Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೨೭೯
ಬಂದನಮ್ಮಾ ಬಂದನಮ್ಮಾ ನಮ್ಮ ರಂಗನು|
ಇಂದು ನಮ್ಮ ಪೂರ್ವಾರ್ಜಿತಫಲ ವದಗಿ ಬಂದಿತೆಂದು ಪ
ಬಿಸಜಾಸಖ ಶತಕೋಟಕಿ ಸಮತೇಜ ದೊಪ್ಪತಿಹನಖವು|
ಯೆಶೆವ ಅಂದುಗೆ ಗೆಜ್ಜೆಯಿಂದ ಘಲುಘಲುಕೆನುತಾ ೧
ಉಟ್ಟ ಪೀತಾಂಬರದ ಮ್ಯಾಲ ವಡ್ಯಾಣವನಿಟ್ಟುಕೊಂಡು|
ಕಟ್ಟಿದ ಸು ಕಿಂಕಿಣಿಗಳಿಂದ ಝಣ ಝಣ ಕೆನುತಾ೨
ಕರ ಕಡಿಗ ವಂಕಿ ತೋಳ ತಾಯಿತ ಕೇಯೂರವನು|
ಕೊರಳ ಕೌಸ್ತುಭ ವನಮಾಲೆಯಿಂದ ಪೊಳವುತಾ ೩
ಥಳ ಥಳ ಹೊಳೆವಾ ಕುಂಡಲ ಕದಪು ಚಲ್ವಿನಿಂದಾ|
ದಾಳಿಂಬ ದಶನಾ ಸುನಶಿಕದೆಸಳು ಕಣ್ಣಿಂದಾ ೪
ಸ್ಮರನಾಥನು ಸೋಲಿಪ ಭ್ರೂಲತೆಯು ಫಣಿಯಲ್ಲಿಕ|
ಸ್ತೂರಿಯನಿಟ್ಟು ಹರಿಮಯ ಕಿರೀಟಕಾವಳಿಮ್ಯಾಲಿರಿಸಿಕೊಂಡು೫
ಬೆರಳುಂಗುರ ಕೈಯಿಂದಾ ಕೊಳಲ
ಪಿಡಿದು ಬಿಂಬಾಧರಕತಂದು|
ಪರಿ ಪರಿಯಲೂದುತಾ ಮಹಿಪತಿ ನಂದನ್ನ ಪ್ರೀಯನಾ ೬

೨೮೧
ಬಂದನೇಳೆ ದೇವಿ ರಂಗ ಮನೆಗೇ|
ಇಂದು ಮುಖಿ ನಿನ್ನ ಮನದಾ ನಂದ ಕೊಡಲು ಪ
ಮುಕ್ತಿ ಮಂಟಪದಲ್ಲಿ ಭಾಗವತ ರೊಡಗೂಡಿ|
ಭಕ್ತಿರಂಗದೊಳಾಡಿ ಸುಖವ ಸೂರ್ಯಾಡಿ ೧
ಗರುಡವಾಹನ ಪರಾಕೆಂಬ ಶೃತಿ ಭಟರು|
ಮೂರಾರು ಸಾಲ ಪಂಜಿನ ಬೆಳಗಿನಿಂದ ೨
ಸಕಲ ಸುಂದರ ರಾಶಿಯೆ ಎನಿಪ ಮೋಹನರೂಪ|
ಅಕಳಂತಕ ಬ್ರಹ್ಮಾದಿ ಸುರರೊಡೆಯಾ ೩
ಶರಣ ವತ್ಸಲ ದಯಾನಿಧಿ ದುರಿತ ಹರನೆಂಬ|
ಬಿರದ ಜಾಂಗಟೆ ಶಂಖ ಕೌಸಾಳರವದಿ ೪
ತನ್ನ ಭೃತ್ಯರ, ಭೃತ ಭೃತ್ಯನ ಕರೆದು|
ಮನ್ನಿಸುವ ಮಹಿಪತಿ ಸುತಪ್ರಾಣ ಪದಕಾ ೫

೨೮೨
ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು|ಹೊರಗಿಂದಲಿ ಬರಲು|ಚೆಂದದಿ ರುಕ್ಷಿಣಿ ಮನದೊಳರಿತು ನುಡಿ|ಎಂದಳು ಸರಸದಲಿ ಈಗ|ನೀನು- ಪ
ಇರುಳುಮಧ್ಯದಲಿ ಧೀರತನದಲಿ|
ಸಾರಿಸಾರಿಕದನೋತ್ತುತಲಿ|
ಧ್ವನಿಯ ದೋರದೆ ಗುರುತವ ಮರೆಯಿಸಿ|
ದ್ವಾರದಿಸುಳಿವವನು|ನೀನು ೧
ಅಡಿಯಿಡದೆವೆ ಮೈ ಅಡಗಿಸಿಕೊಂಡು|
ದೃಢದಲಿ ಅಬಲೆಯಕಂಡು|
ಎಡಬಲನೊಡದೆ ಬಾಯ್ದೆರೆದು ಬೇಡುವ|
ಪೊಡವಿಹಾರುವನೇನೋ|ನೀನು…..೨
ಕೊರಳಗೊಯ್ಕನೋ ವನಚಾರಕನೋ|
ತುರುಗಳ ಕಾಯ್ವವನೋ|
ಮರುಳು ಮಾಡಿ ನಾರಿಯರ ಠಕ್ಕಿಸಿ|
ದುರುಳವಾಜಿಯನೇರಿಪನೋ|ನೀನು….೩
ಎಂದಮಾನಿನಿ ನುಡಿ ಬೆಡುಗವ ಕೇಳಿ|
ನಿಂದಹರುಷ ತಾಳಿ|
ಬಂದೆನಾ ಗುರುಮಹಿಪತಿ ಪ್ರಭು ಎನಲೋಡಿ|
ಬಂದೆರಗಿದಳೀಗ|ನೀನು…… ೪

೨೮೦
ಬಂದಾನಲ್ಲೆವೆ ಮನೆಗಿಂದು ಕೇಳವ್ವಾ ರಂಗ ಪ
ಬಂದಾ ಮನೆಗಿಂದು|ಮುಕುಂದ ದಯಾಸಿಂಧು|ಆ
ನಂದವನೆ ತಂದು|ಸಂಧಿಸಿಕೊಟ್ಟಾ ದೀನಬಂಧು ೧
ನಂಬಿದವರ ಕಾವಾ|ಅಂಬುಜಾಕ್ಷದೇವಾ|
ನೆಂಬ ಬಿರದವಾ|ರಂಬಿ ತೋರಿದಾ ಜೀವರಜೀವಾ೨
ತಂದೆ ಮಹಿಪತಿ|ನಂದನ ಸಾರಥಿ|
ಬಂದು ನೆರದಾರಥಿ|ಛಂದವಾಯಿತು ಜನ್ಮಕಥೆ ೩

೬೪೪
ಬಂದು ಬಾರದಾಯಿತು ನೋಡಿ |
ಇಂದು ನರದೇಹ ಸಂಗವ ಮಾಡಿ ಪ
ಮುತ್ತಿನಂಥಾ ಜನುಮದಿ ಬಂದು |
ಚಿತ್ತ ಬೆರಿಯನು ವಿಷಯದಲಿಂದು ೧
ಸಾಧು ಸಂತರ ಮೊರೆ ಹೋಗಲಿಲ್ಲಾ |
ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ ೨
ಆಹಾರ ನಿದ್ರೆ ಭಯ ರತಿಸಂದಾ |
ಅಹರ್ನಿಶಿಯಲಿದೇ ಮನದಂಗಾ ೩
ನಾನಾ ಶಾಸ್ತ್ರದ ಮಾರ್ಗಕ ಹೋದೀ |
ಗಾಣದೆತ್ತಿನಂದದಿ ಕುರುಡಾದಿ ೪
ತಂದೆ ಮಹಿಪತಿ ಸ್ವಾಮಿಯ ನೆನೆದು |
ಬಂದದ್ದು ಸಾರ್ಥಕ ಮಾಡದೆ ಬೆರೆದು ೫

೬೩೫
ಬಗಿಯಲಿ ಬ್ಯಾಡಣ್ಣಾ | ಮದದಲಿ ಪ
ಒಳ್ಳೆವರಾ ನುಡಿಯಳ್ಹಲಿ ಮಾಡಿ |
ಖುಳ್ಳತನದಲೆ ದಿನ ಹೋಗಾಡಿ ೧
ಅವರಿಗೆ ಮಾನವ ಸರಿ ಬಗಿಬ್ಯಾಡ |
ಹವಣಿಸಿ ಚರಣಕ ನಮಿಸೆಲೋ ಮೂಢಾ ೨
ಶಿಷ್ಟಗೆರಗನು ದಾವನು ಬಾಗಿ |
ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ ೩
ಸಣ್ಣ ದೊಡ್ಡವರೆನಬಾರದು ಕೇಳು |
ಮನ್ನಣೆ ಗೆಲ್ಲಗವರೇ ಮೇಲು ೪
ಗುರುವರ ಮಹಿಪತಿ ಸಾರಿದ ನಿಜವಚನಾ |
ಧರೆಯೊಳಗಿದೆ ಪರಗತಿ ಸೋಪಾನಾ ೫

೫೯
ಬಣ್ಣಿಸಲಳವಲ್ಲ ನಿಮ್ಮ ಪ್ರ
ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ
ಅಂಜನಿಯುದರದಲಿ ಜನಿಸೀ ತೇಜ
ಪುಂಜ ರಾಮನ ಸೇವೆಯಲಿ ಮನನಿಲಿಸಿ
ಕಂಜ ಛವನ ಪಟ್ಟ ಧರಿಸಿ ಬಲು
ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ ೧
ಜ್ಞಾನ ಭಕುತ ವೈರಾಗ್ಯದಲಿ ಸರಿ
ಗಾಣಿನೋ ಸುರನರ ಉರಗ ಲೋಕದಲಿ
ಮಾನನಿಧಿಯೇ ವಿಕ್ರಮದಲಿ ಚರ
ಣಾಗತೆ ರಕ್ಷಕ ನೇಮ ಬರದಿರಲಿ೨
ಮೂರವ ತಾರದಿ ಬಂದು ದೀನೋ
ದ್ಧಾರಣ ಮಾಡಿದೆ ಸದ್ಬೋಧ ಗರದು
ಕಾರುಣಿ ಗುರುವಾಗೆಂದೆಂದು ಸಹ
ಕಾರದಿ ಮಹಿಪತಿ ಸುತಗೊಲಿದಿಂದು ೩

೨೬೯
ಬರದು ಬಂದು ದೂರಬ್ಯಾಡರೇ ನೀವೆಲ್ಲಾ
ಧರಿಯೊಳಾಡುವ ನುಡಿಗಳೊಪ್ಪುವದಿಲ್ಲಾ
ಹರಿಯಾ ನೆಲೆ ತಿಳಿಯಲು ಅಳವಲ್ಲಾ
ದುರಳತನ ನಡಿಗೆಂದು ಇವಸಲ್ಲಾ ೧
ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ
ಮನುಜರಂತೆ ಲೀಲೆ ದೋರುವ ರೀಗಮ್ಮಾ
ಮುನಿಮನೋಹರ ದಾಯಕ ಪರಬೊಮ್ಮ
ಘನ ಪುಣ್ಯದಿಂದ ಶಿಶು ವಾದನಮ್ಮ ೨
ಹುಟ್ಟುತಲಿ ಸ್ವಹಿತದ ನುಡಿಯಾಡಿ
ನೆಟ್ಟ ನೆವೆಯ ಮುನಿಗೆ ಹಾದಿಬೇಡಿ
ಮುಟ್ಟಿ ಗೋಕುಲಕ ಬಂದದಯ ಮಾಡಿ
ಇಷ್ಟರೊಳು ತಿಳಿಯ ಬಾರದಿನ್ನು ನೋಡಿ ೩
ಚಿಕ್ಕತನದಲಿ ಮೊಲೆಗುಡ ಬಂದಾ
ರಕ್ಕಸಿಯ ಅಸು ಹೀರಿದಾವ ಕೊಂದಾ
ಕಕ್ಕಸದ ಕಾಳಿಂಗ ನೆಳೆದು ತಂದಾ
ಮಕ್ಕೂಳಾಟಿಕೆ ಇದೇನು ನೋಡಿಛಂದಾ೪
ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು
ಹರಿಯಗುಣ ಹೇಳುವಿರಿ ಎಲ್ಲ ಬಂದು
ಅರಿತು ನೋಡಲು ಒಬ್ಬ ಬಹುರೂಪ ವಿಡಿದು
ಚರಿಪಗುರು ಮಹಿಪತಿಸ್ವಾಮಿಯಿಂದ೫

೭೪೫
ಬರಲು ಹಾರುವ ಮನೆಗೆ ಮೊರೆವರಯ್ಯಾ ಭವಿಯಂದು
ಅರಿಯರು ಭವಿಯಾರೆಂಬುದನು | ಶರೀರದೊಳು
ಖೋಯಂದು ಕೂಗುತ ಇರುವ ಲಿಂಗ ಕಾಣದವ ಭವಿ |
ಹರದೊಡ್ಡವನೆಂದು ಹರಿಯ ನಿಂದಿಸುವನೇ ಭವಿ |
ಧರಿಯೊಳು ಭವಿಗಳು ತಾವಾಗಿ | ಪರರಿಗೆ ಭವಿಯಂಬವಗ
ನರಕ ತಪ್ಪದಯ್ಯಾ ಮಹಾಗುರು
ಮಹಿಪತಿರಾಯ ನಂದನ ಪ್ರಭುವೆ ೭

೨೭೦
ಬರಹೇಳಮ್ಮಾ ಭಾವೇ ಮನೆಗೆ ಬಿರದಂಕ ಹರಿಯಾ|
ಚರಣವನ್ನು ಗಾಣದೆನ್ನ ಚಿತ್ರನೆಲೆ ಗೊಳ್ಳದಮ್ಮಾ ಪ
ಬಾಲೆಕೇಳೆ ಕುಂತಳೆ ಬೇಸರ ವಿದೇನೇ|
ಪಾಲಗಡಲ ಮನೆಯಾ ಬಿಟ್ಟು ಪವನಾಹಾರನ ಪರ್ಯಂಕವನು|
ಜಾಳಿಸಿ ತಾನ್ಯಾಕ ಪೋದನೇ ಜಲರುಹ ನಾಭ|
ಕಾಲಿಲಲ್ಲದವನಾಗಿ ಕೊಂದು ತಮನನೀಗಿ|
ಮ್ಯಾಲಗಿರಿಯ ಪೊತ್ತ ಮರರಿಗ ಮೃತವಿತ್ತಾ|
ಭೂಲಲನೆ ಬಡಿಸಿ ಭೂವರಾಹೆನಿಸಿ|
ಬಾಲಕರಿಯಲು ರೂಪ ಬೆಡಗಾ ವಿಡಿಸು ೧
ಉಡುರಾಜದವನೆ ಕೆಳದೀ ಉನ್ನತಿಯ ನೋಡೇ|
ಷಡ್ಗುಣೈಶ್ವರ್ಯವುಳ್ಳಾ ಸುರಮುನಿಸೇವಿತ ಪಾದಾ|
ಬೇಡಿ ಭಾಗ್ಯವ ನೀಡುವ ಬಲುದೊರೆ ತಾನಾಗಿ|
ಬಡಹಾರುವನಂತೆ ಭೂಮಿ ಬೇಡಿದನಂತೆ|
ಕೊಡಲಿಪಿಡಿದರೆ ಸಕುಲ ಮಾಡಿದ ನಾಶಾ
ವಡನೆ ವಾನರ ಸಂಗ ವಿರಹರಿಸಿ ಸುರತುಂಗಾ|
ತುಡುಗತನದಿ ಬೆಣ್ಣೆತಿನ್ನುವರೆ ರನ್ನೆ ೨
ಕರಿರಾಜ ಗಾಮಿನೀ ಕಿರೀಟ ಕುಂಡಲದಾ ಶಿವತ್ವಕುಂಡಲದಿಂದಾ|
ಪರಮಪುರಷದೇವನು ಪೀತಾಂಬರಧಾರೀ|
ಬರಿಯ ಬತ್ತೆಲೆಯಾಡಿ ಬೌದ್ಯರೋಳಗ ಕೂಡೀ|
ತುರಗೀರಿಯ ವನರ ತುಳಿಸುತ ಸುರವರ
ಮೊರೆಗೇಳಿ ಬಂದನು ಮನದೊಳು ನಿಂದನು|
ಗುರು ಮಹಿಪತಿ ಪ್ರೀಯಾ ಗುಣಗಣನಿಲಯಾ೩

೬೩೬
ಬರಿದೆ ದಣಿಯಬೇಡಿ |
ಬಯಲ ಸಾಧನ ಕೂಡಿ |
ನೆರೆ ಮಾಡಿ ಸಾಧು ಸಂತರಾ |
ದಯವಂತರಾ ಪ
ಏನು ಓದಿದರೇನು |
ಏನು ಕೇಳಿದರೇನು |
ಜ್ಞಾನಿಗಳೊಡನಾಡದೇ |
ಅನುಭವವಾಗುದೇ ೧
ಬುಡದಲಿ ಫಲವಿದೆ |
ತುದಿಮರನೇರುವರೇ |
ಬಿಡು ಬಿಡು ನಾನಾ ಸಾಯಸಾ |
ಭ್ರಾಂತಿ ವೇಷಾ ೨
ಗುರು ಮಹಿಪತಿ ನುಡಿ |
ಸಾರಿದ ನಂದ ನೋಡಿ |
ಮರೆಯದೆ ಮಾಡಿ ಸಾಧನಾ |
ಹರುಷ ನಿಧಾನಾ ೩


ಬರೇ ವಾಚಾಭಿಮಾನವಿದೇಕೆ | ಹರಿ ಲೀಲಾಮೃತ ಸೇವಿಸಲಿಕ್ಕೆ ಪಸಂಸ್ರ‍ಕತ ವಂದ್ಯ ಪ್ರಾಕೃತ ನಿಂದ್ಯ |ಸುಕೃತಿಗಳಾಡುದೇ ಕುಂದಾ೧
ಕನ್ನಡ ನುಡಿಯೆಂದ್ಹಳಿಯಬೇಡಿ | ಕನ್ನಡಿ ದರ್ಪಣವಲ್ಲವೆ ನೋಡಿ ೨
ಕರಿದು ಬಿಳಿದು ಅವಾದರೇನು |ಎರಡಾಗದು ಕ್ಷೀರೆಂದೂ ತಾನು೩
ಗುರುವರ ಮಹೀಪತಿ ಪ್ರಭುಚರಿತಾ |ಭರಿತಾದುದೇ ಪಾವನ ನುಡಿತಾ

ನುಡಿ-೩: ತ್ರಿವಿಧ ಪೂಜೆ
೬೫
ಬಲವಂತರೋಳಗೆ ಬಲವಂತ ಹನುಮಾ |
ನಳಿನಸಂಭವ ಕರ್ತನಾದ ಮಹಿಮಾ ಪ
ಗಾವುದೈದತ್ತು ಸಾವಿರದಲಿಹ ಪರ್ವತವ |
ಝಾವ ಮೂರಕೆ ತಂದ ನೋಡಿನೇಮಾ೧
ಪೋಗಲಾಗಮ್ಯವಾಗಿದ್ದ ಸ್ಥಳವನೇ ಪೊಕ್ಕು |
ಸೌಗಂಧಿಕಾ ಪುಷ್ಪ ತಂದ ಭೀಮಾ೨
ವೇದಾಂತ ಸಾಗರದಿ ಖಳನಬಳಿಪ ಹಲವು | ದು-
ರ್ವಾದಿ ಜಲಚರರ ಬಾಯಿಬಿಗಿದ ಮಹಿಮಾ ೩
ಗುರು ಮಹೀಪತಿ ಸ್ವಾಮಿ ರಾಮಚಂದ್ರ ಪ್ರೀಯ |
ದುರಿತೌಘದ್ಯುಮಣಿ ಎನಿಪ ನಾಮಾ ೪

ವಚನಗಳು
೭೪೪
ಬಲ್ಲೆ ಬಲ್ಲೆನೆಂಬರು ಬಲ್ಲವಿಕಿ ಕೀಲು ಮರೆವರು |
ಬಲ್ಲವಿಕಿ ಮಾರ್ಗವ ಮೆಚ್ಚಿ ಬಲ್ಲರಕೂಡ ಶಣಸುವರು |
ಮಂಡೆಗೆ ಬೂದಿ ರುದ್ರಾಕ್ಷವನಿಟ್ಟು
ದಿಂಡೇರು ಶಿವಭಕ್ತರೆಂದು ಹೆಮ್ಮಿಲಿ | ಕಂಡ ಜಾತಿಗಳಲಿ
ಕೊಳವಮೆದ್ದು | ಜೊಂಡು ಗಡ್ಡವ ಬಿಟ್ಟು | ಮಿಂಡೇರ
ಘಲ್ಲಿಸುವ ತುಂಡವರೆತ್ತ ಶಿವಶÀರಣರೆತ್ತ | ಆ ಮೊಂಡ
ರೆಳೆದೊಯ್ದು ತುಂಡಿಸಿ ಮೂಗನು ಭಂಡ ಸಾಸಿವೆಯ ತುಂಬಿ
ದಂಡಿಸುವಾ ಯಮನೇ ಗುರುಜಂಗ ಮನಯ್ಯಾ ಮಹಾಗುರು
ಮಹಿಪತಿರಾಯ ನಂದನ ಪ್ರಭುವೇ

೬೩೭
ಬಾಧಕರೊಳು ಬದ್ಧನು |
ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ
ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು |
ಹರಿಪರದೈವೆಂದು ಹೇಳುವನು |
ದುರಿತವು ಬಂದಡೆ ನೀಚದೈವಂಗಳಿ |
ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ ೧
ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ |
ಹೀನ ನೃಪರ ವಾಲ್ಗೈಸುವನು |
ಈ ನಿಖಿಳದ ವೃತ ಜಪ ತಪವನು ಮಾಡೀ |
ನಾನೆಂಬ ಹಮ್ಮಿಲಿ ಪರರನು ಹಳಿವಾ ೨
ವಾಸುದೇವ ಸರ್ವಯಂಬುವ ದೇವರ |
ದಾಸರ-ಸೂಯದಿ ಬಾಳುವನು |
ಲೇಸಾಗಿ ಗುರುವರ ಮಹಿಪತಿಸ್ವಾಮಿಯ |
ಧ್ಯಾಸವಿಲ್ಲದೆ ವಣಡಂಬದಲ್ಲಿಹನು ೩

೧೦೪
ಬಾರನೇನೆ ಭಾಗ್ಯನಿಧಿ | ಬಡವರ ಮರೆಯದೇ |
ಸಾರಸೊಬಗುಳ್ಳ ಕೃಷ್ಣ | ಸಾದರದಿ ಮಾನಿನಿ ಪ
ಕಾಲಿಲ್ಲದವನಂತೆ ಕುಳಿತನೇ ಮಧುರಿಲಿ |
ನೀಲಾಂಗನಂಗವೆಂತು | ನಿಬ್ಬರವೇ ಮಾನಿನೀ ೧
ಮುಂದಕೆ ತಿರುಗಲೊಲ್ಲ ಹಿತಗಜಪಂಚಾನನ |
ಮಂದರಧರೆಗೆ ಭಡತನವೇನೆ ಮಾನಿನಿ ೨
ಶಿರವಕತ್ತರಿಸಿನ್ನು ಸಂದನೇ ನೆಲೆಯಬಿಟ್ಟು
ತುರುಗಳ ಕಾವ ಬುದ್ದಿ ತೋರಿದನೆ ಮಾನಿನಿ ೩
ತಂದೆ ಮಹೀಪತಿ ಪ್ರಭು | ತುರಗವೇರಿ ಬಂದನೆಂದು |
ಇಂದು ಹೇಳಿದರಿಷ್ಟಾರ್ಥ ಈವನೆಲ್ಲ ಮಾನಿನಿ೪

೨೭೧
ಬಾರನ್ಯಾತಕ ಯದು ವೀರಾ|ಪದಾಂಬು ಜವದೋರಾ|
ದಯರಸವಾಬೀರಾ|
ಸಾರಿದವರಿಗಿನ್ನುದರಾವಾಗಿರಾ ಧೀರಾ ಪ
ಮಂದ ಮುಗುದೆಯು ನಾನೆಂದು ಅರಿತು ಮೊದಲಿಂದು|
ಕೈಯ್ಯ ಪಿಡಿದು ಬಂದು|
ಕುಂದಾಲಿಸುವ ದಯಸಿಂಧು|ಉಚಿತ ವೇನಿಂದು ೧
ಎನ್ನ ಬಿನ್ನಹ ಹೇಳಲೇ ಜಾಣೇ| ತಾಪಕೌಷಧಕಾಣೆ|
ಕ್ಷಣಯುಗವ ನಿನ್ನಾಣೆ|
ಮನ್ನಿಸಿ ತಂದು ತೋರಿನ್ನೆನೆ ಬಾರೇ ಪ್ರವೀಣೇ ೨
ಶರಣ ಹೊಕ್ಕವರೆಂದು ಮರೆಯಾ|ನೆಂಬ ಮಾತಿದು ಖರೆಯಾ
ಬಂದು ಕೂಡಿದ ತ್ವರಿಯಾ|
ಗುರು ಮಹಿಪತಿ ಸ್ವಾಮಿಚರಿಯಾ ಬೊಮ್ಮತಾನರಿಯಾ ೩

೪೮೧
ಬಾರಮ್ಮಾ ಶ್ರೀಗುರು ಜನನೀ | ಘನಕರುಣೀ |
ಬಾರ ನಿಜ ಸುಖ ದಾನೀ ಪ
ಭವದಾಟವ ಕೇರಿಯೊಳು ಹೋಗಿ | ಮನಮರವಾಗಿ |
ಐವರೊಳು ಕೂಡೀ | ಅವನಿಲಿ ಪರಿ ಪರಿ ಆಡಿದೆ |
ಬಲು ಪಾಡಿದೆ | ಬಂದೇ ತವಕದಿ ಓಡಿ ೧
ಬೋಧದ ಸ್ತನಪಾನ ಮಾಡಿಸೇ | ಸುಧೆ ಉಣಿಸೇ |
ತಾಪ | ಬಾಧೆಯ ಬಿಡಿಸೇ |
ಸಾದರ ಭಯಕರ ತೋರಿಸೇ ನ್ಯಾವರಿಸೇ
ನಿನ್ನುದರೊಳಗಿರಿಸೇ ೨
ಭಕುತಿ ತೊಟ್ಟಿಲವನ್ನು ತೂಗಿಸೀ | ಯನ್ನ ಕೂಡಿಸೀ |
ಪಾಡುತಖಿಲೇಶ ನಾಮಾ |
ಸುಖನಿರ್ವಿಕಲ್ಪ ಸಮಾಧಿಯ | ಕೊಡು ಸಿದ್ದಿಯಾ |
ಬಾಲಕಗ ಮಹಿಪಮ್ಮ ೩

೯೩
ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ ಪ
ಕನಕಗರ್ಭನ ತಂದೆ | ಕನಕಮೃಗವ ಕೊಂದೆ |
ಕನಕಾಂಬರಧರ | ಕನಕನಯನ ಹರ |
ಕನಕವಕ್ಕಿಗಮನ | ಕನಕಾಭರಣ೧
ಹರಿಯಾನಂದನ ಕೊಲಿಸಿ | ಹಿರಯಾನಂದನನುಳಿಸಿ |
ಹರಿಯಾ ಸುತನುತ | ಹರಿಯಾ ರಿಪುಸುತ |
ಹರಿಯೇ ಬಾಯೆನೆ ಹರಿಯಾದೆ ೨
ಗೋಕುಲವರಾಧಾರಾ | ಗೋಕುಲ ವಿಹಾರಾ |
ಗೋಕರ್ಣ ಶಯನಾ | ಗೋಕೋಟಿ ತೇಜಾ |
ಮಹಿಪತಿ ಸುತ ಪ್ರಭು ಗೋಪಾಲಾ ೩

೭೧
ಬಾರವ್ವ ಜಗದಂಬೆ ಶರಣೆಂದು ಬಲಗೊಂಬೆ |
ದೋರಿ ನಿನ್ನ ಪಾದ ಪದ್ಮ ಪೂಜೆಗೊಳೆ ಸುಖದಿಂಬೆ ಪ
ಕೈವಲ್ಯ – ಗತಿ – ದಾಯಿ ಮೂರು ಲೋಕದಾ ತಾಯೀ
ಆವಾಗ ನೆನೆವೆ ನಿಮ್ಮ ಅರ್ಥಿಯಿಂದಾತುಕೊ ಬಾಯೀ ೧
ಅಷ್ಟದಳ ಗದ್ದುಗೆಯಲಿ ಭಕ್ತಿರಂಗ ಹಾಕಿರಲೀ
ಇಷ್ಟೇನು ಜ್ಞಾನದೀಪಾ ಕಟ್ಟಿ ನಿಜದ್ಯಾಸ ಮಾಲೀ೨
ವೇದಶಾಸ್ತ್ರಗಳಿಗೆ ಮುನ್ನೆ ಮಹಿಮೆ ತಿಳಿಯದು ಪ್ರಸನ್ನೆ
ಆದಿ ಶಕ್ತಿ ಅಪ್ರಮೇಯೇ ಎಂದು ಸುರರು ನಮೋ ಎನ್ನೆ೩
ಅನಾಹತ ಗರ್ಜನದಾ ತಾಳ ಮದ್ದಲೆಗಳಿಂದಾ
ಅನುವಾಗಿ ನಾಮ ಪಾಡಿ ಗೊಂದಲ್ಹಾ ಕುವೆನುಛಂಧಾ೪
ಕೊಂಡಾಡುತಿಹೆ ನಿನ್ನ ಗುರು ಮಹಿಪತಿಜನಾ ಮಂಡಿಮ್ಯಾಲ ಕೈಯನಿಟ್ಟು ಪಾಲಿಸೇ ಅನುದಿನಾ೫

೨೭೩
ಬಾರೆನ್ನ ಸಖಿಯೇ ಕರೆದು ತೋರಿಸೇ ಪ
ಕರೆದು ತೋರಿಸೇ ಕಂಜನಯ್ಯಾನಾ|
ಕರಿವರ ದಾಯಕ ಕರುಣಾ ಸಾಗರನಾ ೧
ಸರಸಿಜ ಲೋಚನ ಮುಕುಟ ಕುಂಡಲನಾ|
ಸಿರಿವತ್ಸ ಕೌಸ್ತುಭ ಕೇಯೂರ ಧರನಾ ೨
ಮದನ ಶರಕ ಗುರು ಮಾಡುವರೇನೇ|
ಮಧುಹರ ಮುನಿವದು ಉಚಿತ ವೇನೇ ೩
ಒಂದರಗಳಿಗೆಯ ಮರೆದಿರ ಲಾರೆ|
ಇಂದು ನೀ ಧನ್ಯಳ ಮಾಡಲೆ ನೀರೆ೪
ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ|
ನೆರೆದನು ಗುರು ಮಹಿಪತಿ ಸುತಸ್ವಾಮಿ೫

೭೫೪
ಬಾರೈ ಭೂಶಿರಿವರ ವೆಂಕಟದೊರೆಯೇ |
ಕರಿವರದ ಶ್ರೀ ಹರಿಯೇ |
ದೋರೈ ಶ್ರೀಕರ ಶುಭಸುರ ಕುಲದೊರೆಯೇ |
ಪರತರ ನರಹರಿಯೇ ಪ
ಅರುಣಾ ವಾರಿಜಪರಿಚರಣಾ |
ಚರಣಾ ಶರಣಾಗತ ಕರುಣಾ |
ಕರುಣಾ ಕೋಟ್ಯರುಣಪತಿಯ ಹಿಮಕಿರಣಾ |
ಕಿರಣ್ಹೊಳೆವ ಸುವರಣಾ |
ವರಣಾ ಪೀತಾಂಬರ ಮಂದರೋದ್ದರಣಾ |
ಧರಣಾಗತ ಕರುಣಾ |
ಕರುಣಿಸೋ ನಿರುತರ ಕೌಸ್ತುಭಾಭರಣಾ |
ಮೊರೆ ಹೋಗುವೆನು ಶರಣಾ ೧
ಮಂಗಳ ಮಹಿಮಶಯನ ಭೂಜಂಗಾ |
ಜಂಗಮಾ ಅಂತರಂಗಾ |
ರಂಗಾ ಲೀಲಾವಿಗ್ರಹ ತುರಂಗಾ |
ತುರಂಗ ವಿಹಂಗ |
ಹಂಗವಿಡಿದಿಹೆನೊ ನಿನ್ನಯ ಶುಭ ಅಂಗಾ |
ಅಂಗಾ ಜಯಸು ಸಂಗಾ |
ಸಂಗಾರಹಿತ ದೇವತೆಗಳ ಶೃಂಗಾ
ಶೃಂಗಾರ ಭವ ಭಂಗಾ ೨
ಸುಂದರಿಂದಿರಾ ರಮಣಾನಂದಾ |
ನಂದ ಗೋವೃಂದಾ |
ವೃಂದಾರ ಕಾದಿಹ ರಕ್ಷಕಚಂದಾ |
ಚೆಂದದಿ ಆನಂದಾ |
ನಂದಾ ಸುನಂದ ನಮಿತ ಪದದ್ವಂದ್ವಾ |
ದ್ವಂದ್ವಾ ಮುಕ್ಕುಂದಾ |
ಕುಂದರ ವದನಾ ಗುರುಕೃಷ್ಣನ ಕಂದಾ |
ನೊಡೆಯ ಗೋವಿಂದಾ ೩
ಅಂಕಿತ-ಗುರುಕೃಷ್ಣ

೮೭
ಬಾರೈಯ್ಯಾ ಕರುಣಾ | ಸುರಾರ್ಚಿತ |
ದೋರೈಯ್ಯಾ ಚರಣಾ ಪ
ಇಂದಿರೆ ಆನನ ಇಂದೀವರ ಮಕರಂದ | ಮಕರಂದ |
ಭ್ರಮರಾ ಮುಕುಂದಾ ದೇವಾ ೧
ಖಂಡಣ ಅಸುರರಾ ಮಂಡಣ ಸುರರಾ ಪ್ರಚಂಡ |
ಸುರರಾ ಪ್ರಚಂಡ | ಚಂಡ ವಿಧೀ ವಂದ್ಯನೇ ೨
ಮಹಿಪತಿ ನಂದನ ಅಹಿತ ಸಂಹರಣಾ | ಅಹಿತ |
ಸಂಹರಣಾ ಅಹಿತಲ್ಪ ಶಯನ ಗೋವಿಂದ ದೇವಾ ೩

೯೨
ಬಾರೈಯ್ಯಾ ಗೋವಿಂದಾ | ಕೀರ್ತನೆಗೆ ಮುಕುಂದಾ |
ಬೀರುತ ನಿಮ್ಮ ಮಹಿಮೆ ಸ್ವಾನಂದ ಪುರದಿಂದಾ ಪ
ಕೋಂಡಾಡುವಂತೆ ಕೀರ್ತಿ ನೀಡಬೇಕು ನಿಜಸ್ಪೂರ್ತಿ |
ಮಂಡೀಸಿ ಭಕ್ತರಂಗಾ ಹೇಳುವೆ ನಿಮ್ಮ ವಾರ್ತೆ ೧
ವೈಕುಂಠ ಯೋಗಿವರಿಯಾ ಸ್ಥಳಸುರ ಮುನಿರಾಯಾ |
ನೀ ಕರಿಸಿ ಪಾಡುವಲ್ಲಿ ಇಹನೆಂದೆ ನಿಶ್ಚಯಾ ೨
ಕಂದನ ತೊದಲು ಮಾತಾ ಕೇಳಿ ಹಿಗ್ಗುವಂತೆ ಮಾತಾ |
ತಂದೆ ಮಹಿಪತಿ – ಸ್ವಾಮಿ ಬಲವಾಗೋ ಶ್ರೀ ಕಾಂತಾ೩

೯೮
ಬಾರೈಯ್ಯಾ ಗೋವಿಂದಾ ನಂದಾ |
ಶ್ರೀವಧು ಲೋಲಾ ಸುರಜನ ಪಾಲಾ |
ಸುಮನಾಮಾಲಧರ ಘನ ನೀಲಾ ೧
ಭುವನಾಧಾರ ಭೂಬಯ ಹಾರಾ |
ಭಾವಿಕ ಜನರಾ ದುರಿತ ನಿವಾರಾ ೨
ದಾನವ ಮಥನಾ ಕೌಸ್ತು ಭಾಭರಣಾ |
ಘನಗುರು ಮಹಿಪತಿ ನಂದನ ಪ್ರಾಣ ೩

೯೧
ಬಾರೋ ಈ ರೇಳು ಜಗಜೀವನಾ | ಜಗಜೀವನಾ ಪ
ಬಾರೋ ಈರೇಳು ಜಗಜೀವನಾ ಜಗಜೀವನಾ |
ಪಾವನ ದೇವಾ ಪಾವನ ದೇವಾ | ಧೀರ ಕೇಶವಾ ೧
ಎನ್ನ ಎರಡು ನಯನಗಳು | ನಯನಗಳು |
ಕಂಗೆಡುತಿದೆ ಕಂಗೆಡುತಿದೆ | ನಿನ್ನ ಕಾಣದೆ ೨
ಬೆನ್ನ ಬಿದ್ದವರವಗುಣವಾ | ಅವಗುಣವಾ |
ಆರಿಸುವರೇ ಆರಿಸುವರೇ | ಚಿನ್ನ ಶ್ರೀ ಹರಿ೩
ಇಂದು ಮನಿಗೆ ಬಾರದಿರಲು | ಬಾರದಿರಲು |
ನಿಲ್ಲದು ಪ್ರಾಣಾ ನಿಲ್ಲದು ಪ್ರಾಣಾ | ಒಂದರೆಕ್ಷಣಾ ೪
ತಂದೆ ಮಹಿಪತಿ ಸುತ ಪ್ರಭುವೇ | ಸುತ ಪ್ರಭುವೇ |
ದೀನಾಭಿಮಾನಿ ದೀನಾಭಿಮಾನಿ | ಬಂದು ಕೂಡೋ ನಿ ೫

೯೪
ಬಾರೋ ಬರೋ ರಂಗಯ್ಯಾ ನೀ ಬಾರೋ | ನಿನ್ನ |
ಮೂರುತಿ ಹೃದಯಕ ತಾರೋ ಪ
ಬೀರೋ ಬೀರೋ ಕರುಣಾರಸ ಬೀರೋ | ಪದ |
ವಾರಿಜ ಶರಣರ ತೋರೋ ೧
ಸಾರೋ ಸಾರೋ ಸುಗತಿ ಪಥ ಸಾರೋ | ಹಗೆ|
ತೀರಿದೆ ಭವಭಯ ಬಾರೋ ೨
ಗುರುವರ ಮಹಿಪತಿ ಪ್ರಭು ಬಾರೋ | ಮರಹು |
ಹಾರಿಸಿ ಸಲಹುವರಾರೋ ೩

೯೬
ಬಾರೋ ಬಾರೋ ಎನ್ನ ನೀ ತಾರಿಸ ಬಾರೋ ಪ
ವಾಸವ ತನುಜನ ಸಾರಥಿ ಬಾರೋ |
ವಾಸುಕಿ ಶಯನಾವಂತನೇ ಬಾರೋ |
ವಾಸುದೇವ ಮುಕುಂದನೆ ಬಾರೋ |
ವಾಸ ಮಾಡಿದೆ ಕ್ಷೀರಾಬ್ಧಿಲಿ ಬಾರೊ ೧
ಕರಿವರ ಸಂಕಟ ಹರಿಸಿಹ ಬಾರೋ |
ಕರುಣಾಕರ ಗೋಪಾಲನೆ ಬಾರೋ |
ಕರದಲಿ ಚಕ್ರವ ಪಿಡಿದಿಹ ಬಾರೋ |
ಕರಿಚರ್ಮಾಂಬರ ಮಿತ್ರನೆ ಬಾರೋ ೨
ಸರಸೀರುಹದಳ ನೇತ್ರನೇ ಬಾರೋ |
ಸರಸೀರುಹ ಸಂಭವ ವಂದ್ಯನೇ ಬಾರೋ |
ಸರಸಿಜೋವನಾಭನೆ ಬಾರೋ |
ಗುರುಮಹಿಪತಿ ಸುತ ಸಾರಥಿ ಬಾರೋ೩

೨೭೪
ಬಾರೋ ಬಾರೋ ಕೋಪವಿನ್ಯಾತಕೆನ್ನ ಕೂಡಾ ರಂಗರಾಯಾ|
ಸಾರಿದ ನಿನ್ನರಸಿಯ ತಪ್ಪನೊಳ್ಪರೇ ರಂಗರಾಯಾ ಪ
ಚಲ್ವ ಕಣ್ದೆರೆವುತ ಮೊಗವತಿರಹುವರೇ ರಂಗರಾಯಾ|
ಹಲ್ಲವ ಮಸೆಯುತ ಘುಡುಘುಡಿಸುವರೇ ರಂಗರಾಯಾ ೧
ಭೀಕರಾಕೃತಿಯಾಗಿ ಕೊಡಲಿಯ ಪಿಡವರೇ ರಂಗರಾಯಾ|
ಏಕಾಂಕಿಯಾಗಿ ಕದ್ದು ತಿರುಗುವರೇ ರಂಗರಾಯಾ ೨
ಆಗೋಚರವಾಗದೇ ತುರಗೇರಿ ತ್ವರಿತದಿ ರಂಗರಾಯಾ|
ಸುಮದಿ ಬಾ ಮಹಿಪತಿ ಸುತ ಜೀವನ ರಂಗರಾಯಾ ೩

೮೯
ಬಾರೋ ಬಾರೋ ಬಾರೋ ರಂಗಾ | ಬಾರೋ ಶುಭಾಂಗಾ|
ವರಶೌರಿ ಪರೋಪರಿದೋರ್ವಲೀಲೆ |
ವೀರ ದೀರ ಶೂರುದಾರಿ ವಾರಿಜಾರಿ ವಂಶಜಾ ಪ
ಉತ್ಸಹದಗೆ ತ್ಯಾವಿನಾ | ವತ್ಸವ ಗಾಯಿದೇ ಪ್ರಾಣಾ |
ಮತ್ಸರಿ ಪರ ಸಂಹಾರಾ | ಮತ್ಸ್ಯಾವ ತಾರಾ |
ಸತ್ಸುರೇಶ ಸಂಪತ್ಸು ಮಹಾ ಸತ್ಸು ಖದಾ | ಭೀ
ಭತ್ಸ ವತ್ಸಲನೇ ಸಿರಿ ವತ್ಸ ಚಿತ್ಸ್ವರೂಪನೇ ೧
ಕಾಯಜಕೋಟಿ ಲಾವಣ್ಯಾ | ಕಯಾದು ಸುತಪಾಲನಾ |
ತ್ರಯಭುವನ ವ್ಯಾಪಕಾ | ತೃಯಾಕ್ಷ ಸಖಾ |
ದಯ ತೋಯಧಿ ಶ್ರೀ ಯದುನಾಯಕನೇ |
ತೋಯಜಾಯತಾಕ್ಷಾಕ್ಷಯ ಪಯಧೀಯ ವಾಸನೇ ೨
ಮಂದಮತಿಯೆಂದು ನೋಡೋ | ಕುಂದನನಾರಿಸಬ್ಯಾಡೋ |
ಬಂದು ಕೊಡೋ ಮಹಿಪತಿಯಾ | ನಂದನ ಪ್ರಿಯಾ |
ಎಂದೆಂದಿಗೆ ಸದ್ವಂದ ರಕ್ಷಕ ಶ್ರೀ –
ನಂದ ಕಂದ ಇಂದಿರೇಶಾನಂದನೀವಾ ನಂದನೆ ೩

೮೮
ಬಾರೋ ಬಾರೋ ಭಾವಜನಯ್ಯಾ
ತಾರಸೋ ಎನ್ನನು ನೀನು |
ದೋರಿ ಸನ್ಮಾರ್ಗವನು ಸಿರಿಯಾದಿವರ್ಯನೇ
ಮೊರೆಯ ಹೊಕ್ಕೆನು ಪ
ಸುರಭಿ ಚೋರ ವಿದಾರಾ | ಸುರಭಿ ಸಂಸಾರ ಧೀರಾ |
ಸುರಭಿ ಭಾಗವತರಾ | ಗುರುತನವರತದಲರಿತವರೋಳಗಿಹೆ ೧
ನಗಜಾಮಾತಾಸನ್ನುತಾ | ನಗದಾ ವೈರಿಯಾ ಭ್ರಾತಾ|
ನಗದಭಿಮಾನ ಸೂತಾ| ನಗಧರ ದುಗವಾಬ್ಧವಾಸ ನೆ ೨
ಗುರು ಘಾತಕಾನುಜೆಯಾ | ಗುರುತಭಿಮಾನ ದೊಡೆಯಾ |
ಗುರುಮಹಿಪತಿ ಪ್ರೀಯಾ | ಶರಣಾಭರಣಾ
ಸುಕರುಣಾಲು ಮೂರುತಿ ೩

೯೭
ಬಾರೋ ಬಾರೋ ಮೋಹನಾ | ಶ್ರೀದೇವಾ ಪ
ವೃಷಭಾನು ಜಾನನ ಸರಸಿಜ ಬೃಂಗಾ |
ಶಶಿಧರ ವಂಶಾಭರಣಾ೧
ಮುನಿಜನ ವಂದಿತ ನಿರ್ಜರ ತುಂಗಾ |
ದನು ಚಾವಳಿ ಮದಹರಣಾ೨
ಮಹಿಪತಿ ಸುತ ಪ್ರಭು ಜಗದಂತರಂಗಾ |
ಇಹಪರದಾಯಕ ಕರುಣಾ ೩

೯೫
ಬಾರೋ ಬಾರೋ ರಂಗಯ್ಯಾ |
ಮಿರುಪ ಅಂದುಗೆ ಗೆಜ್ಜೆ |
ಝಣ ಝಣ ಝಣ ಝಣ ರವದಿಂದಾ ಪ
ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ |
ಎಡಬಲದೋಳಿಂದೊಲಿದು |
ದುಡುದುಡು ದುಡು ನಲಿಯುತಾ ೧
ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ |
ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ ೨
ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ |
ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ ೩
ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ |
ಅರಳೆಲೆ ಕರ್ಣ ಕುಂಡಲಾ | ಭರದಿಂದಾ ಒಲಿಯುತಾ ೪
ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ |
ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ೫

೮೬
ಬಾರೋ ಬಾರೋ ರಂಗಾ ಪ
ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ |
ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ |
ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ |
ಪರಮ ಉದಾರಾ | ಸುರಸಹತಾರಾ | ದಯಾಸಾಗರ ೧
ಯದುವಂಶಾಂಬುಧೀ ಸೋಮಾ | ಸದಮಾಲಾನಂದಾತ್ಮ
ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ |
ಜೀಮೂತ ಶಾಮಾ |
ಸದ್ಗುಣ ಧಾಮಾ | ಪೂರಿತ ಕಾಮಾ |
ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವಇ ೨
ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ |
ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ
ಸರಸಿಜ ನಯನಾ | ಫಣಿವರ ಶಯನಾ | ಖಗವರ ಗಮನಾ |
ಮೃದುತರ ಚರಣಾ | ಅಹಲ್ಯೋದ್ಧರಣಾ | ಕನಫ್ಸ್Àರಣಾ ೩

೯೦
ಬಾರೋ ವಾರಿಜ ಚರಣಾ ಪ
ಬಾರೋ ವಾರಿಜ ಚರಣಾ | ಭೂರಿ ದುರಿತ ಹರಣಾ ೧
ಸಾರಂಗಹರ ಸಖ ಪತಿತೋದ್ದೋರಣಾ | ಸಾರಂಗಧರ ಕ ರುಣಾ ೨
ದ್ವಿಜರಾಜ ವಾಹನಾ | ಪೀತಾಂಬರಾವರಣಾ
ದ್ವಿಜರಾಜ ಕುಲಾಭರಣಾ ೩
ಸುರಪಾರಿ ನಂದನನ ಕಾಯಿದೇ ಹರಿಣಾ |
ಸುರಪಾದಿ ಮುನಿ ಸ್ಪುರಣಾ ೪
ಗುರು ಮಹಿಪತಿ ಸುತ ಪ್ರಭು ಕೇಯೂರಾಭರಣಾ |
ಇಹಪರಾನಂದ ಪೂರಣಾ ೫

೨೭೨
ಬಾಲನೇ ಗೋಪಿ ಬಾಲನೇ ಪ
ಮುದ್ದು ಕುಂಡಲಧರ ಮಿದ್ದು ಚಪ್ಪಿರವನು೧
ಎತ್ತಿಕೊಳಲು ಉಗುರೊತ್ತುವ ನೆದಿಯಲಿ ೨
ಗುರುಮಹಿಪತಿ ಪ್ರಭು ಚರಿತವ ತಿಳಿಯದು ೩

೨೭೫
ಬಾಲಲೀಲ ಲೋಲ ಕೃಷ್ಣನ|ನೆನೆವೆನಾ|
ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ-
ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ
ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ|
ಮಡದಿ ಜನಕನಹಿತ ಸರಿಕನಾ|ವೈರಿಯ
ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ
ಪಡೆದ ಜನನಿಯಣ್ಣ ಕಂದನಾ||ನೆನೆವನಾ ೧
ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ|
ಒದಗಿ ತನ್ನ ಶರೀರ ತೊರೆದನಾ|ತಂದೆಯಾ
ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ
ಉರದಿ ಮಗಳ ಪ್ರಾಣದರಸನಾ||ನೆನೆವೆನಾ ೨
ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ|
ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ
ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ|
ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ ೩

೬೩೮
ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ಪ
ತನ್ನ ಗುಣವ ತಾನೇ ಹೊಗಳುತಲಿ |
ಅನ್ಯರ ದೂಷಿಸಲೇನು ೧
ತಾ ಕೋಡಗ ಮರಿ ಬನ ಹಳಿವಂತೆ |
ವ್ಯಾಕುಳ ಹಿಡಿದರೆ ತಾನು ೨
ಮಹಿಪತಿ ಸುತ ಪ್ರಭು ಬೋಧವ ಕೇಳುತ |
ಸ್ವಹಿತವ ಪಡಿಯೋ ನೀನು ೩

೬೪೧
ಬಿಡು ಬಿಡು ಮನವೇ ನಿನ್ನಾ ದುರ್ಗುಣದಾ ಸಂಗಾ |
ಪಿಡಿಯೋ ಸಾಧುಜನರಾ ನೆರಿಯಾ ಕಾವಾ ಶ್ರೀರಂಗಾ ಪ
ನೆನೆಯಲಿಕ್ಕೆ ವಿಷಯ ಸಂಗದಿಂದ ಕಾಮ ಕ್ರೋಧ |
ಜನಿಸಿ ಮೋಹ ಸ್ಮತಿಯಗೆಟ್ಟು ಕೆಡುವಿ ಮತಿಮಂದ ೧
ಗರಳ ವೇರಿದವಗ ಬೇವು ಸಿಹಿ ದೋರುವಂತೆ |
ನಿರುತ ಇಂದ್ರಿಯ ವಿಷಯ ಸುಖವು ಅದರಂತೆ ೨
ಪಿತ್ತವಡರಿದಾಗ ಎಂತು ಲೋಕ ತಿರುಗಿಹುದು |
ಮತ್ತ ಗುರು ಹಿರಿಯರ ಬಗೆವೀ ಮನುಜರಿವರೆಂದು ೩
ಎಂತು ಹೇಳಲಿ ನಿನಗ ಹರಿನಾಮ ನಂಬುಗೆಯಿಲ್ಲಾ |
ಪಂಥದರವ ಜ್ಞಾನದ ದೃಷ್ಟಿ ತೆರೆಯದಾಯಿತಲ್ಲಾ ೪
ತಂದೆ ಮಹಿಪತಿ ಸ್ವಾಮಿ ನಮಿಸಿ ಕೇಳು ಹಿತವಾ |
ಮಂದಭವದಿ ತೊಳಲ ಬ್ಯಾಡಾ ಹೊಂದು ನಿಜಪಥವಾ ೫

೬೪೦
ಬಿಡು ಬಿಡು ವಣಮಾತಿನ ಸೊಗಸು |
ಕುಡಿ ಸ್ವಾನಂದ ಬಳ್ಳಿಯ ಚಿಗಿಸು ಪ
ಶೃತಿ ಶಾಸ್ತ್ರಜ್ಞಾನವ ಪಡೆದು |
ಕ್ಷಿತಿಯೊಳು ಹೆಮ್ಮೆಯ ಮದ ಜಡಿದು |
ಪ್ರತಿಯನಗಿಲ್ಲೆನುತಲಿ ನುಡಿದು |
ಮತವಾದಕ ನಿಲುವರೆ ನಡದು ೧
ಅಂಜನಿಲ್ಲದ ಉಪಕರಣದಂತೆ |
ವ್ಯಂಜನಿಲ್ಲದ ಪಾಕಗಳಂತೆ |
ರಂಜನಿಗನುಭವ ದೂರಂತೆ |
ಕಂಜನಾಭನ ನೆನೆವಂತೆ ೨
ತನ್ನೊಳು ನಿಜಘನದಾವರತಾ |
ಮುನ್ನಾದನು ಶಬ್ದಕ ಹೊರತಾ |
ಇನ್ನಾರ ಬೆರಿ ಸಂತರ ತ್ವರಿತಾ |
ಮನ್ನಿಸಿ ಮಹಿಪತಿಜನಗುರುತಾ ೩

೬೪೨
ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ
ಕಡಲಶಯನೆಚ್ಚರ ಗಳದೆಲ್ಲಾ |
ಬಿಡದೇ ನಿನ್ನ ನೀ ಮರೆವುದು ಸಲ್ಲಾ |
ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ |
ದೃಢದಲಿ ಒಡಲ್ಹೊಕ್ಕು ಪಡಿ ನಿಜಗತಿಯಾ ೧
ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ |
ನ್ನೇಸು ಜನ್ಮವ ತಾಳಬೇಕು ಮುಂದ |
ಹೇಸಲಿಲ್ಲವನೊಂದು ಘಾಸಿಯಿಂದ |
ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ |
ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ ೨
ಎಂತು ಹೇಳಲಿನ್ನು ಮನವೇ ನಾನು | ಸಾಧು |
ಸಂತರ ಸಂಗದಿ ಬಾಳು ನೀನು |
ಅಂತರಂಗದಿ ಹರಿ ಮೂಡುವನು |
ಹಿತಾಹಿತ ನರಿತು ಸುಮತಿಯಲಿ ಗುರು ಮಹೀ |
ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು ೩

೬೩೯
ಬಿಡು ಭ್ರಾಂತಿಯನ್ನು ಮಾನವ ನಿನ್ನಾ |
ಪಡೆದು ಕೊ ಸದ್ಗತಿಯನು ಪ
ತಡಿಯದೇ ಸದ್ಗುರು ಅಡಿಗಳ ಪೂಜಿಸಿ |
ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ
ಪತ್ರೇಂದ್ರವಾಹನನು | ಮಣಿಗಣ
ಸೂತ್ರದಂದದಿ ಜೀವನು |
ಚಿತ್ರ ವಿಚಿತ್ರದಲಿ ಅಡಿಸುವ | ಗು |
ಣತ್ರಯ ವಾದಲಿ |
ಪುತ್ರ ಕಳತ್ರ ಸುಮಿತ್ರ ಸಮಂಧ |
ಧತ್ರಿಲಿ ಮಾಯ ಚರಿತ್ರವಿದೆಂದು ೧
ತಾನಾರು ತನುವಾರದು ತನುವಿನ |
ತಾನೀ ಸಂಮಂಧವಾರದು |
ಜ್ಞಾನಿಗಳನು ಮತದಿ ತಿಳಿದು ನೋಡು |
ಸ್ವಾನುಭವದ ಬೋಧದೀ |
ಹಾನಿ ಯಶ _ ಸುಖ ಮಾನಾಪಮಾನವು |
ಮಾನವರಿಗೆ ಪ್ರಾಚೀನ ಫಲೆಂದು ೨
ಹಿಂದಾದ ನೆನಹಿಸದೇ ವಾಸನೆಗಳ |
ಮುಂದೇನು ಕಾಮಿಸದೇ |
ಬಂದದ ಅನುಭವಿಸಿ | ಕ |
ನಸಿನಾನಂದ ವಿದೆಂದು ಭಾವಿಸೀ |
ತಂದೆ ಮಹಿಪತಿ ಕಂದಗ ಸಾರಿದ |
ದ್ವಂದ್ವಗೆಲಿದು ಗೋವಿಂದ ನೆನೆಯುತ ೩

೨೭೬
ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ ಪ
ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ
ಬಿಡದಿಹ ಪಾವನ್ನಾ|
ಪೊಡವಿಯೊಳಗೆ|ಮೃಡ ಅಜರಿಗೆ ವಡಿಯ ನೀನೀಗ|
ಒಡಲ ಹೊಕ್ಕೆನು ಕರುಣಾ ನಿನಗ ೧
ಹಲವು ಜನ್ಮಂಗಳನು|ಬಲುತೆರ ಸೂಸಿದೆನು|
ನೆಲೆಗಾಆಣದೆ ನಾನು||
ಕೆಲವು ಮಾಡಿದಾ ಸಲೆ ಸುಕೃತವಾ|ಫಳದಿ ಶ್ರೀಪಾದಾ
ಸುಲಭದಿ ದೊರೆಕಿತು ದೀನೊದ್ದರನೆ ೨
ಮುನ್ನ ಮಾಡಿದ ಪರಿ|ಬನ್ನ ಬಡಿಸದೆ ಸಾರಿ|
ಚನ್ನಾಗೊಲಿಹರಿ|
ಯನ್ನ ಹೃದಯದಲಿ ಇನ್ನು ನಿಶಿದಿನಲಿ|ನೆನೆವ ಭಕುತಿಲಿ|
ಸನ್ನುತ ಮಹಿಪತಿ ನಂದನ ಪ್ರಭುವೇ೩

೧೪
ಬೆಳಗಾಯಿ ತೇಳಿರಯ್ಯಾ ಪ
ಬೆಳಗಾಯಿತೇಳೀ ರೈ ಇಳೆಯೊಳಭಿನವಮುನಿ |
ತಿಲಕ ಕರ ಪುಷ್ಕರದ ನೆಲೆಯ ಲೊಗದು |
ಬಲಿದ ವೈರಾಗ್ಯ ವೈರಾಗ್ಯ ಮುಂಬೆಳಗ ಸುಖ ತಂಗಾಳಿ |
ತಳಿಯೆ ಸತ್ಯ ಪೂರ್ಣರೆಂಬ ಹೊಳೆವ
ರವಿ ಉದಯಿಸಿದ ೧
ಮೊತ್ತವಾದ – ಜ್ಞಾನ ಕತ್ತಲೆಯನೊತ್ತಲು |
ನ್ಮತ್ತದುರ್ವಾದಿ ನಕ್ಷತ್ರದೆಡೆಗೆ |
ಮತ್ತ ಭವ ಚಂದ್ರ ಸರಿದತ್ತ ವೈಷ್ಣವರೆಂಬೊ | ಉತ್ತಮದ
ದ್ವಿಜ ರಿಂದ ಸುತ್ತುಗಟ್ಟಿ ಭಜಿಸುತಿದೆ ೨
ನೆರೆಭಾವ ಭಕುತಿ ರಥ ಚಕ್ರನೆರೆಯೆ |
ದುರಿತೌಘ ಮಂಜು ಮುಸುಕು ದೆರಿಯೇ |
ನೆರೆಯ ಭೂಸುರರಘ್ರ್ಯ ವೆರಿಯೆ ಸಂಚಿತ ಮೊದಲ |
ದುರುಳರ ಕುಮುದಸೊಕ್ಕುಮುರಿಯೆ
ಹಂಸನು ಮೆರಿಯೆ ೩
ಸಾಲ ಸ-ಚ್ಚಾಸ್ತ್ರಾ ದೇಳಿಗೆಗೆವಿದ್ವಜ್ಜ |
ನಾಳಿ ಝೇಂಕರಿಸುತಲಿ ಮ್ಯಾಲನಲಿಯಿ |
ಮೂಲ ರಘು ಪತಿಯ ದೇವಾಲಯದ ವಾದ್ಯಗಳು |
ಘೇಳೆನಿಪ ನಿಜ ವೇದ ಘೋಷ ಕೇಳ ಬರುತಿದೆ ಜನಕೆ೪
ಘನ ಪುಣ್ಯ ಪೂರ್ವಾದ್ರಿ ಕೊನಿಗೆ ಅರುಣಾಂಬರದಿ |
ವಿನುತ ಜ್ಞಾನದ ಕಿರಣವನೆ ಪಸರಿಸಿ |
ಜನದ ವಿದ್ಯದ ನಿದ್ರೆಯನೇ – ಜಾರಿಸಿ ಹೋದ |
ಮಹಿಪತಿ ನಂದನ ನುಭಿವದಿ ಕೀರ್ತಿ ಪಾಡಿದನು ೫

೨೭೭
ಬೆಳಗುವಾರತಿ ಬನ್ನಿ ಲಲನೆಯರೆಲ್ಲರು|
ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ಪ
ಮಲ್ಲಯುದ್ದವನೆ ಮಾಡಿ ಮಾವ ಕಂಸನ ಕೊಂದು
ಇಳೆಯೊಳು ಜಯವರಿಸಲು ನಡೆತಂಡನು ೧
ದುಷ್ಟಬುದ್ದಿಯನ್ನುಳ್ಳ ಜಟ್ಟೇರ ಮಡಹಿಸಿ|
ಸೃಷ್ಟಿಯ ಭಾರನಿಳಹಿಸಿ ಶಿಷ್ಟರ ಕಾಯ್ದನು ೨
ಗಂಡರ ಗಂಡ ಪ್ರಚಂಡನಾಗಿ ಮೆರೆದನು|
ಕುಂಡಲ ಭೂಷಿತ ಗಂಡ ಕಪೋಲಾ ೩
ವರ ಉಗ್ರಸೇನಗ ಅರಸುತನವನಿತ್ತಾ|
ಗುರು ಮಹಿಪತಿ ಸುತ ಪೊರೆವ ಶ್ರೀ ಅರಸಗೆ೪

೬೪೩
ಬೆಳಿಯೋ ಬೆಳಿ ಮನವೇ
ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು |
ಇಳೆಯೊಳು ಯಣಿಗಾಣದ್ಹಾಂಗೆ ೧
ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು |
ಜರಿದು ಸಂಗಿಗಳನ್ನೆಲ್ಲಾ ೨
ವಿವೇಕವೇಯಂಬಾ ನೇಗಿಲ ಎಂಟು |
ಭಾವವೆಂಬೆತ್ತುಗಳಿಂದ ೩
ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ |
ಒಡನೆ ಶಿಕ್ಷದಿ ನಡೆಸುತಾ ೪
ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ |
ಅನನ್ಯ ಭಾವ ಕೂರಿಗೆಯಿಂದಾ ೫
ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ |
ಭರದಿ ಬಿತ್ತಿ ನಾದುವಂತೆ ೬
ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು|
ಧನಗಾಳ ತುಂಬಿಡುವಂತೆ ೭
ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ |
ಪರಮ ಜಾಗೃತಿಯ ಕವಣಿಯಿಂದಾ ೮
ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ |
ಸಾರಿಹ ಶೃತಿ ವಾಕ್ಯದಿಂದ ೯
ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ |
ತೂರಿ ಅಹಂಭಾವ ಹೊಟ್ಟವನು ೧೦
ದೈನ್ಯವನು ಹಿಂಗಿ ಬಳಕೊಂಡು
ಅನ್ಯರಾ ಮರೆ ಹೋಗದಂತೆ ೧೧
ಪರಿಪೂರ್ಣಾದ ಬಳಿಕ ಒಕ್ಕಲು ತನಕ |
ಮರುಳೆ ನೀ ಸಿಕ್ಕದಿರು ಕಂಡ್ಯಾ ೧೨
ತಿರುಗಿ ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು
ಗುರು ಮಹಿಪತಿ ವಲುಮೆಯಿಂದಾ ೧೩

೪೮೨
ಬೇಟೆಯ ನಾಡಿದನೇ | ಶ್ರೀ ಗುರು |
ಬೇಟೆಯ ನಾಡಿದನೇ | ಭವದ ಮ |
ಮಹಾಟವಿಯೊಳಗಿದ್ದ ಮನವೆಂಬ ಮೃಗದಾ ಪ
ಏನೆಂದು ಪೇಳಲಿ ನಿಜ ಬೋಧ ಕೊಳಲವ |
ಸ್ವಾನಂದದಲಿ ಸುಸ್ವರದಲಿ |
ತಾನೂದಿ ನಾದವ ಕಿವಿಯೊಳೂಡಿಸಿ ಸು |
ಮ್ಮಾನದೀ ನಿಲುವಂತೆ ಮರುಳು ಮಾಡಿದ ಗುರು ೧
ಪರಿ ಪರಿ ಸಾಧನದಿಂದಲಿ ನವವಿಧ |
ಪರಿಯಾದ ಭಕ್ತಿಯ ಪಾಶವನು |
ಕೊರಳಿಗೆ ಸಂದಿಸಿ ದೃಢದಿಂದ ಪುನರಪಿ |
ಹರಿದಾಡದಂದದಿ ನೆಲೆಗೊಳಿಸಿ ಗುರು ೨
ಭಯದಿಂದ ಬೆದರಿ ಭಜ್ಜರಿಕೆಯ ಹಿಡಿದಿರೆ |
ಶ್ರಯ ಸುಖದಾಯಕ ನಿಜ ಕರದೀ |
ದಯದಿಂದ ಅಭಯವನಿತ್ತು ಬೋಳೈಸಿ ನಿ|
ರ್ಭಯ ಮಾಡಿ ಭ್ರಾಂತಿಯ ಚಿಂತಿ ಹರಿಸಿ ಗುರು೩
ಸವಿ ಸವಿ ನಾಮಾಮೃತ ಆಹಾರವನಿಕ್ಕಿ |
ಜವದಿಂದ ಹೃದಯ ಭೂ ವನದೊಳಗೆ |
ತವಕದಿ ವಿಶ್ರಾಂತಿ ಸ್ಥಳದಲಿ ನಿಲ್ಲಿಸಿ |
ಅವನಿಲಿ ಸತ್ವ ಚರನ ಬಳಿಯಲ್ಲಿಟ್ಟು ಗುರು೪
ಜನವನ ವಿಜನದೊಳಗ ತಾನೇ ತಾನಾಗಿ |
ಅನುಮಾನ ಕಳೆಸಿದಾ ಅಂಜುವನಾ |
ಅನುದಿನ ಸುಖದೊಳಿಪ್ಪಂತೆ ಮಾಡಿ |
ದನು ನಂದನ ನಿಜ ಸಹಕಾರಿ ಮಹಿಪತಿ ಘನಗುರು೫

೯೯
ಭಕುತರ ರಿಣಕಂಜಿ ಅಡಗಿದರೇ |
ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ
ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ |
ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ |
ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು |
ಉತ್ತಮ ನರಮೃಗದಂತಡವಿಯ ಸೇರಿ೧
ಬಡತನ ದೋರಲೆಂದು ಯಾಚಕನಾದರೇನು |
ಕಡಲ ಬೊರಿಯಾ ಮನೆ ಮಾಡಿರಲೇನು |
ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ |
ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ ೨
ಮುನಿಯಂತೆ ದಿಗಂಬರ ರೂಪವ ತಾಳಲೇನು |
ಜನದ ಕಲಿಕೀ ಮಾತು ಕಡೆಗಾಣುದೇ |
ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ |
ಅನುವದೋರಿ ಸಂತೈಸಿ ಶರಣರ ರಕ್ಷಿಸಯ್ಯಾ ೩

೨೮೩
ಭಕುತಿಯಲಿ ಭಜಿಸಿ ಹರಿಯ ಸುಖಿಸಬಾರದೇ ಪ
ಪ್ರಕಟದಿ ಸಜ್ಜನ ನಿಕಟದಿ ತಾಮಸ|
ಶಕಟ ಮುರಿದ ಸುರ ಮುಕುಟ ಮಣಿಯಾ ಅ.ಪ
ತರಣೀಯಾ ಕೋಟಿ ಪ್ರಕಾಶದಿ ಧರಣಿಯಾ ರಮಣನ ನಾಮ|
ಸ್ಮರಣೀಯಾ ಮಾಡಲು ಕರುಣೀಯಾ ಕರಿ ಕಿರಿಯನೆ ಶಿರಿ|
ಗರುಡಗರಿಯದೇ ಭರದಿ ತಾ ಬರುತದೆ ಶರಣರಾ ಹೊರೆದ ೧
ಮರುವಿನ ಕತ್ತಲೆ ನೂಕುವ ಚರಣವ ಅರವಿನ ದೀಪವ ಹಚ್ಚಿ|
ಕುರುವಿನಾ ಚಿನ್ಮಯ ನೊಡಲು ಗುರುವಿನಾ|
ಚರಣವ ಪೂಜಿಸಿ ಕರುಣವ ಸಾಧಿಸಿ
ತರುಣೋಪಾಯದ ಚರಣವ ಬಲಿಯೋ ೨
ಮನವಧಾನದಿ ನಿಲಿಸಿ ತನುವನಾ ಸೇವೆಗರ್ಪಿಸಿ|
ಘನವನು ಮಾಡುತಾ ಸುಜನರಾ ಅನುವನು ಕನಸಿಲೇ|
ಘನ ಗುರು ಮಹಿಪತಿ-ಜನ ಪ್ರಭುವಿನ ಅನುದಿನದಲಿ ಪಾಡಿ೩

೬೪೫
ಭಕ್ತಿಲೇಸು ಮುಕ್ತಿಗಿಂತಲಿ ಪ
ಭಕ್ತಿಲೇಸು ಮುಕ್ತಿಗಿಂತಲಿ |
ಭಕ್ತಜನರಾ ಪಾಲಿಸುವನಾ |
ಭಕ್ತಿಗೊಲಿದು ಫಣಿಗಣ ಲೋಕದಿ |
ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ |
ಸುರಪ್ರೀಯನಾ ಮುನಿಧ್ಯೇಯನಾ ೧
ಸರಸಿಭವನ ಕಠಾರದಿಂದ ಲೋಗದನಾ |
ಅರಸೆನಿಪನಾ ತನುಭವನಾ | ಧರಿಸಿದನಾ |
ಅರಸಿಯ ಜನಕನ ಕುಲರಿಯನಿಪನಾ |
ಕುವರನ ಸ್ಯಂದನ ವಾಜಿಯನು ಪೊರೆದನಾ |
ಗೆಲಿಸಿದನಾ | ಮೆರಿಸಿದನಾ ೨
ವನರುಹಸಖನ ಪೊಂದೇರ ನಡೆಸುತಿಹನಾ |
ಅನುಜನಾ ಅರಿಗಳಾ ಹರಿಯ ನಂದನನಾ |
ಘನವಾಲದಿಂದ ನೊಂದಿಹ ಪುರದರಸನಾ |
ಅನುಜನಾ ಸ್ಥಿರಪದವಿತ್ತು ನುಳುಹಿದನಾ |
ನಿಲಿಸಿದನಾ | ಕಾಯ್ವನಾ ೩
ಸಿರಿಯ ಮದನಳಿದು ಗುರುಚರಣಕೆ ಹೊಂದಿ |
ದೊರಕಿ ನಿತ್ಯದಲಿ ಸಂತುಷ್ಟವಿರುತಾ |
ಗುರುವರ ಮಹಿಪತಿ ಸ್ವಾಮಿಯ ಷೋಡಶ |
ಪರಿಯಲಿ ತುಳಸಿಯ ತಂದು ಪೂಜೆ ಮಾಡುವ |
ಪಾದ ನೋಡುವಾ | ಪಾಡುವಾ ೪

೨೮೪
ಭಜಿಸು ಮನವೆ ಶ್ರೀ ರಂಗಯ್ಯನಾ ಪ
ಇಂದಿರಾ ನನರವಿಂದ ಭ್ರಮರನಾ|
ಮಂದರ ನಗಧರ ನಂದ ನಂದನನಾ೧
ಫುಲ್ಲನಯನ ಸಿರಿವಲ್ಲಭ ದೇವನಾ|
ಮಲ್ಲ ಚಾಣೂರರಿಪು ಸಲ್ಲಲಿತಾಂಗನಾ ೨
ರನ್ನ ಕೇಯೂರಧರ ಪನ್ನಗ ಶಯನಾ|
ಸನ್ನುತ ಮಹಿಪತಿ ಚಿನ್ನನೊಡೆಯನಾ ೩

೭೫೫
ಭಜೆ ಮುಕುಂದಂ ಗೋವಿದಂ ಪ
ರಾಧಾನಯನ ಚಕೋರ ನಿರಶೇಷಂ |
ಗಾಧಿ ತನಯ ಸತ್ರ‍ಕತು ಪರಿತೋಷಂ ೧
ಶಂಭರ ಸಂಭವ ಜಿತಶುಭನಯನಂ |
ಶಂಭರ ನಿಧಿ ಕಮಲಾಯುತ ಶಯನಂ ೨
ಘನ ಶ್ರೀ ಗಿರಿಧರ ಸುತ ಪರಿಪೋಷಂ |
ಕನಕಲಸತ್ಸೋದಾಮಿನಿ ಜೈಲಂ ೩
ಅಂಕಿತ-ಗಿರಿಧರಸುತ

೬೪೬
ಭವತ್ಕರುಣಿ | ಗುರುಹಿರಿಯರ ಅನುಸರಣಿ ಪ
ಜ್ಞಾನ ಭಕುತಿ ಕಲೆ ತಾನರಹಿಸುವ |
ಸ್ವಾನುಭವದ ಸುಖಭರಣಿ ೧
ಮಂಗಳ ಘನಸುಖ ಇಂಗಿತ ದೋರುವಾ |
ಕಂಗಳ ಸಿರಿಸುಖ ಕರಣಿ ೨
ತಂದೆ ಮಹಿಪತಿ ನಂದನು ಸಾರಿದಾ |
ನಂದ ಸರಸಿರುಹ ತರಣಿ ೩

೬೪೭
ಭಾಗವತರಿಗೇ ನಮೋ ನಮೋ ಹರಿ |
ಯೋಗವುಳ್ಳವರಿಗೆ ನಮೋ ನಮೋ ಪ
ನಂದನದೊಳಗ ಅಳಿಕುಳಗಳು ಪುಳಕುತ |
ನಲುವ ಪರಿಲಿ ಗುರುವಲುವಿನಲಿ |
ಕಳವಳದಳಕವಗಳದುಳದಿಳೆಯೊಳು |
ಹೊಳೆಯುತಲಿಹರಿಗೆ ನಮೋ ನಮೋ ೧
ಸಿರಿ ಮದಜರಿದರಿಹರಿಯಂಕುರಮುರಿ |
ದರಿಸಖರನು ಸರಿಯರಿದಿರುತಾ |
ಪರಿಪರಿ ಮುಮ್ಮುಳಿ ತರುತರಿತರಿವುತ |
ಚರಿಪರಿಗ್ಹರುಷದಿ ನಮೋ ನಮೋ | ೨
ಜನವನವಿಜನ ಸುಜನ ಕುಜನರೊಳಗ |
ಘನವನು ಸಮತಿಳಿದನು ಭವದೀ |
ಅನುದಿನ ಮಹಿಪತಿ ನಂದನ ಪ್ರಭುವಿನ |
ನೆನೆಯುತಲಿಹರಿಗೆ ನಮೋ ನಮೋ ೩

೨೮೫
ಭಾವ ಭಕುತಿಗೆ ವಲಿವ ನೋಡಿರೋ|
ದೇವ ದೇವ ಮುಕುಂದನು|
ಆವನಾಗಲಿ ತನ್ನ ನಂಬಿದ|
ಸೇವಕರನು ದ್ಬರಿಸಿ ಪೊರೆವನು ಪ
ಆಚರಣೆ ನೋಡಿದನೆ ವ್ಯಾಧನ|
ನೀಚನೆಂದನೆ ವಿದುರನ|
ಯೋಚಿಸಿದನೇ ಧ್ರುವನ ವಯಸನು|
ನಾಚಿದನೇ ಕುಬ್ಜೆಯನು ಕೂಡಲು೧
ಏನು ವಿದ್ಯೆ ಗಜೇಂದ್ರದೋರಿದ|
ಏನು ಕೊಟ್ಟ ಸುಧಾಮನು|
ಏನು ಪೌರುಷ ಉಗ್ರಸೇನನ|
ಏನುಣಿಸಿದಳು ಹರಿಗೆ ದ್ರೌಪದಿ೨
ಆವಶೇವೆಯೋ ನರನ ಬಂಡಿಯ|
ಬೋವತನವನು ಮಾಡಲು|
ಭಾವಿಸಲು ಗುರುಮಹಿಪತಿ ಪ್ರಭು|
ಕಾವಕರುಣಿಯೋ ಮಹಿಮೆ ತಿಳಿಯದು೩

೪೮೪
ಭಾವದ ಪೊಂಬ್ಹರಿವಾಣ ಭಕುತಿಯಾ |
ತೀವಿದಾರತಿ ಜ್ಞಾನಜ್ಯೋತಿಯಾರುತಿಯಾ ಪ
ಆರುತಿ ಬೆಳಗುವೆನಾ | ನಮ್ಮಯ್ಯಗೆ ಆರುತಿ
ಬೆಳಗುವೆನಾ | ಶ್ರೀ ಗುರುವಿಗೆ ಆರುತಿ ಬೆಳಗುವೆನಾ ೧
ಮುಖದಲಿ ನುಡಿಯುತ ನಾಮಾವಳಿಯಾ |
ಸಕಲರು ಪ್ರೇಮದಿ ಹಾಕಿ ಚಪ್ಪಾಳೆಯಾ ೨
ನಯನದಿ ನೋಡಿ | ಶರಣವ ಮಾಡಿ |
ಭಯವ ನೀಡಾಡಿ | ಶೃುತಿಗಳಪಾಡಿ೩
ಇಂದಿನದಿನದಾನಂದವು ನಮಗೆ |
ಹಿಂದಿನ ಪುಣ್ಯ ಇದಿರಿಟ್ಟಿತು ಈಗ೪
ಒಡಲ್ಹೊಕ್ಕು ಮಹೀಪತಿ ನಂದ ನೊಡೆಯನಾ |
ಪಡೆವ ಬನ್ನಿರೋ ಬೇಗ ಮುಕುತಿಯ ಸದನಾ೫

೬೪೮
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು |
ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ
ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು |
ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು ೧
ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು |
ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು ೨
ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು |
ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು ೩

೬೪೯
ಭಾವವಿಲ್ಲದ ಬಯಲ ಭಜನೆಗೆ |
ದೇವನೆಂದಿಗು ವಲಿಯನು |
ಈ ವಿಷಯ ಫಲದಾಸೆ ಮನದೊಳು |
ಭಾವಿಸುತ ವೃತ ತಪಗಳ್ಯಾತಕೆ ಪ
ಮೀನು ನೀರೊಳಗಿದ್ದರೇನೈ |
ಧ್ಯಾನವನು ಬಕ ಮಾಡಲು |
ಮೌನದಲಿ ಕೋಗಿಲೆಯು ಇದ್ದರ |
ದೇನು ವನವಾಶ್ರಯಿಸಿ ಮರ್ಕಟ ೧
ಉರಗ ಪವನಾಹಾರ ಭಸ್ಮವ |
ಖರ ವಿಲೇಪನ ಮಾಡಲು |
ತರು ದಿಗಂಬರವಾಗಿ ಮಂಡುಕ |
ಕೊರಳೊಳಕ್ಷರ ಜಪಿಸಲೇನದು ೨
ನಿರುತ ಮೂಷಕ ಗುಹ್ಯಲಿರಲೇ |
ನರಿತು ಗಿಳಿ ಮಾತಾಡಲು |
ಗುರು ಮಹಿಪತಿ ಬೋಧವಾಲಿಸಿ |
ಹರಿಯ ಭಾವದಿ ನಂಬಿ ಸುಖಿಸಿರೋ ೩

೩೯೨
ಮಂಗಳ ಜಯ ಜಯ ಮಂಗಳಾ | ಶುಭ |
ಮಂಗಳ ಶ್ರೀ ಲಕ್ಷ್ಮೀ ನರಸಿಂಹಗೇ | ಸಹಸ್ರ |
ಮಂಗಳ ಭಕ್ತರ ಸಲಹುವಗೆ ಪ
ಶರಣ ಪ್ರಲ್ಹಾದಗೆ ಪಟ್ಟಾಭಿಷೇಚನ |
ಕರುಣದಿಮಾಡಿಸಿಸುರದಿಂದಲಿ |
ಅರಸುತನವಕೊಟ್ಟು ಭಕ್ತಾಗ್ರಣಿ ಮಾಡಿ
ವರಮುಕ್ತಿಗಳ ಸೂರಾಡಿದವಗೆ | ಮಂಗಳ …. ೧
ಎನ್ನನು ನೆನೆಯಲಿ ನೆನೆಯದವರಿರಲಿ ಒಮ್ಮೆ |
ನಿನ್ನ ನೆನೆದು ಘನ ಚರಿತೆಯನು ||
ಮನ್ನಿಸಿ ಒದುವ ಕೇಳುವ ಮನುಜರ |
ಚೆನ್ನಾಗಿ ಕಾಯ್ವೆನೆಂದಭಯ ವಿತ್ತವಗೆ ಮಂಗಳ ….. ೨
ಅಂದಿಗಿಂದಿಗೆ ತನ್ನ ದಾಸರಾದಾಸನಾ |
ಮಂದಿರ ಸಾರಿದವಗೆ ದಯದೀ ||
ಚಂದಾಗಿ ತನ್ನ ಭಕುತಿ ಎಚ್ಚರವ ನೀವ |
ತಂದೆ ಮಹೀಪತಿ ಸುತ ಪ್ರೀಯಗೆ ೩

೪೮೯
ಮಂಗಳ ಜಯಮಂಗಳ | ಶುಭಮಂಗಳ |
ಮಂಗಳ ಮಹೀಪತಿ ಗುರುಮೂರ್ತಿಗೆ |
ಮಂಗಳ ಶರಣರ ಸಾರಥಿಗೆ ಪ
ಹಲವು ಸಾಧನದಿಂ ತೊಳಲುತ ತತ್ವದ |
ನೆಲೆಗಾಣದವರನು ತಾರಿಸಲಿ |
ಒಲಿದು ಶ್ರೀಗುರು ರೂಪದಿಂದಲಿ ನರದೇಹ |
ಇಳೆಯೊಳು ಧೃಡಿಸ್ಯವತರಿಸಿದಗೆ ೧
ಬೇಡಿದಿಷ್ಟಾರ್ಥವ ಕಾಮ್ಯ ಭಕುತರಿಗೆ |
ನೀಡುತ ನಿರುಪಾಧಿಕ ಜನರಾ |
ಮಾಡಿ ಜೀವನ್ಮುಕ್ತರ ನಿಜಬೋಧದ
ಲಾಡುವ ಕರುಣಾಸಾಗರಗೆ ೨
ಎಡಬಲದಲಿ ಯೋಗ ಭೋಗ ಚಾಮರದಿಂ |
ದೃಢಸಿಂಹಾಸನ ಲೊಪ್ಪವಗೆ |
ಪೊಡವಿಲಿ ಮೂಢ ನಂದನ ಕೈಯ್ಯವ |
ಬಿಡನೆಂದಭಯವಿತ್ತ ಸ್ವಾನಂದಗೆ೩

೩೮೯
ಮಂಗಳ ಮಹಿಮ ಶುಭಾಂಗಗ ಮಂಗಳ
ಅಂಗಜ ಜನಕ ಶ್ರೀರಂಗಗ ಮಂಗಳ ಪ
ಸಿರಿದೇವಿ ಮುಖಪದ್ಮ ಭಂಗಗ ಮಂಗಳ
ಸುರ ಮುನಿಜನ ರಂಗ ಸಂಗಗ ಮಂಗಳ
ಶರಣಾಗತರ ಭವಭಂಗಗ ಮಂಗಳ
ದುರಿತಾಳಿವ್ಯಾಳ ವಿಹಂಗಗ ಮಂಗಳ ೧
ಯಾದವ ಕುಲಾಂಬುದಿ ಚಂದ್ರಗ ಮಂಗಳ
ಮಧು ಕೈಟಭಾರಿ ಮಹೀಂದ್ರಗ ಮಂಗಳ
ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ
ಸದಮಲಸದ್ಗುಣಸಾಂದ್ರಗ ಮಂಗಳ ೨
ನಾರದಗಾಯನ ಪ್ರೇಮಿಗೆ ಮಂಗಳ
ಸುರಸಾದಾಸಾಸಿರ ನಾಮಿಗೆ ಮಂಗಳ
ಗುರುವರ ಮಹಿಪತಿಸ್ವಾಮಿಗೆ ಮಂಗಳ
ಕರುಣಾಳು ಜಗದಂತ್ರಯಾಮಿಗೆ ಮಂಗಳ ೩

೩೮೮
ಮಂಗಳಂ ಜಯ ಮಂಗಳಂ ಶುಭಮಂಗಳೆನ್ನಿರೇ
ಹಿಂಗದಂತರಂಗಲಿಪ್ಪಾ ನಂಗನಯ್ಯಗೆ ಪ
ಹೆಣ್ಣ ಮಾಡಿತಮನ್ನ ವಿಕ್ರಮ ಹೆಣ್ಣವೆನಿಸಿ ಹೆಣ್ಣಿಗೊಲಿದು
ಹೆಣ್ಣು ತೊ ಡಿಯೊಳಿನ್ನು ತಾಳಿ ಹೆಣ್ಣ ಮಡ ದಂಗೆ
ಹೆಣ್ಣಿನಳಿದು ಹೆಣ್ಣೆ ನೆಬ್ಬಿಸಿ ಹೆಣ್ಣ ಹಲವರೊಡನೆ ಆಡಿದ
ಹೆಣ್ಣ ವೃತಗೆಡಿಸಿ ಕುದುರೆ ಯಾರೋಹಣ ಗೈದಂಗೆ ೧
ನಿಗಮ ತಂದು ನಗವನೆತ್ತಿ ಜಗವನುಳಹಿ ಮಗುವಿಗೊಲಿದು
ಅಗಲ ತುಂಬಿ ಮಿಗಿಲ ಭೂಸುರಗಳ ಹೊರದಂಗೆ
ಬಿಗಿದು ಬಿಲ್ಲವ ದೃಗವ ಮೂರನೆ
ಬಿಗಡಗೊಲಿಸಿದ ಸಗಟನೊತ್ತಿ
ಗಗನ ಪುರವಾಸಿಗಳಗೆಡಹಿದ ವಿಗಡ ಕಲ್ಕಿಗೆ ೨
ಮತ್ಸ್ಯರೂಪದಿ ಕಚ್ಚಪಾಗಿ ಸ್ವಚ್ಛಕೋಡದಿ ಬೆಚ್ಚ ನರಹರಿ
ಅಚ್ಚ ವಾಮನ ನಿಚ್ಛ ಕೊಡಲಿಯ ಮಚ್ಚು ಜನ ಕಂಗೆ
ಇಚ್ಛ ನಡೆಸಿದ ಮೆಚ್ಚಿ ಗೋಕುಲ ಹುಚ್ಚು ಮಾಡಿದ ಬಾಲನೆನಿಸಿ
ಸಚ್ಚರಿತ ಕಲಿನಾಶ ಮಹಿಪತಿ ನಂದ ನೊಡಿಯಂಗೆ ೩

೩೯೦
ಮಂಗಳಂ ಶ್ರೀರಂಗಗ ಮಂಗಳಂ
ಇಂಗಿತ ಭಕ್ತರ ಅಂಗಸಂಗಾದವಗ ಪ
ಸಿರಿತಳಕ ಮಂಗಳ ಕಾಲಿಯ ವರದನಾ
ವರನಖಮಂಗಳ ಗಂಗೆ ಪಡಿದನಾ
ಚರಣ ಕಮಂಗಳ ಅಹಿಲ್ಯ ಉದ್ಧಾರಗ
ನೆರೆಜಂಘಗೆ ಮಂಗಳೆ ಶೊದಾನಂದನಾ ೧
ತೊಡೆಗಳಿಗೆ ಮಂಗಳ ಗರುಡ ವಾಹನನಾ
ನಡುವಿಗೆ ಮಂಗಳ ಧೃವ ಗೊಲಿದನ
ಒಡಲ ಕಮಂಗಳ ಜಗವಳ ಕೊಂಬನಾ
ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ ೨
ಉರ ಸಕ ಮಂಗಳ ಉಪಮನ್ಯು ಪ್ರೀಯನಾ
ಸಿರಿವಕ್ಷಕ ಮಂಗಳ ಭೃಗು ರಕ್ಷನಾ
ಕರಗಳಿಗೆ ಮಂಗಳ ಕರಿರಾಜ ವರದನಾ
ಕೊರಳಿಗೆ ಮಂಗಳ ತುಳಸಿ ಧರನಾ ೩
ಇದು ಶೃತಿಗೆ ಮಂಗಳ ಹನುಮನೇ ಕಾಂತನಾ
ವದನಕ ಮಂಗಳ ವಿದುರ ಗೊಲಿದನಾ
ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ
ಪದುಮಾಕ್ಷಗ ಮಂಗಳ ಮದನ ಮೋಹನನಾ ೪
ಸಿರಸಕ ಮಂಗಳ ಫಣಿರಾಜಶಯನನಾ
ದೊರೆತನಕ ಮಂಗಳ ಶ್ರೀ ಭೂರಮಣನಾ
ಗುರುತನಕ ಮಂಗಳ ಉದ್ಬವತಾರಕನಾ
ಕರುಣಿಗೆ ಮಂಗಳಾರ್ಜುನ ಬೋಧನಾ ೫
ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ
ಅಭಯಕ ಮಂಗಳಾಜಮೀಳ ಪಾಲನಾ
ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ
ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ ೬
ಸಿರಿನಾಮಕ ಮಂಗಳ ನಾರದ ಪ್ರೀಯನಾ
ಪರತಕ ಕ ಮಂಗಲ ಶಿವ ವಂದ್ಯನಾ
ಗುರುವರ ಮಹಿಪತಿ ನಂದನಸಾರಥಿ
ಬಿರದಿಗೆ ಮಂಗಳಾಂಬರೀಷ ನೊಡಿಯನಾ ೭

೨೧
ಮಂಗಳಾರತಿಯ ತಂದೆತ್ತಿರೇ ಜಯ –
ಮಂಗಳ ಮೂರ್ತಿ ಶ್ರೀಗಣರಾಯಗೆ ಪ
ಶರ್ವಾಣಿಸುತ ಚತುರ್ದಶ ವಿದ್ಯದಾಗರ |
ಸರ್ವಗುಣಾಂಬುಧಿ ಗಜಮುಖಗೆ |
ಊರ್ವಿಯೊಳಗೆ ತನ್ನ ಚರಣವ ನೆನೆವರ |
ನಿರ್ವಿಘ್ನದಲಿ ಕಾವ ದಯಾನಿಧಿಗೆ ೧
ರನ್ನ ಮುಕುಟ ದಿವ್ಯ ಕುಂಡಲಧಾರಿಗೆ |
ಪನ್ನಗ ಭೂಷಣ ಚತುರ್ಭುಜಗೆ |
ಸನ್ನುತ ಪರಶಾಂಕುಶವನು ಪಿಡಿದಗೆ |
ಉನ್ನತ ಮೂಷಕ ವಾಹನಗೆ ೨
ಸಮಚರಣಾಂಬುಜ ಸುರವರವಂದ್ಯಗೆ |
ಕಮಲಸಕನ ತೇಜ ಗೆದ್ದವಗೆ |
ವಿಮಲ ಮತಿಯ ನೀವ ಸಿದ್ದಿಧೀರೇಶಗೆ |
ನಮೋಎಂಬೆ ಮಹೀಪತಿ ಸುತಪ್ರಿಯಗೆ೩

೩೯೧
ಮಂಗಳಾರತಿಯಾ ತಂದೆತ್ತಿರೇ
ಮಂಗಳವದನೆಯರೆಲ್ಲಾ
ಅಮಂಗಜನಪಡದಾ ಮಂಗಳಾತ್ಮಗ ಪ
ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ
ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ ೧
ಉತ್ತಮ ಪುರುಷ ಶ್ರೀ ಹರಿಗೆ
ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ ೨
ಜಯ ಜಯ ಶಿಷ್ಟ ರಕ್ಷಕನೇ
ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ
ಮಹಿಪತಿ ಸುತಪ್ರೀಯಗೆ ೩

೬೫೦
ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ ಪ
ತಂತ್ರಸಾರದಿಂದ ಪೂಜೆ ಮಂತ್ರದಿಂದ ಮಾಡಿ ಡಂಭ |
ಯಂತ್ರದೊಳಗ ಸಿಲ್ಕ ಸಿಂತ್ರ ಹೋದರಲ್ಲದೇ ೧
ಶಾಸ್ತ್ರವನೋದಿ ಹೇಳಿ ನಿಸ್ತರಿಸಿ ವಾದದಿಂದ |
ದುಸ್ತರ ಹಮ್ಮಿನೊಳಗಸ್ತ ವಾದರಲ್ಲದೇ ೨
ಇದ್ದು ಉಪವಾಸದಿಂದ ಉಗ್ರತಪವ ಮಾಡಿ |
ಸಿದ್ಧಿಗಳ ತೋರಿ ಮೆರೆದು ಬಿದ್ದು ಹೋದರಲ್ಲದೇ ೩
ಹಲವು ಕರ್ಮಗಳ ಮಾಡಿ ಫಲವ ಬೇಡಿಕೊಂಡು ತನ್ನ |
ಘಳಿಕೆಯ ಸಂಸಾರದಿ ಕಳೆದುಕೊಂಡರಲ್ಲದೇ ೪
ಇಂದಿರೆಪತಿಯ ಮನದಿಂದ ಅರಿತು ಪೂಜಿಸುವ |
ತಂದೆ ಮಹಿಪತಿ ಪ್ರಭು ಹೊಂದಿದವರಲ್ಲದೇ ೫

೨೮೬
ಮತ್ತೆ ನಾನೇನೆಂದೆ ಮದನ ಜನಕ ಪುರು|
ಷೋತ್ತಮ ಪರತರ ಶೇಷಗಿರಿವಾಸಾ| ಪ
ಕರುಣ ನೋಟದಿ ಸರ್ವಜೀವನುಳಹಿ ಕೊಂಡು|
ಸುರರಿಗೆ ಅಮೃತ ನುಣಿಸಿದನು|
ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು|
ಹರಣಗಾಯ್ವ ದೇವ ಶರಣೆಂದೆನಲ್ಲದೆ|
ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ|
ಬಿರುಸು ಮೈಯ್ಯವನೆಂದನೇ ದಾಡಿಲಿಂದ|
ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ|
ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ೧
ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ
ಪುಕ್ಕಟೆ ಅರಸು ತನವ ಕೊಟ್ಟನು|
ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ|
ಮಕ್ಕಳ ಸಾರಥಿ ಶರಣೆಂದೆನಲ್ಲದೇ|
ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ|
ನಿಕ್ಕರುಣಿಕನೆಂದನೇ ವಾನರ ಕೂಡಾ|
ಹೊಕ್ಕವನನೆಂದೆನೇ ಕೌರವರ|
ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ೨
ನೊಸಲಗಣ್ಣಿನವನ ಸಾಹ್ಯಕ ಶರವಾಗಿ|
ಯಶೆವ ಮುಪ್ಪುರವನು ಧರೆಗಿಳುಹೀ|
ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ|
ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ
ಹುಸಿನುಡಿಯುವ ನೆಂದನೇ ಯವನರ|
ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ|
ತುಸುಗುಡದವ ನೆಂದನೇ ಜಗದೊಳು|
ದಶ ಅವತಾರನೇ ನಮೋ ಎಂದೆ ನಲ್ಲದೆ.೩

೨೮೭
ಮದ್ದಾನೆ ಗತಿ ಸಖಿ ಬಾರಮ್ಮಾ||
ಮುದ್ದು ಮೊಗದ ರಂಗನ ತಂದು ತೋರಮ್ಮಾ ೧
ಇಂದು ಎನ್ನ ಚಿತ್ತ ಸ್ವಸ್ಥವಾಗದೇ|
ಒಂದುಗಳಿಗಿ ಕ್ರಮಣವಾಗಿ ಹೋಗದೇ ೨
ಬಿಗಿದವೇನೆ ಮಾಯಿ ಫಣಿಗಳು|
ವೇಗದಿಂದ ಬರುತಿದೇ ತಂಗಾಳಿಗಳು ೩
ಮಂದರಧರನು ಯಾಕೆ ಬಾರನೇ|
ಚಂದ್ರ ಕಿರಣ ಝಳಕ ನಿಲ್ಲಲಾರೆನೇ ೪
ಮುನಿದನ್ಯಾತಕ ತಾನು ಹೇಳಮ್ಮಾ
ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ ೫
ಮೊದಲೆನ್ನ ಕೈಯ್ಯಾ ತಾ ಹಿಡುವರೇ|
ತದನಂತರದಿ ತಪ್ಪ ನೋಡುವರೇ ೬
ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ|
ಕರೆತಾರೆ ಮಹಿಪತಿ ಸುತ ಜೀವನಾ ೭

೬೫೧
ಮನದಲಿ ಸಕಲಾರ್ಥ | ಜಗದೊಳು ಪ
ಮನ ನೆಲೆಗೊಂಡರೆ ಮೋಕ್ಷದ ಹಾದೀ |
ಮನ ಚಲಿಸಲು ಬಾಧೀ ೧
ಮನವೇ ತಾಹದು ನಾನಾಜನ್ಮ |
ಮನ ಹರಿವುದು ಕರ್ಮಾ ೨
ಮನವಶವಾದರೆ ಯೋಗಿ ಮಹಂತಾ |
ಮನಮೀರಲು ಭ್ರಾಂತ ೩
ಮನ ಉನ್ಮನವಾಗಲು ಭವ ದೂರಾ |
ಮನದೊಳು ಸಂಸಾರಾ ೪
ಮನ ಗುರುವರ ಮಹಿಪತಿ ಪ್ರಭು ನಾಮಾ |
ನೆನಿಯಲು ಸುಖಧಾಮಾ ೫

೬೫೨
ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ
ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು
ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ
ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ |
ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ |
ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು |
ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ |
ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು |
ಗುದ್ದಿನೊಳಗಿಟ್ಟು ಕಣ್ಣ ಮುಚ್ಚದಿರು ನೆಚ್ಚದಿರು |
ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ |
ಬದ್ಧವಚನವ ನುಚ್ಚರಿಸದಿರು ೧
ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು |
ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ |
ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ |
ನೀ ಜಯಿಸಿ ಬಂದದಲ್ಲಾ ಸಂದದಲ್ಲಾ |
ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ |
ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು |
ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ|
ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ ೨
ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ |
ತೆರದಿಂದ ತಿರುಗಿ ತಿರುಗಿ ಯಾತಿಗಳನು |
ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ|
ನರದೇಹವನು ತಾಳಿ ಬಂದಿ ನೀನು ತಿಂದಿ ನೀನು |
ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ |
ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ |
ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ |
ಸ್ಥಿರವಲ್ಲಾ ಆಗಲ್ಹೋ ಈಗಲಿದು ೩

೬೫೩
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ
ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ |
ಮರೆವ ದಿನಗಳ ಜರಿವರೇ ನರದೇಹವಿದು ಅ.ಪ
ದೊರೆಯದಿನ್ನು ಮತ್ತ ತರುವರ ಏನಾದರೇನೀ |
ಹರಿಯ ಸ್ಮರಣೆಯ ಬಿಡುವರೇ |
ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ |
ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ ೧
ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ |
ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ |
ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ |
ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ |
ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು |
ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ ೨
ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು |
ತಿಂದ ನಡುವಳಿ ಬಿರಿದು | ಸದ್ಗುರುವೀನ |
ದ್ವಂದ್ವ ಪಾದಗಳ ವಿಡಿದು | ಅವರ ದಯ |
ದಿಂದ ಗತಿ ಮುಕ್ತಿ ಪಡೆದು |
ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ |
ತಂದೆ ಮಹಿಪತಿ ನಿಜನಂದನುಸುರಿದನು ೩

೬೫೪
ಮನವೇ ಬರಿದೇ ಚಿಂತಿಸಲಿ ಬ್ಯಾಡಾ |
ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ
ಮುನ್ನ ಮಾಡಿದ ಕರ್ಮ ಜನಿತ ಲಾಭಾ ಲಾಭ |
ವನ್ನು ಫಣಿಯಲ್ಲಿ ವಿಧಿ ವರೆದ ಪರಿಯಾ |
ತನ್ನಿಂದ ತಾನೇ ಬಹದೆಂದು ಖರಿಯಾ |
ಇನ್ನು ತಾ ಬಯಸಿದರೆ ಬಾರದರಿಯಾ |
ನಿನ್ನೊಳು ನೀ ತಿಳಿದು ನಂಬು ಹರಿಯಾ ೧
ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ |
ದೆಸೆಗೊಟ್ಟು ಸಲುಹಿದ ನಲ್ಲವೇನೋ |
ಬಿಸಜಾಕ್ಷ ಅಸಮರ್ಥನಾದನೇನೋ |
ಕುಶಲ ನಾನೆಂದ-ಹಂಕರಿಸಿದೇನೋ ೨
ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ |
ಇಂಬಾಗಿ ಕುಣಿಸುವನು ಪ್ರಾಣಿಗಳನು |
ಡಿಂಬಿನೊಳು ನಿಂತು ತಾ ಚೇತಿಸುವನು |
ಕುಂಭಿನಲಿ ಸ್ವತಂತ್ರನಲ್ಲ ನೀನು |
ಅಂಬುಜನಾಭನ ಲೀಲೆಯೆಂದು ಕಾಣು ೩
ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ |
ಉದಕ ತುಸು ಬಹದೆಂದು ನುಡಿದು ಸೊಲ್ಲಾ |
ನದಿಯೊಳೆದ್ದಲು ನೀರು ಹೆಚ್ಚದಲ್ಲಾ |
ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ |
ಕುದಿದು ಸಂಸಾರದಲಿ ಸೊರಗಿದನೆಲ್ಲಾ ೪
ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು |
ಹರಿಚರಣದಲಿ ಭಾರವಪ್ಪಿಸಿಟ್ಟು |
ದೊರಕಿದದರಿಂದ ಸಂತುಷ್ಟಬಟ್ಟು |
ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು |
ತರುಣೋಪಾಯದ ತಿಳಿಯೋ ಜ್ಞಾನಗುಟ್ಟು ೫

೬೫೫
ಮನವೇ ಮೈ ಮರೆಯಲಿ ಬ್ಯಾಡಾ |
ನಿನ್ನೊಳು ಘನದೆಚ್ಚರ ಬಲಿ ದೃಢಾ ಪ
ಸ್ವಾಪದ ಕನ್ನಡಿ ಮನಿಯಾ ಹೊಕ್ಕು ಬಳಲಿದ ಪರಿಯಾ |
ಸಿಂಹನು ಕೂಪದಿ ನೆರಳಿಗೆ ಬೀಳಲಿ ಕಾಜಿನ |
ಸೋಪಾನವ ನೋಡಿ ಗಜವಿನ್ನಾಪದ ಬಿಟ್ಟದ ಕೇಳಲೀ ೧
ಶುಕನಲಿಕದಲಿ ಬಂದು ಬಿದ್ದಿತು ತಾನಿಂದು | ವಾನ್ನರ
ವಿಕಳದ ಆಸೆಗೆ ಗುರಿತಿಸಿ ಕೆಟ್ಟಿತು
ಅಖಳದಿ ಸಲೆಯಾಗಿ | ಈ ಪರಿ |
ಪ್ರಕಟದಿ ವಿಷಯಕ ಮೋಹಿಸಿ ೨
ತಂದೆ ಮಹಿಪತಿ ಚರಣ ನಮಿಸಿ | ಪಡಿಯಲೋ ಕರುಣಾ |
ಇಂದಿರೆಯರಸನಾ ನಾಮವ ಪಾಡುತ | ಅರುಹಿನ |
ಮಂದಿರವನು ಸಾರೀ ಜನುಮಕ |
ಬಂದ ಸಾರ್ಥಕ ಮಾಡುತಾ ೩

೬೫೬
ಮನಿ ಮನಿಗೆ ಗುರುಭಕ್ತರಾದವರು | ಜಗದೊಳಗೆಲ್ಲಾ |
ಘನ ನೆಲೆ ಕಂಡವರೊಬ್ಬರಿಲ್ಲಾ ಪ
ಗುರು ಸ್ವರೂಪರಿಯದೆ | ನರಭಾವ ಮರಿಯದೆ |
ಗುರು ಭಕ್ತಿ ಶೀಲಾ ತಾ ತಿಳಿಯದೇ ೧
ಸಂಪ್ರದಾಯಕರು ಯನಿಸಿಕೋಬೇಕು | ಯಂದು ಬಯಸೀ |
ಕ್ಷಿಪ್ರದಿ ಮಂತ್ರವ ಕೊಂಬರು ಅರಸಿ ೨
ಸುರಸ ಮಾತಾಡಿದರ | ಗುರುಯಂದಿರುತಿಹರು ಸಾರೆ |
ಬಿರುನುಡಿಕೇಳಲು ತೊಲಗುವರು ಬ್ಯಾರೇ ೩
ಮೊಲೆ ಬದಿಯೊಲುಣ್ಣಿ | ಮೊತ್ತಾ ಇರುವಂತೆ ನೋಡಿಸತ್ಯಾ |
ನೆಲೆ ಭಕ್ತಿಯೆತ್ತಾ ತಾನಿವ್ಹನೆತ್ತಾ ೪
ಹುರಡೆ ಡಾಂಭಿಕದಿಂದಾ | ಚರಿಸಿದರೇನು ಛಂದಾ |
ಗುರುಮಹಿಪತಿ ಪ್ರಭು ನೆಲಿಯಲಿ ಯಂದಾ ೫

೬೫೭
ಮನಿ ಮನಿಗೆಲ್ಲಾ | ಸಂತರು ಲಕ್ಷ ಕೊಬ್ಬರಿಹರಲ್ಲಾ ಪ
ಹಲವು ಗಿಡದಿ ಸಂಜೀವಿನಿ ಸಸಿಯಂತೆ |
ಕೆಲವು ವಿರಕ್ತರಲಿ ರಸಕ್ರಿಯನಂತೆ ೧
ಮೃಗತತಿಯಲಿ ಕೃಷ್ಣಾಮೃಗ ದೋರುವಂತೆ
ಮುಗುದೆಯರಲಿ ಪತಿವೃತೆ ನಲಿವಂತೆ ೨
ಗುರು ಮಹಿಪತಿಸುತ ಪ್ರಭು ಪದ ಕಂಡು
ವಿರಳಾಗತಲಿಹನು ಸವಿ | ಸುಖನುಂಡು ೩

೬೫೮
ಮನುಜದನುಜ ರಿವರೆವೆ ನೋಡಿ |
ದನುಜನು ದೈತ್ಯರೊಳೆನ ಬ್ಯಾಡಿ ಪ
ಹರಿ ನೆನೆಯುತ ಹರಿಕಥೆಗಳ ಕೇಳುತ |
ಹರಿ ಭಕುತಿಗೆ ಬೆರೆದವ ಮನುಜಾ |
ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ |
ಬರಿದೆವೆ ದಿನಗಳೆವವ ದನುಜಾ ೧
ಪರರ ಸದ್ಗುಣ ವಾಲಿಸಿಕೊಳುತಲಿ | ಸಕ |
ಲರಿಗೆ ಮನ್ನಿಸುವವನೇ ಮನುಜಾ |
ಗರುವ ಹಿಡಿದು ತನ್ನ ಹೊಗಳುತ ಅನ್ಯರ |
ಬರಿದೆ ನಿಂದಿಸುವವನೆ ದನುಜಾ ೨
ಅಕ್ರ್ಯುಳ್ಳವರ ಶರಣ್ಹೊಕ್ಕು ಸುಗತಿ ಪಥ |
ಸರ್ಕನೆ ತಿಳಿದವ-ನೆವೆ ಮನುಜಾ |
ಮೂರ್ಖತನ ಹಿಡಿದು ಸಾಧು ಸಂತರಲಿಕು |
ತರ್ಕವ ಮಾಡುವವನೆ ದನುಜಾ ೩
ಹುಟ್ಟಿದರಲಿ ಸಂತುಷ್ಟದಿ ಕವಳವ |
ನಿಷ್ಠೆಗೆ ತಾರದವನೆ ಮನುಜಾ |
ನಷ್ಟ ನೃಪರ ನಂಬಿ ಲಾಭಾ ಲಾಭ ಕೊಡುವ |
ಸೃಷ್ಟೀಶನನು ಮರೆತವ ದನುಜಾ ೪
ತಂದೆ ಮಹಿಪತಿ ಭೋಧವ ಮನದಲಿ |
ತಂದು ಹರುಷವ ಪಡುವವ ಮನುಜಾ |
ದಂದುಗ ಚಿತ್ತದಿ ಹೇಳಿದ ಮಾತಿಗೆ |
ಸಂದೇಹ ಬಟ್ಟವನವ ದನುಜಾ ೫

೬೫೯
ಮನುಜಾ ಹಿಡಿ ದಾರಿ ದಾರಿ ದಾರಿ ದಾರಿ |
ಪ್ರಾಣಿ ಹಿಡಿ ದಾರಿ ದಾರಿ ದಾರಿ ದಾರಿ ಪ
ದೃಢಭಾವದಿಂದಾ | ಪಡೆದು ಸದ್ಬೋಧಾ |
ಒಡನೆ ಸದ್ಗುರು ಪಾರಾ | ಸಾರಿ ಸಾರಿ ಸಾರಿ ಸಾರಿ ೧
ಚಾರು ಭಕುತಿಯಾ | ದಾರಿ ನಿಶ್ಚಯಾ |
ಆರು ಅರಿಗಳ ಕೈಯ್ಯಾ | ಮೀರಿ ಮೀರಿ ಮಮೀರಿ ಮೀರಿ ೨
ತನುಧನ ಬೆರೆದು | ಋಣವೆಲ್ಲ ಮರೆದು |
ಕ್ಷಣದೊಳೆಲ್ಲಡಗುವದು | ತೋರಿ ತೋರಿ ತೋರಿ ತೋರಿ ೩
ಸ್ವಾನಂದ ವಿರಹಿತಾ | ದಿನಗಳೆವರೆ ವ್ಯರ್ಥಾ|
ಮಾನವಜನ್ಮದಿ ಮತ್ತೆ | ಬಾರಿ ಬಾರಿ ಬಾರಿ ಬಾರಿ ೪
ತಂದೆ ಮಹೀಪತಿ | ನಂದನ ಸಾರಥಿ |
ಹೊಂದಲು ಹೊರೆವನು ಕರುಣ ತಾ |
ತೋರಿ ತೋರಿ ತೋರಿ ೫

೪೮೫
ಮನ್ನೆಲೆನಾ ಪುಣ್ಯವ ಮಾಡಿದೆನೋ |
ಧನ್ಯಗೈಸಿದೆನಗ ಗುರು ಮಹಿಪತಿ ತಾನು ಪ
ವಿಜಯಗ್ಹೇಳಿದ ಹರಿಗೀತೆಯಲಿ | ಸುಜನ್ಮಾಹುದು
ಸಂತರಲ್ಲಿ ದುರ್ಭರದ ೧
ಎನ್ನ ಸಿರದಲಭಯಕರವಿಟ್ಟು | ಚನ್ನಾಗ್ಹೇಳಿದ
ಕಿವಿಯೊಳು ಸುಜ್ಞಾನ ಗುಟ್ಟು ೨
ಕಣ್ಣದೆರಸಿದ ಭಕ್ತಿ ಮಾರ್ಗದಲ್ಲಿ | ಸಣ್ಣ
ದೊಡ್ಡದರೊಳಿಹ ಚಿದ್ಘನ ವಾ ದೋರಲಿ ೩
ಇನ್ನೊಬ್ಬರಾಶೆಯೇಕೆ ಎನಗಿನ್ನು | ಎನ್ನ
ಇಂಬಾಗಿರಲು ಗುರುದಯ ಕಾಮಧೇನು ೪
ತಂದೆ ತಾಯಿ ಗುರು ಬಂಧುಗಳಾಗಿ |
ಕಂದಗೊಲಿದನು ಇಹಪರಗತಿಯಾ ಹೊಣೆಯಾಗಿ ೫

೨೮೮
ಮರುಳು ಮಾಡಿದನಲ್ಲೇ ಏಣಾಕ್ಷಿ ಪ
ಘವ ಘವಿಸುವಾಯವಿಯಾ ನೋಟದಿ ನೋಡಿ||
ಸವಿಸವಿಯಾದಾ ಮಾತನಾಡೀ ೧
ಚಿತ್ತರ ಮಿಸುವಂತೆ ರೂಪವ ದೋರಿ|
ಅತ್ತಿತ್ತಗಲದ್ಹಾಂಗ ನಿಜ ಬೀರಿ ೨
ಗುರುವರ ಮಹಿಪತಿ ನಂದ ನೊಡೆಯನಾ|
ಅರಫಳಿಗಿರಲಾರೆ ಅಗಲಿನಾ ೩

೪೯೭
ಮರೆತರತಾಮರ ವಲ್ಲದು ನೋಡಲು |
ಅರತರತಾ ಅರವಲ್ಲದು ನಿಜದೊಳು |
ಅರಹು ಮರಹು ಎರಡನೇ ಮೀರಿಹ |
ಘನದರುವೇ ತಾನಾಗಿ |
ಕುರುವಿನೊಳಿರುವಾಗಿಹ ಸ್ವಾನಂದದಿ |
ತೆರವಿಲ್ಲದೆ ಸೆಲೆತುಂಬಿ ತುಳುಕುತಿಹ |
ಪರವೆಂದೆನಿಸಿದ ಶರಣ ರಕ್ಷಕ |
ಗುರು ಮಹಿಪತಿ ಜಯ ಜಯತು

೬೬೧
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ
ಗರಿಯಾ ಚರಿಯಾ ಮರಿಯಾ ನೆರಿಯಾ |
ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ
ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ |
ಬಿಡದೋಲೈಸಿ ಘನಮದರಾ |
ಕಡಿಯಾ ಕಿಡಿಯಾ ನುಡಿಯಾ ಪಡಿಯಾ |
ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ ೧
ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ |
ಯರಗುವಾಯಮ ತಾ ನಿಲದೇ |
ತ್ವರಿಯಾ ಧರಿಯಾ ಕುರಯಾ ಮರಿಯಾ |
ವೈರಿ ಮೀರಿ ಹಾರಿ ತೂರಿ ಹೊರುವಂದದಿ ೨
ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ |
ಅನುಭದಿಸದಿಹುದೇನಾ |
ಅನುವೇ ಮನವೇ ಗುಣವೇ ದನವೇ |
ಜ್ಞಾನ ಹೀನ ಮಾನ ದೀನ ಆನನದಲೀ ೩

೬೬೯
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ |
ಸಿರಿಯರಸನಸಿರಿ ಚರಣವ ಸ್ಮರಿಸದೇ |
ನರದೇಹ ಬರಡವ ಮಾಡುವರೆ ಜಾಣಾ ಪ
ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು |
ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ |
ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ |
ತೊಳಲುತ ನಿಶಿದಿನ ಬಳಲುವೆ ಜಾಣಾ ೧
ಅವಗತಿಯೋ ಎನಗೆ ಮುಂದಾ |
ಆವ ಜನಮ ವಿಹುದೋ |
ವಿವೇಕದಿಂದ ವಿಚಾರಿಸಿ ಮನದೊಳು |
ಭಾವಿಸಿ ಗುರುವಿನ ಪಾವನ ಪಾದಾ |
ಭಾವಭಕುತಿಯಲಿ ಸಾವಧನನಾಗದೆ |
ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ ೨
ಬದಿಯಲ್ಲಿದ್ದಾ ವಸ್ತುವನು |
ಸದಗಾನಾದ್ಯೋ ಕಾಣದೆ |
ಸಾಧುರ ಕೈಯಲಿ ಹಾದಿಯ ಕೇಳೆಲೋ |
ಸಾದರದಲಿ ನಿಜ ಸಾಧನ ಬಲಿದು |
ಭೇದಿಸು ಮಹಿಪತಿನಂದನ ಸಾರಿದಾ |
ಗಾದಿಯನ್ನದೆ ಗತಿ ಸಾಧಿಸೋ ಜಾಣಾ ೩

೬೬೦
ಮರ್ಯಾದಿ ಗುಣ ವಳ್ಹದೋ |
ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ಪ
ಅರಸುವಲಿದು ಅತಿ ಪ್ರೀತಿ ಮಾಡಿದರೇನು ?
ಕರಗಳ ಮುಗಿದು ನಿಂದಿರಬೇಕು ಚರನು ೧
ಹಿಂಗದೆ ಭಕುತಿಗೆ ಬೆಜ್ಜರ ವಿಡಿದರ |
ಬಂಗಾರಕ ಸುವಾಸನೆಯು ಬಂದಂತೆ ೨
ಕುದುರೆಗೆ ಉತ್ತತ್ತಿ ತುಸು ಕೊಟ್ಟರಾರೋಗ್ಯ |
ಅದೇ ವಿಶೇಷ ಕೊಡಲು ವಿಪರೀತವೋ ೩
ಯೋಗ್ಯವಲ್ಲದ ಅಲಂಕಾರಿಸಿಕೊಂಡರೆ ತನ್ನ |
ಶ್ಲಾಘ್ಯವೇ ಜಗದೊಳು ಉಪಹಾಸ್ಯ ಮೂಲಾ ೪
ತರಳತನವ ಬಿಟ್ಟೆಚರದಲಿ ನಡಿಬೇಕು |
ಗುರು ಮಹಿಪತಿಸುತ ಪ್ರಭು ನೊಲುವಂತೆ ೫

೬೬೫
ಮಾಡಬಾರದೇ ಸಂಗಾ | ಸಂತರ |
ಮಾಡಬಾರದೇ ಸಂಗ |
ಕೂಡಿ ಶ್ರವಣವ ಮಾಡಲು ಮನದೊಳು |
ಮಾಡಿಬಹುನು ಶ್ರೀರಂಗಾ ಪ
ವೇಷ ವೈರಾಗ್ಯವ್ಯಾಕ | ದೇಶೋ |
ದೇಶ ತಿರುಗುವದ್ಯಾಕ |
ಕಾಸಿ ಆರಿದ ಹಾಲವು ಇದರಿಡೇ |
ಆ ಶಿವಧ್ಯಾನವು ಬೇಕ ೧
ನಾನಾ ಸಾಧನದಿಂದಾ | ಬಾಹು |
ದೇನೆಲೋ ಮತಿಮಂದಾ |
ಮನಿಯೊಳಗಿನ ಗಿಡ ಸಂಜೀವನಾಗಿರೆ |
ಕಾನನ ತಿರುಗುವದೇ ಅಂಧಾ ೨
ಲೋಹ ಪರುಷವ ಬಿಟ್ಟು | ಕಾಷ್ಟದ
ಲಾಹುದೇ ಚಿನ್ನದ ಗಂಟು |
ಮಹಿಪತಿ ನಂದನು ಸಾರಿದ ಸ್ವಹಿತಕ |
ಮಹಾನುಭಾವದಾ ನಿಜಗುಟ್ಟು ೩

೨೯೦
ಮಾಡಲೋ ಹರಿಪಾದ ಭಜನಿ| ಮನವೇ ನೀ|
ಕೂಡಿದ ಪಾತಕ ಓಡಿಸಿ ಕಳೆವದು|
ಕಾಡಿಗೆ ಕೊಂಡಾ ವಾಡಬನಂತೆ ಪ
ಸಿಕ್ಕದು ನರದೇಹಲಿಂದು|ಜನಿಸಿ ಬಂದು|
ಪುಕ್ಕಟೆ ನೀಗುವದು ಕುಂದು|
ಅಕ್ಕರದಲಿ ವಿಷಯಕ್ಕೆಳಿಸುತಾ|ಭವ|
ದಿಕ್ಕಲು ಸಾರುತ ಠಕ್ಕಿಸಿ ಕೊಂಬರೆ ೧
ಸಂತರ ಸಹವಾಸ ಮಾಡೀ|ಕರುಣ ಬೇಡಿ|
ಅಂತರ ಸುಖವನು ಕೂಡಿ|
ತಂತು ವಿಡಿದು ನಿಶ್ಚಿಂತದಿ ಘನ|ವಿ|
ಶ್ರಾಂತಿ ಪಡೆದು ಅನಂತನ ಪಾಡುತ೨
ಭಕುತಿಯ ಸವಿಸಾರವೆಲ್ಲಾ|ಬಲ್ಲವನೇ ಬಲ್ಲಾ|
ಮುಕುತಿಯೊಳಗೆ ಸುಖವಲ್ಲಾ|
ಪ್ರಕಟದಿ ಮಹಿಪತಿ ಮಗುವಿಗೆ ಭೋಧಿಸಿ|
ತಗಬಗಿ ಬಿಡಿಸಿದ ನಗೆ ಮೊಗದಿಂದ೩

೬೬೬
ಮಾಡು ಮನವೇ ಹರಿ ಚರಣದ ಭಜನೀ ಪ
ಆವನು ಭಕುತಿಗೆ ಬೆರೆದವನಿಂದು |
ದೇವ ಸಮಾನಹ ಧರಿಯ ಮನುಜ ನೀ ೧
ವಿಷಯ ಸುಖೇಚ್ಛೆ ಬರ್ಬುರ ಧ್ರುಮಸಾರಿ |
ವಸುಧಿಲಿ ತ್ಯಜಿಸುವೆಸುರಕುಜನೀ ೨
ಗುರು ಮಹಿಪತಿ ಪ್ರಭು ದಯದೊಲವಿಂದಾ |
ಹಾರಿಸುವದೀ ಮಾಯಾ ಮೋಹದ ರಜನೀ ೩

೨೮೯
ಮಾಡು ಸಂತರ ಬಳಿಕೀ ಏ ಮಾನವಾ ಪ
ದೊರಕಿಸು ವಿಶ್ರಾಂತಿಯ ಪಡೆವಂತೆ|
ಹರಿನಾಮದ ಘಳಕೀ ೧
ಕೇಳಲು ಸ್ವಾನುಭವದ ನುಡಿಗಳನ್ನು|
ಬೀಳದು ಯಮ ಮಲಕೀ ೨
ತಂದೆ ಮಹಿಪತಿ ಪ್ರಭು ದಯದಿಂದಲಿ|
ಮುಂದ ನೀ ಭವಕಳು ಕೀ ೩

೬೬೭
ಮಾಡು ಹರಿಪದ ಧ್ಯಾನ ಮನವೇ ಪ
ಸಕಲೇಂದ್ರಿಗಳ ಚೇಲಿಸಿ ನೋಡುತ |
ಪ್ರಕಟದಿ ನಿನ್ನೊಳಗ್ಹಾನೇ ಮನವೇ ೧
ನಾ ನನ್ನದು ಯಂದು ಮೈಯವ ಮರೆದು |
ಸ್ವಾನಂದ ಸುಖಗಳೆದೇ ಮನವೇ ೨
ದೃಢ ಭಾವದಿ ಗುರು ಮಹಿಪತಿ ಸ್ವಾಮಿಯ |
ವಡಲ್ಹೊಕ್ಕು ಸಾಧಿಸಿ ಜ್ಞಾನ ಮನವೇ ೩

೨೯೧
ಮಾತನಾಡಲೆ ಜಾಣೆ ಮೋಹನಿಭಿ ಮದಯಾನೆ|
ರೀತಿ ನಿನಗುಚಿತವೇನೇ|ಯಾತಕಿದು ಮನ ಮುನಿಸು|
ಎನ್ನೊಳು ಸುಖಬೆರೆಸು ಪ್ರೀತಿ ರತಿಸೊಬಗು ದೊರೆನಾರೀ ಪ
ತಿಂಗಳಾನನೆ ನಿನ್ನ ತೋಳಿಂಬವಿಲ್ಲದಿರೆ|
ಕಂಗಳಿವೆ ಗೊಡವಲ್ಲೆ ನಲ್ಲೆ|
ಅಂಗ ದವಯವವು ತಮ್ಮ ಅರ್ಥಿಯನೆ ಜರಿದವಾ|
ಲಿಂಗನವ ಬಯಸಿ ನೋಡೆ ನೀಡೇ೧
ಮುಂದಕಡಿಯಿಡಲಾರೆ ಮನಸೋತವಗೆ ದಯ|
ದಿಂದಕರ ಪಲ್ಲವಾರೆ ದೋರೆ|
ಬಂದ ನಿನ್ನಯ ವಿರಹ ಬಹಳ ತಾಪಕ ಸರಸಾ|
ನಂದ ಮಳೆಯಗರಿಯೇ ವೆರಿಯೇ ೨
ಏಣಾಕ್ಷಿ ಕೇಳಿನ್ನಯ ದೇವನೀಗ ಯಾಚಕನು|
ತಾನಾಗಿಬಂದೆನಲ್ಲೆ ನಿಲ್ಲೆ|
ತಾ ನೊಲಿದು ಅಧರಾಮೃತ ಫಲವೇ ಸೂರೆಯನು|
ಮೌನದಲಿ ಕೊಡಲಿಬಾರೇ ನೀರೇ ೩
ಕಾಂತೆ ನಿನ್ನ ವಿಯೋಗ ಕೇಳು ಜನವನ ವಾಗೆ|
ಎಂತಶನ ಶುಚಿ ಹೇಳೆ ಕೇಳೆ|
ಕಂತುವಿನ ಶರಗಳರಕಂ ಮಡುವಂ ಪೊಕ್ಕೆಗುಣ|
ವಂತೆ ಫಣೀ ವೇಣಿ ಪಿಡಿಯೇ ಜಡಿಯೆ೪
ಮಂದಗಮನೆ ಬುದ್ದಿಮೋಹಿಸುವದೇನು|ನಿಜ|
ಛಂದ ವಾಜಿಯಲಿ ಕೂಡೆ ನೋಡೇ|
ಎಂದ ವಚನನಲಿದು ಎರಗಿ ಗಿರಿ ಮಹಿಪತಿ|ನಂದ ನೊಡೆಯನ ನೆರದಳೇ ತರಳೇ ೫

೬೬೨
ಮಾತಿನ ಸುಖವೇನೋ ಸುಖವೇನೋ |
ರೀತಿಯನರಿಯದೆ ತಾನು ಪ
ಸಂತರ ವೇಷವ ಹಿಡಿವೀ | ಮನದಲಿ |
ಶಾಂತಿಯ ಮನಗುಣ ಬಿಡುವೀ ೧
ಪಡಿಯದೆ ಆತ್ಮ ವಿಚಾರಾ | ದೋರುವಿ |
ನುಡಿಯಂಗಡಿಯ ಪಸಾರಾ ೨
ಗರ್ವವ ಮುರಿಯದೆ ಇಂದು | ಹೇಳುವಿ |
ಸರ್ವಂ ವಾಸುದೇವೆಂದು ಮ ೩
ತರಂಗವಿಲ್ಲದ ಶರಧಿಯಂತೆ |
ಇರುವುದು ಪರಮ ಸಮಾಧಿ ೪
ತಂದೆ ಮಹಿಪತಿ ಬೋಧಾ | ಮನನಕೆ |
ತಂದವನೇ ಸುಖಿಯಾದಾ ೫

೨೯೨
ಮಾಧವಾ ನಿಮ್ಮ ನಾಮ ಸಾಲದೇ ಪ
ಪರಗತಿ ಸುಖವನು ಸ್ಮರಿಸಲು ನಿನ್ನನಾ||
ಪರಿಪರಿ ತಪದಿಂದಾ ಚರಿಸುವ ದ್ಯಾತಕೆ ನಾ ೧
ಕರಿಕಿರಿಯನ್ನಲು ಶರೆಯನು ಬಿಡಿಸಿದ|
ಶರಣ ಪ್ರಹ್ಲಾದನ ದುರಿತದಿ ಕಾಯ್ದ೨
ದ್ರೌಪದಿ ಸ್ಮರಿಸಲು ಆಪತ್ತ ಹರಿಸಿದ|
ಆ ಪತಿತ-ಜಮಿಳ ಪಾಪದಿ ತರಿಸಿದ ೩
ನೆನೆಯಲು ಪಿಂಗಳಾ ಕ್ಷಣದಿ ಗತಿಯ ಕೊಟ್ಟಾ|
ಬಿನುಗು ಮಂಡೂಕನ ವಿಮಾನದಿ ಮೆರೆಸಿದಾ೪
ದುರುಳನ ಕೈಯಿಂದ ಹರಣಿಯ ಕಾಯಿದಾ|
ಗುರಿಯಾ ತಪ್ಪಿಸಿ ಸೆರೆ ಹೊರೆದ ಕಪೋತಕ೫
ಹಲವು ಸಾಧನದಿಂದ ಬಳಲುವ-ದ್ಯಾತಕ|
ತಿಳಿದವ ಬೇಡಿದ ಫಲವನೇ ಕೊಡುತಿಹ ೬
ತಂದೆ ಮಹಿಪತಿ ನಂದನ ಸಾರಥಿ|
ಎಂದೆಂದು ನನಗಿದೆ ಛಂರದಿ ಕುಡು ಕಂಡ್ಯಾ ೭

೨೯೩
ಮಾಧವಾ ರಕ್ಷಿಸೆನ್ನಾ ಮೋಹನಾ|ನಿನ್ನಾ|
ಪಾದವೆ ಗತಿಯೆಂದು ಶರಣು ಬಂದೆ ನಾ
ನಂದನಂದನಾ ಪ
ತನ್ನ ತಾನುದ್ಧರಿಸಿ ಕೊಳ್ಳಲರಿಯದೆ | ಸಲೆ |
ಮುನ್ನಿನಾ ದುರ್ಗುಣವನು ಜರಿಯದೆ ರಂಗಾ |
ನಿನ್ನ ನಿಜ ಭಕ್ತಿಯೊಳು ಬೆರಿಯದೇ ವ್ಯರ್ಥ |
ಮಾನ್ನ ನಾದೆನು ನಾಮಾಮೃತವ ಸುರಿಯದೇ |
ಭವ ತೊರಿಯದೇ ೧
ಮಾಯಾ ಮೋಹ ಪಾಶಕ ಅನುಗೊಡುತಾ | ವಿ |
ಷಯ ದಾಶೆಗೆ ಬಿದ್ದು ಬಾಯಿ ಬಿಡುತಾ | ಎನ್ನ |
ಕಾಯದ ಸುಖಸಾಧನ ನೋಡು | ವ್ಯರ್ಥ |
ಅಯುಷ್ಯ ಕಳೆದೇ ಐವರೊಳಾಡುತಾ |
ದು:ಖ ಪಡುತಾ ೨
ಸುಖವಾದರೆ ಮನದೊಳುಬ್ಬುಗೊಂಬೆನಾ | ಬಲು |
ದು:ಖವಾದರೆ ಹರಿ ಮಾಡಿದ ಎಂಬೆನಾ | ನೆರೆ |
ಲೆಖ್ಖವಿಲ್ಲದ ಲ್ಯಾಡು ಮಾತಿನನ ಡೊಂಬನಾ | ಇಂದು |
ಫಕ್ಕನೇ ಗುರು ಮಹಿಪತಿ ಪ್ರಭು ನಂಬಿ ನಾ |
ಬಲಗೊಂಬೆನಾ ೩

೬೬೩
ಮಾನವನಾದ ಮ್ಯಾಲ ತಾನಾರೆಂದರಿಯಬೇಕು ಪ
ಅನುಭವಿಗಳ ಕಂಡೆರಗಲಿಬೇಕು |
ತನುಮನದಲಿ ನಿಷ್ಠೆಯು ಬಂದಿರಬೇಕು |
ತನು ಧನ ಮದದಲಿ ಹೊರತಾಗಿರಬೇಕು |
ಉಣಲುಡುವಲಿ ಹರಿಯಚ್ಚರಬೇಕು ೧
ಎಲ್ಲಿಂದ ಧರೆಯೊಳು ಜನ್ಮಕ ಬಂದೇ |
ಇಲ್ಲ್ಲಿಂದ ಪಯಣವು ಎಲ್ಲಿಗೆ ಮುಂದೇ |
ಎಲ್ಲ ವಿಚಾರಿಸು ಗುರು ಮುಖದಿಂದಾ |
ಫುಲ್ಲನಾಭನೆ ಸೇರಿ ಬದುಕಬೇಕೆಂದ ೨
ತನ್ನ ತಾ ಮರೆದು ನೀ ತಿರುಗಲಿ ಬೇಡಾ |
ಅನ್ಯರ ನಿಂದ್ಯಪಸ್ತುತಿ ಮಾಡಬೇಡಾ |
ಚನ್ನಾಗಿ ಶಾಂತಿಯ ನೆಲೆಬಲಿ ಬೇಡಾ |
ಕಣ್ಣಿದ್ದು ಕುರುಡ ನೀನಾಗಲಿ ಬೇಡಾ ೩
ಏನು ತೋರುವದೆಲ್ಲಾ ಹರಿಯಾಜ್ಞೆದೆಂದು |
ನಾನೇನು ಕರ್ತನಲ್ಲಿದಕೆಂದು |
ಅನುಭವದಲಿ ಸಮದೃಷ್ಠಿಗೆ ಬಂದು |
ಘನ ಗುರು ಪಾದಕ ಭಾವದಿ ಹೊಂದು ೪
ಹೊತ್ತು ಹೋಗದ ಮಾತ ನಾಡಲೀ ಬೇಡಾ |
ಮುತ್ತಿನಂಥಾ ಜನ್ಮ ದೊರಿಯದುಗಡಾ |
ಸತ್ಯಜ್ಞಾನಾಮೃತ ನುಂಡವ ಪ್ರೌಢಾ |
ಕರ್ತ ಮಹಿಪತಿ ಸುತ ಸುರಿದ ನೋಡಾ ೫

೬೬೪
ಮಾನವನೇನಣ್ಣಾ | ಅವನೀಗ |
ತಾನುದ್ಧರಿಸಲುದೆರಿಯನು ಕಣ್ಣಾ ಪ
ಭಕುತಿಗೆ ಕಾಯವ ಕದ್ದಾ | ವಿ |
ರಕುತಿಗೆ ಮನವನುತಿದ್ದಾ |
ಸಕುತಲಿ ವಿಷಯ ಮೆದ್ದಾ |
ಮುಕುತಿ ಪಥದಿಂ ಜಾರಿ ಬಿದ್ದಾ ೧
ಸಿಂತರ ಗುಣಗಳ ಕಡಿಯಾ | ಈ |
ಭ್ರಾಂತರ ಸಂಗದಿ ಸಿಡಿಯಾ |
ಸಂತರ ಕೇಳದೇ ನುಡಿಯಾ |
ಅಂತರಂಗದ ಸುಖವನು ಪಡಿಯಾ ೨
ಇಂದಿರೆ ಅರಸನ ಪಾದಾ | ಅರ |
ವಿಂದನ ಭಜನೆಯ ಸ್ವಾದಾ |
ಮಂದನು ತಿಳಿಯದೆ ಮರೆದಾ |
ತಂದೆ ಮಹೀಪತಿ ನಂದನ ಸಾರಿದಾ ೩

೨೯೪
ಮಾಮನೋಹರಾ ಮುರಾರಿ ಬಾರೋ ಪ
ಕರಿವರದಾಯಕ ಮರಚಮುಸ್ಥಾಪನ |
ಶರಣಾಗತ ಸಹಕಾರಿ ಬಾರೋ |
ಸರಸಿಜಾಸನ ವಂದಿತಾಂಘ್ರಿ | ದುರಿ |
ತಾಚಲ ವಜ್ರಧಾರಿ ಬಾರೋ ೧
ಮನೋಜನಿತ ಜನಕರವಿಂದ ಲೋಚನ |
ಮುನಿಜನ ಹೃದಯ ವಿಹಾರಿ ಬಾರೊ|
ಘನಮಹಿಮ ಸುದಾಮ ರಕ್ಷಕಕ |
ದನುಜಾವಳಿ ಮದಹಾರಿ ಬಾರೋ ೨
ಇಂದು ಕುಲಮಣಿ ಕಾಲ ಪಯೋಧರ |
ಮಂದರೋದ್ಧಾರಿ ಬಾರೋ |
ನಂದನಾತ್ಮಜ ದೇವ ಮಹಿಪತಿ |
ನಂದನ ಪ್ರಭು ಉದಾರಿ ಬಾರೋ೩

೨೯೫
ಮುಕುತಿಗೆ ಹೊಣಿಯಿದಕೋ ಭಕುತಿ ಪ
ಹರಿಭಕುತಿಯ ಗುರು ಮೂರ್ತಿಲಿ ತಂದು |
ಬೆರೆವದು ತನುಮನವಚನದಲೀ ೧
ಆಚಾರ್ಯಮಾಂವಿಧಿ ಎಂದುದ್ದವಗೇ |
ಸೂಚಿಸಿ ಹೇಳಿದ ಯದುವರನೀಗ೨
ಸರ್ವಂ ವಾಸುದೇವೆನುತಿರಲಿಕ್ಕೆ |
ಗುರ್ವಿನೊಳಗ ಅನುಮಾನವು ಬೇಕ೩
ಬಲ್ಲವ ಬಲ್ಲವನೀ ಮಾತಿನ ಖೂನಾ |
ಎಲ್ಲರಿಗಿದು ಅಗಮ್ಯದ ಸ್ಥಾನಾ೪
ತಂದೆ ಮಹೀಪತಿ ಪ್ರಭು ದಯದಿಂದಾ |
ಕಂದಗೆಚ್ಚರಿಸಿದ ಸುಖಸ್ವಾನಂದ೫

೨೯೬
ಮುದ್ದು ತಾರೋ ರಂಗಾ ಮುದ್ದು ತಾರೋ ಕೃಷ್ಣಾ
ಸಿದ್ಧ ವೇದಾ ಗಮಾ ಭೇದ್ಯ ಮೋಹನ್ನಾ ಪ
ಕಾಣಲಿಕ್ಕೆ ಹಸಿವೆ ತೃಷೆಗಳೇ ಮರೆವದು
ಏಣಾಂಕ ಬಿಂಬ ಮೊದಾ ಬಾಯಿಂದಾ ೧
ಕರ್ಪುರವಾ ಕರಡಿಗಿಯಂತೆ ಹೊಳೆವುತಾ
ವಪ್ಪುತಿಹ ಚಲ್ವ ಪುಟ್ಟ ಬಾಯಿಂದಾ೨
ಅಮ್ಮ ತಾರಮ್ಮ ನಾನುಂಡೆನೆಂದು ಕೈಯ ಬೀಸಿ
ಝಮ್ಮನೇ ತೊಡಲು ನುಡಿ ಬಾಯಿಂದಾ ೩
ತಪ್ಪ ಹೆಜ್ಜೆಯನಿಟ್ಟು ಘಲಘಲನೆ ನಡೆವುತ
ಧಪ್ಪನೆ ಬೀಳುತ್ತಾ ಬಿರಿವ ಬಾಯಿಂದಾ೪
ಹಣೆಯ ಅರಳೆಲೆ ಮಾಗಾಯಿಗಳಲ್ಲಾ ಆಡಿಸುತಾ
ಕುಣಿದು ಬೆಣ್ಣೆಯ ಬೇಡುವ ಬಾಯಿಂದಾ೫
ಕೋರಳಿಗೆ ಅಂಟಹಾಕಿ ಕೈಗಳಿಂದಾ ಬಿಗಿದಪ್ಪಿ
ಗುರು ಮಹಿಪತಿ ನಂದನ ಜೀವನ್ನಾ ೬

೨೯೭
ಮುನಿದಳ್ಯಾತಕ ನೀರೇ ಪಾರ್ವತಿ ಮಾಡಸವರತಿ ಪ
ಹಿಡಿಯಲು ವಿಷವನು ಕೊರಳಲಿ | ತಾಪ ಮಿಡಿಯಲಿ
ದೇಹ ಕೆಡುವ ದಿದೆಂದು |
ಜಡಿಯಲ್ಲಿ ಗಂಗೆಯ ಭರಿಸಿದ | ನಾರು ಧರಿಸಿದ
ಈ ದುಗುಡ ತಪ್ಪೇನಿಂದು ೧
ಇಂದು ವದನೆಯನ್ನಾ ಪದಕನು | ಅದಾಶೇಷನು
ಅವನ ಮುಂದಲೆಯೊಳು |
ಛಂದ ಮಾಣಿಕ ತಾನು ನೋಡಲಿ | ರೂಹು ಕಾಣಲೀ
ತಾನೊಂದು ಬಗೆದಳು |೨
ಎನಗೆ ನಿನಗೆ ಎರಡ್ಯಾಕೆಂದು | ಆಲಿಂಗನಲಿಂದು |
ಅರ್ಧ ತನುವನೆ ನೀಡಿ |
ಆನಂದವನೆ ಕೊಟ್ಟು ಮಹಿಪತಿ | ಸುತ ಸಾರಥಿ
ಘನ ಕರುಣವ ಮಾಡೀ | ೩

೬೬೮
ಮೂರ್ಖರ ವಡಂಬಡಿಸಲಾಗವದೆಂದೆಂದು ಪ
ಮಳಲ ತಂದಿಕ್ಕಿ ಗಾಣದೊಳಗ ಸಾಯಸದಿಂದ |
ಬಲಿದು ಎಣ್ಣೆಯ ತೆಗೆಯಲಿಬಹುದು ೧
ಗಿರಿಗಳಂದದಿ ಬಹಥೆರೆಗಳ ಕಡಿಯುತ |
ಶರಧಿಯದಾಟಿ ಹೋಗಲು ಬಹುದು ೨
ಇಳೆಯೊಳು ತಿರುಗುತ ದೇಶ ದೇಶಗಳನು |
ಮೊಲದಾ ಕೋಡವ ದೊರಕಿಸಬಹುದು ೩
ತೋರುವ ಮೃಗಜಲ ಹಿಡಿದು ಪ್ರಾಶನ ಮಾಡಿ |
ನೀರಡಕಿ ಶಾಂತ ಮಾಡಿಲಿಬಹುದು ೪
ಮೊಸಳಿದಾಡಿಯೊಳಿಹ ಅಮೌಲಿಕ ರತ್ನ ತನ್ನ |
ವಶವನೆ ಮಾಡಿಕೊಳ್ಳಲಿಬಹುದು ೫
ಮೊರೆದು ಭೋರಿಡುತಿಹ ಸರ್ಪ ಹೂವಿನ ಪರಿ |
ಶಿರಸದಿ ಬೇಗ ಧರಿಸಲಿಬಹುದು ೬
ಗುರುಮಹಿಪತಿಸುತ ಪ್ರಭು ಗುರುತಿಲ್ಲವರಾ |
ನೆರಳಿಗೆ ದೂರ ಕೈ ಮುಗಿವನು ೭

೪೯೯
ಮೊದಲಿಗೆ ಜಹದಾರ್ಜಹ ಲಕ್ಷಣ ಸಾಧಿಸಿ |
ವಿದಿತದಿ ಅಜಹರ್ಲಕ್ಷಣ ಬೋಧಿಸಿ |
ಪದುಳವೆ ಜಹದಾರ್ಜ ಲಕ್ಷಣವನು |
ಹೃದಯದಿ ನೆಲೆಗೊಳಿಸಿ |
ಇದರ ದರಿಸಿ ಭವದ್ಹೆದರಿಕಿ ಹಾರಿಸಿ
ಸದಮಲ ಬ್ರಹ್ಮನ ಕಳೆಯನು ತೋರಿಸಿ |
ಮುದದಲಿ ಭಕ್ತರ ಪಾಲಿಪ ಮಹಿಪತಿ |
ಗುರುಮೂರ್ತಿ ಶರಣು

೭೫೯
ಮೊದಲು ನಡು ಕಡಿ ಬರಲು ಲಘುತಾ
ಇದನುಯರತಾ ಗಣಗಳಂದದಿ
ವದಗಿ ಗುರುವಿರಮಧ್ಯವಸಾನದಲಿ ಭಜಸಾ
ಸದರ ಗಣ ತಿಳಿಮೂರು ಗುರುಲಘು
ವದಗಿರಲು ಮನಗಣಗಳಾದವು
ಮುದದಿ ಗಣ ವೆಂಟೆಂದು ಮಹಿಪತಿ ಕಂದಸಾರಿದನು ೧

೨೯೮
ಮೊರೆಯ ಹೊಕ್ಕೆನು ನಿನ್ನಾ | ಚರಣ ಕಮಲಕ
ಸಿರಿಪತಿ ಭವರೋಗ ವೈದ್ಯ ನೆಂಬದು ಕೇಳಿ ಪ
ಅನ್ಯವಾರ್ತೆಯ ಕೇಳಿ ಕಿವಿಬಧಿರಾಗದೆ
ನಿನ್ನ ಕಥಾಶ್ರವಣದ ರಸದೀ
ಇನ್ನು ಕೇಳುವ ಪರಿಮಾಡೋ ಅವಿದ್ಯದಾ
ಕಣ್ಣಿನ ಪರಿಗೆ ಜ್ಞಾನಾಂಜನವಿಡೋದೇವಾ ೧
ವಿಷಯನಂಜಲಿ ತಾಪವೆಡಗೋಂಡದೇಹಕೆ
ಅಸಮಸತ್ಸಂಗ ಕಷಾಯಕೊಟ್ಟು
ಹುಸಿ ನುಡಿ ಪರನಿಂದೆಯಾಡಿದ ರೋಗದಿ
ಹಸಗೆಟ್ಟ ನಾಲಿಗೆ ನಾಮಾಮೃತವ ನೀಡೋ ೨
ನಾಸಿಕ ಕೊರಡಾಯಿತಿಭೋಗ ದ್ರವ್ಯದಿ
ವಾಸನೆ ಕೊಡು ತುಳಸಿಯಾರ್ಪಿತವಾ
ಧ್ಯಾಸತೈಲದಿ ಮನಸಿನ ಕರ್ಮವಾತವಾ
ದೋಷಬಿಡಿಸಿ ಕಾಯೋ ಗುರು ಮಹಿಪತಿ ಸ್ವಾಮಿ ೩