Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೨೫೧

ನಿನ್ನ ಕಾಣಬಂದೆನಯ್ಯ ಚೆನ್ನಕೇಶವಾ
ನಿನ್ನ ಕಂಡು ನಲಿದೆ ರಮಾರನ್ನ ಮಾಧವಾ ಪ
ಜಳದಿ ಮುಳುಗಿ ತೊಳಲಿ ಬಳಲಿ ಬಹಳನೊಂದೆನು
ತಳವ ಬಯಸಿ ಬಳಸಿ ಬಳಸಿ ನಡುವೆ ನಿಂದೆನೊ
ಬಳಿಯ ಬಳಗವಿಲ್ಲ ನೋವಿನಿಂದ ಬೆಂದೆನೋ
ಸುಳಿಗೆ ಸಿಲುಕಿ ಅಳುಕಿ ಬಳುಕಿ ವಿಧಿಯ ಬೈದೆನೋ ೧
ಕರವ ಮುಗಿದು ಕರೆವೆ ನಿನ್ನ ಕರುಣದಿ ಬಾರೋ
ಮರುಗಿ ಮರುಗಿ ಕೊರಗಿದೆನಗೆ ಚರಣವ ತೋರೋ
ಕರಿಯ ಪೊರೆದೆ ತರಳಗೊಲಿದೆ ಮರುಕವ ಬೀರೋ
ಶಿರವ ಚರಣಕಿರಿಸುವೆ ಮಾಂಗಿರಿಯರಂಗ ಬಾರೋ ೨

೨೫೨

ನಿನ್ನ ಚರಣಾಂಬುಜವೇ ಶರಣವೆನಗೆ
ನಿನ್ನ ಧ್ಯಾನವೇ ನಿತ್ಯ ಕರ್ಮವೆನಗೇ ಪ
ನಿನ್ನ ಮಹಿಮೆಯ ಪೇಳ್ವ ಕಾರ್ಯವೇ ಭೋಜನ
ನಿನ್ನ ಚರಿತೆಯ ಕೇಳ್ವುದೆನಗೆ ಪಾನಅ.ಪ
ಗೋವಿಂದ ಗೋಪಾಲ ದೇವ ವನಮಾಲಾ
ಗೋವರ್ಧನೋದ್ಧಾರ ಕರುಣಾಕರ
ಶ್ರೀವಾಸುದೇವ ಹರಿ ಚಕ್ರೀ ಮುರಾರಿ
ದೇವ ದೇವೋತ್ತುಂಗ ಮಾಂಗಿರಿಯ ರಂಗ ೧

೨೫೩

ನಿನ್ನ ನಂಬಿದೆನಯ್ಯ ಚನ್ನಕೇಶವರಾಯ
ಇನ್ನಾದಾರೂ ಕೃಪೆಯ ತೋರಿಸಯ್ಯ ಪ
ಎನ್ನ ಕರ್ಮದ ಫಲದಿ ಬನ್ನಗೊಂಡಿಹೆನಯ್ಯ
ನಿನ್ನ ಚರಣವನೆನಗೆ ಸನ್ನಿಹಿತ ಮಾಡಯ್ಯ ಅ.ಪ
ನಡೆವುದೂ ನಿನಗಾಗಿ ನುಡಿವುದೂ ನಿನಗಾಗಿ
ಪಡೆವುದೂ ನಿನಗಾಗಿ ಎನ್ನಿಸಯ್ಯ
ಕೊಡುವವನು ನೀನಾಗಿ ಪಡೆವವನು ನಾನಾಗಿ
ಪೊಡವಿಯಲೆಷ್ಟುದಿನ ಬಾಳ್ವುದಯ್ಯ ೧
ಕಲಿಯುಗದಿ ಭಜನೆಯಿಂದಲೆ ಭವವು ಕಳೆವುದೆಂದು
ಉಲಿದರೈ ವ್ಯಾಸಾದಿ ಮುನಿವರ್ಯರು
ಸಲೆ ಲಕ್ಷಜನ್ಮದಲಿ ಕಲುಷ ಪೂರಿತನಾಗಿ
ಬಲುನೊಂದೆ ಕೈ ಪಿಡಿಯೊ ಮಾಂಗಿರಿರಂಗ ೨

೨೫೪

ನಿನ್ನನಲ್ಲದೆ ಯಾರ ಸನ್ನುತಿಸಿ ಫಲವೇನೋ
ಪನ್ನಗಾದ್ರಿನಿವಾಸ ಶ್ರೀವೆಂಕಟೇಶ ಪ
ಮನ್ನಣೆಯು ಬೇಡಯ್ಯ ಎನ್ನ ತಪ್ಪುಗಳನ್ನು
ಮನ್ನಿಸೆಂದೊರಲುವೆನು ಶ್ರೀವೆಂಕಟೇಶ ಅ.ಪ
ತಪ್ಪುಹಾದಿಯ ಹಿಡಿದು ಬೆಪ್ಪನಾಗಿರುವೆನ್ನ
ಒಪ್ಪಿ ಪರಿಪಾಲಿಸುವ ಅಪ್ಪ ನೀನೋ
ತಪ್ಪೊಪ್ಪುಗಳನೆಲ್ಲಾ ಒಪ್ಪಿಸಿದೆ ನಿನಗೆ
ತಿಮ್ಮಪ್ಪ ಮಾಂಗಿರಿವಾಸ ಕೈಹಿಡಿದು ಕಾಯೋ ೧

ಇಂದಿನ ಔಷಧಿಯ ರೂಪವಾದ

೨೫೫

ನಿನ್ನವ ನಾನಲ್ಲವೇ ರಂಗಯ್ಯ ನನ್ನವ ನೀನಲ್ಲವೇ ಪ
ನಿನ್ನವ ನಾನಲ್ಲವೆಂದರೆ ಬಿಡಲೊಲ್ಲೆ
ಎನ್ನ ಕೈಬಿಡಲೊಲ್ಲೆ ಎಂಬುದ ನಾ ಬಲ್ಲೇ ಅ.ಪ
ಧನವನು ಕೊಡಬೇಕೇ ರಂಗಯ್ಯ
ಮನೆಮಠಗಳು ಬೇಕೇ
ಕನಕಲಕ್ಷ್ಮಿ ವೈಕುಂಠವಿರಲ್ಕೆ
ಧನ ಮನೆ ಮಠಗಳ ಯೋಚನೆಯೇಕೆ ೧
ಜನಕನು ನೀನಲ್ಲವೇ ರಂಗಯ್ಯ
ತನಯನು ನಾನಲ್ಲವೇ
ತನುಮನಧನಗಳು ನಿನಗೇ ಸಲ್ಲವೇ
ಎನಗಿರ್ಪುದು ನಿನ್ನ ಭಜನೆಯೊಂದಲ್ಲವೇ ೨
ನನ್ನದೇನಿಹುದಯ್ಯ ರಂಗಯ್ಯ
ನಿನ್ನದೇ ನಿಜವಯ್ಯ
ನಿನ್ನ ಕೈಗೊಂಬೆ ನಾನಾಗಿಹೆನಯ್ಯಾ
ಎನ್ನವ ನೀ ಮಾಂಗಿರಿಯ ರಂಗಯ್ಯ ೩

೨೫೬

ನಿನ್ನ ಸೇವಕ ನಾನಲೆ ರಂಗಯ್ಯ |
ನನ್ನ ಸ್ವಾಮಿಯು ನೀನಲೆ ಪ
ನಿನ್ನ ನಾಮದ ಭಜನೆ ಯೆನ್ನುಸಿರಾಗಲಿ
ನನ್ನನುದ್ಧರಿಪುದು ನಿನ್ನದಾಗಿರಲಯ್ಯ ಅ.ಪ
ನಿನ್ನ ಚರಿತೆಯ ಕೇಳಲಿ ಕಿವಿ ನಿನ್ನನೀಕ್ಷಿಸಲೆನ್ನ ಕಂಗಳು
ನಿನ್ನ ಪೂಜಿಸಲೆನ್ನಕೈಗಳು ನಿನ್ನ ಹೊಗಳಲೆನ್ನ ರಸನೆಯು ೧
ತಂದೆ ನೀನೆನ್ನತಂದೆ ನಾನು ಅದರಿಂದ ಬಂದೆ ನಿನ್ನಯ ಹಿಂದೆ
ಮುಂದೆ ಪೋಗುತಲಿ ಒಂದೆ ನಿಮಿಷದಲಿ
ಕಂದನೆನ್ನಿದಿರಿಂದ ಮರೆಯಾದೆ ೨
ಅಂದಿನಿಂದ ಮುಕುಂದ ನಿನ್ನರವಿಂದಚರಣದ್ವಂದ್ವ ವಿರಹದಿ
ನೊಂದು ನಿಂದೆಡೆನಿಲ್ಲದಲೆವೆನೋ ತಂದೆ ಮಾಂಗಿರಿರಂಗ ೩

೨೫೭

ನಿನ್ನೊಳೇನ ಬೇಡಿಕೊಂಬೆನೋ ನಾ ಸನ್ನುತಾಂಗ ಪ
ನಿನ್ನ ಪಾದವನ್ನು ಭಜಿಪ ಮನದ ಹೊರತು ಅ.ಪ
ಮನೆಯು ಬೇಡ ಮಠವು ಬೇಡ
ಧನವು ಬೇಡ ಕನಕ ಬೇಡ
ಮನದ ಶುದ್ಧಿಯಿಂದ ನಿನ್ನ ನೆನೆವ
ಮನದ ಭಾವ ಹೊರತು೧
ಸತಿಯು ಸುತರು ಗತಿಯು ಮತಿಯು
ಹಿತರು ಸಖರು ನೀನೇ ಎಂಬ
ಮತವನಾಂತು ನಿನ್ನ ಪೂಜೆ
ವ್ರತವು ಸಾಕು ಎನ್ನದೇ ೨
ಗಂಗೆ ಸಿಂಧು ಯಮುನೆ ಕೃಷ್ಣೆ
ತುಂಗಭದ್ರೆ ತಪತಿ ಕಪಿಲೆ
ಮಂಗಳ ಕಾವೇರಿ [ಹೇವಇವತಿಯ]
ಮಾಂಗಿರೀಶ ನೀನೆ ಎನ್ನದೆ ೩

೨೫೮

ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ
ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ
ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ
ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ
ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ ೧
ಕಳೆದ ದುರಿತಾವೃತ ಉಳಿದುದು ವೋವರಾ
ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ]
ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ ೨
ಅನ್ಯರ ಭಜಿಸೆನು ಅನ್ಯರ ನುತಿಸೆನು
ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ
ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] ೩
ಕಾವಧೀರನು ಇನ್ನು ಅವನೇ ಶ್ರೀಹರಿ
ಸೇವಕರಿಗೆ ನಾನು ಸೇವಕನೆನ್ನುತಾ
ಭಾವಿಸೋ ದೇವದೇವಾ ಮಾವಿನಾಕೆರೆರಂಗ ೪

೨೫೯

ನೀ ಕೈಯ ಬಿಡಬೇಡವೋ ನರಹರಿ ಪ
ನೀ ಕೈಯ ಬಿಡಬೇಡ ನಾಕೆಟ್ಟರೂ ಬೇಡ
ನೀ ಕೊಟ್ಟ ಫಲವಿನ್ನು ಸಾಕೋ ಮಾಂಗಿರಿರಂಗ ಅ.ಪ
ನನ್ನ ಕಾಯುವ ಭಾಗ ನಿನ್ನದಾಗಿರಲಯ್ಯ
ಇನ್ನಾವುದನು ಕೇಳ್ವುದೆನ್ನ ಭಾವದೊಳಿಲ್ಲ
ಸನ್ನುತಾಂಗ ಕೃಷ್ಣ ಪನ್ನಗಶಯನ
[ಉನ್ನತದಿ ಸದಾ ಭಜಿಸುವೆನು ನಿನ್ನ] ೧
ಆಡುವಾ ನುಡಿಗಳು ನೋಡುವಾ ನೋಟವು
ಮಾಡುವ ಕಾರ್ಯವು ನಿನ್ನದಾಗಿರಲು
ಮೂಡಿಸು ಮನದಲ್ಲಿ ತವಪಾದಭಕ್ತಿಯ
ಜೋಡಿಸಿ ಕೈಗಳ ಮುಗಿವೆನೋ ರಂಗ ೨

ಇಲ್ಲಿ ಪ್ರಪತ್ತಿ ಧರ್ಮವಿದೆ

೨೬೦

ನೀ ತಂದೆ ನಾಕಂದನಯ್ಯ ರಂಗಯ್ಯ ಪ
ಪಾತಕಿಯು ನಾನೆಂದೆ ಘಾತಕನು ನಾನೆಂದೆ
ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ
ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ
ತಂದೆ ನೀ ಕೈಬಿಟ್ಟು ಹಿಂದೆ ನಿಂದೆ
ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ
ಮಂದರೋದ್ಧಾರ ಗೋಪಾಲ ತಾಪವತಂದೆ ೧
ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ
ಇಂದು ನರಜನ್ಮದಲಿ ಬಂದೆನಯ್ಯ
ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ
ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ೨
ಮುಂದಿನಾ ಪಥವಾವುದೆಂದರಿಯೆ ಮದನಾಂಗ
ಮಂದಮತಿಯನು ನೀಗಿಸೆಂದೆನುವೆ ರಂಗ
ಬಂದ ಸುಖದು:ಖಗಳನೊಂದೆಣಿಸು ನೀಲಾಂಗ
ಇಂದಾದರೂ ಕರವ ಪಿಡಿ ಮೋಹನಾಂಗ ೩
ಎಂದು ತವಪಾದಾರವಿಂದವನು ಸೇರಿಸುವೆ
ಅಂದು ಜನ್ಮವು ಸಫಲವೆಂದು ನಂಬಿರುವೆ
ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ
ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ ೪
ಮಂದಾಕಿನೀಜನಕ ನಂದಗೋಪನ ಕಂದ
ಇಂದೀವರಾಕ್ಷ ಮುಚುಕುಂದವರದಾ
ಎಂದೆಂದು ವಂದನೆಯ ಮಾಳ್ಪುದೆನಗಾನಂದ
ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ ೫

ಶಿವ-ಹರಿ ರೂಪದ

೨೬೧

ನೀನೆ ಗತಿಯೆನಗೆ ಮಾಂಗಿರಿಯ ರಂಗ ಪ
ನಾನಾ ಜನುಮವ ನಾನೇ ಪಡೆದವ
ಮಾನವ ಜನ್ಮವ ನೀನೆನಗಿತ್ತವ ಅ.ಪ
ಹಿಂದಿನ ಜನ್ಮದ ಅಂದವ ಮರೆಸಿದು
ದೊಂದುಪಕಾರವೋ ಇಂದಿರೆಯರಸ
ಇಂದೆನ್ನ ಬಳಿಗೆ ನೀ ಬಂದು ಪಾಲಿಸಬೇಕು
ಮುಂದಿನ ಭವ ಬೇಡೆಂದು ಬೇಡುವೆನಯ್ಯ ೧

೨೬೨

ನೀನೆ ಜಗದಾನಂದದಾಯಕ ರಂಗಾ
ದೀನರಕ್ಷಕ ನೀನೊಬ್ಬನೇ ರಂಗಾ ಪ
ಎನ್ನಂಥ ಶರಣಾರ್ಥಿ ಎಷ್ಟಾದರುಂಟಯ್ಯ
ನಿನ್ನಂಥ ದಾತಾರ ಇನ್ನುಂಟೆ ರಂಗಾ ಅ.ಪ
ಬಾಲನ ಪೊರೆದವನಾರಯ್ಯಾ ಪಾಂಚಾಲಿಗೆ ಒಲಿದವನಾರಯ್ಯ
ಆಲದೆಲೆಯ ಹಾಸಾಂತನಾರಯ್ಯಾ |
ಬಲುದೀನನು ನಾನೊಬ್ಬನಹುದಯ್ಯ೧
ಮಾನ ನಿನ್ನದು ಪ್ರಾಣ ನಿನ್ನದು ಸ್ಮರನಯ್ಯ
ನಾನು ನಿನ್ನವನೋ ಮಾಂಗಿರಿಯ ರಂಗಯ್ಯ ೨

೨೬೩

ನೀನೆ ತಾಯಿಯು ನೀನೆ ತಂದೆಯು ನೀನೆ ಬಾಂಧವನು ರಂಗ ಪ
ನೀನೆ ನಿತ್ಯನನಾದಿದೇವನು ನೀನೆ ಸತ್ಯಲೋಕೇಶನೀಶನು ಅ.ಪ
ಲೋಕಭರಿತ ಅನೇಕಚರಿತ ಲೋಕಪಾಲಕನು
ಲೋಕದುದಯ ವಿಭವ ಲಯಗಳೇಕಕರ್ತನು
ಶ್ರೀಕರಾ ಕೃಪಾಕರಾಸುರ ಭೀಕರಾಂಗನು
ನಾಕಪತಿ ಪಿನಾಕಿ ವಿನುತನೂ ಕಳತ್ರನು ೧
ನಂದಗೋಪನ ಕಂದ ಕೃಷ್ಣ ನೀನೆಂದು ನಂಬಿದೆನೋ
ಮಂದಹಾಸವದನವ ನಾನೆಂದು ನೋಡುವೆನೋ
ಸುಂದರಾರವಿಂದ ಪಾದವನೆಂದು ಪೂಜಿಪೆನೋ
ತಂದೆ ಮಾಂಗಿರಿರಂಗನೊಲವನೆಂದು ಪಡೆದೇನೋ೨

೨೬೪

ನೀನೊಲಿದು ನಿನ್ನ ಸೇವೆಯನು ಕೊಡು ಹರಿಯೇ ಪ
ನಾನೊರಲುವಾ ಕೂಗು ಕೇಳಿಸದೆ ದೊರೆಯೇ ಅ.ಪ
ಸಂಸಾರ ಸುಖಗಳನು ಅನುಭವಿಸಿ ಸಾಕಾಯ್ತು
ಹಿಂಸೆ ಚಿಂತೆಯ ರುಚಿಯ ತಿಳಿದುದಾಯ್ತು
ಹಂಸನೀರೊಳಗಿದ್ದು ನೀರರಿಯದಂತಾಯ್ತು
ಕಂಸಾರಿ ಸಾಕಿನ್ನು ಭೂಮಿ ಬೇಸರವಾಯ್ತು ೧
ಶತಪಾಪಿ ನಾನಾಗಿ ಪತಿತಜನ್ಮವನಾಂತು
ವ್ರತ ನೇಮ ನಿಷ್ಠೆಗಳ ಮರೆತು ಕುಳಿತು
ಮಿತವಿಲ್ಲದನ್ಯಾಯಕಾರ್ಯದಿಂ ಬಸವಳಿದು
ಸತಿಸುತೆಯರಾಟದಲಿ ನಿನ್ನ ಮರೆತೆ೨
ಕರುಣಾ ಸಮುದ್ರ ನೀನಲ್ಲವೇ ಹರಿಯೇ
ಕರಣ ಜನಪಾಲ ನೀನಲ್ಲವೇ ಹರಿಯೇ
ಕರವ ಮುಗಿವೆನು ಎನ್ನ ಅಪರಾಧಗಳ ಕ್ಷಮಿಸಿ
ಪೊರೆಯೋ ಮಾಂಗಿರಿರಂಗ ಕರುಣಾಂತರಂಗ೩

೨೬೫

ಬೆಳೆಬೆಳೆದು ಮನದಾಸೆಗಳ ಕಳೆದೆನಯ್ಯ
ಸುಳಿದಿರ್ಪುದೊಂದಾಸೆ ಅದ ಪೇಳ್ವೆನಯ್ಯ ಪ
ತೊಳತೊಳಲಿ ಬಳಬಳಲಿ ಬೆಂಡಾದೆನಯ್ಯ
ಕೊಳಕೊಳದಿ ಮುಳುಮುಳುಗಿ ತಳಮಳಿಪೆನು ಅ.ಪ
ಅದು ನಿನ್ನ ಬಳಿಸಾರ್ದು ನಿಲ್ವಪರಿಯಾಸೆ
ಅದು ನಿನ್ನ ಪಾದಗಳ ನೋಡಿ ನಲಿವಾಸೆ
ಅದು ನಿನ್ನ ನಾಮಗಳ ಪಾಡಿನುಡಿವಾಸೆ
ಅದು ನಿನ್ನ ನಸುನಗೆಯ ಬೇಡಿಕೊಂಬಾಸೆ ೧
ಅದು ನಿನ್ನ ಅಡಿಗಳಿಗೆ ಮುಡಿಯಿಡು[ವಾಸೆ]
ಅದು ನಿನ್ನ ಕೊರಳಿಗೆ ಮಾಲೆಯಿಡು[ವಾಸೆ]
ಅದು ನಿನ್ನ ಬೆಡಗುಗಳ ನುಡಿನುಡಿಯೊಳೆಸೆವಾಸೆ
ಅದು ಮಾಂಗಿರಿಯ ರಂಗ ನಿನ್ನ ಕೃಪೆಯಾಸೆ೨

೨೬೬

ಬೇಡುವೆನು ಇದನೊಂದ ಕರುಣಿಸೋ ಹರಿಯೇ
ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ
ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ
ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ
ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ
ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ ೧
ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ
ನಾರಿ ಹೊರದೂಡಿದ ತರಳನನು ಕಾಯ್ದೆ
ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ
ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ ೨
ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು
ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ
ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ
ನಿನ್ನ ಧ್ಯಾನವ ಮಾತ್ರ ಮಾಂಗಿರೀಶ ೩

೨೬೭

ಬೇಡುವೆನೊಂದು ಬೇಡತಕ್ಕುದು ಎಂದು
ಬೇಡ ವರಗಳೆನಗೆ ನೀಡು ಅದನೊಂದ ಪ
ಬೇಡ ಸುಖವು ಕೃಷ್ಣ ಬೇಡ ಫಲವಿಫಲ
ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ
ನಿದ್ರೆಸುಖವು ಬೇಡ ಭದ್ರಭೋಜನ ಬೇಡ
ತಿದ್ದಿದ ವಾಸ್ತುವುಬೇಡ ಮಧುರವು ಬೇಡ
ಮೃದುತರಾಂಬರ ಬೇಡ ಸದನ ವಿತ್ತವು ಬೇಡ
ಹೃದಯದಿ ರಾಮನಾಮ ಪರಿಹರಿಸಲು ಬೇಡ ೧
ನರಕ ಬಾಧೆಯ ಪರಿಹರಿಸಲು ಬೇಡ
ದುರಿತ ಸಂತತಿಗಳ ತೊರೆಯಿಸ ಬೇಡ
ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ
ನಿರುತ ನಿನ್ನಯ ಪದ್ಮ | ಚರಣವ ತೋರೆಂದು೨
ಮಾವಿನಕೆರೆರಂಗ ಶ್ರೀವನಿತಾ ಸಂಗ
ಭಾವಜಪಿತರಂಗ ಗರುಡ ತುರಂಗ
ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ
ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ ೩
ನೀ ಮರೆಯದಿರಯ್ಯ ನಾಮರೆಯುವನಯ್ಯ
ಕಾಮಿತವೊಂದಿದ ನೀಡೊ ಮುಕುಂದ
ಸೋಮಧರ ವಂದಿತ ರಾಮದಾಸಾರ್ಚಿತ
ಭೀಮವಿಕ್ರಮರೂಪ ಅಮಿತಕಲಾಪಾ ೪

ಧ್ಯಾನವನ್ನು ಮಾತ್ರ ಬೇಡುವ

೨೬೮

ಬೇಡುವೆನೋ ಗೋವಿಂದಾ ಬೇಡಬೇಡವೀ ಬಂಧ ಪ
ಪಾಡಿಪಾಡಲಾನಂದಾ ನೋಡಿ ನೋಡಲತ್ಯಾನಂದ ಅ.ಪ
ಕಡವರವೀಯಬೇಡ ಪೊಡವಿಯ ಸುಖಬೇಡ
ಕಡುಲೋಭ ಮೋಹಬೇಡ ದೃಢ ಭಕ್ತಿಯನು ಮಾತ್ರ ೧
ನರಕದ ಬಾಧೆಯು ಪರಿಹರಿಸಲು ಬೇಡ
ನಿರುತ ನಿಮ್ಮಯ ನಾಮ ಸ್ಮರಣೆ ಸುಖವು ಮಾತ್ರ ೨
ಜನನ ಮರಣಗಳ ಕೊನೆಗಾಣಿಸಲಿ ಬೇಡ
ಅನಿತು ಜನುಮದಿ ನಿನ್ನ ನೆನೆವ ಬುದ್ಧಿಯು ಮಾತ್ರ ೩
ಮಾಂಗಿರಿಯರಸನೆ ತುಂಗ ಕೃಪಾಂಗನೆ
ಹಿಂಗದೆ ನೀನೆನ್ನಂತರಂಗದೊಳಿರುವುದ ಮಾತ್ರ೪

೨೬೯

ಮನವು ಸ್ಥಿರವಾಗಲಿಲ್ಲ ಧನದಾಸೆ ಬಿಡಲಿಲ್ಲ
ಸನುಮತವೆಂಬುದಿಲ್ಲ ಅನುನಯವಿಲ್ಲ ಪ
ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ
ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ
ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ
ಪಂಚದ ಸುಖದೊಳು ಪಂಚೇಂದ್ರಿಯಗಳಾ
ಹಂಚುತೆ ಮನವನು ಚಂಚಲಗೈದುವಲ್ಲ
ಅಂಚೆಯಿಲ್ಲದ ಸರಸಿಯಂತಾಗಿಯೆನ್ನ ೧
ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ
ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ
ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು
ಹರಿಗೆರಗುವ ಶಿರವು ಗರುವವ ಬಯಸಿದೆ ೨
ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು
ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ
ರೊಕ್ಕ ವಿಷಯವ ಕರ್ಣ ಠಕ್ಕು ಕೌಳಿಯ ಮೆದುಳು
ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ ೩
ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ
ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ
ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ
ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ ೪

೨೭೦

ಮರೆಯುವೆ ಏತಕೋ ಗರುಡಗಮನ ಯೆನ್ನಾ
ದುರಿತವನಾರ್ಜಿಸಿ ಕೊರಗುವೆನ್ನನು ನೀ ಪ
ಹದಿನೆಂಟು ಸಾಸಿರ ಉದರದೊಳುದಿಸುತೇ
ಹೃದಯದಿ ನಿನ್ನ ನಾಮಾ ಒದಗಲಿಲ್ಲವೋ ೧
ಧರೆಯೊಳು ನರಜನ್ಮ ಹಿರಿದೆಂದು ಪೇಳ್ವರು
ತ್ವರಿತದಿ ನಿನ್ನ ನಾಮಸ್ಮರಣೆಯನೀಯದೆ ೨
ಸೋಮಶೇಖರನುತ ಕಾಮಜನಕ ಹರಿ
ಪ್ರೇಮದಿ ಪಾಲಿಸೆನ್ನ ರಾವಇದಾಸಾರ್ಚಿತಾ ೩

೨೭೧

ಮರೆವುದುಚಿತವೆ ರಂಗ ದಾರಿ ತೋರಿ ಪ
ಯೆನ್ನ ಕಾವರನ್ಯರಿಲ್ಲ ನೀಲಾಂಗ ಅ.ಪ
ಧರೆಯ ವೈಭವ ನಿತ್ಯವೆಂದು ಪರರ ಸಿರಿಯ ಹರಣಗೈದು
ನಿರುತ ದುರಿತಕಾರ್ಯಗೈದು ಪರಮ ಪಾಪಿಯಾದೆನೆಂದು ೧
ಕರುಣಶರಧಿ ನೀನೆಯೆಂದು ಸ್ಮರಿಸುವವರ ಪೊರೆವನೆಂದು
ಶರಣಜನರು ಬಳಿಗೆ ಬಂದು ಕರೆಯದಿಹರೆ ದೀನಬಂಧು ೨
ಅಂಗದಿಂದ ಗೈದ ಪಾಪ ಕಂಗಳಿಂದ ಗೈದ ಪಾಪ
ಭಂಗಗೈವರಿಲ್ಲ ಭೂಪ ಮಾಂಗಿರೀಶ ಎ್ಞÁನದೀಪ ೩

ಶ್ರೀನುತ ಮಾಂಗಿರಿ ವೆಂಕಟರಮಣಾ ೨

೨೭೨

ಮಾರ್ಗವೇ ಕಾಣಿಸದು ವೈಕುಂಠಕೆ
ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ
ಭೋರ್ಗರೆವುದು ಬಲಮಾರ್ಗದಿ ಜಲನಿಧಿ
ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ
ಹಿಂದೆ ಮೃಗಂಗಳ ಸಂದಣಿಯಾರ್ಭಟ
ದಿಂದ ಮನದ ದೈರ್ಯಕುಂದಿದುದಕಟ ಮ
ಹಾಂಧಕೂಪದೊಳೆನ್ನ ಎದೆ ಕುಸಿದು
ಬಂಧಿಸಿತೆನ್ನ ಕಾವ ಬಂಧುಗಳಿಲ್ಲ ೧
ಕೂಪದಿ ಕ್ರಿಮಿಗಳು ಕೋಪಿಸಿ ತನುವನು
ವ್ಯಾಪಿಸಿ ಕಡಿಯೆ ಸಂತಾಪವನಾಂತೆ
ಈ ಪರಿಯೆಲ್ಲವು ತಾಪತ್ರಯಂಗಳ
ಧೂಪ ದೀಪಗಳ ಪಾಪದ ಫಲವೋ ೨
ದಡವನು ಕಾಣದೆ ತಡಬಡಿಸುವೆನೋ
ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ
ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ
ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ ೩

೨೭೩

ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ
ಯಾಕೆನ್ನಯ ಕರೆ ಕೇಳುವುದಿಲ್ಲೋ ಪ
ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ
ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ
ತರಳ ಧೃವನ ಮೊರೆ ಕೇಳಿಸಿತಲ್ಲ
ಕರಿ ಎತ್ತಿದ ಸುಮ ಕಾಣಿಸಿತಲ್ಲ
ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ
ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ ೧
ಅಗಣಿತ ಗೋಪಿಯರೆಡೆಯಲಿ ನಲಿದೆ
ನಗಧರನಾಗಿ ಗೋಪಾಲರ ಪೊರೆದೆ
ಖಗನಿದ್ದೆಡೆಗೇ ಭರದಲಿ ನಡೆದೆ
ನಗುಮೊಗದರಸ ಮಾಂಗಿರಿಯ ರಂಗಯ್ಯ೨

೨೭೪

ಯಾಕೆ ನಿರ್ದಯವೋ ದೇವ ದೇವ ಸ್ವಭಾವ
ಯಾಕೆ ಮರೆತೆ ದೇವಾ [ಎನ್ನನು] ಪ
ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ
ಕಾಕುಮನುಜನೆಂದು ನೀಕರಿಸಿದೆಯೋ ಅ.ಪ
ಉದರ ಪೋಷಣೆಗಾಗಿ ವಿಧ ವಿಧ ದೇಶದಿ
ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ
ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ
ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು೧
ಪರರ ನಿಂದನೆ ಗೈದೆ ನೆರೆಯವರನು ಕೊಂದೆ
ಪರರ ಸ್ವತ್ತನು ತಂದೆ ಪರರನ್ನವನು ತಿಂದೆ
ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ
ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ ೨
ಸಾವು ಜನ್ಮಂಗಳಿಂದ ನೋವು ಬಂಧನವಡೆದು
ಬೇವಿನಂದದೆ ದುರ್ಗುಣಭಾವವ ತಳೆದೆನೋ
ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ
ಸಾವುನೋವನು ಬಿಡಿಸೊ ಮಾವಿನಕೆರೆರಂಗ ೩

೨೭೫

ಯಾರ ಪಾಡಿದರೇನು ಯಾರ ಬೇಡಿದರೇನು
ಯಾರು ಕೈಹಿಡಿದೆತ್ತಿ ಪಾಲಿಸುವನು ಪ
ನೀರಜಾಸನ ನೊಂದು ನೂರುವರ್ಷ ಬಾಳೆಂದ
ಮಾರವೈರಿಯು ಕರ್ಮ ಕಳೆಯಲೆಂದು ಅ.ಪ
ವೀರಪಾರ್ಥನು ಧುರದಿ ಹೊರಾಡಬೇಕೆಂದ
ಮಾರುತಿಯಶ್ರೀರಾಮ ಕರುಣೆ ಬರಲೆಂದ
ನಾರದನು ನಾರಾಯಣನ ಮಂತ್ರ ಭಜಿಸೆಂದ
ಕಾರಣದಿ ಮಣಿವೆ ಮಾಂಗಿರಿಯರಂಗ ಗೋವಿಂದ ೧

೨೭೬

ಯಾವಪರಾಧ ಮಾಡಿದೆನೋ ರಂಗ
ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ
ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ
ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ
ಯಾವ ಎಳಗೂಸನು ಬಾವಿಗೆ ತಳ್ಳಿದೆ
ಯಾವ ತಪಸಿಗೆ ಭಂಗವಗೈದೆ
ಯಾವ ದಂಪತಿಗಳ ಬೇರೆಗೈದೆನೊ ರಂಗ
ಜೀವನು ನಾನೇನ ವಂಚನೆಗೈದೆನೊ ೧
ಅಪರಾಧಂಗಳು ವಿಪರೀತವಾದರೂ
ವಿಪುಲ ಕೃಪಾಕರ ನೀನಹುದಯ್ಯ
ಅಪಕೃತಿಗೈದರೂ ಉಪಕೃತಿಗೈವೆ ನೀ
ಕುಪಿತನಾಗದೆ ಕಾಯೋ ಮಾಂಗಿರಿರಂಗ ೨

೨೭೭

ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ
ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ
ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ
ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ
ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ
ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ ೧
ವೇದಗಳ ನಾನೋದಿ ಅರಿಯೇ ಸಾಧು ಸಂಗಮ
ಭೇದಗೈದೆ ಗರ್ವದಿಂದೆ ವೇದವೇದ್ಯನೆ ೨
ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ
ಮಾಂಗಿರೀಶ ನಿನ್ನ ನಾಮಭೃಂಗವ ತೋರೈ ೩

೨೭೮

ವಂದಿಸುವೆನನವರತ ಇಂದಿರೇಶಾ ಪ
ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ
ಹಿಂದೆ ಜನುಮಾಂತರದಿ ಬಂಧಕೋಟಿಯ ಪಡೆದೇ
ಇಂದು ನರಜನುಮದೊಳು ನೊಂದೆನಯ್ಯ
ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ
ಸುಂದರ ಪಾದಾಂಬುಜವನೆಂದೆಂದು ತೋರೆಂದು೧
ನರಜನ್ಮ ಹಿರಿದೆಂದು ಅರಿತವರು ಪೇಳುವರು
ನರನಾಗಿ ನಾ ಜನಿಸಿ ಗರುವದಿಂದಾ
ಸಿರಿಯಾಸೆಯಿಂದ ಮದ ಪರವೈರ ಲೋಭಗಳ
ದುರಿತಗಳನಾರ್ಜಿಸಿದೆ ಪೊರೆಯೊ ದೇವ ೨
ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ
ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ
ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ
ತಡವೇಕೆ ಎನ್ನ ಕೈಪಿಡಿಯೊ ಗೋಪಾಲ ೩
ಜಗದೊಡೆಯ ನೀನೆಂದು ಖಗರಾಜ ಪೊತ್ತಿಹನು
ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ
ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು
ನಗಬೇಡವೈ ಪಾದಯುಗಗಳನು ತೋರೆಂದು೪
ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ
ಮುನ್ನಿಗಿಂತೆಂಟುಮಡಿ ಜನುಮ ಬರಲಿ
ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ
ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ೫

೨೭೯

ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ
ಭಾಗವತಪ್ರಿಯ ಸಾಗರತನಯಾ |
ವಾಗೀಶ ಸದಯಾ | ಪೂಜಿತ ಪಾದದ್ವಯ
ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ
ನಾಗಭೂಷಣಹೃದಯಾ ಸದಯಾ ಅ.ಪ
ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ
ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ
ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ
ಪಡೆದನು ಪದವಿಯ ತಾ ವಿನೀತ ೧
ಅಜಮಿಳವರದನೆ ಗಜರಾಜಗೊಲಿದನೆ
ಸುಜನ ಸಮ್ಮಾನಿತನೆ ಮಾಂಗಿರಿಯರಸನೆ
ಅಜಸುರ ವಿನುತನೆ ರಾಮದಾಸಾರ್ಚಿತನೆ
ಭಜಕ ವಾರಿಧಿಸೋಮ ವಿರಾಮಾ ೨

೨೮೦

ಶ್ರೀವರನೆ ಬಾ ಮುಕುಂದ ಮಾಧವ
ಕಾವರನ್ಯರು ಇಲ್ಲ ಗೋವಿಂದ ಕೇಶವ ಪ
ವೇದವಿದಿತ ಹರಿ ಸಾದರ ಮುರವೈರಿ
ಮೇದಿನೀಪತಿ ಕೋದಂಡ ಸುವಿಹಾರಿ೧
ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ
ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ ೨
ಮಂಗಳ ಸುವಿಲಾಸ ಶೃಂಗಾರ ಭಾನುಭಾಸ
ಮಾಂಗಿರಿವರವಾಸ ರಂಗೇಶ ಶ್ರೀನಿವಾಸ ೩

೨೮೧

ಶ್ರೀವರ ಶ್ರೀಕರ ಶುಭಕರನೇ
ಪಾವನ ಸಂಪದನೇ ವರದನೇ ಪ
ಕಾವನು ಈವನು ಜೀವನು ನೀನೆ
ದೈವವು ನೀನೆ ನವನಿಧಿಯು ನೀನೆ
ಆವನು ಇನ್ನಾರನೂ ಅರಿಯೆನೆ ೧
ತಂದೆಯು ತಾಯಿಯು ಮಾವನು ಭಾವನು
[ಎಂದಿಗೆ ಇರುವನ ಪ್ರಿಯನು ಸಹಾಯನು
ತಂದೆ ಮಾಂಗಿರಿನಿಲಯನೆ ಅಪ್ರಮೇಯನು ಜೀಯನು ೨

೨೮೨

ಸನಕಾದಿ ಮುನಿವಂದ್ಯ ವಿನತಾಸುತಾನಂದ
ನಿನಗೇಕೆ ದಯಬಾರದೋ ಪ
ನಿನಗಾಗಿ ಕಾದಿರುವೆ ಮನಸಾರೆ ವಂದಿಸುವೆ
ವನಜಾಕ್ಷ ಕರುಣಾಳು ನೀನಲ್ಲವೇ ಅ.ಪ
ಕನಸಲ್ಲಿ ನನಸಲ್ಲಿ ನಡೆಯಲ್ಲಿ ನುಡಿಯಲ್ಲಿ
ಮನಸಲ್ಲಿ ಕ್ರಿಯೆಯಲ್ಲಿಯಾವಾಗಲೂ
ತನುಧ್ಯಾನ ಮನವೆಲ್ಲ ನಿನಗೆ ಅರ್ಪಿತವಯ್ಯ
[ಅನುದಿನವು ಕೈಪಿಡಿಯೋ ಮಾಂಗಿರಿರಂಗಯ್ಯ] ೧

ಶ್ರೀವೈಷ್ಣವ ತತ್ವದ

೨೮೩

ಸರಿತಪ್ಪುಗಳ ಗೊಡವೆ ನನಗೇತಕೋ
ಸರಿತಪ್ಪ ನಡೆಸುವವನು ನೀನಾಗಿರೇ ಪ
ಹರಿ ನಿನ್ನ ಕೈಗೊಂಬೆ ನಾನಾಗಿರೆ
ಪರಿಪರಿಯ ಯೋಚನೆಯು ನೀನಾಗಿರೇ ಅ.ಪ
ಹಗಲಿರುಳ ಬಗೆ ಭಾವ ಎನಗೇತಕೆ
ನಗುವಳಲ ಶೋಕಂಗಳು ಇನ್ನೇತಕೇ
ಜಗವೆಲ್ಲ ತುಂಬಿರುವೆ ಭಯವೇತಕೆ
ಭಗವಂತ ನಿನ್ನದಯೆ ಇರದೇತಕೆ ೧
ಹರಿಚರಣ ಶರಣೆಂಬುದೆನಗಾಗಲಿ
ಕರವಿಡಿದು ನಡೆಸುವುದು ನಿನಗಾಗಲೀ
ಗುರುದೇವ ನೀನೆಂಬುದರಿವಾಗಲೀ
ಸಿರಿ ಮಾಂಗಿರಿಯರಂಗ ದಯೆದೋರಲಿ ೨

೨೮೪

ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ
ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ
ಹದಿನೆಂಟು ಸಾಸಿರ ವಿಧವಿಧ ಜನ್ಮವ
ಮೊದಲು ಕಳೆಯುತಲೀಗ ನರನಾಗಿ ಜನಿಸೀ
ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ
ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ ೧
ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು
ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ
ಪರಮಪಾತಕ ಗೈದು ನರಕಕೆ ಪೋಪೆನ್ನ
ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ ೨
ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ
ಕರುಣಾಕರ ದೇವ ಸಿರಿಕಾಂತನೇ
ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ
ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು ೩
ಗಂಗೆಯ ಜನಕನೆ ಮಂಗಳ ಮೂರುತಿ
ಮಾಂಗಿರಿವರವಾಸ ಶ್ರೀಶ್ರೀನಿವಾಸ
ಅಂಗಜಾತನ ತಾತ ಶೃಂಗಾರ ಪೂರಿತ
ಭಂಗ ಮಾಡಿಸಬೇಡ ರಂಗೇಶ ಭವಬೇಡ ೪

೨೮೫

ಸಾರಸ ಚರಣವ ತೋರೋ ನಿನ್ನ
[ಪಾರ] ಕರುಣಾಮೃತವನು ಬೀರೋ ಪ
ಮುರಳೀಧರ ಕೃಷ್ಣ ಬಾರೋ ಎನ್ನ
ಹೃದಯ ಮಂದಿರವನು ಸೇರೋ ಅ.ಪ
ನಿನ್ನ ಹೊರತು ಕೈ ಹಿಡಿಯುವರಾರೋ
ಎನ್ನ ಭವಗಳ ಹರಿಸುವರಾರೋ
ಎನ್ನಪರಾಧವ ಮನ್ನಿಸಿ ಬಾರೋ
ಪನ್ನಗಶಯನ ನೀ ನಸುನಗೆದೋರೋ ೧
ನಿನ್ನ ದರ್ಶನಕಾಗಿ ಹಾತೊರೆಯುವೆನೋ
ನಿನ್ನ ಸೇವೆಗೆ ಎನ್ನ ತೆತ್ತಿಹೆನೋ
ನಿನ್ನ ಪರೀಕ್ಷೆಗೆ ಫಲ ನಿನಗೇನೋ
ಚೆನ್ನ ಮಾಂಗಿರಿರಂಗ ಮುನಿಸೆನ್ನೊಳೇನೋ ೨

೨೮೬

ಸುರೇಶ ಪದವಿಯ ಬೇಡುವನಲ್ಲ
ನರೇಶ ಭಾಗ್ಯವ ಕೋರುವನಲ್ಲ ಪ
ಗುರೂಪದೇಶವ ಮರೆಯುವನಲ್ಲ
ಪರೇಶ ಸ್ಮರಣೆಯ ಬಿಡುವವನಲ್ಲ ಅ.ಪ
ಜನನ ಮರಣಕೇ ಹೆದರುವನಲ್ಲ
ಜನುಮಗಳು ಬೇಡ ಎನ್ನುವನಲ್ಲ
ಮನದಿ ವ್ಯಾಮೋಹವ ಪಡೆಯುವನಲ್ಲ
ವನಜನಾಭನ ನಾಮ ಮರೆಯುವನಲ್ಲ೧
ನಿನ್ನ ಚರಿತಗಳ ಕೇಳದೆ ಬಿಡೆನು
ನಿನ್ನ ಮೂರ್ತಿಯ ನೋಡದೆ ಬಿಡೆನು
ನಿನ್ನ ಪಾದಾರ್ಚನೆ ಮಾಡದೆ ಬಿಡೆನು
[ನಿನ್ನ ನಾಮಂಗಳ ನುತಿಸದೆ ಬಿಡೆನು] ೨
ಮಾಂಗಿರಿಪತಿ ನಿನ್ನ ಒಲಿಸದೆ ಬಿಡೆನು
ಕಂಗಳಿಂದಾನಂದ ಪಡೆಯದೆ ಬಿಡೆನು
ಅಂಗಾಂಗದ ಸೇವೆ ಮಾಡದೆ ಬಿಡೆನು
ರಂಗ ಸಮರ್ಪಣ ಎನ್ನದೆ ಬಿಡೆನು ೩

ನಿಂದಾಸ್ತುತಿಗಳು

೨೮೭

ಎನ್ನಪರಾಧವೇನೋ ಮಾಂಗಿರಿ ರಂಗ
ಎನ್ನ ಕೈಬಿಡುವೆಯೇನೋ ಪ
ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು
ಎನ್ನ ಬೆಂಬಿಡದೆ ಕಾಯುವ ಭಾರ ನಿನಗಿರೆ ಅ.ಪ
ತಾಪಸಿಯಂತೆ ನಿನ್ನ ವಕ್ಷವನೊದ್ದು
ತಾಪವನು ತೋರ್ಪಿದೆನೇನೋ
ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ
ಭೂಪ ಶಿಶುಪಾಲನಂದದೆ ಬೈದೆನೇ
[ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ
ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ ೧
ಜಾರಚೋರನು ನೀನೆಂದು ಯಶೋದಗೆ
ದೂರು ಹೇಳದೆನೇ
ಕೌರವನಂತೆ ಕಂಬಕೆ ಕಟ್ಟಿರೆಂದೆನೆ
ಸಾರಿದೆನೇನೋ ಸತ್ರಾಜಿತನಂತೆ
ಚಾರುರತ್ನವ ಕದ್ದ ಅಪರಾಧಿ ನೀನೆಂದು
ಆ ರುಕ್ಮನಂತೆ ನಾರಿಚೋರನೆಂದೆನೆ ೨
ಪುರುಹೂತನಂತೆ ನಾನು ಮಳೆಯಕರೆದು
ಗಿರಿಯನ್ನು ಹೊರಿಸಿದೆನೇ
ಧರಣಿಯ ಬಲಿ[ಯಿಂದ ಬೇಡುತಲಿರುವಾಗ
ವರಮುನಿಯಂತೆ ಕಿಂಡಿಯ ಮುಚ್ಚಿದೆನೆ]
ನರನಂತೆ ರಥವ ನಡಸೆಂದು ಹೇಳಿದೆನೇನೋ
ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ ೩

೨೮೮

ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ
ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ
ಮುನಿಸತಿ ಶಿಲೆಯಾಗಿ ವನಜನಾಭಾಯೆಂದು
ನೆನೆಯುತಲಿಲ್ಲವೋ ಮನ ಮೋಹನಾ
ದನುಜನ ಕೈವಶಳು ನೀನಲ್ಲ ಭೂದೇವಿ
ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ ೧
ಕರಿರಾಜ ಸಲಿಲದೇ ದುರುಳ ಮಕರಿಯಿಂದೆ
ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ
ಸುರುಚಿರವೇದಗಳ ದುರುಳ ಕದ್ದೊಯ್ಯಲಿಲ್ಲ
ಸರಸಿಜಾನನನೀಗ ಚರಣಕೆರಗಲಿಲ್ಲ ೨
ಹದಿನಾರು ಸಾವಿರ ಸುದತೀ ಮಣಿಯರೆಲ್ಲ
ಮದನಾಂಗ ಬಾರೆಂದು ಕರೆಯಲಿಲ್ಲ
ವಿದಿತ ಮಂದರಗಿರಿ ಉದಧಿ ನಿನ್ನರಸಲಿಲ್ಲ
ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ ೩
ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ]
ನೂರಾರು ಕೈಯವ ಕರೆಯಲಿಲ್ಲ
ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ
ವರತುರುಗವೇರಿ ಧುರಕೆ ಬಾರೆಂಬರಿಲ್ಲ೪
ಕಾಮಿತವೀಯೆಂದು ಪ್ರೇಮದಿ ಭಜಿಸುವ
ಪಾಮರರಿಲ್ಲಿಗೇ ಬರುತಿರ್ಪರೋ
ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ
ಕಾಮಹರನೆ ಬಾರೊ ರಾಮದಾಸಜೀವ ೫

ಸೊಗಸಾದ ನಿಂದಾಸ್ತುತಿ

೨೮೯

ದಯವ ಮಾಡೋರಂಗ ನಯದಿ ನೋಡೊ
ದಯವು ನಯವು ನಿನಗಿರದಿದ್ದರೆ ಎನಗೆ ಕೇಳೊ ಪ
ಭಯವು ಲಯವು ನಿನಗಿದೆಯೆಂಬುದು ನನ್ನ ಹಾಡೊ
ಭಯ ಭೀತಿಗಳನು ಬಿಡಿಸುವುದೊಂದೇ ನಿನ್ನ ಪಾಡೊ ಅ.ಪ
ತನುವು ಧನವು ಚಿರವಲ್ಲೆಂಬುದ ನಾನು ಬಲ್ಲೆ ರಂಗ
ಜನನ ಮರಣ ಮತ್ತಿರಲೆಂಬುದು ನೀನು ಬಲ್ಲೆ
ಮನಸು ನೆನಸು ನಿನ್ನೆಡೆಗಿರೆ ವೈಕುಂಠವಲ್ಲೆ ರಂಗ
ದಿನವು ಸ್ಮರಣೆಯ ಗೈಸುವ ರೀತಿಯ ನೀನೇ ಬಲ್ಲೆ ೧
ಹಿಂದಿನ ಜನ್ಮದ ಪಾಪಗಳೆಲ್ಲವನಳಿಸೋ ರಾಮ
ಇಂದಿನ ಜನ್ಮದ ನಾಮಸ್ಮರಣೆಯ ನುಡಿಸೋ ರಾಮ
ಮುಂದಿನ ಭವಗಳ ನೀಗಿಸಿ ಕಾಯೋ ಸೀತಾರಾಮ
ಇಂದಿರೆಯರಸ ಮುಕುಂದ ನೀ ಮಾಂಗಿರಿ ರಂಗಧಾಮ ೨

ನಿಂದಾಸ್ತುತಿಯಂತಿದೆ

೨೯೦

ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ
ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ
ಮೂರೇಳವತಾರ ನಿನಗೆ ನೂರೆಂಟು ಎನಗೇ೧
ನಿನಗೆ ಸುರಮುನಿಗಣ ಎನಗೆ ಭೂಸುರಗಣ
ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ೨
ಜಗವು ಉದರವೆಂದು ಬಗೆದು ಪೋಪೆನೀ
ಜಗದ ಸರ್ವಾರ್ಥವ ಮಿಗೆ ಬಯಸುವೆನಾ ೩
ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ
ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ ೪
ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ
ನಿರುತ ತೃಪ್ತತೆ ನಿನಗೆ ದುರಿತ ತೃಪ್ತತೆ ಯೆನಗೆ ೫
ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು
ರಂಗನಾಥ ಶ್ರೀಶ ತುಂಗವಿಕ್ರಮ ನೀ ೬
ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ
ಕಮಲಾಕ್ಷ ಪೊರೆದೇವ ರಾಮದಾಸನುತಾ ೭

೨೯೧

ನಿನ್ನ ತಂತ್ರಗಳೆಲ್ಲ ಬಯಲಾಯ್ತೊ ರಂಗ
ನಿನ್ನ ಕಥೆಯ ಕೇಳಿ ಭಯವಾಯ್ತೋ ಪ
ನಿನ್ನ ವಂಚನೆಗೇ ಜಯವಾಯ್ತೋ ಅ.ಪ
ಶರನಿಧಿಯ ಮಥನದಿ ಗರಳವು ಜನಿಸಲು
ಪರಶಿವನುಂಬುವ ಪರಿಗೈದೆಯೇನೋ
ತರುಣಿ ಸಂಜನಿಸಲು ಶರಗಳ ನೀಡಿ ದೈ
ತ್ಯರ ವಂಚಿಸಿದಾ ಪರಿ ಸಟೆಯೇನೋ ೧
ಧರಣಿಯನಿತ್ತನ ಶಿರವನು ತುಳಿದೆ
ಪರಿಗಣಿಸದೆ ತಾಯ ಕೊರಳನು ತರಿದೆ
ಪರಸತಿಯರ ಕೂಡ ನೆರೆ ನಲಿದಾಡಿದೆ
ಕರದಿ ಸನ್ನೆಯ ಮಾಡಿ ಕುರುಕುಲವಿರಿದೇ ೨
ಮದನ ಸುಂದರಿಯಾಗಿ ಸುಧೆಯ ಕುಂಭವ ಕೊಂಡೆ
ಅದಿತಿಯ ಸುತರಿಗೆ ಅದ ನೀನುಣಿಸಿದೆ
ಮಧುರುಚಿಯರಿತನ ಚಕ್ರದಿ ತರಿದೆ
[ಎದುರಿಸದೆವಾಲಿಯ ಮರೆಯಲಿರಿದೆ] ೩
ಪೊಡವಿಯೊಡೆಯನ ಕಡೆಗಣಿಸೀ ನಿನ್ನ
ಅಡಿಯಿಡೆ ಯಿದ್ದವನೊಡವೆರೆದೆ
ನುಡಿದು ಕರ್ಣನ ಕಂಗೆಡಿಸಿದೆ ಭೀಷ್ಮನ
ಕೆಡಹಿದೆ ಮಾಂಗಿರಿಯೊಡೆಯ ಗೋಪಾಲಾ ೪

೨೯೨

ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ
ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ
ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ
ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ
ಬೇಡಿದಮಣಿ ನೂರುಜನುಮ ಸಾಕಹುದುಂಟೆ
ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ ೧
ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ
ಮುಂದೆ ನಾನುಣಲೇನು ಬೇಡವಯ್ಯ
ಸಂದಿರ್ಪುವೈ ಸಾಲಸೋಲಂಗಳೇನಯ್ಯ
ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ ೨

ನಿನ್ನ ತಂತ್ರಗಳೆಲ್ಲ

೨೯೩

ಬೈಯದವನಿಗಿಂತಲೂ ಬೈಯುವವನೇ ಮೇಲು
ಹೊಯ್ಯದವಗಿಂತಲೂ ಹೊಯ್ಯುವವನೆ ಮೇಲು ಪ
ಬಾಯೆನಲು ಬರಲೊಲ್ಲೆ ಮಾಯಾಕಾರ ನಿನ್ನಅ.ಪ
ಒಬ್ಬ ಧರಣಿಯನೊಯ್ದ ಒಬ್ಬ ಖಡ್ಗವ ಹಿಡಿದ
ಒಬ್ಬ ಧರಣಿಯನೆ ಕದ್ದ ಒಬ್ಬ ಬೈದಾ
ಉಬ್ಬಿ ನೀ ಸಂತಸದಿ ಅಬ್ಬರಿಸಿ ಪರಿದೈದೆ
ಒಬ್ಬೊಬ್ಬರಿಗೂ ದಿವ್ಯ ದರ್ಶನವನು ೧
ಜಾರನೆಂದರು ಕೆಲರು ಚೋರನೆಂದರು ಕೆಲರು
ಪೋರನಿವನೆಂದರು ನಾರಿಯರು ಪಲರು
ಆರೇನ ಬೈದರೂ ದೂರಿ ನಿಂದಿಸಿದರೂ
ಸ್ಮರಿಸಿದಾ ನಿಮಿಷಾರ್ಧ ಹರಿ ನಿನ್ನ ಭಕ್ತರ ೨
ಇರಬಹುದು ಹಸಿವು ಬಾಯಾರಿಕೆಗಳಿಂದ
ಅರಿವು ನಿದ್ರಾ ನೀರಡಿಕೆಗಳ
ತೊರೆದು ಅರಸುವಾ ಸಮಯದಲಿ
ಬರುವೆ ನೀನದರಿಂದ ೩
ಇಳೆಯನೇ ತೆತ್ತವನ ತುಳಿದು ಕೈಸೆರೆ [ಮಾಡ್ದೆ]
ಹಳಿದು ನಿಂದಿಸಿದವನ ಬಳಿಗೆ ಹೋದೆ
ಮುಳಿಸಿನಿಂದೊದ್ದವನ ಕಾಲುಗಳ ನೀತೊಳೆದೆ
ಹಳಿವು ಬೈಗಳು ನಿನಗೆ ಹಿತವು ಮಾಂಗಿರಿಯ ರಂಗ ೪

೨೯೪

ನಾನೊಂದನಿತ್ತರೆ ನೀನೊಂದನೀಯುವೆ
ನಾನೀಯದಿದ್ದರೆ ನೀನೇನನೀವೆ ಪ
ನಾನು ಎಂಬುದು ಮಾತ್ರ ನಾ ನಿನಗಿತ್ತರೆ
ಏನನೀಯುವೆ ರಂಗ ದೀನದಯಾಳು ಅ.ಪ
ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ
ನವಫಲವನಿತ್ತವಳಿಗೆ ಒಲಿದೆ
ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ
ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ ೧
ಗಜರಾಜನಂದು ಪಂಕಜವೊಂದನಿತ್ತಂದು
ಅಜಗರನನು ಕೊಂದು ಸೌಜನ್ಯವನಿತ್ತೆ
ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು
ರಜತಪದವಿಯನಿತ್ತು ವಿಜಯ ನೀ ಗೈದೆ ೨
ಮಡದಿಮಣಿಯು ತಾನುಟ್ಟ ಪೀತಾಂಬರ
ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ
ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ
ಮೃಡನು ತಾನೇನು ಕೊಡಲೋ ಗೋವಿಂದಾ ೩
ಜಗಜಟ್ಟಿ ಹನುಮನು ಬಗೆದು ನಿನ್ನಯ
ದುಗುಡವ ಬಿಡಿಸಿದ ಬಗೆಯ ನೀನÀರಿತೂ
ಜಗದೊಳು ಸರಿಯಾದುಡುಗರೆಯಿಲ್ಲದೆ
ನಗುತ ನಿನ್ನನು ನೀನೆ ಸೊಊಸಿನಿಂದಿತ್ತೆ ೪
ನಾನೆಂಬುದಲ್ಲದೆ ಏನುಂಟು ಎನ್ನೊಳು
ನೀನೀವೆನಿದ ಮಾತ್ರ ಶ್ರೀನಾಯಕೇಶ
ಏನನಾದರೂ ಸರಿ ನೀನೀಯೋ ಮುರವೈರಿ
ನಾನು ನನ್ನದು ನಿನ್ನಧೀನ ಮಾಂಗಿರಿರಂಗ೫

ಹಿರಣ್ಯಾಕ್ಷ-ಹಿರಣ್ಯಕಶಿಪು

೨೯೫

ಶಯನ ಸುಖವೇ ಸುಖವೆ ರಂಗನಾಥ
ಭಯಗೊಂಡ ಭಕ್ತರೊಳು ದಯವಿಲ್ಲವೆ ಪ
ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ
ದುರಿತಗಳ ಹರಿಸೆಂದು ಬೇಡುವಾಗ
ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ
ಶಿರಬಾಗಿ ಪಾದಕೆ ವಂದಿಸುವಾಗ ರಂಗಾ ೧
ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ
ದೇವ ನೀನೋಬ್ಬನೇ ದಿಕ್ಕೆನುವಾಗ
ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ
ದೇವ ಎನ್ನಪ್ಪ ಬಾಯೆನುವಾಗ ರಂಗಾ ೨
ಸ್ವಾಭಿಮಾನದಿ ನೀನು ಲೋಕವನು ಮರೆವಾಗ
ಲೋಭಿ ನೀನೆನ್ನದೇ ಜಗವೆಲ್ಲ ರಂಗಾ
ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ
ನಾಭಿಗಂಟದೆ ಪೇಳು ಮಾಂಗಿರಿಯರಂಗ ೩

ಭಕ್ತ-ಭಗವಂತನಲ್ಲಿ

೨೯೬

ನಾನಿನ್ನ ತೆಗಳಿದೆನೇ ರಂಗಯ್ಯ
ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ
ನೀನೇತಕೆನ್ನೊಳು ದಯತೋರದಿರುವೆ
ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ
ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ
ನೀನೇ ಕಮಠನಾಗಿ ನಗವೆತ್ತಿ ನಿಂದೆ
ದಾನವ ಸಂಹಾರಕಾಗಿ ಸೂಕರನಾದೆ
ನೀನೇ ನರಹರಿಯೆಂದು ನುತಿಸಿದೆನಲ್ಲದೆ ೧
ಭೂಮಿಯನಳೆದವನೆಂದೆ ನೀನೇ
ಭೂಮಿಪರನು ಕೊಂದೆ ಎಂದೆ
ಭೂಮಿಜೆಯರಸ ರಾವಣವೈರಿಯೆಂದೆ
ಕಾಮಪಾಲನು ಹಲಧರನೆಂದೆನಲ್ಲದೆ ೨
ತರುಣಿದ್ರೌಪದಿಗಾಗಿ ಕುರುಕುಲವಿರಿದೆ
ತುರಗವನೇರಿ ದುಷ್ಟರನೆಲ್ಲ ತರಿದೆ
ಶರಣ ಜನರಿಗಾಗಿ ಹರಿಹರ ನೀನಾದೆ
ವರದ ಮಾಂಗಿರಿರಂಗ ನೀನೆಂದೆನಲ್ಲದೆ ೩

೨೯೭

ಮರೆಯಲಾರೆ ನಿನ್ನ ತೊರೆಯಲಾರೆ
ಮರೆತು ತೊರೆದು ಜೀವಿಸಲಾರೆ ಕೃಷ್ಣಮುರಾರೆ ಪ
ಹರಿಚರಣಂಗಳೆ ಶರಣೆನದಿದ್ದರೆ ನಾನಪರಾಧಿ ರಂಗ
ಕರುಣವ ಬೀರದೆ ಮರೆ ನೀನಾದರೆ ನೀನಪರಾಧಿ ೧
ಭಕ್ತಿ ವಿರಕ್ತಿಯ ಮಾರ್ಗವ ಬಿಟ್ಟರೆ ನಾನಪರಾಧಿ ರಂಗ
ಯುಕ್ತಿಯೊಳೆನ್ನನು ಕತ್ತಲೆಯೊಳಗಿಡೆ ನೀನಪರಾಧಿ ೨
ನೀನೇ ಗತಿಮತಿಯೆನಗೆನದಿದ್ದರೆ ನಾನಪರಾಧಿ
ಎನ್ನಪರಾಧವ ಮನ್ನಿಸದಿದ್ದರೆ ನೀನಪರಾಧಿ ೩
ಅಪರಾಧಗಳಿನ್ನಿಬ್ಬರಿಗೇತಕೋ ಕಮಲಾಂಗ
ಸುಪಥವ ತೋರುವ ಜಾಣ್ಮೆಯು ನಿನ್ನದು ಮಾಂಗಿರಿರಂಗ ೪

ಶ್ರೀಕೃಷ್ಣಬಾಲಲೀಲೆಗಳು

೨೯೮

ಅಕ್ಕಾ ಚಿಕ್ಕಮಕ್ಕಳ ನಡುವೆ
ನಕ್ಕು ನಲಿವ ಬಾಲ ಇವನಾರೆ ಪ
ಇಕ್ಕೆಲದಲಿ ಹೆಣ್ಣುಮಕ್ಕಳು ಭುಜದಿ
ಕೈಯಿಕ್ಕಿ ಬರುವನಿವ ನೋಡುವ ಬಾರೆ ಅ.ಪ
ಮುತ್ತಿನ ಗೊಂಚಲ ರತುನಕಿರೀಟ
ಸುತ್ತಲು ಕುಣಿಯುವ ಬಾಲೆಯರಾಟ
ಕತ್ತಿನ ಮಣಿ ಸರಗಳ ನಲಿದಾಟ
ಅತ್ತಿತ್ತ ಮಿಂಚಿನ ಕಡೆಗಣ್ಣೋಟ ೧
ನಸುನಗೆವದನ ಮರಕತರದನ
ಮಿಸುನಿಯ ಬಣ್ಣದ ಹೊಸವಸನ
ವಿಸರದ ಹೂಗಳ ಮಾಲೆಯ ಕೊರಳಿನ
ರಸಿಕನನೀಕ್ಷಿಸು ಎನ್ನುತಿದೇ ಮನ ೨
ಮೆಲ್ಲನೆ ನಡೆವನು ಅಲ್ಲಲ್ಲಿ ನಿಲುವನು
ಘಲ್ಲೆಂಬ ಕಿರುಗೆಜ್ಜೆ ಧರಿಸಿಹನು
ನಲ್ಲೆಯ ಗಾನಕೆ ಸರಿಕುಣಿಯುವನು
ಮೆಲ್ಲುಲಿವನು ಮತ್ತೆ ಕೊಳಲೂದುವನು ೩
ಬಾಯಲಿ ಜಗಗಳ ತೋರಿಸಿದನಂತೆ
ಮಾಯದ ನಾರಿಯ ಮಡುಹಿದನಂತೆ
ತೋಯಜಗಾತ್ರೆ ರಾಧೆಗೆ ಹಿತನಂತೆ
ಜೀಯನೀತನೆ ಗೋವಳನಂತೆ ೪
ಮದನ ಸುಂದರನು ಲೋಕ ಮೋಹಕನು
ಮುದವ ಬೀರುವನು ಮನವ ಸೆಳೆವನು
[ಸ]ದಯನು ಸಕಲರಿಗಭಯವನೀವನು
ಪದುಳದಿಕಾವ ಮಾಂಗಿರಿ ಪತಿಯವನು೫

೨೯೯

ಅಲ್ಲಿ ಇಲ್ಲಿ ಮೊಸರನು ಚೆಲ್ಲಿ
ಮೆಲ್ಲನೆ ಬಂದವ ಎಲ್ಲಿಹನಮ್ಮ ಪ
ಬಲ್ಲಿದರಲ್ಲಿ ಬಲ್ಲಿದನಂತೆ
ಇಲ್ಲಿಗೆ ಬಂದವ ಎಲ್ಲಿಹನಮ್ಮ ಅ.ಪ
ಗೆಜ್ಜೆ ಪಾಡಗ ಕಡಗ | ಝಣ ಝಣ
ಭಜ್ಜರ ರವವನು ಬೀರುವನಮ್ಮ
ಹೆಜ್ಜೆ ಹೆಜ್ಜೆಗಾನಂದವ ನೀಡುವ |
ಸಜ್ಜನು ಬಲ್ಲವ ಅವನಮ್ಮ ೧
ಅಂಗಳದಲ್ಲಿ ತಂಗುವನಲ್ಲ
ಹೊಂಗೊಳಲೂದುತ ಓಡುವನಮ್ಮ
ಮಂಗಳಾಂಗ ನೀಲಾಂಗನು
ಮಾಂಗಿರಿರಂಗನೆ | ಅವನೆನ್ನುವರಮ್ಮ೨

ಅತ್ಯಂತ ಸುಂದರ ಸಖೀಗೀತೆ

೩೦೦

ಆಡುವ ಬಾರೋ ಕೃಷ್ಣ ಓಡಿಬಾರೋ ಪ
ನಾಡೆ ನಿನ್ನ ನೋಡಬಯಸಿ ಹಾಡುವೆನ್ನ ಕಣ್ಣಮುಂದೆ ಅ.ಪ
ಓಡಿಬರುವೆ ನೀನು ಎಂದು ನೋಡಿ ಹಸುಗಳತ್ತ ಇತ್ತ
ಬೇಡುತಿಹವು ನಿನ್ನ ಬರವ ಮೋಡಿಯೇಕೆ ಕೊಳಲನೂದಿ ೧
ಚಿಣ್ಣರೊಡನೆ ನೀನು ಬಂದು ಬೆಣ್ಣೆಗಾಗಿ ಕರವ ನೀಡಿ
ಮಣ್ಣಮೆದ್ದನೆಂದು ತಾಯ ಕಣ್ಗೆ ತೋರ್ದೆ ಜಗವನೆಲ್ಲ ೨
ಪೊಂಗಲೀವೆ ಬಾ ಮುಕುಂದ ಹೊಂಗೊಳಲಾನಂದದಿಂದ
ತಂಗುವೆ ನಾ ನಿನ್ನ ಪಾದದಿ ಮಾಂಗಿರೀಶ ಮುದ್ದುರಂಗ ೩