Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಎಸ್. ನಾಗಣ್ಣ

ತುಮಕೂರು ಜಿಲ್ಲೆಯವರಾದ ನಾಗಣ್ಣ ಅವರು ಶಿಕ್ಷಕರಾಗಿದ್ದು ನಂತರ ಪತ್ರಿಕೋದ್ಯಮದತ್ತ ಬಂದವರು. ತುಮಕೂರಿನಲ್ಲಿ ಪ್ರಜಾಪ್ರಗತಿ ವಾರ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗಣ್ಣ ನಂತರ ಪ್ರಜಾಪ್ರಗತಿ ಪತ್ರಿಕೆಯನ್ನು ದೈನಿಕವಾಗಿ ಪರಿವರ್ತಿಸಿದರು.
ಮೊಳೆಯಚ್ಚಿನಲ್ಲಿ ಮುದ್ರಣವಾಗುತ್ತಿದ್ದ ಪ್ರಜಾಪ್ರಗತಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆಯನ್ನು ಅಳವಡಿಸಿಕೊಂಡು ಈಗ ಮುನ್ನಡೆಯುತ್ತಿದೆ. ಇದರ ಸಂಪಾದಕರಾಗಿ ವೃತ್ತಿಪರತೆ ಪಡೆದುಕೊಂಡ ನಾಗಣ್ಣ ಅವರು ಪ್ರಜಾಪ್ರಗತಿ ದಿನಪತ್ರಿಕೆಯನ್ನು ಚಿತ್ರದುರ್ಗ ಹಾಗೂ ದಾವಣಗೆರೆ ಆವೃತ್ತಿಗಳನ್ನಾಗಿ ಪ್ರಕಟಿಸಲು ಕಾರಣರಾದರು.
ಪ್ರಜಾಪ್ರಗತಿ ದೈನಿಕದ ರುವಾರಿಗಳಾದ ನಾಗಣ್ಣ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಹನುಮಂತ ಹೂಗಾರ

ನಾಲ್ಕು ದಶಕಗಳ ಕಾಲ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಹಾಯಕ ಸಂಪಾದಕರಾಗಿ ನಿವೃತ್ತರಾದ ಹಿರಿಯ ಪತ್ರಿಕೋದ್ಯಮಿಗಳು. ಹನುಮಂತ ಭೀಮಪ್ಪ
ಹೂಗಾರ ಅವರು.
ಹುಬ್ಬಳ್ಳಿಯವರಾದ ಹನುಮಂತ ಹೂಗಾರ್ ಅವರು ವಿಶ್ವವಾಣಿ, ವಿಶಾಲ ಕರ್ನಾಟಕ, ನೇತಾಜಿ, ಲೋಕವಾಣಿ ಪತ್ರಿಕೆಗಳಲ್ಲಿ ಸಹಾಯಕ ಸಂಪಾದಕ, ಮುಖ್ಯವರದಿಗಾರ, ವಿಶೇಷ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು.
ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ಹನುಮಂತ ಹೂಗಾರ್ ಪತ್ರಿಕೋದ್ಯಮದ ಎಲ್ಲಾ ಒಳಹೊರಗುಗಳನ್ನು ಬಲ್ಲವರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ನಾಗಮಣಿ ಎಸ್.ರಾವ್

ಮುದ್ರಣ ಹಾಗೂ ವಿದ್ಯುನ್ಮಾನ ಎರಡೂ ಕ್ಷೇತ್ರಗಳಲ್ಲೂ ಕಾರ್ಯನಿರತ ಪತ್ರಕರ್ತರು ಎನಿಸಿಕೊಂಡ ಮೊದಲ ಮಹಿಳೆ ಶ್ರೀಮತಿ ನಾಗಮಣಿ.ಎಸ್.ರಾವ್ ಅವರು. ತಾಯಿನಾಡು ಪತ್ರಿಕೆಯಲ್ಲಿ ಕೆಲಸ ಮಾಡುವುದರ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ನಾಗಮಣಿ ಎಸ್.ರಾವ್ ಅವರು ಹೆಸರು ಮಾಡಿದ್ದು ಆಕಾಶವಾಣಿಯ ಸುದ್ದಿ ವಿಭಾಗದ ಭಾತೀದಾರರು ಹಾಗೂ ವಾರ್ತಾ ವಾಚಕರಾಗಿ, ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನೀಡುವ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಿಭಾಗವನ್ನು ಸಮರ್ಥವಾಗಿ ಕಟ್ಟುವಲ್ಲಿ ಶ್ರಮಿಸಿದವರಲ್ಲಿ ನಾಗಮಣಿ.ಎಸ್.ರಾವ್ ಅವರು ಪ್ರಮುಖರು.
ಕರ್ನಾಟಕ ಲೇಖಕಿಯರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾಗಮಣಿ ಎಸ್.ರಾವ್ ಅವರು ಪ್ರದೇಶ ಸಮಾಚಾರ ಓದುವುದರಲ್ಲಿ ಪಂಡಿತ ಪಾಮರರಿಬ್ಬರ ಮೆಚ್ಚುಗೆ ಪಡೆದವರು. ಸಾಹಿತ್ಯ ಕೃತಿಗಳನ್ನೂ ರಚಿಸಿರುವ ಇವರು ಟಿಎಸ್ಸಾರ್ ಪ್ರಶಸ್ತಿಯೂ ಸೇರಿದಂತೆ ಹಲವಾರು ವೃತ್ತಿ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಪ್ರೊ. ಹೆಚ್.ಎಸ್. ಈಶ್ವರ್

ಮಲೆನಾಡಿನಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿಯೂ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ|| ಎಚ್.ಎಸ್.ಈಶ್ವರ್ ಅವರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದವರು. ಪತ್ರಿಕೋದ್ಯಮ ಬೋಧಕರಾಗಿ ಶೈಕ್ಷಣಿಕ ವಲಯದಲ್ಲಿ ಜನಪ್ರಿಯರಾದ ಡಾ|| ಎಚ್.ಎಸ್.ಈಶ್ವರ್ ಮೂಲಭೂತವಾಗಿ ಮನಶಾಸ್ತ್ರಜ್ಞರು.
ವಿದೇಶಗಳಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾನಿಲಯ ಸಂವಹನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು.
ಮಾಧ್ಯಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಬಹಳ ಕೆಲಸ ಮಾಡಿರುವ ಡಾ|| ಎಚ್.ಎಸ್.ಈಶ್ವರ್ ಅವರು ಅನೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಮಾಧ್ಯಮ ಕುರಿತಂತೆ ಹಲವಾರು ಮೌಲ್ಯಯುತ ಬರವಣಿಗೆ ಮಾಡಿರುವ ಇವರು ಶ್ರೇಷ್ಠ ವಾಗಿ ಕೂಡ ಹೌದು. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಡಾ. ಮಹೇಶ್ ಜೋಷಿ

ಶಕ್ತಿಶಾಲಿ ಸಂವಹನ ವಾಹಕಗಳಾದ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಲವಲವಿಕೆಯಿಂದ ಜನರ ಬಳಿಗೆ ತರುವಲ್ಲಿ ಯಶ ಕಂಡವರು ಡಾ. ಮಹೇಶ್ ಜೋಷಿ ಅವರು.
ಪ್ರಸಾರ ಭಾರತಿಯ ಪ್ರಾದೇಶಿಕ ವಾಹಿನಿಗಳಲ್ಲಿ ಕನ್ನಡದ ‘ಚಂದನ’ಕ್ಕೆ ಹೊಸ ರೂಪ ನೀಡಿ ದೇಶದ 2 ಅತ್ಯುತ್ತಮ ವಾಹಿನಿಯನ್ನಾಗಿ ಅಣಿಗೊಳಿಸಿದ ಡಾ. ಮಹೇಶ್ ಜೋಷಿ ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ೨೦೦೫ರ ಸಾಲಿನ ಶ್ರೇಷ್ಟ ಕೇಂದ್ರವೆಂಬ ಪ್ರಶಸ್ತಿ ತಂದುಕೊಟ್ಟವರಲ್ಲಿ ಪ್ರಮುಖರು.
ಕಾರ್ಮಿಕ ಕಾನೂನು, ಪತ್ರಿಕೋದ್ಯಮ, ಕೈಗಾರಿಕಾ ಸಮನ್ವಯ ಹೀಗೆ ನಾಲ್ಕಾರು ವಿಷಯಗಳಲ್ಲಿ ಸ್ನಾತಕ ಪದವಿ ಪಡೆದಿರುವ ಮಹೇಶ್ ಜೋಷಿ ಅವರು ಮಾನವ ಹಕ್ಕು ಹಾಗೂ ಮಾಧ್ಯಮ ಕುರಿತು ಸಿದ್ಧಪಡಿಸಿದ ಪ್ರೌಢಪ್ರಬಂಧಕ್ಕೆ ಅಮೇರಿಕಾ ವಿಶ್ವವಿದ್ಯಾನಿಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದೂರದರ್ಶನವನ್ನು ಸಮೀಪದರ್ಶನವಾಗಿಸುವ ಧೈಯವಿಟ್ಟುಕೊಂಡ ಮಹೇಶ್ ಜೋಷಿ ನೇರಪ್ರಸಾರ, ನೇರ ಸಂವಾದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಜನತೆಯ ಸಮೀಪಕ್ಕೆ ದೂರದರ್ಶನವನ್ನು ಕೊಂಡೊಯ್ದಿದ್ದಾರೆ. ಬೆಂಗಳೂರು ದೂರದರ್ಶನದ ನಿರ್ದೆಶಕ ಡಾ. ಮಹೇಶ್ ಜೋಷಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಸಂಯೋಜಿಸಿದ್ದು ಅವರ ಪುರಸ್ಕಾರಗಳು ಹತ್ತು ಹಲವು.