ರಾ. ಸೀತಾರಾಂ

೮.೭.೧೯೧೮ ಸಂಗೀತ, ಚಿತ್ರಕಲೆ ಎರಡರಲ್ಲೂ ಸಾಧನೆ ಮಾಡಿರುವ ರಾ. ಸೀತಾರಾಂ ರವರು ಹುಟ್ಟಿದ್ದು ಮೈಸೂರು. ತಂದೆ ಸಂಗೀತ ಪ್ರೇಮಿಗಳಾದ ರಾಮಯ್ಯ, ತಾಯಿ ವರಲಕ್ಷ್ಮಮ್ಮ. ಸಹೋದರರಾದ ರಾ. ಚಂದ್ರಶೇಖರಯ್ಯ, ರಾ. ಸತ್ಯನಾರಾಯಣ, ರಾ. ವಿಶ್ವೇಶ್ವರನ್‌ ಎಲ್ಲರೂ ಸಂಗೀತ ವಿದ್ವಾಂಸರೆ. ತಾಯಿ, ತಂದೆಯಿಂದಲೇ ಗಾಯನ ಹಾಗೂ ವೀಣಾವಾದನ ಶಿಕ್ಷಣ. ವೀಣೆ ಶಿವರಾಮಯ್ಯನವರಲ್ಲಿ ಮುಂದುವರೆದ ಶಿಕ್ಷಣ. ಮೈಸೂರು ಮಹಾರಾಜರ ದರ್ಬಾರ್ ಹಾಲ್, ಶೃಂಗೇರಿ ಜಗದ್ಗುರುಗಳ ಆಸ್ಥಾನ, ತಿರುವಯ್ಯಾರ್ ತ್ಯಾಗರಾಜರ ಸಂಗೀತೋತ್ಸವಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮ. ಸಂಗೀತ, ಚಿತ್ರಕಲೆಯ ಬಗ್ಗೆ ನೀಡಿದ ಭಾಷಣ. ವಿದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮ. ಚಿತ್ರಕಲೆಯಲ್ಲಿ ಪಡೆದ ಡಿಪ್ಲೊಮ. ೧೯೪೦ ರಿಂದಲೂ ಹಲವಾರು ವರ್ಷ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಚಿತ್ರಕಲಾ ಪ್ರದರ್ಶನ. ದಕ್ಷಿಣಭಾರತ ಸೊಸೈಟಿ ಬೆಂಗಳೂರು, ಅಖಿಲ ಭಾರತ ಖಾದಿ ಪ್ರದರ್ಶನ, ಆಲ್‌ ಇಂಡಿಯಾ ಫೈನ್‌ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ ಕೋಲ್ಕತ್ತಾ, ಮೈಸೂರಿನ ಲಲಿತಕಲಾ ಮಹೋತ್ಸವ, ವಿರಾಜಪೇಟೆಯ ಕಲಾ ಮಹೋತ್ಸವ, ರಾಜ್ಯ ಚಿತ್ರಕಲಾ ವಿದ್ಯಾರ್ಥಿಗಳ ಸಮ್ಮೇಳನ ನಂಜನಗೂಡು ಮುಂತಾದೆಡೆ ಚಿತ್ರಕಲಾ ಪ್ರದರ್ಶನಗಳು. ಇವರ ಚಿತ್ರಗಳು ಜಾನಪದ ವಸ್ತು ಸಂಗ್ರಹಾಲಯ ಮತ್ತು ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ಸಂಗ್ರಹೀತ. ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಬಹುಮಾನ, ಪ್ರಶಸ್ತಿಗಳು ಶೃಂಗೇರಿ ಅವನಿ ಶಂಕರಮಠದಿಂದ ಚಿತ್ರಕಲಾ ನಿಪುಣ ಬಿರುದು, ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ವರಲಕ್ಷ್ಮೀ ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್ ಮುಖಾಂತರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಚಿತ್ರಕಲಾಶಿಕ್ಷಣ. ವರಲಕ್ಷ್ಮೀ ಅಕಾಡೆಮಿಯ ಮುಖಾಂತರ ಸಹೋದರರೆಲ್ಲರೂ ನೀಡುತ್ತಿದ್ದ ಸಂಗೀತಶಿಕ್ಷಣ. ಸಮಕಾಲೀನ ಸಂಗೀತ ಲೋಕಕ್ಕೆ ಇವರು ನೀಡಿದ ಕೊಡುಗೆಯನ್ನು ಸಂಗೀತ ವಿಮರ್ಶಕರಾದ ಬಿ.ವಿ.ಕೆ ಶಾಸ್ತ್ರಿಯವರು “ಇವರು ಅಭೇದ್ಯರು” ಎಂದು ಕರೆದು ತೋರಿದ ಗೌರವ.   ಇದೇ ದಿನ ಹುಟ್ಟಿದ ಕಲಾವಿದರು ರಾಮಚಂದ್ರ ವಿ. ಗುಡಿಯಾಳ – ೧೯೦೮ ಮೂರ್ತಿ ಟಿ.ಎಸ್‌ – ೧೯೨೪ ವಸಂತರಾವ ಇನಾಂದಾರ – ೧೯೪೮ ವೆಂಕಟೇಶ್‌. ಸಿ – ೧೯೭೨

* * *

ಶಿವರಾಮು

೮-೭-೧೯೩೬ ೧೪-೧೧-೧೯೯೯ ಶಿವರಾಮು ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್. ಶಿವರಾಮಯ್ಯನವರು ಹುಟ್ಟಿದ್ದು ಮಳವಳ್ಳಿಯಲ್ಲಿ. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಮಳವಳ್ಳಿ. ಕಾಲೇಜಿಗೆ ಸೇರಿದ್ದು ಎಂಜನಿಯರಿಂಗ್ ಓದಲು ಬೆಂಗಳೂರಿನ ಎಂಜನಿಯರಿಂಗ್ ಕಾಲೇಜಿಗೆ. ಆದರೆ ಅದೇಕೋ ಸ್ವಲ್ಪವೂ ಆಸಕ್ತಿ ಬೆಳೆಯದೆ ಓದನ್ನು ಅರ್ಧಕ್ಕೆ ನಿಲ್ಲಿಸಿ ಆರ್.ಎಸ್.ಎಸ್. ಕಾರ‍್ಯಕರ್ತರಾಗಿ ಊರೂರು ಸುತ್ತಿದರು. ಹೀಗೆ ಗಳಿಸಿದ ಅನುಭವದಿಂದ ವಿಕ್ರಮ ಪತ್ರಿಕೆಯಲ್ಲಿ, ರಾಷ್ಟ್ರೋತ್ಥಾನ ಸಾಹಿತ್ಯ ಮಾಲೆಯಲ್ಲಿ ನಂತರ ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕರಾಗಿ ದುಡಿದರು. ಪತ್ರಿಕೋದ್ಯಮದ ಜೊತೆಗೆ ಆರಿಸಿಕೊಂಡದ್ದು ಸಾಹಿತ್ಯಸೇವೆ. ಆದರೆ ೯೬-೯೭ರ ಹೊತ್ತಿಗೆ ಆರೋಗ್ಯ ಕೆಟ್ಟು  ಸುಧಾರಣೆಗಾಗಿ ವೈದ್ಯರ ಸಲಹೆಯಂತೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಬಳಿಯ ಈಂದಬೆಟ್ಟು ಗ್ರಾಮದಲ್ಲಿ ವಾಸ. ಅಲ್ಲೂ ಸಾಹಿತ್ಯ ಪ್ರಿಯರು ಇವರನ್ನು ಬಿಡದೆ ಬೆಳ್ತಂಗಡಿ ತಾಲ್ಲೂಕಿನ ಐದನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಗೌರವ. ಶಿವರಾಮುರವರು ಕವಿಯಾಗಿ, ಚರಿತ್ರಕಾರರಾಗಿ, ವಿಚಾರ ಸಾಹಿತ್ಯದ ನಿರ್ಮಾಪಕರಾಗಿ, ಹಾಸ್ಯ-ವಿಡಂಬನೆ-ಪ್ರಬಂಧಕಾರರಾಗಿ, ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅಚ್ಚೊತ್ತಿದ ಭಾರತೀಯ ಸಂಸ್ಕೃತಿಯ ಸಾಕಾರ ರೂಪ. ಕನ್ನಡಕ್ಕೆ ಹಲವಾರು ಪುಸ್ತಕಗಳ ಅನುವಾದ. ಸಾವರ್ಕರರ ‘ಗೋಮಾಂತಕ’ ಗದ್ಯರೂಪವನ್ನು ‘ನೆತ್ತರು-ತಾವರೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ. ಪಾಕಿಸ್ತಾನ, ಚೀನಾಗಳ ಜೊತೆ ಭಾರತೀಯ ಸೈನಿಕರ ಹೋರಾಟದ ಕಥೆ ‘ರಣವೀಳ್ಯ.’ ಸ್ವಾಮಿ ವಿವೇಕಾನಂದರ ಶಿಷ್ಯೆಯ ಅರ್ಪಣ ಭಾವದ ಕಥೆ ‘ಅಕ್ಕ ನಿವೇದಿತಾ’. ಸ್ವಧರ್ಮ, ಸ್ವದೇಶ ಸೇವೆಗಾಗಿ ಕೆಚ್ಚಿನಿಂದ ಹೋರಾಡಿದ ಅಮೋಘವರ್ಷ, ನೃಪತುಂಗ, ಗಂಡುಗಲಿ ಕುಮಾರರಾಮ, ಕಿತ್ತೂರು ರಾಣಿ ಚೆನ್ನಮ್ಮ, ಮುಂಡರಗಿ ಭೀಮರಾಯರು ಮುಂತಾದ ೧೩ ಜನ ಕನ್ನಡ ವೀರ ಪುರುಷರ, ಮಹಿಳೆಯರ ಸಂಸ್ಮರಣೆಯ ಕೃತಿ ‘ಕನ್ನಡ ಕಡುಗಲಿಗಳು’ ಪ್ರಕಟಿತ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ ಭಾರತ-ಭಾರತಿ ಮಾಲಿಕೆಗಾಗಿ ವಲ್ಲಭಾಯ್ ಪಟೇಲ್, ನಂದನಾರ್, ಬಾಜಿಪ್ರಭು, ಸುಶೀಲಕುಮಾರ ಸೇನ್ ಮುಂತಾದವರ ಜೀವನಚರಿತ್ರೆ. ಇವರ ಅತ್ಯಂತ ಮಹತ್ವದ ಕೃತಿ ‘ಆತ್ಮಾಹುತಿ’, ವೀರ ಸಾವರಕರರ ಜೀವನ ಚರಿತ್ರೆಯ ಕಾದಂಬರಿ ರೂಪ. ಮತ್ತೊಂದು ಪ್ರಮುಖ ಕೃತಿ ‘ಒಂದು ಕಥೆ-ಒಂದು ವ್ಯಥೆ.’ ಉಜ್ವಲ ರಾಷ್ಟ್ರಗೀತೆಗೆ ಬಂದೊದಗಿದ ಅವನತಿಯನ್ನು ವಿವರಿಸುವ ಕೃತಿ. ಹಿಂದೂ ಬಂಡಾಯ, ಅರಳ ಸುರಳಿ-ಕವನ ಸಂಕಲನಗಳು. ಚಿನ್ನದ ಕತ್ತಿ-ವಿಡಂಬನ ಕೃತಿ. ಯಾರನ್ನು ಹೊಗಳದ ಕಾರಂತರಿಂದ ಪ್ರಶಂಶಿಸಲ್ಪಟ್ಟ ಕೃತಿ ಇದು. ಭಾರತೀಯ ಧರ‍್ಮ ಪರಂಪರೆ, ದೇಶಪ್ರೇಮ ಮುಂತಾದುವುಗಳ ಬಗ್ಗೆ ಚಿಂತಿಸುತ್ತಿದ್ದ ಉಜ್ವಲ ರಾಷ್ಟ್ರಪ್ರೇಮಿ ಕಣ್ಮರೆಯಾದುದು ೧೯೯೯ ನವಂಬರ್ ೧೪ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಪ್ರೊ. ಎಸ್.ಆರ್. ಮಳಗಿ – ೧೯೧೦ ಪ್ರೊ. ಸಂಜೀವಶೆಟ್ಟಿ – ೧೯೪೫

ಪ್ರಹ್ಲಾದ ಕುಮಾರ ಭಾಗೋಜಿ

೧೭.೦೭.೧೯೨೫ ೧೯.೦೭.೨೦೦೦  ಬೆಳಗಾವಿಯ ಬಹುದೊಡ್ಡ ವಿದ್ವಾಂಸರು, ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರೂ ಆಗಿದ್ದ ಭಾಗೋಜಿಯವರು ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ಪ್ರಹ್ಲಾದ ಗೋವಿಂದ ಕುಲಕರ್ಣಿ (ಪ್ರ.ಗೋ.ಕುಲಕರ್ಣಿ). ತಂದೆ ಮಗ ಇಬ್ಬರೂ ಹುಟ್ಟಿದ ದಿವಸ ಜುಲೈ ೧೭ ಆಗಿರುವುದು ಇದೊಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಸೋಜಿಗದ ಸಂಗತಿಯಾಗಿದೆ. ತಂದೆಗೆ, ಮಗ ಪ್ರೌಢಶಾಲಾ ಶಿಕ್ಷಕನಾಗಬೇಕೆಂಬ ಆಸೆಯಿಂದ ಸ್ವತ: ಮಗನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆಗೆಲ್ಲ ಪ್ರಾರಂಭಿಕ ಶಿಕ್ಣಣ ಕನ್ನಡ ಭಾಷೆಯಲ್ಲಿದ್ದರೆ, ಪ್ರೌಢಶಾಲಾ ಶಿಕ್ಷಣ ಇಂಗ್ಲಿಷ್ ಭಾಷೆಯಲ್ಲಿರುತ್ತಿತ್ತು. ಕಠಿಣವಾದ ಇಂಗ್ಲಿಷ್ ಭಾಷೆಯನ್ನು  ಕಲಿತು ಮೆಟ್ರುಕ್ಯುಲೇಷನ್ ನಲ್ಲಿ ಉತ್ತಮ ಅಂಕಗಳಿಸಿ ನಂತರ ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನು (೧೯೪೮) ಪ್ರಥಮ ದರ್ಜೆಯಲ್ಲೇ ಪಡೆದರು. ೧೯೫೦ರಲ್ಲಿ ಎಂ.ಎ.ತರಗತಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ಉತ್ತೀರ್ಣರಾದರಲ್ಲದೆ ಬಿ.ಎಡ್, ಎಂ.ಎಡ್. ಪದವಿಯನ್ನೂ ಗಳಿಸಿದರು. ಕಾಲೇಜು ದಿನಗಳಿಂದಲೇ ತಮ್ಮ ನಿರಂತರ ಅಧ್ಯಯನದಿಂದ ಕಾವ್ಯ, ನಾಟಕ, ಕಾದಂಬರಿಗಳ ಓದಿನ ಜೊತೆಗೆ ಪಾಶ್ಚಾತ್ಯ ಕಾವ್ಯ ಮೀಮಾಂಸೆಯನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಭರತನ ನಾಟ್ಯ ಶಾಸ್ತ್ರ ದಂಡಿಯ ಕಾವ್ಯಾದರ್ಶ, ಆನಂದ ವರ್ಧನನ  ಧ್ವನ್ಯಾಲೋಕ ಮುಂತಾದವುಗಳೆಲ್ಲವೂ ಕರತಲಾಮಲಕವಾಗಿದ್ದವು. ಭಾಷಾಶಾಸ್ತ್ರ ಹಾಗೂ ಛಂದ: ಶಾಸ್ತ್ರಗಳು ತಂದೆಯಿಂದ ರಕ್ತಗತವಾಗಿ ಬಂದ ವಿದ್ಯೆಯಾಗಿತ್ತು. ಕನ್ನಡ, ಸಂಸ್ಕೃತಗಳಲ್ಲದೆ  ವಿ.ಜಿ. ಕುಲಕರ್ಣಿಯವರ ಸಲಹೆಯಂತೆ ಇಂಗ್ಲಿಷ್ ಭಾಷೆಯನ್ನು ಗಂಭೀರವಾಗಿ ಅಭ್ಯಸಿಸಿದರು. ಶೆಲ್ಲಿ,  ಕೀಟ್ಸ್, ವರ್ಡ್ಸವರ್ತ್, ಬೈರನ್, ಎಲಿಯಟ್, ಏಟ್ಸ್ ಮುಂತಾದವರನ್ನೆಲ್ಲ ಪರಿಚಯಿಸಿಕೊಂಡರು. ಆನರ್ಸ್ ತರಗತಿಗಳಿಗೆ ಬೋಧಿಸುವ ಶಕ್ತಿ ಸಾಮರ್ಥ್ಯಗಳಿದ್ದರೂ ಅಧ್ಯಾಪಕರಾಗಿ ಹೋದದ್ದು ಕಾರವಾರದ ಕಾಲೇಜಿಗೆ. ಅಲ್ಲಿ ತಮ್ಮ ಶ್ರೀಮತಿಯವರ ಅಕಾಲ ಮರಣದಿಂದ ಈ ಕೆಲಸವೂ ಬೇಸರ ತರಿಸಿದಾಗ , ಅಷ್ಟರಲ್ಲಿ ಬೆಳಗಾವಿಯ ರಾಣಿ ಪಾರ್ವತಿದೇವಿಯ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ಕ.ಗಿ.ಕುಂದಣಗಾರರ ಅಪೇಕ್ಷೆಯಂತೆ ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನವನ್ನಾರಂಭಿಸಿದರು.(೧೯೫೪). ಬೆಳಗಾವಿಯಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಮರಾಠಿಗರ ತಿರಸ್ಕಾರ, ಕುಚೇಷ್ಟೆ, ಅವಮಾನಗಳಿಗೆ ಕಡಿವಾಣ ಹಾಕಿ, ಕನ್ನಡಕ್ಕೆ ಗೌರವ ತರುವಂತಹ ಕೆಲಸಮಾಡಬೇಕೆಂದು ನಿರ್ಧರಿಸಿ ಬೆಳಗಾವಿಯಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು ಪಣತೊಟ್ಟರು. ತಾವು ನಿರ್ವಹಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ  ಆಯ್ಕೆಯಾದಾಗ ಪೂರ್ವ ಪ್ರಾಥಮಿಕ ತರಗತಿಗಳನ್ನಾರಂಭಿಸಲು ಯೋಜನೆಯೊಂದು ಸಿದ್ಧವಿದ್ದು ಆಂಗ್ಲ ಭಾಷೆಗೆ ಬೇಡಿಕೆ ಇದ್ದರೂ ಕನ್ನಡದಲ್ಲೇ ತರಗತಿಗಳನ್ನು ಪ್ರಾರಂಭಿಸಿ ಕೆಲವೇ ವರ್ಷಗಳಲ್ಲಿ ಏಳು ನೂರಕ್ಕೂ ಹೆಚ್ಚು ಮಕ್ಕಳು ಕನ್ನಡ ಕಲಿಯತೊಡಗಿದರು. ಜೊತೆಗೆ ಮುಂಬಯಿ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಮಂಗಳೂರು, ಗುಲ್ಬರ್ಗ,ವಿಶ್ವವಿದ್ಯಾಲಯಗಳ ಸಂಪರ್ಕಹೊಂದಿ ಸೇವೆಸಲ್ಲಸಿದ್ದಲ್ಲದೆ ಹತ್ತು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿಯೂ ಕಾರ‍್ಯ ನಿರ್ವಹಿಸಿದರು. ಕನ್ನಡದಲ್ಲಿ ಸುಮಾರು ಹತ್ತು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಒಂದೆರಡು ಅನುವಾದಿಸಿದ ಕೃತಿಗಳಾದರೆ, ಮೂರು ಸಂಪಾದಿಸಿದ ಕೃತಿಗಳೂ ಸೇರಿವೆ. ಇವುಗಳಲ್ಲಿ ಬಹು ಪ್ರಸಿದ್ಧ ಕೃತಿಗಳೆಂದರೆ ‘ರಸಗವಳ’ ಹಾಗೂ ‘ನನ್ನ ಬೆಳಗಾವಿ’. ‘ರಸಗವಳ’ ವಿಮರ್ಶಾ ಪ್ರಬಂಧ ಸಂಕಲನವಾದರೆ , ‘ನನ್ನ ಬೆಳಗಾವಿ’ ಕೃತಿಯಲ್ಲಿ ಬೆಳಗಾವಿಯ ೫೦ ವರ್ಷಗಳ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತಾ ಹೋದಂತೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನೂ ಕಟ್ಟಿ ಕೊಟ್ಟಿದ್ದಾರೆ. ಹೆಚ್ಚು ಪುಸ್ತಕಗಳನ್ನು ಬರೆಯದೆಹೋದರೂ ಪುಸ್ತಕ ಸಂಸ್ಕೃತಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಬೆಳಗಾವಿಯಲ್ಲಿ ೧೯೯೪ರಲ್ಲಿ ಸಾಹಿತ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ಇವರು ಅದರ ಅಧ್ಯಕ್ಷರಾಗಿದ್ದರೆ ಹಾಸ್ಯ ಸಾಹಿತಿ ಅನಂತ ಕಲ್ಲೋಳರು ಕಾರ‍್ಯದರ್ಶಿಯಾಗಿ ಇವರೊಡನೆ ಭೀಮಸೇನ ತೋರಗಲ್ಲ, ವೆಂ.ಲ.ಜೋಶಿ ಮುಂತಾದವರು ಜೊತೆಗೂಡಿದರು. ಪ್ರತಿವರ್ಷವೂ ‘ಸಿರಿಗನ್ನಡ’ ಪ್ರಶಸ್ತಿಯನ್ನು ಈಗಲೂ ನೀಡುತ್ತಾ ಬಂದಿದೆ. ಪ್ರಹ್ಲಾದ ಕುಮಾರ ಭಾಗೋಜಿಯವರ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಭಿಮಾನಿಗಳು ಹೊರತಂದ ಸಂಚಿಕೆ ‘ಅಣ್ಣಯ್ಯ’, ಇದಾದ ನಂತರ ಪ್ರಹ್ಲಾದ ಕುಮಾರ ಭಾಗೋಜಿಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದದ್ದು ೨೦೦೦ದ ಜುಲೈ ೧೯ರಂದು.

ಪ. ರಾಮಕೃಷ್ಣಶಾಸ್ತ್ರಿ

..೧೯೫೩ ಗಹನವಾದ ವಿಷಯಗಳನ್ನು ಮಕ್ಕಳಿಗೆ ತಿಳಿಯುವಂತೆ, ಅವರ ಮನಸ್ಸಿಗೆ ಮುಟ್ಟುವಂತೆ ಸರಳವಾಗಿ, ಸುಂದರವಾಗಿ, ಆಕರ್ಷಕ. ಶೈಲಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸವೆ. ಆದರೂ ಮಕ್ಕಳ ಮನೋವಿಕಾಸಕ್ಕೆ ಅನುಕೂಲವಾಗುವಂತಹ, ರಂಜನೀಯವಾದ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿರುವ ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು ೧೯೫೩ರ ಜುಲೈ ೭ರಂದು ದ.ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ.

ಡಾ. ಎಚ್‌. ಎ. ಪಾರ್ಶ್ವನಾಥ್‌

೦೭.೦೭.೧೯೪೭ ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಾಹಿತಿ, ರಂಗನಟ, ಹವ್ಯಾಸಿ ಪತ್ರಕರ್ತರಾದ ಪಾರ್ಶ್ವನಾಥರು ಹುಟ್ಟಿದ್ದು ಹಾಸನ, ತಂದೆ ಎಚ್‌. ಡಿ ಅನಂತರಾಮಯ್ಯ, ತಾಯಿ ಪ್ರಭಾವತಮ್ಮ. ಇದೀಗ ಧಾರವಾಡದ ಎಸ್‌.ಡಿ. ಎಂ. ಮೆಡಿಕಲ್‌ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿರ್ವಹಿಸುತ್ತಿರುವ ಹುದ್ದೆ. ಕಾಲೇಜಿನಲ್ಲಿದ್ದಾಗಲೇ ನಾಟಕಗಳ ರಚನೆ, ಅಭಿನಯಗಳತ್ತ ಒಲಿದ ಮನಸ್ಸು. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಿಪ್ಲೊಮ ಇನ್‌ಡ್ರಮಾಟಿಕ್ಸ್‌. ನಿನಾಸಂ ರಸಗ್ರಹಣ ಶಿಬಿರ, ಪೂನಾಫಿಲಂ ಇನ್‌ಸ್ಟಿಟ್ಯೂಟ್‌, ಕರ್ನಾಟಕ ನಾಟಕ ಅಕಾಡಮಿ ನಾಟಕ ಸಾಹಿತ್ಯ ಶಿಬಿರ, ಹುಬ್ಬಳ್ಳಿಯ ಅಭಿನಯ ಭಾರತಿ ಮತ್ತು ಸಮುದಾಯ ರಂಗಮೇಳ, ಪಲ್ಲವಿ, ರಂಗಾಯಣ ಮುಂತಾದ ಶಿಬಿರಗಳಲ್ಲಿ ಪಡೆದ ತರಬೇತಿ. ರಂಗನಟನಾಗಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರ, ವಿಷಜ್ವಾಲೆ, ಅಳಿಯ ದೇವರು, ಸಮಯಕ್ಕೊಂದು ಸುಳ್ಳು, ಜಾತ್ರೆ, ಗಂಡಸ್ಕತ್ರಿ, ಅನುಕೂಲಕ್ಕೊಬ್ಬಣ್ಣ, ಕವಿಭಿಕ್ಷೆ, ಬಿರುತುಂದೆಂಬರಗಂಡ, ತಾಮ್ರಪತ್ರ, ನಾನೇ ಬಿಜ್ಜಳ, ಬೇಲಿ ಮತ್ತು ಹೊಲ, ಪೋಲೀಸರಿದ್ದಾರೆ ಎಚ್ಚರಿಕೆ ಮುಂತಾದ ನಾಟಕಗಳ ಅಭಿನಯದಿಂದ ಬಂದ ಖ್ಯಾತಿ. ಆಕಾಶವಾಣಿಯ ವಿಗಡವಿಕ್ರಮರಾಯ, ಭಗವದಜ್ಜುಕೀಯ, ಅವಾಂತರ ಮುಂತಾದ ನಾಟಕಗಳಲ್ಲಿ ಭಾಗಿ. ಸಂತ ಶಿಶುನಾಳ ಷರೀಫ, ಖಂಡವಿದೆಕೋ ಮಾಂಸವಿದೇಕೋ, ಜನುಮದ ಜೋಡಿ, ಹೃದಯವಂತ, ಮಂಜುಮುಸುಕಿದ ಹಾದಿ ಮುಂತಾದ ಚಲನಚಿತ್ರಗಳಲ್ಲಿ ಮತ್ತು ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿನ ನಟ. ಕೈಲಾಸಂ ಶತಮಾನೋತ್ಸವ, ರಂಗ ಸಂಗೀತ, ಬಳ್ಳಾರಿ ಜಿಲ್ಲಾ ರಂಗಭೂಮಿ, ಮುಂತಾದುವುಗಳಲ್ಲಿ ಪ್ರಬಂಧ ಮಂಡನೆ. ಹಲವಾರು ರಂಗಸಂಸ್ಥೆಗಳೊಡನೆ ಒಡನಾಟ. ಹದಿನೈದಕ್ಕೂ ಹೆಚ್ಚು ರಂಗ ಕೃತಿಗಳ ಪ್ರಕಟಣೆ. ಮೈಸೂರಿನ ರಂಗಜ್ಯೋತಿ, ಹೊಯ್ಸಳ ಪ್ರಶಸ್ತಿ, ಬೆಂಗಳೂರಿನ ಚೇತನ ಪ್ರಶಸ್ತಿ, ಜ್ಞಾನ ಸಾಗರ ಪ್ರಶಸ್ತಿ, ಕೊಪ್ಪಳದ ಸಿದ್ಧಯ್ಯ ಪುರಾಣಿಕ ಪ್ರಶಸ್ತಿ, ಧಾರವಾಡದ ಬಸವರಾಜ ಮನಸೂರ ಪ್ರಶಸ್ತಿ ಮುಖ್ಯವಾದವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಗುರು ಎಂ. ಈ. – ೧೯೨೩ ಕೃಷ್ಣಮೂರ್ತಿ ಸಿ. – ೧೯೩೫ ಗಣೇಶ್‌. ಬಿ.ಎ. – ೧೯೬೪ ಸರ್ವೇಶ್‌ – ೧೯೭೦.

* * *

ಡಾ. ಸಿ. ಅನ್ನಪೂರ್ಣಮ್ಮ

೭-೭-೧೯೨೮ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ, ವೈದ್ಯಸಾಹಿತಿ ಅನ್ನಪೂರ್ಣಮ್ಮನವರು ಹುಟ್ಟಿದ್ದು ಸಂಸ್ಕೃತ ಗ್ರಾಮವಾದ ಮತ್ತೂರಿನಲ್ಲಿ. ತಂದೆ ವೇದಪಾರಂಗತರಾದ ಚನ್ನಕೇಶವ ಶಾಸ್ತ್ರಿಗಳು, ತಾಯಿ ಮೀನಾಕ್ಷಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲೇ. ಹೈಸ್ಕೂಲಿಗೆ ಸೇರಿದ್ದು ಬೆಂಗಳೂರಿನ ವಾಣಿವಿಲಾಸ ಹೈಸ್ಕೂಲು, ಮಹಾರಾಣಿ ಕಾಲೇಜಿನಿಂದ ಇಂಟರ್ ಮೀಡಿಯೆಟ್. ಶೇ. ೯೮ರಷ್ಟು ಅಂಕಗಳಿಸಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸಿಕ್ಕಿದ ಸೀಟು. ಉನ್ನತ ದರ್ಜೆಯಲ್ಲಿ ಎಂ.ಬಿ.ಬಿ.ಎಸ್. ಪದವಿ, ವೆಲ್ಲೂರಿನಿಂದ ಡಿ.ಜಿ.ಓ., ನಾಗಪುರ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ (ಎಂ.ಎಸ್.) ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ೩೦ ವರ್ಷಕಾಲ ತಮಿಳುನಾಡಿನಲ್ಲಿ ಸೇವೆ. ಸಂಗೀತಾಸಕ್ತೆ, ಸಮಾಜ ಸೇವೆಯಲ್ಲಿ ಮುಂಚೂಣಿ ಕಾರ‍್ಯಕರ್ತೆ. ಕ್ಯಾನ್ಸರ್, ಏಡ್ಸ್, ಆಹಾರ, ನೈರ್ಮಲ್ಯ, ತಂಬಾಕು, ಸಿಗರೇಟು, ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಆರೋಗ್ಯ ಸಂವಾದ, ಭಾಷಣ ಕಾರ‍್ಯಕ್ರಮಗಳು. ಅಮೆರಿಕಾ ಸಂಸ್ಥಾನದ ಉದ್ದಗಲಕ್ಕೂ ಸಂಚರಿಸಿದ್ದಲ್ಲದೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್, ಫಿಲಿಫೈನ್ಸ್ ಮತ್ತು ಶ್ರೀಲಂಕಾಗಳಲ್ಲಿ ವ್ಯಾಪಕ ಪ್ರವಾಸ, ಪಡೆದ ಅನುಭವ. ನಿವೃತ್ತಿಯ ನಂತರ ೬೦ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ವೈದ್ಯ ಸಾಹಿತ್ಯ ಕೃಷಿ. ಆರೋಗ್ಯದ ಬಗ್ಗೆ ಕೃತಿರಚನೆ. ಹದಿಹರೆಯದ ಹೆಣ್ಣು, ಹೊಸಜೀವದ ಹುಟ್ಟು, ಋತುಚಕ್ರ, ವೈದ್ಯರೊಂದಿಗೆ ಮiತುಕತೆ, ಪ್ರೌಢಮಹಿಳೆ ಮುಂತಾದುವು. ಮಕ್ಕಳ ಲಾಲನೆ ಪಾಲನೆ ಬಗ್ಗೆ-ನಿಮ್ಮ ಮಗು ಆರೋಗ್ಯವಾಗಿರಬೇಕು, ಪುಟ್ಟ ಮಗು ಹೀಗಿರಲಿ, ಆರೋಗ್ಯ ಮಾರ್ಗದರ್ಶಿ, ನೀವು ಮತ್ತು ನಿಮ್ಮ ಮಗು ಹೀಗೆ ಸುಮಾರು ೩೦ಕ್ಕೂ ಹೆಚ್ಚು ವೈದ್ಯ ಸಾಹಿತ್ಯ ಕೃತಿ ಪ್ರಕಟಿತ. ವಿಕಲಚೇತನರ (ಅಂಗವಿಕಲರ) ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿದ್ದು ‘ಅನ್ನಪೂರ್ಣಮ್ಮ ಪ್ರತಿಷ್ಠಾನ.’ ಪ್ರತಿವರ್ಷ ವಿಕಲಚೇತನರಿಗೆ ಕನ್ನಡಕ, ತಳ್ಳು ಕುರ್ಚಿ, ಕೃತಕ ಕಾಲುಗಳು ಮುಂತಾದ ಹಲವಾರು ಅಗತ್ಯ ಉಪಕರಣಗಳು, ವೈದ್ಯಕೀಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ, ಸಮಾಜದಲ್ಲಿ ಗಣನೀಯ ಸೇವೆಗೈದ ವೈದ್ಯರಿಗೆ (ಪ್ರಸೂತಿ ವಿಭಾಗ), ತಾವೇ ಇಟ್ಟಿರುವ ಲಕ್ಷ ರೂಗಳ ಪುದುವಟ್ಟಿನಿಂದ ಬಂದ ಬಡ್ಡಿಯಲ್ಲಿ ಸನ್ಮಾನ ಮುಂತಾದ ಪ್ರೋತ್ಸಾಹಕ ಕಾರ‍್ಯಕ್ರಮಗಳು. ಇವರಿಗೆ ಸಂದ ಗೌರವ ಪುರಸ್ಕಾರಗಳು-ಬಿ.ಸಿ. ರಾಯ್ ಪ್ರಶಸ್ತಿ, ವಿಶ್ಚವ ಮಹಿಳಾ-೯೫ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಸದೋದಿತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ವೈದ್ಯ ಸಾಹಿತ್ಯ ಶ್ರೀ ಪ್ರಶಸ್ತಿ, ಪಿ.ಎಸ್. ಶಂಕರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಂತಾದುವು. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥಗಳು ‘ಸಂಜೀವಿನಿ’, ‘ಅನ್ನಪೂರ್ಣ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಪಾರ್ಶ್ವನಾಥ. ಎಚ್.ಎ. – ೧೯೪೭ ಪ. ರಾಮಕೃಷ್ಣಶಾಸ್ತ್ರಿ – ೧೯೫೩ ಎನ್.ಎಸ್. ವೀರಪ್ಪ – ೧೯೧೦

ದೇಜಗೌ

೬-೭-೧೯೧೮ ಸದಾ ಕನ್ನಡ ಪರ ಕಾಳಜಿ ತೋರುತ್ತಾ ಬಂದಿರುವ ದೇ.ಜ.ಗೌ.ರವರು ಹುಟ್ಟಿದ್ದು ಚೆನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ. ತಂದೆ ದೇವೆಗೌಡ, ತಾಯಿ ಚೆನ್ನಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಚನ್ನಪಟ್ಟಣ. ಕಾಲೇಜು ವಿದ್ಯಾಭ್ಯಾಸ ಬೆಂಗಳೂರು. ಬಿ.ಎ. (ಆನರ್ಸ್) ಪದವಿ. ಕೆಲಕಾಲ ವಿದ್ಯಾ ಇಲಾಖೆಯಲ್ಲಿ ಗುಮಾಸ್ತೆ ಕೆಲಸ. ನಂತರ ಮೈಸೂರಿಗೆ ಹೋಗಿ ಕುವೆಂಪು ಶಿಷ್ಯರಾಗಿ ಎಂ.ಎ. ಪದವಿ. ಮಹಾರಾಜಾ ಕಾಲೇಜು ಅಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಕಾರಿಯಾಗಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ, ಮೈಸೂರು ವಿ.ವಿ.ದಲ್ಲಿ ಕನ್ನಡ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ, ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಕಾರಣರಾಗಿ, ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ-ಹೀಗೆ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆ. ಜಾನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಸಂಪಾದನೆ, ವಿಶ್ವ ಕೋಶ ಮೊದಲಾದ ಎಲ್ಲ ಅಧ್ಯಯನ ಕ್ಷೇತ್ರಗಳನ್ನೂ ಒಂದೆಡೆ ತಂದ ಕೀರ್ತಿ. ಕನ್ನಡ ಮಾಧ್ಯಮದ ಪಠ್ಯ-ಸಂದರ್ಭ ಗ್ರಂಥಗಳು ಲಭ್ಯವಾಗುವಂತೆ ಕಾರ‍್ಯ ನಿರ್ವಹಣೆ. ಜಾನಪದ ಸಾಹಿತ್ಯ ಸಂಗ್ರಹಣೆ, ಪ್ರಕಟಣೆ. ಅಧ್ಯಯನ, ಅಧ್ಯಾಪನ, ಸಂಶೋಧನೆಗಳಿಗೆ ನೀಡಿದ ಮಹತ್ವ. ಕನ್ನಡದ ಮಾಧ್ಯಮದ ಪರವಾಗಿ ತೆಗೆದುಕೊಂಡ ದಿಟ್ಟ ನಿಲುವುಗಳು. ಲೋಕಸೇವಾ ಆಯೋಗದಂತಹ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರಕಿಸಿಕೊಡಲು ನಡೆಸಿದ ಹೋರಾಟ. ವಿಶ್ವವಿದ್ಯಾಲಯದ ಗೆಜೆಟ್ಟಿನ ಕನ್ನಡ ಆವೃತ್ತಿ, ಆಡಳಿತದಲ್ಲಿ ಕನ್ನಡದ ವ್ಯಾಪಕ ಬಳಕೆಗೆ ತೋರಿದ ಪರಿಶ್ರಮ. ‘ವಿಶ್ವಕೋಶ’ದಂತಹ ಯೋಜನೆಯ ಕಾರ‍್ಯಗತ. ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ . ಕುವೆಂಪು ವಿದ್ಯಾಪರಿಷತ್ತಿನ ಆಶ್ರಯದಲ್ಲಿ ಶಾಲಾ ಕಾಲೇಜು ಸ್ಥಾಪನೆ. ನಿವೃತ್ತಿಯ ನಂತರವೂ ಕನ್ನಡಕ್ಕೆ ಹೋರಾಟ. ನೂರಾರು ಪುಸ್ತಕಗಳು ಪ್ರಕಟ. ಅನುವಾದ-ನೆನಪು ಕಹಿಯಲ್ಲ, ಪುನರುತ್ಥಾನ, ಯುದ್ಧ ಮತ್ತು ಶಾಂತಿ, ಅನ್ನಕರೆನಿನಾ, ಹಮ್ಮು-ಬಿಮ್ಮು, ಅಕ್ಬರ್. ಸಂಪಾದಿತ-ಸ್ಥಳನಾಮ ವ್ಯಾಸಂಗ, ಪುಣ್ಯಶ್ರವ, ಲೀಲಾವತಿ ಪ್ರಬಂಧಂ, ನಳಚರಿತ್ರೆ. ಜಾನಪದ-ಜಾನಪದವಾಹಿನಿ, ಜನಪದ ಗೀತಾಂಜಲಿ, ಜಾನಪದ ಅಧ್ಯಯನ, ಜಾನಪದ ಸೌಂದರ‍್ಯ, ಕುವೆಂಪುರವರ ಶ್ರೀರಾಮಾಯಣ ದರ್ಶನಂನ ವಚನರೂಪ ಶ್ರೀರಾಮಾಯಣ ವಚನ ಚಂದ್ರಿಕೆ. ಜೀವನಚರಿತ್ರೆ-ತೀನಂಶ್ರೀ, ಕೆ.ವಿ. ಶಂಕರಗೌಡ, ನಿಜಲಿಂಗಪ್ಪ, ಕುವೆಂಪು. ಪ್ರವಾಸಸಾಹಿತ್ಯ-ವಿಸ್ಮಯಗಳ ನಾಡಿನಲ್ಲಿ, ವಿದೇಶದಲ್ಲಿ ನಾಲ್ಕುವಾರ, ಆಫ್ರಿಕಾಯಾತ್ರೆ, ಯೇಸು ವಿಭೀಷಣರ ನಾಡಿನಲ್ಲಿ ಮುಂತಾದುವು. ಆತ್ಮಕಥೆ-ಹೋರಾಟದ ಬದುಕು. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಅನುವಾದ ಅಕಾಡಮಿ ಪ್ರಶಸ್ತಿ. ಕರ್ನಾಟಕ ವಿ.ವಿ. ಮತ್ತು ಕುವೆಂಪು ವಿ.ವಿ.ದ ಗೌರವ ಡಾಕ್ಟರೇಟ್. ಗೌರವ ಗ್ರಂಥಗಳು-ಅಂತಃಕರಣ, ರಸಷಷ್ಠಿ, ಅಮೃತವರ್ಷ, ದೇಜಗೌ ವ್ಯಕ್ತಿ ಮತ್ತು ಸಾಹಿತ್ಯ, ಎಪ್ಪತ್ತರ ಹೊಸ್ತಿಲಲ್ಲಿ, ನಮ್ಮ ನಾಡೋಜ.   ಇದೇ ದಿನ ಹುಟ್ಟಿದ ಸಾಹಿತಿಗಳು : ಪದ್ಮಾಮೂರ್ತಿ – ೧೯೩೨ ಎಂ.ಬಿ. ಸಾಮಗ – ೧೯೫೪

ಬಿ.ಎಂ. ಸುಂದರರಾವ್‌

೦೬.೦೭.೧೯೩೮ ಕೊಳಲು ವಾದನದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಸುಂದರರಾವ್‌ ರವರು ಹುಟ್ಟಿದ್ದು ಕೋಲಾರದಲ್ಲಿ. ತಂದೆ ಮುರಹರಿರಾವ್‌, ತಾಯಿ ಸುಗಂಧಾಬಾಯಿ. ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ ಆದರೂ ಕೊಳಲು ವಾದನದತ್ತ ಹರಿದ ಮನಸ್ಸು. ಪ್ರಾರಂಭಿಕ ಶಿಕ್ಷಣ ಚಿಕ್ಕಪ್ಪ ಹಾಗೂ ದೊಡ್ಡಪ್ಪನವರಲ್ಲಿ. ಅಂಬಳೆ ರಾಮಸ್ವಾಮಿ, ಎಂ. ಕೆ. ಸುಬ್ಬರಾವ್‌, ಎಸ್‌.ಪಿ. ನಟರಾಜನ್‌ ರವರಲ್ಲಿ ಮುಂದುವರೆದ ಶಿಕ್ಷಣ. ನಾದ ಬ್ರಹ್ಮ ಟಿ.ಆರ್. ಮಹಾಲಿಗಮ್‌ರವರಲ್ಲಿ ಗುರುಕುಲ ಪದ್ಧತಿಯಲ್ಲಿ ಉನ್ನತ ವೇಣುವಾದನ ಶಿಕ್ಷಣ. ಸಂಗೀತ ಅಧ್ಯಾಪಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಟಿ. ಆರ್. ಮಹಾಲಿಂಗಂ ಪಾಠಶಾಲೆ, ಕನ್ನಿಕಪರಮೇಶ್ವರಿ ಪಾಠಶಾಲೆ, ಶಿವಾ ಮ್ಯೂಸಿಕ್‌ ಇನ್‌ಸ್ಟಿಟ್ಯೂಟ್‌. ಸತ್ಯಮ್‌ ಮ್ಯೂಸಿಕ್‌ ಅಕಾಡಮಿ ಮುಂತಾದೆಡೆ ಸಲ್ಲಿಸಿದ ಸೇವೆ. ಕೆ.ಜಿ.ಎಫ್‌. ನ ರಾಮನವಮಿ ಸಂಗೀತೋತ್ಸವ, ಮಲ್ಲೇಶ್ವರದ ತ್ಯಾಗರಾಜ ಸಂಗೀತೋತ್ಸವ, ಕನಕಪುರ, ಬೆಂಗಳೂರಿನ ನಾದಬ್ರಹ್ಮ ಸಭಾ, ಸಂಗೀತ ಪ್ರಚಾರ ಮಂಡಲಿ, ಚಾಮರಾಜಪೇಟೆ ರಾಮಸೇವಾಮಂಡಲಿ, ತಿರುಪತಿಯ ರಾಮನವಮಿ ಉತ್ಸವ, ಕರ್ನಾಟಕ ಗಾನ ಕಲಾ ಪರಿಷತ್‌ ಮುಂತಾದೆಡೆ ನಡೆಸಿಕೊಟ್ಟ ವೇಣುವಾದನ ಕಚೇರಿಗಳು. ಫ್ರಾನ್ಸ್‌, ಹಾಲೆಂಡ್‌, ಲಂಡನ್‌, ಇಟಲಿ, ಸ್ವಿಜರ್‌ಲ್ಯಾಂಡ್‌ಗಳಲ್ಲಿ ಕೊಳಲುವಾದನದ ಪ್ರಾತ್ಯಕ್ಷಿಕೆ ಮತ್ತು ಕಚೇರಿಗಳು, ಪ್ರಸಿದ್ಧ ತಬಲವಾದಕ ಜಾಕೀರ್ ಹುಸೇನ್‌ ಮತ್ತು ಕೊಳಲುವಾದಕರಾದ ಹರಿಪ್ರಸಾದ್‌ ಚೌರಾಸಿಯಾರವರೊಡನೆ ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮ. ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ. ಕರ್ನಾಟಕ ಕಲಾಶ್ರೀ, ನಾದಕೋಕಿಲ, ನಾದಬ್ರಹ್ಮ, ಕೊಳಲು ಗಾನ ಕಲಾ ಭೂಷಣ, ವಿಶ್ವಭಾರತಿ ಕಲಾ ಜ್ಯೋತಿ ಮುಂತಾದ ಪ್ರಶಸ್ತಿ ಗೌರವಗಳು. ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿ ಬೆಂಗಳೂರಿನ ಮಹಾನಗರಪಾಲಿಕೆ ನಿರ್ಮಿಸಿರುವ ರಂಗಮಂದಿರಕ್ಕೆ “ಬಿ.ಎಂ. ಸುಂದರರಾವ್‌ ಬಯಲು ರಂಗಮಂದಿರ”ವೆಂದು ನಾಮಕರಣ.   ಇದೇ ದಿನ ಹುಟ್ಟಿದ ಕಲಾವಿದರು ಕೆ.ಎಸ್‌. ವೆಂಕಟಾದ್ರಿಶರ್ಮ – ೧೯೨೮ ಅಂಬುಜಮ್ಮ ಹೊಸಮನಿ – ೧೯೩೭ ಮಾಣಿಕ್‌. ಎ. ವಿ – ೧೯೪೯ ಯಶಸ್ವಿ ಎಸ್‌ – ೧೯೬೦ ಲೋಹಾರ್ ಎಸ್‌. ಎಂ – ೧೯೬೪ ಚೇತನ ರಾಧಾಕೃಷ್ಣ – ೧೯೭೨

* * *

ಡಾ. ಜಿ. ಜ್ಞಾನಾನಂದ

೦೫..೧೯೪೦ ವಿಶ್ವಕರ್ಮಸಾಹಿತ್ಯ, ಸಂಸ್ಕೃತಿ, ತತ್ತ್ವಕ್ಕೆ ಅಪಾರವಾದ ಕೊಡುಗೆ ನೀಡಿರುವ ಜ್ಞಾನಾನಂದರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ೧೯೪೦ರ ಜುಲೈ ೫ರಂದು. ತಂದೆ ಎಂ.ಆರ್.ಜಿ. ಶಂಕರ್‌ರವರು ಶಿಲ್ಪಿಗಳ ಪರಂಪರೆಯ ಮನೆತನದಲ್ಲಿ ಹುಟ್ಟಿ ಮೈಸೂರಿನ ಶಿಲ್ಪ ಸಿದ್ಧಾಂತಿ ಸಿದ್ಧಲಿಂಗ ಸ್ವಾಮಿಗಳಲ್ಲಿ ಶಿಲ್ಪಶಾಸ್ತ್ರವನ್ನೂ ಅಧ್ಯಯನ ಮಾಡಿದವರು. ತಾಯಿ ಈಶ್ವರಮ್ಮ.

ಪಳಕಳ ಸೀತಾರಾಮಭಟ್ಟ

..೧೯೩೦ ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾಗಿದ್ದ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದ ಪತ್ರಿಕೆಗಳಿಂದ ಹಿಡಿದು ಇಂದು ಪ್ರಕಟಗೊಳ್ಳುತ್ತಿರುವ ವಾರಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮುಂತಾದವುಗಳ ಜೊತೆಗೆ ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮುಂತಾದ ದಿನ ಪತ್ರಿಕೆಗಳಲ್ಲೂ ಮಕ್ಕಳ ಕತೆ, ಪದ್ಯಗಳ ಮುಖಾಂತರ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಲೇಖಕರ ಹೆಸರೆಂದರೆ ಸೀತಾರಾಮಭಟ್ಟರದು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ಪಳಕಳದಲ್ಲಿ ೧೯೩೦ ರ ಜುಲೈ ೫ ರಂದು. ತಂದೆ ಈಶ್ವರ ಭಟ್ಟರು, ತಾಯಿ ಲಕ್ಷ್ಮೀ ಅಮ್ಮ.

ಪ್ರೊ. ಎಂ.ಎಸ್‌. ನಂಜುಂಡರಾವ್‌

..೧೯೩೨ ೨..೨೦೦೩ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಂಜುಂಡರಾವ್‌ ರವರು ಹುಟ್ಟಿದ್ದು ಮಧುಗಿರಿ ತಾಲ್ಲೂಕಿನ ಸುದ್ದೇಗುಂಟೆಪಾಳ್ಯದಲ್ಲಿ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಂ.ಎಸ್‌. ದಾಸಪ್ಪ, ತಾಯಿ ಗೌರಮ್ಮ. ಚಾಮರಾಜೇಂದ್ರ ವೃತ್ತ ಶಿಕ್ಷಣ ಕಲಾ ಶಾಲೆಯಲ್ಲಿ ಶಿಕ್ಷಣ. ಶಿಕ್ಷಕರಾದ ಎಸ್‌.ಎನ್‌. ಸ್ವಾಮಿ, ಎಂ. ವೀರಪ್ಪ, ವೈ. ಸುಬ್ರಹ್ಮಣ್ಯ ರಾಜು ರವರ ಮಾರ್ಗದರ್ಶನ. ಹಲವಾರು ಕೃತಿಗಳ ರಚನೆ, ಮಹಾತ್ಮಗಾಂಧಿ, ವಲ್ಲಭಾಯ್‌ ಪಟೇಲ್‌ ವ್ಯಕ್ತಿಚಿತ್ರಗಳು, ತಲಕಾವೇರಿ, ಶೃಂಗೇರಿ, ನಂದಿಬೆಟ್ಟ ನಿಸರ್ಗ ಚಿತ್ರಗಳನ್ನು ಬಿಡಿಸಿ ಗಳಿಸಿದ ಪ್ರಖ್ಯಾತಿ. ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಸ್ಥಾಪಕ ಕಾರ್ಯದರ್ಶಿ, ಪ್ರಾಧ್ಯಾಪಕರಾಗಿ,  ಪ್ರಾಚಾರ್ಯರಾಗಿ, ಹಲವಾರು ಚಿತ್ರಸಂಸ್ಥೆ, ಲಲಿತಕಲಾ ಅಕಾಡೆಮಿ ಕೋಲ್ಕತ್ತಾದ ರವೀಂದ್ರಭಾರತಿ ವಿಶ್ವವಿದ್ಯಾಲಯದ ಪರಿಶೀಲನಾ ಮಂಡಲಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಕಲೆಯ ಬಗ್ಗೆ ಲಲಿತಕಲಾ ಅಕಾಡಮಿಗಾಗಿ ನಿಕೊಲಾಯ್‌ ರೋರಿಕ್‌, ಸ್ವೆತಾಸ್ಲಾಯ್‌ ರೋರಿಕ್‌ ಕುರಿತ ಪುಸ್ತಕ, ತೊಗಲು ಬೊಂಬೆಯ ಬಗ್ಗೆ ಬರೆದ ಸಂಶೋಧನಾಗ್ರಂಥ, ಸನ್ಮಾನಿಸಿದ ಸಂದರ್ಭದಲ್ಲಿ ಇವರ ಬಗ್ಗೆ ನಂಜುಂಡಸಿರಿ, ಚಿತ್ರಕಲೆ ಪುಸ್ತಕಗಳ ಪ್ರಕಟಣೆ. ದೆಹಲಿಯ ಕೆಂಪುಕೋಟೆ, ಲಲಿತಕಲಾ ಅಕಾಡೆಮಿ, ಖಾದಿಮಂಡಲಿ, ವಿಧಾನಸೌಧ, ಅಮೆರಿಕಾದ ನಟರಾಜ ಆರ್ಟ್‌ಗ್ಯಾಲರಿಯಲ್ಲಿ ಇವರ ಚಿತ್ರಗಳು ಸಂಗ್ರಹೀತ. ಹಲವಾರು ಬಾರಿ ವಿದೇಶ ಪ್ರವಾಸ. ಡೆನ್ಮಾರ್ಕ್‌, ಜರ್ಮನಿ, ಮಾಸ್ಕೊದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ. ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಮಾಸ್ಕೋದ ರೋರಿಕ್‌ ಅಂತಾರಾಷ್ಟ್ರೀಯ ಪುರಸ್ಕಾರ ಮುಖ್ಯವಾದವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಸವರಾಜ್‌ ಎಂ. ಟಿ. – ೧೯೨೮ ಮಧುರಾನಾಥ್‌. ಸಿ. ಎಂ – ೧೯೩೪ ಹಿರೇಮಠ್‌. ಬಿ.ಕೆ. – ೧೯೪೧ ವೆಂಕಟರಾಂ ಎಚ್‌. ಕೆ. – ೧೯೬೫

* * *

ಅರ್ಚಕ ವೆಂಕಟೇಶ್

೫-೭-೧೯೧೬ ೨೦-೧೨-೧೯೯೭ ಅ.ನ.ಕೃ.ರವರ ಕಾದಂಬರಿಗಳ ಉತ್ಕರ್ಷದ ಕಾಲ. ಹಿರಿಯ ಸಾಹಿತಿಗಳಾದ ಕುವೆಂಪು, ಮಾಸ್ತಿ ಮುಂತಾದವರ ವಾಸ್ತವತೆಯ ಸಾಹಿತ್ಯ ರಚನೆಯನ್ನೇ ಪ್ರಶ್ನಿಸುತ್ತಾ, ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಆಗುಹೋಗುಗಳ ಬಗ್ಗೆ ಚಿತ್ರಿಸುತ್ತಾ ಬಂದು, ಪ್ರಗತಿಶೀಲರೆನಿಸಿದ್ದ ಅ.ನ.ಕೃ, ತ.ರಾ.ಸು, ನಿರಂಜನ, ಕಟ್ಟೀಮನಿಯವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್‌ರವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗೋಪಾಲಕೃಷ್ಣಾಚಾರ‍್ಯ, ತಾಯಿ ರಾಧಾಬಾಯಿ. ವೆಂಕಟೇಶ್‌ರವರು ಪೂರ್ವಿಕರು ಅರ್ಚಕ ವೃತ್ತಿ ನಡೆಸಿಕೊಂಡು ಬಂದಿದ್ದರಿಂದ ‘ಅರ್ಚಕ’ ಎಂಬುದು ಅನ್ವರ್ಥನಾಮವಾಗಿ ವೆಂಕಟೇಶ್‌ರವರ ಹೆಸರಿಗೆ ಸೇರಿಕೊಂಡಿತು. ಹಾವೇರಿ ಜಿಲ್ಲೆಯ ಹತ್ತಿ ಮತ್ತೂರು, ಹಾನಗಲ್ ತಾಲ್ಲೂಕಿನ ಆಲದಕಟ್ಟೆ, ಹಾವೇರಿ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ. ಬೆಳಗಾವಿಯಲ್ಲಿದ್ದಾಗಲೇ ಮದುವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಬೆಳೆದ ಆಸಕ್ತಿ. ಕೈ ಬರಹದ ಪತ್ರಿಕೆ ‘ನನ್ನ ನುಡಿ’ ಆರಂಭ. ಇವರ ಸಾಹಿತ್ಯ ಪ್ರೇರಕರು ಶಾಲೆಯ ಮಾಸ್ತರಾಗಿದ್ದ ಜೋಗಳೇಕರ್ ಪಾಂಡು ರಂಗರಾಯರು. ಬಿ.ಎಂ.ಶ್ರೀ. ಮತ್ತು ಅ.ನ.ಕೃ.ರವರಿಂದ ಕನ್ನಡಕ್ಕಾಗಿ ದುಡಿಯಲು ದೀಕ್ಷೆ. ಪ್ರಚಂಡ ಭಾಷಣಕಾರರು. ಬೇಂದ್ರೆಯವರ ಶಿಫಾರಸ್ಸಿನಿಂದ ಉದ್ಯೋಗಕ್ಕೆ ಸೇರಿದ್ದು, ಸಂಪಾದಕ ಬಿ.ಶಿವಮೂರ್ತಿ ಶಾಸ್ತ್ರಿಗಳ ‘ಶರಣ ಸಾಹಿತ್ಯ’ ಮತ್ತು ‘ಸ್ವತಂತ್ರ ಕರ್ನಾಟಕ’ ಪತ್ರಿಕೆಗೆ. ಕೆಲಕಾಲ ಪತ್ರಕರ್ತರಾಗಿ ಸೇವೆ. ನಂತರ ಸೇರಿದ್ದು ಎಚ್.ಎ.ಎಲ್. ಕಾರ್ಖಾನೆ. ಇದೂ ಸರಿಹೊಂದದೆ ಮರಳಿ ಪತ್ರಿಕೋದ್ಯಮಕ್ಕೆ. ಮತ್ತೆ ಬೇಂದ್ರೆಯವರ ನೆರವು. ಸಿದ್ಧವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವದ ‘ವಿಶ್ವಕರ್ನಾಟಕ’ಕ್ಕೆ ಸೇರ‍್ಪಡೆ,. ಹದಿನೈದು ವರ್ಷ ದುಡಿದು ಕಡೇ ಒಂದು ವರ್ಷ ಸಂಪಾದಕರ ಜವಾಬ್ದಾರಿ. ಕೊನೆಗೆ ಸೇರಿದ್ದು ಸಂಯುಕ್ತ ಕರ್ನಾಟಕ. ನಿವೃತ್ತಿಯಾಗುವವರೆವಿಗೂ ಸೇವೆ. ಪತ್ರಿಕಾರಂಗದಲ್ಲಿ ದುಡಿಯುತ್ತಿದ್ದಾಗಲೇ ರಚಿಸಿದ್ದು ಹಲವಾರು ಕೃತಿಗಳು. ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರಮುಖರು. ಕಥೆ, ಕಾದಂಬರಿ, ನಾಟಕ, ಕವನ ಸಂಕಲನಗಳ ಪ್ರಕಟಣೆ. ಕಾದಂಬರಿಗಳು-ದಿಲ್ಲಿ ಚಲೋ, ರವಿಶಂಕರ, ಅಸ್ತಿಪಂಜರ. ಕಥಾಸಂಕಲನಗಳು-ಧ್ರುವನಕ್ಷತ್ರ, ಜೀವನ ಸಂಗ್ರಾಮ. ಕವನ ಸಂಕಲನಗಳು-ಪೂರ್ಣಚಂದ್ರ, ಶಬ್ದ ಶಿಲ್ಪ, ಶಿಲಾಪಕ್ಷಿ, ಸಂಧ್ಯಾರಾಗ. ರಂಗನಾಟಕಗಳು-ಮೀರ್‌ಸಾದಿಕ್, ಪಂಗನಾಮ, ಬ್ಲಾಕ್‌ಮಾರ್ಕೆಟ್. ಹಿರಣ್ಣಯ್ಯ ಮಿತ್ರ ಮಂಡಲಿಯಿಂದ ಪ್ರದರ್ಶನಗೊಂಡ ನಾಟಕಗಳು. ಮಕ್ಕಳ ನಾಟಕ-ಭಾತೃಪ್ರೇಮ, ಪಾನಕ ಕೋಸಂಬರಿ, ಹರಿದ ಚಂದ್ರ, ಪ್ರಹ್ಲಾದನ ಪಾಣಿಪತ್ತು, ಸಾವನದುರ್ಗ, ಜಯ-ವಿಜಯ. ರಾಷ್ಟ್ರ ನೇತಾರರ ನಾಟಕಗಳು-ಸ್ವಾಮಿ ವಿವೇಕಾನಂದ, ಸುಭಾಶ್ ಚಂದ್ರ ಬೋಸ್, ಮದನಮೋಹನ ಮಾಳವೀಯ. ಜೀವನಚರಿತ್ರೆ-ರಮಣ ಮಹರ್ಷಿ, ರಾಮನ ಕಥೆ, ಭಕ್ತಿಗೀತಾಮೃತ ಮತ್ತೊಂದು ಮಕ್ಕಳ ಕೃತಿ. ಇಂಗ್ಲಿಷ್-ರ‍್ಯಾಂಡಮ್ ಥಾಟ್ಸ್. ವೆಂಕಟೇಶರು ಇನ್ನೂ ಹಲವಾರು ಕೃತಿ ರಚಿಸುವ ಹವಣಿಕೆಯಲ್ಲಿದ್ದಾಗಲೇ ೧೯೯೭ರ ಡಿಸೆಂಬರ್ ೨೦ರಂದು ಪ್ರವಾಸ ಹೋಗಿದ್ದಾಗ ತಿರುಚೆಂದೂರಿನಲ್ಲಿ ಅಕಾಲ ಮೃತ್ಯುಗೀಡಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶೇಖರಪ್ಪ ಹುಲಗೇರಿ – ೧೯೩೮ ಎಂ. ರಾಮಚಂದ್ರ – ೧೯೩೯ ಪಳಕಳ ಸೀತಾರಾಮಭಟ್ಟ – ೧೯೩೦ ಜ್ಞಾನಾನಂದ – ೧೯೪೦

ಡಾ. ಸರೋಜಿನಿ ಶಿಂತ್ರಿ

೦೪.೦೭.೧೯೩೦ ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸಪ್ಪ ಶಿಂತ್ರಿಯವರು ಶಿಕ್ಷಕರಾಗಿ, ವಿದ್ಯಾಧಿಕಾರಿಗಳಾಗಿ ಸಮಯಪಾಲನೆ, ಅಧ್ಯಯನ ಶೀಲತೆ, ತತ್ತ್ವಾದರ್ಶಗಳಿಗೆ ಹೆಸರಾಗಿದ್ದು ‘ಶಿಂತ್ರಿ ಮಾಸ್ತರ’ ಎಂದೇ ಪ್ರಸಿದ್ಧರಾಗಿದ್ದವರು. ತಾಯಿ ಗಂಗಮ್ಮ.

ಎಂ.ಸಿ. ಅಂಟಿನ

೦೪..೧೯೩೬ ಆರೋಗ್ಯವೇ ಮನುಷ್ಯನ ಬದುಕಿನ ಪರಮಸೌಖ್ಯಕ್ಕೆ ಸಾಧನ. ಆರೋಗ್ಯವಂತ ಬದುಕಿನಲ್ಲಿ ನಗುವೇ ಪ್ರಮುಖ. ನಗುನಗುತ ಬಾಳುವುದನ್ನು ರೂಢಿಸಿಕೊಳ್ಳಬೇಕೆಂದು ಹೇಳುತ್ತಾ, ಆರೋಗ್ಯ ಇಲಾಖೆ ಸೇರಿ, ಶಿಕ್ಷಕರಾಗಿ ಹೇಳಿದ್ದಷ್ಟೇ ಅಲ್ಲದೆ ನಗೆಲೇಖನಗಳ ಮೂಲಕ ಕೂಡಾ ಓದುಗರನ್ನು ರಂಜಿಸುತ್ತಾ ಬಂದ ಅಂಟಿನ ರವರು ಹುಟ್ಟಿದ್ದು ಬೆಳಗಾವಿ ಜಿಲ್ಲಾ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಎಂಬ ಹಳ್ಳಿಯಲ್ಲಿ ೧೯೩೬ ರ ಜುಲೈ ೪ ರಂದು. ತಂದೆ ಸರಕಾರಿ ನೌಕರರಾಗಿದ್ದ ಸಿ.ಸಿ. ಅಂಟಿನ, ತಾಯಿ ಬಸವಲಿಂಗಪ್ಪ.

ಗೀತಾ ಕುಲಕರ್ಣಿ

೦೪..೧೯೨೭ ೨೫..೧೯೮೬ ಧೈರ್ಯ, ನಿಸ್ಸಂಕೋಚದ ಸ್ವಭಾವದ, ಎಂತಹ ಸಂದರ್ಭದಲ್ಲೂ ಎದೆಗುಂದದೆ ನಿಭಾಯಿಸುವ ಛಾತಿಯ ಗುಣದ ಕತೆ-ಕಾದಂಬರಿಕಾರ್ತಿ ಗೀತಾ ಕುಲಕರ್ಣಿಯವರು ಹುಟ್ಟಿದ್ದು ಮುಂಬಯಿಯಲ್ಲಿ. ತಮದೆ ಬಾಂಬೆ ಸರ್ಜಿಕಲ್ಸ್‌ ಕಂಪನಿಯ ಸಂಸ್ಥಾಪಕರಾಗಿದ್ದ ಕೆ.ಟಿ. ಆಳ್ವ, ಹರ್ನಿಯಾ ತಜ್ಞರು ಕೂಡಾ. ತಾಯಿ ಕಮಲ ಆಶ್ವ. ತಂದೆ ತಾಯಿಗಳು ಇಟ್ಟ ಹೆಸರು ಅಹಲ್ಯಾ. ದ.ಕ. ಜಿಲ್ಲೆಯ ಮಂಗಳೂರು ತಾಲ್ಲೂಕಿನ ಪಾವೂರು ಇವರ ವಂಶಸ್ಥರ ಸ್ಥಳ. ಮನೆಮಾತು ತುಳು.

ಗೊರೂರು ರಾಮಸ್ವಾಮಿ ಅಯ್ಯಂಗಾರ್

೪-೭-೧೯೦೪ ೨೮-೯-೧೯೯೧ ಹಳ್ಳಿಯ ಬದುಕಿನ ಯಥಾವತ್ ಚಿತ್ರಣದ ಪ್ರಬಂಧಕಾರರೆಂದೇ ಪ್ರಸಿದ್ಧರಾಗಿದ್ದ ರಾಮಸ್ವಾಮಿ ಅಯ್ಯಂಗಾರ‍್ಯರು ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಹುಟ್ಟಿದೂರಿನಲ್ಲಿ ಪ್ರಾರಂಭಿಕ, ಹಾಸನದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಗಾಂವಾದದಿಂದ ಪ್ರೇರಿತರಾಗಿ ನಡೆದದ್ದು ಗುಜರಾತಿನ ಸಬರಮತಿ ಆಶ್ರಮದತ್ತ. ೧೯೩೦ರಲ್ಲಿ ಹಳ್ಳಿಯ ಚಿತ್ರಗಳು, ೧೯೩೨ರಲ್ಲಿ ನಮ್ಮ ಊರಿನ ರಸಿಕರು ಪ್ರಕಟ. ಹಳ್ಳಿಗೆ ಹಿಂದಿರುಗಿ ‘ಮೈಸೂರು ಗ್ರಾಮ ಸೇವಾ ಸಂಘ’ ಸ್ಥಾಪನೆ. ಹರಿಜನೋದ್ಧಾರ ವಯಸ್ಕರ ಶಿಕ್ಷಣ. ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಕಾರ‍್ಯಕ್ರಮಗಳಲ್ಲಿ ಭಾಗಿ. ಗೊರೂರರ ಸಾಹಿತ್ಯ ರಚನೆಯ ಹರವು ಬಹು ದೊಡ್ಡದು. ಪ್ರಬಂಧ ಸಂಕಲನಗಳು-ಸಾಹಿತ್ಯ ರಶ್ಮಿ, ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು, ಹಳ್ಳಿ ಚಿತ್ರಗಳು, ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು, ಗರುಡಗಂಬದ ದಾಸಯ್ಯ, ಕಥೆಗಳು ಮತ್ತು ವಿನೋದ ಚಿತ್ರಗಳು. ಕಾದಂಬರಿ-ಪುನರ್ಜನ್ಮ, ಭಗವಾನ್ ಕೌಟಿಲ್ಯ, ಮಲೆನಾಡವರು, ಮೆರವಣಿಗೆ, ಕ್ರೌಂಚವಧೆ, ರಾಜನರ್ತಕಿ, ಊರ್ವಶಿ, ಹೇಮಾವತಿ ಮೊದಲಾದುವು. ಅನುವಾದ-ಆತ್ಮಕಥೆ, ಕೊನೆಷ್ಟೈ ಕಥೆಗಳು, ಜಗತ್ತಿನ ಮಹದ್ವ್ಯಕ್ತಿಗಳು, ಮಹಾದೇವ ದೇಸಾಯಿಯವರ ಕೃತಿಗಳು, ಸತ್ಯ ಮತ್ತು ಅಹಿಂಸೆ, ಸಾಹಿತ್ಯ ಜೀವಾಳ. ಸಣ್ಣ ಕಥಾಸಂಕಲನ-ಉಸುಬು, ಕನ್ಯಾಕುಮಾರಿ ಮತ್ತು ಇತರ ಕಥೆಗಳು, ಕಮ್ಮಾರ ವೀರಭದ್ರಾಚಾರಿ, ಗೋಪುರದ ಬಾಗಿಲು, ಬೆಸ್ತರ ಕರಿಯ, ವೈಯ್ಯಾರಿ, ಶಿವರಾತ್ರಿ ಮುಂತಾದುವುಗಳೊಡನೆ ಅಮೆರಿಕಾ ಯಾತ್ರೆಯ ‘ಅಮೆರಿಕಾದಲ್ಲಿ ಗೊರೂರು’ ಸೇರಿ ೬೦ಕ್ಕೂ ಹೆಚ್ಚು ಕೃತಿ ರಚನೆ. ಕೆಲವು ಕಥೆ, ಕಾದಂಬರಿಗಳು ಚಲನಚಿತ್ರಗಳಾಗಿವೆ. ಸಂದ ಗೌರವ ಪ್ರಶಸ್ತಿಗಳು-ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಭಿಮಾನಿಗಳು ಅರ್ಪಿಸಿದ ಗ್ರಂಥ ‘ಗೊರೂರು ಗೌರವಗ್ರಂಥ’ ಸಂಸ್ಮರಣ ಗ್ರಂಥ ‘ಹೇಮಾವತಿಯ ಚೇತನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಸಿದ್ಧವನಹಳ್ಳಿ ಕೃಷ್ಣಶರ್ಮ – ೧೯೦೪-೧೪.೧೦.೭೩ ಗೀತಾ ಕುಲಕರ್ಣಿ – ೧೯೨೭-೨೫.೫.೮೬ ಸರೋಜಿನಿ ಶಿಂತ್ರಿ – ೧೯೩೦ ಎಂ.ಸಿ. ಅಂಟಿನ – ೧೯೩೬ ಸುಶೀಲಾ ದೇವಿ ಆರ್. ರಾವ್ – ೧೯೫೨ ಶ್ರೀನಿವಾಸ ಜೋಕಟ್ಟೆ – ೧೯೬೪

ಸಿದ್ಧವನಹಳ್ಳಿ ಕೃಷ್ಣಶರ್ಮ

೦೪..೧೯೦೪ ೧೪.೧೦.೧೯೭೩ ಗಾಂಧಿ ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿ, ಲೇಖಕ, ಸಹಕಾರಿ ಕ್ಷೇತ್ರದ ಹರಿಕಾರ ಮತ್ತು ಪತ್ರಕರ್ತರಾದ ಕೃಷ್ಣಶರ್ಮರು ಹುಟ್ಟಿದ್ದು ೧೯೦೪ರ ಜುಲೈ ೪ ರಂದು ಚಿತ್ರದುರ್ಗ ತಾಲ್ಲೂಕಿನ ಸಿದ್ಧವನಹಳ್ಳಿಯಲ್ಲಿ. ತಂದೆ ರಂಗಾಚಾರ್, ತಾಯಿ ಶೇಷಮ್ಮ.

ಚಕ್ರಕೋಡಿ ನಾರಾಯಣ ಶಾಸ್ತ್ರಿ

..೧೯೧೩ ..೧೯೯೩ ಸಂಗೀತ ಕಚೇರಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ನಾರಾಯಣಶಾಸ್ತ್ರಿಗಳು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕೋಳ್ಯೂರು ಗ್ರಾಮದ ಚಕ್ರಕೋಡಿಯಲ್ಲಿ. ತಂದೆ ಶಾಮಾ ಶಾಸ್ತ್ರಿಗಳು, ತಾಯಿ ಸರಸ್ವತಿ. ಮಗುವಾಗಿದ್ದಾಗಲೇ ಚಮಚೆಯಿಂದ ಪಾತ್ರೆಯ ಮೇಲೆ ಕುಟ್ಟಿ ಸಂಗೀತ ಪ್ರೀತಿ ತೋರಿದ ಬಾಲಕ. ಪಾಲಘಾಟ್‌ ವೀರಮಣಿ ಭಾಗವತರಿಂದ ಪ್ರಾರಂಭಿಕ ಶಿಕ್ಷಣ, ಉಡುಪಿ ಲಕ್ಷ್ಮೀ ಬಾಯಿಯವರಲ್ಲಿ ಕೆಲಕಾಲ. ದೇಶಾಂತರ ಹೊರಟ ತಂದೆಯವರೊಡನೆ ಸೇರಿದ್ದು ಕೊಲ್ಕತ್ತಾ, ಸಂಗೀತ ಕಚೇರಿ, ಪಾಠ ಹೇಳಿ ಜೀವನ ನಿರ್ವಹಣೆ, ಮೈಸೂರಿಗೆ ಬಂದು ಬಿ. ದೇವೇಂದ್ರಪ್ಪನವರಲ್ಲಿ ಶಿಷ್ಯವೃತ್ತಿ, ವಚನಗಳಿಗೆ ರಾಗ, ತಾಳ ಹಾಕಿ ಕಲಿತ ಸಂಗೀತ, ವೀರಶೈವ ಸಮಾಜ ಸೇವಾ ಸಂಘದವರ ಕಾರ್ಯಕ್ರಮದಲ್ಲಿ ಮೊದಲಬಾರಿಗೆ ನಡೆಸಿಕೊಟ್ಟು, ‘ಶಿವಶರಣ ವಚನ ಸಂಗೀತದ’ ಕಾರ್ಯಕ್ರಮ. ಆದ್ಯ ಪ್ರವರ್ತಕರೆನಿಸಿದರು. ಪ್ರೊ. ದೇವಧರ್ ಸಂಗೀತ ವಿದ್ಯಾಲಯದಲ್ಲಿ ವಿದ್ವಾಂಸರಾದ ವಿಶ್ವೇಶ್ವರ ಪಂಡಿತರಲ್ಲಿ ಕಲಿತ ಹಿಂದೂಸ್ತಾನಿ ಸಂಗೀತ. ಮಡಕೇರಿಯ ಗೌರ್ನಮೆಂಟ್‌ ಹೈಸ್ಕೂಲಿನ ಟೀಚರ್ಸ್ ಟ್ರೈನಿಂಗ್‌ ವಿಭಾಗದಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ ಕೆಲಕಾಲ ಸೇವೆ. ಮೈಸೂರು ಆಕಾಶವಾಣಿ ನಿಲಯದ ಕಲಾವಿದರಾಗಿ ನೇಮಕ. ಆಕಾಶವಾಣಿ ಬೆಂಗಳೂರು, ಧಾರವಾಡವಲ್ಲದೆ ರಾಷ್ಟ್ರೀಯಜಾಲದಲ್ಲಿ ದೆಹಲಿ, ಕೋಲ್ಕತ್ತಾ, ಹೈದರಾಬಾದ್‌, ಚೆನ್ನೈ, ತಿರುವನಂತಪುರ ಕೇಂದ್ರಗಳಿಂದಲೂ ಕಾರ್ಯಕ್ರಮ ಪ್ರಸಾರ. ಅಕ್ಕಮಹಾದೇವಿಯವರ ವಚನಗಳನ್ನು ಕೊಲಂಬಿಯಾ ಗ್ರಾಮಾಫೋನ್‌ ಕಂ. ಧ್ವನಿಮುದ್ರಿಸಿ ಹೊರತಂದ ಗ್ರಾಮಫೋನ್‌ರೆಕಾರ್ಡ್‌. ವಾಗ್ಗೇಯಕಾರರಾಗಿಯೂ ಹಲವಾರು ಕೃತಿಗಳ ರಚನೆ. ರಮಣಮಹರ್ಷಿಗಳ ಮೇಲೆ ರಚಿಸಿದ ಹಲವಾರು ಕೃತಿಗಳು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ ಗ್ರಂಥ “ಕರ್ನಾಟಕ ಸಂಗೀತ ವೈಭವ” ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ಹನುಮಜ್ಜಯಂತಿ ಉತ್ಸವದಲ್ಲಿ ಗಾನಾಲಂಕಾರ, ಸಂಗೀತ ನಾಟಕ ಅಕಾಡಮಿಯಿಂದ ಹರಿದಾಸ ಸಂಗೀತ ಸುಧಾಕರ ಅಲ್ಲದೆ ವಚನಗಾಯನ ಹರಿಕಾರ,  ಮುಂತಾದ ಬಿರುದು ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು ಇಂದಿರಾ ವೆಂಕಟೇಶ್‌ – ೧೯೩೬ ವಿದ್ಯಾಭೂಷಣರು – ೧೯೫೨ ಶ್ರೀನಿವಾಸ್‌.. ಟಿ – ೧೯೫೮ ವೃಂದಾ ಎಸ್‌.ರಾವ್‌ – ೧೯೬೩

* * *

ಎಸ್‌. ಚಂದ್ರಶೇಖರ್

೦೩.೦೭.೧೯೩೭ ೦೧.೧೦.೧೯೯೮ ಪ್ರಖ್ಯಾತ ಪಿಟೀಲು ವಾದಕರಾಗಿದ್ದ ಚಂದ್ರಶೇಖರ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಸುಬ್ಬಾಭಟ್ಟರು, ತಾಯಿ ಶೇಷಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ವರೆಗೆ ಆದರೂ ಸಂಗೀತದಲ್ಲಿ ಹುಟ್ಟಿದ ಆಸಕ್ತಿಯಿಂದ ಕಲಿತದ್ದು ಪಿಟೀಲುವಾದನ. ಅಯ್ಯನಾರ್ ಕಲಾ ಶಾಲೆಯಲ್ಲಿ ಆನೂರು ರಾಮಕೃಷ್ಣರವರಲ್ಲಿ ಕಲಿತ ಪಿಟೀಲುವಾದನ. ಸೀನಿಯರ್ ಗ್ರೇಡ್‌ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ಗಳಿಸಿ ವಿದ್ವತ್‌ಪರೀಕ್ಷೆಯಲ್ಲಿ ಪಡೆದ ಉನ್ನತ ಶ್ರೇಣಿ. ಹಲಸೂರಿನಲ್ಲಿ ನಡೆದ ತ್ಯಾಗರಾಜ ಸಂಗೀತೋತ್ಸವದಲ್ಲಿ ನಡೆಸಿಕೊಟ್ಟ ಪ್ರಥಮ ಕಚೇರಿ. ಮದರಾಸು ಮ್ಯೂಸಿಕ್‌ಅಕಾಡಮಿ, ಕರ್ನಾಟಕ ಗಾನ ಕಲಾ ಪರಿಷತ್‌, ಬೆಂಗಳೂರಿನ ಗಾಯನ ಸಮಾಜ ಮತ್ತು ಭದ್ರಾವತಿ, ಧರ್ಮಸ್ಥಳ ಮುಂತಾದೆಡೆ ನೀಡಿದ ಪಿಟೀಲು ವಾದನದ ಸೋಲೋ ಕಾರ್ಯಕ್ರಮ ಮತ್ತು ಸಂಗೀತ ವಿದ್ವಾಂಸರಿಗೆ ನೀಡಿದ ಪಿಟೀಲಿನ ಸಹಕಾರ. ಆಕಾಶವಾಣಿಯ ದಕ್ಷಿಣವಲಯ ಸಂಗೀತಕಚೇರಿ, ದೂರದರ್ಶನ ದಲ್ಲೂ ಹಲವಾರು ಬಾರಿ ನಡೆಸಿಕೊಟ್ಟ ಕಾರ್ಯಕ್ರಮಗಳು. ರಮಣಾಂಜಲಿ ತಂಡದೊಡನೆ ಎಂಟು ಬಾರಿ ಕೈಗೊಂಡ ವಿದೇಶ ಪ್ರವಾಸ. ಯೂರೋಪಿನ ಬಹುತೇಕ ಪ್ರಮುಖ ನಗರಗಳು, ಅಮೆರಿಕಾ, ಇಂಗ್ಲೆಂಡ್‌ ಮುಂತಾದೆಡೆ ನೀಡಿದ ಪಿಟೀಲಿನ ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಕಾರ್ಯಕ್ರಮಗಳು. ಅಯ್ಯನಾರ್ ಪ್ರೌಢ ಸಂಗೀತ ಕಲಾ ಶಾಲೆಯಿಂದ ಗೌರವ ಪ್ರಶಸ್ತಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಶಸ್ತಿ, ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ ಸೇರಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಗೌರವ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು: ಶಿಶುನಾಳ ಶರೀಫ್‌- ೧೮೧೯ ರಮೇಶ್‌. ವಿ.ಎಸ್‌ – ೧೯೫೪.

* * *

ಫ.ಗು. ಹಳಕಟ್ಟಿ

೨-೭-೧೮೮೦ ೨೯-೬-೧೯೬೪ ಸಂಶೋಧಕ, ಸಾಹಿತ್ಯ ಪ್ರಚಾರಕ, ಸಂಪಾದಕ ಹಳಕಟ್ಟಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗುರುಬಸಪ್ಪ, ತಾಯಿ ದಾನಮ್ಮ. ಬಾಸೆಲ್ ಮಿಷನ್ ಸ್ಕೂಲ್, ಆಂಗ್ಲೋವರ್ನಾಕ್ಯುಲರ್ ಸ್ಕೂಲ್ ಪ್ರಾಥಮಿಕ ವಿದ್ಯಾಭ್ಯಾಸ. ಮುಂಬಯಿಯ ಸೇಂಟ್ ಝೇವಿಯರ್ ಕಾಲೇಜಿನಿಂದ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿ. ಪದವಿ ಗಳಿಸಿದ ನಂತರ ವಿಜಾಪುರದಲ್ಲಿ ವಕೀಲಿವೃತ್ತಿ ಪ್ರಾರಂಭ. ಹಲವಾರು ಶಿಕ್ಷಣ ಸಂಸ್ಥೆ, ಸಾಮಾಜಿಕ ಸೇವೆ, ಸಾಹಿತ್ಯ ಸೇವೆಗಾಗಿ ಮುಡುಪಾಗಿಟ್ಟು ದುಡಿದರು. ಬಿಜಾಪುರದ ವೀರಶೈವ ಶಿಕ್ಷಣ ಫಂಡ್, ಸಿದ್ಧೇಶ್ವರ ಧರ್ಮರಾಯ ಫಂಡ್, ಜಿಲ್ಲಾ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಮಾಧ್ಯಮಿಕ ಶಾಲೆ, ಸಿದ್ಧೇಶ್ವರ ಬ್ಯಾಂಕ್ ಮುಂತಾದುವುಗಳ ಸ್ಥಾಪನೆಗ ಕಾರಣರು. ಬಿಜಾಪುರ ನಗರದ ಸ್ಕೂಲ್ ಬೋರ್ಡಿನ ಅಧ್ಯಕ್ಷರಾಗಿ, ಮುಂಬಯಿ ಸರಕಾರದ ಪ್ರಾಥಮಿಕ ಶಿಕ್ಷಣ ಸಮಿತಿ, ಕನ್ನಡ ಪಠ್ಯಪುಸ್ತಕ ಸಮಿತಿ, ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಮುಂಬಯಿ ರಾಜ್ಯದ ಸಭಾಸದಸ್ಯರಾಗಿ, ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಮುಂತಾದುವುಗಳಲ್ಲಿ ಪ್ರಮುಖ ಪಾತ್ರ. ತಾಳೆಗರಿ, ಪ್ರಾಚೀನ ಗ್ರಂಥಗಳ ಸಂಗ್ರಹ, ಸಂಪಾದನೆ. ೧೯೨೦ರ ಸುಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ. ವಚನಗಳ ಸಂಗ್ರಹ, ಪ್ರತಿಮಾಡುವ, ಸಂಕಲನ, ಸಂಪಾದನೆ, ವ್ಯಾಖ್ಯಾನ ಮುಂತಾದ ಕಾರ‍್ಯಗಳಲ್ಲಿ ಏಕವ್ಯಕ್ತಿಯ ಸಾಧನೆ. ಸರಕಾರ, ಯು.ಜಿ.ಸಿ. ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಮಾಡಿದ ಮಹತ್ಕಾರ‍್ಯ. ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯವನ್ನು ೧೯೨೬ರಲ್ಲಿ ಸ್ಥಾಪಿಸಿ, ‘ಹಿತಚಿಂತಕ ಮುದ್ರಣಾಲಯ’ ಎಂದು ಕರೆದು ಮುದ್ರಣಕಾರ‍್ಯ ಆರಂಭ. ಶಿವಾನುಭವ ಪತ್ರಿಕೆ ಆರಂಭ. ಪತ್ರಿಕೆ ವಿದ್ವತ್ ವಲಯದಲ್ಲಿ ಗಳಿಸಿದ ಶ್ರೇಷ್ಠ ಸ್ಥಾನ. ಮೂಲಗ್ರಂಥ, ಟೀಕಾಗ್ರಂಥ, ಸ್ವತಂತ್ರಗ್ರಂಥ, ಪಠ್ಯಪುಸ್ತಕ, ಗದ್ಯಗ್ರಂಥ, ಐತಿಹಾಸಿಕ ಗ್ರಂಥ, ಪದ್ಯಗ್ರಂಥ, ಧಾರ್ಮಿಕ ಪುರುಷರ ಚರಿತ್ರೆ-ಹೀಗೆ ಸುಮಾರು ೧೬೫ ಗ್ರಂಥಗಳ ಪ್ರಕಟಣೆ ಮಾಡಿ ಗಳಿಸಿದ ಕೀರ್ತಿ. ಷಟ್‌ಸ್ಥಳ ಸಿದ್ಧಾಂತ ಸೂತ್ರ, ಶಿವಾನುಭವ ಶಬ್ದಕೋಶಗಳಂತಹ ಉದ್ಗ್ರಂಥಗಳ ಪ್ರಕಟಣೆ. ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೨೮ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ೩ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದ ಇವರಿಗೆ ೧೯೮೨ರಲ್ಲಿ ಅರ್ಪಿಸಿದ ಗ್ರಂಥ ‘ಮಣಿಹ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಭಾರತೀರಮಣಾಚಾರ‍್ಯ – ೧೯೨೧ ಶಾರದಾ ಜಡೆ – ೧೯೨೩ ಎನ್.ಆರ್. ಗೀತಾ – ೧೯೫೭ ವಸಂತಕುಮಾರ ಪೆರ್ಲ – ೧೯೫೮ ಈರಣ್ಣ ಇಟಗಿ – ೧೯೫೦ ಎಸ್. ದೇವೇಂದ್ರ ಪೆಜತ್ತಾಯ – ೧೯೩೧