Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

ಯಾರು ದೇವರಲ್ಲಿ

೫೧

ಧೂಪವಿಡುವನ ಬಳಿಗೇ ದೀಪವಿಡುವ
ಆ ಪರಮ ಕರುಣಾಳು ಶ್ರೀಪತಿಯ ನೆನೆನೆನೆದು ಪ
ವಸುಮತಿಯನಿತ್ತವನ ಹೊಸಲಬಳಿಯಾಳಾದ
ಬಸಿವಲೆಯನಿತ್ತಳಿಗೆ ವಸನಗಳನಿತ್ತ
ಬಿಸಜವೊಂದಿತ್ತವನ ಹೊಸಖೇಚರನಗೈದು
ಬಿಸವುಂಡ ಬಾಲಕನ ಜಸವ ಚಿರಗೈದ ೧
ಅವಲಕ್ಕಿ ಇತ್ತವಗೆ ನಿಧಿಯನೇ ಅರ್ಪಿಸಿದ
ಸವಿಗಂಧವಿತ್ತವಳ | ಸುಂದರಿಯ ಗೈದ
ನವನೀತವಿತ್ತವರನೆಲ್ಲ ತನ್ನೊಳೆ ಹುಗಿದ
ಭವವ ಪರಿಹರಿಸಲ್ಕೆ ಬೇಸರಿಹುದೇ ಹರಿಗೆ ೨
ಅವನ ಜಾನಿಪ ಜನರ ಮರೆಯನಾ ನೀಲಾಂಗ
ಅವನ ಪೂಜಿಪ ನರರ ಮುನ್ನಿಲುವನಾಗಾಗ
ಅವನ ಕಥೆ ಕೇಳ್ವರ್ಗೆ ಉಂಟವನ ಸತ್ಸಂಗ
ಅವನೆ ಗತಿಯೆಂದವನಿಗೊಲಿವ ಮಾಂಗಿರಿರಂಗ ೩

ನೃಸಿಂಹಾವತಾರದ

೫೨

ನರಹರಿ ನಿನ್ನಯ ಮಹಿಮೆಯ ಪೊಗಳಲು
ಉರಗೇಂದ್ರನಿಗೂ ಅಳವಲ್ಲ ಪ
ಮರುಳ ಮೂಢ ಪಾಮರನೆನಿಸಿದಾ
ಸೂರಿದಾಸನಿಗೆ ಅಳವಹುದೇನೋ ಅ.ಪ
ಮಾನವರಿಗೆ ಭಕ್ತಿ ಎ್ಞÁನವ ಬೋಧಿಸಿ
ನೀನವತರಿಸಲು ಯೋಚಿಸುತೇ
ಮೌನಿಗಳನು ಬಾಗಿಲ ಬಳಿ ತಡೆವ
ಅಎ್ಞÁನವನಿತ್ತೆ ನೀ ಜಯವಿಜಯರಿಗೆ ೧
ನಿಂದಿಸಿ ತಡೆದಾ ಜಯವಿಜಯರು
ಭವಬಂಧನ ಪಡೆಯುವ ಪರಿಗೈದೆ
ಕುಂದದಿ ಹರಿವೈರದಿ ಸದ್ಧರ್ಮವ
ನಂದಿಸಿ ಮೆರೆಯುವ ತೆರಗೈವೆ ೨
ಹಿರಿಯ ಹಿರಣ್ಯಕ ಧರೆಯ ಕೊಂಡೊಯ್ಯೆ ಸೂ
ಕರ ರೂಪವನಾಂತು ವಧೆಗೈದೆ
ಕಿರಿಯ ಕಶಿಪು ಸರೋರುಹ ಸಂಭವನಲಿ
ವರಗಳ ಪಡೆವಂತೆ ಪ್ರೇರಿಸಿದೆ೩
ಪುರವಲಯಗಳಲ್ಲಿ ಶರ ಶಸ್ತ್ರಾಸ್ತ್ರದಿ
ನರಖಚರಾಸುರ ಹರಿಹರರಿಂದೆ
ಮರಣವು ಬಾರದ ವರಗಳ ಪಡೆದನು
ದುರುಳ ಹಿರಣ್ಯಕ ವಾರಿಜಭವನಿಂದೆ೪
ಹರಿಸರ್ವೋತ್ತಮ ನಂದಕುಮಾರಗೆ
ಪರಿಪರಿ ಶಿಕ್ಷೆಯ ವಿಧಿಸಲವು
ಗರಳವಮೃತವಾಯ್ತು ಕರಿಗಿರಿಯಹಿಗಳು
ಕರುಣೆಯ ತೋರ್ದವು ನಿನ್ನ ಮಹಿಮೆಯಿಂದಾ ೫
ಹರಿಚಿನ್ಮಯ ತಾನೆಂದಾ ಬಾಲನ
ಕರವಾಳದಿ ಸಂಹರಿಸುವೆನೆಂದು
ಹರಿಯನು ಕಂಭದಿ ತೋರೆನಲಸುರ ನರಮೃಗ
ರೂಪದಿ ಬಂದೆ ನೀ ತಂದೆ೬
ಘಡಿ ಘಡಿಸೀ ನರಕೇಸರಿ ರೂಪದಿ ಪಿಡಿದಸುರನ
ಬಾಗಿಲ ಹೊಸಲಿನಲಿ
ಕೆಡುಕನ ಬಸಿರಿನ ಕರುಳ ನಖಗಳಿಂದ
ಪಿಡಿದೆತ್ತಿದೆಯಯ್ಯ ಮಾಂಗಿರಿಯರಸ ೭

ದಶಾವತಾರದ ವರ್ಣನೆ

೫೩

ಅಂದವ ಜರೆವರಾರು ರಂಗ ನಿನ್ನ ಅಂಗವ ಹಳಿವರಾರು ಪ
ಅಂದವ ಜರೆವರಾರೋ ಇಂದೀವರಾಕ್ಷ ಗೋವಿಂದ ನಿ
ನ್ನಂದಕೇಣಿ ಬಂದವರಿಲ್ಲವಯ್ಯ ಅ.ಪ
ನೀರಮೀನು ಎಂಬರೇನೋ ರಂಗಯ್ಯ
ಭಾರಿ ಕೂರ್ಮನೆಂಬರೇ
ಭಾರಿ ರೋಮ್ಯನು ಎನೆ
ಭೂರಿಸಂತಸವಿತ್ತೇ ೧
ಕೋರೇ ಹಲ್ಲವನೆಂಬರೇ ರಂಗಯ್ಯ
ಘೋರ ಕೇಸರಿ ಎಂಬರೇ
ಕೋರೆ ಹಲ್ಲಿಗೆ ಶೃಂಗಾರ ಧರಣಿದೇವಿ
ಘೋರ ಕೇಸರಿಗೆ ಹತ್ತಾರು ಕೈಗಳು ಚಂದ ೨
ಕೊಡೆಯ ಹಿಡಿದನೆಂಬರೇ ರಂಗಯ್ಯ
ಕೊಡಲಿ ಹಿಡಿದನೆಂಬರೇ
ಕೊಡೆಯ ಹಿಡಿದಡೇನು ಬಲಿಯ ಬಾಗಿಲ ಕಾಯ್ದೆ
ಕೊಡಲಿ ಹಿಡಿದು ಕಾರ್ತವೀರ್ಯಾರ್ಜುನನ ಕೊಂದೆ ೩
ಎಂಜಲ ತಿಂದರೇ ರಂಗಯ್ಯ ಗುಂಜುಗದಾತನೆಂಬರೇ
ಎಂಜಲ ತಿಂದಾ ಬಲದಿ ಮಾರೀಚನ ಕೊಂದೇ
ಗುಂಜುಗ ವೇಗದಿಂದ ಸತಿಯ [ಬಿಡಿಸಿ ಕಂದೆ]
ಕಂಜನೇತ್ರೆಯಳ ಕೈ [ಹಿಡಿದು ಬಂದೆ] ೪
ದುರುಳ ಚೋರನು ಎಂಬರೇ ರಂಗಯ್ಯ
ತುರಗವನೇರಿದನೆಂಬರೇ
ದುರುಳ ಕೌರವರೆದೆ ಬಿರಿವಂತೆ ಮಾಡಿದೆ
ದುರಿತಾರಿ ನೀ ಮಾಂಗಿರಿಯ ರಂಗಯ್ಯ ೫

೫೪

ನಮೋಸ್ತು ಸರಸಿಜ ಭವೇಂದ್ರ ಸನ್ನುತ |
ನಮೋಸ್ತು ಜಗದಾಧಾರಾ ಪ
ನಮೋಸ್ತು ಸೋಮಕರಾ ವೇದೋದ್ಧಾರಾ |
ನಮೋಸ್ತು ಮೀನ ಶರೀರಾ ಅ.ಪ
ನಮೋಸ್ತು ಮುನಿಗಣನುತಾ ಕೃಪಾಕರ |
ನಮೋಸ್ತು ಕೌಸ್ತುಭಧರಾ
ನಮೋಸ್ತು ಮಂದರಧರಾಂಬುಜಾಂಬಕ |
ನಮೋಸ್ತು ಕೂರ್ಮ ಶರೀರಾ ೧
ನಮೋ ನಮೋ ನಿಚರಾಳಿ ಕುಕುಲ |
ಮೃಗೇಂದ್ರ ಸದ್ಯುಶಾ ಶ್ರೀಪತೇ
[ನಮೋ ನಮೋ] ಭೂಧರಾಚ್ಯುತಾ ಹರೇ |
ವರಾಹ ರೂಪ ನಮೋಸ್ತುತೇ ೨
ನಮೋ ನಮೋ ಪನ್ನಗಾರಿವಾಹನ |
ಫಣೀಂದ್ರ ತಲ್ಪ ವಿರಾಜಿತೇ
ನಮೋ ನಮೋ ವರಪ್ರಹ್ಲಾದ ಸನ್ನುತ |
ನೃಸಿಂಹರೂಪ ನಮೋಸ್ತುತೇ ೩
ನಮೋ ಪುರಂದರ ಕರಾರ್ಚಿತಾಸನ |
ಫಲಪ್ರದಾ ಸಕಲೇಷ್ಟದಾ
ನಮೋ ತ್ರಿವಿಕ್ರಮ ಬಲೀಂದ್ರ ವತ್ಸಲ |
ನಮೋಸ್ತು ವಾಮನ ಶ್ರೀಕರಾ೪
ನಮೋ ದ್ವಿಜೋತ್ತಮ ಮುನೀಂದ್ರ ಕಲಯಾ |
ರಮಾಮನೋಹರ ಶ್ರೀಹರೇ
ನಮೋ ನೃಪಾಲಕುಲಾಳಿ ಭಂಜನ |
ನಮೋಸ್ತು ಪರಶುಧರಾಹರೇ ೫
ನಮೋಸ್ತುತೇ ದಶರಥಾತ್ಮ ವಂಶ |
ಪ್ರದೀಪ ಹನುಮತ್ಸೇವಿತ
ನಮೋಸ್ತುತೇ ದಶಶಿರಾಂತಕಾ ಭವ |
ವಿನಾಶ ಭೂಮಿಸುತಾನ್ವಿತಾ ೬
ನಮೋಸ್ತುತೇ ಬಕವೃಷಾಸುರಾಂತಕ |
ಕೃಪಾಕರಾ ಪಶುಪಾಲಕಾ
ನಮೋಸ್ತುತೇ ರುಕ್ಮಿಣೀಶ ಗೀತಾ |
ಪ್ರವೀಣ ಗೋಪಬಾಲಕಾ ೭
ನಮೋ ನಮೋ ಕಾರಣಾಯ ಜಗತ ಃ |
ಪಿತಾಯ ವ್ರತ ನಿರ್ಮೂಲತೇ
ನಮೋ ನಮಃ ಪಾರ್ವತೀಧೃತಕರ |
ನಮೋಸ್ತು ಬುದ್ಧ ಶರೀರತೇ ೮
ನಮೋ ನಮೋ ಪಾವನಾಯ
ಧರ್ಮೋದ್ಧರಾಯ ತುರಂಗ ವಿರಾಜತೇ
ನಮೋ ನಮಃ ಖಚರೇಂದ್ರ ಗಮನ |
ಸುರೇಶ ಕಲ್ಕಿ ಮಹಾತ್ಮತೇ ೯
ನಮೋಸ್ತು ನಿಗಮೋದ್ಧರಾಯ
ಪರ್ವತಧರ ಧರಾಯ ನೃಸಿಂಹತೇ
ನಮೋಸ್ತು ವಾಮನ ದ್ವಿರಾಮಕೃಷ್ಣ |
ಪ್ರಬುದ್ಧಕಲ್ಕಿ ದಿಶಾಕಲತೇ ೧೦
ನಮೋಸ್ತು ಮಂಗಳ ಫಲಪ್ರದಾಯಕ |
ಶುಭಾಂಗ ಗರುಡ ತುರಂಗತೇ
ನಮೋಸ್ತು ಮಾಂಗಿರಿನಿವಾಸಾ
ನಾರಾಯಣಾಯ ಭಕ್ತೋದ್ಧಾರತೇ ೧೧

೫೫

ಅರವಿಂದ ನೇತ್ರಾನಂದ ಗೋವಿಂದಾ
ವರನಂದ ಕಂದಾ ಪೊರೆಯೈ ಮುಕುಂದಾ ಪ
ಶ್ರೀಲಲಾಮ ರಾಮ ಬಾಲಕ ಸುಪ್ರೇಮಾ
ಕಾಲಕಾಲಭೀಮ ಲೋಲ ರಂಗಧಾಮಾ ೧
ಮಾನುಷಾವತಾರ ದೀನಪಾಲ ಶೂರ
ಗಾನಲೋಲ ಮಾರ ದಾನವ ಸಂಹಾರ ೨
ಗಜರಾಜ ವರದ ಅಜಸುರ ವಿನೋದ
ಭಜಕ ಹೃದಯಾಹ್ಲಾದ | ವಿಜಯ ಪದ್ಮಪಾದ ೩
ಮಡುವಿನೊಳಿಹೆನಯ್ಯ ಪಿಡಿಯೆನ್ನ ಕೈಯ
ಮೃಡನುತಾ ರಂಗಯ್ಯ ಪೊಡವಿಯರಸ ಜೀಯ ೪
ವಾಮದೇವ ನುತ ಭೂಮಿಜಾಸೇವಿತ
ರಾಮದಾಸನುತ ಕೋಮಲಾ ದಯಾಭರಿತ ೫

೫೬

ಕರುಣಾ ಜಲಧಿ ರಾಮ | ಪವನಜ ಪ್ರೇಮಾ ಪ
ಪರಮ ಪಾವನ ನಾಮ | ಲೋಕಾಭಿರಾಮಾ ಅ.ಪ
ಜಾನಕಿ ರಾಮ | ದಾನವ ಭೀಮಾ
ಭಾನು ಕುಲೋದ್ದಾಮಾ | ನೀರದ ಶ್ಯಾಮ ೧
ಮೌನಿಜನಾರಾಮ | ಶಿವನುತರಾಮ
ಅನುಪಮಸೀಮ | ಮಾಂಗಿರಿಧಾಮ ೨

೫೭

ಕೌಸಲ್ಯಾ ಸುಕುಮಾರ ಭಾಸಿತ ಕೋದಂಡಧರ
ವಾಸವನುತ ರಣಧೀರ ಭೂಮಿಸುತಾ ಮೋಹಕ ೧
ಮುನಿಕೌಶಿಕ ಮಖಪಾಲನ | ಜನಕಸುತಾ ಮನಮೋಹನ
ಮುನಿಸುದತ್ರಿ ಭವ ಖಂಡನ ಘನದಾನವ ಸತಿಭಂಜನ ೨
ಭರತಾರ್ಚಿತ ವರಚರಣ | ಖರದೂಷಣ ಸಂಹರಣ
ಮರುತಾತ್ಮಜ ಮಣಿಭೂಷಣ | ಶರಣಾಗತ ಮನತೋಷಣ೩
ಲಂಕಾಧಿಪಕುಲನಾಶಕ | ಕಿಂಕರವಾನರಪೋಷಕ
ಪಂಕೇರುಹ ಲೋಚನಾಕಳಂಕ [ಶಮನ] ಮಾಂಗಿರಿ ನಾಯಕ ೪

೫೮

ಚಿಂತಯಾಮಿ ರಾಮಮಮಿತಮಹಿಮಂ
ಶಾಂತದಾಂತ ಮಾಕಾಂತ ಧೀಮಂತ ಪ
ಅಂತರಾತ್ಮಮಮಲ ಸುಗುಣ ಭರಿತಂ
ಸಂತ ಹನೂಮಂತನಮಿತ ಚರಿತಂಅ.ಪ
ಮೌನಿಯಾಗ ಪಾಲಮತುಳ ಶೂರಂ ೧
ಮಾನಿನೀಮಣಿ ಶಾಪಭಂಗ ಚತುರಂ ೨
ಜಾನಕೀ ಹೃದಯಾಪಹಾರ ಧೀರಂ ೩
ಸಾನುಜ ಭರತೇಷ್ಟದಾತಮುದಾರಂ ೪
ದಾನವ ಖರದೂಷಣ ಸಂಹಾರಂ ೫
ಆನತ ಖಚರೇಂದ್ರ ಮೋಕ್ಷದಾತಾರಂ೬
ಕಾನನ ಸತ್ಪಾವನಕರ ಸಂಚಾರಂ ೭
ವಾನರಪತಿ ಸೇವಿತ ಪರಿವಾರಂ ೮
ದಾನವ ರಾವಣ ಮರ್ದನ ಶೂರಂ೯
ದೀನಪಾಲ ಮಾಂಗಿರಿಪತಿ ಗಂಭೀರಂ ೧೦

೫೯

ಜಾನಕಿರಾಮಾ ಸಾಮಜಪ್ರೇಮಾ
ದಾನವಭೀಮಾ ಇನಕುಲಸೋಮಾ ಪ
ಪಾವನನಾಮಾ ಜಗದಭಿರಾಮಾ
ಸದ್ಗುಣಶ್ಶಾಮಾ ಅಂಬುದಶ್ಶಾಮಾ ಅ.ಪ
ದಶರಥ ನಂದನ ಸುರಮುನಿಚಂದನ
ಶರನಿಧಿ ಬಂಧನ ಶಶಿಸಮ ವದನಾ
ದಶಶಿರ ಭಂಜನ ಜನಮನ ರಂಜನ
ತ್ರಿಭುವನ ಪಾವನ ಮಾಂಗಿರಿಮೋಹನಾ ೧

೬೦

ಜಾನಕೀಮನೋಹರಾ ಜನಪಕುಮಾರಾ
ಭಾನುವಂಶಭಾಸ್ಕರಾ ದುರಿತವಿದೂರಾ ಪ
ಮಾರಕೋಟಿಸುಂದರ ಶರಧಿಗಂಭೀರ
ಶೂರ ದೈತ್ಯಭೀಕರ ಪರಮ ಉದಾರ ೧
ವಾನರೇಂದ್ರ ವಂದಿತ ಮೌನಿನಿಕರ ಸೇವಿತ
ದೀನ ವತ್ಸಲಾಂಕಿತ ಸಕಲ ಸನ್ನುತ ೨
ಪಾಹಿ ಪಾಹಿ ರಾಘವೇಶ ಪಾಹಿ ಲೋಕೇಶ
ಪಾಹಿ ಪಾಹಿ ಮಾಂಗಿರೀಶ ಸುಪ್ರಕಾಶ ೩

೬೧

ಜಾನಕೀ ರಾಮಚಂದ್ರಾಂಇÀಇ ನಮಸ್ತೇ ಶ್ರೀ
ಭಾನುಕೋಟಿ ಸುಪ್ರಕಾಶ ವಾರಿಧಿಸಮ ಗಂಭೀರ ಪ
ದಾನವೇಂದ್ರ ಭೀಷಣಾಯ ದೀನಪಾಲನ ಚಿಂತನಾಯ
ಮಾನವೇಂದ್ರ ಗುಣಸಾಂದ್ರ ವೇದವೇದ್ಯ ರಾಘವಾಯಅ.ಪ
ಸಕಲಲೋಕ ಸನ್ನುತಾಯ ವಿಕಸಿತಾಂಬುಜ ಲೋಚನಾಯ
ಮಕರಕುಂಡಲ ಭೂಷಿತಾಯ ಶೋಕನಾಶಚಾರಿತ್ರಾಯ
ಶುಕ ವಶಿಷ್ಟ ವಂದಿತಾಯ ಸಕಲಧರ್ಮಪಾಲನಾಯ
ವಕುಳಮಾಲಾಭರಣ ಮಾಂಗಿರಿನಿಲಯಾಸೂರಿ ಪೂಜಿತಾಯ ೧

೬೨

ತವ ಸಂಸ್ಮರಣಂ ಭವಪರಿಹಾರೀ
ತವ ಮೃದುಚರಣಂ ಶರಣೋದ್ಧರಣಂ ಪ
ಶಿವ ಸಂಸ್ಮರಣಂ | ಸಕಲಾಭರಣಂ
ಕುಃ ವಿಸ್ಮರಣಂ ಚಿರಮಮ ಶರಣಂ ಅ.ಪ
ಶ್ರೀಕರಚರಣಂ ಬಂಧನೋದ್ಧರಣಂ
ರಘುಪತಿ ಚರಣಂ [ಪಾಪವಿನಾಶಂ]
ಜಾನಕಿರಮಣಂ ಭಜಸುಖ ಕರಣಂ ೧
ಶ್ರೀಮಣೀಕರಸೇವಿತ ಚರಣಂ
ಮಾರುತಾತ್ಮಜ ಸುಪೂಜಿತ ಚರಣಂ
ನಾರದನುತ ಮಾಂಗಿರಿಪತಿ ಚರಣಂ ೨

೬೩

ದಿನಮಣಿ ಕುಲಜಾತಾ ಪ್ರತಾಪ ಪ
ಜನಕಸುತಾನ್ವಿತ ಮುನಿಕುಲಸನ್ನುತ
ಶರಣಾಗತ ವರದಾತಾ ವಿನೀತಾ ಅ.ಪ
ದುರುಳ ಖರಾರಿ | ಪಾವನ ಶೌರೀ | ದಶಕಂ
ದರ ಮದಹಾರಿ | ಉದಾರೀ ೧
ಜಗದಭಿರಾಮಾ ರಘುಕುಲ ಸೋಮಾ
ಮರುತಾತ್ಮಜಮನಧಾಮ ಸುನಾಮ೨
ಮಾಂಗಿರಿಮಂದಿರ ದೀನ ಕೃಪಾಕರ
ಪೀತಾಂಬರಧರ ಮಾರಶರೀರಾ ೩

೬೪

ದೇವ ದೇವ ಲೋಕೇಶ್ವರಾ ರಾಮ ಪ
ಪಾವನಾತ್ಮ ಪರಾತ್ಪರಾ ದೋಷದೂರಾ
ಜೀವ ಜೀವ ಚರಾಚರ ಗೂಢಚಾರ ಅ.ಪ
ಜಗದಾದಿಮೂಲ ಪಾಲನೈಕಲೀಲಾ
ಭಗವಾನ್ ತ್ರಿಕಾಲಾತ್ಮಕ ಕಾಲಕಾಲಾ
ನಗನಾಗ ಹಾಲಾಹಲಮಾಯ ಮಾಲಾ
ತ್ರಿಗುಣಾತ್ಮಕಲೀಲಾ ಕರುಣಾಲವಾಲಾ ೧
ದುರುಳ ವಂಶ ವೇತ್ರಾ | ಸುಜನಾತಪತ್ರಾ
ಪರಮಶುಭಚರಿತ್ರಾ ಸ್ವಪ್ರಕಾಶಗಾತ್ರಾ
ಸರಸಿಜಾತನೇತ್ರಾ ಸಕಲಲೋಕ ಸೂತ್ರಾ
ಧರಣಿಜಾ ಕಳತ್ರಾ ಕರುಣೈಕ ಪಾತ್ರಾ ೨
ಶಿವಶೌರಿ ನೀನೆ | ಭವನಿಂದ್ರ ನೀನೇ
ರವಿಸೋಮ ನೀನೇ | ನವಗ್ರಹವೂ ನೀನೇ
ಅವನಿಯೆಲ್ಲ ನೀನೇ | ಭವಕಳೆವವ ನೀನೇ
ಜವ ಜೀವನೇ ಶ್ರೀಧವ ಮಾಂಗಿರೀಶ || ೩

೬೫

ಧರಣಿಜಾ ಪ್ರಿಯರಾಮಾ ಮರುತಾನಂದನ ಪ್ರೇಮಾ
ಸುರಮುನಿಮನಧಾಮಾ ರತನರಾಮಾ ಪ
ದುರುಳ ರಕ್ಕಸ ಭೀಮಾ ತರಣಿವಂಶಲಲಾಮಾ
ಪರಮ ಸುಂದರ ನಾಮಾ ಲೋಕಾಭಿರಾಮಾ ಅ.ಪ
ಎನ್ನಕಾಯುವರಾರು ನೀನಲ್ಲದಿನ್ನಾರು
ನಿನ್ನಪಾದವತೋರು ಕರುಣವ ಬೀರು
ಎನ್ನ ಪಾತಕಭಂಗ ನಿನ್ನಿಂದ ನೀಲಾಂಗ
ನಿನ್ನ ಭಕ್ತರಸಂಗವೀಯೋ ಮಾಂಗಿರಿರಂಗ ೧

೬೬

ಧರಣೀ ರಮಣಾ ರಾಮ | ದುರಿತಹರಣ ನಾಮ ಪ
ಸುರನಾಯಕವೈರಿ ಭೀಮಾ | ಸರಸೀರುಹನಯನ ರಾಮಾ ಅ.ಪ
ಪರಮಶಾಂತ ರಮೆಯ ಕಾಂತ
ಸರಸಿಜಾತ ಭವದೇವಿತ
ಮರುತನಂದನ ನಿರುತ ಪೂಜಿತ
ಶರಣಜನ ಸಂಸೇವಿತ ಭಾವಿತ ೧
ಅಕ್ಷಯಾತ್ಮ ನೀರಜಾಕ್ಷ
ಲಕ್ಷರೂಪ ದಾನವಶಿಕ್ಷ
ಪಕ್ಷಿವಾಹನ ಮೋಕ್ಷದಕ್ಷ
ರಕ್ಷ ನಿತ್ಯಪೂರ್ಣಕಟಾಕ್ಷ ೨
ಮಂಗಳಾಂಗ ಧಲತ ರಥಾಂಗ
ಅಂಗಜಾತಪಿತ ಶುಭಾಂಗ
ಗಂಗಾಧರವಿನುತ ರಂಗ
ಮಾಂಗಿರೀಶ ದೇವೋತ್ತುಂಗ೩

೬೭

ಧೀಮಂತಮನಂತಂ ಚಿಂತಯಾಮಿ ಭಗವಂತಂ ಪ
ಹೇಮಾಂಬರವೇಷ್ಟಿತಂ ಸಾಮಜವರಪೂಜಿತಂಅ.ಪ
ವಾಸವಾದಿ ಸನ್ನುತಂ ಮಾರುತಾತ್ಮಜಾನತಂ
ವಾಸುದೇವಮಚ್ಯುತಂ ಸೋಮಶೇಖರಾರ್ಚಿತಂ ೧
ಭಾಸಮಾನಮಣಿಯುತಂ ಮೌನಿನಿಕರಸೇವಿತಂ
ಕೋಸಲೇಯ ಮಾಂಗಿರೀಶಿಖರ ನಿಲಯರಾಜಿತಂ ೨

೬೮

ನಮೋ ನಮೋ ರಾಮ | ರಘೂತ್ತಮ ಪ
ನಮೋ ನಮೋ ಶಿವ | ಮನಾಭಿರಾಮಾ
ನಮೋ ನಮೋ ಭವವಿನಾಶ ನಾಮಾ ಅ.ಪ
ಸತ್ಯಕಾಮ ರವಿವಂಶಲಲಾಮ
ಸತ್ಯಪೂರ್ಣ ಭುವನೇಶ್ವರ ರಾಮ
ಭೃತ್ಯಪಾಲ ಮಾಂಗಿರಿ ರಾಮ ೧

೬೯

ಪತಿತಪಾವನ ರಮಾಪತಿ ಪರಂಧಾಮಾ ಪ
ಗತಿಮತಿ ನಿನ್ನ ನಾಮಾ | ಅಮೃತವು ಸೀತಾರಾಮಾ
ಹಿತಪಿತ ನೀನೇ ರಾಮಾ | ತಾರಕ ನಾಮಾ ಅ.ಪ
ದಶರಥ ಬಾಲಾ | ಸುರಮುನಿ ಪಾಲಾ
ನಿಶಿಚರ ಶೂಲಾ | ಶ್ರೀವನಮಾಲಾ
ಶಶಿಸಮ ಪಾಲಾ | ಕರುಣಾಲವಾಲಾ
ದಶಮುಖ ಕಾಲ | ಮಾಂಗಿರಿಯ ಗೋಪಾಲಾ ೧

೭೦

ಪಾಲಯಾಶುಮಾಂ ಸೀತಾರಾಮ
ನೀಲಕಂಠ ಸನ್ನುತ ಶ್ರೀರಾಮ ಪ
ಭೂಲಲಾಮ ಪಾವನಕರ ನಾಮಾ
ಕಾಲಕರ್ಮಕಾರಣ ಭವಭೀಮ ಅ.ಪ
ದಶರಥ ನಂದನ ಕೋದಂಡರಾಮ
ಕುಶಿಕ ಮಹಾಧ್ವರ ರಕ್ಷಕ ನಾಮ
ಶಶಿಮುಖ ಮುನಿಸತಿ ಸನ್ನುತ ರಾಮ
ನಿಶಿಚರ ತಾಟಕಾ ಮರ್ದನ ರಾಮ ೧
ಜಾನಕಿ ವಲ್ಲಭ ಜಗದಭಿರಾಮ
ದಾನವ ರಾವಣ ಶಿಕ್ಷಕ ರಾಮ
ದೀನಶರಣ ಮಾಂಗಿರಿವರಧಾಮಾ
(ದೀನನೆನ್ನ ಕಾಯೊ ಶ್ರೀರಾಮ) ೨

೭೧

ಪಾವನಕರ ನಾಮಾ ಪರಮ ಪುರುಷ ರಾಮಾ ಪ
ದೇವೋತ್ತಮ ಸಾರ್ವಭೌಮ | ದಾನವಕುಲ ಭೀಮ ಅ.ಪ
ನಿಗಮಾಗಮ ಪರಿಪೂರಣ | ಸುಗುಣಾಕರ ಮುನಿತೋಷಣ
ಖಗಮಾನಸ ಮಣಿಭೂಷಣ | ಸುರನರಶರಣಾ ೧
ಜಗಜೀವನ ಲಯಕಾರಣ | ಪವನಾತ್ಮಜ ಕರುಣಾ
ಸುಗುಣಾಕರ ಭವತಾರಣ | ಮಾಂಗಿರೀಶ ಕಮಲಚರಣ೨

೭೨

ಪಾಲಯಮಾಂ ಕರುಣಾಭರಣ |
ನೀಲಕಾಯ ಜಾನಕಿರಮಣಾ ಪ
ಶೂಲಪಾಣಿ ಸನ್ನುತ ವರಚರಣಾ |
ಭೂಲಲಾಮ ರಾವಣಸಂಹರಣ ಅ.ಪ
ಪುರಹರ ವಿನುತ ಶಾಪವಿದೂರ |
ಮರಕತ ಗೋಮೇಧಿಕ ಮಣಿಹಾರಾ |
ಸರಸಿಜ ಕೋಮಲ ಮದನಾಕಾರ |
ಸುರಪತಿ ಸನ್ನುತ ನಿಗಮಾಧಾರಾ || ೧
ನರಪಕುಮಾರ ಘನಗಂಭೀರಾ |
ನಿರುಪಮ ಶೂರಾ ಪುಣ್ಯಶರೀರಾ |
ದುರುಳ ವಿದಾರಾ ಜಗದಾಧಾರಾ |
ಪರಮೋದಾರಾ ಮಾಂಗಿರಿವರ || ೨

೭೩

ಪಾಹಿ ಪಾಹಿ ಪರಂಧಾಮ ಸುನಾಮ ಗುರುವಂದಿತ ಶ್ರೀರಾಮ ಪ
ಅಹಿಭೂಷಣ ನುತರಾಮ | ಮಹಿಜಾಪ್ರಿಯ ಶ್ರೀರಾಮ ಅ.ಪ
ದಶರಥೇಂದ್ರ ಸುಕುಮಾರ | ನಿಶಿಚರಾಳಿ ಸಂಹಾರ |
ಕೌಶಿಕ ಭಯ ಪರಿಹಾರ | ಪರಮಶೂರ ಶ್ರೀರಾಮ ೧
ಮುನಿಗೌತಮ ಸತಿಪಾವನ | ಜನಕಾತ್ಮಜ ಮನಮೋಹನ |
ಮುನಿಸನ್ನುತ ಸುರಜೀವನ | ವನಜೇಕ್ಷಣ ಶ್ರೀರಾಮ ೨
ಜನಕ ಮನೋಗತ ಬಂಧಿತ | ಜನಕಜಾ ಸುಮಿತ್ರಜಾಯುತ |
ವನವನಾಂತರ ಸಂಚರಿತ | ಸನಕಾನತ ಶ್ರೀರಾಮ ೩
ಭರತಾನತ ಪೂಜ್ಯಪಾದ | ಪರಮಾದ್ಭುತ ಶರ ವಿನೋದ |
ಸುರಭೀಕರ ದೈತ್ಯಸೂದ | ಅಭಯಪ್ರದ ಶ್ರೀರಾಮ ೪
ಖರದೂಷಣ ತ್ರಿಶಿರಾಂತಕ ಶ್ರೀರಾಮ |
ಖಚರಾಧಿಪ ಪ್ಲವಗೇಶ್ವರರಾಮ
ವರದಾಯಕ ಭಯಹಾರಕ ರಾಮ | ಶುಭಕಾರಕ ಶ್ರೀರಾಮ ೫
ನಿಶಿತ ವರಾಸ್ತ್ರ ವಿಜೃಂಭಿತರಾಮ |
ನಿಶಿಚರ ಕಾಲಾಂತಕ ರಣಭೀಮ |
ಕುಶಲ ವಿಭೀಷಣನುತರಾಮ | ಶಶಿಧರ ಸನ್ನುತ ಶ್ರೀರಾಮ ೬
ಪವಮಾನಾತ್ಮಜ ಸೇವಿತರಾಮಾ |
ಭುವನೋದ್ಧಾರಣ ಕಂಕಣ ರಾಮಾ |
ಭವ ಬಂಧನ ಸಂಹಾರಕ ರಾಮಾ |
ಭುವನಾನಂದದ ಶ್ರೀರಾಮಾ ೭
ಪಾವನ ಸೇತೋಕಾರಕರಾಮಾ |
ದಾವಾನಲ ಸಮರಂಜಕ ರಾಮಾ |
ರಾವಣಕುಲ ವಿಧ್ವಂಸಕ ರಾಮಾ | ಸೀತಾನಾಯಕ ಶ್ರೀರಾಮಾ ೮
ಸಾಕೇತ ಪುರಾಧೀಶ್ವರ ರಾಮ |
ರಾಕಾಚಂದ್ರ ಸುಧಾಕರ ರಾಮಾ |
ಏಕಚಕ್ರಾಧಿಪ ರಘುರಾಮ | ಲೋಕಸುಖಂಕರ ಶ್ರೀರಾಮ ೯
ಅಂಗದ ಹನುಮತ್ಸೇವಿತರಾಮ | ಮಂಗಳಕರ ಸೀತಾರಾಮ |
ಮಾಂಗಿರಿನಿಲಯ ಶುಭಾನ್ವಿತ ರಾಮ | ಜಗವಂದಿತ ಶ್ರೀರಾಮ೧೦

೭೪

ಪಾಹಿಮೋಹನರಾಮ ಅಭಿರಾಮ
ಭೀಮ ಪರಾಕ್ರಮ ನಿರುಪಮ ಪ್ರೇಮ ಪ
ಪರಶಿವ ನುತನಾಮ ಪಾವನನಾಮ
ದಾನವಭೀಮ ಕುವಲಯ ಶ್ಯಾಮ ಅ.ಪ
ಕೋಸಲಪುರಪಾಲ ದಶರಥ ಬಾಲ
ದುರುಳ ಕುಲಾನಲ ಘನಗುಣಶೀಲ
ಕನಕದುಕೂಲ ಮಣಿಮಯ ಮಾಲಾ
ಜಾನಕಿಲೋಲ ಕರುಣಾಲವಾಲ ೧
ಪವನಸುತಾನತ ಸುಗುಣಗಣಾನ್ವಿತ
ಭರತ ಸಂಶೋಭಿತ ಮುನಿಗಣ ಸೇವಿತ
ಕಮಲದಳಾಯತ ಲೋಚನ ಸುಲಲಿತ
ಕುಂಭಜಪೂಜಿತ ಮಾಂಗಿರಿನಾಥ ೨

೭೫

ಪೀತಾಂಬರಧರ ದಶರಥಬಾಲಾ
ಸೀತಾ ಮನೋಹರ ದಶಶಿರಕಾಲಾ ಪ
ಭೀತಜನಾಶ್ರಯ ಮಣಿಮಯ ಮಾಲಾ
ಶೀತಕರೋಪಮ ವದನವಿಶಾಲಾ ಅ.ಪ
ಗೌತಮ ಮುನಿಸಂಪೂಜಿತ ಚರಣಾ
ಖ್ಯಾತ ವಿಭೀಷಣ ಪರಮಾಭರಣಾ
ಪಾತಕಹರ ದಾನವ ಸಂಹರಣಾ
ವಾತಾತ್ಮಜಸಂಸೇವಿತ ಚರಣಾ೧
ಮಂಗಳಮೂರ್ತಿ ಗರುಡ ತುರಂಗ
ಸಂಗರಭೀಮ ಶುಭಾಂಗ ಕೃಪಾಂಗ
ಗಂಗಾಧರನುತ ದಿವ್ಯರಥಾಂಗ
ಮಾಂಗಿರಿರಂಗ ಮೋಹನಾಂಗ ನೀಲಾಂಗ ೨

೭೬

ಪುರುಷೋತ್ತಮ ರಾಘವೇಂದ್ರ
ಕರುಣಾವರ ಸುಗುಣಸಾಂದ್ರ ಪ
ಶರಣಾಗತಶರಧಿ ಚಂದ್ರ
ಪರಿಪಾಲಯ ರಾಮಚಂದ್ರ ಅ.ಪ
ದಿನಪಕುಲೋದ್ದಾಮ ರಾಮ
ಜನಕಸುತಾನಂದ ಧಾಮ
ದನುಜಕುಲಕುಠಾರ ರಾಮ
ಮುನಿಜನಾಶ್ರಯದಾತ ರಾಮ ೧
ಪವನಾತ್ಮಜ ಸೇವ್ಯ ರಾಮ
ಶಿವಸನ್ನುತ ವೈರಿ ಭೀಮ
ಭುವನೇಶ್ವರ ಸತ್ಯಕಾಮ
ದಿವಿಜಗಣಾರಾಧ ರಾಮ ೨
[ಪರಮ ಶಬರಿಗೊಲಿದ ರಾಮ]
ವರವಿಭೀಷಣಾಭಿ ರಾಮ
ನಿರುತಲಕ್ಷ್ಮಣಸೇವಿತರಾಮ
ವರ ಮಾಂಗಿರಿರಂಗಧಾಮ ೩

೭೭

ಭಜರೇ ಶ್ರೀರಾಮಂ ಮಾನಸ ಪ
ಜಾನಕಿರಾಮಂ ದಾನವಭೀಮಂ
ನಿರ್ಜಿತಕಾಮಂ ನಯನಾಭಿರಾಮಂ ಅ.ಪ
ಕರಧೃತ ಚಾಪಂ ಖಂಡಿತ ಪಾಪಂ
ರವಿಕುಲ ದೀಪಂ ಅಸಮ ಪ್ರತಾಪಂ
ಹನುಮ ವರೂಥಂ | ಮಾಂಗಿರಿನಾಥಂ
ನಿರುಪಮ ಶಾಂತಂ ಮಹಿಜಾಕಾಂತಂ ೧

೭೮

ಮಾಮವತು ಶ್ರೀ ರಮಾಪತೇ | ರಘುಪತೇ ಸೀತಾಪತೇ ಪ
ಭೀಮಪರಾಕ್ರಮ ದನುಜಾರಾತೇ |
ಕಾಮಿತಾರ್ಥದಾಯಕ ನಮೋಸ್ತುತೇ ಅ.ಪ
ಜನಕ ನೃಪಾತ್ಮಜಾಯುತ ಸುರ ಭೂಜಾ |
ಇನಶಶಿತೇಜ ನಯನಸರೋಜ |
ವಿನಮಿತ ಶುಂಭ ವಿನತಸುತಾಧ್ವಜ |
ಮುನಿಪ ಸಮಾಜ ರೂಪ ಮನೋಜ ||೧
ವಾನರಪತಿ ಸಂಸೇವಿತ ಚರಣಾ |
ದಾನವವೈರಿ ವಿಭೀಷಣ ಕರುಣಾ |
ದೀನಜನಾಶ್ರಯ ಪಾವನಚರಣಾ

೭೯

ರಘುಕುಲತಿಲಕಾ ಮಾಂ ಪಾಹಿ ಪ
ಅಘಕುಲನಾಶಕ ಮಾಂ ಪಾಹಿ ಅ.ಪ
ಆಹವ ಭೀಮ ವೈದೇಹಿ ಮಾನಸ
ಗೇಹ ಸುಧಾಕರ ಮಾಂ ಪಾಹಿ ರಾಮಾ ೧
ಕೋದಂಡಧರ ದೀನ ದಯಾಪರ
ಆದಿಮೂಲ ಹರಿ ಮಾಂ ಪಾಹಿ ರಾಮ ೨
ಮಾಂಗಿರಿ ಮಂದಿರ ತುಂಗ ಕೃಪಾಕರ
ಗಂಗಾಜನಕ ಹರಿ ಮಾಂ ಪಾಹಿ ರಾಮಾ ೩

೮೦

ರಾಜೀವ ಲೋಚನ ಹರೇ ಮುರಾರೇ
ಮಾಜೀವ ಮೋಹನ ಹರೇ ಮುರಾರೇ ಪ
ರಾಜೇಂದ್ರ ನಂದನ ಹರೆ ಮುರಾರೇ
ಓ ಜಾನಕೀ ಪ್ರಿಯ ಪಾಹಿ ಖರಾರೇಅ.ಪ
ವಾರಾಶಿ ಗಂಭೀರ ಸಾಕೇತಧಾಮ
ಮಾರಾರಿ ವಂದಿತ ಲೋಕಾಭಿರಾಮ
ಘೋರಾಘಸಂಹಾರ ರಣರಂಗ ಭೀಮ
ಶ್ರೀರಾಮ ಜಯರಾಮ ಕಲ್ಯಾಣರಾಮ ೧
ಪವನಾತ್ಮಜಾನಂದದಾತಾಪರೇಶ
ಭವನಾಶ ಜಗತೀಶ ದೈತೇಯನಾಶ
ರವಿಕೋಟಿ ಸಂಕಾಶ ರವಿತೇಜ ಪೋಷಾ
ಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ ೨

೮೧

ರಾಜೀವನಯನ ಸೀತಾರಾಮ ಪಾಹಿ ಮುದಂದೇಹಿ ಪ
ರಾಜಾಧಿರಾಜ ಕಲ್ಪಭೂಜಾ ಸೌಜನ್ಯ ನಿಲಯ ರಾಮ ಅ.ಪ
ಸಾಕೇತಾಧಿಪರಾಮ, ಲಂಕಾನತ ದನುಜ ಭೀಮ
ಕಾಕಾಸುರ ನಮಿತ ನಾಮ, ಶ್ರೀಕರ ಕೀರ್ತಿಕಾಮ
ಏಕಾಂತ ರಘುನಾಮ, ಏಕಾಂಬರ ಶಿವಪ್ರೇಮ
ಸಾಕೇಶ್ವರ ಸಾರ್ವಭೌಮ, ಶ್ರೀಮಾಂಗಿರಿ ರಂಗಧಾಮ ೧

೮೨

ರಾಮಂ ಭಜರೇ | ಭಜಮಾನಸ ರಘು ಪ
ಭುವನಾಭಿರಾಮಂ ಗುಣರತ್ನಧಾಮಂ ಅ.ಪ
ರಾಮೇತಿ ದೀನಪಾಲ ಲಲಾಮೇತಿ ಶುಭಕರ ನಾಮಂ |
ಕೋದಂಡಧರರಿಪು ದೋರ್ದಂಡ ಸದ್ಗುಣಂ |
ತಾರಕನಾಮ ರಾಮಂ ಧಾಮಂ ಜಾನಕಿರಾಮಂ |
ಬಾಲೇಂದುಧರನುತ ಸೌಮಿತ್ರಿ ಸನ್ನುತ ರಾಮಂ |
ನೀಲಾಂಬುಜಾತರಾಮಂ ಪಟ್ಟಾಭಿರಾಮಂ |
ಶೃಂಗಾರಪೂರ್ಣ ಶುಭಾಂಗ ಮಾಂಗಿರಿವಾಸ ರಂಗಂ |
ಸತ್ಕರುಣಾಂತರಂಗಂ ದಾನವಕುಲ ಭಂಗಂ ೧

೮೩

ರಾಮಚಂದಿರ ಶ್ಯಾಮಸುಂದರ ಪ್ರೇಮಸಾಗರಾ ಪ
ಭೂಮಿಜಾತೆಯರಸ ಬಂಧುರ ಕೋಮಲಾಕರ ಶರಣಪಾಲಾ ಅ.ಪ
ವೇದವಿದಿತಾ ಮೋದಭರಿತ ಶ್ರೀಧರಾಚ್ಯುತ
ಸಾದರದೊಳು ನಿನ್ನ ಸಂತತಾರಾಧನೆಗೈಸುವ ಭಾರ ನಿನ್ನದು ೧
ಶಿಲೆಯ ಸತಿಯಗೈವ ಪಾದವ ತೊಳೆದ ಜನಕನು
ಸುಲಭಮಾರ್ಗದಿ ಶಬರಿ ನಿನ್ನಯ ಜಲಜಪಾದ ಸೇವೆಗೈದಳು ೨
ಧರೆಯಿದಸ್ಥಿರ ತನುವಿದಸ್ಥಿರ ಜನುಮನಿಸ್ಸಾರಾ
ವರದ ಮಾಂಗಿರೀಶ ನಿನ್ನಯ
ಕರುಣವೇ ಶರಣರ ಪರಮಸೌಭಾಗ್ಯ ೩

೮೪

ರಾಮಚಂದ್ರ ರಘುವೀರಾ ನಮೋ ನಮೋ ಪ
ಶ್ಯಾಮಾಂಗ ಸುಕುಮಾರಾ ನಮೋ ನಮೋ
ಕಾಮಿತಾರ್ಥದಾತಾರಾ ನಮೋ ನಮೋ ಓಂಕಾರ ಅ.ಪ
ದಶರಥೇಂದ್ರ ಪ್ರಿಯಬಾಲಾ ನಮೋ ನಮೋ
ವಸಿಷ್ಟಾದಿಮುನಿ ತೋಷಿತ ನಮೋ ನಮೋ
ನಿಶಚರೇಭ ಕುಲಕಾಲಾ ನಮೋ ನಮೋ ಶ್ರೀ ಬಾಲಾ ೧
ಗೌತಮಸತಿ ಪರಿಪಾಲಾ ನಮೋ ನಮೋ
ಭೂತನುಜಾರ್ಪಿತಮಾಲಾ ನಮೋ ನಮೋ
ನೀತಿಸುಗುಣಯುತಶೀಲಾ ನಮೋ ನಮೋ ಘನಲೀಲಾ ೨
ಘೋರಾರಣ್ಯ ವಿಹಾರಾ ನಮೋ ನಮೋ
ವೀರಖರಾಸುರಮಾರಾ ನಮೋ ನಮೋ
ಮಾರೀಚಾಂತಕ ವೀರಾ ನಮೋ ನಮೋ ಶ್ರೀಕಾರಾ ೩
ಸೀತಾವಿರಹ ಸಂತಪ್ತಾ ನಮೋ ನಮೋ
ಭ್ರಾತಾವಚನ ಸಂತೃಪ್ತಾ ನಮೋ ನಮೋ
ಖ್ಯಾತ ಮೃದುವಾಕ್ ದೀಪ್ತಾ ನಮೋ ನಮೋ ಸಂತೃಪ್ತಾ೪
ಮರುತಾತ್ಮಜ ನುತಿ ಪಾತ್ರಾ ನಮೋ ನಮೋ
ವರ ಸುಗ್ರೀವ ಸನ್ಮಿತ್ರಾ ನಮೋ ನಮೋ
ಪರಮ ಪುಣ್ಯಚರಿತ್ರಾ ನಮೋ ನಮೋ ಶ್ರೀಗಾತ್ರಾ ೫
ಶರಧಿಗರ್ವ ವಿಭಂಗಾ ನಮೋ ನಮೋ
ಶರಧಿ ವಿಭೀಷಣ ನಮೋ ನಮೋ
ಅರಿಕುಲ ನಾಶಕ ರಂಗಾ ನಮೋ ನಮೋ ಶ್ರೀರಂಗ ೬
ರಾವಣಮರ್ದನ ರಾಮಾ ನಮೋ ನಮೋ
ಭೂವನಿತಾತ್ಮಜ ಪ್ರೇಮಾ ನಮೋ ನಮೋ
ದೇವ ದಿವಿಜನುತ ನಮೋ ನಮೋ ಶ್ರೀರಾಮಾ ೭
ಸತ್ಯ ಧರ್ಮ ಪರಿಪಾಲಾ ನಮೋ ನಮೋ
ದೈತ್ಯವರ್ಗ ನಿರ್ಮೂಲಾ ನಮೋ ನಮೋ
ನಿತ್ಯ ಮುಕ್ತ ವನಮಾಲಾ ನಮೋ ನಮೋ ಭೂಪಾಲಾ೮
ಮಂಗಳಾಂಗ ನೀಲಾಂಗ ನಮೋ ನಮೋ
ರಂಗನಾಥ ರಿಪುಭಂಗ ನಮೋ ನಮೋ
ಮಾಂಗಿರೀಶ ಮಾಲಿಂಗಾ ನಮೋ ನಮೋ ಶ್ರೀರಂಗ ೯

೮೫

ರಾಮಾ ರಘುನಾಯಕಾ ಭೀಮಾ
ರಾಘವಾ ವರದಾಯಕಾ ಪ
ಸೋಮಸನಾತನ ಭೂಮಿಜ ನಾಯಕಾ
ಪ್ರೇಮಸಮಾನ್ವಿತ | ಶ್ಯಾಮನೆ ಬಾರೋ ಅ.ಪ
ರಾವಣಮರ್ದನ | ಪಾವನಚರಣಾ
ಶ್ರೀವನಮಾಲಾ | ಧಾರಣ ಸುಗುಣಾ
ನಾವಿಕ ಸೇವಿತ | ಸಂತತ ಕರುಣ
ದೇವದೇವಾನತ | ಶರಣಾ ಭರಣ ೧
ಮೌನಿಯ ಕಾಂತೆಯ | ಪಾಲಿಸಿದಾತ
ಶೌನಕವಂದಿತ ಕುಶಲವ ತಾತ
ಹನುಮತ್ಸೇವಿತ ವರ ವರದಾತ
ಮುನಿಜನ ತೋಷಿತ ಮಾಂಗಿರಿನಾಥ ೨

೮೬

ವಿನತಾನುತ ಮಣಿವರೂಥ
ಜನಕಸುತಾ ನಾಥಪ್ರೀತ ಪ
ಕನಕಾಂಬರ ಪಾರ್ಥಸೂತ
ವನಮಾಲಾ ಮಣಿರಾಜಿತ ಅ.ಪ
ಶುಕ ಶೌನಕ ಪರಿಪೂಜಿತ
ಸಕಲಾಗಮ ವೇದವಿದಿತ
ವಕುಳಸುಮಾಭರಣಾಯತ
ಸುಕರಾರ್ಜಿತ ಮೋಕ್ಷದಾತ ೧
ಪಾಹಿ ಪಾಹಿ ಪರಮನಾಮ
ಪಾಹಿ ಪಾಹಿ ಪೂರ್ಣಕಾಮ
ಪಾಹಿ ಪಾಹಿ ದನುಜಭೀಮ
ಪಾಹಿ ಪಾಹಿ ಮಾಂಗಿರಿಧಾಮ೨

೮೭

ವಿನಾಯಕಾನತ ರಾಮಾ ಪ
ಸುಶೀಲ ನಿರುಪಮ ಗುಣಾಭಿರಾಮಾ ಅ.ಪ
[ಸಶೇಷ] ಮನೋಜ ನಿರುಪಮ ವದನ
ನಿಶಾಕರಾರ್ಭಕ ದಶಾಸ್ಯಹನನ
ವಿಶಾಲ ಲೋಚನ ಕೃಪಾವಲಂಬನ
ದಶರಥ ನಂದನ ಸದಾ ನಿರಂಜನ೧
ಸೀತಾವಿರಾಜಿತ ವಾತಾತ್ಮಜಾನತ
ಪೀತಾಂಬರಾಚ್ಯುತ ರಮಾನತ
ಭ್ರಾತಾಭಿವಂದಿತ ವಿಭೀಷಣಾನತ
ಧಾತಾನಂದಿತ ಶ್ರೀಮಾಂಗಿರಿನಾಥ೨

೮೮

ವೇದವೇದ್ಯರೂಪ ವಿಶ್ವವ್ಯಾಪಕನೇ (ರಾಮ)
ನಾದರೂಪಪ್ರೀತ ವಿಶ್ವರಕ್ಷಕನೇ ರಾಮ ಪ
ಆದಿಮಧ್ಯರಹಿತದೇವ ನಾದರಂಜಿತನೇ ರಾಮ |
ಮಾಧವಾ ಮಧುಸೂದನ ಹರೇ ಮಧುರಭಾಷಿತನೇ ರಾಮ ಅ.ಪ
ಕಮಲನಯನ ಕಮಲವದನ ಕಮಲನಾಭನೇ
ಕಮಲಹಸ್ತ ಕಮಲಮಸ್ತಕ ಕಮಲವಕ್ಷನೇ
ಕಮಲಸದನ ಕಮಲಶೋಭಿತ ಕಮಲಜಾಪ್ರಿಯನೇ
ಕಮಲಸಂಭವಾದಿ ನಮಿತ ಕಮಲಾರಾಧಿಕನೇರಾಮ ೧
ಗಂಗಾಜನಕ ಮಂಗಳಾಂಗ ತುಂಗವಿಕ್ರಮನೇ
ಇಂಗಿತಾರ್ಥದಾತ ಮೌನಿಪುಂಗವಾನತನೇ
ಅಂಗಜಾತವೈರಿ ಸನ್ನುತ ಅಂಗರೂಪನೇ
ಭೃಂಗಕುಂತಳ ಮಾಂಗಿರೀಶ ರಂಗನಾಥನೇ ರಾಮ ೨

೮೯

ಶರಧಿಶಯನಾ ವರ ಸರಸಿಜ ಸುಂದರನಯನಾ ಪ
ಶರಣಾಗತ ಕರುಣಾ ಸದನ ಅ.ಪ
[ವರ] ನಿಗಮ ವಿದಿತನಾಮಾ ಸತ್ಯಕಾಮಾಭಿರಾಮಾ
ನಿರುಪಮ ಸೀಮಾ | ರಮ್ಯ ಪಟ್ಟಾಭಿರಾಮಾ |
ಸುರಮುನಿವಿನುತ ನಾಮಾ | ದೇವತಾ ಸಾರ್ವಭೌಮ
ದುರುಳದನುಜ ಭೀಮಾ ಶ್ರೀ[ಮಾಂಗಿರಿ] ರಮಾ ಪ್ರೇಮಾ ೧

೯೦

ಶ್ರೀರಘುಪತೇ ನಮೋಸ್ತುತೆ
ಚಾರುನೀತಿಯುಕ್ತ ಭೂಪತೇ ಪ
ನೀರದಸಮಶರೀರ [ಸಮರ] ರಣ
ಧೀರ ಸದಾನಂದಕರ ಭೂಮಿಜಾಪತೇ ಅ.ಪ
ಲೋಕಾಭಿರಾಮ ತಾರಕನಾಮ
ಶ್ರೀಕಂಠವಿನುತ ಸಾಕೇತ ಧಾಮ ೧
ಸಕಲಕಲಾವಿದ ಭಜಕ ಪ್ರೇಮ
ಶುಕಶೌನಕ ಮುನಿಸನ್ನುತ ನಾಮ ೨
ವಿಕಸಿತ ವದನಾಂಭೋರುಹಲೋಚನ
[ಸಖ] ಮಾಂಗಿರೀಶ ಹನುಮಾನತ ನಾಮ ೩

೯೧

ಶ್ರೀರಮಣೀಕರ ಸೇವಿತ ಚರಣಾ
ಮಾರಜನಕ ಕರುಣಾಭರಣಾ ಪ
ವಾರಣೋದ್ಧಾರಣ ಪೂರಿತ ಶುಭಗುಣ
ಶೂರದೈತ್ಯರಣಧೀರ ನಾರಾಯಣ ಅ.ಪ
ಕುವಲಯ ಘನಶ್ಯಾಮ ನವಮೋಹನಾರಾಮಾ
ಶಿವನುತನಾಮಾ | ಭವದೂರ ಭೀಮಾ
ಅವನಿಜಪ್ರೇಮಾ | ರವಿಕುಲಸೋಮಾ
ಭುವನಾಭಿರಾಮಾ | ಮಾಂಗಿರಿವರಧಾಮಾ ೧

೯೨

ಶ್ರೀರಾಮ ಜಯರಾಮ ರಘುರಾಮ ಪಾಹಿ
ನಾರಾಚ ಕೋದಂಡಧರ ಧೀರ ಪಾಹಿ ಪ
ಮಾರಾರಿನುತ ನಾಮ ದನುಜಾರಿ ಪಾಹಿ
ಧರಣೀಸುತಾನಂದ ಸುವಿಹಾರಿ ಪಾಹಿ ಅ.ಪ
ಸಾಮಿತ್ರಿ ಭರತಾಗ್ರಜಾತ ಮಾಂಪಾಹಿ
ಮೌನಿಜನಸಂಪ್ರೀತ ಶ್ರೀಲೋಲ ಪಾಹಿ
ಶ್ರೀಮಾರುತೀ ಸೇವ್ಯ ಪಾದಾಬ್ಜಪಾಹಿ
ಧೀಮಂತ ಘನ ಪುಣ್ಯನಾಮ ಮಾಂಪಾಹಿ ೧
ಭುವನಾಭಿರಾಮಾ ತ್ರಿಮುನಿನುತ್ಯಪಾಹಿ
ಭವನಾಶ ಸತ್ಕೀರ್ತಿಕಾಮ ಮಾಂಪಾಹಿ
ನವಮೋಹನಾಂಗ ರಾವಣವೈರಿ ಪಾಹಿ
ಸುವಿಲಾಸದಾತ ಮಾಂಗಿರಿವಾಸ ಪಾಹಿ೨

೯೩

ಶ್ರೀರಾಮ ಪಾಹಿಮಾಂ ಸದಾಪೂರ್ಣಕಾಮ
ವಾರಿಜಭವವಿನುತನಾಮ ಸಾರಸಾಕ್ಷ ಸಂಗರಭೀಮ ಪ
ಮುನಿಕೌಶಿಕ ಮಖಪಾಲಕ ಘನತಾರಕನಾಮ
ವನಜಾಂಬಕ ವರದಾಯಕ ಜನಕಾತ್ಮಜ ಪ್ರೇಮ
ದನುಜಾಂತಕ ಭವಭಂಜಕ ಇನವಂಶಲಲಾಮ
ಜನನಾಯಕ ಫಲದಾಯಕ ಸದಯ ಮಾಂಗಿರಿರಾಮ ೧

೯೪

ಸತ್ಯಸುಧಾರ್ಣವ ನಿತ್ಯಸ್ವಯಂಭುವ
ನುತ್ಯಸ್ವಭಾವಗುಣ ರಮಾಧವ ಪ
ಭೃತ್ಯಪಾಲಕ ಭವ ಭಂಜನ ರಾಘವ
ಅತ್ಯಂತ ಸುಖವೀವ ದೇವ ಕೃಪಾರ್ಣವ ಅ.ಪ
ಪವನನಂದನನುತ ಭುವನಾರಾಜಿತ
ಧೃವ ಪರಿಭಾವಿತ ಮುನಿಸೇವಿತ
ಕವಿಹೃದಯಾನತ ದಿವಿಜಾರಾಧಿತ
ನವಘನಸುಂದರ ವಿಧಿವಿನುತಾ ೧
ಗಂಗಾಜನಕ ರಥಾಂಗ ಶ್ರೀಕರ
ತುಂಗ ಕೃಪಾಕರ ಧರಣೀಧರಾ
ಮಾಂಗಿರಿ ವರನರಸಿಂಗ ಪರಾತ್ಪರ
ಅಂಗಜಜನಕ ಭುಜಂಗ ಶೃಂಗಾರ ೨

೯೫

ಹರೇ ರಾಘವ ಪಾಲಯ ಚಿರಕರುಣಾಲಯ
ಸುರಾನಂದ ಸಂವರ್ಧಕ ಪರಾತ್ಪರ ಅಪ್ರಮೇಯ ಪ
ವರಾಹ ಕೇಸರಿ ದ್ವಿಜಾವತಾರಿ
ಪರೇಶ ಮುರಳಿ ಧರೇಶ ಶೌರಿ
ವಿರಾಧ ಮಾರೀಚ ದಶಾನನಾರಿ
ಸರೋಜನೇತ್ರ ಮಾಂಗಿರಿವಿಹಾರಿ ೧

೯೬

ಹಿಡಿದ ಕೈಬಿಡಬೇಡವೋ ರಾಮಾ ಪ
ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ
ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ
ನುಡಿ ಕೇಳದೆನಬೇಡ ಅಡಿದೋರದಿರ ಬೇಡ
ಕುಡುಕ ಹೋಗೆನಬೇಡ ನುಡಿಸದಿರ ಬೇಡ
ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ
ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ ೧
ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ
ಬಗೆಯರಿತು ನಡೆಸಯ್ಯ ಸುಗತಿದೋರಯ್ಯ
ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ
ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ೨

೯೭

ಶ್ರೀ ಕೃಷ್ಣ ಸ್ತುತಿಗಳು
ಅದೋ ಬರುವ ರಂಗ ಅದೋ ಬರುವ
ಇದೋ ನಲಿವರಂಗ | ಇದೋ ನಗುವ ಪ
ಇನಬಿಂಬವದನಾ | ಭ್ರಮರಕುಂತಲ ಘನ
ಜನಮನರಂಜನ ಅದೋ ಬರುವ ಅ.ಪ
ಶರನಿಧಿಮಂದಿರ ಭುವನಮನೋಹರ
ಶರಣರಮಂದಾರ | ಅದೋ ಬರುವ
ಸುರಗಂಗೆಯ ಪೆತ್ತವ ಭಕ್ತರಬಾಂಧವ
ವರಮಾಂಗಿರಿ ಮಾಧವ | ಅದೋ ಬರುವ ೧
ಪರಿಮಳ ಹೂಹಾರ ಮೆರೆವ ಮಾಣಿಕಸರ
ಪರಿಪರಿ ಮಣಿಹಾರ ಧರಿಸಿರುವ
ಶರಣರಭೀಷ್ಟವ ಸಲಿಸುವೆನೆನ್ನುವ
ಮುರಳಿಯನೂದುವ | ಅದೊ ಬರುವ ೨
ಕುಣಿ ಕುಣಿದಾರೈವ ತರುಣಿ ರಾಧೆಯತವ
ಮಣಿಯೆನಿಸುವ ದೇವ ಅದೋ ಬರುವ
ವೇಣುವನೂದುವ ಜಾಣನ ಪಾದವ
ಕಾಣುವ ಭಾಗ್ಯವ ನೆರೆ ಪಡೆವ ೩
ಇವನೆಲೆ ಕಂಸಾರಿ ಇವನೆ ಭಕ್ತರ ಸಿರಿ
ಇವನೆಲೆ ದುರುಳಾರಿ ವರನೃಹರಿ
ಇವನೆಲೆ ಮಾಂಗಿರಿಶೃಂಗವಿಹಾರಿ
ಇವನಹುದೆಮ್ಮಯ ಅಮಿತಸಿರಿ ೪

೯೮

ಆನಂದ ಗಂಭೀರ ನೀಲಾಂಗ ರಂಗ
ದಾನವ ಭಂಜನ ಹರೇ ಹರೇ ಪ
ಮುನಿಜನ ವಂದಿತ | ವನರುಹ ಲೋಚನ
ಘನ ನೀಲಾಂಬುದಸಮಾ ಹರೇ ಅ.ಪ
ವನಜನಯನ ಹರಿಕೇಶವ ಮಾಧವ
ಕನಕಾಂಬರಧರ ಗೋಪಾಲ
ದನುಜ ಕುಲಾಂತಕ ಧೇನುಕ ಸಂಹಾರ
ಅನಂತ ಶ್ರೀಧವ ಶ್ರೀಬಾಲಾ ೧
ಭುವನಮನೋಹರ ಮುರಳೀಧೃತಕರ
ಭವಸಾಗರದೂರ ನಮೋ ನಮೋ
ಪವನಾತ್ಮಜಕರ ಮಾಂಗಿರಿನಾಯಕ
ತವಸೇವಿತಪದ ನಮೋ ನಮೋ ೨

೯೯

ಆಪದ್ಬಾಂಧವ ಅನಾಥರಕ್ಷಕ
ಶ್ರೀಪತಿಕೇಶವ ಒಲೀ ಒಲೀ ಪ
ತಾಪನ ಸನ್ನುತ ಕೋಪಿಸಲೇತಕೆ
ಗೋಪೀನಂದನ ನಲೀ ನಲೀ ಅ.ಪ
ಘಳಿಗೆ ಘಳಿಗೆ ಭಜಿಸುವರೆಡೆಯಲಿ
ಕೊಳಲಿನ ನಾದವನುಲೀ ಉಲೀ
ನಳಿನನಾಭ ಮಾಂಗಿರಿಪತಿಯೆನ್ನಯ
ಕೊಳೆಯಾವರಣವ ಸುಲೀ ಸುಲೀ || ೧
ವಂದಿಸುವಗಾನಂದವನೀಯಲು
ಮಂದಹಾಸದಿಂ ಮಣೀ ಮಣೀ
ನೊಂದಿಹ ಭಕ್ತರ ಬಂಧನ ನೀಗಲು
ನಿಂದು ನಲಿದು ನೀ ಕುಣೀ ಕುಣೀ ೨
ಪಾಡಿಪೊಗಳಿ ಕೊಂಡಾಡುವರೆಡೆಯೊಳು | ದಯ
ಮಾಡಿ ನೋಡಿ ನೀ ದಣೀ ದಣೀ
ಬೇಡಿದ ವರಗಳ ನೀಡುತೆ ಭಕ್ತರು
ಮಾಡಿದ ಪಾಪವ ಸೆಣೀ ಸೆಣೀ ೩

೧೦೦

ಎಲ್ಲಿರಲಾರನು ಚೆಲುವ ಗೋಪಾಲ
ಮೆಲ್ಲುಲಿಗೊಲಿವನು ಇಲ್ಲಿರಲಾರನೆ ಪ
ಕ್ಷುಲ್ಲಕರಿರುವೆಡೆ ನಿಲ್ಲಲಾರನು ದಿಟ
ಎಲ್ಲ ಭಕ್ತರ ಮನೆಯಲಿ ನಲಿವನಿವ ಅ.ಪ
ಸಕಲ ತೀರ್ಥಂಗಳ ಸಕಲಕ್ಷೇತ್ರಂಗಳ
ಸಕಲೋತ್ಸವಗಳ ದರ್ಶನಯಾತ್ರೆ
ಭಕುತಿಗೆ ಸಾಧನ ಮಂತ್ರವು ಮಾನವ
ಭಕುತಿಯ ಭಜನೆಯೆ ಮುಕುತಿಯ ಮಾರ್ಗವು ೧
ಮಲಗಿ ಪಾಡಲು ಅವ ಕುಳಿತು ಕೇಳುವನಂತೆ
ಕುಳಿತು ಪಾಡಲು ಅವ ನಿಲ್ಲುವನಂತೆ
ನಿಲುತ ಪಾಡಲು ಅವ ನಲಿಯುವನಂತೆ
ನಲಿದರೆ ಒಲಿವ ಮಾಂಗಿರಿಪತಿಯಂತೆ ೨