ಡಾ. ಎಸ್.ವಿ. ಪ್ರಭಾವತಿ

೨೫-೭-೧೯೫೦ ಪ್ರಖ್ಯಾತ ಸ್ತ್ರೀವಾದಿ, ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ರತ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸಹೊಳಲು, ಹೈಸ್ಕೂಲಿಗೆ ಸೇರಿದ್ದು ಮಂಡ್ಯದಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಮತ್ತು ಮಾನಸ ಗಂಗೋತ್ರಿಯಲ್ಲಿ ಗಳಿಸಿದ ಎಂ.ಎ. ಪದವಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭ. ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ಬಹುಜನ ಕನ್ನಡಿಗರು, ಕನ್ನಡದ ಮನೆಯಿಂದ ಹಾಗೂ ಉಷಾಕಿರಣ ಪತ್ರಿಕೆಗಳಿಗೆ ಸ್ತ್ರೀವಾದಿ ಲೇಖನಗಳ ಅಂಕಣಗಾರ್ತಿ. ಹಲವಾರು ಕಾದಂಬರಿ, ಕವನ ಸಂಕಲನ, ಸಂಶೋಧನಾ ಕೃತಿಗಳು ಪ್ರಕಟಿತ. ಪ್ರಕಟಿತ ಕೃತಿಗಳು. ಕವನ ಸಂಕಲನಗಳು-ಮಳೆ ನಿಂತ ಮೇಲಿನ ಮರ, ಉಳಿದದ್ದು ಆಕಾಶ, ಭೂಮಿ. ಕಾದಂಬರಿಗಳು-ದ್ರೌಪದಿ, ಕುಂತಿ, ಅಹಲ್ಯಾ, ಯಶೋಧರಾ, ಸೀತಾ, ಶಕುಂತಲಾ. ಸಂಶೋಧನೆ/ಪ್ರಬಂಧ-ಕನ್ನಡ ಸಾಹಿತ್ಯದಲ್ಲಿ ದ್ರೌಪದಿ, ದ್ರೌಪದಿ ಒಂದು ಅಧ್ಯಯನ, ಸ್ತ್ರೀವಾದದ ಪ್ರಸ್ತುತತೆ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕನ್ನಡ ರಾಮಾಯಣಗಳು, ಹೊರಳುನೋಟ, ಜಾಗತೀಕರಣ ಮತ್ತು ಮಹಿಳೆ, ಸಮನ್ವಯ, ಚಿತ್ತ-ಭಿತ್ತಿ. ಸುಮಾರು ೨೦ಕ್ಕೂ ಹೆಚ್ಚು ಕೃತಿ ಪ್ರಕಟ. ಸಂದ ಗೌರವ ಪ್ರಶಸ್ತಿಗಳು-‘ಭೂಮಿ’ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ, ‘ದ್ರೌಪದಿ’ ಕಾದಂಬರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ‘ಯಶೋಧರಾ’ ಕಾದಂಬರಿಗೆ ಗೀತಾದೇಸಾಯಿ ದತ್ತಿನಿ ಪ್ರಶಸ್ತಿ, ‘ಸ್ತ್ರೀವಾದದ ಪ್ರಸ್ತುತತೆ’ ಪ್ರಬಂಧ ಸಂಕಲನಕ್ಕೆ ಕಾವ್ಯನಂದ ಪುರಸ್ಕಾರ, ‘ಸಮನ್ವಯ’ ವಿಮರ್ಶಾ ಕೃತಿಗೆ ಗೋಕಾಕ್ ವಿಮರ್ಶಾ ಪ್ರಶಸ್ತಿ ಮುಂತಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿರೂಪಾಕ್ಷಯ್ಯ. ಎನ್. – ೧೯೩೧ ನಾಗರಾಜ ಆರ್.ಜಿ. ಹಳ್ಳಿ – ೧೯೫೭ ಮೋಹನ ಕುಂಟಾರ್ – ೧೯೬೩

ಮುದವೀಡು ಕೃಷ್ಣರಾಯರು

೨೪-೭-೧೮೭೪ ೭-೯-೧೯೪೭ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿ ಪ್ರಮುಖರಾದ ರಂಗಭೂಮಿಯ ನಟ, ಪತ್ರಿಕೋದ್ಯಮಿ, ಲೇಖಕರಾಗಿದ್ದ ಕೃಷ್ಣರಾಯರು ಹುಟ್ಟಿದ್ದು ಬಾಗಲಕೋಟೆಯಲ್ಲಿ. ಮುದವೀಡು ಆಂಧ್ರಪ್ರದೇಶಕ್ಕೆ ಸೇರಿದ ಗ್ರಾಮದಿಂದ ಇವರ ಹಿರಿಯರು ಬಂದಿದ್ದರಿಂದ ಮುದವೀಡು ವಂಶಕ್ಕೆ ಬಂದ ಹೆಸರು. ತಂದೆ ಹನುಮಂತರಾವ್, ತಾಯಿ ಗಂಗಾಬಾಯಿ. ಚಿಕ್ಕಂದಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡದ್ದರಿಂದ ಬೆಳೆದದ್ದು ಚಿಕ್ಕಮ್ಮನ ಆಶ್ರಯದಲ್ಲಿ. ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಮೆಟ್ರಿಕ್‌ವರೆಗೆ ಓದಿದ್ದು ಧಾರವಾಡಲ್ಲಿ. ಭಾರತದ ಸ್ವಾತಂತ್ರ್ಯ ಆಂದೋಲನದಿಂದ ಪ್ರಭಾವಿತರಾಗಿ ವ್ಯಾಸಂಗವನ್ನು ಮುಂದುವರೆಸಲಾಗದೆ ಚಳವಳಿಯಲ್ಲಿ ಭಾಗಿ. ಲೋಕಮಾನ್ಯ ಟಿಳಕರ ಅನುಯಾಯಿಯಾಗಿ ಗಣೇಶೋತ್ಸವದ ಕಾರ‍್ಯಕರ್ತ. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಸಕ್ರಿಯ ಕಾರ‍್ಯಕರ್ತರಾಗಿ ದುಡಿದರು. ಪಾನನಿರೋಧ ಚವಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ೨ ವರ್ಷ ಶಿಕ್ಷೆ. ಭಾಷಣ, ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದ್ದಕ್ಕೆ ಮತ್ತೆರಡು ವರ್ಷ ಸ್ಥಾನಬದ್ಧತೆ. ಉತ್ತಮ ವಾಗ್ಮಿಯಾಗಿದ್ದ ಕೃಷ್ಣರಾಯರದು ಸಿಂಹ ಗರ್ಜನೆ. ತತ್‌ಕ್ಷಣದ ಅನುವಾದಕ್ಕೆ ಎತ್ತಿದ ಕೈ. ನೆಹರು, ರಾಜಾಜಿ, ಪಟ್ಟಾಭಿ ಸೀತಾರಾಮಯ್ಯ ಮುಂತಾದ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಬಂದಾಗ, ಭಾಷಣಗಳ ಅನುವಾದಕ್ಕಾಗಿ ಕೃಷ್ಣರಾಯರನ್ನು ಕರೆದೊಯ್ಯುತ್ತಿದ್ದರು. ಹುಬ್ಬಳ್ಳಿಯ ಸಭೆಯಲ್ಲಿ ರಾಜಾಜಿಯವರು. ಮೆನ್, ಮನಿ ಅಂಡ್ ಮ್ಯೂಸಿಷನ್ ಎಂದು ಹೇಳಿದಾಗ, ಮನುಷ್ಯ, ಮಾಲಕ್ಷ್ಮಿ, ಮಮ್ಮು-ಮದ್ದು ಎಂದು ಅನುವಾದಿಸಿ ರಾಜಾಜಿಯವರಿಂದ ಸೈ ಎನಿಸಿಕೊಂಡರು. ಕನ್ನಡ ಆಂದೋಲನವನ್ನು ಎಳೆವಯಸ್ಸಿನಲ್ಲೇ ಪ್ರಾರಂಭಿಸಿದರು. ಮರಾಠಿ ಪ್ರಾಬಲ್ಯವಿದ್ದ ಕರ್ನಾಟಕದಲ್ಲಿ ತಮ್ಮ ಬರಹ, ಭಾಷಣಗಳ ಮೂಲಕ ಮೂಡಿಸಿದ ಜಾಗೃತಿ. ತರುಣರಿಗೆ ತುಂಬಿದ ಚೈತನ್ಯ. ಏಕೀಕರಣಕ್ಕಾಗಿ ದುಡಿಮೆ. ಪತ್ರಿಕೋದ್ಯಮ ಆಸಕ್ತ ಕ್ಷೇತ್ರ. ಕರ್ನಾಟಕ ವೃತ್ತ, ಧನಂಜಯ ಪತ್ರಿಕೆಯನ್ನು ಕಾಲು ಶತಮಾನ ನಡೆಸಿದ ದಾಖಲೆ. ಸ್ವಾತಂತ್ರ್ಯ, ಏಕೀಕರಣದ ಪ್ರತಿಪಾದನೆಯ ಗಡುಸಾದ ಗದ್ಯ ಶೈಲಿ. ಬರೆದ ಅಗ್ರ ಲೇಖನಗಳು. ಕರ್ನಾಟಕದ ‘ಗಂಡುಗಲಿ’ ಬಿರುದು. ರಂಗಭೂಮಿಯಲ್ಲೂ ಆಸಕ್ತಿ. ೧೯೦೭ರಲ್ಲಿ ‘ಭಾರತ ಕಲೋತ್ತೇಜಕ ನಾಟಕ ಮಂಡಲಿ’ ಸ್ಥಾಪನೆ-‘ಪ್ರೇಮಭಂಗ’ ಬರೆದು ಆಡಿಸಿದ ನಾಟಕ. ನಾಟ್ಯ ವಿಲಾಸಿಯಾಗಿ ಅನೇಕ ನಾಟಕಗಳಲ್ಲಿ. ಚಿರಂಜೀವಿ ಎಂಬ ವಾಕ್ಚಿತ್ರದಲ್ಲಿ, ಚಿತ್ರಗುಪ್ತ ಭೂಮಿಕೆಯಲ್ಲಿ ಪಾತ್ರಧಾರಿ. ಒಳ್ಳೆಯ ಕಾದಂಬರಿಕಾರರಾಗಿದ್ದ ಕೃಷ್ಣರಾಯರು ರಚಿಸಿದ್ದು ಚಿತ್ತೂರು ಮುತ್ತಿಗೆ ಎಂಬ ಕಾದಂಬರಿ. ಅನುವಾದಿತ ನಾಟಕ-ವಿಕ್ರಮ ಶಶಿಕಲಾ, ಸುಭದ್ರಾ, ರಾಮರಾಜವಿಯೋಗ ಮುಂತಾದುವು. ಪ್ರೇಮಭಂಗ ಸ್ವತಂತ್ರ ನಾಟಕ. ಹಲವಾರು ಕವನಗಳ ರಚನೆ. ೧೯೩೯ರಲ್ಲಿ ಬೆಳಗಾವಿಯಲ್ಲಿ ನಡೆದ ೨೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕನ್ನಡನಾಡು ಗೌರವಿಸಿತು.   ಇದೇ ದಿನ ಹುಟ್ಟಿದ ಸಾಹಿತಿ : ಗಣೇಶ್ ಕೊಡಗು – ೧೯೫೨

ಡಾ. ಪದ್ಮಾಮೂರ್ತಿ

೨೪.೭.೧೯೩೨ ಮ್ಯೂಸಿಕ್‌ ಸೈಕಾಲಜಿಯಲ್ಲಿ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್‌ ಪಡೆದಿರುವ ಪದ್ಮಾಮೂರ್ತಿಯವರು ಹುಟ್ಟಿದ್ದು ಮೈಸೂರು. ಪತಿ ಪಿಟೀಲು ವಿದ್ವಾಂಸರಾದ ಟಿ.ಎಸ್‌. ಮೂರ್ತಿ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಅಭಿರುಚಿ. ಮೈಸೂರು ವಾಸುದೇವಾಚಾರ್ಯರು, ಟಿ ಚೌಡಯ್ಯ, ಟಿ. ಪುಟ್ಟಸ್ವಾಮಯ್ಯ, ಶೆಲ್ವಪುಳ್ಳೆ ಅಯ್ಯಂಗಾರ್, ತಿಟ್ಟೆ ಕೃಷ್ಣ ಅಯ್ಯಂಗಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮುಂತಾದವರಿಂದ ಸಂಗೀತ ಗಾಯನ, ಎಚ್‌. ಎಸ್‌. ಕೃಷ್ಣಮೂರ್ತಿ, ಆರ್. ಎಸ್‌. ಕೇಶವಮೂರ್ತಿ ಇವರಿಂದ ಪಡೆದ ವೀಣಾವಾದನ ಶಿಕ್ಷಣ. ಸೈಕಾಲಜಿ ಆಫ್‌ ಮ್ಯೂಸಿಕ್‌ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್‌ ಪದವಿ. ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿ, ಮದರಾಸು ಮ್ಯೂಸಿಕ್‌ ಅಕಾಡಮಿಯ ತಜ್ಞರ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ವಾಗ್ಗೇಯಕಾರರಾಗಿ ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ ೨ ಭಾಗಗಳಲ್ಲಿ ಪ್ರಕಟಿತ. ಪ್ರಮುಖ ಪತ್ರಿಕೆಗಳಿಗೆ ಸಂಗೀತದ ಬಗ್ಗೆ ಬರೆದ ಹಲವಾರು ಲೇಖನಗಳು. ರಾಜ್ಯದ ಹಲವಾರು ಕಡೆ, ಹೊರರಾಜ್ಯಗಳಲ್ಲಿ ಕಚೇರಿ ನಡೆಸಿದ ಕೀರ್ತಿ ವಿದೇಶಗಳಲ್ಲಿ ನೀಡಿದ ಪ್ರದರ್ಶನ, ಪ್ರಾತ್ಯಕ್ಷಿಕೆ, ಗಾಯನ, ವೀಣಾವಾದನದ ಕಚೇರಿ. ಹಲವಾರು ಗ್ರಾಮಫೋನ್‌ ರೆಕಾರ್ಡ್‌‌ಗಳ ಬಿಡುಗಡೆ. ಮದರಾಸು ಪಾರ್ಥಸಾರಥಿ ಸಭಾ, ಮ್ಯೂಸಿಕ್‌ ಅಕಾಡೆಮಿಯಿಂದ ವಿದ್ಯಾರತ್ನ ಪ್ರಶಸ್ತಿ. ಗಾಯನ ಸಮಾಜ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ. ಇದೀಗ ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಮ್ಯೂಸಿಕ್‌ ಥೆರಪಿಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿ.   ಇದೇ ದಿನ ಹುಟ್ಟಿದ ಕಲಾವಿದೆ  ವೃಂದಾ ಮೆಹತಾ – ೧೯೭೩

* * *

ಮುದ್ದಣ್ಣ ಶಿರಹಟ್ಟಿ

೨೩.೭.೧೯೬೦ ರಂಗದ ಮೇಲೆ ಕಾಣಿಸಿಕೊಳ್ಳುವ ನಟರಷ್ಟೇ ರಂಗಭೂಮಿಯ ನೇಪಥ್ಯದಲ್ಲಿ ದುಡಿಯುವವರಲ್ಲಿ ರಂಗವಿನ್ಯಾಸಕಾರರಾಗಿ, ಬೆಳಕು ಸಂಯೋಜನೆ ತಜ್ಞರಾಗಿ ಪ್ರಮುಖರಾಗಿರುವ ಮುದ್ದಣ ಹುಟ್ಟಿದ್ದು ಹಾವೇರಿಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿ, ತಂದೆ ವೀರಪ್ಪ ಶಿರಹಟ್ಟಿ, ತಾಯಿ ಸುನಂದಮ್ಮ. ಓದಿಗಿಂತ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ರಂಗತಜ್ಞರಾದ ಪ್ರಸನ್ನ, ವಿ. ರಾಮಮೂರ್ತಿ, ಸಿಜಿಕೆ, ಪದ್ದಣ್ಣ, ಕಪ್ಪಣ್ಣ, ಆರ್. ನಾಗೇಶ್‌, ಶಂಕರನಾಗ್‌, ಪರೇಶ್‌ ಕುಮಾರ್, ಚಂದ್ರಕುಮಾರ್ ಸಿಂಗ್‌ ರೊಡನೆ ತರಬೇತು ಪಡೆದು ಕಲಿತಿದ್ದೇ ಜಾಸ್ತಿ. ಸಿಕ್ಕು, ಟಿಂಗರ ಬುಡ್ಡಣ್ಣ, ತಾಯಿ,  ಸಂಕ್ರಾಂತಿ, ಹಿಟ್ಟಿನ ಹುಂಜ, ಹುಚ್ಚು ಕುದುರೆ, ಶೋಕಚಕ್ರ, ಹೀಗೆ ಸುಮಾರು ೨೦೦ ಕ್ಕೂ ಹೆಚ್ಚು ನಾಟಕಗಳಿಗೆ ರಂಗವಿನ್ಯಾಸ, ಬೆಳಕು ಸಂಯೋಜನೆ ಹೊಣೆಗಾರಿಕೆ. ಕರ್ನಾಟಕ ನಾಟಕ ಅಕಾಡಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಮಧುರೆಯ ನಾಟಕೋತ್ಸವ, ಶಿವಮೊಗ್ಗದ ಕುವೆಂಪು ನಾಟಕೋತ್ಸವ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮಗಳು, ಗಿರೀಶ ಕಾರ್ನಾಡರ ನಾಟಕೋತ್ಸವ, ಮುಂತಾದ ನಾಟಕೋತ್ಸವಗಳಿಗೆ, ಸಾಂಸ್ಕೃತಿಕ ಉತ್ಸವಗಳಿಗೆ ಬೆಳಕು ಸಂಯೋಜನೆಯ ಜವಾಬ್ದಾರಿ. ಚಲನಚಿತ್ರ, ದೂರದರ್ಶದ ಧಾರಾವಾಹಿಗಳಾದ ಸಾವಿತ್ರಿ (ಟಿ.ಎಸ್‌.ರಂಗ), ಅರಿವು (ಕಟ್ಟೆರಾಮಚಂದ್ರ) ಬಸವಣ್ಣ (ಪ್ರಸನ್ನರ ಹಿಂದಿ ಸೀರಿಯಲ್‌) ಅವಲೋಕನ (ಶ್ರೀನಿವಾಸ ತಾವರೆಗೇರಿ) ಮುಂತಾದವುಗಳ ಸಂಪನ್ಮೂಲ ವ್ಯಕ್ತಿ.  ಇದೀಗ ರಂಗಶಂಕರದ ತಾಂತ್ರಿಕ ನಿರ್ದೇಶಕರು. ಡಾ. ರಾಜ್‌ ನಾಟಕೋತ್ಸವದಲ್ಲಿ ಹಿಟ್ಟಿನ ಹುಂಜ ನಾಟಕಕ್ಕೆ, ಅವಂತರ ಕಾಲೇಜು ನಾಟಕ ಸ್ಪರ್ಧೆಯ ಸುಲ್ತಾನ್‌ ಟಿಪ್ಪೂ , ಉಡುಪಿ ನಾಟಕೋತ್ಸವದ ಗುಣಮುಖ, ನಾಟಕಗಳಿಗೆ ರಂಗ ವಿನ್ಯಾಸ, ಅತ್ಯುತ್ತಮ ಬೆಳಕು ಸಂಯೋಜನೆಯ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ನಾಗೇಂದ್ರಪ್ಪ ಎಂ.ವಿ. – ೧೯೨೩ ಬಾಲಕೃಷ್ಣ ತಂತ್ರಿ – ೧೯೫೧ ನರಸಿಂಹಮೂರ್ತಿ. ಜೆ – ೧೯೬೧ ಲಕ್ಷ್ಮೀಪತಿ ಜೆ – ೧೯೭೩

* * *

ಶಾಂತಿನಾಥ ದೇಸಾಯಿ

೨೨-೭-೧೯೨೯ ೨೬-೩-೧೯೯೮ ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸ ಧಾರವಾಡ. ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ. ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ. ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ ೧೯೮೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆ. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿಯೂ ನಿರ್ವಹಿಸಿದ ಜವಾಬ್ದಾರಿ. ಇಂಗ್ಲೆಂಡಿಗೆ ಹಡಗಿನಲ್ಲಿ ಪ್ರಯಾಣ ಬೆಳೆಸಿದಾಗ ಬರೆದ ಕಥೆ ಕ್ಷಿತಿಜ, ಜನಪ್ರಿಯತೆ ತಂದುಕೊಟ್ಟ ಕಥೆ. ಐವತ್ತಕ್ಕೂ ಹೆಚ್ಚು ಕಥೆ ಪ್ರಕಟಿತ. ಮಂಜುಗಡ್ಡೆ, ಕ್ಷಿತಿಜ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ, ಕೆಲವು ಆಯ್ದ ಕಥೆಗಳು ಕಥಾಸಂಕಲನಗಳು. ಲಘುವಾದದ್ದೆಂದು ಎಣಿಸುವ ವ್ಯಕ್ತಿಯ ಮನಸ್ಸಿನ ಅಂತರಾಳದ ಹಲವು ಪ್ರಕ್ರಿಯೆಗಳನ್ನು ದಾಖಲಿಸುವಲ್ಲಿನ ವಿಶೇಷತೆಯ ಇವರ ಸಣ್ಣ ಕಥೆಗಳಲ್ಲಿನ ಕೇಂದ್ರೀಯ ವಸ್ತುಗಳು. ಕಾದಂಬರಿಗಳು-ಮುಕ್ತಿ, ವಿಕ್ಷೇಪ, ಸೃಷ್ಟಿ, ಬೀಜ, ಸಂಬಂಧ, ಅಂತರಾಳ, ಓಂಣಮೋ ಪ್ರಸಿದ್ಧ ಕಾದಂಬರಿಗಳು. ಏಕತಾನತೆ ಹೊಂದಿದ್ದ ಕಾಲದಲ್ಲಿ ಮೂಲಭೂತ ಅರ್ಥ-ಉದ್ದೇಶಗಳನ್ನು ಪರಿಶೋಸುವ ಕಾದಂಬರಿಗಳನ್ನು ಬರೆದ ಕೀರ್ತಿ. ಮುಕ್ತಿ ಭಾರತೀಯ ಎಲ್ಲ ಭಾಷೆಗೂ ಅನುವಾದಗೊಂಡ ಕೃತಿ. ವಿಮರ್ಶಾಕೃತಿಗಳು-ಸಾಹಿತ್ಯ ಮತ್ತು ಭಾಷೆ, ನವ್ಯ ಸಾಹಿತ್ಯ ದರ್ಶನ, ಗಂಗಾಧರ ಚಿತ್ತಾಲರ ಕಾವ್ಯ ಸೃಷ್ಟಿ, ಕನ್ನಡ ಕಾದಂಬರಿ ನಡೆದು ಬಂದ ರೀತಿ, ಎಂ.ಎನ್.ರಾಯ್. ಕನ್ನಡ ಕೃತಿಗಳಲ್ಲದೆ ಇಂಗ್ಲಿಷ್‌ನಲ್ಲೂ ಕೃತಿ ರಚನೆ. ಕೊಲೊನಿಯಲ್ ಕಾನ್ಷಿಯಸ್‌ನೆಸ್ ಇನ್ ಕಾಮನ್ ವೆಲ್ತ್ ಲಿಟರೇಚರ್, ಕ್ರಿಟಿಕಲ್ ಎಸ್ಸೇಸ್ ಆನ್ ಇಂಡಿಯನ್ ರೈಟಿಂಗ್ಸ್ ಇನ್ ಇಂಗ್ಲಿಷ್, ಎಕ್ಸ್‌ಪಿರಿಮೆಂಟೇಷನ್ ವಿತ್ ಲ್ಯಾಂಗ್ವೇಜ್ ಇನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್, ದ ಇಮೇಜ್ ಆಫ್ ಇಂಡಿಯ ಇನ್ ವೆಸ್ಟ್ರನ್ ಕ್ರಿಯೇಟಿವ್ ರೈಟಿಂಗ್, ಇಂಡಿಯನ್ ಪೊಯಿಟ್ರಿ ಟುಡೆ ಅಲ್ಲದೆ ಪಿ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ. ನಾಟಕ-ಹಿಯರ್ ಕಮ್ಸ್ ರೆವಲ್ಯೂಷನ್, ಅನಂತಮೂರ್ತಿಯವರ ಅವಸ್ಥೆ ಕಾದಂಬರಿ ಇಂಗ್ಲಿಷ್‌ಗೆ. ಸಂದ ಪ್ರಶಸ್ತಿ ಗೌರವಗಳಲ್ಲಿ ಮುಖ್ಯವಾದುವು-ನವ್ಯ ಸಾಹಿತ್ಯ ದರ್ಶನ ಕೃತಿಗೆ ವರ್ಧಮಾನ ಪ್ರಶಸ್ತಿ, ರಾಕ್ಷಸ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಓಂಣಮೋ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ಟಿ. ಗಟ್ಟಿ – ೧೯೩೮ ಕುಮುದಾ ಪುರುಷೋತ್ತಮ್ – ೧೯೪೩ ಶಂಕರ ಬೈಚಬಾಳ – ೧೯೬೬ ನಾರಾಯಣ ಕಂನಾಡಿಗ – ೧೯೬೬ ಅನುರಾಧಾ ಕುಲಕರ್ಣಿ – ೧೯೫೩

ಭದ್ರಗಿರಿ ಕೇಶವದಾಸರು

೨೨..೧೯೩೪ .೧೨.೧೯೯೭ ಕರ್ನಾಟಕ, ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಪಡೆದು, ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೇಶವದಾಸರು ಹುಟ್ಟಿದ್ದು ಭದ್ರಗಿರಿಯಲ್ಲಿ. ತಂದೆ ವೆಂಕಟರಮಣಪೈ, ತಾಯಿ ರುಕ್ಮಿಣೀಬಾಯಿ. ಸಂಜೆ ವೇಳೆ ಮಕ್ಕಳನ್ನು ಕೂಡಿಸಿಕೊಂಡು ಹೇಳಿಕೊಡುತ್ತಿದ್ದ ಧಾರ್ಮಿಕ ಕಥೆಗಳು, ಭಜನೆಗಳಿಂದ ಪ್ರಭಾವಿತರಾಗಿ ರೂಢಿಸಿಕೊಂಡ ಕೀರ್ತನ ಕಲೆ. ಓದಿದ್ದು ಕಾನೂನು ಪದವಿಯಾದರೂ ನ್ಯಾಯಕ್ಕಾಗಿ ಅನೃತ ನುಡಿಯುವುದಕ್ಕಿಂತ ತತ್ತ್ವವಾದವೇ ಸರಿ ಎನಿಸಿ ಮಾಡಿಕೊಂಡ ಆಯ್ಕೆ. ಶಾಲೆಯಲ್ಲಿದ್ದಾಗಲೇ ಇಂದ್ರಸೇನರಾಜನ ಕಥೆಯನ್ನು ಹರಿಕಥೆಯ ರೂಪದಲ್ಲಿ ನಿರೂಪಿಸಿ ಪಡೆದ ಕೀರ್ತಿ. ಪದವಿಗಾಗಿ ಓದುತ್ತಿದ್ದಾಗಲೇ ಬೇಸಿಗೆಯ ರಜೆಯಲ್ಲಿ ಕಥಾ ಕಾಲಕ್ಷೇಪದಿಂದ ಹಣ ಸಂಗ್ರಹಿಸಲು ಮೈಸೂರು, ಬೆಂಗಳೂರು, ಕೊಡಗು ಮುಂತಾದೆಡೆ ಮಾಡಿದ ಕಥಾ ಕೀರ್ತನ ಕಾರ್ಯಕ್ರಮಗಳು. ಬೆಂಗಳೂರಿನಲ್ಲೂ ನೀಡಿದ ಕಾರ್ಯಕ್ರಮಗಳು. ದಾನಿಗಳು ನೀಡಿದ ಸ್ಥಳದಲ್ಲಿ ರಾಜಾಜಿನಗರದ ಐದನೆಯ ಬ್ಲಾಕಿನಲ್ಲಿ ದಾಸಾಶ್ರಮ ಸ್ಥಾಪನೆ. ಪಾಂಡುರಂಗ, ರುಕ್ಮಾಯಿ, ಈಶ್ವರ, ಸುಬ್ರಹ್ಮಣ್ಯ, ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ. ೧೯೬೪ ರಲ್ಲಿ ಕರ್ನಾಟಕ ಕೀರ್ತನಕಾರರನ್ನೆಲ್ಲಾ ಸಂಘಟಿಸಿ ನಡೆಸಿದ ಕರ್ನಾಟಕ ಕೀರ್ತನಕಾರರ ಸಮ್ಮೇಳನ. ಶ್ರೀಮನ್‌ ಮಹಾರಾಜರಿಂದ ಉದ್ಘಾಟನೆ. ೧೯೬೬ ರಲ್ಲಿ ಪ್ರಥಮ ವಿಶ್ವಪರ್ಯಟನೆ. ೩೮ ಬಾರಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ. ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ. ೩೨ ಅಡಿಗಳ ಭವ್ಯ ವಿಜಯ ವಿಠಲ ಮೂರ್ತಿ ಸ್ಥಾಪನೆ. ಭಾರತೀಯ ಸಂಸ್ಕೃತಿಯ ಪ್ರೇರಕಶಕ್ತಿಯಾಗಿ, ಅಧ್ಯಾತ್ಮಿಕ ವಿದ್ಯಾಲಯವಾಗಿ ಪಡೆದ ಕೀರ್ತಿ. ಹಲವಾರು ಗ್ರಂಥಗಳ ರಚನೆ. ಕಥಾ ಪ್ರಸಂಗಗಳ ನೂರಾರು ಧ್ವನಿಸುರುಳಿಗಳ ಬಿಡುಗಡೆ. ಹರಿಕಥಾ ಕಲಾವಿಚಕ್ಷಣ, ಕೀರ್ತನ ಕೇಸರಿ, ಕೀರ್ತನನಾಟಕ ವಿಶಾರದ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ನಂದ ಎಂ. ಪಾಟೀಲ – ೧೯೬೩ ಲಕ್ಷ್ಮೀ ಟಿ.ಎಸ್‌ – ೧೯೬೬ ಗವಾನಿ. ಪಿ.ಬಿ – ೧೯೬೭ ವಿರೂಪಾಕ್ಷಯ್ಯ ವಂದಲಿ – ೧೯೭೦

* * *

ನಾ.ಸು. ಭರತನಹಳ್ಳಿ

೨೨..೧೯೩೭ ವೃತ್ತಿಯಿಂದ ಕೃಷಿಕರಾದರೂ ಪ್ರವೃತ್ತಿಯಿಂದ ಬೌದ್ಧಿಕ ಕೃಷಿಕರಾಗಿ ಶಿಕ್ಷಕರಾಗಿ, ಸಾಹಿತಿಯಾಗಿ, ಪರ್ತಕರ್ತರಾಗಿರುವ ನಾರಾಯಣ ಹೆಗಡೆಯವರು (ನಾ.ಸು. ಭರತನಹಳ್ಳಿ) ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿ ಎಂಬ ಪುಟ್ಟಹಳ್ಳಿಯಲ್ಲಿ ೧೯೩೭ ರ ಜುಲೈ ೨೨ ರಂದು. ತಂದೆ ಸುಬ್ರಾಯ ಹೆಗಡೆಯವರು ಪುರಾಣ, ಪ್ರವಚನ,  ಯಕ್ಷಗಾನ, ತಾಳಮದ್ದಲೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕರು.

ಕೆ.ಟಿ. ಗಟ್ಟಿ

೨೨..೧೯೩೮ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಹುಟ್ಟಿದ್ದು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ೧೯೩೮ ರ ಜುಲೈ ೨೨ ರಂದು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು.

ಪ್ರೊ. ಎಂ.ಎಚ್. ಕೃಷ್ಣಯ್ಯ

೨೧-೭-೧೯೩೭ ಸಾಹಿತ್ಯ ವಿಮರ್ಶಕ, ಕಲಾಪ್ರೇಮಿ, ಸಂಗೀತ ಪ್ರಿಯರಾದ ಕೃಷ್ಣಯ್ಯನವರು ಹುಟ್ಟಿದ್ದು ಮೈಸೂರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ವಿದ್ಯಾಭ್ಯಾಸ ಮೈಸೂರಿನಲ್ಲೇ. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿ. ಪದವಿ ಗಳಿಸಿದ ನಂತರ ಉದ್ಯೋಗಕ್ಕೆ ಸೇರಿದ್ದು ಅಧ್ಯಾಪಕರಾಗಿ. ಬೆಂಗಳೂರು, ಕೋಲಾರ, ಮಂಗಳೂರು, ತುಮಕೂರು, ಮಂಡ್ಯ ಮುಂತಾದೆಡೆ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಬೋಧನಾ ಕಾರ‍್ಯ ನಿರ್ವಹಣೆ. ಚನ್ನಪಟ್ಟಣದ ಕುವೆಂಪು ಕಾಲೇಜಿನ ಪ್ರಿನ್ಸಿಪಾಲರಾಗಿ, ಮಾಗಡಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಕೆಲಕಾಲ ಸಲ್ಲಿಸಿದ ಸೇವೆ. ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರಾಗಿ ನಿವೃತ್ತಿ. ಇದರ ಜೊತೆಗೆ ನಿಭಾಯಿಸಿದ ಹಲವಾರು ಜವಾಬ್ದಾರಿಗಳು. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ದೆಹಲಿಯ ಸಂಸ್ಕೃತಿ ಇಲಾಖೆಯ ಸ್ಕಾಲರ್‌ಷಿಪ್/ಫೆಲೊಷಿಪ್ ಆಯ್ಕೆ ಸಮಿತಿ ಸದಸ್ಯರಾಗಿ, ವಿಶ್ವವಿದ್ಯಾಲಯದ ಪಠ್ಯಗ್ರಂಥ ಸಮಿತಿಯಲ್ಲಿ ಪಿ.ಯು.ಸಿ. ಪಠ್ಯ ಸಮಿತಿಯಲ್ಲಿ ಸಲ್ಲಿಸಿದ ಸೇವೆ. ಕರ್ನಾಟಕ ಕಲಾ ವಾರ್ತೆ, ಕರ್ನಾಟಕ ಲಲಿತ ಅಕಾಡಮಿಯ ಪತ್ರಿಕೆಗಳಿಗೆ ಗೌರವ ಸಂಪಾದಕರಾಗಿ, ಕಲಾ ಪಂಥಮಾಲೆ, ಎಕ್ಸ್‌ಪ್ರೆಷನಿಸಂ, ಇಂಪ್ರೆಷನಿಸಂ ಗ್ರಂಥಗಳಿಗೆ ಪ್ರಧಾನ ಸಂಪಾದಕರಾಗಿ ಸಲ್ಲಿಸಿದ ಅಪಾರ ಸೇವೆ. ಪ್ರಭಾವಶಾಲಿ ಅಧ್ಯಾಪಕರಾದ ಕೃಷ್ಣಯ್ಯನವರು ಶಿಸ್ತಿನ ಪ್ರವಚನಕಾರರು. ಸಿದ್ಧತೆಯಿಲ್ಲದೆ ತರಗತಿಗೆ ಹೋದವರಲ್ಲ. ವ್ಯಾಖ್ಯಾನಿಸುವ ರೀತಿ, ಚಿಂತನೆಗೆ ಹಚ್ಚುವ ಕ್ರಮದಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಬರೆದದ್ದು ಕಡಿಮೆ. ಶಿಸ್ತಿನ ಅಧ್ಯಯನ, ಕಲಾವಿಮರ್ಶೆ, ಸಾಹಿತ್ಯ ವಿಮರ್ಶೆಯ ಸಿಂಹಪಾಲು. ಕಲಾಲೋಕದ ದಿಗ್ಗಜಗಳ ರಚನೆಯ ತಲಸ್ಪರ್ಶಿ ಇತಿಹಾಸದ ಅಜಂತ ಎಲ್ಲೋರ, ರೂಪಶಿಲ್ಪಿ ಬಸವಯ್ಯ, ಎಚ್.ಎನ್. ಕುಲಕರ್ಣಿ ಮುಂತಾದವರು ಬಗ್ಗೆ ರಚಿಸಿದ ಕೃತಿಗಳು. ಕಲಾವಿಮರ್ಶಾ ಕೃತಿಗಳು-ಶೃಂಗಾರ ಲಹರಿ, ಎಂ.ಆರ್. ಹಡಪದ್. ಜೀವಚರಿತ್ರೆ-‘ತ್ಯಾಗಯೋಗಿ’ ಕನಕಪುರದ ಎಸ್.ಕರಿಯಪ್ಪ, ಎಚ್.ಕೆ. ವೀರಣ್ಣಗೌಡರು. ಸಾಹಿತ್ಯವಿಮರ್ಶೆ-ಕಾವ್ಯಭಾಷೆ, ಸಾಹಿತ್ಯ ಕಲೆ. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ನಾಟಕ ಮತ್ತು ಸೌಂದರ‍್ಯಪ್ರಜ್ಞೆ, ನಿಟ್ಟೂರು ನೂರರ ನೆನಪು ಮುಂತಾದ ಗ್ರಂಥಗಳು. ಸಂಪಾದಿತ-ರನ್ನನ ಅಜಿತ ಪುರಾಣ ಸಗ್ರಹ, ಬಿರಿಮೊಗ್ಗು (ಪ್ರಬಂಧ), ಹೊಳಪು-ಝಳಪು (ಕವನ), ಕಾಲು ಶತಮಾನ ಕಂಡ ಕನ್ನಡ ಪತ್ರಿಕೆಗಳು (ಪತ್ರಿಕಾ ಅಕಾಡಮಿ), ಕಲೆ ಮತ್ತು ರಸಸ್ವಾದನೆ, ಸಾಹಿತ್ಯ ಮತ್ತು ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಸಾಲುದೀಪಗಳು, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಹಳೆಯ ಗದ್ಯ ಸಾಹಿತ್ಯ, ಸುವಿದ್ಯಾ, ಬೆಂಗಳೂರಿನ ಕೆಂಪೇಗೌಡರ ವಂಶಸ್ಥರು, ಮೂರ್ತಾಮೂರ್ತ, ಕುವೆಂಪು ಸಾಹಿತ್ಯ-ಚಿತ್ರ ಸಂಪುಟ, ಬೆಂಗಳೂರು ದರ್ಶನ ಮುಂತಾದ ಮೂವತ್ತು ಕೃತಿ ಪ್ರಕಟಿತ. ಶೃಂಗಾರ ಲಹರಿಗೆ ಲಲಿತಕಲಾ ಅಕಾಡಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂದ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಸಾಹಿತಿ : ನಾ. ಸು. ಭರತನಹಳ್ಳಿ – ೧೯೩೬

ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್

೨೧..೧೯೨೧ ೨೧..೧೯೮೨ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತಕ್ಕೊಂದು ಘನತೆ ತಂದುಕೊಟ್ಟ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ರವರು ಹುಟ್ಟಿದ್ದು: ಕೇರಳದ ಪಾಲ್ಘಾಟಿನಲ್ಲಿ, ಬೆಳೆದದ್ದು ಪುತ್ತೂರು ತಾಲ್ಲೂಕಿನ ಕಾಂಚನ ಗ್ರಾಮದಲ್ಲಿ. ತಂದೆ ವೆಂಕಟರಮಣ ಅಯ್ಯರ್, ತಾಯಿ ಆನಂದಲಕ್ಷ್ಮೀ. ಸಂಗೀತಗಾರರ ಮನೆತನ, ತಾಯಿಯೇ ಮೊದಲ ಗುರು, ಸಂಗೀತದ ಉನ್ನತ ಶಿಕ್ಷಣ ಚೆಂಬೈ ವೈದ್ಯನಾಥ ಭಾಗವತರ್, ಜಿ.ಎನ್‌. ಬಾಲಸುಬ್ರಹ್ಮಣ್ಯ, ಸಿ.ಎನ್‌. ಶಾಸ್ತ್ರಿ ಮುಂತಾದವರ ಬಳಿ. ಮಂಗಳೂರಿನ ಕಾಂಚನ ಮನೆಯಲ್ಲಿ ಸಂಗೀತ ದಿಗ್ಗಜರಾದ ಎನ್‌.ವಿ. ಮೂರ್ತಿ, ಶೇಷಾಮಣಿ, ಗೋಪಿನಾಥ, ಚೆಂಬೈ, ಟಿ. ಚೌಡಯ್ಯ, ಸಿ.ಆರ್. ಮಣಿ, ಮುಂತಾದವರ ಸಮಾವೇಶ. ಸದಾ ಗಾಯನ, ಸಂಗೀತದ ಬಗ್ಗೆ ಚರ್ಚೆ. ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮೊದಲಗಾಯನ ಕಚೇರಿ. ಗುರುಗಳಾದ ಚೆಂಬೈರವರಿಂದ ದೊರೆತ ಪ್ರಶಂಸೆ. ಇವರ ಕಚೇರಿಗಳಿಗೆ ವಿದ್ವಾನ್‌ ಟಿ. ಚೌಡಯ್ಯನವರ ಪಿಟೀಲುವಾದನದ ಸಹಕಾರ ಹಲವಾರು ಬಾರಿ. ಮದರಾಸಿನಲ್ಲಿ ಉನ್ನತ ಸಂಗೀತ ಶಿಕ್ಷಣ, ಗಾಯನ ಕಚೇರಿ, ಚೆಂಬೈ, ಎಂ. ಎಸ್‌. ಸುಬ್ಬುಲಕ್ಷ್ಮೀ ಮುಂತಾದವರ ಉಪಸ್ಥಿತಿ. ಕಾಂಚನಕ್ಕೆ ಹಿಂದಿರುಗಿದ ಸಂತರ ಪ್ರಾರಂಭಿಸಿದ್ದು ಗುರುಕುಲ ಪದ್ಧತಿಯ ಸಂಗೀತಶಾಲೆ. ಇವರೊಡನೆ ಜೊತೆಗೂಡಿದವರು ಸೋದರಮಾವ ವಿದ್ವಾನ್‌ ಕೆ.ಇ. ಕೃಷ್ಣ ಅಯ್ಯರ್ ರವರಿಂದ ವಿದ್ಯಾರ್ಥಿಗಳಿಗೆ ಮೃದಂಗ ಶಿಕ್ಷಣ. ೧೯೫೩ ರಲ್ಲಿ ಸ್ಥಾಪಿಸಿದ್ದು ಯಕ್ಷಗಾನ ಕಲಾಕೇಂದ್ರ. ೧೯೫೯ರಲ್ಲಿ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಆರಂಭ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜ – ಪುರಂದರ ಆರಾಧನೆ, ಶ್ಯಾಮಶಾಸ್ತ್ರಿ ಮುಂತಾದವರ ಜನ್ಮದಿನೋತ್ಸವಗಳಲ್ಲಿ ಹಿರಿಕಿರಿಯ ಗಾಯಕರನ್ನು ಆಹ್ವಾನಿಸಿ ಏರ್ಪಡಿಸುತ್ತಿದ್ದ ಸಂಗೀತ ಕಚೇರಿಗಳು. ೧೯೬೬ ರಲ್ಲಿ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಶಾಲೆಯಿಂದ ನೂರಾರು ವಿದ್ಯಾರ್ಥಿಗಳಿಗೆ ದೊರೆತ ಸಂಗೀತ ಶಿಕ್ಷಣ. ಪ್ರಾರಂಭಿಸಿದ ಪ್ರಾಥಮಿಕ, ಪ್ರೌಢಶಾಲೆ; ದೈವಭಕ್ತರಾಗಿದ್ದು ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮ. ಸಂಗೀತ ಸಾಧಕ, ಸಾಮಾಜಿಕ ಕಾರ್ಯಕರ್ತರಿಗೆ ಹಲವಾರು ಸಂಘ. ಸಂಸ್ಥೆಗಳಿಂದ ದೊರೆತ ಸನ್ಮಾನ. ವಾದಿರಾಜ-ಕನಕದಾಸ ಸಂಗೀತೋತ್ಸವದಲ್ಲಿ ಸಂಗೀತ ರತ್ನ ಬಿರುದು.   ಇದೇ ದಿನ ಹುಟ್ಟಿದ ಕಲಾವಿದರು ಮಯಬ್ರಹ್ಮಾಚಾರ್ ಎಚ್‌. ಎಂ. – ೧೯೬೦ ಭವಾನಿ ದೇಶಕುಲಕರ್ಣಿ – ೧೯೭೧

* * *

ಡಾ. ಸ.ಜ. ನಾಗಾಲೋಟಿಮಠ

೨೦-೭-೧೯೪೦ ೨೪-೧೦-೨೦೦೬ ಜನಪ್ರಿಯ ವೈದ್ಯ, ಸಾಹಿತಿ, ಸಂಶೋಧಕ ನಾಗಾಲೋಟಿಮಠರವರು ಹುಟ್ಟಿದ್ದು ಗದಗದಲ್ಲಿ. ತಂದೆ ಜಂಬಯ್ಯ ವೀರಬಸಯ್ಯ, ತಾಯಿ ಹಂಪವ್ವ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಕಾಲೇಜಿಗೆ ಸೇರಿದ್ದು ಪಿ.ಸಿ. ಜಾಬಿನ್ ಕಾಲೇಜು. ಎಂಜನಿಯರಿಂಗ್ ಕೋರ್ಸಿಗೆ ಆಯ್ಕೆಯಾದರೂ ಆರಿಸಿಕೊಂಡದ್ದು ವೈದ್ಯಕೀಯ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿನ್ನದ ಪದಕದೊಡನೆ ಪಡೆದ ವೈದ್ಯ ಪದವಿ. ೧೯೬೯ರಲ್ಲಿ ರೋಗ ನಿದಾನ ಶಾಸ್ತ್ರದಲ್ಲಿ ಡಿ.ಸಿ.ಪಿ. ೧೯೭೦ರಲ್ಲಿ ಎಂ.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ರೋಗ ನಿದಾನ ಶಾಸ್ತ್ರದ ಉಪನ್ಯಾಸಕರಾಗಿ, ಹಲವಾರು ಕಡೆ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ನಿರ್ವಹಿಸಿದ ಹುದ್ದೆಗಳು. ಪ್ರಾಚಾರ‍್ಯರಾಗಿ ಹೊದೆಡೆಯಲ್ಲೆಲ್ಲಾ ಸ್ಥಾಪಿಸಿದ ಮ್ಯೂಸಿಯಂಗಳು. ಬೆಳಗಾವಿಯ ಜೆ.ಎನ್. ಮೆಡಿಕಲ್ ಕಾಲೇಜಿನಲ್ಲಿ  ಸ್ಥಾಪಿಸಿದ ಮ್ಯೂಸಿಯಂ ಏಷಿಯಾ ಖಂಡದಲ್ಲೆ ರೋಗ ನಿದಾನ ಶಾಸ್ತ್ರದ ಪ್ರಥಮ ಮ್ಯೂಸಿಯಂ. ವಿಜಾಪುರದ ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನಲ್ಲಿ ಅತಿದೊಡ್ಡ ದೇಹದ ಹರಳುಗಳ ಮ್ಯೂಸಿಯಂ. ಸಂದರ್ಶಕ ಪ್ರಾಧ್ಯಾಪಕರಾಗಿ ಅಮೆರಿಕಾ, ಕೆನಡಾ, ಹಾಂಗ್‌ಕಾಂಗ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಝರ್‌ಲ್ಯಾಂಡ್, ಆಸ್ಟ್ರಿಯಾ, ಲಕ್ಸೆಂಬರ್ಗ್, ಸ್ಪೇನ್‌ಗಳ ಭೇಟಿ. ಹಲವಾರು ಸಂಘ ಸಂಸ್ಥೆಗಳ ಒಡನಾಟ. ಇಂಡಿಯನ್ ಕಾಲೇಜ್ ಆಫ್ ಪೆಥಾಲಜಿ ಸಂಸ್ಥೆಯ ಕಾರ‍್ಯದರ್ಶಿ, ಅಂತಾರಾಷ್ಟ್ರೀಯ ರೋಗ ನಿದಾನ ಶಾಸ್ತ್ರಗಳ ಸಂಘದ ಕಾರ‍್ಯದರ್ಶಿ, ಹಲವಾರು ವೈದ್ಯ ನಿಯತ ಕಾಲಿಕೆಗಳ ಸಂಪಾದಕರು. ರಚಿಸಿದ ಗ್ರಂಥಗಳು ಇಂಗ್ಲಿಷ್‌ನಲ್ಲಿ ೧೪, ಕನ್ನಡದಲ್ಲಿ-ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ ಮುಂತಾದ ೪೨ ಕೃತಿಗಳು. ಅರಸಿ ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಮೊದಲಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ.ಬಿ. ಹಂಡಿ – ೧೯೨೫ ಡಿ.ಆರ್. ಬಳೂರಗಿ – ೧೯೪೩ ಬಸವರಾಜ ಸಾದರ – ೧೯೫೫ ಮಂದಾಕಿನಿ ಪುರೋಹಿತ – ೧೯೫೮ ಎಚ್.ಎಲ್. ಪುಷ್ಪ – ೧೯೬೧

ವಿ.ಜಿ. ನರೇಂದ್ರ

೨೦.೭.೧೯೪೮ ವ್ಯಂಗ್ಯ ಚಿತ್ರಕಾರರನ್ನು ಸಂಘಟನೆಯ ಮೂಲಕ ಒಂದೆಡೆ ತಂದು ವ್ಯಂಗ್ಯ ಚಿತ್ರಕಾರರಿಗೊಂದು ಗೌರವ ದೊರಕಿಸಿಕೊಟ್ಟ ನರೇಂದ್ರ ರವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗುಂಡೂರಾವ್‌, ತಾಯಿ ಪಾರ್ವತಿ ಬಾಯಿ. ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ. ಕಲೆಗಾಗಿ ರೂಪಗೊಂಡದ್ದು ವ್ಯಂಗ್ಯ ಚಿತ್ರಕಾರರಾಗಿ, ಹೈಸ್ಕೂಲಿನಲ್ಲಿದ್ದಾಗಲೇ ವ್ಯಂಗ್ಯ ಚಿತ್ರಕಾರ ಶಂಕರ್ ರವರಿಂದ ಪ್ರಭಾವಿತರಾಗಿ ರಚಿಸಿದ ಹಲವಾರು ವ್ಯಂಗ್ಯ ಚಿತ್ರಗಳು. ಅಧ್ಯಾಪಕರಿಂದ ದೊರೆತ ಪ್ರೋತ್ಸಾಹ. ಮೊಟ್ಟ ಮೊದಲ ವ್ಯಂಗ್ಯ ಚಿತ್ರ ಕರ್ಮವೀರದಲ್ಲಿ ಪ್ರಕಟಗೊಂಡಾಗ ಹೇಳತೀರದ ಸಂತೋಷ. ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ರಾಜಕೀಯ ವ್ಯಕ್ತಿಗಳ ವ್ಯಂಗ್ಯ ಚಿತ್ರ ರಚನೆ. ಪದವಿಯ ನಂತರ ಮುಂಬಯಿಗೆ ಪ್ರಯಾಣ. ದೇಶದ ಪ್ರಥಮ ಫೀಚರ್ ಸಿಂಡಿಕೇಟ್‌ ‘ರಂಗರೇಖಾ’ ಫೀಚರ್ಸ್ ನಿಂದ ಪಾಕೆಟ್‌ ಕಾರ್ಟೂನ್‌ ರಚನೆ. ಕನ್ನಡದ ಹಲವಾರು ಪತ್ರಿಕೆಗಳಲ್ಲದೆ ಇಂಗ್ಲಿಷ್‌, ಮರಾಠಿ, ಕೊಂಕಣಿ, ತೆಲುಗು ಪತ್ರಿಕೆಗಳಲ್ಲೂ ವ್ಯಂಗ್ಯಚಿತ್ರ ಪ್ರಕಟಿತ. ೧೯೭೩ ರಲ್ಲಿ ಫ್ರೀಪೆಸ್‌ ಜರ್ನಲ್‌ನಲ್ಲಿ ವ್ಯಂಗ್ಯ ಚಿತ್ರ ರಚನೆ. ಶಂಕರ್ಸ್ ವೀಕ್ಲಿಯಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಎರಡು ವರ್ಷ ಬರೆದ ಚಿತ್ರಗಳು. ೧೯೭೬ರಲ್ಲಿ ಸಂಯುಕ್ತ ಕರ್ನಾಟಕ, ೧೯೮೭ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ, ಇದೀಗಲೂ ರಾಜಕೀಯ ವಿಡಂಬನೆಯ ವ್ಯಂಗ್ಯಚಿತ್ರಗಳ ರಚನೆ. ೧೯೭೯ರಲ್ಲಿ ವ್ಯಂಗ್ಯ ಚಿತ್ರಕಾರರ ಸಂಘದ ಸ್ಥಾಪನೆ, ಅಧ್ಯಕ್ಷರ ಜವಾಬ್ದಾರಿ. ೧೯೯೭ ರಿಂದ ಮತ್ತೆ ಅಧ್ಯಕ್ಷರ ಹುದ್ದೆ. ದೇಶದ ವ್ಯಂಗ್ಯ ಚಿತ್ರಕಾರರನ್ನೆಲ್ಲಾ ಒಂದೆಡೆ ಒಗ್ಗೂಡಿಸಲು ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಘದ ಮ್ಯಾನೇಜಿಂಗ್‌ ಟ್ರಸ್ಟಿಯಾಗಿ ಕಾರ್ಯನಿರ್ವಹಣೆ. ಹಾಸ್ಯ ಬ್ರಹ್ಮ ಟ್ರಸ್ಟ್‌ ದಶಮಾನೋತ್ಸವ ಸಂದರ್ಭ, ಪತ್ರಕರ್ತರ ವೇದಿಕೆಯಿಂದ ಹೂಗಾರ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದರು ಎಂ.ಟಿ.ವಿ. ಆಚಾರ್ಯ – ೧೯೨೦ ಸಂಗಮ್ಮನ ಹುನಗುಂದ – ೧೯೪೨ ಉಮೇಶ ಹುಲಿಕುಂಟೆ – ೧೯೫೭ ಟಿ. ಎಂ. ಚಂದ್ರಶೇಖರ – ೧೯೬೨ ವೀಣಾ. ಎಸ್‌. ಮರಡೂರ – ೧೯೭೩

* * *

ತ್ರಿವಿಕ್ರಮ

೧೯-೭-೧೯೨೦ ೯-೧-೧೯೯೮ ಪ್ರಸಿದ್ಧ ಕಾದಂಬರಿಕಾರ, ಕಥೆ, ನಾಟಕಕಾರರಾದ ತ್ರಿವಿಕ್ರಮರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಕೆ.ಎಸ್. ಕೃಷ್ಣಮೂರ್ತಿಯವರು, ತಾಯಿ ಜಯಲಕ್ಷ್ಮಮ್ಮ. ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೆಂಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು ಕರ್ನಾಟಕ ಸರ್ಕಾರದ ಕಂಟ್ರೋಲರ್ ಕಚೇರಿಯಲ್ಲಿ. ನಂತರ ಕೇಂದ್ರ ಸರ್ಕಾರದ ಹುದ್ದೆಗೆ ವರ್ಗಾವಣೆ. ೧೯೭೮ರಲ್ಲಿ ನಿವೃತ್ತಿ. ಪ್ರೌಢಶಾಲೆಯಲ್ಲಿದ್ದಾಗಲೇ ಬರೆದ ಕಥೆಗಳು ಸರಸ್ವತಿ, ಸುಬೋಧ, ರಂಗಭೂಮಿ, ಜಯಕರ್ನಾಟಕ, ವಿಶ್ವಬಂಧು ಪತ್ರಿಕೆಗಳಲ್ಲಿ ಪ್ರಕಟಿತ. ಭಾವಗೀತೆಗಳನ್ನು ರಚಿಸಿ ಸ್ವರ ಸಂಯೋಜಿಸಿ ಹಾಡಿಸುವುದು ಪ್ರಿಯ ಹವ್ಯಾಸ. ಕರ್ನಾಟಕ ಸಂಗೀತ, ಲಲಿತಕಲೆಗಳ ಬಗ್ಗೆ ಅಪಾರ ವ್ಯಾಮೋಹ, ಸಂಗೀತದಿಂದ ಪಡೆದ ಪ್ರೌಢಜ್ಞಾನದಿಂದ ಸಂಗೀತ ಕೃತಿ ರಚನೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಈ ಎಲ್ಲಾ ಪ್ರಕಾರಗಳಲ್ಲೂ ಪತ್ರಿಕೆಗಳಿಗೆ ಬರೆದ ವಿಮರ್ಶೆ, ‘ಉದಯವಾಣಿ’ ಪತ್ರಿಕೆಗೆ ೧೦ ವರ್ಷ ಸಾಂಸ್ಕೃತಿಕ ವರದಿಗಾರ. ಗಮಕವಾಚನದಲ್ಲಿ ಪರಿಣತಿ. ರಾಜ್ಯ ಸಂಸ್ಕೃತಿ ಮತ್ತು ಪ್ರಚಾರ ಶಾಖೆಯ ಮೂಲಕ ನಾಡಿನಾದ್ಯಂತ ಗಮಕವಾಚನ. ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಕವನ ಸಂಕಲನ ರಚನೆ. ಕಥಾಸಂಕಲನ- ಬೃಂದಾವನ, ಕಾಮನಬಿಲ್ಲು. ಕಾದಂಬರಿ-ಸ್ವಪ್ನಜೀವಿ, ಒಲಿದು ಬಂದ ಹೆಣ್ಣು, ವಂಶೋದ್ಧಾರಕ, ದೇವತಾಸ್ತ್ರೀ, ನಾಟ್ಯಕಸ್ತೂರಿ, ಬೆಳೆಯುವ ಪೈರು, ಇಬ್ಬರು ಸವತಿಯರು, ಮನೆ ಬೆಳಗಿತು, ಹೂವು-ದುಂಬಿ, ಮುಳ್ಳಿನ ಹಾಸಿಗೆ, ಮೊದಲಾದ ೨೫ ಕಾದಂಬರಿಗಳು. ಕಾವ್ಯ-ರಸಗಂಗೆ, ಚೈತ್ರದ ಕೋಗಿಲೆ. ರೇಡಿಯೋ ನಾಟಕ-ಉಲ್ಲಾಳದ ರಾಣಿ ಅಬ್ಬಕ್ಕ, ಹಾರಾಡಲಿ ನಮ್ಮ ರಾಷ್ಟ್ರಧ್ವಜ, ಬೆಂಗಳೂರಿನ ರೋಮಾಂಚಕಾರಿ ಕಥೆ. ಮಕ್ಕಳಿಗಾಗಿ-ಈಶ್ವರಚಂದ್ರ ವಿದ್ಯಾಸಾಗರ್, ಸ್ವಾತಂತ್ರ ವೀರವೇಲು ತಂಬಿ, ಜೀವನಚರಿತ್ರೆ-ಕರ್ನಾಟಕ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯ, ಹೊಯ್ಸಳೇಶ್ವರ ವಿಷ್ಣುವರ್ಧನ, ಶಕಪುರುಷ ಚಾಲುಕ್ಯ ವಿಕ್ರಮಾದಿತ್ಯ, ಏಕಲವ್ಯನ ಗುರುದಕ್ಷಿಣೆ, ವಿಜಯನಗರದ ಅರವೀಡು ಮನೆತನ, ದೈವಭಕ್ತ ಚಂದ್ರಹಾಸ ಮೊದಲಾದುವು. ವ್ಯಕ್ತಿಚಿತ್ರ-ವೈಣಿಕ ಆರ್.ಕೆ. ಸೂರ‍್ಯನಾರಾಯಣ. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳು. ಪ್ರವಾಸ ಸಾಹಿತ್ಯ-ಭಾರತ ತೀರ್ಥ. ಲಲಿತ ಕಲೆ-ಸಂಗೀತಸುಧಾ. ವೈಚಾರಿಕ ಲೇಖನಗಳು-ಸಾಹಿತ್ಯ-ಸಂಸ್ಕೃತಿ. ಸಾಹಿತ್ಯಲೋಕದಿಂದ ಕಣ್ಮರೆಯಾದದ್ದು ೯.೧.೯೮. ಅರ್ಪಿಸಿದ ಗೌರವ ಗ್ರಂಥ ‘ಸಾಹಿತ್ಯೋಪಾಸಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ರೂಪ ಕುಲಕರ್ಣಿ – ೧೯೪೫ ಕೆ.ಎಂ. ವಿಜಯಲಕ್ಷ್ಮಿ – ೧೯೫೪ ಜ್ಯೋತಿ ಗುರುಪ್ರಸಾದ – ೧೯೬೫

ನಾಗರತ್ನ ನಾಗರಾಜ ಹಡಗಲಿ

೧೯.೭.೧೯೭೧ ಪ್ರಖ್ಯಾತ ಭರತ ನಾಟ್ಯ ಕಲಾವಿದೆ ನಾಗರತ್ನರವರು ಹುಟ್ಟಿದ್ದು ಬೆಳಗಾವಿ. ತಂದೆ ರಾಜಶೇಖರ ಕರಡಗುಬ್ಬಿ, ತಾಯಿ ಶಿವದೇವಿ. ೧೨ ನೇ ವಯಸ್ಸಿನಿಂದಲೇ ನೃತ್ಯಪಾಠ. ಬೆಳಗಾವಿಯ ಸಂಧ್ಯಾ ಹೊಸಮನಿ, ಧಾರವಾಡದ ಕುಮುದಿನಿ ರಾವ್‌ ಮತ್ತು ರಮ್ಯ ಪ್ರಸಾದ್‌, ಮೈಸೂರಿನ ರವೀಂದ್ರ ಕಲಾ ನಿಕೇತನದ ರವೀಂದ್ರಶರ್ಮ ಇವರಲ್ಲಿ ಪಡೆದ ನೃತ್ಯ ತರಬೇತಿ. ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬಯಿ ಇವರು ನಡೆಸುವ ಭರತನಾಟ್ಯದ ಎಲ್ಲ ಪರೀಕ್ಷೆಗಳಲ್ಲೂ ಪಡೆದ ಪ್ರಥಮಸ್ಥಾನ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿಯ ಪರೀಕ್ಷೆಗಳಲ್ಲಿ ಉನ್ನತ ದರ್ಜೆ. ರಾಜ್ಯಾದ್ಯಂತ ನಡೆಸಿಕೊಟ್ಟ ಹಲವಾರು ನೃತ್ಯ ಪ್ರದರ್ಶನಗಳು.ಮಡಕೇರಿಯ ದಸರಾಮಹೋತ್ಸವ, ಧಾರವಾಡ ಜಿಲ್ಲಾ ನೃತ್ಯೋತ್ಸವ, ಬೆಳಗಾವಿಯ ಗಡಿನಾಡ ಉತ್ಸವ, ಬಾಗಲಕೋಟೆಯ ನವರಾತ್ರಿ ಉತ್ಸವ, ಸುವರ್ಣ ಕರ್ನಾಟಕ ಸಂದರ್ಭದ ರಾಜ್ಯೋತ್ಸವ ಮುಂತಾದೆಡೆ ನೀಡಿದ ನೃತ್ಯ ಕಾರ್ಯಕ್ರಮಗಳು. ಸರ್ಪನೃತ್ಯ, ಕೊರವಂಜಿ, ಠುಮರಿ, ತಿಲ್ಲಾನ, ಶಿವಪಾರ್ವತಿ, ಮಣಿಪುರಿ, ದಶಾವತಾರ ನೃತ್ಯ ಪ್ರದರ್ಶನದ ಪ್ರಮುಖ ಅಂಗಗಳು. ವಚನಗಳಿಗೆ ನೃತ್ಯ ಸಂಯೋಜನೆ ವಿಶಿಷ್ಟ ನೃತ್ಯ ಕಾರ್ಯಕ್ರಮಗಳಲ್ಲೊಂದು. ಕೂಡಲಸಂಗಮದಲ್ಲಿ ನಡೆದ ವಚನ ವೈಭವ ಕಾರ್ಯಕ್ರಮದಲ್ಲಿ ಭಾಗಿ. ಅರವತ್ತು ಜನ ಕಲಾವಿದರನ್ನೊಳಗೊಂಡ ‘ಹಚ್ಚೇವು ಕನ್ನಡದ ದೀಪ’ ನೃತ್ಯ ಕಾರ್ಯಕ್ರಮವು ನಾಡಿನಾದ್ಯಂತ ಪ್ರದರ್ಶನಗೊಂಡು ಪ್ರಶಸ್ತಿ ಪಡೆದ ನೃತ್ಯ ಕಾರ್ಯಕ್ರಮಗಳಲ್ಲೊಂದು. ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಅಣ್ಣಿಗೇರಿ,  ಬೈಲಹೊಂಗಲ, ಗೋಕಾಕ, ರಾಮದುರ್ಗ, ಬಿಜಾಪುರ, ಲೋಕಾಪುರ, ಗುಲಬರ್ಗಾ, ಮಡಕೇರಿ ಮುಂತಾದೆಡೆ ನೀಡಿದ ಕಾರ್ಯಕ್ರಮಗಳು. ಧಾರವಾಡ, ಬೈಲಹೊಂಗಲ, ರಾಮದುರ್ಗ, ಸುರೇಬಾನ, ಗೋಕಾಕದಲ್ಲಿ ರತಿಕಾ ನೃತ್ಯ ನಿಕೇತನ ನೃತ್ಯ ತರಬೇತಿ ಶಾಖೆಗಳನ್ನು ತೆರೆದು ನೂರಾರು ವಿದ್ಯಾರ್ಥಿಗಳಿಗೆ ತರಬೇತಿ. ರಾಜ್ಯಮಟ್ಟದ ಹಲವಾರು ನೃತ್ಯ ಸ್ಪರ್ಧೆಯಲ್ಲಿ ಬಹುಮಾನಗಳು, ಕೊಲ್ಹಾಪುರದಲ್ಲಿ ನಡೆದ ನೃತ್ಯೋತ್ಸವದಲ್ಲಿ ನಾಟ್ಯವಿಶಾರದೆ ಪ್ರಶಸ್ತಿ, ಬೈಲಹೊಂಗಲದಲ್ಲಿ ನಡೆದ ನೃತ್ಯ ಮಹೋತ್ಸವದಲ್ಲಿ ನಾಟ್ಯ ಪ್ರವೀಣೆ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದ ವಿನಾಯಕ ಶೆಣೈ – ೧೯೨೩.

* * *

ಪ್ರಮೀಳಮ್ಮ

೧೮-೭-೧೯೪೬ ಉತ್ತಮ ಶಿಕ್ಷಕಿ, ಮಾರ್ಗದರ್ಶಿ, ನೆಚ್ಚಿನ ಅಕ್ಕ ಎನಿಸಿರುವ ಪ್ರಮೀಳಮ್ಮನವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ. ತಂದೆ ಸಿದ್ಧರಾಮಯ್ಯ, ತಾಯಿ ಗುರುಸಿದ್ಧಮ್ಮ.  ಪ್ರಾರಂಭಿಕ ಶಿಕ್ಷಣ ನೆಲಮಂಗಲ. ಬೆಂಗಳೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ. ಸೆಂಟ್ರಲ್ ಕಾಲೇಜಿನಿಂದ ಕನ್ನಡ ಮತ್ತು ಸಂಸ್ಕೃತ ಸ್ನಾತಕೋತ್ತರ ಪದವಿ. ಜಯನಗರದ ಶಿಕ್ಷಕರ ತರಬೇತಿ ಕಾಲೇಜಿನಿಂದ ಬಿ.ಎಡ್. ಪದವಿ. ಉದ್ಯೋಗಕ್ಕಾಗಿ ಆರಿಸಿಕೊಂಡದ್ದು ಅಧ್ಯಾಪನ ವೃತ್ತಿ. ಟ್ಯುಟೋರಿಯಲ್ಸ್‌ನಲ್ಲಿ ಕೆಲಕಾಲ. ಬೊರೂಕ ಇಂಗ್ಲಿಷ್ ಶಾಲೆಯಲ್ಲಿ ಕೆಲಕಾಲ. ಜೆ.ಎಸ್.ಎಸ್. ಸಂಸ್ಕೃತ ಶಾಲೆಯಲ್ಲಿ, ನಂತರ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ೨೪ ವರ್ಷಗಳ ದೀರ್ಘಸೇವೆಯಿಂದ ೨೦೦೪ರಲ್ಲಿ ನಿವೃತ್ತಿ. ಬಾಲ್ಯದಿಂದಲೇ ಬೆಳೆದ ಸಾಹಿತ್ಯಾಸಕ್ತಿ. ಸಂಜೆ ವೇಳೆ, ತಾತ ಕೂಡಿಸಿಕೊಂಡು ಹೇಳುತ್ತಿದ್ದ ಕಥೆಗಳು, ಹಾಸ್ಯಭರಿತವಾಗಿ ಸನ್ನಿವೇಶಕ್ಕೆ ತಕ್ಕಂತೆ ಕಾಲ್ಪನಿಕ ಕಥೆಗಳನ್ನು ಹೆಣೆಯುತ್ತಿದ್ದ ದೊಡ್ಡಮ್ಮ, ಇವರ ಪ್ರಭಾವದಿಂದ ಬರೆಯಬೇಕೆಂದು ಹುಟ್ಟಿದ ಹುಮ್ಮಸ್ಸು. ಜೊತೆಗೆ ಎಂ.ಎ. ತರಗತಿಯಲ್ಲಿ ಜಿ.ಎಸ್.ಎಸ್., ಎಂ.ವಿ. ಸೀತಾರಾಮಯ್ಯ, ಎಂ. ಚಿದಾನಂದಮೂರ್ತಿ, ಹಂ.ಪ.ನಾ., ವಿದ್ಯಾಶಂಕರ್ ಇವರಿಂದ ದೊರೆತ ಸಾಹಿತ್ಯ ಪ್ರೇರಣೆ. ಹಲವಾರು ಕೃತಿಗಳ ರಚನೆ. ಸರ್ವಜ್ಞನ ವಚನಾಮೃತ, ದೊಡ್ಡಮ್ಮ ಹೇಳಿದ ಕಥೆಗಳು, ಕನ್ನಡ ಕವಿಲೋಕ-ಆದಿ ಕವಿ ಪಂಪನಿಂದ ಹಿಡಿದು ಲಕ್ಷ್ಮೀನಾರಾಯಣಭಟ್ಟರವರೆಗೆ ಬರೆದ ಕವಿ ಪರಿಚಯದ ಗ್ರಂಥ. ಜೀಮೂತವಾಹನ, ನಚಿಕೇತ, ಕರುನಾಡ ದೀಪಗಳು, ಸುವರ್ಣ ಸಂಭ್ರಮಕ್ಕಾಗಿ ರಚಿಸಿದ ವಿಶಿಷ್ಟ ಪುಸ್ತಕ ಪ್ರಕಟಿತ. ಬರಲಿರುವ ಹಲವಾರು ಕೃತಿಗಳು. ಮುಖಕ್ಕೆ ಆದ ಪ್ಯಾರಲಿಸಿಸ್‌ನಿಂದ ವಿಕಲಚೇತನಳು ಎನಿಸಿದರೂ ಅದೊಂದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಸಮಾಜದಲ್ಲಿ ಬೆರೆತು, ಸ್ಕೂಲಿನಲ್ಲಿ ಮಕ್ಕಳೊಂದಿಗೆ ಬೆರೆತು, ವೈಯಕ್ತಿಕ ಅಸಮರ್ಥತೆಯನ್ನು ದೂರವಿಟ್ಟು ಸಾಧನೆ. ಶಾಲೆಯ ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯತೆ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಭಾರತ ಸಂಸ್ಕೃತಿ ಪ್ರಸಾರ ಯೋಜನೆಯಡಿಯಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸುವ ಎಳೆಯರ ರಾಮಾಯಣ, ಕಿಶೋರ ಭಾರತ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ. ‘ಸಂಸ್ಕೃತ ಭಾರತಿ’ ನಡೆಸುವ ಪರೀಕ್ಷೆಗೆ ಸಂಸ್ಕೃತ ಪಾಠದ ಬೋಧನೆ. ಹೀಗೆ ನಾನಾ ರೀತಿಯ ಶೈಕ್ಷಣಿಕ ಸೇವೆಯನ್ನು ಗಮನಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಸನ್ಮಾನ, ಜೆ.ಎಸ್.ಎಸ್. ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ. ಜೆ.ಎಸ್.ಎಸ್. ಮಹಾವಿದ್ಯಾಲಯ ಮೈಸೂರ್ ಇವರಿಂದ ‘ಉತ್ತಮ ಶಿಕ್ಷಕಿ’ ಸನ್ಮಾನ. ಸಮಾಜ ಕೊಟ್ಟಿದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕೆಂದು ದುಡಿಯುತ್ತಿರುವ ಮಹಿಳೆ.   ಇದೇ ದಿನ ಹುಟ್ಟಿದ ಸಾಹಿತಿ : ರಾಧಾಕೃಷ್ಣ ಬೆಳ್ಳೂರ್ – ೧೯೭೧

ಕಲ್ಪನಾ

೧೮..೧೯೪೩ ೧೩..೧೯೭೯ ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಲಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ರವರು ಹುಟ್ಟಿದ್ದು ಮಂಗಳೂರು. ತಂದೆ ಕೃಷ್ಣಮೂರ್ತಿ, ತಾಯಿ ಜಾನಕಕಮ್ಮ, ಕಾನ್ವೆಂಟ್‌ ವಿದ್ಯಾಭ್ಯಾಸ. ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯ. ಅಭಿನಯ ಕಲೆಯನ್ನು ಸ್ವತಃ ರೂಢಿಸಿಕೊಂಡ ಕಲಾವಿದೆ. ರಂಗಭೂಮಿಯಲ್ಲಿ ನಟಿಸಲು ಪ್ರೋತ್ಸಾಹಿಸಿದವರು ಚಿಕ್ಕಮ್ಮ ಸೀತಮ್ಮ. ಆರ್. ನಾಗರತ್ನಮ್ಮನವರ ಸ್ತ್ರೀ ನಾಟಕ ಮಂಡಲಿಯ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭ. ಕೃಷ್ಣಗಾರುಡಿಯ ರುಕ್ಮಿಣಿ, ಮೋಹಿನಿಯಾಗಿ; ಸಂಸಾರ ನೌಕಾದಲ್ಲಿ ಗಿರಿಜೆಯಾಗಿ ಅಭಿನಯಿಸಿ ಗಳಿಸದ ಖ್ಯಾತಿ. ಭರತನಾಟ್ಯ ಕಲಾವಿದೆ. ಕೃಷ್ಣಲೀಲೆಯಲ್ಲಿ ಕೃಷ್ಣನಿಗಾಗಿ ಪರಿತಪಿಸುವ ರಾಧೆಯಾಗಿ ನೃತ್ಯದ ಮೂಲಕ ‘ಕೃಷ್ಣಬಾರೋ’ ಹಾಡಿಗೆ ಮಾಡುತ್ತಿದ್ದ ಅಮೋಘ ನೃತ್ಯ. ನರಸಿಂಹರಾಜು ರವರ ಪರಿಚಯದಿಂದ ಸೇರಿದ್ದು ಚಿತ್ರರಂಗ. ಸಾಕುಮಗಳು ಮೊದಲ ಚಲನಚಿತ್ರದಲ್ಲಿ ಅಭಿನಯ. ಬೆಳ್ಳಿಮೋಡ, ನಾಂದಿ, ಬಂಗಾರದ ಹೂ ನಲ್ಲಿ ಕುಷ್ಠರೋಗಿಯಾಗಿ, ಗೆಜ್ಜೆಪೂಜೆಯ ವೇಶ್ಯೆಮಗಳು ಚಂದ್ರಳಾಗಿ, ಶರಪಂಜರದ ಬುದ್ಧಿಭ್ರಮಣೆಯ ಕಾವೇರಿಯಾಗಿ, ಉಯ್ಯಾಲೆಯ ರಾಧ, ಸರ್ವಮಂಗಳದ ಮಂಗಳೆ ಕಲ್ಪನಾ ಅಭಿನಯದ ಮೈಲುಗಲ್ಲುಗಳು. ಸುಮಾರು ೫೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೀಡಿದ ಅಮೋಘ ಅಭಿನಯ, ಉತ್ತಮ ವಾಗ್ಮಿ, ಸಾಹಿತ್ಯಪ್ರಿಯೆ, ಸಂಗೀತ-ಕಲೆ ಆಸಕ್ತಿ. ಉತ್ತಮ ಅಭಿನಯಕ್ಕಾಗಿ ಕರ್ನಾಟಕ ಸರಕಾರದಿಂದ ಮೂರು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ.ಪುನಃ ರಂಗಭೂಮಿಯ ಗುಡಿಗೇರಿ ಬಸವರಾಜರ ನಾಟಕಗಳಲ್ಲಿ ಪಾತ್ರಾಭಿನಯ. ಪಾತ್ರದೊಡನೆ ಲೀನವಾಗಿ ಅಭಿನಯಿಸುತ್ತಿದ್ದ ಕಲಾವಿದೆಯ ಅಂತ್ಯದಿಂದ ಚಿತ್ರರಂಗ, ರಂಗಭೂಮಿಗಾದ ಬಹುದೊಡ್ಡನಷ್ಟ.   ಇದೇ ದಿನ ಹುಟ್ಟಿದ ಕಲಾವಿದೆ ಹೇಮಲತಾ ವಿ -೧೯೭೧

* * *

ಬಿ.ಎಲ್. ರೈಸ್

೧೭-೭-೧೮೩೬ ೧೦-೭-೧೯೨೭ ಕನ್ನಡಕ್ಕಾಗಿ ದುಡಿದ ವಿದೇಶಿಯರಲ್ಲಿ ಅಗ್ರಗಣ್ಯರಾದ ಬೆಂಜಮಿನ್  ಲೂಯಿರೈಸ್‌ರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬೆಂಜಮಿನ್ ಹೋಲ್ಡ್‌ರೈಸ್. ಅವೆನ್ಯೂ ರಸ್ತೆಯಲ್ಲಿ ಹೋಲ್ಡ್‌ರೈಸ್ ಹೆಸರಿನಲ್ಲಿ ಚರ್ಚ್ ಕೂಡಾ ಇದೆ. ವಿದ್ಯಾಭ್ಯಾಸ ನಡೆದುದು ಇಂಗ್ಲೆಂಡ್‌ನಲ್ಲಿ. ನಂತರ ಬೆಂಗಳೂರಿಗೆ ಬಂದು ಸೆಂಟ್ರಲ್ ಹೈಸ್ಕೂಲಿನಲ್ಲಿ ೫ ವರ್ಷ ಮುಖ್ಯೋಪಾಧ್ಯಾಯ ವೃತ್ತಿ. ೧೮೬೮ರಲ್ಲಿ ವಿದ್ಯಾ ಇಲಾಖೆಯ ಮುಖ್ಯಾಕಾರಿಯಾಗಿ ೧೮೮೩ರಲ್ಲಿ ಮೈಸೂರು ಸರಕಾರದ ವಿದ್ಯಾಶಾಖೆಯ ಪ್ರಥಮ ಕಾರ‍್ಯದರ್ಶಿಯಾಗಿ ಸಲ್ಲಿಸಿದ ಸೇವೆ. ಮೈಸೂರು ಸರಕಾರದ ಪ್ರಾಚ್ಯ ವಸ್ತು ಸಂಶೋಧನಾ ಶಾಖೆ ಪ್ರಾರಂಭವಾದಾಗ ರೈಸ್‌ರವರು ತಮ್ಮ ಹುದ್ದೆಯ ಜೊತೆಗೆ ಹೊತ್ತ ಈ ಶಾಖೆಯ ಜವಾಬ್ದಾರಿ. ವಿದ್ಯಾ ಇಲಾಖೆಯ ಕಾರ‍್ಯದರ್ಶಿ ಯಾಗಿದ್ದಾಗ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ ೧೮೮೬ರಲ್ಲಿ ‘ಎಪಿಗ್ರಾಫಿಯ ಕರ್ನಾಟಕ’ ಪ್ರಕಟಿಸಿ ಶಿಲಾಶಾಸನ ಪ್ರಕಟಣಾ ಮಾಲೆಗೆ ಹಾಡಿದ ನಾಂದಿ. ಈ ಶಾಸನಗಳ ಅಧ್ಯಯನದ ಅವಶ್ಯಕತೆ ಮನಗಂಡು ಸರಕಾರ ಪುರಾತತ್ವ ಇಲಾಖೆಯ ಪೂರ್ಣಾವ ಅಕಾರಿಯಾಗಿ ನೇಮಕ. ೧೬ ವರ್ಷ ಕನ್ನಡ ನಾಡಿನಲ್ಲೆಲ್ಲಾ ಸಂಚರಿಸಿ ಶಾಸನಗಳನ್ನು ಸಂಗ್ರಹಿಸಿ ಹನ್ನೆರಡು ಸಂಪುಟಗಳ ಪ್ರಕಟಣೆ. ಪ್ರಕಟಿಸಿದ ಶಾಸನಗಳ ಒಟ್ಟು ಸಂಖ್ಯೆ ೮೮೬೯. ಕೊಡಗು, ಶ್ರವಣ ಬೆಳಗೊಳ, ಮಂಡ್ಯ, ಮೈಸೂರು, ಕಡೂರು (ಚಿಕ್ಕಮಗಳೂರು), ಶಿವಮೊಗ್ಗ, ಹಾಸನ, ಕೋಲಾರ, ಬೆಂಗಳೂರು, ಚಿತ್ರದುರ್ಗ ಮತ್ತು ತುಮಕೂರು. ಜಿಲ್ಲಾ ಶಾಸನಗಳ ವ್ಯವಸ್ಥಿತ ಸಂಗ್ರಹಣೆ, ಪ್ರಕಟಣೆ. ಕ್ರಿಸ್ತಪೂರ್ವ ೨೫೦ ವರ್ಷಗಳಷ್ಟು ಪುರಾತನವಾದ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ. ಶಾಸನಗಳ ವಿಶೇಷ ಅಧ್ಯಯನ ನಡೆಸಿ ಅಂದಿನ ರಾಜಕೀಯ, ಇತಿಹಾಸವನ್ನು ತಿಳಿಸುವ “ಮೈಸೂರ್ ಅಂಡ್ ಕೂರ್ಗ್ ಇನ್‌ಸ್ಕ್ರಿಪ್‌ಷನ್ಸ್” ಗ್ರಂಥ ರಚನೆ-ಪ್ರಕಟಣೆ. ಶಾಸನಗಳನಷ್ಟೇ ಅಲ್ಲದೆ ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಕೀರ್ತಿ. ಪಂಪಭಾರತ, ಪಂಪ ರಾಮಾಯಣ, ಶಬ್ದಾನುಶಾಸನ, ಕರ್ನಾಟಕ ಭಾಷಾಭೂಷಣ, ಕವಿರಾಜಮಾರ್ಗ, ಅಮರಕೋಶ, ಕಾವ್ಯಾವಲೋಕನ ಗ್ರಂಥಗಳನ್ನು ಸಂಪಾದಿಸಿ “ಬಿಬ್ಲಿಯೋಥಿಕಾ ಕರ್ನಾಟಿಕಾ” ಗ್ರಂಥಮಾಲೆಯಲ್ಲಿ ಪ್ರಕಟಗೊಂಡ ಗ್ರಂಥಗಳು. ಇವರ ಸಾಧನೆಯನ್ನು ಗುರುತಿಸಿ ಮದರಾಸು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿತು. ರೈಸ್‌ರವರು ೧೯೦೬ರಲ್ಲಿ ನಿವೃತ್ತರಾಗಿ ಇಂಗ್ಲೆಂಡ್‌ನ ಹ್ಯಾರೋ ನಗರದಲ್ಲಿ ನೆಲೆಸಿ ಜುಲೈ ೧೦, ೧೯೨೭ರಂದು ನಿಧನರಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೌಸಲ್ಯಾದೇವಿ – ೧೯೧೦-೧೯.೧೨.೧೯೮೪ ಪ್ರಹ್ಲಾದಕುಮಾರ ಭಾಗೋಜಿ – ೧೯೨೫-೧೯.೭.೨೦೦೦

ಡಾ. ನಾಗರಾಜರಾವ್‌ ಹವಾಲ್ದಾರ್

೧೭.೭.೧೯೫೯ ಕನ್ನಡದ ಖಯಾಲ್‌ ಗಾಯನದ ಮೂಲಕ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ನಾಗರಾಜರಾವ್‌ ಹವಾಲ್ದಾರ್‌ರವರು ಹುಟ್ಟಿದ್ದು ಹೊಸಪೇಟೆ. ತಂದೆ ರಾಮರಾವ್‌ ಹವಾಲ್ದಾರ್, ತಾಯಿ ಅಂಬುಜಾಬಾಯಿ. ಪುರಾತತ್ತ್ವಶಾಸ್ತ್ರದಲ್ಲಿ ಸ್ಷರ್ಣಪದಕದೊಂದಿಗೆ ಎಂ.ಎ. ಪದವಿ. ಶಿಲಾಶಾಸನ ಶಾಸ್ತ್ರದಲ್ಲಿ ಡಿಪ್ಲೋಮ. “ಕರ್ನಾಟಕದಲ್ಲಿ ಸಂಗೀತದ ಐತಿಹಾಸಿಕ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್‌.ಡಿ. ಪದವಿ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಪಂ. ಮಾಧವಗುಡಿ ಪಂ. ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿಯವರಲ್ಲಿ ಸಂಗೀತ ಕಲಿಕೆ. ಹಿಂದೂಸ್ತಾನಿ ಸಂಗೀತದಲ್ಲಿ ಸಂಗೀತರತ್ನ ಪದವಿ. ಹಲವಾರು ಅಪರೂಪದ ಅಪ್ರಚಲಿತ ಜೋಡುರಾಗಗಳಲ್ಲಿ ಪಡೆದ ವಿಶೇಷ ತರಬೇತಿ. ಪಂ. ಬಸವರಾಜ ರಾಜಗುರು ಮತ್ತು ಪಂ. ಸಂಗಮೇಶ್ವರ ಗುರವರವರ ಮಾರ್ಗದರ್ಶನ. ರಾಜ್ಯದ ಪ್ರಮುಖ ನಗರಗಳಲ್ಲಿ ನೀಡಿದ ಕಾರ್ಯಕ್ರಮಗಳು. ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ ಸಂಗೀತೋತ್ಸವ, ಧಾರವಾಡ, ಹುಬ್ಬಳ್ಳಿ ಆರ್ಟ್ಸ್ ಸರ್ಕಲ್‌ ಆಶ್ರಯದ ಸಂಗೀತ ಕಾರ್ಯಕ್ರಮ, ಗದುಗಿನ ವೀರೇಶ್ವರ ಪುಣ್ಯಾಶ್ರಮ, ಬೆಂಗಳೂರು, ಮೈಸೂರು ದಸರಾ ದರ್ಬಾರ್ ಹಾಲ್‌, ಹಂಪಿ ಉತ್ಸವ, ಮಂಗಳೂರು, ಕಾರವಾರಗಳಲ್ಲದೆ ಪುಣೆ, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಯಲ್ಲೂ ಯಶಸ್ವಿ ಕಾರ್ಯಕ್ರಮಗಳು. ಇಂಗ್ಲೆಂಡ್‌, ಸಿಂಗಪೂರ ಸೇರಿದಂತೆ ವಿಶ್ವಾದ್ಯಂತ ಆರು ಬಾರಿ ಪ್ರವಾಸ. ವಿಶ್ವಕನ್ನಡ ಸಮ್ಮೇಳನದಲ್ಲಿ (ಅಮೆರಿಕಾ) ಎರಡು ಬಾರಿ ಭಾಗವಹಿಸಿ ಗಳಿಸಿದ ಜನಮನ್ನಣೆ. ಕೃಷ್ಣಾಂಜಲಿ, ದಾಸಾಂಜಲಿ, ಅಕ್ಕಕೇಳವ (ವಚನ) ಮುಲ್ತಾನಿ, ಕೃಷ್ಣ ಇನ್‌ಟ್ರೆಡಿಷ್‌ನಲ್‌ ಖಯಾಲ್‌, ಸಿಡಿ ಹಾಗೂ ಕ್ಯಾಸೆಟ್‌ಗಳು, ಕನ್ನಡದ ಖಯಾಲ್‌ ಗಾಯನದ ಮೊಟ್ಟಮೊದಲ ಪ್ರಯತ್ನವೆಂಬ ಹೆಗ್ಗಳಿಕೆ. ಹಾಯ್‌ ಬೆಂಗಳೂರು ಪತ್ರಿಕೆಗೆ ಸಂಗೀತ ದಿಗ್ಗಜರೊಡನೆ ಅನುಭವಿಸಿದ ಆತ್ಮೀಯ ರಸನಿಮಿಷಗಳ ಪ್ರಸ್ತುತಿಯ ಅಂಕಣಕಾರರು. ಆರ್ಯಭಟ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು.

* * *

ಪ್ರ. ಗೋ. ಕುಲಕರ್ಣಿ (ಪ್ರಹ್ಲಾದ ಗೋವಿಂದ ಕುಲಕರ್ಣಿ)

೧೭..೧೯೦೨ ೧೯೮೬ ಕರ್ನಾಟಕ ಛಂಧ: ಶಾಸ್ತ್ರ,  ಕರ್ನಾಟಕ ಭಾಷಾ ಶಾಸ್ತ್ರ, ನಾಣ್ಣುಡಿಗಳು, ಭಾರತೀಯ ಛಂಧ: ಶಾಸ್ತ್ರ ಮುಂತಾದ ಶಾಸ್ತ್ರೀಯ ಗ್ರಂಥಗಳನ್ನು ರಚಿಸಿದ್ದಲ್ಲದೆ ಕನ್ನಡ ಭಾಷೆಯ ಏಳ್ಗೆಗಾಗಿ, ಭಾಷೆಯು ಸಮೃದ್ಧಿಯಾಗಿ ಬೆಳೆಯಬೇಕೆಂಬ ಕಳಕಳಿಯಿಂದ ಕನ್ನಡಕ್ಕಾಗಿ ಅಹರ್ನಿಶಿ ದುಡಿದ ಪ್ರಹ್ಲಾದ ಗೋವಿಂದ ಕುಲಕರ್ಣಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಭಾಗೋಜಿ ಕೊಪ್ಪದ ಮನೆತನದಲ್ಲಿ ೧೯೦೨ರ ಜುಲೈ ೧೭ರಂದು. ತಂದೆ ಗೋವಿಂದ, ತಾಯಿ ರಂಗಕ್ಕ. ಕುಟುಂಬವು ಅತ್ಯಂತ ಕಡುಕಷ್ಟದ ಸ್ಥಿತಿಯಲ್ಲಿದ್ದುದರಿಂದ ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದವರು, ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸೋದರಮಾವ ನಾರಾಯಣ ಪಾಟೀಲರು.ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ನಂತರ ಸೋದರಮಾವನಂತೆ ಶಿಕ್ಷಕರಾಗ ಬೇಕೆಂಬ ಆಸೆಯಿದ್ದರೂ ಧಾರವಾಡಕ್ಕೆ ಹೋಗಿ ಶಿಕ್ಷಕರ ತರಬೇತಿ ಪಡೆಯಲಾಗದೆ ಮನೆಯಲ್ಲಿಯೇ ಕುಳಿತು ಕಾಲವನ್ನು ಅಪವ್ಯಯಮಾಡದೆ ಕುಮಾರವ್ಯಾಸನ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ ಮತ್ತು ಕೇಶಿರಾಜನ ಶಬ್ದಮಣಿ ದರ್ಪಣ ಮುಂತಾದವುಗಳ ಅಧ್ಯಯನದಲ್ಲಿ ತೊಡಗಿದ್ದು, ಕನ್ನಡ ಭಾಷಾಧ್ಯಯನಕ್ಕೆ ಅಡಿಪಾಯ ಹಾಕಿದಂತಾಯಿತು. ಕೆಲವರ್ಷಗಳ ನಂತರ ಧಾರವಾಡಕ್ಕೆ ತೆರಳಿ ಶಿಕ್ಷಕರ ತರಬೇತಿ (೧೯೧೯)ಪಡೆದನಂತರ ಬೆಳಗಾವಿ ಜಿಲ್ಲೆಯ ಆಥಣಿ ತಾಲ್ಲೂಕಿನ ಹಲ್ಯಾಳದಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಧಾರವಾಡದಲ್ಲಿದ್ದಾಗ ಭಾಷೆ ಮತ್ತು ವ್ಯಾಕರಣ ಕಲಿಯಲು ಪ್ರೇರೇಪಿಸಿದವರು ಶಿಕ್ಷಕರಾಗಿದ್ದ ಪಂಡಿತ ಮಹದೇವ ಪ್ರಭಾಕರ ಪೂಜಾರರು. ಇದರಿಂದ ಕಾಲ್ಡವೆಲ್ ನ ‘ಕಂಪಾರೆಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲ್ಯಾಂಗ್ವೇಜಸ್’ ಗ್ರಂಥವನ್ನು ಆಳವಾಗಿ ಅಭ್ಯಸಿಸಿದರು. ಮರಾಠಿ ಭಾಷಾ ವಿದ್ವಾಂಸರಂತೆ, ತಾವೂ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ದುಡಿಯ ಬೇಕೆಂದು ನಿರ್ಥರಿಸಿ ಆಲೂರು ವೆಂಕಟರಾಯರ ಜಯಕರ್ನಾಟಕ ಪತ್ರಿಕೆಗೆ ಹಲವಾರು ಲೇಖನಗಳನ್ನು ಬರೆಯತೊಡಗಿದ್ದು, ಇದು ಭಾಷಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದಂತಾಯಿತು. ಮರಾಠಿ ಭಾಷೆಯ ವಿಷ್ಣುಶಾಸ್ತ್ರಿ ಚಿಪಳೂಣಕರರ ‘ನಿಬಂಧಮಾಲಾ’ ಮತ್ತು ಮೋರೋ  ಕೇಶವ ದಾಮ್ಲೆಯವರ ‘ಶಾಸ್ತ್ರೀಯ ಮರಾಠೀ ವ್ಯಾಕರಣ’ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದನಂತರ ಕನ್ನಡ ಬರವಣಿಗೆಗೂ ಒಂದು ದಾರಿ ತೋರಿದಂತಾಗಿ ‘ನಾಣ್ಣುಡಿ’, ಕರ್ನಾಟಕ ಛಂದ:ಶಾಸ್ತ್ರ ಮತ್ತು ಕರ್ನಾಟಕ ಭಾಷಾಶಾಸ್ತ್ರ ಮುಂತಾದ ಗ್ರಂಥಗಳನ್ನು ರಚಿಸಿದರು. ‘ನಾಣ್ಣುಡಿ’ ಎಂಬ ಕಿರು ಹೊತ್ತಿಗೆಯಲ್ಲಿ ನಾಣ್ಣುಡಿಯ ಹಿನ್ನೆಲೆ. ಹುಟ್ಟು ಬೆಳವಣಿಗೆ, ರೂಪ ನಿಷ್ಪತ್ತಿ ಮತ್ತು ಅವುಗಳ ಮಹತ್ವದ ಬಗ್ಗೆ ಚರ್ಚಿಸಿದ್ದಾರೆ. ನಂತರ ಕರ್ನಾಟಕ ಛಂದ:ಶಾಸ್ತ್ರ ಮತ್ತು ಕರ್ನಾಟಕ ಭಾಷಾಶಾಸ್ತ್ರವನ್ನು ವಿಸ್ತರಿಸಿ ಭಾರತೀಯ ಛಂದ: ಶಾಸ್ತ್ರ ಮತ್ತು ಕನ್ನಡ ಭಾಷೆಯ ಚರಿತ್ರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದರು. ಕನ್ನಡ ಭಾಷೆಯ ಚರಿತ್ರೆಯು ಕನ್ನಡ ಭಾಷೆಯನ್ನು ಅಭ್ಯಸಿಸುವವರಿಗೆ ಅತ್ಯಮೂಲ್ಯ ಗ್ರಂಥವಾಗಿದ್ದು ಇದರಲ್ಲಿ ಕನ್ನಡ ಪದ ವ್ಯುತ್ಪತ್ತಿ,  ಭಾಷೆಯ ಬೆಳವಣಿಗೆ, ಕನ್ಣಡ ಸಾಹಿತ್ಯ ರಚನಾಕಾಲ, ಲಿಪಿಯ ಬೆಳವಣಿಗೆಗಳಲ್ಲದೆ ಕೇಶಿರಾಜನ ಶಬ್ದಮಣಿ ದರ್ಪಣ , ನಾಗವರ್ಮನ ಶಬ್ದ ಸ್ಮೃತಿ ಮತ್ತು ಭಟ್ಟಾಕಳಂಕನ ಶಬ್ದಾನುಶಾಸನ ಮುಂತಾದವುಗಳಲ್ಲಿ ನಿರೂಪಿತವಾಗಿರುವ ಕನ್ನಡ ವ್ಯಾಕರಣ ವಿವರಣೆ, ಕನ್ನಡ ವಾಕ್ಯರಚನೆ, ಕನ್ನಡ ಕೊಡುಗೆ, ಭಾರತೀಯ ವರ್ಣಮಾಲೆಯ ಬೆಳವಣಿಗೆ ಮುಂತಾದವುಗಳನ್ನು ಐದು ಭಾಗಗಳಲ್ಲಿ ಚರ್ಚಿಸಿದ್ದಾರೆ. ಭಾರತೀಯ ಛಂದ:ಶಾಸ್ತ್ರವನ್ನು ವಿವರಿಸುವಾಗ ಸಂಸ್ಕೃತ, ಪ್ರಾಕೃತ, ತೆಲುಗು, ತಮಿಳು ಪದ್ಯಗಳನ್ನು ಬಳಸಿಕೊಂಡು ಗದ್ಯ-ಪದ್ಯ, ಪದ-ಪಾದ….ಛಂದಗಳು, ಛಂದೋರೂಪಗಳು, ವೈದಿಕ ಛಂದಸ್ಸಿನ ಸ್ವರೂಪ ಮುಂತಾದವುಗಳನ್ನು ಏಳು ಭಾಗಗಳಲ್ಲಿ ವಿವರಿಸಿದ್ದಾರೆ. ಪ್ರಾಥಮಿಕ ಶಾಲೆಯ ಮಕ್ಕಳ ಮಧ್ಯೆಯೇ ಬೆಳೆದ ಕುಲಕರ್ಣಯವರು ಮಕ್ಕಳ ಮನಸ್ಸನ್ನರಿತು ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಕಿಟ್ಟು ಬೆಟ್ಟ ಹತ್ತಿದ, ರಾಜಾಹರಪಾಲ, ಪೌರಾಣಿಕ ಕತೆಗಳು (೧೯೩೬) ಮುಂತಾದ ಸಾಮಾನ್ಯ ಪುಸ್ತಕಗಳಲ್ಲದೆ ಸುಲಭ ಪಾಠಗಳು (೧೯೩೬), ವಿವಿಧ ಜನಾಂಗಗಳು ಮತ್ತು ಸಾಮಾನ್ಯ ಜ್ಞಾನ (೧೯೪೦, ೪೯), ವಿವಿಧ ಜನಾಂಗಗಳು – ಹಿಂದೂಸ್ತಾನ (೧೯೪೦), ಭೂಗೋಳ ಪರಿಚಯ, ವಿವಿಧ ಸರಕುಗಳು (೧೯೪೪), ಪ್ರಾಚೀನ ಜಗತ್ತು (೧೯೫೬), ಬೆಳಗಾವಿ ಜಿಲ್ಲೆಯ ಸಾಮಾನ್ಯ ಪರಿಚಯ (೧೯೬೦), ವಿಜಾಪುರ ಜಿಲ್ಲೆಯ ಸಾಮಾನ್ಯ ಪರಿಚಯ ಮುಂತಾದ ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇದಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ೧೯೮೦ರಲ್ಲಿ ಬಸವರಾಜ ಕಟ್ಟೀಮನಿಯವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಧುರ ವೇಣು’ ಎಂಬ ಸಂಸ್ಮರಣ ಗ್ರಂಥದಲ್ಲಿ ಬೆಳಗಾವಿಯ ಪರಿಪೂರ್ಣ ಚಿತ್ರಣ ಕೊಡುವ ಲೇಖನ ಬರೆದಿದ್ದಾರೆ ಭಾಷೆಗಳ ಬಗೆಗಿರುವ ಆಳವಾದ ಜ್ಞಾನ, ಕನ್ನಡ ಭಾಷೆಯು ಇತರ ಭಾಷೆಗಳಂತೆ ಸಮೃದ್ಧವಾಗಿ ಬೆಳೆಯ ಬೇಕೆನ್ನುವ ಕಳಕಳಿ ಹೊಂದಿದ್ದ ಕುಲಕರ್ಣಿಯವರು ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೮೬ರಲ್ಲಿ.

ನೇಮಿಚಂದ್ರ

೧೬-೭-೧೯೫೯ ಕತೆಗಾರ್ತಿ, ಅಂಕಣಗಾರ್ತಿ, ತಂತ್ರಜ್ಞೆ  ನೇಮಿಚಂದ್ರರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಎಂ.ಎಸ್. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹಿಂದೂಸ್ಥಾನ್ ಕಾರ್ಖಾನೆ. ಹೆಲಿಕಾಪ್ಟರ್ ಡಿಸೈನ್ ಬ್ಯೂರೊದಲ್ಲಿ ಮುಖ್ಯ ವ್ಯವಸ್ಥಾಪಕಿಯಾಗಿ ಕಾರ‍್ಯನಿರ್ವಹಣೆ. ಪ್ರವೃತ್ತಿಯಲ್ಲಿ  ಸಾಹಿತ್ಯ, ಪ್ರವಾಸಾಸಕ್ತೆ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ‘ಅಚಲಾ’ ಮಹಿಳಾ ಅಧ್ಯಯನ ಮಾಸಪತ್ರಿಕೆಯ ಸಂಪಾದಕೀಯ ಮಂಡಲಿಯ ಸದಸ್ಯೆಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ, ‘ನೆರವು’ ಹಿತರಕ್ಷಣಾ ವೇದಿಕೆಗಳ ನಿಕಟ ಸಂಪರ್ಕ ಮತ್ತು ಒಡನಾಟ. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನ ಕುರಿತಂತೆ ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಪ್ರಕಟಿತ ಕೃತಿಗಳು, ಕಥಾಸಂಕಲನ-ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು (ಇಲ್ಲಿಯವರೆಗಿನ) ಮುಂತಾದುವು. ಸಂವೇದನಾ ಸೂಕ್ಷ್ಮತೆ, ಸಂಯಮ, ಮನಸ್ಸಿನ ವ್ಯಾಪಾರಗಳ ವಿಶ್ಲೇಷಣೆಯಿಂದ ಕೂಡಿದ ಕಥೆಗಳು. ಸಂಪಾದಿತ ಕೃತಿ-ಬೆಳಗೆರೆ ಜಾನಕಮ್ಮ ಬದುಕು-ಬರೆಹ. ಅಂತರ ಶಿಸ್ತೀಯ ಅಧ್ಯಯನ-ಸಾಹಿತ್ಯ ಮತ್ತು ವಿಜ್ಞಾನ. ಜೀವನಚರಿತ್ರೆ-ನೋವಿಗದ್ದಿದ ಕುಂಚ (ಪ್ರಸಿದ್ಧ ಚಿತ್ರಕಾರ ವ್ಯಾನ್‌ಗೊ), ಬೆಳಕಿಗೊಂದು ಕಿರಣ (ಮೇರಿಕ್ಯೂರಿ), ಥಾಮಸ್ ಆಲ್ವಾ ಎಡಿಸನ್. ವೈಜ್ಞಾನಿಕ ಕೃತಿಗಳು-ನಿಮ್ಮ ಮನೆಗೊಂದು ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್‌. ಅನುವಾದ-ನನ್ನ ಕಥೆ…ನಮ್ಮ ಕಥೆ. ಪ್ರವಾಸ ಸಾಹಿತ್ಯ-ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ. ಅಂಕಣ ಬರಹ ಕೃತಿ-ಬದುಕು ಬದಲಿಸಬಹುದು ಮುಂತಾದ ಇಪ್ಪತ್ತು ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು. ಬೆಳಕಿಗೊಂದು ಕಿರಣ ಮೇರಿಕ್ಯೂರಿ ಹಾಗೂ ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಒಂದು ಕನಸಿನ ಪಯಣ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮತ್ತೆ ಬರೆದ ಕಥೆಗಳು ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ ಸಂದೇಶ ಪ್ರಶಸ್ತಿ ದೊರೆತಿದೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶೀಲಾ ಗಜಾನನ ಅಂಕೋಲ – ೧೯೪೨ ಸುಮಿತ್ರಾ ಶ್ಯಾನುಭಾಗ – ೧೯೪೭ ಜ್ಯೋತಿ ಗುರುಪ್ರಸಾದ್ – ೧೯೬೫