Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೪೫೬
ಕರುಣಿಸೆನಗ ವರ ಯತಿಯೇ |
ಪರಮ ಪಾವನ ಮೂರುತಿಯೇ |
ವರ ಭಕುತರ ಸ್ಫೂರುತಿಯೇ |
ಶರಣ ರಕ್ಷಕ ಮಹೀಪತಿಯೇ ಪ
ಸರ್ವಾಗಮ ಸನ್ಮತಾ ದೋರ್ವದು ನಿನ್ನ ಚರಿತಾ |
ಉರ್ವಿಯೊಳಗೆ ಸುಖದಾತಾ | ಮೂರ್ವೀ ಜಗವಂದಿತಾ |
ಸರ್ವಗುಣ ನಿಧಿಯೇ ನೀ | ಸರ್ವರೊಳು ವ್ಯಾಪ್ತನಾಗಿ |
ಸರ್ವರ ಕೈಯಲಿ ಪೂಜೆ | ಸರ್ವ ಕಾಲ ಕೊಂಬೆ೧
ಕಾಮನೆ ಪೂರೈಸುವಾ | ಕಾಮಧೇನುವೆ ಜಗಜೀವಾ |
ನೇಮಿಸಿದಾ ಫಲನೀವಾ | ಆ ಮಹಾ ಸುರತರು ದೇವಾ |
ಸ್ವಾಮಿ ನೀ ಗತಿಯೆಂದು | ನಿಮ್ಮೊರೆ ಹೊಕ್ಕರೆ |
ಪ್ರೇಮದಿ ಸಲಹುವೆ | ಈ ಮನುಜರನು೨
ನಿನ್ನ ಮಹಿಮೆ ತಿಳಿಯಲು | ಎನ್ನಳವೇ ಧರಿಯೊಳು |
ಚಿನ್ನ ಕೃಷ್ಣೊಡಿಯಾ ದಯಾಳು |
ಉನ್ನತೋನ್ನತ ಕೃಪಾಳು | ಮುನ್ನ ಮಾಡಿದ ಘನ್ನಪರಾಧವ |
ಇನ್ನು ಕ್ಷಮಿಸಿ ನೀ | ಚನ್ನಾಗಿ ಕಾಯೋ೩

ಅಂಕಿತ-ಶ್ರೀ ಪತಿ ತನುಜ
೭೪೮
ಕರುಣಿಸೋ ಹರಿ ನಿನ್ನವ ನೆನಿಸೋ |
ಸಿರಿಪತಿ ತವ ನಾಮಾಮೃತ ಫಲನುಣಿಸೋ ಪ
ನಿನ್ನ ದಾಸರ ಸಂಗವನುದಿನ ಬಲಿಸೋ |
ಘನ ವಿಚಾರಕ ಮನವೆನ್ನ ನಿಲಿಸೋ ೧
ಮಂಗಳಂಘ್ರಿಯ ಕುಂಬ ಕಂಗಳದೆರಿಸೋ |
ರಂಗಭಕುತಿ ಅಂತರಂಗ ದೆಚ್ಚರಿಸೋ ೨
ಜನುಮಕ ಬಹಭವ ಪರಿಹರಿಸೋ |
…………………………………..೩

೧೭೧
ಕರೆತಾರೆ ನೀ ಮನದಾ ಮೋಹನನಾ ಸುಜ್ಞಾನೇ ಪ
ಸ್ಮರನ ಬಾಣಕ ಶಿಲ್ಕಿ ಬಲಿಯೊಳಗಾದೆ |
ಹರಿಯಾ ನಗಲಿ ಅಸುವಿಡಿಯೇ ನಿನ್ನಾಣೆ ೧
ಮರುಳು ಮಾನಿನಿಯಳ ಮಾನ್ಯಳ ಮಾಡೀ |
ಕೊರತೆ ನೋಡುವದಿನ್ನು ಉಚಿತವೇ ಜಾಣೆ ೨
ಗುರುವರ ಮಹಿಪತಿ ನಂದನ ಸ್ವಾಮಿ |
ಕರುಣಾ ಸಾಗರನೆಂಬಾ ಬಿರುದ ಕಿದೇನೆ ೩

೧೭೨
ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ಪ
ನೆನೆವರಾ ಹೊರೆಯಲು ಅನುವಾಗಿ ಬಂದಿರಲು |
ಮನುಜ ಮೈ ಮರೆವರೆ ನೀನು ೧
ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು |
ತನುವಿನ ಪಾತ್ರೆಲಿ ನೀನು ೨
ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು |
ಅರಿವೆಂಬ ಕೈಯಿಂದ ನೀನು ೩
ಗುರು ಮಹಿಪತಿಕಂದಗರುಹಿದ ನಿಜಾನಂದ
ಸಿರಿಸುಖವ ಪಡೆಯಲು ನೀನು ೪

೫೮೬
ಕಳ್ಳನ ಹೆಜ್ಜೆಯನು | ಜಗದೊಳು ಕಳ್ಳನೇ ತಾ ಬಲ್ಲ |
ಎಲ್ಲರಿಗಿದು ತಾನು | ಭೇದಿಸಿ | ನೋಡಲು ಅಳವಲ್ಲಾ ಪ
ಮನೆಯೊಳಗಿನ ಮನಿಯಾ | ಮುಂದಿನ |
ನಡುಮನಿಯೊಳು ಬಂದಾ |
ಮನ ಪವನರು ಕೂಡಿ ನಿಜ |
ಮಂದಿರಕನ್ನವ ಕೊರೆದಾ ೧
ಸ್ವಪ್ರಭೆಯಲ್ಲಿ ಮೆರೆವಾ | ಅಲ್ಲಿಯ ಚಿದ್ರತ್ನವ ಕದ್ದಾ |
ಅಪ್ರತಿ ಸುಖದೂಟಾ | ತನ್ನೊಳು |
ಸ್ವಾನುಭವದಿ ಮೆದ್ದಾ ೨
ಕಳ್ಳರ ಸಂಗತಿಯಾ | ಮಹಿಪತಿ | ನಂದನ ತಾ ಮಾಡಿ |
ಕಳ್ಳನು ಭವಕದಾ | ಹರಿನಾಮವ |
ಕದಿಯುತ ನೋಡಿ ೩

೧೭೩
ಕಾಣಲಿಲ್ಲೇ ದೇವರ ನೋಡಲಿಲ್ಲೇ ಪ
ವಿಶ್ವದೋಲಾಡುವ ವಿಶ್ವಂಭರಿತ ಹರಿ೧
ದೂರಿಹನೆ ನ್ನದೆ ಸಾರೆವೆ ಭಾವಿಸಿ ೨
ಗುರುಮಹಿಪತಿ ಪ್ರಭುಗುರುತಕತದೊಮ್ಮೆ೩

೧೭೪
ಕಾಯಬೇಕೆಲೋ ರಂಗಾ ಎನ್ನಾ |
ನೀ ಕಾಯಬೇಕೆಲೋ ರಂಗಾ |
ತೋಯಜಾಕ್ಷ ದಯಾನಿಧಿ ತರಣೋ |
ಪಾಯದೋರೋ ಶುಭಾಂಗಾ ಪ
ದುರಿತ ಸಮೂಹವ ಬಂದು | ಶಣಸುತ |
ಹರಿದಂಜಿಸುತಿವೆಯಿಂದು |
ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು |
ಮರಳು ಮಾನವನಿವನೆಂದು ೧
ಕುಂದನಾರಿಸಿಯೆಲ್ಲಾ ನೋಡಲು |
ಒಂದೆರಡೆನಲಿಕ್ಕಿಲ್ಲಾ |
ಮಂದಮತಿ ಅವಗುಣ ರಾಶಿ ಪತಿತರ |
ವೃಂದದೊಳೆನ್ನಧಿಕಲಾ೨
ಕೊಂಬು ನೀಚನವಾದರೆ ಬಿರದಾ |
ಡಂಬರ ನೀಚನಲ್ಲಾ |
ಇಂಬುದೋರೆಲೆ ನಿನ್ನ ದಾಸರ ದಾಸ |
ಎಂಬದೆನ್ನಧಿಕಾರವಿಲ್ಲಾ ೩
ಬಿನ್ನಹವೆನ್ನ ಮುರಾರಿ | ಪಾಲಿಸಿ |
ನಿನ್ನ ಚರಣವ ದೋರಿ |
ಧನ್ಯಗೈಸೆಲೋ ಗುರುವರ ಮಹಿಪತಿ
ಚಿನ್ನನೊಡಿಯ ಸಹಕಾರಿ ೪

೧೭೮
ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ
ಕೇವಲ ಪತಿತ ಪಾಮರ ನಾನು
ಕೇವಲ ಪಾವನ ಮೂರುತಿ ನೀನು
ಕೇವಲ ಘನ ಅಪರಾಧಿಯು ನಾನು
ದೇವನೀ ಕರುಣಾ ಸಾಗರ ೧
ಭಾವ ಭಕ್ತಿಯ ಕೀಲವ ನರಿಯೇ
ವಿವೇಕ ಮತಿ ನೀ ನೀಡುವ ಧೊರೆಯೇ
ಆವಾಗ ವಿಷಯಾ ಸಕ್ತನು ಹರಿಯೇ
ಕಾದ ದೈವನು ನೀನೈ ೨
ಚರಣವೇ ಗತಿ ಯೆಂದಾ ನತ ನಾದೇ
ತರಳನ ಕುಂದಾಲಿಸದಿರು ತಂದೇ
ಗುರು ಮಹಿಪತಿ ಪ್ರಭು ನಮೋಯಂದೇ
ಶರಣಾಗತ ಸಹಕಾರೀ ೩

೪೨೯
ಕಾಯಯ್ಯಾ ಎನ್ನದಯದೀ ಸಿಂಹಾದ್ರೀಶಾ ಪ
ಅಖಿಲದೊಳಗೆ ಅತಿ ದುರ್ಜನ ಪ್ರಭೆಯಲಿ
ನಿಖಿಳ ಧರ್ಮಗಳಡಗಲು ಕಂಡು
ಭಕುತರ ಗೋಸುಗ ಅವತಾರವತಾಳಿ
ಪ್ರಕಟಿಸಿದಿಳೆಯೊಳು ಚಿನ್ಮಯನೇ೧
ಪರಿ ಪರಿ ಸಾಧನದಿಂದಲಿ ದೇಹವ
ನಿರುಪಮ ವಜ್ರದಂದದಿ ಮಾಡೀ
ಮೆರೆವ ಗೋರಕ್ಷಗ ಬೋದಿಸ್ಯಕಲ್ಪಿತ
ಶರೀರವ ಮಾಡಿ ನಿಲಿಸಿದೆಯ್ಯಾ೨
ಅನಸೂಯಾ ಜಠರದಲುದ್ಭವಿಸಿ
ಅನುದಿನ ಮುನಿ ಮಾನಸಲಿರುವಾ
ಅನುಪಮ ಚರಿತನೆ ಮಹಿಪತಿ ನಂದನ
ಮನ ದೈವಾಗಿಹೆ ಘನ ಕರುಣಾ ೩

೧೭೫
ಕಾಯಯ್ಯಾ ಎನ್ನಾ ಪ
ಸರಸೀರುಹ ಶತಕಿರಣಾ |
ಅರುಣಾಂಬುಜಾಲಯ ರಮಣಾ |
ಅರುಣಾನುಜ ಗಮನಾ | ಅರಿದಮನಾ ೧
ಸುರನರ ಕಿನ್ನರ ಸುತ ಚರಣಾ |
ಶರಣಾಗತ ಜನಭಯ ಹರಣಾ |
ಅರುಣಾದ್ರಿ ನಿಲಯ ಸಖಚಿದ ನಾ ೨
ಗುರು ಮಹಿಪತಿ ಸುತ ಪ್ರಭು ಕರುಣಾ |
ಹರಿಣಾಂಕ ಕುಲವರ ರನ್ನಾ |
ಧರಣಿ ಧರಧರ ದೀನೋದ್ಧರಣಾ ೩

೧೭೬
ಕಾಯಯ್ಯಾ ಕಾಯೊ ಮುರಾರಿ | ದಯದಲೆನ್ನಾ ಪ
ತರಳತೆಯಿಂದಾ ಸ್ಮರಣೆಯ ನಿನ್ನಾ |
ಮರೆದುನೊಂದೆ ಬಹು ಪರಿದಯದಲೆನ್ನಾ ೧
ಮತಿಹೀನನೆಂದು ಒಲಮಿಲಿ ನೋಡಿ |
ಅತಿ ಜವದಿ ಪಾದ ದೋರಿ ದಯದಲೆನ್ನಾ ೨
ಮಹಿಪತಿ ನಂದನ ಜೀವನರಾಮಾ |
ಅಹಿತರ ವಂಶವಿದಾರಿ ದಯದಲೆನ್ನಾ ೩

೧೭೭
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ
ಶರಣರ ದುರಿತಪಹರಣ ಸುಪಾವನ |
ಚರಣನೆ ಕೌಸ್ತುಭಾಭರಣ ಹೇಮಾಂಬರಾ |
ವರಣ ಗೋವರ್ಧನೋದ್ಧಾರಣಾ ತರಣಿ ಶತ |
ಕಿರಣ ವಿರಾಜಿತ ಕರುಣಾ ಸಿಂಧೋ ೧
ವಾರಣಭಯ ನಿವಾರಣ ಸುರಜನ |
ತಾರಣ ದೈತ್ಯ ವಿದಾರಣ ಸೃಷ್ಟಿಯೆ |
ಕಾರಣ ಚಿತ್ಸುಖ ಪೂರಣ ಮುನಿಜನ |
ಪ್ರೇರಣ ಫಣಿಮದ ಹಾರಣ ಧೀರಾ೨
ಇಂದಿರೆ ನಯನಾನಂದ ಚಕೋರ ಸು |
ಚಂದಿರ ಸ್ಮರಚಿತ ಸುಂದರ ಸದ್ಗುಣ |
ಮಂದಿರ ವಿಧಿಹರ ವಂದ್ಯ ಮುಕಂದನೇ |
ತಂದೆ ಮಹಿಪತಿ ನಂದನ ಪ್ರಾಣಾ ೩

೪೩೦
ಕಾಯಿ ಕಾಯಯ್ಯಾ ಭಜಕರ ಪ್ರಿಯಾ ಪ
ಕಾಯ ಸುರಾವಳಿ ಸಾಹ್ಯನಿ ಶ್ರೀಕರ |
ಗ್ರಾಹಿ ಪರಾತ್ಪರ ಪಾಹಿ ಮುಕುಂದಾ ೧
ಅಂಬರವರ್ಣ ಚಿದಂಬರ ವಾಸ ಪೀ
ತಾಂಬರಧರ ವಿಶ್ವಂಬರ ಕೃಷ್ಣಾ ೨
ಅಂಗಜ ಜನಕ ವಿಹಂಗ ತುರಂಗ ||ಭು||
ಜಂಗ ಶಯನ ಮಾತಂಗ ಸುವರದಾ ೩
ಶ್ರೀಧರ ಭೂಧರ ರಿಪು ನಿಜ ಸೋದರ |
ಶ್ರೀ ದಾಮೋದರ ದೇವಾ ೪
ಅತ್ರಿವರದ ಲೋಕತ್ರಯ ಜಿತ |
ಮಿತ್ರ ಸುತೇಜ ವಿಚಿತ್ರ ಚರಿತ್ರಾ ೫
ಜಂಬುವಿಭೇದನ ಕುಂಭಜ ಶಂಭು ಸ್ವ
ಯಂಭು ಮುಖಾರ್ಚಿತ ಕುಂಭಿನಿ ರಮಣಾ೬
ಸುಂದರ ನಿಜಗುಣ ಮಂದಿರ ಕೇಶವ |
ತಂದೆ ಮಹಿಪತಿ- ನಂದನ ಪ್ರಾಣಾ ೭

೧೭೯
ಕಾಯೋ ಕರುಣಾನಿಧೆ | ಶ್ರೀ ಹರಿ |
ಖಗವರ ಗಮನಾ ಪ
ಘೋರ ಸಂಸಾರದ ತಾಪದಿ ನೊಂದೆ |
ವಾರಿ ಭವ ಭಯ ಅಘಕುಲ ಶಮನಾ ೧
ಜ್ಞಾನ ಧ್ಯಾನದ ನಿಜ ಸಾಧನವರಿಯೆ |
ನೀನೆ ಗತಿಯೆನುತ ಮಾಡುವೆ ನಮನಾ೨
ಗುರು ಮಹೀಪತಿ ಪ್ರಭು ಅನಾಥ ಬಂಧು |
ಚರಣದ ಭಜನೆಯ ಲಿರಿಸೆನ್ನ ಮನ |೩

೧೮೦
ಕಾಯೋ ಕರುಣಿಸಿ ಎನ್ನ ರಂಗಾ |
ಬೇಗನೇ ಪಾದವದೋರಿಸಿ |
ನಮನಕ ಭವಬಲಿಯನು ಬಿಡಸಿ ರಂಗಾ ಪ
ಶರಣೆಂದು ಸಕಲರು ಬಂದು ಪೋಗುವಾ |
ನಿನ್ನ ಮಹಾದ್ವಾರದಲಿ |
ಇರುತಿಹ ನಿನ್ನಯ ಭಕುತ ಬಲೆಯಲಿ |
ಇರಿಸಿ ನೀ ಇಟ್ಟು ಅಚಲದಲಿ ರಂಗಾ |
ಸಂಬಳನಿತ್ತಿಹ ಧನವ ನಾನೊಲ್ಲೆ |
ಬೇಡುವೆ ಒಂದÀನೋ ರಂಗಾ |
ಹಂಬಲ ದಣಿವಂತೆ ನಾಮ ಭಾಂಡಾರವ |
ಮಾಡೆನ್ನ ಆಧೀನವ ರಂಗಾ ೧
ಕರಿದಲಿಧೃತಿ ಚಿತ್ತವನಿತ್ತು ಅನುದಿನಾ |
ಹರಿಪಾದ ಸದ್ಬಕ್ತಿಯಾ ರಂಗಾ |
ಮೆರೆವ ಮಂಟಪದೊಳು ನಿಲಿಸೆನ್ನ |
ದುರಿತವ ತಟ್ಟದಂದದಿ ಪೊರೆಯೋ ರಂಗಾ೨
ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ
ಭಾವದ ಬಲದಿಂದಲಿ |
ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು |
ಸಲಹು ನೀ ಕೃಪೆಯಿಂದಾ ರಂಗಾ೩

೧೮೧
ಕಾಯೋ ದಯದಿಂದೆನ್ನ ಕಾರುಣ್ಯ ನಿಧಿಯೇ |
ಯದು ನಾಯಕನೇ ದೇವ ದೇವಾ ಪ
ಪುಷ್ಯರಾಗದಿ ನವರತ್ನ ಪದಕಧರ |
ಘನಶ್ಯಾಮ ಉರಗಶಯನಾ |
ಕಶ್ಯಪ ವಸಿಷ್ಠಾದಿ ಸ್ಮರಣೆ ಮಾಳ್ವವರಿಂಗೆ |
ದೃಶ್ಯನಾಗಿಹ ಮುರಾರಿ ಶೌರಿ೧
ನಂದಸುಕುಮಾರ ಸಿರಿನಾರಿಯ |
ಸದ್ಬಕ್ತವೃಂದ ರಕ್ಷಕ ಭೂಧರಾ |
ಇಂದಿರಾ ಭಾವನೆಯೂ ಪೂರಿತಿಕೇಳು |
ಜಗವಂದ್ಯ ಮುಕುಂದ ಗರುಡರೂಢಾ೨
ಚಕ್ರಕರ ಕಮಲಾಕ್ಷ ಚತುರಾಸ್ಯ ಜನಕ ಬಲಿ |
ಚಕ್ರವರ್ತಿಗೆ ವರದನಾ |
ಶಕ್ರನುತ ಮಹಿಪತಿ ಸ್ವಾಮಿ ಸುತ ಪ್ರೀಯಾ |
ತ್ರಿವಿಕ್ರಮನೆ ಕೋಮಲಾಂಗಾ ರಂಗಾ ೩

೪೩೧
ಕಾಯೋ ನೀ ಅನಸೂಯಾ ಪುತ್ರನೇ
ಜೀಯಾ ದತ್ತಾತ್ರೇಯ ದೇವನೇ ಪ
ಪತ್ರೇಂದ್ರ ಗಮನಾ ಪರಮಾನಂದಾ
ಶತ ಪತ್ರದಳ ನಯನಾ ಕೇಶವಾ
ಮಿತ್ರ ಶತಕೋಟಿ ಪ್ರಕಾಶ ಸುರೇಶನೇ
ಅತ್ರಿ ಗೋತ್ರ ಸಮುದ್ಭವಾ ೧
ಸರ್ವಾಧಾರವ್ಯಯ ತ್ರಯ ಮೂರು
ಸರ್ವ ಲೋಕ ವ್ಯಾಪ್ತನು
ಸರ್ವ ನುಡನು ಚರಣ ಚಾರು ತತ್ವರಿತ
ಸರ್ವಾತೀತ ಮುಕುಂದನೇ ೨
ಅನಂತ ಯೋಗಿ ಜನರ ಮಾನಸ ಹಂಸಾ
ಸಂತ ಗುಣ ಸಂಪನ್ನನು
ಅನಂತ ರೂಪ ಮಹಿಪತಿ ನಂದನ ಪ್ರಭು
ಅನಂತ ಮಹಿಮ ಶ್ರೀ ಕೃಷ್ಣನೇ೩

೧೮೨
ಕಾಯೋ ಪರಮಾನಂದಾ ನಾರಾಯಣಾ |
ತೋಯಜಾದಳ ನಯನ ಗರುಡ ಗಮನಾ ಪ
ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ |
ಭರದಿಂದ ನಿನ್ನ ಸ್ಮರಣೆಯಾ ಮಾಡಲು |
ತ್ವರಿತದಿಂದಲಿ ದೇವ ಬಂದು ಆತನ ಮಹಾ |
ದುರಿತವನು ಪರಿಹರಿಸಿ ಕಾಯಿದೆ ಹರಿಯೇ೧
ಅರಗಿನಾ ಮನಿಯೊಳುಪಾಂಡವರುಸಿಲುಕಿರಲು |
ಹರಿ ನೀನೇ ಗತಿಯೆಂದು ಸುಮ್ಮನಿರಲು |
ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ |
ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ೨
ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು |
ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ |
ಕರುಳ ಬಗೆದುಕಾಯಿದೆ ಹರಿಯೇ |
ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ೩
ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ |
ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು |
ಅಪರಿಮಿತ ವಸ್ತ್ರಗಳ ಪೂರೈಸಿ ರಕ್ಷಿಸಿದೆ
ಕಪಟನಾಟಕ ದಯಾನಂದ ಹರಿಯೆ ೪
ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ |
ಮುರಹರಿ ಧ್ಯಾನ ಸ್ಮರಣೆ ಯಂಬನದನು |
ದಾರಿಯನು ಅರಿಯದ ಅಜ್ಞಾನಿಯ ಪರಾಧವನು
ಸೈ ರಿಸುದು ಮಹಿಪತಿ ಸುತ ಪ್ರಿಯನೇ೫

೧೮೩
ಕಾಲಕಾಲದಿ ಕರುಣಿಗಳರಸನಾದ
ರಾಮಾ ಎನಬಾರದೇ | ಜಗ |
ಪಾಲಕ ನಿನಗಿಹಪರಗಳ ನೀವಾ ಪ
ಪಂಚಾಗ್ನಿಯಲಿ ದೇಹ ಬಳಲಿಸುವದ್ಯಾತಕ |
ರಾಮಾ ಎನಬಾರದೇ | ಪ್ರ |
ಪಂಚ ತೊರೆದು ವನವಾಸ ಹಿಡವುದ್ಯಾಕ |
ರಾಮಾ ಎನಬಾರದೇ ||
ಒಂಟಿ ಕಾಲಿನ ಯೋಗಧಾರಣವ್ಯಾಕ |
ರಾಮಾ ಎನಬಾರದೇ | ಪುಣ್ಯ |
ಸಂಚಿಸೆ ಕೃಚ್ಛೆ ಚಾಂದ್ರಾಯಣಿ ವೃತವ್ಯಾಕ |
ರಾಮಾ ಎನಬಾರದೇ ೧
ಮಂಡಿಸಿ ಪಶುವಧಯಾಗ ಮಾಡುವದ್ಯಾಕ
ರಾಮಾ ಎನಬಾರದೇ | ಅ|
ಖಂಡದಿ ಛಟಪಟ ಕರ್ತಬೋಧಗಳ್ಯಾಕ
ರಾಮಾ ಎನಬಾರದೇ ||
ಮಂಡೆ ಬೋಳಿಸಿ ಭಿಕ್ಷಾನ್ನ ಬಯಸುವದ್ಯಾಕ |
ರಾಮಾ ಎನಬಾರದೇ | ಜಗ |
ಭಂಡರಂದದಿ ಬತ್ತಲೆ ತಿರುಗುವುದ್ಯಾಕ |
ರಾಮಾ ಎನಬಾರದೇ ೨
ಉಂಬಾಗ ಉಡುವಾಗ ಕೊಂಬು ಕೊಡುವಾಗ |
ರಾಮಾ ಎನಬಾರದೇ | ಸರ್ವಾ |
ರಂಭದಿ ಸತಿಸುತಲಾಲನೆ ಮಾಳ್ಪಾಗ |
ರಾಮಾ ಎನಬಾರದೇ ||
ತಿಂಬು ತಾ ಕಳಿಸುತಾ ಎಡಹುತಾಣಕಿಸುತಾ
ರಾಮಾಎನಬಾರದೇ | ಇದು |
ಸಂಭ್ರಮದಲಿ ಮಹಿಪತಿ ಸುತ ಸಾರಿದಾ
ರಾಮಾ ಎನಬಾರದೇ ೩

೧೮೪
ಕಾವದು ಎನ್ನನುದಿನಾ ರಂಗಾ|
ಕಾವದು ಕಾವದು ಎನ್ನನುದಿನಾ |
ಭಾವಿಕ ಜನರ ನಿಧಾನಾ ಪ
ಜಲದಲಿ ಕರಿಯಾ ಪಿಡಿದ ಮಕರಿಯಾ |
ಸೀಳಿದ ಯಾದವರಾಯಾ |
ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ |
ಕುಲ ಅರಿನಂದನ ಪ್ರೀಯಾ ೧
ರಮಣನೆ ಸಿರಿಯಾ ಲಲನೆಗೆ ಸೀರಿಯಾ |
ಸಮಯಕ ನಿತ್ತ ಅನೇಕ |
ಕಮನೀಯ ಕಾಯಾ ದೇವ ನೀ ಕಾಯಾ |
ಜನಕನೇ ವ್ಯಾಪ್ತ ತ್ರಿಲೋಕಾ ೨
ಸರಸಿಜನಯನಾ ಸಾಸಿರ ನಯನಾ |
ಸೋದರ ದೇವ ದೇವೇಶಾ |
ವರಸದ್ವದನಾ ಈ ರೆರಡೊದ ನಾ |
ವಂದಿತ ಚರಣಾ ಶ್ರೀಯೀಶಾ೩
ಭಕುತರಬಂಧು ಕೈರವ ಬಂಧು
ಶೇಖರಧೇಯ ಮುಕುಂದಾ |
ಸಕಲಾಧಾರಾ ದಿನೊದ್ಧಾರಾ |
ದೇವಕಿ ದೇವಿಯ ಕಂದಾ೪
ಸುಜನರ ಪಕ್ಷಾ ಕುಜನ ವಿಪಕ್ಷಾ |
ಶ್ರೀ ವತ್ಸಾಂಕಿತ ದೇವಾ |
ಗಜವರ ವರದಾ ಯದುಕುಲ ವರದಾ |
ನವಮರ್ಧನ ಜಗಜೀವಾ೫
ಕಾಳಿಯ ಸರ್ಪಾ ಮದಹರ ಸರ್ಪಾ|
ಶನವಾಹನ ಗೋವಿಂದಾ |
ಶ್ರೀ ಲಲನೀಯಾ ಸದ್ಭಾವನೀಯಾ |
ಪೂರಿತ ಪರಮಾನಂದಾ೬
ಕರುಣಾ ಸಿಂಧು ದುರಿತದ ಸಿಂಧು |
ವಿಗಾಗಿಹೆ ಕುಂಭಜ ನೀನು |
ಸಿರಿವರ ರಂಗಾಯ ಹರಣ ರಂಗಾ |
ಧೀರನೇ ಭಜಕರ ಧೇನು೭
ನವನೀತ ಚೋರಾ ನಿಗಮದ ಚೋರಾಂ |
ತಕ ಗೋಕುಲ ವಿಹಾರಾ |
ಭವ ಪರಿಹಾರಾ ಕೌಸ್ತುಭಧಾರಾ |
ಮಹಿಪತಿಸುತ ಮನೋಹಾರಾ ೮

೨೨
ಕಾಳಿ ಭವಾನಿ ಶಿವೆ ಪಾಲಿಸೇ | ಪ
ಗೋತ್ರೋದ್ಬವೆಸಿತ ಗೋತ್ರ ಕೃತಾಲಯೆ |
ಗೋತ್ರಸುರಾರ್ಚಿತೆ ಗೋತ್ರಾರಿಯನುತೆ ೧
ಭುವನೇಶ್ವರಿತ್ರೈ ಭುವನಾರ್ಚಿತಪದ |
ಭುವನಜಯುಗ್ಮಳೆ ಭುವನಜ ಲೋಚನಳೇ ೨
ನಾಗಾಂಬರ ಪ್ರಿಯೆ ನಾಗ ಸುವೇಣಿಯೇ |
ನಾಗತಿ ಬೆಡುವೆ ನಾ ಗಿರಿಜೇಶಳೆ ೩

೧೮೮
ಕೃಷ್ಣಾ ಬಿಡು ದಾರಿ ದಾರಿ ದಾರಿ ಪ
ನೀನೊಲಿದೆನ್ನಕೂಡ ಸರಸವ ನಾಡುವರೆ |
ನಾನೆರೆ ಗಂಡುಳ್ಳ ನಾರಿ ನಾರಿ ನಾರಿ ನಾರಿ ೧
ಮಾರಲು ಬಂದಿಹ ನೆರೆದ ಗೊಲ್ಲತೆಯರಾ |
ಗೋರಸ ಮಾಡದಿರು ಸೂರಿ ಸೂರಿ ಸೂರಿ ೨
ಗುರು ಮಹಿಪತಿ ಪ್ರಭು ಕಣ್ಣಿಲೆ ಕಂಡವರ |
ಕರವ ಬಿಡವನಲ್ಲಾ ಜಾರಿ ಜಾರಿ ಜಾರಿ ಜಾರಿ ೩

೧೮೯
ಕೃಷ್ಣಾಕಾಯೋ ಕರುಣಾನಿಧಿಯೇ ಕಾಯೋ ಕಾರುಣ್ಯನಿಧಿಯೆ
ಯದು ಕುಲಾಂಬುನಿಧಿ ಪೀಯೂಷಕ್ಷಕರ
ಪಂಚಸಾಯಕಾನಂತ ಕಮನೀಯ ರೂಪಾ
ಕಮಲಾಯತಾಕ್ಷನೆ ಬ್ರಹ್ಮ, ವಾಯು, ಸುರಮುನಿ
ಮುಖ್ಯಧ್ಯೇಯ ವಿಷ್ಣೋ ಪ
ಗೋತ್ರಾರಿ ಪುತ್ರನಿಜಮಿತ್ರ ಸುಪವಿತ್ರ ಚಾ
ರಿತ್ರ ಲೋಕತ್ರಯಾರ್ಚಿತ ಶ್ರೀ ಕಳತ್ರ ಶುಭಗಾತ್ರಗತಿ
ಸತ್ರತ್ರಿನೇತ್ರನುತ ಸಕಲಜಗ
ಸೂತ್ರ ನೋಟಕ ತೋತ್ರವೇತ್ರ ಪಾಣೆ ೧
ರಂಗ ಭವ ಭವ ಭಂಗ ವರಗೋಪಾಂಗನಾ ಅಂಗ
ಸಂಗಲೀಲಾರತ ಭುಜಂಗ ಪರಿಯಂಕ ಸುರ
ತುಂಗ ಗಂಗಾಜನಕ ಸರ್ವಾಂತರಂಗ ಹರಿ
ಮಂಗಳಾತ್ಮಕ ತಿರುವೆಂಗಳೇಶಾ ೨
ನಂದಕಂದ ಶ್ರೀ ಮುಕುಂದ ದುರಿತಾಂಧ ಅರ
ವಿಂದಭಾಂಧವ ದಿತಿ- ಜವೃಂದ ವ್ಯಾಳಖಗೇಂದ್ರ
ತಂದೆ ಮಹಿಪತಿ ನಂದನ ಪ್ರಿಯ ಗೋವಿಂದ ಆ
ನಂದ ಕಂದನೆ ಸಿಂಧುಶಯನ ದೇವಾ೩

೩೭೭
ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ|
ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ||
ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ|
ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ ೧
ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ|
ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ
ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ|
ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ ೨
ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ|
ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ|
ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ|
ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ ೩
ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ|
ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ|
ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ|
ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ ೪
ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ|
ಸೇವೆಪದಾತ್ಮ ಸಮರ್ಪಣೆಂದು ಭಕುತಿ ನವವಿಧಲೊಪ್ಪುವಾ|
ಅವನಿಯೊಳಗೊಂದಿದರೊಳ್ಹಿಡದಿಹ
ಬಿಡದನಾವನರೋತ್ತುಮಾ|
ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ ೫
ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು|
ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು|
ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ|
ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ ೬
ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು|
ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು|
ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ|
ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ ೭
ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ|
ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ|
ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ|
ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ ೮

೧೮೫
ಕೇಳವ್ವ ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ
ತುಡುಗಿಲಿ ಗೋರಸ ಕುಡಿವಾ | ಅವ |
ಘಡಿಸಲು ಕಣ್ಣನೆ ಬಿಡುವಾ |
ಹಿಡಿಯಲು ಬರೆ ಬೆನ್ಗೊಡುವ | ಅಡಿ |
ಇಡುತಲಿ ತಿರುಗದೆ ಓಡುವನವ್ವಾ ೧
ಕೊಡಮಸರಿಗೆ ಬಾಯ್ದೆರೆವಾ | ತಾ |
ಬೇಡುವ ಪಸರಿಸಿ ಕರವಾ |
ಕೊಡಲಿ ದಣಿಯದೆ ಸುರಿವಾ | ನ |
ಟ್ಟಡವಿಲಿ ನಿಂದು ಹೊರೆವನವ್ವಾ ೨
ಕೊಳಲನೂದಿ ಹೊಳೆವಾ | ಹೆಂ |
ಗಳೆಯರ ಸನ್ಮತಿಗಳೆವಾ |
ಅಳುಕದೆ ವಾಜಿಲಿ ನಲಿವಾ | ಇಳೆ |
ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ ೩

೫೮೭
ಕೇಳಿ ನಗಬಹುದು ಮಜಾತ್ಮರು |
ಕೇಳಿ ನಗಬಹುದು |
ಹೋಲಿಕೀಲ್ಯಾಡುವ ಜನದ ಜ್ಞಾನದ ನುಡಿ ಪ
ದಂಭಮಾನದಲಿ | ಮನಸಿನ |
ಹಂಬಲ ಘನವಿರಲಿ |
ಥಂಬಿಸಿ ಕರ್ಮವ | ಸರ್ವಂ ಬ್ರಹ್ಮಮಯ |
ವೆಂಬುದು ತೋರುವರಾ ನುಡಿಗಳಾ ೧
ಆಶಾಪಾಶಗಳು | ವಿಷಯದಿ |
ಲೇಸಿಗೆ ಬಿಗಿದಿರಲು |
ನಾಶಿವ ನಾ ಬ್ರಹ್ಮನೆಂ | ದೊದರುತ ನಾನಾ |
ವೇಷವ ಧರಿಸುವರಾ | ನುಡಿಗಳು ೨
ಚಿನುಮಯ ನಿಜ ಸುಖವಾ | ಕಂಗಳ
ಕೊನಿಯಲಿ ದೋರಿಸುವಾ |
ಘನ ಗುರು ಮಹಿಪತಿ ಪ್ರಭು ಕರುಣಾನಂದ |
ಅನುಭವಿಸಿದ ಲ್ಯಾಡುವ ನುಡಿಗಳಾ ೩

೧೮೬
ಕೇಳಿ ಬಂದೆ ಪ
ಕೇಳಿ ಬಂದೆ ನಿನ್ನ ಮೊರೆಹೊಕ್ಕವರ ಕೈಯ್ಯಾ |
ಇಳೆಯೊಳಗ ಬಿಡನೆಂಬ ಬಿರುದವ ನಾ೧
ಸುಗ್ರೀವ ತಾ ಪುಗೆ ಒಡಲವನು ವಾಲಿಯನು |
ನಿಗ್ರಹಿಸಿರಾಜ್ಯ ಪದವಿತ್ತನೆಂದು ೨
ಶರಧಿ ಧಡಿಯಲಿ ವಿಭೀಷಣನು ಶರಣವನು |
ಬರಲು ಧೃಡ ಸಂಪತ್ತು ನಿತ್ತನೆಂದು ೩
ಖಂಡಿಸಿ ಕೌರವರ ಬಳಗವನು ಸೈನ್ಯವನು |
ಪಾಂಡವರನು ಸ್ಥಾಪನೆ ಗೈದಾನೆಂದು ೪
ಏನ್ನನು ಪೇಕ್ಷಿಸದಿರು ನೀನು ಕಾರಣನು |
ಸನ್ನುತ ಮಹಿಪತಿ ಸುತ ಜೀವನಾ ೫

೭೪೨
ಕೇಳಿರೋ ಕೇಳಿರೋ ಆನಂದ ನುಡಿಗಳ |
ಜಾಳಿಲಿ ದೋಷವ ಹರಿನಾಮ ನೆನೆಯುತ |
ಕೇಳಿ ಕೇಳಿ ಕೇಳಿ ಕೇಳಿ ಪ
ಯುಗದಂತಿಲಿ ಸರ್ವ ಮತವೆಲ್ಲ ಕೆಡಲಾಗಿ |
ಜಗದೋದ್ಧಾರ ಜಗದೀಶ ಬರು ತಾನೆ ೧
ಸ್ವ ಶಕ್ತಿ ಕುದುರೆಯ ನೇರಿ ರಾವುತನಾಗಿ |
ಅಸಮ ಪೊನ್ನೀಟೆಯ ಹಿಡಕೊಂಡು ಬರುತಾನೆ೨
ನಾಕು ವೇದಗಳೆಂಬಾ ಕುದುರೆಯ ಕಾಲವು |
ಬೇಕಾದ ಅವಯವ ಆರು ಶಾಸ್ತ್ರಗಳಿವೆ೩
ಮೂರು ಪೌರಾಣ ಶೃಂಗಾರಾಭರಣವು |
ಶರಣವತ್ಸಲನೆಂಬ ಕಡಿವಾಣ ಕುದುರೆಗೆ೪
ವಿವೇಕ ಹಲ್ಲಣ ಬೋಧ ಹಕ್ಕರಿಕೆಯು |
ಭಾವಿಸೆ ಭೂ ಭಾಗವೆಂಬುದು ಪಾವುಡವು೫
ಈ ಪರಿಯಿಂದಲಿ ಭೋರ್ಗರೆವುತ ಬರೆ |
ತಾಪವಡಗಿ ಸುಖ ತಂಗಾಳಿ ಬಂದೀತು ೬
ತಾಯಿಯ ಧ್ವನಿ ಕೇಳಿ ಮಕ್ಕಳು ಬಹುಪರಿ |
ಬಾಯ ದೆರವುತಲಿ ಜನಜಡಿ ಬಹುದು೭
ಅವರಿ-ಗಭಯ ಕೊಟ್ಟು ಅಧರ್ಮವೇ ಕಿತ್ತಿ
ಯವನರ ಹಂತಿಯ ಕಟ್ಟಿ ತಾ ತುಳಿಸುವ ೮
ಹೊಟ್ಟವ ಹಾರಿಸಿ ಘಟ್ಟಿ ತಾ ಉಳಹುವ |
ಸೃಷ್ಟಿಲಿ ಧರ್ಮ ಸಂ-ಸ್ಥಾಪನೆ ಮಾಡುವಾ ೯
ಮೊದಲಂತೆ ಜಗವನು ಸುಖದಲಿ ಇಡುವನು |
ಮುದದಿಂದ ಸಾರಿದ ಗುರುವರ ಮಹಿಪತಿ ೧೦

೭೪೧
ಕೇಳಿರೋ ಕೇಳಿರೋ ಆಲಿಸಿ ಜನರು |
ಕಲಿಯುಗದೊಳಗ ಒಡಿಯ ನಾಟವನು ಪ
ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ |
ಹುಲ್ಲು ಕಲ್ಲು ದೈವಕ ಎರಗಿ ನಡೆವರು |
ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು |
ಅಲ್ಲ-ಹುದೆಂಬುದು ಬಲ್ಲವರಾರು ೧
ಸಾಧು ಸಂಗಕ ಕಾಲು ಏಳುವು ನೋಡಿ |
ಸಾಧಿಸಿ ದುರ್ಜನರಾ ನೆರಿಯ ಸೇರುವರು |
ಮಾಧವ ನಾಮ ಉಣ್ಣಲು ಮುಖರೋಗ |
ಭೂದೇವಿ ನಿಸ್ಸಾರವಾದಳು ನೋಡಿ೨
ನೀಚರಿಗುದ್ಯೋಗ ಊಚರಿಗಿಲ್ಲ |
ಆಚಾರ ಸದ್ಗುಣ ಆಡವಿ ಸೇರಿದವು |
ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ |
ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ೩
ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು |
ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ |
ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ |
ತಲಿ ತಲಿಗಿನ್ನು ನಾಯಕರಾಗಿ ಇರಲು ೪
ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ |
ಕುಲ ಅನ್ಯ ಇಲ್ಲದ ರಾಜೇಶನಾ |
ಕಾಲಿಲಿ ಸರ್ವ ಸಂಕರ ವಾಗುತಿರಲು |
ಹೊಳೆವನು ಗುರುಮಹಿಪತಿ ಸುತ ಸ್ವಾಮಿ ೫

೫೮೮
ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ |
ತಾಳಿ ನರದೇಹದಿಂದ ಮಾಡುವರೇ ಹಾನಿ ಪ
ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ |
ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ ೧
ಬಾಲನಾಗಿ ಕೆಲವು | ದಿನದಿಂದ ಯೌವನದಿ |
ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ ೨
ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ |
ಬರಿದೆ ಹಂಬಲಿಸಿದರಾಗ | ಸರಕು ಮನೆಯೊಳಿಲ್ಲಾ ೩
ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು |
ನೀಗಿ ಕಳಿಯೋ ಭವಭ್ರಮದಾ | ಅವಗುಣವಾ ಹಿಂಡು ೪
ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ |
ತಾರಿಸುವಾ ಗುರು ಮಹಿಪತಿಸುತ ಸ್ವಾಮಿ ೫

೫೮೯
ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು ಪ
ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು |
ಬಾಳು ಬಾಳು ಬಾಳು ಗಳದು ಭವದ ಬೆಜ್ಜರವನು ೧
ನೀಗು ನೀಗು ನೀಗು ನೀ ದುಸ್ಸಂಗಾ ಜಗದೊಳಗೆ |
ಬೇಗ ಬೇಗ ಬೇಗ ಹೊಕ್ಕು ಶರಣಾಗು ಗುರುವಿಗೆ ೨
ಬಾಗು ಬಾಗು ಬಾಗು ಗರ್ವ ತ್ಯಜಿಸಿ ಜಗದೊಳಗೆ |
ಸಾಗು ಸಾಗು ಸಾಗು ಸಿಕ್ಕಿದೆ ಆರು ಅರಿಗಳಿಗೆ ೩
ದಾರಿ ದಾರಿ ದಾರಿ ವಿಡಿದು ನಡೆಂದ ಹಿರಿಯರಾ |
ಸೇರಿ ಸೇರಿ ಸೇರಿ ಸಂತ ನೆರಿಯ ನಿರಂತರಾ ೪
ನಂಬಿ ನಂಬಿ ನಂಬಿ ನಂದನಸ್ವಾಮಿ ಮಹಿಪತಿಯಾ|
ಇಂಬು ಇಂಬು ಇಂಬು ಪಡೆದರಹುದು ನಿಜಗತಿಯಾ ೫

೫೯೦
ಕೇಳು ಹಿತವಾ ಬಾಳು ಮನವೇ ಸಾಧು ಸಂಗ ಮಾಡು |
ಹೇಳತೀರದ ಸ್ವಾನಂದದ ಸುಖಭಾವಿಕಗ ಬಲು ಪಾಡು ಪ
ಹೀನ ಕೀಟಕ ಸಂಗದಿಂದ ಭೃಂಗಿಯಾಗಲಿಲ್ಲಾ |
ತಾನು ಕಬ್ಬಿಣ ಪರಸವ ಮುಟ್ಟಿ ಚಿನ್ನವಾದುದಲ್ಲಾ ೧
ಹಳ್ಳ ಕೊಳ್ಳ ಬಂದು ಕೂಡಿ ಗಂಗೆಯಾಗುವಂತೆ |
ಎಲ್ಲ ವೃಕ್ಷವು ಸಂಗದಿಂ ಚಂದನಾಗುದು ಗಾದೆಯ ಮಾತೆ ೨
ಕೋಟಿಗೆಂದೇ ಮಾತು ಕೇಳು ನಾಡ ಸಾಧನ್ಯಾಕ |
ಸೂಟಿ ಹೇಳಿದ ಶ್ರೀ ಗುರು ಮಹಿಪತಿ
ಪುನರಪಿ ನೀ ಬರಬೇಕ ೩

೫೩೩
ಕೇಳೆಲೋ ಪ್ರಾಣಿ ನಂಬಿ ಪೂಜಿಸು ಹರಿಯ ಪಾದಾ |
ಪಾಲಿಸುವಾ ಗರದು ಅನುಭವ ಬೋಧಾ ಪ
ಗುರುವಿನಾ ಬಲಗೊಂಡು ಬಲಿಯೋ ಸ್ವಸುಖ ಪಡಕೋ |
ಹರಿಯದೇ ನಾನಾ ಮಾರ್ಗವ ಕಂಡು ೧
ಕಂಡ ದೈವಕ ಹಲ್ಲಾ ದೆರೆದು ಬಾಗುವದಲ್ಲಾ |
ಮಂಡೆ ದಡವಲ್ಲದೇ ಮತ್ತೇನಿಲ್ಲಾ ೨
ಇರಲು ಮನಿಲಿ ಧರಿಲುಳ್ಳಾ ಬಯಸಿದವಟಗಳೆಲ್ಲಾ |
ತಿರುಕವ ಬೇಡಿ ಉಂಬುದು ಸಲ್ಲಾ ೩
ನೀರಡಿಸಿ ಬರಿಗೈಯ್ಯಾ ನೆಕ್ಕಿದರೇನು ಶ್ರಯಾ |
ಗುರುವಿನ ಕೇಳು ಸ್ವಹಿತೋಪಾಯ ೪
ಹತ್ತು ಕಟ್ಟುವಕಿಂತ ಮುತ್ತು ಕಟ್ಟಬೇಕೆಂದೇ |
ಅರ್ತರೊಲುವನು ಮಹಿಪತಿಸುತಂದೇ ೫

೫೯೧
ಕೇಳೆಲೋ ಮಾನವ ಮೂಢಾ | ಕೇಳದೆ ನೀ ಕೆಡಬ್ಯಾಡಾ |
ಶೀಲವರಿತುಕೋ ದೃಢಾ | ಹೇಳುವೆ ನಿಜ ಹಿತ ನೋಡಾ ಪ
ಹಾದ್ಯರಿಯದೆ ಪ್ರಚಂಡಾ ಓದಿಕೆ ಯಾಕ ಉದಂಡಾ |
ಸಾಧಿಸೋ ಸಾಧನ ಕಾಂಡದ ಬೋಧಿಪ ಮಾರ್ತಾಂಡ |
ಸಾಧಾರ ಕಂಡಾ ಗಳೆರಗು ಕಂಡಾ |
ವಾದ ವಿತ್ತಂಡ ಬಿಡು ಪಾಷಂಡಾ ೧
ಹರಿಗುಣ ಕೊಂಡಾಡು ನೀ ಅಖಂಡಾ ಕೇಳು ಕೇಳು ಪ್ರಾಣಿ |
ಕರಣ ತ್ರಯಂಗಳ ಬೆರಿಸಿ ಮೊರೆಹೋಗಾಭಾವನೆ ಬಲಿಸಿ |
ಗುರುವಿಗೆ ಭಾರೊಪ್ಪಿಸಿ ಇರು ಸಂಶಯವಾ ತ್ಯಜಿಸಿ |
ನೆರೆ ಜೌಭಾಗಿಸಿ ತನ ಬಿಡು ಹೇಸಿ ಕುಜನ ದುರಾಶೀ
ನದಿಯೊಳು ಸೋಸಿ ೨
ಗರುವ ಮುರಿದು ನಿದ್ರ್ವಂದಾ ಚರಿಸಿ ಹಿರಿಯರ ವೃಂದಾ |
ಪರಿಯಲಿ ನಡಿನೀ ನೆಂದಾ ಗುರುವರ ಮಹಿಪತಿ ಕಂದಾ |
ವಿವೇಕದಿಂದಾ ನಿಷ್ಠೆಯ ವಂದಾ ಹಿಡಿದಾನಂದಾ
ಪಡದರ ಬಂದಾ |
ಜನ್ಮಕ ಛಂದಾ ನೋಡಿದರಿಂದಾ ಕೇಳು ಪ್ರಾಣಿ ೩

೧೮೭
ಕೊಡು ಹರಿಯೇ ದಾಸರ ಸಂಗವನು ಪ
ತವ ಮಂಗಳ ಚರಿತಾಮೃತ ದಡಿಯಾ |
ಶ್ರವಣದಿ ಸವಿಸವಿದುಂಬುವಿ ರಂಗಾ ೧
ಪೊಡವಿಲಿ ಭಜನಿಯ ದಾರಿಯ ದೋರೀ |
ಬಿಡಿಸುವರು ಮುನ್ನಿನ ಮನದಂಗಾ ೨
ಗುರುಮಹಿಪತಿ ಪ್ರಭು ಧನ್ಯನಾಗುವೆನು |
ಬೆರೆಸಲು ಸರಿ ತಾಗುವ ಪರಿ ರಂಗಾ ೩

೭೨೫
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ |
ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ
ಶರಣು ಶರಣು ಗುರುವೇ ಶರಣರ ಸುರತರುವೆ |
ಶರಣರ ಹೃದಯದೊಳಗಿರುವೇ ಕೋಲೆ |
ಶರಣೆ ಹೃದಯದೊಳಗಿರುವೆ ಅನುದಿನ |
ಕರುಣದ ಮಳೆಯಾಗರೆವುತ ಕೋಲೆ ೧
ಕರಣ ತೃಯದಿನಂಬಿ ಸ್ಮರಣೆಯ ಮಾಡಲು |
ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ |
ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ
ಕರಣದೊಳಗೆ ಬಯಕೆ ನಿಲದಂತೆ ಕೋಲೆ ೨
ಚರಣ ಸರಸಿಜಕ ಶರಣ ಹೋಗಲು ಜನ್ಮ |
ಮರಣದ ಭಯಕಂಜಿ ಜನರು ಕೋಲೆ |
ಮರಣದ ಭಯಕಂಜಿ ಜನರು ಬರೆ ಕಂಡು |
ಕರುಣಾ ಕಟಾಕ್ಷದಿ ನೋಡುವ ಕೋಲೆ ೩
ಕರದಿಂದ ಪಿಡಿದವನ ತರಣೋಪಾಯದ ಬೋಧಾ |
ಭರದಿಂದ ಬೀರುವೆ ಮನಸಿಗೆ ಕೋಲೆ |
ಭರದಿಂದ ಬೀರುವೆ ಮನಸಿಗೆ ಭವದೊಳು |
ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ ೪
ಜ್ಞಾನವೆಂಬಂಜನೆ ಸೂನಯನಕ ಊಡಿ |
ಹೀನ ಅಜ್ಞಾನವ ಹರಿಸೂವ ಕೋಲೆ
ಹೀನ ಅಜ್ಞಾನವ ಹರಿಸುವೆ ಬೇಗದಿ |
ಸ್ವಾನುಭವದ ಸುಖ ಬೀರುವೆ ಕೋಲೆ ೫
ನಾನಾ ಹಂಬಲವನ ಏನೆನುಳಿಯದ್ಹಾಂಗ |
ತಾನಿದ್ದ ಬದಿಯಲಿ ಇಹಪರ ಕೋಲೆ |
ತಾನಿದ್ದ ಬದಿಯಲಿ ಇಹಪರ ಸುಖಗಳ |
ನೀನಿದಿರಿಡುತಿಹೆ ಸದಮಲ ಕೋಲೆ ೬
ಎಂಟು ಸಿದ್ಧಿಗಳು ಉಂಟಾಗಿ ಬಂದರೆ |
ವೆಂಟಣಿಸಿ ಅದರ ಕಡೆಗೇ ಕೋಲೆ |
ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ |
ಬಂಟನೆಯ ಮಹಿಮೆಯ ಜಗದೊಳು ಕೋಲೆ ೭
ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು |
ಎನ್ನಳವಲ್ಲಾ ಜಗಕಲ್ಲಾ ಕೋಲೆ |
ಎನ್ನಳವಲ್ಲಾ ಜಗಕಲ್ಲಾ ಸದ್ಗುರು |
ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ ೮
ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ |
ಸಹಕಾರನಾಗಿ ಭಕ್ತರ್ಗೆ ಕೋಲೆ |
ಸಹಕಾರನಾಗಿ ಭಕ್ತರ್ಗೆ ಅನವರತ |
ಅಹಿತರವಂಡಣೆ ಮಾಡುತ ಕೋಲೆ ೯
ಮುನ್ನಿನಪರಾಧವ ಇನ್ನೇನು ನೋಡದೇ |
ಎನ್ನನುದ್ಧರಿಸು ದಯದಿಂದ ಕೋಲೆ |
ಎನ್ನನುದ್ಧರಿಸು ದಯದಿಂದ ಮತಿಕೊಟ್ಟು |
ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ ೧೦
ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು |
ಕುಂದ ನೋಡದೇ ಸಲಹಯ್ಯಾ ಕೋಲೆ
ಕುಂದ ನೋಡದೇ ಸಲಹಯ್ಯಾ ಮಹಿಪತಿ |
ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ ೧೧

೧೭
ಗಜಾನನಾ ಗಜಾನನಾ ಸ್ವಾಮಿ ನಿನ್ನವನಾ
ಪಾರ್ವತಿ ನಂದನಪೂರ್ವ ಚರಿತ ಘನ
ನಿರ್ವಿಘ್ನ ದಾಯಕ ಗಜಾನನಾ
ಮೂಷಕವಾಹನ ದೋಷಕರಿಪುಕುಲ
ನಾಶಿಕ ವಿಗ್ರಹಗಜಾನನಾ
ಮದನಾರಿ ಮನೋಭವ ರದಸಾಮಲೇಕದಂತದಯ
ಸದನಾ ಲಂಬೊದರ ಗಜಾನನಾ
ಕರುಣಾಪೂರಿತ ಸರ್ವಾ ಭರಣಾ ಭೂಷಿತ ಭಯ
ಹರಣಾ ತ್ರಿ ಜಗನುತ ಗಜಾನನಾ
ಹೊಂದಿದ ಶರಣರಿಗೆಂದೆಂದು ವಿದ್ಯಗಳ
ತಂದಿದಿರಿಡುತಿಹ ಗಜಾನನಾ
ತಂದೆ ಮಹಿಪತಿ ನಂದನ ಸಾರಥಿ
ಇಂದೆನ್ನನುದ್ಧರಿಸು ಗಜಾನನಾ.

೭೪೩
ಆನಂದ ಲಹರಿ (ಪಾರಮಾರ್ಥ ಮುಯ್ಯದ ಹಾಡು )
ಗಿರಿಜೇಶ ಮನೋಜಾತಾ ಸುರಮುನಿಜನಪ್ರೀತಾ
ಕರುಣಾ ಸಾಗರ ಗಣನಾಥಾ ಜಗವದನಾ
ಚರಣಕೆ ಶರಣೆಂದು ಬಲಗೊಂಬೆ ಕೋಲೆ ೧
ಸಕಲಾ ಮುಖದೊಳು ಯುಕುತಿಯ ನುಡಿಗಳಾ
ಪ್ರಕಟದಿ ನುಡಿಸುವೆ ಜನನಿ ಸರಸ್ವತಿ
ಭಕುತಿಲಿ ಶರಣೆಂಬೆ ಕಲ್ಯಾಣಿ ೨
ಆಚ್ಯುತಾನಂತನೆ ಸಚ್ಚಿದಾನಂದನೆ
ನೆಚ್ಚಿದ ಶರಣರ ಸುರಧೇನುವೆ ಅವಧೂತಾ
ಎಚ್ಚರ ಕೊಟ್ಟು ಸಲಹಯ್ಯ ೩
ಕರಿಯಾ ಮೊರೆಯ ಕೇಳಿ ಭರದಿಂದೊದಗಿ ಬಂದು
ಕರದಿಂದಲೆತ್ತಿ ಸಲಹಿದೆ ಶ್ರೀಶಾ
ಚರಣವದೋರಿ ಕಾಯಯ್ಯ ೪
ಶರೀರ ಒಂದರಲಿದ್ದು ನರನಾರೀರೂಪದಲಿ
ಚರಿತವ ದೋರದೆ ಅನುಪಮ ಶಂಕರ
ಕರುಣಿಸು ಫಣಿಗಣ ಭೂಷಣಾ ೫
ಅಂಜನೀಸುತನಾಗಿ ಕಂಜನಾಭವ ಸೇವೆ
ರಂಜಿಸುವಂತೆ ಮಾಡಿದ ದೈತ್ಯರ
ಭಂಜನ ಹನುಮಂತ ಕರುಣಿಸು೬
ಮೂರಾವತಾರಿಯಾಗಿ ಚಾರು ಚರಿತಗಳ
ತೋರಿದೆ ಜಗದೊಳು ಮುನಿರಾಯಾ ಸುಖತೀರ್ಥ
ತಾರಕ ಶರಣರ ನಿಜಗುರು೭
ಮೇದನಿಯೊಳಗುಳ್ಳ ಸಾಧು ಸಂತರ ನಿಜ
ಪಾದಕ ಮನಿಸುವೆ ಅನುದಿನ ಜಗದೊಳು
ಸಾದರದಿಂದ ನೆನೆಯುತ ೮
ಶರಣವ ಹೊಕ್ಕರ ಕರುಣದಿಂದಲಿ ನೋಡಿ
ತರುಣೋಪಾಯವ ತೋರುವಾ ಮಹಿಪತಿ
ಗುರುರಾಯ ನಿನ್ನ ಬಲಗೊಂಬೆ೯
ಕರುಣವಾಗಲು ಅವರ ಪರಮ ಮೂಕನಜ್ಜಿಹ್ವಾ
ಸುರಸ ಮಾತುಗಳ ಆಡೋದು ಹುಸಿಯಲ್ಲ
ಧರೆಯೊಳು ಅನುಭವವಿದು೧೦
ಅವರಾಮಹಿಮೆಗಳ ವಿವರಿಸಿ ಹೇಳಲು
ಹವಣವೆಲ್ಲಿಹುದು ಮನುಜಗ ಭಕುತರು
ಅವನಿಲಿಬಲ್ಲರು ನಿಜಸುಖ ೧೧
ಏನೆದು ಅರಿಯದಾ ಹೀನ ಅಜ್ಞಾನಿಯು
ನ್ಯೂನಾರಿಸದೇ ಸಲಹಯ್ಯಾ ಮಹಿಪತಿ
ದೀನೋದ್ಧಾರಕಾ ಕರುಣಿಸು ೧೨
ಪದುಮನಾಭನ ಭಕ್ತಿ ಚದುರಾ ಮುತ್ತೈದೇರು
ಒದಗಿನ್ನು ಬನ್ನಿ ಹರುಷದಿ ಮುಪ್ಪದಾ
ಉದಿತಾ ನುಡಿಗಳ ಕೇಳಲು ೧೩
ವಿವೇಕಬೋಧಿಯಂತ ನಾವಕ್ಕತಂಗೇರು
ದೇವಗುರುರಾಯನ ಮಕ್ಕಳು ನಿಜಶಕ್ತಿ
ಭುವನದಿ ನಮ್ಮಾ ಹಡೆದಳು ೧೪
ಸುಜ್ಞಾನ ವೈರಾಗ್ಯ ಸಂಜ್ಞದಿ ಮೆರೆವರು
ಪ್ರಾಜ್ಞರು ನಮ್ಮಣ್ಣಾ ತಮ್ಮರು ಹರಿಭಕ್ತಿ
ಮಜ್ಞರು ಅವರಿಗೆ ಸರಿ ಇಲ್ಲಾ ೧೫
ಭಕ್ತಿಯ ತೌರಮನಿ ಶಕ್ತಿಯ ಬಲದಿಂದ
ಯುಕ್ತೀಲಿ ನಾವು ಬರುತೇವು ಹರಿಭಕ್ತಿ
ಭೋಕ್ತರು ನೀವು ಬರಬೇಕು ೧೬
ದಿವ್ಯಾಂಬರವನುಟ್ಟು ಸುವಿದ್ಯಾ ಇಡಗಿಯು
ತೀವಿದರ ಅರಹು ಅಂಜನಾ ವನೆ ಇಟ್ಟು
ಸುವಾಸನೆಯ ಪುಷ್ಪ ಮುಡಿದಿನ್ನು ೧೭
ಈರೆರಡು ಭೇರಿಯ ಸಾರಿಸಿ ಎಡಬಲಕ
ಆರು ವಂದಣಾ ನಡಸೂತ ಕಹಳೆಗಳು
ಮೂರಾರು ಊದಿಸುತೆ ಬರುತೇವು ೧೮
ಸಾಧನ ನಾಲ್ಕರ ಕುದುರೆಯ ಕುಣಿಸುತ
ಒದಗಿದ ಪ್ರೇಮದ ಮದ್ದಾನಿ ಯೊಡಗೂಡಿ
ಚದುರೇರು ಮುಯ್ಯ ತರುತೇವು ೧೯
ಭಾವದ ಬಯಲಾಟ ಆವಾಗ ಆಡುತ
ಸಾವಧ ಮುಯ್ಯಾ ತರುತೇವು ನುಡಿಗಳ
ನೀವಾತ ಕೇಳಿ ಜನವೆಲ್ಲಾ ೨೦
ಮೆರೆವಾಭಿಮಾನಿಯು ಇರುವ ಸೋದರ ಮಾವ
ಅರಸಿ ವಿಷಯಯೆಂಬತ್ತೆರಯರ ಮನಿಗೀಗ
ಭರದಿಂದ ಮುಯ್ಯ ತರುತೇವು ೨೧
ರಾಯ ಅಭಿಮಾನಿ ಸಿರಿಯದ ಸಡಗರ
ನಾ ಏನ ಹೇಳಲಿ ಜಗದೊಳು ಪಸರಿಸಿ
ತಾ ಎಡ ಬಲವನು ನೋಡನು ೨೨
ಏಳು ಸುತ್ತಿನ ಗೋಡಿ ಮೇಲಾದ ಮನಿಗಿನ್ನು
ಸಾಲಾದ ಒಂಭತ್ತು ಬಾಗಿಲು ಚಲುವಾದ
ಮ್ಯಾಲಿಹ ಒಂದೊಂದು ಗಿಳಿಗಳು ೨೩
ಅಂಗಳ ಹೋಗಲಿಕ್ಕೆ ಕಂಗಳ ಲೇಸಕಂಡೆ
ಮಂಗಳವಾದ ಉಪ್ಪರಿಗೆ ಥರಥರ
ರಂಗ ಮಂಟಪ ನಡುವಂದು೨೪
ಬಿಡದೆಂಟು ಕಂಬದಿ ಸಡಗರ ರಚಿಸಿದ
ಒಡನಿಹ ಚಾವಡಿರಾಯನ ಸೌಖ್ಯಕ
ಪೊಡವಿಲಿ ಸರಿಯಾ ಕಾಣೆನು ೨೫
ಎಂಟು ದಿಕ್ಕಿಗೆ ನೋಡೀ ಘಂಡೆಯ ಕಟ್ಟಿದ
ಎಂಟು ಆನೆಯಾ ಘಡಘಾಡಿ ತಲಿಯಲಿ
ಉಂಟಾದ ಗುರುತರದ ಅಂಕೂಶಾ ೨೬
ಬಿಡದೆಂಟು ಕಂಬದಿ ಸಡಗರ ರಚಿಸಿದ
ಒಡನಿಹ ಆನೆಯಾ ಘಡಘೂಢೀ ಥಳೀಐಳೀ
ಊಂಠಾಧ ಘೂಋಊಥೃಧ ಆಂಖೂಶಾ ೨೬
ಐದೈದು ಸಾಲಕ ಐದೈದು ಕುದುರೆಯು
ಐದೈದು ಭಂಟರು ಅದಕಿನ್ನು ಅನುದಿನ
ಮೈದಡುವುತಾ ಏರುವರು೨೭
ಎತ್ತ ನೋಡಿದರತ್ತ ಸುತ್ತ ಓಡ್ಯಾಡುವ
ಹತ್ತು ಮಂದಿಯಾ ಆಪ್ತರು ಮನರಾಯಾ
ಒತ್ತಿ ಆಳುವ ಪ್ರಧಾನಿ ೨೮
ಅನುವಾದ ಗುಣತ್ರಯಾ ಅನುಜರು ಈತಗೆ
ಅನುಭವಿ ಒಬ್ಬ ಇದರೊಳು ಹರಿನಾಮಾ
ನೆನೆವನು ಅನ್ಯ ಹಂಬಲವಿಲ್ಲಾ ೨೯
ನಾಕಾವಸ್ಥೆಗಳೆಂಬಾ ನಾಕು ಒಳ ಮನೆಗಳು
ಇಕ್ಕಿಹದೊಂದು ಅದರೊಳು ಭಂಡಾರ
ಬೇಕಾದವರೆ ತೆರೆವರು ೩೦
ಈರಾಯ ನೈಶ್ವರ್ಯ ಆರು ಬಣ್ಣಿಸುವರು
ಆರೊಂದು ಮಂದಿ ಮಕ್ಕಳು ಹೆಸರಾದ
ಪರಿಯಾಯ ಕೇಳಿ ಹೇಳುವೆ ೩೧
ಮೊದಲು ಕಾಮ ಕ್ರೋಧವೊದಗಿ ಲೋಭಮೋಹ
ಮದಮತ್ಸರೆಂಬ ಬಾಂಧವರು ನಿಜ ತಂಗಿ
ವಿದಿತ ಅಜ್ಞಾನಿ ಶಕ್ತಿಯು ೩೨
ಬಂದು ಹೊರಗನಿಂತು ಒಂದು ಜಾವಾಯಿತು
ಮುಂದಕ ನಮ್ಮ ಕರಿಯಾರು ನಾವರಸಿ
ಕಂದಿದ ಮಾರೀ ತೋರಳು ೩೩
ಪಶ್ಚಾತಾಪವೆಂಬ ಬಿಚ್ಚಿ ಹಾಸಿಗೆ ಹಾಸಿ
ತುಚ್ಚರ ದೂರ ಝಾಡಿಸೀ ಬರುತೇವು
ಎಚ್ಚರ ಲೋಡಾ ತಂದಿರಿಸಿ ೩೪
ಈ ಕಲ್ಲ ಮ್ಯಾಲದ್ದು ಈ ಕಲ್ಲಿಗ್ಹಾರುವಾ
ತಾ ಕೋಡಗನಾ ಗುಣದಂತೆ ಭಾವಯ್ಯ
ಆ ಕಾಮಣ್ಣನ ಕರಿಯಾರೆ೩೫
ಎಷ್ಟು ಉಂಡರ ದಣಿಯಾ ಎಷ್ಟು ಇಟ್ಟರ ದಣಿಯಾ
ಎಷ್ಟು ಉಟ್ಟರ ದಣಿಯಾನು ಕಾಮಣ್ಣ
ಎಷ್ಟು ಕೊಟ್ಟರ ದಣಿಯಾ ೩೬
ಒಳ್ಳೆವರರಿಯನು ಹೊಲ್ಲವರರಿಯನು
ಕೊಳ್ಳಿಕಾರನಾ ಮತಿಯಂತೆ ಭಾವಯ್ಯ
ನಿಲ್ಲರು ಈತನ ಇದರೀಗೆ ೩೭
ಈತನ ತಮ್ಮನು ಮಾತು ಮಾತಿಗೆ ಬಹಳಾ
ಖ್ಯಾತಿಯ ತಾನು ಪಡೆದಾನು ಕೋಪಣ್ಣ
ಆತನ ಮುಂದಕ ಕರಿಯಾರೆ ೩೮
ನೆಂಟರ ಅರಿಯನು ಇಷ್ಟರ ಅರಿಯನು
ಬಂಟರಾ ಮೊದಲೇ ಅರಿಯನು ತಪಸಿಗೆ
ಕಂಟರನಾದಾ ಈತನೇ ೩೯
ಥರ ಥರ ಕುಣಿವುತ ಘರ ಘರ ಹಲ್ಲು ತಿಂದು
ನೆರೆಮೋರೆ ಕೆಂಪು ಮಾಡುವಾ ಕೋಪಣ್ಣಾ
ಸ್ಮರಣೆಯಾ ತನ್ನ ಮರೆವನು ೪೦
ಕಂಡವರಿಗೆ ತಾನು ಕೆಂಡದ ನುಡಿಯಾಡಿ
ಖಂಡಿಸಿ ಬಿಡುವಾ ಗೆಳತನಾ ಕೋಪಣ್ಣ
ಹಿಂಡುವ ಹಿಡಿದು ಪ್ರಾಣವ೪೧
ತಾನಾರೆ ಉಣ್ಣನು ಜನರಿಗೆ ಇಕ್ಕನು
ಜೇನಿನನೊಣದಾ ಗುಣದಂತೆ ಲೋಭೇಶಾ
ದೀನನ ಮುಂದಕ ಕರಿಯಾರೆ೪೨
ಬಿಚ್ಚಾರುವಿಯನು ವೆಚ್ಚಮಾಡೆಂದಿಗೆ
ಬಚ್ಚಿಟ್ಟು ಹೂಳಿನೆಲದೊಳು ಲೋಭೇಶಾ
ಹುಚ್ಚಾಗಿ ಕಾಯ್ದಾ ಫಣಿಯಂತೆ೪೩
ಕಾಸು ಹೋದಾವೆಂದು ಅಸುವ ಹೋಗುವವರಿ
ಕಾಸಾವೀಸಿಯಾ ಬಡವನು ಲೋಭೇಶಾ
ಹೇಸನು ಎಂದು ಮತಿಗೇಡಿ ೪೪
ಇಳೆಯೊಳೀ ಪರಿಯಲೀ ಗಳಿಸಿದ ಧನವನು
ಕಳೆದುಕೊಂಬರು ಅರಸರು ಕಡಿಯಲಿ
ಶೆಳೆದು ಕೊಂಡನು ಪುಗಸಾಟೆ ೪೫
ಇವರಿಂದ ಕಿರಿಯನಾ ಹವಣವ ನೋಡೀರೆ
ಅವಗುಣದ ರಾಶಿ ಜಗದೊಳು ಮೋಹಾಂಗಾ
ಅವನಾ ಮುಂದಕ ಕರಿಯಾರೇ ೪೬
ತಾಯಿ ತಂದೆಗಳ ನ್ಯಾಯನೀತಿಗಳಿಂದ
ಸಾಯಾಸದಿಂದ ಭಕ್ತಿಯ ಮಾಡದೆ
ಮಾಯದಾ ಬಲಿಗೊಳಗಾದಾ ೪೭
ಏನು ಬೇಡಿದುದೆಲ್ಲಾ ಪ್ರಾಣವವೆಚ್ಚಿಸಿ
ಮಾನಿನೀಯರಿಗೆ ಕುಡುವನು ಮೋಹಾಂಗಾ
ಮನವಿಡ ಒಳ್ಳೆವರ ಸೇವೆಗೆ ೪೮
ಲೆಕ್ಕ ವ್ಯವಹಾರವಾ ಲೆಕ್ಕದಿ ಮಾಡದೇ
ಮಕ್ಕಳಾಟಕಿಯ ಮಾಡುವಾ ಕ್ರೀಡೆಯಾ
ನಕ್ಕಾರೆಂಬ ಸ್ಮರಣಿಲ್ಲಾ ೪೯
ಕಮಲದ ವಾಸನೆಗೆ ಭ್ರಮರವು ಸಿಕ್ಕಿದ
ಕ್ರಮದಿಂದ ನೋಡಿ ಸೆರೆಯಾದಾ ಶ್ರೀವಧು
ರಮಣನ ನಾಮಾ ನೆನಿಯನು ೫೦
ತರುವಾಯದವನೀತಾ ದುರುಳನ ನೋಡಿರೆ
ಮರಳು ಬುದ್ಧಿಯಾ ಮದರಾಯಾ ಆತನಾ
ಸರಕು ಮಾಡುವಾ ಕರಿಯಾರೆ ೫೧
ಹೊರಸು ತೊಯ್ಯದಂತೆ ಭರ್ರನೆ ಬಿಗಿವನು
ಶರಣರ ಕಂಡು ಬಾಗನು ತಲೆಯನು
ಅರಿತವರಿಗೇನಾ ಹೇಳಲಿ ೫೨
ಬಗೆಯಾದೆ ಹಿತವನು ಪಗಡಿಪಂಚಿಗಳಾಡಿ
ಹಗಲಿನಾ ಹೊತ್ತುಗಳೆವನು ರಾತ್ರೀಲಿ
ಮುಗುಧೇಯರೊಡನೆ ಒಡನಾಟಾ ೫೩
ಕಣ್ಣಿಲ್ಲದಾನೆಯು ಚನ್ನಾಗಿ ತಿರುಗುತ
ಮುನ್ನ ಬತ್ತಿದಾ ಬಾವಿಯ ಬೀಳ್ವಂತೆ
ಕಣ್ಣಿದ್ದು ಕುರುಡನಾದನು

೫೩೫
ಗುರು ಗುರು ಎಂದು ಗುರುವಿನ ಬಾಗಿಲಲ್ಲಿ |
ಇರುತಿಹೆ ನಿಜಶ್ವಾನನಾಗಿ ಸದ್ಭಾವದಲ್ಲಿ |
ಗುರುವಿನೆಂಜಲನುಂಡು ಚಿತ್ಸುಖಾ ನೋಡ ಹೋದ |
ಗುರುಪದ ಘನಧೂಳಿ ಸೋಕಲು ಧನ್ಯನಾದ ೧

೫೨೮
ಗುರು ದಯಾಳು ಮೂರ್ತಿ ಶರಣರ ಸಾರ್ಥಿ ಪ
ಮರಹು ಬಿಡಿಸಿ ತನ್ನ ಅರವಿನೊಳಿಟ್ಟು |
ಬೀರುವ ನಿಜ ಸ್ಫೂರ್ತಿ ೧
ಗರೆದು ಸದ್ಬೋಧವ ಸುಜ್ಞಾನ ಸ್ಥಿತಿಯಾ
ದೋರುವ ಮನ ಮೂರ್ತಿ ೨
ತ್ವರಿತದಿ ಮಹಿಪತಿ ನಂದನ ಸ್ವಾಮಿ |
ಪೂರಿಪ | ಮನದಾರ್ತಿ ೩

೫೩೪
ಗುರುಪರಂದೈವವೆಂದು ಗುರುಮನೆಯ ಹೊಕ್ಕು ಪಡಿ |
ಪರಗತಿಯನ್ನ ಮನವೇ ಪ
ಹರಿವ ನದಿಯೊಳಗ ಕುಳಿತಿರುವ ಜ |
ನರನು ಧಡಿಯ ಪೊರೆಗೊಯ್ದು ತೆರದಂತೆ |
ಶರಣ ಬಂದವರ ದುರ್ಧರ ಭವ ಸಮುದ್ರದಿಂ |
ತ್ವರಿತದಿಂ ದಾಟಿಸುವ ತಾನು ೧
ಕಟ್ಟಿ ಮನಿಯ ಪುಳವ ತಂದಿಟ್ಟು ತನ್ನಂದದಿ |
ಘಟ್ಯಾಗಿ ಮಾಡುತಿಹಾ |
ಸ್ಪಷ್ಟ ಭೃಂಗಿಯ ವೊಲು ಮುಟ್ಟಿ ಬಂದರೆ ತನ್ನ |
ಮಟ್ಟ ತನ್ನಂತ ಮಾಳ್ಪಾ ಭೂಪಾ ೨
ಈ ಪರಿಯಲಾಗಿಹ ಮಹಿಪತಿ ಗುರು ಮಹಿಮೆಯ |
ನಾ ಪೊಗಳಲೆನ್ನ ಅಳವೇ |
ತಾ | ಪಸುಳೆ | ಕೃಷ್ಣನಾ ಟೋಪಮಂ |
ಗೆಲಿಪನಾ | ಶ್ರೀ ಪದವ ಹೊಂದಿ ಸುಖಿಸೋ ತರಿಸೋ ೩

೫೩೬
ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ
ಗುರುದಯ ಸಂಗಡಿಯನು ಹಿಡಿದಿಹನು |
ತರಣೋಪಾಯವ ಕೂಡಿದಾ ನಲಿದಾಡಿದಾ ೧
ಅನ್ಯ ಮಾರ್ಗವ ನೋಡನು ತಾ ಕೂಡನು |
ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ ೨
ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು |
ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ ೩
ಪುಂಡಲೀಕನ ಭಕ್ತಿಯಾ | ಆಸಕ್ತಿಯಾ |
ಕಂಡು ತಾನೆವೆ ಬಂದನು ಮುಕುಂದನು ೪
ಕರುಣದಿ ತಂದೆ ಮಹಿಪತಿ | ಸುತ ಸಾರಥಿ |
ನೆರೆ ಭಕ್ತಿ ಕೀಲ ಬೋಧನಾ ಹೇಳಿದನು ೫

೪೫೯
ಗುರುಮೂರ್ತಿಯ ಚರಣವ ನೋಡಿ | ಮುಡಿ |
ವೆರಗಿ ವರಗಳ ಬೇಡಿ ಪ
ಜನುಮ ಜನುಮದಿಂದೆಳೆದಘ ಕುಲಗಳ |
ವನಕ ಸತೇಜ ಕುಠಾರವೆನಿಪ ೧
ತನ್ನ ತಾಮರೆವ ಅವಿದ್ಯದಾ ಕತ್ತಲೆ |
ಯನ್ನಡಗಿಪ ವಾಸರ ಮಣಿಯನೆ೨
ನಿರುತದಿ ತನುಮನ ವಚನದಿ ನಂಬಿಹ |
ಶರಣಜನಾಂಬುಧಿ ಶೀತಕಿರಣಾ೩
ಶ್ರವಣ ಮನನ ಸುಜ್ಞಾನದ ಬೆಳೆಗಳ |
ಹವಣದೋರುವ ದಯ ಜಲಧಾರಾ ೪
ತಂದೆ ಮಹಿಪತಿ ನಂದನುದ್ಧರಿಸುತಾ |
ನಂದದ ಪದವನು ಛಂದದಿತ್ತಿಹ ೫

೪೬೧
ಗುರುರಾಯ ನಂಘ್ರಿಯಾ ಹಿಡಿ ಹಿಡಿ ಹಿಡಿ
ಪರಮ ಸದ್ಭಾವನೆ ಜಡಿ ಜಡಿ ಜಡಿ ಪ
ಎರವಿನಾ ಮನೆಯೊಳು ಸ್ಥಿರವೆಂದು ಮೈಯ್ಯವ |
ಮರೆವರೇ ಹರಿನಾಮಾ ನುಡಿ ನುಡಿ ನುಡಿ ೧
ಕರವ ಮುಗಿದು ಬಾಗಿ ತರಣೋಪಾಯವ ನಿನ್ನ |
ಅರಿತು ಸ್ವಹಿತದಲಿ ನಡಿ ನಡಿ ನಡಿ೨
ತಂದೆ ಮಹಿಪತಿ ಕಂದಗೆಚ್ಚರಿಸಿದಾ |
ಬಂದ ಕೈಯ್ಯಲಿ ಗತಿ ಪಡಿ ಪಡಿ ಪಡಿ೩

*
ಗುರುರಾಯನ ಕರುಣಾ ಪ
ಮರವಿಗೆ ತಾನೇ ಅರವಿಸಿ ಕೊಟ್ಟು |
ಗರಿಯಿತು ಘನ ಸ್ಫುರಣಾ ೧
ಸಾರುವ ಬೋಧ ಪ್ರತಾಪದಿ ಬಂದು |
ದೊರೆಯಿತು ಹರಿಚರಣಾ ೨
ನೋಡಲು ಗುರು ಮಹಿಪತಿ ವಲುವಿಂದಾ
ಮಾಡಿತು ಉದ್ಧರಣಾ ೩

೪೬೨
ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ ಪ
ಏನೆಂದರಿಯದ ಪಾಮರ ನಾನು |
ಜ್ಞಾನ ಭಕುತಿ ವೈರಾಗ್ಯ ರಹಿತನು |
ತಾನೊಲಿದೀಗೆನ್ನ ನುದ್ಧರಿಸಿದನು೧
ತನ್ನನುಭವ ನಿಜ ಮಾತಿನ ಗುಟ್ಟು |
ಎನ್ನೊಳುಸುರಿ ಘನ ತೋರಿಸಿ ಕೊಟ್ಟು |
ಧನ್ಯನ ಮಾಡಿದಸೇವೆಯಲಿಟ್ಟು ೨
ಮಾಡುವ ಘನ ತುಸು ತಪ್ಪನೆ ಹಿಡಿಯಾ |
ಬೇಡಿಸಿಕೊಳ್ಳದೆ ನೀಡುತ ಪಡಿಯಾ |
ರೂಢಿಗಾದನು ಇಹಪರದೊಡೆಯಾ೩
ತನ್ನವನೆನಿಸಿದ ಮಾತಿಗೆ ಕೂಡಿ |
ಮನ್ನಣೆಯಿತ್ತನು ಅಭಯವ ನೀಡಿ |
ಇನ್ನೇನ ಹೇಳಲಿ ಸುಖ ನೋಡಿ೪
ತಂದೆ ತಾಯಿ ಬಂಧು ಬಳಗೆನಗಾಗಿ |
ನಿಂದೆ ಸದ್ಗುರು ಮಹೀಪತಿ ಮಹಾಯೋಗಿ |
ಕಂದನ ಸಲಹುವ ಲೇಸಾಗಿ೫

೪೬೩
ಗುರುರಾಯನಾ ಮನಿಯಾ ನಾಯಿ ನಾನು ಪ
ಗುರು ಗುರು ಎನುತಲಿ ಇರುವೆ ಬಾಗಿಲದೊಳು |
ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯನಾ ೧
ಹರಿ ಶರಣರ ಕಂಡು ಗರುವಿಸಿ ಕೆಲಿಯೆನು |
ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ ೨
ಒಡೆಯನ ಮುಂದೆ ಯನ್ನಾ ಒಡಲವ ತೋರುವೆ |
ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ೩
ಹರಿನಾಮದಿಂದ ಭೋಂಕರಿಸಿ ವದರುವೆ |
ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ ೪
ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ |
ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ ೫

೪೬೫
ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ |
ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ |
ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ |
ಧರೆಯೊಳೆನ್ನ ನೀ ಕರದಿ ಪಿಡಿದುದ್ಧರಿಸುದು
ಪಾವನ ಕಾಯಾ ೧
ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ |
ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ |
ಮಗುವಿಗೆ ಜನನಿಯ ಪರಿ | ಬಗೆವದು ದೀನೋದ್ಧಾರಿ |
ಬಗೆ ಬಗೆ ತಪ್ಪುಗಳೆಣಿಸದೆ ಸಲಹುದು
ಭಕುತರ ನಿಜ ಸಹಕಾರಿ೨
ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ |
ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ |
ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ |
ಸನ್ನುತ ಮಹಿಪತಿ ನಂದನ ಜೀವನ |
ಮನ್ನಿಸು ಹಿಡಿದಭಿಮಾನಾ ೩

೪೬೬
ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ |
ನೆರೆ ನಂಬಿದನಾ ಥರಾ ಕಾವ ಪರೋ ಪರಿ |
ಪರಗತಿಯ ಸಾಧಕರಾಗುವ ಸಹಕಾರಿ |
ಗರೆದು ಬೋಧ ಸುಧೆಯ ಉದಾರಿ |
ನಿರುತದಿ ಭಕ್ತಿ ವಿರಕ್ತಿಯ ಜ್ಞಾನದ |
ಯುಕ್ತಿಯ ದೋರುವ ದಾರಿ ೧
ಹಲವು ಶಾಸ್ತ್ರದ ಮಾತುಗಳ ಕೇಳಿ ಮುಂಗಾಣದೆ |
ತೊಳಲುವ ಮನ ಸಂಶಯವಾ ವಂದು ಮಾತಿನಿಂದೆ |
ಕಳೆದನು ದೃಢ ನೆಲೆಗೊಳಿಸಿ ಸ್ವಾನುಭವದಿಂದೆ |
ಅಳಿದನು ಭವ ತಮ ಮೂಲದಿಂದಲೇ |
ಥಳ ಥಳ ಗುಡುವ ಹೊಳೆವ ಚಿದ್ಫನದ |
ಬೆಳಗವ ದೋರುವ ತಂದೇ೨
ಮೂಢ ಪಾಮರ ಮಂದಧಿಯನಾನೆಂದರಿಯೆನು |
ನೋಡಿ ಕರುಣ ಕಟಾಕ್ಷದಲಿ ಮುಂದಕ ಕರೆದನು |
ನೀಡಿ ಅಭಯ ಹಸ್ತವನು ರೂಢಿಯೊಳು ನಂದನೆನಿಸಿದನು |
ಆಡುತ ಪಾಡುತ ಸೇವೆಯ ಮಾಡಲು ತಂದೆ
ಮಹಿಪತಿ ತ್ಯಾಜವಿತ್ತನು ೩

೪೬೪
ಗುರುರಾಯಾ ನೀ ದಯದಿಂದಲೀ |
ತಾರಿಸೆನ್ನ ನೀ ಭವದಿಂದಲಿ ಪ
ನಾನಾ ಯೋನಿಯಲಿ ಬಹು ಹೀನ ಜನುಮವನು |
ನೀ ನೆವೆ ಕಳೆಯಲು ಕರ್ತನು |
ಧಾನ್ಯಧಾರಣೆ ಮಾಡಿ ಯೋಗ ಸಾಧನ |
ಏನು ಅರಿಯದ ನಾ ಮೂಢನು ೧
ಸುಜನ ಸಮೂಹವಡಿಗಡಿಗೆ ಪಾಲಿಪೆ |
ಭಜಕರ ಪ್ರೀಯಾ ಕೃಪಾಬ್ಧಿಯು |
ರಜತಮ ವಿರಹಿತನಾಗಿ ಸದ್ಭಾವದಿ |
ನಿಜವರಿಲಿಲ್ಲಾ ಜ್ಞಾನಿಯು ೨
ಧರಣಿಯೊಳಗ ದೀನೋದ್ಧಾರಣ ನೆನುತಲಿ |
ಮೆರೆಯುತಲಿದೆ ನಿಮ್ಮ ಕೀರ್ತಿ |
ಗುರುವರ ಮಹಿಪತಿ ಚಿನ್ನನೊಡೆಯನೇ ನೀ
ಕರುಣಿಸೋ ಶರಣರ ಸಾರಥಿ ೩

೫೯೨
ಗುರುವಚನದಲಿ ನಂಬನು
ನರಭಾವ ಅವರೊಳು ಕಾಂಬನು
ಕರಣ ತ್ರಯದಲಿ ಶುಂಭನು
ಗುರು ಭಕ್ತ ನೆನಿಸದರೇನು ಮಾ ೧
ಸರ್ವರೊಳು ಹರಿ ನೋಡದೇ
ಗರ್ವದ ಗುಣಗಳೀಸಾಡದೆ ನಿಜ |
ದರ್ವಿನೊಳು ಮನ ಕೂಡದೇ |
ಭಾಗವತರೆನಿಸಿದರೇನು ಮಾ ೨
ವಾಸನಿಯ ಬಲ ಕಡಿಯಾ ದೇವೆ |
ಆಸೆಯಲಿ ಮನ ಜಡಿಯದೆ ನಿಜ |
ದ್ಯಾಸದಂಡವ ಪಿಡಿಯದೆ ಸ |
ನ್ಯಾಸಿಯೆನಿಸಿದರೇನು ಮಾ ೩
ನುಡಿಯ ಬೀರುತ ಸಂತರಾಜನ |
ರೊಡನೆ ಹಾಕುತ ಸಿಂತರಾ ತಮ್ಮ |
ನಡತಿ ನೋಡಲು ಭ್ರಾಂತರಾ ತಾ |
ಸಂತ ನೆನಿಸಿದರೇನು ಮಾ ೪
ತಂದೆ ಮಹಿಪತಿ ಪಾದವಾ ಬೆರೆ |
ಹೊಂದಿ ಕೇಳಿ ಸಂಬೋಧವಾ ಭವ |
ಬಂಧ ಮಾಡದೇ ವಾತಾ |
ಬಂದ ಜನಮಕಿದೇನು ಮಾ ೫

೫೩೯
ಗುರುವಿಗೆ ನಮಿಸುವೆನು | ಸಲಹುವ ಪ
ಭಕ್ತಿಯ ಒಲಿಸೀ | ವಿರಕ್ತಿಯ ಬೆಳೆಸೀ |
ಮುಕ್ತಿಗೆ ನಲಿಸೀ | ಯುಕಿಗಳನೇ ಕಳಿಸಿ ೧
ಅವಿದ್ಯ ಬಿಡಿಸಿ | ಸುವಿದ್ಯೆವಿಡಿಸಿ |
ಭವ ಭಯಗಡಿಸಿ | ವಿವೇಕ ವಡಗೂಡಿಸೀ ೨
ಗುರು ಮಹಿಪತಿ | ಶರಣರ ಸಾರ್ಥಿ |
ತರಳಗ ಸ್ಫೂರ್ತಿ | ಕರುಣಿಸಿ ಘನಮತಿ ೩

೫೯೩
ಗುರುವಿಗೆರಗೀ ತರಣೋಪಾಯವನರಿಯಲಿಲ್ಲಾ ಮನವೇ |
ಮರುಳನೋ ತರಳನೋ ಬಲು ದುರುಳನು ನಾನರಿಯೇ ಪ
ಶ್ರೀನಾಥನಂಘ್ರಿ ಕಮಲಾ ಧ್ಯಾನವಿಲ್ಲ ಮನವೇ |
ಮಾನವನಫ ದಾನವನೋ ನೀದನವೇನೋ ನಾನರಿಯೇ ೧
ರತಿಯ ಬಿಟ್ಟು ವಿಷಯದಲ್ಲಿ ಗತಿಯಾ ಜರದೀ ಮನವೇ |
ಹಿತವೇನೋ ಮಿತವೇನೋ ಉನ್ಮತವೇನೋ ನಾನರಿಯೇ ೨
ಪೊಡವಿಯೊಳು ನರದೇಹವ ವಿಡಿದು ಬಂದೆ ಮನವೇ |
ನಡಿದೇನೋ ನುಡಿದೇನೋ ಸುಖಪಡಿದೇನೋ ನಾನರಿಯೆ ೩
ಭಕ್ತಿ ಜ್ಞಾನಾ ಬಲಿವಾ ಸುವಿರಕ್ತಿ ಇಲ್ಲಾ ಮನವೇ |
ಸಕ್ತನೋ ಯುಕ್ತನೋ ಆಯುಕ್ತನೋ ನಾನರಿಯೆ ೪
ಗುರು ಮಹಿಪತಿ ಪ್ರಭು ಶರಣರ ಕಾಯ್ದಾ ಮನವೇ |
ನರವರನೋ ಸುರವರನೋ ಕಲ್ಪತರು ವರನೋ ನಾನರಿಯೆ ೫

೫೩೭
ಗುರುವಿನ ಕಾಣದೆ ಪರಗತಿ ದೊರೆಯದು ಪ
ವೇದ ಶಾಸ್ತ್ರಗಳ ನೋದಿ ಭೇದಿಸದೆ |
ವಾದದಿಂದ ಜನಗೆದ್ದನು |
ಕಾದಿ ಬೂದಿ ಕೊಂಡ ಗಾದಿಯಂತೆ ನಿಜ |
ಸಾಧುರ್ಹಾದಿಯನೆ ಮರೆತನು ೧
ಚಾರು ಕರ್ಮ ಧರ್ಮ ಸಾರಯಜ್ಞದಿ |
ಭೂರಿಯಶವನೆ ಪಡೆದನು |
ಏರಿ ಸ್ವರ್ಗದಿ ಜಾರಿ ಬಿದ್ದ ಸಂ |
ಸಾರ ವಾರಿಧಿಯ ಸೇರಿದನು ೨
ರಂಜನಿಂದ ವಣಭಂಜನ್ಯಾತರೆದು |
ಕಂಜನಾಭನ ನೆರೆ ನಿಲುಕನು |
ಅಂಜಲೆತ್ತಿದರ ಗುರು ಮಹಿಪತಿ |
ಪ್ರಾಂಜಳಾಗಿ ಘನದೋರುವನು ೩

೫೪೦
ಗುರುವಿನ ನೋಡಿರೋ ಕರುಣವ ಪಾಡಿರೋ ಪ
ದೀನ ಜನರ ಅಭಿಮಾನಿ ನಿಜ ಸುಖದಾನಿ ಮಹಾಸುಜ್ಞಾನಿ |
ಸ್ವಾನುಭವ ದಾಗರ ಗುಣಗಂಭೀರ ಪರಮ ಉದಾರ |
ಮಾನಸದ ನಿಜಸ್ಫೂರ್ತಿಯಾಗಿಹ
ಮೂರ್ತಿ ವಿಮಲ ಸುಕೀರ್ತಿ |
ತಾನೇ ತಾನಾಗಿರುತ ಜಗದೊಳು
ಭರಿತನಾದಸುರ ಚರಿತನು ೧
ಪರಕ ಪರತರದರಹು ಚಿನುಮಯದಿರಹು
ವಿಡಿಯುತ ಕುರುಹು |
ನಿರುತ ತತ್ವದ ಬೊಂಬೆಯೆನೆ ಸುಖದಿಂಬೆ ಅದು ಏನೆಂಬೆ |
ನರ ಶರೀರದೆ ಬಂದ ಪರಗೃಹಲಿಂದಲ್ಯಾಡೊದ ಛಂದ |
ಹೊರಗ ದಿವ್ಯದ ಭೋಗ ಒಳಗ
ವಿರಾಗದೋರಿದ ಯೋಗನು ೨
ಕರೆದು ಬೋಧದ ಮಳೆಯ ಜ್ಞಾನವ
ಬೆಳೆಯದೋರಿದ ಕಳೆಯ |
ಮರೆದ ಮುನ್ನಿನ ಠಾವ ದೋರಿಸಿ ಜೀವನ್ಮುಕ್ತಿಯ ನೀವ |
ಗುರು ಮಹಿಪತಿ ತಂದೆ ಶರಣವ ಬಂದೆ
ನಮೋ ನಮೋ ಎಂದೆ |
ತರಳ ಕಂದನ ನೋಡಿ ಅಭಯವ ನೀಡಿ
ಕರುಣವ ಮಾಡಿದ ೩

೪೬೭
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ |
ಸಿರಿಯಾ | ಧರಿಯಾ | ಧೊರಿಯಾ | ಚರಿಯಾ |
ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ
ದೃಢ ಭಾವದಿಂದ ಹೋಗಿ ಶುಭ ಚರಣಕೆರಗಿ |
ಕೆಡ ಗುಣಗಳ ನೀಗಿ | ಇಡುವಾ | ತುಡುವಾ |
ಮುಡುವಾ | ಕುಡುವಾ |
ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ ೧
ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ |
ಅರಿಮಿತ್ರರಾ ಸಮವಾಗಿರಿಸಿ | ಹರುಷಾ |
ವರುಷಾ | ದರಸಾ | ಬೆರಸಾ
ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ ೨
ಗುರುವರ ಮಹಿಪತಿ ಅನುಭವಾನಂದ ಮೂರ್ತಿ |
ತರಳ ಕಂದನ ಸಾರ್ಥಿ | ಅರವ್ಹಾ | ಮರವ್ಹಾ |
ಆರವಾ | ಮುರವಾ |
ಕುರವ್ಹಾ ಮಾಡಿ ಸ್ಥಿರವಾ ಮಾಡಿ
ಘನದಿರುವ್ಹಾ ಪರವಲಿಟ್ಟನಾ ೩

೫೩೮
ಗುರುವಿನಾ ಯಾಕೆ ಮರೆಯುವಿರಣ್ಣಾ | ಈ ಲೋಕದೊಳಗ |
ಸಿರಿಯರಸನ ಶುಭ ಚರಣದರಹು ನೀಡಿ |
ಧರೆಯೊಳು ದೀನರುದ್ಧರಿಸುತ ಮೆರೆವಾ ಪ
ಮನಸಿನ ಜಾಡ್ಯ ತನವನು ಬಿಡಿಸಿ | ಶ್ರವಣಾದಿಗಳಿಂದ |
ಅನುವಾಗಿ ಬೋಧಾಮೃತವನೆ ಕುಡಿಸಿ | ಭಕ್ತಿಯ ಕಳೆಯಂಬಾ |
ಘನವಾದಲಂಕಾರವನೆ ತೊಡಿಸೀ | ಯೋಗದ ಸಿರಿಯಿಂದಾ |
ಅನುದಿನ ಜ್ಞಾನಾಂಗನೆಯೊಡನಾಡುವ
ಚಿನುಮಯ ಮಂದಿರವನು ತೋರಿಸುವಾ ೧
ನೀರಿನಾ ಬೊಬ್ಬುಳಿಯಂತೀ ತನುವು | ಮಿಂಚಿನಾ ತೆರನಂತೆ |
ತೋರಿಯಡಗುವದು ಸಂಪದ ಧನವು |
ವಿಷಯಂಗಳ ತಾ ಮೃಗ |
ನೀರಂತೆ ಕಾಣದೆ ಮೋಹಿಪ ಮನವು | ಇದನೆಚ್ಚದೆ ಬ್ಯಾಗ |
ಘೋರವೆನಿಪ ಸಂಸಾರದ ಬಲಿಯನು |
ಜಾರಿ ಶುಭೇಚ್ಛೆ ವಿಚಾರಕ ತಂದು ೨
ಅತಿ ಸ್ನೇಹದಿಂದಲಿ ಅಭಯವ ನೀಡಿ |
ವೇದಾಂತದ ನುಡಿಯಾ |
ನತರಿಂಗೆ ವಿಚಾರಿಸಿ ತಾ ದಯಮಾಡಿ |
ಲೋಹ ಪರಸವ ನೆಶಿದಾ |
ಗತಿಯಂತೆ ಮುಕ್ತನ ಮಾಡುವ ನೋಡಿ |
ಸ್ವಾನುಭವ ಸುಖದಾ |
ಕ್ಷಿತಿಯೊಳು ಗುರುಮಹಿಪತಿ ಸುತ ಪ್ರಭುವಿನಾ |
ಗತಿ ಮತಿ ಕೂಡಿಸಿ ಗತಿಯನೆ ಕೊಡುವಾ ೩


ಗೋಪಾಲ ಬಾಲಾ ಏಳು ಏಳೈಯ್ಯಾ |
ಶ್ರೀಪತಿ ಪರಮಾನಂದ ಸಜ್ಜನರಿಗೆ ಕೊಡುವೆಸ್ವಹಿತಾಶ್ರಯಾ ಪ
ಕಮಲಜ ಮುಖ್ಯ ಸಕಲ ಸುರ ಮುನಿಗಳು |
ನಾಮವೇದೋಕ್ತದಲಿ |
ವಿಮಲತರದಿ ಸ್ತುತಿಗೈಯ್ಯುತಲಿದೇ | ಕರಮುಗಿದು ಆನಂದದಲಿ ೧
ವೀಣೆಯ ಪಿಡಿದತಿ ಝೇಂಝೇಂಕರಿಸುತ |
ಸಂಗದಿ ತುಂಬುರ ನಾ |
ಜಾಣತನಗಳಿಂದ ಪಾಡುತಲಿದಕೋ | ಅಣುಗನು ಪದ್ಮಜನಾ ೨
ನಿನ್ನ ಪದವ ನೋಡುವೆನೆಂದು ಬರದಲಿ |
ರವಿಯನುದಯಿಸಿದಾ ||
ಸನ್ನುತ ಮಹಿಪತಿ ನಂದನ ಜೀವನ | ನೋಡು
ನೋಟದಿದಯದಾ ೩

೧೯೧
ಚದುರಂಗನಾಡುವ ನೋಡಿರೇ |
ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ
ಭೂಮಿಯ ಹಲಗಿಲಿ ಕಾಯದ ಮನೆಯೊಳು |
ವ್ಯಾಮೊಹಿ ಜೀವನು ಅರಸನಿಲ್ಲಿ |
ನೇಮದಿ ಪುಣ್ಯ ಪಾಪದ ಪಲಗಳಿಸುವ |
ಈ ಮನೆವೆಂಬ ಪ್ರಧಾನಿಯನಿಟ್ಟು ೧
ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ |
ನಾನು ನನ್ನದು ಎಂಬ ಒಂಟೆಗಳ |
ಜಾಣತನದ ಬುದ್ದಿ ಚಿತ್ತದ ಕುದುರೆ | ನಿ
ಧಾನ ದಶೇಂದ್ರಿಯ ಕಾಲಾಳಿನಿಂದ ೨
ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ |
ಮೂಲದಿ ಹಾನಿವೃದ್ದಿಗಳಿಹವೋ |
ಮೇಲೆ ಯಶಾಪಯಶ ಪಾಲಿಗೆ ತರುವ | ನೃ
ಪಾಲಕ ಮಹಿಪತಿನಂದನ ಜೀವನ ೩

೧೯೨
ಚರಣವದೋರಿ ಸಲಹೋ ಮುರಾರಿ |
ಧರಿಯೊಳು ಸಾರಿದವರ ಸಹಕಾರಿ ಪ
ಸುರಧೇನು ನೀನು | ಕರೆದುಂಬೆ ನಾನು |
ಸುರತರು ನೀನು | ಆಶ್ರಯಿಸುವೆ ನಾನು ೧
ಸುರಮಣಿ ನೀನು | ಅರ್ಥಾರ್ಥಿ ನಾನು |
ದೊರೆಯನ್ನ ನೀನು | ಸುಖಿಸುವೆ ನಾನು ೨
ಗುರುಮಹಿಪತಿ ಪ್ರಭು | ಪರದೈವ ನೀನು |
ಸ್ಮರಿಸುವ ನಿನ್ನ ದಾಸರಾದಾಸ ನಾನು

೧೫
ಚರಣವನೆನೆಮನವೆ | ನಂಬಿ ಚರಣವ ನೆನೆಮನವೆ |
ಶ್ರೀರಾಮವೇದವ್ಯಾಸರ ಪಾದಕಮಲವ |
ನಿರುತದಿ ಪೂಜಿಪಗುರು ಸತ್ಯಪೂರ್ಣರ ಪ
ಶ್ರೀ ಮಧ್ವಶಾಸ್ತ್ರದಾ | ಸರೋವರ | ಪ್ರೇಮದಿಹಂಸರಾ |
ವ್ಯೋಮ ಕೇಶನಪ್ರಿಯನಾಮ ಮುಕ್ತಾಫಲ |
ಪ್ರೇಮದಿಸೇವಿಪ ಕೋಮಲ ಕಾಯರ ೧
ಪೋಕದುರ್ವಾದಿಗಳಾ | ವದನಕೆ | ಹಾಕಿದ ಕೀಲಿಗಳಾ |
ಬೇಕಾದ ಸಂಪದನೇಕವನುಣಿಸುವ |
ಲೋಕಕೆ ಮಾನ್ಯಾಗಿ ಸಾಕುವರೊಡೆಯರ ೨
ಮುನಿ ಅಭೀನವತೀರ್ಥರ | ಶುಭಕರ | ವನಜದಿಜನಿಸಿದರಾ |
ಘನಸತ್ಯ ವಿಜಯರ ಜನಕನು ತಾನಾಗಿ | ಅ
ವನಿಯೊಳು ಮಹೀಪತಿಜನ ಸಲಹುವರಾ ೩

೧೯೩
ಚರಣಾರಾಧಿಸೋ ಚಾರುತರ ಭೂ
ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ
ದುರಿತಕೋಟಿಯ ಹರಿವ ಸ್ವಾಮಿ ಪು
ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ
ಪರಮ ಉದಾರನಾ ೧
ವಾಹನೋತ್ಸವದಲ್ಲಿ ಪರಿಪರಿ
ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ
ಬಹಳ ಪೂರ್ವನಾ ೨
ನಡೆದು ಯಾತ್ರೆಗೆ ಬರಲು ಹಯಮೇಧ
ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ
ಮೃಡಜರ ದೇವನಾ೩
ಸಕಲರಿಗೆ ನೈವೇದ್ಯನುಣಿಸುವಿ
ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ
ಸ್ವಕರದಿ ತೋರಿಸೀ ೪
ಇಂದು ನಮ್ಮನಿ ದೈವವಾಗಿಹ
ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ
ವೃಂದಸುರ ಧ್ಯೇಯಾನಾ ೫

೪೬೮
ಚಿತ್ತ ಸಖಿ ಬಾಗ | ಗುರುವಿಗೇ ಬಾಗ |
ಉತ್ತಮ ಪರುಷ ನಾರಿಯಲಿಕ್ಕೆ ವಿಷಯದಿಂ ಬಾಗ ೧
ವಿದ್ಯಮದಕ ಬಾಗ ಭಾಗ್ಯಮದಕ ಬಾಗ |
ಸಧ್ಯರೂಪ ಯೌವ್ವನದ ಕುಲಮದಕ ಬಾಗ ೨
ಭಕುತಿಯಲ್ಲಿ ಜಾರೀ ಪರಿಹೋಗದಿರೇ ಜಾರಿ |
ನಿಗಟದಿಂದ ಭಜಿಸಲಿಕ್ಕೆ ವಲುವದನು ಜಾರಿ೩
ಹಿಡಿಯದೇ ಆಲಸಾ ಬಿಟ್ಟು ಕುಡೇ ಕೈಲಾಸಾ |
ಪಡೆದು ಗುರು ಜ್ಞಾನದಿಂದ ನೋಡೇ ಮುಕ್ತಿ ಕಳಸಾ೪
ತನ್ನ ತಾನುದ್ಧರಿಸೀ ಭವದಿಂದ ತಾರಿಸೀ |
ಧನ್ಯಳಾಗ ತಂದೆ ಮಹಿಪತಿ ಪ್ರಭು ಸ್ಮರಿಸೀ೫

೪೩೨
ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ
ಸರಸಿರುಹ ಸಖ ಶತಕೋಟಿ ತೇಜಾ
ಪರಭಕ್ತ ಜನ ಸುರ ಭೂಜಾ
ಕರುಣಾ ಸಾಗರ ಅತ್ರಿ ತನುಜಾ
ಮೊರೆ ಹೊಕ್ಕವರ ರಾಜಾಧೀರಾಜಾ ೧
ಪತಿತ ಜನರ ಮಾಡುತಿಹೆ ಉದ್ಧಾರಾ
ಚತುರ್ದಶ ಭುವನಾಧಾರ
ಅತಿಕೀರ್ತಿ ಸು ಶೋಭಿತ ದಿಗಂಬರಾ
ನುತಗುಣ ಮಂಡಿತ ಮುನಿ ಮನೋಹರಾ ೨
ಪರಮ ಪುರುಷ ಸದ್ಗುರು ಸಿರಿಲೋಲಾ
ಸರಸಿಜ ನೇತ್ರ ದಯಾಳಾ
ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ
ಗುರುವರ ಮಹಿಪತಿ ನಂದನ ಪಾಲಾ೩

೫೯೪
ಛೀ ಛೀ ಛೀ ಛೀ ಪ
ಬಿಟ್ಟು ಕೊಡೋ ನೀ ಸಂಸಾರ ಭ್ರಾಂತಿ |
ಎಷ್ಟು ಸೋಸುವಿ ದುಃಖದ ಪಂಥಿ |
ಅಷ್ಟು ಪಾಶದೀ ಬಿಗಿದಿಹ ಗ್ರಂಥಿ |
ಕಷ್ಟ ಪಟ್ಟಿನ್ನು ಮಾಡುವಿ ಚಿಂತಿ ೧
ಮನದಂತಾಗೆ ಸತಿ ಸುತರೆಲ್ಲಾ |
ಘನ್ನಸ್ನೇಹವ ಮಾಡುವರಲ್ಲಾ |
ಧನ ಯೌವನ ಕೊರತ್ಯಾಗಿ ಸೊಲ್ಲಾ |
ತೃಣ ಸಮಮಾಡಿ ಬಗೆವರು ಖುಳ್ಳಾ ೨
ಹಳೆದಾಯಿತು ತಾಳಿದ ಕಂಥೀ |
ಬಲವಿಂದ್ರಿಯ-ವಾದವು ಶಾಂತಿ |
ಬಲು ನೆರೆಯಿತು ರೋಗದ ಸಂತಿ |
ಕೆಳಗಾಯಿತು ಪೌರುಷ ಖಂತಿ ೩
ಹಿರಿಕಿರಿಯರು ಸರಿಕರು ನಿನ್ನಾ |
ಸರಿದ್ಹೋಗುದು ಕಾಣಲಿಲ್ಲÁ ಕಣ್ಣÁ |
ಅರಿತು ವಿವೇಕವ ಪಡಿಯದೆ ಘನ್ನಾ |
ಮರೆದಾಗುರೆ ನೀ ಮಸಿಮಣ್ಣಾ ೪
ಒಂದಾಗಲು ಮತ್ತೊಂದಾಶೆ |
ಸಂಧಿಸುವದು ವಾಸನೆ ಸೂಶಿ |
ತಂದೆ ಮಹಿಪತಿ ನಂದನು ಹೇಸಿ |
ಇಂದು ಸಾರಿದಾ ಹರಿನಾಮ ಸ್ಮರಿಸಿ ೫

೫೯೫
ಛೀ ಯಾತರ ಜನ್ಮಾ |
ನಾಯಿಗಿಂದತ್ತಾಧಮ ಪ
ಛೀ ಯಾತರ ಜನ್ಮಾ
ನಾಯಿ ಹಿಂದತ್ತಾಧಮ
ಬಾಯಿ ಬಡಕನಾಗಿ
ಮಯ್ಯ ಮರೆವರೇ ನಿಮ್ಮಾ ಅ.ಪ
ಸಾಧುರಾನುಸರಿಸಿ |
ಬೋಧನಾಮೃತ ಸೇವಿಸಿ |
ಹಾದಿವಿಡಿದು ಗತಿ ಸಾಧಿಸಿ |
ದಾದೆಲೋ ಘಾಸಿ ೧
ಬುದ್ಧಿ ತನಗ ಇಲ್ಲಾ |
ತಿದ್ದಿದರ ಕೇಳಲಿಲ್ಲಾ |
ಇದ್ದೆರಡಾದಿನದೊಳು |
ಸದ್ಯ ಸೌಖ್ಯ ಕಳೆದೆಲ್ಲಾ | ೨
ಕಲ್ಲು ಕಟೆಯ ಬಹುದು |
ಬಿಲ್ಲು ಮಣಿಸಬಹುದು |
ನಿಲ್ಲದೇ ವನಕಿ ತುಂಡಾ |
ಸಲ್ಲದಂತೆ ನೀನಾಗುದು ೩
ಮರಹುಟ್ಟಿ ಮರ ಬಿದ್ದಾ |
ತೆರನಾದೋ ಅಪ್ರಬುದ್ಧಾ |
ತಿರುಗಿ ನೋಡಿನ್ನಾರೆ |
ಚ್ಚರಿತು ನೀ ಮದದಿಂದ ೪
ಗುರು ಮಹೀಪತಿಜನಾ
ಧರಿಸಿರೋ ಸದ್ವಚನಾ
ಸರಿಕರ ಕಂಡು ಹ್ಯಾವಾ
ವರಿಸದೆ ಇಹುದೇನಾ ೫

೫೯೬
ಛೀ ಯಾತರ ಬುದ್ಧಿ |
ಸೊಕ್ಕಿನ ಮಾತಿಲಿ ಬಲು ನÉೂಂದಿ ಪ
ಗುರುಹಿರಯರ ಅನುಸರಿಸದೇ |
ಹರಿಚರಣವ ಕೊಂಡಾಡದೇ |
ಬರಡಾ ನಾಲಿಗೆ ಮಾಡಿದಿ ಬರಿದೇ ೧
ವಳ್ಹವ ಹೊಲ್ಲವರಿಯದೇ |
ಯಳ್ಳಿನಿತು ನೀ ವಿಚಾರಿಸದೇ |
ನಿಲ್ಲದೇ ಮಾಡುವಿ ಬಗಳುವದೇ ೨
ಕೆಂಡವ ಕಂಡು ನೆರೆ |
ಮಂಡಿಯಾ ತುರಿಸುವರೆ |
ತುಂಡತನ ಗುಣ ಬಿಡು ಇನ್ನಾರೆ ೩
ಪೊಡವಿ ದೇವತೆಯ ಕೋಣಾ |
ಯಡಬಲ ನೋಡದಿರಲೇನು |
ಕಡೆಯಲಿ ಕೆಡುವರು ಒಂದಿನಾ ೪
ಮಹಿಪತಿಸುತ ಪ್ರಭು ದಾಸರ ಕೈ |
ಅಹುದೆನಿಸಿಕೊಂಬುದೆ ಸ್ವರ್ಗಯ್ಯ |
ವಿಹಿತಲ್ಲೆಂಬುದೇ ನರ್ಕದಾಶ್ರಯಾ ೫

೧೯೪
ಜಗದ ಜೀವರನುದರದಲಿಟ್ಟು ಕರುಣಾಮೃತದಿ |
ಬಗೆಬಗೆಲಿ ಸಲಹುಲೇಹ ತಾಯಿ ನೀನೇ |
ಮಗುಳೆ ಮೂಲ ಪ್ರಕೃತಿಯಲಿ ಬೀಜವಿಟ್ಟು ಮೂ |
ಜಗವ ಪುಟ್ಟಸುತಿಹ ತಂದೆ ನೀನೇ |
ಮಿಗಿಲಾಗಿ ಬಂದ ದುರಿತಂಗಳ ನಿವಾರಿಸುವ |
ಭಾಗವತರಿಗೆ ಅನಿಮಿತ್ತ ಬಂಧು ನೀನೇ ೧
ಸುಗಮದಧಿ ದೈವತಾ ರೂಪದಲ್ಲಿ ಕರಣೇಂದ್ರಿ-
ಮಗಳ ಚೇಷ್ಟಿಸಿ ಕಾವಬಳಗ ನೀನೇ|
ನಿಗಮಾಗ ಮಗಳಿಂದ ಸ್ತುತಿಸುತ ಸುಜ್ಞಾನ |
ದುಗಮದಿರುವ ಗುರುರೂಪ ನೀನೇ |
ಭಕುತಿಯಲಿ ವಿಧಿಮರುತ ಶಿವಗರುಡ ಫಣಿಪೇಂದ್ರಾ |
ದಿಗಳು ಪೂಜಿಪ ಕುಲದೈವ ನೀನೇ ೨
ಹಲವು ಜನುಮದಿ ಸಂಗಡಿಗನಾಗಿ ಸಮತೆಯಲಿ |
ಸಲಿಸಿ ಬಯಕೆಯ ಕಾವ ಗೆಳೆಯ ನೀನೇ |
ಒಲಿದನ್ನ ವಸ್ತ್ರ ಸಂಪದ ಸಕಲವರ ಪುಣ್ಯ |
ಫಲದಂತೆ ನೀಡುತಿಹ ಸ್ವಾಮಿನೀನೇ |
ಜಲಜಾಕ್ಷ ಅದುಕಾರಣ ಎನಗೆ ಸಕಲವು ನೀನೇ |
ಸಲಹು ಭಕುತಿಯನಿತ್ತು ಗುರು ಮಹಿಪತಿ ಪ್ರಭು೩

೫೯೭
ಜಗದೊಳಗ | ಸಾಧುರ ಮಹಿಮೆಯ ನೋಡಿ |
ಸಾದರದಿಂದಲಿದೇ ಸಾಧನವೇ ಮಾಡಿ ಪ
ಸಾಧುರ ನೋಡಿ | ಬಾರದ ಬಯಸುವರಲ್ಲಾ |
ತಾನಾಗಿ ಬಂದ | ದಾರಿಯ ತ್ಯಜಿಸಲಿಕ್ಕಿಲ್ಲಾ
ಬರುದೆ ಕಂಡಾ | ದುರಾಶೆ ಸೇರುವರಲ್ಲೆ |
ದೊರಕಿದನಿತೆ ಲಾಭ | ಸಂತುಷ್ಟರಾಗಿಹರೆಲ್ಲಾ ೧
ಸಾಧುರ ನೋಡಿ | ಬ್ರಹ್ಮಭಾವನೆ ಸಮತಾಳಿ |
ಸಕಳಿಲ್ಲಿ | ಹಮ್ಮಿನ ಮೊಳಿಕೆಯ ಕೇಳಿ |
ಸಿದ್ಧಾಂತದಿಂದ ತಮ್ಮನು ಭವದಲಿ ಬಾಳಿ |
ಮುಮ್ಮುಳಿ | ಬಿಡಿಸುವರೊಂದೊಂದೇ ನುಡಿಹೇಳಿ ೨
ಸಾಧುರ ನೋಡಿ | ಭಕ್ತಿಯ ಆಶ್ರಯ ಮಾಡೀ |
ಬಂದವರಿಗೆ | ಮುಕ್ತಿಯ ಅನ್ನ ಸತ್ರ ನೀಡೀ |
ಸದ್ಭೋಧದ | ಯುಕ್ತಿಯಾನಂದದೊಳಗಾಡೀ |
ಉಕ್ತವಾದ ಗುರು ಮಹಿಪತಿಸ್ವಾಮಿ ಕೂಡೀ ೩

೫೯೮
ಜಗದೊಳಗಿದ್ದವ ಧೀರಾ |
ಅವಗೆಲ್ಲಿಹುದು ಭವ ದೂರ ದೂರ ದೂರ ದೂರ ಪ
ಮೆರೆವ ಪ್ರಪಂಚ ಪರಮಾರ್ಥ ದೂರಾ |
ಎರಡು ಸಮಲಿದ್ದವ ಧೀರ ಧೀರ ಧೀರ ಧೀರ ೧
ಸಕಲವೆಲ್ಲವು ಹರಿಯಚ್ಚರಾ |
ಯುಕುತಿಮನ ಬಲಿದವ ಧೀರ ಧೀರ ಧೀರ ಧೀರ ೨
ಜರಿಯ ಸಂಸಾರವ ವಿರಕ್ತಿಯ ದೋರಾ |
ನೀರು ಕಮಲದಂತೆ ಇರುವಾ ಧೀರ ಧೀರ ಧೀರ ಧೀರ ೩
ಗುರುಮಹಿಪತಿ ಸ್ವಾಮಿ ಚರಣ ತತ್ಪರಾ |
ಗಿರುವ ಸಾವಧಾನದಿಂದ ಧೀರ ಧೀರ ಧೀರ ಧೀರ ೪

೪೮
ಜಯ ಜಯ ಜಯದೇವ | ಶಂಕರ |
ಜಯ ಪಾರ್ವತಿ ಮನೋಹರ ಪ
ರವಿಕೋಟಿ ತೇಜಂಗ ಸ್ಮಿತವದನ |
ಭವಗಜ ಪಂಚಾನನಾ ೧
ಸ್ಮರಹರ ಫಾಲಾಕ್ಷತ್ರಿಪುರಾರೀ |
ಸುರಮುನಿಜನ ಸಹಕಾರಿ ೨
ಇಹಪರ ಸುಖದಾತಾ ಪಾವನಾ |
ಮಹೀಪತಿ ಸುತ ಜೀವನಾ ೩

೩೯೪
ಜಯ ಜಯ ಮಂಗಳ ಗುರುಮೂರ್ತಿ |
ಜಯಸುರವರ ಪಾವನಕೀರ್ತಿ ಪ
ಮೊಲದಜ್ಞ ತಮನಸುವನೆ ಬಗೆದೆ |
ವಿದಿತ ವಿವೇಕ ನಗವನೊಗೆದೆ |
ಒದಗಿ ಸುಜ್ಞಾನ ಧರೆಯ ತಂದೆ |
ಬುಧರ ಸದ್ಭಾವ ಸ್ತಂಬದಲೊಗೆದೆ ೧
ಪ್ರೇಮಪ್ರೀತಿ ರತಿವೆಂಬುವದಾ |
ಭೂಮಿಯ ಬೇಡಿದ ಮೂರ್ಪಾದಾ |
ದಮೆಶಮೆ ಗುಣಕ್ಷತ್ರಿಯ ವೃಂದಾ |
ಸುಮನರ ಬಿಡಸಿದೆ ಸೆರೆಯಿಂದ ೨
ಅಪದಿ ಗೋಕುಲದಲಿ ನಲಿದೆ |
ತಾಪತ್ರಯ ಮುಪ್ಪುರ ವಳಿದೆ |
ವ್ಯಾಪಿಸಿ ಕಲಿಮಲ ಬೆಳಗಿಸಿದೆ |
ಕೃಪೆಯಲಿ ಮಹೀಪತಿ ಸುತಗೊಲಿದೆ ೩

೪೩೯
ಜಯ ಜಯ ಮಂಗಳವೆನ್ನಿರೇ
ಶ್ರಯಕರ ದತ್ತಾತ್ರೇಯ ಮೂರ್ತಿಗೆ ಪ
ನೋಡಿ ಭಾರವ ಕೊಂಡು ನಿಂದುವದಗಿ ಬಂದು
ಬೇಡಿದ ಕೊಡಲಿಕ್ಕೆ ಬಲುಧೀರನು
ಮಾಡಿ ವಿಷಂ ಮೃತಮತಿಗೋಚರವಾಚಿ
ರೂಢಿಸಿ ಹೊರೆವ ಸುಧಯ ನಿಧಿಗೆ ೧
ಶಳವಿಗೆ ಹಾರಿಸದೆ ಶರಣಾವಗ ವಿಡಿ
ದಿಳೆಯ ಸುಖವನಿತ್ತುದುರಿತ್ಹರಿಸಿ
ತಿಳಿಯಲಣುಗತಪ್ಪ ತಾಯಿ ನೋಡದ ಸ್ಥಿರ
ಒಲುಮಿ ಮೋಹನ ಬುದ್ಧಿಮಲಹಾರಿಗೆ ೨
ಪೊಳೆವೆದೆಯೊಳು ನೆನಪಿಗೆ ಮೈಯ್ಯಾಲಿದು
ಹರಿಸಿಲುವಾ ಮನೋರಾಮನುತ ಭಕ್ತಿಗೆ
ಫಲ ಶಾಖನರೆನುಂಡು ಶಿಶುವಾಗಿರುವನಮ್ಮ
ಸಲಹುವ ಮಹಿಪತಿ ಸುತ ಪ್ರಿಯಗೆ ೩

೪೬೯
ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ ಪ
ಪರಮ ಪುರುಷ ಮಹಾದೀನೋದ್ಧರಣಾ |
ದುರಿತ ನಿವಾರಣ ಪತಿತ ಪಾವನಾ |
ಶರಣ ಜನರ ಪಾಲನಾ ಕರುಣಾ ಸಾಗರಾ ೧
ಜಗದೊಳು ಬೋಧ ಶರಾಸನ ಧರಿಸಿ |
ಅಗಣಿತ ದುಷ್ಟ ಗುಣವ ಮರ್ದಿಸಿದೆ |
ಭಕುತ ಹೃತ್ಪಂಕಜ ಸಂಚಾರಾ ಆಗಮ ಸನ್ಮತನೇ ೨
ಜನನ ಮರಣ ಆಂಕುರ ಕುಠಾರ |
ಅನಾಥ ಜನ ಜಾತಕ ಜಲಧರನೇ |
ಅನುಪಮ ಮಹಿಮಾ ಪಾಲಿಸೋ ಅನುದಿನ ಕೃಷ್ಣನಾ ೩

೩೮೭
ಜಯ ಜಯ ಯಾಧವನಾಥ ಮುರಾರಿ
ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ
ದೀನೊದ್ದರ ಸಗಟಾಸುರದಮನಾ
ಆನಂದ ಮೂರುತಿ ಫಣಿವರ ಶಯನಾ ೧
ಕರುಣಾ ಕರಗಿರಿಧರ ಸರ್ವೇಶಾ
ಶರಣಾಗತ ವತ್ಸಲ ಪಯೋನಿಧಿವಾಸಾ ೨
ಕಂಬುಕಂದರ ಕಮಲಳಾಕ್ಷಾ
ಅಂಬುಜ ಭವನುತಗೋಗೋರಕ್ಷಾ ೩
ಶಂಬರ ಮಥನ ಜನಕ ಮಹಾ ಮಹಿಮಾ
ಜಂಭಭೇದಿಸುತ ಸಖಘನ ಶಾಮಾ ೪
ಪೀತಾಂಬರಧರ ಕೃಷ್ಣ ಶ್ರೀಧರಾ
ಮಾತುಳನಾಶನ ಕೃತಭೂಧರಾ ೫
ಗುರುಮಹಿಪತಿ ಸುತ ಜೀವನರಾಮಾ
ಪರಮಾನಂದ ಕಾಯಕ ಗುಣಧಾಮಾ ೬

೩೮೬
ಜಯ ಜಯ ರಾಮ ಸಕಲ ಗುಣಧಾಮನೇ
ಜಯ ಶರಣರ ಸುರಧೇನು
ಜಯ ಜಯವಿಧಿಹರ ವಂದ್ಯ ಪರಾತ್ಪರ
ಜಯ ಜಯ ಸೀತಾರಮಣ ಪ
ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ
ಘಕ್ಕನೆ ದಶರಥನಾಲಯದೊಳು ಪುಟ್ಟಿ
ಮಿಕ್ಕನುಜರ ಕೂಡ ಬೆಳೆದು
ಚಿಕ್ಕ ತನದಿ ತಾಟಕಿಯ ಕೊಂದು ಮುನಿಮಖ
ಅಕ್ಕರದಲಿ ಕಾಯದು ಬರಲಿ
ಸಿಕ್ಕಿದ ನೆಲದೊಳು ಸತಿಯನುದ್ಧರಿಸಿಜಾ
ನಕ್ಕಿ ಕೈವಿಡಿದನೇ ಜಯತು ೧
ಕೈಕೆ ನುಡಿಗೆ ಬಂದು ವನದೊಳು ಶೂರ್ಪನಖಿಃ
ಆಖರ ದೂಷಣರಳಿದು
ಲೋಕಮಾತೆಯಾಕೃತಿ ಒಯ್ಯಲು ರಾವಣ
ತಾಕಪಿಕರಢಿಯನೆ ಕೂಡಿ
ಆಕುಮತಿಯ ಬಳದಿ ಕೊಂದು ಶರಣಗೆ
ಬೇಕಾದ ಸ್ಥಿರಪದ ನೀಡಿ
ಶ್ರೀ ಕಮಲಾಂಬಕಿ ಸಹಿತ ಹೊಕ್ಕನು ಬಂದು
ಸಾಕೇತ ಪುರಾಧೀಶ ಜಯತು ೨
ಇಳೆಯ ಸಾಮ್ರಾಜ್ಯ ಸಿಂಹಾಸನದಲಿ ಬರೆ
ಲಲನೆ ದಾಮದಲಿ ಕುಳ್ಳಿರಲಿ
ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು
ಒಲಿದು ಸಮ್ಮುಖದಿ ಹನುಮ ಕೈಯ್ಯ ಮುಗಿದಿರೆ
ಉಳಿದಸುರನರರು ಕುಳ್ಳಿರಲಿ
ನಲಿದು ಕಾಸಲಿ ಗುರು ಮಹಿಪತಿ ಪ್ರಭುವಿಗೆ
ಬೆಳಗಿದಳಾರತಿ ಜಯತು ೩

೫೨
ಜಯ ಜಯಾ ದೇವ ದೇವಾ
ಮಾರ್ತಾಂಡ ಭೈರವಾ
ದಯದಿಂದ ಪಾಲಸೆನ್ನಾ
ಭಕ್ತರನುದಿನಕಾವಾ ಪ
ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ
ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ ೧
ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ
ಅವಗುಣ ಬಲಮುರಿದೇ | ಜಗಕಭಯವ ಬೀರಿ ೨
ಏಳು ಕೋಟಿ ರೂಪವಾಗಿ | ದೇವರೆಲ್ಲರು ಸಾಗಿ
ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ ೩
ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ
ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ ೪

೧೨
ಜಯ ಭಾಗೀರಥಿದೇವಿ ಜಯ ಜಾನ್ಹವಿ |
ಭವ ಭಯನಿವಾರಿಣಿ ಸುಖಕಾರಣಿ ಪ
ಪಟು ತ್ರಿವಿಕ್ರಮನ ಉಂಗುಟ ಸೋಂಕಲಾರ್ಭಟದಿ |
ಸ್ಫುಟಿತ ಬ್ರಹ್ಮಾಂಡ ನಿಜಕಟಹದಲ್ಲುದಿಸಿ |
ನೆಟನೆ ಪದುಮಜಪಾತ್ರ ತಟಕೆೃದು ತೀರ್ಥೆನಿಸಿ |
ನಿಟಲಲೋಚನ ನಘನಜಟೆಗೆ ಬಂದು ೧
ಕೆಲವು ಕಾಲಕೆ ಹಿಮಾಚಲದಿಂದ ಭಗೀರಥಗೆ |
ಒಲಿದು ಕಾಶೀ ಪ್ರಯಾಗದಲಿ ಬಂದು |
ಸಲೆಜಗವ ತಾರಿಸುತಲಿ ಮುಖ ಸಹಸ್ರದಿಂ |
ಜಲಧಿಯನೆ ಕೂಡಿ ಫಣಿ ನಿಲಯಕಿಳಿದೇ೨
ಸ್ಮರಣೆಯಿಂದಘಹರಿಪೆ ದರುಶನದಿ ಗತಿಯೀವೆ |
ನೆರೆ ಸ್ನಾನದಾ ಫಲವನರಿವರಾರು |
ಗುರುಮಹೀಪತಿಜನುದ್ಧರಿಸು ಕರುಣದಲಿ |
ಸಾಗರಪ್ರೀತೆ ಖ್ಯಾತೆ ಲೋಕಮಾತೆ೩

೭೫೮
ಜಯ ಮಂಗಳಂ ನಿತ್ಯ ಶುಭಮಂಗಳಂ |
ಪ್ರಿಯಕರಾನಂದ ಶ್ರೀ ತುಲಸಿ ಮಾತೆ ಪ
ದಿನಕರನು ಉದಯಿಸಲಾಕ್ಷಣದಿ ಭಕ್ತರು ನಿನ್ನ |
ನೆನೆದು ಭಕುತಿಯಲಿ ಜೀವನ ನೀಡುತಾ |
ಪಣೆಗೆ ಮೃತ್ತಿಗೆ ತೀಡಿ ಪ್ರಣೀತರಾಗುತ ಪ್ರದ
ಕ್ಷಣೆ ಮಾಡಿದವರ ಫಲವೆಣೆಸಲಳವೇ ೧
ಹರಿಯನಾಗ್ರದಿ ತ್ರಿಪುರಹರನು ಮಧ್ಯದಿ ಬ್ರಹ್ಮ |
ನಿರುವ ಮೂಲದಿನಾಕಚರರು ಮುದದೀ |
ನಿರುತ ಶಾಖಂಗಳಲಿ ಚರಿಸುತ್ತಲಿಹರೆಂದು |
ಧರಣಿ ಸುರರರ್ಚಿಪರು ಹರುಷದಿಂದಾ೨
ಕಾರ್ತಿಕಶುದ್ಧ ಸುಮುಹೂರ್ತ ದ್ವಾದಶಿಯಲ್ಲಿ |
ಅರ್ತಿಯಿಂದಲಿ ಸುಜನರರ್ತುತ್ವರದೀ |
ನರ್ತನದಿ ತವನಾಮ ಕೀರ್ತನೆಯ ಪಾಡುತಲಿ |
ಬೆರ್ತುನಿಂದವರ್ಗೆ ನೀ ಸಾರ್ಥಿ ಎನಿಪೆ ೩
ಕಾಂತೆ ನಿನ್ನ ನುದಿನವನಂತ ಜನ ವಂದಿಸುತ |
ಅಂತರಂಗದಿ ನಲಿದು ನಿಂತರವರಾ |
ಚಿಂತೆಪರಿಪರಿಪೆ ಅಳಕಾಂತೆ ದುರಿತಘನಿಚಯ |
ಕಾಂತಾರ ಪಾವಕ ಸುಸಂತ ವಿನುತೆ ೪
ಅದಿಗಿಂದಿಗೆ ನೀನು ವೃಂದಾವನದಿ ಮಹಿಮೆ |
ನಿಂದು ತೋರಿದೆ ಯೋಗಿವೃಂದ ವಂದ್ಯೆ |
ತಂದೆ ಶ್ರೀ ಗಿರಿಧರನ ಕಂದನನುದಿನ ಸಲಹು |
ಮಂದರೋದ್ಧಾರ ಪ್ರೀಯ ಕುಂದವದನೆ ೫
ಅಂಕಿತ-ಗಿರಿಧರಕಂದ

೩೮೩
ಜಯ ಮಂಗಳಂ ಮಹಾ ಶುಭ ಮಂಗಳ
ತ್ರಯಭುವನ ವಂದ್ಯ ಸೀತಾಕಾಂತಗೆ ಪ
ದಶರಥಾತ್ಮಜನಾಗಿನರಲೀಲಿ ನಟಿಸಿದಗ
ಋಷಿಮುಖಕಾಯ್ದ ಹಿಲ್ಯೋದ್ದಾರಗ
ಅಸಮಧನುಮುರಿದ ವನಿಜೆಯಾಮಾಲೆಧರಿಸಿದಗ
ಬೀಸಜಲೋಚನ ಜನಕ ಜಾಮಾತಗ ೧
ಮೂನವರನುಜರ ಕೂಡಿ ಕಲ್ಯಾಣವಿಡಿದಂಗ
ದೇವಭೃಗುಪತಿ ಮನಾನಲಿಸಿದವಂಗ
ಅವಿಭವಿ ಬಂದಯೋಧ್ಯಾ ಪುರವನಾಳ್ದಂಗ
ಜೀವಜಾತಕಸುಖವ ಬಡಿಸಿದಂಗೆ ೨
ಗುರು ಮಹೀಪತಿ ಸುತನ ಜೀವ್ಹದಲಿತಾನಿಲಿಸಿ
ನಿರುಪಚಾರಿತ್ರ ನುಡಿಸಿದಂಗೆ
ಧರೆಯೊಳಗ ದೀನ ಅನಾಥರನು ಪೊರೆವ
ಪರಮ ಮಂಗಳ ನಾಮ ಶ್ರೀ ರಾಮಗೆ ೩

ಜಯ ಮಂಗಳಂ ಮಹಾ ಶುಭ ಮಂಗಳಂ
ಮಂಗಳಂ ಶ್ರೀರಮಾ ರಮಣ ಮುಕುಂದಗೆ
ಮಂಗಳಂ ಹರಿಸಚ್ಚಿದಾನಂದಗ
ಮಂಗಳಂ ಅಚ್ಯುತಾನಂತ ಗೋವಿಂದಗೆ
ಮಂಗಳಂ ವಿಧಿಭವಾಮರ ವಂದ್ಯಗೆ ಪ
ಆನಂದ ಕೋಶಗ ಅಖಿಳಜನಪೋಷ
ದಾನವಿನಾಶಗ ದೇವೇಶಗ
ವನಮೂಲಭೂಷಗವರದ ಹೃಷೀಕೇಶಗ
ಮುನಿಜನೋಲ್ಲಾಸಗ ಧರಿಣೀಶಗೆ ೧
ಮಖಸಾರಭೋಕ್ತಗ ಮಾಯಾ ವಿಮುಕ್ತಗ
ಸಕಲಗುಣಯುಕ್ತಗ ವಿರಹಿತಂಗೆ
ಭಕ್ತಾನುರಕ್ತಗ ಚಿಂತ್ಯ ಅವ್ಯಕ್ತಗ
ಅಕುತೋಭಯದಾ ತಗ ಜದಧಾತಗೆ ೨
ವರಯದುರಾಯಗ ನಂದ ಕುಮಾರಗ
ಸುರಸಹಕಾರಗ ಸುಂದರಗ
ದುರಿತ ಸಂಹಾರಗ ಅಮಿತಾವತಾರಗ
ಗುರುಮಹೀಪತಿ ನಂದ ನೋದ್ಧರಗೆ ೩

೩೮೧
ಜಯ ಮಂಗಳಂ ಮಹಾ ಶುಭ ಮಂಗಳಂ
ಭಯ ನಿವಾರಣಮಾಳ್ಪ ಶ್ರೀದೇವಗ ಪ
ಭವದ ಭಯ ಭಂಗಂಗೆ ಸರ್ವಾತರಂಗಗೆ
ರವಿಕೋಟಿ ಭಾಗಂಗೆ ಸುರತುಂಗಗೆ
ತವಕದಿ ಅನಂಗಗ ಪಡೆದಯಮಂಗಗ
ಅವನಿರಿಸಿಸಂಗಗ ಶ್ರೀರಂಗಗ ೧
ದೀನ ಜನದಾತಗ ಮಾಯಾ ಅತೀತಗ
ಅನಾಥನಾಥಗ ದಯಭರಿತಗ
ಅನುಪಮಚರಿತಗ ಅಜನದ್ವೈತಗ
ರಣತನಿರ್ಭರಿತಗ ಅವಧೂತಗ ೨
ವಿಹಗ ಧ್ವಜ ಛಂದಗ ದೇವಕಿಯ ಕಂದಗ
ಮಹಾನಿಗಮ ತಂದಗ ಮುಕುಂದಗ
ಮಹಿಪತಿ ನಂದನು ಪಾಲಿಪಾನಂದಗ
ಇಹಪರಾವಂದ್ಯಗ ಗೋವಿಂದಗ ೩

ಜಯ ಮಂಗಳಂ ಮಹಾ ಶುಭಮಂಗಳಂ
ಶ್ರೀಯಕರಾನಂದ ಘನಚಿನ್ಮೂರ್ತಿಗೆ ಪ
ಅನಿಮಿಷಾಕ್ಷಗ ಧರಮಹೀಗ ಸಂಭೋದ್ಬವಗ
ಮುನಿಪಟು ಕ್ಷತ್ರಿ ಕುಲಸಂಹಾರಗ
ಇನಕುಲೋದ್ಭವ ವಾಸುದೇವಶ್ರೀ ಬೌದ್ಧಗ
ಘನತರದ ತುರಗ ಹರರಾವುತಂಗೆ ೧
ಮರಮತ್ಸ್ಯ ಶ್ರೀಕಮಠ ಹಿರಣ್ಯಕ್ಷಮರ್ಧನಗೆ
ಕೊರಳೊನಮೂಲಿ ವಾಮನದೇವಗೆ
ಧರಿ ಭೂಸುರಗಿತ್ತು ಧಾಶರಥಿ ಶ್ರೀ ಹರಿಗೆ
ಸಿರಿದಿಂಗಬರ ಕಲ್ಕಿ ಯವತಾರಗೆ ೨
ನಿಗಮನುಳುಹಿದ ಕೂರ್ಮ ವರಾಹನರಸಿಂಹಗೆ
ಅಗವೈರಿಯನುಜ ಪರಶುರಾಮಗ
ರುಘುನಾಥ ಕೃಷ್ಣ ಬೌದ್ದೇಶಕಲಿನಾಶಗ
ಜಗದ್ಗುರು ಮಹಿಪತಿ ಸುತಪ್ರಿಯಗೆ ೩

೧೦
ಜಯಕೃಷ್ಣವೇಣಿ | ಜಗಪಾವನೀ |
ಜಯಕರುಣಿ ಭಯಹರಿಣಿ ಭವತಾರಿಣಿ ಪ
ಮಾಬಳೇಶ್ವರನ ಸುಜಟಾ ಭಾಗದಲಿ ಪದ್ಮ |
ನಾಭನಂಶದಿ ಬಂದು ಶೋಭಿಸುತಲಿ |
ಈ ಭುವನಜನರ ಮನದಾಭೀಷ್ಟಮಂ ಕೊಡಲು |
ತಾ ಭರದಿ ನದಿರೂಪನಾಗಿ ಪ್ರವಹಿಸಿದೆ ೧
ನಿನ್ನೆಡೆಗೆ ನಡೆತಂದು ನಿನ್ನ ಜಲ ವೀಕ್ಷಿಸುತ |
ನಿನ್ನ ಘೋಷವ ಕೇಳಿ ತನ್ನ ಕರದಿ |
ನಿನ್ನ ಸ್ಪರ್ಶನ ಅಚಮನ ಮಾರ್ಜನದಿಂದ |
ತನುಮನೇಂದ್ರಿಯಗಳು ಪಾವನವಾದವು ೨
ಪೊಡವಿಯೊಳಧಿಕ ತೀರ್ಥ ತಡಿಯಗ್ರಾಮವೇ ಕ್ಷೇತ್ರ |
ಬಿಡದೇ ಭಜಿಸುವ ನರರು ದೃಢದ ಸುರರು |
ಒಡಲೊಳಿಹ ಜಲಚರಗಳೊಡನೆ ಗತಿಸಾಧಕರು |
ನುಡಿವ ಪಕ್ಷಿಗಳು ಸಲೆ ಗಿಡಮರಗಳು ೩
ಸಾಗಿಸುವ ಕರ್ಮೇದ್ರಿ ತ್ಯಾಸದ್ಧರ್ಮದಿಂ |
ಯೋಗ ಅಷ್ಟಾಂಗದಿಂ ಯಾಗದಿಂದ |
ಭೋಗಿಸುವ ಪುಣ್ಯವನು ರಾಗದಿಂ ತೀರದಿಹ |
ಯೋಗಿಜನಕೀವೆ ತಾನೀಗ ದಯದಿ ೪
ಬಿಂದುಮಾತ್ರವೇ ಬೀಳಲೊಂದು ಕಾಯದಿ ಅಘದ |
ವೃಂದ ನಾಶನವಹುದು ಮಿಂದಡವನ |
ಛಂದಮಂ ಬಣ್ಣಿಸುವದಿಂದು ತಿಳಿಯದು ಎನುತ |
ತಂದೆ ಮಹೀಪತಿ ಜ ಕರದ್ವಂದ್ವ ಮುಗಿಯೇ೫

೭೫
ಜಯಜಯ ಜಗಜ್ಜನನಿ ಜಗದಂಬಿಕೆ |
ಜಯ ರಮಾದೇವಿ ಸಾಗರ ಕನ್ನಿಕೆ ಪ
ಪದ್ಮ ಪದ್ಮಾಲಯೇ ಪದ್ಮದಳಲೋಚನೆ |
ಪದ್ಮಪ್ರಿಯೆ ದಿವ್ಯ ಪದ್ಮವದನೆ |
ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ |
ಪದ್ಮಾಸನಾದೆನುತ ಪದ್ಮಚರಣೆ ೧
ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ-
ತಂಗ ಸನ್ನಿಭ ಕೋಮಲಾಂಗಿ ವರದೆ ||
ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ |
ಅಂಗಜಾಜನನಿ ಶ್ರೀರಂಗಪ್ರಿಯೆ ೨
ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ |
ನುತಗುಣ ಮಹಿಮಾಯ ಶ್ರುತಿ ಪೂಜಿತೆ ||
ಪತಿತಪಾವನ ಮಹೀಪತಿನಂದನಿಷ್ಟ | ದೇ
ವತಿ ಭಕ್ತ ಜನಸುಖದಿ ಮತಿದಾಯಿತೆ ೩

ನುಡಿ-೩: ಚಂಡಮುನಿಯ ಬೇಡಿಕೊಂಡ
೫೬
ಜಯಜಯವೆಂದು ಶರಣೆನ್ನಿ ಹನುಮಯ್ಯಗ |
ಜಯ ಭೀಮಶೇನಾನಂದ ತೀರ್ಥರೇಯಗ ಪ
ಆದಿಲಿ ಅಂಜನಿ ಉದರದಲಿ ಬಂದಾ |
ಸಾದರ ರಘುಪತಿ ಸೇವೆಯಲಿ ನಿಂದಾ |
ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ |
ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ ೧
ಎರಡನೇ ರೂಪದಿ ಕುಂತಿ ಉದರದಲಿ ಬಂದಾ
ಸಿರಿಯಾದವರಾಯನ ಭಕುತಿಗೆ ನಿಂದಾ
ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ
ಅರಸ ಯುಧೀಷ್ಠಿರನಾ ವಾಸಿಯ ತಂದಾ೨
ಮೂರನೇ ರೂಪದಿ ಮಧ್ಯಗೇಹದಿ ಬಂದಾ
ನೆರೆ ಬಾದರಾಯಣನಾಜ್ಞೆಲಿ ನಿಂದಾ
ವರವರದ್ಹೇಳಿದ ತತ್ಪಾರ್ಥ ಛಂದಾ
ಗುರುವರ ಮಹಿಪತಿ ನಂದನ ಮನಕಾನಂದಾ೩

೩೮೦
ಜಯಜಯಾ ಶ್ರೀನಿವಾಸಾ
ಜಗದೀಶಾ ವೆಂಕಟೇಶಾ
ದಯದಿಂದಲಿ ಪಾಲಿಸೆನ್ನಾ
ದೋರಿನಿಜ ಪ್ರಕಾಶಾ ಪ
ಉರಗಾದ್ರಿಯಲ್ಲಿ ಬಂದು
ಭೂವೈಕುಂಠಿದೇಯಂದು
ಕರದಿಂದ ಮಹಿಮೆದೋರಿ
ತಾರಿಸುವ ಜನದಿಂದು ೧
ಧರ್ಮಾರ್ಥ ಕಾಮ್ಯ
ಚತುರ್ವಿಧಮುಕ್ತಿಗಳು
ಧರ್ಮವರಿತೆಸಾಧುರಿಗೆ
ನೀಡುತಿಹೆ ದಯಾಳು ೨
ಕುಲಧರ್ಮದಿಂದಲೆನೆಗೆ
ಮಾನ್ಯತಾನಬಂದ್ಹಾಂಗೆ
ವಲಮೆಯಿಂದ ಪರಗತಿಗೆ
ಕುಡುಮಾನ್ಯತೆನವೀಗ ೩
ಮಂದರೊಳು ಮಂದನಾನು
ಜ್ಞಾನಭಕ್ತಿಯರಿಯೆನು
ತಂದೆ ಮಹಿಪತಿಸ್ವಾಮಿ
ಇಂದು ಉದ್ಧರಿಸುನೀನು ೪