Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೭೧೦
ಹಳೆಯದಾಯಿತು ಕಾಯಾ ಇನ್ನಾರೇ |
ತಿಳಿ ಸ್ವಹಿತೋಪಾಯಾ ಪ
ಬಾಲಕನಾಗಿ ಕೆಲವು ದಿನ ಕಳೆದೀ |
ಮೌಲ್ಯ ಯೌವ್ವನದಲಿ ಉನ್ಮತ್ತನಾದಿ ೧
ಸಡಿಲುತ ಬಂದವು ಅಂಗಮಾಟಗಳು |
ವಡಮೂಡದು ವಿವೇಕ ಬುದ್ಧಿಗಳು ೨
ಮಂಡೂಕ ಸರ್ಪ ನೋಡದೆ ಭರದಿ |
ಅಂಡಲುವದು ನೊಣಕದೇ ಪರಿಯಾದಿ ೩
ಏನಾದರಾಗಲಿ ಹಿಂದಿನ ಕರಣೆ |
ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ ೪
ಗುರುವರ ಮಹಿಪತಿ ನಂದನ ಪ್ರಿಯನಾ |
ಅರಿತರೆ ಬಂದದೆ ಸಾರ್ಥಕ ಖೂನಾ ೫

೭೧೧
ಹಾದಿಯ ಕೊಡುಹರಿ ಪರಗತಿಯಾ
ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ
ಕ್ಷಿತಿಯೊಳು ಭರತ-ಖಂಡದ ದೇಶದ
ಪತಿತರ ತಾಂಡೆಯದ ನಾಯಕನು
ಮತಿ ಹೀನ ಕಾಮಕ್ರೋಧರಾಗಿಹ ಪುಂಡರು
ಪಥ ನಡೆಗುಡಿಸರು ಅತಿಬಲರು ೧
ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ
ಹಾದಿ ಮುಗ್ಗಿತಿ ಕಡೆ ಬಹುದಿನದೀ |
ಸಾದರಲೆನಗನಿ ಅಭಯವ ಕೊಟ್ಟರ |
ಭೇದಿಸಿ ಜನರನು ನೆರಹುವೆನು ೨
ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು
ಮಾನು ಭಾವರ ಪ್ಯಾಟಿ ಹೋಗಿಸುವುದು
ಘನಗುರು ಮಹಿಪತಿ ನಂದನ ಸಾರಥೀ
ದೀನ ವತ್ಸಲನೆಂಬ ಬಿರುದಹುದು ೩

೩೭೦
ಹಾರುವರಿಗೆ ಭೂಮಿಯಾ ನೀಡಿದೆನೆಂದು |
ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ
ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ
ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ ೧
ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ
ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ ೨
ಶರಣ ವಸರಕ ಎಡತಾಕಲಾರೆನೆಂದು
ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ ೩

೭೧೩
ಹಿಡಿ ಮನವೇ ಸಂತರ ಸಂಗ ಪ
ಹಿಡಿಮನವೇ ಸಂತರ ಸಂಗಾ |
ವಡನಾಹುದು ಭವ ಭಯ ಭಂಗಾ |
ಅಡಿಗಳಗೆರಗುತ ಸಾಷ್ಟಾಂಗಾ |
ಪಡಕೋ ಚಿತ್ಸುಖದಂಗಾ ೧
ಸಿಕ್ಕಿದು ಭಾಗವತರಣ | ಶರಣಾ |
ಸಿಕ್ಕಲು ದಕ್ಕಿಸಿಕೋ ಕರುಣಾ |
ಉಕ್ಕಲು ಜ್ಞಾನದಾ ನಿಜ ಸ್ಪರಣಾ | ೨
ಗುಕ್ಕದವನೇ ತಾ ಹರಿಶರಣಾ |
ಶರಣೆಂಬುದು ಸು¯ಭವಲ್ಲಾ |
ಹರಿಮಯ ಕಾಂಬನು ಜಗವೆಲ್ಲಾ |
ನೆರೆ ಹಮ್ಮ ಮಾತುಗಳುಳದಿಲ್ಳಾ |
ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ ೩
ಎಲ್ಲರ ಮನದಂತಾನಾಗಿ |
ನಿಲ್ಲುವ ಜನದೊಳು ನಿಜಯೋಗಿ |
ಫುಲ್ಲನಾಭನ ಭಕುತಿಲಿ ಮುಣುಗಿ |
ಬಲ್ಲವಿಕೆಯ ದೋರನು ಬಾಗೇ ೪
ಏನೋ ಜ್ಞಾನಿಗಳಾನಂದಾ |
ತಾನೇ ಬಲ್ಲನು ಶ್ರೀ ಗೋವಿಂದಾ |
ಖೂನಕ ಸಾರಿದ ನುಡಿವಂದಾ |
ಸ್ವಾನುಭವದೀ ಮಹಿಪತಿ ಕಂದಾ ೫

೭೧೪
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ |
ಹಿಡಿ ಸಾಧು ಸಂತರ ಸಂಗಾ |
ಪೊಡವಿಲಿ ಭವಭಯ ಬಿಡಿಸಿ ಮುಕುಂದನ |
ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ
ಐದು ವರುಷ ಮಗನೈದಿದ ತಪದಲಿ |
ಸಾಧು ಸಂಗನೇ ಹೊರೆಯಿತು |
ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ |
ಲ್ಹಾದನ ಯಚ್ಚರಿಸಿತು |
ಹಾದಿಯೊಳಗ ರಾಹುಗಳ ರಾಯಾಗಾಗಲು |
ಸಾಧು ಸಂಗುದ್ಧರಿಸಿತು |
ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ |
ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ ೧
ವನಜಭವನ ಲೋಕದಲಿ ಸಾಧು ಸಂಗವು |
ಸನಕಾದಿಕರ ಹೊರೆಯಿತು |
ವನದಲಿ ಯದುರಾಯಗಾಗಲು ಸತ್ಸಂಗ |
ಅನುಭವ ಸುಖ ದೊರೆಯಿತು |
ವಿನಯದಿ ಸತ್ಸಂಗ ದೇಹೂತಿ ಮೊದಲಾದ |
ಮುನಿಜನರುದ್ಧರಿಸಿತು |
ರಣದಲ್ಲಿ ಅರ್ಜುನಗಾಗಲು ಸತ್ಸಂಗ |
ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ ೨
ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ |
ನಂದನ ಸುಖ ಬಿಡಿಸಿತು |
ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ |
ಇಂದೆನ್ನ ಧನ್ಯಗೈಸಿತು |
ತಂದೆ ಮಹಿಪತಿ ಪಾದ ಪದುಮಸಂಗ |
ನಂದನುದ್ಧರಿಸಿತು |
ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ |
ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ ೩

೫೦೯
ಹಿಡಿ ಹಿಡಿ ಭಾವದಲೀ ಗುರು ಪಾದಾ ಪ
ಘೋರ ಸಂಸಾರದ ಬಲಿಯನೇ ದಾಟುವ |
ಬೀರುವ ಸ್ವಾನಂದ ಬೋಧಾ ೧
ಮನಸಿನ ಕಲ್ಪನೆ ಹಾರಿಸಿ ತೋರುವ |
ಚಿನಮಯ ನಿಜ ಸುಖ ಪಾದಾ ೨
ಗುರುವರ ಮಹಿಪತಿ ಪ್ರಭು ದಯದಿಂದಲಿ |
ದೊರೆಯುವ ಪರಮ ಪ್ರಸಾದಾ ೩

೩೭೨
ಹಿಡಿ ಹಿಡಿರಿಂದು ಸಿಕ್ಕಿದ ಕಳ್ಳನಾ
ಬಿಡಬ್ಯಾಡಿರೆಂದಿಗೆ ಹಜ್ಜೆನೆಲಿಗೆ ತಾರನಾ | ಮೈಯ್ಯ ದೋರನಾ ಪ
ಹೃದಯದೋಳಗಿನಾ ಗಂಟವ ಬಿಡುತಾ
ಮುದದಿಕುಳ್ಳಿರಲಲ್ಲಿ ಬಂದು ನೋಡುತಾ
ಇದರ ಚಿತ್ತ ಪೇಠಾರಿಗೆ ಕೈಯ್ಯಾನೀಡುತಾ
ಒದಗಿಕದ್ದೊಯ್ದತಿರಗದೆ ಧನಿ ಮಾಡುತಾಧನಿ ಮಾಡುತಾ ೧
ಖೂನ ತನ್ನಯ ಬಲ್ಲಾಸಾಧುಜನವಾ
ಕಾಣುತಾರ್ಜಿತ ಶೆಳೆದು ಕೊಂಡು ಧನವಾ
ಏನ ಹೇಳಲಿ ಬಿಡನು ಅವರ ಪ್ರಾಣವಾ
ತಾನು ಸೂರೆಯ ಕೊಡಲಿ ಹೊಕ್ಕನು
ವನವಾಕೊಂಡು ಗೋಧನವಾ ೨
ಅಡದಾರಿಯಾ ನಡದು ಹೋಗಿ ಬಿದ್ದನಾ
ನಡುವೆ ತೊಳಲಿಸುವನು ವಿರುದ್ಧನಾ
ಹಿಡಿ ಗುರು ಮಹಿಪತಿ ಪ್ರಭು ಪ್ರಸಿದ್ಧನಾ
ಬಿಡದೆ ಭಂಡಾರಕಾಯಲಿಡುವ ಪ್ರಬುದ್ಧನಾ ವಾಜಿಲಿದ್ದನಾ ೩

೩೭೧
ಹಿತ ನೋಡಿ ಸಂತರ ಕೂಡೀ ಪ
ಹಿತ ನೋಡಿ ಸಂತರ ಕೂಡೀ |
ಮತಿ ನಿಜ ಮಾಡಿ |
ಶ್ರೀ ಪತಿಯ ಕೊಂಡಾಡಿ ೧
ಶರಣರ ಸಂಗಾ ದುರಿತ ವಿಭಂಗಾ |
ನೆರೆ ಕರುಣಾಂಗದಿ |
ಹೊರೆವನು ರಂಗಾ ೨
ಅಂಜನಿಡಲು ಧನ ಪ್ರಾಂಜಲಾಗುವ ಪರಿ |
ರಂಜಿಸುತಿಹ ತೇಜಃ |
ಪುಂಜನ ನೋಡಿ ೩
ಕಂಡಪದಕ ಹರಿದಂಡಲಿಯದೆ ನೆಲೆ |
ಗೊಂಡ ವಿವೇಕದ |
ಪಂಡಿತರಾಗಿ ೪
ತಂದೆ ಮಹಿಪತಿನಂದನು ಸಾರಿದಾ |
ಬಂದ ಜನುಮಕಿದು |
ಛಂದದು ನೋಡಿ ೫

೭೧೨
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ
ಗುರುವಿಗೆ ಬಾಗಿ ಶರಣವ ಹೋಗಿ |
ತರಳತೆ ನೀಗಿ ಅರಹುತರಾಗಿ ೧
ಭ್ರಾಂತರಕೂಡಿ ಮತಿಗಳ ಬ್ಯಾಡೀ |
ಸಂತರೊಳಾಡಿ ಅನಂತನ ಪಾಡಿ ೨
ಸಂಧಿಸಿ ತಂದ ಸುಕೃತಗಳಿಂದ |
ಹೊಂದುವವೆಂದೇ ನರದೇಹ ಮುಂದೆ ೩
ವಿವೇಕದಿಂದಾ ವಿಡಿರಿದೆ ಛಂದಾ |
ಅವನಿಲಿ ಬಂದಾ ಜನುಮಕ ಛಂದಾ ೪
ಗುರುಮಹಿಪತಿಯಾ ಚರಣದ್ವಿತಿಯಾ |
ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ ೫

೩೭೩
ಹಿರಿಯ ಒಡೆಯಕಂಡೆನಮ್ಮಾ ಧರಿಯ ಮ್ಯಾಲೊಂದುನಾ
ಸಿರಿಯಾ ವರ್ಯನಾದನೀತ ಸಿರಿಯ ಕಾಣೆನಾ ಪ
ಶರಣ ಹೃದಯ ಮಾಡದಲ್ಲಿ ಅರಹು ಘಂಟಮಾಲೆ ನವ
ಪರಿಯ ಶುಕ್ಯಶಾವಿಗಿಯ ಹರುಷ ಸಕ್ಕರೆ
ಪರಮ ಜ್ಞಾನವೆಂಬ ತ್ವರಿತ ದೀವಿಗೆಯ ಕೊಂಡು
ಮೆರೆವ ಕೀರ್ತ ಪ್ರೇಮ ಜಘ್ಲ್ಯಡೊಳ್ಳು ಹೊಯಿಸುವಾ ೧
ಕಡ್ಡಿ ವಿಡಿದು ಗುಡ್ಡ ಮಾಡಿ ಗುಡ್ಡವನ್ನೇ ಕಡ್ಡಿಮಾಡಿ
ಒಡ್ಡಿ ಮಾಯಾಜಾಲದಿಂದ ನೆಲೆಯ ತೋರದೇ
ದೊಡ್ಡ ದೊಡ್ಡವರನೆಲ್ಲ ವೆಡ್ಡೆಮಾಡಿ ಬಿಟ್ಟತನ್ನ
ಅಡ್ಡ ಸುಳಿದವರ ಕೈಯ್ಯ ದುಡ್ಡನಾರ ಕೊಂಬುರೇ ೨
ಚಿನ್ನ ಕೊಂಡವರ ಮೂಲವನ್ನು ಕಿತ್ತಿ ತೋರಿಸುವ
ತನ್ನ ನಂಬಿದ್ದವರ ಸ್ಥಾಪನೇ ಮಾಡುವ
ಯನ್ನ ಮನೆ ದೈವವಾಗಿ ಧನ್ಯಗೈಸಿದನು ಕೂಡಿ
ಉನ್ನತ ಮಹಿಪತಿ ನಂದ ನೊಡಿಯನು ೩

೭೧೭
ಹೀಂಗರಿದವ ಜ್ಞಾನಿ ಪ
ಅವ್ಯಕ್ತದಲುದಿಸುದು ಪ್ರತಿಮೆಗಳು |
ವ್ಯಕ್ತದಲಡಗುವದೀ ಸಕಲು |
ಈ ವ್ಯವಹಾರದ ಭ್ರಮೆ ಮಾತುಗಳು ೧
ಥೆರೆ ನೆರೆ ಬೊಬ್ಬುಳಿ ತಾ ದಿಟವಲ್ಲಾ |
ತೋರಿಕರಿಗಿದರೇನು ಯಲ್ಲಾ |
ನೀರಿಗೆ ಜನ್ಮ ಮರಣವಿಲ್ಲಾ ೨
ಕಿರಣದಿ ದೋರಿತು ನದಿಗಡ ಪೂರಾ |
ಹೊರತಾಗಿರದು ಕಿರಣಕ ದೂರಾ |
ಕಿರಣೇ ಆಯಿತು ತಾ ಮೃಗನೀರಾ ೩
ಕದಳಿಯ ಗಿಡರೂಪದ ಪದರೆಲ್ಲಾ |
ಬಿದರಿಸಿ ನೋಡಲು ಏನುಳಿಲಿಲ್ಲಾ |
ಇದು ಪರಿ ಪ್ರಪಂಚದ ಸೊಲ್ಲಾ ೪
ಗುರುವರ ಮಹಿಪತಿಸ್ವಾಮಿಯ ಕಂಡು |
ಅರ್ಹವಿಕೆ ಮಾತ್ರವನೇ ಪಡಕೊಂಡು |
ಚರಿಸುವಾ ಅನುಭವ ನೆಲೆಗೊಂಡು ೫

೫೫೦
ಹೀಂಗಲ್ಲಾ ಮನುಜಾ | ಸುಮ್ಮನೆ |
ದೊರಕುವುದೇ ಪರಮಾರ್ಥ ಪ
ಜರಿದು ಆಶ್ರಮ ಧರ್ಮಾ ವೇಷ ವಿರಕ್ತಿಯಿಂದಾ |
ಚರಿಸುತ ಬಳಲುವರೇ ವ್ಯರ್ಥ ೧
ಕ್ರಮದ ಹಾದಿಯ ಬಿಟ್ಟು ಅಡವಿ ಬೀಳಲು ಎಲ್ಲ |
ಕಮರಿಯಲ್ಲದೇ ಗ್ರಾಮವಾರ್ತಾ ೨
ಕಣ್ಣಿನೊಳಂಜನಿಲ್ಲದೇ ಹಲವು ಸಾಧನದಿಂದಾ |
ದಣ್ಣನೇ ದಣಿವರೇ ದ್ರವ್ಯಕುರ್ತಾ ೩
ಕರಗದೆ ವಾಸನೆ ತಪಹೀನ ಅಂತರ್ಗತ |
ಜ್ವರವಿರಲಾರೋಗ್ಯದ ಸ್ನಾನಾರ್ಥ ೪
ತಂದೆ ಮಹಿಪತಿ ಸುತ ಪ್ರಭು ಒಲುಮೆಯಾ |
ಛಂದದಿ ಪದ ಕೊಂಡವನೇ ಧೂರ್ತಾ ೫

೭೧೫
ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು ಪ
ಮೃಗದ ನಾಭಿಯೊಳಗ ಕಸ್ತೂರಿಡದಕಿಂದ |
ಉಗಮ ಪಶುನರಜಿವ್ಹದಲಹುದು ೧
ಎರಡು ಕಾರಣದಿಂದ ಸಮ್ಮತವೆಲ್ಲರಿಗೆ |
ಬರಿದೆ ಮೃಗ ಘಾತವ ನಿಲುವದು ೨
ಮಹಿಪತಿ ಸುತ ಪ್ರಭು ದಾಸರಾ ಕೀರ್ತಿ ಚಂದ್ರಾ |
ರಾಹು ಕಗ್ಗತ್ತಲೆಯಾ ಕುಂದುವದು ೩

೭೧೬
ಹೀಗಿದ್ದವನೇ ತಿಳಿದವನು | ನಿಜ |
ಯೋಗದ ಮಾರ್ಗಕ ಬೇಗ ಹೊಂದುವನು ಪ
ನೆಂಟರಿಷ್ಟರೊಳು ದಾಕ್ಷಿಣ್ಯಾ | ತನ್ನ |
ಬಂಟ ಜನರ ಮ್ಯಾಲ ಘನ ಕಾರುಣ್ಯಾ |
ಶುಂಠ ಶಠರೊಳು ಕಾಠಿಣ್ಯಾ | ತನ |
ಗುಂಟಾದ ಸಾಧುಗಳೊಳು ಪ್ರೀತಿ ಬಣ್ಣಾ ೧
ಅರಸುಗಳಲಿ ನಮ್ರ ಸ್ಥಿತಿ | ಸರ್ವ |
ವರಿತ ವಿದ್ವತ್ತರೋಳರ್ಜಿವ ವೃತ್ತಿ |
ಅರಿಗಳೊಳಗೆ ಶೌರ್ಯ ಖ್ಯಾತಿ | ತನ್ನ |
ಗುರುಗಳೊಳಗ ಭೆಜ್ಜರಂಜಿಕೆ ನೀತಿ ೨
ಹೆಂಗಳೆಯರೊಳು ಧೂರ್ತತನಾ | ತಾನು |
ಹಿಂಗದೆ ಮಾಡುವ ಶ್ರವಣ ಮನನಾ |
ತುಂಗ ಮಹಿಪತಿ ಸುತ ಪ್ರಿಯನಾ | ಮಂಗ |
ಳಂಗುಟ ನೆನೆವನು ಬಿಡದನು ದಿನಾ ೩

೫೧೦
ಹುಚ್ಚಾದೇನಣ್ಣಾ | ಮುಚ್ಚುಗೊಂಡು ನಾನು ಪ
ಕರವಿಟ್ಟ ಸಿರಸದಲ್ಲಿ | ಅರುಹಿದ ಕಿವಿಯಲ್ಲಿ |
ಮರುಳು ಬೀಜಾಕ್ಷರನು೧
ಮನದ ಮತಿಯಾ ಕೆಟ್ಟು | ಜನದ ಲಜ್ಜೆಯಾ ಬಿಟ್ಟು |
ಕುಣಿದು ಕೂಗುವೆ ಹರಿನಾಮವನು ೨
ಹಿಂದಾದಾ ನೆನೆಯದೆ ಮುಂದ ಹಂಬಲಿಸದೇ |
ಬಂದದನುಂಡು ಕುಳ್ಳಿರುವೆನು ೩
ಅರಿವೆಯ ಹೊದ್ದುಕೊಂಡು | ಪರವೆ ಪ್ರಪಂಚ
ಗಂಡು | ಜರಿದು ಬಲ್ಲವಿಕೆ ಹಮ್ಮವನು ೪
ಗುರು ಮಹಿಪತಿ ಬೋಧಾ | ಹರಿಸೀ ಸಂಶಯ ಬಾಧಾ |
ಮರೆಸಿತು ಅನ್ಯ ದಾರಿಯನು ೫

೭೧೮
ಹುಟ್ಟಿದ್ದು ಫಲವೇನು ಮನುಜನು |
ಮುಟ್ಟದೆ ಗುರುಪದವನು ಪ
ಬೀರಿ ವಾಗ್ಜಾಲ ಆರಿಗೆ ಸೋಲಾ |
ಮೆರೆದನು ಬಹಳ ಮರೆದ ಸ್ಮರಣ ಕೀಲಾ ೧
ಪರರುಪಕಾರಾ ಬಾರದಾ ಶರೀರಾ |
ಸಿರಿಗಂಧ ಸಾರಾ ಧರಿಸಿದರೇನು ಪೂರಾ ೨
ಹವಣಿಸಿಗಾಢಾ ಶ್ರವಣವ ಮಾಡಾ |
ಕಿವಿಗೆಟ್ಟ ಮೂಢಾ ರವದ ಕುಂಡಲ ನೋಡಾ ೩
ತನ್ನ ತಾ ಮರೆವಾ ಅನ್ಯರಾ ಜರಿವ |
ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ ೪
ನಂದನ ಪ್ರಾಣಾ ತಂದೆ ಮಹಿಪತಿ ಜನಾ |
ಹೊಂದನು ಚರಣಾ ಮಂದಗಾಣದ ಕೋಣಾ ೫

೭೧೯
ಹೆಮ್ಮೆಯಾ ಬಿಡು ಬಿಡು ಮನುಜಾ ಪ
ಹೆಮ್ಮೆ ಹಿಡಿದ ಬೊಮ್ಮ ದೂರ್ವಾಸಾದಿಗಳೆಲ್ಲಾ |
ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ
ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ |
ನುಡಿಯಲಿ ತಾ ವಾಯು ವಶದಿಂದಲಿ |
ತಡಿಯದೆ ಬಹುಮುಖ ಕಮಲಾಸನ ಕಂಡು |
ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ ೧
ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು |
ಮತ್ಸರಿಸಲು ಅಂಬೃಷಿಯೊಡನೆ |
ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ |
ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ ೨
ಮೇರು ಗಿರಿಯ ಸಮವಾಗಿ ಸೂರ್ಯನ ರಥಾ |
ದಾರಿ ಕಟ್ಟುವೆನೆಂದು ಬೆಳೆಯುತಲಿ |
ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ |
ಧಾರುಣಿಯೊಳಗೇ ನಾದನೆಂಬುದ ಕೇಳಿ ೩
ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ |
ಕಕ್ಷದಿ ನಿಲುವ ರರೆನುತಾ |
ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ |
ದಕ್ಷ ಮನ್ಮಥರೇನಾದರೆಂಬುದ ಕೇಳಿ ೪
ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ |
ಬಹುತರು ನಮ್ರವೃತ್ತಿಯ ತ್ಯಜಿಸಿ |
ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ |
ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ ೫

೮೨
ಹೆಳೆಲೆ ಸಖಿ ಘಮ್ಮನೆ ಸುಳಿದವನಾರೇ | ಕೇಳಮ್ಮ ಒಮ್ಮಿಂ
ದೊಮ್ಮೆಲೆ ಕಂಡೆ ನಾನೀರೆ | ಒಲಿದು ಕರೆ ತಂದೆನಗಿನ್ನೊಮ್ಮೆ
ದೋರೇ | ಚಲುವಿಕೆಯವನ ಉಸುರಲಾರೆ ಪ
ಪದುಮ ಶಂಖ ಚಕ್ರಾಂಕಿ ತರುಣ ತಳದಾ | ಬಿದಿಗೆ ಚಂದ್ರಮನ
ಮಾ ದಂಗುಲಿ ನಖದಾ | ಮುದಿವಾ
ನೀಲಮಣಿಯಂತೆ ಹರಡಿನ
ಪಾದಾ | ಚದುರ ನೂಪುರ ಗೆಜ್ಜೆ ರವದಾ ೧
ಅನಿಯ ಹಲ್ಲಿನಂದದಿ ಜಂಘೆಯಾ ಮಾಟಾ |
ಜಾನೂರು ಪೋಂಬಾಳೆ
ಯೊಳೆಶೆವುತಿಹ ನೀಟಾ | ತಾನುಟ್ಟ ಪೀತಾಂಬರ
ವಡ್ಯಾಣ ಕಟಿ ತಟಾ |
ಸುನಾಭಿ ತ್ರಿವಳಿಯ ಕೂಟಾ ೨
ಕಿರಿಡೊಳ್ಳು ಮಧ್ಯ ಯಳೆ ವಾಸೆ ಹೃದಯಲಿ ಪದಕಾ | ಸಿರಿವತ್ಸ
ಕಂಬು ಗ್ರೀವ ಕೌಸ್ತುಭಾ ಮೌಲಿಕಾ | ಕರ ಕಡಗ ತೋಳ ಬಂದಿ
ಕೇಯೂರಾ ವಿವೇಕಾ | ಮೆರೆವಾ ಕುಂಡಲ ರನ್ನನೇಕಾ ೩
ಕುರು ಮರಿಯಂದದಿ ಕದಪಿನಮುಖಾ | ಕಿರುನಗೆ ದಂತಾರ
ಚಲುವ ನಾಶಿಕಾ || ಸರಸಿಜ ಜಳೋಪಮ
ನಯನ ಭ್ರೂತಿಲಕಾ |
ಪೆರೆ ನೊಸಲು ಕಸ್ತೂರಿ ತಿಲಕಾ ೪
ಕಿರಿಗೂದಲು ಮುತ್ತಿನ ಮಂಡಿತಾಟ ಮುದಿತಾ |
ತೆರಳಿದ ಬೆರಳುಂಗುರ
ಸನ್ನೆ ಮಾಡುತಾ | ಗುರು ಮಹಿಪತಿ ನಂದನ ಪ್ರಭುನಿವಸತ್ಯ |
ಧರಿಯೋಳಳಿವನ ಗಾಣಿ ಪರತಾ ೫

೫೧೧
ಹೇಳಯ್ಯಾ ಶ್ರೀ ಗುರುವೇ
ಬಾಳುವೆನದರಂದವಿ ಸುರ ತರುವೇ ಪ
ಹೀನ ಯೋನಿಯ ಮುಖದಲಿ ಬಂದು
ನಾನಾ ತಾಪತ್ರಯದಿ ಬಹುನೊಂದು
ನೀನೆ ಗತಿಯನುತ ಬಂದೆ ನಿಂದು
ನಾನು ಭವದಿಂದ ತರಿಸುವ ಉಪಾಯವ ವಂದು ೧
ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ
ಆದಿಯಲಿ ದುರ್ಜನ ಸಂಗವಳಿದು
ಸಾಧುಜನಸಂಗವನೇ ಬೆರೆದು
ಬೋಧೆಯಂದಲಿ ಮನನವ ಬಲಿದು
ಸಾಧಕನ ಉದ್ಯೋಗಿಸ ಸಿದ್ಧಿಯಹುದು೨
ಸ್ವಾಮಿ ಸಜ್ಜನ ಸಂಗವನೇ ಬಯಸಿ
ಪ್ರೇಮದಿರಬೇಕು ಇದೇ ನಿತ್ಯವೆನಿಸಿ
ತಾಮತ್ತರ ಘಳಿಗಿಯೊಳು ವಲಿಸಿ
ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ೩
ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು
ವಿಕಲ್ಲುಳ್ಳದು ನೋಡುಮನವದು
ನಾಕು ತೆರದೊಳಿಸಿ ಕೊಳ್ಳಲದು
ಬೇಕಾದುದನು ವಸ್ತು ಇದಿರಿಡುತಲಿಹುದು೪
ಹೇಳಯ್ಯಾ ನಳಿನ ಜಪರಾಸುರಗಳಿಗೆ
ಛಲಿಸಲಿಕೆ ಮನ ಅಂಗನಿಗೆ
ಬಲಿ ವಿಡಿದು ಮೋಹಿಸಿದ ರಾಗ
ಇಳಿಯೊಳಗ ವಶಯಂತಹುದು ಮನುಜಗ೫
ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ
ವಿಕಳಿಗೊಳ್ಳದೆ ಮನಕೂಡಾ
ಸಕಲಗೆದ್ದರು ಅತಿಗಾಢಾ
ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ೬
ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ
ಎನಗೆಂತಹದಿಂತಿದು ಧೋರಿಯೇ
ನೀನೇ ತಾರಿಸುದಯದೆನ್ನ ಸಿರಿಯೇ
ನಾನು ಎಂದೆಂದು ತವಪಾದಸ್ಮರಣಿ ಮರಿಯೆ೭
ಎಂದು ಬಾಗುವ ಕಂದನನು ನೋಡಿ
ಮಂದಹಾಸದ ಭಯ ಕರ ನೀಡಿ
ಛಂದದಲಿ ತರಿಪಂತೆ ಮಾಡಿ
ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ೮

೪೫
ಹೊಂದಿ ಬದುಕಿರೈಯ್ಯಾ ದೇವನಾ | ತರು |
ಣೇಂದು ಶೇಖರ ಉಮಾ ಧವನಾ ||
ವಂದಿಸಿದವರಘವೃಂದ ನಿವಾರಿಸಿ |
ಛಂದದಿ ಕೈವಲ್ಯ ತಂದು ಕೊಡುವನಾ ಪ
ಸ್ಮರಿಸಿದವರ ಬದಿಯಲಿರುವಾ | ತನ್ನ |
ಶರಣರಿಷ್ಟಾರ್ಥವಗರವಾ ||
ಕರುಣದಿ ಪತಿತರುದ್ಧರಿಸಲು | ತಾರಕ |
ಗುರುರೂಪ ತಾನಾಗಿ ಧರೆಲಿ ಮೆರೆವನಾ ೧
ಗಗನಧುನಿ ಧರಿಸಿದನಾ | ಬೆಟ್ಟ |
ಮಗಳಿಗೆ ಅರ್ಧಾಂಗಿ ನೀಡಿಹನಾ ||
ನಿಗಮಾಗ ಮಂಗಳಯುಗತಿಗೆ | ನಿಲುಕದು |
ನಿಲುಕದುರಗ ಭೂಷಣ ಭಸ್ಮಾಂಗ ವಿಗಢ ನಾಟಕನಾ ೨
ಘನಸಾರ ಗೌರಾಂಗ ಹರನಾ | ತಪ್ತ |
ಕನಕ ವರ್ಣ ಜಟಾಧರನಾ ||
ಮುನಿಜನ ಶುಭತದವನ ಚೌರ್ಚಿತ | ಪದ ||
ಅನುದಿನ ಮಹಿಪತಿ ಜನ ಸಲಹುವನಾ೩

೩೭೪
ಹೊಂದಿ ಬದುಕಿರ್ಯೋ ಪ
ಹೊಂದಿ ಬದುಕಿರ್ಯೋ ಒಂದು ಮನದಲಿ |
ಮಂದ ಹಾಸ ಮುಕುಂದನಾ |
ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ ೧
ಕುರುಳ ಗೂದಲು ಸರಳ ಗೊರಳವ |
ಗರಳಧರನುತ ಚರಣನಾ |
ದುರುಳ ಸಾರ ಸಂಹರಣನಾ |
ತರಳ ಗೊಲಿದ ಕರುಣನಾ ೨
ಮರುಳು ಸುಯೋಧನ ಇರಲು ಏಳದೇ |
ಉರುಳು ಗೆಡಹಿದ ವೀರನಾ |
ಅರಳ ಪೂವಿನ ಹಾರನಾ |
ಗರಳಧರ ಮದ ಹಾರನಾ ೩
ಹಲ್ಲಿದರಿಗಳ ದಲ್ಲಣಾಗಿಹ |
ಪುಲ್ಲಲೋಚನ ರಂಗನಾ |
ಮಲ್ಲ ಚಾಣೂರ ಭಂಗನಾ |
ಸಲ್ಲಲಿತ ಚಲ್ವಾಂಗನಾ ೪
ಸಥಿಯ ನಡೆಸುವ ಇಂಗಿತರ ಮಹಿ |
ಪತಿಯ ನಂದನ ಜೀವನಾ |
ಸತತ ಭಕ್ತರ ಕಾವನಾ |
ಪತಿತ ಪಾವನ ದೇವನಾ ೫

೬೩
ಹೊಂದಿ ಸುಖಿಸಿ ಹೊಂದಿ ಸುಖಿಸಿ
ಒಂದು ಮನದ ಭಾವದಿಂದಾ
ನಂದನೀವ ಜನಕ ನಮ್ಮಗುರುರಾಯನಾ ಪ
ದಿಟ್ಟತನದಿ ಸಾಗರಧಿಂ
ಕಿಟ್ಟು ಸೀತೆಗೆ ಕೊಟ್ಟ ರಾಮನ
ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ
ದುಷ್ಟ ರಾವಣ ತನುಜನಬೆ
ನ್ನಟ್ಟಿ ಕುಟ್ಟಿ ಲಂಕೆಯನು
ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ ೧
ಆಪ ನೋಡದೆ ಭೂಪರಾಸಭೆ |
ಲೋಪಗಡಿ ಮಂಡಿಸಿ ಗೆಲವು |
ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ ||
ಪಾಪಿಕೌರವ ಧೀಪ ನೆಜ್ಞ ಸ |
ಮೀಪಪಶುವಿನೋ ಪಾದಿಯಲಿ
ಕೊಪದಿಂದಲಿ ಘಾತಿಸಿದ ಭೂಪಭೀಮನಾ೨
ಮತ್ರ್ಯ ದೊಳಗ ಬೆರ್ತು ವಿಷಯ
ಕುರ್ತು ಬಳಲಿ ನೊಂದ ಜನರು
ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು
ಅರ್ಥಿಲೊಲುವ ಸ್ಪೂರ್ತಿ ನಿತ್ತು
ಸಾರ್ಥಕವನು ಮಾಳ್ಪಾನಂದ
ತೀರ್ಥ ಮಹೀಪತಿಜ ವಂದ್ಯ ಮೂರ್ತಿ ಮರುತನಾ೩

೪೪
ಹೊಂದಿ ಸುಖಿಸಿನೆರೈಯ್ಯ ನಮ್ಮ ದೇವ ದೇವನಂ |
ತಂದೆ ಮಹಿಪತಿ – ಜಪಾಲ ಭಕ್ತ ಜೀವ ಜೀವನಂ ಪ
ತೋರ್ಪಕರ್ಪೂರಗಂಗಛವಿಯ | ಸರ್ಪ ಅರ್ಪಿತಾಂಕ ಕಂಠ |
ದಿರ್ಪ ಸರ್ಪ ಭೂಷಕಂ – ದರ್ಪ ದರ್ಪ ನಾಶನು ೧
ಸ್ಥೈರ್ಯಧೈರ್ಯ ವೀರ್ಯೋದಾರ್ಯ |
ವರ್ಯ ಚರ್ಯದೋರಿ ಜನಕ |
ಕಾರ್ಯ ಕಾರ್ಯನರ ಹಿಸುವಾ |
ಆರ್ಯ ರಾರ್ಯ ಸಾಂಬನಂ | ೨
ಕಾಲಕಾಲ ಶಂಭುರಜತ | ಶೈಲವಾಲಯನಿಸಿ ಗಿರಿಜೆ |
ಲೋಲ ನೀಲ ಲೋಹಿತಂಕ | ಪಾಲಿಶೂಲಿ ಶರ್ವನಂ ೩

೭೨೦
ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ
ಹೋಗುತಿದೆ ಮುತ್ತಿನಂಥಾ ದಿನದೊಳು |
ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ
ಉತ್ತುಮರ ಸಂಗಡದಲ್ಲಿ |
ನಿತ್ಯ ಶ್ರವಣಮನನ ಮಾಡಿ |
ಅತ್ತಲಿತ್ತಲಾಗದೆ | ಸು |
ವೃತ್ತಿಯೊಳು ಬೆರಿಯಿರೋ ೧
ಪಗಡಿ ಪಂಚಿಯಾಡಿ ಪರರಾ |
ಬಗಲಿ ಕಳೆದು ಕಳೆವದೇನು |
ಯುಗುತಿ ಹೀನ ರಾಗದೆ |
ಭಕುತಿ ಪಥ ಪಡಿಯಿರೋ ೨
ಮಂದ ಮತಿಯ ಕೊಂಡ್ಯಾಡಿ |
ಮಂದ ಮತ್ತೆ ದೊರೆಯದಿದ್ದ |
ಇಂದು ನಾಳೆಗೆನ್ನದೇ ಮು |
ಕುಂದ ನಾಮವ ನೆನೆಯಿರೋ ೩
ಇಂದು ನರದೇಹದಿಂದ |
ಬಂದು ಬರಡ ಮಾಡಬ್ಯಾಡಿ |
ತಂದೆ ಮಹಿಪತಿ ದಯ |
ದಿಂದ ಮುಕ್ತಿಯ ಪಡೆಯಿರೋ ೪

ಉಗಾಭೋಗಗಳು
೪೦೧
ಕಮಲನಯನೆ ತಾನ್ಯಾಕ ಮಲ್ಹರಬಾರನೇ |
ಕಮಲಭವ ವಂದ್ಯನು ಕಮಲಾಕ್ಷ ಧೋರನೇ
ಕಮಲಶರಪಿತನಾ ಕಮಲವ ಕಾಣದೇ |
ಕಮಲಲಿ ತಾಪಯಿದು ಕಮಲಬಾಡುತಿದೇ |
ಕಮಲ ತುಂಬಿಕಂಡರೆ ಕಮಲ ಬಾಗಿಸಿಂದು |
ಕಮಲ ಮುಗಿವೆ ಮಹಿಪತಿ ನಂದನೊಡೆಯಾ ೧

೪೦೨
ಕಶ್ಯಪಋಷಿಯ ಪುತ್ರನ ಪೌತ್ರನೈಯಂಗ |
ವಶ್ಯನಾಗಿದ್ದೊಡೆಯನ ತಂದೆವಳಿಯನಾ |
ಲಸ್ಯಮಾಡದೆ ಸಿರಿವರಿದು ಬಿಸುಟನಾ |
ಗ್ರಭವನಾ ತಾತನಾ ತಂಗಿಯಾ ||
ದೃಶ್ಯದಿಂದೊಡಗೊಂಡು ಬಂದಸೂಸತಿಯಾ |
ಶಿಶ್ರೂಷಕ್ಕೆ ಮೆಚ್ಚದಾನೊಳಗೀಹ ಖೂಳನಾ |
ಯುಷ್ಯರೇಖೆಯ ತೊಡದವನಂಶಹುರಿದು |
ರಾಘವ ರಕ್ಷಿಸುವದೆಮ್ಮನು |

೪೦೩
ಕಾಳಿಫಣಿಪಣವನೇರಿ ಕಾಳಿಫಣಿಪಣವನೇರಿ
ನಿಂದುದೇವ ಉನ್ನತವೇಣು ಕೈಯಿಂದ ಪಿಡಿದು
ಮ್ಯಾಲನಾನಾ ಪರಿಯ ಸುಸ್ವರದಿ ಊದುತಲಿ
ಧಿಗಿಧಿಗಿಲ ಧಿಂಕಿಟ ಧಿಗಿಯೆಂದು ಕುಣಿಯೆ
ಕಾಲಲಿಟ್ಟೆಹ ಕಡಗ ಗೆಜ್ಜೆ ಕಿಂಕಿಣಿಗಳ
ಝಣಝಣಕು ಝೇಝೆಝೇಂಕು ಎಂಬ ದನಿಯಾ
ಕೇಳುತಲಿ ಬಂದಾ ಗೋವಳರಿಗ್ಹರುಷವನಿತ್ತಾ
ಮಹಿಪತಿಸುತನೊಡಿಯಾ |

೪೦೪
ಗೋಪವಾಹನ ದೇವ ಗೋಭರಿತ ಚಕ್ರಧರ |
ಗೋಪವಾಹನ ಮುಖ್ಯಯ ಗೋಜ ಪೂಜಿತ ಪಾದ |
ಗೋಪ ಕೋಟಿ ಪ್ರಕಾಶ ಗೋಭವಾನ್ವಯತಿಲಕ |
ಗೋರಾಸಿಜಾ ವಲ್ಲಭಾ ||
ಗೋಪ ಕುವರೆನಿಸಿ ವರಗೋಕುಲವ ವಿಹರಿಸುತ |
ಗೋಪ ಮುಳಿಯಲು ಕರದಿ ಗೋವರ್ಧನೆತ್ತಿ –
ಗೋಪಾಲರಂ ಪೊರೆದ ಗುರುಮಹಿಪತಿ ಪ್ರಭುವೆ |
ಗೋಕರ್ಣಶಯನ ಸಲಹೋ ||

೪೦೫
ಗೋಪಾತ್ಮಜಂ ಬಿಟ್ಟ ಗೋಕರ್ಣ ಬಾಣ ಬರೆ |
ಗೋಪ ದಾಗೃದ ಲೊತ್ತಿ ಗೊಬಾಧೆ ಯನೆ ಬಿಡಿಸಿ |
ಗೋಪಸುತನಂ ಕಾಯ್ದೆ ಗೋಪ ಗೋಭ ವಯುಗ್ಮ |
ಗೋ ಗೋಜ ಸುರಪಾಲಕ ||
ಗೋಪ ವೈರಿಯ ಶಿರದಿ ಗೋಸ್ತುತನೆ ನೃತ್ಯ ದಿಂ |
ಗೋಪ ಗೋಪೇರ ಗೋ ಗೋ ಗಳಿಗೆ ಸುಖವಿತ್ತೆ |
ಗೋಪಡೆದನೆಯ್ಯ ವರದನೇ ಮಹಿಪತಿ ನಿಜ ಪ್ರಭು |
ಗೋಪಾಲಕೃಷ್ಣ ಸಲಹೋ ||

೪೦೬
ಜೆನ್ನೊಡಲ ಮರಗ್ಹುಳ ಬಾನ್ಮಣಿಗಳಾವನಡಿ
ಮುನ್ನೊಲುವ ಪಡೆದು ಬೆಳಗುವರೆಂದು ಪಾಲ್ಗಡಲ
ಕನ್ಯೆನಾಲ್ಕೈಮೊಗರ ನೆರೆಯ ಪಲಗಣ್ಣಾದರೆಯಾಣ್ಮ ಪಂಚೆರೆಯುತ |
ಕನ್ನ ವಿಲ್ಲೇಯ ಬಣ್ಣ ಮಯ್ಯ ನರಸೆನುತೆರಗಿ
ತನ್ನಕೈಪೂಮಾಲೆ ಕೊರಳಿಗಿಕ್ಕಳಿದಾಗಿ
ಇನ್ನು ಹರಿಸರಿ ದೈವ ವಿಲ್ಲೆಂದು ಪಾಡಿದನು
ಗುರುಮಹಿಪತಿ ಯಣುಗನು ||

೪೦೭
ತಿಳಿದು ನೋಡಯ್ಯಾ | ತಿಳಿದು ನೋಡಯ್ಯಾ ಎಲೋಜಿಯ್ಯಾ |
ಸಿರಿಪ್ರಿಯಾ ಅಂಬುಜನಯ್ಯಬ್ಜಗೈಯ್ಯಾ ಕಮಿನೀಯ ಕಾಯಾ |
ಸಲೆ ನಿನ್ನ ಚರಣ ಕಮಲದ ರಜಕ ನಂಬಿ ಮೊರೆ ಹೊಕ್ಕವನ |
ಅವಗುಣವ ನಾರಿಸಬಹುದೇ |
ಇಳೆಯೊಳಗ ಭವದುರಿತ ಬಂದಂಡಲಿಯೆ ಎನ್ನ |
ನಿರ್ದಯದಿಂದಲಿ ಉಪೇಕಿಪುದುಚಿ – ತವೇ ನಿನಗೆ ||
ಜಲಧರನ ವರ್ಷಣಕ ಪಕ್ಷಿಗಳಿಗಾಶ್ರಯದ |
ವೃಕ್ಷ ಕೊಡುತಿರೆ ಮತ್ತೆ ತೆರನಾವುದೈ |
ಲಲನೆ ಕುಂದಿನಿಯ ನೊಡಲಮೃತ್ಯನ ವಮಾನ |
ಒಡೆಯ ನೋಡಲ್ಕಾವರಾರೈ |
ಜಲಜಾಕ್ಷ ಎನ್ನ ಭಯ ಪರಿಹರಿಸಿ |
ಸಲಹದಿರ್ದಡೆ ಮತ್ತೊಡೆಯರಾರು |
ಮಹಿಪತಿ ಸುತ ಪ್ರಭುವೆ ||

೪೦೮
ನಿನ್ನನೇ ಮೊರೆಹೊಕ್ಕಿಹೆನೋ |
ನಿನ್ನ ನಂಬಿದ್ದವರ ಘನ್ನ ಭಯ ಹರಿವೆ ಎಂದು
ಧ್ಯಾನ ಮೌನಗಳೆಂಬ ಜ್ಞಾನ ಸಾಧನಗಳನು |
ಏನು ಅರಿಯದ ಅತಿ ದೀನನಾ ಭವಕಂಜಿ
ಹಾಲೋಳಗೆದ್ದೆನ್ನ ಜಲದೊಳಗೆದ್ದಯ್ಯ |
ತಿಳಿದಂತೆ ಮಾಡೋ ನೀ ಮಹಿಪತಿ ಸುತ ಪ್ರಿಯಾ

೨೩೪
ನೀರೇ ಜಗದಾಧಾರನ ತೋರೆ | ಮೋಹನಕಾರೇ ಪ
ಸುರವರರರಿಯಾ ಅರಿಯಾ | ದೀನದಯಾಳು ಶ್ರೀ ಹರಿಯಾ |
ವರನರ ಹರಿಯಾ ಕರಿಯಾ | ಮೊರೆಕೇಳಿದ ಯಾದವರ್ಹಿಲಿಯಾ ೧
ವನರುಹ ಸುತನಾನುತನಾ | ಪಾಂಡವಸ್ಥಾಪನ ಕೃತನಾ |
ಅನಿರುದ್ದನಪಿತನಾ ಪಿತನಾ | ರಜನೀಚರ ಕುಲಮಥನಾ ೨
ನರಕಾಸುರನಾ ಹರನಾ ಮಂದರ ಪರ್ವತಧರನಾ |
ಗುರುವರ ಮಹಿಪತಿ ನಂದನ ಪ್ರಾಣಾ |
ಸಿರಿಕೃಷ್ಣನಂದ ಕುವರನಾ೩

೪೦೯
ಪತ್ರ ವರರಥ ಪುತ್ರ ಪುತ್ರ ಪತಿಜಿತ ಪಿತ್ರ |
ಪಿತ್ರ ಸುಖದ ಚರಿತ್ರ ರಿತ್ರಾಢಣ ವಿಚಿತ್ರ |
ಚಿತ್ರಮಣಿಕಟಿಸೂತ್ರ ಸುತ್ರಾಮ ಸುತಮಿತ್ರ |
ಮಿತ್ರ ಶತತೇಜ ಗಾತ್ರಾ ||
ಗಾತ್ರ ರಹಿತನ ಮಿತ್ರ ಮಿತ್ರಜರಗತಿ ಸತ್ರ |
ಸತ್ರಾ ತಾ ಧೃತ ಗೋತ್ರ ಗೊತ್ರೈಕ ಜನ ಸ್ತೋತ್ರ |
ಸ್ತೊತ್ರ ಧರನುತ ಧಾತೃ ಧಾತ್ರೀಶ |
ಗುರು ಮಹಿಪತಿಜ ಪ್ರಭು ಸಲಹು ಕಮಲ ನೇತ್ರ ||

೪೧೨
ಪುಷ್ಕ ರಾದ್ಯಾದ ತೀರ್ಥಂಗಳಾವನ ಪಾದ |
ಪುಷ್ಕರದ ಜಲಕ ಸಮಬಾರದೆಂದು ಭವಘನ |
ಪುಷ್ಕರದ ಸರಿತೆಯಂ ಸಿರಿದೊಳಾಂತನು
ದೈವ ಪುಷ್ಕರ ಶಾಮನೆಂದು |
ಪುಷ್ಕರದಿ ವಾರಿಚರ ನೋಯಸೆರದನೀ ಶಸಲೆ |
ಪುಷ್ಕರವನ್ನೆತ್ತಿ ಮೊರೆಯಿಡೆ ಬಂದು ಅವನಿತ್ತ |
ಪುಷ್ಕರವ ಕೊಂಡಲಿದೆ ಮಹಿಪತಿ ಜ ಪ್ರಭು ಸ್ವಾಮಿ |
ಪುಷ್ಕರಣಿವಾಸ ಸಲಹೋ ೧

೪೧೦
ಬಲ್ಗೈಯರಸರಂಜಿ ಸುಮ್ಮನಿರೆ ದಶಕಂಠ
ಬಲ್ಗೆರಗಿ ನಿರ್ಗಾರಿ ಪೋಗಿ ಮುನಿ ಕೌಶಿಕನ
ಸೋಲ್ಗೇಳಿ ನಡೆತಂದು ಅಂಗುಟದಲೆತ್ತಿ
ಬಾಂದಳ ಗಂಗೆಯಾ ಪೊತ್ತನಾ
ಮೇಲ್ಗಂಡ ಧನು ಮುರಿಯೆ ನೋಡಿಹರುಷಿತಳಾಗಿ
ಕಾಲ್ಗೆರಗಿ ವೈದೇಹಿ ಕರದ ಪೂಮಾಲೆಯ ಕೊ
ರಳ್ಗಿರಿಸೆ ಮುದ ವಿತ್ತ ಮಹಿಪತಿದಜ ಪ್ರಭುರಾಮ
ನೇಳ್ಗೆಯ ಸ್ತುತಿ – ಸಲಳವೇ ||

೪೨೨
ಭಂಗ ಬಡುವ ಸಂಸಾರದಿ ಕುಜನರ ಸಂಗದಲಿ ಸರಿಯೋ
ಅಂಗದೋಳಗ ಬಲಿದಿಹ ಆರರಿಗಳದಿಂಗಿತವನು ಜರಿಯೋ |
ಮಂಗಳಕರ ಸುಖ ನೀಡುವ ಹರಿ ಭಜನಂಗಳರತಿ ಬೆರಿಯೋ |
ಹಿಂಗದೆ ಗುರು ಮಹಿಪತಿ ಪ್ರಭು
ದಯದಲಿ ಕಂಗಳ ನೀದೆರೆಯೋ ೩

೪೧೩
ಯೆಲರುಣಿಸು ಮೈಮಂಚ ಪಕ್ಕಯಾಣ್ಮನದೇಶ |
ನೆಲೆವೆಣ್ಣು ಸಿರಿದೇವಿಯರ ಸಿಯರುಪಾಲ್ಗಡಲ |
ನೆಲೆಯ ಮನೆ ನೊರೆಲೆಯ ಮ್ಯಾಲ ಕುಳ್ಳಿರ್ಪವನು |
ಹಿರಿಯ ಮಗ ಗಿಳಿದೇರನು ೧
ಚೆಲುವ ಕಿರಿಯ ಮಗ ನಾರದನ ಗಾನ ಸನಕಮುನಿ
ಕುಳಹ ಪಲಗಣ್ಣ ಸುರರೆಂಬ ಬಂಟರು ಕದವ |
ಒಲಿದ ಜಯ ವಿಜಯರಿಂದೊಪ್ಪುತಿಹ ಗುರು ಮಹಿ |
ಪತಿಜ ಪ್ರಭು ಸಲಹು ನಮ್ಮನು ೨

೪೧೪
ರಾಮ ಬಾಣಾಕ್ಷಪಿತ ರಾಮ ಶಶಿಭುಜ ಶೋಭ |
ರಾಮಾಕ್ಷಿ ಮುಖವಿನುತ ರಾಮಣಿಯಕ ರೂಪ |
ರಾಮಾನುಜನೆ ಬಾಣ ರಾಮರಸ ಭುವ |
ನಾಭಿರಾಮ ಸಕಲಾಂತರಾತ್ಮ |
ರಾಮ ಋತು ಶಶಿವದನ ರಾಮ ಭಂಗ ಪ್ರಿಯನೇ |
ರಾಮ ಶಾಮಾಸುರ ವಿರಾಮ ಕೃತ ಗುಣಮಂದಿ |
ರಾಮಯ ವಿದೂರ ಶ್ರೀ ಗುರುಮಹಿಪತಿ ಪ್ರಭುವೆ
ರಾಮರಕ್ಷಿಸು ನಮ್ಮನು ೧

೪೧೫
ಶರಣು ಶರಣು ಶರಣರಕ್ಷಕ ಶರಧಿವಾಸನೆ ಕೇಶವಾ |
ಸರಸಿಜಾಪತಿ ಸರ್ವವ್ಯಾಪಕ ಸಕಲದುರಿತ ನಿವಾರಣಾ ||
ಕರುಣಾಸಾಗರ ಕರಿಯಾಭಯಹರ ಕಮಲಭವಶಿವವಂದಿತಾ |
ಪರಮ ಪಾವನ ಪದುಮ ಆನನ
ಪದುಮಲೋಚನ ದೇವ ದೇವಾ ||
ಅಭಿನವಜಲಧರ ಸುಂದರಾ ಜಯ |
ವಿಭೋಜಿತ ದಶಕಂಧರಾ ಜಯ |
ಶುಭಕರ ಸನ್ಮೂರ್ತಿ ಜಯ ಜಯ ಪತಿತೋಧ್ದಾರಕಾ ||
ಪ್ರಭುವೇ ಮಹಿಪತಿಸುತನ ಜೀವ ದೇವ ದೇವಾ ||

೪೨೪
ಶರಣು ಸರ್ವಾತೀತೆ ಶ್ರೀದೇವಿ ವಿಖ್ಯಾತೆ |
ಶರಣು ಸಾರಸ ನಯನೆ ಪೂರ್ಣೇಂದು ನಿಜವದನೆ |
ಶರಣು ರತ್ನಾಭರಣಿ ದಿವ್ಯಾಂಬರಾವರಣಿ |
ಶಕ್ತಿತ್ರಯದ ರೂಪಿಣಿ ||
ಶರಣು ಜ್ಞಾನ ಪ್ರಕಾಶಿ ಸಕಲ ತೇಜೋರಾಶಿ |
ಶರಣು ನಿಜ ಸುಖದಾನಿ ಮೂರುಲೋಕದ ಜನನಿ |
ಶರಣು ಮಹಿಪತಿ ಕಂದ ನಿನ್ನವನೆನುತ |
ಛಂದಾ ಸಲಹಮ್ಮ ಕರುಣದಿಂದ ೧

೪೨೩
ಸಲಹಬೇಕಯ್ಯಾ ಎನ್ನ ನೀನು | ಶರಣರ ಸುರಧೇನು |
ತಪ್ಪು ನೋಡುವದೇನು ಇಳಿಯೊಳು |
ನಿನ್ನ ಚರಣವನು ನಂಬಿದ ನಾನು
ವಿಷಯ ಸುಖಗಳಲ್ಲಿ ಬೆರೆದೆ | ಒಳಿತು ಗುಣ ಜರಿದೆ |
ಭಜನಿ ಮಾರ್ಗ ತೋರದೇ | ಘಸಣೆಗೆ ಬಿದ್ದೆ ನಾನು |
ಬರಿದೇ ಹರಿಯ ಮರೆದೇ
ನಾನಾ ಯೋನಿಗಳಲ್ಲಿ ಹಿಂದೆ | ಜನಿಸಿ ಬಹುನೊಂದೆ |
ನರದೇಹದಲಿ ಬಂದೆ | ಘನಗುರು ಮಹಿಪತಿ ತಂದೆ |
ಪ್ರಭು ಶರಣೆಂದೆ

೪೧೬
ಸಾರಂಗ ಧೃತನಾಗ್ರ ಭವಳ ಮುಖ ವಾರಿರುಹ |
ಸಾರಂಗ ನೀಲೋತ್ಪಲ ಶ್ಯಾಮ ಜಗದಾತ್ಮ |
ಸಾರಂಗ ರಾಜ ರಥ ನೆನಿದವರ ದುರಿತದ
ತು ಸಾರಂಗಳಂ ಸೇರಿಸೀ |
ಸಾರಂಗಳಂ ಕೊಡುವೆ ಸರ್ವೇಶಯೋಗಿ ಜನ |
ಸಾರಂಗ ಜೀಮೂತ ಕ ಕುಬೇಶನುತ ಪಾದ |
ಸಾರಂಗ ನದಿ ಪಿತನೆ ಗುರು ಮಹಿಪತಿ ಪ್ರಭುವೆ |
ಸಾರಂಗ ವರದ ಸಲಹೋ |

೪೧೭
ಸಾರಂಗ ರಾಜ ನಿಜ ವೈರಿ ಬಲೆಯೊಳಗಾಗಿ |
ಸಾರಂಗ ವರ್ಣದೇವನೇ ರಕ್ಷಿಸೆನೆ ಕೇಳಿ |
ಸಾರಂಗ ರಿಪು ಆಶನಿಯೇರಿ ಬಂದುದ್ದರಿಸಿ
ಸಾರಂಗ ಧಾಮವಿತ್ತೆ |
ಸಾರಂಗ ವಾಹನ ಪ್ರೀಯ ಕಮಲ ಭವ ಜನಕ |
ಸಾರಂಗ ವಾಹನ ಮರ ಮುಖ್ಯನುತ ಚರಣ |
ಸಾರಂಗಧರ ಮಿತ್ರ ಗುರು ಮಹಿಪತಿ ಪ್ರಭುವೆ |
ಸಾರಂಗ ಪಾಣಿ ಸಲಹೋ ೧

೪೨೧
ಸಾರಸಾರ ವಿಚಾರ ವಿವೇಕದ ದಾರಿಯನೇ ಬಲಿಯೋ |
ತೋರುವದೀ ಸಂಸಾರ ಸುಖ ಮೃಗ ನೀರಿನ ಪರಿ ತಿಳಿಯೋ ||
ಸಾರುವ ಶೃತಿ ಗುರು ವಾಕ್ಯದಿ ಸ್ವಾನುಭವರತಿಯಲಿ ನಲಿಯೋ |
ತಾರಕ ಗುರುಮಹಿಪತಿದಯದಿ ಭವರೋಗ ವಿಷಗಳಿಯೋ ೨

೪೧೮
ಸೋಮಮಿತ್ರ ಪ್ರೀಯ ಸರಸಿಜೋದ್ಬವನಯ್ಯಾ |
ಸೋಮಧರ ಶಾಮಾಂಗ ಸಕಲ ದೇವೋತ್ತುಂಗ |
ಸೋಮ ಪುತ್ರಿಯ ರಮಣ ಕೋಟಿ ಲಾವಣ್ಯಘನ |
ಸೋಮಪತಿ ಸೇವ್ಯ ಚರಣಾ |
ಸೋಮಪುತ್ರನ ಕೈಯ್ಯಲಳಿಸಿ ಸಂದಿನ ಮೈಯ್ಯ |
ಸೋಮ ಪುತ್ರಂಗೊಲಿದೆ ರಾಜ ಪೂಜಕ ತಂದೆ |
ಸೋಮಪತಿ ಶಯನ ಗುರು ಮಹಿಪತಿ ಸುತ ಪ್ರಾಣ |
ಸೋಮ ಕುಲಭವನೆ ಸಲಹೋ ||

೪೨೦
ಹರಿಪದ ಪದ್ಮ ಪರಾಗ ಮಧುಕರ – ರಾಧರ ನೆರೆ ಹಿಡಿಯೋ |
ಹರಿಯ ಚರಿತ್ರ ಸುಧಾರಸ ಶ್ರವಣ ದ್ವಾರದಲಿ ಕುಡಿಯೋ ||
ಹರಿದಾಡುವ ಚಂಚಲ ಚಿತ್ತವೇ ಮನನ ಧ್ಯಾಸದಿ ಜಡಿಯೋ |
ಹರಿಸುವ ತಾಪವ ಗುರು ಮಹಿಪತಿ
ಪ್ರಭುನಾಮವ ನೀನುಡಿಯೋ ೧

೪೧೯
ಹರಿಯಾನಕ ಚಂದ್ರಕೆ ಚಕೋರಾದವರಾ |
ಹರಿಯಾನಾಮಾ ಘನಕೆ ಮಯೂರಾದವರಾ |
ಹರಿಯಾಪಾದಲಿಂಗಕೆ ಪಾವುಡಾದವರಾ |
ಹರಿಯ ನಿರ್ಮೂಲ್ಯವಾದಾ ತುಲಸಿಯಾ ಘ್ರಾಣಿಸುವಾ |
ಮಧುಕರಾದವರಾ ಪರಾಗಕೊಂಬುವರಾ |
ಹರಯಾ ತೀರ್ಥ ಪ್ರಸಾದಾ ಚಾತಕದವರಾ |
ಹರಿಯಾ ಸೇವೆ ಸಕಲರ್ಪಿತ ಮನದವರಾ |
ಗುರು ಮಹಿಪತಿಸ್ವಾಮಿ ವಲುವೆಯನುಳ್ಳಾ |
ವರದಾಸದಾಸನಾಶ್ರಯ ಸಾಖ ಸದನಾ ೧

೪೨೫
ಸುಳಾದಿ
ಕಾವುದೈ ಎನ್ನ ನೀ ಕಂಬುಗಳಾ |
ಶ್ರೀವರದೋರಿ ಶ್ರೀ ಪಾದಗಳಾ |
ದೇವ ಬಿಡಿಸೋ ಭವ ಪಾಶಗಳಾ |
ಈ ವದೆನಗ ಜ್ಞಾನ ನೋಟಗಳಾ |
ಜವದಿ ಹರಿಯೋ ಜನ್ಮ ಮರಣಗಳಾ |
ಜೀವನ ನೀ ಸರ್ವಲೋಕಗಳಾ
ದೇವಕಿ ಜಠರ ಶರಧಿ ಶಶಿಯೇ |
ದೇವ ಮುನಿಗಳ ಅರಿಯಾರರಿಯೇ |
ಭಾವಿಕರ ಸ್ಮರಣೆಗೆ ಒಲಿವೇ |
ಶ್ರೀ ವತ್ಸಾಂಕಿತ ಗುರುವರ ಮಹಿಪತಿ ಪ್ರಿಯಾ ೧
ಕನಕಗರ್ಭ ಅಮರ ಪತಿಗಳಾ |
ಅನುದಿನಲಿ ನುತಿಸಿಕೊಂಬುದೇತಾ |
ಅನಳ ಸುತೆಯಾ ಪತಿ ಯುಧೀಷ್ಟರನಾ |
ಮನೆಯ ಎಚ್ಚಿಷ್ಟ ಪಾತ್ರ ಬಳುವರೇ ತಾ |
ಅನಳ ಅನುಜನಾ ರಥ ಪೂಡುರೇ ರಂಗಯ್ಯಾ |
ಘನಚರಿತಾ ಗುರುವರ ಮಹಿಪತಿ ಪ್ರೀಯಾ ೨
ಅಂದು ರಾವಣನು ಸರ್ವರಿಗೆ ಪೀಡಿಸುತಿರೆ |
ಬಂದು ಆ ಅಸುರನ ಕಂದರ ಹರಿಯಲು |
ಧಿಂ ಧಿಂ ಧಿಂ ಧಿಂ ಧಿಮಿ ಧಿಂ ಧಿಂ ಧಿಂ ಧಿಂ ಧಿಮಿ |
ಕೆಂದು ಸುರರು ದುಂದುಭಿ ಪೊಡೆಯೆ |
ವಂದಿಸಿ ಮುನಿಜನಗಳು ಸ್ತುತಿಸೆ |
ಸುಂದರ ಕುಜದಶಬೇದನೆ ಗೈಯ್ಯುಂತಾ |
ಛಂದದಿ ನಾರದ ಪಾಡಿದಾನಂದ ದಿಂದಾ |
ಧಿಂ ಧಿಂ ಧೀಂ ಧೀಂ ಧಿಮಿ ಧೀಂ ಧೀಂ ಧಿಮಿಕೆಂದು
ಅಂದಿಗಿಂದಿಗೆ ಭಕ್ತವೃಂದ ರಕ್ಷಿಸುತಿಹೆ |
ಇಂದೆನ್ನ ಕಾಯೋ ಗುರುವರ ಮಹಿಪತಿ ಪ್ರಿಯಾ ೩
ಅನಂತ ಮಹಿಮಾ ಅನಂತ ನಾಮಾ |
ಅನಂತ ಕುಲ ಅರಿಗಮನಾ ಸುರೇಶಾ |
ಅನಂತ ಶಯನಾ ಅನಂತ ಸುದ್ಗುಣಾ |
ಅನಂತ ಕೋಟಿ ಬ್ರಹ್ಮಾಂಡದೊಡಿಯಾ |
ಅನಂತ ಕೋಟಿ ಬ್ರಹ್ಮಾಂಡದೊಡಿಯಾ |
ಅನಂತ ರೂಪಾ ಅನಂತ ಚರಿತಾ |
ಅನಂತ ವರದ ಗುರವರ ಮಹಿಪತಿ ಪ್ರೀಯಾ ೪
ವನಜನಕಾ ವನಜಾನನೇ
ಜನಜಾಲಯ ಮುಖ ಚಂದ್ರ ಚಕೋರಾ |
ವನಜ ಪದಾ ವನಜ ಲೋಚನಾ |
ವನಜೋದ್ಬವ ವಂದಿತ ಕರಿವರದಾ |
ವನಜ ಶರಾಜನಕ ಮುಕುಂದಾ |
ವನಜಜನುತ ಗುರವರಮಹಿಪತಿ ಪ್ರೀಯಾ ೫
ಧೀರ ಉದಾರ ಮಂದಾರಾಗೋದ್ಧರಾ |
ತಾರಿಸೋ ಎನ್ನ ನೀ ಗುರುಮಹಿಪತಿ ಪ್ರೀಯಾ

ನಿನ್ನನೀ ತಿಳಿದು ನೋಡು
೬೧೯
ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ
ನಿನ್ನ ನೀ ತಿಳಿದು ನೋಡು |
ಎನ್ನ ಹಿತವು ದಾವುದೆಂದು |
ಮುನ್ನಿನವ ಗುಣ ಜರಿದು |
ಇನ್ನಾರೆ ನೀ ಮನವೇ ೧
ಒಳ್ಳೆವರಾ ಕಂಡು ಬಾಗಿ |
ಸಲ್ಲದಾ ಬಡಿವಾರ ನೀಗಿ |
ಸೊಲ್ಲವ ನಾಲಿಸು ಅವರಾ |
ನಿಲ್ಲದೇ ನೀ ಮನವೇ ೨
ತಂದೆ ಮಹಿಪತಿ ದಯಾ |
ದಿಂದ ಪಡೆಯೋ ವಿಜಯಾ |
ಮಂದ ನಾಗದಿರು ಬಂದಾ |
ಛಂದ ವಿಂದು ಮನವೇ ೩

ಹಾಡಿನ ಹೆಸರು :ನಿನ್ನನೀ ತಿಳಿದು ನೋಡು
ಹಾಡಿದವರ ಹೆಸರು :ಮಂಜುನಾಥ ಎಸ್. ಎ.
ರಾಗ :ನಾಮ ನಾರಾಯಣಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಿನ್ನನೇ ಮೊರೆಹೊಕ್ಕಿಹೆನೋ
೪೦೮
ನಿನ್ನನೇ ಮೊರೆಹೊಕ್ಕಿಹೆನೋ |
ನಿನ್ನ ನಂಬಿದ್ದವರ ಘನ್ನ ಭಯ ಹರಿವೆ ಎಂದು
ಧ್ಯಾನ ಮೌನಗಳೆಂಬ ಜ್ಞಾನ ಸಾಧನಗಳನು |
ಏನು ಅರಿಯದ ಅತಿ ದೀನನಾ ಭವಕಂಜಿ
ಹಾಲೋಳಗೆದ್ದೆನ್ನ ಜಲದೊಳಗೆದ್ದಯ್ಯ |
ತಿಳಿದಂತೆ ಮಾಡೋ ನೀ ಮಹಿಪತಿ ಸುತ ಪ್ರಿಯಾ

ಹಾಡಿನ ಹೆಸರು :ನಿನ್ನನೇ ಮೊರೆಹೊಕ್ಕಿಹೆನೋ
ಹಾಡಿದವರ ಹೆಸರು :ಕಮಲಮೂರ್ತಿ ಹೆಚ್. ಎನ್., , ಅಪರ್ಣಮೂರ್ತಿಹೆಚ್. ಎನ್.
ರಾಗ :ಶುಭಪಂತುವರಾಳಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬರೇ ವಾಚಾಭಿಮಾನವಿದೇಕೆ

ಬರೇ ವಾಚಾಭಿಮಾನವಿದೇಕೆ | ಹರಿ ಲೀಲಾಮೃತ ಸೇವಿಸಲಿಕ್ಕೆ ಪಸಂಸ್ರ‍ಕತ ವಂದ್ಯ ಪ್ರಾಕೃತ ನಿಂದ್ಯ |ಸುಕೃತಿಗಳಾಡುದೇ ಕುಂದಾ೧
ಕನ್ನಡ ನುಡಿಯೆಂದ್ಹಳಿಯಬೇಡಿ | ಕನ್ನಡಿ ದರ್ಪಣವಲ್ಲವೆ ನೋಡಿ ೨
ಕರಿದು ಬಿಳಿದು ಅವಾದರೇನು |ಎರಡಾಗದು ಕ್ಷೀರೆಂದೂ ತಾನು೩
ಗುರುವರ ಮಹೀಪತಿ ಪ್ರಭುಚರಿತಾ |ಭರಿತಾದುದೇ ಪಾವನ ನುಡಿತಾ

ಹಾಡಿನ ಹೆಸರು :ಬರೇ ವಾಚಾಭಿಮಾನವಿದೇಕೆ
ಹಾಡಿದವರ ಹೆಸರು :ಚೈತ್ರಾ ಕೆ. ಆರ್.
ರಾಗ :ಕನ್ನಡ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ರಂಗ ಬಂದಾ ನಮ್ಮ ರಂಗಾ ಬಂದ ಭಂಗಿಸಿ ಕಾಳಿಯ
೩೧೪
ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ
ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ |
ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ ೧
ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ |
ಬಿರಿವಂತವನತನು ಹರಿಸಿ ಮದವಾ೨
ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು |
ಸುರರಾ ಗೀತದಿ ನೃತ್ಯ ಚರಿತವ ದೋರಿ ೩
ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು |
ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ ೪
ತಂದೆ ಮಹಿಪತಿ ನಂದನ ಪ್ರಭು ಸ್ವಾ |
ನಂದವ ಸುರನರ ವೃಂದಕ ಬೀರಿ ೫

ಹಾಡಿನ ಹೆಸರು :ರಂಗ ಬಂದಾ ನಮ್ಮ ರಂಗಾ ಬಂದ ಭಂಗಿಸಿ ಕಾಳಿಯ
ಹಾಡಿದವರ ಹೆಸರು :ರಾಘವೇಂದ್ರ ಎಂ.
ರಾಗ :ಆರಭಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ