Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

ಶ್ರೀಹರಿಸ್ತುತಿಗಳು

ಇಂದಿರಾಪತಿ ನಂದಕಂದನು ಬಂದ ನೋಡುವ ಬಾ ಪ
ಮಂದಹಾಸವ ಬೀರುತಿರುವ
ಸುಂದರಮಂದರಧರ ಮುಕುಂದನ ಅ.ಪ
ಬೆರಳಿಗುಂಗುರ ಧರಿಸಿ ಮೆರೆವ ಕರದ ಮುರಳಿಯ
ಸ್ಮರನಚೆಲ್ಲಿ ಧರೆಯೊಳೆಲ್ಲರ ಕರೆಯುತಿರುವನು
ಸರಸ ಸಂತಸವೆರಿಸಿ ಕೃಷ್ಣನ ಸ್ಮರಣೆಗೈಯುವಾ
ನಿರುತಮವನ ಸನ್ನಿಧಿಯಲಿಬೆರೆತು ಪಾಡುವ ೧
ಮಧುರಗಾನದಿ ಚದುರನಾರಿಯರುದಧಿಶಯನನಾ
ಮುದದಿ ಭಜಿಸಿ ವರವ ಕೇಳಲು ಕಾದುನಿಂತಿಹರು
ಪದುಮನಾಭ ಮಾಂಗಿರೀಶ ಪಾದ ಸೇವೆಯು
ಒದಗಲೆಂದು ನಮಿಸಿನಾವು ಪಾಡಿ ಪೊಗಳುತ ೨

ಇಂದಿರಾ ಮನೋಹರ ನಂದ ಶರಧಿ ಚಂದಿರಾ ಪ
ಮಂದಹಾಸವದನ ಚತುರಾ ಮಂದರೋದ್ಧರಾ ಅ.ಪ
ಶರಧಿ ಶಯನ ಪದ್ಮನಯನ ಸುರಮುನೀಶ್ವರ ನಮಿತ ಚರಣ
ಪರಮ ಕರುಣ | ಸತ್ವಸದನ ಹರಿನಾರಾಯಣ ಗರುಡಗಮನಾ
ದುರುಳ ಭೀಷಣಾ ಶರಣ ತೋಷಣಾ |
ವರದ ಮಾಂಗಿರಿ ಶೃಂಗ ಭವನ ೧

ಕಂಡೆನಿಂದು ಕಮಲನೇತ್ರನ ಪುಂಡರೀಕಭವನಪಿತನ ಪ
ಅಂಡಜಾರಿ ಶಯನನಾ ಉದ್ದಂಡ ಪುಂಡರೀಕ ವರದನ ಅ.ಪ
ಮಂದಹಾಸ ವದನನ ಕುಂದ ಕುಸುಮವದನ್ನ
ಸಿಂಧುಕುವರಿ ಮಂದಿರನ ಸುಂದರಾಂಗನ
ಇಂದುಶೇಖರ ವಿನುತನಾ ಪುರಂದರಾದಿ ಸೇವಿತನಾ
ನಂದನಂದನ ವೇಣುಧರನ ಬಂಧ ಹರಣ ಮಾಂಗಿರೀಶನ ೧

ಕ್ಷೀರಸಾಗರ ಧಾಮ ನಿರ್ಮಲನಾಮ ಪ
ಕರಿವರದಾಯಕ ದುರಿತ ಸಂಹಾರಕ
ಸುರವರಪಾಲಕ ವರರಮಾನಾಯಕ ೧
ಪೀತಾಂಬರಧರ ಖ್ಯಾತ ಮನೋಹರ
ಶ್ರೀತಾಂಬುನಮಕರ ಪ್ರೀತ ಕುಸುಮಧರ ೨
ಕಾಮಿತ ಫಲದಾತ ಕೋಮಲಕರಯುತ |
ರಾಮದಾಸಾರ್ಚಿತ ಪ್ರೇಮರಸಾನ್ವಿತ ಮಾಂಗಿರೀಶ ೩

ಖಗವಾಹನಾ ಜಗಮೋಹನಾ ಪ
ಕಮಲಾಸನಾ ನುತಪಾವನಾ
ಸುರಜೀವನಾ ಸುಮಲೋಚನಾ ಅ.ಪ
ನಿಗಮೋದ್ಧಾರ | ಧೃತಮಂದಾರಾ
ಧರಣೀಧರಾ | ಮೃಗಕಂಧರಾ
ಬಲಿಗೋಚರಾ | ದ್ವಿಜಮಾವರಾ
ಭುವನೇಶ್ವರಾ | ಮುರಳೀಧರಾ ೧
ತ್ರಿಪುರಾಂತಕಾ | ಕಲಿನಿವಾರಕಾ
ಸುರನಾಯಕಾ | ವರದಾಯಕಾ
ಸರಸಿಜಾಂಬಕಾ | ಶುಭಕಾರಕಾ
ಕರುಣಾಬ್ಧಿ ಮಾಂಗಿರಿ ನಾಯಕಾ ೨

ಗರುಡಗಮನ ಪುರುಷೋತ್ತಮ ಶೌರೇ ಪ
ದುರುಳದಮನ ಪರಮಾತ್ಮ ಮುರಾರೇ
ಕರುಣಸದನ ಗೋವರ್ಧನಧಾರೇ
ಸರಸಿಜನಯನ ಪಾತಕ ಸಂಹಾರೇ ಅ.ಪ
ಇಂದಿರಾನಂದ ಗೋವಿಂದ ಮುಕುಂದಾ
ನಂದನಕಂದ ಗೋವೃಂದಾನಂದ
ಸುಂದರ ಬಂಧು ಮುಖಾರವಿಂದ
ವಂದಿತ ನಿರ್ಜರವೃಂದಾನಂದ ೧
ನಿತ್ಯನಿರ್ಮಲಾ ಜಗದಭಿರಾಮಾ
ಬೃತ್ಯಜಾಲಪಾಲನ ಶುಭನಾಮಾ
ನೃತ್ಯನೀಲ ನೀರದ ಘನಶ್ಯಾಮಾ
ಸತ್ಯಕಾಮ ಮಾಂಗಿರಿ ವರಧಾಮಾ ೨

ದಯಾ ಸಾಗರ ದಾನವಾರಿ
ಸರೋಜ ನಯನ ಸೂತ್ರಧಾರಿ ಪ
ಶ್ರೀಯಾಭರಣ ಭೂಷಣ ಶ್ರೀಹರಿ
ನಯ ನೀತಿ ಕಾರಣ ನೃಕೇಸರಿ ಅ.ಪ
ಜನಾರ್ಧನ ಕಮಲಾಲೋಚನಾ
ಸನಕಾರ್ಜಿತ ಸುರಪೂಜನ
ಜನಾನಂದಕರಾರಂಜನ
ಸುನೀಲ ಮಾಂಗಿರಿನಿಕೇತನ ೧

ಇಲ್ಲಿರುವ ದುರುಳ ಭಸ್ಮಾಸುರ

ನಲಿದಾಡು ಬಾರೊ ಗರುಡತುರಂಗಾ ಪ
ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು
ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ ೧
ಲೋಲ ಲೋಚನೆಯರ ಆಲಯಗಳ ಪೊಕ್ಕು
ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ ೨
ಧ್ರುವಗೆ ವರವನಿತ್ತೆ ಪವಮಾನಸುತಗೇ ಅದೆ
(ಭವ ಬಂಧವು ನಾಮಪ್ರಿಯ ಪರಂಧಾಮನೇ) ೩
ಆವ ಬಂಧವನ್ನೂ ಬಿಡಿಸಿ ನವನೀತವೀವನೇ
ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ ೪
ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ
ನಾಮವ ನೆರೆಸಾರು ರಾಮದಾಸಾರ್ಚಿತ ೫

ನಿರುಪಮ ಚರಿತಾ ಮಾಂಗಿರಿನಾಥಾ ಈಪ್ಸಿತ ವರದಾತಾ ಪ
ಸರಸಿಜ ಸಂಭವ ನುತ ಗಂಗಾಪಿತ ಪಂಕಜಾಕ್ಷ
ಮೋಕ್ಷದಾತ ನಾರದ ಮುನಿ ವಿನುತಾ ಅ.ಪ
ಶ್ರೀಕರ ಸುಖಕರ ಸುರುಚಿರ ಹಾರಾ
ಶೋಕ ವಿದೂರ ಭವಪರಿಹಾರಾ
ಭೀಕರ ರಾಕ್ಷಸ ವಂಶ ಭಯಂಕರ ಕಿಂಕರ ಶಂಕರಗಾನಸು
ಧಾಕರ ಲೋಕಪಾಲ ಪರಮ ಚತುರ ೧

೧೦

ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ
ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ
ಘೋರ ಕಲುಷಜಾಲಹರಣ ಮಾರಮಣ ಪದುಮಚರಣ
ಸಾರಸೋದ್ಭವ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ ೧
ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ
ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ೨
ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ
ದುರಿತ ಜಾಲಹರಣ ರಥಾಂಗಾ |
ಕರುಣಾಪಾಂಗ ಮಾಂಗಿರಿರಂಗ೩

೧೧

ನೀರಜನೇತ್ರ ನೀಲಾಂಬುದ ಗಾತ್ರ
ವಾರಿಜಸಂಭವ ಸನ್ನುತಿ ಪಾತ್ರ ಪ
ನಾರದ ವಂದಿತ ಭೂಸುರ ಗಾತ್ರ
ಶ್ರೀರಮಣೀಯುತ ತ್ರಿಭುವನ ಸೂತ್ರ ಅ.ಪ
ಮಂಗಳದಾತಾ ಧನಂಜಯ ಸೂತ್ರ
ಅಂಗಜತಾತ ವಿಹಂಗಮ ರುಂದ್ರ
ಮಾಂಗಿರಿನಾಥ | ಚರಾಚರ ಭರಿತ
ತುಂಗ ಕೃಪಾಯುತ | ಪಾವನ ಚರಿತಾ ೧

೧೨

ನೀನಾರ ಕಂದನೊ | ನಿನಗವನಾರು ತಂದೆಯೊ |
ಪೇಳಾರು ತಾಯಿಯು ಪ
ಕ್ರೋಧವಾಂತ ಕಂಬೋದ್ಭವನು |
ಘಾಟಿ ದೈತ್ಯವಂಶ ಪ್ರತಾಪನ ಸುಲಿದವನು
ಕೋಟಿರೂಪಯುತನು ಸಾಟಿಯಿಲ್ಲದವನು ಲೋಕಪಾಲಕನು ೧
ಲೋಕವ ಬೆಳಗುವ ದಿನಕರನು |
ಜಗವ ದಹಿಸುವ ಪಾವಕನು [ಆ
ನೇಕ ಮಹಿಮೆಯ ತೋರುವ ಪರಶಿವನು | ಪರಾತ್ಪರನು
[ಶೋಕಿಪ] ಶರಣರ ಪಾಲಿಪನು ನಿಗಮ ಮಂದಿರನು ೨
ಧಾರುಣಿಯ ರೇಣುವಲಾ |
ತರಂಗದ ನೆಲೆಯೆನಿಸುವ ಜಲಧಿ | ವಿ
ಚಾರಿಸೆ ಅಣುತರಬಿಂದುವಲಾ ಬಲು ಮೊರೆವಾ
ಮಾರುತಿ ಸುಯಿಲುದಲಾ ಸಕಲ ಮೂಲಮಾಂಗಿರೀಶನಲಾ೩

ಶ್ರೀಹರಿಯ ಭಾಗವತೋದ್ಧಾರದ

೧೩

ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ
ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ
ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ
ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ
ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ
ಕನಕದಾಸನು ಗೆದ್ದ ಇದು ಸರ್ವಸಿದ್ಧ ೧
ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ
ಧರೆಗೆ ಕಂಸನುಬಿದ್ದ ಅಕ್ರೂರ ಗೆದ್ದ
ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ
ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ ೨
ಸುಲಭನೊ ಮಾಂಗಿರಿಯ ರಂಗ ಜಗದಾನಂದ
ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ
ಬಲು ಮೆರೆದ ಕೌರವನ ಕುಲವಿನಾಶವ ಗೈದ
ಚೆಲುವ ಮಾಂಗಿರಿರಂಗ ಶರಣರಿಗೆ ವರದ೩

೧೪

ಪರಮ ಕರುಣ ರಮೆಯ ರಮಣ ಉರಗಭೂಷಣಾ ಪ
ದುರಿತಹರಣ ಶರಣಾವರಣ | ವರದ ಕಂಕಣಾ ಅ.ಪ
ಶ್ರುತಿಗಳೆಲ್ಲ ನುಡಿವುದಲ್ಲ | ಪಿತನೆಂಬ ಸೊಲ್ಲ
ಪತಿತರ ನೀ ಪೊರೆದೆಯೆಲ್ಲ | ಹಿತವೇಕೆನ್ನೊಳಿಲ್ಲಾ ೧
ಅಸ್ತಿಪಂಜರವೆಂಬೀ ಮಂದಿರ | ವಸ್ತಿರಾಂಬರ
ವ್ಯಸ್ತ ಪಂಚಭೂತದಾಕಾರಾ ಗ್ರಸ್ತ ನಶ್ವರಾ ೨
ಜನನ ಮರಣ ದುರಿತಗಡಣ | ಮನುಜ ಭವಿ ಶರಣ
ಮನಕೆ ಶೋಕಾನೇಕ ಕಾರಣ | ದನುಜ ವಿದಾರಣಾ ೩
ಧರೆಯೊಳುದಿಪ ಸೆರೆಯ ಬಿಡಿಸೋ | ವರವ ಕರುಣಿಸೋ
ಹರಿಯೆ ರಾಮ ವಿಠಲ ಪಾಲಿಸೋ | ನಿರುತ ನಿರುಕಿಸೋ೪
ಕಾವರನ್ಯರಿಲ್ಲವೆನ್ನ | ಶ್ರೀವನಿತಾರನ್ನ
ಮಾವಿನಕೆರೆಯರಸ ಮುನ್ನ | ನೋವ ಬಿಡಿಸೆನ್ನ ೫

೧೫

ಭಜ ಭಜ ಮಾನಸ ಮಾಂಗಿರಿವಾಸಂ ಪ
ಅಜಸುರ ಸೇವಿತಂ ಪಂಕಜನೇತ್ರಂ
ಗಿರಿರಾಜಾನುತ ನೀರದ ಗಾತ್ರಂಅ.ಪ
ಗಾನವಿಲೋಲಂ ಮುನಿಜನ ಪಾಲಂ
ದಾನವ ಕಾಲಂ ಪೀತದುಕೂಲಂ
ಮೌನಿಮರಾಲಂ ಧೃತವನಮಾಲಂ
ಜಾನಕಿಲೋಲಂ ಹೃದಯವಿಶಾಲಂ
ಪೀನಕಪೋಲಂ ಗೋಕುಲ ಬಾಲಂ ೧

೧೬

ಭಜಿಸಿರೋ ಭಜಿಸಿರೋ ಅಜನ ಪೆತ್ತವನಾ
ಭುಜಗಶಯನ ಮದಗಜವ ಪೊರೆದನಾ ಪ
ಭಜಕರ ಕೂಗಿಗೆ ನಿಜವ ತೋರುವನಾ
ಸುಜನೋದ್ಧಾರನ ವಿಜಯ ರಾಘವನಾ ಅ.ಪ
ರಾಗವಿದೂರನ ರಾಗೋಲ್ಲಾಸನ
ರಾಗಕೆ ಒಲಿವನಾ ರಾಗವನುಣಿಪನ
ರಾಗದಿ ಮುರಳಿಯ ಊದಿ ರಾಜಿಸುವನ
ರಾಗದಿ ನಮಗನುರಾಗವನೀವನ೧
ಶರಣರ ದುರಿತವ ಪರಿಹರಿಸುವನ
ಧರಣಿಯನೀರಡಿ ಅಳೆದವನ
ಕರುತುರುಗಳ ಕನಿಕರದಿಂಕಾಯ್ದನ
ವರದಾಯಕ ಮಾಂಗಿರಿ ರಂಗಯ್ಯನ೨

೧೭

ಭರಿತ ದಯಾಸಾರ ವಿಹಾರಾ | ಭರಿತ ದಯಾಸಾರಾ ಪ
ಶ್ರೀವನಮಾಲಾ | ಆಗಮ ಮೂಲಾ
ನಿರುಪಮ ಲೀಲಾ ಗೋಕುಲ ಬಾಲಾ
ತ್ರಿಭುವನ ಪಾಲಾ ದಾನವ ಕಾಲಾ
ಸುಮನಸ ಪಾಲಾ | ತುಳಸೀಮಾಲಾ ೧
ಶುಭಕರ ಚರಿತಾ | ಮುನಿಗಣ ವಿನುತಾ
ಸುರಗಣ ಸನ್ನುತಾ | ಸುಭವ ನಮಿತಾ
ಶರಣ ಜನಾನತ ಸಕಲಾಧಿತಾ
ಕಾಮಿತ ದಾತ-ಮಾಂಗಿರಿನಾಥಾ೨

೧೮

ಯಾರಿಗೆ ಹೋಲುವೆ ನಿನ್ನ ಯಾರಲ್ಲಿ ಸಲ್ಲಾಪಿಸಲಿ
ಮಾರನೋ ಮದನನ ಪಡೆದ ಕೇಶವನೋ ಪ
ವಾರಿಜಭವ ಚರಣನು ನೀರಜನಾಭನು
ಸಾರಸವದನನು ವಾರಿಧಿಶಯನನು ಅ.ಪ
ಆಹವ ಭೀಮನೋ | ಸಾಹಸ ಮಲ್ಲನೋ
ಬಹು ಸುದೀರ್ಘನು ಮೋಹಮಂದಿರನು
ಮಹಿಜೆಯರಸನೋ ಅಹಿಯ ಶಯನನೋ
ಬಹುಗುಣಾನ್ವಿತ ವೆಂಕಟೇಶನೋ
ಮಹಿತ ಮಹಿಮನು ಸಾಹಸ ಶೀಲನು
ಪಾಹಿರಘು ಕುಲಪತಿ ಚೆನ್ನ ಚೆಲುವನು ೧
ಉರಗ ಭೂಷಣನೋ | ಸರಸಿಜ ಭವನೋ
ಧರಣಿಯ ಅಳೆದ ಪರಮಪುರುಷನೋ
ಗರುಡಗಮನನೋ | ಕರುಣ ಭಜಿಪನೋ
ನರಪಸುತ ಕೋದಂಡಧರನೋ
ಮೆರೆವ ಕಾಂಚೀಪುರದ ವರದನೋ
ನಿರುತ ವಂದಿತ ಮಾಂಗಿರೀಶನೋ ೨

೧೯

ರಮಾ ಮನೋಹರ ಶ್ಯಾಮಸುಂದರ
ವಿಮಾನ ಶೋಭಿತ ಹರೇ ಹರೇ ಪ
ಕುಮಾರಪಿತನುತ ಶವಇ ದಮಾಯುತ
ಸಮಾನ ವಿರಹಿತ ನಮೋ ನಮೋಅ.ಪ
ಪರೇಶ ಯದುಪತಿ, ಪಾರ್ಥಸಾರಥಿ
ಸುರೇಶ ಪಶುಪತಿ, ನಾರಾಯಣಾ
ಧರೇಶ ರಘುಪತಿ ಲಾವಣ್ಯಮೂರುತಿ
ಹರೀಶ ಮಾರುತಿ ಪಾರಾಯಣ ೧
ಗೋಪಾಂಗನಾ ಪ್ರಿಯ ಗೋಪಾಲ ಬಾಲ
ಚಾಪಾಂಬುಕರ ಭಯಹಾರ ಪ್ರಮೇಯ
ಶ್ರೀಪಾದ ಚಿನ್ಮಯ ಸೌಂದರ್ಯ ಶೀಲ
ಭೂಪಾಲ ಮಾಂಗಿರಿ ಶೃಂಗಾರ ನಿಲಯ೨

೨೦

ವಿಶ್ವಾಧಾರಾ ವಿಹರಿತ ಮನ
ವಿಸ್ಫುರಿತಾನನ ಪಂಕೇಜಲೋಚನ ಪ
ಶರನಿಧಿ ಶಯನ ಸಿರಿಸತಿ ಸದನ
ತ್ರಿಭುವನ ಮೋಹನ ನಿಶಾಚರ ದಹನ ಅ.ಪ
ಶೌರೀ ಶೌರೀ ಶೌರೀ ಶೌರಿ ಮುರಾರೀ
ರಾಧಾ ಮನೋಹಾರಿ ಶಂಖ ಚಕ್ರಧಾರಿ
ನಿಶಾಚರಾರಿ ಜನೋಪಕಾರಿ
ಕರುಣಾಲಹರಿ ಶ್ರೀಹರಿ ೧

೨೧

ಶ್ರೀಗದಾಧರ ಪಾಹಿಮಾಂ ಹರೆ
ಭೋಗಿಶಯನ ಶೌರೇ ಪ
ಯಾಗ ಯೋಗ ಗಮ್ಯ ನೃಹರೆ
ತ್ಯಾಗಶೀಲ ಭೋ ಮುರಾರೆ ಅ.ಪ
ಮೃತಮಾನವ ಸುಗತಿ ದಾತಾ
ಪತಿತಾನತ ದಿವ್ಯ ನೀತ
ದಿತಿವಂಶಜ ಹರಣ ಖ್ಯಾತಾ
ಯತಿ ತಾಪ ಸನ್ನುತ ಚರಿತಾ ೧
ಶೃತಿ ಪುರಾಣ ಭರಿತ ವಿದಿತ
ಧೃತಿ ರಥಾಂಗ ಮಣಿರಂಜಿತ
ಜಿತಗಯಾಸುರ ವಿನುತ ನಮಿತ
ಖ್ಯಾತಮಾಂಗಿರಿ ವರೂಥ೨

೨೨

ಶ್ರೀವತ್ಸಾಂಕಿತ ಗರುಡ ತುರಂಗ
ಕಾವೇರಿ ಜಲ ಪರಿವೃತ ರಂಗ ಪ.
ದೇವೋತ್ತಮ ನುತ ಧರಿತ ರಥಾಂಗ
ಪಾವನ ಚರಣ ಕೃಪಾಂಗ ಶುಭಾಂಗ ಅ.ಪ.
ದೇವಕೀನಂದನ ಜಲದ ನೀಲಾಂಗ
ಭಾವಜಪಿತ ದಯಾಜಲಧಿ ತರಂಗ
ಶ್ರೀವನಮಾಲಾ ರಿಪುಮದ ಭಂಗ
ಲಾವಣ್ಯಾಂಬರ ಕರುಣಾಪಾಂಗ ೧
ರಾವಣ ಕುಲ ಸಂಹಾರಕ ರಂಗ
ಶ್ರೀವಿಭೀಷಣ ಪೂಜಿತ ರಂಗ
ಭಾವುಕ ಮುನಿಜನ ಸನ್ನುತ ರಂಗ
ಶ್ರೀವಸುಧಾನ್ವಿತ ಮಾಂಗಿರಿರಂಗ ೨

೨೩

ಶ್ರೀನಿವಾಸ ಮಾ[ವಿಲಾಸ] ಮಾನವೇಶ
ಈಶ ಶ್ರೀಶ ದೀನ ಪೋಷಕ ಕಲುಷ[ನಾಶ ಮಾಮನಸಂತೋಷ] ಪ
ಗಾನಲೋಲ ಭಕ್ತಜಾಲ ದೀನರಿಗೆ ಕರುಣಾಲವಾಲ ಮಾ[ನ]ವರ್ಗೆ
ವಿಲೋಲ ಸಂಕುಲ ದಾನವಾಬ್ಧಿ ಕುಲಾಲೀಲ ೧
ಲಕ್ಷರೂಪನೆ ರಾಕ್ಷಸಾರಿ ಮೋಕ್ಷದಾತ [ನುತಪಾಲಕ]
ಯಕ್ಷಪಾಧಿಪ ಸುತೆಯ ರಮಣ ಯಕ್ಷ ಕಿನ್ನರ ವಿನುತ ಚರಣ೨
[ಲಕ್ಷ್ಯವಿರಲಿ ರಾಮದಾಸಾರ್ಚಿತ ಭಾಗವತ ಪ್ರೋಕ್ತ]
ರಕ್ಷಿಸೈ ವರಪದ್ಮಚರಣ [ಮಾಂಗಿರಿ] ಭೂ ರಮೆಯ ರಮಣ೩

೨೪

ಶ್ರೀಲಲಾಮ | ಶ್ರೀನಿವಾಸ |
ಪಾಲಯಾ ಶುಮಾಂ ಹರೇ ನೀಲಮೇಘ ಶ್ಯಾಮ ಸುಂದರ |
ಬಾಲ ಭಾಸ್ಕರಾ | ಮುರಾರೆ ಪ ಭಕ್ತ ಜನಾನಂದದಾತ |
ಅಮರಕ್ಷೋಣಿ ಸಂಸೇವಿತ ಶಕ್ತ ಸರ್ವಲೋಕ ಖ್ಯಾತ |
ವ್ಯಕ್ತರತ್ನ ಶೋಭಿತ ಯುಕ್ತಿ ಶಕ್ತಿ ಸಂಭೂಷಿತ |
ವ್ಯಕ್ತ ನಿಗಮ ಸಂಗಮ ಸಂಭಾವಿತ ರಿಕ್ತ ಮಾನವ ಸಂಪೂಜಿತ |
ಸೂಕ್ತ ರೂಪದ ಮಾಂಗಿರಿನಾಥ ೧

೨೫

ಭಜ ಭಜ ಮಾನಸ ಗರುಡತುರಂಗಂ
ಅಜ ಸುರಸೇವಿತ ಪಾಂಡುರಂಗಂ ಪ
ಗಜರಾಜಾನತ ಮೋಹನರಂಗಂ
ವಿಜಯಧ್ವಜ ಶ್ರೀಪಾವನರಂಗಂ ಅ.ಪ
ಗಿರಿಧರ ಮುರಹರ ಭೂವರ ರಂಗಂ
ನರಕೇಸರಿ ಮುಖರಾಜಿತ ರಂಗಂ
ವರಶುದ್ಧಾಚ್ಚುತ ಸುರುಚಿರ ರಂಗಂ
ಪರಶಿವ ದಾನವ ವಿನಮಿತ ರಂಗಂ ೧
ಸನಕ ಸನಂದನ ಮುನಿನುತ ರಂಗಂ
ಹನುಮ ವಿಭೀಷಣ ಸನ್ನುತ ರಂಗಂ
ಘನಮಣಿ ಮೌಕ್ತಿಕ ಶೋಭಿತ ರಂಗಂ
ಜನಕ ಧರಾವಿವ ಪೂಜಿತ ರಂಗಂ ೨
ಮಂಗಳದಾಯಕ ಶುಭಕರ ರಂಗಂ
ಸಂಗರ ಧೀರ ಸುಧಾಕರ ರಂಗಂ
ಗಂಗಾಜನಕ ಕೃಪಾಂಬುಧಿ ರಂಗಂ
ಅಂಗಜ ಜನಕ ಶ್ರೀ ಮಾಂಗಿರಿ ರಂಗಂ ೩

೨೬

ಆನಂದ ಚಂದಿರನೇ ದಾಸನನೇಕಿಂತು ಮರೆವೇ
ಪ ದೀನ ದಯಾಪರ ನೀನು ಮನುಜಾಧಮ ನರ ನಾನು ಅ.ಪ
ತ್ರಿಜಗಾಧಿಪ ಸುಪೂಜ್ಯನೇ |
ಗಜರಾಜ ನತ ಪಾದನೇ ಅಜಸನ್ನುತ ವೈಭವನೇ |
ಸುಜನಾವಳಿ ಸನ್ನುತನೇ ೧
ಕರುಣಾಮಯ ಸಾಗರನೇ |
ಪುರುಷೋತ್ತಮ ಮಾಧವನೇ ಉರಗಾಧಿಪ ಭೂಷಿತನೇ |
ಗರುಡಧ್ವಜ ಕೇಶವನೇ೨ ಕಡಲವಾಸ ದುರಿತನಾಶ |
ಒಡಲ ಬೇಗೆ ಮನದ ಕ್ಲೇಶ ದಡಕೆಸೆಳೆದ ಬಂಧುನಾಶ |
ಬಿಡಿಸಿ ಕಾವವ ಮಾಂಗಿರೀಶ ೩

೨೭

ಆವ ಭಯ ಎನಗಿಲ್ಲ |
ದೇವ ನಿನ್ನಯ ಪಾದ ಸೇವೆ ಮಂತ್ರವು ಎನ್ನ |
ಭಾವದೊಳಿರಲು ಪ ಸಾವಿಗಂಜುವನಲ್ಲ |
ನೋವಿಗಂಜುವನಲ್ಲ ಜೀವಕೋಟಿಯನೆಲ್ಲ |
ಕಾವನೀನಿರಲಾಗಿ ಅ.ಪ ವರದಾತ ನೀನಿರಲು |
ನರಕ ಭಯ ಎನಗುಂಟೆ ಪರಮ ಪುರುಷಾರ್ಥಗಳ |
ಕರವೆತ್ತಿ ಕೊಡುವ ಧರಣೀಶ ಮಾಂಗಿರಿಯ |
ಸಿರಿರಂಗಪತಿ ನಿನ್ನ ಸ್ಮರಣೆ ವಂದನೆ ಎನ್ನ ಮನದೊಳಿರಲು೧

೨೮

ಇನ್ನಾದರೂ ಮನದ ಚಂಚಲವ ನಿಲ್ಲಿಸೋ
ನೆನ್ನೆ ಕಳೆಯಿತು ನಾಳೆ ಇನ್ನೇನು ಗತಿಯೋ ಪ
ಗುರುಹಿರಿಯರನು ಕಂಡು ಶಿರಬಾಗಿ ವಂದಿಸಲು
ಚಿರಬಾಳು ನೂರ್ವರ್ಷ ಎಂದೆಂಬರು ಧರೆಯಿಂದ ಜವನವರು
ಕರೆಯ ಬರುವಾದಿನವೆ ಬರಿದಾಗುವುದು ನೂರು ವರ್ಷವದರಿಂದ ೧
ಧನಕನಕ ಮನೆ ಮಾಟ ಎನಗೆ ಚಿರವೆಂದೆನುತ
ಮನವಿಂದ್ರಿಯಂಗಳನು ನಡಸಿತೆಲ್ಲೆಡೆಗೆ ತನಗಾಗಿಯೇ
ಸಕಲ ಜನರು ಜನಿಸಿದರೆಂದು ನೆನೆದು ಹಿಂಸಿಸಿತವರ ಓ ಮಾಂಗಿರೀಶ ೨

೨೯

ಎಂದಾದರೊಂದು ದಿನ ನಿಂದು ನೋಡುವೆ
ನಿನ್ನ ಸುಂದರ ಪದಾಂಬುಜವ ಇಂದಿರೇಶ ಪ
ಬಂದ ಸುಖ ದು:ಖಗಳ ಒಂದಾಗಿ ತಿಳಿಯುತಲಿ
ತಂದೆ ಗೋವಿಂದ ಸಲಹೆಂದು ನಂಬಿರುವಾಗ ಅ.ಪ
ಮಾ ಮನೋಹರಾ ನಿನ್ನ ನಾಮ ಭಜನೆಯ ಗೈದು
ಕಾಮಿತಾರ್ಥಂಗಳನು ನಾ ಮರೆಯುತೇ
ನಾಮಾಳ್ಪ ಕರ್ಮಗಳ ನೇಮದಿಂದಲಿ ಗೈದು
ರಾಮಾರ್ಪಣಾ ಎಂದು ಪ್ರೇಮದಿಂದರ್ಪಿಸಲು ೧
ಬಂದ ಅಭ್ಯಾಗತರಿಗೊಂದು ಪಿಡಿ ಅನ್ನವನು
ಎಂದೀಯಲೀವೆಯೋ ಅಂದು ಹರಿದಿವಸ
ಎಂದೀಯಲಾರೆಯೋ ಅಂದೆನಗುಪೋಷ್ಯವನು
ಸಂದೇಹವಿಲ್ಲದೀಯೆಂದು ನಂಬಿರುವಾಗ೨
ದೊರೆಯದಿಹ ವಸ್ತುಗಳು ಹರಿಸಮರ್ಪಣವೆಂಬೆ
ದೊರೆತ ವಸ್ತುಗಳೆಲ್ಲ ಹರಿಕರುಣವೆಂಬೆ
ಗರುಡವಾಹನ ನಿನ್ನ ಶರಣು ಹೊಕ್ಕಿರುವಾಗ
ಕೊರತೆ ಏನಿಲ್ಲ ಮಾಂಗಿರಿ ರಂಗವಿಠಲ೩

೩೦

ಆದಿದೇವ ಕರಣಕಾರಣ ಪ
ವೇದಪ್ರಿಯ ನಾದಪ್ರಿಯ ಸಾರಸ ಚರಣಾ
ಆದಿತೇಯ ವರದಾಭಯ | ದಾತಾ ಪ್ರೀತಾ ಮಾರಮಣಾ ಅ.ಪ
ವಾಸುದೇವ ಜೀವ ಜೀವ ಪಾವನತರ ಭಾವಾ
ಶ್ರೀ ಸಮೇತ ನೀರಜಾತ ಲೋಚನ ಜಗವಿನುತಾ
ಭಾಸಮಾನ ತೇಜವದನ ದಾನವ ಕುಲ ಮಥನ
ವಾಸವಾದಿ ನರಹರಿ ಮಾಂಗಿರೀಶ ಶೌರೀ ೧

೩೧

ಸಂಕರ್ಷಣ ವಾಸುದೇವ | ಸಂಕಟ ಹರಣ
ಶಂಖ ಚಕ್ರಧಾರಿ ಹರಿ | ವೆಂಕಟಾಚಲಾಧೀಶಾ ಪ
ಪಾಹಿ ಪರಮ ಹಂಸವಿನುತ | ಪಾಹಿ ಪರಮ ವೇದಚರಿತ
ಪಾಹಿ ಕಮಲಜಾತ ನಮಿತ | ಪಾಹಿಮಾಂ ಹರೇ
ಪಾಹಿ ಪರಮ ಕರುಣದಿಂ ಪಾಹಿ ಮಾಂಗಿರಿವಾಸ ೧

೩೨

ವಾಸುದೇವ ತೇ ನಮೋ ನಮೋ
ವಾಸವ ವಂದಿತ ನಮೋ ನಮೋ ಪ
ಕೇಶವ ಮಾಧವ ಕೃಷ್ಣ ದಾಮೋದರ
ಶ್ರೀಶ ಪರೇಶ ವಿಷ್ಣು ಪೀತಾಂಬರ
ಈಶ ಮುಕುಂದ ವೈಕುಂಠ ಪರಾತ್ಪರ
ಕೌಶಿಕ ಗೌತಮ ಮೌನಿ ಶುಭಂಕರ ೧
ಶೌರಿ ಚತುರ್ಭುಜ ಚಕ್ರಧರಾಚ್ಯುತ
ವೈರಿ ಭಯಂಕರ ಸಕಲಾಗಮನುತ
ಸಾರಸನಾಭ ನೀರೇಜ ಭವಾನತ
ಮಾರಜನಕ ರಘುವೀರ ಶಿವಾರ್ಚಿತ ೨
ಶ್ರೀಮಹಿತಾಂಗಾ ರಂಗಾ ನಮೋ ನಮೋ
ಶ್ರೀಮಣಿಹಾರಾ ರಂಗಾ ನಮೋ ನಮೋ
ಶ್ರೀಮುಕುಂದಾ ಶ್ರೀರಂಗಾ ನಮೋ ನಮೋ
ಶ್ರೀಮಾಂಗಿರಿ ವರರಂಗಾ ನಮೋ ನಮೋ ೩

೩೩

ಕೇಶಿದನುಜನ ನಾಶಗೊಳಿಸಿದ ಕೇಶವನೆ | ಕಾಯೋ ಶ್ರೀಧರ ಪ
ನಾಶರಹಿತ ಪರೇಶ ದಿನಪಸಂಕಾಶ | ಕ್ಲೇಶವಿನಾಶ ಭೂಧರ ಅ.ಪ
ದೀನಪಾಲನೆ ಗಾನಲೋಲನೆ ಧೇನುಕಾಸುರ ಸೂದನೆ
ಎ್ಞÁನದಾತನೆ ಧ್ಯಾನಕೆನಲಿವನು ಸಾನುರಾಗ ವಿನೋದನೆ ೧
ಗಂಗಾಜನಕ ರಥಾಂಗ ಧೃತ ಕಾಳಿಂಗನ ವೈರಿ ಗೋಪಾಲನೆ
ಮಂಗಳಾಂಗ ಶುಭಾಂಗ ಮಾಂಗಿರಿ ರಂಗ ಗೋಪೀ ಬಾಲನೆ ೨

೩೪

ಶ್ರೀಧರ ಕೇಶವ ಮುಕುಂದ ಜಯತು ಪ
ಮಾಧವ ಮುರಹರ ಗೋವಿಂದ ಜಯತು
ಭೂಧರ ನರಹರಿ ಮುಕುಂದ ಜಯತು
ಯಾದವ ಗಿರಿಧರ ಗೋವಿಂದ ಜಯತು ೧
ದಶರಥ ಸುತವರ ಮುಕುಂದ ಜಯತು
ಶಶಿಧರ ಸುತವರ ಮುಕುಂದ ಜಯತು
ನಿಶಚರ ಬಲಿಹರ ಗೋವಿಂದ ಜಯತು೨
ನೃಪಾಲಕುಮಾರ ಮುಕುಂದ ಜಯತು
ನೃಪಾಲ ಕುಠಾರ ಗೋವಿಂದ ಜಯತು
ಅಪಾರ ಸಂಸಾರ ಗೋವಿಂದ ಜಯತು ೩
ಸುರಾರಿ ಮದಕರಿ ಮೃಗೇಂದ್ರ ಜಯತು
ಖರಾರಿಯನುಪಮ ನರೇಂದ್ರ ಜಯತು
ಮುರಾರಿ ಹರಿ ಮಾಂಗಿರೀಂದ್ರ ಜಯತು ೪

೩೫

ಕರ್ಣರಸಾಯನ ನಿತ್ಯ ಪಾರಾಯಣ
ವರ್ಣವರ್ಣವು ಶ್ರೀಹರಿ ನಾರಾಯಣ ಪ
ಸತ್ಯಪೂರ್ಣಗುಣ ಚಿತ್ಸುಖಧಾರಣ
[ನಿತ್ಯಾ]ನಂದದ ನಾರಾಯಣಅ.ಪ
ಪಾತಕ ಪರಿಹರ ಖ್ಯಾತ ಮನೋಹರ
ಪೀತಾಂಬರಧರ ಮುರಳೀಧರ
ದನುಜ ಭಯಂಕರ ದಿವಿಜ ಸುಖಂಕರ
[ವಿನುತ] ಶ್ರೀ ಮಾಂಗಿರಿವರ ಜಗದಾಧಾರ ೧

೩೬

ನಾರಾಯಣ ನಾರಾಯಣ ನಾರದನುತ ಮಾಂಪಾಹಿ ಪ
ನೀರೇರುಹನಾಭ ಸತ್ಯ [ಪ್ರೀತ] ನಾರಾಯಣ ಮಾಂಪಾಹಿ
ನಾರಾಯಣ ವೇದಾಂತ ನಾರಾಯಣ ಮಾಂಪಾಹಿ ಅ.ಪ
ಶರಣಾಗತ ಪರಿಪೂಜಿತ ಸರಸೀರುಹಭವವಂದಿತ
ಕರುಣಾಕರ ದಿವ್ಯಶೇಷ ನಾರಾಯಣ ಮುನಿಸೇವಿತ
ಸುರನಾಯಕ ನಿತ್ಯವಿನುತ ಮುರಳೀರವ ಪರಿತೋಷಿತ
ವರದಾಯಕ ಮಾಂಗಿರೀಶ ಪರಿಪಾಲಯ ಪಾರ್ಥಸೂರಿ ೧

೩೭

ನಾರಾಯಣ ನಾರಾಯಣ ಶರಣಾಗತ ಕರುಣಾ
ನಾರಾಯಣ ನಾರಾಯಣ ಸರಸೀರುಹ ಚರಣಾ ಪ
ನಾರಾಯಣ ನಾರಾಯಣ ಭವಸಾಗರ ತರಣಾ
ನಾರಾಯಣ ನಾರಾಯಣ ಶೌರೆ ಮಾರಮಣಾ ಅ.ಪ
ಕೇಶವ ಮಾಧವ ಗೋವಿಂದ ಹರೇ
ಕೇಶವ ಪರಾತ್ಪರ ಸಾನಂದ ಹರೇ
ಕ್ಲೇಶನಾಶ ದಾಮೋದರ ಶೌರೇ
ಈಶ ಪರೇಶಾದಿನೇಶಾ ಮುರಾರೇ ೧
ಉರಗ ಶಯನ ಸರಸೀರುಹ ನೇತ್ರಾ |
ಗರುಡಗಮನ ನೀಲಾಂಬುದಗಾತ್ರ
ವರದಾಭಯಕರ ಪುಣ್ಯ ಚರಿತ್ರಾ |
ಸುರನಾಯಕನುತ ಪರಮ ಪವಿತ್ರಾ ೨
ಪೀತಾಂಬರ ಪಾವನತರನಾಮಾ |
ಸೀತಾ ಮನೋಹರ ಸುರಮುನಿಪ್ರೇಮಾ
ಪಾತಕಹರ ದೈತ್ಯಾವಳೀ ಭೀಮಾ |
ಖ್ಯಾತಚರಿತ್ರ ಮಾಂಗಿರಿ ವರಧಾಮಾ ೩

೩೮

ಪ್ರಣಮಾಮ್ಯಹಂ ನಾರಾಯಣ |
ಘಣಿ ಭೂಷಣಂ ಮುನಿ ತೋಷಿಣಂ ಪ
ಭವ ತಾರಣಂ ಭಯನಿವಾರಣಂ |
[ತವ] ಸುಖಕಾರಣಂ ಮಣಿ ಭೂಷಣಂಅ.ಪ
ಅಜಸೇವಿತಂ ಕರುಣಾನ್ವಿತಂ
[ಗಜಪೂಜಿತಂ] ಮುನಿ ಸನ್ನುತಂ |
[ದ್ವಿಜರಾಜಿತಂ ಕಮಲಾಯುತಂ]
ಸುಜನಾಪ ಮಾಂಗಿರಿ ಶೋಭಿತಂ ೧

೩೯

ವೇದವಿದಿತ ಮಾರಮಣ ಹರೇ ಪ
ವೇದಾಂತಾಗಮ ಸನ್ನುತ ಚರಣ
ಶ್ರೀಧರ ಗಂಗಾಪಾದ ನಾರಯಣ ಅ.ಪ
ಸಾರಯೋಗಿ ಕವಿತಾರಸ ತೋಷಿತ
ಕೈರವ ಸುಮಭವ ವಾಣಿ ವಿಭೂಷಿತ
ಚಾರು ಮಾಧವಿ ಭವ ವಾಗ್ರಂಜಿತ
ನಾರಾಯಣ ತೇ ನಮೋ ನಮೋ ೧
ಭೋಗ ಮಂಟಪೋಲ್ಲಾಸ ಮುಕುಂದ
ತ್ಯಾಗ ಮಂಟಪೋಲ್ಲಾಸ ಗೋವಿಂದ
ನಾಗಶಯನ ಶರಣಾಗತ ಬೃಂದ
ಯೋಗ ಮಂಟಪ ಮಾಂಗಿರಿಪತಿ ನಮೋ ನಮೋ೨

೪೦

ಸೂರಿ ವಿನುತ ಚರಣ ನಾರಾಯಣ ಪ
ವಾರಿಧಿಶಯನ ಘಣಿಮಣಿ ಭೂಷಣಾ
ಸಾರಸಭವನುತ ನಾರಾಯಣಾ ಅ.ಪ
ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
ಸಿಂಧುಶಯನ ಗೋವಿಂದನು ನೀನೇ
ಮಂದರಧರ ಮುಚುಕುಂದ ವರದ ನೀನೇ
ಇಂದಿರೆಯರಸ ಮಾಂಗಿರಿಯ ರಂಗಯ್ಯ ೧

೪೧

ಅನಂತ ಮಾಧವ ಗೋವಿಂದಾ ಹರೆ
ಮುಕುಂದ ಕೇಶವ ಗೋವಿಂದಾ ಪ
ಮುರಾರಿ ನರಹರಿ ಗೋವಿಂದಾ ಹರೆ
ಖರಾರಿ ನಗಧರ ಗೋವಿಂದಾ ಅ.ಪ
ಶ್ರೀಶ ಪರೇಶಾ ಗೋವಿಂದಾ ಹರೆ
ಕ್ಲೇಶ ವಿನಾಶಾ ಗೋವಿಂದಾ
ಈಶ ರಮೇಶಾ ಗೋವಿಂದಾ ಹರೆ
ಕೇಶ ಕುಲೇಶಾ ಗೋವಿಂದಾ ೧
ಬೃಂದಾರಕಾನುತ ಗೋವಿಂದಾ ಹರೆ
ಮಂದಾಕಿನೀ ಪಿತ ಗೋವಿಂದಾ
ನಂದಕುಮಾರಾ ಗೋವಿಂದಾ ಹರೆ
ಮಂದರಗಿರಿಧರ ಗೋವಿಂದ ೨
ಭವ ಭಯ ಹರಣ ಗೋವಿಂದಾ ಹರೆ
ಶಿವಸುತ ಚರಣಾ ಗೋವಿಂದಾ
ಭುವನಾಭರಣಾ ಗೋವಿಂದಾ ಹರೆ
ಪವನಜ ಕರುಣಾ ಗೋವಿಂದಾ ೩
ಪರವೋತ್ತುಂಗಾ ಗೋವಿಂದಾ ಹರೆ
ಗರುಡ ತುರಗಾ ಗೋವಿಂದಾ
ಧರಿತರಥಾಂಗಾ ಗೋವಿಂದಾ ಹರೆ
ಮಾಂಗಿರಿ ರಂಗಾ ಗೋವಿಂದಾ ೪

೪೨

ಗೋವಿಂದ ಗೋವಿಂದ ಗೋಕುಲಾನಂದ
ದೇವೇಶ್ವರಾನಂದ ಪಾದಾರವಿಂದ ಪ
ಲಾವಣ್ಯ ಪರಿಪೂರ್ಣ ಸಚ್ಚಿದಾನಂದ
ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ
ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ
ನೀನೆನ್ನ ತಾಯ್ತಂದೆ ಲೋಕಾಭಿರಾಮಾ
ನೀನೆನ್ನ ಪರಮಾತ್ಮ ನೀನೇ ಪರಂಧಾಮ
ನೀನೆನ್ನ ಕರುಣದಲಿ ಕಾಯೋ ಶ್ರೀರಾಮ ೧
ಮಂಗಳಾಂಗನು ನೀನು ಕಮಲಾಯತಾಕ್ಷ
ಮಂಗ ಮೂಢನು ನಾನು ಸಿರಿದೇವಿ ಪಕ್ಷ
ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ
ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ೨

೪೩

ಗೋವಿಂದಂ ಭಜರೇ ಮಾನಸ ಪ
ದೇವ ದೇವೋತ್ತಮ ಭಾವುಕ ಫಲದಂ ಅ.ಪ
ಕರುಣಾ ಸಾಗರಂ ಶರಧಿ ಗಂಭೀರಂ
ಪರಮೋದ್ಧಾರಂ ಪುಣ್ಯ ಶರೀರಂ
ಧರಣಿಪ ಬಾಲಂ ಮುರಳೀಲೋಲಂ
ಸುರರಿಪು ಕಾಲಂ ಗೋಕುಲ ಬಾಲಂ ೧
ಪಾವನನಾಮಂ ಭವರಣ ಭೀಮಂ
ರವಿಕುಲಸೋಮಂ ಅವನಿಜಪ್ರೇಮಂ
ಕುವಲಯಶ್ಶಾಮಂ ಭುವನಾಭಿರಾಮಂ
ದಿವಿಜಾನುತ ಮಾಂಗಿರಿವರ ಧಾಮಂ ೨

೪೪

ಮಂದರಧರ ಗೋವಿಂದಾ | ಇಂದಿರಾನಂದ ನಂದನಕಂದ
ಸುಂದರವರದಾ ಪಾಹಿ ಮುಕುಂದಾ ಪ
ನೀರಜನಾಭ ನಿರುಪಮಶೋಭ
ವಾರಿಜಸೌರಭ ಹಿಮಕರ ಬಿಂಬ೧
ತುಂಗ ಕೃಪಾಂಗ ಗರುಡತುರಂಗ |
ಮಾಂಗಿರಿ ರಂಗ ಶುಭಾಂಗ ದೇವೋತ್ತುಂಗ ೨

೪೫

ವಂದನೆಯು ವಂದನೆಯು ವಂದನೆಗಳು
ನಂದಕುಮಾರ ಗೋವಿಂದನ ಚರಣಕೆ ಪ
ವಂದನೆ ಇಂದಿನ ಬಂಧನ ನಾಶಕೆ
ಮುಂದಿನ ಭವಗಳ ಮುಂದಿನ ಹರಣಕೆ ಅ.ಪ
ಹುಟ್ಟು ಸಾವುಗಳ ಕಟ್ಟಳೆ ಅವನದು
ಕೊಟ್ಟುದನು ಪಡೆಯುವದೃಷ್ಟ ನನ್ನದು
ಬೆಟ್ಟದ ಗಾತ್ರದ ಪಾಪವು ನನ್ನದು
ಇಷ್ಟನು ಕ್ಷಮಿಸುವ ದೃಷ್ಟಿ ಅವನದು ೧
ಶರಣರ ಪೊರೆಯುವ ಬಲವಾತನದು
ಪರಿಪರಿ ಪಾಪವ ಗಳಿಸುವುದೆನ್ನದು
ಕರುಣೆಯ ತೋರುವ ಮನವಾತನದು
ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು೨

೪೬

ಯದುನಂದನ ಬುಧಚಂದನ ಭವಬಂಧನ ದಮನಾ ಪ
ಮಧುಸೂದನ ವಿಧುರಂಜನ ಕಮಲಾಕರಭವನಾ ಅ.ಪ
ಅಜವಂದಿತ ಗಜಸೇವಿತ ಕರುಣಾರಸ ಭರಿತ
ಸುಜನಾನತ ಭಜಕಾನ್ವಿತ ಜಗದೀಶ್ವರ ಮಹಿತಾ ೧
ಪುರುಷೋತ್ತಮ ಪದವಿಕ್ರಮ ದನುಜಾವಳಿ ಭೀಮಾ
ಪರಮೋತ್ತಮ ಶರಧಿಸಮಾಯುತ ಮಾಂಗಿರಿಧಾಮಾ ೨

೪೭

ದಾನವಕುಲ ದಮನಾ ಕೇಶವ
ದೀನಪಾಲ ಗಾನಲೋಲ ಶ್ರೀಜನಾರ್ದನ ಪ
ವಾನರಪತಿಸದನಾ ಸನಕಾದಿ ಸೇವಿತ
[ದೀನ] ಶರಣ್ಯ ಸಾರಸಾಕ್ಷ ಲೋಕ ಮೋಹನ ಅ.ಪ
ಶ್ರೀ ರಮಣೀ ಸೇವಿತ ಚರಣಾಬ್ಜ
ಶೂರ ಶುಭಂಕರ ವಾರಿಧಿ ಶಯನಾ
ನಾರದನುತ ಚರಣಾ | ಸುರರಾಜ ಪೂಜಿತ
ನೀರಜಾಕ್ಷ ಮಾಂಗಿರೀಶ ವಾರಿಜಾಸನಾ ೧

೪೮

ಪುಂಡರೀಕಾಕ್ಷನ ನಾ ಕಂಡೆ
ಪಾಂಡುರಂಗೇಶನ ಪಾಂಡವಪಕ್ಷನ ಪ
ಅಂಡಜವಾಹನೋದ್ದಂಡ ಪರಾಕ್ರಮ
ಶುಂಡಲವರದ ಭೂಮಂಡಲ ಭರಿತನಅ.ಪ
ದೇವದೇವೇಶನ ಭಾವಜಜನಕನ
ಪಾವನಚರಿತನ ಭಾವುಕವರದನ
ಶ್ರೀವನಮಾಲನ ಲಾವಣ್ಯಾಂಗನ
ದೇವತರಂಗಿಣಿ ಪಾವನ ಪದನ೧
ಪೀತ ಕೌಶೇಯನ ಪಾತಕ ಹರಣನ
ಜ್ಯೋತಿಸ್ವರೂಪನ ಭೂತಳವಳೆದನ
ಪಾತಕ ಹರ ಜೀಮೂತ ನೀಲಾಂಗನ
[ಪ್ರೀತ] ಮಾಂಗಿರಿನಾಥ ಸುಂದರನ ೨

ಕನಸಿನ ಪ್ರತಿಮೆಯಲ್ಲಿ

೪೯

ಆ ರೂಪವನೆ ತೋರಿ ಎನ್ನ ತಣಿಸೊ
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ
ಇಂದುವರನಂದದಲಿ ಬಂದೆ ನೀ ಕನಸಿನಲಿ
ಇಂದಿರಾಪತಿಯೆಂದೆ | ಹುಸಿನಗೆಯಲಿ
ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ
ಅಂದಿತ್ತ ದರ್ಶನವೆ ಸಾಕು ಎನಗೆ ೧
ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ
ತೋರಿದಾ ಶಿಶುರೂಪ ಸಾಕು ಎನಗೆ
ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ
ತೋರಿದಾ ಸಿರಿ ಮೊಗವೆ ಸಾಕು ಎನಗೆ ೨
ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ
ಕರುಣದಿಂ ನೀತೋರ್ದ ಚರಣ ಸಾಕೆನಗೆ
ಪರರ ದಂಡಿಸಿ ಧನವ ಅಪಹರಿಸಿದಾತಂಗೆ
ಗುರುವೆನಿಸಿದಾ ರೂಪ ಸಾಕು ಎನಗೆ ೩
ಘೋರ ರೂಪವ ಗಳಿಸಿ ನಾರಣಾಯೆಂದವಗೆ
ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ
ನಾ]ರು ಸಾಸಿರ ಜನರ ಗುಂಪಿಂದಲೈತಂದು
ತೋರಿದಾ ದ್ವಿಜರೂಪ ಸಾಕು ಎನಗೆ೪
ರಂಗನಾಥನು ನೀನೆ ಗಂಗಾಧರನು ನೀನೇ
ಮಾಂಗಿರಿಯ ಶೃಂಗಾರ ನಿಲಯ ನೀನೇ
ಅಂಗಜನ ಪಿತನೀನೆ | ಅಂಗಜಾರಿಯು ನೀನೆ
ಮಂಗಳಾಂಗನೆ ಭವದ ಹಂಗ ಬಿಡಿಸೋ ೫

೫೦

ದಿನ ದಿನ ಹರಿಕೃಷ್ಣಯೆನುತಿರೆ ಮನುಜನ
ಮನವೆ ವೈಕುಂಠವೆಂದೆನಿಸುವುದು ಪ
ನೆನೆಯುವ ಭಕ್ತನ ಕಿವಿಯಲಿ ಕೊಳಲಿನ
ದನಿಜನಿಪುದು ಕಂಬನಿ ಮಿನುಗುವುದು ಅ.ಪ
ಪೊಡವಿ ಪತಿಯ ಎಡತೊಡೆಯೊಳಿದ್ದಾ ಮುದ್ದು
ಹುಡುಗನ ಬಲತಾಯಿ ಪಿಡಿದೆಳೆಯೇ
ಕಡು ದುಗುಡದಿ ಶಿಶು ಅಡವಿಯೊಳಗೆ ಸಿರಿ
ಯೊಡೆಯನ ಕಂಡು ಕೊಂಡಾಡಿದನು ೧
ದ್ಯೂತದೊಳೆಲ್ಲವ ಸೋತರ ಸತಿಯಳ
ಘಾತಿಸಿ ಸೀರೆಯ ಸೆಳೆದಾಗ
ಭೀತಿಯಿಂದಲಿ ಪರಂಜ್ಯೋತಿ ಕೃಷ್ಣಾಯೆನೆ
ಪ್ರೀತಿಯೊಳಕ್ಷಯ ವರವಿತ್ತಾ ಕೃಷ್ಣಾ೨
ಕೂಗಿದೊಡನೆ ತ್ವರೆಯಾಗಿ ಬರುವ ನಮ್ಮ
ನಾಗಶಯನ ಮಾಂಗಿರಿಪತಿಯ
ರಾಗದಿ ಪೂಜಿಸಿ ವಂದಿಸಲವನನು-
ರಾಗದಿ ನರ್ತಿಪನೆಡಬಲದಲಿ ರಂಗಾ೩