Categories
ರಚನೆಗಳು

ಪುರಂದರದಾಸರು

೩೦೫
ಉಗಾಭೋಗ
ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ ಮ
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಭೀತಿ ಬರಲಿ ಮ
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಬಾಧೆ ಬರಲಿ ಮ
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾ ಆಪತ್ತು ಬರಲಿ ಮ
ತ್ತಿದರಿಂಬಿಟ್ಟಿನ್ನಿಲ್ಲೆಂಬ ಅದಕೊಂದಿದ
ಕೊಂದು ಯೋಚಿಸಬೇಡಿ ಕಾಣಿರೊ ಮ
ತ್ತದ ಕೊಂದಿದ ಕೊಂದು ಯೋಚಿಸಬೇಡಿ ಕಾಣಿರೊ
ಪುರಂದರ ವಿಠಲ ತನ್ನ ನಂಬಿದವರ
ಹಿಂದ್ಹಾಕಿಕೊಂಬ ಕಾಣಿರೋ.

೩೮
ಉಗಾಭೋಗ
ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು |
ಹರಿದಾಸರನು ಯಮನೆಳೆವನೆಂಬಪಕೀರ್ತಿಯ |
ಪರಿಹರಿಸಿಕೊಳ್ಳೊ ಶ್ರೀ ಪುರಂದರವಿಠಲ.

೧೦೦
ಉಗಾಭೋಗ
ಇರುವದಾದರೆ ಮುಗುಳುತೆನೆ
ಅದಿಲ್ಲದಿರೆ ಚಿಗುರೆಲೆ
ಅದೂ ಇಲ್ಲದಿರೆ ಬರಲು ಕಟ್ಟಿಗೆ
ಇಲ್ಲದಿದ್ದರೆ ಬೇರು ಮಣ್ಣು
ಅದೊಂದು ಇರದಿರೆ
ತುಳಸಿ ತುಳಸಿ ಎಂದೊರಲಿದರೆ ಸಾಕು
ಎಲ್ಲ ವಸ್ತುಗಳನೀಡಾಡುವ ಪುರಂದರವಿಠಲ.

೯೯
ಉಗಾಭೋಗ
ಇಲ್ಲದಿದ್ದರೆ ಮುಗುಳು ತೆನೆ
ಇಲ್ಲದಿದ್ದರೆ ಚಿಗುರೆಲೆ
ಇಲ್ಲದಿದ್ದರೆ ಬರಲು ಕಟ್ಟಿಗೆ
ಇಲ್ಲದಿದ್ದರೆ ಬೇರು ಮಣ್ಣು
ಅದೂ ಇಲ್ಲದಿದ್ದರೆ
ತುಲಸಿ ತುಲಸಿ ಎಂದು ಕೂಗಿದರೆ ಸಾಕು
ಎಲ್ಲ ವಸ್ತುಗಳ ನೀಡಾಡುವ ಪುರಂದರವಿಠಲ.

೩೨೬
ಉಗಾಭೋಗ
ಇಲ್ಲೆಂಥಾ ಸುಖಗಳುಂಟೋ ಅಲ್ಲಂಥ ಸುಖಗಳುಂಟು
ದುಃಖ ಮಿಶ್ರವಾದ ಸುಖ ಇಹಲೋಕದಲ್ಲಪ್ಪುದು
ನಾಶವುಂಟು ದಿನಕೊಂದು ಬಗೆ ಬಗೆಯಾದಂಥ ಸುಖವಾಗಿ
ನಾಶವಿಲ್ಲದ ಅಪ್ರಾಕೃತವಾದ ಸುಖವನನುಭವಿಸುತ್ತ
ಕ್ರಮದಿ ತಿರುಗುವರು
ಆಂದೋಳಿಕ ಛತ್ರ ಚಾಮರ ಸದಾಪೀತಾಂಬರ
ಶಂಖ ಚಕ್ರಗಳಿಂದೊಪ್ಪುತ
ಪುರಂದರ ವಿಠಲನ ಭಜಿಸಲೆ ಜೀವ.

೩೧೯
ಉಗಾಭೋಗ
ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು
ಆಯಸ್ಸು ಎಂಬೊ ರಾಸಿ ಅಳೆದು ಹೋಗುವ ಮುನ್ನ
ಹರಿಯ ಭಜಿಸಬೇಕು ಮನ ಮುಟ್ಟಿ
ಭಜಿಸಿದರೆ ತನ್ನ ಕಾಯವು ಘಟ್ಟಿ
ಹಾಗಲ್ಲದಿದ್ದರೆ ತಾಪತ್ರಯ ಬೆನ್ನಟ್ಟಿ
ವಿಧಿಯೊಳು ಗೆಯ್ವಾಗ ಹೋಗದಯ್ಯ ಕಟ್ಟಿ
ಪುರಂದರವಿಠಲನ ಕರುಣಾದೃಷ್ಠಿ
ಅವನ ಮೇಲಿದ್ದರೆ ಅವ ಜಗಜಟ್ಟಿ.

೩೧೭
ಉಗಾಭೋಗ
ಉದಯ ಕಾಲದ ಜಪ ನಾಭಿಗೆ ಸರಿಯಾಗಿ
ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ
ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ
ಪದುಮನಾಭ ತಂದೆ ಪುರಂದರ ವಿಠಲಗೆ
ಇದೆ ಗಾಯಿತ್ರಿಯಿದ ಜಪಿಸಬೇಕೊ.

ಹೆಚ್ಚಿನ ಉಗಾಭೋಗಗಳು-ಸುಳಾದಿಗಳು
೨೯೫
ಉಗಾಭೋಗ
ಉರುಗಂಜೆ ಸೆರೆಗಂಜೆ ಶರೀರದ ಭಯಕಂಜೆ
ಹಾವಿಗಂಜೆ ಚೇಳಿಗಂಜೆ ಕತ್ತಿಯ ಧಾರೆಗಂಜೆ
ಇನ್ನೊಂದಕ್ಕಂಜುವೆ ಇನ್ನೊಂದಕ್ಕಳುಕುವೆ
ಪರಧನ ಪರಸತಿಗೆರಡಕ್ಕಂಜುವೆನಯ್ಯ
ಹಿಂದೆ ಕೌರವ ರಾವಣರೇನಾಗಿ ಪೋದರು
ಮುಂದೆ ಸಲಹೊ ಪುರಂದರ ವಿಠಲ.

೨೫೭
ಉಗಾಭೋಗ
ಎಂದಿಗಾದರೂ ನಿನ್ನ ಪಾದಾರವಿಂದವೆ ಗತಿ
ಯೆಂದು ನಬಿದೆನೊ ಬಂಧು ಬಳಗವ ಬಿಟ್ಟು
ಬಂದೆ, ನಿನ್ನ ಮನೆಗಿಂದು ಮಂದರಧರ ಗೋ-
ವಿಂದ ಪುರಂದರ ವಿಠಲನೆ ನೀ ಬಂಧು.

೨೫೬
ಉಗಾಭೋಗ
ಎಡಕೆ ಬಾವಿಯುಂಟು ಬಲಕೆ ಕೆರೆಯು ನೋಡು
ಮುಂದೆ ಕಾಳ್ಗಿಚ್ಚು ಹಬ್ಬಿದೆಯೊ ಎಲೊ ದೇವ
ಹಿಂದೆ ಹುಲಿ ಬೆನ್ನಟ್ಟಿ ಬರುತಲಿದೆ
ಆರಿಗೆ ಆರೋ ಪುರಂದರ ವಿಠಲ.

೧೯೮
ಉಗಾಭೋಗ
ಎಡದ ಕೈಯಿಂದ ನೀರ ಎತ್ತಿ ಬಲದ ಕೈಯಲ್ಲಿಟ್ಟು
ಕುಡಿದರೆ ಆರಾದರಾಪೋಶನಕೆ ಮತ್ತದು ಮದ್ಯ
ಎಡೆಯನ್ನ ಗೋಮಾಂಸವೆಂದು ಶ್ರುತಿ ಸಾರುತಿದೆ
ಪೊಡವಿಯಲ್ಲಿ ಪುರಂದರವಿಠಲನಾಜ್ಞೆ.

೨೦೨
ಉಗಾಭೋಗ
ಎದೆಯ ನಾಡಿನಲೊಂದು ಸೋಜಿಗ ಹುಟ್ಟಿ
ಮಿದಿದು ಮಾಡಿದಂಥ ಕಣಕದ ರೊಟ್ಟಿ
ಅದಕೆ ಸಾಧನ ತೊವ್ವೆ-ತುಪ್ಪವನೊಟ್ಟಿ
ಅದರ ಮೇಲೆ ಸಕ್ಕರೆಯನು ಒಟ್ಟಿ
ಆವನು ಮೆಲಬಲ್ಲ ಅವ ಜಗಜಟ್ಟಿ |
ಪುರಂದರವಿಠಲ ಸುಲಭವು ಗಟ್ಟಿ.

೩೯
ಉಗಾಭೋಗ
ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸನ್ನ ಯಾಮ್ಯರು ಎಳೆವರೆಂಬ ಅಪಕೀರ್ತಿಯ
ಪರಿಹರಿಸಿಕೊಳ್ಳೊ ಶ್ರೀಪುರಂದರ ವಿಠಲ.

೩೧೩
ಉಗಾಭೋಗ
ಎನ್ನ ಕಡೆ ಹಾಯಿಸುವುದು ನಿನ್ನ ಭಾರ
ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ
ಎನ್ನ ಸತಿ ಸುತರಿಗೆ ನೀನೆ ಗತಿ
ನಿನ್ನನೊಪ್ಪಿಸುವುದು ನನ್ನ ನೀತಿ
ಎನ್ನ ಪಡಿಯಿಕ್ಕಿ ಸಲಹುವುದು ನಿನ್ನ ಧರ್ಮ
ನಿನ್ನ ಅಡಿಗೆರಗುವುದು ಎನ್ನ ಕರ್ಮ
ಎನ್ನ ತಪ್ಪುಗಳನೆಣಿಸುವುದು ನಿನ್ನದಲ್ಲ
ನಿನ್ನ ಮರೆತು ಬದುಕುವುದು ಎನ್ನದಲ್ಲ
ನೀನಲ್ಲದಿನ್ನಾರಿಗೆ ಮೊರೆಯಿಡುವೆ ಪುರಂದರ ವಿಠಲ.

೩೭
ಉಗಾಭೋಗ
ಎಮ್ಮನು ಸಿರಿದೇವಿ ಇನ್ನೂ ಅರಿಯಳು ಮಹಿಮೆ
ಕುನ್ನಿಮಾನವ ನಾನೇನ ಬಲ್ಲೇನೊ
ಪನ್ನಗಾದ್ರಿ ನಿಲಯನೆ ಪಾವನ ಮೂರುತಿ ಶ್ರೀಕೃಷ್ಣ
ಎನ್ನನುದ್ದರಿಸಯ್ಯ ಪುರಂದರ ವಿಠಲ.

೨೫೮
ಉಗಾಭೋಗ
ಎರಗಿ ಭಜಿಪೆನು ನಿನ್ನ ಚರಣ ಸನ್ನಿಧಿಗೆ
ಕರುಣದಿಂದಲಿ ಎನ್ನ ಸ್ಮರಣೆಯ ಎನಗಿತ್ತು
ಮರೆಯದೆ ಸಲಹೊ ಶ್ರೀ ಪುರಂದರ ವಿಠಲ.

೧೭೪
ಉಗಾಭೋಗ
ಎರಡು ಗಳಿಗೆ ಬೆಳಗು ಇರಲು ಗ್ರಹಸ್ಥಗೆ ಸ್ನಾನ
ಕರವ ಮುಗಿದು ಮಾಡು ಸಂಕಲ್ಪವೇದ
ಪರಮ ಪುಣ್ಯ ಬ್ರಾಹ್ಮಣ ಧರ್ಮವೆಂದು
ಪುರಂದರವಿಠಲನು ಮೆಚ್ಚಿ ಪಾಲಿಸುವ.

೨೬೯
ಉಗಾಭೋಗ
ಎಲೆ ಜಿಹ್ವೆ ನೀ ಕೇಶವನ ನಾಮವನೆ ಸ್ತುತಿಸು
ಎಲೆ ಕರಗಳಿರ, ಶ್ರೀ ಹರಿಯ ಪೂಜೆಯ ಮಾಡಿ
ಎಲೆ ನೇತ್ರಗಳಿರ, ಶ್ರೀ ಕೃಷ್ಣನ ಮೂರ್ತಿಗಳ ನೋಡಿ
ಎಲೆ ಕಾಲುಗಳಿರ, ಶ್ರೀ ಹರಿಯ ಯಾತ್ರೆಯ ಮಾಡಿ
ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಘ್ರಾಣಿಸುತಿರು
ಎಲೆ ಶಿರವೆ, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು
ಎಲೆ ಮನÀವೆ, ನೀ ವರದ ಕೇಶವ ಪುರಂದರ ವಿಠಲನ
ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು.

೧೪೩
ಉಗಾಭೋಗ
ಎಲ್ಲಾ ಒಂದೇ ಎಂಬುವರ ಎರಡು ದಾಡಿಯಲಿದ್ದ
ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು
ಸಲ್ಲದು ಸಲ್ಲದು ಈ ಮಾತು ಇದಕೆ ಸಂಶಯಬೇಡ
ಕಲ್ಲು (ಕಲ್ಲ) ನಾರಿಯ ಮಾಡಿದ ಪುರಂದರವಿಠಲನ |
ಪಲ್ಲವಾಂಘ್ರಿಯ ನೆನೆದು ಪರಗತಿಯ ಪಡೆಯಿರೊ.

ದೇವತಾಸ್ತುತಿ

ಉಗಾಭೋಗ
ಎಲ್ಲಿ ಹರಿಕಥಾ ಪ್ರಸಂಗವೊ
ಅಲ್ಲಿ ಗಂಗಾ-ಯುಮುನೆ-ಗೋದಾ-ಸರಸ್ವತಿ ಸಿಂಧು
ಎಲ್ಲಿ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವುವು
ವಲ್ಲಭ ಶ್ರೀ ಪುರಂದರ ವಿಠಲ ಮೆಚ್ಚುವನು.


ಉಗಾಭೋಗ
ಎಲ್ಲಿ ಹರಿಕಥೆಯ ಪ್ರಸಂಗವೊ
ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು
ವಲ್ಲಭ ಪುರಂದರ ವಿಠಲ ಒಪ್ಪಿದನು

೬೨
ಉಗಾಭೋಗ
ಏಕಾನೇಕ ಮೂರುತಿ ಲೋಕವೆಲ್ಲ ಮೂರುತಿ
ಸನಕಾದಿಗಳೆಲ್ಲ ಸಾನ್ನಿಧ್ಯ ಮೂರುತಿ
ನಮ್ಮ ಘನ ಮಹಿಮ ಬೊಮ್ಮ ಮೂರುತಿ
ಪುರಂದರವಿಠಲನೇ ಕಾಣಿರೊ.

೨೫೯
ಉಗಾಭೋಗ
ಏನ ಓದಿದರೇನು ಏನ ಕೇಳಿದರೇನು
ಹೀನ ಗುಣಂಗಳ ಹಿಂಗದ ಜನರು
ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ
ನೀನೆ ಸಲಹಬೇಕೊ ಪುರಂದರ ವಿಠಲ.

೨೬೦
ಉಗಾಭೋಗ
ಏಳುತ್ತ ಗೋವಿಂದಗೆ ಕೈಮುಗಿಯುವೆ
(ಕಣ್ಣಿವೆ) ಕಣ್ಣನು (ತೆಗೆದು) ತೆರೆದು ನೋಡುವೆ ಶ್ರೀಹರಿಯೆ
ನಾಲಗೆಯಲಿ ನಾರಾಯಣಾ ನÀರಹರಿ
ಸೋಳ ಸಾಸಿರ ಗೋಪಿಯರರಸಾ ಎಂಬೆ ಎ-
ನ್ನಾಳುವ ದೊರೆ ಪುರಂದರ ವಿಠಲ.

೧೯೧
ಉಗಾಭೋಗ
ಒಂದಕ್ಷರವ ಪೇಳಿದವರ
ಉರ್ವಿಯೊಳಗೆ ಬಹುಮಾನ ಮಾಡಬೇಕು
ಒಂದು ಬಾರಿಯಾದರೂ ಒಂದಿಷ್ಟು ಅವಮಾನ ಮಾಡಿದರೆ
ಕುಂದದೆ ನೂರು ಶ್ವಾನ ಜನ್ಮ ಕೋಟಿ ಹೊಲೆ ಜನ್ಮ |
ಪುರಂದರವಿಠಲನ ಆಜ್ಞೆಯಿದು.

೧೯೨
ಉಗಾಭೋಗ
ಒಂದಕ್ಷರವ ಪೇಳಿದವರ ಉರ್ವಿಯೊಳು ಅವರೆ ಗುರು
ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ
ಒಂದಿಷ್ಟು ಅವಮಾನ ಮಾಡಿದರೆ ತಪ್ಪದೆ
ಒಂದು ನೂರು ಶ್ವಾನ ಜನ್ಮ ಕೋಟಿ ಹೊಲೆ ಜನ್ಮ
ತಂದೀವನು ಪುರಂದರವಿಠಲ.

೯೭
ಉಗಾಭೋಗ
ಒಂದು ಕಾಲದಲ್ಲಿ ಆನೆ ಕುದರೆ (ಮೇಲ್ಮೆರೆಸುವೆ) ಏರಿಸುವೆ
ಒಂದು ಕಾಲದಲ್ಲಿ ಬರಿಗಾಲಿಂದ ನೆಡೆಸುವೆ
ಒಂದು ಕಾಲದಲ್ಲಿ ಅಮೃತಾನ್ನವನುಣಿಸುವೆ
ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನಳವ ನೀನೇ ಬಲ್ಲೆ ನಾನೇನ ಬಲ್ಲೆನಯ್ಯ
ಪನ್ನಗಶಯನ ಶ್ರೀಪುರಂದರವಿಠಲ.

೩೧೮
ಉಗಾಭೋಗ
ಒಂದೇ ಒಂದು ಬೆರಳ ಜಪ
ಒಂದೇ ಹತ್ತು ಪುತ್ರಂಜೀವಿ ಮಣಿಯ ಜಪ
ಒಂದೇ ನೂರು ಶಂಖದ ಮಣಿಯ ಜಪ
ಒಂದೇ ಸಹಸ್ರ ಹವಳದ ಜಪ
ಒಂದೇ ಹತ್ತು ಸಾಹಸ್ರ ಮುತ್ತಿನ ಮಣಿಯ ಜಪ
ಒಂದೇ ಲಕ್ಷ ಸ್ವರ್ಣ ಮಣಿಯ ಜಪ
ಒಂದೇ ಕೋಟಿ ದರ್ಭೆ ಗಂಟಿನ ಜಪ
ಒಂದೇ ಅನಂತ ಶ್ರೀ ತುಲಸಿ ಮಣಿಯ ಜಪ –
ವೆಂದು ಪೇಳಿದ ಪುರಂದರ ವಿಠಲ.

೯೪
ಉಗಾಭೋಗ
ಒಡಯನುಳ್ಳ ತೊತ್ತಿಗೇತರ ಚಿಂತೆ
ಎನ್ನೊಡೆಯ ದ್ವಾರಕಿನಿವಾಸ ಎಂಬ ಛತ್ರವಿರೆ
ಇಂದಿಗೆಂಬ ಚಿಂತೆ ನಾಳೆಗೆಂಬ ಚಿಂತೆ
ನಾಡಿದಿಗೆಂಬ ಚಿಂತೆ ತೊತ್ತಿಗೇತಕಯ್ಯ?
ಅಡಿಅಡಿಗೆ ಎಮ್ಮನೋವ ಕಾವ ಚಿಂತೆಯ
ಒಡೆಯ ಪುರಂದರವಿಠಲ ನೀನಿರುತಿರೆ.

೨೭೭
ಉಗಾಭೋಗ
ಒಡಲೊಳು ಪೊಗದನಕ ಅರೆ ಬಿಡರು ನಾಮ ಸುಧೆಯ
ಕೊಡುವರೊ ಮುಕುತಿಯ ತಡೆವರೊ ಭವಸಿಂಧುವ
ಮೃಡಸಖ ಪುರಂದರವಿಠಲನ ದಾಸರು
ಕೊಡುವರೊ ಮುಕುತಿಯ.

೨೬೧
ಉಗಾಭೋಗ
ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ
ನಿರ್ಭಂಧವಿಲ್ಲದೆ ತನ್ನಿಚ್ಛೆಯೊಳಿದ್ದು
ಲಭ್ಯವಾದೊಂದು ತಾರಕ ಸಾಕು ಸಾಕು ಎನಗೆ
ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟನಹೆನು
ಅ(ಕ)ರುಣಾಕರ ಪುರಂದರ ವಿಠಲ (ಲಭ್ಯ)
ಒಂದು ತಾರಕ ಸಾಕು ಸಾಕು.

೧೮೧
ಉಗಾಭೋಗ
ಕಂಡ ಸೂರ್ಯಗೆ ಸಂಧ್ಯೆ ಕಾಣದ ಸೂರ್ಯಗೆ ಸಂಧ್ಯೆ ಭೂ-
ಮಂಡಲದಿ ಮಾಡದಿರಲು ಮಾ-
ರ್ತಂಡ ನೂರ ಹತ್ಯಾ ಮಾಡಿದ ಪಾಪ -ಶ್ರುತಿ ಸಾರುತಿದೆ
ಪುಂಡಗಾರ ನಗರೆ
ನರಕ ತಪ್ಪದು ಎಂದು
ಅಂಡಜಪತಿ ಪುರಂದರವಿಠಲ ಪೇಳ್ದ.

೩೧೬
ಉಗಾಭೋಗ
ಕಂಡಾನಿಶದಲ್ಲಿ ಅಘ್ರ್ಯವನು
ಪ್ರಾತರದಿ ಮಂಡಲಾಕಾರ
ಮಧ್ಯಾಹ್ನದಲ್ಲಿ ಪುಂಡಗಾರನಾಗಿ
ಚರಿಸಲದೆ ಇದ್ದರೆ ಅವಗೆ
ಪಂಡಿತ ಪುರಂದರ ವಿಠಲ ಒಲಿಯ.

೨೭೮
ಉಗಾಭೋಗ
ಕಣ್ಣಲ್ಲಿ ನೀರಿಲ್ಲ ಮನದಲ್ಲಿ ಕರಗಿಲ್ಲ
ಅತ್ತೆ ಸತ್ತರೆ ಸೊಸೆ ಅಳುವಂತೆ
ಅತ್ತೆ ಅತ್ತೆ ಎಂತೆಂದು ನಾನತ್ತೆ
ಅತ್ತೆ ಸತ್ತರೆ ಎದೆ ಎರಡು ಪರಿಮಾಯಿತೆಂದು
ಅತ್ತೆ ಅತ್ತೆ ಎಂದು ಅತ್ತೆ ಪುರಂದರ ವಿಠಲನ
ದಾಸರೆಲ್ಲರ ಮುಂದೆ ಹಾಡಿ ಹಾಡಿ ನಾನತ್ತೆ.

೧೩೨
ಉಗಾಭೋಗ
ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಯಮಜ ಮಾಡುವ ರಾಜಸೂಯಾಗದಲ್ಲಿ
ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ?
ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ
ನಮೋ ನಮೋ ಎಂಬೆ ಪುರಂದರವಿಠಲ.

೧೬೫
ಉಗಾಭೋಗ
ಕಲಿಕಾಲಕೆ ಸಮಯುಗವು ಇಲ್ಲವಿಲ್ಲಯ್ಯ
ಕಲುಷಹರ ಕೈವಲ್ಯವು ಕರಸ್ಥವಯ್ಯ
ಜಲಜಲೋಚನ ನಮ್ಮ ಪುರಂದರವಿಠಲನ್ನ
ಬಲಗೊಂದು ಸುಖಿಸಿ ಬಾಳುವುದಕೆ.

೧೬೬
ಉಗಾಭೋಗ
ಕಲಿಯುಗಕೆ ಸಮಯುಗವು ಇಲ್ಲವಯ್ಯ
ಕಲುಷಹರ ಕೈವಲ್ಯವು ಕರಸ್ಥವಯ್ಯ
ಜಲಜಲೋಚನ ನಮ್ಮ ಪುರಂದರವಿಠಲನ್ನ
ಬಲಗೊಂಡು ಸುಖಿಸಿ ಬಾಳುವುದಕೆ.

೧೫೦
ಉಗಾಭೋಗ
ಕಾಲ ಮೇಲೆ ಮಲಗಿ ಸಿಂಪಿಯಲಿ ಹಾಲ ಕುಡಿದು ಬೆಳೆದ
ಮೂರುಲೋಕ ನಿನ್ನುದರದಲ್ಲಿರಲು
ಈರೇಳು ಲೋಕವ ನೀರಡಿ ಮಾಡಲು
ಮೂರು ಲೋಕದೊಡೆಯ ಶ್ರೀಪುರಂದರವಿಠಲ
ನಿನ್ನ ಬಾಲಕತನದ ಲೀಲೆಗೆ ನಮೋ ನಮೋ.

೧೪೬
ಉಗಾಭೋಗ
ಕಾವ ದೈವವು ನೀನೆ ಕೊಲುವ ದೈವವು ನೀನೆ
ಕೈವಲ್ಯ ಫಲದಾತ ಕೇಶವನು ನೀನೆ
ಆವ ದೈವಕ್ಕೂ ಈ ವೈಭವವನ್ನು ಕಾಣೆ
ರಾವಣಾಂತಕ ಸ್ವಾಮಿ ಪುರಂದರವಿಠಲ.

೧೫೬
ಉಗಾಭೋಗ
ಕಾಳಿಂದಿಯ ಮಡುವಿನಲಿ ಧಮುಕಿ
ಕಾಳಿಂಗನ ಫಣಿ ಫೂತ್ಕಾರ ಮೇಲುಸುರದನ್ನ
ಭಾಮೆಯೆಳಸಿರಲು ತೋಂಧಿಗಿಧಿಗಿ ಧಾಂಧಾಂಮಿ-
ಗೊಳಿಸಿ ಅಜ ಮೃದಂಗವ ತಟ್ಟೆ ಇಂದುಧರ
ತಾಳ ಪಿಡಿದು ಘಟ್ಟಿಸಲು ತಥಂತನನವೆಂದು
ಸ್ವರವೆತ್ತಿ ನಾರದ ಪಾಡಲು ಕುಣಿ, ಎದೆಯಲ್ಲಿ ಕೃಷ್ಣ
ಎಂದವಗೆ ವರವಿತ್ತು ಮನ್ನಿಸಿ ಪೂಜೆಗೊಂಡು
ಗೋವಿಂದ ಗೋಪಾಲಕರನೊಲಿಸಿ
ಗೋವಳರಂಕದರ್ಪ ಕೇಳಿ ನಂದ ಗೋಪಿಯರಿ-
ಗಾನಂದ ಅಭಿನವ ಈತ ಪುರಂದರವಿಠಲ.

೭೭
ಉಗಾಭೋಗ
ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ
ಅಚ್ಯುತನೆ ಕಾಯೊ ಅನಂತನೆ ತೆಗೆಯೊ
ಗೋವಿಂದ ಹರಿ ಪೊರೆಯೊ ಪುರಂದರವಿಠಲ
ನೀ ಕರುಣವುಳ್ಳವನು ಕಾಣೊ |

೭೬
ಉಗಾಭೋಗ
ಕಿಚ್ದಿನೊಳಗೆ ಬಿದ್ದ ಕೀಟಕನು ನಾನು
ಅಚ್ಯುತ ತೆಗೆಯೊ ಅನಂತ ಕಾಯೊ ಗೋವಿಂದ ಪೊರೆಯೊ
ಘೋರಪಾತಕಿ ನಾನು ಪುರಂದರವಿಠಲ
ನೀ ಕರುಣದಿ ಕಾಣೊ.

೨೧೦
ಉಗಾಭೋಗ
ಕೀರ್ತಿ ಕಿಂಕರಗೆ ಅಪಕೀರ್ತಿ ಮಂಕುಗಳಿಗೆ
ನಷ್ಟ ಕಷ್ಟರಿಗೆ ಲಾಭ ಮಹಾತ್ಮರಿಗೆ
ದಾರಿದ್ರ್ಯ ದ್ರೋಹಿಗಳಿಗೆ ವಚನಭ್ರಷ್ಟರಿಗೆ ಅಂಧಂತಮಸ್ಸು
ಸಂದೇಹವಿಲ್ಲವಿದಕೆ ಪುರಂದರವಿಠಲ.

೧೯೯
ಉಗಾಭೋಗ
ಕುಂದದ ದೀಪವ ನಂದಿಪನಿಗೆ
ಕೂಷ್ಮಾಂಡ ಒಡೆವಳಿಗೆ
ಎಂದೂ ಆಪೋಶನವ ತನ್ನ ಕೈ-
ಯಿಂದ ತಾನೆ ಎರೆದುಕೊಂಡು ಕುಡಿವಂಗೆ
ಇವರು ಮೂವರಿಗೆ ಕುಲನಾಶನವೆಂದು
ಅಂದೆ ಪುರಂದರವಿಠಲ ನಿರೂಪಿಸಿದನರಿಯ.

೨೦೪
ಉಗಾಭೋಗ
ಕುಟುಂಬ ಭರಣ ಎರಡಷ್ಟು ಬ್ರಾಹ್ಮಣರಿಗೆ
ವಿಧಿ ಗಡಗಡಿಸಿತು ಮೂರು ವಾನಸ್ಥರಿಗೆ ವಿಧಿಸಿತು
ಜಡಮತಿಯ ಬಿಟ್ಟು ಯತಿಗಳಿಗೆ ನಾಲ್ಕರಷ್ಟು
ಕುಂಡಲೀಶಯನ ಪುರಂದರವಿಠಲ ಈಪರಿ
ಪೊಡವಿ ಜನರಿಗೆ ವಿಧಿಕರ್ಮ ನಿರ್ಮಿಸಿದ.

೨೧೧
ಉಗಾಭೋಗ
ಕುಡಿಯ ಕೊಟ್ಟ ಅಮೃತದಂತಹ ನೊರೆಹಾಲನೊಲ್ಲದೆ
ಬಟ್ಟಲೊಳಗೆ ತಿರಿತಿಂಬರು ಕೆಲರು
ಪಟ್ಟವಾಳಿಯ ಮುಂದೆ ಅರಿವೆಯನೆ ಬಯಸುವರು
ಈ ಭ್ರಷ್ಟರಿಗೇನೆಂಬೆ(ನೊ) ಪುರಂದರವಿಠಲ.

೧೭೬
ಉಗಾಭೋಗ
ಕೂಪದಲ್ಲಾದರು ಕೊಳದಿ ಮುಳುಗಿಯಾದರು
ವಾಪಿಯಲ್ಲಾದರು ಅಶುಚಿಯಲ್ಲಾದರು
ಗೋಪಿ ಚಂದನದ ಸಂಪರ್ಕವಿದ್ದರೆ ತಾ ಪುನೀತ
ಸಂಧ್ಯಾಕ್ಕೆ ಕಾಲವೆ ಮುಖ್ಯವೆಂದು
ಶ್ರೀಪತಿ ಪುರಂದರವಿಠಲ ಪೇಳ್ದ.

೧೭೫
ಉಗಾಭೋಗ
ಕೂಪದಲ್ಲಿಯಾದರೂ ಕೊಳದಲ್ಲಿಯಾದರೂ
ವಾಪಿಯಲ್ಲಿಯಾದರೂ
ಆ ಪತ್ನಿಯ ನೆರೆದಿದ್ದರೂ ಗೋಪೀಚಂದನದ
ಸಂಪರ್ಕವಿದ್ದರೆ ಅದೆ ಸಂಧ್ಯಾಕಾಲವೆಂದು
ಪುರಂದರವಿಠಲ ಪೇಳ್ದ.

೧೭
ಉಗಾಭೋಗ
ಕೆಟ್ಟೆನೆಂದೆನಲೇಕೆ ಕ್ಲೇಶಪಡುವುದೇಕೆ
ಹೊಟ್ಟೆಗೋಸುಗ ಪರರ ಕಷ್ಟಪಡಿಸಲೇಕೆ
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಹುಟ್ಟಿಸಿದ ದೇವರು ಹುಲ್ಲುಮೇಯಿಸುವನೆ
ಗಟ್ಟಿಯಾಗಿ ನೆರನಂಬು ಪುರಂದರವಿಠಲನ
ಸೃಷ್ಟಿ ಮಾಡಿದ ಬ್ರಹ್ಮ ಸ್ಥಿತಿ ಮಾಡಲರಿಯನೇ?

೧೮
ಉಗಾಭೋಗ
ಕೆಟ್ಟೆನೆಂದೆನಲೇಕೋ ಕ್ಲೇಶ ಪಡುವದೇಕೋ ಗೇಣು
ಹೊಟ್ಟೆಗಾಗಿ ಪರರ ಕಷ್ಟ ಬಡಿಸಲೇಕೋ
ಹುಟ್ಟಿಸಿದ ದೇವ ಹುಲ್ಲು ಮೇಯಿಸುವವನಲ್ಲ
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ
ಗಟ್ಟ್ಯಾಗಿ ಸಲಹುವ ಪುರಂದರವಿಠಲ.

೧೪೨
ಉಗಾಭೋಗ
ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದಲಾದ ಭಾಗ್ಯವ
ಹರಿ ಸಮರ್ಪಣೆ ಮಾಡಿರೊ
ಸಿರಿಪುರಂದರವಿಠಲರಾಯನ
ಚರಣಕಮಲವ ನಂಬಿ ಬದುಕಿರೊ.

೯೧
ಉಗಾಭೋಗ
ಕೋಳಿಗೆ ಯಾತಕ್ಕೆ ಹೊನ್ನಪಂಜರವು
ಜೋಳಿಗೆಯಾತಕ್ಕೆ ಜಾಜಿಮಲ್ಲಿಗೆ ದಂಡೆ
ಆಳಿಲ್ಲದವನಿಗೆ ಅರಸುತನವ್ಯಾತಕ್ಕೆÉ ನಿನ್ನ
ಊಳಿಗವ ಮಾಡದನ ಬಾಳು ಇನ್ನ್ಯಾತಕ್ಕೆ
ಪೇಳಯ್ಯ ದೇವ ಶ್ರೀ ಪುರಂದರವಿಠಲ.

೯೦
ಉಗಾಭೋಗ
ಕೋಳಿಗೆ ಹೊನ್ನ ಪಂಜರವು ಇನ್ನೇಕೆ
ಜೋಳಿಗೆ ಜಾಳಿಗೆದಂಡೆ ಇನ್ನೇಕೆ
ಮಾಳಿಗೆಯ ಮನೆಯಿನ್ನು ಡೊಂಬಗೇಕೆ
ಆಳು ಇಲ್ಲದೆ ಅರಸುತನವೇಕೆ
ನಮ್ಮ ಪುರಂದರವಿಠಲನ ಊಳಿಗಕ್ಕಾಗದವನ
ಬಾಳುವೆ ಇನ್ನೇಕೆ?

೭೯
ಉಗಾಭೋಗ
ಕ್ರಿಮಿ ಕೀಟನಾಗಿ ಹುಟ್ಟದಂದು ಹರಿ ಶರಣೆಂತೆನಲುಂಟೆ
ಹರಿ ಶರಣನಾಗಿ ಹುಟ್ಟಿದಂದು ಹರಿ ಶರಣಿಂತೆನಲುಂಟೆ
ಕತ್ತೆ ಕರಡಿಯಾಗೆ ಹುಟ್ಟಿದಂದು ಹರಿ ಶರಣೆಂತೆನಲುಂಟೆ
ಹಂದಿ ಶುನಕನಾಗಿ ಹುಟ್ಟದಂದು ಹರಿ ಶರಣೆಂತೆನಲುಂಟೆ
ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳ ನೊಂದು
ಮಾನುಷ ದೇಹ ಬಂದಿತೋ ನಿನಗೀಗ
ಬೇಗ ನೆನೆಯಲೊ ಪುರಂದರ ವಿಠಲರಾಯನ.

೭೮
ಉಗಾಭೋಗ
ಕ್ರಿಮಿಕೀಟಕನಾಗಿ ಹುಟ್ಟಿದಂದು ನಾನು
ಹರಿಶರಣಂದೆನಲುಂಟೆ
ಹಕ್ಕಿ ಹರಿಣಿಯಾಗೆ ಹುಟ್ಟಿದಂದು ನಾನು
ಹರಿಶರಣೆಂದೆನಲುಂಟಿ
ಹಂದಿ-ಸೊನಗನಾಗಿ ಹುಟ್ಟಿದಂದು ನಾನು
ಹರಿಶರಣೆಂದೆನಲುಂಟೆ
ಮರೆದೆ ಮಾನವ ನಿನ್ನ ಹಿಂದಿನ ಭವಗಳನಂದು
ಮಾನುಷ ದೇಹ ಬಂದಿತೊ ನಿನಗೀಗ
ನೆನೆಯಲೊ ಬೇಗ ಪುರಂದರವಿಠಲನ.

೧೦
ಉಗಾಭೋಗ
ಕ್ಷೀರ ಸಾಗರಕೆ ಶ್ರೀರಮಣ ಬಂದಂತೆ
ಪ್ರಹ್ಲಾದನಿಗೊಲಿದು ನರಸಿಂಹ ಬಂದತೆ
ಭಗೀರಥನ ಮನೆಗೆ ಶ್ರೀಗಂಗೆ ಬಂದಂತೆ
ಮುಚುಕುಂದನ ಮನೆಗೆ ಶ್ರೀ ಕೃಷ್ಣ ಬಂದಂತೆ
ಲಕ್ಷ್ಮೀಕಾಂತ ಪುರಂದರ ವಿಠಲ ಬರಲು ನನ್ನ
ನಾಲಗೆ ತುದಿಯಲಿ ಗಾಯನ ಮಾಡುತ ಧನ್ಯನಾದೆ.

೨೦೯
ಉಗಾಭೋಗ
ಗಂಡಮಾಡಿದ ಪಾಪ ಹೆಂಡತಿಗಿಲ್ಲ
ಹೆಂಡತಿ ಮಾಡಿದ ಪಾಪ ಗಂಡಗುಂಟು
ಹೆಂಡತಿ ಮಾಡಿದ ಪುಣ್ಯ ಗಂಡಗಿಲ್ಲ
ಗಂಡ ಮಾಡಿದ ಪುಣ್ಯ ಹೆಂಡತಿಗುಂಟು
ಜೀವ ಜೀವರ ಭೇದ ನೀನೆ ಉದ್ಧರಿಸಯ್ಯ
ಪುರಂದರವಿಠಲ.

೨೪೭
ಉಗಾಭೋಗ
ಗಜ-ತುರಗ ಸಹಸ್ರ ದಾನ
ಗೋಕುಲ ಕೋಟಿ ದಾನ
ಭೂದಾನ ಸಮುದ್ರ ಪರ್ಯಂತರ
ಧನಿ ಪುರಂದರ ವಿಠಲನ ಧ್ಯಾನಕ್ಕ ಸಮವಿಲ್ಲ.

೩೨
ಉಗಾಭೋಗ
ಗಾಣದೆತ್ತಿನಂತೆ ತಿರುಗಾಡಲಾರೆ
ದಂಡಿ(ಗೆ)ಯ ನೊಗದಂತೆ(ನಾ) ಬೀಳಲಾರೆ
ನವಿಲಂತೆ ನಾನಿನ್ನು ನೆಗೆದಾಡಲಾರೆ
ಗಿಳಿಯಂತೆ ನಾನಿನ್ನು ಕೂಗಾಡಲಾರೆ
ಪುರಂದರವಿಠಲನ್ನ ಕಾಣದೆ
ಧರೆಮೇಲೆ ಮತ್ತೆ ಕೇಳಲಾರೆ.

೧೦೮
ಉಗಾಭೋಗ
ಗಾಳಿಗಿಕ್ಕಿದ ದೀವಿಗೆಯಂತೆ ಈ ದೇಹ
ನಿಮಿಷವೊ ನಿಮಿಷಾಧರ್Àವೊ ತಿಳಿಯದು
ಕಾಲಕಾಲಗಳಲ್ಲಿ ಹರಿಗುಣ ಕಲ್ಯಾಣಗಳ
ಕೇಳದವನ ಜನ್ಮ ವ್ಯರ್ಥವೊ ಪುರಂದರವಿಠಲ.

೨೪೦
ಉಗಾಭೋಗ
ಗುರಿಯ ನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲು ಅರಿಯದವ ಮಾಸಾಳು
ಹರಿಯೆಂದು ಓದದ ಓದೆಲ್ಲ ಹಾಳು
ಪುರಂದರ ವಿಠಲ ಪಾರ್ಥನ ಮನೆಯೊಳು.

೨೪೧
ಉಗಾಭೋಗ
ಗುರಿಯನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲರಿಯದವನೆ ಮಾಸಾಳು
ಹರಿಯೆಂದು ಓದದೆಲ್ಲವು ಹಾಳು
ಪುರಂದರವಿಠಲ ಪಾರ್ಥನ ಮನೆಯೊಳು.

೨೪೯
ಉಗಾಭೋಗ
ಗುರು ಕರುಣ ವಾಹೋದು ಪರಮ ದುರ್ಲಭವಯ್ಯ
ಪರಿಪರಿ ವ್ರತಗಳಾಚರಿಸಿ ಫಲವೇನು?
ಗುರು ಕರುಣವೊಂದಲ್ಲದೆ ಗತಿ ಬೇರೆಯುಂಟೆ?
ಶರೀರದ ಪುತ್ರ ಮಿತ್ರ ಕಳತ್ರ ಬಾಂಧವರು
ನೆರೆ ಸಲಿಸುವರೆ ಸದ್ಗತಿಗೆ ಸಾಧನವ?
ನಿರುತದಿ ಗುರುಪಾದವ ನಿಜವಾಗಿ ಮನದಲ್ಲಿ
ಅರಿತು ಭಜಿಸಲು ಅಖಿಳ ಸಂಪದವಿತ್ತು
ಪರಿಪಾಲಿಸುವ ನಮ್ಮ ಪುರಂದರ ವಿಠಲ.

೨೫೦
ಉಗಾಭೋಗ
ಗುರು ಕರುಣ ಹೊಂದುವುದು ಪರಮ ದುರ್ಲಭವಯ್ಯ
ಪರಿ ಪರಿ ವ್ರತಗಳನ್ನಾಚರಿಸಲು ಫಲವೇನು
ಶರೀರಾದಿ ಪುತ್ರಮಿತ್ರ ಕಳತ್ರ ಬಾಂಧವರು
ಇರಿಸುವರೆ ಸದ್ಗತಿಗೆ ಸಾಧನದಿ
ನಿರುತವು ಗುರುಪಾದ ನಿಜವಾಗಿ ಮನದಲ್ಲರಿತು ಭಜಿಸಲು
ಅಖಿಲ ಸಂಪದವಕ್ಕು ಪುರಂದರ ವಿಠಲ.

೬೩
ಉಗಾಭೋಗ
ಚಂದಿರಗಿಂತಿನ್ನು ನಿಂದಿರೆ ತೆರಪಿಲ್ಲ
ಸೂರ್ಯನಿಗಿಂತಿನ್ನು ತಿರುಗಿ ಹೋಯಿತು ಹೊತ್ತು
ಬೊಮ್ಮಾದಿಗಳಿಗೆಲ್ಲಾ ರುದ್ರಾದಿಗಳಗೆಲ್ಲ
ಒಂದು ಉತ್ತರನಾಡಲು ತೆರಪಿಲ್ಲ
ಈ ದೇವರನೆಲ್ಲ ಒತ್ತಿ ಆಳುವ ನಮ್ಮ
ಪುರಂದರವಿಠಲ ಕಟ್ಟರಸು ಕಾಣಿರೊ.

೧೦೯
ಉಗಾಭೋಗ
ಚೋರಗೆ ಚಂದ್ರೋದಯ ಸೊಗಸುವುದೆ?
ಜಾರಗೆ ಸೂರ್ಯೋದಯ ಸೊಗಸುವುದೆ?
ಶ್ರೀರಮಣನ ಕಥೆ (ಯುಹೀನಗೆ) ಮೆಚ್ಚುವುದೆ?
ನಾರಿಯ ನಯನವಿಲ್ಲದ ಚೆಲುವಿಕೆಯು
ಶಾರೀರವಿಲ್ಲದವನ ಹಾಡಿಕೆಯು
ಅರಣ್ಯರೋದನ(ವೋ)ವಯ್ಯ ಪುರಂದರವಿಠಲ.

೧೯೫
ಉಗಾಭೋಗ
ಚೋರನಾದರೂ ಚಂಡಾಲನಾದರೂ
ಬ್ರಹ್ಮಘ್ನ-ಘಾತೃ ಘತಕನಾದರು
ಆವನಾದರೂ ಮಧ್ಯಾಹ್ನಕಾಲಕೆ
ಅತಿಥಿಯಾಗಿ ಮನೆಗೆ ಬಂದರೆ
ತುತಿಸಿ ಅನ್ನವನಿಟ್ಟು ಸ್ವಾಮಿ
ಪುರಂದರವಿಠಲಗರ್ಪಿಸಬೇಕು.

೬೬
ಉಗಾಭೋಗ
ಜಗದಂತಾರ್ಯಮಿ ನೀನು ನಿನ್ನ ಬಟ್ಟಬಯಲೆಂದು
ಬಗೆವವನು ಜಗದೊಳಗೆ ಬ್ರಹ್ಮಹತ್ಯಾಕಾರಿ
ಅಗಣಿತ ಗುಣ ನೀನು ನಿನ್ನ ಗುಣಗಳಿಷ್ಟೆಂದು
ಬಗೆವವನು ಜಗದೊಳಗೆ ಸ್ವರ್ಣಸ್ತೇಯಿ
ಜಗದೊಡೆಯ ನೀನಿರಲು ಅನ್ಯದೇವನು ಒಡೆಯನೆಂದು
ಬಗೆವವನು ಜಗದೊಳಗೆ ಮಧ್ಯಪಾನಿ
ಜಗದ ತಂದೆ ನೀನು ನಿನ್ನ ದಾಸನೆಂದೆನಿಸಿದೆ ನಿನೇ ತಾನೆಂದು
ಬಗೆವವನೆ ಜಗದೊಳಗೆ ಗುರುತಲ್ಪಗಾಮಿ
ಅವರ ಸಾಕ್ಷಿಯೋಗದಿಂದಲಿ ಇಹ ಜನರು
ಜಗದೊಳಗೆ ಮುಖ್ಯ ಪಂಚಮಹಾಪಾತಕರು
ಅದು ಕಾರಣದಿಂದ ನೀ ನಿತ್ಯ ನೀಸತ್ಯ ನೀ ಬಲ ನೀ
ಅಗಣಿತ ಗುಣನಿಲಯ ನೀ ಸಕಲಸುಖಕಾರಣದಿಂದ
ನಂಬಿದೆ ನೀ ಸಲಹಯ್ಯ ಪುರಂದರವಿಠಲ.

೬೧
ಉಗಾಭೋಗ
ಜಗವ ಸುತ್ತಿಹುದೆಲ್ಲ ನಿನ್ನ ಮಾಯೆಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಜಗವು ನಿನ್ನೊಳಗೆ ನೀನು ಎನ್ನೊಳಗೆ
ಜಗÀಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಕರಿಯ ಕನ್ನಡಿಯೊಳು ಅಡಗಿಪ್ಪ ತೆರದಿ
ನೀನು ಎನ್ನೊಳಡಗಿಪ್ಪೆ ಪುರಂದರವಿಠಲ.

೬೦
ಉಗಾಭೋಗ
ಜಗವು ನಿನ್ನೊಳಗೆ ನೀನು ಎನ್ನೊಳಗೆ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಜಗವ ಸುತ್ತಿಹುದೆಲ್ಲ ಮಾಯೆಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಕರಿಯು ಕನ್ನಡಿಯೊಳು ಅಡಗಿಹ ತೆರನಂತೆ
ನೀ ಎನ್ನಳು ಅಡಗಿರೊ ಪುರಂದರವಿಠಲ.


ಉಗಾಭೋಗ
ಜಯ ಜಯಾ ಹರಿಯೆಂಬುದೆ ಸುದಿನವು
ಜಯ ಹರಿಯೆಂಬುದೆ ತಾರಾ ಬಲವು
ಜಯ ಹರಿಯೆಂಬುದೆ ಚಂದರ ಬಲವು
ಜಯ ಹರೆಯೆಂಬುದೆ ವಿದ್ಯಾಬಲವು
ಜಯ ಹರಿಯೆಂಬುದೆ ದೈವ ಬಲವು
ಜಯ ಹರಿ ಪುರಂದರ ವಿಠಲನ ಬಲವಯ್ಯ ಸುಜನರಿಗೆ

೨೪೮
ಉಗಾಭೋಗ
ಜೀವ ಜೀವಕೆ ಭೇದ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮನಿಗೆ ಭೇದ
ಜೀವಾ ಜೀವ ಮುಕ್ತಾ ಮುಕ್ತರ ಭೇದ
ಸಂಸಾರದೊಳು ಭೇದ ಮುಕ್ತರೊಡೆಯ ಹರಿ
ಭಕ್ತರಾಧೀನ ಜಗತ್‍ಕರ್ತು ನೀ ಸಲಹಯ್ಯ
ಪುರಂದರ ವಿಠಲ.

೪೦
ಉಗಾಭೋಗ
ತಂದೆ, ನೀ ತಂದೆ-ನಾ ಬಂದೆ ನಿನ್ನ ಹಿಂದೆ
ಕಾಮದಲಿ ನೀ ತಂದೆ ಕ್ರೋಧದಲಿ ನೀ ತÀಂದೆ
ತಾಮಸ ದುರ್ಯೋನಿಯಲಿ ನೀ ತಂದೆ ನಾ ಬಂದೆ |
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಒಂದಿ ಎಂಬತ್ನಾಲ್ಕು ಲಕ್ಷ ಯೋನಿಗಳ
ತಂದೆ ನೀ ತಂದೆ, ನಾ ಬಂದೆ ನಿನ್ನ ಹಿಂದೆ
ಹಿಂದಿನ ಜನ್ಮವು ಹೇಗಾದರಾಗಲಿ
ಮುಂದೆನ್ನ ಸಲಹೊ ಶ್ರೀ ಪುರಂದರವಿಠಲ.

೪೮
ಉಗಾಭೋಗ
ತಂಬೂರಿ ಮೀಟಿದವ ಭವಾಬ್ಧಿಯ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ
ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟದವ
ಗಾಯನ ಮಾಡಿದವ ಹರಿಮೂರ್ತಿಯ ನೋಡಿದವ
ಪುರಂದರವಿಠಲನ ನೋಡಿದವ ವೈಕುಂಠಕೋಡಿದವ.

೨೭೯
ಉಗಾಭೋಗ
ತನುವೆಂಬ ದೊಡ್ಡ ದೋಣಿಯಲಿ
ಹರಿನಾಮವೆಂಬ ಬಂಡವ ತುಂಬಿ
ವ್ಯವಹಾರವನು ಮಾಡುವೆನಯ್ಯ
ಇಂದ್ರಿಯಗಳೆಂಬ ಸುಂಕಿಗರು ಅಡ್ಡಾದರೆ
ಮುಕುಂದನ ಮುದ್ರೆಯನೇ ತೋರಿ ಹೊಳೆಯ ದಾಟುವೆನಯ್ಯ
ಪುರಂದರವಿಠಲನಲ್ಲಿಗೆ ಪೋಗೆ
ಮುಕುತಿ ಸುಖದ ಲಾಭವ ಪಡೆವೆ.

೨೦
ಉಗಾಭೋಗ
ತಪ್ಪುರಾಶಿಗಳ ಒಪ್ಪಿ ಕಾಯೊ ಕೃಪಾಳು
ಮುಪ್ಪುರವನಳಿದಂಥ ಮುನೀಂದ್ರವಂದ್ಯ
ಅಪ್ರಮೇಯನೆ ನಿನ್ನ ಅದ್ಭುತ ಮಹಿಮೆಗಳ
ಅಪ್ಪು ನಿಧಿಯಲ್ಲಿ ಪುಟ್ಟಿದವಳು ಬಲ್ಲಳೆ
ಕಪ್ಪು ಮೇಘಕಾಂತಿಯೊಪ್ಪುವ ತಿಮ್ಮಪ್ಪ
ಅಪ್ರಾಕೃತರೂಪ ಪುರಂದರವಿಠಲ

೩೦೭
ಉಗಾಭೋಗ
ತಾಯಿ ಗೋಪಿಯಂತೆ ನಿನ್ನ ಒರಳನೆಳಸಲಿಲ್ಲ
ವಾಲಿಯಂತೆ ಎದುರು ವಾದಿಸುತಿರಲಿಲ್ಲ
ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ
ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ
ಕೊಂಕಣದ ಎಮ್ಮೆಗೆ ಕೊಡತಿಯೇ ಮದ್ದೆಂದು
ಅವರೆ ಮದ್ದು ನಿನಗೆ ಪುರಂದರ ವಿಠಲ.

೪೬
ಉಗಾಭೋಗ
ತಿಂಬಲು ಅನ್ನ ಹುಟ್ಟಲಿ ಬೇಡ
ಅನ್ನ ಹುಟ್ಟಿದರೆ ಬಟ್ಟೆ ದೊರಕಲಿ ಬೇಡ
ಬಟ್ಟೆ ದೊರಕಿದರೆ ಇಂಬು ತೋರಲಿ ಬೇಡ
ಇಂಬು ನಿನ್ನ ಪಾದಾರವಿಂದದಲಿ
ಸಂತೋಷ ತೋರಿಸಯ್ಯ
ಇಂದಿರಾರಾಧ್ಯ ಶ್ರೀ ಪುರಂದರವಿಠಲ.

೭೨
ಉಗಾಭೋಗ
ತುಲಸಿಯಿರಲು ತುರುಚಿಯನು ತರುವಿರೊ
ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ
ರಾಜಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾಲೆರೆದೆ
ಬಾವನ್ನವಿರಲು ಬೇಲಿಯ ನೆಳಲೊಳೊರಗಿದೆ
ತಾಯಿಯ ಮಾರಿ ತೊತ್ತನು ತರುವ ಮಾನವನಂತೆ
ಪುರಂದರವಿಠಲ ನೀನಿರಲನ್ಯತ್ರ ದೈವಂಗಳ ಎಣಿಸಿದೆನೊ.

೭೧
ಉಗಾಭೋಗ
ತುಳಸಿಯಿರಲು ತುರುಚಿಯನು ತರುವಿರೊ
ಗಂಗೆ ಇರಲು ಕೂಪಸ್ನಾನ ಮಾಡುವಿರೊ
ಹಂಸವಿರಲು ಹಾಲ ಕೋಳಿಗೆರೆಯುವಿರೊ
ಬಾವನ್ನದ ನೆಳಲಿರಲು ಬೇಲಿಯ ಬಯಸುವಿರೊ
ತಾಯ ಮಾರಿ ತೊತ್ತನು ತರುವಿರುವಿರೊ
ಪುರಂದರ ವಿಠಲನ ದೂರಮಾಡುವಿರೊ.

೨೮೦
ಉಗಾಭೋಗ
ದರಿದ್ರರೆನಬಹುದೆ ಹರಿದಾಸರ
ಸಿರಿವಂತರೆನಬಹುದೆ ಹರಿದ್ರೋಹಿಗಳ
ಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲ
ಪುರಂದರ ವಿಠಲನ ಆಳುಗಳಿಗೆ
ಎಲ್ಲಿಹುದೈ ಮಾನ ಅಭಿಮಾನ ಜಗದಿ.

೨೮೧
ಉಗಾಭೋಗ
ದಾಸನಾಗುವುದಕ್ಕೆ ಏಸು ಜನ್ಮದ ಸುಕೃತ
ಭಾಸುರ ರವಿಕೋಟಿ ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯವ
ಬೇಸಾಗಿ ಕೊಡು ಕಂಡೆಯ ಪುರಂದರ ವಿಠಲ.

೧೯
ಉಗಾಭೋಗ
ದಾಸನಾದವನಿಗೆ ವೈಕುಂಠಲೋಕದಲ್ಲಿ ವಾಸ
ದಾಸನಾದವನೆಲ್ಲಿ ಪೋದರಾಭಾಸ
ದಾಸನೆಂದೆನಿಸಿದ ಭಾರತೀಯ ಗಂಡ
ಸತ್ಯ ಲೋಕವನಾಳ್ವ ಶೌಂಡ
ದಾಸರ ಹೃದಯದಿ ಮಿನುಗುವ ವಾಸವಾದಿವಂದ್ಯ ಶ್ರೀಶದ್ವಿ-
ಸಾಸಿರಂಬಕಶರಣ್ಯ ದಾಸರಿಗೊಲಿವ ಶ್ರೀಪುರಂದರವಿಠಲ.

೨೬೨
ಉಗಾಭೋಗ
ದಿನ ದಿನ ದಿನ ದಿನಾ ನೆನೆದು ನೆನೆದು ತೋದುತೋದು
ಜನುಮವು ವ್ಯರ್ಥವಾಯಿತು
ತೋದ ಹರಗೋಲು ವೈಕುಂಠಕ್ಕೆ ಒಯ್ದೀತೆ
ತೋದು ತೋದು ನಿನ್ನವಧಾನವು ಕಂಡುದಿಲ್ಲವೆಂದು
ಆದಿ ಮೂರುತಿ ನಮ್ಮ ಪುರಂದರ ವಿಠಲನ
ಪಾದತೀರಥದಲಿ ನಾದಲಿ ಎನ್ನ ಮನ.

೩೧೦
ಉಗಾಭೋಗ
ದೇವ ದೇವರ ದೇವ
ಜಗತ್ತ್ರಯಂಗಳ ಕಾವ
ಭಾವಜಪಿತ ನಮ್ಮ ಪುರಂದರ ವಿಠಲ.

೧೧೦
ಉಗಾಭೋಗ
ಧನದಾಸೆ ದೈನ್ಯಪಡಿಸುತಿದೆ
ವನಿತೆಯರ ಓಡಾಡಿಸುತಿದೆ
ಮನದಾಸೆ ಮಂತ್ರವ ಕೆಡಿಸುತಿದೆ
ಮನೆವಾರ್ತೆಯಾಸೆ ಮನವ ಬಾಧಿಸುತಿದೆ
ಇನಿತರಾಸೆಯ ಬಿಡಿಸಿ ನಿನ್ನ ಚರಣಗಳ
ನೆನೆವಂತೆ ಮಾಡೊ ಪುರಂದರವಿಠಲ.

೧೪೦
ಉಗಾಭೋಗ
ಧರ್ಮಪಥವ ಮೆಟ್ಟಲು ಮನವೆರಗದು
ದುಷ್ಕರ್ಮಕಾದಡೆ ಚಿಗಿಚಿಗಿದಾಡುವುದು
ಯುಗಧರ್ಮವೋ (ಇದು) ಹರಿ(ಯೆ), ಜೀವನ ಕರ್ಮವೊ
ದುರ್ಮಾಯ ಯುಕ್ತಿಯಿಂದ ಚರಿಸುವ (ವರ) ಜನರ ಮೈಯ
ಚರ್ಮವ ಸುಲಿಸದೆ ಬಿಡನೊ ಪುರಂದರವಿಠಲ.

೩೧೪
ಉಗಾಭೋಗ
ಧ್ಯಾನವು ಕೃತಯುಗದಲ್ಲಿ ಯಙ್ಞಯಾಗವು ತ್ರೇತಾಯುಗದಲ್ಲಿ
ಅರ್ಚನೆ ದ್ವಾಪರದಲ್ಲಿ
ಕೀರ್ತನೆ ಮಾತ್ರದಿ ಕಲಿಯುಗದಲ್ಲಿ
ಮುಕುತಿಯನೀವ ಪುರಂದರ ವಿಠಲ.

೧೬೩
ಉಗಾಭೋಗ
ಧ್ವಜ ವಜ್ರಾಂಕುಶ ರೇಖಾಂಕಿತ ಹರಿಪಾದಾಂ-
ಬುಜವ ಸೇವಿಸುವ ಅಜ-ಭವರ ಭಾಗ್ಯವ ನೋಡೊ
ತ್ರಿಜಗವಂದ್ಯನ ಪಾಡೊ ದುರ್ಜನರ ಸಂಗವ ಬಿಡೊ
ಕುಜನಮತವನು ಸುಡೊ
ಗಜೇಂದ್ರನ ಕಾಯ್ದ ಸಿರಿ ಕೃಷ್ಣನ ಧ್ಯಾನ ಮಾಡೊ
ಪುರಂದರವಿಠಲನ ಬಿಡದೆ ಕೊಂಡಾಡೊ.

೧೧೧
ಉಗಾಭೋಗ
ಧ್ವಜವಜ್ರಾಂಕಶ ರೇಖಾಂಕಿತವಾದ
ಹರಿಯ ಪದ್ಮಾಂಜುವ (ಸೇವಿಪ) ಸೇವಿಸುವ
ಅಜಭವಾದಿಗಳ (ಭಾಗವತರ) ಭಾಗ್ಯವ (ನೋಡೋ) ನೋಡು
ತ್ರಿಜಗವಂದ್ಯನ ಪಾಡು
ಭಕುತಿಯನು ಬೇಡು (ಸುಜನಸಂಗಮಮಾಡು)
ಕುಜನಮತವ ಸುಡು
ದರ್ಜನರ ಸಂಗವ ಬಿಡು
ಗಜೇಂದ್ರನ ಕಾಯ್ದ ಶ್ರೀಕೃಷ್ಣನ ಧ್ಯಾನವ (ಸ್ಮರಣೆ) ಮಾಡು |
ಪುರಂದರವಿಠಲ(ರಾಯನ) ಬಿಡದೆ ಕೊಂಡಾಡು.

೧೮೦
ಉಗಾಭೋಗ
ನಕ್ಷತ್ರಗಳ ಕಂಡ ನರನಿಗೆ ಉತ್ತಮ ಸಂಧ್ಯೆ
ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮ ಸಂಧ್ಯೆ
ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮ ಸಂಧ್ಯೆ
ನಕ್ಷತ್ರ ಬಿಟ್ಟ ನರನನು ನಾರಾಯಣ-
ಪುರಂದರವಿಠಲ ಬಿಡುವ.

೩೨೫
ಉಗಾಭೋಗ
ನರವೃಂದವೆಂಬೊ ಕಾನನದಲ್ಲಿ ಶ್ರೀ
ಹರಿ ನಾಮವೆಂಬಂಥಾ ಕಲ್ಪವೃಕ್ಷ ಹುಟ್ಟಿತಯ್ಯ
ನೆರಳು ಸೇರಲುಂಟು ಫಲವು ಮೆಲ್ಲಲುಂಟು
ಒರೆವ ನಾಲಗೆಯಲಿ ನಾಮತ್ರಯಂಗಳುಂಟು
ಇದೇ ಮುನಿಜನರ ಮನೆಯ ಕೊನೆಯ ಠಾವೊ
ಇದೇ ಬ್ರಹ್ಮಾದಿಗಳ ಸದಮಲ ಹೃದಯ ಪೀಠ
ಇದೇ ದ್ವಾರಾವತಿ.
ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ವೈಕುಂಠ ಮಂದಿರ.

೫೭
ಉಗಾಭೋಗ
ನವರತ್ನಗಳು ಕಂಡ (ಕಂಡ) ಠಾವಿನಲ್ಲಿ ಉಂಟೆ
ನವವಿಧÀದ ಭಕುತಿ (ಕಂಡ) ಕಂಡವರಿಗುಂಟೆ ದೇವ
ನಿನ್ನ ಭಕುತಿ ಸುರ್ರನೆ ಸುರಿದುಕೊಂಡರೆ ಬಾರದು
ಕಲಿತರೆ ಬಾರದು ಪುರಂದರ ವಿಠಲನ ಒಲುಮೆಯಾಗದತನಕ.

೧೪೫
ಉಗಾಭೋಗ
ನಾರದಮುನಿ ನಮ್ಮ ನೆನೆವನಲ್ಲದೆ
ನಾಡುಗಳೆಷ್ಟು ಕೊಟ್ಟನು ಹೇಳಯ್ಯ?
ಪ್ರಹ್ಲಾದನು ನಿನಗೆ ಏನು ಕೊಟ್ಟನು ಸ್ವಾಮಿ?
ನಾನೇನು ಕೊಡದೆ ಹೋದೆನು ಹೇಳಯ್ಯ?
ಅಂದಿನವರಿಗೆ ನೀನು ಏನಾದರೂ ಕೊಟ್ಟದ್ದು
ಇಂದೇನು ದೊರಕದೆ ಹೋಯಿತೆ ?
ಅಂದು ನೀ ಸಿರಿವಂತನೆ-ಇಂದು ನೀ ಬಡವನೆ?
ಇದು ಏನು ವಿಚಿತ್ರ ಪುರಂದರವಿಠಲ!

೩೦೦
ಉಗಾಭೋಗ
ನಿತ್ಯ ಪತಿಭಾವ ಶ್ರೀ ಲಕುಮಿದೇವಿಗಯ್ಯ
ನಿತ್ಯ ಪುತ್ರ ಭಾವ ಬೊಮ್ಮ ಪ್ರಾಣರಿಗೆ
ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ
ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ
ಇಂತೆಂದ ಪುರಂದರ ವಿಠಲ.

೨೨೨
ಉಗಾಭೋಗ
ನಿನಗೆ ನೀನೇ ಮೋಹ ನಿನಗೆ ನೀನೇ ಪ್ರೀತಿ
ನಿನಗೆ ನೀನೇ ಭಕ್ತ ನಿನಗೆ ನೀನೇ ದ್ವೇಷಿ
ನಿನಗೆ ನೀನೇ ಜ್ಞಾನಿ ನಿನಗೆ ನೀನೇ ಮಾಳ್ಪೆ
(ನಿನಗೆ ನೀನೆ) ಪುರಂದರ ವಿಠಲ.

೨೮೨
ಉಗಾಭೋಗ
ನಿನ್ನ ಕಾಲ ಹೆಜ್ಜೆಯ ಪಿಡಿದು ನಾನಿಲುವೆ
ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ
ನಿನ್ನ ಛಕ್ರಚಾಮನ (ಛತ್ರಚಾಮರ) ಪಿಡಿದೇಳುವೆ
ನೀರ ನೀವಳಿಸಿಕೊಂಡು ಕೊಬ್ಬುವೆನು
ಬಿಡೆನು ಬಿಡೆನು ನಿನ್ನ ಚರಣಕಮಲವ
ಪುರಂದರ ವಿಠಲ ನಿನ್ನ ಪಾದವ ಬಿಡೆನು.

೨೮೩
ಉಗಾಭೋಗ
ನಿನ್ನ ದಾಸನಾಗಿ ನಿನ್ನೆಂಜಲವನುಂಡು
ನೀನುದಾಸೀನ ಮಾಡಿದರೆ ಲೋಕರು ನಗರೆ
ನಿನ್ನ ಚರಣ ಕಮಲವನ್ನು ಕೊರಳಲಿ ಕಟ್ಟುವೆ
ಪುರಂದರ ವಿಠಲ.

೩೨೩
ಉಗಾಭೋಗ
ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೊ
ಪನ್ನಗಶಯನ ಶ್ರೀ ಪುರಂದರ ವಿಠಲ
ಅಂಬುಜನಯನನೆ ಅಂಬುಜಜನಕನೆ
ಅಂಬುಜನಾಭ ಶ್ರೀ ಪುರಂದರವಿಠಲ
ಭಾಗೀರಥೀಪಿತ ಭಾಗವತರ ಪ್ರಿಯ
ಯೋಗಿಗಳರಸ ಶ್ರೀ ಪುರಂದರ ವಿಠಲ.

೨೩
ಉಗಾಭೋಗ
ನಿನ್ನ ನಾಮಭಂಡಾರವ ಕದ್ದ ಕಳ್ಳ (ನು) ನಾನು
ನಿನ್ನ ಭಕ್ತಿಯೆಂಬ ಸಂಕೋಲೆಯ ಹಾಕಿ
ನಿನ್ನ ದಾಸರ ಕೈಯ್ಗೆ ಎನ್ನ ಒಪ್ಪಿಸಿಕೊಟ್ಟು
ನಿನ್ನ ಮುದ್ರಿಕೆಯಿಂದ ಗಾಸಿ ಮಾಡಿಸೊ ಕೃಷ್ಣ
ನಿನ್ನ ವೈಕುಂಠದುರ್ಗದಲ್ಲಿ ಎನ್ನ ಸೆರೆಯಿಟ್ಟು
ಚೆನ್ನಾಗಿ ಸಲಹೊ ಶ್ರೀ ಪುರಂದರವಿಠಲ.

೪೫
ಉಗಾಭೋಗ
ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು
ದಿನಂಪ್ರತಿ ದೀನ ಅನ್ನ ಉದಕ ವಸ್ತುಗಳು ಕಾಣದೆ ಇರಬೇಕು
ಬೆನ್ಹತ್ತಿ ರೋಗಗಳು ಹತ್ತಿ ಇರಲು ಬೇಕು
ತನ್ನವರ ಕೈಯಿಂದ ಛೀ ಎನಿಸಿಕೊಳಬೇಕು
ಪನ್ನಗಶಯನ ಶ್ರೀ ಪುರಂದರವಿಠಲ.

೩೦೪
ಉಗಾಭೋಗ
ನಿನ್ನಂಗುಟವು ಬೊಮ್ಮಾಂಡವನೊಡೆಯಿತು
ನಿನ್ನ ನಡೆ ಜಗವ ಈರಡಿ ಮಾಡಿತು
ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು
ನಿನ್ನ ವಕ್ಷಃಸ್ಥಳ ಸಿರಿ ಲಕುಮಿಗೆಡೆಯಾಯಿತು
ನಿನ್ನ ನಳಿದೋಳು ಸಿರಿ ಲಕುಮಿಯ ಬಿಗಿದಪ್ಪಿತು
ನಿನ್ನ ಕುಡಿನೋಟ ಸಕಲ ಜೀವರ ಪೊರೆಯಿತು
ನಿನ್ನ ತೊದಲ ನುಡಿ ಸಕಲ ವೇದವ ಸವಿಯಿತು
ನಿನ್ನ ಅವಯವಂಗಳ ಮಹಿಮೆಯನು ಒಂದೊಂದು
ಪೊಗಳಲಳವಲ್ಲ ಸಿರಿ ಪುರಂದರವಿಠಲರೇಯ
ನಿನ್ನ ಅಪಾರ ಮಹಿಮೆಗೆ ನಮೋ ನಮೋ ಎಂಬೆ.

೮೨
ಉಗಾಭೋಗ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ
ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ
ನೀನೆ ಪರದೇಶಿ ನಾನು ಸ್ವದೇಶಿ
ನಿನ್ನ ಅರಸಿ ಲಕ್ಷ್ಮಿ ಎನಗೆ ತಾಯಿಯುಂಟು
ಎನಗಿದ್ದ ತಾಯ್ತಂದೆ ನಿನಗಾರಯ್ಯ ಪುರಂದರವಿಠಲ.
ತತ್ವಜ್ಞಾನ

೨೩೨
ಉಗಾಭೋಗ
ನಿನ್ನಡಿ ಇಳೆಯ ನೀರಡಿಯಾಡಿತು |
ನಿನ್ನ ಉಂಗುಟವು ಬ್ರಹ್ಮಾಂಡ ನುಂಗಿತು |
ನಿನ್ನ ನಖ ಸುರನದಿಯ ತಂದಿತು |
ನಿನ್ನ ಕರ ಮಧುಕೈಟಭರನೊರಸಿತು |
ನಿನ್ನೆರಡು ತೋಳು ಸಿರಿ ಲಕುಮಿಯನಪ್ಪಿತು |
ನಿನ್ನ ಪಾದದ ನೆನಹೇ ಸಕಲ ಸಂಪದ
(ವೋ) ಪುರಂದರ ವಿಠಲ.

೨೬೩
ಉಗಾಭೋಗ
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆನಯ್ಯ
ನಿನ್ನ ಕಾಲನು ಪಿಡಿವೆ ನಿನ್ನ ಹಾರಯಿಸುವೆ
ನಿನ್ನ ತೊಂಡರಿಗೆ ಕೈ ಗೊಡುವೆ
ನಿನ್ನಂತೆ ಸಾಕಬಲ್ಲವನು ಇನ್ನುಂಟೆ
ಘನ್ನ ಪುರಂದರ ವಿಠಲ ದೇವರ ದೇವ.

೨೮೪
ಉಗಾಭೋಗ
ನಿನ್ನಾಳೆಂದಡೆ ಹರಿಯೆ ಇನ್ನೇನಿನ್ನೇನು
ಎನ್ನೊಳಿದ್ದವ ನೀನಾದೆ ನಿನ್ನ ದಾಸ ನಾನಾದೆ
ಇನ್ನು ನೀನು ಸಾಕದಿರಲು ನಿನ್ನ ದಾಸರು ನಗರೆ
ಘನ್ನ ಮಹಿಮೆ ಪುರಂದರ ವಿಠಲ ರಾಯ.

೧೫
ಉಗಾಭೋಗ
ನೀನೆ ಕರ್ತನು ಅಕರ್ತರು ಸಿರಿ ಅಜಭವಾದಿ
ಇಂದ್ರಾದ್ಯಮರರು
ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ
ಸರ್ವಾತ್ಮಕನಾಗಿ ಸ್ವೀಕರಿಸುವಾ
ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ
ಅನಾದಿಕಾಲದಿ ಜೀವ ಕರ್ಮಜ್ಞಾನ ಅನಾದಿಗಳು
ನಿನ್ನಾಧೀನವಯ್ಯ
ಅನಾದಿ ಕರ್ಮ ನೀನೆ ಪುರಂದರವಿಠಲ
ನೀನೆ ಸಲಹೋ ನಿನ್ನ ಅಡಿಯ ಪೊಂದಿದವರ.

೧೪
ಉಗಾಭೋಗ
ನೀನೆ ಕರ್ತನು ಅಕರ್ತರು ಅಜಭವೇಂದ್ರಾದ್ಯಮರರು
ನೀನೆ ಸ್ವತಂತ್ರ ಅಸ್ವತಂತ್ರರವರು
ನೀನೆ ಸಾರಾತ್ಮಕನಾಗಿ ಸ್ವೀಕರಿಸುವವ
ಜ್ಞಾನ ನಿನ್ನಧೀನ ಕರ್ಮನಿನ್ನಧೀನ
ಅನಾದಿಕಾಲದಿ ಇರುವ ಜೀವರಿಗೆ
ನೀನೆ ಸುಖವನೀವ ನೀನೆ ದುಃಖವನೀವ
ಅನಾದಿಗಳು ಜೀವಕರ್ಮ ಜ್ಞಾನ
ನಿನ್ನಧೀನವಯ್ಯ ಅನಾದಿಕರ್ಮ ನೀನೆ ಪುರಂದವಿಠಲ
ನೀನೆ ಸಲಹೋ ನಿನ್ನಡಿ ಪೊಂದಿದವರ.

೧೬೪
ಉಗಾಭೋಗ
ನೀರ ಮೇಲಣ ಗುಳ್ಳೆಯಂತೆ ಈ ದೇಹ
ನಿಮಿಷವೊ ನಿಮಿಷಾರ್ಧವೊ ಕಾಣಬಾರದು
ಹಾರಲೇಕೆ ಪರಧನಕೆ ಪರಸತಿಗೆ?
ಹಾರುವನ ಕಟ್ಟ ಬೇಕು ಹಾರುವನು (ನ) ಕುಟ್ಟಬೇಕು
ಹಾರುವರನ ಕಂಡರೆ ಕೆನ್ನೆಯ ಮೇಲೆ ಹಾಕಬೇಕು
ಹಾರಲೇಕೆ ಪರಧನಕೆ ಪರಸತಿಗೆ |
ಊರೊಳಗೆ ಐದು ಮಂದಿ ಹಾರುವರೈದಾರೆ |
ನೀನೆ ವಿಚಾರಿಸೊ ಪುರಂದರವಿಠಲ.

ಲೋಕನೀತಿ
೧೬೧
ಉಗಾಭೋಗ
ನೀರಡಿಸಿ ಜಾಹ್ನವಿಯ ತೀರದಲಿ ಬಂದು
ಬಾವಿಯ ನೀರ ಕುಡಿಯುವ ಮಾನವರುಂಟೆ?
ಹರಿಯ ಸಿರಿಚರಣವಿರಲು
ಬರಡು ದೈವಗಳನ್ನೇಕೆ ಭಜಿಸುವೆ ಮನವೆ?
ಸಿರಿರಮಣ ಬೇಲೂರು ಚೆನ್ನಿಗರಾಯ
ಪುರಂದರವಿಠಲನಿರಲು
ಬರಡು ದೈವಗಳನ್ನೇಕೆ ಭಜಿಸುವೆ.

೧೭೮
ಉಗಾಭೋಗ
ನೀಲವಸ್ತ್ರವಾಗದು ನಾರಿಯರ ಶಾಲೆಯಾಗದು
ಕಾಲ ಮೂರು ಕರ್ಮದಲ್ಲಿ ಕಾಲವಸ್ತ್ರವಾಗದು
ಆದ್ರ್ರ ವಸ್ತ್ರವಾಗದು ಆಜ್ಞೆ ಶ್ರೀ ಪುರಂದರವಿಠಲನ.

೧೭೧
ಉಗಾಭೋಗ
ನುಡಿವೆ ಲಿಂಗಶೌಚಕ್ಕೊಮ್ಮೆ ಗುದಕ್ಕೆ ಮೂರು
ನೆಲ್ಲಿ ಕಾಯಿಯಷ್ಷು ಮಣ್ಣ ಹಚ್ಚಿ
ನೀರೊಳು ತೊಳೆದು ಬಲದ ಕೈಗೆ ಐದು ಮಣ್ಣು
ಎಡದ ಕೈಗೆ ಏಳು ಮಣ್ಣು |
ಐದು ಕಡೆಯಲಿಟ್ಟು ಪುರಂದರವಿಠಲ ಎನ್ನು.

೬೮
ಉಗಾಭೋಗ
ನೋಡಿದರೆನ್ನೊಡೆಯನ ನೋಡುವೆ
ಪಾಡಿದರೆನ್ನೊಡೆಯನ ಪಾಡುವೆ
ಬೇಡಿದರೆನ್ನೊಡೆಯನ ಬೇಡುವೆ
ಕಾಡಿದರೆನ್ನೊಡೆಯನ ಕಾಡುವೆ ಒಡಯಗೆ ಒಡಲನು ತೋರುವೆ
ಎನ್ನ ಬಡತನದ ಬಿನ್ನಹವ ಮಾಡುವೆ
ಒಡೆಯ ಶ್ರೀಪುರಂದರವಿಠಲನ ಅಡಿಗಳ
ಸಾರೆ ಬದುಕುವೆ ಸೇರಿ ಬದುಕುವೆ.

೩೦೯
ಉಗಾಭೋಗ
ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ
ಪರಮಾನಂದವು ನಮ್ಮ ಪುರಂದರವಿಠಲ ರಾಯಗೆ.

೧೯೭
ಉಗಾಭೋಗ
ಪರರನ್ನ ಉಂಡ ಬ್ರಾಹ್ಮಣರಿಗೆ
ಇರದು ಮಾಡಿದ ಶುಭಕರ್ಮ
ಎರಡು ಮೂರು ಭಾಗ ಅನ್ನವಿತ್ತವನಿಗಯ್ಯ
ಉದರದಲಿ ಉಂಡ ಅನ್ನದೊಂದು ಭಾಗವುಳಿವುದು
ಪೊಡವಿಯಲ್ಲಿ ಪುರಂದರವಿಠಲನು ಬಲ್ಲ

೧೦೪
ಉಗಾಭೋಗ
ಪಾತಕರೊಳಗೆಲ್ಲ ನಾನು ವೆಗ್ಗಳನಯ್ಯ
ಪ್ರಾಯಶ್ಚಿತ್ತದಲಿ ನಿನ್ನ ನಾಮ ವೆಗ್ಗಳವಯ್ಯ
ಪಾತಕವ ನಾ ಮಾಡಿದೆನು ಪ್ರಾಯಶ್ಚಿತ್ತವ ನೀಡು
ಇನ್ನೇತರ ಭಯವಯ್ಯ ಪುರಂದರವಿಠಲ.

೫೦
ಉಗಾಭೋಗ
ಪುಟ್ಟುವ ಭೀತಿ ಪೊಂದುವ ಭೀತಿ|
ವಿಠಲನಂಘ್ರಿಯ ನೆನೆಯದವರಿಗೆ||
ಪಾಪದ ಭೀತಿ, ನಿರಯದ ಭೀತಿ ಶ್ರೀ
ಗೋಪಾಲನ ದಾಸನಾಗದವರಿಗೆ ||
ಕಾಲನ ಭೀತಿ ಕರ್ಮದ ಭೀತಿ ಶ್ರೀ-
ಲೋಲನ ಒಮ್ಮೆ ನೆನೆಯದವಗೆ ||
ಅತಳದÀಲ್ಲಿರಿಸೊ, ಸುತಳದಲ್ಲಿರಿಸೊ |
ತಳಾತಳ ಪಾತಾಳದಲ್ಲಿರಿಸೊ ||
ಯೋನಿಯೊಳಿರಿಸೊ ಮತ್ತಾ ವಿಯೋನಿಯಲಿರಿಸೊ
ಎಲ್ಲರಿಸಿದರೂ ನಾ ಹೋಹೆನಯ್ಯ |
ಎಂತೆಂತು ನಡೆದು ನಡಸಿಕೊಂಬುವೆ
ಅಂತಂತು ನಡೆಯುವೆ ಶ್ರೀ ಪುರಂದರವಿಠಲ.

೮೧
ಉಗಾಭೋಗ
ಪ್ರಪನ್ನ ರಕ್ಷಕ ನೀನು ಪಾಲಿಸು
ಉಪಸಾಧನವನರಿಯೆನು ಒಮ್ಮೆ ನಿನ್ನ ನೆನೆವೆನು
ಅಪರಾಧಿ ನಾನಾದಡೇನು ಅಭಯಪ್ರದನು ನೀನು
ವಿಪರೀತ ಮಾಡಿದೆನ್ನನು ಸಲಹೋ ಪುರಂದರವಿಠಲ.

೧೬೯
ಉಗಾಭೋಗ
ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ (ಅರ್ತಿಯಿಂದಲಿ) ಸ್ಮರಿಸಿ
ನಾಥ ಗೋವಿಂದನಿಗೆ ಪ್ರದಕ್ಷಿಣೆ (ಮಾಡಿ)
ಪ್ರೀತಿಯೊಳತಿಥಿಯ ಪೂಜಿಸಿ ಪುರಾಣ-ಶಾಸ್ತ್ರವ ಕೇಳಿ
ನಾಥ ಶ್ರೀಪುರಂದರವಿಠಲನೆ ನಮೋ ಎನ್ನಿ.

೩೬
ಉಗಾಭೋಗ
ಬಡವರೊಳಗೆ ಎನ್ನಿಂದಾರು ಬಡವರಿಲ್ಲ
ಕೊಡುವರೊಳಗೆ ನಿನ್ನಿಂದಾರು ಕೊಡುವರಿಲ್ಲ
ದೃಢಭಕ್ತಿ ಎನಗೆ ನಿನ್ನಲ್ಲಿಯೆ ಕಲ್ಪಿಸಿ|
ಬಿಡದೆ ಸಲಹಯ್ಯ ಶ್ರೀ ಪುರಂದರವಿಠಲ.

೧೧
ಉಗಾಭೋಗ
ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನಗೆ ಶ್ರೀ ರಾಮ ಬಂದಂತೆ
ನಿನ್ನ ನಾಮವು ಬಂದು ಎನ್ನ ನಾಲಗೆಯಲಿ
ನಿಂದು ಸಲಹಲಿ ಶ್ರೀ ಪುರಂದರ ವಿಠಲ.

೧೮೭
ಉಗಾಭೋಗ
ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು
ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿ
ಬಿಡುತ ಮಂತ್ರಾರ್ಥ ನೋಡದಲೆ
ಅಡಿಗಡಿಗೆ ಜಪವ ಮಾಡೆ
ದೈತ್ಯರಿಗೆ ಅಹುದಯ್ಯ
ಒಡೆಯ ಪುರಂದರವಿಠಲನನೊಲಿಸ ಬೇಕಾದರೆ
ಹಿಡಿಯೊ ಈ ಪರಿ ಹೇಳಿದ ವಚನ ತತ್ತ್ವಗಳ.

೧೦೨
ಉಗಾಭೋಗ
ಬೆಟ್ಟದಂಥÀ ದುರತವು ಸುತ್ತಮುತ್ತ್ತು ಇರಲಾಗೆ
ಕೃಷ್ಣ ನಾಮದ ಕಿಡಿಬಿದ್ದು ದುರಿತ ಬೇವುದ ಕಂಡೆ
ಎಲೆ ಎಲೆ ದುರಿತವೆ, ನಿಲ್ಲ-ನಿಲ್ಲದೆ ಹೋಗು
ಎಲೆ ಎಲೆ ದುರಿತವೆ, ತಿರುಗಿ ನೋಡದೆ ಹೋಗು |
ಎಲೆ ಎಲೆ ದುರಿತವೆ, ಮರಳಿ ನೋಡದೆ ಹೋಗು
ಎನ್ನೊಡೆಯ ಪಂಢರಿರಾಯ ಪುರಂದರ ವಿಠಲ ಕಂಡರೆ
ಶಿರವ ಚೆಂಡಾಡುವನು-ತಿರುಗಿ ನೋಡದೆ ಹೋಗು.

೧೦೩
ಉಗಾಭೋಗ
ಬೆಟ್ಟದಂಥ ಸುತ್ತಮುತ್ತಲೊಟ್ಟಿರೆ
ಕೃಷ್ಣ ನಾಮದ ಕಿಡಿಬಿದ್ದು ಬೆಂದುಹೋದದ್ದು ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ ಶಿಕ್ಷಿಸದೆ ಬಿಡ
ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು
ಪುಂಡರೀಕಾಕ್ಷ ನಮ್ಮ ಪುರಂದರವಿಠಲ.

೨೭೦
ಉಗಾಭೋಗ
ಬೆನಕನ ನಾಕೊಲ್ಲೆನವ್ವ ಕುಲುಕಿ ನಡೆವವನ
ಷಣ್ಮುಖನನೊಲ್ಲೆನವ್ವ ಹಲವು ಬಾಯವನ
ಇಂದ್ರನನಾನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ
ಚಂದ್ರನ ನಾನೊಲ್ಲೆನವ್ವ ಕಳೆಹೀನನಾದವನ
ರವಿಯ ನಾನೊಲ್ಲೆನವ್ವ ಉರಿದು ಮೂಡುವನ
ಹರನ ನಾನೊಲ್ಲೆನವ್ವ ಮರಳುಗೊಂಬುವನ
ಧರೆಗತಿ ಚೆಲುವನು ಜಗಕೆಲ್ಲ ಒಡೆಯನು
ತಂದು ತೋರೆ ನಮ್ಮ ಪುರಂದರ ವಿಠಲನ.

೨೭೧
ಉಗಾಭೋಗ
ಬೆನಕನೊಲ್ಲೆನವ್ವ
ತುಲಕಿ ಆಡುವನ
ಷಣ್ಮುಖನನೊಲ್ಲನವ್ವ
ಬಹು ಬಾಯಿಯವನ
ಇಂದ್ರನ ನೊಲ್ಲೆನವ್ವ
ಮೈಯಲ್ಲ ಕಣ್ಣಿನವನ
ಚಂದ್ರನ ನೊಲ್ಲೆನವ್ವ
ಕಳೆಗುಂದುವವನ
ರವಿಯನೊಲ್ಲೆನವ್ವ
ಉರಿದು ಮೂಡುವನ
ಹರನ ನೊಲ್ಲನವ್ವ
ಮರುಳಗೊಂಬುವನ
ಚೆನ್ನರಾಯ ಚೆಲುವ
ಜಗಕೆಲ್ಲ ಒಡೆಯನ ಕರೆದು
ತಾರೆ ಎನಗೆ ಪುರಂದರ ವಿಠಲನ.

೨೧೭
ಉಗಾಭೋಗ
ಬೆಲ್ಲದ ಕಟ್ಟೆಯ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಹುದೇನಯ್ಯ?
ಏನ ಓದಿದರೇನು ಏನ ಕೇಳಿದರೇನು
ಮನದೊಳಗಿನ ತಾಮಸ ಮಾಣದನಕ
ಏನ ಓದಿದರೇನು ಏನ ಕೇಳಿದರೇನು
ಕೊಳಲಧ್ವನಿಗೆ ಸರ್ಪ ತಲೆದೂಗುವಂದದಿ
ಎನ್ನೊಡೆಯ ಕೇಳಯ್ಯ ಶ್ರೀಪತಿ ಪುರಂದರ ವಿಠಲ.

೧೩೮
ಉಗಾಭೋಗ
ಬೇಡುವ ಕಷ್ಟಕ್ಕಿಂತ ಸಾವುದೆ ಕರಲೇಸು
ಬೇಡುವವರಿಗೆ ಒಬ್ಬರೊಡೆಯರುಂಟೆ ದೇವ
ಗೂಡ ಕಿರಿದು ಮಾಡಿ ಬಲಿಯ ದಾನವ ಬೇಡಿ
ನಾಡೊಳು ಸ್ಥೂಲ ಸೂಕ್ಷ್ಮ ರೂಪವಾದೆ
ಬೇಡುವ ಕಷ್ಟವನು ನೀನೆ ಬಲ್ಲೆಯೋ ಸ್ವಾಮಿ
ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ.

೧೩೯
ಉಗಾಭೋಗ
ಬೇಡುವ ಕಷ್ಟಕ್ಕಿಂತ ಸಾವುದೇ ವರಲೇಸು
ಬೇಡುವವರಿಗೆ ವೊಬ್ಬಿ ಉಳಯೋದುಂಟೇನೊ ದೇವ
ಧೊರೆಯುಂಟು ಗೂಡು ಕಿರಿದುಮಾಡಿ
ಬಲಿಯ ದಾನವ ಬೇಡಿ ನಾಡು ಅರಿಯಲು
ಸ್ಥೂಲ ಸೂಕ್ಷ್ಮ ನಿನ್ನದೆ
ಬೇಡುವ ಕಷ್ಟವನು ನೀನೆ ಬಲ್ಲೆಯೊ
ಸ್ವಾಮಿ ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ.

೨೩೩
ಉಗಾಭೋಗ
ಬ್ರಹ್ಮಾಂಡವದೆಲ್ಲ ರೋಮ ಕೂಪದೊಳಿರಲು
ಅಮ್ಮಾ ಅಮ್ಮಾ ಎನುತ ಅಮ್ಮೆಯ ಬೇಡುತ್ತಿಹೆ
ಹೆಮ್ಮಕ್ಕಳು ನಗರೆ ಬ್ರಹ್ಮಾದಿಗಳು
ಮೊಮ್ಮಕ್ಕಳು ನಗರೆ ರುದ್ರಾದಿಗಳು
ಮರಿ ಮಕ್ಕಳು ನಗರೆ ಮಿಕ್ಕ ಸುರರೆಲ್ಲ
ರಮ್ಮೆಯರಸ ಸಿರಿ ಪುರಂದರ ವಿಠಲ.

೧೩೪
ಉಗಾಭೋಗ
ಭಾರತಮಲ್ಲ ಭೀಮನೆಂತೆಂಬರು
ಭಾರತಮಲ್ಲ ಕರ್ಣನೆಂತೆಂಬರು
ಭಾರತ ಮಲ್ಲ ಅರ್ಜುನನೆಂತೆಂಬರು
ಭಾರತಮಲ್ಲರಲ್ಲ ಇವರೆಲ್ಲ
ಭಾರತಮಲ್ಲ ಪುರಂದರ ವಿಠಲನೊಬ್ಬ ಕಾಣಿರೊ.

೧೮೯
ಉಗಾಭೋಗ
ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟು
ಬದ್ಧ ಅಂಗುಟವೆಣಿಸಬೇಕು
ತಿದ್ದಿ ಅಂಗುಲಿ ಪಂಚ ಬೊಗ್ಗಿಸಿ ಇರಬೇಕು
ಭದ್ರವಾಗಿ ನಿಲಿಸಿ ನೀರ ಸೋರದೆ ಗಾಯತ್ರಿಯ
ಭದ್ರವಾಗಿ ನಿಲಿಸಿ ನೀರು ಸೋರದೆ ಗಾಯತ್ರಿಯ
ಬುದ್ಧಿ ಪೂರ್ವಕದಿಂದ ಗೆಯ್ಯುತಲಿರಬೇಕು
ಮುದ್ದು ಮೂರುತಿ ನಮ್ಮ ಪುರಂದರವಿಠಲನ್ನ
ಎದ್ದೆದ್ದು ನೋಡುವ ಬಗೆ ಕಾಣಲುಬೇಕು

೪೭
ಉಗಾಭೋಗ
ಮನದ ಚಂಚಲದಿ ತಪವ ಮಾಡಲು ಅಶಕ್ಯವು
ಘನ ಅಜ್ಞಾನದಿ ಸತ್ಕರ್ಮಗಳು ಹತ್ತವು
ಧನಶುದ್ಧಿ ಇಲ್ಲದೆ ದಾನವು ವ್ಯರ್ಥವು
ಇನಿತಾದ್ದರಿಂದ ಈ ಯುಗದಿ ಪುರಂದರ
ವಿಠಲನ ನಾಮಸ್ಮರಣೆಯೆ ಲೇಸು ಲೇಸುಕಾಣಾ.

೨೫೧
ಉಗಾಭೋಗ
ಮನದಭಿಮಾನಿ ಮಹಾರುದ್ರನ ಭಜಿಸಲು |
ಅನವರತ ಶ್ರೀಹರಿಯ ಆರಾಧಿಸುವುದಕ್ಕೆ |
ಮನಸುಧ್ದಿಯನೀವ ಮತಿ ಕೊಡುವ |
ಮನುಜೋತ್ತಮರು ಕೇಳಿ ಮನಕೆ ಪ್ರೇರಕನವನು |
ವನಜಾಕ್ಷ ಪುರಂದರ ವಿಠಲನ ಒಲುಮೆಗೆ |
ಮನಸು ಕಾರಣವಲ್ಲದೆ ಮಿಗಿಲಾವುದು.

೨೯೬
ಉಗಾಭೋಗ
ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನು ಶುದ್ದಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯಿದವರ ಕಂಡು
ಬೆರಗಾಗಿ ನಗುತಿದ್ದ ಪುರಂದರ ವಿಠಲ.

೨೦೦
ಉಗಾಭೋಗ
ಮನೆಯಲ್ಲಿ ವಿಪ್ರ ಪಾದೋದಕದ ಹೆಸರಿಲ್ಲ್ಲದ್ದರೆ
ಮನೆಯಲ್ಲಿ ವೇದ-ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ
ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ
ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ.

೨೬೪
ಉಗಾಭೋಗ
ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಸತಿಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ರತಿಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ
ಎನಗೆ ಸಂತೋಷ ನಿನ್ನ ರತಿಯೊಳಗೆ
ಪುರಂದರ ವಿಠಲ.

೪೨
ಉಗಾಭೋಗ
ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ
ಮನೆವಾರುತೆಯು ಎನ್ನ ಭಂಗಪಡಿಸುತಿದೆ
ಧನದಾಸೆಯು ಎನ್ನ ದೈನ್ಯಪಡಿಸುತಿದೆ
ಇನಿತಾಸೆಯಳಿದು ಬುದ್ದಿ ನಿನ್ನಲ್ಲಿ
ನಿಲುವಂತೆ ಮಾಡೋ ಸಿರಿಪುರಂದರವಿಠಲ.

೪೧
ಉಗಾಭೋಗ
ಮನೆಯೆಂಬಾಶೆಯು ಎನ್ನ ಮುಂದುಗೆಡಿಸುತಿದೆ
ಮನೆವಾರ್ತೆಯು ಎನ್ನ ಭಂಗಪಡಿಸುತಿದೆ |
ವನಿತೆ ಸುತರಾಶೆಯು ಎನ್ನ ದೈನ್ಯ ಬಡಿಸುತಿದೆ |
ಇನೆತಾಶೆಯೊಳಿದ್ದು ಬುದ್ಧ್ಧಿಯು ನಿನ್ನಲಿ
ನಿಲುವಂತೆ ಮಾಡೋ ಶ್ರೀ ಪುರಂದರವಿಠಲ.

೩೦೧
ಉಗಾಭೋಗ
ಮನೋ ವಚನಗಳಲ್ಲಿ ಕಾಯ ಕರ್ಮಗಳಲ್ಲಿ
ನೀನೆ ನೀನೆ ನೀನೆ ಪುರಂದರ ವಿಠಲ.

೯೨
ಉಗಾಭೋಗ
ಮರವಿದ್ದರೆ ಫಲವೇನು ನೆರಳಿಲ್ಲದನಕ
ಒರತೆ ಇದ್ದರೆ ಫಲವೇನು ಜಲವಿಲ್ಲದನಕ
ಧನವಿದ್ದರೆ ಫಲವೇನು ಮನವಿಲ್ಲದನಕ
ಏನು ಇದ್ದೊಡೇನು ಜ್ಞಾನವಿಲ್ಲದನಕ
ತನುವಿದ್ದರೆ ಫಲವೇನು ಪುರಂದರವಿಠಲನ
ಊಳಿಗಮಾಡದನಕ.

೭೩
ಉಗಾಭೋಗ
ಮರವಿದ್ದರೇನಯ್ಯ ನೆರಳಿಲ್ಲದನಕ
ನೆರಳಿದ್ದರೇನಯ್ಯ ನೀರಿಲ್ಲದನಕ
ಮನವಿದ್ದರೇನಯ್ಯ ಜ್ಞಾನವಿಲ್ಲದನಕ
ತನುವಿದ್ದರೇನಯ್ಯ ಪುರಂದರವಿಠಲನ
ನೆನೆ ನೆನೆದು ಊಳಿಗವ ಮಾಡದನಕ.

೭೪
ಉಗಾಭೋಗ
ಮರ್ಕಟನ ಕೈನೂಲ ಕುಕ್ಕಡಿಯ ತೆರನಂತೆ
ಸಿಕ್ಕಿಕೊಂಡು ಕಾಮಕ್ರೋಧ ಮೋಹಗಳೆನ್ನ
ಹಿಕ್ಕಿ ಹೀರುತಲಿವೆ ಏಕೆ ನೋಡುತಲಿರುವೆ?
ಅಕ್ಕಟಕ್ಕಟಾ! ನಿನ್ನ ದಾಸನಲ್ಲವೆ ನಾನು?
ಸಿಕ್ಕ ಬಿಡಿಸಿ ನಿನ್ನ ಭಕ್ತಿಯ ತೋರಿಸೊ
ಪಕ್ಷಿವಾಹನ ನಮ್ಮ ಪುರಂದರ ವಿಠಲ.

೧೭೦
ಉಗಾಭೋಗ
ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ
ಮಲಕೆ ಸಮಾನ ಅದು ಶುದ್ಧವಲ್ಲ
ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯೆ
ಒಲಿವ ಪುರಂದರವಿಠಲ.

೨೪೬
ಉಗಾಭೋಗ
ಮಲಗಿ ಪಾಡಿದರೆ ಕುಳಿತು ಕೇಳುವನು
ಕುಳಿತು ಪಾಡಿದರೆ ನಿಂತು ಕೇಳುವನು
ನಿಂತು ಪಾಡಿದರೆ ನಲಿದು ಕೇಳುವನು
ನಲಿದು ಪಾಡಿದರೆ ಸ್ವರ್ಗ ಸೂರೆ ಬಿಟ್ಟನೆಂಬ ಪುರಂದರ ವಿಠಲ.

೬೫
ಉಗಾಭೋಗ
ಮಾತಾಪಿತರು ನಿನಗಂದೇ ಮಾರಿದರೆನ್ನ |
ನೀತವೆ ನೀ ಎನ್ನ ಸಲಹದಿದ್ದರೆ ದೇವ |
ಏತಕೆ ಭಕುತವತ್ಸಲನೆಂದಿನಿಸಿದೆ? |
ನಾ ತಡೆಯನು ನಿನ್ನ ಬಿರುದಿಗಂಜುವನಲ್ಲ |
ಸಾತ್ತ್ವಿಕ ದೈವವೆ ಸಲಹೋ ಎನ್ನನು ವಿ (ಪ್ರ) |
ಖ್ಯಾತ ಮೂರುತಿ ಆದ್ಯ ಪುರಂದರವಿಠಲ.

೨೦೫
ಉಗಾಭೋಗ
ಮಾನವರು ಕೃತಯುಗದಿ ಮಾಡಬೇಕು ತಪವನು
ಜ್ಞಾನಸಾಧನ ಬೇಕು ತ್ರೇತಾಯುಗದಿ
ಏನೆಂಬ ದ್ವಾಪರದಿ ಯಙ್ಞಸಾಧನ ಬೇಕು
ಗಾನ ದಾನ ಬೇಕು ಕಲಿಯುಗದಿ ಪುರಂದರವಿಠಲ.

೩೧೫
ಉಗಾಭೋಗ
ಮಾರಿಯ ಕೈಯಿಂದ ನೀರ ತರಿಸುವರು
ಮಸಣಿಯ ಕೈಯಿಂದ ಕಸವ ಬಳಿಸುವರು
ಮೃತ್ಯುವಿನ ಕೈಯಿಂದ ಬತ್ತ್ತವ ಕುಟ್ಟಿಸುವರು
ಜವನವರ ಕೈಯಿಂದ ಜಂಗಲಿಯ ಕಾಯಿಸುವರು
ಪುರಂದರ ವಿಠಲನ ದಾಸರು ಸರಿ ಬಂದಹಾಗಿಹರು ಭೂಮಿಯ ಮೇಲೆ.

೧೪೧
ಉಗಾಭೋಗ
ಮುಟ್ಟದಿರಚ್ಚುತಗರ್ಪಿತವಲ್ಲದುದನು ಕಂ-
ಗೆಟ್ಟು ಸ್ತುತಿಸಬೇಡ ಹರಿಯಲ್ಲದನ್ಯತ್ರ
ಕಷ್ಟ ಬೇಡ ಭೂಸುರರೊಳಗೆ ನೀನು
ಕೊಟ್ಟ ಭಾಷೆ ತಪ್ಪಲು ಬೇಡ ಆರಿಗಾದರಾಗಲಿ
ಶ್ರೀಪುರಂದರವಿಠಲನಂಘ್ರಿ ನೆನೆಯದೆ ಬಿಟ್ಟರಬೇಡ.

೩೨೪
ಉಗಾಭೋಗ
ಮುಳುಗುವಗೆ ಕಲ್ಲು ಮೇಲಿದ್ದರೇನು
ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು
ಕಡೆಗೆ ಹಾಕುವರು ಯಾರಯ್ಯ
ಬಿಡಿಸೊ ಬಿಡಿಸೊ ನಿನ್ನ ಚರಣ ಕಮಲವನ್ನು
ಎನ್ನೊಡೆಯ ಪುರಂದರ ವಿಠಲರೇಯ.

೨೮೫
ಉಗಾಭೋಗ
ಯದು ಕೃಷ್ಣ ಯಾದವ ಕೃಷ್ಣ ಎಂದವರಿಗೆ ಅಂತ್ಯ ಕಾಲದಲಿ
ಮೊದಲಿನ ಶಬ್ದ ಕೇಳಿದ ಮಾತ್ರದಿಂದ
ಮುದದಿ ಮುಕ್ತಿಯನಿತ್ತಂತೆ
ಸದಾ ಭಕುತಿಯ ತನ್ನ ಪಾದದಲ್ಲಿ ಕೊಟ್ಟು
ಎರಡನೆಯ ನಾಮ ಕೇಳಿದ್ದಕ್ಕೆ ಏನ ಕೊಡಲೆಂದು ನಾಚಿ
ನಮ್ರ ಸದಯ ಶ್ರೀ ಪುರಂದರವಿಠಲ ಸ್ವಾಮಿ
ಮುದದಿ ನಾಮ ಸ್ಮರಣಿಯ ಕೊಟ್ಟು ಕಾಯ್ವ.

೭೦
ಉಗಾಭೋಗ
ಯಾರು ಮುನಿದು ನಮಗೇನು ಮಾಡುವರಯ್ಯ
ಯಾರು ಒಲಿದು ನಮಗೇನು ಕೊಡುವರಯ್ಯ
ಕೊಡಬೇಡ ನಮ್ಮೊಡಲಿಗೆ ತುಸುವನು ಇಡಬೇಡ
ಈಯಲು ಬೇಡ ನಮ್ಮ ಶುನಕಗೆ ತಳಗಿಯ
ಆನೆಯ ಮೇಲೆ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ
ದೀನನಾಥ ಪುರಂದರ ವಿಠಲ ನಮಗುಳ್ಳತನಕ.

೧೮೬
ಉಗಾಭೋಗ
ರಮೆಯ ರಮಣನು ತಾನು ಬೊಮ್ಮಾದಿಗಳೆನೆಲ್ಲ
ಸುಮನಸರೊಳು ಸೂರ್ಯಗಘ್ರ್ಯವನಿತ್ತು
ನಿಮ್ಮ ಪಾಪಗಳನೆಲ್ಲ ಚಿಮ್ಮಿ ಕಳೆಯಿರೆಂದು
ಬೊಮ್ಮ ಮೂರುತಿ ತಾ ಗಮ್ಮನೆ ಪೇಳಿರೆ
ನಿಮ್ಮ ಜ್ಞಾನದಿ ಸಿಲುಕಿ ಸುಮ್ಮನೆ ಕೆಡದಿರಿ
ನಿಮ್ಮ ಶಿಕ್ಷಿಪನು ಪುರಂದರವಿಠಲ.

೧೮೫
ಉಗಾಭೋಗ
ರಮ್ಮೆ ರಮಣ ತಾನು ಬೊಮ್ಮಾದಿಗಳಿಗೆಲ್ಲ
ಸುಮ್ಮನಸದೊಳು ಸೂರ್ಯಗಘ್ರ್ಯವನಿತ್ತು
ನಿಮ್ಮ ಪಾಪಗಳೆಲ್ಲ ಚಿಮ್ಮಿ ಕಳೆಯಿರೆಂದು
ಬೊಮ್ಮ ಮೂರುತಿ ತಾನು ಗಮ್ಮನೆ ಪೇಳಲು
ಸುಮ್ಮನೆ ಕೆಡದಿರಿ ನಿಮ್ಮ ಅಜ್ಞಾನಕೆ ಸಿಲುಕಿ
ನಿಮ್ಮನು ಶಿಕ್ಷಿಸುವ ಪುರಂದರವಿಠಲ.

೯೬
ಉಗಾಭೋಗ
ರಾವಣನು ರಥವೇರಿ ರಣಕೆ ಬಂದಿರಲಾಗಿ
ನೀವು ಪಾದಾಚಾರಿಯಾಗಿ ಭೂಮಿಯಲ್ಲಿರಲು
ನಮ್ಮ ಹನುಮಂತನು ನಿಮ್ಮನು ಕಂಡು
ಚಾಲ್ವರಿದು ಬೊಬ್ಬಿರಿದು ಕುಣಿಕುಣಿದಾಡಿ
ಸುಖ(ವ) ಸೂರೆ(ಯ) ಮಾಡಿ ಎತ್ತಿರಲು
ನಮ್ಮ ಹಿರಿಯ ನಿಮ್ಮ ವೇಳೆಗೊದಗಿರಲಾಗಿ
ನಮ್ಮ ನೀ (ಮರೆಯುವದೆ) ಮರೆಯಲಾಗದು ಪುರಂದರವಿಠಲ

೨೮೬
ಉಗಾಭೋಗ
ಲೇಸು ದಾಸರಿಗೆ ಕ್ಲೇಶ ದುಷ್ಟರಿಗೆ
ಸಿರಿ ಭಾಗವತರಿಗೆ ಪಾಪ ಪಾಷಂಡಿಗಳಿಗೆ
ಕೀರ್ತಿ ಕಿಂಕರರಿಗೆ ಅಪಕೀರ್ತಿ ಮಂಕುಗಳಿಗೆಲ್ಲ
ಸುಖ ಮಹಾತ್ಮರಿಗೆ ಕಷ್ಟ ನಷ್ಟರಿಗೆ
ಪುರದರ ವಿಠಲನ ಆಳುಗಳಿಗೆ ಮುಕುತಿ
ಇತರರಿಗೆ ಅಂಧಂತಮಸ್ಸು ಸಂದೇಹವಿಲ್ಲವೊ.

೨೮೭
ಉಗಾಭೋಗ
ಲೇಸುದಾಸರಿಗೆ ಸಿರಿಭಾಗವತರಿಗೆ
ದಾರಿದ್ರ್ಯ ದ್ರೋಹಿಗಳಿಗೆ ಕೀರ್ತಿ ಕಿಂಕರಿಗೆ
ಅಪಕೀರ್ತಿ ಕ್ರೂರರಿಗೆ ಜಯದೇವರಿಗೆ
ಅಪಜಯ ಮಂಕುಗಳಿಗೆ ನಷ್ಟ ಕಪಟರಿಗೆ
ಲಾಭ ಮಹಾತ್ಮರಿಗೆ ಪುರಂದರ ವಿಠಲನ ಆಳುಗಳಿಗೆ ಮುಕ್ತಿ
ದೈತ್ಯರಿಗೆ ಅಂಧಂತಮಸ್ಸು ಸಂದೇಹವಿಲ್ಲ.


ಉಗಾಭೋಗ
ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ
ಮೋದದಿಂ ಸಲಿಸುವ ಮನದಿಷ್ಟವ
ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ
ಮಾಧವನೇ ನೇಮಿಸಿಪ್ಪ ಈ ಅಧಿಕಾರವ
ಆದರದಿಂದ ಅವರವರೊಳು ನಿಂದು
ಭೇದಗೊಳಿಸದೆ ಕಾರ್ಯಮಾಳ್ಪ ಪುರಂದರವಿಠಲ ೧

೧೩೫
ಉಗಾಬೋಗ
ಶರಧಿ ಸಡ್ಡಿಯ ಮಾಡಿ ಧರೆಯ ಕೂರಿಗೆ ಮಾಡಿ
ಹರ ಬೊಮ್ಮರೆಂಬ ಎರಡೆತ್ತು ಹೂಡಿ
ನರಜೀವರಾಶಿಗಳೆಂಬ ಬೀಜವತಕ್ಕೊಂಡು
ಧರೆಯಲ್ಲಿ ಬಿತ್ತುವಾತ ಇಂದ್ರನು, ಬೆಳೆಸುವಾತ ಚಂದ್ರÀನು |
ಕಳೆಯ ಕೀಳುವನು ಯಮರಾಜನಯ್ಯ
ಬಿತ್ತಿದಾತನೆ ಬೆಳೆಯನು ಒತ್ತಿಕೊಂಡು ಹೋಗುವಾಗ
ದುಃಖವೇತಕೆ ಸಿರಿಪುರಂದರವಿಠಲ.

೩೧೧
ಉಗಾಭೋಗ
ಶುಭವಿದು ಶೋಭನ ಹರಿಗೆ
ಶುಭವಿದು ಶೋಭನ ಸಿರಿಗೆ
ಶುಭವಿದು ಪುರಂದರವಿಠಲರಾಯಗೆ
ಶುಭವಿದು ಶೋಭನ ಹರಿಗೆ.

೨೭೩
ಉಗಾಭೋಗ
ಶ್ರವಣದಿಂದ ಹೋಯಿತು ಬ್ರಹ್ಮಹತ್ಯಾ ಪಾಪ
ಸ್ಮರಣೆಯಿಂದ ಹೋಯಿತು ಸೇರಿದ್ದ ಪಾಪವು
ಎಲ್ಲಿದ್ದ ಅಜಮಿಳ ಎಲ್ಲಿತ್ತು ವೈಕುಂಠ
ಕೊಟ್ಟಾತನೆ ಬಲ್ಲ ಪುರಂದರ ವಿಠಲ.

೨೨೧
ಉಗಾಭೋಗ
ಶ್ರೀದೇವಿಯ ಮೂರತಿಯಲ್ಲಿ ಭೂದೇವ
ಪರಿಪೂರ್ಣ ನೀನೆಯೇ
ಅವ್ಯಕ್ತಾಕಾಶದಲಿ ಸ್ವಾಮಿ ಅವ್ಯಕ್ತ ಪರಿಪೂರ್ಣ ನೀನೇಯೆ |
ಅನಂತಾನಂತÀದಲಿ ಸ್ವಾಮಿ ಅನಂತ ಪರಿಪೂರ್ಣ ನೀನೆಯೇ
ಜಗನ್ನಾಯಕ ಪುರಂದರವಿಠಲ ಸರ್ವ ಜಗಕೆ
ಪರಿಪೂರ್ಣ ನೀನೆಯೇ.

೨೯೭
ಉಗಾಭೋಗ
ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗ
ಅನೇಕ ಬಂಧುಗಳು ಲಕ್ಷ ವೈದ್ಯರುಗಳು
ಇರಲಾಗಿ ಕಣ್ಣಕಣ್ಣ ಬಿಡುವರು
ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು
ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು
ಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ.

೩೦೬
ಉಗಾಭೋಗ
ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ
ಶ್ರೀ ಕೃಷ್ಣ ಎಂದರೆ ದುರಿತ ನಿವಾರಣ
ಎಚ್ಚತ್ತಿರು ಎಲೆ ಮನವೆ ಎಚ್ಚತ್ತಿರಲೆ ಮನವೆ
ಏಕೆ ಬಯಲನು ನೆನೆವೆ ಅಚ್ಯುತಾನಂತ
ಗೋವಿಂದನೆಂಬ ನಾಮದಲಿ ಎಚ್ಚತ್ತಿರೆಲೆ ಮನವೆ
ಏಕೆ ಬಯಲ ನೆನೆವೆ ಅಚ್ಯುತನೆ ಆದಿ ಕೇಶವನೆ
ಅನಾಥ ಬಂಧೋ ಸಲಹೆಂದು
ಅಚ್ಯುತನ ಪಾದವನು ನಂಬು ಗತಿಯೆಂದು
ಅನಂತಾನಂತ ದೇವರ ದೇವ ರಂಗೇಶ
ಅನಂತನೆಂದರೆ ಬಲು ಭಯ ವಿನಾಶ
ಅನಂತನೆಂದರೆ ತಡೆವ ಯಮಪಾಶ
ಗೋವಿಂದನೆಂದರೆ ಸಕಲ ತೀರ್ಥಸ್ನಾನ
ಗೋವಿಂದನೆಂದರೆ ಸಕಲ ಮೂರ್ತಿ ಧ್ಯಾನ
ಗೋವಿಂದನೆಂದರೆ ಪುರಂದರ ವಿಠಲ
ಕೊಡುವ ಸಕಲ ಸುಜ್ಞಾನ.

೫೮
ಉಗಾಭೋಗ
ಶ್ವಾನನ ಕಂಕುಳೊಳಿಟ್ಟು ವಾರಣಾಸಿಗೆ ಪೋದಂತೆ
ಮಾನವ ಕೇಳು ಮದ ಮತ್ಸರಗಳ ಬಿಡದೆ
ಏನ ಮಾಡಿದರೇನು ವ್ಯರ್ಥವಲ್ಲವೆ?
ಜ್ಞಾನಿ ಪುರಂದರವಿಠಲನ ನೆನೆ ಕಾಣೊ ಮರುಳೇ.

೧೬
ಉಗಾಭೋಗ
ಸಂಕಷರ್Àಣನೆನಿಸಿ ಶಂಕರನ ಅಂತರ್ಯಾಮಿಯಾಗಿ
ಸಂಹಾರ ಮಾಡುವೆ
ಸರಸಿಜೋದ್ಭವನಲ್ಲಿ ಅಂತರ್ಯಾಮಿ ವಾಸುದೇವನಾಗಿ
ಸೃಷ್ಟಿಯ ಮಾಡುವೆ
ಅನಿರುದ್ಧನೆನಿಸಿ ಪಾಲನೆ ಮಾಡುವೆ ಅನಾದಿ ಕಾಲದಿ
ನೀನು ನಿತ್ಯ , ಬ್ರಹ್ಮರುದ್ರರೇ ಅವರು
ಬೊಮ್ಮ ಪುರಂದರವಿಠಲರೇಯ

೩೨೨
ಉಗಾಭೋಗ
ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು
ಅಂತ್ಯ ಫಲದಿ ಕೋಟಿ ಕೋಟಿ ಅಗಣಿತ ಫಲವು
ಅರ್ಧ ತುಳಸಿ ದಳವ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು
ಶ್ರೀ ಹೇಮಗತ ಪುರಂದರವಿಠಲ
ವೈಕುಂಠ ಪದವಿಯನೀವನೊ.

೨೮೮
ಉಗಾಭೋಗ
ಸಂತತಿಯಪ್ಪುದು ರಾಮಾಯಣವ ಕೇಳಲು
ಸಕಲ ಪಾಪಹರವು ಭಾರತ ಕೇಳಲು
ತಂತು ಮಾತ್ರವೆ ವಿಷ್ಣು ಪುರಾಣವ ಕೇಳಲು
ತತ್ತ್ವ ವಿವೇಕವು ಬಾಹೋದು
ಅಂತರವರಿತು ಭಾಗವತ ಕೇಳಲು
ಆಹೋದೈ ಜ್ಞಾನ ಭಕ್ತಿ ವೈರಾಗ್ಯವು
ಸಂತತ ಪುರಂದರ ವಿಠಲನ ಸಂಕೀರ್ತನೆ ಮಾಡಲು
ಸಕಲವು ಬಾಹೋದು ಸಾಯುಜ್ಯ (ವು).

೨೩೪
ಉಗಾಭೋಗ
ಸಕಲ ಶ್ರುತಿ ಪುರಾಣಗಳೆಲ್ಲ ಅದಾವನ ಮಹಿಮೆ
ಸುಖ ಪೂರ್ಣ ಸುರವರಾರ್ಚಿತ ಪಾದ
ಶಕಟಮರ್ದನ ಶಾರದೇಂದು ವಕ್ತ್ರ
ರುಚಿಕರವರ ಕಲ್ಯಾಣ ರಂಗ
ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರ ವಿಠಲ.

೨೪೪
ಉಗಾಭೋಗ
ಸಕಲ ಸಾಧನಕೆಲ್ಲ ಸಿದ್ಧಿ ಗೊಳಿಸುವುದು
ಭಕುತಿ ಸಾಧನವಲ್ಲದ ಬೇರೆ ಸಾಧನವುಂಟೆ?
ಭಕುತಿಗೆ ಅಭಿಮಾನಿ ಭಾರತೀ ದೇವಿಯರ ಕರುಣ
ಮುಕುತಿ ಸಾಧನವೆಂದು ಮನದಲ್ಲಿ ಸ್ತುತಿಸಿರೊ
ಮುಕುತೀಶ ನಮ್ಮ ಪುರಂದರ ವಿಠಲನ
ಕರುಣಕ್ಕ್ಕೆ ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ?.


ಉಗಾಭೋಗ
ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತೀದೇವಿ ಮು-
ಕುತಿ ಪಥಕೀವ ಮನ ಮಹರುದ್ರ ದೇವರು ಭ-
ಕುತಿ ದಾಯಕಳು ಭಾರತೀದೇವಿಯು ಯು-
ಕುತ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮದಲಿ ನಡಸಿ ಸುಙ್ಞನ ಮತಿಯಿತ್ತು
ಗತಿ ಪಾಲಿಸುವ ನಮ್ಮ ಪವಮಾನನು
ಚಿತ್ತದಲಿ ಆನಂದ ಸುಖವನೀವಳು ರಮಾ, ಭ-
ಕುತ ಜನರೊಡೆಯ ನಮ್ಮ ಪುರಂದರವಿಠಲನು
ಸತತ ಇವರೊಳು ನಿಂತು ಕೃತಿಯ ನಡೆಸುವನು

೧೯೩
ಉಗಾಭೋಗ
ಸಹಸ್ರ ಕಾಷ್ಠದ ಭಾರ ಸದ್ಯೋಘೃತ ಕುಂಭ ನೂರು
ಮಹಾಮಂತ್ರದಿಂದ ಹೋಮ ಮಾಡದಿದ್ದರೆ ನಿರರ್ಥಕ
ವಾಸುದೇವಗರ್ಪಿತ ಅನ್ನವ ಅತಿಥಿಗೀಯದಿದ್ದರೆ
ವೈರದಿ ಪುರಂದರವಿಠಲ ಮುನಿವ.

೧೫೪
ಉಗಾಭೋಗ
ಸಿಕ್ಕಿದಿಯೆಲೊ ಸಿರಿಕೃಷ್ಣ
ಸಿಕ್ಕಿದಿಯೆಲೊ ನೀ ಕಳರ ಗುರುವೆ
ಸಿಕ್ಕಿದಿಯೆಲೊ ಸಿರಿ ಕೃಷ್ಣ |
ತಕ್ಕೆಯೊಳಪ್ಪದೆ ಬಿಡೆ ಪುಂದರವಿಠಲಯ್ಯ.