರಲು ಬೇಕಾದ ಎಂಟೆದೆ ಎಲ್ಲಿದೆ?
ಮರ ಏರಲು ನಿಜಕ್ಕೂ ಎಂಟೆದೆ ಬೇಕು. ಗುರುತ್ವದ ವಿರುದ್ಧ ಏರಿ ಸಾಗುವ ಸ್ನಾಯುಬಲ ಬೇಕು. ಕೆಳಗಿನ ಆಳವನ್ನು ನೋಡಿ ತಲೆ ತಿರುಗ­ಬಾರದು. ಕೊಂಬೆ ತೊನೆದರೆ ಕೈಸಡಿಲಿಸ­ಬಾರದು. ಅಲ್ಲಿನ ಪಾಚಿ, ಅಣಬೆ, ತುರಿಕೆ ಎಬ್ಬಿಸುವ ಲೋಳೆಪೊರೆಗಳ ವಿರೋಧಗಳನ್ನೆಲ್ಲ ಮೀರಿ ಏರುವ ಛಾತಿ ಬೇಕು. ಇಷ್ಟಲ್ಲದೆ ಅಲ್ಲಿ ವಾಸಿಸುವ ಕಣಜ, ಇರುವೆ, ಸಹಸ್ರಪದಿ, ಜೇನು, ಹಾವುಚೇಳು ಅಥವಾ ಪಕ್ಷಿಗಳು ದಾಳಿ ನಡೆಸಿದರೆ ಎದುರಿಸುವ ತಾಕತ್ತು ಇರಬೇಕು. ಇಷ್ಟಕ್ಕೂ ಯಾಕೆ ಮರ ಏರಬೇಕು? ಬೆಲ್ಲ ಸಕ್ಕರೆಗಳಿಂದ ವಂಚಿತರಾದ ಕಾಡು ಜನರು ಜೇನಿಗಾಗಿ ಮರ ಏರುತ್ತಾರೆ. ನಾಡಿನ ಜನರಿಗೆ ಛಾವಣಿ ವೃಕ್ಷಗಳಿಂದ ಯಾವ ಲಾಭವಿದೆ?
ಯಾವ ಲಾಭ ಇಲ್ಲದೆಯೂ ಶಿಲಾರೋಹಣ, ಅಲೆಗಳ ಮೇಲೆ ಸರ್ಫಿಂಗ್, ವಿಮಾನಗಳಿಂದ ಧುಮುಕಾಟ, ಭೋರ್ಗರೆವ ನದಿ ಕೊರಕಲಿನಲ್ಲಿ ಕ್ಯಾನೋಯಿಂಗ್, ಆಳ ಕಮರಿಗೆ ಬಂಗೀ ಜಂಪಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಗೌರವ, ಮಾನ್ಯತೆ ಪ್ರಾಪ್ತಿಯಾದಾಗ ಮೂವತ್ತು ವರ್ಷಗಳ ಹಿಂದಷ್ಟೇ ಕೆಲವು ಯುವ ವಿಜ್ಞಾ­ನಿಗಳು ಮರ ಏರಲು ತೊಡಗಿದರು.
ಅವರು ಅಲ್ಲಿ ಹೊಸ ಲೋಕವೊಂದನ್ನೇ ಕಂಡರು. ಯಾವ ಪಠ್ಯಪುಸ್ತಕದಲ್ಲೂ ನೋಡಸಿಗದ ಅಪರೂಪದ ಅಣಬೆಗಳು, ಪಾಚಿಗಳು, ಸಸ್ಯಗಳು, ಪ್ರಾಣಿ­ಗಳು, ಅವುಗಳ ನಡುವಣ ಸಂಬಂಧಗಳು, ಮೇಲಾಟಗಳು ಎಲ್ಲವೂ ಒಂದೊಂದಾಗಿ ವಿಜ್ಞಾನ ಲೋಕಕ್ಕೆ ತೆರೆದುಕೊಂಡಾಗ ಮರ ಏರುವ ಹೊಸಹೊಸ ತಂತ್ರಗಳು ಬಳಕೆಗೆ ಬರತೊಡಗಿದವು. 1985ರಲ್ಲಿ ಕೋಸ್ಟಾರಿಕಾ ದೇಶದಲ್ಲಿ ಮರಗಳ ಛಾವಣಿಯ (ಕ್ಯಾನೊಪಿ) ಮೇಲೆ ಜಾಳಿಗೆಯನ್ನು ಹಾಸಿ ಅಲ್ಲಿ ನಿರ್ಭ­ಯವಾಗಿ ಓಡಾಡುತ್ತ ಅಲ್ಲಿನ ಜೀವಲೋಕದ ಅಧ್ಯಯನ ಕೈಗೊಂಡ ವ್ಯಕ್ತಿಗೆ ‘ವರ್ಷದ ವಿಜ್ಞಾನಿ’ ಎಂಬ ಪುರಸ್ಕಾರ ಸಿಕ್ಕಿದ ಮೇಲೆ ನಿಜಕ್ಕೂ ‘ಕ್ಯಾನೊಪಿ ಸೈನ್ಸ್’ ಎಂಬ ಹೊಸ ಶಾಖೆಯೇ ಆರಂಭವಾಯಿತು.
ಈಗ ಅದೊಂದು ತೀವ್ರ ಪೈಪೋಟಿಯ ರಂಗ­ವಾಗಿದೆ. ವೃಕ್ಷಗಳ ಮೇಲ್ಛಾವಣಿಯನ್ನು ‘ಜಗತ್ತಿನ ಎಂಟನೇ ಖಂಡ’ ಎಂದು ಬಣ್ಣಿಸತೊ­ಡಗಿದ್ದಾರೆ. ಏನೆಲ್ಲ ಸಾಹಸ ಮಾಡಿ ಆ ಹೊಸ­ಲೋಕಕ್ಕೆ ಹೋಗಿ ವಿಹರಿಸಬಲ್ಲ ಧೀರರು ತಮ್ಮನ್ನು ‘ಡೆಂಡ್ರೊನಾಟ್ಸ್’ ಎಂದು ಹೇಳಿ­ಕೊಳ್ಳುತ್ತಾರೆ (ಬಾಹ್ಯಾಕಾಶ ಯಾತ್ರಿಗಳನ್ನು ‘ಆಸ್ಟ್ರೊನಾಟ್ಸ್’ ಎನ್ನುವ ಹಾಗೆ, ಮರಗಳ ಶಾಖೋಪಶಾಖೆಗಳ ಮೇಲೆ ಚಲಿಸಬಲ್ಲವರು ‘ಡೆಂಡ್ರೊನಾಟ್ಸ್’). ಅಲ್ಲಿ ಸಾಮಾನ್ಯ ವಿಜ್ಞಾನಿ­ಗಳಿಗೆ ನಿಲುಕದ ಹೊಸ ವಿಜ್ಞಾನ ಇದೆ, ರೋಚ­ಕತೆ ಇದೆ, ರಂಜನೆ ಇದೆ; ಎಲ್ಲಕ್ಕಿಂತ ಮುಖ್ಯವಾಗಿ ಎತ್ತರದ ವೃಕ್ಷಗಳಲ್ಲಿ ಏನಾದರೂ ಹೊಸ ಕೆಮಿಕಲ್‌ಗಳು, ಹೊಸ ಮೂಲಿಕೆಗಳು, ಹೊಸ ಜೀವಿಗಳು ಸಿಕ್ಕರೆ ಪೇಟೆಂಟ್ ಮಾಡಿಕೊಳ್ಳುವ ಅವಕಾಶವಿದೆ.
ನೆಲದಿಂದ 150 ಅಡಿ ಎತ್ತರದ ವಿನೂತನ ಲೋಕದಲ್ಲಿ ನಾವು ಮುಟ್ಟಿದ್ದೆಲ್ಲ ಹೊಸದು! ಹೊಸ ಸಸ್ಯ, ಹೊಸ ಕೀಟ, ಹೊಸ ಪ್ರಾಣಿ, ಹೊಸ ಬಗೆಯ ನಡವಳಿಕೆ!? ಎನ್ನು­ತ್ತಾರೆ, ಅಮೆರಿಕದ ಪ್ರಖ್ಯಾತ ಛಾವಣಿವಿಜ್ಞಾನಿ ಪ್ರೊ. ನಳಿನಿ ನಾಡಕರ್ಣಿ.
ಅದಕ್ಕೆ ತಕ್ಕಂತೆ ಮರದ ತುದಿಯನ್ನು ತಲುಪುವ ಅನೇಕ ಬಗೆಯ ಹೊಸ ಹೊಸ ತಂತ್ರ­ಜ್ಞಾನಗಳೂ ವಿಕಾಸಗೊಂಡಿವೆ. ಆಕಾಶ­ಮಾರ್ಗ­ದಲ್ಲೇ ಅಲ್ಲಿಗೆ ಹೋಗಿ ಇಳಿಯು­ವವರಿಗಾಗಿ ವಿಶಾಲ ಬಲೆಗಳು, ಅದರೊಳಗೆ ಟೆಂಟ್‌ಗಳು, ಅದನ್ನು ಹೊತ್ತೊಯ್ದು ಮರಗಳ ಮೇಲೆ ಹಾಸಬಲ್ಲ ಬಿಸಿಗಾಳಿ ಬಲೂನು, ಏರ್‌ಶಿಪ್‌ಗಳು ಸಜ್ಜಾಗಿವೆ. ಮರದ ಬುಡದಿಂದಲೇ ಮೇಲೇರಿ ಓಡಾಡಬಯಸುವ ಸಾಹಸಿಗಳಿಗಾಗಿ ನಾನಾ ಬಗೆಯ ನೂಲೇಣಿಗಳು, ತೊಟ್ಟಿಲುಗಳು, ಕ್ರೇನ್­ಗಳು ರೂಪುಗೊಂಡಿವೆ. ಇವು ವಿಜ್ಞಾನಿಗಳಿಗಷ್ಟೇ ಅಲ್ಲ, ವಾರಾಂತ್ಯದಲ್ಲಿ ಮೋಜು ಮಾಡು­ವವರಿಗೂ ರೋಚಕ ಸಾಧನಗಳಾಗುತ್ತಿವೆ.
ಈಗಂತೂ ‘ಹವಾಗುಣ ಬದಲಾವಣೆ’ ಎಂಬ ಭಯದ ಗಾಳಿ ಎಲ್ಲೆಡೆ ಬೀಸುತ್ತಿರುವಾಗ ಸಹಜವಾಗಿಯೇ ಎತ್ತರದ ಮರಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಳಜಿ ಹೆಚ್ಚ­ತೊಡಗಿದೆ. ಐವತ್ತು ವರ್ಷಗಳ ಹಿಂದೆ ಭೂಮಿಯ ಶೇಕಡಾ 12ರಷ್ಟು ಭಾಗದಲ್ಲಿ, ಅದೂ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಮಳೆಕಾಡುಗಳಿದ್ದವು. ಕೃಷಿ ವಿಸ್ತರಣೆ, ನಾಟಾ­ಕಡಿತ, ಕಾಡಿನ ಬೆಂಕಿಯಿಂದಾಗಿ ಅದರಲ್ಲೂ ಅರ್ಧಭಾಗ ನಷ್ಟವಾಗಿದೆ. ಆದರೆ ಈಗಲೂ ಜಗತ್ತಿನ ಶೇಕಡಾ 40ರಷ್ಟು ಜೀವಿಗಳು ಉಷ್ಣವಲಯದ ಮಳೆಕಾಡುಗಳಲೇ ಇವೆ. ನಮ್ಮ ಪಶ್ಚಿಮಘಟ್ಟಗಳೂ ಸೇರಿದಂತೆ ಈ ಕಾಡು­ಗಳೇ ಜಗತ್ತಿನ ಹವಾಗುಣವನ್ನು, ಋತು­ಮಾನವನ್ನು ನಿಯಂತ್ರಿಸುತ್ತವೆ ಎಂಬುದು ಗೊತ್ತಾದ ಮೇಲೆ ಅವುಗಳ ಅಧ್ಯಯನ ಮತ್ತು ರಕ್ಷಣೆಗಾಗಿ ವಿಶೇಷ ಸಂಶೋಧನೆಗಳು ನಡೆಯತೊಡಗಿವೆ. ಒಂದೆರಡು ಉದಾಹರಣೆ­ಯನ್ನು ನೋಡಿ: ತೀವ್ರ ಒತ್ತಡಕ್ಕೆ ಸಿಲುಕಿದಾಗ ಎತ್ತರದ ಮರಗಳು ವಾತಾವರಣಕ್ಕೆ ಮಿಥೈಲ್ ಸ್ಯಾಲಿಸಿಲೇಟ್ ಎಂಬ ಅನಿಲವನ್ನು ಹೊರಸೂ­ಸುತ್ತವೆ
ಎಂದು ಅಮೆರಿಕದ ರಾಷ್ಟ್ರೀಯ ವಿಜ್ಞಾನ ನಿಧಿಯ ಥಾಮಸ್ ಕಾರ್ಲ್ ಅವರ ತಂಡವೊಂದು ಮರದ ಮೇಲೆ ನೂರಡಿ ಎತ್ತರದಲ್ಲಿಟ್ಟ ಸಲಕರಣೆಗಳ ಮೂಲಕ ಅಳೆದು ನೋಡಿದೆ. ಮೊನ್ನೆ ಆಗಸ್ಟ್ ತಿಂಗಳಲ್ಲಿ ಜೆನ್ನಿಫರ್ ಬಾಲ್ಚ್ ಎಂಬಾಕೆ ತನ್ನ 30 ಸಂಗಡಿಗರ ಜತೆ ಹೋಗಿ ಅಮೆಜಾನ್‌ನ 50 ಹೆಕ್ಟೇರ್ ದಟ್ಟ ಅರಣ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿಕೊಟ್ಟು ಎಷ್ಟು ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾ­ವರಣಕ್ಕೆ ಸೇರುತ್ತದೆ ಎಂದು ವರದಿ ಮಾಡಿ­ದ್ದಾರೆ. ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‍ಮೂರ್ ಲ್ಯಾಬಿನ ಗೋವಿಂದಸ್ವಾಮಿ ಬಾಲಾ ಎಂಬುವರು ಮರಗಳು ಸೂರ್ಯನ ಶಾಖವನ್ನು ಹೇಗೆ ಹೀರಿಕೊಳ್ಳುತ್ತವೆ ಎಂದು ಅಧ್ಯಯನ ಮಾಡಿ, ‘ಉತ್ತರಕ್ಕೆ ಹೋದಂತೆ ಮರಗಳನ್ನು ಬೆಳೆಸುವುದು ಅಪಾಯಕಾರಿ’ ಎಂದಿದ್ದಾರೆ. ಅವರ ಪ್ರಕಾರ ಮಳೆಕಾಡುಗಳಲ್ಲಿ ಮರಗಳು ಹೆಚ್ಚಿಗೆ ಇದ್ದಷ್ಟೂ ಭೂಮಿಗೆ ಒಳ್ಳೆಯದು. ಆದರೆ ಸೈಬೀರಿಯಾ ಅಥವಾ ಉತ್ತರ ಅಕ್ಷಾಂಶಗಳಲ್ಲಿ ಮರಗಳು ಇಲ್ಲದಿದ್ದರೇ ಭೂಮಿಗೆ ಒಳ್ಳೆಯದು. ಏಕೆಂದರೆ ಹಿಮದ ಹಾಸಿನ ಮೇಲೆ ಬಿಸಿಲು ಬಿದ್ದರೆ ಅದು ಪ್ರತಿಫಲನವಾಗಿ ಹೊರಟು ಹೋಗುತ್ತದೆ. ಅಲ್ಲಿ ಅರಣ್ಯ ಬೆಳೆಸಿದರೆ ಅದು ಶಾಖವನ್ನು ಹೀರಿಕೊಂಡು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತದೆ!
ಆದರೆ ವಾಸ್ತವದಲ್ಲಿ ಎರಡೂ ಕಡೆ ಉಲ್ಟಾ ಆಗುತ್ತಿದೆ. ಭೂಮಿಯ ನಡುಪಟ್ಟಿಗುಂಟ ವೃಕ್ಷಗಳ ನಾಶ ಹೆಚ್ಚುತ್ತಿದೆ. ಉತ್ತರದ ದೇಶಗಳಲ್ಲಿ ಗಿಡಮರಗಳ ಪ್ರೇಮ ದಿನದಿನಕ್ಕೆ ಹೆಚ್ಚುತ್ತಿದೆ.
ಈ ಮಧ್ಯೆ ವೃಕ್ಷಗಳು ಬೆಳೆಯಬೇಕಾದಲ್ಲಿ ವೃಕ್ಷಪ್ರೇಮವನ್ನು ಹೆಚ್ಚಿಸಲೆಂದು ಬೆಂಗಳೂರಿ­ನಲ್ಲಿ ಮುಂದಿನ ಒಂದು ವಾರವಿಡೀ ಕ್ಯಾನೊಪಿ ಸಮ್ಮೇಳನ ನಡೆಯಲಿದೆ. ಪರಿಸರ ಧ್ವಂಸಕ್ಕೆ ಕಾರಣವಾಗುವ ವಿಜೃಂಭಣೆಯ ‘ಏರೋ ಶೋ’ಗಳನ್ನು ನೋಡಿದ ಇಲ್ಲಿನ ಜನರು ಈಗ ವಿಜ್ಞಾನಿಗಳ ‘ಮರ ಏರೋ ಶೋ’ವನ್ನು ಕೂಡ ನೋಡಬಹುದು.
ಆದರೆ ವಿಶೇಷ ರಂಜನೆಯನ್ನು ನಿರೀಕ್ಷಿಸಬೇಡಿ. ಅಮೆರಿಕದಲ್ಲೇನೋ ಜನಪ್ರತಿನಿಧಿಗಳನ್ನು ಮರ ಏರಿಸಬಹುದು. ಇಲ್ಲಿ ಯಾರ್‍ಯಾರನ್ನು ಏರಿಸೋಣ? ಗುಂಡ್ಯ ಅರಣ್ಯವನ್ನು ಮುಳುಗಿಸಿಯೇ ತೀರುತ್ತೇನೆಂದು ಶಪಥ ತೊಟ್ಟ ರಾಜಕಾರಣಿಗಳಿದ್ದಾರೆ; ಬೆಂಗಳೂರು ಸೆಕೆ-ಬೆಂಕಿಯೂರು ಆದರೂ ಸರಿ, ಮರಗಳನ್ನು ಕಡಿದೇ ಮೆಟ್ರೊ ರೈಲುಹಳಿ ಹಾಸುತ್ತೇನೆಂದು ಹೊರಟ ಎಂಜಿನಿಯರ್‌ಗಳು ಇದ್ದಾರೆ. ಅರಣ್ಯದ ನಡುವೆಯೇ ಗಣಿಗಾರಿಕೆ ನಡೆಸಬಹುದು ಎಂದು ವಾದಿಸಿ ಗೆಲ್ಲುವ ನ್ಯಾಯವಾದಿಗಳಿದ್ದಾರೆ. ಅವರನ್ನೆಲ್ಲ ಮರಗಳ ಮೇಲೆ ಏರಿಸಬೇಕೆಂದರೆ ಅಷ್ಟೊಂದು ಮರಗಳು ಎಲ್ಲಿವೆ ನಮ್ಮಲ್ಲಿ?

Categories
ವಿಜ್ಞಾನ

ಚಂದ್ರನ ನೀರು

ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿ­ಕೊಂಡರೆ ಭಾರತವೂ ಮಹಾನ್ (ಗ್ರೇಟ್) ದೇಶ­ವಾಗಲು ಸಾಧ್ಯ ಎಂದು ಮೂರು ವರ್ಷಗಳ ಹಿಂದೆ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ದಿಲ್ಲಿಯಲ್ಲಿ ಹೇಳಿದ್ದರು. ನಿಮ್ಮ ದೇಶವನ್ನು ನಾವೇ ‘ಗ್ರೇಟ್’ ಮಾಡುತ್ತೇವೆ ಎಂಬ ಆ ಮಾತಿನಲ್ಲಿ ಏನೆಲ್ಲ ಅರ್ಥಗಳಿದ್ದವು. ಕೆಲವರಿಗೆ ಆ ಮಾತಿನಿಂದ ಎದೆಯುಬ್ಬಿತು. ಮತ್ತನೇಕರು ಅದರಲ್ಲಿ ಅವಹೇಳನದ ಎಳೆಗಳನ್ನೇ ಕಂಡರು.ಅದಾದ ನಂತರ ನಮ್ಮ ದೇಶವನ್ನು ಗ್ರೇಟ್ ಮಾಡಲು ಅಮೆರಿಕ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ತನಗೇ ದುಬಾರಿ ಹಾಗೂ ಅಪಾಯ­ಕಾರಿ ಎನಿಸಿದ ಪರಮಾಣು ತಂತ್ರಜ್ಞಾನ­ವನ್ನು ನಮ್ಮಲ್ಲಿ ತಂದು ಸುರಿಯಲು ಧಾರಾಳ ನೆರವು ನೀಡುತ್ತಿದೆ. ಸುರಕ್ಷಿತ, ಕಡಿಮೆ ವೆಚ್ಚದ, ನೈಸರ್ಗಿಕ ಅನಿಲವನ್ನು ನಾವು ಇರಾನ್‌ನಿಂದ ಕೊಳವೆ ಮೂಲಕ ತರಲಾಗದಂತೆ ನಿರ್ಬಂಧ ಒಡ್ಡಿದೆ. ಅಸ್ಸಾಂ ಪಕ್ಕದ ಮಯನ್ಮಾರ್ ಭೂತಲ­ದಲ್ಲಿರುವ ಪೆಟ್ರೋಲಿಯಂ ಮತ್ತು ಅನಿಲ ಖಜಾನೆಗೆ ನಾವು ಕೈಯಿಕ್ಕದಂತೆ ಮಾಡಿ ನಮಗೆ ಶಹಭಾಸ್ ಎಂದಿದೆ. ನಮ್ಮನ್ನು ಹೀಗೆ ಗ್ರೇಟ್ ಮಾಡುವ ಸರಣಿಯಲ್ಲಿ ತೀರ ಈಚಿನ ಉದಾಹರಣೆ ಎಂದರೆ ಚಂದ್ರನ ನೀರು.
ನಿಜ, ಅನೇಕ ವರ್ಷಗಳ ನಂತರ ನಮ್ಮ ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದಾರೆ. ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಮಾಡಿದ ನಮ್ಮ ‘ಇಸ್ರೊ’ ತಜ್ಞರ ಯಶಸ್ಸನ್ನು ಅಮೆರಿಕದ ಮಾಧ್ಯಮಗಳು ಎದ್ದು ಕಾಣುವಂತೆ ಪ್ರಕಟಿಸಿವೆ. ಚಂದ್ರನ ಮೇಲಿನ ಬಂಡೆಗಳಲ್ಲಿ ಹಾಗೂ ನಯವಾದ ದೂಳು ಪುಡಿಯಲ್ಲಿ ನೀರಿನ ಅಂಶ ಇದೆ ಎಂದು ನಲ್ವತ್ತು ವರ್ಷಗಳ ಹಿಂದೆಯೇ ಅಮೆರಿಕದ ಗಗನಯಾತ್ರಿಗಳು ತಂದ ಸ್ಯಾಂಪಲ್‌ಗಳಲ್ಲಿ ಪತ್ತೆ­ಯಾಗಿತ್ತು. ಆದರೆ ಅಮೆರಿಕಕ್ಕೆ ಆಗ ಅದ­ರಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ ಸೋವಿಯತ್ ರಷ್ಯದ ಜತೆಗಿನ ಪೈಪೋಟಿಯಲ್ಲಿ ತಾನು ಮೇಲುಗೈ ಸಾಧಿಸಿದ್ದಾಗಿತ್ತು. ಆರು ಬಾರಿ ಅಲ್ಲಿಗೆ ಹೋಗಿ 12 ಜನರನ್ನು ಇಳಿಸಿ, ಮರಳಿ ಕರೆತಂದ ಮೇಲೆ ಸಹಜವಾಗಿ ಅತ್ತ ಆಸಕ್ತಿ ಕಡಿಮೆಯಾಗಿತ್ತು.
‘ನೀರಿನ ಅಂಶ ಎಂಥದ್ದೂ ಇಲ್ಲ. ಗಗನಯಾತ್ರಿಗಳು ಅಲ್ಲಿನ ಕಲ್ಲುಮಣ್ಣಿನ ಪುಡಿಯನ್ನು ಪ್ಯಾಕ್ ಮಾಡುವಾಗ ಅಥವಾ ಬಿಚ್ಚುವಾಗ ಎಲ್ಲೋ ತುಸು ತೇವಾಂಶ ಸೇರಿದೆ’ ಎಂದು ಹೇಳಿ ನಾಸಾ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು.
ಈಗ ಪತ್ತೆಯಾಗಿರುವ ನೀರೂ ಅಷ್ಟೆ; ತೀರಾ ತೀರಾ ಅಲ್ಪ ಪ್ರಮಾಣದಲ್ಲಿ ಅದೂ ಅಗೋಚರ ರೂಪದಲ್ಲಿ ಇದೆ. ಚಂದ್ರನ ಕೆಲವು ಬಗೆಯ ಶಿಲೆಗಳಲ್ಲಿ ಆಮ್ಲಜನಕ ಮತ್ತು ಜಲಜನಕದ ಪರಮಾಣುಗಳು ಅರೆಬಂಧಿತ ರೂಪದಲ್ಲಿ ಇವೆ. ‘ಎಚ್2ಓ’ ಬದಲಿಗೆ ‘ಓಎಚ್’ ರೂಪದಲ್ಲಿ ಇವೆ. ಅವಕ್ಕೆ ನೀರಿನ ಲಕ್ಷಣ ಇಲ್ಲ. ನಮ್ಮ ಹೊಳೆ­ನರಸೀ­ಪುರ ಮತ್ತು ಚನ್ನರಾಯಪಟ್ಟಣ­ಗಳ ಸುತ್ತ­ಮುತ್ತ ಅಂಥ ಕಲ್ಲುಗಳು ಇವೆ. ಅಲ್ಲಿನ ಒಣ ಕಲ್ಲನ್ನು ತಂದು ಪುಡಿ ಮಾಡಿ ಅದಕ್ಕೆ ತುಸು ಜಲ­ಜನಕ ಅನಿಲವನ್ನು ಸೇರಿಸಿದರೆ ನೀರಿನ ಬಿಂದು­ಗಳನ್ನು ಹೊಮ್ಮಿಸಬಹುದು. ಹೊರಗಿನಿಂದ ತುಸು ಜಲಜನಕ ಸೇರಬೇಕಷ್ಟೆ.
ಸೂರ್ಯನಿಂದ ಸೂಸಿ ಬರುವ ಬಿಸಿಲಿನ ಜತೆ ‘ಸೌರಗಾಳಿ’ ಕೂಡ ಮೆಲ್ಲಗೆ ಸಾಗಿ ಬರುತ್ತಿ­ರುತ್ತದೆ. ಇದರಲ್ಲಿ ಜಲಜನಕದ ಬೀಜಕಣಗಳೂ ಇರುತ್ತವೆ. ಇವು ಚಂದ್ರನ ಮೇಲಿನ ಕಲ್ಲುದೂಳಿನ ಪುಡಿಯನ್ನು ಸ್ಪರ್ಶಿಸಿದಾಗ ಅಲ್ಲಿ ತಾತ್ಕಾಲಿಕವಾಗಿ ತುಸು ತೇವಾಂಶ ರೂಪುಗೊಳ್ಳುತ್ತದೆ. ವಿಶೇಷ ಸ್ಕ್ಯಾನರ್ ಮೂಲಕ ಆ ಕಲ್ಲು-ದೂಳಿನ ಚಿತ್ರವನ್ನು ಸೆರೆಹಿಡಿದರೆ, ಅದರಲ್ಲಿ ಕಾಣುವ ರೋಹಿತದಲ್ಲಿ ನೀರಿನ ಪಸೆಯನ್ನು ಕೆಮಿಸ್ಟ್ರಿ ತಜ್ಞರು ಗುರುತಿಸ­ಬಹುದು. ಚಂದ್ರಲೋಕದ ಬೆಳಗಿನ ಒಂದೆರಡು ಗಂಟೆಗಳ ಕಾಲ ಹೀಗೆ ಶೇಖರವಾದ ಅತ್ಯಲ್ಪ ತೇವಾಂಶ ಮತ್ತೆ ಬಿಸಿಲು ಏರಿದಂತೆ ಆವಿಯಾಗಿ ಆರಿ ಹೋಗುತ್ತದೆ; ಮರುದಿನ ಮತ್ತೆ ಎಳೆ­ಬಿಸಿಲಲ್ಲಿ ನೀರಿನ ಸೂಕ್ಷ್ಮ ಹನಿಗಳು ದೂಳಿನ ಪದರದ ಮೇಲೆ ಕೂರುತ್ತವೆ. ಒಂದರ್ಥದಲ್ಲಿ ಚಂದ್ರ ಮೆಲ್ಲಗೆ ಬೆವರುತ್ತಾನೆ.
ಇದು ಹೊಸ ಸಂಗತಿಯೇನೂ ಅಲ್ಲ. ಗಗನ­ಯಾತ್ರಿಗಳು ತಂದ ಚಂದ್ರಪುಡಿಯಲ್ಲಿ ನೀರಿದ್ದ ಅಂಶವನ್ನು ನಾವು ಮರೆತಿರಬಹುದು. ಆದರೆ ಹತ್ತು ವರ್ಷಗಳ ಹಿಂದೆ 1999ರಲ್ಲಿ ಶನಿಯತ್ತ ಹೊರಟ ‘ಕಾಸಿನಿ’ ನೌಕೆ ನಮ್ಮ ಚಂದ್ರ­ನನ್ನು ಆಗಸ್ಟ್ 19ರಂದು ಪ್ರದಕ್ಷಿಣೆ ಹಾಕಿ ಹೋಗು­ವಾಗ ಇಂಥದ್ದೇ ಚಿತ್ರವನ್ನು ರವಾನಿಸಿತ್ತು.
ಈಚೆಗೆ ಜೂನ್ 2ರಿಂದ 9ರವರೆಗೆ ನಾಸಾದ ‘ಡೀಪ್ ಇಂಪಾಕ್ಟ್’ ಹೆಸರಿನ ನೌಕೆಯೊಂದು ಚಂದ್ರನ ಉತ್ತರ ಧ್ರುವದ ಚಿತ್ರಣಗಳನ್ನು ರವಾನಿಸಿತ್ತು. ಅದು ಕೂಡ ಚಂದ್ರನಲ್ಲಿ ತೇವಾಂಶ ಇರುವುದನ್ನು ವರದಿ ಮಾಡಿತ್ತು. ಅದಾದ ಮೇಲೆ ನಮ್ಮದೇ ‘ಚಂದ್ರಯಾನ-1’ ಹೆಸರಿನ ಯಂತ್ರ ಭೂಕಕ್ಷೆಯನ್ನು ದಾಟಿ ಚಂದ್ರನನ್ನು ಸುತ್ತಲು ತೊಡಗಿ ಒಂದು ಪುಟ್ಟ ಶೋಧದಂಡ­ವನ್ನು ಚಂದ್ರನ ನೆತ್ತಿಯ ಮೇಲೆ ಬೀಳಿಸಿತ್ತು. ಅದರಲ್ಲೂ ನೀರಿನ ಅಂಶ ಪತ್ತೆಯಾಗಿತ್ತು (ಎಂದು ಈಗ ನಮ್ಮವರು ಹೇಳುತ್ತಿದ್ದಾರೆ). ಅದಾದ ಹನ್ನೊಂದನೆಯ ದಿನ, ಅಂದರೆ ಕಳೆದ ವರ್ಷ ನವೆಂಬರ್ 19ರಂದು ನಮ್ಮದೇ ಚಂದ್ರನೌಕೆಯಲ್ಲಿ ಕೂತಿದ್ದ ನಾಸಾದ ಎಮ್3 ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್‌ಶೈನ್ (!) ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಅದರಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಅಮೆರಿಕದ ‘ಸೈನ್ಸ್’ ಪತ್ರಿಕೆಗೆ ರವಾನಿಸಿದರು.
ಆದರೂ ಯಾರೂ ಅದಕ್ಕೆ ಮಹತ್ವ ನೀಡಿರಲಿಲ್ಲ. ಈಚೆಗೆ ನಮ್ಮ ಚಂದ್ರನೌಕೆ ಇದ್ದಕ್ಕಿದ್ದಂತೆ ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿ ಅವಧಿಗೆ ಮೊದಲೆ ಇತಿಶ್ರೀ ಹಾಡಿದಾಗ ಇಸ್ರೊ ತಜ್ಞರು ಸೂತಕದ ಕಳೆ ಹೊತ್ತು ಕೂತಿದ್ದರು. ಚಂದ್ರನತ್ತ ಎರಡನೆಯ ಪಯಣಕ್ಕೆ ಸಿದ್ಧವಾಗು­ತ್ತಿದ್ದ ‘ಚಂದ್ರಯಾನ-2’ ಹೆಸರಿನ ನೌಕೆಯ ನೆಗೆತವನ್ನು ಮುಂದೂಡಿದರೆ ಹೇಗೆ ಎಂದು ಚಿಂತೆಯಲ್ಲಿದ್ದರು.
ಆ ಸಂದರ್ಭದಲ್ಲೇ ತುಸು ಅನಿರೀಕ್ಷಿತ ಎಂಬಂತೆ ಸೆಪ್ಟೆಂಬರ್ 24ರಂದು ಅಮೆರಿಕದ ನಾಸಾದಿಂದ ಬೆಂಗಳೂರಿನ ಇಸ್ರೊ ಮುಖ್ಯಸ್ಥರಿಗೆ ಸಿಗ್ನಲ್ ಬಂತು. ಸರಸರ ಮಾಧ್ಯಮ ಗೋಷ್ಠಿ ಏರ್ಪಾಟಾ­ಯಿತು. ಚಂದ್ರಜಲದ ಸುದ್ದಿ ವಿವರ, ಗ್ರಾಫಿಕ್ ಚಿತ್ರ, ಛಾಯಾಚಿತ್ರ ಎಲ್ಲವೂ ಏಕಕಾಲದಲ್ಲಿ ನಾಸಾ ಮೂಲಕ ಜಾಗತಿಕ ಮಾಧ್ಯಮಗಳಿಗೆ ಹಾಗೂ ಇಸ್ರೊ ಮೂಲಕ ನಮ್ಮ ಬಾತ್ಮೀದಾರ­ರಿಗೆ ಲಭಿಸಿದವು. ಮರುದಿನ ‘ಚಂದ್ರನಲ್ಲಿ ನೀರುಪತ್ತೆ, ಭಾರತದ ವಿಜ್ಞಾನಿಗಳಿಗೆ ಭೋ­ಪರಾಕ್’ ಎಂಬ ಉದ್ಘೋಷ! ತಲಕಾವೇರಿಯಲ್ಲಿ ತೀರ್ಥೋದ್ಭವ ಆಯ್ತೆಂದು ಭಕ್ತರೆಲ್ಲ ಸಂಭ್ರಮಿಸಿ ಕೊಳಕ್ಕೆ ಜಂಪ್ ಮಾಡುವ ಹಾಗೆ ದೇಶ­ವಿದೇಶಗಳ ಎಲ್ಲ ಮಾಧ್ಯಮಗಳಲ್ಲೂ ಏಕಕಾಲಕ್ಕೆ ಜಲಭೇರಿ ಬಾರಿಸಿತು.
ಅಳುತ್ತಿದ್ದ ಬಾಲ ಶ್ರೀರಾಮಚಂದ್ರನ ಕೈಗೆ ಕನ್ನಡಿಯ ಚಂದ್ರಬಿಂಬ ಕಂಡಂತೆ ‘ಇಸ್ರೊ’ ಅಧ್ಯಕ್ಷ ಮಾಧವನ್ ನಾಯರ್ ಜಿಗಿದೆದ್ದು ಎರಡೂ ಕೈಎತ್ತಿ ಇಡೀ ರಾಷ್ಟ್ರಕ್ಕೆ ಹರ್ಷದ ಬಾವುಟ ಬೀಸಿದರು.
ಎಲ್ಲೆಡೆ ಇಸ್ರೊಕ್ಕೇ ಶಹಭಾಸ್‌ಗಿರಿ.
ಇದು ಏಕಾಯಿತು? ಇಸ್ರೊ ತಜ್ಞರು ಚಂದ್ರ­ನೌಕೆಯ ಮೇಲೆ ಅಮೆರಿಕದ ಎಮ್3ಯನ್ನು ಕೂರಿಸಿದ್ದನ್ನು ಬಿಟ್ಟರೆ ಚಂದ್ರಜಲದ ಪತ್ತೆಗೆ ಏನನ್ನೂ ಮಾಡಲಿಲ್ಲ. ಎಮ್3ರಿಂದ ಬಂದ ಸಂಕೇತಗಳ ವಿಶ್ಲೇಷಣೆ ಮಾಡಲಿಲ್ಲ. ಚಂದ್ರನ ಮೇಲೆ ಕೆಡವಿದ ಶೋಧದಂಡದಲ್ಲಿ ನೀರಿನ ಅಂಶ ಕಂಡಿದ್ದರೂ ಖಚಿತ ಏನೂ ಹೇಳಿರಲಿಲ್ಲ.
ಈ ಯಾವ ಅಂಶಗಳೂ ನಮ್ಮ ‘ಇಸ್ರೊ’ ಸಂಸ್ಥೆಯ ಸಾಧನೆಗೆ ಕುಂದು ತರುವುದಿಲ್ಲ ನಿಜ. ಇವರು ನಿರ್ಮಿಸಿದ ನೌಕೆಯೊಂದು ಚಂದ್ರನ ಪ್ರದಕ್ಷಿಣೆ ಹಾಕಿದ್ದು, ಚಂದ್ರನ ನೆತ್ತಿಯ ಮೇಲೆ ಒಂದು ಶೋಧ ದಂಡವನ್ನು ಬೀಳಿಸಿ ದೂಳು ಚಿಮ್ಮುವಂತೆ ಮಾಡಿದ್ದು ಇವೆಲ್ಲ ಗ್ರೇಟ್ ನಿಜ. ಶೋಧ ದಂಡದ ಜತೆ ಭಾರತದ ಧ್ವಜವನ್ನೂ ಅಲ್ಲಿ ಇಳಿಸಿ, ಹಾಗೆ ಧ್ವಜ ಊರಿದ ನಾಲ್ಕನೆಯ ದೇಶವೆನಿಸಿದ್ದು ಎಲ್ಲವೂ ಕೊಂಡಾಡಲು ಯೋಗ್ಯವೇ ಹೌದು. ವಿಜ್ಞಾನದ ಕಡೆ ಎಳೆಯ­ರನ್ನು ಮತ್ತೆ ಆಕರ್ಷಿಸುವಂತೆ ಮಾಡಲು, ಇಸ್ರೊ ವಿಜ್ಞಾನಿಗಳಲ್ಲಿ ಮತ್ತೆ ಉತ್ಸಾಹ ಚಿಮ್ಮುವಂತೆ ಮಾಡಲು ಇಂಥದೊಂದು ಜಯಭೇರಿ ಬೇಕಿತ್ತು ನಿಜ. ಆದರೆ ಈ ಮಧ್ಯೆ ಕಾಂಡೊಲಿಸಾ ರೈಸ್ ನೆನಪು ಮತ್ತೆ ಯಾಕೆ ಬರುತ್ತದೆ?
ಏಕೆಂದರೆ, ನಮ್ಮವರ ಸಾಧನೆ ತುಂಬಾ ದೊಡ್ಡ­ದೆಂದು ತೋರಿಸುವಲ್ಲಿ ಅಮೆರಿಕದ ನಾಸಾದ ಹಿತಾಸಕ್ತಿ ಇದೆ. ತಾನೇ ಸ್ವತಃ ಚಂದ್ರ­ನಿದ್ದಲ್ಲಿಗೆ ಹೋಗಬೇಕೆಂಬ ತುಡಿತ ಅದಕ್ಕೆ ಈಚೀಚೆಗೆ ಹೆಚ್ಚುತ್ತಿದೆ. ಆದರೆ ಅಮೆರಿಕ ಸರ್ಕಾರಕ್ಕೆ ಈಗಲೂ ಆಸಕ್ತಿ ಇಲ್ಲ. ಇಂದಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ಭಾರೀ ವೆಚ್ಚದ್ದೆಂಬ ದೃಷ್ಟಿಯೇ ಬಲವಾಗಿದೆ. ಮೇಲಾಗಿ ಯಂತ್ರಗಳೇ ಮನುಷ್ಯನ ಎಲ್ಲ ಕೆಲಸವನ್ನೂ ನಿಭಾಯಿ­ಸುವಂತಿರುವಾಗ (ಅವಕ್ಕೆ ನೀರು, ಆಮ್ಲಜನಕ ಕೂಡ ಬೇಕಾಗಿಲ್ಲ.
ಚಂದ್ರನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಅವಸರ ಈಗೇಕೆ ಎಂಬ ಧೋರಣೆ ಒಬಾಮಾ ಸರ್ಕಾರದ್ದು. ಆದರೆ ಹೋಗಲೇ ಬೇಕೆಂಬ ತುಡಿತ ನಾಸಾವನ್ನು ಬೆಂಬಲಿಸುವ ಔದ್ಯಮಿಕ ಕೂಟದ್ದು. ಅದಕ್ಕೇ ‘ನೋಡ್ರೀ, ಭಾರತದಂಥ ದೇಶವೂ ಹನುಮ­ಲಂಘನಕ್ಕೆ ಹೊರಟಿದೆ; ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ; ಚೀನಾ, ಜಪಾನ್, ಇಂಡಿಯಾ ಹೀಗೆ ಏಷ್ಯದ ಮೂವರೂ ಹೊರ­ಟಿರು­ವಾಗ ನಾವು ಹಿಂದುಳಿಯುವುದು ನಾಚಿಕೆಗೇಡು’ ಎಂಬ ಅಭಿಪ್ರಾಯವನ್ನು ಅಲ್ಲಿನ ಜನಮನದಲ್ಲಿ ಬಿತ್ತಿ ಸರ್ಕಾರವನ್ನು ಎಬ್ಬಿಸಿ ಮೇಲೇಳಬೇಕಾಗಿದೆ. ‘ಇದುವರೆಗೆ ಪಾಶ್ಚಿಮಾತ್ಯ­ರಿಗಿದ್ದ ಖ್ಯಾತಿಯನ್ನು ಈ ಏಷ್ಯದ ರಾಷ್ಟ್ರಗಳು ಕಿತ್ತುಕೊಳ್ಳಲಿವೆ’ ಎಂದು ಒತ್ತಿ ಹೇಳಬೇಕಾಗಿದೆ. ಬೊಕ್ಕಸದಿಂದ ದೊಡ್ಡದೊಂದು ಪಾಲು ಧನರಾಶಿ ನಾಸಾಕ್ಕೆ ಸಿಕ್ಕರೆ ಸಾಕು, ಅಲ್ಲಿನ ಎಷ್ಟೋ ಉದ್ಯಮಗಳು ಮೇಲೇಳುತ್ತವೆ.
ಅದಕ್ಕೇ ನಾಳೆ (ಅಕ್ಟೊಬರ್ 9ರಂದು) ಚಂದ್ರನ ನೆತ್ತಿಯ ಮೇಲಿನ ಆಳವಾದ ಗುಳಿಯಲ್ಲಿ ನೀರಿದೆಯೆ ಎಂಬುದರ ಪತ್ತೆಗೆಂದೇ ‘ಎಲ್­ಕ್ರಾಸ್’ ಹೆಸರಿನ ಶೋಧಯಂತ್ರವೊಂದು ಅಲ್ಲಿ ಇಳಿಯ­ಲಿದೆಯಾದರೂ ಅವಸರದಲ್ಲಿ ಹನ್ನೆರಡು ದಿನಗಳ ಮೊದಲೇ ಭಾರತಕ್ಕೆ ಕೀರ್ತಿ ಪತಾಕೆಯನ್ನು ಸಿಕ್ಕಿಸಲಾಗಿದೆ.
ಸಾವಿರ ಸಮಸ್ಯೆಗಳನ್ನು ಹೊತ್ತ, ಮೂಳೆ ಚಕ್ಕಳದ ಐರಾವತದ ಜುಟ್ಟಿಗೆ ಚಂದ್ರಜಲ ಕೀರ್ತಿ ಪತಾಕೆಯನ್ನು ಸಿಕ್ಕಿಸಬೇಕು. ಬಡ ಐರಾವತ ಮತ್ತೆ ಎದೆಯುಬ್ಬಿಸಿ ಚಂದ್ರನತ್ತ ಇನ್ನೊಮ್ಮೆ ನೆಗೆಯುವಂತೆ ಮಾಡಬೇಕು. ಅದರ ನೂಕು­ಬಲದ ಮೇಲೆ ತಾನು ಚಿಮ್ಮಿಹೋಗಿ ಚಂದ್ರನ ಮೇಲೆ ಮತ್ತೆ ಕಾಲೂರಬೇಕು. ಇದು ನಾಸಾದ ವಿಚಾರ. ಅದಕ್ಕೇ ಭಾರತವನ್ನು ಗ್ರೇಟ್ ಮಾಡುವ ಹುನ್ನಾರ.

Categories
ಕೃಷಿ ಸಂಸ್ಕೃತಿ-ಸಮುದಾಯ

ಗಿರಿಜನರು

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಆದಿವಾಸಿಗಳು ಕಾಡುಗಳಲ್ಲಿ ಬದುಕುತ್ತಿರಲಿಲ್ಲ. ಕೃಷಿ ವಿಸ್ತರಣೆಯ ಒತ್ತಡಗಳಿಂದಾಗಿ ಇವರನ್ನೆಲ್ಲ ತುಂಬ ಹಿಂದೆಯೇ ನಾವು ಕಾಡುಮೇಡುಗಳಿಗೆ ಅಟ್ಟಿಬಿಟ್ಟಿದ್ದೆವು. ಈಗ ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಭಾರತದ ಭೂಪಟದ ನಿರಿಗೆಗಳನ್ನೆಲ್ಲ ಇಸ್ತ್ರಿ ಹೊಡೆದು ಸರಿಸಪಾಟು ಮಾಡುವ ಈ ಯತ್ನದಲ್ಲಿ ನಿಸರ್ಗ ಪರಂಪರೆಗಳೇ ಅಳಿಸಿ ಹೋಗುತ್ತವೆ. ಇಷ್ಟು ಮುಂದುವರೆದಿದ್ದು ಸಾಲದೆ? ಕರ್ನಾಟಕದಲ್ಲಿ ಎಲ್ಲೆಲ್ಲಿ ಭತ್ತದ ತಳಿ ವೈವಿಧ್ಯ ಉಳಿದುಕೊಂಡಿದೆ ಎಂಬುದರ ಬಗ್ಗೆ ನಮ್ಮ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಆದಿವಾಸಿಗಳ ಹಾಗೂ ಗಿರಿಜನರ ‘ಹಾಡಿ’ಗಳಲ್ಲಿ ಸಾಕಷ್ಟು ತಳಿ ವೈವಿಧ್ಯ ಇದೆ ಎನ್ನುವಾಗ ನಮ್ಮ ಮಿತ್ರ ಶಿವಾನಂದ ಕಳವೆ, ತೀರಾ ಸಹಜ ಎಂಬಂತೆ, ಒಂದು ಮಾತನ್ನು ಎಸೆದರು: ‘ಹೌದು, ಯಾವ ಯಾವ ಊರಿಗೆ ರಸ್ತೆ ಇಲ್ಲವೋ ಆ ಊರುಗಳಲ್ಲೆಲ್ಲ ತಳಿ ವೈವಿಧ್ಯ ಜಾಸ್ತಿ ಇದೆ’ ಅಂದರು.

ಇಂದಿನ ಬದುಕಿನ ವ್ಯಂಗ್ಯವನ್ನು, ವೈರುಧ್ಯವನ್ನು ಇದಕ್ಕಿಂತ ಸೂಚ್ಯವಾಗಿ ಹೇಳಲು ಸಾಧ್ಯವಿದೆಯೆ? ತಳಿವೈವಿಧ್ಯವನ್ನೂ ಉಳಿಸಿಕೊಳ್ಳಬೇಕು, ಸಂಪರ್ಕ ವ್ಯವಸ್ಥೆಯನ್ನೂ ಸುಧಾರಿಸಬೇಕೆಂದರೆ ಸಾಧ್ಯವೆ? ಗಿರಿಜನರು ನಮ್ಮ ಜೀವ ಖಜಾನೆ ಇದ್ದಂತೆ. ಅವರ ಸಂಸ್ಕೃತಿ, ಪರಂಪರೆ, ಗಿಡ-ಬಳ್ಳಿ-ಪಶು-ಪಕ್ಷಿಗಳ ಬಗೆಗಿನ ಅವರ ಜ್ಞಾನ ಹಾಗೂ ಭಕ್ತಿಪೂರ್ವಕ ಸಂಬಂಧ ಎಲ್ಲವೂ ಗ್ರೇಟ್. ಹಾಗೆಯೇ ಅವರ ಬದುಕೂ ತೀರ ದುರ್ಭರ. ಹತ್ತು ಮಾರು ದೂರ ಸಾಗಲಿಕ್ಕೂ ಅವರು ಹತ್ತಬೇಕು, ಇಲ್ಲವೆ ಇಳಿಯಬೇಕು. ನೀರು ಸುಲಭಕ್ಕೆ ಸಿಗುವುದಿಲ್ಲ. ವರ್ಷದ ಆರಾರು ತಿಂಗಳು ಆಹಾರವೂ ಸುಲಭಕ್ಕೆ ಸಿಗುವುದಿಲ್ಲ. ಮಳೆ ಚಳಿ ಎಲ್ಲವೂ ಅಲ್ಲಿ ಜಾಸ್ತಿ. ಕಾಡುಪ್ರಾಣಿಗಳ ಕಾಟ ತೀರಾ ಜಾಸ್ತಿ ಇದ್ದರೆ ಗರ್ಭಿಣಿ, ಬಾಣಂತಿ, ಅಜ್ಜಿ, ಮೊಮ್ಮಗು ಕೂಡ ಮರ ಹತ್ತಿ ಕೂರಬೇಕು. ಗಾಯ-ರೋಗಗಳಿಗೆ ತುರ್ತು ಔಷಧ ಅಥವಾ ಚಿಕಿತ್ಸೆ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಎದುರಿಸಿ ಈ ಗಿರಿಜನರು ಯಾಕೆ ಗಿರಿಜನರಾಗಿಯೇ ಉಳಿದಿದ್ದಾರೆ?

(ಇದು ಸಿಲ್ಲಿ ಪ್ರಶ್ನೆ ಎನ್ನಿಸಬಹುದು. ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದೀತ್ತೇನೊ.)

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಅವರೆಲ್ಲ ನಮ್ಮ ನಿಮ್ಮ ಪೂರ್ವಜರ ಹಾಗೆಯೇ ಹಾಯಾಗಿ ನದಿತೀರಗಳಲ್ಲೋ ಜಲಸಿರಿಯುಳ್ಳ ಮೈದಾನಗಳಲ್ಲೋ ಗಡ್ಡೆಗೆಣಸು, ಹಣ್ಣುಹಂಪಲು ತಿನ್ನುತ್ತ, ಬೇಟೆಯಾಡುತ್ತ ಸರಳವಾಗಿ ಬದುಕಿದ್ದವರು. ಮುಂದೆ ಏನಾಯ್ತು ಅಂದರೆ ಪ್ರಬಲ ಕೋಮಿನವರು ಕೃಷಿಗಾಗಿ ಜಮೀನು ಹುಡುಕುತ್ತ, ತಳವೂರುತ್ತ, ನೆಲವಿಸ್ತರಣೆ ಮಾಡುತ್ತ ಬಂದರು. ಫೈಟ್ ಮಾಡಲು ಶಕ್ತಿಯಿಲ್ಲದ, ಅಥವಾ ಮನುಷ್ಯರ ವಿರುದ್ಧ ಶಸ್ತ್ರ ಎತ್ತದ ಬಡಪಾಯಿಗಳೆಲ್ಲ ದೂರ ಸರಿಯುತ್ತ, ಸರಿಯುತ್ತ ಗುಡ್ಡ ಏರಬೇಕಾಯಿತು. ಆಥವಾ ಘನಘೋರ ಅರಣ್ಯದೊಳಕ್ಕೆ ನುಗ್ಗಿ ಅಲ್ಲೇ ಹೇಗೋ ಬದುಕಲು ಕಲಿತು ಆದಿವಾಸಿಗಳೆನಿಸಿಕೊಳ್ಳಬೇಕಾಯಿತು. ಅವರಿಗೆ ಕತ್ತಿ ದೊಣ್ಣೆ ಹಿಡಿದ ಮನುಷ್ಯರ ಸಹವಾಸಕ್ಕಿಂತ ಹುಲಿ-ಚಿರತೆ-ಆನೆಗಳ ಸಹವಾಸವೇ ಮೇಲೆಂದು ಅನ್ನಿಸಿರಬೇಕು. ಏಕೆಂದರೆ ವನ್ಯಪ್ರಾಣಿಗಳು ವಿನಾಕಾರಣ ಹಿಂಸೆಗೆ ಇಳಿಯುವುದಿಲ್ಲ. ಮರಿಗಳು ಬೆಳೆದಿದ್ದರೆ, ಹೊಟ್ಟೆ ತುಂಬಿದ್ದರಂತೂ, ನೀವು ಹತ್ತಿರ ಸುಳಿದರೂ ಗುರ್ರೆನ್ನುವುದಿಲ್ಲ. ಮನುಷ್ಯ ಹಾಗಲ್ಲವಲ್ಲ.

ಅಂತೂ ಆಧುನಿಕ ನಾಗರಿಕತೆಯೇ ಗಿರಿಜನ-ಆದಿವಾಸಿಗಳನ್ನು ಸೃಷ್ಟಿಸಿದೆ ಅಂದಂತಾಯಿತು. ಈಗ ಅವರನ್ನು ಕಾಡುಮೇಡುಗಳಿಂದಲೂ ಒಕ್ಕಲೆಬ್ಬಿಸುವ ಯತ್ನ ನಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಗಣಿಗಾರಿಕೆಯ ಹುಚ್ಚುಪೈಪೋಟಿ ಅದೆಷ್ಟು ತೀವ್ರವಾಗಿದೆ ಎಂದರೆ ಅಂಥ ತೀರ ಒಳನಾಡುಗಳನ್ನೂ ಹುಡುಕಿಕೊಂಡು ಹೋಗಿ ಬುಲ್ಡೋಜರ್‌ಗಳು, ಅರ್ಥ್‌ಮೂವರ್‌ಗಳನ್ನು ನುಗ್ಗಿಸಿ ಅಲ್ಲಿದ್ದ ಜೀವಿ ವೈವಿಧ್ಯವನ್ನು ಬಗ್ಗು ಬಡಿದು ಗಣಿಧನಿಗಳ ‘ಸಾಮ್ರಾಜ್ಯ ವಿಸ್ತರಣೆ’ ನಡೆಯುತ್ತಿದೆ.

ಬೇಕಿದ್ದರೆ ಗಮನಿಸಿ. ನಮ್ಮ ದೇಶದಲ್ಲಿ ಗಣಿ ಸಂಪತ್ತು ಎಲ್ಲೆಲ್ಲಿದೆ ಎಂಬುದನ್ನು ಸೂಚಿಸುವ ಒಂದು ನಕಾಶೆ ತಯಾರಿಸಿ. ಹಾಗೆಯೇ ಜೀವಿವೈವಿಧ್ಯ, ವನ್ಯಸಂಪತ್ತು ಎಲ್ಲುಳಿದಿದೆ ಎಂಬುದರ ಗುರುತಿಸಿ. ಖನಿ
ಜವನ್ನು ಗುರುತಿಸಿದ ಸ್ಥಳದಲ್ಲೇ ಇವೂ ಬರುತ್ತವೆ-ತುಸು ಹೆಚ್ಚುಕಮ್ಮಿ. ಹಾಗೆಯೇ ನಮ್ಮ ದೇಶದ ಆದಿವಾಸಿಗಳು ಹಾಗೂ ಗಿರಿಜನರು ವಾಸಿಸುವ ತಾಣವನ್ನೂ ಅದೇ ನಕಾಶೆಯ ಮೇಲೆ ಗುರುತಿಸಿ. ಬಹುಮುಖ್ಯ ಜಲಮೂಲಗಳು ಎಲ್ಲಿವೆ ಎಂಬುದನ್ನೂ ಗುರುತಿಸಿ. ಎಲ್ಲವೂ ಒಂದೇ ಕಡೆ ಕಾಣುತ್ತವೆ. ಅಂದರೆ, ಎಲ್ಲಿ ಗಿರಿಜನರು- ಆದಿವಾಸಿಗಳು ಇದ್ದಾರೋ ಅಲ್ಲೇ ಅಳಿದುಳಿದ ವನ್ಯ ಸಂಪತ್ತು/ಜೀವಿ ವೈವಿಧ್ಯ ಇದೆ, ಅಲ್ಲೇ ಜಲಮೂಲಗಳೂ ಇವೆ. ಅಲ್ಲೇ ಅಳಿದುಳಿದ ಖನಿಜ ಸಂಪತ್ತೂ ಇದೆ. ಹಿಂದೆ ಮುಂದೆ ನೋಡದೆ ನೀವು ಅಲ್ಲಿ ಡೈನಮೈಟ್ ಇಟ್ಟರೆ ಒಂದೇ ಏಟಿಗೆ ನಾಲ್ಕಾರು ಬಗೆಯ ಸಂಪತ್ತಿಗೆ ನೀವು ಕೊಳ್ಳಿ ಇಟ್ಟಂತಾಗುತ್ತದೆ. ಈಗಂತೂ ಸಾರಾ ಸಗಟಾಗಿ ಡೈನಮೈಟ್‌ಗಳನ್ನು ಇಡುವ ಕೆಲಸ ನಡೆದಿದೆ.

ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯದೊಂದಿಗೆ ನಾವೀಗ ಮುಖಾಮುಖಿ ಆಗುತ್ತಿದ್ದೇವೆ. ನಮಗೆ ರಸ್ತೆ ಬೇಕು. ಹೊರಜಗತ್ತಿನೊಂದಿಗೆ ಕುಗ್ರಾಮಗಳನ್ನು ಬೆಸೆಯಬಲ್ಲ ಸಂಚಾರ ಸಾಧನ ಬೇಕು. ಬಸ್ ಇಲ್ಲದಿದ್ದರೆ, ಟೆಂಪೊ, ಲಾರಿಗಳಾದರೂ ಚಲಿಸಬಲ್ಲ ಸರ್ವಋತು ರಸ್ತೆ, ಸೇತುವೆ ಬೇಕು.

ಅದೇ ಕಾಲಕ್ಕೆ ನಮ್ಮ ಮುಂದಿನ ಪೀಳಿಗೆಗಾಗಿ ಜೀವಿ ವೈವಿಧ್ಯ ಉಳಿಯಬೇಕು. ಅದು ಕುದುರೆಮುಖದಲ್ಲಿ, ಸಂಡೂರಿನಲ್ಲಿ, ಒರಿಸ್ಸಾದ ಋಷ್ಯಮೂಕ ಪರ್ವತದಲ್ಲಿ, ಝಾರ್ಖಂಡದಲ್ಲಿ, ವಿದರ್ಭದಲ್ಲಿ ಮಾತ್ರ ಉಳಿದಿದ್ದರೆ ಅವನ್ನು ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕು ಎಂದರೆ ಅಲ್ಲಿ ರಸ್ತೆ ನಿರ್ಮಾಣ ಆಗಕೂಡದು. ಬುಲ್‌ಡೋಜರ್ ಹೋಗಕೂಡದು. ಜಗತ್ತಿನ ಜೀವವೈವಿಧ್ಯವನ್ನು ಉಳಿಸಬೇಕೆಂದಿದ್ದರೆ ರಸ್ತೆಯೇ ಸಾಧ್ಯವಿಲ್ಲದ ತಾಣವನ್ನು ನೀವು ಹುಡುಕಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಇದೀಗ ಉತ್ತರ ಧ್ರುವದಿಂದ ೯೬೬ ಕಿಮೀ ದೂರದ ಸ್ವಾಲ್‌ಬಾರ್ಡ್ ಎಂಬಲ್ಲಿ ಹಿಮಪರ್ವತವನ್ನು ಕೊರೆದು ಒಂದು ಬಹುದೊಡ್ಡ ಜೀವಖಜಾನೆಯನ್ನು ಸೃಷ್ಟಿಸಲಾಗುತ್ತಿದೆ. ಶೂನ್ಯದ ಕೆಳಗೆ ೧೮ ಡಿಗ್ರಿ ಸೆ. ತಂಪಿರುವ ಅಲ್ಲಿ ೩೦ ಲಕ್ಷ ತಳಿಗಳ ಬೀಜಗಳನ್ನು ಇಡಲೆಂದು ಹಿಮವನ್ನು ಕೊರೆಯಲಾಗಿದೆ. ಅಲ್ಲಿನ ನಿರ್ಜನ, ಶೀತಲನರಕಕ್ಕೆ ಹೋಗಲು ರಸ್ತೆಯೇ ಇಲ್ಲವಾದ್ದರಿಂದ ಆ ಖಜಾನೆಗೆ ಬೀಗ ಕೂಡ ಬೇಕಿಲ್ಲವಂತೆ.

ಇತ್ತ ಭಾರತದ ಕುಗ್ರಾಮಗಳನ್ನು ಆಧುನಿಕಗೊಳಿಸುವ ಯತ್ನ ನಡೆದಿದೆ. ಅಲ್ಲಿಗೆ ಮೂಲ ಸೌಕರ್ಯ ಒದಗಿಸಿದರೆ ‘ನಿಮಗೇ ಅನುಕೂಲ’ ಎಂದು ಬಹುರಾಷ್ಟ್ರೀಯ ಬಿಗ್ ಬಿಸಿನೆಸ್ ಕಂಪನಿಗಳಿಗೆ ಅರ್ಥತಜ್ಞ ಅಮರ್ತ್ಯ ಸೆನ್ ಸಲಹೆ ನೀಡುತ್ತಾರೆ. ಹಳ್ಳಿಗಳತ್ತ ಉತ್ತಮ ರಸ್ತೆಗಳಾದರೆ ಕೃಷಿ ಉತ್ಪನ್ನಗಳ ಸಾಗಾಟ ಸುಲಭ, ಉದ್ಯೋಗ ನಿರ್ಮಿತಿಯೂ ಸುಲಭ ಎಂದು ಕೃಷಿತಜ್ಞ ಸ್ವಾಮಿನಾಥನ್ ಹೇಳುತ್ತಾರೆ. ಹಾಗೆ ಹಳ್ಳಿಗರನ್ನು ನಗರಗಳತ್ತ ಸೆಳೆಯುವ ಹೆದ್ದಾರಿಗಳನ್ನು ನಿರ್ಮಿಸುವ ಬದಲು, ನಗರಕ್ಕೆ ಬಂದ ಹತವಾಸಿಗಳನ್ನು ಹಳ್ಳಿಗಳತ್ತ ಹೊರಡಿಸುವ ಕಿರುದಾರಿಗಳನ್ನು ನಿರ್ಮಿಸಿದರೆ ಹೇಗೆ? ರಾಳೆಗಾಂವ್ ಸಿದ್ದಿಯಲ್ಲಿ, ರೂಪಾರೆಲ್ ನದಿತಟಾಕದಲ್ಲಿ ಅಂಥ ಯತ್ನಗಳು ಸಫಲವಾಗಿವೆ. ನಿಸರ್ಗವನ್ನು ಧೂಲೀಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ. ನಾವಿಂದು ಎಷ್ಟು ಲಕ್ಷ ಟನ್ ಅದುರನ್ನು ರಫ್ತು ಮಾಡುತ್ತಿದ್ದೇವೆಯೋ ಸುಮಾರು ಅಷ್ಟೇ ಲಕ್ಷ ಟನ್ ಜೈವಿಕ ಸಾಮಗ್ರಿ ನಮ್ಮ ನಗರಗಳಿಗೆ ಅಗತ್ಯವಿದೆ. ಕಾಗದ, ಬಟ್ಟೆ, ಔಷಧ, ಇಂಧನ, ಕಟ್ಟಡ ಸಾಮಗ್ರಿ, ಪ್ಲಾಸ್ಟಿಕ್ ಎಲ್ಲವನ್ನೂ ಒದಗಿಸಬಲ್ಲ, ಕೋಟ್ಯಂತರ ಕೈಗಳಿಗೆ ಉದ್ಯೋಗ ನೀಡಬಲ್ಲ, ಋತುಮಾನಗಳನ್ನು ಸಮತೋಲ ಇಡಬಲ್ಲ, ಯಾವ ಕೃತಕ ಒಳಸುರಿಯಿಲ್ಲದೆ ಬೆಳೆಯಬಲ್ಲ ಸಹಜ ಜೀವಧಾಮಗಳನ್ನು, ಜೀವವೈವಿಧ್ಯ ರಕ್ಷಣೆಯ ಚಿರಂತನ ಖಜಾನೆಗಳನ್ನು ನಾವು ಸೃಷ್ಟಿಸಲಾರೆವೆ?

ಸೌಜನ್ಯ: ‘ಅಡಿಕೆ ಪತ್ರಿಕೆ’ಯ ಸೆಪ್ಟೆಂಬರ್ ೨೦೦೯ರ ಸಂಚಿಕೆಯ ‘ರಿಕ್ತ-ವ್ಯತಿರಿಕ್ತ’ ಅಂಕಣ ಬರಹ

Categories
ವಿಜ್ಞಾನ

ಹವಾಗುಣ ಬದಲಾವಣೆ

ಏಳನೆಯ ತರಗತಿಯಲ್ಲಿ ಓದುತ್ತಿರುವ ಲಖನೌ ಹುಡುಗಿ ಯುಗರತ್ನಾ ಶ್ರೀವಾಸ್ತವ ಮೊನ್ನೆ (ಸೆಪ್ಟೆಂಬರ್ ೨೨,೨೦೦೯) ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಭಾಷಣ ಮಾಡು­ತ್ತಿರುವ ಸಂದರ್ಭದಲ್ಲಿ ಜಗತ್ತಿನ ಏಳುನೂರು ತಾಣಗಳಲ್ಲಿ ಏಕಕಾಲಕ್ಕೆ ಒಂದು ಹೊಸ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಸಿನೆಮಾದ ಹೆಸರು ‘ಏಜ್ ಆಫ್ ಸ್ಟುಪಿಡ್’ (ದಡ್ಡರ ಯುಗ).
ಬೆಂಗಳೂರಿನಲ್ಲೂ ಮೂರು ಕಡೆ ಪ್ರದರ್ಶನ ಕಂಡ ಈ ಚಿತ್ರ ಮತ್ತು ನ್ಯೂಯಾರ್ಕ್‌ನಲ್ಲಿ ಯುಗ­ರತ್ನಾ ಮಾಡಿದ ಭಾಷಣ ಎರಡರದ್ದೂ ಸಂದೇಶ ಒಂದೇ:
ಇಂದಿನ ಜನ ನಾಯಕರು ತಂತಮ್ಮ ದೇಶಗಳನ್ನು ಸರಿಯಾಗಿ ಮುನ್ನಡೆಸದಿದ್ದರೆ ಹವಾಗುಣ ಬದಲಾವಣೆ ತೀವ್ರವಾಗಲಿದೆ; ಭವಿಷ್ಯ ತೀರಾ ಕರಾಳವಾಗಲಿದೆ ಎಂದು. ‘ಸ್ಟುಪಿಡ್’ ಚಿತ್ರದಲ್ಲಿ ಇಂದಿಗೆ 45 ವರ್ಷಗಳ ನಂತರದ ಭೂಮಿಯ ಸಂದರ್ಭವನ್ನು ತೋರಿಸ­ಲಾಗಿದೆ.
ಕ್ರಿ.ಶ. ೨೦೫೫ರಲ್ಲಿ ಬಿಸಿ ಪ್ರಳಯದ ನಂತರವೂ ಬದುಕುಳಿದ ಏಕಾಂಗಿ ವೃದ್ಧ­ನೊಬ್ಬನ ಜೀವನ ಚಿತ್ರಣ ಅದರಲ್ಲಿದೆ. ಆದರೆ ಇಡೀ ಚಿತ್ರ ಅದೊಂದೇ ವರ್ಷದ್ದಲ್ಲ. 2008­ರಿಂದ ಹಿಡಿದು ಮುಂದಿನ ನಾಲ್ಕು ದಶಕಗಳ ಬದುಕಿನ ಚಿತ್ರಣವನ್ನು ಕಲ್ಪನೆ ಮತ್ತು ವಾಸ್ತವ­ಗಳ ದೃಶ್ಯಾವಳಿಗಳಲ್ಲಿ ತೋರಿಸಲಾಗಿದೆ.
ಲಂಡನ್ ನಗರ ಪದೇ ಪದೇ ಜಲಪ್ರಳಯಕ್ಕೆ ತುತ್ತಾಗಿ ಖಾಲಿಯಾಗಿದೆ. ಸಿಡ್ನಿಯ ಖ್ಯಾತ ಅಪೇರಾ ಹೌಸ್ ಕಟ್ಟಡದ ಹಿಂದೆ ಜ್ವಾಲೆಗೆ ಭುಗಿಲೇಳುತ್ತಿದೆ; ಇಡೀ ಆಸ್ಟ್ರೇಲಿಯಾ ಖಂಡವೇ ವಿಶಾಲ ಕರಕಲು ಭೂಮಿಯಾಗಿದೆ. ಅಮೆರಿಕದ ಜೂಜುಖೋರರ ನಗರ ಲಾಸ್ ವೆಗಾಸ್ ಇಡಿಯಾಗಿ ಮರುಭೂಮಿಯ ಮರಳು ರಾಶಿ­ಯಲ್ಲಿ ಹೂತಿದೆ.
ಬರದ ಬೇಗೆಯಲ್ಲಿ ನಿರ್ಜನ­ವಾದ ಭರತಖಂಡ, ತಾಜ್ ಮಹಲ್ ಸಮೀಪ ಕಾಗೆಗಳು ಕುಕ್ಕುತ್ತಿರುವ ಮಾನವ ಮಾಂಸಖಂಡ; ಉತ್ತರ ಧ್ರುವದ ತುಸು ತಂಪಿನಲ್ಲಿ ನಿರಾಶ್ರಿತರ ನರಕಸದೃಶ ಬದುಕು ( ‘ಏಜಾಫ್ ಸ್ಟುಪಿಡ್’ ಜಾಲತಾಣದಲ್ಲಿ ಈ ಚಿತ್ರವನ್ನು ಉಚಿತವಾಗಿ ನೋಡಬಹುದು).
ಕಟ್ಟುಕತೆ ನಿಜ. ಆದರೆ ಇಂದಿನ ಸಮಾಜ ಹೀಗೆಯೇ ಸಂಪನ್ಮೂಲಗಳ ದುಂದುವೆಚ್ಚದಲ್ಲಿ ತಲ್ಲೆನ­ವಾಗಿದ್ದರೆ, ‘ಸ್ಟುಪಿಡ್’ನಲ್ಲಿ ಕಾಣುವ ಚಿತ್ರ­ಣವೇ ವಾಸ್ತವವೂ ಆಗಲು ಸಾಧ್ಯವಿದೆ. ವಿಶ್ವಸಂಸ್ಥೆಯಿಂದ ನೇಮಕಗೊಂಡ ಐಪಿಸಿಸಿ ತಜ್ಞರ ಅಂದಾಜಿನ ಪ್ರಕಾರ, ಭೂಮಿಯ ಸರಾ­ಸರಿ ಉಷ್ಣತೆ ನಾಲ್ಕು ಡಿಗ್ರಿ ಸೆಲ್ಸಿಯಸ್ ಏರಿದರೆ ಇವೆಲ್ಲ ಕರಾಳ ಭವಿಷ್ಯವೂ ನಿಜವಾಗುತ್ತದೆ.
ಇಂದಿನ ರಾಜಕೀಯ ಧುರೀಣರು ನಿಜಕ್ಕೂ ಮುತ್ಸದ್ದಿಗಳಾಗಿ ಇಡೀ ಮಾನವಕುಲದ ಪ್ರಗ­ತಿಯ ದಿಶೆಯನ್ನು ಬದಲಿಸದಿದ್ದರೆ ನ್ಯೂಯಾರ್ಕ್­ನಲ್ಲಿರುವ ಸ್ವಾತಂತ್ರ್ಯದೇವಿಯ ಪ್ರತಿಮೆಯ ತೋಳಿನ ತುದಿಯಲ್ಲಿರುವ ದೊಂದಿ ನೀರಲ್ಲಿ ಮುಳುಗಿ ನಂದಿಹೋಗುತ್ತದೆ.
ಮುತ್ಸದ್ದಿಗಳು ಎಲ್ಲಿದ್ದಾರೆ? ಯುಗರತ್ನಾ ಭಾಷಣ ಮಾಡಿದ ಹಾಗೆಯೇ ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಹಿಂದೆ 1992ರಲ್ಲಿ ಕೆನಡಾದ ಸೆವೆರಿನ್ ಸುಝುಕಿ ಎಂಬ ಇನ್ನೊಬ್ಬ ಹುಡುಗಿ ಅಂದಿನ ಧುರೀಣರಿಗೆ ಕಳಕಳಿಯ ಮನವಿ ಮಾಡಿದ್ದಳು.
ಜೀವಸಂಕುಲದ ಸತತ ನಾಶ, ಮರುಭೂಮಿ ವಿಸ್ತರಣೆ, ಜಲ ಮಾಲಿನ್ಯ, ಶಸ್ತ್ರಾಸ್ತ್ರ ಸಂಗ್ರಹಣೆ ಮುಂತಾದ ಅನಿಷ್ಟಗಳನ್ನು ಪಟ್ಟಿಮಾಡಿ, ‘ಹಿರಿಯರೇ, ಇವುಗಳನ್ನೆಲ್ಲ ಸರಿ­ಪಡಿ­ಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಂಥ ಅನಿಷ್ಟಗಳ ಸರಮಾಲೆ ಇನ್ನಷ್ಟು ಬೆಳೆಯದಂತೆ ತಡೆಯಲು ಸಾಧ್ಯವೇ?’ ಎಂದು ಕೇಳಿದ್ದಳು. ಅಂದಿನ ಎಲ್ಲ ಸಂಕಟಗಳೂ ಇಂದು ಇನ್ನಷ್ಟು ಉಲ್ಬಣಗೊಂಡಿವೆ. ಸಂಕಟಗಳ ಜಾಗತೀಕರಣ ವಾಗಿದೆ.
ಸಮಸ್ಯೆಗಳನ್ನು ಕಡಿಮೆ ಮಾಡಲೆಂದು ವಿಜ್ಞಾನಿ­ಗಳು, ತಂತ್ರವಿದ್ಯಾ ಪರಿಣತರು ಹಾಗೂ ಯೋಜನಾ ತಜ್ಞರು ರೂಪಿಸುವ ಎಲ್ಲ ಉಪಾಯ­ಗಳೂ ರಾಜಕೀಯ ಹಸ್ತಕ್ಷೇಪ­ದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ದಾರಿಮಾಡಿ­ಕೊಡು­ತ್ತವೆ.
ಇದಕ್ಕೆ ತೀರ ಸರಳ ಉದಾಹರಣೆ ಎಂದರೆ ಬೋರ್‌ವೆಲ್ ಯಂತ್ರಗಳು. ಕುಡಿ­ಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಸಿಕ್ಕ ಅತ್ಯುತ್ತಮ ತಾಂತ್ರಿಕ ಉಪಾಯ ಇದು ಹೌದು. ಆದರೆ ಅದರ ದುರ್ಬಳಕೆ ಅತಿಯಾಗಿದ್ದರಿಂದಲೇ ನೆಲದಾಳಕ್ಕೂ ಮರುಭೂಮಿ ವಿಸ್ತರಿಸಿದೆ.
ರಾಜ­ಸ್ತಾನದ ನಂತರದ ಅತಿ ದೊಡ್ಡ ‘ಮರುಭೂಮಿ ಸದೃಶ’ ಭೂಕ್ಷೇತ್ರವಿರುವ ರಾಜ್ಯ ನಮ್ಮದೆಂಬ ಕುಖ್ಯಾತಿ ಬಂದಿದೆ. ಇಂಥ ಬೋರ್‌ವೆಲ್‌ಗಳಿಗೆ ನಿಯಂತ್ರಣ ಹೇರಲೆಂದು ಮಸೂದೆ ತರುವ ಯತ್ನಗಳೆಲ್ಲ ರಾಜಕೀಯ ಹಿತಾಸಕ್ತಿಯಿಂದಾಗಿ ವಿಫಲವಾಗಿವೆ.
ಇದೀಗ ಉಡಾವಣೆಗೊಂಡ ‘ಓಷನ್­ಸ್ಯಾಟ್’ ಉದಾಹರಣೆಯನ್ನೇ ನೋಡೋಣ. ಕಳೆದ ಮೂವತ್ತು ವರ್ಷಗಳಿಂದಲೂ ಇದೇ ಮಾದರಿಯ ಉಪಗ್ರಹಗಳು ಜಗತ್ತಿನ ವಿಶಾಲ ಸಾಗರಗಳ ಮೇಲೆ ಕಣ್ಣಿಟ್ಟಿವೆ.
ಅಮೆರಿಕದ ‘ನೋವಾ’ ಸರಣಿ ಉಪಗ್ರಹಗಳು ರವಾನಿಸುವ ಮಾಹಿತಿ ಎಲ್ಲರಿಗೂ ಲಭ್ಯ ಇವೆ. ಹವಾಮಾನ ಮುನ್ಸೂಚನೆಯ ಕುರಿತಂತೆ ದಿನವೂ ನಮ್ಮ ಟಿವಿಯಲ್ಲಿ ಕಾಣುವ ನಕ್ಷೆಗಳು ಚಿತ್ರಗಳೆಲ್ಲ ‘ನೋವಾ’ ಉಪಗ್ರಹಗಳಿಂದ ಬಂದುದೇ ಆಗಿವೆ.
ಜತೆಗೆ ಯಾವ ಸಮುದ್ರದ ಯಾವ ಭಾಗದಲ್ಲಿ ಉಷ್ಣತೆ ತುಸು ಹೆಚ್ಚಾಗಿದೆ, ಹಸಿರು ಪಾಚಿಗಳು ಯಾವ ಭಾಗದಲ್ಲಿ ಹೆಚ್ಚಾಗಿ ಸಾಂದ್ರವಾಗಿವೆ ಎಂಬುದರ ವರದಿ ಕೂಡ ಅಲ್ಲಿಂದಲೇ ಸಿಗುತ್ತದೆ. ಅದನ್ನು ಆಧರಿಸಿ, ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಮೀನುಗಳು ಒಟ್ಟಾಗಿ ಸಂಚರಿಸುತ್ತಿವೆ ಎಂಬುದನ್ನು ಕೂಡ ಹೇಳಬಹುದು.
ಹೈದರಾ­ಬಾದ್‌ನಲ್ಲಿರುವ ‘ಸಾಗರ ಮಾಹಿತಿ ಕೇಂದ್ರ’ (ಇನ್­ಕೊಯಿಸ್) ಹೆಸರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆ ‘ನೋವಾ’ ನೆರವಿನಿಂದ ವಾರಕ್ಕೆ ಮೂರು ಬಾರಿ ಮೀನು ದಟ್ಟಣಿಸಿರುವ ಸ್ಥಳಗಳನ್ನು ಗುರುತಿಸಿ ದೇಶದ ನಾನಾ ಬಂದರುಗಳಿಗೆ ಮಾಹಿತಿ ನೀಡುತ್ತದೆ.
ದೋಣಿಯಲ್ಲಿ ಕೂತು ಹತ್ತಾರು ಕಿಮೀ ದೂರದವರೆಗೆ ಅಂಡಲೆಯುತ್ತ ಅದೆಷ್ಟೊ ಬಾರಿ ವ್ಯರ್ಥ ಸುತ್ತಾಡುವ ಮೀನು­ಗಾರ­ರಿಗೆ ಇದರಿಂದ ತುಂಬ ಅನುಕೂಲವಾಗಿದೆ. ಇಂಥದೇ ಸ್ಥಳದಲ್ಲಿ ಮೀನುಗಳಿವೆ ಎಂದು ಗೊತ್ತಾಗಿ ನೇರವಾಗಿ ಅಲ್ಲಿಗೆ ಧಾವಿಸುತ್ತಾರೆ. ಸಮಯ ಹಾಗೂ ಶಕ್ತಿಯ ಉಳಿತಾಯವಾಗಿ ‘ನೀಲಕ್ರಾಂತಿ’ ಯಶಸ್ವಿಯಾಗುತ್ತದೆ.
ಈಗ ಆಗಿದ್ದೇನೆಂದರೆ, ಸಾಮಾನ್ಯ ಮೀನು­ಗಾರ­ರಿಗೆ ಈ ಮಾಹಿತಿ ಸಿಗುವ ಮೊದಲೇ ಯಾಂತ್ರೀಕೃತ ಬೃಹತ್ ಹಡಗುಗಳು ಅಲ್ಲಿಗೆ ಧಾವಿಸುತ್ತವೆ. ಬೇಡಿಕೆ ಇರಲಿ ಬಿಡಲಿ, ಭಕ್ಷ್ಯ­ಯೋಗ್ಯ ಇರಲಿ ಬಿಡಲಿ, ವಿಶಾಲ ಬಲೆಗಳನ್ನು ಬೀಸಿ ಏಕಕಾಲಕ್ಕೆ ಹತ್ತಾರು ಟನ್‌ಗಟ್ಟಲೆ ಮೀನುಗಳನ್ನು ಹಿಡಿದು ತರುತ್ತವೆ.
ದುರ್ಬಲ ಮೀನುಗಾರರು ತಮ್ಮ ಸಾಂಪ್ರದಾಯಿಕ ಜ್ಞಾನದ (ಅಂದರೆ ಪಕ್ಷಿಗಳ ಹಾರಾಟ, ನೀರಿನ ಗುಳ್ಳೆ, ಬದಲಾಗುವ ಬಣ್ಣ, ಗಾಳಿಯ ವಾಸನೆ) ಜಾಡು ಹಿಡಿದು ಅತ್ತ ಹೋದರೆ ಅಲ್ಲಿ ಎಲ್ಲವೂ ಆಗಲೇ ಖಾಲಿ. ಯಾಂತ್ರಿಕ ಹಡಗುಗಳ ಇಂಥ ಅಂದಾ­ದುಂದಿ ಕಬಳಿಕೆಯಿಂದಾಗಿ ಇಂದು ಜಗತ್ತಿನ ಜಲಜೀವ ಭಂಡಾರವೇ ಖಾಲಿಯಾಗುತ್ತವೆ.
ನಿನ್ನೆ ಹಾರಿಬಿಟ್ಟ ಉಪಗ್ರಹದಿಂದ ನಮ್ಮ ಬಾಹ್ಯಾಕಾಶ ತಂತ್ರಜ್ಞರ ಆತ್ಮವಿಶ್ವಾಸ ಹೆಚ್ಚಿದೆ; ಪಿಎಸ್‌ಎಲ್‌ವಿ ರಾಕೆಟ್‌ಗಳ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಿದೆ.
ಬೇರೆ ರಾಷ್ಟ್ರಗಳು ತುಸು ಅಗ್ಗದ ದರದಲ್ಲಿ ನಮ್ಮ ರಾಕೆಟ್ ಮೇಲೆಯೇ ತಮ್ಮ ಉಪಗ್ರಹಗಳ ಹಾರಿಬಿಡಬಹುದಾದ ಅವಕಾಶ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯ ಎಂದರೆ ಮುಂದೆಂದಾದರೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಉಪಗ್ರಹ ಚಿತ್ರಣಗಳನ್ನು ನಮಗೆ ಕೊಡಲು ನಿರಾಕರಿಸಿದರೆ ನಾವು ಕಂಗಾಲಾಗ­ಬೇಕಾಗಿಲ್ಲ. ಸ್ವಾವಲಂಬನೆ ನಮ್ಮದಾಗುತ್ತದೆ.
‘ಓಷನ್‌ಸ್ಯಾಟ್-2’ ನೆರವಿನಿಂದ ನಾವೂ ಮೀನುಗುಂಪುಗಳನ್ನು ಪತ್ತೆಹಚ್ಚಲು ಸಾಧ್ಯ­ವಾಗುತ್ತದೆ. ಸುಂಟರಗಾಳಿಯ ಮುನ್ಸೂಚನೆ ಗೊತ್ತಾಗಬಹುದು. ಸಮುದ್ರ ಕೊರೆತ ಎಲ್ಲೆಲ್ಲಿ ಎಷ್ಟು ತೀವ್ರ ಆಗಲಿಕ್ಕಿದೆ, ಉಪ್ಪುನೀರು ಎಷ್ಟೆಷ್ಟು ದೂರಕ್ಕೆ ನುಗ್ಗುತ್ತಿದೆ ಎಂಬುದೂ ಗೊತ್ತಾಗ­ಬಹುದು.
ಅದನ್ನೇ ಆಧರಿಸಿ, ಕಡಲ ಕೊರೆತ ತಡೆಗಟ್ಟುವ ಇನ್ನಷ್ಟು ವ್ಯರ್ಥ ಯೋಜನೆಗಳು ಎಲ್ಲೋ ರೂಪುಗೊಳ್ಳುತ್ತವೆ; ಸಾರ್ವಜನಿಕ ಹಣದ ಅಪವ್ಯಯ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತದೆ. ಅದನ್ನು ತಡೆಗಟ್ಟುವ ರಾಜಕೀಯ ಇಚ್ಛಾಶಕ್ತಿ ನಮ್ಮಲ್ಲಿ ಬೆಳೆದೀತೆ? ಎಸ್‌ಈಝಡ್­ಗಳು, ಕಡಲಂಚಿನ ರೆಸಾರ್ಟ್‌ಗಳು ಕಂಡಕಂಡಲ್ಲಿ ಆಳ ಬೋರ್‌ವೆಲ್ ಕೊರೆದು ಜಲಖಜಾನೆ­ಯನ್ನು ಖಾಲಿ ಮಾಡದಂತೆ ತಡೆಯಲು ಸಾಧ್ಯವೆ?
ಬೋರ್‌ವೆಲ್ ಮಾತು ಬಂದಾಗ ಸಹಜವಾಗಿ ನಾರ್ಮನ್ ಬೋರ್ಲಾಗ್ ನೆನಪೂ ಬರುತ್ತದೆ. ‘ಹಸಿರುಕ್ರಾಂತಿಯ ಜನಕ’ ಎಂದೇ ಖ್ಯಾತಿ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪಡೆದು ಈಚೆಗೆ ಗತಿಸಿದ ಈ ಪುಣ್ಯಾತ್ಮನಿಂದಾಗಿ ಮೆಕ್ಸಿಕೊ, ಪಾಕಿಸ್ತಾನ ಮತ್ತು ಭಾರತದಲ್ಲಿ ಆಹಾರ ಸ್ವಾವ­ಲಂಬನೆ ಸಾಧ್ಯವಾಯಿತು ನಿಜ.
ಅಧಿಕ ಇಳು­ವರಿಯ ಜತೆಗೆ ಅಧಿಕ ನೀರು, ಅಧಿಕ ವಿದ್ಯುತ್ತು, ಅಧಿಕ ಪೆಟ್ರೋಲಿಯಂ, ಅಧಿಕ ಒಳಸುರಿ ಎಲ್ಲವು­ಗಳ ಮಹಾಕ್ರಾಂತಿಯೇ ನಡೆದು ಇಂದಿನ ಭೂಮಿಯ ಒಟ್ಟಾರೆ ಸಂಕಷ್ಟಗಳಿಗೆ ಆತನ ಕೊಡುಗೆಯೂ ಅಧಿಕ ಎಂತಲೂ ವಾದಿಸ­ಬಹುದು.
ಕೃಷಿ ವಿಸ್ತರಣೆಗೆಂದು ನಾಶವಾಗ­ಬಹುದಾಗಿದ್ದ ಲಕ್ಷಾಂತರ ಹೆಕ್ಟೇರ್ ಅರಣ್ಯ ತನ್ನಿಂದಾಗಿ ಉಳಿಯಿತೆಂದೂ ಹಸಿವೆಯಿಂದ ಸಾಯಬಹುದಾಗಿದ್ದ ಕೋಟ್ಯಂತರ ಜನರ ಬದುಕು ಭದ್ರವಾಯಿತೆಂದೂ ಆತ ಹೇಳಿದ್ದರಲ್ಲಿ ಸತ್ಯಾಂಶ ಇದೆಯಾದರೂ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕ ತಳಿಗಳ ನಾಶ, ಮಣ್ಣುನೀರಿನ ಮಾಲಿನ್ಯ, ನೆಲದಾಳದ ಬರಗಾಲ ಎಲ್ಲಕ್ಕೂ ಈ ಕ್ರಾಂತಿಯೇ ಕಾರಣ ಎಂಬುದೂ ಅಷ್ಟೇ ನಿಜ. ಈಚೆಗೆ ಈತ ಕುಲಾಂತರಿ ತಳಿಗಳ ಪ್ರಚಾರಕನೂ ಆಗಿ, ಕಳೆನಾಶಕ ಕೆಮಿಕಲ್‌ಗಳ ಪ್ರಚಾರಕನಾಗಿ, ಐರೋಪ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಾಗಿತ್ತು ಕೂಡ.
‘ಕೈಯಾರೆ ಕಳೆ ಕೀಳುವುದೆಂದರೆ ತುಂಬ ಕಷ್ಟದ ಕೆಲಸ; ಬಡವರಿಗೂ ಟೊಂಕ ಇರುತ್ತದೆ ಕಣ್ರೀ!’ ಎಂದು ಬೋರ್ಲಾಗ್ ಕಳೆನಾಶಕ ಕೆಮಿಕಲ್ ತಯಾರಿ­ಸುವ ಕಂಪೆನಿಗಳ ವಕ್ತಾರನಂತೆ ಕಳೆದ ವರ್ಷ ಹೇಳಿದ್ದು ಅನೇಕರನ್ನು ಕೆರಳಿಸಿತ್ತು. ಕೃಷಿ ರಸಾ­ಯನಗಳ ಅತಿ ಬಳಕೆಯಿಂದಾಗಿಯೇ ಭಾರತ­ದಂಥ ದೇಶಗಳ ಕೃಷಿಕರು ನಾನಾ ಕಾಯಿಲೆ­ಗಳಿಂದ, ಖಿನ್ನತೆಯಿಂದ ಬಳಲುತ್ತ, ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಅಂಥ ಅನಾಹುತಗಳಿಗೆ ವಿಜ್ಞಾನ ತಂತ್ರಜ್ಞಾನ ಕಾರಣವೇ ಅಥವಾ ಧನದಾಹಿ ಕಂಪೆನಿಗಳು ಕಾರಣವೇ, ಅವುಗಳನ್ನು ಪೊರೆಯುವ ರಾಜಕಾರಣಿಗಳು ಕಾರಣವೇ ಎಂಬುದು ಸದಾ ಚರ್ಚಾಸ್ಪದ ವಿಷಯ ವಾಗಿಯೇ ಉಳಿಯುತ್ತದೆ.
ಹಸಿರು ಕ್ರಾಂತಿಯ ಎಲ್ಲಕ್ಕಿಂತ ದೊಡ್ಡ ಅನಾಹುತವನ್ನು ಈಗೀಗ ವಿಜ್ಞಾನಿಗಳು ಮನಗಾಣುತ್ತಿದ್ದಾರೆ. ಹೈಬ್ರಿಡ್ ತಳಿಗಳಲ್ಲಿ ಕಬ್ಬಿಣ, ಸತು, ಅಯೊಡಿನ್ ಮತ್ತು ಎ ಜೀವಸತ್ವ ತೀರಾ ಕಡಿಮೆ ಇರುತ್ತದೆ. ಅದನ್ನೇ ತಿಂದು ಬೆಳೆದ ಇಡೀ ಜನಾಂಗ ಹೊಟ್ಟೆ ತುಂಬಿದ್ದರೂ ‘ಅವಿತ ಹಸಿವೆ’ಯಿಂದಾಗಿ ಅನೇಕ ಅವ್ಯಕ್ತ ದೌರ್ಬಲ್ಯಗಳ ತವರಾಗುತ್ತದೆ.
ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ಮಾಂಸ, ಮೊಟ್ಟೆ, ಮೀನು, ಹಣ್ಣುಹಂಪಲುಗಳನ್ನು ಸೇವಿಸುವ ಜಗತ್ತಿನ ಇತರ ಜನಾಂಗಕ್ಕೆ ಹೋಲಿಸಿದರೆ ಹೈಬ್ರಿಡ್ ಧಾನ್ಯಗಳನ್ನೇ ಹೆಚ್ಚಾಗಿ ಉಣ್ಣುವವವರಿಗೆ ಬೌದ್ಧಿಕ, ಭಾವನಾತ್ಮಕ ಹಾಗೂ ದೈಹಿಕ ಸೋಲುಗಳು ಪದೇ ಪದೇ ಎದುರಾಗುತ್ತವೆ.
ಸಮತೋಲ ಆಹಾರವೇ ದುರ್ಲಭವಾದಾಗ ನೊಬೆಲ್ ಪಾರಿತೋಷಕವೂ ಒಲಿಂಪಿಕ್ ಪದಕಗಳೂ ದುರ್ಲಭವಾಗುತ್ತವೆ.

Categories
ಕಲೆ ನೃತ್ಯ ಭರತನಾಟ್ಯ

ಮೃಗಶೀರ್ಷ ಹಸ್ತ

ಕೃತಿ: : ಕಲೆ, ನೃತ್ಯ, ಭರತನಾಟ್ಯ
ಲೇಖಕರು: ಕಲೆ, ನೃತ್ಯ, ಭರತನಾಟ್ಯ
ಕೃತಿಯನ್ನು ಓದಿ

Categories
ಕಲೆ ನೃತ್ಯ ಭರತನಾಟ್ಯ

ಪದ್ಮಕೋಶ ಹಸ್ತ

ಲಕ್ಷಣ: ಎಲ್ಲ ಬೆರಳುಗಳನ್ನು ವಿರಳವಾಗಿ ಮಾಡಿ ಬೆರಳುಗಳ ತುದಿಯನ್ನು ಸ್ವಲ್ಪವಾಗಿ ಮಡಿಸಿ ಒಂದಕ್ಕೊಂದು ಸೇರುವಂತೆ, ಧನುಸ್ಸಿನಂತೆ ಬಗ್ಗಿಸಿದರೆ ಪದ್ಮಕೋಶ ಎಂದರೆ ಕಮಲದ ಮೊಗ್ಗು, ಅಥವಾ ಪೂರ್ಣವಾಗಿ ಅರಳದ ಕಮಲ ಎಂದರ್ಥ. ದಿನನಿತ್ಯ ಜೀವನದಲ್ಲಿ ಉಗುರು ಸೂಚಿಸಲು, ಚಿಕ್ಕದು ಎನ್ನಲು, ಗುಂಡಗಿರುವುದು, ಚೆಂಡು, ಊಟ ಮಾಡುವಾಗ ಮುಂತಾದವುಗಳ ಸಂವಹನ ಮಾಡಲು ಉಪಯೋಗಿಸಲಾಗುವುದು. ಮಣಿಪುರಿ ನೃತ್ಯದಲ್ಲಿ ಈ ಹಸ್ತಕ್ಕೆ ಶಾರ್ದೂಲಸ್ಯವೆಂದೂ ಕರೆಯುತ್ತಾರೆ.

ಪದ್ಮಕೋಶವನ್ನು ಹೋಲುವ ಮತ್ತೊಂದು ಅಸಂಯುತ ಹಸ್ತವಿದೆ. ಅದೇ ಕದಂಬ ಹಸ್ತ. ಇದರಲ್ಲಿ ಐದು ಬೆರಳುಗಳ ತುದಿಗಳನ್ನು ಸೇರಿಸಿ ಹಿಡಿಯುತ್ತಾರೆ. ಸಾಮಾನ್ಯವಾಗಿ ಪದ್ಮಕೋಶದ ವಿನಿಯೋಗಗಳನ್ನು ಇಲ್ಲಿ ಉಪಯೋಗಿಸಬಹುದು. ಹಸ್ತ ಮುಕ್ತಾವಳಿಯಲ್ಲಿ ಇದು ಉಲ್ಲೇಖಿತವಾಗಿದೆ.
ವಿನಿಯೋಗ: ಬಿಲ್ವ ಮತ್ತು ಬೇಲದ ಹಣ್ಣುಗಳು, ಸ್ತನಗಳು, ವರ್ತುಲ (ಗುಂಡಗೆ), ಚೆಂಡಿನಿಂದ ಆಡುವುದು, ಕುಡಕೆ (ಭರಣಿ), ಊಟ ಮಾಡುವುದು, ಹೂವಿನ ಮಧ್ಯಭಾಗ, ಮಾವಿನ ಹಣ್ಣು, ಹೂಮಳೆ, ಹೂಗುಚ್ಚ, ಜಪಭಾವವನ್ನು ಸೂಚಿಸುವುದು, ಘಂಟಾರೂಪವನ್ನು ತೋರಿಸುವುದು, ಹುತ್ತ, ನೈದಿಲೆ, ಮೊಟ್ಟೆ, ಅಲಂಕಾರ ಭೂಷಣ. ನಾರಂಗಿವೃಕ್ಷ.
ಇತರೆ ವಿನಿಯೋಗ: ಮಿಂಚು, ಗಿರಿಕರ್ಣಿಕಾ ಪುಷ್ಪ, ರೆಂಬೆ ಬಗ್ಗಿರುವುದು, ಚಿನ್ನದ ಪಾತ್ರೆ, ಚಕೋರ ಪಕ್ಷಿ, ಯಜ್ಞಗಳಲ್ಲಿಯ ಆಮಿಷ, ದೇವತೆಗಳ ಪೂಜೆಗಾಗಿ ಕೊಡುವ ಬಲಿ, ಅಗ್ರಪಿಂಡ, ಹೂಗಳನ್ನು ಚೆಲ್ಲುವುದು, ಗಡ್ಡಧಾರಿ, ಕಾಣಿಕೆ, ತಟ್ಟೆ, ಪಿಂಡ, ನೈದಿಲೆ, ೫ ತಲೆಹಾವು, ಕಲ್ಲೆಸೆಯುವುದು, ಪಾರ್ವತಿ-ಚಾಮುಂಡಿಯರೇ ಮೊದಲಾದ ದೇವಿಯರ ದರ್ಶನ.
ಪದ್ಮಕೋಶ ಹಸ್ತವನ್ನು ಕಂಪಿಸುತ್ತಲೇ ಕೆಳಕ್ಕೆ ಹಿಡಿಯುವುದು ಸಪ್ತ ಸ್ವರಗಳಲ್ಲಿ ಒಂದಾದ ನಿಷಾದದ ಸಂಕೇತ. ಪದ್ಮಕೋಶಹಸ್ತವನ್ನು ಸಣ್ಣಗೆ ಅಲ್ಲಾಡಿಸುವುದು ೨೭ ನಕ್ಷತ್ರಗಳ ಪೈಕಿ ಒಂದಾದ ವಿಶಾಖಾ ಎಂತಲೂ, ಪದ್ಮಕೋಶವನ್ನು ಕೆಳಮುಖವಾಗಿ ಹಿಡಿಯುವುದು ಜ್ಯೇಷ್ಠ ನಕ್ಷತ್ರವೆಂದೂ, ಪದ್ಮಕೋಶ ಹಸ್ತಗಳನ್ನು ಬೆಸೆದು ಹೆಬ್ಬೆರಳು ಮತ್ತು ಕಿರುಬೆರಳನ್ನು ಜೋಡಿಸುವುದು ಕುಂಭರಾಶಿಯೆಂದೂ, ಪದ್ಮಕೋಶಗಳನ್ನು ಸ್ವಸ್ತಿಕವಾಗಿರಿಸುವುದು ಪುಗ ವೃಕ್ಷದ ಸಂಕೇತವೆಂದೂ ಅರ್ಥೈಸಲಾಗಿದೆ. ಎಡಕೈಯಲ್ಲಿ ಪದ್ಮಕೋಶವನ್ನು ಕೆಳಮುಖವಾಗಿ ಹಿಡಿದು, ಬಲಗೈಯಲ್ಲಿ ಪತಾಕವನ್ನು ಅದರ ಹಿಂದೆ ಹಿಡಿಯುವುದು ಕರಡಿ ಎಂದು ಸೂಚಿಸುತ್ತದೆ. ಸಂಕರ ಹಸ್ತ ವಿಭಾಗದಲ್ಲಿ ಪದ್ಮಕೋಶವನ್ನು ಮೇಲ್ಭಾಗದಲ್ಲಿ ಹಿಡಿದರೆ ಚಂದ್ರನೆಂದು ಅರ್ಥ.

ಕಥಕ್ಕಳಿಯಲ್ಲಿ ಪದ್ಮಕೋಶವನ್ನು ಊರ್ಣನಾಭವೆಂದು ಕರೆಯುವುದು ವಾಡಿಕೆ. ಊರ್ಣನಾಭ ಎಂದರೆ ಜೇಡರ ಹುಳು ಎಂದು ಅರ್ಥ. ಪದ್ಮಕೋಶದ ಎಲ್ಲಾ ಬೆರಳುಗಳನ್ನು ಇನ್ನೂ ಸ್ವಲ್ಪ ಅಂಗೈಯೊಳಗೆ ಬಾಗಿಸುವುದೇ ಊರ್ಣನಾಭ.

ಊರ್ಣನಾಭದ ವಿನಿಯೋಗ: ಕೂದಲಿನಲ್ಲಿ ಹೇನುಗಳಿದ್ದರೆ ತುರಿಸಿಕೊಳ್ಳುವುದು, ಜಿಂಕೆ೦‌ು ಮುಖ, ಕಪಿ, ಸಿಂಹ, ಕೂರ್ಮ, ತಲೆಯನ್ನು ಕೆರೆದುಕೊಳ್ಳುವುದು, ಕಳ್ಳತನ, ಆಮೆ, ಸ್ತನಗಳು, ಕ್ಷತ್ರಿಯ,ಜಾತಿ, ಕಲಶ, ಜೇಡರಹುಳು, ಕೂದಲು ಹಿಡಿಯುವುದು, ರಕ್ತಕೆಂಪು ಕರ್ಣಿಕಾರ ಹೂ, ತಲೆಬಾಚುವುದು, ಪಂಜವುಳ್ಳ ಮೃಗಗಳು, ನರಸಿಂಹಾವತಾರ, ಕುಷ್ಠ. ಯಕ್ಷಗಾನದಲ್ಲಿ ಕ್ರೂರಮೃಗಗಳು, ರೌದ್ರರಸಕ್ಕೆ ಉಪಯೋಗಿಸುತ್ತಾರೆ. ನಿತ್ಯಜೀವನದಲ್ಲಿ ಭಯಂಕರ, ಕ್ರೂರ, ಕುಷ್ಠ, ಹುಳ, ಕಿರಿಕಿರಿ, ತಲೆಕೆರೆತ ಇತ್ಯಾದಿಗೆ ಬಳಸುತ್ತಾರೆ.

ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದವಾದ ನೃತ್ತ ಹಸ್ತಗಳ ಪೈಕಿ ನಳಿನೀ ಪದ್ಮಕೋಶವೆಂಬ ಹಸ್ತವಿದೆ. ಪದ್ಮಕೋಶ ಹಸ್ತಗಳನ್ನು ವ್ಯಾವೃತ್ತ (ಪಾರ್ಶ್ವಗಳಲ್ಲಿ ಕೈಗಳನ್ನು ಮೇಲಕ್ಕೆತ್ತುವುದು) ಮತ್ತು ಪರಿವರ್ತಿತ(ನಾಟ್ಯಕಾಲದಲ್ಲಿ ಪಾರ್ಶ್ವಗಳಿಂದ ಹಸ್ತಗಳನ್ನು ಮುಂಭಾಗಕ್ಕೆ ತರುವುದು) ವಾಗಿ ತಿರುಗಿಸಿ ಸುತ್ತು ಹಾಕಿಸುವುದೇ ಇದರ ಲಕ್ಷಣ:
ನಳಿನೀ ಪದ್ಮಕೋಶದ ವಿನಿಯೋಗ: ನಾಗಬಂಧ, ಮೊಗ್ಗು, ಸಮನಾಗಿ, ಹಂಚುವುದು, ಹೂಗೊಂಚಲು, ಹತ್ತು ಎನ್ನುವುದಕ್ಕೆ ಮತ್ತು ಗಂಡಭೇರುಂಡ ಪಕ್ಷಿ.

Categories
ಕನ್ನಡ ದ-ರಾ-ಬೇಂದ್ರೆ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ದ.ರಾ.ಬೇಂದ್ರೆ

ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ.
ಜನನ: ದ.ರಾ.ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ , ತಾಯಿ ಅಂಬವ್ವ. ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಮ್.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಬೆಳವಣಿಗೆ: ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ೧೯೨೫ ರಲ್ಲಿ ಪ್ರಕಟವಾದ “ಕೃಷ್ಣಕುಮಾರಿ” ಇವರ ಮೊದಲ ಕವನಸಂಕಲನ. ಅಲ್ಲಿಂದಾಚೆಗೆ ಅವರು ಸತತವಾಗಿ ಕಾವ್ಯ ರಚನೆ ಮಾಡುತ್ತಲೇ ಬ೦ದರು.
ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”ಯು ಆಗಲೇ ಪ್ರಕಟವಾಗಿತ್ತು. ಧಾರವಾಡ ಆಕಾಶವಾಣಿ ಕೇಂದ್ರದ ಸಾಹಿತ್ಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು.
`ಅಂಬಿಕಾತನಯದತ್ತ’ನಾಗಿ ಕನ್ನಡ ಕಾವ್ಯಕ್ಕೊಂದು ಹೊಸ ಶೋಭೆ ತಂದುಕೊಟ್ಟ ಶಬ್ದ ಗಾರುಡಿಗ, ಸಹಜ ಕವಿ. “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ. “ಗರಿ”, “ಕಾಮಕಸ್ತೂರಿ”, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ”, “ಸಖೀಗೀತ”, “ಮೇಘದೂತ”, “ಶ್ರಾವಣ ಬಂತು” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕವನಸಂಕಲನಕ್ಕೆ ೧೯೭೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು.ಬೇಂದ್ರೆಯವರು ಕವಿತೆಗಳನ್ನಲ್ಲದೆ ಒಂಭತ್ತು ವಿಮರ್ಶಾ ಗ್ರಂಥಗಳನ್ನು, ಹದಿನಾಲ್ಕು ನಾಟಕಗಳನ್ನು, ಏಳು ಅನುವಾದ ಕೃತಿಗಳನ್ನು, ಐದು ಮರಾಠಿ ಹಾಗೂ ಒಂದು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಮುಟ್ಟಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು.

ಅಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಶ್ರೀ ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ”,”ಇಳಿದು ಬಾ ತಾಯಿ”,”ಹಿಂದ ನೋಡದ ಗೆಳತಿ” ಇಂದಿಗೂ ಅನೇಕರಿಗೆ ಅತ್ಯಂತ ಪ್ರೀತಿಪಾತ್ರ ಕವನಗಳಾಗಿವೆ.

ಗಿರೀಶ್ ಕಾರ್ನಾಡರು ನಿರ್ದೇಶಿಸಿರುವ ಬೇಂದ್ರೆ ಡಾಕ್ಯುಮೆಂಟರಿ ದೃಶ್ಯಮಾಧ್ಯಮದ ಒಂದು ಅನನ್ಯ ಕಲಾಕೃತಿ.

ಕ್ರೈಸ್ಟ್ ವಿಶ್ವವಿದ್ಯಾಲಯದ(ಮೊದಲು ಕ್ರೈಸ್ಟ್ ಕಾಲೇಜು) ಕನ್ನಡ ಸಂಘ ಪ್ರತಿವರ್ಷ ದ.ರಾ.ಬೇಂದ್ರೆ ಅಂತರಕಾಲೇಜು ಕವನ ಸ್ಪರ್ಧೆಯನ್ನು,ಅ.ನ.ಕೃ.ಲೇಖನ ಸ್ಪರ್ಧೆಯನ್ನು ನಡೆಸುಕೊಂಡು ಬರುತ್ತಿದೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು

೧೯೮೧ರ ಅಕ್ಟೋಬರಿನಲ್ಲಿ ತೀರಿಕೊಂಡ ಬೇಂದ್ರೆ ಇಂದಿಗೂ ಹಲವು ಕವಿ -ಸಾಹಿತಿಗಳಿಗೆ ಸಾಮಾನ್ಯ ಜನರಿಗೆ ಸ್ಫೂರ್ತಿಯ ಸೆಲೆ.

ಕೃತಿಗಳು

ಕವನ ಸಂಕಲನ
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು

  • ೧೯೨೨: ಕೃಷ್ಣಾಕುಮಾರಿ;
  • ೧೯೩೨: ಗರಿ;
  • ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
  • ೧೯೩೭: ಸಖೀಗೀತ;
  • ೧೯೩೮: ಉಯ್ಯಾಲೆ;
  • ೧೯೩೮: ನಾದಲೀಲೆ;
  • ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
  • ೧೯೪೬: ಹಾಡುಪಾಡು;
  • ೧೯೫೧: ಗಂಗಾವತರಣ;
  • ೧೯೫೬: ಸೂರ್ಯಪಾನ;
  • ೧೯೫೬: ಹೃದಯಸಮುದ್ರ;
  • ೧೯೫೬: ಮುಕ್ತಕಂಠ;
  • ೧೯೫೭: ಚೈತ್ಯಾಲಯ;
  • ೧೯೫೭: ಜೀವಲಹರಿ;
  • ೧೯೫೭: ಅರಳು ಮರಳು;
  • ೧೯೫೮: ನಮನ;
  • ೧೯೫೯: ಸಂಚಯ;
  • ೧೯೬೦: ಉತ್ತರಾಯಣ;
  • ೧೯೬೧: ಮುಗಿಲಮಲ್ಲಿಗೆ;
  • ೧೯೬೨: ಯಕ್ಷ ಯಕ್ಷಿ;
  • ೧೯೬೪: ನಾಕುತಂತಿ;
  • ೧೯೬೬: ಮರ್ಯಾದೆ;
  • ೧೯೬೮: ಶ್ರೀಮಾತಾ;
  • ೧೯೬೯: ಬಾ ಹತ್ತರ;
  • ೧೯೭೦: ಇದು ನಭೋವಾಣಿ;
  • ೧೯೭೨: ವಿನಯ;
  • ೧೯೭೩: ಮತ್ತೆ ಶ್ರಾವಣಾ ಬಂತು;
  • ೧೯೭೭: ಒಲವೇ ನಮ್ಮ ಬದುಕು;
  • ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
  • ೧೯೮೨: ಪರಾಕಿ;
  • ೧೯೮೨: ಕಾವ್ಯವೈಖರಿ;
  • ೧೯೮೩: ತಾ ಲೆಕ್ಕಣಕಿ ತಾ ದೌತಿ;
  • ೧೯೮೩: ಬಾಲಬೋಧೆ;
  • ೧೯೮೬: ಚೈತನ್ಯದ ಪೂಜೆ;
  • ೧೯೮೭: ಪ್ರತಿಬಿಂಬಗಳು;

ವಿಮರ್ಶೆ

  • ೧೯೪೦: ಸಾಹಿತ್ಯಸಂಶೋಧನೆ;
  • ೧೯೪೫: ವಿಚಾರ ಮಂಜರಿ;
  • ೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
  • ೧೯೫೯: ಮಹಾರಾಷ್ಟ್ರ ಸಾಹಿತ್ಯ;
  • ಸಾಯೋ ಆಟ (ನಾಟಕ)
  • ೧೯೬೨: ಕಾವ್ಯೋದ್ಯೋಗ;
  • ೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
  • ೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
  • ೧೯೭೬: ಕುಮಾರವ್ಯಾಸ ಪುಸ್ತಿಕೆ;
Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಯು.ಆರ್.ಅನಂತಮೂರ್ತಿ

ಶ್ರೇಷ್ಠ ಸೃಜನಶೀಲ ಚಿಂತಕರಾದ ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ, ೧೯೩೨ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದ ಇವರು ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು.

ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂದಿ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಸೇವೆಸಲ್ಲಿಸಿದರು. ಅಮೆರಿಕದ ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಕೊಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ- ಮೊದಲಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅನಂತಮೂರ್ತಿ ತಮ್ಮ ಗೆಳೆಯರೊಡನೆ ತರಂಗಿಣಿ ಎಂಬ ಕೈಬರಹದ ಪತ್ರಿಕೆಯನ್ನು ತರುತ್ತಿದ್ದರು. ಇವರ ಎಂದೆಂದೂ ಮುಗಿಯದ ಕಥೆ, ಪ್ರಕಟವಾದದ್ದು ೧೯೫೫ ರಲ್ಲಿ ಅದು ಹೊಸ ಸಂವೇದನೆಯ ಕಾಲ. ಮಾಸ್ತಿ ಸಂಪ್ರದಾಯ ಮತ್ತು ಪ್ರಗತಿಶೀಲ ಚಳುವಳಿ – ಇವೆರಡು ಮಾದರಿಗಳಿಗಿಂತ ಬಿನ್ನರೀತಿಯಲ್ಲಿ ಅನಂತಮೂರ್ತಿ ಬರೆಯಬೇಕಾಗಿತ್ತು. ಬರೆದರು. ಇವರ ಮೂಲಕ ಸಣ್ಣಸಾಹಿತ್ಯದಲ್ಲಿ ನವ್ಯತೆ ಮೊದಲಿಗೆ ಬಂದಿತು ತಮ್ಮ ಮೊದಲ ಕೃತಿಯಲ್ಲಿಯೇ ಅನಂತಮೂರ್ತಿಯವರು ಪ್ರಬುದ್ಧತೆಯನ್ನು ಮೆರೆದಿದ್ದರು. ಪ್ರಶ್ನೆ (೧೯೬೩), ಮೌನಿ (೧೯೭೨), ಆಕಾಶ ಮತ್ತು ಬೆಕ್ಕು (೧೯೮೧), ಮತ್ತು ಸೂರ್ಯನಕುದುರೆ (೧೯೯೫), ಇವರ ಅನಂತರದ ಕಥಾಸಂಕಲನಗಳು. ಇವರ ಆನಂತರದ ಕಥಾಸಂಕಲನಗಳು, ಸಮಗ್ರ ಕಥಾಸಂಕಲನವೂ (೧೯೯೩) ಪ್ರಕಟವಾಗಿದೆ. ತಂತ್ರ ಮತ್ತು ವಸ್ತುವಿನ ದೃಷ್ಟಿಯಿಂದ ಕಥಾಸಾಹಿತ್ಯದಲ್ಲಿ ಇವರು ಅನೇಕ ಪ್ರಯೋಗಗಳನ್ನು ಮಾಡಿದರು. ಜಿ.ಎಸ್.ಆಮೂರ ಕೇಳುವಂತೆ – ಸಣ್ಣಕಥೆಯು ಅನಂತಮೂರ್ತಿಯವರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಇವರ ಘಟಶ್ರಾದ್ದ, ಸಣ್ಣಕಥೆಯನ್ನಾಧರಿಸಿದ ಕನ್ನಡ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಬಿಸಿತು. ಇದೇ ಕಥೆಯನ್ನಾಧರಿಸಿದ ಹಿಂದಿ ಚಿತ್ರಕೂಡ ಪ್ರಶಸ್ತಿ ಪಡೆಯಿತು.

ಸಂಸ್ಕಾರ (೧೯೬೫) ಅನಂತಮೂರ್ತಿಯವರ ಮೊದಲ ಕಾದಂಬರಿ. ಬ್ರಾಹ್ಮಣ್ಯವು ಯಾವುದನ್ನು ಪಾವಿತ್ರ್ಯವೆಂದು ಪರಿಗಣಿಸಿತ್ತೋ ಅದನ್ನು ಅಪವಿತ್ರಗೊಳಿಸುವುದರ ಮೂಲಕ ಬ್ರಾಹ್ಮಣ್ಯವನ್ನು ದಿಕ್ಕರಿಸುವ, ಶವಸಂಸ್ಕಾರದ ಸಮಸ್ಯೆಯನ್ನು ಮುಂದಿಡುತ್ತ ವ್ಯಕ್ತಿತ್ವದ ಸಂಸ್ಕಾರವನ್ನು ಒತ್ತಾಯಿಸುವ ರೂಪಕ ಈ ಕಾದಂಬರಿ. ಬ್ರಾಹ್ಮಣ-ಶೂದ್ರ ಪ್ರಜ್ಞೆಗಳ ಪಾತಾಳಿಯ ಮೇಲೆ ಹೆಣೆದ ಸಂಸ್ಕಾರವು ಸಾಹಿತ್ಯ ಮತ್ತು ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನೆಬ್ಬಿಸಿತು. ಅನೇಕ ಭಾರತೀಯ ಭಾಷೆಗಳೇ ಅಲ್ಲದೆ ಇಂಗ್ಲಿಷ್, ರಷ್ಯನ್, ಫ್ರೆಂಚ್, ಹಂಗೇರಿಯನ್ ಭಾಷೆಗಳಿಗೆ ಅನುವಾದವಾಯಿತು. ಚಲನಚಿತ್ರವಾಗಿ (೧೯೭೦) ರಾಷ್ಟ್ರಪ್ರಶಸ್ತಿಯನ್ನು ಪಡೆದ ಈ ಕೃತಿ ಹೊಸ ಅಲೆಯ ಚಲನಚಿತ್ರ ಚಳುವಳಿಗೆ ಪ್ರೇರಣೆ ನೀಡಿತು.

ಅನಂತಮೂರ್ತಿಯವರು ಆನಂತರ ಬರೆದ ಕಾದಂರಿಗಳು; ಭಾರತೀಪುರ (೧೯೭೩), ಅವಸ್ಥೆ (೧೯೭೮), ಮತ್ತು ಭವ (೧೯೯೪), ಭಾರತೀಪುರ; ಒಬ್ಬ ಭಾರತೀಯ ಸೋಷಿಯಲಿಸ್ಟ್ ಸುಧಾರಕನ ಸಮಾಜ ಸುಧಾರಣೆಯ ಕಥೆ. ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಇಂಡಿಯಾದ ತರುಣನೊಬ್ಬನ ತಲ್ಲಣಗಳ ಕಥೆ. ಸಮಾಜ ಸುಧಾರಣೆಯ ವಿಫಲತೆಯ ಕಥೆ. ಅವಸ್ಥೆ; ಹಿಂದುಳಿದ ಜಾತಿಗಳಿಂದ ಮೇಲೆದ್ದು ಬಂದ ಉತ್ಸಾಹಿ ಪ್ರಾಮಾಣಿಕ ರಾಜಕೀಯ ನಾಯಕನೊಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ. ರೈತಚಳುವಳಿಯ ರಾಜಕಾರಣದ ಸೋಲಿನ ಕಥೆ. ಭವ ಆಧುನಿಕ ಬದುಕಿನ ಸಮಸ್ಯೆಗಳನ್ನು ಅದರ ಆಯಸ್ಥಳಗಳಲ್ಲಿ ಮುಟ್ಟಿನೋಡಲು ಪ್ರಯತ್ನಿಸುವ, ಬದಿಕಿನ ಅನುರಕ್ತಿ – ವಿರಕ್ತಿಗಳ ಸ್ವರೂಪವನ್ನು ಶೋದಿಸ ಬಯಸುವ ಕಾದಂಬರಿಯಾಗಿದೆ.

ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಪ್ರಧಾನವಾಗಿ ಚರ್ಚಿತವಾಗುವ ಸಂಗತಿಗಳು – ರಾಜಕೀಯ ಮೌಲ್ಯಗಳ ಶೋಧ, ಕ್ರಾಂತಿಯ ವೈಫಲ್ಯ, ರಾಜಕೀಯ ಹಾಗೂ ನೈತಿಕತೆಯ ಪ್ರಶ್ನೆ ಐಹಿಕಜೀವನ ಆಹ್ವಾನಗಳು. ಅನಂತಮೂರ್ತಿಯವರ ಈ ಕಾದಂಬರಿಗಳು – ಕೃತಿಗಳು ಲೇಖಕನಿಗೆ ವೈಚಾರಿಕ ಆಕೃತಿಗಳನ್ನು ಮಂಡಿಸುವುದಕ್ಕಿರುವ ಮಾಧ್ಯಮ ಎನ್ನುವ ರೀತಿಯಲ್ಲಿವೆ. ದಿವ್ಯ (೨೦೦೧) ಇತ್ತೀಚೆಗೆ ಪ್ರಕಟವಾದ ಇವರ ಐದನೆಯ ಕಾದಂಬರಿ. ಇದು ಮಲೆನಾಡಿನಲ್ಲಿ ೬೦ರ ದಶಕದ ಸುಮಾರಿನಲ್ಲಿ ನಡೆಯುವ ಕಥೆ. ಅಂತರ್ಜಾತೀಯ ಮತ್ತು ಅಂತರ್ಮತೀಯ ಸಂಘರ್ಷದ ಅಬಿವ್ಯಕ್ತಿಯಾಗಿದೆ. ಈ ಕೃತಿ ಇಂಗ್ಲಿಷಿಗೂ ಅನುವಾದಗೊಂಡಿದೆ.

೧೯೬೩ರಲ್ಲಿ ಪ್ರಕಟವಾದ ಬಾವಲಿ ಅನಂತಮೂರ್ತಿಯವರ ಮೊದಲ ಕವನ ಸಂಕಲನ ನಂತರ ಇದರಲ್ಲಿದ್ದ ಹತ್ತು ಕವಿತೆಗಳ ಜೊತೆಗೆ ಮತ್ತೈದು ಕವಿತೆಗಳನ್ನು ಸೇರಿಸಿ ೧೫ ಪದ್ಯಗಳು ಎಂಬ ಕವನ ಸಂಕಲನವನ್ನು ೧೯೭೦ರಲ್ಲಿ ಪ್ರಕಟಿಸಿದರು. ಅಜ್ಜನ ಹೆಗಲ ಸುಕ್ಕುಗಳು (೧೯೮೯) ಮತ್ತು ಮಿಥುನ (೧೯೯೨) ಈಚಿನವು. ಇವರು ಬರೆದಿರುವ ಏಕೈಕ ನಾಟಕ ಆವಾಹನೆ (೧೯೭೧) ಅಗೆದಷ್ಟೂ ಕೆಸರು ಮುಚ್ಚಿಕೊಳ್ಳುವಂತಹ ವಠಾರದ ಜಗತ್ತಿನೊಡನೆ ಯುವಕನೊಬ್ಬನ ಸೆಣಸಾಟ ಈ ನಾಟಕದ ವಸ್ತು, ಆತ್ಮನಿಷ್ಟೆ ಮತ್ತು ಸಂಪ್ರದಾಯಗಳ ನಿರಂತರ ಹೋರಾಟವನ್ನು ಚಿತ್ರಿಸುವುದಾಗಿದೆ.

ಅನಂತಮೂರ್ತಿಯವರು ಮುಖ್ಯವಾಗಿ ವೈಚಾರಿಕ, ಬೌದ್ಧಿಕಚಿಂತಕರು. ಅವರ ಕಾದಂಬರಿಗಳು ಕಥನ ಮಾದರಿಗಳಾಗಿರದೆ, ಥೀಸೀಸ್ ಮಾದರಿಯವಾಗಿರುವುದು ಈ ಕಾರಣಕ್ಕಾಗಿಯೇ. ಇವರು ಬರೆದ ವಿಮರ್ಶಾ, ವೈಚಾರಿಕ ಲೇಖನಗಳು ಕನ್ನಡ ವಿಮರ್ಶೆಗೆ ಹೊಸ ಆಯಾಮಗಳನ್ನು ತಂದುಕೊಟ್ಟವು. ಪ್ರಜ್ಞೆ ಮತ್ತು ಪರಿಸರ (೧೯೭೧) ಸನ್ನಿವೇಶ (೧೯೭೪) ಸಮಕ್ಷಮ (೧೯೮೦) ಪೂರ್ವಾಪರ (೧೯೯೦) ಸಂಸ್ಕೃತಿ ಮತ್ತು ಅಡಿಗ (೧೯೯೬) ಬೆತ್ತಲೆ ಪೂಜೆ ಯಾಕೆ ಕೂಡದು (೧೯೯೬) ನವ್ಯಾಲೋಕ (೧೯೯೭)- ಇವರ ಪ್ರಮುಖ ಸಾಹಿತ್ಯವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಕೃತಿಗಳಾಗಿವೆ. ಪ್ರಜ್ಞೆ ಮತ್ತು ಪರಿಸರದಲ್ಲಿನ ಪಾಶ್ಚಾತ್ಯ ಪ್ರೇರಣೆಗಳಿಗೆ, ಸಂವೇದನೆಗಳಿಗೆ ತೆರೆದುಕೊಂಡು ಉತ್ತಮಾಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ನಿಲುವಿನ ಅನಂತಮೂರ್ತಿಯವರು ಪೂರ್ವಾಪರ ಮತ್ತು ನಂತರದ ಕೃತಿಗಳಲ್ಲಿ ಅಂಥ ಹೊರಗಿನ ಪ್ರಭಾವಗಳಿಂದ ಬಿಡುಗಡೆ ಪಡೆಯುವ ರಹದಾರಿಗಳನ್ನು ಹುಡುಕುವತ್ತ ಚಿಂತಿಸುವುದನ್ನು ಕಾಣಬಹುದು. ೮೦ರ ದಶಕದಿಂದ ಇವರ ಸಂಪಾದಕತ್ವದಲ್ಲಿಬಂದ ರುಜುವಾತು ಸಾಹಿತ್ಯಕ ನಿಯತಕಾಲಿಕೆ ಈ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡಿತು. ’Politics and Fiction in the 1930’ ಅನಂತಮೂರ್ತಿಯವರ ಪಿ.ಎಚ್.ಡಿ ಪದವಿ ಪಡೆದ (೧೯೬೬) ಪ್ರೌಡ ಪ್ರಬಂಧ. ದಾವ್‌ದ ಜಿಂಗ್ (೧೯೯೩) ಚೀನೀಯ ತಾತ್ವಿಕ ದರ್ಶನವನ್ನು ಮುಂದಿಡುವ ಇವರು ಅನುವಾದಿಸಿದ ಕೃತಿ ಅನೇಕ ಇಂಗ್ಲಿಷ್ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡ ಸಾಹಿತ್ಯ ಸಂಸ್ಕೃತಿಗೆ ಇಂಥ ಮಹತ್ವದ ಕೃತಿಗಳನ್ನು ನೀಡಿರುವ ಅನಂತಮೂರ್ತಿ ಅಂತರರಾಷ್ಟ್ರೀಯ ಮಟ್ಟದ ಬರಹಗಾರ. ದೇಶ ದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ನ್ಯಾಷನಲ್‌ ಬುಕ್‌ ಟ್ರಸ್ಟ್ ನ ಅಧ್ಯಕ್ಷರು, ಕೇಂದ್ರಸಾಹಿತ್ಯ ಅಕಾಡಮಿಯ ಅಧ್ಯಕ್ಷರು ಆಗಿದ್ದ ಇವರು ಕರ್ನಾಟಕದ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೪) ಮಾಸ್ತಿಪ್ರಶಸ್ತಿ (೧೯೯೪) ಮತ್ತು ದೇಶದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ (೧೯೯೪)ಯನ್ನು ಪಡೆದಿದ್ದಾರೆ.

ವಿಜಯೇಂದ್ರ

ಕೃತಿಗಳು

ಕಥಾ ಸಂಕಲನ

ಕಾದಂಬರಿಗಳು

  • ಸಂಸ್ಕಾರ (೧೯೬೫)
  • ಭಾರತೀಪುರ (೧೯೭೩)
  • ಅವಸ್ಥೆ (೧೯೭೮)
  • ಭವ (೧೯೯೪)
  • ದಿವ್ಯ (೨೦೦೧)
  • ಪ್ರೀತಿ ಮೃತ್ಯು ಮತ್ತು ಭಯ (೨೦೧೨)

ವಿಮರ್ಶೆ ಮತ್ತು ಪ್ರಬಂಧ ಸಂಕಲನ

  • ಪ್ರಜ್ಞೆ ಮತ್ತು ಪರಿಸರ (೧೯೭1)
  • ಪೂರ್ವಾಪರ (೧೯೮೦)
  • ಸಮಕ್ಷಮ (೧೯೮೦)
  • ಸನ್ನಿವೇಶ (೧೯೭೪)
  • ಯುಗಪಲ್ಲಟ (೨೦೦೧)
  • ವಾಲ್ಮೀಕಿಯ ನೆವದಲ್ಲಿ (೨೦೦೬)
  • ಮಾತು ಸೋತ ಭಾರತ (೨೦೦೭)
  • ಸದ್ಯ ಮತ್ತು ಶಾಶ್ವತ (೨೦೦೮)
  • ಸಂಸ್ಕೃತಿ ಮತ್ತು ಅಡಿಗ (೧೯೯೬)
  • ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
  • ಋಜುವಾತು (೨೦೦೭)
  • ಶತಮಾನದ ಕವಿ ಯೇಟ್ಸ್ (೨೦೦೮)
  • ಕಾಲಮಾನ (೨೦೦೯)
  • ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
  • ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
  • ಶತಮಾನದ ಕವಿ ರಿಲ್ಕೆ (೨೦೦೯)
  • ರುಚಿಕರ ಕಹಿಸತ್ಯಗಳ ಕಾಲ (೨೦೧೧)
  • ಆಚೀಚೆ (೨೦೧೧)

ನಾಟಕ

  • ಆವಾಹನೆ (೧೯೬೮)

ಕವನ ಸಂಕಲನ

  • ಹದಿನೈದು ಪದ್ಯಗಳು (೧೯೬೭)
  • ಮಿಥುನ (೧೯೯೨)
  • ಅಜ್ಜನ ಹೆಗಲ ಸುಕ್ಕುಗಳು (೧೯೮೯)
  • ಅಭಾವ (೨೦೦೯)
  • ಸಮಸ್ತ ಕಾವ್ಯ (೨೦೧೨)

ಆತ್ಮಕತೆ

  • ಸುರಗಿ (೨೦೧೨)
  • ಮೊಳಕೆ (ಅಮಿತನ ಆತ್ಮಚರಿತ್ರೆ)

ಚಲನಚಿತ್ರವಾದ ಕೃತಿಗಳು

  • ಘಟಶ್ರಾದ್ಧ
  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ (ಸಣ್ಣಕಥೆ)
  • ದೀಕ್ಷಾ (ಹಿಂದಿ ಚಿತ್ರ)
  • ಪ್ರಕೃತಿ (ಸಣ್ಣಕಥೆ)

ಪ್ರಮುಖ ಉಪನ್ಯಾಸಗಳು

  • ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
  • ಫ್ರೆಂಚ್ ಸಾಹಿತ್ಯ ಉತ್ಸವ, 2002
  • ಬರ್ಲಿನ್ ಸಾಹಿತ್ಯ ಉತ್ಸವ, 2002
  • ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997
  • ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997
  • ‘ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್’ ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997
  • ‘ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್’ ವಿಚಾರ ಸಂಕಿರಣ, ಲಂಡನ್, 1993
  • ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
  • ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989
  • ‘ಮಾರ್ಕ್ಸಿಸಂ ಅಂಡ್ ಲಿಟರೇಚರ್’, ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976.
Categories
ಕನ್ನಡ ಸಾಹಿತ್ಯ

ವಿನಾಯಕ ಕೃಷ್ಣ ಗೋಕಾಕ

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯ ಅಧ್ಯಕ್ಷರಾಗುವುದೇ ಒಂದು ದೊಡ್ಡ ಗೌರವ. ಅಂಥವರಿಗೇ ಜ್ಞಾನಪೀಠ ಪ್ರಶಸ್ತಿ ಸಹ ಬರುವುದೆಂದರೆ, ಸಾಮಾನ್ಯ ಸಾಧನೆಯಲ್ಲ!

ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣರಾವ್ ಗೋಕಾಕರು ೧೯೦೯ರ ಅಗಸ್ಟ್.೧೦ರಂದು ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.

ಇಂಗ್ಲೀಷ್ ವಿಷಯದ ಎಂ.ಎ. ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು.ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.

ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನ ಪ್ರಿನ್ಸಿಪಾಲ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು. ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.

ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಅವರ ಮೊದಲ ಪ್ರಕಟಿತ ಕೃತಿ “ಕಲೋಪಾಸಕರು”. ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ “ಸಮುದ್ರ ಗೀತೆಗಳು”, “ಸಮುದ್ರದಾಚೆಯಿಂದ”- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಎಂಬ ಸಾಲಂತೂ ತುಂಬ ಪ್ರಸಿದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ “ನವ್ಯ” ಎಂಬ ಹೊಸಮಾರ್ಗ ಗೋಕಾಕರಿಂದಲೇ ಪ್ರಾರಂಭಗೊಂಡಿತು ಎಂಬ ಅಭಿಪ್ರಾಯವಿದೆ. ಗೋಕಾಕರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ “ಸಮರಸವೇ ಜೀವನ” ಗೋಕಾಕರದ್ದೇ ಕೃತಿ. “ಜನನಾಯಕ” ಅವರ ಸುಪ್ರಸಿದ್ಧ ನಾಟಕ. “ಭಾರತ ಸಿಂಧು ರಶ್ಮಿ” ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ.

ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ. ಅವರ ಮೇರು ಕೃತಿ “ಭಾರತ ಸಿಂಧು ರಶ್ಮಿ”ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ “ದ್ಯಾವಾ ಪೃಥಿವೀ” ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.

ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ. ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ “ಭಾರತ ಸಿಂಧು ರಶ್ಮಿ”ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ. ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ.

ಗೋಕಾಕ್ ವರದಿ:

ಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ “ಗೋಕಾಕ್ ಚಳವಳಿ” ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ.

ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ “ಗೋಕಾಕ್ ವರದಿ”ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು ನಂತರ ೧೯೮೩ರಲ್ಲಿ ಅಧ್ಯಕ್ಷರಾದರು.
೧೯೬೦ರಲ್ಲಿ ‘ದ್ಯಾವ ಪೃಥವಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು
೧೯೬೧ ರಲ್ಲಿ ಪದ್ಮಶ್ರೀ ಪ್ರಶಸ್ತಿ.
ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕ್ಯಾಲೀಫೋರ್ನಿಯಾ ಫೆಸಿಫಿಕ್ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ.
೧೯೯೧ ರಲ್ಲಿ ‘ಭಾರತ ಸಿಂಧು ರಶ್ಮಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದರು.
ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ

ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು.

ಕೃತಿಗಳು

ಕಾದಂಬರಿಗಳು

  • ಸಮರಸವೇ ಜೀವನ.
  • ಇಜ್ಜೋಡು.
  • ಏರಿಳಿತ.
  • ಸಮುದ್ರಯಾನ.
  • ನಿರ್ವಹಣ ನರಹರಿ.

ಕವನ ಸಂಕಲನಗಳು

  • ಕಲೋಪಾಸಕ.
  • ಪಯಣ.
  • ಸಮುದ್ರಗೀತೆಗಳು.
  • ನವ್ಯ ಕವಿಗಳು.
  • ತ್ರಿಶಂಕುವಿನ ಪ್ರಜ್ಞಾ ಪ್ರಭಾತ.
  • ಊರ್ಣನಾಭ.
  • ಉಗಮ.
  • ಬಾಳದೇಗುಲದಲ್ಲಿ.
  • ಸಿಮ್ಲಾಸಿಂಫನಿ.
  • ಇಂದಲ್ಲ ನಾಳೆ(ಚಂಪೂ).
  • ದ್ಯಾವಾಪೃಥಿವೀ.
  • ಪಾರಿಜಾತದಡಿಯಲ್ಲಿ.
  • ಅಭ್ಯುದಯ.
  • ಭಾಗವತ ನಿಮಿಷಗಳು.
  • ಭಾರತ ಸಿಂಧೂರ.

ಸಾಹಿತ್ಯ ವಿಮರ್ಶೆ

  • ಕವಿಕಾವ್ಯ ಮಹೋನ್ನತಿ.
  • ನವ್ಯ ಮತ್ತು ಕಾವ್ಯ ಜೀವನ.
  • ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು.
  • ಸಾಹಿತ್ಯದಲ್ಲಿ ಪ್ರಗತಿ.
  • ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು.

ಪ್ರವಾಸ ಕಥನ

  • ಸಮುದ್ರದಾಚೆದಿಂದ. (ಈ ಪ್ರವಾಸ ಕಥನದಿಂದ ಆಯ್ದ “ಲಂಡನ್ ನಗರ” ಎಂಬ ಗದ್ಯವನ್ನು ೧೦ನೇ ತರಗತಿಯ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.)
  • ಪಯಣಿಗ.
  • ಸಂತೋಷ
Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಗಿರೀಶ್ ಕಾರ್ನಾಡ್

ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯ ಹಾಗೂ ನಾಟಕ ಕ್ಷೇತ್ರದ ಮೇರು ದಿಗ್ಗಜ ಗಿರೀಶ್ ಕಾರ್ನಾಡ್. ಭಾರತದಲ್ಲೇ ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು.

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ| ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಗತಿಶೀಲ ಮನೋಭಾವದ ಡಾ| ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಬೆಳವಣಿಗೆಯಲ್ಲಿ ಸಹಾಯವಾಯಿತು. ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗು ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.ಆ ಬಳಿಕ Rhodes scholorship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಆಗಿದ್ದಾರೆ.ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಬಹುಶಃ ಕನ್ನಡದ ಒಬ್ಬ ನಾಟಕಕಾರ ಇಷ್ಟೊಂದು ಭಾಷೆಗೆ ಪರಿಚಯವಾದದ್ದು ಪ್ರಥಮ. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಇಂಗ್ಲಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯಕೃತಿ “ಯಯಾತಿ” ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನಿಂದ ಮರಳಿದ ಬಳಿಕ “ತುಘಲಕ” ಹಾಗೂ “ಹಯವದನ” ಪ್ರಕಟವಾದವು. ನಂತರ “ಅಂಜುಮಲ್ಲಿಗೆ”, “ನಾಗಮಂಡಲ”, “ತಲೆದಂಡ” ಹಾಗು “ಅಗ್ನಿ ಮತ್ತು ಮಳೆ” ಮುಂತಾದ ನಾಟಕಗಳನ್ನು ಬರೆದು ಉತ್ತಮ ನಾಟಕಕಾರರೆಂದು ಪ್ರಸಿದ್ಧರಾದರು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಇವರಿಗಾಗಿ ಬರೆದುಕೊಟ್ಟ ನಾಟಕ:”ಟಿಪ್ಪುವಿನ ಕನಸುಗಳು”.

ಚಿತ್ರರಂಗದಲ್ಲೂ ಕಾರ್ನಾಡ್ ರ ಪಾತ್ರ ಗಣನೀಯವಾದದ್ದು. ಯು,ಆರ್. ಅನಂತಮೂರ್ತಿ ಯವರ ವಿವಾದತ್ಮಕ ಕಾದಂಬರಿ “ಸಂಸ್ಕಾರ” ವನ್ನು ಚಲನಚಿತ್ರವನ್ನಾಗಿ ಮಾಡಿದ್ದಲ್ಲದೇ, ಆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು., ಈ ಈ ಚಿತ್ರ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದು ಕೊಟ್ಟಿತು. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ “ತಬ್ಬಲಿಯು ನೀನಾದೆ ಮಗನೆ”, “ಕಾಡು”, “ಒಂದಾನೊಂದು ಕಾಲದಲ್ಲಿ” ಚಿತ್ರಗಳನ್ನು ನಿರ್ದೇಶಿಸಿದರು. “ಕಾಡು” ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ “ಉತ್ಸವ”, “ಗೋಧೂಳಿ” ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ” ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ”ಕನಕ ಪುರಂದರ”,”ದ.ರಾ.ಬೇಂದ್ರೆ” ಹಾಗು “ಸೂಫಿ ಪಂಥ” ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು “ಚೆಲುವಿ” ಕಿರಚಿತ್ರವನ್ನು ನಿರ್ದೇಶಿಸಿದರು. ೨೦೦೭ ರಲ್ಲಿ ತೆರೆ ಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. ರಂಗಭೂಮಿ, ಚಲನಚಿತ್ರ ಕ್ಷೇತ್ರದಂತೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ವೋ ಘರ್’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರತಿಭಾವಂತ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ೧೯೭೭ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೌಲ್ಯ ನಿರ್ಣಾಯಕರಲ್ಲಿ ಒಬ್ಬರಾಗಿದ್ದರು. ಲಂಡನ್ನಿನಲ್ಲಿ ನಡೆದ ಭಾರತ ಉತ್ಸವ(ಫೆಸ್ಟಿವಲ್ ಆಫ್ ಇಂಡಿಯಾ, ೧೯೮೨) ಹಾಗೂ ಮಾಂಟ್ರಿಯಲ್ ಚಲನಚಿತ್ರೋತ್ಸವಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದರು. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್‌ಪಾಲ್ ಮಾರ್ಗದರ್ಶನದ ‘ದಿ ಟರ್ನಿಂಗ್ ಪಾಯಿಂಟ್’ ಎನ್ನುವ ದೂರದರ್ಶನದ ಧಾರವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಕಾರ್ನಾಡರ ಸಾಹಿತ್ಯ-ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. “ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಯಶಸ್ಸು, ಸೋಲು ಎರಡೂ ಅಡಗಿದೆ.” ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೯೬೨: ಯಯಾತಿ ನಾಟಕಕ್ಕೆ ರಾಜ್ಯಪ್ರಶಸ್ತಿ.
೧೯೭೦: ರಾಜ್ಯೋತ್ಸವ ಪ್ರಶಸ್ತಿ.
೧೯೭೦-೭೨: ಹೋಮಿಭಾಭಾ ಫೆಲೋಶಿಪ್-ಜನಪದ ರಂಗಭೂಮಿಯಲ್ಲಿನ ಸೃಜನಶೀಲ ಕಾರ್ಯಕ್ಕಾಗಿ.
೧೯೭೨: ನಾಟಕ ರಚನೆಗಾಗಿ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ;ವರ್ಷದ ಅತ್ಯುತ್ತಮ ನಾಟಕಕ್ಕಾಗಿ ಭಾರತೀಯ ನಾಟ್ಯ ಸಂಘದ ಕಮಲಾ ದೇವಿ ಪ್ರಶಸ್ತಿ(ಹಯವದನ ನಾಟಕಕ್ಕಾಗಿ)
೧೯೭೪: ಭಾರತ ಸರ್ಕಾರದಿಂದ’ಪದ್ಮಶ್ರೀ’ ಪ್ರಶಸ್ತಿ
೧೯೮೪: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
೧೯೮೯: ಕೊಲ್ಕತ್ತಾದ ನಂದೀಕರ್ ಪ್ರಶಸ್ತಿ
೧೯೯೦: ‘ಗ್ರಂಥಲೋಕ’ ದ ವರ್ಷದ ಲೇಖಕ ಪ್ರಶಸ್ತಿ.
೧೯೯೨: ‘ಪದ್ಮಭೂಷಣ’ ಪ್ರಶಸ್ತಿ-ಭಾರತ ಸರ್ಕಾರದಿಂದ;ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-ಅತ್ಯುತ್ತಮ ನಾಟಕಕ್ಕಾಗಿ(ತಲೆದಂಡ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-ಅತ್ಯುತ್ತಮ ಸೃಜನಶೀಲ ನಾಟಕಕ್ಕಾಗಿ(ನಾಗಮಂಡಲ).
ದಕ್ಷಿಣ ಭಾರತ ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ;ಬಿ.ಎಚ್.ಶ್ರೀಧರ್ ಪ್ರಶಸ್ತಿ.
೧೯೯೩: ತಲೆದಂಡ ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
೧೯೯೪:ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ;ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ತಲೆದಂಡಕ್ಕಾಗಿ.
೧೯೯೭: ಗುಬ್ಬಿ ವೀರಣ್ಣ ಪ್ರಶಸ್ತಿ.
೧೯೯೮: ಕಾಳಿದಾಸ್ ಸಮ್ಮಾನ್.
೧೯೯೯: ಭಾರತೀಯ ಜ್ಞಾನಪೀಠ ಪ್ರಶಸ್ತಿ.

ನಾಟಕ ರಚನೆ

ನಾಟಕಗಳು

  1. ಮಾ ನಿಷಾಧ – ಏಕಾಂಕ ನಾಟಕ
  2. ಯಯಾತಿ – ೧೯೬೧
  3. ತುಘಲಕ್ – ೧೯೬೪
  4. ಹಯವದನ – ೧೯೭೨(ನಾಟ್ಯರಂಗ ಪ್ರಶಸ್ತಿ )
  5. ಅಂಜುಮಲ್ಲಿಗೆ – ೧೯೭೭
  6. ಹಿಟ್ಟಿನ ಹುಂಜ ಅಥವಾ ಬಲಿ – ೧೯೮೦
  7. ನಾಗಮಂಡಲ – ೧೯೯೦
  8. ತಲೆದಂಡ – ೧೯೯3
  9. ಅಗ್ನಿ ಮತ್ತು ಮಳೆ – ೧೯೯೫
  10. ಟಿಪ್ಪುವಿನ ಕನಸುಗಳು – ೧೯೯೭
  11. ಒಡಕಲು ಬಿಂಬ – ೨೦೦೫
  12. ಮದುವೆ ಅಲ್ಬಮ್
  13. ಫ್ಲಾವರ್ಸ – ೨೦೧೨
  14. ಬೆಂದ ಕಾಳು ಆನ್ ಟೋಸ್ಟ- ೨೦೧೨

ಆತ್ಮ ಚರಿತ್ರೆ

ಆಡಾಡತ ಆಯುಷ್ಯ (೨೦೧೧)

ಚಿತ್ರರಂಗ

  • ‘ಸಂಸ್ಕಾರ'(೧೯೭೦) ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ-ಪ್ರಾಣೇಶಾಚಾರ್ಯರದು. ಪಿ.ಲಂಕೇಶ ಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ-ನಾರಣಪ್ಪನದು. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು ಮತ್ತು ಚಿತ್ರಕಥೆ ಗಿರೀಶ ಕಾರ್ನಾಡರದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.
  • ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ(೧೯೭೨) ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ನಿರ್ಮಾಣ: ಜಿ.ವಿ.ಅಯ್ಯರ್.
  • ಮುಂದೆ ‘ತಬ್ಬಲಿಯು ನೀನಾದೆ ಮಗನೆ'(೧೯೭೭), ‘ಕಾಡು'(೧೯೭೪), ‘ಒಂದಾನೊಂದು ಕಾಲದಲ್ಲಿ'(೧೯೭೮) ಚಿತ್ರಗಳನ್ನು ನಿರ್ದೇಶಿಸಿದರು. ‘ಕಾಡು’ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು.
  • ನಂತರ ಉತ್ಸವ್ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.
  • ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ”(೧೯೯೯) ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.
  • ಇದಲ್ಲದೆ ಕನಕ ಪುರಂದರದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
  • ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.
  • ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.
Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್

“ಕನ್ನಡ ಸಣ್ಣಕತೆಗಳ ಪಿತಾಮಹ”,”ಕನ್ನಡದ ಆಸ್ತಿ” ಎಂದೇ ಪ್ರಸಿದ್ಧರಾದ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಜ್ಞಾನಪೀಠ ಪ್ರಶಸ್ತಿ ವಿಜೇತರು.ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್ ಎ (೧೯೦೯), ಬಿ ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ – ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ. ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ಕನ್ನಡ ಸಣ್ಣಕಥೆಗಳ ಪಿತಾಮಹ ಎನಿಸಿರುವ ಮಾಸ್ತಿಯವರು “ಮೊಸರಿನ ಮಂಗಮ್ಮ “,”ವೆಂಕಟಿಗನಹೆಂಡತಿ”,”ರಂಗಪ್ಪನದೀಪಾವಳಿ”, “ಸುಬ್ಬಣ್ಣ”,”ವೆಂಕಟಸಾಮಿಯ ಪ್ರಣಯ” ಮೊದಲಾದ ೭೦ಕ್ಕೂ ಅಧಿಕಕಥೆಗಳನ್ನು ಬರೆದಿದ್ದಾರೆ. ಜತೆಗೆ “ರಾಮನವಮಿ”,”ಗೌಡರಮಲ್ಲಿ”,”ನವರಾತ್ರಿ” ಮುಂತಾದ ಕಥನಕವನಗಳು, ಬಿನ್ನಹ,ಅರುಣ,ತಾವರೆ,ಮಲಾರ,ಮನವಿ,ಚೆಲವು.ಮುಂತಾದ ಕವನ ಸಂಕಲನಗಳು, ಶಾಂತಾ, ತಿರುಪಾವಿ, ಕನಕಣ್ಣ, ಶಿವಛತ್ರಪತಿ, ಯಶೋಧರ, ಮಾಸತಿ, ಅನಾರ್ಕಳಿ, ಪುರಂದರದಾಸ, ಕಾಕನಕೋಟೆ ಮುಂತಾದ ನಾಟಕಗಳು, ಭಾರತತೀರ್ಥ,ಆದಿಕವಿವಾಲ್ಮೀಕಿ ಮುಂತಾದ ಪ್ರಬಂಧ ಗಳನ್ನು ಬರೆದಿದ್ದಾರೆ. ಷೇಕ್ಸ್ ಪೀಯರನ ನಾಟಕಗಳಾದ ಕಿಂಗ್ ಲಿಯರ್,ದಿ,ಟೆಂಪೆಸ್ಟ್,ಟ್ವೆಲ್ ಫತ್ ನೈಟ್,ಹ್ಯಾಮ್ಲೆಟ್ ಗಳನ್ನು ಕನ್ನಡಕ್ಕೆ ತಂದ ಕೀರ್ತಿ ಮಾಸ್ತಿಯವರಿಗೆ ಸಲ್ಲುತ್ತದೆ.ಇತರ ಕೃತಿಗಳು-ಚಿತ್ರಾಂಗದಾ(ಠಾಕೂರರ ಕೃತಿ), ಬಿಜ್ಜಳರಾಯ ಚರಿತ್ರೆ(ಧರಣಿ ಪಂಡಿತನ ಕೃತಿ)ಬಸವಣ್ಣನ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ.

೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣ ಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. “ಸುಬ್ಬಣ್ಣ” ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.

ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. “ಭಾರತತೀರ್ಥ”, “ಆದಿಕವಿ ವಾಲ್ಮೀಕಿ” ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ “ಶ್ರೀರಾಮ ಪಟ್ಟಾಭಿಷೇಕ” ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”.”ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

ಮಾಸ್ತಿಯವರು ಪತ್ರಿಕೋದ್ಯಮದಲ್ಲೂ ಕೆಲಸ ಮಾಡಿದರು. “ಜೀವನ” ಎಂಬ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯನ್ನು ಆರಂಭಿಸಿ ಸುಮಾರು ೩೦ ವರ್ಷಗಳ ಕಾಲ ಅದರ ಸಂಪಾದಕರ‍ಾಗಿ ಕಾರ್ಯನಿರ್ವಹಿಸಿದರು. ಇದೇ “ಜೀವನ” ಪತ್ರಿಕೆಯಲ್ಲಿ ಅವರು ಬರೆದ ಲೇಖನಗಳು ” ಸಂಪಾದಕೀಯ” ಎಂಬ ಹೆಸರಿನಲ್ಲಿ ಐದು ಭಾಗಗಳಾಗಿ ಪ್ರಕಟವಾಗಿವೆ.

ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. “ಮಾಸ್ತಿ ಕನ್ನಡದ ಆಸ್ತಿ” ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು “ಅಣ್ಣ ಮಾಸ್ತಿ”ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು. ೧೯೭೨ರಲ್ಲಿ “ಶ್ರೀನಿವಾಸ” ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.

ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೨೯ರಲ್ಲಿ ನಡೆದ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೪೨ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ ೧೧ನೇಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷತೆ.
೧೯೪೬ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಬರಹಗಾರರಸಮ್ಮೇಳನದ ಅಧ್ಯಕ್ಷತೆ.
೧೯೬೪ರಲ್ಲಿ P.E.O(Poets,Essasies,Opinion) ಸಂಸ್ಥೆಯ ಉಪಾಧ್ಯಕ್ಷರಾಗಿ ನಂತರ ೧೯೭೬ರಲ್ಲಿ ಅಧ್ಯಕ್ಷರೂ ಆದರು.
ಮಾಸ್ತಿಯವರು ‘ಜೀವನ’ ಎಂಬ ಮಾಸಪರಿಕೆಯನ್ನು ಸುಮಾರು ಎರಡು ದಶಕಗಳ ಕಾಲ ನಡೆಸಿದರು.
೧೯೭೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
೧೯೬೮ರಲ್ಲಿ ಮಾಸ್ತಿಯವರಸಣ್ಣಕಥೆಗಳು ಪುಸ್ತಕಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.
ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ ಪಡೆದಿದ್ದಾರೆ.
೧೯೮೩ರಲ್ಲಿ ಚಿಕ್ಕವೀರ ರಾಜೇಂದ್ರಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದರು.

ಕೃತಿಗಳು

ಸಣ್ಣ ಕಥೆ ಸಂಗ್ರಹ

  • ಸಣ್ಣಕತೆಗಳು(೫ ಪುಟಗಳು)
  • ರಂಗನ ಮದುವೆ
  • ಮಾತುಗಾರ ರಾಮ

ನೀಳ್ಗತೆ

  • ಸುಬ್ಬಣ್ಣ (೧೯೨೮)
  • ಶೇಷಮ್ಮ(೧೯೭೬)

ಕಾವ್ಯ ಸಂಕಲನಗಳು

  • ಬಿನ್ನಹ, ಮನವಿ(೧೯೨೨)
  • ಅರುಣ(೧೯೨೪)
  • ತಾವರೆ(೧೯೩೦)
  • ಸಂಕ್ರಾಂತಿ(೧೯೬೯)
  • ನವರಾತ್ರಿ(೫ ಭಾಗ ೧೯೪೪-೧೯೫೩)
  • ಚೆಲುವು, ಸುನೀತ
  • ಮಲಾರ
  • ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ)

ಜೀವನ ಚರಿತ್ರೆ

  • ರವೀಂದ್ರನಾಥ ಠಾಕೂರ್(೧೯೩೫)
  • ಶ್ರೀ ರಾಮಕೃಷ್ಣ(೧೯೩೬)

ಪ್ರಬಂಧ

  • ಕನ್ನಡದ ಸೇವೆ(೧೯೩೦)
  • ವಿಮರ್ಶೆ (೪ ಸಂಪುಟ ೧೯೨೮-೧೯೩೯)
  • ಜನತೆಯ ಸಂಸ್ಕೃತಿ(೧೯೩೧)
  • ಜನಪದ ಸಾಹಿತ್ಯ(೧೯೩೭)
  • ಆರಂಭದ ಆಂಗ್ಲ ಸಾಹಿತ್ಯ(೧೯೭೯)

ನಾಟಕ

  • ಶಾಂತಾ, ಸಾವಿತ್ರಿ, ಉಷಾ (೧೯೨೩)
  • ತಾಳೀಕೋಟೆ(೧೯೨೯)
  • ಶಿವಛತ್ರಪತಿ(೧೯೩೨)
  • ಯಶೋಧರಾ(೧೯೩೩)
  • ಕಾಕನಕೋಟೆ(೧೯೩೮)
  • ಲಿಯರ್ ಮಾಹಾರಾಜ
  • ಚಂಡಮಾರುತ, ದ್ವಾದಶರಾತ್ರಿ
  • ಹ್ಯಾಮ್ಲೆಟ್
  • ಶೇಕ್ಸ್ ಪಿಯರ್ ದೃಶ್ಯಗಳು ೧,೨,೩
  • ಪುರಂದರದಾಸ
  • ಕನಕಣ್ಣ
  • ಕಾಳಿದಾಸ
  • ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್
  • ಬಾನುಲಿ ದೃಶ್ಯಗಳು

ಕಾದಂಬರಿ

  • ಚೆನ್ನಬಸವ ನಾಯಕ(೧೯೫೦)
  • ಚಿಕವೀರ ರಾಜೇಂದ್ರ(೧೯೫೬)
Categories
ಕನ್ನಡ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಶಿವರಾಮ ಕಾರಂತ

ಡಾ|| ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ-ಕಾದಂಬರಿಕಾರ, ಯಕ್ಷಗಾನ ಪ್ರಯೋಗಶೀಲ,ಪರಿಸರ ತಜ್ಞ.

ಜನನ: ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು.ಕಾರಂತರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಯವರೆಗೆ ನಡೆದು ೧೯೨೦ರಲ್ಲಿ ಕೊನೆ ಆಯಿತು.ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಏಳು ದಶಕಗಳಲ್ಲಿ ಅಭಿವ್ಯಕ್ತಗೊಂಡ ಅವರ ಬದುಕು ಸಾಹಿತ್ಯ, ಸಾಮಾಜಿಕ ಜಾಗೃತಿ, ರಾಜಕೀಯ ಹೋರಾಟ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಲವು ದಿಕ್ಕುಗಳಲ್ಲಿ ಪಸರಿಸಿದೆ.

ಮೊದಲ ಹಂತ: ೧೯೨೫ ರಲ್ಲಿ ‘ವಸಂತ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಕಾರಂತರು ಅದರ ಸಂಪಾದಕರಾಗಿ ಸುಮಾರು ಐದು ವರ್ಷಗಳ ಕಾಲ ದುಡಿದರು. ಕಾರಂತರ ಮೊದಲ ಕಾದಂಬರಿ “ವಿಚಿತ್ರ ಕೂಟ” ವು ಇದೇ ಪತ್ರಿಕೆಯ ಮೂಲಕ ಬೆಳಕು ಕಂಡಿತು. ನಂತರ ಕಾರಣಾಂತರಗಳಿಂದ ೧೯೩೦ ರಲ್ಲಿ ಈ ಪತ್ರಿಕೆಯು ನಿಂತು ಹೋಯಿತು. ೧೯೫೦ ರಲ್ಲಿ ಅವರು “ವಿಚಾರಮಣಿ” ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಅದು ಬಹು ಕಾಲ ಉಳಿಯಲಿಲ್ಲ. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ “ಕಾರಂತಜ್ಜ” ಎಂದೇ ಖ್ಯಾತರಾದರು. ವಿಜ್ನಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ “ಅದ್ಭುತ ಜಗತ್ತು”, “ಬಾಲ ಪ್ರಪಂಚ” ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನಕೋಶ.

ಯಕ್ಷಗಾನ ಕಲೆ ಕಾರಂತರ ಮತ್ತೊಂದು ಆಸಕ್ತಿಯ ಕ್ಷೇತ್ರ. ಅವರ “ಯಕ್ಷಗಾನ ಬಯಲಾಟ” ಕೃತಿಗೆ ೧೯೫೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಕಾರಂತರ ಆಸಕ್ತಿ ಚಲನಚಿತ್ರ ಕ್ಷೇತ್ರದ ಕಡೆಯೂ ತಿರುಗಿತು. “ಭೂತರಾಜ್ಯ”,” ಡೊಮಿಂಗೋ” ಎಂಬ ಮೂಕಿ ಚಿತ್ರಗಳನ್ನು ಅವರು ನಿರ್ದೇಶಿಸಿದರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅಪಾರ ಆನುಭವವನ್ನೂ ಅವರು ಪಡೆದಿದ್ದಾರೆ.

ಬೆಳವಣಿಗೆ:ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ ಸಾಹಿತ್ಯ, ಹರಟೆ, ಮಕ್ಕಳ ವಿಶ್ವಕೋಶ, ವಿಜ್ನಾನ ವಿಶ್ವಕೋಶ, ಜೀವನ ಚರಿತ್ರೆ, ಯಕ್ಷಗಾನ, ಜಾನಪದ, ಚಲನಚಿತ್ರ, ಅನುವಾದ, ಅರ್ಥಕೋಶ, ಪ್ರಾಣಿ ಪಕ್ಷಿ ಪರಿಸರ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳಲ್ಲಿ ಕೃತಿರಚನೆ ಮಾಡಿದ್ದಾರೆ.”ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ” ಕಾರಂತರ ಪ್ರಮುಖ ಕಾದಂಬರಿಗಳು. ಅವರು ಬರೆದ “ಮೂಕಜ್ಜಿಯ ಕನಸುಗಳು” ಕಾದಂಬರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕಾರಂತರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

“ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಡಾ|| ಶಿವರಾಮ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ,ಕಾದಂಬರಿಕಾರ.ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಮನುಷ್ಯ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೋ ಸರಿ ಸುಮಾರು ಆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಹಜವಾಗಿಯೇ ತಮ್ಮ ಸಾಹಿತ್ಯ ಸಾಧನೆಗಾಗಿ – ವಿಶೇಷವಾಗಿ ಕಾದಂಬರಿಕಾರರಾಗಿ- ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಬಹುಕಾಲ ನೆನಪಿನಲ್ಲಿ ಉಳಿಯುವರು.
ಹೀಗೆ ನಡೆದಾಡುವ ವಿಶ್ವಕೋಶವೇ ಆಗಿದ್ದ , ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಕಾರಂತರ ಪ್ರಮುಖ ಸಾಹಿತ್ಯಕೃತಿಗಳು :

ಸಣ್ಣಕಥೆಗಳು: ತೆರೆಯ ಮರೆಯಲ್ಲಿ, ಹಸಿವು ಮತ್ತು ಹಾವು.
ಕಥನಕವನಗಳು: ಅದ್ಭುತ ಜಗತ್ತು, ಸಿರಿಗನ್ನಡ ಶಬ್ದಕೋಶ, ಕಿರಿಯರ ವಿಶ್ವಕೋಶ, ವಿಜ್ಞಾನ ಪ್ರಪಂಚ ೪ ಸಂಪುಟಗಳು, ಬಾಲಪ್ರಪಂಚ, ಯಕ್ಷಗಾನ ಬಯಲಾಟ.
ಕಾದಂಬರಿಗಳು: “ವಿಚಿತ್ರ ಕೂಟ” “ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ”
ಕವನ ಸಂಕಲನಗಳು: ರಾಷ್ಟ್ರಗೀತ ಸುಧಾಕರ ಇವರ ಮೊದಲ ಸಂಕಲನ.ಸೀಳ್ಗವನಗಳು
ನಾಟಕಗಳು: ಕಿಸಾಗೋತಾಮೀ, ಸೋಮಿಯ ಸೌಭಾಗ್ಯ, ಸಾವಿತ್ರಿ-ಸತ್ಯವಾನ-ಗೀತ ನಾಟಕ.ಗರ್ಭಗುಡಿ, ನಿಮ್ಮಓಟು ಯಾರಿಗೆ, ಕಟ್ಟೆಪುರಾಣ, ಗೆದ್ದವರ ಸಂಖ್ಯೆ.
ಪ್ರವಾಸ ಕಥನ: ಅಬೂವಿನಿಂದ ಬರ್ಮಾಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪಯಣ, ದಕ್ಷಿಣ ಹಿಂದೂಸ್ಥಾನ
ಆತ್ಮಚರಿತ್ರೆ: ಹುಚ್ಚುಮನಸ್ಸಿನ ಹತ್ತು ಮುಖಗಳು.
ಪ್ರಬಂಧ: ಮೈಗಳ್ಳತನ ದಿನಚರಿಯಿಂದ, ಮೈಲಿಗಲ್ಲಿನೊಡನೆ ಮಾತುಕತೆ.

ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ಸ್ವೀಡನ್ ನ “ಲಾ ಅರ್ಕೈವ್ ಇಂಟರ್ ನ್ಯಾಷನಲ್” ಸಂಸ್ಠೆಯು ಕಾರಂತರು ಯಕ್ಷಗಾನಕ್ಕಾಗಿ ಮಾಡಿದ ಸೇವೆಗಾಗಿ ಕಂಚಿನ ಪದಕ ನೀಡಿ ಗೌರವ
೧೯೫೯ರಲ್ಲಿ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೫ ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ
೧೯೭೮ರಲ್ಲಿ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ
೧೯೮೯ರಲ್ಲಿ ಮೈ ಮನಗಳ ಸುಳಿಯಲ್ಲಿ ಕಾದಂಬರಿಗೆ ಪಂಪ ಪ್ರಶಸ್ತಿ
ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ.

೧೯೭೫ ರಲ್ಲಿ ಭಾರತ ಸರ್ಕಾರವು ಕಾರಂತರಿಗೆ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ಕಾರಂತರು ವಿರೋಧಿಸಿ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರತಿಭಟಿಸಿದರು.

ಕೃತಿಗಳು

ಕವನ ಸಂಕಲನಗಳು

  • ರಾಷ್ಟ್ರಗೀತ ಸುಧಾಕರ
  • ಸೀಳ್ಗವನಗಳು

ಕಾದಂಬರಿಗಳು

  • ಅದೇ ಊರು, ಅದೆ ಮರ
  • ಅಳಿದ ಮೇಲೆ
  • ಅಂಟಿದ ಅಪರಂಜಿ
  • ಆಳ, ನಿರಾಳ
  • ಇದ್ದರೂ ಚಿಂತೆ
  • ಇನ್ನೊಂದೇ ದಾರಿ
  • ಇಳೆಯೆಂಬ
  • ಉಕ್ಕಿದ ನೊರೆ
  • ಒಡಹುಟ್ಟಿದವರು
  • ಒಂಟಿ ದನಿ
  • ಔದಾರ್ಯದ ಉರುಳಲ್ಲಿ
  • ಕಣ್ಣಿದ್ದೂ ಕಾಣರು
  • ಕನ್ನಡಿಯಲ್ಲಿ ಕಂಡಾತ
  • ಕನ್ಯಾಬಲಿ
  • ಕರುಳಿನ ಕರೆ
  • ಕೇವಲ ಮನುಷ್ಯರು
  • ಗೆದ್ದ ದೊಡ್ಡಸ್ತಿಕೆ
  • ಗೊಂಡಾರಣ್ಯ
  • ಜಗದೋದ್ಧಾರ ನಾ
  • ಜಾರುವ ದಾರಿಯಲ್ಲಿ
  • ದೇವದೂತರು
  • ಧರ್ಮರಾಯನ ಸಂಸಾರ
  • ನಷ್ಟ ದಿಗ್ಗಜಗಳು
  • ನಂಬಿದವರ ನಾಕ, ನರಕ
  • ನಾವು ಕಟ್ಟಿದ ಸ್ವರ್ಗ
  • ನಿರ್ಭಾಗ್ಯ ಜನ್ಮ
  • ಬತ್ತದ ತೊರೆ
  • ಭೂತ
  • ಮರಳಿ ಮಣ್ಣಿಗೆ
  • ಮುಗಿದ ಯುದ್ಧ
  • ಮೂಜನ್ಮ
  • ಮೈ ಮನಗಳ ಸುಳಿಯಲ್ಲಿ
  • ಮೊಗ ಪಡೆದ ಮನ
  • ವಿಚಿತ್ರ ಕೂಟ
  • ಶನೀಶ್ವರನ ನೆರಳಿನಲ್ಲಿ
  • ಸನ್ಯಾಸಿಯ ಬದುಕು
  • ಸಮೀಕ್ಷೆ
  • ಸರಸಮ್ಮನ ಸಮಾಧಿ
  • ಸ್ವಪ್ನದ ಹೊಳೆ
  • ಹೆತ್ತಳಾ ತಾಯಿ

ಚಲನಚಿತ್ರವಾಗಿರುವ ಕಾದಂಬರಿಗಳು

  • ಕುಡಿಯರ ಕೂಸು (ಚಲನಚಿತ್ರವಾಗಿದೆ)
  • ಚಿಗುರಿದ ಕನಸು(ಚಲನಚಿತ್ರವಾಗಿದೆ)
  • ಚೋಮನ ದುಡಿ(ಚಲನಚಿತ್ರವಾಗಿದೆ)
  • ಬೆಟ್ಟದ ಜೀವ(ಚಲನಚಿತ್ರವಾಗಿದೆ)
  • ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ನಾಟಕ

  • ಅವಳಿ ನಾಟಕಗಳು
  • ಏಕಾಂಕ ನಾಟಕಗಳು
  • ಐದು ನಾಟಕಗಳು
  • ಕಟ್ಟೆ ಪುರಾಣ
  • ಕಠಾರಿ ಭೈರವ
  • ಕರ್ಣಾರ್ಜುನ
  • ಕೀಚಕ ಸೈರಂಧ್ರಿ
  • ಗರ್ಭಗುಡಿ
  • ಗೀತ ನಾಟಕಗಳು
  • ಜಂಬದ ಜಾನಕಿ
  • ಜ್ಯೂಲಿಯಸ್ ಸೀಸರ್
  • ಡುಮಿಂಗೊ
  • ದೃಷ್ಟಿ ಸಂಗಮ
  • ನವೀನ ನಾಟಕಗಳು
  • ನಾರದ ಗರ್ವಭಂಗ
  • ಬಿತ್ತಿದ ಬೆಳೆ
  • ಬೆವರಿಗೆ ಜಯವಾಗಲಿ
  • ಬೌದ್ಧ ಯಾತ್ರಾ
  • ಮಂಗಳಾರತಿ
  • ಮುಕ್ತದ್ವಾರ
  • ಯಾರೊ ಅಂದರು
  • ವಿಜಯ
  • ವಿಜಯ ದಶಮಿ
  • ಸರಳ ವಿರಳ ನಾಟಕಗಳು
  • ಸಾವಿರ ಮಿಲಿಯ
  • ಹಣೆ ಬರಹ
  • ಹಿರಿಯಕ್ಕನ ಚಾಳಿ
  • ಹೇಗಾದರೇನು?
  • ಹೇಮಂತ

ಸಣ್ಣ ಕತೆ

  • ಕವಿಕರ್ಮ
  • ತೆರೆಯ ಮರೆಯಲ್ಲಿ
  • ಹಸಿವು
  • ಹಾವು

ಹರಟೆ/ವಿಡಂಬನೆ

  • ಗ್ನಾನ
  • ಚಿಕ್ಕ ದೊಡ್ಡವರು
  • ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
  • ಮೈಗಳ್ಳನ ದಿನಚರಿಯಿಂದ
  • ಮೈಲಿಕಲ್ಲಿನೊಡನೆ ಮಾತುಕತೆಗಳು
  • ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ

  • ಅಪೂರ್ವ ಪಶ್ಚಿಮ
  • ಅರಸಿಕರಲ್ಲ
  • ಅಬೂವಿನಿಂದ ಬರಾಮಕ್ಕೆ
  • ಪಾತಾಳಕ್ಕೆ ಪಯಣ
  • ಪೂರ್ವದಿಂದ ಅತ್ಯಪೂರ್ವಕ್ಕೆ
  • ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ

  • ಸ್ಮೃತಿಪಟಲದಿಂದ (೧,೨,೩)
  • ಹುಚ್ಚು ಮನಸ್ಸಿನ ಹತ್ತು ಮುಖಗಳು

ಜೀವನ ಚರಿತ್ರೆ

  • ಕಲಾವಿದ ಕೃಷ್ಣ ಹೆಬ್ಬಾರರು

ಕಲಾಪ್ರಬಂಧ

  • ಕಲೆಯ ದರ್ಶನ
  • ಕರ್ನಾಟಕದಲ್ಲಿ ಚಿತ್ರಕಲೆ
  • ಚಾಲುಕ್ಯ ವಾಸ್ತು ಮತ್ತು ಶಿಲ್ಪ
  • ಚಿತ್ರಶಿಲ್ಪ, ವಾಸ್ತುಕಲೆಗಳು
  • ಜಾನಪದ ಗೀತೆಗಳು
  • ಭಾರತೀಯ ಚಿತ್ರಕಲೆ
  • ಭಾರತೀಯ ಶಿಲ್ಪ
  • ಯಕ್ಷಗಾನ ಬಯಲಾಟ
  • ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು

ವೈಜ್ಞಾನಿಕ

  • ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು)
  • ಉಷ್ಣವಲಯದ ಆಗ್ನೇಸ್ಯ
  • ಪ್ರಾಣಿ ಪ್ರಪಂಚದ ವಿಸ್ಮಯಗಳು
  • ಮಂಗನ ಕಾಯಿಲೆ
  • ವಿಜ್ಞಾನ ಮತ್ತು ಅಂಧಶೃದ್ಧೆ
  • ವಿಶಾಲ ಸಾಗರಗಳು
  • ಹಿರಿಯ ಕಿರಿಯ ಹಕ್ಕಿಗಳು

ಇತರ

  • ಪ್ರಜಾಪ್ರಭುತ್ವವನ್ನು ಕುರಿತು
  • ಬಾಳ್ವೆಯೇ ಬೆಳಕು
  • ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
  • ಮನೋದೇಹಿಯಾದ ಮಾನವ
  • ವಿಚಾರಶೀಲತೆ
  • ವಿಚಾರ ಸಾಹಿತ್ಯ ನಿರ್ಮಾಣ
  • ಸ್ವಾರ್ಥಿ ಮಾನವ

ಸಂಪಾದನೆ

  • ಐರೋಡಿ ಶಿವರಾಮಯ್ಯ ಬದುಕು, ಬರಹ
  • ಕೌಶಿಕ ರಾಮಾಯಣ
  • ಪಂಜೆಯವರ ನೆನಪಿಗಾಗಿ

ವಿಶ್ವಕೋಶ

  • ಕಲಾ ಪ್ರಪಂಚ
  • ಪ್ರಾಣಿ ಪ್ರಪಂಚ
  • ಬಾಲ ಪ್ರಪಂಚ (೧,೨,೩)
  • ವಿಜ್ಞಾನ ಪ್ರಪಂಚ (೧,೨,೩,೪)

ನಿಘಂಟು

  • ಸಿರಿಗನ್ನಡ ಅರ್ಥಕೋಶ

ಮಕ್ಕಳ ಪುಸ್ತಕಗಳು

  • ಅನಾದಿ ಕಾಲದ ಮನುಷ್ಯ
  • ಒಂದೇ ರಾತ್ರಿ ಒಂದೇ ಹಗಲು
  • ಗಜರಾಜ
  • ಗೆದ್ದವರ ಸತ್ಯ
  • ಢಂ ಢಂ ಢೋಲು
  • ನರನೋ ವಾನರನೋ
  • ಮರಿಯಪ್ಪನ ಸಾಹಸಗಳು
  • ಮಂಗನ ಮದುವೆ
  • ಸೂರ್ಯ ಚಂದ್ರ
  • ಹುಲಿರಾಯ
  • ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
  • ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
  • ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨

 

ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು

  • Folk Art of Karnataka
  • Karnataka Paintings
  • My Concern for Life, Literature and Art
  • Picturesque South Kanara
  • Yakshagana

ಶೈಕ್ಷಣಿಕ ಕೃತಿಗಳು

ಮಕ್ಕಳ ಶಿಕ್ಷಣ

  • ಓದುವ ಆಟ
  • ಗೃಹ ವಿಜ್ಞಾನ (೧,೨,೩)
  • ಚಿತ್ರಮಯ ದಕ್ಷಿಣ ಕನ್ನಡ
  • ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
  • ಚಿತ್ರಮಯ ದಕ್ಷಿಣ ಹಿಂದುಸ್ತಾನ
  • ನಾಗರಿಕತೆಯ ಹೊಸ್ತಿಲಲ್ಲಿ
  • ರಮಣ ತಾತ
  • ಸ್ನೀತಿ (೧,೨,೩)
  • ಸಾಮಾನ್ಯ ವಿಜ್ಞಾನ (೧,೨,೩)
  • ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
  • ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)

ವಯಸ್ಕರ ಶಿಕ್ಷಣ

  • ಅಳಿಲ ಭಕ್ತಿ ಮಳಲ ಸೇವೆ
  • ಕರ್ನಾಟಕದ ಜಾನಪದ ಕಲೆಗಳು
  • ಕೋಳಿ ಸಾಕಣೆ
  • ಜೋಗಿ ಕಂಡ ಊರು
  • ದಕ್ಷಿಣ ಹಿಂದುಸ್ತಾನದ ನದಿಗಳು
  • ದೇವ ಒಲಿದ ಊರು
  • ಬೇರೆಯವರೂ ಸರಿ ಇರಬಹುದು
  • ಹುಟ್ಟು ಸಾವು ಒಟ್ಟು ಒಟ್ಟು
Categories
ಕ್ರೀಡೆ

ಕ್ರೀಡೆಗಳು

ಕೃತಿ: ಕ್ರೀಡೆಗಳು (ಹಾಕಿ, ಪೋಲೋ, ಟೆನಿಸ್)

ಕೃತಿಯನ್ನು ಓದಿ     |     Download

Categories
ಕ್ರೀಡೆ

ಪೋಲೋ

ಕೃತಿ: ಕ್ರೀಡೆ
ಲೇಖಕರು: ಕ್ರೀಡೆ
ಕೃತಿಯನ್ನು ಓದಿ

Categories
ಕನ್ನಡ ಕರ್ನಾಟಕದ ಪ್ರವಾಸಿ ತಾಣಗಳು ಗದಗ ಜಿಲ್ಲೆಯ ಪ್ರವಾಸಿ ತಾಣಗಳು

ಗದಗ ಜಿಲ್ಲೆಯ ಪ್ರವಾಸಿ ತಾಣಗಳು

ಕೃತಿ: ಗದಗ ಜಿಲ್ಲೆಯ ಪ್ರವಾಸಿ ತಾಣಗಳು

ಲೇಖಕರು:

ಕೃತಿಯನ್ನು ಓದಿ     |     Download