Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೩೦೧

ಇವನಾರೆ ಮನಸೂರೆಗೈದೋಡುವಾ
ನವನೀತ ಮೆಲುವಾತ ಪರಿದೋಡುವಾ ಪ
ಸವಿನೋಟ ರಸದೂಟವನೆ ಬೀರುವ
ಸುವಿಲಾಸ ಪರಿಹಾಸಗಳ ತೋರುವ ಅ.ಪ
ಓರೆನೋಟವ ತೋರುತ ನಲಿವ
ಕ್ಷೀರವ ಕುಡಿವ ಬೆರಳಲಿ ಕರೆವ
ಕೊರಳಿನ ಹಾರವ ಎಡಬಲಕೆಳೆವ
ಕೊರಳನು ಕೊಂಕಿಸಿ ಪರಿಪರಿ ಕುಣಿವ ೧
ನೀರಜನೇತ್ರನು ನೀರದ ಗಾತ್ರನು
ನಾರಿಯತನುವನು ಬರಸೆಳೆಯುವನು
ಚೋರನು ಭವಭಯಹಾರನು ಧೀರನು
ಶ್ರೀರಮೆಯರಸನು ಮಾಂಗಿರಿವರನು ೨

೩೦೨

ಎತ್ತಣದನಿಯಿದು ಎತ್ತಣ ಮಧುರವ
ಚಿತ್ತಾಕರ್ಷಕ ಬಾನುಲಿಯೇ ಪ
ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು
ಸುತ್ತ ಮಯೂರದ ನಾಟ್ಯದ ನಲವೋ ಅ.ಪ
ಏಣಲೋಚನೆಯರ ಕಾಂಚನ ಕಿರುಗೆಜ್ಜೆ
ವೀಣಾನಾದವ ಅಣಕಿಪುದು
ತಾಣವದೆಲ್ಲಿಯೋ ಕಾಣಿರೆ ಸಖಿಯರೇ
ವೇಣು ಗೋಪಾಲನ ನಾಟ್ಯವಿದಲ್ತೇ ೧
ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ
ಮಲ್ಲಿಗೆ ಪೂಮಳೆ ಸುರಿಯುತಿದೆ
ನಲ್ಲೆಯರಿಂಚರ ಸರಿಗಮಪದನಿಯು
ಎಲ್ಲ ರಾಗಗಳಲಿ ನಲಿಯುತಲಿಹುದು ೨
ಅಂಗನೆಯರೆ ನಮ್ಮ ಗೆಜ್ಜೆಯ ಝಣರವ
ಮಂಗಳಗಾನಕೆ ಇಂಬಿರಲಿ
ಹೊಂಗೊಳಲೂದುವ ಚಿನ್ಮಯ ಮಾಂಗಿರಿ
ರಂಗನ ದರ್ಶನ ಮಾಡುವ ಬನ್ನಿ೩

೩೦೩

ಎತ್ತಣ ಪಯಣವೋ ಕೃಷ್ಣಯ್ಯ ನಿನ
ಗಿತ್ತ[ಏನವ]ಸರ ಏಕೋ ರಂಗಯ್ಯ ಪ
ಹೆತ್ತತಾಯಿಯ ಮುಂದಾಡದೆ ಇ
ನ್ನೆತ್ತ ಯಾರಿಗೆ ಲೀಲೆ ತೋರುವೆ ಅ.ಪ
ಗೊಲ್ಲ ಗೋಪಿಯರೆಲ್ಲ ಚೆಲ್ಲಾಟದಿಂದ ನಿನ್ನ
ಗಲ್ಲವ ಹಿಡಿದುಕೊಂಡು ಅಲ್ಲಾಡಿಸಿ
ಸೊಲ್ಲು ಸೊಲ್ಲಿಗೆ ಮುತ್ತಿಟ್ಟು ನೋಯಿಸಿದರೆಂದು
ಬಿಲ್ಲ ಹಬ್ಬವ ನೋಡಲೊಲ್ಲದೆ ಪೋಪೆನೆಂಬೆ ೧
ನೂರೆಂಟು ಕನ್ನೆಯರೋರಂತೆ ನಿನ್ನ ಬಳಿ
ಸೇರಿರ್ಪುದನು ಕಂಡು ಕಲಹಪ್ರಿಯ
ನಾರಿಯೊಬ್ಬಳ ತನಗಾರಿಸಿ ಕುಡಲೆಂದು
[ಯಾರಬಳಿ ಮಸಲತ್ತು ಮಾಡಹೊರಟೆಯೊ] ೨
ಬಾಲೆ ರುಕ್ಮಿಣಿಯನು ದುರಳಶಿಶು
ಪಾಲಂಗೀಯುವರೆಂದು ಪೇಳಿದ್ದೆಯಲ್ತೆ
[ಹ]ಲಾಂಕನೊಡನೆ ಸಿಕ್ಕಲಾದ ಕಾರಣದಿ
ಬಾಲೆಯ ತರ್ಪೆನೆಂದೇ ಶ್ರೀ ಮಾಂಗಿರಿಯ ರಂಗ೩

೩೦೪

ಏಣಾಕ್ಷಿಯರೇ ವೇಣು ಗೋಪಾಲನ
ಕಾಣಲಿಲ್ಲವೆಂದೆನಬೇಡಿ ಪ
ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು
ಡಾಣವ ತುಡುಕುವ ನೆರೆನೋಡಿ ಅ.ಪ
ಸುಲಭನು ನಿಮಗವನೊಲಿವನು ನಿಮ್ಮೆಡೆ
ನಿಲುವನು ನಲಿವನು ಕೈನೀಡೀ
ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ
ನುಲಿವನು ಚಲಿಸಲು ಬಿಡಬೇಡಿ ೧
ಅಳುಕುತ ಬಳುಕತ ಬಳಲುತ ಸುಳಿಯುತೆ
ಘಳಿಲನೆ ಪೋಪನೆಚ್ಚರವಿರಲಿ
ಎಳನಗೆಯಿಂದ ಪಾಲೆರೆಯಿರಿ ಮನ
ದೊಳಚ್ಚಳಿಯದ ಮೋದವು ನೆಲೆಸಿರಲಿ ೨
ಮನವೆಂಬುವುದೇ ವನರುಹವಮ್ಮಾ
ಕನಸುನೆನಸಿನೊಳಾ ವನಜವನರ್ಪಿಸೆ
ನೀನೆಂಬುದನೇ ಮರೆಯುವಿರಮ್ಮಾ
[ತನುಮನ ಅವನಡಿ ಸೇರುವುದಮ್ಮಾ] ೩
ಪಡಸಾಲೆಯೊಳಿವ ನಿಲ್ಲುವನಲ್ಲಾ
ಅಡಿಗೆಯ ಕೋಣೆಯ ಬಿಡುವನಲ್ಲ
ಒಡೆಯ ಶ್ರೀಮಾಂಗಿರಿಪತಿಯನು ನೋಡದ
ಮಡದಿಯಿಲ್ಲವೆಂಬುದು ಸಟೆಯಲ್ಲ ೪
ನೀವಿರುವಾಯೆಡೆ ಪಾಲ್ಗಡಲಮ್ಮಾ
ನೀವಡಿಯಿಡುವುದೇ ಕಡೆಗೋಲಮ್ಮಾ
ನೀವಾಡುವ ನುಡಿ ದಧಿ ನವನೀತವು
ನೀವಿರೆ ಮಾಂಗಿರಿರಂಗನುಂಟಮ್ಮಾ ೫

ಹೆತ್ತ ತಾಯಿಯ ಮುಂದಾಡದೆ

೩೦೫

ಒಡಲೆರಡಂತೆ ಅಸುವೊಂದಂತೆ
ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ
ನಡೆ ನುಡಿ ಭಾವಗಳೊಂದೇಯಂತೆ
ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ
ರಾಧೆ ಬಾಲಕಿಯಂತೆ ಕೃಷ್ಣ ಬಾಲಕನಂತೆ
ಸೋದರಿಯರು ಇದ ಹೇಳುವರಮ್ಮ
ನಾದ ನರ್ತನ ದೇಹಕಾಂತಿಗಳಲ್ಲಿ
ಭೇದವಿಲ್ಲೆಂಬರು ನಿಜವೇನಮ್ಮಾ ೧
ಬಾಲೆಯು ತಾನೆ ಗೋಪಾಲನೆನುವಳಂತೆ
ಬಾಲಕೃಷ್ಣನು ರಾಧೆ ತಾನೆಂಬನಂತೆ
ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ
ಮೂಲತತ್ವವ ನೀನೆ ಹೇಳೇ ಗೋಪಮ್ಮ ೨
ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ
ಜಗದೀಶ್ವರನೆ ತಾದಿಟವಮ್ಮ
ನಗಧರ[ನ] ಮಗನೆಂದಾಡಿದ
[ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ ೩
ನಿರುಪಮ ಭಕ್ತಿಯಮೂರ್ತಿಯು ರಾಧೆ
ಮುರಳೀಧರನಲಿ ಒಂದಾಗಿಹಳು
ಅರಿತುದ ಪೇಳ್ವೆನು ಮಾಂಗಿರಿರಂಗನ
ಶರಣರಿಗೀತತ್ವ ಕರಗತವಮ್ಮಾ ೪

೩೦೬

ಓಡಿಬಾ ಬಾ ರಂಗ ಆಡುಬಾ ನೀಲಾಂಗ
ಪಾಡಿ ಪೊಗಳುವೆ ರಂಗ ಶ್ರೀಪಾಂಡುರಂಗ ಪ
ಬೇಡುವೆನೊ ಮಾರಾಂಗ ನೋಡಿನಲಿವೆನೊರಂಗ
ನೀಡು ವರಂಗಳ ರಂಗ ಶ್ರೀಕರಾಂಗ ಅ.ಪ
ಬಡ ಮೌನಿಗಳು ನಿನ್ನ ಪಿಡಿಯ ಬಂದಿಹರೆನ್ನ
ತೊಡೆಯ ಮೇಲಿರೋ ಚಿನ್ನ ಮುದ್ದುಮೋಹನ್ನ
ಬೆಡಗ ತೋರುತೆ ಚೆನ್ನ ಚೆಲುವ ಬಾ ರನ್ನ
ಒಡೆಯ ಮಾಂಗಿರಿಯ ಚೆನ್ನಿಗ ನಂಬಿಹೆನೊ ನಿನ್ನ ೧

ಬಾಲಲೀಲೆಯಲ್ಲಿ ರಾಧಾ-ಕೃಷ್ಣರ

೩೦೭

ಕಾಣೆಯೇನೇ ತಂಗಿ | ಇವನಾ ಕಾಣೆಯೇನೇ ತಂಗಿ ಪ
ವೇಣುವನೂದುವ ಮುದ್ದು ಮೋಹನ್ನನ ಅ.ಪ
ಪೂತನಿಯಸುವಾ ಹೀರಿದನಿವನು
ಮಾತೆಗೆ ಬಾಯಲಿ ಜಗವ ತೋರಿದನು ೧
ಬಕ ಶಕಟಾಸುರನಿಕರವ ಸದೆದ
ವಿಕಟ ಕಾಳಿಂಗನ ಹೆಡೆಯನು ತುಳಿದ ೨
ಬೃಂದಾವನದಾನಂದ ಮುಕುಂದ
ನಂದನಕಂದ ಮಾಂಗಿರಿಯ ಗೋವಿಂದ ೩

೩೦೮

ಕೂಗಿದವರ ಬಳಿ ರಾಗವ ಬೀರುವ
ನಾಗಶಯನ ನಮ್ಮ ವೇಣುಗೋಪಾಲ ಪ
ನಾಗನ ಕೂಗಿಗೆ ಜಗುಡುತೈದಿದ
ತ್ಯಾಗಶೀಲನವ ಗೋಪಿಯ ಬಾಲ ಅ.ಪ
ಕರದ ಮುರಳಿಯಲ್ಲಿ ಪರಿಪರಿಗಾನವ
ಉರುಳಿಸಿ ನಾಟ್ಯಕೆ ಕಿರುನಗೆದೋರಿ
ತರುಣ ತರುಣಿಯರ ಬರಸೆಳೆಯುವ ಮಾಂ
ಗಿರಿ ಶಿಖರಾಗ್ರದಿ ಮಹಿಮೆಯ ತೋರಿ೧

೩೦೯

ಕೇಳಿದೆ ಏನೇ ಕೊಳಲ ದನಿಯ
ಬಾಳಿಗೆ ಅಮೃತವ ಬೀರುವ ಸವಿಯ ಪ
ಬೃಂದಾವನದಲಿ ನಂದಯಶೋದ
ಕಂದನು ಮುರಳಿಯನೂದುತಿರೆ
ಸುಂದರಿಯರು ಆನಂದದಿ ನರ್ತಿಸಿ
ಇಂದಿರೆಯರಸನ ಹೊಗಳುವರು ೧
ಕಿರುಗೆಜ್ಜೆಯ ದನಿ ಕಿಣಿಕಿಣಿಸುತಿರೆ
ಕರದ ಕಂಕಣಬಳೆ ಗಣಗಣರೆನಲು
ಚರಣದ ಕಡಗ ಝಣ್ ಝಣಿ ಝಣಿರೆನುತಿರೆ
ಪರಮ ಸಂತೋಷದಲಿ ಹರಿಯರುಳುತಿರೆ ೨
ಮರುಗ ಮಲ್ಲಿಗೆ ಪಾದರಿ ಸುಮ ಪರಿಮಳ
ಭರಿತ ತಂಬೆಲರು ಪರಿಚರಿಸುತಿರೆ
ಪರಮಾನಂದವೆ ಪುರುಷನಾಗಿರುವ ಮಾಂ
ಗಿರಿಪತಿಯೊಲವನು ಪಡೆಯುವ ಗೆಳತಿ ೩

೩೧೦

ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ
ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ
ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ
ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ
ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ
ಗಾನದಿಂದಲೆ ಗೋಪಿ ನಲಿದಳು ಗಾನ ವೇದದ ಸಾಧನೆ ೧
ಅಂಗಜಾತನ ವೈರಿ ಜಪಿಸುವ ರಾಮನಾಮವೇ ಗಾನವು
ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು
ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು ೨

೩೧೧

ಕೈತುತ್ತ ಹಾಕುವೆ ಬಾರೋ ರಂಗ
ಮೈತುಂಬಾ ಒಡವೆಯ ಇಡುವೆನು ಬಾರೋ ಪ
ಬೈತಲೆ ಬಾಚಿ ಹೂ ಮುಡಿಸುವೆ ಬಾರೋ
ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ
ಬಿಸಿ ಬಿಸಿಯನ್ನವ ಮೊಸರಲಿ ಕಲಸಿ
ಹಸುವಿನ ಬೆಣ್ಣೆಯ ಅದರ ಮೇಲಿರಿಸಿ
ನಸುಕಂದನೀಯುವೆ ಕೇಸರಿ ಬೆರೆಸಿ
ತುಸು ಏಲಕ್ಕಿಯ ಪುಡಿಮಾಡಿರಿಸಿ ೧
ಬಸಿರಲ್ಲಿ ಜಗಗಳ ತುಂಬಿಹೆನೆಂದು
ಹಸಿವಿಲ್ಲವೆನಬೇಡ ಅಸುರರಕೊಂದು
ಬಿಸದ ಕಾಳಿಂಗನ ತುಳಿದೆದ್ದುನಿಂದು
ಬಸವಳಿದಿರ್ಪೆನೀನಮರರ ಬಂಧು ೨
ಹೊಸ ಪೀತಾಂಬರ ಕಟಿಬಂಧವಿಡುವೆ
ವಿಸರವ ಪಸರಿಪ ಹೂಗಳ ಮುಡಿವೆ
ರಸಸವಿನಾದದ ಕೊಳಲನು ಕುಡುವೆ
ನಸುನಗೆ ತೋರೋ ಮಾಂಗಿರಿರಂಗ ನಲಿವೆ ೩

೩೧೨

ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ
ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ
ಪಾಪಕುಲಾನಲ ತಾಪಸ ಸಂಕುಲ
ಶ್ರೀಪತೆ ಮಾಂಗಿರಿನಿಲಯ ಶುಭಾಕುಲ
ತಾಪತ್ರಯ ಕುಲಜಾಲ ನಿರ್ಮೂಲ
ಗೋಪಗೋಪಿಕಾನಂದದುಕೂಲಾಅ.ಪ
ಮುರಳೀಧರ ಘನಸುಂದರ ಭಾವ ದೇವಾದಿದೇವ
ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ
ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ
ಸ್ವರನಾದದಿ ಘಲು ಘಲ್ಲೆನುತಿರುವಾ
ವರನೂಪುರದುಂಗುರ ಝಣ ಝಣರವ
ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ ೧
ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ
ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ
ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ
ಮದ್ದುಣಿಸಿದಳ ಒದ್ದು ಸಂಹರಿಸಿದ
ಶುದ್ಧನೆ ನಿನಗಾರಾಧೆಯೊಪ್ಪಿಸಿದುದ
ಸಿದ್ಧಮಾಡಿ ಮುದ್ದಾಡಿ ಕುಡುವೆನದ
ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ ೨
ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ
ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ
ಅಕ್ಕೋ ಚೆಂದುಟಿಯಿಂದ ಮುಕುಂದ ಬಂದ ಗೋವಿಂದ
ಸಿಕ್ಕಿದನೆಂದೆವೆಯಿಕ್ಕದ ನೋಟದಿ
ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ
ಠಕ್ಕುಗಾರ ಸೊಬಗಿಂದ ರಾಧೆಗೆ ಮುದ
ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ ೩
ಬಾ ಬಾರೋ ಬಕ ಶಕಟಾಸುರ ವೈರಿ ಕಂಸಾರಿ ಶೌರಿ
ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ
ಬಾ ಬಾರೋ ಭವ ಬಂಧನ ಪರಿಹಾರಿ ಶರಣರಿಗುಪಕಾರೀ
ಶುಭ ಫಲ ಲಹರೀ ಸದಮಲನೃಹರಿ
ಇಭಕುಲಕೇಸರಿ ಘನ ಗಿರಿಧಾರೀ
ಅಭಯಪ್ರದ ಹರಿ ಗೂಢಸಂಚಾರಿ
ನಭಚರಹರಿ ಮಾಂಗಿರಿ ಸುವಿಹಾರೀ ೪

೩೧೩

ಗೋಪಿಯ ಕಂದ ಇಗೋ ಬಂದ
ತಾಪಸರೆಡೆಯಿಂದ ಗೋವಿಂದ ಪ
ಆಪನ್ನರ ಕರೆ ಕೇಳಿಸಿದಾಕ್ಷಣ
ಗೋಪಿಯರೆಡೆಯಿಂದ ಪರಿಪರಿದೋಡಿ ಅ.ಪ
ಹಣೆಯ ಕಸ್ತೂರಿಯು ಥಳಥಳಿಸುತಿರೆ
ಮಣಿ ಮಾಲೆಗಳೆಲ್ಲಾ ಮಿನುಗಾಡುತಿರೆ
ಕಿಣಿ ಕಿಣಿ ನಾದದ ಗೆಜ್ಜೆ ನುಲಿಯುತಿರೆ
ಫಣಿಪತಿಶಯನ ಮಾಂಗಿರಿಯೆಡೆಯಿಂದ ೧

೩೧೪

ದೂರ ತರುವಿರೇನೆ ಕೃಷ್ಣನ ಮೇಲೆ ಪ
ದೂರ ತರುವಿರೇನೆ ಚೋರಾಗ್ರೇಸರನೆಂದು
ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ
ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು
ಕರದಿಂದಲೆತ್ತಿ ಮುತ್ತಿಟ್ಟೆಯಂತೆ
ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ
ಕೊರಳಿಟ್ಟು ಬರಿಗೈಯ ತೋರಿದೆಯಂತೆ ೧
ಹಸಿದೆ ಬಾ ಕಂದ ಮೊಸರ ಕುಡಿಯೆಂದು
ಹುಸಿನಗೆಯ ಬೀರಿ ಕೈಹಿಡಿದರವಳು
ಉಸಿರಾಡದಂತೆ ಅಧರಕಧರವನ್ನಿಟ್ಟು
ಹಸಿವಾರಿತಿನ್ನು ನೀ ಹೋಗೆಂದಳಂತೆ ೨
ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ
ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ
ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು
ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ ೩
ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು
ಸಣ್ಣ ತೋಳನು ಹಿಡಿದು ಎಳೆದಾಡಲವಳು
ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ
ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ ೪

೩೧೫

ನಳಿನಿಯ ಬಳಿಯಲಿ ಕುಳಿತ ಮರಾಳಾ
ಕೊಳಲಿನ ಬಾಲನು ಬಂದರೆ ಹೇಳಾ ಪ
ಪುಳಿನದ ಕೊಳದಲಿ ಕುಳಿತು ಕಾಯುವಳಾ
ಗೆಳತಿಯೆ ರಾಧೆಯು ಅವಳನು ಕೇಳಾ ಅ.ಪ
ತರುಗಳ ಮರೆಯಲಿ ತುರುಗಳ ನೆರೆಯಲಿ
ಕರುಗಳ ಜೊತೆಯಲಿ ನಲಿಯುತಲಿ
ಅರಳಿದ ಹೂಗಳ ಪರಿಮಳ ಭಾರದಲಿ
ಮೆರೆವಲತೆಯ ಬಳಿ ಇರುವನು ಒಲವಿನಲಿ ೧
ಮುರಳಿಯ ನಾದವನೆಲ್ಲೆಡೆಗೆರೆವ
ತರುಣಿಯರೀವಾ ಬೆಣ್ಣೆಯ ಮೆಲುವಾ
ಮೆರೆವಪೀತಾಂಬರ ಉಡಿಗೆಯೊಳೆಸೆವ
ಶರಣೆಂದೊಡೆ ನವಚೇತನವೀವ ೨
ಪಾಡಿಪೊಗಳುವರ ಕೂಡ ನರ್ತಿಸುವಾ
ನಾಡೆ ನರ್ತಿಸುವರ ನೋಡುತ ನಗುವ
ಬೇಡಿದ ವರಗಳ ನೀಡುತ ನಗುವ
ಮಾಡೆ ವಂದನೆಗಳ ಓಡಿಬಂದಪ್ಪುವ ೩
ಜೊನ್ನದ ಬಣ್ಣವ ಹಳಿಯುತೆ ಬೆಳಗುವ
ಚೆನ್ನ ಮರಾಳವೆ ನಿನ್ನೆಡೆ ಬರುವ
ಅನ್ನೆಗಮೆನ್ನನೀ ಕರೆಯಲು ಮಾಡುವ
ಸನ್ನೆಯ ಕಂಡೋಡಿ ಪಿಡಿಯುವೆ ಚರಣವ ೪
ಬಾಲೆಯರೊಡನೆ ಕೋಲಾಟವನಾಡುವ
ನೀಲಾಂಬರ ಘನ ಶ್ಯಾಮನವ
ಮೇಲೆನಿಸುವ ವನಮಾಲೆಯಿಂದೆಸೆವ
ಬಾಲನವನು ಮಾಂಗಿರಿಗೆ ಬಾರೆನುವ ೫

೩೧೬

ನಿನ್ನ ತನುಜನೆಲ್ಲೇ ಗೋಪಿ ಪ
ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ
ನೊರೆ ನೊರೆ ಹಾಲನು ಸುರಿಸುರಿದು ತನ್ನ
ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ
ಪರಿ ಪರಿ ಹಾಸ್ಯ ಕುಚೋದ್ಯವ ಮಾಡುತ
ಮುರಳಿಯನೂದಿ ಬಾರೆನ್ನುತ ಬಂದನೆ೧
ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು
ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ
ಹಣ್ಣನು ತಿನ್ನುವೆ ಎನ್ನುತಲೋಡಿದ
ಚಿಣ್ಣನು ಮಾಂಗಿರಿರಂಗನು ನೋಡೇ ೨

ಇದು ಇನ್ನೊಂದು ಬಗೆಯ ಕೃಷ್ಣಲೀಲೆ

೩೧೭

ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ
ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ
ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ
ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು ೧
ತೊದಲುನುಡಿಗೆ ನಲಿವೆನು ಬಾ ಬಾ
ಚದುರತನವ ನೀ ತೋರುತೆ ಬಾ ಬಾ
ಮುದದಿ ಕುಣಿಯುತೆ ಮಣಿಯುತೆ ಬಾ ಬಾ
ಇದೆಗೋ ಎತ್ತಿಕೊಂಡೊಯ್ವೆನು ೨
ಜೋಗುಳಗಳ ಹಾಡಿ ರಾಗದಿ ಕೊಂಡಾಡಿ
ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ೩
ಸಂತಸದಿಂದೋಡು ಅಂತರಿಕ್ಷವ ನೋಡು
ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು ೪
ಚಂದಿರನಂದದ ಕಂದಾ ನೊಂದಿಹ ಮನಕಾನಂದಾ
ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ೫
ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ
ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ ೬
ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ
ಮಣಿ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ೭
ಕಣ್ಣಿಗೆ ಕಪ್ಪಿಡುವೆ ಬೆಣ್ಣೆಯ ಕೈಲಿಡುವೆ
ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ ೮
ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ
ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ ೯

೩೧೮

ನೋಡ ಬಂದನೇ ಬಾಲಗೋಪಾಲ ಪ
ನಾಡೆರಾಧೆ ಪಾಲ ಕರೆಯುವ ಪರಿಯ ಅ.ಪ
ಮೊಲೆಯನು ತನ್ನ ಬಾಯ್ಗೆರೆಯುವ ಮೋಹದಿ
ಕರುವಿಗೆ ಬಿಡದೆ ಪಾಲ್ಗರೆಯುವಳೋ ಎಂದು ೧
ಹಿರಿಸತಿ ರುಕ್ಮಿಣಿಯರಮನೆಯೊಳು ತಾ
ನಿರುವುದ ಕಂಡು ಬೇಸರಗೊಳುವಳೋ ಎಂದು ೨
ಅರೆಘಳಿಗೆಯು ತನ್ನ ಮರೆಯದ ರಾಧೆಗೆ
ಹರುಷವನೀಯೆ ಮಾಂಗಿರಿ ಶಿಖರವ ಬಿಟ್ಟು ೩

೩೧೯

ನೋಡಮ್ಮ ಕೃಷ್ಣನ ಕೂಡ ನಾನಾಡುವೆ
ನೋಡೆ ಕಣ್‍ದಣಿಯಾ ಪ
ಪಾಡುವೆ ಪೊಗಳುವೆ ನೋಡುತ ನಲಿಯುವೆ
ನೋಡೆ ಕಣ್‍ದಣಿಯಾ ಅ.ಪ
ಮುರಳಿಯ ಗಾನಕೆ ಸರಿಸಮ ಕುಣಿವೆವು
ನೋಡೆ ಕಣ್‍ದಣಿಯಾ
ಪರಿಮಳ ಪುಷ್ಪದ ಮಾಲೆಯ ಧರಿಸುವೆ
ನೋಡೆ ಕಣ್‍ದಣಿಯಾ ೧
ಬಾಲೆಯರೊಡನೆ ಕೋಲಾಟವಾಡಿದೆ
ನೋಡೆ ಕಣ್ ದಣಿಯಾ
ಲೀಲಾವಿನೋದದಿ ನಲಿಯುವ ಕೃಷ್ಣನ
ನೋಡೆ ಕಣ್ ದಣಿಯಾ ೨
ಓಡುವ ಕೃಷ್ಣನ ಕೂಡೆ ನಾನಾಡುವೆ
ನೋಡೆ ಕಣ್ ದಣಿಯಾ
ಹಾಡುವ ರಾಸಕ್ರೀಡೆಯೊಳೆಸೆವೆವು
ನೋಡೇ ಕಣ್ ದಣಿಯಾ ೩
ಜಗವ ಬಾಯಲಿ ತೋರ್ದ ಖಗವಾಹನನಿವ
ನೋಡೆ ಕಣ್‍ದಣಿಯಾ
ಭಗವಂತನಿವ ನಸುನಗುವ ಸೌಂದರ್ಯವ
ನೋಡೇ ಕಣ್ ದಣಿಯಾ ೪
ನಾರದವಂದ್ಯನ ನೀರಜಪಾದಕೆ ಮಾಡೆ ವಂದನೆಯ
ನೀರಜನೇತ್ರ ಮಾಂಗಿರಿಯ ರಂಗಯ್ಯನ ಪಾಡೆ | ಮನದಣಿಯಾ ೫

೩೨೦

ನೋಡಾನ ಬನ್ನಿ ನೋಡಾನ ಬನ್ನಿ
ಮುದ್ದು ಕೃಷ್ಣಯ್ಯನ ನೋಡಾನ ಬನ್ನಿ ಪ
ಹಾಡಾನ ಬನ್ನಿ ಹಾಡಾನ ಬನ್ನಿ
ಕೃಷ್ಣಗೆ ಪೂಜೆಯ ಮಾಡಾನ ಬನ್ನಿ ಅ.ಪ
ಚಿನ್ನದ ತೊಟ್ಟಿಲಲ್ಲಿ ಚೆನ್ನಾಗಿ ಕುಂತವ್ನೆ
ಚೆನ್ನ ಚೆಲುವನಕ್ಕೋ ನಗುತವ್ನೇ
ಕನ್ನೆ ರಾಧಮ್ಮಗೆ ಸನ್ನೆಯ ಮಾಡುತವ್ನೆ
ಬನ್ನಿ ಬನ್ನಿ ಎಂದು ಕರಿತವ್ನೆ ೧
ಹುಬ್ಬಹಾರಿಸ್ತವ್ನೆ ಮಬ್ಬ ತೋರಿಸ್ತವ್ನೆ
ಅಬ್ಬಬ್ಬ ಇವನಾಟ ಬಲ್ ತಮಾಸೆ
ಒಬ್ಬಿಟ್ಟು ಬೇಕಂತ ಕೈಲೇ ತೋರಿಸ್ತಾನೆ
ಅಬ್ಬ ಇವ ಏಳೋದು ಒಂಥರ ಬಾಸೆ ೨
ಎಂಥ ಮುದ್ದಿನ ಮೊಗ ಚೆಂದುಳ್ಳಿ ಚೆಲುವ
ಇಂಥವ್ನ ನೀವೆಲ್ಲೂ ಕಂಡಿಲ್ಲ ಬನ್ರೋ
ನಿಂತು ನೋಡಬೇಕಿವಗೆ ಆಲು ಮೊಸರು ಬೆಣ್ಣೆ
ಹಣ್ ತುಂಬಿದ ಗಂಗಾಳ ತನ್ರೋ ೩
ಮೈಗೆ ಸರಮಾಲೆಗಳು ಕಾಲ್ಗೆ ಕಿನ್ನರ ಗೆಜ್ಜೆ
ಕೈಗೆ ಔಜುಬಂದಿ ತೊಟ್ಟವ್ನೆ
ಕಣ್ಗೆ ಕಪ್ಪಾ ಹಚ್ಚಿ ನವಿಲ್ಗರಿ ತಲ್ಗಿಟ್ಟಿ
ಹಣೆ ಉದ್ದಾದ ತಿಲಕ ಇಟ್ಟವ್ನೇ ೪
ರಾಮ್ನೂ ನಾನೆಂತಾನೇ ಭೀಮ್ನೂ ನಾನೆಂತಾನೇ
ಕಾಮ್ನಪ್ಪನೂ ನಾನೆ ನೋಡಂತಾನೆ
ನಿಮ್ಮೂರ ದೇವ್ರಾಣೆ ನಾನೆ ಮಾಂಗಿರಿರಂಗ
ನಿಮ್ನ ಕಾಯೋಕ್ಬಂದೆ ಅಂತಾನೆ ೫

೩೨೧

ನೋಡಿ ದಣಿಯಳೂ ಗೋಪಿ ಹಾಡಿ ದಣಿಯಳೂ ಪ
ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ
ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು
ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು ೧
ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು
ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ ೨
ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ
ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ೩

ಜಾನಪದ ಶೈಲಿಯಲ್ಲಿ

೩೨೨

ಬಂದವನಾವನೋ ನಾ ಕಾಣೆ
ಇಂದೀವರ ನೇತ್ರಾ ಸುಗಾತ್ರಾ ಪ
ಮೆಲ್ಲಡಿ ಇಡುವ ಮರೆಯಲಿ ನಿಲುವಾ
ಕಾಂತಿಯ ಚೆಲ್ಲುವ ನೋಡಲು ನಗುವಾ ಅ.ಪ
ಆಕಳ ಕರೆವಾಗ ಸಾಕೆಂದೆನುವಾ
ಆಕಳ ಬೆಣ್ಣೆಯೇ ಬೇಕೆನುತಿರುವಾ
ಏಕೆಲೊ ಮರೆಯಾಗಿ ನಿಂತಿಹೆ ಪೇಳೆನೆ
ನೀ ಕೊಡೆ ನಾ ಬಿಡೆ ಕೇಳೆಂಬಾ ೧
ಮೊಸರನು ಕಡೆವಾಗ ಹಸಿವೆಂದೆನುವ
ಬಿಸಿಯನ್ನವನಿಡೆ ಹಸುವಿಗೆ ಕೊಡುವಾ
ನುಸುಳಿ ಬಂದು ಕೆನೆಮೊಸರನೆ ಮೆಲ್ಲುವ
ಕಿಸಿಕಿಸಿ ನಗುತಲಿ ಓಡುವನಾರೋ ೨
ಬೆಣ್ಣೆಯ ತೆಗೆವಾಗ ತಣ್ಣೀರೆರಚುವ
ಕಣ್ಣು ಮುಚ್ಚಲು ಬೆಣ್ಣೆಯ ಕಳುವ
ಹೆಣ್ಣುಗಳೆಡೆಯಲಿ ನಗುತಲಿ ಹುದುಗುವ
ಚಿಣ್ಣನು ಮಾಂಗಿರಿರಂಗನೇ ಯೇನೋ ೩

ಸುಂದರವಾದ ಕೃಷ್ಣಲೀಲೇಯ ಸ್ತುತಿ

೩೨೩

ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ
ನಾಗಶಯನನವ ಕೂಗದೆ ಬಾರನೆ ಅ.ಪ
ಪೂತನಿ ಶಿಶುಗಳ ಫಾತಿಸುತಿಹಳೆಂಬ
ಮಾತನವಗೆ ಪೇಳೆ ಭೀತಿಯತೋರಿ
ಆತುರದಿಂದವ ಐತರುವನೆ ಸಖಿ
ಪ್ರೀತಿಯೊಳೀವೆನೀ ರತುನದ ಹಾರವ ೧
ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ
ಮೊರೆಯಿಡುವುದ ಹೇಳೆ ಭರದಲಿ ಬರುವ
ಉರಗನ ಗರಳದಿ ಕರುತುರು ನೋಯುವ
ಪರಿಯ ಬಿತ್ತರಿಸಿ | ಮುರಳೀಧರಗೆ ೨
ಸಂಗಡ ಬರದಿರೆ ಭಂಗಿಸುವರು ಗೋ
ಪಾಂಗನೆಯರು ಎಂದು ರಂಗಗೆ ಹೇಳೇ
ಇಂಗಿತಜ್ಞನು ನಮ್ಮ ಮಾಂಗಿರಿಯರಸನು
ಸಂಗಡ ಬರುವನು ಸಂದೇಹವಿಲ್ಲ ೩

ಇದೂ ಸುಂದರ ಕೃಷ್ಣಲೀಲಾ ವರ್ಣನೆಯಾಗಿದೆ

೩೨೪

ಭುವನಮೋಹನ ಮಾಧವ ನಿನ್ನ ಕಮಲ ಪಾ
ದವ ತೋರಿಪಾಲಿಸೋ ಬಾಲಗೋಪಾಲ ಪ
ದಿವಿಜೇಶ ವನಜಸಂಭವ ನಿತ್ಯನೇಮ ರಾ
ಧೆವಲ್ಲಭ ಸಂಗೀತ ಲೋಲಾ ಅ.ಪ
ನಂಬಿದ ಭಕ್ತರ ಬೆಂಬಿಡದಿಹೆ ನೀ
ನೆಂಬುದು ನಿಜವೆಂಬುದ ತೋರೋ
ಅಂಬುದ ಶ್ಯಾಮರೋಲಂಬನಂದದೆ ಪಾ
ದಾಂಬುಜಯುಗಳವ ನಂಬಿದೆನಯ್ಯ ೧
ತಂದೆ ಕರೆಯಲೈತಂದೆ ಕರಿಯು ಕೂಗೆ
ಒಂದು ನಿಮಿಷಾರ್ಧದಿ ಬಂದೆ ಕೃಪಾಳು
ಇಂದಿರೆಯರಸ ಗೋವಿಂದ ಮಾಂಗಿರಿರಂಗ
ಮಂದರಧರ ಬಾರೆಂದು ಬೇಡುವೆನಯ್ಯ ೨

ಇನ್ನೊಂದು ಬಗೆಯ ಸುಂದರವಾದ ಸಖೀಗೀತೆ

೩೨೫

ಮಂಜುಳನಾದವು ರಂಜಿಸಿತು
ಕಂಜನಯನಕೃಷ್ಣ ಕೊಳಲನು ಊದಲು ಪ
ಅಂಜಲಿಯಲಿ ಪುಷ್ಪಹಾರವ ಪಿಡಿಯುತ
ಸಂಜೆಯ ತಿಂಗಳು ಬೆಳಗಿರಲು ಅ.ಪ
ಕೈಯಲಿ ವೀಣೆಯ ನುಡಿಪ ಕನ್ನೆಯರು
ಮೈಯಿನ ಗಂಧವ ಚೆಲ್ಲುತಲಿರಲು
ಸುಯ್ಯಿ ಸುಯ್ ಸುಯ್ ಎಂದು ಚಲಿಸಲು ಎಲರು
ಜೈಯೆನುತಲಿ ಗೋಪಿ ವೃಂದವು ನಲಿಯಲು೧
ಸರಿಗಮಪದನಿ ಸ್ವರಗಳ ರವದಲಿ
ಸರಸ ಸಾಹಿತ್ಯವು ಉರುಳುತಲಿರಲು
ಮುರಳಿಯ ಇಂಚರ ಸರಿಸಮ ತೂಗಲು
ವರದ ಮಾಂಗಿರಿರಂಗ ನಸುನಗೆ ಬೀರಲು ೨

೩೨೬

ಮನೆಯೊಳಗಾಡೋ ನೆನೆವರ ನೋಡೋ ಪ
ಮುನಿÀಸಬೇಡವೋ ಎನ್ನ ಮಾನಸವೆಂದೆಂಬ ಅ.ಪ
ನಸುನಗೆಯನು ತೋರಿ ನುಸುಳಿ ಪೋಗುವೆಯೇಕೆ
ಬಿಸಿಬಿಸಿ ಪಾಲನಿತ್ತು ಬೀಸಿ ಬೀಸಿ ತೂಗುವೆನು ೧
ಬಡಮುನಿಗಳು ನಿನ್ನ ಪಿಡಿದೆಳೆಯೆ ಚಿಣ್ಣ
ನುಡಿಯಿದು ಸಟೆಯೆನಬೇಡ ಕದ್ದೋಡಬೇಡ ೨
ಎನ್ನದೆಂಬುದೆಲ್ಲ ನಿನ್ನದೋ ಮಾಂಗಿರೀಶ
ನಿನ್ನ ನಾಮದ ನೆಲೆ ಎನ್ನದೆನ್ನಿಸೋ ರಂಗ ೩

೩೨೭

ಮರೆಯುವರಾರೆ ಶ್ರೀ ಮುರಳೀಧರನ ಕಂಡು
ವರವ ಬೇಡದವರಾರೆ ಪಡೆಯದವರಾರೆ ಪ
ಮುರಳೀದನಿಯ ಕೇಳಿ ಪರಿದೋಡದವರಾರೆ
ಅವನೆಡೆ [ಪರಮಸುಖ] ಪಡೆಯದವರಾರೆ ಅ.ಪ
ಕಂಜನಾಭನು ಬಂದು ಪುಂಚವನದಿ ನಿಂದು
ಮಂಜುಳಗಾನವ ಮಾಡುತಿರೆ
ಅಂಜುವರೇನೆ ನಿರಂಜನನವ ಪಾಪ
ಭಂಜಕನೇ ತಂಗಿ ಹೋಗೋಣ ಬಾರೆ ೧
ಮಂಗಳಮೂರ್ತಿ ಮಾತಂಗವರದ ಭವ
ಭಂಗನ ಚರಣವ ನೋಡುವ ಬಾರೆ
ಮಂಗಳ ಜಯ ಜಯ ಮಂಗಳ ಮಾಂಗಿರಿ
ರಂಗಗೆ ಶುಭವೆಂದು ಪಾಡುವ ಬಾರೆ ೨

೩೨೮

ಯಾವ ಸಂಭ್ರಮವಿದೇ ವಾರಿಜ ವದನೆ
ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ
ದೇವ ದೇವನು ನಿನ್ನ ಪೂಜೆಗೊಪ್ಪಿದನೇ
ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ
ಗಾನ ನೃತ್ಯಗಳಿಂದ ಒಲಿಸಿದೆಯೇನೇ
ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ
ಸಾನುರಾಗದಿ ಪೂಜೆ ಮಾಡಿದೆಯೇನೇ
ನಾನೇನಗೈದರೆ ಅವನೊಲಿಯುವನೇ೧
ಪರಿಮಳ ಗಂಧಕೆ ಮೈ ತೋರುವನೇ
ಕೊರಳಿಗೆ ಹಾರವ ನೀಡಲೊಪ್ಪುವನೇ
ಮುರಳಿಯ ಗಾನವನೊಲಿದು ಕೇಳುವನೇ
ಪರಮಪುರುಷ ಬಾರೆಂದರೆ ಬಹನೇ ೨
ಕರಗಳ ಮುಗಿದರೆ ಕರುಣಿಪನೇನೇ
ಚರಣಕೆ ಮಣಿದರೆ ಒಲಿಯುವನೇನೇ
ಪರಿಪರಿ ಹೊಗಳಲು ನಲಿಯುವನೇನೇ
ವರದ ಮಾಂಗಿರಿರಂಗ ದಯೆ ತೋರನೇನೇ ೩

೩೨೯

ರಂಗ ಬಾರೋ ರಂಗ ಬಾರೋ
ರಂಗ ಬಾರೋ ಶ್ರೀರಂಗ ಬಾರೋ ಪ
ತುಂಗ ಕೃಪಾಂಬಿಕ ಮಂಗಳದಾಯಕ ಅ.ಪ
ಮೆಲ್ಲಮೆಲ್ಲನೆ ಬಾ ಮೆಲ್ಲಡಿಯಿಡು ಬಾ
ಮೆಲ್ಲುಲಿಯುಲಿ ಬಾ ಮೆಲ್ಲು ಬೆಣ್ಣೆಯ ಬಾ
ಸಲ್ಲಲಿತಾಂಗ ಬಾ ಪಲ್ಲವಾಧರ ಬಾ
ಫುಲ್ಲಲೋಚನ ಬಾ ಚೆಲ್ವಮೂರ್ತಿಯೆ ಬಾ೧
ಗಂಗೆಯ ಜನಕ ಬಾ ಅಂಗಜಪಿತನೆ ಬಾ
ಭೃಂಗಕುಂತಳನೆ ಬಾ ಮಂಗಳ ಮೂರ್ತಿ ಬಾ
ಹೊಂಗೊಳಲೂದು ಬಾ ಸಂಗೀತಲೋಲ ಬಾ
ಮಾಂಗಿರಿಯರಸ ಬಾ ಬಾಬಾರೊಬಾರೋ ೨

೩೩೦

ಸಾರತರದ ಮುರಳಿದನಿಯ ಕೇಳಿದೆ ಏನೆ ಪ
ನಾರಿಮಣಿಯರುಲಿವದನಿಯ ಕೇಳಿದೆ ಏನೆ ಅ.ಪ
ನಲಿದು ಕುಣಿವ ಲಲನೆಯರನು ನೋಡಿದೆ ಏನೆ
ಬಾಲಕೃಷ್ಣ ಸಲೆ ನಗುವುದ ನೋಡಿದೆ ಏನೆ
ಝಣ ಝಣ ಝಣ ಕಿಣಿ ಕಿಣಿ [ಭರ್ತಾ] ರವವು ಕೇಳ್ವುದೇನೆ೧
ಬಡನಡುವಿನ ಮಡದಿಯವನ ಅಡಿಯ ಪಿಡಿವೆ ಏನೆ
ಕಡುಬೆಡಗಿನ ಹುಡುಗಿಯವನ ಅಡಿಯ ಪಿಡಿವೆ ಏನೆ
ಸಡಗರದಲಿ ನಡೆದು ಮನವ ರಂಗಗೀವೆ ಏನೆ ೨
ಮನದ ಕಲುಷವಳಿದು ಮುದವ ತಳೆದಿಹೆಯೇನೆ
ಇನಿದುವಚನ ಕನಸು ನೆನಸ ತಳೆದಿಹೆಯೇನೆ
ತನುಮನಧನ ಮಾಂಗಿರೀಶಗೊಪ್ಪಿಪೆಯೇನೇ ೩

೩೩೧

ಸಿಕ್ಕದೆ ಪೋಪೆಯೇತಕೆ ಮಾಂಗಿರಿರಂಗ ಪ
ಸಿಕ್ಕದೆ ಪೋಪೆಯೇಕೆ ಠಕ್ಕುಮಾಡುವೆಯೇಕೆ
ಅಕ್ಕರೆಯಿಂದ ನಾ ಸಕ್ಕರೆ ಕೊಡುವೆನೆ ಅ.ಪ
ಚಿಣ್ಣರ ಕೂಡಾಡಿ ಕಣ್ಣುಸನ್ನೆಯ ಮಾಡಿ
ಸಣ್ಣಕೊಳಲಪಾಡಿ ಬೆಣ್ಣೆಗಳ್ಳ ರಂಗಾ೧
ಪಿಡಿದು ಬರುವೆನೆಂದು ಕಡಲಿನೊಳಗೆ ಮಿಂದು
ಪೊಡವಿದೇವಿಯ ತಂದು ಕಡುನೊಂದುದಾಯ್ತಿನ್ನು ೨
ತರಳ ಪ್ರಹ್ಲಾದನು ಕರೆಯುತಲಿಹನೇ ನಿನ್ನ
ಕರದೆ ಬೆಣ್ಣೆಯನಿಟ್ಟು ಕರುಣಾಳು ಬಾರೆನಲ ೩
ಕಡುನುಡಿಗಳ ಕೇಳಿ ಪಿಡಿಯಲಾರೆನೇ ನನ್ನ
ಕಡೆಗಣಿಸಲಿ ಬೇಡ ಅಡಿಗೆರಗುವೆ ರಂಗಾ ೪
ಮಾಂಗಿರಿಮೇಗಿಹ ಶೃಂಗಾರ ದೇವಯ್ಯ
ರಂಗ ನೀನೆನ್ನಂತರಂಗ ದೇವದೇವಾ ೫
ತಾಮರಸಾಕ್ಷನೆ ಕಾಮಿತ ದಾತನೆ
ರಾಮದಾಸಾರ್ಚಿತ ಭೀಮವಿಕ್ರಮ ರಂಗಾ ೬

೩೩೨

ಸುಲಲಿತ ಮಧುಕರ ಕೊಳಲನೂದುವುದನು
ಕಲಿಸಿದರಾರೇ ನಳಿನಮುಖೀ ರಾಧೇ ಪ
ಬಲಿಸಂಹಾರನು ಲೋಕದ ನಾರಿಯ
ರಲಸದೆ ಗಾನವ ಕಲಿಸಿದನೇನೇ ಅ.ಪ
ಕರು ತುರುಗಳ ಬಳಿ ಸರಸವನಾಡುತ
ಮುರಳಿಯನೂದುವ ಸರಸಿಜನಾಭ
ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು
ಸ್ವರಗಳ ಬೋಧಿಸಿ ನಲಿನಲಿದಿಹನೇನೇ ೧
ಬೃಂದಾವನದಲಿ ನಂದಕುಮಾರನ
ವಂದಿಸೆ ನಾರದ ಬಂದುಹಾಡಿದನೇ
ಅಂದದ ಕಲಿಕೆಯ ತುಂಬುರ ನಿನಗಾ
ನಂದದಿ ಗಾನವ ಕಲಿಸಿದನೇನೆ ೨
ಅಂಗಜಪಿತನಿಗೆ ಮಂಗಳಗಾನವ
ಅಂಗನೆ ಶಾರದೆ ಪಾಡಿದಳೇನೇ
ಮಾಂಗಿರಿರಂಗ ಮಾತಂಗವರದನಂತ
ರಂಗದರಾಣಿ ನೀ ಕಲಿಯೆಂದನೇನೇ ೩

ಭಗವಂತನನ್ನು ಕಂಡಿರುವ

೩೩೩

ಸ್ಥಾಣುಂಕರ ವಿರಾಜಿತ ರಮಾಸದನ ಮೋಹನ ಪ
ವಾಣೀಶ ಸಂಭಾವಿತ ಗೋಪೀಜನ ಸೇವಿತಾ ಅ.ಪ
ಮಣಿಭೂಷಣ ರಂಜಿತ ಮುಕ್ತಜನಾನಂದಿತಾ ೧
ಫಣಿಮಣಿಗಣ ಸಂಭೂಷಿತ ವನಿತಾಜನ ತೋಷಿತ ೨
ಅಣುರೇಣು ತೃಣಪೂರಿತ ಗುಣಸಾಗರ ಮಾಂಗಿರೀಶ ೩

೩೩೪

ಹೊಂಗೊಳಲೂದುತ ಬರುವ ರಂಗ
ಮಂಗಳ ಗಾನಕೆ ನಲಿವ ಪ
ಅಂಗನೆಯರ ಕೂಡಾಡುತೆ ಕುಣಿವ
ರಂಗನ ಪಾದಕೆ ಮಣಿವ ಅ.ಪ
ಕಿರುನಗೆ ನಸುನಗೆ ನಗುವ ಮರಕತಹಾರದಿ ಹೊಳೆವ
ಸ್ಮರವರನಂದವ ಹಳಿವ ಕರುಣವ ಬೀರುತ ಒಲಿವ ೧
ಗಾನದಿ ಮನವನು ಸೆಳೆವ ಧ್ಯಾನಕೆ ತನುಮನ ತೆರುವ
ಸನ್ನುತ ಪದವಿಯ ಕೊಡುವ ಮಾಂಗಿರಿ ರಂಗಗೆ ಮಣಿವ ೨

ಸಾಮಾಜಿಕ-ಲೋಕನೀತಿ ಸ್ತುತಿಗಳು

೩೩೫

ಅಳುವವರಿಲ್ಲದ ಜಗವಿಲ್ಲ ಪ
ಅಳುವಿಲ್ಲದವಗೆ ನಲವಿಲ್ಲಾ ಸದಾ
ಅಳುವವನಿಗೆ ಸದ್ಗತಿಯಿಲ್ಲಅ.ಪ
ಅಳಿವಿಂಗಳುವುದು [ಅಸಹಾಯಾರ್ಥ]
ಬಳಲಿಕೆಗಳುವುದು ಬಹುವ್ಯರ್ಥ
ಘಳಿಗೆಯೊಂದಾದರೂ ನಳಿನನಾಭನಕೃಪೆ
ಗಳುವುದೇ ಮನುಜಗೆ ನಿಜದರ್ಥ ೧
ಸ್ವಾಮಿಯ ಬಳಿಯಲಿ ಕಾಮಿತವಿಲ್ಲದ
ನಾಮಭಜನೆಯೊಳು ಇರಬೇಕು
ಶ್ರೀಮಹಿತಾಂಗ ಮಾಂಗಿರಿರಂಗಯ್ಯನ
ಪ್ರೇಮಕಳುವ ಮನವಿರಬೇಕು ೨

೩೩೬

ಇಂದಿನ ದಿನವೆ ಸುದಿನ | ಗೋ
ವಿಂದನ ಸ್ಮರಣೆಯ ಗೈದುದರಿಂದ ಪ
ನಾಳೆ ಏಕಾದಶಿ ಹರಿದಿನವೆನಲಾ
ವೇಳೆಗೆ ವುಳಿವೆವೋ ಅಳಿವೆವೋ ಅರಿಯೆವು
ತಾಳವಾದ್ಯತಂಬೂರಿಗಳಿಲ್ಲವೆಂ
ದಾಲೋಚಿಸೆ ಹರಿಭಜನೆಯು ದುರ್ಲಭ ೧
ಗೀತವಿದ್ಯಾಕೋವಿದರಿಹರೆನ್ನುತ
ಯಾತರ ದಾಸರ ಪದಗಳು ಎನುತಲಿ
ಮಾತನಾಡಿ ಕಾಲವ ಕಳೆದೊಡೆ ಇ
ನ್ನಿತರ ಕಾಲವು ದೊರಕುವುದಿಲ್ಲ೨
ದಾಸರ ಪದದೊಳಗಿರುವ ಮಹತ್ವವು
ಲೇಶವಿಲ್ಲ ಸಂಗೀತ ಸ್ವರದೊಳು
ಭಾಸುರಾಂಗ ಮಾಂಗಿರಿಪತಿ ಸಲಹುವ
ದಾಸರಪದ ತಾಳಗಳಿಗೊಲಿವಾ ೩

೩೩೭

ಇದು ಕಲಿಗಾಲದ ಮಹಿಮೆಯ ಗುಟ್ಟು
ಮುದಿತನ ಬಂದರೆ ಮಾಯದ ಪೆಟ್ಟು ಪ
ವಿಧವೆಯಾದರೆ ತಲೆಯ ಮೇಲ್ಮೊಟ್ಟು
ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ
ಕುರುಡನಾದರೆ ಅಣಕದ ಬಾಳು
ಅರೆಕಿವುಡಗೆ ಬೈಗುಳ ಕೂಳು
ನರಳಿದರೆ ಸಾಯಲಿಲ್ಲವೆಂಬ ಗೀಳು
ಕೊರಗಿ ಕಣ್ಣೀರನು ಸುರಿಸುವ ಗೋಳು ೧
ಇತ್ತಬಾರದಿರು ಎಂಬರು ಕೆಲರು
ಅತ್ತಲೆ ಹೋಗು ಹೋಗೆಂಬರು ಕೆಲರು
ಎತ್ತಹೋದರೂ ಬಂದುದೇಕೆಂಬರು
ತುತ್ತೊಂದಾದರೂ ಸಿಗದೆಂಬುವರು ೨
ಹದ್ದುಹದ್ದೆಂಬುವ ಬಿರುನುಡಿಯಿಂದ
ಒದ್ದೋಡಿಸುವಳು ಸೊಸೆ ಮನೆಯಿಂದ
ಕದ್ದೋಡುವನು ಮಗ ಭಯದಿಂದ
ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ ೩

ಏಕಾದಶಿವ್ರತದ ಮಹತ್ವದ

೩೩೮

ಕೆಡುವೆಯೇಕೋ ಮನುಜ ಕೆಡುವೆಯೇಕೋ ಪ
ಪೊಡವಿಯಾ ಸುಖ ಸ್ಥಿರವದೆಂಬ ದೃಢವನಾಂತು ನೀ ಅ.ಪ
ಧನವಗಳಿಸಲೇಂ ಮನುಜಾ ಮನೆಗಳೀಡಾಡೆ
ಎನಿತು ಬಳಗಮಿರ್ಪೊಡೇನು ತನುವಿನಾಸೆಯಿಂ ೧
ಮರೆವೆಯೇತಕೋ ಮನುಜಾ ಅರಿಯಲೆನ್ನುತಾ
ಬರಿಯ ಮಾಯೆಯೀ ಪ್ರಪಂಚ ಚಿರವೆಂದೆನ್ನುತಾ ೨
ರಂಗಮಾಲೋಲನಾ ಮಾಂಗಿರೀಶನ ನೆನೆ[ದರೆ]
ಹಿಂಗದೇ ಭವಬಂಧಗಳನು | ಭಂಗಗೈಯನೇ ೩
ಕಾಲದೂತ ರಂಗ ಕಾಲಿನಿಂದೊದೆಯುವಾಗ
ಬಾಲರಾಮದಾಸ[ನುತನ] ನಲಿದು ನೆನೆಯದೆ ೪

ಆಧುನಿಕ ಸಮಾಜದಲ್ಲಿ

೩೩೯

ಚಿಂತೆಯಿಲ್ಲದ ನರನು ಧರೆಯೊಳಗಿಹನೇ
ಅಂತರಂಗದಿ ನಮ್ಮ ರಂಗನಿಲ್ಲದಿರೆ ಪ
ಅಂತರಂಗದಿ ಶುದ್ಧಿ ಇಲ್ಲದಿರೆ ರಂಗಯ್ಯ
ಎಂತು ನೀನಿಹೆಯಯ್ಯ ಮಾನಸದಿ ಸ್ವಾಮಿ ಅ.ಪ
ಧನಧಾನ್ಯಗಳ ಚಿಂತೆ ಕನಕದೊಡವೆಯ ಚಿಂತೆ
ತನುಜ ತನುಜೆಯರನ್ನು ಪಡೆವ ಚಿಂತೆ
ಅನಿಶ ಯೌವ್ವನವಾಂತು ಕನಸು ನನಸುಗಳಲ್ಲಿ
ವನಿತೆಯರನೊಡಗೂಡಿ ಭೋಗಿಸುವ ಚಿಂತೆ ೧
ಉಡಿಗೆ ತೊಡಿಗೆಯ ಚಿಂತೆ ಉಡುವೆನೆಂಬಾ ಚಿಂತೆ
ಒಡಲ ಪೋಷಿಪ ಚಿಂತೆ ಕಡಲಲೆಗಳಂತೆ
ಪಿಡಿದೆನ್ನ ಬಾಧಿಪುವು ಬಿಡಿಸೆಲ್ಲ ಚಿಂತೆಗಳ
ಕೊಡು ನಿನ್ನ ಸೇವೆಯನು ಮಾಂಗಿರಿಯರಂಗ ೨

೩೪೦

ಜಪವ ಮಾಡಿದರೇನು ತಪವ ಮಾಡಿದರೇನು
ವಿಪುಲಭಕ್ತಿಯು ಮಾತ್ರ ಇಲ್ಲದಿರುವವನು ಪ
ವಿಪರೀತ ಡಂಭದಲಿ ಉಪಕರಣಗಳ ತೊಳೆದು
ಕೃಪೆ ಪಡೆಯದಿರೆ ಗುರು ರಾಘವೇಂದ್ರನ ಅ.ಪ
ಗುರುವಿನುಪದೇಶದ ಸ್ಮರಣೆಯನು ಮರೆತವನು
ಗುರುಪಾದ ಸೇವೆಯನು ತೊರೆದು ಕಿರಿದೆನ್ನುವನು
ಹರಿಯನೇ ನಾ ಕಂಡೆ ಗುರುಹಂಗು ಎನಗಿಲ್ಲ
ಸರಿಯಾರು ತನಗೆಂಬ ಗರುವಯುತನು೧
ಗುರುವಿನೊಲವೇ ಧರ್ಮ ಗುರುಸೇವೆಯೇ ತಪ
ಗುರುನಾಮವೇ ಮಂತ್ರ ಗುರುಸಿದ್ಧಿಯೇ ತಂತ್ರ
ಗುರುವೇ ಸ್ವರ್ಗಕೆ ದಾರಿ ಗುರುರೂಪ [ಕಣ್‍ಸಿರಿಯು]
ಗುರುವೇ ಸರ್ವಸ್ವ ಮಾಂಗಿರಿರಂಗನುಸಿರು೨

೩೪೧

ಜಾತಿ ಕುಲಗೋತ್ರಗಳ ಖ್ಯಾತಿ ಹಿರಿದಲ್ಲಯ್ಯ ಪ
ನೀತಿ ನಯ ಭಕುತಿಗಳು ಹಿರಿಯವಯ್ಯ ಅ.ಪ
ಸ್ನಾನ ಸಂಧ್ಯಾ ಹೋಮ ಧ್ಯಾನ ದಿನಚರ್ಯೆಗಳ
ತಾನಲಕ್ಷ್ಯವ ಗೈವ ಮಾನವನು ದ್ವಿಜನೇ
ಶ್ರೀನಿವಾಸಾ ರಂಗ ದಾನವಾರಿ ಎಂದು
ಜಾನಿಸುವ ಹರಿಜನರು ಹೀನರಹರೇ೧
ಬೂದಿ ನಾಮವ ಬಳಿದು ವೇದಾಂತಿ ತಾನೆಂದು
ಮೇದಿನಿಯ ಜನರಲ್ಲಿ ಕ್ರೋಧ ತೋರಿ
ಮಾಧವನ ಭಕುತರಲ್ಲಿ ಭೇದ ವೈರವ ತಾಳಿ
ವಾದ ಮಾಡುವ ನರಗೆ ಹರಿಯ ಕೃಪೆಯುಂಟೆ ೨
ವನಜನಾಭನ ನೆನೆದು ತನುಮನವನರ್ಪಿಸದೆ
ಧನದಾಸೆದೋರುವನು ಹರಿಭಕುತನೆ
ಕನಸುಮನಸಿನೊಳೆಲ್ಲ ಮಾಂಗಿರೀಶನ ಭಜಿಸಿ
ದಿನಪೂಜೆಗೈವವನು ಕುಲಹೀನನೇ ೩

೩೪೨

ತನುವ ತೊಳೆದ ಮಾತ್ರದಿಂದ ಜನರು ಶುದ್ಧರೆನಿಪರೆ ಪ
ಮನದ ಶುದ್ಧಿ ಆದ ಹೊರತು ವನಜನಾಭನೊಲಿವನೇ ಅ.ಪ
ದಿನಪನುದಯ ಕಾಲದಿಂದ ದಿನಪನಸ್ತದನ್ನೆಗಾ
ಧನವಗಳಿಸುವಾಸೆಯಿಂದ ಮನಸಿನಲ್ಲಿ ಯೋಚಿಸಿ
ಮನಸಿಜಾತನಾಟಕೆ ಪರವನಿತೆಯರ ಬೆರೆಯುತುರುಳಿ
ಕನಸಿನಲ್ಲಿ ಹರಿಯ ಕಂಡೆ ಎನುತ ಪೇಳ್ವ ಮಾನವಾ ೧
ಪರರು ನೋಡಿ ಮೆಚ್ಚಲೆಂದು ಬೆರಳಿನಿಂದ ಮಣಿಯನೆಣಿಸಿ
ಶಿರವನೊಮ್ಮೆತೂಗಿ ತೂಗಿ ತೆರೆದು ಮುಚ್ಚಿ ಕಂಗಳ
ಹಿರಿಯ ಭಕ್ತನಂತೆ ನಟಿಸಿ ಪರರ ಮೋಸಗೊಳಿಸಿ ದಣಿಸಿ
ಬರಿಯಡಾಂಭಿಕ ಮಾಂಗಿರೀಶ್ವರನ ಶರಣನೆನಲು ಸಾಧ್ಯವೇ೨

೩೪೩

ತನುವಿದು ನಿತ್ಯವಲ್ಲ ಮನವು ನಿಶ್ಚಲ ಅಲ್ಲ ಪ
ಕನಸಿನಂತೆ ಜೀವಿತವೆಲ್ಲ ಇನಿತು ಶಾಂತಿಯ ತಾಣ ಅಲ್ಲ ಅ.ಪ
ಜಲಚರಂಗಳು ವನಚರಂಗಳು
ಅಲೆವ ಪಕ್ಷಿಕೀಟಕ್ರಿಮಿಗಳು
ಕಲುಷ ವಿಮಲವೆಂಬುದನರಿಯವು
ಸುಲಭವೀಗುಣ ಮಾನವ ಜನ್ಮಕೆ ೧
ಜನುಮಗಳೊಳು ಹಿರಿಯದೆನಿಪ
ಮನುಜ ಜನ್ಮವನಾಂತ ಮೇಲೆ
ವಿನಯ ನಯ ವಿಧೇಯತೆಯಿಂದ
ವನಜನಾಭನ ನೆನೆಯದಿರ್ದೊಡೆ ೨
ಭಜಿಪ ಭಕ್ತರ ಕೂಗಿಗೊಲಿದು
ಗಜವ ಪಾಲಿಸಿದಂತೆ ಬಂದು
ನಿಜಪದಂಗಳ ತೋರ್ಪ ಮಾಂಗಿರಿ
ವಿಜಯರಂಗನ ಸನ್ನುತಿ ಗೈಯದ ೩

೩೪೪

ತಾನಾಗಿ ದೊರಕುವುದು ಹರಿದರುಶನ ಪ
ಶ್ರೀನಾಥವಿಠಲನಲಿ ದೃಢಭಕ್ತಿವುಳ್ಳವಗೆ ಅ.ಪ
ಅರುಣೀಯದೊಳೆದ್ದು ಹರಿಕೃಷ್ಣ ಎನುವವಗೆ
ಹರಿಹರಿ ಹರಿ ಎಂದು ಸ್ನಾನಗೈವವಗೆ
ಹರಿಯ ದ್ವಾದಶನಾಮ ಪಠಣೆಯಿಂಮಣಿವವಗೆ
ಗರುಡವಾಹನ ಕೃಷ್ಣ ಗೋಪಾಲಯೆನುವವಗೆ೧
ನಿತ್ಯಕರ್ಮವಗೈದು ಫಲವ ಬಯಸದ
ಕತ್ರ್ಯವ್ಯಗಳ ಗೈದು ಫಲ ಕೃಷ್ಣಗರ್ಪಿಪ ನರಗೆ
ಉತ್ಸಾಹದಿಂದ ಅಭ್ಯಾಗತರ ಪೂಜಿಪಗೆ
ಸತ್ಯದೈವವು ಎಂದು ಗೋಸೇವೆ ಗೈವವಗೆ ೨
ಕುಳಿತು ನಿಲುವೆಡೆಗಳೊಳು ಹರಿಕೃಷ್ಣ ಎನುವವಗೆ
ಇಳೆಯೊಳಿಹ ನರರೆಲ್ಲ ಭ್ರಾತರೆಂದವಗೆ
ಉಳಿವು ಅಳಿವುಗಳೆಲ್ಲ ಹರಿಕರುಣವೆಂಬವಗೆ
ಜಲಜನಾಭನ ದಿವ್ಯ ನಾಮಗಳ ಭಜಿಸುವಗೆ೩

ಸುಂದರವಾದ ಲೋಕನೀತಿಯ ಈ ಕೃತಿ

೩೪೫

ತಾಳಬೇಕು ಭಕ್ತಿಯೇಳಬೇಕು ಪ
ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ
ಹಾಡಲು ತಾಳಬೇಕು ಬೇಡಲು ತಾಳಬೇಕು
ಓಡಾಡಿ ಕುಳಿತು ಮಾತಾಡಲು ತಾಳಬೇಕು
ನೋಡಬೇಕಾದವನು ನೋಡಲು ತಾಳಬೇಕು
ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು ೧
ತಾಳರಿತಮೇಲಂತರಾಳವನು ಕಾಣಬೇಕು
ತಾಳದವ ಬಾಳುವನೇ ಮೇಳದೊಳಗೇ
ತಾಳ ನೋಡುವರೆಲ್ಲ ಹೂಳನೋಡಲಿಬೇಕು
ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು ೨

೩೪೬

ದಾಸನಾಗಬೇಕು ಮನದಲಿ ಆಸೆಯಿಂಗಬೇಕು ಪ
ಮೋಸಮೆಂಬುದಂಕುರಿಸದ ಅದರ
ವಾಸನೆಯಂಟದ ಮಾನಸದಲಿ ಹರಿಅ.ಪ
ಅತಿಮಾತಾಡುವ ಸತಿಯಿರಬೇಕು
ಖತಿಯಿಂತೆರಳುವ ನೆಂಟರು ಬೇಕು
ಹಿತವನು ಬಯಸದ ಸುತರೂ ಬೇಕು
ಸತತಮಿವೆಲ್ಲರ ಸಹಿಸಿ ಭಜನೆಗೈವ ೧
ತಣಿವಿಲ್ಲದೆ ತಿಂಬ ಅಣುಗರು ಬೇಕು
ಹಣವ ಕೊಡೆಂಬುವ ಅಳಿಯರು ಬೇಕು
ಋಣಬಾಧೆಗಳೊಳು ಕೊರಗಲು ಬೇಕು
[ಅಣು ಅಣು ಕಾಡುವ ಸಂಸಾರಕಂಟದೆ] ೨
ಮಾನಸವ ಬಿಗಿಹಿಡಿದಿರಬೇಕು
ಧ್ಯಾನದೊಳಾತ್ಮಶಾಂತಿಯು ಬರಬೇಕು
ಶ್ರೀನಿವಾಸನೇ ಶರಣೆನಬೇಕು
ಎ್ಞÁನದಿ ಮಾಂಗಿರಿರಂಗನ ಪಾದದ ೩

ಈ ಕೀರ್ತನೆಯಲ್ಲಿ ‘ತಾಳ’ ಪದವನ್ನು

೩೪೭

ದುರಿತಾರಿಯೊಳು ಮನವಿರಿಸಿ ಸೌಖ್ಯವತಾಳು
ನರಕವು ಬರದೊ ಮಾನವಾ ಪ
ಪರಿಪರಿ ಜನ್ಮದೆ ಕೊರಗಿ ಕಂಗೆಡಬೇಡ
ಸ್ಥಿರವಲ್ಲವೀ ದೇಹವೂ ಭರವಸದಿಂದ ಅ.ಪ
ಮಂದಮತಿಯನಾಂತು ನೊಂದು ಸಾಯಲಿಬೇಡ
ಮಂದರಧರಗೆರಗು
ಇಂದ್ರಿಯವೆಂಬುದ ಬಂಧಿಸು ಜತನದಿ
ಕುಂದುಕೊರತೆಗಳಿಲ್ಲವೋ ವಂದಿಸಲು ಹರಿಯ ೧
ಎರಡು ಕಂಬದ ಮೇಲೆ ಮೆರೆವ ಗೋಪುರವಿದು
ಚಿರಕಾಲವಿರದೋ
ಬಿರುಗಾಳಿಯಿಂದಲೋ ಉರುತರ ಮಳೆಯೊಳೊ
ಉರುಳಿ ಬೀಳುವುದೆಂಬುದು ಬರೆದಿಡೊ ಮೂಢಾ ೨
ನೀರ ಬೊಬ್ಬುಳಿಯಂತೆ ಆರಿಹೋಗುವುದಿದು
ಸೇರದು ಪದುಮಾಕ್ಷನಾ
ಆರುದಿನ ಬಾಳಿಗಾರು ಸಮರೆನಬೇಡ
ಆರಡಿ ಕಮಲವುತಾ ಸೇರುವವೊಲು ೩
ಎನಗೆ ಮುಂದೊದಗುವ ಜನ್ಮಕೋಟಿಗಳೊಳು
ಅನುಗಾಲ ದೇಶವಸ್ಥೆಗಳೊಳಗೂ
ವನಜನಾಭನೆ ನಿನ್ನ ಘನಪಾದಕಮಲವ
ನೆನೆವ ನೆಲೆಸುವಂದದೆ ಅನವರತ ಬೇಡೋ ೪
ಜೀವಾತ್ಮ ಪೋಪಾಗ ದೇವದೇವನ ಮರೆವ
ಭಾವಗಳೊಳುದಯಿಪವು
ಸಾವಕಾಶವ ತೊರೆದು ಮಾಂಗಿರಿರಂಗನ
ದಿವ್ಯನಾಮವ ನೆನೆದು ಭಾವುಕನಾಗು ೫

ಸಂಸಾರದಲ್ಲಿದ್ದೂ ಪ್ರಪತ್ತಿ

೩೪೮

ಧರ್ಮದ ನೀತಿಯ ಅರಿತೇನು
ಮರ್ಮದ ರೀತಿಯ ತಿಳಿದೇನು ಪ
ಧರ್ಮಕರ್ಮಗಳು ಹರಿಗರ್ಪಣವೆಂದು
ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ
ಗಂಗಾಸ್ನಾನವ ಮಾಡಿದರೇನು
ಅಂಗುಲಿಯೂರುವ ಯೋಗದೊಳೇನು
ಪಂಗನಾಮ ಬೂದಿಯ ಬಳಿದೇನು
ರಂಗನ ಸ್ಮರಿಸದ ಮನವಿದ್ದೇನು ೧
ದೇಶ ದೇಶಂಗಳ ತಿರುಗಿದರೇನು
ಆಶೆಯ ಬಿಡದ ಕಾಷಾಯದಿಂದೇನು
ಕಾಶಿರಾಮೇಶ್ವರಕೋಡಿದರೇನು
ಶ್ರೀಶನನಾಮವೇ ಗತಿಯೆನದವನು ೨
ಚಿತ್ತದಿ [ನೆನೆದರೆ] ಹರಿ ಕಿರಿದೇ
ಸತ್ತು ಹುಟ್ಟುವುದೇ ಜಗದೊಳು ಹಿರಿದೇ
ಎತ್ತೆತ್ತಲು ಹರಿಯಿಹನೆನಬಾರದೇ
ಕರ್ತಶ್ರೀ ಮಾಂಗಿರಿರಂಗನ ನೆನೆಯದೆ೩

೩೪೯

ನಗುವಿನಿಂದಾರೋಗ್ಯ ಉಂಟೆಂಬರಯ್ಯ
ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ
ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ
ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ
ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ
ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ
ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ
ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ ೧
ನಸುನಗೆಯು ಮನದ ಸಂತಸದ ಕುರುಹು
[ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ
ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ
ಹೊಸದಾದ ನಗು ಮಾಂಗಿರಿನಲವಿನಲಿ೨

೩೫೦

ನರ್ತನಶಾಲೆ ಇದೇನಯ್ಯ
ವರ್ತುಳವಾದ ಭೂಮಂಡಲವೆಲ್ಲಾ ಪ
ಕರ್ತನೀನೇ ಚಕ್ರವರ್ತಿಯಾಗಿರುವೆ
ವರ್ತನೆ ಗಡಿಬಿಡಿ ಮಾಡದಿರಯ್ಯ ಅ.ಪ
ಕುಂಟರು ಕುರುಡರು ನರ್ತನೆಗೈವರು
ನೆಂಟರು ಭಂಟರು ನರ್ತಿಸುತಿರುವರು
ಗಂಟನುಂಗುವರೂ ನರ್ತಿಸುತಿಹರೋ೧
ವರ್ತಕ ಲಾಭಕೆ ನರ್ತಿಸುತಿಹನು
ಆರ್ತ ದರ್ಶನಕಾಗಿ ನರ್ತಿಸುತಿಹನು
ನರ್ತನೆ ಮಾಂಗಿರಿಪತಿ ಕೃಪೆಗೈಯ್ಯ ೨