Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೪೦೧

ಶರಣಾಗತಿಯೇ ಪುರುಷಾರ್ಥ
ಸುರಪಕುಮಾರ ನಾರಣ ಗೀತಾರ್ಥ ಪ
ಸ್ಮರಣಾರಾಧನ ಸಾಧನೆಗರ್ಥ
ಧರಣಿಯ ಸೌಖ್ಯದ ಬಯಕೆಯು ವ್ಯರ್ಥ ಅ.ಪ
ಮರಣಕಾಲದಿ ತನ್ನ ಬಳಿಗೆ ಬಂದಾತನ
ಚರಣವೆ ಶರಣೆಂದ ಖಗನು ಸಮರ್ಥ
ಶರಣೆಂದೆನ್ನುತ ಧರಣಿಜೆಯರಸನ
ಚರಣವ ನುತಿಸಿದ ದನುಜ ಸಮರ್ಥ೧
ಸರಳ ಪಂಜರದಲಿ ಶಯನಿಸಿದಾಗ ತನು
ಹರಿ ಶರಣೆಂದುದು ಪರಮ ಪದಾರ್ಥ
ಗುರು ಉಪದೇಶದಿ ಶರಣಾಗತಿಯ ಮಾಂ
ಗಿರಿಯರಸಗೊರೆವುದೆ ಚಿರ ಚರಿತಾರ್ಥ ೨

೪೦೨

ಶ್ರೀಕಾರ ಶೃಂಗಾರ ಶ್ರೀಮಾಮನೋಹರ
ಓಂಕಾರ ಸಾಕಾರ ಪರಮೇಶ್ವರಾ ಪ
ಗಂಭೀರ ಝೇಂಕಾರ ಮುರಳೀಧರ ಗುಣ
ಸುಕುಮಾರ ಬೀರ ಕರುಣಾಕರಾ ಅ.ಪ
ಮುರವೈರಿ ಕಂಸಾರಿ ನರಕೇಸರಿ
ಮಾರಾರಿ ನುತಕಾರಿ ಶುಭ ಶ್ರೀ
ಹರೀ ಜಂಭಾರಿ ದಯಕಾರಿ ಮಧುಸಂಹರೀ
ಗಿರಿಧಾರಿ ದುರಿತಾರಿ ಶ್ರೀ ಮಾಂಗಿರೀ ೧

ಶ್ರೀವೈಷ್ಣವ ಧರ್ಮದ ಮುಖ್ಯತತ್ವ

೪೦೩

ಸ್ಮರಿಸಿ ಸುಖಿಸೆಲೋ ಮಾನವಾ ಪ
ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ
ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ
ಧ್ರುವರಾಯಗೊಲಿದ ಘನವು ಈ ನಾಮ
ನವನೀತರೂಪದಿಂದ ಘನವ ತಾಳ್ದಿಹ ನಾಮ
ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು ೧
ಸನಕಾದಿ ಮುನಿಗಳು ಸತತ ಭಜಿಸುವ ನಾಮ
ಅನಿಲಜಾತನಿಗೊಲಿದ ಪರಮನಾಮ
ವನಚಾರಿಯಾಗಿದ್ದ ಶಬರಿಗೊಲಿದ ನಾಮ
ವನಚರರ ಗರುವವನು ಮುರಿಯುವ ನಾಮ ೨
ಪಾಂಚಾಲಿಗಕ್ಷಯದ ವರವನಿತ್ತಾ ನಾಮ
ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ
ವಂಚಕರ ಹೃದಯಗಳ ಭೇದಿಸುತ್ತಿಹನಾಮ
ಚಂಚಲೆಯರುತ್ಸಾಹದಿಂ ಭಜಿಪ ನಾಮವನು ೩
ದುರುಳದೈತ್ಯರ ಮನವ ಕದಡಿ ಕಲಕುವ ನಾಮ
ಶರಣಾಗತಾವಳಿಯ ಪೊರೆಯುತಿಹನಾಮ
ಗರಿಸಿಗಿದ ಸಂಪಾತಿಗಾನಂದವಿತ್ತನಾಮ
ತರಳಪ್ರಹ್ಲಾದ ತಾ ಪಿತಗೊರೆವ ನಾಮವನು ೪
ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ
ಶೃಂಗಾರ ಶ್ರೀ ಪಾಂಡುರಂಗ ನಾಮ
ಗಂಗಾಧರಾನುತ ಸುಖದಾತ ಶ್ರೀನಾಮ
ಮಂಗಳಕರ ರಾಮದಾಸನುತ ನಾಮವನು ೫

ಅಸೂರಿ ರಾಮಸ್ವಾಮಿಅಯ್ಯಂಗಾರ್

೪೦೪

ಹುಚ್ಚು ಹಿಡಿಯಬೇಕು ಭಜನೆಯ
ರಚ್ಚೆ ತೊಡಗ ಬೇಕು ಪ
[ಮೆಚ್ಚುತ] ಅಚ್ಯುತನಾಮವ
ಉಚ್ಚರಿಸುತಲಿರೆ ಕಿಚ್ಚೂ ಮಂಜಹುದು ಅ.ಪ
ಊರುಗಳನು ದಾಟಿ ಬೆಟ್ಟವ
ನೇರುತಲಿರಬೇಕು
ಊರುಹೆಜ್ಜೆಗೂ ನಾರಾಯಣ ನಾಮೋ
ಚ್ಚಾರದ ಹಸಿವು ಬಾಯಾರಿಕೆಯಾಗುವತನಕ ೧
ಕೀರ್ತನೆಯಲಿ ಮುಳುಗಿ ಕೃಷ್ಣನ
ಮೂರ್ತಿಯ ಕಾಣುತಲಿ
ಪಾರ್ಥಸಾರಥಿಯವ ಅನಾಥರಕ್ಷಕನೆಂಬ
ಕೀರ್ತಿಯನಾಂತ ಮಾಂಗಿರಿಯ ಭಜನೆಯಾ ೨

ಕ್ಷೇತ್ರದರ್ಶನ

೪೦೫

ಯಾತ್ರೆಬೇಕು ಕ್ಷೇತ್ರಯಾತ್ರೆ ಬೇಕು ಪ
ಸೂತ್ರದಾರ ಪಂಕೇಜನೇತ್ರನ ನೆನೆವುದಕೆ ಅ.ಪ
ನೇಮ ಸಾಧನೆಗಾಗಿ ಪ್ರೇಮ ಮೊಳೆವುದಕಾಗಿ
ಕಾಮ ಕ್ರೋಧವ ಸುಡುವ ಸ್ಥೈರ್ಯಕಾಗಿ೧
ಈ ಮನದ ಚಂಚಲವ ಕಡಿದೊಂದೆ ಮನದಿಂದ
ಶ್ರೀಮಾಂಗಿರಿಯ ರಂಗ ನಾಮಾಮೃತವೆಂಬ೨

ಮೇಲು ಕೋಟೆ

೪೦೬

ತಿರುನಾರಾಯಣ ಚರಣಂ ಶರಣಂ
ಸುರ ಮುನಿ ವಲಯಂ ಯದುಗಿರಿನಿಲಯಂ ಪ
ಗುರುರಾಮಾನುಜ ಹೃದಯಭರಣಂ
ಸ್ಮರವರ ಸುಂದರಮನಿಶಂ ಸದಯಂ ಅ.ಪ
ಯತಿರಾಮಾನುಜ ಶೆಲ್ವಕುಮಾರಂ
ಪತಿತಪಾವನ ಮಾಯುತ ಮಣಿಹಾರಂ
ಸತತಾನಂದದ ಪುಣ್ಯಶರೀರಂ
ಶತಪತ್ರಾಯುತ ನೇತ್ರಮುದಾರಂ ೧
ಗರುಡ ಕರಾರ್ಷಿತ ನಿರುಪಮಮಣಿಕೋಟೀರ
ವಿರಾಜಿತ ಮಸ್ತಕಮಮಲಂ
ಪರಮ ವೈಭವೋತ್ಸವ ರಾರಾಜಿತ
ಪುರುಷೋತ್ತಮ ಕೇಶವ ಮಾಲೋಲಂ ೨
ಪರಮ ಪುಣ್ಯತೀರ್ಥಾಕರ ಶೋಭಿತ
ನರಹರಿ ಗಿರಿಸಂಭೂಷಿತ ಧಾಮಂ
ನಿರುತ ದಯಾಕರ ಮಾಂಗಿರಿಪತಿ ಭೂ
ಸುರನುತ ಮಾಧವ ಜಗದಭಿರಾಮಂ ೩

ತಿರುಪತಿ

೪೦೭

ವರ ವೆಂಕಟಾದ್ರಿ ಸ್ಮರಸುಂದರ
ಸರಸಿಜ ಮಣಿಹಾರ ಪ
ಧರಣಿಸುತಾ ಪರಿಭೂಷಿತ
ಶರಣಾಗತ ಪರಿವೇಷ್ಟಿತ
ಸುರನಾಯಕ ವಿಧಿಸೇವಿತ
ಮರುತಾತ್ಮಜ ಗರುಡಾನತ೧
ಪರಮಕೃಪಾ ಶರಧೀ[ಶ್ವರ]
ಮುರಳೀಧರ ಘನಸುಂದರ
ದುರಿತಾನಲ ಪರಿಹಾರ ನರಹರಿ
[ವರ]ಮಾಂಗಿರಿ ಮಿಹಿರ ೨

೪೦೮

ವೆಂಕಟಗಿರಿನಿಲಯ ಜೀಯ ಪ
ಪಂಕಜಾಕ್ಷ ಅಕಳಂಕ ಜನಾರ್ದನ
ಶಂಖ ಚಕ್ರಧರ ಲೋಕಮೋಹನ ಅ.ಪ
ವೇದಶಾಸ್ತ್ರ ಸಕಲಾಗಮ ವಿನುತ
ನಾದರೂಪ ಶ್ರೀ ಭೂಮಿದೇವಿ ಸಮೇತ
ಮಾಧವ ಮಧುಹರ ನಾರದ ಸನ್ನುತ
ಪಾದವ ತೋರೋ ಮಾಂಗಿರಿನಾಥ ೧

೪೦೯

ಶ್ರೀರಂಗ
ಶ್ರೀರಂಗ ರಂಗಮಣಿ ವಿಭೂಷಿತ
ನೀರೇಜ ಲೋಚನ ಪ
ಶ್ರೀರಂಗನಾಥ ಪರಮ ವೈಭವ
ಶೃಂಗಮುನಿವಿನುತ ಸಿರಿ ಮಾಹೃದಯಾ ಅ.ಪ
ಭವನಾಶಕರಾ ಮಹಾಹ್ಲಾದಕರಾ
ಭುವನ ವೈಕುಂಠ ವಿಹಾರಾ ಭುಜಗತಲ್ಪಶಯನೇಶ್ವರ
ನವಮಣಿ ಗುಣಹಾರ ಪರಮಯೋಗಿ ನಿಕರ ೧
ಧೀರ ತುಳಸೀನಿಕರ | ಸಂಭೂಷಣ ಸುಕು
ಮಾರಾ ಭುವನನುತ ಕಮಲನಾಭ
ವೇರಜ ಪರಿವೇಷಿತ ಮಾಂಗಿರೀಶ ಸುರುಚಿರ ೨

೪೧೦

ಕಂಡೆನಿಂದು ಕುಳಿತರಂಗನ ಪುಂಡರೀಕನಯನನ
ಅಂಡಜಾರಿಶಯನ ಶ್ರೀರಂಗಪಟ್ಟಣದರಸನ ಪ
ಏಳು ಏಳು ಎಂದೆ ತಾಳು ತಾಳೆನೆ ಮನದಿ ನೊಂದೆ
ಗೋಳು ಕೇಳಿಸದೇ ಎಂದೆ |
ತೋಳ ಚಾಚಿ ವಂದನೆಗೈದೆ (ಅಪೂರ್ಣ) ೧

ನರಸಿಂಹಕ್ಷೇತ್ರಗಳು

೪೧೧

ಜಯ ಜಯ ಶ್ರೀ ನರಕೇಸರಿ
ಜಯ ಜಯ ಲೋಕೋಪಕಾರಿ
ಜಯಜಯ ದೈತೇಯ ವೈರಿ
ಜಯ ಜಯ ನೃಹರೀ ಪ
ಜಯ ಜಯ ಜಯತು ಹರಿಶೌರೀ
ಜಯ ಜಯ ಜಯತು ಚಕ್ರಧಾರಿ
ಜಯ ಜಯ ಕಶಿಪು ಸಂಹಾರಿ
ಜಯ ಕಾರುಣ್ಯ ಲಹರೀ ಅ.ಪ
ಯಾದವಾದ್ರಿ ನಿಲಯ ನೃಹರೀ
ಖಾದ್ರಿನಗರವಾಸ ನೃಹರೀ
ವೇದರೂಪ ನೃಹರೀ ಸಾವ
ನಾದುರ್ಗವಾಸ ಧೀರ ನೃಹರೀ ೧
ಭಾನುಕೋಟಿ ತೇಜ ನೃಹರೀ
ದೀನ ಭಕ್ತಪಾಲ ನೃಹರೀ
ದಾನವಾರಿ ಯೋಗ ನೃಹರೀ
[ಗಾನಲೋಲ ಹಂಪೀ ನೃಹರೀ] ೨
ಸ್ಥಂಭಜಾತ ನಾರಸಿಂಹ [ಕನ್ನ
ಡಾಂಬೆಯೂರೂರನಾರಸಿಂಹ
ತುಂಬುರನುತ ನಾರಸಿಂಹ]
ಶಂಭುವಿನುತ ನಾರಸಿಂಹ ೩
ಶೀಬಿನಗರ ನಾರಸಿಂಹ
ನಾಭಿಕಮಲ ನಾರಸಿಂಹ
ಅಭಯಂಕರ ನಾರಸಿಂಹ
ಪ್ರಭುಮಾಂಗಿರಿ ನಾರಸಿಂಹ ೪

ಮಹಾಬಲಿಪುರ

೪೧೨

ಮಹಾಬಲೇಶ್ವರ ಮಾವಳಿಪುರ ಮಿಹಿರಾ
ಸುರುಚಿರ ಪರಾತ್ಪರಾ ಪ
ಮಹೀಸುರಾರ್ಚಿತ ಸದಾಕೃಪಾಕರ
ವಿಹಂಗವಾಹನ ಪೀತಾಂಬರ ಅ.ಪ
ಮಧುಸೂದನ ತವಪಾದುಕಾ ಸಾರದ
ಮಾಧವಿ ಸುಮದಲಿ ಪೂದತ್ತರುದಿಸಿ
ಮೇದಿನಿಯೊಳು ತವಾರಾಧನ ತತ್ವವ
ಬೋಧಿಸುವಂತೆ ನೀಗೈದೆ ಕೃಪಾನಿಧೆ ೧
ಶ್ರೀಮದನಂತ ದಿವ್ಯಾಸನಮಂಡಿತ
ಶ್ರೀಮಹೀಸಂಯುತ ಲೋಕವಿಖ್ಯಾತಾ
ಪ್ರೇಮಸುಧಾನ್ವಿತ ಕಾಮಿತದಾತಾ
ಶ್ರೀ ಮಾಂಗಿರಿಪತಿ ಶರಣಸಂಪ್ರೀತಾ೨

ಇದರಲ್ಲಿ ಮೇಲುಕೋಟೆ ಖಾದ್ರಿ

ತಿರುವಲ್ಲಿಕೇಣಿ (ಚೆನ್ನೈ)

೪೧೩

ತಿರುವಲ್ಲಿಕೇಣಿಯ ಸಿರಿಕೃಷ್ಣನ
ದರುಶನ ಮಾಡುವ ಬಾಬಾರೋ ಪ
ಪರಮ ಪುರುಷನವ ಪಾರ್ಥನ ಸೂತನು
ವರಗೀತಾಮೃತವುಸುರಿದವನು ಅ.ಪ
ಶರನಿಧಿಯೊಳು ಮಿಂದು ಐತರುವವರಿಗೆ
ವರದಾಭಯಕರ ತೋರುವವನು
ಪರಮಾಚಾರ್ಯಗೆ ದರುಶನವಿತ್ತು
ಪರಭಕ್ತಿಯ ಸಾರಿದನಿವನು ೧
ಚಾರು ವೇದಂಗಳ ತುರಗವ ಗೈದ
ಧಾರುಣಿಯನು ರಥಹೂಡಿದನು
ಮರುತಾತ್ಮಜನನು ಧ್ವಜಕೇರಿಸಿದನು
ದುರುಳ ಕೌರವನ ಧುರದಿ ಸೋಲಿಸಿದನು೨
ಹತ್ತವತಾರದಿ ಬಂದವನಿವನೇ
ಮತ್ತದೈತ್ಯರನೆಲ್ಲ ಕೊಂದವನಿವನೇ
ಉತ್ತಮಭಕ್ತರ ಕಾಯಲು ಮಾಂಗಿರಿ
ಅತ್ತ ನಿಂದಾ ರಂಗನಾಥನು ಇವನೇ ೩

ಬೇಲೂರು

೪೧೪

ಬೇಲೂರ ಚೆನ್ನಿಗನ ನೋಡುವ ಬನ್ನಿ
ಬಾಲಾರ್ಕತೇಜನ ಪಾಡುವ ಬನ್ನಿ ಪ
ಮೇಲಾದ ವರಗಳ ಬೇಡುವ ಬನ್ನಿ
ನೀಲಾಂಗನಿಗೆ ಪೂಜೆ ಮಾಡುವ ಬನ್ನಿ ಅ.ಪ
ಕ್ಷೀರಸಮುದ್ರದಿ ಮೀಯುವ ಬನ್ನಿ ಇಲ್ಲಿ
ದ್ವಾರದೇಶದಿ ನಿಂತು ಕಾಯುವ ಬನ್ನಿ
ಚಾರುಸುಗಂಧವ ತೇಯುವ ಬನ್ನಿ ನಮ್ಮ
ಕಾರುಣ್ಯದಿಂದವ ಕಾಯುವ ಬನ್ನೀ೧
ಸುತ್ತು ಪ್ರದಕ್ಷಿಣೆ ಮಾಡುವ ಬನ್ನಿ ಅಲ್ಲಿ
ಚಿತ್ತಾಕರ್ಷಕ ಚಿತ್ರ ನೋಡುವ ಬನ್ನಿ
ಅತ್ತಿತ್ತ ವಂದನೆ ಮಾಡುವ ಬನ್ನಿ ಎಲ್ಲ
ಮತ್ತೆ ಕೈ ಜೋಡಿಸಿ ಪಾಡುವ ಬನ್ನಿ ೨
ಎಂಥ ಚೆಲುವ ಚೆನ್ನನಿವನಬ್ಬ ಮ
ತ್ತಿಂಥ ಚೆಲುವನಿಲ್ಲ ಇನ್ನೊಬ್ಬ
ಎಂಥ ಲಾವಣ್ಯವಿದಬ್ಬಬ್ಬ ಮ
ತ್ತಿಂಥಾವ ಮಾಂಗಿರಿ ರಂಗನೊಬ್ಬ ೩

ಜಗನ್ನಾಥ

೪೧೫

ಸಮುದ್ರ ತೀರದಿ ಜಗನ್ನಾಥ
ಸಮಗ್ರ ಸೇವೆಯ ಕೊಡುವಾತ ಪ
ಸಮರ್ಥ ಫಲ್ಗುಣ ರಥಸೂತ
ಸಮಸ್ತಲೋಕವ ಪೊರೆವಾತ ಅ.ಪ
ಬಲಭದ್ರಾನುಜೆಯರನೊಡವೆರಸಿ
ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ
ಒಲಿದು ವೈಕುಂಠಕೆ ಅವದಿರ ಕಳಿಸಿ
ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ ೧
ಪಾಂಡವರಕ್ಷಕ ನೀಲಾಂಗಾ
ಪುಂಡರೀಕಾಂಬಕಾ ಮದನಾಂಗಾ
ಅಂಡಜವಾಹನ ರಿಪುಮದಭಂಗ
ಕಂಡೆ ನಿನ್ನನಾ ಮಾಂಗಿರಿರಂಗ ೨

ಮಾವಿನಕೆರೆ

೪೧೬

ಎಲ್ಲಿರುವೆ ಬಾರಂಗ ಬಾ ಮೋಹನಾಂಗ
ಎಲ್ಲಿರುವೆ ನೀಲಾಂಗ ಮಾಂಗಿರಿರಂಗ ಪ
ಇಲ್ಲಿರುವೆಯಾರಂಗ ಸಲ್ಲಲಿತ ರಂಗ
ಮೆಲ್ಲನೇ ರಂಗ ಓ ಮುದ್ದುರಂಗಾ ಅ.ಪ
ಅಲ್ಲಿ ನೋಡಿದರಿಲ್ಲ ಇಲ್ಲಿ ಕಾಣಿಸಲಿಲ್ಲ
ಬಲ್ಲೆ ನಾನೀ ಚೆಲ್ಲ ವರದಾತನಲ್ಲ
ಇಲ್ಲಿ ತಿಳಿಗೊಳವಿಲ್ಲ ಮಲ್ಲಿಗೆಯ ಹೂವಿಲ್ಲ
ಇಲ್ಲಿರುವ ಧೃಢವಿಲ್ಲ ನೀ ಬರುವೆ ಅರಿವಿಲ್ಲ ೧
ಗಜರಾಜ ಕರೆದನೆ ಅಜಾಮಿಳನು ಕೂಗಿದನೆ
ಅಜನು ಬಾರೆಂದನೆ ಲೋಕವಂದಿತನೆ
ರಜತಾದ್ರಿ ವಾಸನೆ ಪೂಜಿಸಲು ಕರೆದನೊ
ಸುಜನ ವರದಾಯಕನೆ ವಿಜಯ ಪೂರಿತನೇ ೨
ವನವನದಿ ಸಂಚರಿಸಿ ದನಿದನಿಯನನುಸರಿಸಿ
ತನುಮನವ ಸಂತವಿಸಿ ನಿನ್ನನರಸಿ
ಮನದಿ ನೋವನನುಭವಿಸಿ ಕನಸೆಂದು ಭಾವಿಸಿ
ಕನವರಿಪ ಯೆನ್ನೊಳಗೆ ಕನಿಕರವ ಸೂಸಿ ೩

ಮಾವಿನಕೆರೆ-೨

೪೧೭

ಏತಕೆ ಗಿರಿಯಲ್ಲಿ ನೆಲೆಸಿದೆಯೊ | ರಂಗ || ಪ
ಭೀತಿಯೋ | ಆಗ್ರಹವೋ | ವ್ರತವೋ | ರಿಪು ಭಂಗ ಅ.ಪ
ದಾನಿ ನೀನೆನ್ನುತಲಿ ದಿನದಿನವು ಲಕ್ಷಾಳಿ
ದೀನ ಮನುಜರು ಬಂದು ಬಾಧಿಸುವರೆಂದೂ
ಕಾನನಾಂತರದಲ್ಲಿ ನೆಲೆಸಿದೆಯೊ ನಾಕಾಣೆ
ನೀನೆಲ್ಲಿ ಪೋದೊಡಂ ಬಿಡೆನೈಯ ರಂಗ ೧
ಜನನಿಬಿಡ ಪುರವೆಂದು ಮನಕೆ ಬೇಸರವಾಗಿ
ವನದೊಳಗೆ ಚರಿಸಬೇಕೆನುತಲಿಹೆಯೋ
ಮನುಜರ ಅನ್ಯಾಯ ದುಷ್ಕಾರ್ಯಗಳ ನೋಡಿ
ಮನಕರಗಿ ಗಿರಿಯನ್ನು ಸೇರಿದೆಯೊ ರಂಗ ೨
ದೇಹದಂಡನೆಯಿಂದ ಇಹಪರದ ಸುಖವೆಂಬ
ರಹಸ್ಯ ತತ್ವಾರ್ಥವನು ತಿಳಿಸಲಿಹೆಯೋ
ಶ್ರೀಹರಿಯೇ ನಿನ್ನ ವೈಚಿತ್ರ್ಯವಸದಳವಯ್ಯ
ದೇಹಧಾರಿಗೆ ಅಳವೆ ವರ್ಣಿಸಲು ನಿನ್ನಾ ೩
ಬೇವ ಮಾವನು ಗೈದೆ ಮಾವಬೇವನು ಗೈದೆ
ಶಿವರೂಪದೆ ನಿಂದು ಕೇಶವನು ಎನಿಸಿದೆ
ಭಾವುಕರು ಗೈಯದಾ ದೇವಾಲಯವ ಗೈದೆ
ಮಾವಿನಕೆರೆರಂಗ ನಿನಗಾರು ಸಮರೋ ೪
ವನಜನಾಭನು ಎಂಬ ಅನುಮತಿಯನೀಯಲ್ಕೆ
ಹನುಮದೇವನ ಪೂಜಿಸಿ ಮನವೊಲಿಸಿದೇ
ಸನುಮತದಿ ಕಾಯೆನ್ನ ರಾಮದಾಸಾರ್ಚಿತನೆ
ಅನುವಿಂದ ನೀನೆನ್ನ ಮನದೊಳಿರು ಹರಿಯೇ ೫

ಮಾವಿನಕೆರೆ ೩

೪೧೮

ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು
ಹೊಯ್ಸಿರೋ ಡಂಗುರವನು ಪ
ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ
ರಂಗಪ್ಪನವನೆಂದು ಸಾರಿಸಾರಿ ಅ.ಪ
ಭೋರಪ್ಪನೆಂದರೂ ತಿಮ್ಮಪ್ಪನೆಂದರೂ
ಈರಪ್ಪನೆಂದರೂ ಒಬ್ಬನಣ್ಣ
ನೂರೆಂಟು ಹೆಸರುಗಳು ನಾರಣಪ್ಪನಿಗುಂಟು
ಸಾರಿ ಡಂಗುರವನು ಹೊಯ್ಸಿರಣ್ಣ ೧
ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ
ನರರಂತೆ ಜೀವಿಗಳು ಅವುಗಳಣ್ಣ
ಬರಿಯ ಭಕ್ತಿಯೇ ಸಾಕು ಗುರುಡವಾಹನನವನು
ಪರಮಾತ್ಮನವನೆಮ್ಮ ಕಾಯ್ವನಣ್ಣ ೨
ರಂಗ ನರಶಿಂಗನು ಗಂಗೆಯನು ಹೆತ್ತನೂ
ಗಂಗೆಯನು ಹೊತ್ತವನೂ ಒಬ್ಬನಣ್ಣ
ಶಿಂಗರದ ಗೋಪಾಲ ಮಾಂಗಿರಿಯ ರಂಗನೂ
ಒಬ್ಬನೇ ತಾನೆಂದು ತಿಳಿಯಿರಣ್ಣ೩

ಮಾವಿನಕೆರೆ ೪

೪೧೯

ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ
ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ
ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ
ನರರ ನೇತ್ರಂಗಳಿಗೆ ಹರನಂತೆ ಕಾಂಬೇ
ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ
ಕೊರತೆಯೇ ಎನಗಿಲ್ಲವೆಂದರಿಯಬೇಡಾ ೧
ಗಿಯಾದರೇನಯ್ಯ ಸುರಲೋಕಕದು ಪೂಜ್ಯ
ಹರನಾದಡೇನಯ್ಯ ಹರಗೆ ಪಿತನೀನು
ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ]
ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ ೨
ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ
ಪ್ರೇಮದಿಂ ವಿಭೂತಿ ಅಕ್ಷತೆಯ ನೀಡುವಾ
ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ
ಸ್ತೋಮ ಜನಗಳಿಗದು ತಿರುಮಣಿಯೂ ಜೀಯ ೩

ಮಾವಿನಕೆರೆ ೫

೪೨೦

ಪವಮಾನಾತ್ಮಜ ಚರಣಂ
ಭವಸಾಗರ ಭಯ ಹರಣಂ ಪ
ಶಿವಹರಿ ಸಂಶಯ ಪರಿಹರಣಂ
ಭುವನೇಶ್ವರ ತವಶರಣಂ ಅ.ಪ
ರಾಮಮಂತ್ರ ಮಾಲಾಭರಣಂ
ಸೋಮಶೇಖರಾನಂದ ಗುಣಂ
ಕಾಮರೂಪಿದಾನವ ಹರಣಂ
ಧೀಮಂತಂ ಸಾರಸ ಚರಣಂ ೧
ಮಂಗಳ ಚರಿತಂ ಭವರಹಿತಂ
ಸಂಗರಧೀರಂ ಗುಣಭರಿತಂ
ಪಿಂಗಲಾಕ್ಷ ಕೋವಿದ ಹನುಮಂತಂ
ಮಾಂಗಿರಿ ನಿಲಯ ಹನುಮಂತಂ ೨

ಆರಾಧ್ಯದೈವದಲ್ಲಿ
ಮಾವಿನಕೆರೆ ೬

೪೨೧

ಮಾಧವನಿವನೋ ಉಮಾಧವನಿವನೋ
ಮಧುಸೂದನನೋ ಗಂಗಾಧರನೋ ಪ
ವೇದವನುಲಿದನೋ ನಾದಕೆ ಒಲಿದನೋ
ಮೇದಿನಿಗೈದಿ ಮಾಂಗಿರಿಯ ಸೇರಿದನು ಅ.ಪ
ಹಿರಿಯ ಕಲ್ಲ ಗುಡಾರದೊಳಿರುವ
ಒರಳಲಿ ನಲಿವ ಹರನವೊಲೆಸೆವ
ಕರಗಳಿಂದೆಳೆದರೂ ಬಾರನೆಂದೆನುವ
ಸ್ಮರಿಸುವ ಮಾನವನೆದುರಲಿ ನಿಲುವ ೧
ಎರೆದ ಹಾಲಾದರೂ ಸುರಿದ ನೀರಾದರೂ
ದೊರಕದು ಕರಕೆ ತೊಟ್ಟೊಂದಾದರೂ
ಹರಕೆ ಹೊತ್ತವರು ನೆರೆನಮಿಸುವರು
ಹರುಷದಿ ಕುಣಿದು ಕೊಂಡಾಡುತಿಹರು ೨
ಸಾವಿರ ನಾಮನು ದೇವನೀನೊಬ್ಬನು
ಭಾವದೊಳಿರುವನು ಕಾವವನು
ನೋವ ಬಿಡಿಸುವನು ಪಾವನಚರಣನು
ಭಾವುಕಗೊಲಿವನು ಗಿರಿಯ ಮೇಲಿಹನು ೩

ಮಾವಿನಕೆರೆ ೭

೪೨೨

ಮಾನಗಿರಿಯು ಹಲವಾಭಿಮಾನ ಗಿರಿಯು ಪ
ಮಾನಗರಿ ಭಕ್ತಾಭಿಮಾನ ಮಾಂಗಿರಿಯು ಅ.ಪ
ಭಾರತದ ದಕ್ಷಿಣದಿ ನೂರೆಂಟು ತಿರುಪತಿಯೊ
ಳೋರಂತೆ ಮಹಿಮೆಗಳ ತೋರಿಸಲೈ
ಕಾರುಣ್ಯ ಪರಿಪೂರ್ಣ ಸಿರಿವೆಂಕಟಾದ್ರೀಶ
ಏರಿನಿಂದನು ನಮ್ಮ ಮಾಂಗಿರಿಯಲಿ ೧
ಕಡುಸುಂದರಾಕೃತಿಯ ಬೆಡಗಿಂಗೆ ಮರುಳಾಗಿ
ನಡೆತಂದ ಮಾನವರು ಕುಡಿದೃಷ್ಟಿಬೀರಿ
ಪಿಡಿದು ಕೊಂಡೊಯ್ವೆವೆಂದಡಿಯಿಡಲು ರಂಗಯ್ಯ
ಅಡಗಿಸಿದ ದೇಹವನು ಒರಳಿನಲ್ಲಿ ೨

ಮಾವಿನಕೆರೆ ೮

೪೨೩

ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ
ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ
ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ
ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ ೧
ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ
ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ ೨
ವಾರಿವಾಹ ವರ್ಣದವನು ಹಾರಪದಕ ಧರಿಸಿದವನು
ತೋರಮಾಲೆಯ ಕೊರಳಿನವನು
ಚಾರುಸುಂದರ ಪೀತಾಂಬರನು ೩
ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ
ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ ೪
ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ
ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ ೫

ದಾಸರ ಆರಾಧ್ಯ ದೈವ

ಮಾವಿನಕೆರೆ ೯

೪೨೪

ಶಿವನೋ ಕೇಶವನೋ ನಾನರಿಯೆ
ಜವನೊ ಮಾಧವನೋ ಪೇಳುವರಾರೋ ಪ
ಶಿವಗೆ ಜಡೆಯು ಮಾಧವನವ ಕೇಶಿಯು
ಶಿವನು ಮಂಗಳನು ಮಾಧವನು ಸುಂದರನು ಅ.ಪ
ಶಿವ ಭಸಿತಾಂಗ ಮಾಧವ ನೀಲಾಂಗನು
ಶಿವನುರಿಹಸ್ತ ಮಾಧವನುರೆ ಚಕ್ರಿಯು
ಶಿವಗೌರಾಂಗ ಮಾಧವ ಮಾಲಿಂಗನು
ಶಿವ ಮಾಧವ ಮಾಂಗಿರಿವರನಹುದು ೧

೪೨೫

ಕಾಶೀಪುರಾಧೀಶ್ವರಾ ಶಶಿಧರ ವಾ
ಣೀಶ ಪರೇಶ ಸುರೇಶನುತ ಹರ ಪ
ಶ್ರೀಶೈಲಜಾಪ್ರಿಯ ಪಾಶಾಂಕುಶಧರ
ಶೇಷಾಭರಣ ಪರಮೇಶಾ ಪರಾತ್ಪರ ಅ.ಪ
ಇಂದೀವರಾಕ್ಷ ಗೋವಿಂದಾದಿ ಪರಿವೃತ
ನಂದೀಶನುತ ಸುರಬೃಂದಾಳಿ ವಿನುತ
ಮಂದಾಕಿನೀಧರ ಮಂದಾರ ಸುಮಯುತ
ಬಿಂದುಮಾಧವ ಮಾಂಗಿರೀಶರಂಜಿತ ೧

ನದಿಗಳು

೪೨೬

ಗೋದಾವರೀ ದೇವಿ ನಿನಗೆ ಶರಣಾರ್ಥಿ ಪ
ಮೇದಿನಿಯ ಪಾಪ ಸಂಹಾರಿಣೀ ಕಲ್ಯಾಣಿ ಅ.ಪ
ಹೇಮಾದ್ರಿಸಂಜಾತೆ ಸೋಮಸಮಕಾಂತಿಯುತ
ಭೂಮಿಜಾಖೇಲನಾ ಪುಳಿನಭರಿತೆ
ಕ್ಷೇಮ ಸಂದಾತೆ ಶ್ರೀರಾಮ ಕರಪೂಜಿತೇ
ಕಾಮಿತಾರ್ಥದೆ ಮಾತೆ ಪ್ರಾಙ್ಮುಖೀ ವರದಾತೆ ೧
ದೇವಗಂಗೋಪಮೆ ಪಾವನತರಂಗಿಣೆ
ಗೋ ವಿಪ್ರ ಸುಖದಾತೆ ಮೌನಿವಿನುತೆ
ಕಾವೇರಿಸನ್ಮಿತ್ರೆ ಪರಮಶುಭಚಾರಿತ್ರೆ
ಜೀವಪೋಷಕಶಾಲಿ ವಸನಾಂಬಿಕೆ ೨
ದಂಡಕಾರಣ್ಯ ಸಂಚಾರಿಣಿ ನಾ ನಿನ್ನ
ಕಂಡು ಧನ್ಯತೆಯಾಂತೆ ಮಿಂದು ನಲಿದೆ
ಅಂಡಜಾಧಿಪಗಮನ ಮಾಂಗಿರೀಶನ ಸುತ ಎಂತು
ಕಂಡಂತೆ ಮನದೊಳಾನಂದವಾಂತೆ ೩

ಸಂಪ್ರದಾಯದ ಹಾಡುಗಳು

೪೨೭

ಏಳು ನಿದ್ದೆಯು ಸಾಕು ರಂಗನಾಥ ಪ
ತಾಳು ತಾಳೆನಲೇಕೆ ಮಾಂಗಿರಿ ನಿವಾಸ ಅ.ಪ
ಜಗವ ಪೋಷಿಪಚಿಂತೆ | ಮಿಗಿಲಾದ ದೇವಂಗೆ
ಸೊಗಸಾದ ನಿದ್ದೆಯಾಪರಿವುಂಟೇ
ನಗಜಗವ ಪೊತ್ತವನ ಬಳಗವು ಏನೆಂಬೇ
ನಗೆಬೇಡ ಕಣ್ತೆರೆಯೊ ಮಾಂಇÀಇಕಾರ ೧
ನಿದ್ದೆಗೆಡಿಸಲು ಪಾಪ ಇದ್ದರೆ ನನಗಿರಲಯ್ಯ
ಸದ್ದಿಲ್ಲದಿಹುದೇ ಭಕ್ತರು ಹಾಡಿ ಕುಣಿಯೇ
ಒದ್ದಮುನಿಗಾ ಪಾಪವಿದ್ದಿತೇ ಕರುಣಾಳು
ಎದ್ದು ಬಾ ಬಾರೈಯ ಮಾರನಯ್ಯ ೨
ಬಲ್ಲೆ ಬಲ್ಲೆನು ನಿನ್ನ ಚೆಲ್ಲಾಟಗಳನೆಲ್ಲ
ಬೆಲ್ಲವನು ಕಂಡಿರುವೆ ಮುತ್ತದಿಹುದೇ
ಮೆಲ್ಲನೇಳಯ್ಯ ಸಿರಿ ಮಾಂಗಿರಿಯ ರಂಗ
[ಒಲ್ಲೆನದೆ ಈಯಯ್ಯ ಎನಗು ಬೆಲ್ಲದಸವಿಯ]೩

೪೨೮

ಮೆಲ್ಲನೇಳಯ್ಯ ಮಣಿವೆ ಪ
ನಲ್ಲುಲಿಗಳಿಂದ ಶುಕಪಿಕಗಳೆಚ್ಚರಿಸುತಿವೆ ಅ.ಪ
ಅರುಣ ವರ್ಣದ ಗಗನಯೆಂಬ ಹರಿವಾಣವನು
ಕರದಿ ಪಿಡಿದೆತ್ತೆ ನಿನಗಾರತಿಯ ಗೈಯಲು
ತರಣಿ ನಿಂದಿರ್ಪ ತುಂಬುರು ನಾರದರು ಮುದದಿ
ಪರಮಾತ್ಮ ಸುಪ್ರಭಾತಗಳ ಪೇಳುವರು ೧
ಸತ್ಯಸಂಕಲ್ಪ ತವ ಭೃತ್ಯ ದಿಕ್ಪಾಲಕರು
ಅತ್ಯಧಿಕ ಭಕ್ತಿಯಿಂ ಕರವೆತ್ತಿ ಮುಗಿದು
ನಿತ್ಯಕಾರುಣ್ಯ ಪರಿಪೂರ್ಣ ಸದ್ಭಕ್ತಗಣ
ನುತ್ಯ ನೀನೇಳೆಂದು ನುತಿಸುತಿಹರು ೨
ನಿನ್ನ ನಾಮವ ಭಜಿಸಿ ಪಾದಪೂಜೆಯ ಗೈದು
ನಿನ್ನ ಕಾರುಣ್ಯ ದರ್ಶನಕೆ ಕಾದಿರುವಾ
ಪನ್ನರೆಲ್ಲರ್ಗೆ ದರ್ಶನವ ನೀನೀಯಲು
ಇನ್ನೇಕೆ ತಡ ಏಳು ಮಾಂಗಿರೀಶ ೩

ಸಂಪ್ರದಾಯದ ಹಾಡಿನ ರೂಪದಲ್ಲಿರುವ

೪೨೯

ಆರತಿ ಬೆಳಗುವೆ ವಾರಿಧಿಶಯನಗೆ
ಮಾರನಪಿತನಿಗೆ ನಾರದಸುತಗೆ ಪ
ಸಾರಸನಾಭಗೆ ನೀರಜಗಾತ್ರಗೆ
ಶ್ರೀರಮೆಯರಸಗೆ ನಾರಿಯರೊಡನೆ ಅ.ಪ
ಮುರಳಿಯನೂದುವ ತರಳ ಶ್ರೀಕೃಷ್ಣಗೆ
ಶರಣರ ದುರಿತವ ಪರಹರಿಸುವಗೆ
ಕರುಣಜಲಧಿ ಮಾಂಗಿರಿರಂಗಯ್ಯಗೆ
ಸರಸತಿ ಪಾರ್ವತಿ ತರುಣಿಯರೊಡನೆ ೧

೪೩೦

ಜಯ ಜಯತು ಕಾಮಾಕ್ಷಿ ಜಯ ಜಯ ವಿಶಾಲಕ್ಷಿ ಪ
ಜಯ ಜಯತು ಮೀನಾಕ್ಷಿ ಜಯತು ಹರಿಣಾಕ್ಷಿ ಅ.ಪ
ಜಯ ಜಯತು ಫಾಲಾಕ್ಷ ಸತಿ ಜಯ ಕೃಪಾಪೂರ್ಣಾಕ್ಷಿ
ಜಯ ಜಯತು ಕಮಲಾಕ್ಷಿ ಜಯ ಚಂಚಲಾಕ್ಷಿ ೧
ಜಯ ಜಯ ಸ್ವರ್ಣಾಂಬೇ ಜಯತು ಚಾಮುಂಡಾಂಬೆ
ಜಯತು ಜಯ ಜಗದಂಬೆ ಜಯತು ದುರ್ಗಾಂಬೆ ೨
ಜಯತು ಜಯ ಶಶಿಬಿಂಬೆ ಜಯತು ವರ ಗಿರಿಜಾಂಬೆ
ಜಯತು ಮಾಂಗಿರಿ ರಂಗ ಸೋದರಿ ಶುಭಾಂಬೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ ೩

೪೩೧

ಜಯ ಜಯ ದಯಾಮಯ ಚಿನ್ಮಯ
ಜಯ ಜಯ ನಿರಾಮಯ ಶ್ರೀಜಯ ಪ
ಶ್ರೀರಮಣೀ ಮನಮೋಹನ ಪಾವನ
ಸಾರಸಲೋಚನ ಪಾಪವಿಮೋಚನ
ಸರ್ವ ಭುವನಪಾಲಾ ಭಕ್ತಬೃಂದಾನುಕೂಲಾ ೧
ವಿರಚಿತ ಮಣಿಮಾಲಾ ಶುಭ್ರಶೀತಾಂಶು ಜಾಲಾ
ದುರಿತ ತಿಮಿರಕಾಲಾ ಶುದ್ಧಸತ್ವಾದಿ ಮೂಲಾ
ಉರುತರ ಶುಭಲೀಲಾ ನಿತ್ಯಕಾರುಣ್ಯ ಶೀಲಾ ೨
ಮಂಗಳದಾಯಕ ಮಾಂಗಿರಿನಾಯಕ
ತುಂಗಕೃಪಾಂಬಕ ದುರುಳಕುಲಾಂತಕ
ರಂಗ [ಶರಣ್ಯಕ ಭಕ್ತಜನ ಪಾಲಕ] ೩

೪೩೨

ಜಯ ಜಾನಕೀಪ್ರಿಯ ರಾಘವ
ಜಯ ಪಾವನ ಚರಣಾ ಪ
ಜಯ ದಾನವಭಯ ತಾರಣ
ಜಯ ಭವಸಾಗರ ತರಣಾ ಅ.ಪ
ಸಾರಸಭವ ಸೇವ್ಯ ಚರಣ
ದಾನವ ಕುಲ ಹರಣಾ
ಚಾರು ಚರಿತ ಮಾರಜನಕ
ಸಾಗರಜಾ ರವಇಣಾ ೧
ಸುರುಚಿರ ಮಣಿಗಣ ವಿತರಣ
ಸುರನಾಯಕ ಶರಣಾ
ಉರಗಶಯನ ಮರಕತ ಮಾಂ
ಗಿರಿನಾಯಕ ಕರುಣಾ ೨

೪೩೩

ಜಯ ಪದ್ಮಜಾರಮಣ ಜಯ ಭಕ್ತಜನಕರುಣ
ಜಯ ಕೌಸ್ತುಭಾಭರಣ ಜಯ ಪದ್ಮಚರಣ ಪ
ಜಯ ಭವಾಂಬುಧಿ ತರಣ ಜಯ ಪಾಪಭಯಹರಣ
ಜಯತು ಸತ್ವಾವರಣ ಜಯ ದೀನಶರಣ ಅ.ಪ
ಜಯತು ಗಾನವಿಲೋಲ ಜಯ ಗೋಕುಲಬಾಲ
ಜಯತು ತುಳಸೀಮಾಲ ಜಯತು ಜಗಮಾಲ ೧
ಜಯತು ದಾನವಕಾಲ ಜಯತು ಸತ್ವದುಕೂ¯
ಜಯತು ಸುರಮುನಿಪಾಲ ಜಯತು ಮಾಲೋಲ ೨
ಜಯತು ಜಯ ರಿಪುಭಂಗ ಕಮಲಜಾ ಅಂಗ
ಜಯತು ಘನನೀಲಾಂಗ ಜಯತು ಗರುಡತುರಂಗ
ಜಯತು ಮಾಂಗಿರಿರಂಗ ಕರುಣಾಂತರಂಗ ೩

೪೩೪

ಜಯರಾಮ ರಘುರಾಮ ಪುರುಷೋತ್ತಮ ಪ
ತವನಾಮ ಸುಖಧಾಮ ಅಮೃತೋಪಮಾ ರಾಮಾ ಅ.ಪ
ರಿಪುಭೀಮಾ ಜಿತಕಾಮ ದೇವೋತ್ತಮ
ಘನಶ್ಯಾಮ ಅಭಿರಾಮ ಸಕಲಾಗಮ ರಾಮ ೧
ಭವನಾಶ ಜಗದೀಶ ಸುರನಾಯಕಾ
ಘಣಿ ಭೂಷ ಸಕಲೇಶ ವರದಾಯಕಾ ೨
ಪರಮೇಶ ಯಮಪಾಶ ಭವನಾಯಕಾ
ಕಮಲೇಶ ಶ್ರೀಶ ಮಾಂಗಿರಿ ನಾಯಕಾ ೩

೪೩೫

ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ
ಜಯತು ಜಯ ಭಗವಂತ ಜಯತು ಧೀಮಂತ ಅ.ಪ
ಜಯ ಭಕ್ತಮಂದಾರ ಜಯ ಮೌನಿಪರಿವಾರ
ಜಯತು ಜಯ ಧುರಧೀರ ಜಯತು ಸಾಕಾರಾ ೧
ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ
ಜಯತು ಜಯ ಭವತರಣ ಜಯ ಶರಣಕರುಣಾ ೨
ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ
ಜಯ ಮಾಂಗಿರೀವಾಸ ಜಯ ಶ್ರೀನಿವಾಸ ೩

೪೩೬

ನಿತ್ಯನಿರ್ಮಲನಿಗೆ ಜಯಮಂಗಳಂ
ಸತ್ಯಸಂಕಲ್ಪಗೆ ಶುಭ ಮಂಗಳಂ ಪ
ಸತ್ಯಪರಾಕ್ರಮ ಸತ್ಯಚರಿತ್ರಗೆ
ಸತ್ಯಕಾಮ ಪುರುಷೋತ್ತಮ ಹರಿಗೆ ಅ.ಪ
ಮೂರುರೂಪದಲಿ ವಾರಿಯೊಳಿದ್ದಗೆ
ಘೋರವದನ ಬ್ರಹ್ಮಚಾರಿಯಾದವಗೆ
ವೀರರ ಕೊಂದಗೆ ಹನುಮವಿನುತಗೆ
ಮಾರಜನಕ ಸುಕುಮಾರ ಹಯೇಶಗೆ ೧
ವೇದಾಚಲ ಭೂಧರ ನರಹರಿಗೆ
ಮೇದಿನಿಯಳೆದಗೆ ಮುನಿಸುತಗೆ
ಕೋದಂಡೋತ್ಸುಕ ನಾದಪ್ರಿಯನಿಗೆ
ಭೇದವ ಕಲ್ಪಿಸಿದಶ್ವವಾಹನಗೆ ೨
ಮಂಗಳರೂಪಗೆ ಈರೈದವತಾರಗೆ
ಅಂಗಜತಾತ ಶುಭಾಂಗನಿಗೆ
ಮಾಂಗಿರಿಶೃಂಗನಿವಾಸ ರಥಾಂಗಗೆ
ಗಂಗೆಯಪೆತ್ತ ಪನ್ನಂಗಶಯನಗೆ ೩

೪೩೮

ವಾರಿಜನಯನಗೆ ಜಯ ಮಂಗಳ
ನಾರದನುತನಿಗೆ ಶುಭ ಮಂಗಳಾ ಪ
ನೀರಧಿಶಯನಗೆ ಜಯ ಮಂಗಳ
ಮಾರನಪಿತನಿಗೆ ಶುಭ ಮಂಗಳಂ ಅ.ಪ
ಭವ ಭಯ ಹರನಿಗೆ ಪವನಜನಮಿತಗೆ
ಭುವನಸುಂದರನಿಗೆ ಜಯಮಂಗಳಂ
ಕುವಲಯಶ್ಯಾಮಗೆ ನವಮಣಿಮಾಲಗೆ
ದಿವಿಜಸಂಸೇವ್ಯಗೆ ಶುಭಮಂಗಳಂ೧
ಕರುಣಾಜಲಧಿಗೆ ಶರಣರ ಪೊರೆವಗೆ
ನರಹರಿರೂಪಗೆ ಜಯ ಮಂಗಳಂ
ಪುರುಷೋತ್ತಮನಿಗೆ ದುರಿತಸಂಹಾರಗೆ
ಸರಸಿಜನಾಭಗೆ ಶುಭ ಮಂಗಳಂ ೨
ಗಂಗೆಯ ಜನಕಗೆ ಮಂಗಳರೂಪಗೆ
ಸಂಗರಧೀರಗೆ ಶುಭಮಂಗಳಂ
ತುಂಗವಿಕ್ರಮನಿಗೆ ಇಂಗಿತವರಿವಗೆ
ಮಾಂಗಿರಿಯರಸಗೆ ಜಯ ಮಂಗಳಂ ೩

೪೩೯

ವೈನತೇಯವಾಹನಾಯ ನಿತ್ಯಮಂಗಳಂ
ದಾನವಾಬ್ಧಿಶೋಷಿತಾಯ ನಿತ್ಯಮಂಗಳಂ ಪ
ಪಾರಿಜಾತಲೋಚನಾಯ ಭವ್ಯಮಂಗಳಂ
ನಾರದಾದಿಸೇವಿತಾಯ ಭವ್ಯಮಂಗಳಂ ಅ.ಪ
ಶರಣಜನಾನಂದದಾಯ ದಿವ್ಯಮಂಗಳಂ
ಪರಮಕೃಪಾಪೂರಿತಾಯ ದಿವ್ಯಮಂಗಳಂ ೧
ಪರಮಸುಂದರ ದ್ಯುತಿಧರಾಯ ಸರ್ವಮಂಗಳಂ
ದುರಿತದೋಷ ಪರಿಹರಾಯ ಸರ್ವಮಂಗಳಂ ೨
ಮೌನಿನಿಕರವಂದಿತಾಯ ನವ್ಯಮಂಗಳಂ
ದೀನದಲಿತಪೋಷಣಾಯ ನವ್ಯಮಂಗಳಂ ೩
ಎ್ಞÁನ [ಮೋಕ್ಷ]ದಾಯಕಾಯ ಸೇವ್ಯಮಂಗಳಂ
ಮಾನಿತ ಮಾಂಗಿರಿವರಾಯ ಸೇವ್ಯಮಂಗಳಂ ೪

೪೪೦

ಜೋ ಜೋ ದೇವಕಿಕಂದ ಮುಕುಂದ
ಜೋ ಜೋ ಗೋಪಿಯಾನಂದ ಗೋವಿಂದಾ ಪ
ಜೋ ಜೋ ಜೋ ಭಕ್ತಮನಕಾನಂದ
ಜೋ ಜೋ ಜೋ ಗೋಪಿಕಾವೃಂದ ಅ.ಪ
ಗೋಕುಲಬಾಲಾ ಮುರಳೀಲೋಲಾ
ಶ್ರೀಕರಶೀಲಾ ತುಳಸೀಮಾಲಾ
ರಾಕಾಚಂದ್ರ ಸಮಾನಕಪೋಲ
ಗೋಕುಲ ಬೃಂದಾವನ ಸಲ್ಲೀಲಾ ೧
ದೇವದೇವೋತ್ತಮ ಭಾನುಪ್ರಕಾಶ
ಭಾವಜಪಿತ ಸರ್ವಸುರ ಮುನಿಪೋಷಾ
ಶ್ರೀವನಿತಾಪ್ರಿಯ ದನುಜವಿನಾಶ
ಪಾವನ ಮಾಂಗಿರಿನಿಲಯ ರಂಗೇಶ ೨

೪೪೧

ಜೋ ಜೋ ಸುಚರಿತ್ರ ಪರಮ ಪವಿತ್ರಾ
ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ
ಜೋ ಜೋ ವಟಪತ್ರಶಯನ ವಿಚಿತ್ರ
ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ
ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ
ಪಶುಪತಿ ಸನ್ನುತ ಸ್ವರರೂಪ ಚಿತ್ರ
ನಿಶಿಚರಹರ ನಿತ್ಯಸುಖದಾತ ಮಿತ್ರಾ
[ತ್ರಿಶಿರಾದ್ಯಸುರ ಸಂಹಾರಕನೇತ್ರ] ೧
ಕರುಣಾಕಾರ ದಿವ್ಯ ಶಶಿಬಿಂಬವದನಾ
ಶರಣಜನಾನತ ಮರಕತವದನಾ
ಧರಣಿಜಲೋಲ ಭಾಸ್ಕರವಂಶಮದನಾ
ಗರುಡವಾಹನ ನಿತ್ಯ ಮಾಂಗಿರಿಸದನಾ ೨

ಇದೊಂದು ದಶಾವತಾರ

೪೪೨

ಜೋ ಜೋ ಜೋ ಗುಂಡ ಪರಮಪ್ರಚಂಡ
ಜೋ ಜೋ ಜೋ ಗುಂಡ ಸುರಚಿರದಂಡ ಪ
ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ
ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ
ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ
ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ
ಪುಂಡರೀಕಕ್ಕಿಂತ ಚೆಲುವಾದ ಗುಂಡಾ
ಮೊಂಡ ಮೂಕರಕಯ್ಯ ಕೋದಂಡಗುಂಡಾ ೧
ಒಬ್ಬಿಟ್ಟು ಹೂರಣವರೆಯುವ ಗುಂಡಾ
ತಬ್ಬಿಬ್ಬಾಡುವರನು ಕಡುಗುವಾ ಗುಂಡಾ
ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ
ಕೊಬ್ಬಿದ ಜನವನು ದಬ್ಬುವಾ ಗುಂಡಾ ೨
ಪರಿಪರಿ ಬಂಧನವರಿಯದ ಗುಂಡಾ
ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ
ಕೊರತೆಯನರಿಯದ ಸುಖದ ಕಲ್ಗುಂಡಾ
[ವರಭಕ್ತಾವಳಿಗೆ ಸುಖವೀವಗುಂಡಾ] ೩
ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ
ನೀನಿರುವಲ್ಲಿ ತಿಂಡಿಗಳುಂಟು ಗುಂಡಾ
ಕಾನನದೊಳಗಿದ್ದು ಕರಗದ ಗುಂಡಾ
ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ೪
ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ
ತರುಣಿಯ ಕರದೊಳು ನಲಿಯುವಾ ಗುಂಡಾ
ವರ ದುಕೂಲಂಗಳ ಬಯಸದ ಗುಂಡಾ
ವರದ ಮಾಂಗಿರಿರಂಗನೆನಿಸುವ ಗುಂಡಾ ೫

ವಿಶೇಷ ಸಂದರ್ಭದ ಹಾಡುಗಳು

೪೪೩

ರಂಗನತೇರಿಗೆ ಬನ್ನಿರೋ ತೆಂಗು ಹೂ ಹಣ್ಣುಗಳ ತನ್ನಿರೋ
ಬಂಗಾರದ ಗಿರಿಯಪ್ಪ ಎನ್ನಿರೋ ರಂಗ ಪರ್ಸಾದವ ಕೊಳ್ಳಿರೊ ೧
ತೆಂಗಿನಮರ್ದುದ್ದ ತೇರೈತೆ ಅಲ್ಲಿ ರಂಗಿನ ಬಾವುಟ ಹಾರೈತೇ
ಸಿಂಗಾರದಬಟ್ಟೆಯೇರೈತೇ ಹಂಗೂ ಹಿಂಗೂ ಜನ ಸೇರೈತೇ ೨
ಬಾಳೆಕಂಬಗಳನು ಕಟ್ಟವ್ರೇ ತೋಳುದ್ದ ಹೂಸರ ಬಿಟ್ಟವ್ರೇ
ತಾಳಮ್ಯಾಳ್ದೋರೆಲ್ಲಾ ನಿಂತವ್ರೇ ಬಾಳತುತ್ತೂರ್ಗೋಳನೂತ್ತವ್ರೇ ೩
ತೇರಿನ ಗದ್ದುಗೆ ಬಂಗಾರ ತೋರಗಲ್ದಪ್ಪ ಅಲಂಕಾರ
ಹಾರುವರ ಬಾಯಲ್ಲಿ ಓಂಕಾರ ರಂಗಪ್ಪಗಾಗೈತೆ ಸಿಂಗಾರ ೪
ಭಟ್ಟರು ಮಂತ್ರವ ಹೇಳ್ತವ್ರೆ ಕಟ್ಟುನಿಟ್ಟಾಗಿ ನಿಂತವ್ರೇ
ಬಟ್ಟಂದ ಹೂಗೊಳ ಹಾಕ್ತವ್ರೇ ಸಿಟ್ಟಿಲ್ಲದೆ ರಂಗ ನಗತವ್ನೇ ೫
ಕೊಂಬು ತಮಟೆ ಭೇರಿ ಬಡಿತವ್ರೇ
ಇಂಬಾಗಿ ಹೂರ್ಜಿಯ ಹಿಡಿದವ್ರೆ
ದೊಂಬರೆಲ್ಲ ಕುಣಿತವ್ರೆ ಹಿಂಬದಿಯಲಿ ತೇರ ನಡೆಸವ್ರೇ ೬
ಹಣ್ಣು ಜನ್ನವ ತೇರಿಗೆಸಿತಾರೆ ತಣ್ಣನೆ ಪಾನಕ ಕೊಡುತಾರೆ
ಸಣ್ಣೋರೆಲ್ಲ ಕೈಮುಗಿತಾರೆ, ಹಣ್ಣು ಕಾಯ್ಗಳ ಗಾಲಿಗಿಡುತಾರೆ೭
ಅಕೋ ಬಂತು ರಂಗಪ್ಪನ ತೇರು
ತಕ್ಕೋ ಹಣ್ಕಾಯ ಎಂಬೋರು ಕೆಲವರು
ಸಕ್ಕರೆ ಮಿಠಾಯಿ ಹಂಚೋರು ಕೆಲವರು
ನಕ್ಕು ಕುಣಿಯುವರೆಲ್ಲ ನೂರಾರು ಜನರು ೮
ರಂಗಪ್ಪನ ತೆಪ್ಪ ತೇಲುತಿವೆ ಸಂಗೀತ ವಾದ್ಯ ಕೇಳುತಿವೆ
ರಂಗುವಇತಾಪು ಹೊಳೆಯುತಿವೆ ಮಂಗಳಾರತಿ ದೀಪ ಕಾಣುತಿವೆ ೯
ಹೂಮಾಲೆಗಳು ಜೋಲಾಡುತಿವೆ
ಜೋಮಾಲೆ ಸರಗಳು ಹೊಳೆಯುತಿವೆ
ಚಾಮರಗಳು ಗಾಳಿ ಬೀಸುತಿವೆ
ನಾಮ ಮಂತ್ರಗಳೆಲ್ಲ ಮೊಳಗುತಿವೆ ೧೦
ರಂಗಪ್ಪನುಬ್ಸುವ ಗುಡಿಗೆ ಬಂತಣ್ಣ ರಂಗು
ರಂಗಿನದೀಪ ಉರಿಯುವುದಣ್ಣ
ಮಂಗಳಾರತಿಗಳ ಬೆಳಗಿದರಣ್ಣ
ಮಾಂಗಿರಿರಂಗನೆ ಬಲುಸೊಗಸಣ್ಣ ೧೧

ಸಂಪ್ರದಾಯದ ಹಾಡಿನಂತಿರುವ

೪೪೪

ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ
ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ
ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ
ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ೧
ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ
ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ ೨
ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ
ಬೆಳಸವ್ನೇ ಕೋರೆಹಲ್ಲಾ
ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ ೩
ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ
ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ
ಕೊಡುತೀನ್ವರವನೆಂತಾನೇ ೪
ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ
ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ ೫
ಮೈಯಲ್ಲಿ ಜನಿವಾರ ಪೀತಾಂಬ್ರ ತೊಟ್ಟವ್ನೆ
ಜಯ ಜಯ ಜಯವೆಂತಾನೇ
ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ
ಭಯವಿಲ್ಲ ಕೈಮುಗಿಯೋ ೬
ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ
ಅವ ನಿಯಮಗಳಿಂದಲೊಡಗೂಡಿ ನಿಂತವ್ನೆ
ತವಕದಿ ನೋಡಿರೆಲ್ಲಾ ೭
ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ
ಹಿಡಿದವ್ನೆ ಹೊಂಗೊಳಲಾ
ಮಡದಿಯ ಮಾನವ ಕಾಪಾಡಿ ನಿಂದವ್ನೆ
ಕಡುರೂಪವಂತ ನಮ್ಮ ೮
ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ
ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ ೯
ಕುದುರೆಯ ಮ್ಯಾಲ್ಕುಂತು ಕಾಲಿಂದ
ದುರುಳರನೊದೆಯಾಕೆ ಹೊಂಟವ್ನೇ
ಮದನಪ್ಪ ನಮ್ಮ ಮಾಂಗಿರಿಯೊಡೆಯನ
ಪದಕಮಲಕೆ ಯೆರಗೋ ೧೦
ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ
ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ
ಎದ್ದೆದ್ದು ತಲೆಬಾಗಿರೊ ೧೧
ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ
ರಾಮದಾಸನ ಮನದೊಳು ಮನೆ ಮಾಡ್ಯವ್ನೇ
ಪಾಮರ ವರದನೆಂಬ ಮಾಂಗಿರಿ ೧೨

ಇದೊಂದು ವಿಶೇಷ ಸಂದರ್ಭದ ಹಾಡು
ಸಾಮಾಜಿಕ

೪೪೫

ಹಿಂಗಿಪ್ಪವನಿಗೆ ಕೈಲಾಸ
ಹಿಂಗಿಲ್ಲದವನಿಗೆ ವನವಾಸ ಪ
ಹಂಗ ಬಿಟ್ಟವಗೆ ಸುಖವಾಸ
ಹಂಗುಳ್ಳವನಿಗೆ ಉಪವಾಸ ಅ.ಪ
ಮುಳ್ಳಿನ ಹಾದಿಯ ತುಳಿಯಬೇಡಣ್ಣ
ಕಳ್ಳಿಯ ಬೇಲಿಗೆ ನುಗ್ಗಬೇಡಣ್ಣ
ಪೊಳ್ಳುಹರಟೆಗಳ ಬಿಡಬೇಕಣ್ಣ
ಸುಳ್ಳು ಹೇಳುವುದ ಸುಡಬೇಕಣ್ಣ ೧
ಕಾಮಕ್ರೋಧಂಗಳಿಗೆಡೆಗೊಡಬೇಡ
ನೇಮನಿಷ್ಠೆಗಳ ಸಡಿಲಿಸಬೇಡ
ಕಾಮಿತಗಳ ನೀ ಬೇಡಲೂಬೇಡ
ರಾಮಧ್ಯಾನವ ಬಿಡಲೂಬೇಡ ೨
ಮೂರಂಗಗಳಲಿ ಶುದ್ಧಿಬೇಕಣ್ಣ
ಹಾರುವ ಮನವನು ಹಿಡಿಯಬೇಕಣ್ಣ
ತೋರಿಕೆ ಬೂಟಾಟಿಕೆ ಬೇಡಣ್ಣ
ಶ್ರೀರಂಗನಾಥನ ಮರೆಯಬೇಡಣ್ಣ೩
ಸಂಸಾರದೊಳತಿ ಮುಳುಗಬೇಡಣ್ಣ
ಹಂಸ ತಾವರೆಗಳಂತಿರಬೇಕಣ್ಣ
ಹಿಂಸೆಯ ಸಹಿಸಿ ಪಾಪವ ಕಳೆಯಣ್ಣಾ
ಕಂಸಾರಿಯ ಭಕ್ತನೆಂದೆನಿನಿಣ್ಣ ೪
ಹೆಂಗಳ ನಿಟ್ಟಿಸಿ ನೋಡಬೇಡಪ್ಪಾ
ಮಂಗನ ಚೇಷ್ಟೆಯ ಮಾಡಬೇಡಪ್ಪಾ
ಮುಂಗೋಪದಿ ಮಾತನಾಡಬೇಡಪ್ಪಾ
ಮಾಂಗಿರಿರಂಗನ ಮರೆಯಬೇಡಪ್ಪಾ೫

ಇದೂ ಸಹ ಮಾವಿನಕೆರೆಯ

೪೪೬

ಶ್ರೀವೇಂಕಟೇಶ ಸುಪ್ರಭಾತ
ಶ್ರೀವೆಂಕಟೇಶಂಗೆ ಜಯ ಸುಪ್ರಭಾತ
ದೇವಾದಿದೇವಂಗೆ ನವಸುಪ್ರಭಾತ ಪ
ಪಾವನ ಶರೀರಂಗೆ ಜಯ ಸುಪ್ರಭಾತ
ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ
ಅಂದು ಕೌಸಲ್ಯೆಯಣುಗ ರಾಮಾ ಏಳು
ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ
ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ
ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ ೧
ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ
ಉದ್ಧರಿಸ ಬೇಕಯ್ಯ ಕರುಣಾಂತರಂಗ
ಎದ್ದೇಳು ಚೈತನ್ಯ ಪುಣ್ಯದಾತ
[ಎದ್ದೇಳು ಕಮಲಾಕಾಂತರಂಗ] ೨
ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ
ಹದಿನಾಲ್ಕು ಲೋಕಗಳ ಮಾತೆಯೆನಿಸಿ
ವಿಧ ವಿಧದ ವರಗಳನು ಭಕ್ತರ್ಗೆ ಕೊಡುತಿರುವ
ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ ೩
ಸರ್ವಭುವನೇಶ್ವರಿ ಸರ್ವ ಭಕ್ತಂಕರಿ
ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ
ಸರ್ವಲೋಕೇಶನ ರಾಣಿ ಕಲ್ಯಾಣಿ
ಸರ್ವಸನ್ನುತೆ ನಿನಗೆ ಸುಪ್ರಭಾತ ೪
ಸಪ್ತರ್ಷಿ ಮಂಡಲವು ಔಪಾಸನೆಯಾಗೆ
ತೃಪ್ತರಾಗಿರುತಿಹರು ನಭದ ನದಿಯೊಳು
ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ
ಒಪ್ಪಿರ್ಪರೇಳೇಳು ವೆಂಕಟೇಶ ೫
ಹರನಿಂದ್ರ ಷಣ್ಮುಖನು ಅಜ ನಿರಂಜನ
ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು
ಶಿರಬಾಗಿ ವಂದಿಪರು ಗುರು ಶುಭವ ಪೇಳುವನು
ವರದರಾಜ ಏಳು ವೇಂಕಟೇಶ ೬
ಈಗ ವಿಕಸಿತವಾದ ಕಮಲಸೌರಭದೊಡನೆ
ರಾಗ ರಸ ತಂಪಿಂಪು ಮಿಳಿತಮಾಗಿ
ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ
ತ್ಯಾಗಿ ನೀನೇಳಯ್ಯ ವೇಂಕಟೇಶ ೭
ಕದಳಿ ಖರ್ಜೂರಗಳ ರಸಯುಕ್ತ ಪಾಯಸ
ಮುದದಿ ಸಂಸೇವಿಸುತ ಉತ್ಸಾಹದೀ
ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ
ಪದುಮನಾಭ ಏಳು ವೇಂಕಟೇಶ ೮
ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ
ದೇವದೇವನೆ ನಿನ್ನ ನುತಿಸುತಿಹನು
ಭಾವರಸಯುತವಾದ ಗಾನಕೇಳುತಿಹುದು
ಪಾವನಾತ್ಮನೇ ಏಳು ವೇಂಕಟೇಶ ೯
ಸುರಿವ ಮಕರಂದವನು ಹೀರಿ ಹೀರಿ
ಅರುಣನುದಯವ ತಿಳಿದು ಅರಳುತಿಹ ಕಮಲದಿಂ
ಸರಸರನೆ ಝೇಂಕರಿಸಿ ಬರುತಿರ್ಪುವೈ
ಸಿರಿಯ ದುಂಬಿಗಳೇಳು ವೆಂಕಟೇಶ ೧೦
ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ
ಕಡೆಗೋಲಿನಿಂ ಮಥಿಸಿ ಹಾಡುತಿಹರು
ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ
ಪೊಡವೀಶ ನೀನೇಳು ವೇಂಕಟೇಶ ೧೧
ಕಮಲದಿಂದೈತಂದ ದುಂಬಿಗಳು ಸುತ್ತಲಿನ
ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ
ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ
ವಿಮಲಾಂಗ ನೀನೇಳು ವೇಂಕಟೇಶ ೧೨
ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ
ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ
ಮೂರು ಲೋಕವನಳೆದು ಪಾಲಿಸುವ ಸ್ವಾಮಿ
ಮಾರಮಣ ನೀನೇಳು ವೇಂಕಟೇಶ ೧೩
ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು
ಭಜಿಸಿ ತವ ದರ್ಶನವ ಕಾಯುತಿಹರು
ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ
ಗಜವಿನುತ ನೀನೇಳು ವೇಂಕಟೇಶ ೧೪
ಶೌರಿ ನಿನ್ನಾವಾಸ ತಾಣ ವೈಕುಂಠದಿಂದ
ನಾರಾಯಣಾದ್ರಿ ಗರುಡಾದ್ರಿ ಎಂತೆಂಬ
ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ
ಸಾರತರ ನಾಮವೈ ವೇಂಕಟೇಶ ೧೫
ಶಿವನಿಂದ್ರ ಅಷ್ಟದಿಕ್ಪತಿಗಳು ಕಾದಿಹರು
ಭುವಿಯ ಗೋಪಾಲಕರು ಅನುಮತಿಯ ಬೇಡುವರು
ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು
ಭವದೂರನೇ ನಿನಗೆ ಸುಪ್ರಭಾತ ೧೬
ತವಪಾದ ಧೂಳಿಯನು ಪೊತ್ತ ಚೇತನರೆಲ್ಲ
ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು
ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು
ಪವಮಾನನುತ ನಿನಗೆ ಸುಪ್ರಭಾತ ೧೭
ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ
ವನ್ನು ಪಡುತಿಹರೆಲ್ಲ ಶರಣ ಜನರು
ನಿನ್ನ ದರ್ಶನವೊಂದೆ ಪರಮ ಪದವದನು
ಸನ್ನುತಾಂಗನೆ [ತೋರೇಳು]ಸುಪ್ರಭಾತ ೧೮
ಶ್ರೀ ರಮಾ ಭೂಮಿಪತಿ ಕರುಣಾಂಬುಸಾಗರನೆ|
ಧೀರ ಶೂರಾನಂತ ಗರುಡ ವಿಷ್ವಕ್ಸೇನ
ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ
ನಾರಾಯಣಾ ನಿನಗೆ ಸುಪ್ರಭಾತ|| ೧೯
ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ
ಅಮಲಸದ್ಗುಣಧಾಮ ಕೃಷ್ಣ ವೈಕುಂಠ
ಸುಮಬಾಣಕೋಟಿ ಸೌಂದರ್ಯನುತ ಮಾರಮಣ
ಕಮಲನಯನಾ ನಿನಗೆ ಸುಪ್ರಭಾತ|| ೨೦
ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ
ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ
ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು
ಭಾನುತೇಜನೆ ನಿನಗೆ ಸುಪ್ರಭಾತ ೨೧
ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು
ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು
ಘನವೈಷ್ಣವರು ಮಂಗಳಂಗಳಂ ಪಾಡುವರು
ಮನುಜಪುಂಗವ ನಿನಗೆ ಸುಪ್ರಭಾತ ೨೨
ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು
ವಿಮಲ ಮಾನಸರಾಗಿ ನಿನಗಾಗಿ ಕಾದಿಹರು
ತಿಮಿರಸಾಗರವನ್ನು ದಾಟಿಸುವ ಪರಮಾತ್ಮ
ಕಮನೀಯಗುಣ ನಿನಗೆ ಸುಪ್ರಭಾತ|| ೨೩
ಭಾವನೆಯೊಳೀಯದ್ರಿ ವೈಕುಂಠವಾಗಿಹುದು
ಮಾವನಿತೆಯುಪಚಾರದಭ್ಯರ್ಥಿಯಾಗಿಹಳು
ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು
ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] ೨೪
ಅರುಣೋದಯದೊಳೆದ್ದು ಈ ಸುಪ್ರಭಾತವನು
ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ
ಪರಮಪುರುಷನು ದಿವ್ಯತಾಣವನು ನೀಡುವನು
ಹಿರಿಯರಾ ವಚನವಿದು ಪರಮ ಚರಿತಾರ್ಥ೨೫
ಶರಣಾಗತಿ
ಒಂದೆರಡು ಮೂರು ನಾಲ್ಕೈದಾರು ಮೊಗದವರು
ಬಂದು ವಂದಿಸುತಿಹರು ಪುರುಷೋತ್ತಮ
ಮಂದಾರ ಪರಿಮಳ ಸುಗಂಧಗಳನಾಂತಿಪ್ಪ
ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ ೨೬
ನಾನಾಪರಾಧಗಳ ಮಾಡಿರುವೆನಯ್ಯ
ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ
ನೀನೇ ಸರ್ವಾಧಾರ ಕರುಣಾಂತರಂಗನು
ದಾನಶೀಲಾ ಸ್ವಾಮಿ ಶ್ರೀವೇಂಕಟೇಶ ೨೭
ಗೋಪಿಕಾ ಪರಿವೃತನೆ ಪರವಾಸುದೇವನೆ
ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ
ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ
ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ೨೮
ದಶರಥನ ಸುತನಾಗಿ ಜಾನಕಿಯ ಕರವಿಡಿದು
ದಶಮುಖಾದ್ಯಸುರರನು ಸಂಹರಿಸಿದಾತ
ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ
ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ ೨೯
ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ
ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ
ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ
ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ ೩೦
ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ
ಸರ್ವದೇವರದೇವ ವೇದವಂದಿತ
ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ
ಸರ್ವಪೂಜಿತ ನಿನಗೆ ಶರಣು ವೆಂಕಟೇಶ ೩೧
ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ
ರಕ್ಷಿಸು ಮನೋಮಯಾ ಮಾಯ ನಿರ್ಮಾಯ
ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ
ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ ೩೨
ಆವನಾದಿಯನಂತನೆಂದೆನಿಪನೊ ವರವ
ಈವ ಕರುಣಾಳುವೋ ಜೀವರಾಶಿಯನೆಲ್ಲ
ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ
ಶ್ರೀವನಜ ಪದವೆನಗೆ ಶರಣು ವೆಂಕಟೇಶ ೩೩
ವೇದಗಳ ತಂದು ಮಂದರವೆತ್ತಿ ಹರಿಯ
ಮೇದಿನಿಯ ನಳೆದ ಭಾರ್ಗವನಾದ ರಾಮನೀ
ನಾದೆ ಕಂಸನಕೊಂದೆ ಗೋಪಾಲಕೃಷ್ಣ
ನಾದ ಕಲ್ಕೀ ನಿನ್ನ ಚರಣ ವೆಂಕಟೇಶ೩೪
ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ
ಮೂರು ಲೋಕವನಳೆದ ಸುಪ್ರಸಿದ್ಧದ ಪಾದ
ಮೂರು ಕಣ್ಣಾಂತವನು ಜಪಿಸುತಿರುವ ಪಾದ
ಚಾರುತರ ಪದವೆನಗೆ ಶರಣು ವೆಂಕಟೇಶ ೩೫
ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ
ಖೂಳ ಶಕಟನನೊದ್ದು ಕೊಂದ ಪಾದ
ಚೋಳರಾಯನು ತೊಳೆದು ವಂದಿಸಿದ ಪಾದ
ನಾಳೀಕ ಪದವೆನಗೆ ಶರಣು ವೆಂಕಟೇಶ೩೬
ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ
ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ
ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ
ಮಾರಮೋಹಕ ನಿನ್ನ ಚರಣ ವೆಂಕಟೇಶ೩೭
ಮಂಗಳ
ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ
ಮಾಲ್ಯಪೀತಾಂಬರಾಂಗದ ಶೋಭಿತಂಗೆ
ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ
ಬಾಲ್ಯಕುಂದದವಂಗೆ ಜಯಮಂಗಳ ೩೮
ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ
ಭಕ್ತಿದಾತಾರಂಗೆ ರಮೆಯರಸಂಗೆ
ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ
ಶಕ್ತಿ ಸ್ವರೂಪಂಗೆ ಶುಭಮಂಗಳ ೩೯
ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ
ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ
ಶೇಷ ಪಂಇÀರ್ಇಂಕಂಗೆ ಶ್ರೀ ಶ್ರೀನಿವಾಸಂಗೆ
ದೋಷಾಪಹಾರಂಗೆ ಜಯಮಂಗಳ ೪೦
ಅರವಿಂದ ವದನಂಗೆ ಅರವಿಂದ ಲೋಚನಗೆ
ಅರವಿಂದನಾಭನಿಗೆ ಅರವಿಂದ ಗಾತ್ರಗೆ
ಅರವಿಂದ ಪಾದನಿಗೆ ಅರವಿಂದ ಭೂಷನಿಗೆ
ಅರವಿಂದ ಹಸ್ತಂಗೆ ಶುಭಮಂಗಳಂ ೪೧
ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ
ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ
ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ
ವಂದಿಪೆನು ಮಂಗಳಾಚರಣೆ ಮಾಡಿ ೪೨
ಫಲಶ್ರುತಿ
ಹನ್ನೆರಡು ಮಾಸವು ತಪ್ಪದೆ ಹಾಡಿದರೆ
ಮುನ್ನಮಾಡಿದ ಪಾಪವೆಲ್ಲ ಕಳೆಯುವುದು
ಪನ್ನಗಾರಿಧ್ವಜನ ಕರುಣೆಯೊದಗುವುದು
ಬನ್ನಗುಡುವನರಕಬಾಧೆ ತಪ್ಪುವುದು ೪೩
ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ
ಭಾವಭಕ್ತಿಯಲಿಂತು ಹಾಡುವರಿಗೆ
ನೋವು ಕಾಲನಭಟರ ಕಾಟನಶಿಪುದು ಹರಿಯ
ಭಾವುಕರು ಸತ್ಕರಿಸಿ ಕರೆದೊಯ್ವರು ೪೪
ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು
ಒಪ್ಪಿಸುವೆನೈ ನಿನಗೆ ವೇಂಕಟೇಶ|
ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ
ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| ೪೫

೪೬೨

ರಂಗವಲಿದರ ಪಾದ |
ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ
ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ
ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ
ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ.
ಮಾನವಿ ಕರಣೀಕ | ನರಹರ್ಯಭಿಧ ದ್ವಿಜಸೂನು ಶ್ರೀನಿವಾಸನೂ ||
ಮಾನ್ಯವಂತನು ಚರಿಸಿ ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |
ಸಾನು ರಾಗದಿ ಎ್ಞÁನವಾರ್ಜಸಿ | ಎ್ಞÁನ ನಿಧಿ ಎಂದೆನಿಸಿ ಮೆರೆದ ೧
ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||
ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |
ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ ೨
ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||
ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ |
ಜಗದೀಶ ವಿಠಲಾಂಕ ಪಡೆದ ೩
ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||
ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ |
ಶ್ರೀ ಹರಿಕಥೆ ಸುಧೆಯ ಗರೆದ ೪
ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||
ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ |
ಈಕ್ಷಿಸುತ ಭುವಿಯನ್ನೆ ತೊರೆದ ೫

೪೭೧

ಕರೆದೂ ಕೈ ಪಿಡಿಯೊ ಎನ್ನಾ ಗುರುವರ ಮುನ್ನಾಕರೆದೂ ಕೈ ಪಿಡಿಯೊ ಎನ್ನಾ ಪ
ಮೊರೆಯ ನಿಡುವೆ ತವ | ಚರಣ ಯುಗ್ಮಗಳಿಗೆಬರಿದೆ ಬಳಲಿಪದಿರಿ | ಪರಿ ಪರಿಯಿಂದಲಿ ಅ.ಪ.
ಪಸುಳೆ ತಪ್ಪನು ಮಾಡೆ | ಶಿಶುವ ಕರೆಯಳ ಜನನಿಕಸವಿಸಿ ಕಳೆದೆನಗೆ | ಕುಶಲವ ನೀಯೋ ||
ಕಸರು ಕರ್ಮವ ಕಳೆದು | ಬಿಸಜನಾಭನ ಹೃನ್‍ಮುಸುಕಿಲಿ ತೋರಿಸಿ | ಪಸರಿಸು ಎ್ಞÁನವ ೧
ಅನ್ಯ ಸಾಧನ ಕಾಣೆ | ನಿನ್ನ ನಾಮವೆ ಗತಿಮನ್ನಿಸಿ ಪೊರೆ ತಂದೆ | ಮುದ್ದು ಮೋಹನ್ನಾ ||
ಕುನ್ನಿ ಮಾನವ ನಾನು | ನಿನ್ನ ಮಹಿಮೆಯನ್ನಯೇನ ಬಣ್ಣಿಪೆನಯ್ಯ | ಘನದಯಾ ಪೂರ್ಣ ೨
ಗುರುಗೋವಿಂದ ವಿಠಲನ | ಚಾರು ಸುಂದರ ರೂಪ ತೋರೊ ಹೃತ್ಸದನದಿ | ಕರುಣ ವಾರಿಧಿ ಗುರುವೇ ||
ಆರೂ ಕಾಯುವರಿಲ್ಲ | ಸಾರಿದೆ ತವ ಚರಣಭೋರಿಟ್ಟು ಮೊರೆಯಿಡುವೆ | ಧೀರ ಕಾಯಲಿ ಬೇಕೊ ೩

೪೭೨

ಕಾಪಾಡು ಕಾಪಾಡು | ಕಾಪಾಡು ಗುರುವೇ ಪ
ಶ್ರೀ ಪತಿಯ ಪರಮಾತ್ಮ | ಅಪದ್ಹರ ಗುರುವೇ ಅ.ಪ.
ಕೃಪಣ ವತ್ಸಲ ಗುರುವೆ | ಕೋಪಸಲ್ಲದು ನಿಮಗೆಕಾಪಥವ ನೈದುವನು | ತವಕೃಪೆ ವಿಹೀನಾ ||
ಅಪರಾಧ ವೆಣಿಸದಲೆ | ಕೃಪೆಮಾಡಿ ಕೈ ಪಿಡಿದುಸುಪಥದಲ್ಲಿರಿಸುತ್ತ | ಆಪವರ್ಗದನ ತೋರೊ ೧
ತಂದೆ ತಾಯಿಯು ನೀವೆ | ಬಂಧು ಬಳಗವು ನೀವೆಎಂದೆಂದಿಗೂ ಎನಗೆ ಗುರುವು ನೀವೆ ||
ಕಂದ ಮಾಡಿದ ತಪ್ಪ | ತಂದೆಯೆಣಿಸುವರೇನೊಪೊಂದಿ ಭಜಿಸುವೆ ಕಾಯೊ | ತಂದೆ ಕೃಪ ಸಾಂದ್ರಾ ೨
ತಂದೆ ಮುದ್ದು ಮೋಹನ್ನ | ವಂದಿಸುವೆ ನಿಮ್ಮಡಿಗೆಇಂದು ತವ ದರ್ಶನವ | ಸಂಧಿಸಲಿ ಬೇಕೋ ||
ಇಂದಿರಾಪತಿ ಗುರು | ಗೋವಿಂದ ವಿಠ್ಠಲನಛಂದಾಗಿ ಭಜಿಸುವ | ತಂದೆ ಕೈ ಪಿಡಿಯೋ೩

೪೭೩

ಕಾಯೊ ಕಾಯೋ | ಗುರುವರ್ಯ | ಕಾಯೊ ಕಾಯೋ ಪ
ಕಾಯೊ ಕಾಯೊ ಗುರುವರ್ಯ ಪರಮ ಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ ಅ.ಪ.
ಒಂದರಿತವನಲ್ಲ | ಕಂದನು ಎಣಿಸದೆಬಂದು ಸಲಹೊ | ತಂದೆ ಮುದ್ದು ಮೋಹನ್ನ ೧
ಹಿಂದಿನ ಸುಕೃತದಿ | ಬಂದು ಜನಿಸಿದೆನಂದ ಮುನಿಯ ಮತ | ಸಿಂಧುವಿನಲ್ಲಿ ೨
ಇಂದಾದರು ತವ | ದ್ವಂದ್ವಪದವ ಮನಮಂದಿರದಲಿ ತೋರಿ | ದಂದುಗ ಬಿಡಿಸೋ ೩
ಎಂದಾಗುದೊ ತಂದೆ | ಇಂದಿರೇಶ ಪದದ್ವಂದ್ವ ಸಂದರ್ಶನ | ಸಂಧಿಸೊ ಬೇಗನೆ ೪
ತಂದೆ ನಿನ್ನಲಿ ಗುರುಗೋ | ವಿಂದ ವಿಠಲನಅಂದ ಮೂರುತಿಯನು | ಛಂದದಿ ತೋರೊ೫

ವಾರಣಾಸಿ

೪೭೪

ಗುರು ಭಾಗ್ಯ ಗುರುಭಾಗ್ಯ | ಗುರು ಭಾಗ್ಯವಯ್ಯಾ ಪ
ನರಹರಿಯ ಕಲ್ಯಾಣ | ಪರಿಕಿಸುವ ಸೌಭಾಗ್ಯಅ.ಪ.
ಸಿರಿಭೂಮಿ ದೇವಿ ಸಹ | ವರಭೋಗ ನರಹರಿಯಪರಮ ಕಲ್ಯಾಣವೂ |
ಜರುಗುತಿರುವುದನೂಗುರುಭಕ್ತರೊಡವೆರಸಿ |
ಪರಿಕಿಸುವ ಪರಿಯಾಯ್ತುವರ ಸುಜನ ಸಂಗ ಫಲ | ವರ್ಣಿಸಲು ಅಳವೇ೧
ಕರಿಗಿರಿಯ ವರಭೋಗ | ನರಹರಿಯ ಕರುಣದಲಿಪರಮ ಪ್ರಿಯರೆಂದೆನಿಪ |
ಗುರು ಕಾರುಣ್ಯದೀ |ಎರಡು ನಾಲ್ಕರ ಮಾಸ |
ವರಸಪ್ತ ಸಿತ ಪಕ್ಷವರರವಿಯ ದಿನ ಝಾವ | ಎರಡು ಮೂರರ ಮೇಲೆ ೨
ಸೀತೆಪತಿ ರಾಮನಾ | ದೂತರ ಪ್ರೇರಣೆಯಮಾತುಗಳು ಮತ್ತೆ ಗುರು |
ಜಾತರುಕುತಿಗಳಾ |ಆತು ಅಂಕಿತ ಮಾಲೆ |
ಪ್ರೀತಿಯಿಂ ಗುರುದತ್ತಶ್ರೀ ತಂದೆ ಮುದ್ದು ಮೋಹನ್ನ | ವಿಠಲಗರ್ಪಿಸಿದೆ ೩
ತತುವ ಸುವ್ವಾಲಿ ಪರಿ | ವಿತತವಾಗಿರುವಂಥಶತ ದಶದ ಮೇಲಾಗಿ |
ಕೃತಗಳಾಗಿರುವಾಕೃತಿಗಳನು ಪೋಣಿಸುತ | ತುತಿಸಿ ಭಕುತಿಯಲಿಂದ
ಕೃತಿ ಪತಿಯ ಕೊರಳಿಗ | ರ್ಪಿತವು ಎಂದೆನುವಾ೪
ಗುರುಗೋವಿಂದ ವಿಠಲನ | ಚರಣ ಯುಗ ಕಾಂಬಂಥವರ ಮಾರ್ಗ ತೋರಿರುವ |
ಪರಮ ಎ್ಞÁನಿಗಳಾಕರುಣ ಕಿನ್ನೆಣೆಯುಂಟೆ | ಎರಡೊಂದು ಲೋಕದಲಿ
ಗುರು ಪಾದ ಸಂಸ್ಮರಿಸಿ | ಸ್ಮರಿಸಿ ಸುಖಿಯಾದೇ ೫

೪೭೫

ಗುರುವೇ ನೀ ಕರುಣಿಸದಿರಲಿನ್ಯಾರು ಕರುಣಿಪರೋ ಪ
ಕರಿಗಿರಿಪುರ ತಂದೆ ಮುದ್ದು ಮೋಹನ್ನ ಅ.ಪ.
ಮೊರೆಹೊಕ್ಕ ಜನರ ಕೈ ಬಿಡುವರೇನೋಚರಣ ಯುಗ್ಮಕೆ ನಿನ್ನ ನಮಿಸುವೆನೋ |ಭಾರ ವಹಿಸಿ ಬೇಗ ಸಲಹಬೇಕೋ |ಜರೆಯು ನುಂಗುವ ಮುನ್ನ ಪೊರೆಯ ಬೇಕೋ ೧
ಬನ್ನ ಬಡಿದು ಭವ ರೋಗವ ಕಳೆಯೋಉನ್ನತ ಪದವಿಗೇರುವ ದಾರಿ ತೋರೋ |ಘನ್ನ ಮಹಿಮ ನಿನ್ನ ಹೊರತು ಮತ್ಯಾರೋಎನ್ನ ಅಂಕಿತ ನಾಮ ಹರಿಯನ್ನ ತೋರೋ ೨
ಹಂಬಲ ಕೊಡು ಎನಗೆ ಹರಿಪಾದದಲ್ಲೀನಂಬಿ ತುತಿಪೆನಯ್ಯ ತವ ಪಾದದಲ್ಲೀ |ಬಿಂಬ ಗುರು ಗೋವಿಂದ ವಿಠ್ಠಲನಲ್ಲಿಹಂಬಲ ಸ್ಥಿರವಾಗಿ ನಿಲಿಸೋ ನೀನಲ್ಲೀ ೩

೪೭೬

ಗುರುವೆ ನಮ್ಮ ತಾಯಿ ತಂದೆ | ಗುರುವೆ ನಮ್ಮ ಬಂಧುಬಳಗಗುರುವೆ ನಮ್ಮ ಸರ್ವಸ್ವವು ಗತಿಗೋತ್ರರಯ್ಯಾ ಪ
ತಂದೆ ತಾಯಿ ಮಗುವಿಗಾಗಿ | ನೊಂದಿ ಬಳಲಿ ಸಾಕುವಂತೆಎಂದೆಂದು ಅವರೆ ನಮ್ಮ ಸದುಪದೇಶದೀ |ಬಂಧನಕ್ಕೊಳಗಾಗದಂತೆ | ಮಂದರೋದ್ಧರನ ನಾಮಅಂದದಿಂದ ಬೋಧಿಸುತ್ತ | ಉದ್ಧರಿಸುವರಯ್ಯಾ ೧
ಮುದ್ದು ಮೋಹನದಾಸರಿಂದ | ಬದ್ಧಶಿಷ್ಯರೆನಿಸಿಕೊಂಡುಶುದ್ಧರು ಅವಧೂತರು | ಹರಿಯನ್ನೆ ಕಂಡೂ |ಗೆದ್ದು ತಾವು ಬಂಧದಿಂದ | ಉದ್ಧರಿಸಲನ್ಯರನುಸಿದ್ಧರಾಗಿ ಕರಿಗಿರೀಲಿ | ದಾಸಕೂಟ ನೆರೆಸೀದ ೨
ಮಂಕುಮತಿಯ ತೊಡೆಯುತ್ತ | ಲೆಂಕತನದಿ ಬದ್ಧರೆನಿಸಿಅಂಕಿತಗಳುಪದೇಶ | ಬಿಂಕದಿಂ ಗೈದೂ |ಶಂಕರ ಸನ್ನುತ ಗುರು | ಗೋವಿಂದ ವಿಠಲನೆಶಂಕೆ ರಹಿತಾಗಿ ಪರ | ವಸ್ತುವೆಂದು ಬೋಧಿಸಿದ ೩

೪೭೭

ತಂದೆ ಮುದ್ದು ಮೋಹನ್ನ ತವ ಚರಣ ಕಾನಮಿಪೆಬಂದೆನ್ನ ಸಲಹ ಬೇಕೋ ಪ
ಎಂದೆಂದಿಗೂ ನಿಮ್ಮ ಪದ ಧ್ಯಾನವಿತ್ತು ಭವಬಂಧನವ ಬಿಡಿಸಬೇಕೋ | ಕರುಣೀ ಅ.ಪ.
ಅಂಕಿತವನಿತ್ತೆ ಮನಪಂಕ ಹರಿಸೀ ಹರಿಕಿಂಕರರ ಸಂಗ ಸಲಿಸೋ |
ಸಂಕಟವ ಪರಿಹರಿಪ ವೆಂಕಟೇಶನ ಪಾದಪಂಕಜಕೆ ಮಧುಪ ನೆನಿಸೋ |
ಶಂಕೆಗಳು ಎಂದೆನಿಪ | ಸೊಂಕು ಜಾಡ್ಯವ ಹರಿಸೆಡೊಂಕು ಮನ ವೈದ್ಯನೆನಿಸೋ |
ಮಂಕುಮತಿಯಾದೆನಗೆ ಅಕಲಂಕ ಮಹಿಮನನಲೆಂಕತನವನೆ ಇತ್ತು ಕಾಯೋ | ಕರುಣೀ ೧
ಚಿರಕಾಲ ನಿಮ್ಮಡಿಯ ಸೇವೆ ಮಾಡಲು ಇಲ್ಲನರಹರಿಯ ಭಜಿಸಲಿಲ್ಲ |
ಮರುತ ಮತವನೆ ಮಥಿಸಿ | ತರತಮ ಎ್ಞÁನವನುನಿರುತ ಭಜಿಸಲು ತಿಳಿಯದೋ ||
ಇರಲು ಈ ಪರಿ ನಾನು | ಪುರುಷಾರ್ಥ ಪಡೆವುದಕೆವರಮಾರ್ಗ ತೋರೊ ನೀನುಹರಕು ಮಾನವ ಎನ್ನ |
ಮರುಕದಿಂದಲಿ ನೋಡಿವಿರಕುತಿಯನಿತ್ತು ಸಲಹೋ | ಕರುಣೀ ೨
ಲೆಕ್ಕವಿಲ್ಲದ ದೇಹ ಗೇಹಾದಿಗಳ ಪೊಕ್ಕುಸಿಕ್ಕಿನಿಂದಲಿ ನೊಂದೆನೋ |ಕಕ್ಕಸದ ಸಂಸಾರ |
ಅಕ್ಕರವು ಎಂದೆನುತಮರ್ಕಟನ ತೆರನಾದೆನೋ |ಸೊಕ್ಕು ಮೂರೈದನ್ನ |
ಮುಕ್ಕಿ ಕಾಡುತ್ತಿರಲುನಕ್ಕು ನೀ ನೋಳ್ಪುದೇನೋ |ಪಕ್ಕಿವಹ ದೇವ ಗುರು ಗೋವಿಂದ ವಿಠ್ಠಲನ
ಅಕ್ಕರದಿ ತೋರಯ್ಯಾ | ಕರುಣೀ ೩

೪೭೮

ತಂದೆ ಮುದ್ದು ಮೋಹನ್ನಾ | ನಮಿಪೆ ಗುರುಇಂದಿರೇಶನ ಪ್ರೀಯನ್ನ ||
ಸುಂದರ ಮೃಗಧರ | ಇಂದು ಧರನ ಸಖನಛಂದಾಗಿ ಭಜಿಪ ದೇ | ವಾಂಶ ಸಂಭೂತನೆ ಅ.ಪ.
ದಣಿಸುವರ್ದನುಜರೆಲ್ಲಾ | ನೀನರೆ ಎನ್ನಮನಕಭಿಮಾನಿ ಎನಿಸೀ ||
ಘನವೇನೊ ನಿನಗಿದು | ದನುಜ ದಲ್ಲಣನೆನಿಸಿಮನದ ಡೊಂಕನು ತಿದ್ದಿ | ಮನುಜ ನೆನಿಸೊಯೆನ್ನ ೧
ಮುಕುತಿ ಮಾರ್ಗಕೆ ಸಾಧನಾ | ಎನಿಸಿ ಮೆರೆವ ಭಕುತಿ ವಿರಕುತಿ ಸುಎ್ಞÁನ ||
ಸುಖ ತೀರ್ಥ ಮತದೊಳು | ಸುಖಿಸುವ ಸೌಭಾಗ್ಯಸುಖವ ನೀ ಪಾಲಿಸೊ | ಕಕುಲಾತಿಯನೆ ಹರಿಸೀ ೨
ಎರಗಿ ಬೇಡುವೆ ಪಾವನಾ | ಕಾಯನೆ ನಿನ್ನಮೊರೆಯ ಹೊಕ್ಕನೊ ಸಂಪನ್ನಾ ||
ಗುರು ಗೋವಿಂದ ವಿಠಲನ | ಚರಣ ಪಂಕಜ ಧ್ಯಾನನಿರುತದಿ ಮಾಳ್ಪನೆ | ಕರಿಗಿರಿ ವಾಸನೇ ೩