Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೨೦೧

ಯತಿರಾಜಂ ಭಜರೇ ರಾಘವ ಸದ
ಗತಿ ತಂ ಭಜರೆ ಕಲುಷಿತ ಕುಟಿಲ ಮನಸೇ ಪ
ಯತಿಪಾದ ತೀರ್ಥವೆ ಗತಿಯೆಂಬರಸನಿಗೆ
ಪತಿತಪಾವನ ತನ್ನ ಪದವ ತೋರುವನಯ್ಯ ಅ.ಪ
ಗುರುವಚನವೇ ವೇದ ಗುರುನಾಮ ಸುಖದಾ
ಗುರುಪೂಜೆ ಪರಂಧಾಮ ಗುರುವೆ ಶ್ರೀರಾಮ
ಗುರುರಾಘವೇಂದ್ರ ಮಾಂಗಿರಿಯ ರಂಗಯ್ಯ
ಗುರುರಾಜ ಪ್ರಹ್ಲಾದ ಚಿರ ಸುಖದಾತಾರ ೧

೨೦೨

ರಾಘವೇಂದ್ರ ನಿನ್ನ ಸೇವೆಯೀವುದಯ್ಯ ಪ
ಸಾಗರಗಂಭೀರ ಧರ್ಮಸೂತ್ರಧಾರ
ತ್ಯಾಗಶೀಲ ಧೀರ ಸತ್ವೋಪಕಾರ ಅ.ಪ
ಮೂಲರಾಮ ಪೂಜಾ ಲೋಲ ರಾಘವೇಂದ್ರ
ಬಾಲಗೋಪಬಾಲ ಧ್ಯಾನತತ್ಪರಾ
ಕಾಲಮೇಘಶ್ಯಾಮ ವರದಾತಧೀರ
ಪಾಲಿಪುದಯ್ಯ ಮಾಂಗಿರೀಶ ಪ್ರಿಯ ೧

೨೦೩

ರಾಘವೇಂದ್ರ ನೀನೆನ್ನ ರಕ್ಷಕನಯ್ಯ
ನಾಗಶಯನಧ್ಯಾನ ಒದಗಿಸೋ ಜೀಯ ಪ
ಭಾಗ್ಯದೇಯ ವೈಶಾಲ್ಯ ಹೃದಯ
ಮಂತ್ರಾಲಯ [ತುಂಗಾತೀರ] ಕ್ಷೇತ್ರ ನಿಲಯ ಅ.ಪ
ಭಕ್ತರಕ್ಷಕ ನೀ ರಾಘವೇಂದ್ರ
ಭಕ್ತ ಪಾಲಕ ನೀ ರಾಘವೇಂದ್ರ
ಮುಕ್ತಿದಾಯಕ ನೀ ರಾಘವೇಂದ್ರ
ಶಕ್ತಿ ಸ್ವರೂಪ ನೀ ರಾಘವೇಂದ್ರ ೧

೨೦೪

ವರಗುರುದೇವ ದೇವ ಮುಕುಂದ
ಸುರುಚಿರಭಾವ ಸದಾನಂದ ಪ
ಪರತತ್ವ ಸೌಖ್ಯದ ಶುಭಕರ ಸುಖಕರ
ಅರಿಸಖಸಮಕರ ಹಿಮಕರ ಶಾಂತ ಅ.ಪ
ಪರಮತತ್ವ ವಿಭೂಷಿತ ವಾದ ಮೋದಿತ
ನರವೇಷ ಮುನಿವರ ವ್ಯಾಸರಾಯಾಂಶಕ ೧
ಸ್ಮರರೂಪ ಶುಭ್ರಾಂಗ ದಂಡ ಕರ ಕಮಂಡಲ
ಸಾರಸುಮಾರ್ಗಚರಾ ಪರಿಚಿತ ಮಾಂಗಿರಿವಾಸ೨

೨೦೫

ವೀರವೈಷ್ಣವ ಪದ್ಮಲೋಚನ
ಶ್ರೀರಾಘವ ಪಾದಸರಸಿಜ ಪ
ಕರುಣಾಮಯ ಸುರಕಲ್ಪಭೂಜ
ನಿರುತ ಸೇವೆ ಮಾಳ್ಪ ವ್ಯಾಸರಾಯರೂಪ ಅ.ಪ
ಪರಮ ಶೃಂಗಾರ ಮಣಿಮಾಲಿಕಾ
ಧರಿತ ಕಲ್ಪತರು ಜಪಮಣಿಕರ
ಗುರು ಮಂತ್ರನಿಲಯ ಮಾಂಗಿರೀಶ ಪದ
[ವರ] ಪಂಕೇಜರೂಪ ಶ್ರೀ ರಾಘವೇಂದ್ರ ೧

೨೦೬

ಶಿರಸಾವಂದಿಪೆ ನಿನ್ನ ಕರುಣಾಕರ ನೇತ್ರ
ದೀನದಲಿತ ವರದಾತ [ಮಾಂಗಿರೀಶ ಪ್ರೀತ] ಪ
ಗುರುರಾಜ ಸುರಭೂಜ ಸುರುಚಿರಗಾತ್ರ
ಪರಮಾತ್ಮ ಶಶಿತೇಜ ಶ್ರೀಮಂತ್ರ ವಾಸ ಅ.ಪ
ವರದಂ ಸುಖದಂ ಚಿರಂ ಅರವಿಂದ ಸಾನಂದ
ನಿರುಪಮ ಗುರುವರ್ಯ ವಾರಿಜ ನೇತ್ರ ೧
ಸಾರಸ ಪದಯುಗ ಕನಕ ಸಮಗಾತ್ರ
ಚಾರುತರ ಕಮ[ನೀಯ] ಮಿತ್ರರೂಪಂ ದೃತಿಮಾನ್ ೨

೨೦೭

ಶ್ರೀಗುರುರಾಜ ಪಾಲಯಮಾಂ ಸದಾ
ಸುಗುಣ ವಿರಾಜಭೂಜ ಓ ದಿವಿಜ ಪ
ಓ ಗುರುಮಾನ್ಯ ಕಾಮಿತ ನೀರಜ
ತ್ಯಾಗಿ ಶುಭಾಂಗ ಭಾಸ್ಕರತೇಜ ಅ.ಪ
ಕಂಗಳ ನೀಡಿದೆ ಚರಣವ ತೋರಿದೆ
ಬಂಗಾರವ ನೀ ಪಡೆದೆ | ಪಂಗುತಾ ನಡೆಯಲಾದ
ಮಂಗನ ಸಿಂಗಗೈದೆ | ಇಂಗಿತಜ್ಞನೀನೆಲೆ
ಮಾಂಗಿರಿರಂಗನ ಪ್ರೇಮದಿಂದರ್ಚಿಸುವ ೧

೨೦೮

ಶ್ರೀ ಸಾಯಿ ಸ್ತುತಿಗಳು
ಸತ್ಯಸಾಯೀಶ್ವರ, ಪಾತಕ ಪರಿಹರ
ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ
ನುತ್ಯು ದಯಾಕರ ಶಂಕರ ಸುಖಂಕರ
ಭೃತ್ಯ ಮನೋರಮ ನಿರ್ಜಿತಕಾಮ ಅ.ಪ
ಶಾಂತಸ್ವಭಾವ ಪರಮಪ್ರಭಾವ
ದಾಂತ ಕೃಪಾಕರ ಭವಪರಿಹಾರ
ಮಂತ್ರಸುಧಾರ್ಣವ ಶೀತಳಭಾವ
ಭ್ರಾಂತಿವಿದೂರ ಪುಣ್ಯಶರೀರ ೧
ಅಗಣಿತ ಗುಣಗಣ ಸತ್ವ ನಿರೂಪಣ
ಜಗದಾನಂದದಾ ವೂದಿ ಪ್ರಸಾದ
ನಿಗಮಾಗಮಗಣ ವಿನಮಿತ ಚರಣ
ನಗಜಾನಂದದ ಮಾಂಗಿರಿವರದ೨

೨೦೯

ಶ್ರೀಪ್ರಶಾಂತ ನಿಲಯ ನಿನ್ನ ಸುಪ್ರಕಾಶ ಬೆಳಗಲಿ ಪ
ಅಪ್ರಮೇಯ ನಮಗೆ ನಿನ್ನ ಸುಪ್ರಸನ್ನತೆ ದೊರೆಯಲಿ ಅ.ಪ
ನಿನ್ನ ಮಹಿಮೆ ಲೋಕವಿದಿತ ನಿನ್ನ ಚರಿತೆ ಪುಣ್ಯಭರಿತ
ನಿನ್ನ ಭಜನೆ ಪಾಪರಹಿತ ನಿನ್ನದರ್ಶನ ಮೋಕ್ಷಕಲಿತ೧
ಅಂದು ಪತ್ರಿಯಲ್ಲಿ ಜನಿಸಿ ಭಕ್ತವರದನೆನಿಸಿದೆ
ಇಂದು ಪರ್ತಿಯಲಿ ಜನಿಸಿ ಚಂದ್ರಮೌಳಿ ಎನಿಸಿದೆ ೨
ಸತ್ಯಸಾಯಿಬಾಬ ನಿನ್ನ ತತ್ವಬೋಧ ನಿರುಪಮ
ನಿತ್ಯಕೃಪಾಜಲಧಿ ನೀನು ಶ್ರೀಶಮಾಂಗಿರಿ ಧಾಮ ೩

೨೧೦

ಆತ್ಮನಿವೇದನಾಸ್ತುತಿಗಳು
ಅನಿಲಜ ಸನ್ನುತ ವನಜಭವಾನುತ ಪ
ಮುನಿಜನವಂದಿತ ಅನಘ ವಿರಾಜಿತ ಅ.ಪ
ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ
ವಿಕಳನಾ ಮುನಿಗೇಯ ಸುಕವಿಪೂಜಿತಕಾಯ ೧
ಮರೆಯಬೇಡವೋ ಯನ್ನ ಗರುಡಗಮನ ನಿನ್ನ
ಚರಣ ಸೇವಕರನ್ನ ನಿರುತನೆನೆವೆ ಮುನ್ನ ೨
ನಡುಗಡಲಿನೊಳಿಹೆ ತಡಬಡಿಸುತಲಿಹೆ
ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ ೩
ತಾಮಸನಯ್ಯ ಬೇಡ ನೀ ಮನಸೋಲಬೇಡ
ಪಾಮರ ವರದನೆ | ರಾಮದಾಸಾರ್ಚಿತನೆ೪
ಮಾಂಗಿರಿವರವಾಸ ರಂಗನಾಥನೆ ಶ್ರೀಶಾ
ಹಿಂಗದೆ ಯನ್ನಂತರಂಗದೆ ನಿಲೊ ಈಶಾ ೫

೨೧೧

ಅನುಭವಿಸುವುದೆನ್ನದೇ [ಜೀವ] ನೀನಿತ್ತುದ ಪ
ಅನುಭವಿಸುವುದೆನ್ನ ದಿನಚರಿ ಕರ್ಮವೋ
ನೆನೆವುದ ಪಡೆವುದು ಕನಸೋ ರಂಗಯ್ಯ ಅ.ಪ
ಮನದ ವೇಗವ ನಿಲಿಸಲಾರೆನು
ಮನದ ಬಯಕೆಯ ಪಡೆಯಲಾರೆನು
ಮನವ ನಿನ್ನಲಿ ನಿಲಿಸಲಾರೆನು
ಮನದಿ ನೀನಿರೆ ಸಕಲ ಸೌಖ್ಯವು ೧
ಕಷ್ಟನಷ್ಟ ವಿಶಿಷ್ಟವು ನಿ
ನ್ನಿಷ್ಟವೆಂಬುದ ಬಲ್ಲೆನಾದರು
ಕಷ್ಟಕಳುವೆನು ಭ್ರಷ್ಟದೋರುವೆ
ದೃಷ್ಟಿ ನಿನ್ನದು ದೊರಕುವವರೆಗೂ೨
ನಿನ್ನ ಮೂರ್ತಿಯು ಮನದಿ ನೆಲೆಸಲಿ
ನಿನ್ನ ಭಜನೆಯು ರಸನೆಗಾಗಲಿ
ನಿನ್ನ ಕೃಪೆಯವಲೋಕಗೊಲಿಯಲಿ
ಚೆನ್ನ ಮಾಂಗಿರಿರಂಗನೊಲಿಯಲಿ೩

೨೧೨

ಅಮ್ಮ ನೀನಾದರೂ ನಮ್ಮಯ್ಯಗುಸಿರದೆ |
ಸುಮ್ಮನಿಹುದು ನ್ಯಾಯವೇ ಪ
ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ
ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ
ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು
ಪುಣ್ಯ ಲೋಕವನಿತ್ತಮ್ಮಾ
ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು
ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ ೧
ಕರಿಯೊಂದು ಕೊಳದಲಿ ಒರಲಲಾಕ್ಷಣದೊಳು
ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ
ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ ೨
ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ
ಹಿತದಿ ಸೌಖ್ಯವನಿತ್ತನು [ಕೇಳಮ್ಮಾ]
ಮಾಂಗಿರಿರಂಗ ಪತಿತಪಾವನಾಯೆಂದು
ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ ೩

೨೧೩

ಅಹುದೋ ದೇವ ನೀ ದಯಯುತನೆಂಬುದು
ಸಹಜವೋ ಎಲೆ ರಂಗ ಪ
ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ
ಅಹುದೋ ಸಲೆ ಸಲಹುವ ಪಿತ ನೀ ಅ.ಪ
ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ
ಅಜಮಿಳನಿಗೆ ಮೋಕ್ಷಪದವಿಯನಿತ್ತೆ
ಭಜನೆಗೈಯುವ ತುಂಬುರು ನಾರದರಿಂಗೆ
ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ ೧
ತರಳನ ನುಡಿಕೇಳಿ ಕಂಬದೊಳುದಯಿಸಿ
ದುರುಳರಕ್ಕಸನಶಿಕ್ಷಿಸಿದೆ
ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ
ವರಸುಖಪದವಿತ್ತ ಕರುಣಾಕರನೀ ೨
ಭೂತಳದೊಳು ಜನ್ಮವಾಂತಿಹ ಸಾಸಿರ
ಚೇತನಾಚೇತನ ವಸ್ತುಗಳನು ನೀ
ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ
ಏ ತೆರ ಪೇಳ್ದೊಡನಂತಮಹಿಮ ನೀ ೩
ದೇವದೇವನೆ ನಿನ್ನ ಪಾವನಚರಣವು
ದೇವಮುನಿಗಳೆಲ್ಲ ಸೇವಿಸಲರಿದೈ
ಭಾವಜಪಿತ ರಾಮದಾಸಾಚೇತ
ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ ೪

ತಂದೆಯಿಂದ ಆಗಬೇಕಾದ

೨೧೪

ಎನ್ನನಾರು ಕರದು ತಂದರೇ ಇಲ್ಲಿಗೆ ಪ
ಮುನ್ನಗೈದ ಕರ್ಮವೆಂದು ನನ್ನ ಪುಣ್ಯ ಭಾಗ್ಯವೆಂದು
ಭಿನ್ನಮತವ ಪೇಳ್ವದು ನನ್ನ ಮಟ್ಟಿಗೊದಗದು ಅ.ಪ
ಯಾರ ಕರೆದು ತಂದರೇನು | ಯಾರು ಹೊತ್ತು ಹೆತ್ತರೇನು
ಗಾರು ಹೇಳೆನೆ ಕುಲವದೇನು ಮಾರಜನಕ ಪೊರೆವ ನೀನು ೧
ತಂದೆ ನೀನೆ ಕರೆದುತಂದೆ ಎಂದು ನಾನು ಭರದಿಬಂದೆ
ಬಂದು ನಿಂದೆ ಏಕೆ ತಂದೆ ಕುಲವನೆಣಿಸಬೇಡ ತಂದೆ ೨
ಯಾವದೈವವ ತೋರಿಸುವೆಯೊ ಯಾವ ಜಪವ ಮಾಡಿಸುವೆಯೊ
ಯಾವ ಕೃಪೆಯ ಬೀಳಿಸುತಿಹೆಯೊ ದೇವ ಮಾಂಗಿರೀಶ ಕಾಯೊ ೩

೨೧೫

ಎಷ್ಟು ಪರೀಕ್ಷಿಸಿ ನೋಡುವೆಯೋ ಇನ್ನು
ಎಷ್ಟು ಶೋಧಿಸೆ ನಿನಗಿಷ್ಟವೋ ರಂಗಾ ಪ
ಹಣವಿರುವನಕ ಕುಣಿಕುಣಿದು ಮೆರೆದೆನೊ
ಹಣವನಪಾತ್ರಕೆ ಮಣಿದು ಕಳೆದೆನೋ
ಋಣವಮಾಡಿ ಯೆನ್ನ ಬಣಗುಹೊಟ್ಟೆಯ ಹೊರೆದೆ
ಉಣಲುಡಲಿಲ್ಲದೆ ನೋಡದವೋಲಲೆದೇ ೧
ಹೆಣ್ಣು ಹೊನ್ನು ಮಣ್ಣು ಕಣ್ಣಿಗಿಂಪಾಗಲು
ಬಣ್ಣಿಸಿ ಭಾಗ್ಯವನುಣ್ಣಲು ಬಯಸಲು
ಬೆಣ್ಣೆಯಂತಿದ್ದುದು ಸುಣ್ಣವಾಯಿತೊ ದೇವ
ಕಣ್ಣು ಮಂಜಾಗಿ ಮೈಗಿಣ್ಣು ಮುರಿಯಿತಿನ್ನು ೨
ಬಹು ಜನುಮದಿ ಸಂಗ್ರಹಿಸಿದ ಪಾತಕ
ಬೃಹದಾಕಾರವಾಗಿದ್ದು ರಂಗಯ್ಯ
ಅಹಿಶಯನನೆ ನಿನ್ನ ಮಹಿಮೆಯಿಂದೆಲ್ಲವು
ದಹಿಸುವುದೆಂದು ನಂಬಿದೆ ಮಾಂಗಿರೀಶ ೩

ಅನ್ಯದೈವ ಸ್ತುತಿಯಬಗ್ಗೆ

೨೧೬

ಏನ ಬೇಡಲಿ ನಾನು ಏನ ನೀಡುವೆಯೋ ನೀನು
ನೀನೆನ್ನ ಪ್ರಭುವಾಗಿರೆ ಹೇಳೋ ರಂಗ ಪ
ನಾನಿನ್ನ ವಂದಿಸಿ ಧ್ಯಾನವ ಗೈವಾಗ
ಏನನೀ ಕೊಡಲಾರೆ ಹೇಳೋ ರಂಗಯ್ಯಅ.ಪ
ಕರಣಕಾರಣ ನೀನು ಕೊರಡಬೊಂಬೆಯು ನಾನು
ಕರವ ಪಿಡಿದು ಎನ್ನ ನಡೆಸುವೆ ನೀನು
ಧರೆ ಗಿರಿ ಕಾನನ ಸಿರಿ ಸುಖ ಭೋಗವು
ಸ್ಥಿರವಲ್ಲ ಹರಿ ನಿನ್ನ ಚರಣಸೇವೆಯೆ ಸಾಕೋ ೧
ಬೇಡಿ ಬೇಡಿ ನಿನ್ನ ಕಾಡುವ ಮನವೀಯಬೇಡಯ್ಯ
ನೀಡಯ್ಯ ಮಂಗಳನಾಮಂಗಳ
ಪಾಡಿ ಕೊಂಡಾಡುತ ನಾಡೆ ವಂದನೆಗೈವ
ರೂಢಿ ಒಂದಿರಲಿ ಮಾಂಗಿರಿಯ ರಂಗಯ್ಯ ೨

೨೧೭

ಏನೊಂದು ಬೇಡೆನಗೆ ರಂಗಯ್ಯ
ಆನಂದ ಎನಗಾಗಿದೆ ಪ
ನಾನಿನ್ನನನುದಿನ ಧ್ಯಾನಿಸುತಿರುವಾಗ
ಜೇನುಸಕ್ಕರೆ ಸವಿ ಇರುವಾಗ ಅ.ಪ
ಖಗ ಮುಕ್ತಿ ಬೇಕೆಂದನೆ ಆ ಧೃವರಾಯ
ಜಗವೊಂದ ನೀಡೆಂದನೆ
ನಗವ ಕೈಯಿಂದೆತ್ತಿ ಸೊಗವ ನೀಡೆಂದರಾರು
ಜಗದೊಡೆಯಾ ನಿನ್ನ ಭಜನೆಯೆ ಸಾಕು ೧
ಅವಲಕ್ಕಿಯನು ತಂದಾಕುಚೇಲನು
ನವನಿಧಿ [ಯನೇನು] ಬೇಡಿದನೆ
ಪವನಜ ಬ್ರಹ್ಮಪಟ್ಟವನು ಬೇಡಿದನೆ
ಕುವಲಯಶ್ಯಾಮ ಮಾಂಗಿರಿಯ ರಂಗಯ್ಯ ೨

೨೧೮

ಕಡೆಯ ಬಾಗಿಲೊಳೆನ್ನ ನಿಲಿಸೋ ರಂಗಯ್ಯ
ಕಡೆಯ ಬಾಗಿಲ ಎನ್ನಕಡೆಗೆ ನಿಲಿಸಯ್ಯ ಪ
ಕಡೆಬಾಗಿಲೊಳು ನಿಲಿಸು ಅಡಿಗಡಿಗೆ ನಾನಿನ್ನ
ಕಡೆನೋಡಿ ಪೊಡಮಡುತೆ ಕೈಮುಗಿಯುವಂತೆ ಅ.ಪ
ಕಡೆಯ ಬಾಗಿಲಿನಿಂದ ದೃಢ ಭಕ್ತರೈತಂದು
ಕಡುಮುದದಿ ನಾಮಗಳ ನುಡಿವರಯ್ಯ
ನುಡಿಗಳೆಲ್ಲ ಎನ್ನ ಕಿವಿಗಿಡಿಯುತಿರಲಯ್ಯ
ಬಡವನಾದೆನಗಿದೇ ಉಪದೇಶವಯ್ಯ ೧
ಸಾಮೀಪ್ಯದವರೆಲ್ಲ ಮನದಲ್ಲೇ ಜಾನಿಪರು
ಮಾ ಮುನಿಗಳೆಲ್ಲರು ಶ್ರುತಿಯ ಸಾರುವರು
ನಾಮಗಳನುಚ್ಚರಿಸಿ ನಮಿಸುವರು ಪಾಡುವರು
ಆ ಮಧುವು ಸಾಕೆನಗೆ ಮಾಂಗಿರಿಯ ರಂಗ ೨

೨೧೯

ಕಣ್ಣಿಗೆ ಕಾಣದೆ ಏಕಿರುವೇ ರಂಗ
ಕಣ್ಣಲಿ ನೋಡದೆ ಬಣ್ಣಿಸಲಳವೇ ಪ
ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ
ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ
ನರನಾಗಿರುವೆಯೋ | ಹರಿಯಾಗಿರುವೆಯೋ
ನರಹರಿಯೆಂಬರು | ದಿಟವೋ ಸಟೆಯೋ
ಗಿರಿಯಂತಿರುವೆಯೋ | ಧರೆಯಂತಿರುವೆಯೋ
ಗಿರಿಧರನೆಂಬರು ದಿಟವೋ ಸಟೆಯೋ ೧
ಸ್ಮರನಂತಿಹೆಯೋ | ಗುರುವಂತಿಹೆಯೋ
ಸ್ಮರಗುರುವೆಂಬರು ದಿಟವೋ ಸಟೆಯೋ
ಕರಣನಾಗಿರುವೆಯೋ ಕಾರಣನಹೆಯೋ
ಕರಣಕಾರಣ ನೀನೆಂಬುದು ದಿಟವೋ ಸಟೆಯೋ ೨
ವೇದವಾಗಿರುವೆಯೋ ನಾದವಾಗಿರುವೆಯೋ
ವೇದನಾದಗಳೊಂದೇ ಎಂಬುದು ಸಟೆಯೋ
ಕಾದಿಹೆನಯ್ಯ ಮೋದವನೀಯೋ
ಸಾದರದಿಂದ ಬಂದೆನ್ನನು ಕಾಯೋ ೩
ಸಲಿಗೆಯ ತೋರು ಮಾಂಗಿರಿರಂಗ
ಸಲೆ ನಲಿವೆನೋರಂಗ ಗರುಡತುರಂಗ
ಛಲವ ಬಿಡೋ ರಂಗ ನಿಲು ನಗುತಲಿ ರಂಗ
ಸಲೆ ಬಣ್ಣಿಪೆನಾ ಚೆಲುವನು ರಂಗ ೪

ಕಡೆಯಬಾಗಿಲನ್ನು ಇಲ್ಲಿ

೨೨೦

ಕನಿಕರವ ತೋರೋ ಜನಾರ್ಧನ
ನೆನೆವವರ ಬಳಿಯಲಿ ನಗುವ ಮಣಿರದನ ಪ
ಜಪತಪವರಿಯದ ವಿಫಲ ಜೀವಿಯು ನಾನು
ಕುಪಿತನಾಗದೆ ಎನ್ನ ತಾಪವ ಬಿಡಿಸೋ ೧
ಸ್ನಾನ ಸಂಧ್ಯೆಗಳಿಂದ ಎ್ಞÁನ ದೊರೆಯಲಿಲ್ಲ
ಧ್ಯಾನಭಿಕ್ಷೆಯ ನೀಡೋ ಶ್ರೀನರಸಿಂಹ ೨
ಮಂಗಳ ಮೂರ್ತಿ ಮಾತಂಗವರದ ನನ್ನ
ಭಂಗಪಡಿಸಬೇಡ ಮಾಂಗಿರಿರಂಗ ೩

೨೨೧

ಕನಿಕರವಿಲ್ಲವೆ | ವನರುಹಲೋಚನಾ ಪ
ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ
ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ
ವೇದ ಪುರಾಣವ ಓದಿ ತಿಳಿಯಲಿಲ್ಲ
ಸಾಧುಸಂತರ ಸೇವೆ ಸಾಧಿಸಲಿಲ್ಲ
ಮೇದಿನಿದೇವಿಗೆ ಭಾರ ನಾನಾದೆನಲ್ಲ
ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ ೧
ಎ್ಞÁನ ಸುಧಾರಸ ಪಾನವ ಮಾಡಲಿಲ್ಲ
ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ
ದೀನರ ಸಂಗದಿ ಶ್ವಾನನಂತಾದೆನಲ್ಲ
ನಾನು ನನ್ನದು ನಿನ್ನಾಧೀನವಾಗಲು ಇಲ್ಲ ೨
ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ
ಅನ್ನ ಪಾನಂಗಳೊಳಿನ್ನಾಸೆಯಿಲ್ಲ
ನಿನ್ನ ನಾಮಾಮೃತವನು ಬಿಡುವವನಲ್ಲ
ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ ೩

೨೨೨

ಕರುಣ ಬಾರದೇ ಸ್ವಾಮಿ ಕರುಣ ಬಾರದೆ ಪ
ಶ್ರುತಿ ಪುರಾಣ ವೇದ ಶಾಸ್ತ್ರ ಪತಿತಪಾವನ ನೀನೆಯೆಂದು
ನುತಿಸಿ ಸಾರಿ ಪೇಳ್ವುದ ಕೇಳಿ ಪಿತ ನೀನೆಂದು ನಂಬಿದೆನಯ್ಯಾ ಅ.ಪ
ಕಡಲಿಗುರುಳಿದೆನ್ನ ಕೈಯ ಪಿಡಿವರಿಲ್ಲ ಮಾರನಯ್ಯ
ದಡವ ಸೇರಿಸಿ ಪಾಲಿಸೊ ಜೀಯ ಅಡಿಯ ಪಿಡಿದು ಬೇಡುವೆನು ೧
ಶತಶತಾಪರಾಧಿ ನಾನು ಸತತ ದೀನದಯಾಮಯನು
ಪಿತನು ಹಿತನು ನೀನೇ ಬೇರೆಗತಿಯ ಕಾಣೆ ಮಾಂಗಿರೀಶ ೨

೨೨೩

ಕರುಣವೇಕೆ ಬಾರದಯ್ಯ ಧರಣಿಜಾಪ್ರಿಯಾ ಪ
ಶರಣಜನರ ಪೊರೆವನೆಂಬ ಬಿರುದ ಪೊತ್ತವನಾಗಿರಲೆನ್ನೊಳು ಅ.ಪ
ಯಾಗರಕ್ಷಣೆಗಾಗಿ ಕೌಶಿಕ
ಕೂಗಲಾಕ್ಷಣ ಓಡಿಪೋದೆ
ಕೂಗಿಬೇಡದೆ ಪಾಡದಹಲ್ಯೆಯ
ರೋಗವ ನಂದಿಸಿದಾತನೆ || ಯೆನ್ನೊಳು || ೧
ಹರನ ಚಾಪವ ಮುರಿದು ಸೀತೆಯ
ಕರವ ಪಿಡಿಯೆ ಕರೆದರಾರು |
ಕಿರಿದು ತಾಯ ದುರಾಸೆ ಮನ್ನಿಸಿ ಭರದಿ
ವನಕೆ ಪೋದವನೆ ||ಯೆನ್ನೊಳು || ೨
ಭಾಮೆಯೆಂಜಲ ತಿಂದೆ ಪಕ್ಷಿಗೆ
ಪ್ರೇಮ ತೋರಿ ಲಂಕೆಯ ಸೇರಿ
ಆ ಮಹಾದೈತ್ಯನ ತಮ್ಮನಿಗೊಲಿದೆ |
ಭೂಮಿಜೆಯರಸ ಮಾಂಗಿರಿರಂಗ೩

೨೨೪

ಕರುಣಿಸು ರಘುನಂದನ ರಾಮಾ
ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ
ಪರಮಮಂಗಳನಾಮಾ ದುರಿತಭಂಜನ ನಾಮ
ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ
ರಾಮನೆನೆ ಪಾಪವು ಲಯವಹುದಂತೆ
ರಾಮಾಯೆನೆ ಭಯಗಳು ಪರಿಹರವಂತೆ ೧
ರಾಮನೆನೆ ಮಾಯೆಯು ಹರವಂತೆ
ರಾಮನ ನುತಿಸೆ ಮನ ಪರವಶವಂತೆ೨
ಜಯರಾಮ ಜಯರಾಮ ಎನುತಿರುವಂತೆ]
ದಯಮಾಡೊ ಮಾಂಗಿರಿರಂಗ ನೀನಂತೆ ೩

ಕೌಶಿಕನೊಂದಿಗೆ ಯಾಗರಕ್ಷಣೆಗೆ

೨೨೫

ಕರೆತಾರಬಾರದೇನೇ ರಂಗಯ್ಯನ
ಬರಲಾರೆನೆಂದರೂ ಕರವಮುಗಿದಾದರೂ ಪ
ಸರಸಿಜನಾಭನ ಅರವಿಂದಚರಣಕೆ
ಎರಗಿ ಎರಗಿ ಮತ್ತೆ ಕರುಣಿಸೆಂದಾದರೂ ಅ.ಪ
ನೆನೆದು ಪೂಜಿಸುವರ ಮನೆಗೆ ಬರುವೆಯೆಂದು
ಮುನಿಜನ ಪೇಳ್ದುದು ಸಟೆಯಹುದೇನೋ
ಜನನಿಯು ಜನಕನ ಅನುಜನಗ್ರಜನ
ಘನತರ ಬಂಧುವು ನೀನೆಂದುಸುರಿ ೧
ನಂದನಕಂದ ಗೋವಿಂದನ ಪಾದಾರ
ವಿಂದವ ಕಾಣದೆ ಜೀವಿಸಲರಿಯೆ
ಎಂದು ಪೇಳುತ ಮುಚುಕುಂದಗೆ ವಂದಿಸು
ಮಂದಹಾಸದಿ ಬರುವ ಮಾಂಗಿರಿರಂಗ ೨

೨೨೬

ಕರೆದರೆ ಓ ಓ ಎನಬಾರದೆ
ಮರೆತರು ಕೂಗಿನ ದನಿಕೇಳದೆ ರಂಗ ಪ
ಶರಣಜನರು ಸಾಸಿರವಿದ್ದರೇನೋ
ಮೊರೆಯಿಡುವವ ಕಂಡರರಿವಾಗದೇನೋ ಅ.ಪ
ಲಕ್ಷಜೀವಿಗಳನ್ನು ರಕ್ಷಿಸುವವನೆಂದು
ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು
ಪಕ್ಷಿರಾಜನ ಫಣಿಯಕ್ಷನಂಗನೆಯರು
ಅಕ್ಷರ ಲೋಕಾಧ್ಯಕ್ಷನೆನುವರು ೧
ಯೋಗವನರಿಯೆನು ಯಾಗವನರಿಯೆನು
ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ
ರಾಗ ರಚನೆಗಳ ಅರಿವೆನಗಿಲ್ಲ
ನಾಗಶಯನ ಕಾಯೋ ಮಾಂಗಿರಿರಂಗ೨

೨೨೭

ಕರೆದಾಗ ಬಳಿಸಂದು ನಿಲ್ಲಬಾರದೆ
ಶರಣಾರ್ಥಿನಾನೆಂಬುದರಿವಾಗದೆ ರಂಗ ಪ
ಪೊರೆವಾತ ನೀನೆಂಬ ನುಡಿಕೇಳದೆ ರಂಗ
ಕರುಣಾಳು ನೀನೆಂದು ನೆರೆನಂಬಿದೆ ಅ.ಪ
ಶಿಲೆಯಾದ ಪತ್ನಿಯು ಪೊರೆಯೆಂದಳೆ ಆ
ಬಲುಪಾಪಿ ಅಜಮಿಳನು ಬಾರೆಂದನೆ
ಬಲಿ ತನ್ನ ಬಾಗಿಲನು ಕಾಯೆಂದನೇ ನೀ
ಸಲೆ ಮುಕ್ತಿಯೀಯೆಂದು ಖಗ ಕೇಳ್ದನೇ ೧
ಸಿರಿಭೂಮಿ ಸುಖದಾಸೆ ಪಡಲಾರೆನೋ ನಾ
ನೆರೆ ದಾನಧರ್ಮಗಳ ಕುಡಲಾರೆನೋ
ವರ ಯಾಗಯೋಗಗಳ ಕೊಡಲಾರೆನೋ ಮಾಂ
ಗಿರಿರಂಗ ಭಜನೆಯ ಬಿಡಲಾರೆನೋ ೨

೨೨೮

ಕಾದು ಕುಳಿತಿಹೆನಯ್ಯ ರಂಗನಾಥ
ಪಾದದರ್ಶನವೀಯೈ ಜಾನಕೀನಾಥ ಪ
ವೇದ ವೇದಾಂತಗಳ ಓದಿದವ ನಾನಲ್ಲ
ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ
ಪಾತಕಂಗಳ ಗೈದು ಭೀತನಾಗಿಹೆನಯ್ಯ
ನೀತಿನಿಯಮಗಳಿಂದ ದೂರ ನಾನು
ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ
ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು ೧
ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ
ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ
ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ
ರಸ ಕಸಗಳೊಂದೆನಿಸೊ ಮಾಂಗಿರಿಯರಂಗ ೨

೨೨೯

ಕಾವ ಜನಕ ನೀನಿರುತಿರಲೆನಗಿ
ನ್ನಾವ ಬಂಧುವು ಬೇಕೊ ಮಾಂಗಿರಿಯ ರಂಗ ಪ
ದೇವ ನೀನಲ್ಲದೆ ಲಕ್ಷಜೀವಿಗಳಿದ್ದು
ಈವ ಸೌಖ್ಯವು ಬೇಡ ಮಾಂಗಿರಿಯ ರಂಗ ಅ.ಪ
ನಾರಿಯ ಮಾನಾಪಹಾರವ ಗೈದಾಗ
ವೀರರೈವರು ತಮ್ಮ ಮೋರೆಯ ತೋರ್ದರೆ
ನೂರುಮಂದಿ ವೇದಪಾರಂಗತರಿದ್ದು
ಕ್ರೂರ ಕಾರ್ಯಂಗಳ ನಿಲಿಸಿದರೆ ರಂಗ ೧
ಮೂವತ್ತುಮೂರುಕೋಟಿ ನಿರ್ಜರರಿದ್ದು
ರಾವಣನೊಬ್ಬನ ಜೈಸಿದರೆ
ಪಾವಕ ಹಸ್ತವನಿತ್ತ ಗಿರೀಶನ
ದೇವಗಣೇಶ್ವರರುಳಿಸಿದರೇ ೨
ಅರಕ್ಷಿತವಾದುದ ಸುರಕ್ಷಿತ ಗೈವೆ
ಸುರಕ್ಷಿತವಾದುದಕ್ಷಯ ಗೈವೆ
ನಿರಕ್ಷರಕುಕ್ಷಿಗೆ ಮೋಕ್ಷವ ನೀನೀವೆ
ದುರಿತಕ್ಷಯ ಗೈದು ಪಾಲಿಸುವೆ ೩

೨೩೦

ಕೈಹಿಡಿದೆನ್ನನು ನಡೆಸೋ ರಂಗ
ಚೋಹವ ಬಿಡಿಸಿ ನಿನ್ನಡಿಗಳ ಹಿಡಿಸೊ ಪ
ಮೋಹ ಮಾತ್ಸರ್ಯದ ದಾಹವ ಬಿಡಿಸೋ
ಶ್ರೀಹರಿ ನಿನ್ನ ನಾಮಂಗಳ ನುಡಿಸೋ ಅ.ಪ
ಇಂದಿರೆಯರಸ ಮುಕುಂದ ನಿನ್ನ | ಕಂದನ ಮರೆವರೆ
ತಂದೆ ಗೋವಿಂದಾ | ಮಂದಮತಿಯು ನಾನೆ ಗೋಪೀ
ಕಂದ | ಮಂದರಧರ ಕಾಯೋ ನಿತ್ಯಾನಂದ೧
ಮಂಗಳಕರ ಶುಭನಾಮ | ಹಿಂಗದೆ ಭಜಿಪೆನು ಅರಿಕುಲಭೀಮ
ತುಂಗಕೃಪಾಕರ ಜಗದಭಿರಾಮ
ಭಂಗಿಸು ದುರಿತವ ಮಾಂಗಿರಿಧಾಮ ೨
ಆಸುರಿ ಭಾವವನಳಿಸೋ ನಿನ್ನ
ದಾಸರದಾಸ ನಾನೆಂಬುದನುಳಿಸೋ
ವಾಸುಕಿಶಯನನ ಅಡಿಯಾಳೆನಿಸೋ
ವಾಸುದೇವ ನಿನ್ನ ಬೇಡುವುದೆನಿಸೊ೩

೨೩೧

ಗಿರಿಯೆಡೆಗೆ ಬರಲಾರೆನೇ [ಮಾಂಗಿರಿ ರಂಗನ] ಪ
ಗಿರಿಯೆಡೆಗೆ ಬರಲಾರೆ ಬರುವದೃಢವಿಡಲಾರೆ
ಬರಲಾರೆನೆನಲಾರೆ ಹೊರಡಲಾರೆನೊ ರಂಗ ಅ.ಪ
ನೂರುಯೋಜನ ಪೋಪೆನೇ ಅಲ್ಲಿಂದಿತ್ತ
ಕಾರ್ಯಮಿಲ್ಲದೆ ಬರ್ಪೆನೇ
ನೂರುಹೊನ್ನಾದರೂ ಬೇರೆ ಎಣಿಸದೆ ಕಳೆವೆ |
ಮೂರು ಹೊನ್ನನು ಹಿಡಿದಾ ಮೂರು ಹರಿದಾರಿಯ೧
ಪರಿಕಿಸುತಿಹೆ ನೀನೆನ್ನಾ ಮಾಮನದ ರನ್ನ
ಹುರುಳಿಲ್ಲದಿಹಯನ್ನ
ಬರುವೆ ನಿನ್ನನು ನೋಡಿ ಶಿರಬಾಗಿ ಬಹೆನೆಂಬ
ಭರವಸೆ ಬಿಡಲಿಲ್ಲ ಹೊರಡಲಿಲ್ಲವೋ ರಂಗ೨
ಬೀನದೊಳು ನೀನು ಮಾಂಗಿರಿರಂಗ
ನೀನರಿಯದುದಾವುದೋ
ಸೂನು ಧೃವರಾಯನೆಡೆಗೆ ನೀನೋಡಿ ಬರಲಿಲ್ಲವೇ
ನಾನು ಮೊರೆಯಿಡೆ ನಿನ್ನ ಮಾನಸ ಕರಗದಲ್ಲ ೩
ತಾಮರಸಾಕ್ಷಾ ನಿನ್ನ ನಾಮದ ಭಜನೆ
ಕಾಮವಾಗಿಹುದೆ ಯನ್ನಾ
ಶ್ರೀಮಹಿತಾಂಗನೆ ಸೋಮಶೇಖರವಿನುತ
ರಾಮದಾಸಾರ್ಚಿತ ಕೋಮಲಾಂಗ ರಂಗ೪

೨೩೨

ಗುಣದೋಷವೆನ್ನದಲ್ಲ ರಂಗಯ್ಯ ರಂಗ ಪ
ಗುಣದೋಷಯೆನ್ನದಲ್ಲ ಫಣಿರಾಜಶಯನನೆ
ಅಣುರೇಣು ತೃಣಕಾಷ್ಠಭರಿತ ನೀನಾಗಿರಲ್ಕೆ ಅ.ಪ
ಮಂತ್ರಕರ್ತನು ನೀನು ಮಂತ್ರಾಧೀನನು ನೀನು
ಮಂತ್ರಕೊಲಿವವ ನೀನು ಮಂತ್ರಿಯೂ ನೀನು
ಯಂತ್ರವೆನ್ನದೊರಂಗ ಯಂತ್ರನಡೆಸುವವ ನೀನು
ಯಂತ್ರವೆಂಬುದೀ ದೇಹ ಯಂತ್ರಿಯೇ ನೀನಾಗಿರಲು ೧
ಅಂಬರಾಕಾರನು ನೀನು ಅಂಬುಧಿ ಅಂಬುಜ ನೀನು
ಅಂಬುವಾಹಕಾರ ಪೀತಾಂಬರನು ನೀನು
ಅಂಬುಧಿಯೊಳೆನ್ನ ಬಿಟ್ಟು ಅಂಬರಕ್ಕೆ ಸೆಳೆವ ನೀನು
ಅಂಬು ಅಂಬರದೊಳಗೆ ಕೈಯ ಬೊಂಬೆಯು ನಾನಾಗಿರಲ್ಕೆ೨
ನಾಡುಕಾಡು ಬೀಡುಗಳ ನೋಡು ಮಾಡು ಬೇಡು ಎಂಬೇ
ಆಡಿ ಓಡಿ ಮಾಡುವುದ ನೋಡುತಿರುವೆ
ಆಡಿ ಬೇಡಿ ಪಾಡಿ ಕೊಂಡಾಡಿ ಭಕ್ತಿಯನ್ನಿತ್ತು
ಜೋಡಿ ನೀನಾಗುವೆ ಮತ್ತೆ ಮಾಂಗಿರೀಶ ಸುಪ್ರಕಾಶ ೩

೨೩೩

ಘನಲೀಲಾಕುಲ ದೇವಕಿ ಬಾಲಾ ಪ
ಹೀನನ ಮೊರೆ ಕಿವಿಗೆ ಬೀಳದಲಾ ಸ್ವಾಮಿ ಅ.ಪ
ಬಾಲಕ ನೆನೆದುದ ಆಲಿಸಿದೈ ತಂದೆ
ಖೂಳನ ನುಡಿ ಕಿವಿಗೆ ಕೇಳಿಸದೆ ದೇವಾ ೧
ಹಾಡಲು ಅರಿಯೆ ಕೊಂಡಾಡಲು ಅರಿಯೆನು
ನೋಡುವೆಯೋ ನದಿಗೆ ದೂಡುವೆಯೋ ದೇವಾ ೨
ಚರಣ ಸರೋಜದ ದರುಶನಗೈಸೋ
ಕರವ ಮುಗಿವೆ ಮಾಂಗಿರಿ ರಂಗಾ ೩

ಆತ್ಮನಿವೇದನೆಯ ಈ ಕೀರ್ತನೆಯಲ್ಲಿ

೨೩೪

ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ
ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ
ಆಸೂರಿಯಾದರೂ ಈ ಸೂರಿಯಾದರೂ
ಏಸೂರಿಗ್ಹೋದರೂ ವಾಸಿಯಿಲ್ಲ
ಕೂಸುಗಳ ಪಡೆದರೂ ಆಸೆಗಳ ತೋರಿದರೂ
ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ ೧
ಈ ವೂರಿನೈವತ್ತು ಆ ವೂರಿನೈವತ್ತು
ದೇವರ್ಕಳಿಗೆ ನಾಮ ಹರಕೆ ಹೊತ್ತು
ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು
ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು ೨
ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ
ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ
ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ
ಇಂದಿರಾನಂದ ಮಾಂಗಿರಿಯ ರಂಗಯ್ಯ ೩

೨೩೫

ತಂದೇ ಕಮಲಾಪತಿಯೇ ಕಂದನ ಬಂಧನವಳಿದ ಹರಿಯೇ ಪ
ಮಂದರ ಗಿರಿಧರ ರಾಮ ಖರಾರೇ
ನಂದನ ಕಂದ ಗೋವಿಂದ ಮುರಾರೇ ಅ.ಪ
ಭವಶರಧಿಯೊಳು ನೊಂದೇ [ಸುಖಲವಲೇಶವು] ಕಾಣದಾದೆ
ಜವನ ಬಾಧೆಗೆ ಪಕ್ಕಾದೆ ನಿನ್ನ ಚರಣವೆ ಗತಿಯೆಂದು ಬಂದೆ ೧
ಶರಣರು ಕರೆಯಲು ಬರುವೆ ರಂಗ ತ್ವರಿತದಿ ಪಾಪವ ಕಳೆವೆ
ಪರಮದಯಾಕರ ಮಣಿವೆ ಎನ್ನ ಮೊರೆಯ ಲಾಲಿಸದಿರೆ ತರವೆ ೨
ಮಂಗಳದಾಯಕ ನೀನೆ | ತ್ರಿಲೋಕಂಗಳ ಸಲಹುವ ನೀನೇ
ಮಾಂಗಿರಿರಂಗನು ನೀನೇ | ನಿನ್ನ ದಾಸರ ದಾಸನು ನಾನೇ ೩

ಆತ್ಮನಿವೇದನೆಯ ಅಭಿವ್ಯಕ್ತಿಯ

೨೩೬

ತಡವಿದು ಯೇತಕೋ ರಂಗ
ಬಿಡದಿರೆನ್ನ ಕಡಲನಡುವೆ ಪ
ಕಡಲ ಸೇರಿ ಮಡುವಿನೊಳಗೆ
ತಡಬಡಿಪುದ ನೋಡಿ ನೋಡಿ ಅ.ಪ
ಸರಸ ಕರುಣಾಭರಣ ಶರಣ ನಿರುತ ಸೇವಿತ
ವರ ಸುಚರಣ ಮರೆಯದಿರು ದಾಸಾನುದಾಸನ ಲೋಕಕಾರಣ ೧
ಕರಿ ಬಲಿ ಪಾಂಚಾಲಿಯರನು ಹರುಷದಿಂದ ಪೊರೆದೆಯಲ್ತೆ
ಕರುಣದಿಂದ ಬಾರೊ ಹರಿಯೆ ಸರಸಿಜಾಕ್ಷನೇ ೨
ದೇವ ದೇವ ಪಾವನಾತ್ಮ ಭಾವಜಾತಪಿತ ಪರಮಾತ್ಮ
ಜೀವಕೋಟಿ ಕಾಮಿತದಾತ ದಿವಿಜ ಸನ್ನುತಾ ೩
ಕಾವರನ್ಯರಿಲ್ಲವಯ್ಯ ಪಾವನಾತ್ಮ ಮಾರನಯ್ಯ
ಸಾವಕಾಶವೇಕೋ ಜೀಯ ಮಾವಿನಕೆರೆಯರಸ ರಂಗ ೪

೨೩೭

ತನು ಮನ ಧನ ನಿನ್ನವಯ್ಯ ವನಜನಾಭ ಮಾರನಯ್ಯ ಪ
ಮನಸು ನನಸು ನಿನ್ನವಯ್ಯ ಕನಸು ಕಿನಸು ನಿನ್ನವಯ್ಯ
ದಿನ ದಿನ ದಿನ ಭಜಿಪೆನಯ್ಯ ಮನದಿ ನೆಲಸೋ ನೀ ರಂಗಯ್ಯ ಅ.ಪ
ಸ್ನಾನ ಸಂಧ್ಯಾ ಜಪವು ತಪ ಧ್ಯಾನಪೂಜೆ ಧೂಪ ದೀಪ
ದಾನ ಧರ್ಮ ನೇಮ ಲೋಪವೇನನರಿಯೆ ವಿಶ್ವರೂಪ ೧
ಎನ್ನದೆಂಬುದಾವುದಿಲ್ಲ ಎನ್ನ ಕಾರ್ಯವೆನ್ನದಲ್ಲ
ಎನ್ನ ಪೊರೆವರಾರು ಇಲ್ಲ ನಿನ್ನ ಬಿಟ್ಟರೇ ಗತಿಯಿಲ್ಲ೨
ನಿನ್ನ ಸನ್ನಿಧಿ ಎನ್ನದೇಶ ನಿನ್ನ ಭಜನೆ ಎನ್ನ ಕೋಶ
ನಿನ್ನ ಕೃಪೆಯೇ ಎನ್ನ ದೋಷನಾಶ ಸನ್ನುತಕಾಯೋ ಮಾಂಗಿರೀಶ ೩

೨೩೮

ದಯವ ಮಾಡೋ ಎನ್ನ ಭಯವ ಬಿಡಿಸೋ ಪ
ಅಭಯಪ್ರದಾಯಕ ರಥಾಂಗ ಮಾವಿನಕೆರೆರಂಗಾ ಅ.ಪ
ಮುನಿವರರೆಲ್ಲ ನಿನ್ನ ಅನುದಿನ ಭಜಿಪರೋ
ತನು ಮನ ಧನಗಳ ನಿನಗೊಪ್ಪಿಸಲು
ಘನ ತಪೋಶಕ್ತಿಯಿಂದ ಮನವೊಲಿಸುವರು ನಿನ್ನಾ
ಅನಿತನರಿಯದೆನ್ನೊಳು ಸನುಮತದಿಂದಲಿಯೆನ್ನೊಳು ೧
ಕಾಮ ಕ್ರೋಧಂಗಳಿಂ ಭ್ರಾಮಕನಾದೆನ್ನ
ನೇಮವೊಂದಿಲ್ಲ ನಿನ್ನ ನಾಮಂಗಳುಲಿಯೆ ನಾ
ಭೂಮಿಯೊಳನೇಕ ಜನ್ಮನಾಮದಿಂದೆ ಜನಿಸಿ ಪಾಪ
ಕರ್ಮವ ತಳೆದೆಂ ರಾಮದಾಸಾರ್ಚಿತನೆ ಯೆನ್ನೊಳು ೨
ಕರಿಯ ಪೊರೆದೆ ಹರೀ ತರಳಗೊಲಿದೇ
ಸಿರಿತರುಣಿಯಕಾಯ್ದೆ ಶೌರಿ ದುರುಳನ ಪೊರೆದೆ ಉದಾರಿ
ಸರಸಿಜಾಕ್ಷ ಮುರಾರಿ ಸುರಪತೆ ರಕ್ಕಸಾರಿ
ಕರುಣಿಸೋ ಸೂತ್ರಧಾರಿ ಕರವಪಿಡಿದು ಯೆನ್ನೊಳು ೩

೨೩೯

ದಾರಿಗಾಣದಯ್ಯ ಕಣ್ಣಿಗೆ ದಾರಿ ತೋರಿಸಯ್ಯಾ ಪ
ಪಾರುಗಾಣದ ಸಂಸಾರ ವಾರಿಧಿಯಲಿ
ಪಾರುಗಾಣಿಸಯ್ಯ ಮಾರನ ಪಿತನೇ ಅ.ಪ
ಯಾರಿಗೆ ಮೊರೆಯಿಡಲಾರು ಕೈಹಿಡಿವರು
ಧಾರಿಣಿಯೆ ಅಂಧಕಾರವಯ್ಯ
ಸಾರಸನಾಭ ನೀ ಕಾರುಣ್ಯಾಮೃತ
ಬೀರದಿದ್ದರೆ ಎನ್ನ ಗತಿಏನೋ ರಂಗ೧
ಸತಿಸುತರೆನಗತಿ ಹಿತರೆಂದೆನ್ನುತೆ
ಸತತ ನಂಬಿ ಸತ್ಪಥವನು ಮರೆತಂತೆ
ಪತಿತನಾದೆನಗೆ ನೀ ಗತಿದೋರದಿದ್ದರೆ
ಪತಿತನಾಗಿರುವುದೇ ಗತಿಯೊ ಮಾಂಗಿರಿರಂಗ ೨

೨೪೦

ದಾರಿತೋರೋ ಮಾಯಾಕಾರ ಕರುಣಾಸಾಗರ ಪ
ಪಾರುಗಾಣಲಾರೆನಯ್ಯ ದೂರಮಾಡದಿರಯ್ಯ ಅ.ಪ
ಪರರ ತಂಬೂಲಕಾಗಿ ಯೆನ್ನ ಕರವ ನೀಡಿದೆ
ಹರಿಯೇ ನಿನ್ನ ಭಜನೆಯೆಂಬುದ ಮರೆತು ಮೆರೆದೆನಯ್ಯ ೧
ಸ್ನಾನ ನೇಮ ಜಪ ತಪಂಗಳ ಎ್ಞÁನವಿಲ್ಲವೈ
ಧ್ಯಾನ ಹೋಮ ಭಜನೆ ಪೂಜೆ ಏನನರಿಯೆನಯ್ಯ ೨
ನಿನ್ನ ದಾಸರದಾಸನೆಂದು ಎನ್ನ ಪಾಲಿಸೈ
ಸನ್ನುತಾಂಗ ಮಾಂಗಿರೀಶ ನಿನ್ನ ನಂಬಿದೆ [ನಯ್ಯ] ೩

೨೪೧

ದೀನಶರಣ ಮಾಮನೋಹರಾ ಕೃಪಾಪೂರಾ ಪ
ಗಾನಲೋಲ ತರಣಿರುಚಿರ ನೀಲಗಾತ್ರ ಅ.ಪ
ನೀರಜಾಕ್ಷ ನೀರಜಭವ ನಾರದಾದಿನುತಚರಣಾ
ಚಾರುಚರಿತಾ ನಿಗಮವಿದಿತಾ | ವಾರಣೀಶನಮಿತಾ ೧
ಸುಗುಣ ಭರಿತ ಮಾಂಗಿರೀಶ ಪಾರ್ಥಸೂತ್ರ
[ಅಗಣಿತಗುಣಚರಿತ ಕಾಯೋ ನಾ ಶರಣಾಗತ] ೨

೨೪೨

ದೂರದಿ ನಿಲಿಸಯ್ಯ ರಂಗಯ್ಯ
ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ
ಸಾರಸಭವ ವಾಲ್ಮೀಕಿ ಪುರಂದರ
ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ
ಹನುಮ ಖಗೇಶ್ವರ ದನುಜ ವೈರಿಗಳೆಲ್ಲ
ಮುನಿ ಮನು ಗಣವೆಲ್ಲ ನಿತ್ಯ ಸೂರಿಗಳು
ಘನ ವೇದಾಂತ ಸಂಗೀತ ಕೋವಿದರು
ವನಜನಾಭನೆ ನಿನ್ನ ಸೇವಿಸುತಿರಲಿ ೧
ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ
ಕುಣಿ ಕುಣಿದೆರಗುವ ಭಕ್ತರ ಬಳಿ ನಾ
ತೃಣಕೆ ಸಮ ನಾನಿಣುಕಿ ಬಾಗಿ
ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ ೨

೨೪೩

ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ
ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ
ಧರೆಯೊಳಗಾನುರೆ ನೊಂದೆನೋ
ಪರಿಪರಿಯಾ ಜನುಮಾಂತರ
ಸರಣಿಯೊಳಾನು ಜನಿಸಿ
ಸೊರಗಿ ಸೊರಗಿ ಮರುಗಿ ತಿರುಗಿದೆ ೧
ನಿಲುವುದಕೇ ನೆಳಲಿಲ್ಲವೋ
ನೆಲೆಸಲಿಕೆ ಸ್ಥಳವು ಇಲ್ಲವೋ
ಸಲೆ ಪೊರೆಯುವ ನಾಥನಿಲ್ಲವೋ
[ಕಲಿ]ಕಾಲಪಾಶ ಬದ್ಧನಾದೆನೊ ೨
ತನುವಿದು ತಾ ನಶಿಸಿ ಪೋಪುದು
ಜನುಮಕೋಟಿಯೊಳಾದು ಪೋಪುದು
ಜನನ ಮರಣ ಬೇಡವೊ ನಿನ್ನ
ನಾಮ ಸ್ಮರಣೆಯೊಂದಿರಲೋ ೩
ಕಾಮ ಕ್ರೋಧ ಲೋಭ ಮೋಹ ಭ್ರಾಮಕನಾದೆನ್ನ
ರಾಮದಾಸವಿನುತ ಕೇಶವಾ [ಉದ್ಧರಿಸೋ]
ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ
ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ ೫

೨೪೪

ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು
ಕೊರತೆಯೇನಿಲ್ಲವೋ ಗೋವಿಂದಾ ಪ
ಉರುತರ ಜನ್ಮವ ಸುರುಚಿರಾಂಗಗಳನ್ನು
ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ
ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು
ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ
ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ
ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು ೧
ನಿನ್ನ ಪಾದದ ತುಳಸಿಯನ್ನು ಘ್ರಾಣಿಸ
ಲೆನ್ನ ಈ ನಾಸಿಕವಿಹುದಯ್ಯ
ನಿನ್ನ ಬಣ್ಣಿಸುವುದಕೆ ಎನ್ನ ಈ ಮನವಯ್ಯ
ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ ೨
ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ
ಳಿನಿತಾಸೆಯೆನಗಿಲ್ಲ ಕೇಳಯ್ಯ
ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ
ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ ೩
ದೇವದೇವನೆ ನಿನ್ನ ಸೇವಕರಿಗೆ ಯೆನ್ನ
ಸೇವಕನೆನಿಸದೆ ಬಿಡಬೇಡಾ
ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ
ದಾಸರದಾಸ ಶ್ರೀ ಮಾಂಗಿರಿಯರಸ ೪

೨೪೫

ನಾಗಶಯನಾ ನಿನಗೆ ದಯಬಾರದೇನೋ ಪ
ಕೂಗಿ ಬೇಸರವಾಯ್ತು ಬಸವಳಿದೆನೋ ಸ್ವಾಮಿ ಅ.ಪ
ಗುಡಿಯ ಪ್ರಾಕಾರದಲಿ ನಡುನಡುಗಿ ಕಡುನೊಂದು
ಮೃಡನು ತಾ ಬಾಯೆಂದು ಕರೆಕರೆಯೆ
ಕಡುಮುದದಿ ಹಿಂದಿರುಗಿ ಕನ್ನವೊಂದನು ಗೈದು
ಸಡಗರದಿ ಮೈದೋರಿದುಡುಪಿನಾಯಕ ಶೌರಿ ೧
ಪೀತಾಂಬರವ ಮಾರಿ ವಿತ್ತಮಂ ತಾರೆಂದ
ಮಾತೆಯಾ ಮಾತಿಗಂಜಿದ ಕಬೀರಂಗೆ
ಖ್ಯಾತಿಯೀಯುವ ಬಯಕೆ ನಿನಗಾಯಿತಲ್ಲವೇ
ಮಾತಿಂಗೆ ಮರುಳಾಗಿ ನಲಿಯಲಿಲ್ಲವೆ ನೀನು ೨
ಸತಿಯೆಪ್ರಾಣವುಯೆಂದು ಕಾರಿರುಳ ಲೆಕ್ಕಿಸದೆ
ಮತಿಗೆಟ್ಟ ತುಳಸಿದಾಸಂಗೊಲಿದೆಯಲ್ತೇ
ಸತತ ಮಾಂಗಿರಿರಂಗ ಪತಿತಪಾವನಾಯೆಂದು
ನುತಿಸಿ ನಾ ಕೂಗುವುದು ಕೇಳದಿಹುದೇ ಸ್ವಾಮಿ ೩

ಇಲ್ಲಿ ಕನಕದಾಸ

೨೪೬

ನಾನಾಗಿ ನನಗಾಗಿ ನಮಿಸುವೆನು ಬಾಗಿ
ನೀನಾಗಿ ಕೃಪೆಮಾಡೋ ದೀನಾನುರಾಗಿ ಪ
ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ
ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ
ತರಳನ ಕರೆತಂದೆ ತರುಣಿಕೂಗಿ
[ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ]
ಹರಿಯೊಂದು ಜಲದಲಿ ನರಳಿದಕರೆಗೆ
ಕರುಣದೊಳೋಡಿ ಬಂದು ಪೊರೆದೆ ನೀತಂದೆ ೧
ಎ್ಞÁನಿಯು ನಾನಲ್ಲ ಮಾನಿಯುಮಲ್ಲ
ಧ್ಯಾನದ ರೀತಿಯ ನಾನರಿತಿಲ್ಲ
ನಾನಾ ಶಾಸ್ತ್ರಂಗಳ ಕಲಿತವನಲ್ಲ
ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ ೨

೨೪೭

ನಾನಾವ ಪರಿಣತನು ನಾನೇನ ತಿಳಿದಿಹೆನು ದೇವ
ನೀನಿರುವುದನು ಕಾಣದವನು ಪ
ಹೀನ ಮಾನವ ನಾನು ಧ್ಯಾನವರಿಯದ ನರನು
ನಾನಾಪರಾಧಗಳ ಮಾಡಿದವನು ಅ.ಪ
ಬೆಣ್ಣೆ ಹಾಲಿನೊಳುಂಟು ಎಣ್ಣೆ ಎಳ್ಳಿನೊಳುಂಟು
ಕಣ್ಣರಿಯದಗ್ನಿಯು ಶಮಿಯೊಳುಂಟು
ಮಣ್ಣಿನಲಿ ಜಲವುಂಟು ಜಲದಿ ಲವಣಗಳುಂಟು
ನೀನೆಲ್ಲರೊಳಗುಂಟು ಎಂದೆಂಬುದರಿಯದ ೧
ವೇದಶಾಸ್ತ್ರಪುರಾಣ ಓದಿದವ ನಾನಲ್ಲ
ವಾದ ವಾಕ್ಯಾರ್ಥಗಳ ಮಾಡಿದವನಲ್ಲ
ಆದಿ ಕೇಶವಪಾದ ಪೂಜೆಗೈದವನಲ್ಲ
ಆದರಿಸಿ ಕಾಯಯ್ಯ ನೀ ಮಾಂಗಿರೀಶ ೨

೨೪೮

ನಾನೊರಲುವಾ ದನಿಯು ಕೇಳದೆ ರಂಗಾ
ನೀನೆನ್ನ ಕಡೆಗಣಿಸೆ ನಿನ್ನ ಬಿರುದಿಗೆ ಭಂಗ ಪ
ನಾರಿಯೊಬ್ಬಳು ಬಾಲರಿಬ್ಬರು ಕರಿಯೊಂದು
ಕ್ಷೀರಾಬ್ಧಿಯೆಡೆಗೈದಿ ಬಾರೋವರೇನೋ
ನಾರದನಾ ಯೆನ್ನಂಗ ಬಾರೆಂದೊಡೇನಾಯ್ತೋ
ನೀರಜಾಂಬಕ ನೀನು ಪರಿದೋಡಲೇಕೋ ೧
ಒಂದೆಲೆಯ ನೈವೇದ್ಯ ಒಂದು ಹಿಡಿಯವಲಕ್ಕಿ
ಒಂದು ಹನಿಗೋಕ್ಷೀರ ಒಂದು ದಳ ಶ್ರೀತುಳಸಿ
ಒಂದು ಫಲವರ್ಪಣಕೆ ತೇಗಲಿಲ್ಲವೆ ಸ್ವಾಮಿ
ತಂದೆಯೆನ್ನಾತ್ಮನೈವೇದ್ಯ ಸಾಲದೆ ರಂಗಾ ೨
ಕಾಲು ಕೈ ಕಣ್ಣು ಬೆನ್ನು ಸೋಲುವಂತಾದಾಗಾ
ನೀಲಾಂಗ ನಿನ್ನ ಸೇವೆಯು ಸಾಧ್ಯವಲ್ಲ
ಕಾಲ ಎಂದೊಳ್ಳಿತೈ ನಾಲಗೆಗೆ ನೋವಿಲ್ಲ
ಬಾಲ ಗೋಪಾಲ ಮಾಂಗಿರಿಯ ರಂಗ ದಯಮಾಡೊ೩

೨೪೯

ನಿನಗಾಗಿ ನಾನೇನ ಕೊಡಬಲ್ಲೆನೋ
ನನಗೇನು ಗತಿಯಿಲ್ಲ ಇದಬಲ್ಲೆನೋ ಪ
ನನಗಾಗಿ ನೀನಿರುವೆ ಪರಮೇಶ್ವರಾ
ನಿನಗಾವ ಕೊರೆಯುಂಟು ಸಕಲೇಶ್ವರಾ ಅ.ಪ
ತನುಭಾವ ದಿನಚರ್ಯೆ ನಿನಗರ್ಪಿತ
ಧನಧಾನ್ಯ ಮನದಿಷ್ಟ ಚರಣಾರ್ಪಿತ
ಸನಕಾದಿ ಮುನಿವಂದ್ಯ ವರದಾಯಕಾ
ಮನದಾಸೆ ಬೇಡ ಮಾಂಗಿರಿನಾಂಇÀಇಕಾ ೧

ನನ್ನ ಕೂಗಿಗೆ ನೀನು

೨೫೦

ನಿನ್ನ ಕಾಣದೆ ಬನ್ನಗೊಂಡೆನೊ ಪನ್ನಗಾರಿ ವಾಹನಾ ಪ
ನಿನ್ನ ಕಂದನೆಂದು ಭಾವಿಸೋ
ಯೆನ್ನ ಪಾಲಿಸೋ ಗೋಪಿನಂದನಾ ಅ.ಪ
ಕರೆದರೆಡೆಗೆ ಬರುವೆಯೆಂದು ಶರಣ ಜನರು ಪೇಳ್ವರಯ್ಯ
ಕರಿಯ ಪೊರೆದು ತರಳ ಧೃವಗೆ ವರವನಿತ್ತುದ ಬಲ್ಲೆನು ೧
ತರಳೆದ್ರೌಪದಿ ಕರವಮುಗಿದು ಕರೆಯಲಾಗ ಬಂದೆರಂಗ
ಬರಿಯಮಾಯೆಯ ತೋರದೆನ್ನ ಪೊರೆಯೋ ಮಾಂಗಿರಿವಾಸರಂಗ೨