Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೧೧೭
ಎಂಥಾ ಮೋಹನನೇ ನೋಡಮ್ಮಯ್ಯಾ|
ಸಂತತ ತೃಪ್ತನು ಬಾಲಕನಾದಾ|ಅ-
ನಂತ ಚರಿತೆಯಾ ದೋರುವ ಕೃಷ್ಣ ಪ
ಮೂಡಣ ದೇಶಕೆ ಪಡರಲು ಗೋಪಿಯು|
ತಡೆಯದೆ ದುಮುಧುಮು ಧುಮುಕೆನುತ|
ಕಡೆಯಲು ಧುಡು ಧುಡು ಧುಡುನಡೆಯುತ ಬಂದು|
ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ ೧
ಸಮಗೆಳೆಯರ ಸಂಗಡ ಧ್ವನಿವೇಣಿಯ|
ಉಮಟೆಸುತಲಿ ಧಿಗಿಧಿಗಿಲೆನುತಾ|
ಧಿಮಿಕಿಟ ಧಿರಕಿಟ ತಿರುಕಿಟವೆಂಬೋ|
ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ ೨
ಗುರು ಮಹೀಪತಿ ಪ್ರಭುವಿನ ಪದರಜ|
ದೊರಕದು ಅಜಭವ ಮುಖ್ಯರಿಗೆ!
ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ|
ಧರೆಯೊಳು ಯಶೋಧೆ ಸುಕೃತವೆಂತೋ೩

೪೪೯
ಎಂದಿಗೆ ಕಾಂಬೆನೇ | ಸಖಿಯೇ |
ಪಾವನ ಸುಂದರ ಶ್ರೀ ಗುರು ಚರಣಾ ಪ
ಸ್ಮರಿಸಲು ನಾಮವಾ | ಮರ್ಹವಿನಾ |
ಮರೆಸಿ ಅರಹು ದೋರುವನಾ ೧
ಆಗಲು ದರುಶನ | ಮನಸಿನಾ |
ಕೈಗೊಡುವದು ವಾಸನಾ ೨
ಭವತಾಪಕಶಮನಾ | ದಾವನಾ |
ವಿವೇಕಾಮೃತ ವಚನಾ ೩
ಜಗವ್ಯಾಪಕ ಕೀರ್ತಿ | ದೇವನಾ |
ಬಗೆಯನು ಹೇಳಲಿನ್ನೇನಾ೪
ಗುರುಮಹಿಪತಿ ಸ್ವಾಮಿ | ನಂದನಾ |
ಹೊರವ ಬಂದನು ಕರುಣಾ ೫

೧೬೧
ಎಂದು ಕಾಂಬೆನೆ ಯದುವರನಾ|
ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ
ಶಿರಿದೇವಿ ಪ್ರೀಯನ ಶರಣಾಶ್ರಯನಾ|
ಸರಸಿಜ ಭವ ಭವ ಮುಖರೊಡೆಯನಾ ೧
ವಿಮಲೆ ಚರಣನಾ ಕಮಲೇಕ್ಷಣನಾ|
ಶಮಿತ ದುರಿತ ಕುಲದೀನೋದ್ಧರನಾ ೨
ಹೇಮಾಂಬರನಾ ಶಾಮಸುಂದರನಾ|
ಕಾಮಿತಾರ್ಥವ ನೀವ ಕರುಣಾ ಸಾಗರನಾ ೩
ತಂದೆ ಮಹಿಪತಿಯಾ ನಂದನ ಸಾರಥಿಯಾ|
ಹೊಂದಿದವ ಕಾಂಬಾನಂದ ಮೂರಿತಿಯಾ೪

ಬಡತನದಿ ಒಡನೆ ನೀಡಿದೆಯೊ
೮೩
ಎಂದು ಕಾಂಭುವೆ ರಂಗಯ್ಯ ನಾ ಪ
ಇಂದ್ರಾನುಜಗುಣ ಸಾಂದ್ರನ್ನಾ | ಉಪೇಂದ್ರನ್ನಾ |
ಸುರ್ಯನ್ನಾ ಚಂದ್ರನನಾ ೧
ಮಂದರಧರ ನಂದನ್ನಾ | ಸಂದನ್ನಾ ಮುಕುಂದನ್ನಾ ೨
ವಾತಜಕೇತುಳ್ಳಾತನ ಸ್ಯಂದನಾ | ಸೂತ ತ್ರೈಜಗ ತಾತನ್ನಾ ೩
ಭೂತಳ ಸಂತತ ಪೊತ್ತಿಹ | ಯಾದವ |ಸಾಧಾನಾಧಾನಾಡನ್ನಾ ೪
ಮಿತಾನಂತಿ ಭಗಾತ್ರ ವಿರಾಜಿತ | ಪತ್ರಿ ಮುಕುಟಧ್ವಜ ಸೂತ್ರನ್ನಾ೫
ಸತ್ರಿ ನೇತ್ರ ಮಿತ್ರ ವಿಧಾತೃ | ಪಿತೃ ವಿಚಿತ್ರ ಚರಿತನ್ನು ೬
ಗುರುವರ ಮಹಿಪತಿ – ದೊರೆಯಾ |
ಮುರ ಅರಿಯಾ ಸುಖವರ್ಯಾ ನರಹರಿಯಾ ೭

೫೭೮
ಎಂದೂ ಹಿಡಿಯದಿರು ಗರ್ವಾ | ಗೋ
ವಿಂದನಲೀಲೆಯ ಕಾಣೊ ಸರ್ವಾ ಪ
ಕ್ಷಿತಿಯೊಳಧಿಕವೆನ್ನ ಕುಲವು | ಗುಣ |
ವತಿ ಸುಲಕ್ಷಣೆಯಾದಾ | ಸತಿಯಳ ವಲವು |
ಸುತನಲ್ಲಿ ಗುಣ ನಿಶ್ಚಲಿಪು | ಯನ |
ಗತಿಶಯ ಭಾಗ್ಯದ ಧನ ಧಾನ್ಯ ಒಲವು ೧
ಎಲ್ಲರೊಳಗ ಅಭಿಮಾನಿ | ಶಾಸ್ತ್ರ |
ದಲ್ಲಿ ವಿಚಾರಿಸಿ ನಾನೆವೆ ಜ್ಞಾನಿ
ಬಲ್ಲಿದ ಯೌವ್ವನ ತ್ರಾಣಿ | ಯನ್ನು |
ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ ೨
ಸುಂದರವಾದ ಮಂದಿರವು | ಯನ |
ಗೊಂದು ಕೊರತೆಯಿಲ್ಲಾವೆಂಬುದೀ ಮರವು
ಹೊಂದದೆ ಬಾಗಿರೆಚ್ಚವು | ಗುರು |
ತಂದೆ ಮಹಿಪತಿ ಬೋಧಿಸಿದರಹು ೩

೫೨೩
ಎಚ್ಚರ ಹಿಡಿ ಮನವೇ |
ನಿಚ್ಚದಿ ಮೆಚ್ಚಿನ ಅಚ್ಚುತನಂಘ್ರಿ ಪ
ಹಾಡುತಾ ನೋಡುತಾ ನೀಡದೊಳಾಡುತಾ
ನಡೆ ನುಡಿಯೊಳು ಬಿಡ ದಡಿ ಗಡಿಗೊಮ್ಮೆ ೧
ಹೇಳುತ ಕೇಳುತ ಮೇಳದಿ ಬಾಳುತ |
ಕಳವಳದಳುಕಿನ ಡಳಮಳದೊಳಗೆ ೨
ಬಂದದ ಛಂದವಿಂದೇ ಹೊಂದು ಮುಕುಂದನೆಂದು |
ತಂದೆ ಮಹೀಪತಿ ಕಂದಗ ಬೋಧಿಸಿದ ೩

೬೮
ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ
ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ
ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ.
ಸರಸಿಜ ಸಖನ ಮುಂಬೆಳಗವ ಹರಿಯಲು |
ಭರದಲಿ ಹಕ್ಕಿಯು ಕಲಕಲವೆನಲು ೧
ನಾರದ ತುಂಬುರ ಮಾಡುವ ಪ್ರಾತ:|
ಸ್ಮರಣೆಯ ಗಾಯನ ಧ್ವನಿಯನು ಕೇಳಿ ೨
ಕರತಳದಲಿಯವಿಗಳನು – ವರೆಸುತಲಿ |
ತೆರೆವುತ ಮುಚ್ಚುತ ಅರೆಗಣ್ಣ ನೋಟದಿ ೩
ಬಾಯೊಳಗಿನ ತಂಬುಲವ ನುಗುಳುತ |
ಬಾಹ್ಯ ಅಧರ ವಕೆಂಪವ ನಡಗಿಸುತ ೪
ಕಿರಿಬೆಮರವ ಕೊನೆ ಯುಗುರದಿ ಹಾರಿಸಿ |
ಕುರುಳು ಗೂದಲು ಬೈತಲು ನೀಟಾಮಾಡುವ೫
ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ |
ಒಡನೆ ಕೊರಳಾ ಭರಣವ ತಿರುಹುತಲಿ ೬
ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ |
ಉಡಿಗಿಯಾ ನಿರಯಾ ಮುಂದಕ ಸ್ಸಾಂವರಿಸುತ೭
ಪ್ರಕಟದಿದೋರ್ವ ಕುಚದ ನಖಕ್ಷತಗಳ |
ಯುಕುತಿಲಿ ಅಡಗಿಸಿ ಪುಟವನು ಬಿಗಿವುತ ೮
ತನ್ನನಂಬಿದ ಬಾಲರ ಹೊರಿಯಲುದಯ |
ವನ್ನು ಬೀರುತಾ ಕಮಠ ನ್ಯಾಯದಲಿ೯
ಈರೇಳು ಜಗದ ಜೀವನ ಪಡೆದ ಜನನಿ |
ಗುರುಮಹಿ ಪತಿಸುತ ಪ್ರಭುವಿನ ಅರಸಿ೧೦

೧೪೭
ಎನಗ ನೀ ಕಾಯಲಾಗದೇ|ಆಗದೇ ದೇವಾಪ
ದಶ ಜನುಮ ವಂಗೀಕರಿಸಿ ಭಕ್ತ ಅಂಬ|
ರೀಷನ ಶಾಪ ಹರಿದೆ ದೇವಾ ೧
ಗಣಿಕಾ ಅಜಮಿಳ ಶಬರಿ ಮುಖ್ಯರಾಗಿಹಾ|
ಗಣಿತರನು ಪೊರೆದೆ ದೇವಾ ೨
ಗುರುವರ ಮಹಿಪತಿ ಸುತ ಪ್ರಭು ಯನ್ನನು|
ದ್ದರಿಸುವದನರಿದ ಅರಿದೇ ದೇವಾ ೩

೪೪೫
ಎನಗಿನ್ಯಾತರ ಹಂಗೇನು |
ಘನ ಗುರು ತಾನಾದ ಶ್ರಯಧೇನು ಪ
ಸುರಲೋಕ ಪದವಿಯ ಸುಖದಿಚ್ಛೆಯಾತಕ |
ಪರಗತಿ ದಾಯಕ ದೊರಕಿರಲಿಕ್ಕೆ ೧
ರಿದ್ದಿ ಶಿದ್ದಿಗಳೆಂಬ ಮಾತಿನ ಗೊಡವಿಲ್ಲಾ |
ಸಾಧ್ಯವಾಗಿರೆ ಗುರು ಶ್ರೀ ಪಾದ ಕಮಲಾ ೨
ಹಂಬಲಿಸೆನು ಯೋಗ ಭೋಗ ಮುಕ್ತಿಯ ನಾಲಕು |
ಅಂಬುಜಾಕ್ಷನ ಸೇವೆಲಿರುವುದೇ ಸಾಕು ೩
ತಂದೆ ಮಹೀಪತಿ ಪ್ರಭು ದಯದಿಂದಲಿ |
ಕಂದಗ ವಿಶ್ರಾಂತಿ ಇದಿರಿಟ್ಟಿರಲಿ ೪

೧೪೮
ಎನ್ನ ಪಾಲಿಸುವದಾಗದೇ|ಸಿರಿ ರಮಣಾ|
ಪ್ರಸನ್ನ ವಿಮಲ ಅತುಳ ಶೇಷಗಿರಿಯ ವಾಸಾ ವೆಂಕಟೇಶಾ ಪ
ದುರುಳ ದೈತ್ಯನ ಕರುಳ ಬೆರಳ ಸರಳ ಉಗುರಿನಿಂದ ವಿರಳ|
ವಿರಳ ಮಾಡಿ ಪೊಸರಂತೆ ಕೊರಳಿಗಾಕಿ ಮರಳೆ|
ತರಳಗೊಲಿದು ಹರಣಗಾಯ್ದೆ|ಆದೇಶದಲ್ಲಿ|
ಅರಸುತನುವ ಕೊಟ್ಟು ನಿಲಿಸಿದೇ|ಕ್ಷಿತಿಯೊಳಗ|
ಪರಮ ನಿಜ ಭಕ್ತನೆನೆಸಿದೇ ೧
ನೆಗಳಿ ಬಂಧನ ಬಿಡೆ ಹರಿಗಳರಿಗಳ ಸಂಗಡಿಭಗಳ ಸಮೂ|
ಹಗಳ ಪತಿ ನೀರ್ಗುಡಿಯೆ ಪೋಗಲಾಗಳೆ|
ನೆಗಳಿ ಪಿಡಿಯೆ ಶ್ರೀ ಪಾದಗಳ ಯುಗಳ ನೆನಿಯ ಕೇಳದೇ|
ಸಕಲ ಪಕ್ಷಿಗಳ ಶ್ರೇಷ್ಠ ನಿಲ್ಲದೊದಸಿದೇ|ಕರುಣದಿಂದ
ಸುಗತಿ ಕೊಟ್ಟು ಜನಮ ಹರಿಸಿದೇ೨
ಇಳೆಯ ಮದದಿ ದ್ರೌಪತಿಯನು|
ತಿಳಿಯದೆಳಿಯೆ ಕಳಿಯೆ ಸೀರೆಯಾ|
ಕಳಿಯೆ ಮಾನ ವಿಜಯಗೆಳೆಯ ಇಳೆಯ ಭಾರರ್ಬಳಿಯೆ|
ಸುಳಿಯೆ ದಾಟಿಸೆನುತ ನುತಿಸೆ ತ್ವರಿತದೀ|ನೀನು ಸಭೆ|
ಯೊಳಗ ಪೊರಯಿಸಿದೇ ವಸ್ತ್ರದೀ|ಮಹಿಪತಿ|
ನಂದನೊಡೆಯ ವ್ಯಾಳ್ಯಕ್ಕೊದಗಿದೇ ೩

೧೪೯
ಎನ್ನ ಪಾಲಿಸೋ ಕರುಣಾಕರಾ|
ಪನ್ನಗಶಯನ ಗದಾಧರಾ ಪ
ವಸುದೇವ ನಂದನ ಹರಿಮಧುಸೂದನ|
ಅಸುರಾಂತಕ ಮುರಲೀಧರ,
ಬಿಸರುಹನಾಭ ಸರ್ವೇಶನೆ ಮುನಿ|ಮಾ
ನಸ ಸಂಚಾರ ರಮಾಧವಾ ೧
ಪರಮ ಪುರುಷ ಉರಗಾಸನ ವಾಹನಾ|
ಕರುಣಾರ್ಣವ ವಡವಾನಳಾ||
ಸರಸಿಜಭವ ಗಿರಿಜಾವಲ್ಲಭನುತ|
ವರಸುಜನಾವಳಿ ಪಾಲನಾ ೨
ಕಾವನ ಪಿತ ಮುಚಕುಂದ ವರದ ರಾ|
ಜೀವ ನಯನ ನಾರಾಯಣಾ|
ಶ್ರೀವತ್ಸಲಾಂಛನ ಗುರುಮಹೀಪತಿ ಸುತ
ಜೀವನ ಸಖ ಶ್ರೀ ಕೃಷ್ಣನೆ೩

೧೦೬
ಎನ್ನ ಪ್ರಿಯನಾ ನೀ ತಂದು ತೋರೇ ಸುಜ್ಞಾನೇ ಪ
ಕನಸಿನೊಳಗ ಕಂಡ ಪರಿಯಾರೂಪದ ದೋರಿ
ದಾವ ತೇಜಮುಸುಕಿತು ಧರಿಯೇ | ತ್ರೈ ಭುವನವ ರಕ್ಷಿಸ
ಬಂದಾ ಹರಿಯೇ | ಮುಜ್ಜೆಮರಿಯೇ ೩
ಮುಟ್ಟಿಲೀ ತಗಧನುಏಳಲಿ ಝಮ್ಮೆನೇ
ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು
ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ
ಅಡಿಯಿಟ್ಟುನಲಿದು ಬರುವ ರಾಮೋ ಘಮ್ಮನೇ ಪರಬೊಮ್ಮನೆ೪
ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ
ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ
ವೃಂದ ಕಾಣುತ ಹೆದರಿತುಧಕ್ಕನೇ
ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ ೫

೧೫೧
ಎನ್ನ ಸಲಹುದೋ ರಂಗಾ ಎನ್ನ ಸಲಹು|
ನಿನ್ನ ಚರಣ ಕಮಲದೋರಿ|
ಚಿನ್ನ ಕಿಂಕರ ದಾಸ ನಾನು|ಪನ್ನಗಾರಿ ಗಮನ ರಂಗಾ ಪ
ನಷ್ಟ ಪರಮ ಪತಿತ ಗತಿಯ|ಗೆಟ್ಟು ಅಜಮಿಳ ತನ್ನ|
ಕಷ್ಟ ಬಡುವ ಕಾಲದಲ್ಲಿ ಸುತನ ಪೆಸರನು|
ಮುಟ್ಟಿ ಕರಿಯೇ ತೃಪ್ತನಾಗಿ|ಅಷ್ಟರಿಂದ ಅವಗ ನಿನ್ನ|
ಪಟ್ಟಣಕ ನೀ ಅಟ್ಟಿ ಗತಿಯ|ಕೊಟ್ಟು ಸಲುಹಿದೆ ರಂಗಾ ೧
ಸಂಧಿಸಿ ಮಧ್ಯರಾತ್ರಿಯೊಳಗ|ಬಂದು ದೂರ್ವಾಸನ್ನವ ಬೇಡ|
ಲಂದು ದೃಪದ ನಂದನೆ|ನಿನ್ನೆ ಸ್ಮರಿಸೆ ತ್ವರಿತದಿ|
ಬಂದು ನಿಂದು ಬೇಡಿದುದನು|ಛಂದದಿಂದಲಿತ್ತು ದ್ವಿಜರಾಜ|
ನಂದ ಬಿಡಿಸಿ ಐವರ ಮಾನ ಕುಂದಂತೆ ಕಾಯ್ದೆ ರಂಗಾ ೨
ಐದು ವರುಷ ಹಸುಮಗನಾ|ಬೈದು ಮಲತಾಯಿ ಪೊರಗೆ|
ಹಾಕಲಾಗ ಧೃವನು ನಿನ್ನ ಕುರಿತು ಧ್ಯಾನವಾ|
ಗೈಯ್ಯಲಾಗಿ ಅಚಲ ಪದಕ|ಒಯ್ದು ಇಟ್ಟು ನೀನು ಅವನ|
ಕಾಯ್ದೆ ಮಹಿಪತಿ ನಂದನೊಡೆಯನಾದ ದೇವ ರಂಗಾ೩

೧೫೨
ಎನ್ನ ಸಲಹೋ ಚರಣವನ್ನು ದೋರಿ ಪರಮ|
ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ
ಶರಣ ಜನ ಮಾನ ರಕ್ಷಕನೇ
ವರಕಮಲ ಕರಕಮಲ ಪದವಿಮಲ ಮಹಿಮನೇ
ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ|
ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ
ಭಕ್ತರ ವಸರಕೊದಗುವೆ ನೀ ಪರೋಪರಿ|
ಸುಕಲ್ಪತರು ದನುಜ ಕುಲಸಂಹಾರ
ಸರ್ವದುರಿತ ನಿವಾರಾ ೧
ಅಖಿಳ ಶೃತಿ ಸ್ರ‍ಮತಿ ನಿಕರಲಿಂದ ನುತಿಸಿಕೊಂಬೆ|
ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ
ಪ್ರಕಟದೊಳೊದಗಿ ಬಂದೆ
ಸರಸೀರುಹ ನಯನ ಜಗದ ತಂದೇ|
ಸಿರಿನಂದ ನಂದನ ಪರಮುದಾರೇ|
ಸುರವೃಂದ ರಕ್ಷಕ ವರ ಮುರಾರೇ ೨
ಶರಣಾಗತ ಜನರ ಪಾಲಾ|
ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ|
ವೈರಿ ಶಯನ ಶೌರಿ ನರಸಹಕಾರಿ ಗಿರಿಧರನೇ|
ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ|
ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ೩
ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ|
ಪರಮಾನಂದ ಜೀವದೊರಿಯೇ|
ಸರಸೀರುಹ ಭವ ವಿನುತ ಮತಿ ಚರಿತಾ ಸಿಂಧೂರ|
ವರದ ನವನೀತ ಚೋರ ಜಗದೀಶ ಹರಿಯೇ೪

೧೫೦
ಎನ್ನ ಸಲಹೋ ನೀ ದಯಾಂಬುಧಿ|
ಘನಶಾಮಾ ರಾಮಾ ಪ
ವಸುದಿಜ ಲೋಲ ಸುರಮುನಿ ಪಾಲಾ|
ದಶರಥ ತನಯ ಕೃಪಾಲ೧
ದೀನೋದ್ಧಾರ ದುರಿತ ನಿವಾರಾ|
ದಾನವಕುಲ ಸಂಹಾರಾ ೨
ಸರಸಿಜನಯನಾ ಸದ್ಗುಣ ಸದಾನೆ
ಗುರು ಮಹಿಪತಿ ಸುತ ಜೀವನಾ ೩

೪೪೬
ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ |
ಚಿನ್ನನೆನುತಲಿ ಬಿಡದೆ ಘನ್ನ ದಯ ಮಳೆಗರೆದು |
ಮುನ್ನಿನಪರಾಧಗಳನಿನ್ನು ಕ್ಷಮೆಯನು ಮಾಡಿ |
ನಿನ್ನ ಸ್ಮರಣೆಯೊಳಿಪ್ಪ ಸನ್ಮತಿಯನಿತ್ತು ೧
ನಿಚ್ಚಳದ ಪದಗಳಿಗೆ ಮುಚ್ಚಗೊಳ್ಳದೆ ನಿನ್ನ |
ಎಚ್ಚರಿಕೆಯನು ತೊರೆದು ಬೆಚ್ಚಿ ಬೆದರುತೆ ವಿಷಯ |
ಕಚ್ಚಿ ಬಳಲುವ ಈ ಹುಚ್ಚು ಮನಸ್ಸಿಗೆ ನೀ |
ನಿಚ್ಚಟದರಹು ಕೊಟ್ಟು ನಿಶ್ಚಲದಲಿ ಸಲುಹು೨
ಕುಂಭಿನಿಲಿ ಧೇನು ಬಸಿರಿಂ ಬಂದ ಕರುವಿಂಗೆ |
ಹಂಬಲಿಸಿ ತಿರು ತಿರುಗಿ ಬೆಂಬಿಡದೆ ಬಪ್ಪಂತೆ |
ಇಂಬಾಗಿ ಎನಗ ಕರುಣಾಂಬಕದಿ ನೋಡಿ ನೀ |
ಸಂಬಾಳಿಸೈ ಕೃಷ್ಣನೆಂಬವನ ಸ್ವಾಮೀ೩

೫೨೫
ಎನ್ನಮನವ ನಿಲಿಸೋ ಇಂದಿರೆ ಪತಿ
ಭಂಗಬಡುವ ವಿಷಯಂಗಳಿಗೆರಗದೇ
ರಂಗ ನಿನ್ನಯ ಮಂಗಳಂಗುಟರ್ಚಿಸುವಂತೆ ೧
ಉದರ ಪೋಷಣೆಗಾಗಿ ಸದೆಬಡಿಗನಾಗದೇ
ಸದಮಲ ನಿನ್ನೂಳಿಗದವನಾಗುಳಿವಂತೆ ೨
ಶರೀರ ಸಂಬಂಧಿಗಳಲ್ಲಿರುವ ಪ್ರೇಮವ ತಂದು
ಗುರು ಮಹಿಪತಿ ಪ್ರಭು ಸ್ಮರಣೆಯೊಳಿರುವಂತೆ೩

೫೨೭
ಎನ್ನೊಳು ನ್ಯೂನವಾರಿಸದೇ ಸಲಹಯ್ಯಾ ಪ
ಕಾಮಕ್ರೋಧ ಸಂಗವ ಮಾಡೀ |
ತಾಮಸ ಲೋಭದಿ ಮೋಹವ ಕೂಡಿ |
ತಾಮದ ಮತ್ಸರದಲಿ ಬೆರೆದಾಡೀ |
ನೇಮದಿಗೆಟ್ಟೆ ವೃಥಾಯಕ೧
ವಿಷಯೇಂದ್ರಿಯ ಸುಖ ವಿಷಯೆಂದರಿಯದೆ |
ವಿಷಯದಿ ನಿಸಿದಿನಗಳೆದೆನು ಹರಿಯೇ |
ಕುಶಲದ ಕರ್ಮದ ದಾರಿಯ ವಿಡಿಯೆ |
ಘಸಣಿಗೆ ಬಿದ್ದೆನು ಭವದಿಂದ೨
ತಂದೆ ಮಹಿಪತಿ ನಂದನ ಪ್ರಾಣಾ |
ಮುದದಿ ಕೈಯನು ಪಿಡಿಯಲೋ ಪೂರ್ಣಾ |
ಛಂದದಿ ತೋರಿಸಿ ನಾಮದ ಖೂನಾ |
ಇಂದಿಗೆ ಧನ್ಯನ ಮಾಡು೩

೧೫೪
ಎಮ್ಮಳವೇ ಪೊಗಳಲಮ್ಮಮ್ಮಾ
ಬೊಮ್ಮನರಿಯ ನಿಮ್ಮ ಮಹಿಮಾ ಪ
ಭೂತಳದೊಳರವು ಸಕಲ ಉಂಟೆಂದು
ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ
ಮಾತಿಗೆ ವಿಗತ ಕಗತ ವಾಗೆ ಶೃತಿಗಳು
ನೇತಿ ನೇತಿ ತಿರುಗಿದ ಬಳಿಕಾ ೧
ಕುಸುಮನಾಭೇನನ ಸಾಮೀಪೆಂಬಾ ತವಕದಿ
ಅಸಮ ತೆರದಿ ಪೊಗಳಲು ಚರಿತಾ
ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ
ಕುಶಿದು ತಲೆವಾಗಿ ತಾ ನಾಚಿದ ಬಳಿಕ೨
ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ
ವರತ ಹೃದಯ ಮಂದಿರದೊಳಿರಿಸಿ
ಮೆರವುತ ನಿನಗತಿ ಬ್ರಯರಾದಾ ಭಕುತರಾ
ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ೩

೧೫೫
ಎಲೆ ದೇವಿ ಇಂತು ಚಿಂತೆಯು ಯಾಕ|
ಸುಲಭದಿ ತಂದು ತೋರುವೆ ನಿನ್ನರಸನಾ ಪ
ನಳಿನಗಳಲಿ ಅಪರಾಧವಾಯಿತೆಂದು|
ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು|
ಕಲಸಾರುವೇನೇ ನಿನ್ನಯ ತನುಗುಪವ|
ತೊಲಗಿಬಿಟ್ಟು ನಿಲ್ಲುವನೇನೇ ರಂಗಾ೧
ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು|
ತ್ಯಜಿಸಿ ಬಂದ ತಪ್ಪಾಯಿತೆಂದು|
ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ|
ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ೨
ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ|
ಇನ್ನು ನಾ ಪೋಗಿ ನಾನಾ ಪರಿಯಿಂದಾ|
ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ|
ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ ೩

೫೭೪
ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ
ಹರಿಯೋ ಮರವಿನ ಮುಸುಕಿದೆ ಮರೆಯೋ |
ಸಿರಿ ಸೌಖ್ಯ ಮೃಗಜಳ ಪರಿಯೋ |
ಚರವೆಂಬ ಹಂಬಲ ಮರಿಯೋ |
ಪರಿ ಪರಿ ವಾಸನೆಯ ಜರಿಯೋ |
ಪ್ರಾರಬ್ಧ ನಿಜ ವೆಂದರಿಯೋ |
ಮೂರು ತಾಪ ಮೊನೆ ಮುರಿಯೋ |
ಅರವಿನ ನಯನವದೆರಿಯೋ |
ಗುರು ಪಾದ ಪದ್ಮಕ ಬೆರೆಯೋ ೧
ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ |
ಕಳೇವರ ಸ್ಥಿರ ಬೊಬ್ಬುಳಿಯೋ |
ನಲವಾರು ಅರಿಗಳ ನಳಿಯೋ |
ಬಲಿತಿಹ ಹಮ್ಮಲ ಕಳಿಯೋ |
ಬಳಲಿಪಾಗುಣ ಮಲ ತೊಳಿಯೋ |
ಬಲು ಶಾಂತಿ ಹೃದಯದಲಿ ತಳೆಯೋ |
ಒಲುವಂತೆ ಗುರುನಡಿ ಕಲಿಯೋ |
ಸಲಹುವಾಗರದು ದಯ ಮಳಿಯೋ ೨
ಜಡಿಯೋದೃಢ ಭಾವನೆಯನು ಹಿಡಿಯೋ |
ಕೆಡುವ ಭಾವ ಮೂಲವ ಕಡಿಯೋ |
ತಡಿಯದೆ ಮಹಿಪತಿ ದಯ ಪಡಿಯೋ |
ಅಡಿಗಳಾಶ್ರಯವನು ಹಿಡಿಯೋ |
ಒಡೆಯನಾಜ್ಞೆಯಂದದಿ ನಡೆಯೋ |
ಕಡು ಪ್ರೀತಿಲಿ ಸ್ತುತಿ ನುಡಿಯೋ |
ಮಡಿದ್ಹುಟ್ಟುವ ಜನ್ಮದ ಮುಡಿಯೋ |
ಒಡನ ಹಾದಿದರಿಂದ ಕಡಿಯೋ ೩

೫೭೫
ಎಲೆ ಮನಾ ವ್ಯರ್ಥಗಳೆವರೇ ಜನುಮವನು |
ನೆಲಿಯ ನಿನ್ನರುವದಾ ಹೊಲಬು ಮರೆದು ಪ
ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು |
ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ
ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು|
ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ |
ಗೈದು ನಿತ್ಯಾನಿತ್ಯ ವೈದಿಕ ವಿಚಾರವನು |
ಆದಿ ಪುರುಷನ ಕಾಂಬ ಹಾದಿ ಕೂಡಿ |
ಖೇದವನು ಕುಡುವ ವಿವಾದ ಗುಣವನೆ ನೀಗಿ |
ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ |
ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು ೧
ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ
ದುರಿತಢೆರಿಯುಳ್ಳ ಭವ ಶರಧಿಯನು ಗೆಲಲಾಗಿ |
ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ |
ಹರಿನಾಮವ ನೆನೆದು ಹರಿಧ್ಯಾನಗೈವುತಲಿ |
ಹರುಷದಲಿ ಪದಿನಾರು ತೆರ ಪೂಜಿಸಿ |
ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ |
ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು |
ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ |
ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ ೨
ವನಧಿಯೊಳು ಥೆರೆಸಂಗ ಧನುಮತದಿದೋರ್ವ |
ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು |
ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ |
ಕನಕದಧಿದೇವಿ ಕಿವಿಯನು ಬೀಸುವಾಗ |
ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ |
ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ |
ಧನಿತದರಿಂತುಷ್ಟವನು ಕರಿಸಿ ದೃಢದಿಂದ |
ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ ೩

೫೨೮
ಎಲ್ಲಿ ಶ್ರೀ ಗುರುವಿನ ದಯದೊಲವಿಹುದು |
ಅಲ್ಲಿ ದುರಿತ ಭಯ ಮುಟ್ಟ ಲರಿಯದು ೧
ದಿವಸಾಧಿಪನಾ ಮಂಡಲವನು ಸಾರಿಹಗ |
ಜವದಿ ಕತ್ತಲೆಯು ಮುಸುಕುವದೇನವಗ ೨
ಸಕಲ ಗಜಗಳು ಮುದದಲಿ ಒಂದಾಗಿ |
ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ ೩
ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ |
ಮತ್ತೆದೋರುದೇ ಮುಖ ಹಿಮವು ಇದಿರಲಿ ೪
ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ |
ಅಂಧಕನಂತೆ ಬಾಳುತಿಹಾವರಿಗಲ್ಲದೇ ೫

೫೭೩
ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ಪ
ಎಲ್ಲಿಂದೆಲ್ಯುರುಳಿದ್ಯೋ | ಎಲೆ ಮನವೇ |
ಬಲ್ಲತನದಲಿಗಿಡ ಕೊನೆಯ ನೇರಿ ಬಿದ್ದಂತೆ ೧
ದುರ್ಲಭ ನರದೇಹದಿ ಬಂದು | ಫುಲ್ಲನಾಭನ ನೆನೆಯದೆ |
ಕ್ಷುಲ್ಲಗುಣದಲಿ ನಾನಾ ಹೀನ ಯೋನಿಯ ಮುಖಕ ೨
ಅಗ್ರಜನ್ಮದಲಿ ಬಂದು ಸಂತರಾನುಗ್ರಹವ | ಪಡೆದುಕೊಳ್ಳದೆ |
ವ್ಯಗ್ರಬುದ್ಧಿಯಲಿ ಅತಿ ಶೂದ್ರ ನಡುವಳಿವಿಡಿದು ೩
ಹರಿಯೆಂಬ ನಂಟನಿರಲು ಬೇಕಾದ |
ವರಗಳನು ಪಡಕೊಳ್ಳವೆ |
ಶರೀರಾಭಿಮಾನಿ ಗೆಳೆತನ ಕಟ್ಟಿ ವಿಷಯಕ್ಕು ೪
ತಂದೆ ಮಹಿಪತಿ ಸ್ವಾಮಿಯಾ ಮೊರೆ ಹೊಕ್ಕು |
ಬಂದ ಸಾರ್ಥಕವ ಮಾಡು | ಇಂದಿನೆಚ್ಚರ ನಾಳೆ
ಸಂಧಿಸಿದು ನಿಜದಿಂದ ೫

೪೪೭
ಎಲ್ಲಿಹನೇ ಸಖಿ ಹೇಳಮ್ಮ | ಪ್ರಾಣ |
ದೊಲ್ಲಭ ಗುರು ಮಹಿಪತಿಯ ತೋರಮ್ಮ ಪ
ಮುಂಜಾನೆ ಯೇಳಲು ಸಕಲರು ಬಂದಘ |
ಭಂಜನ ಗೆರಗುವ ಅವಸರವಿಲ್ಲಾ |
ಕಂಜ ಮೊಗವ ತೊಳಿಯಲುದುಕ ಕಲಶಕಾ |
ಲಂಜಿಯೂಳಿಗದವರೆಡೆಯಾಟವಿಲ್ಲ ೧
ಎರಡನೆ ಜಾವಕ ಸ್ನಾನ ಸಂಧ್ಯಾದಿ |
ಗುರುಪೂಜೆಯಲಿ ರೂಪ ಗೋಚರವಿಲ್ಲಾ |
ಇದುರಿಗೆ ಎದುರಲಿ ಕುಳಿತು ಕೀರ್ತನೆಯಲಿ |
ಬರೆದು ಹೇಳುವ ಬೋಧ ನುಡಿಧ್ವನಿಯಲ್ಲಾ೨
ಇಂತು ಹಂಬಲಿಸುವ ಮನವೆಂಬ ಪ್ರಕೃತಿಗೆ |
ಅಂತರಂಗದಿ ತನ್ನ ಸುಳುಹನೆ ದೋರಿ |
ನಿಂತನು ಎತ್ತ ನೋಡಲು ತಾನೇ ತಾನಾಗಿ |
ಭ್ರಾಂತಿ ಬಿಡಿಸಿದನು ನಂದನ ಸ್ವಾಮಿ೩

೧೫೬
ಎಷ್ಟೆಂದು ಸಾರುವೆ ನಿಮ್ಮ ನಾಮ ಮಹಿಮಾ|
ಶ್ರೀ ಪರಬೊಮ್ಮಾ ಶಿಷ್ಟ ಜನರ ಸಂಭ್ರಮಾ ಪ
ಹರಿಹರಿಯಂದೊದರೆ ಮರೆದರಿದೊಮ್ಮಾ|
ಹರದ್ಹರ ದೋಹುದುಪಾಪ ಪುಣ್ಯವು ಮೋಪಾ|
ತಿರು ತಿರುಗಿ ಯಾತ್ರೆಗಳಾ ಮಾಡಿದ ಫಲಾ|
ಪರತರಾಸುಖ ನೀವುದು ರಕ್ಷಿಸುವುದು ೧
ರಮ ರಾಮಯಂದು ಕಾಮಿಕಾಮಿ ಅಂದು|
ನಾಮಾ ನೇಮದಿ ನುಡಿಯೆ ಗಿಳಿಯ ಕರಿಯೆ|
ಪ್ರೇಮ ಪ್ರೇಮಕರ ತಂದೆ ಗತಿ ನೀಡದೇ|
ಸೋಮ ಸೋಮಾರಿ ಕುಲೇಶ ಕೋಟಿ ಪ್ರಕಾಶಾ ೨
ಸುರ ಸುರಭಿಯ ಛಂದಾ ಪರಿ ಪರೀವದಾನಂದಾ|
ಕರೆ ಕರೆದುಂಡು ನಲಿದರು ನಾರದಾದ್ಯರು|
ತರಿಸಿ ತಾರಿಸುತಿಹರು ಸಾಧು ಸಂತರು|
ಗುರುವರ ಮಹಿಪತಿ ಜನು ಧನ್ಯನಾದನು ೩

೧೦೧
ಏ ನೀರೇ ತೋರೇ ರಂಗನಾ ಪ
ರಂಗನಾ ಸಕಲಾಂತ ರಂಗನಾ | ಕೋಮಲ ಸುಂದ |
ರಾಂಗನಾ ಭೂ ಭುಜ ಯದು ತುಂಗನಾ ೧
ಪಾಲನಾ ಜಗದಾ ಸಿರಿ ಲೋಲನಾ | ನಯನಸುವಿ |
ಶಾಲನಾ ಮೃಗ ಮದಾಂಕ ಬಾಲನಾ೨
ತಪನ ನಂತೆತೇಜಸ್ವರೂಪನಾ | ಪಾಂಡವರಸಂ
ಸ್ಥಾಪನಾ ಮಹಿಪತಿಜ ರಕ್ಷಿಪನಾ ೩

೪೨೮
ಏನ ಪೇಳುವೆನು ನಿನ್ನ ಮಹಿಮೆಯ
ಘನ ಶ್ರೀ ಗುರು ಅವಧೂತನೇ ಪ
ಅನಂತ ರೂಪವ ದೋರುವೆ ದತ್ತಾತ್ರೇಯ
ಸುರ ಮುನಿ ಸುತನೇಅ.ಪ
ಅಸುರನ ಕೊಂದು ವೇದವನುಳುಹಿದ ಶ್ರೀ ಮತ್ಸ್ಯನು
ನೀನೇ ಸ್ವಾಮಿ
ಅಸಮದ ಗಿರಿಯನು ಬೆನ್ನಿಲೆ ತಾಳಿದನಾ
ಕೂರ್ಮನು ನೀನೇ
ವಸುಧಿಯ ಭಯವ ನಿವಾರಣ ಮಾಡಿದನಾ
ವರಹನು ನೀನೇ
ಶಿಸುವಿನ ಗೋಸುಗ ಸ್ತಂಭದಿ ಮೂಡಿದ
ನರಸಿಂಹನು ನೀನೇ ೧
ಬಲಿಚಕ್ರನ ಮನಿ ಮುಂದಲಿ ಸುಳಿದು ನಿಂದ ವಾಮನ ನೀನೇ
ಕಲಿತನದಲಿ ಕ್ಷತ್ರೇರ ಸಂಹರಿಸಿದ ಪರಶುಧರನು ನೀನೇ
ಇಳೆಯ ಭಾರಕರಾದ ರಾವಣಾದಿಕರಾ ತರಿದ ರಾಮನು ನೀನೇ
ಫಲಗುಣನಾ ರಥ ಸಾರಥಿಯಾದಾ ಶ್ರೀ ಕೃಷ್ಣನು ನೀನೇ ೨
ತ್ರಿಪುರಕ ಹೋಗಿ ಸ್ತ್ರೀಯರ ವ್ರತವಳಿದನು ಬೌದ್ಧ
ರೂಪನು ನೀನೇ
ಚಪಲತರದ ಹಯವೇರಿ ಮೆರೆದನು ಕಲ್ಕ್ಯಾವತಾರ ನೀನೇ
ತಪನ ಶತಕೋಟಿ ಪ್ರಕಾಶವೆನಿಸುತಿಹ ಪರಬೊಮ್ಮನು ನೀನೇ
ಕೃಪೆಯಿಂದಲಿ ಸಲಹುವ ಮಹಿಪತಿ ನಂದನ ಪ್ರಭು ನೀನೇ ೩

೪೫೦
ಏನ ಹೇಳಲಿ ಮಾತವಾ | ಕೌತುಕದ |
ನಾನೊಂದು ಕನಸು ಕಂಡೆ ಕೇಳಕ್ಕಾ ಪ
ಪರದರಹು ಮಾಟವಾಗಿ | ಗುರುವೆನಿಸಿ |
ನರರಂತೆ ಬಂದ ನಲ್ಲೆ ಕೇಳಕ್ಕಾ |
ಶರಣ ಜನ ನೆರವಿಯೊಳಗ | ತತ್ವವನು |
ಪರಿಪರಿಲಿ ಬೋಧಿಸಿದನೇ ಕೇಳಕ್ಕಾ ೧
ಅಯ್ಯ ನಂಘ್ರಿಗೆ ಸಿರಸನು | ನಾ ಚಾಚಿ |
ಜೀಯ ಸಲಹೆನ್ನಯನಲು ಕೇಳಕ್ಕಾ
ಪ್ರಿಯದಿಂದಭಯನಿತ್ತಾ | ನಾ ನಿನ್ನಾ |
ಕೈಯ ಬಿಡೆನೆಂದಿಗೆಂದು ಕೇಳಕ್ಕಾ ೨
ತನ್ನ ದಯವಿಂತು ಬೀರಲು | ಮದಗಜವು |
ಕನ್ನಡಿಯೊಳಡಗಿದಂತೆ ಕೇಳಕ್ಕಾ |
ಎನ್ನೊಳಗ ನೋಡೆ | ವಿಸ್ಮಯದ |
ಲಿನ್ನು ಮನ ಬೆರಗಾಯಿತೆ ಕೇಳಕ್ಕಾ ೩

೧೬೨
ಏನಯ್ಯ ವಾರಿಜನಯನಾ | ಎನ್ನನುದ್ದರಿಸಲಾರೆಯಾ |
ದೀನಾನಾಥ ದಯಾಂಬುಧಿಯಂಬಾ |
ಶ್ರೀನಾಮದ ಬಿರುದಿನ ಮಹಾಮಹಿಮನಾ ಪ
ನಾಮ ಪ್ರತಾಪಕ ಶಣಸುವ ಪಾತಕ |
ತಾ ಮೊದಲಿಗೆ ಇಲ್ಲವೋ ಎನುತಾ |
ಆ ಮಹಾಶೃತಿ ಸಾರುತಲಿರೆ ದುಷ್ಕ್ರತ |
ನಾ ಮಾಡಿದ ಘನವಾಯಿತೇ ದೇವಾ೧
ಗಜಗಣಿಕಾ ಅಜಮಿಳನಹಲ್ಯಾ |
ವೃಜಗೋವಳ ವ್ಯಾಧರ ಮೊದಲು |
ಭಜನಿಯಿರಲಿ ಇರದಿರಲಿ ಸನಾತನ |
ನಿಜಪದದೋರಿದ ಪರಮ ಉದಾರಾ೨
ನೀನೇ ಗತಿ ಎಂದಾನತೆ ನಾದೆ |
ಇನ್ನೇನು ನೋಡುವಿ ಅಂತವಾ |
ನ್ಯೊನವಾರಿಸದೆವೆ ತಾರಿಸು ಪಾಮರ |
ವಣನವನನು ಗುರು ಮಹಿಪತಿ ಸ್ವಾಮಿ ೩

೫೨೬
ಏನಾದರೇನು ಗುರು ಪಡದನಕಾ |
ತಾನೊಲಿಯನು ಹರಿ ಕಾವನ ಜನಕಾ ಪ
ಪರಿಪರಿಸಾಧನದಲಿ ಬಳಲುವರೆ |
ಪರಸ ಮುಟ್ಟದೆ ಲೋಹವಾಗುವದೇ ಕನಕಾ೧
ಪತಿತೋದ್ಧಾರಗುರು ಸ್ವಸುಖದಾನಿ |
ವೃತ ತಪಸಿದ್ಧಿಯ ಬಹು ಸುಖ ಕ್ಷಣಿಕಾ೨
ಗುರು ಮಹಿಪತಿಪ್ರಭು ಜ್ಞಾನಾಂಜ ನಿಡದೇ |
ಧರೆಯೊಳಾಹನೇ ನರ ಚಿದ್ಘನ ಧನಿಕಾ ೩

೧೫೩
ಏನಾದರೇನು ಗುರುದಯ ಪಡದನಕಾ|
ತಾನೊಲಿಯನು ಹರಿ ಕಾವನ ಜನಕಾ ಪ
ಪರಿ ಪರಿ ಸಾಧನದಲಿ ಬಳಲುವರೇ|
ಪರಸ ಮುಟ್ಟದ ಲೋಹವಾಗುವದೇ ಕನಕಾ ೧
ಪತೀತೋದ್ದರ ಗುರು ಸ್ವಸುಖದಾನಿ|
ವೃತ ತಪದಿ ಸಿದ್ದಿಯ ಬಹ ಸುಖ ಕ್ಷಣಿಕಾ೨
ಗುರು ಮಹಿಪತಿ ಪ್ರಭು ಜ್ಞಾನಾಂಜನಿಡದೇ|
ಧರಿಯೊಳಾಹನೇ ನರ ಚಿದ್ಬನ ಧನಿಕಾ೩

೫೭೯
ಏನಾದರೇನು ಪ
ತನು ವೈರಾಗ್ಯದಲ್ಲಿಟ್ಟನವರತಾ |
ಅಣಿಮಾ ಸಿದ್ಧಿ ಅರತಾ |
ಘನಗುರು ಜ್ಞಾನವಾ ಮರತು ೧
ಓದಿಕಿಯಲಿ ನಿಪುಣಾದವನು ಯಲ್ಲಾ |
ವೇದಾರ್ಥ ಮಾಡಬಲ್ಲಾ
ಸಾಧುರಾ ಮಾರ್ಗವೆ ತಿಳಿಲಿಲ್ಲಾ ೨
ಗುರು ಮಹಿಪತಿ ಸುತ ಪ್ರಭುವಲಿಯದೆ |
ಪರಗತಿ ಸಾಧಿಸುವದೆ |
ಬರೆ ವ್ಯರ್ಥಡಂಭದಿ ಮೆರೆವುದೇ ೩

೫೨೯
ಏನಾರಿಸುವಿ ಹರಿಯೇ ಎನ್ನವಗುಣಾ
ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ
ಉದಯ ಉದ್ಯೋಗನೆನುವೆ ಮಧ್ಯಾಹ್ನಕ
ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು
ವದಗಿ ನಿದ್ರೆ ಯನುವೆ
ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ ೧
ನಿನ್ನ ಕಥೆಯಾ ಕೇಳದೇ ಮಂಗಳಂಗುಟ
ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ
ಚೆನ್ನಾಗಿ ಮಾಡದೇ
ಎನ್ನ ಕಾಯವು ಸತಿಸುತರಿಗೆ ಮಾರಿದೇನಾ ೨
ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ
ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ
ಅರಿವಿಗೆ ಮನನೀಲಿಸೀ ಹೊರೆವದು
ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ ೩

೧೦೩
ಏನು ಕಾರಣ ವೆನ್ನ ಮನೆಗಿಂದು ಬಾರನು |
ಮಾನಿನಿತಂದು ತೋರಮ್ಮಾ ರಂಗನ ಪ
ದೀನ ವತ್ಸಲನೆಂಬ ನಾನ್ನುಡಿ ಮಾತಿಗೆ |
ನಾನೆರೆ ಮರುಳಾದೆನಮ್ಮಾ ರಂಗಗೆ ೧
ಬಂಧು ಬಳಗದಾಶೆ ಇಂದು ಜರಿದು ತನ್ನ|
ಹೊಂದಿದೆ ಚರಣ ನೋಡಮ್ಮಾ ರಂಗನೆ ೨
ತಾನೆ ದಯಾಂಬುಧಿ ನಾನೆವೆ ಅಪರಾಧಿ |
ನ್ಯೂನಾರಿಸುವ – ರೇನಮ್ಮಾ ರಂಗನು ೩
ತನ್ನ ಹಂಬಲಿಸುವ ಕಣ್ಣಿಗೆ ಮೈದೋರಿ |
ಧನ್ಯಳ ಮಾಡನೇನಮ್ಮಾ ರಂಗನು ೪
ತಂದೆ ಮಹಿಪತಿ ನಂದನ ಸಾರಥಿ |
ಒಂದು ನೆರದಪುಣ್ಯಲೆಮ್ಮಾ ರಂಗನು೫

೧೬೩
ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ
ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ
ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ |
ದುರಿತ ಪರಿಹರಿಸಲಿಕೆ ಹಿರಣ್ಯ ಕಾಸುರನಿಲ್ಲ |
ಸುರರಿಗುಪಟಳವೇನು ಇಲ್ಲ ಸ್ತಂಭ |
ಬಿರಿದು ದೋರುವ ಅಹೋಬಲದ ಸ್ಥಳವಲ್ಲ ೧
ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ |
ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ |
ಸಿರಸಾಗ್ರ ಮಧ್ಯುದರ ವೆರಸೀ ಪರ್ಣ|
ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ೨
ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ |
ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ |
ಹರಗರುಡ ಗಣಪರೋಡಗೂಡಿ ನಲಿವ |
ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ೩

೨೮
ಏನು ಕೊಟ್ಟನೆ ಮಗಳಾ ಉದಾ |
ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ
ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ |
ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ |
ದೊತ್ತಿದ ಕೂದಲು ದುರ್ಜಟಿ ಯಾಗಲು |
ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ |
ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ |
ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ |
ಎತ್ತ ನೇವುವನು ಭೂತ ಗಣಾ |
ಸುತ್ತ ಲಿಟ್ಟುಕೊಂಡನು ಯೋಗಿ – ಕು |
ಲೋತ್ತ ಮನೆನಿಸಿದನು ಇಂಥ |
ಹತ್ತು ಭುಜವ ತಾಳಿ ದೈದು ಮೊರೆಯುಗವ ೧
ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ |
ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ |
ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ |
ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ |
ಮರುಳವೆ ತಿರುಗುವ ಮತ್ತೆ ಭೋಳಾದೇವ |
ತ್ವರಿತವ ಕೋಪದಯ ಮನಿಯೊಳು ಹಿಡಿದಿಹ |
ಸುರರಿಗೆ ವಲಿದಿಹನು ಬೇಡಿದ |
ವರಗಳನ್ನು ಕೊಡತಿಹನು ಬೆನ್ನಟ್ಟಿ |
ಬರೆ ದುಷ್ಟ ಓಡಿದನು ಶ್ರೀ ವಿಷ್ಣು |
ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ ೨
ಕರಿಚರ್ಮ ತಾಳಿದಾ ಕಾಡೊಳು ಸೇರಿದಾ |
ಉರಗ ಭೂಷಣನಿವ ಊಧ್ರ್ವರೇತಾದವ |
ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ |
ಕೊರಳಳು ರುಂಡಮಾಲಾ ಕರದೊಳು ಕಪಾಲಾ |
ಧರಿಸಿದ ನೀತನು ದೊರೆಯಲ್ಲದಾತನು |
ನೆರೆದುಣ – ಲುಡಿಲಿಲ್ಲಾ ನರಸುರ ರೊಳಗಲ್ಲಾ |
ಪರಕ ಪರೆನಿಸುವರು ಸ್ಮರಿಸಿದಾ ಆ
ವರಬದಿಯಲ್ಲಿ ಹನು | ಭವಸಾ | ಗರದಿಂದಾಟಿಸುವನು
ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ ೩

೫೩೦
ಏನು ನಿನ್ನ ಹಿತವಾ ಪಡೆದ್ಕೋ ಯಲೆ ಜೀವವೇ |
ಶ್ರೀನಾಥನಂಘ್ರಿ ನಂಬಿ ಸುಖಿಸಲಾರೆಯಾ ಪ
ಶ್ವಾನ ಸೂಕರಾದಾ ನಾನಾ ಯೋನಿಯಲ್ಲಿ ತೊಳಲಿ ಬಂದು |
ಮಾನವ ಜನ್ಮ ಪುಣ್ಯದಿಂದ ಬಂದುದಾ |
ಸಾನುರಾಗದಿಂದ ಸಂತರಾನುಗ್ರಹ ಪಡೆದು ಭವ |
ಕಾನನದ ಮಾರ್ಗವನು ಜರೆಯಲಾಪೆಯಾ ೧
ಕಾಮ ಕ್ರೋಧ ಲೋಭವೆಂಬಾ ತಾಮಸದ ಬಲಿಗೆ ಸಿಲುಕಿ |
ನೇಮಗೆಟ್ಟಾ ವ್ಯರ್ಥನಾದೆ ಹರಿಯ ನಾಮವಾ |
ಪ್ರೇಮದಿಂದ ಸ್ಮರಿಸಿ ಭಕ್ತಿ ಸೀಮೆಯೊಳು ಪಡೆದು ಮುಕ್ತಿ |
ಸಾಮರಾಜ್ಯ ಪದವಿಯನು ಸಾರಲಾಪೆಯಾ ೨
ಮರದು ತನ್ನ ನಿದ್ರೆಯೊಳು ಅರಸು ರಂಕನಾಗಿವಂತೆ |
ಶರೀರ ತಾನೆಂಬ ವಿದ್ಯಾವಳಿದು ಜಾಗಿಸೀ |
ಗುರು ಮಹಿಪತಿಸ್ವಾಮಿ ಕಿರಣವೆಲ್ಲರೊಳು ಕಂಡು |
ಶರಣರಾ ವೃತ್ತಿಯೊಳು ಬರಸಲಾಪೆಯಾ ೩

*
ಏನು ಪುಣ್ಯವ ಮಾಡಿದೆನೋ ಮುನ್ನೆ |
ಧನ್ಯಗೈಸಿದ ಗುರು ಮಹೀಪತಿ ತಾನು ಪ
ವಿಜಯಗ್ಹೇಳಿದ ಹರಿ ಗೀತೆಯಲಿ |
ಸುಜನ ಸಂತರೊಳು ದುರ್ಲಭನೆನಲಿ ೧
ಎನ್ನಯ ಸಿರದಲಿ ಅಭಯಕರವಿಟ್ಟು |
ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು ೨
ಕಣ್ಣುದೆರೆಸಿ ಭಕ್ತಿ ಮಾರ್ಗದಲಿ |
ಸಣ್ಣವನೆಂದು ಚಿದ್ಭನದೋರಿಸಲಿ ೩
ಇನ್ನೊಬ್ಬರಾಶೆ ಏತಕೆ ಎನಗಿನ್ನು |
ಎನ್ನ ಹಂಬಲಿಸಿದಾಶೆಯ ಕಾಮಧೇನು ೪
ತಂದೆ ತಾಯಿ ಗುರು ಬಂಧು ಬಳಗಾಗಿ |
ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ ೫

೫೩೧
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ |
ನೀನೆ ನಿಲಿಸೋ ಹರಿಯೇ ದೊರೆಯೆ ಪ
ಪರಮ ಪಾವನ ನಿನ್ನ ಚರಿತವ ಕೇಳದು |
ಬರಡ ಮಾತಿಗೆ ಪ್ರೇಮಾ ನೇಮಾ ೧
ಸಿರಿವರ ಮೂರ್ತಿಯನು ನೋಡಲೊಲ್ಲದು |
ಸತಿಯರ ರೂಪಕೆಳಸುವದು ಹರಿದು ೨
ಸಂತರ ಚರಣಕೆರಗಿ ಬಿಗಿದಪ್ಪದು |
ಭ್ರಾಂತ ಜನರೊಳಗೆ ಸಂಗಾ ೩
ಹರಿಯಂದೊದರಲು ನಾಲಿಗೆ ಬಾರದು |
ಪರನಿಂದೆ ಜಪಿಸುವದು ಸರಿದು ೪
ಸಿರಿ ಚರಣಾರ್ಪಿತ ತುಲಸಿಯ ಸೇರದು |
ಪರಿಮಳದಲಿ ಬೋಗಿಲಿ ಸಾಗಿ ೫
ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ |
ವಿರಿಸಿಯನ್ನನುಳಹೋ ಸಲಹೋ ೬

೫೮೦
ಏನು ಮಾಡಿದರೇನು ನಾನಾ ಸಾಧನೆಗಳನು |
ಜ್ಞಾನಿಗಳ ಕೂಡದನಕಾ ಮರುಳೇ ಪ
ಸಕಲ ಸಾಮಗ್ರಿಯನು ತಂದಿರಲೇನು ಪಾ |
ಕಕೆ ವಹ್ನಿ ಇಲ್ಲದನಕಾ ಮರುಳಾ ೧
ಪ್ರಕಟವಾಗಿರಲು ನಯನಾದಿಂದ್ರಿಯಗಳಿಗೆ ಐಂ |
ದ್ರಿಕ ಬೆಳಗವಿಲ್ಲದನಕಾ ಮರುಳೇ ೨
ಹಸನ ಭೂಮಿಯ ಮಾಡಿ ಬೀಜ ಉಡಿಗಟ್ಟಿರಲು |
ವಸೆದು ಮಳೆಯಾಗದನಕಾ ಮರುಳೇ ೩
ಪ್ರಕಟಿಸಿದ ಅನ್ನ ಭಕ್ಷದಿ ಶಾಖಗಳಿರಲು |
ಯಶವಾಜ್ಯ ಬಡಿಸದನಕಾ ಮರುಳೇ ೪
ತುಂಬಿ ಕುಳಿತೇನು ದೊಡ್ಡವರೆಲ್ಲಾ ನಾವಿಯೊಳು |
ಅಂಬಿಗನು ಬಾರದನಕಾ ಮರುಳೇ ೫
ನಂಬಿ ಗುರು ಮಹಿಪತಿಸುತಸ್ವಾಮಿ ಶ್ರೀಚರಣ |
ದಿಂಬವನು ಪಡೆಯದನಕಾ ಮರುಳೇ ೬

೫೮೨
ಏನು ಸವಿಯೋ ಮಾತಿನ್ನೇನು ಸವಿಯೋ |
ಶ್ರೀನಾಥನೆಚ್ಚರ ಪಡೆವಾ ಮಾನುಭಾವರ ಸ್ಥಿತಿ ಸಂಗತಿಯಾ ಪ
ನುಡಿಸವಿಯೋ ವೇದಾಂತದಾ |
ನಡಿಸವಿಯೋ ಸಿದ್ಧಾಂತದಾ |
ದೃಢ ಸವಿಯೋ ನೈರಾಶ್ಯದಾ |
ಕುಡ ಸವಿಯೋ ಉಪದೇಶವಾ ೧
ನೋಟ ಸವಿಯೋ ಸಮಭಾವದಾ |
ಧಾಟಿ ಸವಿಯೋ ಭಕ್ತಿ ಸುಖದಾ |
ಮಾಟ ಸವಿಯೋ ಹರಿ ಪ್ರೇಮದಾ |
ಊಟ ಸವಿಯೋ ನಾಮಾಮೃತದಾ ೨
ತ್ಯಾಗ ಸವಿಯೋ ವಿವೇಕದಾ |
ಭೋಗ ಸವಿಯೋ ನಿರ್ವಿಷಯದಾ |
ಶ್ರೀ ಗುರು ಮಹಿಪತಿ ಸ್ವಾಮಿ |
ಯೋಗ ಭೋಗವೆರಡಲ್ಲಿರುವಾ ೩

೪೫೩
ಏನು ಹೇಳಲಿ ಕೌತುಕವಾ | ಮಹಾ |
ದಾನಿ ಸದ್ಗುರು ಕೊಟ್ಟಾ ಸ್ವಾನಂದ ಸುಖವಾ ಪ
ಧರೆಯೊಳು ತನ್ನ ತಾಮರದಾ | ಪಾಮರನ |
ಕರದು ಘನದಯ ಮಳೆಗರದಾ |
ಸಿರದಿ ನೀಡಿದಾಭಯಕರದಾ | ಬೀಜಾ |
ಕ್ಷರವ ನುಡಿದು ಯನ್ನ ಕಿವಿಯೊಳುಸುರಿದಾ ೧
ನಯವಾದ ಭಕುತಿಯ ಒಲಿಸೀ | ಯನ್ನ |
ನಯನ ವೆರಡರಲಿ ಮುದ್ರಿಯನಿಲಿಸಿ |
ಲಯಲಕ್ಷಿಯ ನೆಲೆಗೊಳಿಸಿ | ಚಿನು |
ಮಯ ಪ್ರಭೆ ಕುರುಹನು ದೋರಿದ ಸುಳಿಸಿ೨
ನಾನಾ ಕಲ್ಪನೆಗಳು ಮರೆಸಿ | ನೆರೆ |
ಆನಿಗೆ ಮಾಂತ ಬೋಧ ವೆಚ್ಚರಿಸಿ |
ಶ್ರೀನಾಥ ನೆನುವಿನೊಳಿರಿಸಿ | ಹೊರೆ |
ದನು ಗುರು ಮಹಿಪತಿ ಕಂದನುದ್ಧರಿಸಿ೩

೫೩೨
ಏನು ಹೇಳಿದರೇನು ಪಾಮರ ಜ್ಞಾನಿಯಾಗಬಲ್ಲನೇ |
ದಾನವಾರಿಯ ನಂಬಲರಿಯದೆ ಹೀನ ವೃತ್ತಿಲಿ
ನಡೆವ ಮನುಜಗೆ ಪ
ಎತ್ತಿಗುತ್ತಮ ಲಿಂಗ ಮುದ್ರೆಯನ್ನೊತ್ತಿದ್ದರೆ ಬಸವನೆಂಬರು |
ಕತ್ತೆಯನು ಹಿಡಿ ತಂದು ವತ್ತಲು ಕತ್ತೆಯಲ್ಲದೆ ಬಸವನಪ್ಪುದೆ ೧
ಚಿನ್ನ ಬಿಳುಪಿರೆ ಪುಟವನಿಕ್ಕಲು ಬಣ್ಣ ಹೆಚ್ಚುತ ಬಾಹುದು |
ಇನ್ನು ಕರಗಿ ಹಿತ್ತಾಳೆ ನೋಡಲು ತನ್ನ ನಿಜವನ್ನು
ಬಿಟ್ಟುದೋರುದೆ ೨
ಸ್ವಾತಿ ಜಲಬಿಂದುದುರೆ ಸಿಂಪಿನೊಳಿಂತು ಮೌಕ್ತಿಕವಾಹುದು |
ಅಂತ ಘಲ್ಲಿಯೊಳಹದೆ ಜಗದೋಳು ತಾತ ಮಹಿಪತಿ
ಕಂದ ಸಾರಿದ ೩

೫೮೩
ಏನು ಹೇಳಿದರೇನು ಹೀನ ಮನಕ |
ತಾನು ಎಚ್ಚರ ಹಿಡಿಯ ದನಕಾ ಪ
ಬೂದಿಯೊಳಗ ಹೋಮ ಮಾಡಿದಂತೆ |
ಬೋಧಾನುಗೃಹ ಕಳವದು ಮರೆತಕೆ ೧
ಹರಿ ಕೀರ್ತನೆ ಇರಲಿಲ್ಲಾ |
ಬರಡು ಮಾತಿಗೆ ಸುಖ ಪಡುದಲ್ಲಾ ೨
ಒಮ್ಮೆಯಾದರೂ ಹರಿ ಹರಿಯಂದು |
ಝಮ್ಮೆನೆವೆ ಪಶ್ಚಾತಾಪ ಬಾರದೆಂದು ೩
ಗಾಳಿಯಂತೆ ಓಡಾಡುವದು ನೋಡಿ |
ಕಾಲೂರಿ ನಿಲ್ಲದು ಮತಿಗೇಡಿ ೪
ತಂದೆ ಮಹಿಪತಿ ದಯವಾಗದನಕ |
ಒಂದು ಹಿಡಿಯದು ಸ್ವಹಿತ ವಿವೇಕಾ ೫

೪೫೧
ಏನುತ್ತೀರ್ಣಾಗುವೆನು | ಗುರುವಿಗೆ ಪ
ಜನಿತು ಪನಿತನು ವಿದ್ಯದಾಯಕನು |
ಉಣಲುಡಲೀವನು ಭಯವ ನಿವಾರಿಪನು ೧
ತನ್ನ ತಾನೊಲಿದಾ ಕರುಣವಗರದಾ |
ಚಿನುಮಯ ಸುಖದಾ ದಾರಿಯ ದೋರಿಸಿದಾ ೨
ತಂದೆ ಮಹಿಪತಿ ಸ್ವಾನಂದ ಮೂರ್ತಿಕಂದನ ಸಾರ್ಥಿ ಆಗಿಹ ಘನಕೀರ್ತಿ ೩

೫೮೧
ಏನುಮಾಡಿದಿ ಬಂದು ಈ ನರದೇಹದಿ |
ಜ್ಞಾನ ಸಾಧನ ಹೇಳು ಪ
ನಾನಾರೆಂಬುದು ನಿಜ ಖೂನ ಮರೆದು ಭವ |
ಕಾನನವಿಡಿದೆಲ್ಲೋ ಅ.ಪ
ತನ್ನ ಭಜಿಸಲೆಂದು ಮಾನವ ಜನುಮದಿ |
ನಿನ್ನ ತಂದನಲ್ಲೋ ಪ್ರಾಣೀ |
ಪನ್ನಗಶಯನನ ಘನ್ನ ವಿಶ್ವಾಸದ |
ಲಿನ್ನು ವಿರಹಿತಾದೆಲ್ಲೋ ಪ್ರಾಣಿ ೧
ಕಂಡಪಥಕ ಹರಿದಂಡಲೆಯದೆನೆಲೆ |
ಗೊಂಡವರೊಳು ಕೂಡೋ ಪ್ರಾಣಿ |
ಖಂಡಿಸಿ ಸಂಶಯ ಪುಂಡರೀಕಾಕ್ಷನ |
ಕೊಂಡಾಡುತ ಬಾಳೋ ಪ್ರಾಣಿ ೨
ಹಿಂದಿನ ಮರವಿಗೆ ಇಂದಿಗೆ ನೀರೆರಿ |
ಮುಂದ ಸ್ವಹಿತ ನೋಡೋ ಪ್ರಾಣಿ |
ತಂದೆ ಮಹಿಪತಿ ನಂದನ ಪ್ರಭುದಯ |
ದಿಂದ ಸಾರ್ಥಕ ಮಾಡೋ ಪ್ರಾಣಿ ೩

೧೬೪
ಏನೆಂದು ಬಣ್ಣಿಪೆ ಶ್ರೀನಾಥ ನಿನ್ನಯ
ಆನಂದ ಮಹಿಮೆಗಳಾ ಸ್ವಾಮಿ
ಆ ನಾಕು ಶೃತಿಗಳು ಮೌನವ ಹಿಡಿದವು
ಅನಿರ್ವಚನೀಯಗಳಾ ಸ್ವಾಮಿ ೧
ವಾರಿಧಿ ಪಾತ್ರೆಯು ನೀರನೆ ಮಸಿ ಮಾಡಿ
ಧಾರುಣಿ ಹಲಗೆಯಲಿ ಸ್ವಾಮಿ
ಮೇರು ಲೇಖಣಿಯಿಂದ ಶಾರದೆ ಬರೆಯಲು
ಪಾರ ಗಾಣಲಿಲ್ಲೋ ಸ್ವಾಮಿ ೨
ಉರಗೇಂದ್ರ ಸಾಸಿರ ವೆರಡ ನಾಲಿಗೆಯಿಂದ
ತೆರವಿಲ್ಲ ಹೊಗಳಲಿಕ್ಕೇ ಸ್ವಾಮಿ
ಗುರುಮಹೀಪತಿ ಸುತ ಸಾರಥಿ ನಿನ್ನದಾ
ಸರಸ್ತುತಿರತಿ ನೀಡೋಸ್ವಾಮಿ ೩

೪೫೪
ಏನೆಂದು ಬಣ್ಣಿಸಲಿ ಗುರುರಾಯನಾ |
ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ
ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ |
ವರ ಮುನಿಯ ಕರ ಕಮಲದಲಿ ಜನಿಸೀ |
ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ |
ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ೧
ಆಧ್ಯಾತ್ಮ ಘನಸಾರ ವಿದ್ಯದಾಕಾರವೋ |
ಶುದ್ಧಜ್ಞಾನ ಕಲ್ಪ ದ್ರುಮವಿನಾ |
ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು |
ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ ೨
ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ |
ಮಸ್ತಕದ ಮ್ಯಾಲಭಯ ಹಸ್ತನೀಡೀ |
ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ |
ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ ೩
ಆರಿಗಳವಡದಿಹ ನೈರಾಸ್ಯ ವೃತ್ತಿಯಾ |
ತಾರದಲಿ ನಡೆದು ಮುನಿ ವೈರಾಗ್ಯದಾ |
ಸೇರಿ ಸಿರಿ ಸಂಪದವ ತೋರಿದನು ನೋಡಲಿಕೆ |
ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ೪
ಹೊಂದಿದ್ದವರ ಚಿದಾನಂದ ಸುಖಸಾಗರದಿ |
ನಿಂದು ಲೋಲ್ಯಾಡಿಸಿದ ನಂದಿಗಿಂದು |
ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು |
ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ೫


ಏನೆಂದು ಬಣ್ಣಿಸುವೆನೊ ನಾನು |
ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ
ಜಲದಿ ಮಥನದಿ ಅಮೃತ ಕಲಶ ಬರೆಕಂಡು ಅತಿ |
ಜಲಜಾಂಬಕನ ಪ್ರೇಮಾಂಜಲ ಉದರಲು |
ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ |
ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು ೧
ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ |
ಶಿರದಲಾಂತರು ಪರಮ ಹರುಷದಿಂದ |
ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ |
ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು ೨
ನೋಡಿದರೆ ದುರಿತ ಕುಲ ಓಡುವವು ತನುವ ನೀ
ಡಾಡಿ ಜಲನೀಡಿ ಕೊಂಡಾಡಿ ನಿಂದು |
ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ |
ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ ೩
ತುಲಸಿ ಭಕುತಿಲ್ಲದವ ಕಲಿವಂಶದನುಜನವ |
ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು |
ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು |
ತುಲಸಿ ಇಲ್ಲದ ಗೇಹ ಕಲುಷಾಲಯ ೪
ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ |
ಮೇಲುತುದಿಯಲಿ ವಿಷ್ಣು ಲೋಲಾಡುವಾ |
ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು |
ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ೫

೭೩೯
(ಅನುಭವ ಬಾರಾಮಾಸ )
ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ
ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ
ಕೂಡದೇ | ಹೋಗುತಿದೇ ದಿನ ವ್ಯರ್ಥ | ಮಾನವ ಜನು
ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು
ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ |
ದೊರಯದು ಪರಮಾರ್ಥ |
ಶ್ಲೋಕ ೧
ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು
ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ |
ಗುರು ಮಹಿಪತಿ ಸಾರಿದ ಬೋಧವಾ |
ಪದ
ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ |
ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ
ಸಾಧು ಸಂತರಾ | ಅವರ ಚರಣಾರವಿಂದಾ |
ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ |
ಅಹಂಕಾರದಲಿಂದಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ |
ಮೋಟ ಮರ ನಿಲುಲುಂದಾ |
ಶ್ಲೋಕ ೨
ಮೆರೆವ ಅವಯವದೊಳು ಉತ್ತು ಮಂಗದಿ ನಿಂದು |
ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು |
ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು
ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು |
ಪದ
ಭವ ಜನುಮಕ ಮಾಸ ಶೂನ್ಯವೇ ನೋಡು ಶ್ರವಣವೇ |
ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ
ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ |
ಹವಣದಿ ಸಂತರ ಮುಖದಿಂದಾ ಅನುಸರಣಿಂದಾ |
ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ
ವಾರ್ತರಿಯಾ | ಆಲಿಸಿದೇ ಸುಖ ಬಡುತಾ |
ಶ್ಲೋಕ ೩
ಮೆರೆವ ರತ್ನದ ಕುಂಡಲ ವಿಟ್ಟಿಹಾ | ಹರಿ ಕಥಾಮೃತ
ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ
ಮಂದನಾ | ಅರಿತು ಸಾರಿದ ಮಹಿಪತಿ ನಂದನಾ |
ಪದ
ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ |
ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ
ಸಾಕಾರದಾ | ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ
ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ
ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ |
ನೀಚ ವೃತ್ತಿಗೆ ಬಿದ್ದು |
ಶ್ಲೋಕ ೪
ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ
ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ |
ಇಂಗಿತ್ಹೇಳಿದ ಮಹಿಪತಿ ನಂದನಾ |
ಪದ
ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ |
ಎಚ್ಚರಿತು ಇದರೊಳಗೆ | ಸನ್ನುತ ಶ್ರೀಹರಿ ನಾಮವಾ
ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ
ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ
ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ |
ಆಡಿಬರಡಾದೆ ನೆಲಿಗೆ |
ಶ್ಲೋಕ ೫
ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ |
ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ |
ನರಾಧಮಾನೇ ಮಾವನ ಮುಖವೋ ನೃಪಮಾಯ
ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ
ಸ್ವಾಮಿ ಸುಖವೋ
ಪದ
ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ |
ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ
ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ
ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ |
ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು |
ಮೈಯ್ಯ ಮರ್ತೆನು ಚಲಿಸಿ
ಶ್ಲೋಕ ೬
ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು
ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು
ಸಾರಿದ ಮಹಿಪತಿ ನಂದನಾ |
ಪದ
ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ |
ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು
ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ
ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ |
ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು |
ನೂಕಿದನು ಇದರಿಂದಾ |
(ತನಗಿಂದ ದೀನದುರ್ಬಲರನು ಕಂಡು ಹೊಡೆವನು |
ಹೋಗಾಡಿದ ನಿಜಾನಂದ )
ಶ್ಲೋಕ ೭
ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ
ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ
ಮಂದನಾ | ಅರಿತು ಸಾರಿದ ಮಹಿಪತಿ ನಂದನಾ |
ಪದ
ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ
ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ
ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ
ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ
ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ |
ಶ್ಲೋಕ ೮
ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ
ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ
ಮಂದನಾ | ಅರಿತು ಸಾರಿದ ಮಹಿಪತಿ ನಂದನಾ
ಪದ
ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು |
ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ
ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ
ನಾನು ಕೊಳಲಿಲ್ಲಾ ಸುಖ ಬಡಲಿಲ್ಲಾ | ದೋಷದನ್ನವ
ಉಂಡು ವಡಲನು ನಾನು ಹೊರೆದನು ಬಯಸುತ
ಜಿವ್ಹ ಸ್ವಾದಾ
ಶ್ಲೋಕ ೯
ವಿದತವಾದ ರಸ್ನಾವ ಉಂಬನು | ಮುದದಿ ತತ್ವದ
ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ
ಮಂದನಾ | ಇದನು ಸಾರಿದ ಮಹಿಪತಿ ನಂದನಾ |
ಪದ
ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ |
ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ |
ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು |
ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ |
ನಾನಾ ಕೋಟಲಿಗಳನು | ಆನುಕರಿಸುತ ಬಲು ಬಳಲಿದ
ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು |
ಶ್ಲೋಕ ೧೦
ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ
ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ
ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ
ಪದ
ಘಳಿಸಲು ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ
ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ |
ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ
ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ |
ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ
ಕಾಯಿತು ಕುಂದಾ
ಶ್ಲೋಕ ೧೧
ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ
ಮಾಡಲು ಬಳುಕುವಾ | ಮನುಜಪಾದವೋ
ಪಾದವೋಮಂದನಾ | ಅನುವ ಸಾರಿದ
ಮಹಿಪತಿ ನಂದನಾ
ಪದ
ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ |
ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು
ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು
ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ
ನೋಡುವೇ | ಮತಿಗೆ ವದನಹೆಂದು ಸಿರಿಪ್ರಿಯಾ
ಇದು ನಿಶ್ಚಯಾ | ನಿಷ್ಟೆ ವಂದಿಲ್ಲದೆವೆ
ಶ್ಲೋಕ ೧೨
ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ |
ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ |
ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ |
ನಿಕಟವು ಗುರು ಮಹಿಪತಿ ಬೋಧದ ಸೊಲ್ಲಾ
ಇಂತು ಏಕಾರ್ತಿಕಾ ಮೀಸಲು ಮೊರೆಯಿಡಲು |
ಗುರು ದಯವ ಮಾಡಿ |
ಪಿಂತಿನ ತಪ್ಪವ ನೋಡದೇ ತಡ ಮಾಡದೇ |
ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ
ಸುಸ್ಥಿರಾ | ಏನು ಪುಣ್ಯವೋ ನೋಡಿ | ಶಾಂತ ಮೂರುತಿ
ಗುರು ಮಹಿಪತಿ ಸುತ ಸಾರಥಿ | ನಾಮ ಬಿಡದೆ ಕೊಂಡಾಡಿ

೫೧೨
ಏನೆಂದುಸುರುವೆ ಈ ನವರಾತ್ರಿಯಾ |
ಸ್ವಾನಂದ ಸುಖಮಯ ಮಹಿಪತಿ ಚರ್ಯಾ ಪ
ಹತ್ತೆಂಟು ದಿನವಿರೆ ಹರುಷದಲಹರೆ |
ಮೊತ್ತ ಜನರು ಕೂಡಿ
ಮನೆಯ ಶೃಂಗಾರ ಮಾಡಿ |
ಭಿತ್ತಿ ಬಾಗಿಲುಗಳ ಬಣ್ಣದಿ ನಿಚ್ಚಳ |
ನೆತ್ತಿ ಮಂಗಳ ಕರವಾಗಿಹ ವಿಸ್ತಾರ |
ತೆತ್ತ ಮಾಡಳರವಿ ತಳಿಲು ತೋರಣದಿ |
ಮತ್ತೆ ದೇವಾಲಯ ಮಂಡಿತ ಜಗಲಿಯಾ |
ಸುತ್ತ ಕದಳೀ ಕಂಭದಿ ಮ್ಯಾಲಿಯ | ಉತ್ತಮ ಮಂಟಪದಿ
ತರಗು ತೆಂಗು | ಉತ್ತತ್ತೀ ಬಹು ಓಲವೀ ಕಟ್ಟಿಹ |
ವತ್ತೊತ್ತಿ ಥರ ಥರದಿ ನಮ್ಮಯ್ಯಾನಾ ೧
ವಡನೆ ವೆ ತಂದಿಹ ವದಗಿ ಸಾಮಗ್ರಿಯಾ |
ಕಡಲೆ ತಂಡುಲ
ಗೋದಿ ಕಟ್ಟಿಲ್ಲ ಧಾನ್ಯದೀ |
ಗುಡ ಶರ್ಕರವ ಮತ್ತೆ ಗೂಡಿಹ ಸಮಸ್ತ |
ಕೊಡ ಕೊಡ ಘೃತ ತೈಲ ಕುಂಭಿನಿ ಯೊಳಗುಳ್ಳ |
ವಡವೆಯ ತುಂಬಿಹ
ಉಗ್ರಾಣದಾಲಯಾ | ಸಡಗರದಿಂದಲಿ
ಸ್ಟೈಪಾಕ ಮಾಡಲಿ | ತಡೆಯದೆ
ಕೊಡುತಿಹರು ಓಡ್ಯಾಡಲು | ಅಡಿಗಡಿಗೊಬ್ಬೊಬ್ಬರು ಆಜ್ಯವ |
ವಡಿಯನ ತುಸುಮೀರರು ಸೇವೆಗೆ |
ಧೃಡ ಭಕ್ತಿಯುಳ್ಳವರು ನಮ್ಮಯ್ಯನಾ ೨
ನಾಕುದಿಕ್ಕಿನವರು ನಂಬಿದ ಶರಣರು |
ಏಕೋ ಭಾವನೆಯಲಿ ಯಾತ್ರೆಯ
ನೋಡಲಿ | ಸು ಕಾಮ್ಯ ಯುಕ್ತರು
ಸದ್ಭೋಧಾಸಕ್ತರು | ಬೇಕಾದಿ
ದೂರಿಂದ ಬಹಳ ಪಯಣದಿಂದ |
ಸಾಕುವದೇವ ದೇವರಾ ಸಾರಿ
ಮಹಾದ್ವಾರಾ | ಈ ಕಣ್ಣಲಿ ಕಂಡು ಎಲ್ಲ ಸುಜನ ವಿಂಡು |
ತಾ ಕೈಯ್ಯ ಮುಗಿಯುತಲೀ ಮನವು |
ಹಾಕಿ ಸಾಷ್ಟಾಂಗದಲಿ
ಭಕ್ತಿ ವಿವೇಕದಿ ಪಾಡುತ ಈ ಪರಿ |
ಲೋಕ ನೆರೆಯುತಿರಲಿ ನಮ್ಮಯ್ಯನಾ ೩
ಉದಯದಲೇಳುತ ವರದ ಸದ್ಗುರು ನಾಥಾ |
ಮೊದಲಿನ ದಿವಸದಿ
ಮಂಗಳ ಸ್ನಾನದಿ | ವಿದಿತ
ಸಂಧ್ಯಾವಂದನಜಪಾನುಷ್ಠಾನಾ |
ಮುದದಿಂದ ಮಾಡಿದ ಮ್ಯಾಲ ಪೂಜೆಯದ |
ವದಗಿ ದೇವ ಪಾಟವಿಟ್ಟು ಸಾದರ ನೀಟ |
ವಿದಿತ ಬಂಗಾರ ವೆಳಿಯಲಿ ಬರೆದ ಚದುರ |
ಚಿತ್ರಾಸನಲಿ ಸುತ್ತ ಹಚ್ಚಿದ ಚಿನ್ನ ಪೂವಿನಲಿ
ಝಗ ಝಗ ಅದು
ಹೊಳೆಯುತಿರಲಿರಲಿ ಶಿಖರ ಸಾಲದಲಿ
ನಕ್ಷತ್ರ ಮಾಲಿ ನಮ್ಮಯ್ಯನಾ ೪
ನಡವಿಟ್ಟ ರೌಪ್ಯದ ನೆಲೆ ಸಿಂಹ ಮುಖದ |
ಪಡದಿಯ ಸೋಂಪಿಲಿ
ಪೀಠ ಪ್ರಭಾವಳಿ | ಬಿಡದೆ ಮೆರೆವ ಛತ್ರ ಬಹು
ಬಹು ವಿಚಿತ್ರ |
ಯಡ ಬಲ ಪತಾಕೆ ಯಸಳದ ಕೆತ್ತಿಕೆ |
ವಡನಿಹ ಚಾಮರ ವಿಲಸಿತ ಮನೋಹರ |
ಸಡಗರದಲಿ ದೇವ ಸಂಪುಟ ಮೆರೆವಾ|
ಇಡಿದಿರೆ ಕಾಂತಿಯಲಿ ಅದರೊಳು |
ಪೊಡವೀಶ ಕುಳಿತಿರಲಿ ಶ್ರೀಹರಿ |
ಅಡಿಗಳ ಪೂಜಿಸಲಿ ಸಂಭ್ರಮ |
ವಡೆಯನ ಏನೆಂದ್ಹೇಳಲಿ ನಮ್ಮಯ್ಯಾನಾ ೫
ಇನ್ನು ತಂತ್ರಸಾರ ಈ ಪೂಜೆವಿಸ್ತಾರ |
ಸನ್ನುತ ಗಂಗೆಯ ಸಲಿಲವು
ತುಂಬಿಹ | ಸನ್ನಿಧ ಕಲಶವು ಸುಂದರ ಶಂಖವು |
ಮುನ್ನ ಪಂಚಾಮೃತ
ಮಾಡುತ ಅರ್ಪಿತ | ಧನ್ಯ ಶುದ್ಧೋದಕ
ದಾಗಲು ಅಭಿಷೇಕ |
ಮನ್ನಡೆ ವಸ್ತ್ರವ ಮಂಡಿಸಿ ಹರುಷದಿ |
ಪನ್ನೀರವನು ದಳದಾ
ಕೇಶರ | ಚೆನ್ನ ಕಸ್ತೂರಿ ವೆರೆದಾ
ಸುಗಂಧವನ್ನು ಅರ್ಪಿಸಿ ಚಲ್ವದಾ
ಸಾಲಾದಾ | ಘನ್ನ ದೀಪದೆಡೆ ಬಲದಾ ನಮ್ಮಯ್ಯನಾ ೬
ಮೆರೆವ ತುಳಿಸಿ ಜಾಜಿ ಮರಗು ಮಲ್ಲಿಗೆ ಸೂಜಿ |
ಪರಿಮಳ ದಿಂಡಿಗೆ
ಪಾಡಾದಾ ಸಂಪಿಗೆ | ಪರಿ ಪರಿ
ಪುಷ್ಪದಾ ಪಸರಿಕೆ ಬಹುಳವಾ |
ಸರಸ ದುಂಡಿನ ಹಾರಾ ಸರಮಾಲೆ ವಿಸ್ತಾರಾ |
ತರುವಾರಾ ಧೂ
ಪಾರತಿಯ ದಶಾಂಗದ ಸಾರಾ | ಇರುವುದು
ಬಲವೆಡಾ ಊದುಬತ್ತಿಯ ಗಿಡಾ |
ನೆರೆ ಏಕಾರತಿಯಾಗಲಿ ನೈವೇದ್ಯ ಹರಿವಾಣವನು | ಬರಲಿ
ಎಲ್ಲರೂ ಹೊರಗೆ ತಾನಿಂದರಲಿ ಉಣುಸುದು |
ಹರಿಗೆ ಪ್ರತ್ಯಕ್ಷದಲೀ ನಮ್ಮಯ್ಯನಾ ೭
ಸ್ವಾದೋಕದಿ ನಾಗ ವಲ್ಲಿ ದಳವ ಯೋಗ್ಯ |
ವಾದಾ ಪೂಗೀ ಫಲಾ
ವಿನಿತಿತ್ತು ತಾಂಬೋಲಾ |
ಸಾದರ ಹರಿವಾಣ ಆರತಿ ಪೂರಣಾ |
ಆನಿ ಪದಗಳಿಂದ ಅರ್ತು ಬಳಲಿ |
ಛಂದ ಭೇದಿಸಿ ಘನತಾಳಾ ಬಲು
ಧ್ವನಿ ಕಂಸಾಳಾ | ನಾದ ಜಾಂಗಟೆ
ಶಂಖ ನಾಮ ಘೋಷದಿತಿಂತ |
ರಾದವರು ಪಾಡಲೀ ನೀರಾಂಜನ | ಸಾದಿಪ ಸಮಯದಲಿ
ವೈಕುಂಠ | ಮೇದಿನಿಯೊಳು ತೋರುತಲಿ ಪಾರಣೆ | ಆದವು.
ಕಣ್ಣಿನಲಿ ನಮ್ಮಯ್ಯನಾ ೮
ತರುವಾಯಾ ಮಹಾಗುರು ತಂದಿಗೆ ಶರಣರು |
ಮೆರೆವ ಷೋಡಷದಿಂದ
ಮಾಡಿ ಪೂಜೆಯ ಛಂದ |
ಹರಿತೀರ್ಥಕೊಳ್ಳಲು ಹರುಷದಿ ಜನಗಳು |
ಪೊರಗೆ ಸತ್ಕಾರವ ಪಡೆದಿಹ ಭಗದೇವ
ಕರುವೇದ ಘೋಷ ಮಾಡು
ತಾ ಭಿಕ್ಷಾವಾ | ನೆರೆ ಸಕಲ ಯಡೆ
ಮಾಡಿ ಕುಳ್ಳಿರೆ | ಪರಮಾನ್ನ
ಭಕ್ಷಗಳು ಶಾಲ್ಯೋದನ |
ಪರಿ ಪರಿ ಶಾಕಗಳು ಸೂಪಘೃತ |
ನೆರೆ ಪಾಲ್ಮೊಸರುಗಳು ಅಲ್ಲಿದಲ್ಲಿ |
ಗಿರಿಸಿಹ ದೀಪಗಳು ನಮ್ಮಯ್ಯನಾ ೯
ಬೇಡೂ ಪದಾರ್ಥವಾ ಬಡೆಸುವರು ಬಹಳವ |
ಪ್ರೌಢದಿ ಹರಿ ನಾಮಾ
ಪ್ರತಿ ಶ್ಲೋಕಗಳು ನೇಮಾ |
ಆಡಲೇನದು ತೃಪ್ತಿ ಆಯಿತು ಉಂಡು |
ರೂಢಿಗೆ ತಾಂಬೂಲ ರನ್ನ ದಕ್ಷಿಣೆಗಳು |
ನೀಡೆ ವೇದೋಕ್ತದ ನುಡಿ
ಆಶೀರ್ವಾದ | ಮಾಡುತ ಬ್ರಾಹ್ಮರು ಮನೆಗೆ ಹೋಗುವರು |
ಪಾಡುವ ಹರಿದಾಸರು ದಂಡೆಗೆ ತಾಳ |
ಗಾಡ ಮದ್ದಲೆ ಸದರು
ಸಭೆಯೊಳುಗೂಡಿ | ಒಡೆಯನಿದಿರು ಹರಿಯ ಕೊಂಡಾಡಿ
ಆರತಿಯತ್ತೀರ ನಮ್ಮಯ್ಯನಾ ೧೦
ಒಂಬತ್ತು ದಿನದಿ ಒಂದೇ ಈ ಪರಿಯಲಿ |
ಮುಂಚಿಲಿ ನಡೆಯಲು
ಮಹಾನೌಮಿ ಬರಲು | ಅಂಬಾ ಸರಸ್ವತಿ
ಅರ್ಚನೆಯಾ ಅರ್ತಿ |
ದೆಂಬುದು ವಿಜಯಾ ದಶಮಿಯಾ ಉಚ್ರಾಯಾ |
ಸಂಭ್ರಮದಲಿ ನೋಡಿ
ಸದ್ಗತಿ ಸೂರ್ಯಾಡಿ | ಕೊಂಬರು ಸ್ವಸ್ಥಲ ಕುರಿತು ಆಜ್ಞೆಗಳ |
ಇಂದಿಲ್ಲ ಆನಂದದೀ ಈ ಮಹಿ ಮಾಡಂಬರೆನ್ನ ಮುಖದಿ
ನುಡಿಸಿದ | ಶಂಭು ಮಹಿಪತಿ ದಯದಿ ನಂದನ | ಬೊಂಬಿ
ಸೂತ್ರ ದಂದದಿ ನಮ್ಮಯ್ಯನಾ ೧೧

೫೮೪
ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು |
ಮನವ ವುನ್ಮನಮಾಡೀ | ಘನಸುಖದೊಳುಕೂಡಿ |
ಆನಂದದೊಳಗಿಹನು ಪ
ಬಹುಮಾತವನಾಡಾ | ಮೌನವಹಿಡಿದುಕೂಡಾ |
ಸಹಜದಿ ನುಡಿವಂದಾ | ನಾಡಿದ ರದರಿಂದಾ |
ಸ್ವಹಿತದ ಸುಖನೋಡಾ ೧
ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ |
ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ |
ಅರಿಸುಖ ಸಮವೆಲ್ಲಾ ೨
ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ
ಸಾಧುರ ವೇಷದಿ | ಉದರವ ಹೊರೆಯುತಾ |
ಬೋಧಿಸುವದಲ್ಲಾ ೩
ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು |
ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ |
ಧ್ಯಾಸದಿ ಬೆರೆತಿಹನು ೪

೧೬೬
ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ
ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ
ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು |
ನೆಲವಿನ ಅಡಕಲ ನೋಡಿ ಅದು |
ನಿಲಕದಲಿರೆ ಕೈಗೂಡಿ ಕಡ |
ಗೋಲಿಲಿ ಯಜ್ಞ ಮಾಡೀ |
ಗೆಳೆಯರ್ವೆರ ಸೈದ ಬಲುಸೂರ್ಯಾಡಿ |
ಸಿಲುಕದ ಲ್ಹೋಗುವ ಪೋಡಿ | ೧
ಇಕ್ಕಿದ ಕದಗಳು ಇಕ್ಕಿರಬೇಕು |
ಫಕ್ಕನೆ ಮನೆಯೊಳು ಸುಳಿದು |
ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು
ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು೨
ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು
ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು |
ಶ್ರೀನಿಧಿ ಗುರುಮಹಿಪತಿ ಪ್ರಭುವಿನ |
ಅನುಮಾನದಲೇ ದೂರುವುದು೩

ಏನೋ ಪ್ರಾಣಿ ಪ
೫೮೫
ಏನೋ ಪ್ರಾಣಿ ಮುಂದಗಣೀ | ಹೀನಗುಣಗಳ ಶ್ರೇಣಿ |
ತಾ ನಳಿಯಂದದಿ ಮಾಣಿ ನೀ ನುಡಿನಮ್ರತವಾಣಿ |
ಸ್ವಾನಂದ ಜನ್ಮಕ ಬಂದೆನಿಸಿ ಕೊಂಬುದು |
ವಿಹಿದುತ್ತಮ ಜ್ಞಾನಿ ೧
ಕೇಳು ಕೇಳಿಧಾಂಗ ಬಲು ಹೇಳಿದಾಂಗ ಮೇಳು |
ತಿಳಿಗುರು ಭಕ್ತಿಯ ಮೇಲು ಬಲು ವಿವೇಕವ ತಾಳು |
ಛಲದ ಮದಮತ್ಸರ ಶೀಳು ತಳಿಮನ ದುರ್ವತ್ತಿಗಳು |
ಇಳಯೊಳು ಶ್ರೀ ಗುರುಪಾದಕ ನಂಬಿ |
ವಿಡಿಯೋ ಪಂಥವಾ ಸೇರು ೨
ಸಾರಾ ಸಾರದ ವಿಚಾರ ಅರಿಯೋ ಪಾರಾವಾರಾ |
ಜರಿ ಹಂ ಮಮತೆಯ ದೂರಾ ಸರಿ ನಗಿ ಆರಿ ಮಿತ್ರರಾ |
ಮರೆಯೋ ನಿಂದೆಯ ಪರರಾ ತೋರದೇ ವಾಗ್ವಿಸ್ತಾರಾ |
ತಾರಿಸುವನು ಈ ಪರಿ ನುಡಿಯಲಿ |
ಮಹಿಪತಿಸುತ ಪ್ರಭು ಉದಾರಾ ೩


ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ |
ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ
ಮೊರೆವದೊಂದೇಗಾಲಿ | ಪರಿವಹರಿವೇಗಮಂ |
ಜರಿದು ಯೇಳು ಕುದುರೆಂಗಳದರಾ |
ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ |
ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ ೧
ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು |
ಪರಿಯೆ ನಕ್ಷತ್ರಗಳು ಗಗನದೊಳಗ ||
ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ |
ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು ೨
ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ |
ಕೂಡುತಿವೆ ಚಕ್ರವಾಕಂಗಳೀಗ |
ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ |
ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು ೩


ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ |
ಪಾಲಿಸುವ ಮೂಲೋಕ ಪರಮಾತ್ಮನಾ ಪ
ಮೂರೊಂದು ಪದರದ ಚೀಲದೊಳು ಥಳಥಳಸಿ
ದೋರುತಿಹ ರತ್ನ ಪರಿಚಿದ್ರೂಪನಾ |
ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ |
ಧೀರಯೋಗಿಯ ಕಂಗಳಾನಂದನ ೧
ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ |
ಸಾರ ವೃಕ್ಷವ ತ್ರಿಗುಣಮಯದಿಂದಲಿ ||
ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ |
ತೋರಿ ತೋರದಲಿಪ್ಪ ನಿರ್ಲಿಪ್ತನಾ೨
ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ |
ಆಡಿಸುವ ಕರಚರಣ ನುಡಿನುಡಿಸುವ |
ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ |
ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ೩

ಜಗನ್ನಾಥ ದಾಸರು ಹಂಸನಾಮಕ

ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ |
ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ
ಗುರು ಕರುಣೋದಯದಲ್ಲಿ ಬೋಧ ಸುರ್ಯನು ಬರಲಿ |
ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ ೧
ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ |
ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ ೨
ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ |
ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ ೩
ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ |
ಸುಮತಿ ಶೃದ್ಧಾಪರಮಾ | ಇದೋ ಬಂದರು
ಜಾಂಬವ ಹನುಮಾ೪
ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು |
ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು ೫

೭೩೫
ಒಳ್ಳಾದು ಬರುತಾದೆ ಒಳ್ಳಾದು ಬರುತಾದೆ |
ಒಳ್ಳಾದು ಬರುತಾದೆ ಕೈಯ್ಯದೋರೆ |
ಗೋಪೆಮ್ಮ ಕೈಯ ನೋಡೇನು ಪ
ಹೆತ್ತವಸರ ಬುಟ್ಟಿ ಹೊತ್ತದಿವ್ಯಂಬರ ಕೊರವಿ |
ಉತ್ತಮದಾ ನುಡಿಗಳನು ಸತ್ಯಾಪುರದಿ ಹೇಳಬಂದೆ |
ಕೈಯ್ಯದೋರೆ ೧
ಮಥುರಾನಗರದಲ್ಲಿ ಮದನಮೋಹನಾ ಜನಿಸಿ |
ಸದೆದು ಕಂಸಾದ್ಯರೆಲ್ಲಾ | ವದಗಿ ಹರಿವಾ ಕರಿಯಾ ನಿಮ್ಮ |
ಕೈಯ್ಯದೋರೆ ೨
ವರ ಉಗ್ರಶೇನನಿಗೆ ಅರಸು ತನವಾ ಕೊಟ್ಟು |
ಪರಿ ಪರಿ ಕರುಣೆಯಿಂದಾ | ಶರಣರನು ಹೊರೆವ
ನಮ್ಮಾ ಕೈಯ್ಯದೋರೆ ೩
ಮೌನಾಕಾ ವಲಿಗೆ ಹಾಕಿ | ತಾನು ಗೋಕುಲದಿ ಬೆಳೆದು
ನಾನಾ ಉಪಾಯದಿ ಬಂದಾ | ದಾನವರ ಗೆದ್ದಾ ನಮ್ಮ |
ಕೈಯ್ಯದೋರೆ ೪
ಸಹಕಾರಿ ಸುರರಿಗಾಗಿ | ಮಹಿ ಭಾರ ನಿಳುಹಲಾಗಿ |
ಮಹಿಪತಿ ಸುತಪ್ರಭು |
ಮಹಿಮೆ ದೋರ ಬಂದಾನಮ್ಮ | ಕೈಯ್ಯದೋರೆ ೫

೪೫೫
ಓಂ ನಮೋ ಮಹೀಪತಿ ಸದಾನಂದ ಗುರುಮೂರ್ತಿ |
ಸನ್ನುತ ನಿಮ್ಮ ಖ್ಯಾತಿ ಪೊಗಳಲಾಪೆನೆ ಕೀರ್ತಿ ಪ
ತನ್ನ ತಾ ಮರೆದವರಾ | ನೀನು ಕೊಟ್ಟು ಎಚ್ಚರಾ |
ಮುನ್ನಿ ನಂದದಿ ಮಾಡಿ | ಓಡಿಸಿದೇ ಭವದೂರಾ ೧
ಸಹಜ ಬೀರುವ ವಚನಾ | ಅದೇ ಉಪದೇಶ ಜ್ಞಾನಾ|
ಇಹ ಪರಕ ನಿಧಾನಾ | ಮಾಡುವದು ಸಾವಧಾನಾ೨
ವೇದ ಸಿದ್ಧಾಂತದಲ್ಲಿ | ರಾಜಯೋಗ ಮನೆಯಲ್ಲಿ |
ಬೋಧಿಸುವ ವಸ್ತು ನೀನೇ | ಸರಿಗಾಣೆ ನಾನೆಲ್ಲಿ೩
ಏನು ಪುಣ್ಯವೋ ಎನ್ನಾ | ಅದೇ ಬಾಲಕ ನಿನ್ನಾ |
ತಾನೇನ ಸಾಧುವೆನಗ | ಇರಲು ನಿಮ್ಮ ದಯಾಘನಾ ೪
ದಾಸರಾ ದಾಸನೆಂದು | ಇನ್ನು ನೋಡದೆವೆ ಕುಂದು |
ಭಾಸಿ ಪಾಲಿಸು ಕೃಷ್ಣಗ ಎಂದೂ | ಕೈಯ್ಯಾ ಬಿಡೆನೆಂದು೫

೧೬೭
ಓಂ ನಮೋ ರಾಘವೇಂದ್ರಾ ಪ
ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ
ನಿನ್ನ ಭಕ್ತಜನರೆಂಬಾ ವಾರಿಧಿ ಪೂರ್ಣಚಂದ್ರಾ೧
ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ
ಈರೀತಿ ಸ್ರ‍ಮತಿಸಲಿಕೆ ಕೊಡುವಿ ವೈಕುಂಠ ಧಾಮಾ೨
ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ
ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ೩
ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ
ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ ೪
ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ
ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ ೫


ಓಂ ನಮೋ ಸಕಲ ಮಂಗಲದಾಯಕ |ಘನ್ನ ಮಹಿಮ ಶ್ರೀ ಗಣನಾಯಕ |ನಿನ್ನ ಕೀರ್ತಿ ಪಾಠವ ಭಕ್ತರ |ಇನ್ನು ಮಾಡೋ ನಿರ್ವಿಘ್ನದಿ ಮುಕ್ತರ ೧
ಛಂದÀದಮೃತ ಶಾರದೆ ವಾಣಿ |ವಂದಿತಾಖಿಳ ನಿರ್ಜರ ವಾಣಿ |ಬಂದು ಸನ್ಮತಿ ನೀಡುತ ಶಾರದಾ |ಇಂದು ವದನೆ ರಕ್ಷಿಸು ಶಾರದಾ ೨
ಕಪಿಯ ವೇಷದಿ ಬಂದ ಪ್ರಭಂಜನಾ |ವಪು ಮಾಡಿದ ದೈತ್ಯರ ಭಂಜನಾ |ವಿಪುಳ ಮಹಿಮ ನಿರ್ಜರ ರಂಜನಾ |ಕೃಪೆ ಯಲಿ ರಕ್ಷಿಸು ದೋರಿ ನಿರಂಜನಾ ೩
ಸಚ್ಚಿದಾನಂದಾ ವಿಗೃಹ ಮೂರುತಿ |ಅಚ್ಯುತಾನಂತ ಮಂಗಲ ಕೀರುತಿ |ಎಚ್ಚರಿ ಸೆನಗೆ ಭಕ್ತಿಯ ಸ್ಪಾದವಾ |ನಿಚ್ಚ ರಕ್ಷಿಸು ತೋರುತ ಪಾದವಾ ೪
ಜ್ಞಾನದಂಜನಾ ಕಣ್ಣಿಗೆ ಸೇರಿಸಿ |ಈ ನಿಧಾನದ ಚಿನ್ಮಯ ದೋರಿಸಿ |ಸ್ವಾನುಭವದಿ ಕೂಡಿಸು ಸಂಪತಿ |ನೀನೇ ರಕ್ಷಿಸು ಸದ್ಗುರು ಮಹಿಪತಿ

೮೪
ಓಎನ್ನಭಾರದೆ ಹರಿಯೆ ನಾ ಕರೆದರೆ |
ಓ ಎನ್ನಬಾರದೇ ಹರಿಯೆ |
ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ|
ಪಾಯವನರಿಯದ ಬಾಲಕ ಕರೆದರೆ ಪ
ಹಾಲವ ಬೇಡುವ ಮೊರೆಯಿಡಲುಪಮನ್ಯು ಆ |
ಬಾಲಗ ಧ್ವನಿ ದೋರಿದಂತೆ |
ಚಾಲವರಿದು ಸರೋವರದಲಿ ಕರೆದ ಶುಂ|
ಡಾಲಗೆ ಧ್ವನಿ ದೋರದಂತೆ |
ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ|
ಚಾಲಿಗೆ ಧ್ವನಿ ದೋರಿದಂತೆ |
ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ |
ಜಾಲಕ ಮೈದೋರಿ ಧ್ವನಿ ದೋರಿದಂತೀಗ ೧
ಜಾವಜಾವಕ ನಿನ್ನ ಕರೆದ ಯಶೋದೆಗೆ |
ಆವಾಗ ಧ್ವನಿದೋರಿದಂತೆ |
ಗೋವ ಮೇಯಿಸಿ ತೆರಳಲು ಗೊಲ್ಲರೊದರುವ
ಭಾವಕ ಧ್ವನಿದೋರಿದಂತೆ |
ದೇವ ನೀಮರಿಯಾಗೆ ಹುಂಕರಿಸ್ಸೊದರಲು |
ಆವಿಗೆ ಧನಿ ದೋರಿದಂತೆ |
ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ |
ಜೀವನ ಹಿತವಾಗಿ ಧನಿದೋರಿದಂತೀಗ ೨
ಬಂದೂಳಗಕ ನಿನ್ನ ಪಾಂಡವರೊದಲು |
ನಿಂದು ನೀ ಧನಿದೋರಿದಂತೆ |
ಇಂದಾದಾ ಕಲಿಯುಗದ ದಾಸರ ಮಾತಿಗೆ |
ಬಂದು ನೀ ಧನಿ ದೋರಿದಂತೆ |
ಕಂದನಳುವ ಧ್ವನಿ ಕೇಳುತ ಜನನಿ ಅ |
ನಂದದಿ ಧನಿದೋರುವಂತೆ |
ತಂದೆ ಮಹಿಪತಿ – ನಂದನ ಪ್ರಭು ಗೋ |
ವಿಂದ ಮುಕುಂದೆನ್ನ ಸಲಹೆಂಬ ಮೂಢನಾ೩

೭೩೭
ಕಂಜ ಬಿಂಬಾನನೆ ಕಂಜ ಸತ್ಕೂಲಪರ ಕಂಜ ಸಾಸಿರ ಶಿರನಾ |
ಕಂಜ ಶರನಪಿತ ಕಂಜ ಚರಣನ ಕಂಜಾಕ್ಷಿ
ತಂದು ತೋರೇ ಪ
ಮೊತ್ತ ವೆನಿಪ ಹಿಮಧಿಪ ತನುಜಯ
ಕೂಡಾ ನಿತ್ಯದಿ ಕ್ರೀಡಿಪನಾ |
ನೆತ್ತಿಯೊಳನುಹಾನೆ ಇಪ್ಪಳ ಸಂಗಡ ಅತ್ತಿತ್ತಗಲ ದವನಾ |
ಹತ್ತೆರನೆಯಾ ಅರಸಿಯಾ ಪೆಸರ್ಪಡೆದಳ
ಚಿತ್ತೆದೊಲ್ಲಭ ನೈಯನಾ |
ಹೆತ್ತ ತಾಯಿಯಣ್ಣ ನರಸಿ ಉದರದಲಿ
ಬಂದ ಸತ್ಯ ಶಾಶ್ವತನ ತೋರೆ ೧
ಘನ ಗುರುವಿನ ಶರೀರವ ತನ್ನ ಶರದಿಂದ
ಚಿನಿಗಡಿದ ಕುವರನಾ |
ತ್ರಿನಯನ ವರದಿಂದ ಪಡೆದನ
ಹಿರಿಯಳಿಯನಾ ತಂದೆಯಾ ಪಿತನಾ |
ಜನಕನ ಸುತನಾಗಿ ತ್ರಿಭುವನ ಮಾಡಿ ಪಾ |
ವನವ ಶರಭಿ ಧಾನ |
ಜನ ವರವಿತ್ತು ಭಕ್ತನೆನಿಸಿದ
ಶ್ರೀ ವನಜನಾಭನಾ ತಂದು ತೋರೆ ೨
ಸುರನದಿ ಮೊಮ್ಮ ಸುತನ ಹರಿಬಕ ಬಂದ
ಸರಸಿಜ ಸಖ ಸುತನಾ |
ಶರದಿಂದ ಇರಲೊಳು ಅಸುವನದೋರದ
ಅಸುರನ ಮಾತೆಯರಸನಾ |
ಕರದಿಂದ ಸಂದಿದ್ದ ದೇಹಿಯ ಕೊಳೆ ಭಕ್ತರ ದುರಿತರ್ಹಿಸಿದನಾ |
ಗುರುವರ ಮಹಿಪತಿ ಸುತನ ಅಭಯವಿತ್ತು
ಪೊರೆವನ ತಂದು ತೋರೆ ೩

೧೯೦
ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ
ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ
ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ
ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ
ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ ೧
ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ
ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ
ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ
ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ
ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ ೨
ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ
ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ
ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ
ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು
ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ ೩

೪೫೭
ಕಂಡೆನಮ್ಮಾ ಕೌತುಕದಾ ಗಾರುಡಿಗನಾ |
ಕೊಂಡಾಡಲಳವಲ್ಲ ಹೇಳಲೇ ನಾ ಪ
ಶುದ್ಧ ಸತ್ವದಾ ಗಿರಿಶಿಖರದಲಿಹದೊಂದು |
ಬೋಧದನಾಗರ ನೂದುವನಾ ೧
ಭಕ್ತಿ ಮುಕ್ತಿಯಂಬಾ ಗೆಜ್ಜೆ ಲೊಪ್ಪುತಿಹ ಪದದಿ |
ಭಕ್ತರುದ್ದೇಶಕ ಬಂದ ಜವದಿ ೨
ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ |
ಪ್ರಕಟ ತಿಳಿಯದು ನಿಜ ಕಳಿಯನಾ ೩
ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ |
ಬಿರುದು ಕಟ್ಟಿಹ ಮಹಿಮನಾ ೪
ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ |
ಜಾಳಿಸಿದನು ಭಯ ಈಡ್ಯಾಡಿ ೫
ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ |
ವಮ್ಮಿಲೆ ಕಲೆಗಳ ದೋರುದೀಗನಾ ೬
ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ |
ನಂದವ ತೋರಿದಾ ದಯದಿಂದಾ ೭

೧೧೩
ಕಂಡೇವಮ್ಮ ರಂಗನಾ |ಕಂಡೇವಮ್ಮಾ ಕೃಷ್ಣನಾ ಪ
ಹೃದಯದೊಳಗಿನ ಸದಮಲ ಬ್ರಹ್ಮನಾ ೧
ಬಿಡದೆವೆ ಗೋಕುಲದಿ ಸಂಚರಿಪನಾ ೨
ಗುರುಮಹಿಪತಿ ಪ್ರಭು ಕರುಣ ಕಟಾಕ್ಷದಿ ೩

೧೬೮
ಕಮಲಂಶಂಖಗದಾರಿಪಾಣಿಕಮಲಂ
ರಾಜೀಸುವದು ನಾಭಿಯಾ
ಕಮಲಂವತ್ಸದ ಬ್ರಹ್ಮನಂಘ್ರಿ ಕಮಲಂ
ಸುರಗಂಗೆಯಂ ಶೇಧೀಭಿಯಾ ಪ
ಕಮಲಂ ದ್ವೇಷಿಯ ಕೋಟಿ ಕಾಂತಿ ಕಮಲಂ
ನೇತ್ರನ್ನದಯ ಪೂರ್ಣದಾ
ಕಮಲಂ ಹಾರಿಸಿ ನೀಡುವ ಬುದ್ದಿ ವಿಮಲಂ ನೇ
ಶ್ರೀ ವೆಂಕಟೇಶಂ ಸದಾ೧
ಸಿರಿಯಂ ಮೋಹನದೇವ ನಿನ್ನ ಮಹಿಯಂ
ಪೊಗಳಲಿಲ್ಲ ಮತಿ ಸಲ್ಲದೇ
ಬರಿಯಂ ಮಾಯಕೆ ಶಿಲ್ಕಾ ಸಾಧುವನೆರಿಯಂ
ಆಶ್ರಯಸಿ ನೆಲೆಗೊಳ್ಳದೇ
ಸೋರೆಯಂತಾ ನೆರೆಮೂಢನಾಗಿ ಗುರಿಯಂ
ಭವಕಾದೆ ಪರಿಹಾರ ದಾ
ಪರಿಯಂ ಕಾಣದೆ ಬೇಡಿ ಕೊಂಬೆ ಧೋರಿಯಂ
ಶ್ರೀ ವೆಂಕಟೇಶಂ ಸದಾ ೨
ಒಡಲಂ ಪೋಷಣ ಮಾಡಿ ಕಾಮ ದೃಢಲಂ
ಪಟನಾದೆ ನೆರೆ ಭಾಗ್ಯದೀ
ನಡಲಂ ದೀಗಳಿ ಪಶ್ಚಾತ್ತಾಪ ಒಡಲಂ ಮನವಿಲ್ಲ ವೈರಾಗ್ಯ ದೀ
ಬಿಡಲಿನ್ನಾಧೀ ನವೇ ಅವಿದ್ಯಪಡಲಂ
ಮುಸುಕಿಷ್ಟು ದನಿವಾರ ದಾ
ಕಡಲಂ ಮನಿಯೆ ಕಾಯೋ ಸಾಖರದಿಡಲಂ
ಶ್ರೀ ವೆಂಕಟೇಶಂ ಸದಾ೩
ತರಳಂ ಕರಿಯಾಲಾಗಿಸ್ತಂಭ ಸರಳಂ
ಬಿದಿರೀಸಿ ವಢ ಮಾಡಿದೇ
ದುರುಳಂದಾನವನಂಗ ನಿನ್ನ ಬೆರಳಂ
ಕೊನಿಯಿಂದ ಕಲಕ್ಯಾಡಿದೆ
ಕರಳಂ ಮಾಲೆಯ ಹಾಕಿಕೊಂಡು ವಿರಳಂ
ಮುದವಿತ್ತೆ ಭಕ್ತಂಗದಾ
ಮರಳಂ ಕಾವದು ಭಕ್ತಿಗಿಲ್ಲ ಹುರಳಂ
ಶ್ರೀ ವೆಂಕಟೇಶಂ ಸದಾ ೪
ಕಿರಣಂ ಸೂರ್ಯರ ಕೋಟಿ
ಕಾಂತಿಚರಣಾಂಬುಜಭಾವ ಭಕ್ತಿಂದಲಿ
ಶರಣಂ ಪೊಕ್ಕವರಿಂಗೆ ಜನ್ಮಮರಣಂ ಹರಿಸೂವದಯದಿಂದಲಿ
ಸ್ಮರಣಂ ಮಾಡಲು ಪಾಪಹರಣಂ ಸಲೆ ಸಾಧ್ಯಸುರ ಸಂಪದಾ
ಕರುಣ ಬೀರುತ ಕಾಯೋಯನ್ನಹರಣಂ
ಶ್ರೀವೆಂಕಟೇಶಂ ಸದಾ ೫
ರತನಂ ಜೋಲುವದೀಗ ಮಾನವ ತನುಂಪಡದೀಗ ಸದ್ಗತಿಯಾ
ಯತನಂ ಮಾಡದೆ ಅಂಧಕೂಪ ಪತನಂ
ಗಡ ಹೊಂದಿ ವಿಷಯೇಚ್ಛೆಯಾ
ಜತನಂ ಭೋಧವ ಗೈಯಲ್ಲಿಲ್ಲ ಸುತನಂ
ಅಪರಾಧವನು ಗಣಿ ಸದಾ
ಪಿತನಂ ತನ್ನಯ ಕಾಯೋ ಜ್ಞಾನ ಚ್ಯುತ ನಂ
ಶ್ರೀ ವೆಂಕಟೇಶಂ ಸದಾ ೬
ಯಜನಂ ಯಾಜನ ಮುಖ್ಯ ಕರ್ಮದಜನಂ
ಮೆಚ್ಚಿ ಸುಮನ ನರಿಯೆನು
ಸುಜನಂ ಮಾಡುವ ದಿವ್ಯ ನಿನ್ನಭಜನಂ
ಯಂತ್ರಿಪ್ಪ ದಾಂನರಿಯೆನು
ಗಜವಂ ತಾರಿಸಿದಂತೆಯನ್ನ ವೃಜಿನಂ ದಾಟೀ ಸುವಾ ಬಿರದಾ
ಕುಜನಂ ಸೇರಿದಂತೆ ಯನ್ನಂ ಕಾಯೋದ್ವಿಜನಂ
ಶ್ರೀ ವೆಂಕಟೇಶಂ ಸದಾ ೭
ಸದನಂ ಸುದ್ಗುಣ ಗಾಣದಬ್ಜವದನಂ ಸ್ಪರ್ಧಿಸುತಿದನುಜರಾ
ಕದನಂ ಕರ್ಕಶವಾಗಿ ಸೌಖ್ಯ ಪ್ರದನಂ ಭಾವಿಸುತಿಹ ಮನುಜರಾ
ಮದನಂ ನಿರ್ಜಿತ ರೂಪ ಕುಂದರದನಂ
ಸುಕುಮಾರ ಘನ ಶಾಮದಾ
ಇದನಂ ಬಣ್ಣಿಪರಾರು ವೇದವಿದಿನಂ
ಶ್ರೀ ವೆಂಕಟೇಶಂ ಸದಾ೮
ಸಿರಿ ಕಾಂತಂ ಬಲಿಯಾ ಚ ಕಂದುದಯಸಾಗರನೆಂದು
ಶಿಖಿ ಕೇತನಾ
ದೊರದಂ ನೋಡದೆ ಕಾಯ ಬ್ರಹ್ಮ ನುತ
ಭಂಡಿಯವಾಧನು ಪ್ರಾರ್ಥನಾ
ಪರಬ್ರಹ್ಮ ತುರುಗಾಯ್ವನೆಂದು ಪೊಗಳ್ವಾರಿಂತರಿವರೈ ಚರಿತದಾ
ಗುರು ಮಹಿಪತಿ ಕಂದಸಲಹೋ ಸ್ಮರಿಸಲು ಅಷ್ಟಕವಾ ೯

೭೫೨
ಕರುಣ ಘನ ಸಿರಿಚರಣ ಶರಣ ಜನರಾಭರಣಾ |
ಕಿಸಲಯೋಪಮ ಚರಣ ದುರಿತ ಹರಣ |
ಹರಿಯೇ ಸಂಕಟ ಹರಿಯೇ ಬಾಯೆಂದು ಕರಿಯೇ |
ಒದಗಿದೈ ನರಹರಿಯೇ ದೈತ್ಯರರಿಯೇ |
ಪರಮ ಸದ್ಗುಣಧಾಮ ಪೂರಿತ ಮನೋಕಾಮ |
ಯದುಕುಲಾಂಬುಧಿ ಸೋಮಾ ಮೇಘ ಶಾಮಾ |
ಸುರಮುನಿ ಜನಧೇಯಾ | ಕಮನೀಯತರ ಕಾಯಾ |
ಶರಧಿವಾಸನೆ ತೋಯಜಾಕ್ಷ ಸಿರಿ ಕೃಷ್ಣರೇಯಾ |
ಸಲಹು ಒಲವಿಂದಾ ೧
ಅಂಕಿತ-ಕೃಷ್ಣ (?)

ಕೃಷ್ಣದಾಸರ ಮಕ್ಕಳು ಮೊಮ್ಮಕ್ಕಳಿಂದ ರಚಿತವಾದ ಕೀರ್ತನೆಗಳು
೭೪೬
ಕರುಣದಿ ಪಾಲಿಸೆನ್ನನು | ಶ್ರೀಕಾಂತಾ ಪ
ನಂದಸನಕ ಪಾಲಕ | ನೀಲಾಳಕಾ |
ನಂದಗೋಪನ ಬಾಲಕಾ |
ಸಿಂಧುರ ಮುಖವರ ಸಿಂಧುರ ನತಪದ |
ಸಿಂದು ಶಯನ ಭವ ಸಿಂಧು ತರಿಸುತಾ ೧
ರಾಜಶೇಖರ ಪೂಜಿತಾ | ವಿರಾಜಿತಾ |
ರಾಜೀವ ಪದರೀಜಿತಾ |
ರಜ ರಾಜ ದ್ವಿಜ ರಾಜಗಮನ ಹರಿ |
ರಾಜತಲ್ಪ ಉಡುರಾಜ ಕುಲಮಣಿ ೨
ಗಿರಿಧರ ಸುತ ರಕ್ಷಣ | ಕರುಣೀಕ್ಷಣಾ |
ಗಿರಿಕರ ಸುವಿ ಚಕ್ಷಣಾ |
ಗಿರಿಧರಜಾಪತಿ ಗಿರಿಸಮೃತತುರಗ |
ಗಿರಿಮಂದಿರ ಕೃತ ಗಿರಿಪುಜಸಖಾ೩

೧೬೯
ಕರುಣಾಕರಾ ಕಮಲಾರಮಣ
ಕರಿರಾಜ ಬಂಧನ ಹರಣಾ
ಸುರ ಬ್ರಹ್ಮ ಮುಖಾರ್ಚಿತ ಚರಣಾ
ಶರಣಾಗೆಲೋ ದೀನೋದ್ಧರಣಾ ಪ
ಅತಿಸುಂದರ ನಂದ ಕುಮಾರಾ
ಸುತ ನಾಗೈ ತಂದನು ಮಾರಾ
ಅತನೇ ಕುಸುಮದ ಶರೀರಾ
ಸುತ ಸದ್ಗುಣ ಗಣ ಮಂದಾರಾ
ಪ್ರತಿಯುಗದಲಿ ಧರಿಸೈವತಾರಾ
ಕ್ಷಿತಿಯೊಳು ಪಾಲಿಪ ಸುರನಿಕರಾ ೧
ಜಲಧಿ ಯೊಳಗೆರಡು ರೂಪಾದೆ
ಸಲೆ ವೇದಾಮೃತವನು ತಂದೆ
ಬಲಿದೀ ಕ್ರೂರಾಂಗವ ವಿಡಿದೆ
ಇಳೆಸಲೆ ಪ್ರಲ್ಹಾದರ ಹೊರೆದೆ
ನೆಲೆ ಪ್ರಥಮಾಶ್ರಮದಲಿ ನಿಂದೇ
ಬಲಿ ಜಮದಗ್ನ್ಯರ ತೋಷಿಸಿದೆ ೨
ಎರಡನೆ ವರ್ಣದೊಳಗೆ ಜನಿಸಿ
ಸುರ ಪಾಂಡವರೇಳಿಗೆ ಬಲಿಸಿ
ನೆರೆ ಅಂತ್ಯಯುಗದಿ ಅವತರಿಸಿ
ಪುರಹರ ದ್ವಿಜರಭಿಮತ ಸಲಿಸಿ
ಗುರು ಮಹಿಪತಿ ಪ್ರಭು ಕರುಣಿಸಿ
ಹೊರಿಯೋ ನಿನ್ನೆಚ್ಚರ ನಿಲಿಸಿ ೩

ಅಂಕಿತ-ಗಿರಿಧರಸುತ
೭೪೭
ಕರುಣಿಸಯ್ಯ ದಯವಾರಿಧಿ ಮಹಾರಾಯಾ |
ಗುರುಮಹೀಪತಿರಾಯಾ |
ತರಳನು ನಾ ವರ್ಣಿಸುವೆನು ತವ ಚರಿತೆಯಾ |
ಕೊಡು ಎನಗೆ ಸುಮತಿಯಾ ಪ
ಜನಿಸಿದೆ ಮೊದಲು ವಿಜಾಪುರದಲಿ ನೀನು |
ಭಕ್ತರ ಸುರಧೇನು |
ಜನರೊಳೆನಿಸಿ ಕೋನ್ಹೇರಿರಾಯನಮಗನು |
ಐಗಳಿ ವೃತ್ತಿಯನು |
ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು |
ಅನುಭವಿಸುತಲಿರೆ ಸುತರಾಪೇಕ್ಷೆಯನು |
ಮಾಡಲು ತಿಮ್ಮವ್ವನು ೧
ಸಾರವಾಡವೆಂಬುವ ಗ್ರಾಮದಲಂದು |
ಭಾಸ್ಕರ ಮುನಿ ಬಂದು |
ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು |
ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು |
ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | ೨
ಪತಿವ್ರತೆಗೆ ನುಡಿದನು ಶ್ರೀ ಮುನಿನಾಥಾ |
ಸತಿಪತಿಗಳ ಚಿತ್ತಾ |
ಪ್ರೀತಿಯೊಳೊಂದಾಗಲು ಕಾಮ್ಯವು ತ್ವರಿತಾ |
ಆಗುದು ಎನೆ ವನಿತಾ |
ಆತುರದಿಂದೈ ದ್ವಂದಿಸಿ ಗಮನಿಸುತಾ |
ನಮಿಸಲು ಗುರುತಾತ |
ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ ೩
ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು |
ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು |
ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು |
ಮುಂದಕೆ ಕರೆಯುತ ಶಿರದಲಿ ಕರವಿಟ್ಟು |
ಉಪದೇಶವ ಕೊಟ್ಟು ೪
ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ |
ಆಗಲೆ ದೊರಕಿತು ಮನನೆಲೆಗೊಳ್ಳಿಸಲು |
ನಾನಾ ಬಯಕೆಗಳು |
ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು |
ಸಾಗಲು ಮುಂದಕೆ ಪರಿಪರಿಸಿದ್ಧಿಗಳು |
ಮುಗಿದವು ಹಸ್ತಗಳು ೫
ನಾಲ್ಕು ಆರುದಶ ದ್ವಾದಶ ಷೋಡಶದಾ |
ಭ್ರೂಮಧ್ಯದ್ವಿದಳದಾ |
ಆ ಕಮಲವ ಮೆಟ್ಟುತ ಕಾಶಿಯ ಮುಖದಾ |
ದ್ವಾರವ ತ್ಯಜಿಸುತ್ತಾ |
ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ |
ಸೋಂಕೆಳೆ ಗುಂಫದೊಳಾಡಿ ಸಾಸಿರದಳದಾ |
ಪಂಕಜದೊಳಗಿದ್ದ ೬
ನಿರುಪಮ ನಿರ್ಗುಣ ನಿತ್ಯ ನಿರಂಜನಾ |
ಪ್ರಭೆಯು ಅನುದಿನಾ |
ಹರಿಶಶಿಕೋಟಿ ಪ್ರಕಾಶ ಭಾಸುವದನಾ |
ಕಾಣುತ ಸಂಪೂರ್ಣಾ |
ಕೊಟ್ಟು ಪಶ್ಚಿಮದ ಮಾರ್ಗದ ಸಂಧಾನಾ |
ತಿಳಕೊಂಡ್ಯೋ ಪ್ರವೀಣಾ |
ಎರಡು ಹಾದಿ ಸುಲಭವಾಯಿತು ಗುರುಕರುಣ |
ದಿಂದಲೇ ಭಯಹರಣಾ ೭
ಹನ್ನೆರಡು ವರುಷಕೆ ಮುಗಿವಂಥಾ ಯೋಗಾ |
ಅಂತಹದು ಬೇಗ |
ಹನ್ನೊಂದು ತಿಂಗಳಿಗಾಯಿತು ವಿನಿಯೋಗಾ |
ನೋಡೆಂದನು ಅನಘಾ |
ಎನ್ನ ನಿನ್ನ ಸಂತತಿ ಸಂಪತೌಘಾ |
ನಿನ್ನಲ್ಲೇ ಈಗಾ |
ಉನ್ನತವಾಗುವ ದೆಂದ್ಹರಿಸಿದನಾಗ |
ದುಷ್ರ‍ಕತ ತರುನಾಗಾ ೮
ಧರೆಯೊಳು ತವಕೀರ್ತಿಯು ಬಹು ವಿಸ್ತಾರಾ |
ಆಗುದು ನಿರ್ಧಾರಾ |
ಕರವುತ ತಿಮ್ಮವ್ವನ ಕರೆದಿತ್ತವರಾ |
ನಿನ್ನುದರದಿ ಕುವರಾ |
ಬರುವನು ಡೋಣಿ ಶಿವಾಜಿ ಎಂಬ ಶೂರ |
ಸಂಶಯ ಬಿಡು ಅದರಾ |
ಹರುಷದಿ ಕಳುಹಿದ ಪರಸುತ ಉಭಯತರ |
ಭಕ್ತರ ಸಹಕಾರಾ ೯
ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ |
ಮನೆಯೊಳು ಯೋಗವಮಾಡುತ ಅನವರತಾ |
ಸತ್ಪುರುಷರೆನಿಸುತಾ |
ಜನರಿಂದಲಿ ಬಹು ಆರಾಧಿಸಿಕೊಳುತಾ |
ಇರಲು ದಯವಂತಾ |
ಅನಿತರೊಳರಿದೆ ನೀ ಆ ನಗರಕೆ ತ್ವರಿತಾ |
ವೇಧಿಯು ಬಂತೆನುತಾ ೧೦
ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ |
ಸಂತಸದಲಿ ಶಹಪೂರಕ್ಹೋಗುತ
ಧಾಮಾ ಮಾಡಿದೆ ನಿಷ್ಕಾಮಾ |
ಸಂತರು ತವದರುಶನಕೈದರು ನೇಮಾ |
ಬಟ್ಟರು ಬಹುಪ್ರೇಮಾ |
ಸಂತತ ಪೂಜಿಸಿದರು ತವಬುಧಸ್ತೋಮಾ |
ಗುರುಸಾರ್ವಭೌಮಾ ೧೧
ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ |
ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ |
ಅಲ್ಲಿಂದ ಪಯಣವಮಾಡುತ ಪಥಸಾಗಿ |
ಬಂದ್ಯೋ ಮಹಾತ್ಯಾಗಿ |
ಮೆಲ್ಲನೆ ಕಾಖಂಡಕಿ ಸ್ಥಳಕನುವಾಗಿ |
ಬರಲು ವರಯೋಗಿ೧೨
ಪುರದೊಳಗಿನ ಭಕ್ತರು ಬರುತಲಿ ನಮಿಸಿ |
ಕರೆದೊಯ್ದರು ಸ್ತುತಿಸಿ |
ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ |
ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ |
ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ ೧೩
ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ |
ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ |
ಸೇರಿದೆ ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ |
ತೋರಿದೆ ಲೋಕದಿ ನಟಪುರುಷ ವಿಚಾರಾ |
ತಿಳಿದ್ಯೋ ಸುಕುಮಾರಾ ೧೪
ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು |
ಮುಟ್ಟಲಲ್ಲೇ ವ್ರಯವಾಗುತಿಹುದು ಧನವು |
ಸತಿಸುತ ಪರಿವಾರವು |
ಬಿಟ್ಟಗಲದೆ ಸೇವೆಯ ಮಾಡುವ ಜನವು |
ಭಕ್ತರ ಸಮುದಾಯವು |
ದಟ್ಟಿಸಿ ಮನೆಯೊಳಗಾಗುದು ಪ್ರತಿದಿನವು |
ಮೃಷ್ಟಾನ್ನ ಭೋಜನವು ೧೫
ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು |
ಫಕ್ಕನೆ ವಿನಯದಿ ಮೃದು ಮಾತಾಡಿದಳು |
ಸತ್ಪುರುಷರಿಳೆಯೊಳು |
ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು |
ನಕ್ಕು ನುಡಿದು ಒಂದಿನದ ತಪಸ ಕೊಡಲು |
ಆದೀತೆಂದೆನಲು೧೬
ಒಮ್ಮೆ ತೋರಿಸುವದೆನುತಲಿ ನಮಿಸಿರಲು ಮರಡೆಪ್ಪನ
ಸೊಸಿಯೊಳು |
ತಮ್ಮಯ ಸದನದಿ ಅಸುವನೆ ತೊರೆದಿರಲು |
ತುಕ್ಕವ್ವ ತಿಳಿಸಲು |
ನಿಮ್ಮ ಶಾಠಿ ಕೊಡಲೊಯ್ಯುತ ಮುಸಕಿಡಲು |
ಕೈಯ್ಯನೆಳೆಯಲು |
ಝಮ್ಮನೆ ಏಳುತ ಶಿಷ್ಯಳು ಎರಗಿದಳು |
ನೋಡುತ ಬೆರಗಾದಳು ೧೭
ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ |
ಲೋಕದಿ ಶರಣರ ಮನೋರಥ ಪೂರೈಸಿ |
ಕೊಟ್ಯೋ ಗುಣರಾಶಿ |
ಈ ಕಲಿಯುಗದೊಳು ನಿರ್ಲಿಪ್ತನು ಎನಿಸಿ |
ಕೊಂಡ್ಯೋ ಸುಖವಾಸಿ |
ಭೋ ಕರುಣಿಯೆ ನರನೆಂದವ ದೋಷಿ |
ಬಹು ನರಕದ ವಾಸಿ ೧೮
ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ |
ಸಾಧಕರೊಳಗೆಣೆಯೆ |
ನಿಗಮಾಗಮದಿ ನೀನಧ್ಯಾತ್ಮದ ಖಣಿಯೆ |
ದುರಿತಾಂಧ ದ್ಯುಮಣಿಯೆ |
ಮಿಗೆ ಭಾವದಿ ಮೊರೆಹೊಕ್ಕವರ ಋಣಿಯೇ |
ಕುಹಕರಿಗೇನ್ಹೊಣೆಯೆ |
ಪೊಗಳಲಾಪೆನೆ ನಿಮ್ಮನು ನಾ ಮನದಣಿಯೇ |
ವರಸತ್ವದ ಗುಣಿಯೆ ೧೯
ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ |
ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ |
ಭೂಲೋಕದಿ ವೃಂದಾವನದೊಳು ಮೆರೆದೆ |
ಬಹು ಭಕ್ತರ ಪೊರೆದೆ |
ಪಾಲಿಸುವನು ಶ್ರೀಪತಿ ತನುಜನ ಬಿಡದೆ |
ತಡಮಾಡಗೊಡದೆ೨೦

೧೭೦
ಕರುಣಿಸು ಶ್ರೀ ರಾಮಾ ಪ
ವಾರಿರುಹನಯನ ಜೀಮೂತ ಶ್ಯಾಮಾ |
ಪೂರಿತ ಮನೋಕಾಮಾ ೧
ದೀನೋದ್ದರಣಾ ಸದ್ಗುಣ ಧಾಮಾ |
ಶ್ರೀನಿಧೀ ಸಾರ್ವಭೌಮಾ೨
ಗುರುಮಹಿಪತಿ ಸುತ ಪ್ರಭು ಸರ್ವಾತ್ಮಾ |
ಸುರಮುನಿ ವಿಶ್ರಾಮಾ ೩