Categories
ರಚನೆಗಳು

ಪುರಂದರದಾಸರು

೧೧
ಒಂದೇ ನಾಮವು ಸಾಲದೆ – ಶ್ರೀಹರಿಯೆಂಬಒಂದೇ ನಾಮವು ಸಾಲದೆ ಪ
ಒಂದೇ ನಾಮವು ಭವಬಂಧನ ಬಿಡಿಸುವು |ದೆಂದು ವೇದಂಗಳಾನಂದದಿ ಸ್ತುತಿಸುವ ಅ.ಪ
ಉಭಯರಾಯರು ಸೇರಿ ಮುದದಿ ಲೆತ್ತವನಾಡಿ |ಸಭೆಯೊಳು ಧರ್ಮಜ ಸತಿಯ ಸೋಲೆ ||
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು |ಇಭರಾಜಗ ಮನೆಗಕ್ಷಯವಸ್ತ್ರವನಿತ್ತ ೧
ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ |ಸಂದೇಹವಿಲ್ಲದೆ ಹಲವು ಕಾಲ ||
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ |ಕಂದನಾರಗನೆಂದು ಕರೆಯಲಭಯವಿತ್ತ ೨
ಕಾಶಿಯ ಪುರದೊಳು ಈಶ ಭಕುತಿಯಿಂದ |ಸಾಸಿರನಾಮದ ರಾಮನೆಂಬ ||
ಶ್ರೀಶನನಾಮದ ಉಪದೇಶ ಸತಿಗಿತ್ತ |ವಾಸುದೇವ ಶ್ರೀಪುರಂದರ ವಿಠಲನ ೩

೫೪
ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ |
ನಂಬಿಗಿಲ್ಲದೆ ಒಗತನ ಮಾಡಿದೆನೆ ಸೂವಕ್ಕ ಸುವ್ವಿ ಪ
ತನುವೆಂಬ ಕಲ್ಲಿಗೆ ಮನ ಧಾನ್ಯವನುತುಂಬಿ |
ಒನೆದೊನೆದು ಒಬ್ಬಳೆ ಬೀಸಿದೆನೆ ೧
ಅಷ್ಟ ಮದಗಳೆಂಬ ಅಷ್ಟಧಾನ್ಯವ ತೆಗೆದು |
ಕುಟ್ಟಿ ಕುಟ್ಟಿ ಕಾಳು ಮಾಡಿದೆನೆ ೨
ನಷ್ಟ ತರ್ಕವೆಂಬ ಕಟ್ಟಿಗೆ ಉರಿದು ನಾ |
ನಿಷ್ಠೆಯಿಂದನ್ನವ ಮಾಡಿದೆನೆ ೩
ಅಷ್ಟರೊಳು ಗಂಡಬಂದ ಅಡುವ ಗಡಿಗೆಯ ಬಡೆದ |
ಹುಟ್ಟು ಮುರಿದು ಮೂಲೆಗೆ ಹಾಕಿದನೆ ೪
ಹುಟ್ಟಿನಲಿ ತಿರುಹುವ ಒಟ್ಟಿನಲಿ ಕುದಿಸುವ |
ಕಟ್ಟಂಬಲಿಯನೆತ್ತಿ ಕುಡಿಸಿದನೆ…………… ೫
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ |
ಕಡೆಗೆ ಬಾರದಹಾಗೆ ಮಾಡಿದನೆ ೬
ಮಾಡಿದೆನೆ ಒಗೆತನ ನಂಬಿಗಿಲ್ಲದ ಮನೆಯೊಳು |
ಕೊಡಿದೆನೆ ಪುರಂದರವಿಠಲನ…………….. ೭

೧೩೯
ಒಪ್ಪನಯ್ಯ – ಹರಿ – ಮೆಚ್ಚನಯ್ಯ ಪ
ಉತ್ತಮ ತಾನೆಂದುಕೊಂಡು ಉದಯ ಕಾಲದಲ್ಲಿ ಎದ್ದು |
ನಿತ್ಯನಿತ್ಯ ನೀರಿನೊಳಗೆ ಕಾಗೆ ಹಾಗೆ ಮುಳುಗುವವಗೆ ೧
ಚರ್ಮದ ದೇಹಕ್ಕೆ ಗೋಪಿಚಂದನವ ತೊಡೆದುಕೊಂಡು |
ಎಮ್ಮೆಯ ರೋಗದ ಬರೆಯ ಹಾಗೆ ಅಡ್ಡತಿಡ್ಡ ಬರೆದ ಮನುಜಗೆ ೨
ಮಾತಿನಲ್ಲಿ ಮತ್ಸರವು ಮನಸಿನೊಳಗೆ ವಿಷದ ಗುಳಿಗೆ |
ಓತಿಯಂತೆ ಮರದ ಮೇಲೆ ನಮಸ್ಕಾರ ಮಾಡುವವಗೆ ೩
ನಿಷ್ಠೆಯುಳ್ಳವ ತಾನೆಂದು ಪೆಟ್ಟಿಗೆ ಮುಂದಿಟ್ಟು ಕೊಂಡು |
ಕೊಟ್ಟಿಗೆಯೊಳಗಿನ ಎತ್ತಿನಂತೆ ನುಡಿಸುವ ಗಂಟೆಯ ಶಬ್ದಕೆ ಆತ ೪
ಏಕೋಭಾವ ಏಕೋಭಕ್ತಿ ಏಕನಿಷ್ಠೆಯಿಂದಲಿ | ಬೇಕಾದಂಥ ಮುಕುತಿಯ ನೀಡುವ ಪುರಂದರವಿಠಲನಸ್ಮರಿಸದ ಮನುಜ ೫

ಕುಲಶವೆಂದರೆ ವಜ್ರಾಯುಧ
೧೨
ಒಲ್ಲನೋ ಹರಿ ಕೊಳ್ಳನೋ ಪಎಲ್ಲ ಸಾಧನವಿದ್ದು ತುಲಸಿ ಇಲ್ಲದ ಪೂಜೆ ಅ.ಪ
ಸಿಂಧು ಸಾಗರ ಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದು ||
ಅಂದವಾದಾಭರಣ ಧೂಪ-ದೀಪಗಳಿದ್ದುವೃಂದಾವನ ಶ್ರೀ ತುಲಸಿಯಿಲ್ಲದ ಪೂಜೆ ೧
ಮಧುಕ್ಷೀರ ಮೊದಲಾದ ಪಂಚಾಮೃತಗಳಿದ್ದುಮಧುಪರ್ಕ ಪೂಜೋಪಚಾರವಿದ್ದು ||
ಮಧುಸೂದನ ಮುದ್ದು ಕೃಷ್ಣನ ಪೂಜೆಗೆಮುದದ ಮೋಹದಳೆಂಬ ತುಲಸಿಯಿಲ್ಲದ ಪೂಜೆ ೨
ಕಮಲ ಮಲ್ಲಿಗೆ ಜಾಜಿ ಸಂಪಿಗೆ-ಕೇದಿಗೆವಿಮಲ ಘಂಟೆ ಪಂಚ ವಾದ್ಯವಿದ್ದು ||
ಅಮಲ ಪಂಚ ದಿವ್ಯ ಅಮೃತಾನ್ನಗಳಿದ್ದುಕಮಲನಾಭನು ಶ್ರೀ ತುಲಸಿಯಿಲ್ಲದ ಪೂಜೆ ೩
ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದುತಂತು ತಪ್ಪದ ತಂತ್ರಸಾರವಿದ್ದು ||
ಸಂತತ ಸುಖ ಸಂಪೂರ್ಣನ ಪೂಜೆಗತ್ಯಂತ ಪ್ರಿಯಳಾದ ತುಲಸಿಯಿಲ್ಲದ ಪೂಜೆ ೪
ಪೂಜೆಯ ಮಾಡದೆ ತುಲಸೀ ಮಂಜರಿಯಿಂದಮೂಜಗದೊಡೆಯ ಮುರಾರಿಯನು ||
ರಾಜಧಿರಾಜನೆಂಬ ಬಿರುದು ಮಂತ್ರಗಳಿಂದಪೂಜೆ ಮಾಡಿದರೇನು ಪುರಂದರ ವಿಠಲನ ೫

೧೪೦
ಒಲ್ಲೆನೆ ವೈದಿಕ ಗಂಡನ – ನಾ –
ನೆಲ್ಲಾದರೂ ನೀರ ಧುಮುಕುವೆನಮ್ಮ ಪ.
ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ |
ಕೆಟ್ಟ ಸೀರೆಯ ನಾನುಡಲಾರೆನೆ ||
ಹಿಟ್ಟ ತೊಳಸಿ ಎನ್ನ ರಟ್ಟೆಯಲ್ಲ ನೊಂದವು |
ಎಷ್ಟೆಂದು ಹೇಳಲಿ ಕಷ್ಟದ ಒಗತನ ೧
ಕೃಷ್ಣಾಜಿನವನು ರಟ್ಟೆಯಲಿ ಹಾಕಿಕೊಂಡು ||
ಬೆಟ್ಟಲಿ ಗಿಂಡಿಯ ಹಿಡಿದಿಹನೆ ||
ದಿಟ್ಟತನದಿ ನಾನೆದುರಿಗೆ ಹೋದರೆ |
ದೃಷ್ಟಿಯಿಂದಲಿ ಎನ್ನ ನೋಡನಮ್ಮ ೨
ನಿನ್ನಾಣೆ ಹುಸಿಯಲ್ಲ ಬಿನ್ನಣ ಮಾತಲ್ಲ |
ಕಣ್ಣಸನ್ನೆಯಂತು ಮೊದಲೆ ಇಲ್ಲ ||
ಮುನ್ನಿನ ಜನ್ಮದಲಿ ಪುರಂದರವಿಠಲನ |
ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ ೩

೩೦೪
ಒಳಿತು ಈ ಶಕುನ ಫಲವಿಂದು ನಮಗೆ
ಜಲಜನಾಭನ ಸಂಗ ದೊರಕುವುದೆ ರಮಣಿ ಪ.
ವಾಮಗರುಡನ ನೋಡು ವಾಯಸದ ಬಲವನ್ನು
ಕೋಮಲಾಂಗಿಯರೈದು ಪೂರ್ಣಕುಂಭ ||
ಸಾಮಾನ್ಯವೇ ಗೌಳಿ ಬಲಕಾಗಿ ನುಡಿಯುತಿದೆ
ಪ್ರೇಮದಲಿ ಮಧುರ ವಚನವ ಕೇಳು ರಮಣಿ ೧
ಮೊಳಗುತಿವೆ ಭೇರಿ ದುಂದುಭಿ ಘಂಟೆ ವಾದ್ಯಗಳು
ಫಲ ಪುಷ್ಪ ದಧಿಗಳಿದಿರಾಗುತಿದೆಕೊ ||
ಚೆಲುವ ಭಾರದ್ವಾಜ ಪಕ್ಷಿ ಬಲವಾಗುತಿದೆ
ಬಲು ಹಂಗ ಎಡವಾಗುತಿದೆ ನೋಡು ಕೆಳದಿ ೨
ನೋಡು ದ್ವಯ ಬ್ರಾಹ್ಮಣರು ಇದಿರಾಗಿ ಬರುವುದನು
ಕೂಡಿದುವು ಮನದ ಸಂಕಲ್ಪವೆಲ್ಲ ||
ಬೇಡಿದ ವರಗಳೀವ ಪುರಂದರವಿಠಲನ
ನೋಡಿ ಸಂತೋಷದಲಿ ನೆನೆವೆನೆಲೆ ರಮಣಿ ೩

ಏಕಚಕ್ರಪುರದಲ್ಲಿ ಪಾಂಡವರು
೪೮
ಒಳ್ಳೆಯದೊಳ್ಳೆಯದು ಪ
ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ? ಅ.ಪ
ಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ |ಉಡೆಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ೧
ಅರಿವು ಮರೆವು ಮಾಡಿ ತಿರುಗಿಸಿದೆಯಾ ಎನ್ನ |ಕೊರಳಿಗೆ ನಿನ್ನಯ ಚರಣ ಕಟ್ಟಿಕೊಂಬೆ ೨
ಅತ್ತೆಯ ಮಕ್ಕಳಿಗೆ ತೆತ್ತಿಗ ನಿನಗಾಗಿ |ಎತ್ತದ ರಾಶಿ ತಂದಿತ್ತ ಪರಿಯಲಿ ೩
ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ |ಚಿತ್ತದಲ್ಲಿ ಹೊತ್ತು ಕಟ್ಟಿಕೊಂಬೆನು ೪
ಇರುಳು ಹಗಲು ಬಿಡೆದೆ ವರಪುರಂದರಗೊಲಿದೆ |ಅರಿದು ಏನು ಇಷ್ಟು ಪುರಂದರವಿಠಲನೆ ೫

೨೫೪
ಓಡಿ ಬಾರಯ್ಯ ವೈಕುಂಠಪತಿ ನಿನ್ನ
ನೋಡುವೆ ಮನದಣಿಯೆ ಪ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ಅ.ಪ
ಕೆಂದಾವರೆಯಂತೆ ಪಾದಂಗಳೆರಡು
ಅಂದುಗೆ ಕಿರಿಗೆಜ್ಜೆ ಘಲುಘಲುರೆನುತ ||
ಚೆಂದದಿ ಪೀತಾಂಬರವಲೆದಾಡುತ
ಕುಂದಣದುಡುದಾರ ಝಣ ಝಣ ಝಣಕುತ ೧
ಕೋಟಿ ಸೂರ್ಯ ಪ್ರಕಾಶಗಳಿಂದಲಿ ಲ-
ಲಾಟದಲ್ಲಿ ಇಟ್ಟ ಕಸ್ತುರಿ ತಿಲಕ ||
ಕೂಟದ ಗೋಪಾಂಗನೆಯರ ಕೂಡೆ
ಆಟ ಸಾಕು ಬಾರೋ ಅರವಿಂದ ನಯನ ೨
ಕಿರುತುರುಬಿನ ಮೇಲೆ ಒಲೆವುತಿರುತಿರೆ
ಮುರುಗು ಮಲ್ಲಿಗೆ ಜಾಜಿ ಶ್ರೀತುಳಸೀ ||
ಕರದಲಿ ಪಿಡಿದಾ ಪೊಂಗೊಳಲೂದುತ
ತಿರಿತಿಂದು ಬಾಹೋ ಸಡಗರ ಸಾಕೋ ೩
ಎಣ್ಣೂರಿಗತಿರಸ ಸದಮಲ ದೋಸೆ ಬೆಣ್ಣೆ
ಅಣ್ಣಯ್ಯ ನಿನಗೆ ಕೊಡುವೆನೋ ಬಾರೋ ||
ಕಣ್ಣಮುಚ್ಚಿ ಗೋಪಾಂಗನೆಯರ ಕೂಡಿ |
ಬೆಣ್ಣೆಯ ಮೆಲುವುದು ಉಚಿತವೆ ಸಾಕೋ ೪
ಮಂಗಳಾತ್ಮಕ ಮೋಹನಾಕಾರನೆ
ಸಂಗೀತ ಲೋಲ ಸದ್ಗುಣ ಶೀಲ ||
ಮಂಗಳೆ ಲಕುಮಿಯ ಸಹಿತವಾಗಿ ಬಂದು
ಕಂಗಳ ಮುಂದಾಡೊ ಪುರಂದರ ವಿಠಲ ೫

೨೫೬
ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣ
ಪುಂಡರೀಕಾಕ್ಷ ಪುರುಷೋತ್ತಮ ಹರೇ ಪ
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನಯ್ಯ ನೀರಜಾಕ್ಷ ||
ತಂದೆ ತಾಯಿಯು ನೀನೇ ಬಂಧು ಬಳಗವು ನೀನೇ
ಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ ೧
ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿ
ಎಣಿಸಲಳವಲ್ಲ ಈ ಭವದ ವ್ಯಥೆಯ ||
ಸನಕಾದಿ ಮುನಿವಂದ್ಯ ವನಜಸಂಭವನಯ್ಯ
ಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ ೨
ಭಕ್ತ ವತ್ಸಲನೆಂಬ ಬಿರುದು ಬೇಕಾದರೆ
ಭಕ್ತರ ಅಧೀನನಾಗಿ ಇರಬೇಡವೆ ||
ಮುಕ್ತಿದಾಯಕ ದೇವ ಹೊನ್ನೂರ ಪುರವಾಸ
ಶಕ್ತ ಪುರಂದರ ವಿಠಲ ಶ್ರೀ ಕೃಷ್ಣಾ ೩

೨೫೫
ಕಂಡು ಕಂಡೆಂತು ಕೈ ಬಿಡುವೆ ಹರಿಯೆ |
ಪುಂಡರೀಕಾಕ್ಷ ನಿನ್ನ ನಂಬಿದ ಮೇಲೆ ಪ
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |
ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||
ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |
ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? ೧
ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |
ಬೆಂದೊಡಲ ಹೊರೆದು ಬೇಸತ್ತೆನಯ್ಯ ||
ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|
ಸಿಂಧು ಗೋವಿಂದನೇ ತಂದೆಯಾದ ಮೇಲೆ ೨
ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |
ನಿಂದ ನೆಲ ಮುನಿಯುತಿದೆ ನೀರಜಾಕ್ಷ ||
ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |
ಕುಂದದೇ ರಕ್ಷಿಸೈ ನಂದನಂದನನೆ ೩
ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |
ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||
ವಾಸವಾರ್ಚಿತನಾದ ವೈಕುಂಠನಿಲಯ ಲ-|
ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ ೪
ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |
ಭಕುತರಾಧೀನನಾಗಿರ ಬೇಡವೆ ||
ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |
ಸಕಲ ದೇವರದೇವ ಪುರಂದರ ವಿಠಲ೫

೨೫೭
ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕ
ಮಂಗಳ ಮೂರುತಿ ಮನ್ನಾರು ಕೃಷ್ಣನ ಪ
ಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆ
ದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ ೧
ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆ
ಕಡು ಮುದ್ದು ಮನ್ನಾರು ಕೃಷ್ಣನ ಕಂಡೆ ೨
ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆ
ಮಾವ ಕಂಸನ ಮರ್ದನ ಶ್ರೀ ಕೃಷ್ಣನ ೩
ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆ
ವೈಕುಂಠವಾಸನ ಮನ್ನಾರು ಕೃಷ್ಣನ ೪
ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆ
ಶ್ರೀಶ ಪುರಂದರ ವಿಠಲ ಕೃಷ್ಣರಾಯನ ೫

೨೦೯
ಕಂಡೆ ಕರುಣನಿಧಿಯ | ಗಂಗೆಯ |
ಮಂಡೆಯೊಳಿಟ್ಟ ದೊರೆಯ |
ರುಂಡಮಾಲೆ ಸಿರಿಯ | ನೊಸಲೊಳು |
ಕೆಂಡಗಣ್ಣಿನ ಬಗೆಯ | ಹರನ ಪ
ಗಜಚರ್ಮಾಂಬರನ | ಗೌರೀ | ವರ ಜಗದೀಶ್ವರನ |
ತ್ರಿಜಗನ್ಮೋಹಕನ | ತ್ರಿಲೋಚನ | ಭುಜಗ
ಕುಂಡಲಧರನ | ಹರನ ೧
ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |
ಪಶುಪತಿಯೆನಿಸುವನ | ಧರೆಯೊಳು |
ಶಶಿಶೇಖರ ಶಿವನ | ಹರನ ೨
ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |
ಮುಪ್ಪುರ ಗೆಲಿದವನ | ಮುನಿನುತ |
ಸರ್ಪಭೂಷಣ ಶಿವನ | ಹರನ ೩
ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |
ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ೪
ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ | ವರ ಪಂಪಾವಾಸಿ
ತಾರಕ ಉಪದೇಶಿ | ಪುರಂದರ ವಿಠಲ ಭಕ್ತರ ಪೋಷೀ | ಹರನ ೫

೨೫೮
ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥವನೀವ ದೇವನ ಕರುಣ
ನಿಧಿಯೆಂದೆನಿಸಿ ಮೆರೆವನ ಪ
ಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕ್ಕಚ್ಚರಿಯೆನಿಪ ನಗೆಮೊಗ
ನೊಸಲೊಳಗೆ ತಿರುಮಣಿಯ ಕಂಡೆನು
ಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನು
ಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ ೧
ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವ
ಉಪ್ಪು ವೋಗರವನ್ನು ಮಾರಿಸಿ
ಉಚಿತದಿಂದಲಿ ಹಣವ ಗಳಿಸುವ ||
ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದ
ಕ್ರಯ ಮಾಡಿ ಕೊಡಿಸುವ
ಸರ್ಪಶಯನನ ಸಾರ್ವಭೌಮನ ಅಪ್ಪ
ವೆಂಕಟರಮಣನಂಘ್ರಿಯ ೨
ಉರದಿ ಶ್ರೀದೇವಿ ಇರಲು ಕಂಡೆನು
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||
ತರತರದಿ ಭಕ್ತರಿಗೆ ವರಗಳ ಕರೆದು
ಕೊಡುವುದ ನಾನು ಕಂಡೆನು
ಶರಧಿಶಯನನ ಶೇಷಗಿರಿವರ ಸಿರಿ ಪುರಂದರ ವಿಠಲನಂಘ್ರಿಯ೩

೨೬೦
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವ ಪಕ್ಷನ ಪ
ಕೇಶವ ನಾರಾಯಣ ಶ್ರೀ ಕೃಷ್ಣನ
ವಾಸುದೇವ ಅಚ್ಯುತಾನಂತನ ||
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ ೧
ಮಾಧವ ಮಧುಸೂದನ ತ್ರೀವಿಕ್ರಮನ
ಯಾದವ ಕುಲಜನ ಮುನಿವಂದ್ಯನ ||
ವೇದಾಂತ ವೇದ್ಯನ ಶ್ರೀ ಇಂದಿರೆ ರಮಣನ
-ನಾದಿ ಮೂರುತಿ ಪ್ರಹ್ಲಾದವರದನ ೨
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ ||
ಕರುಣಾಕರ ನಮ್ಮ ಪುರಂದರ ವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ೩

೨೫೯
ಕಂಡೆನಾ ಕನಸಿನಲಿ ಗೋವಿಂದನಪ
ಕಂಡೆನಾ ಕನಸಿನಲಿ ಕನಕರತ್ನದ ಮಣಿಯ |
ನಂದನ ಕಂದ ಮುಕುಂದನ ಚರಣವ ಅ.ಪ
ಅಂದುಗೆ ಕಿರುಗೆಜ್ಜೆ ಘಲಿರೆಂಬ ನಾದದಿ
ಬಂದು ಕಾಳಿಂಗನ ಹೆಡೆಯನೇರಿ ||
ಧಿಂಧಿಮಿ ಧಿಮಿಕೆಂದು ತಾಳಗಳಿಂದಾ
ನಂದದಿ ಕುಣಿವ ಮುಕುಂದನ ಚರಣವ ೧
ಉಟ್ಟ ಪೀತಾಂಬರ ಉಡಿಯ ಕಾಂಚಿಯ ದಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು ||
ಕಟ್ಟಿದ ವೈಜಯಂತಿ ತುಲಸಿಯ ವನಮಾಲೆ
ಇಟ್ಟ ದ್ವಾದಶನಾಮ ನಿಗಮಗೋಚರನ ೨
ಕಿರುಬೆರಳಿನ ಮುದ್ರೆಯುಂಗುರ ಮುಂಗಡೆ
ಕರದಲಿ ಕಂಕಣ ನಳಿತೋಳುಗಳ ||
ವರಚತುರ್ಭುಜ ಶಂಖಚಕ್ರದಿ ಮೆರೆವನ
ನಿರುತದಿ ಒಪ್ಪುವ ಕರುಣಾ ಮೂರುತಿಯ೩
ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲ
ಸಣ್ಣ ನಗೆಯ ನುಡಿ ಸವಿಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟನ
ಕಣ್ಣು ಮನ ತಣಿಯದ ಕಂಸಾರಿ ಕೃಷ್ಣನ ೪
ಮಂಗಳ ವರತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರ ವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ ೫

೭೯
ಕಂದ ಹಾಲ ಕುಡಿಯೊ-ನಮ್ಮ ಗೋ-|
ವಿಂದ ಹಾಲ ಕುಡಿಯೊ ಪ
ವೃಂದಾವನದೊಳು ಬಳಲಿ ಬಂದೆಯೊ ರಂಗ ಅ.ಪ
ಶೃಂಗಾರವಾದ ಗೋವಿಂದ-ಚೆಲುವ |
ಪೊಂಗೊಳಲೂದುವ ಚೆಂದ ||
ಅಂಗನೆಯರ ಒಲುಮೆಯಿಂದ-ನಮ್ಮ |
ಮಂಗಳಮೂರತಿಯ ಮೋರೆ ಬಾಡಿತಯ್ಯ ೧
ಆಕಳೊಡನೆ ಹರಿದಾಡಿ-ನಮ್ಮ |
ಶ್ರೀಕಾಂತ ಗೆಳೆಯರ ಕೂಡಿ ||
ಲೋಕವ ಈರಡಿ ಮಾಡಿ-ನಮ್ಮ |
ಸಾಕುವ ಪಾದವು ಬಳಲಿದುವಯ್ಯ ೨
ಸದಮಲ ಯೋಗಿಗಳೆಲ್ಲ-ನಿನ್ನ |
ಪದವ ಬಣ್ಣಿಸುತಿಪ್ಪರೆಲ್ಲ ||
ಯದುಕುಲ ಚೌಪಟ ಮಲ್ಲ-ಹಾಲ |
ಹದನು ವಿೂರಿತಯ್ಯ ಪುರಂದರವಿಠಲ ೩

೧೪೧
ಕಡುಕೃಪೆಯಿಂದ ಹರಿ ಒಲದರೆ ಸತ್ಯದ
ನಡೆವಳಿ ಮೌನವೆ ಸಾಕ್ಷಿ
ದೃಡ ಭಕ್ತರಿಗುಣಬಡಿಸಿದಂಥವರಿಗೆ
ಷಡುರ ಸ್ನಾನವೇ ಸಾಕ್ಷಿ ಪ
ಅನ್ನದಾನ ಮಾಡಿದ ಮನುಜಗೆ – ದಿ
ವ್ಯಾನ್ನವುಂಬುವುದೇ ಸಾಕ್ಷಿ
ಅನ್ನದಾನ ಮಾಡದ ಮನುಜಗೆ – ಸರ
ರನ್ನಕೆ ಬಾಯ್ಬಿಡುವುದೆ ಸಾಕ್ಷಿ ೧
ಕನ್ಯಾದಾನ ಮಾಡದ ಮನುಜಗೆ ಚೆಲ್ವ
ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನ ಮಾಡದ ಮನುಜಗೆ – ಪರ
ಹೆಣ್ಣಿನ ಹೋರಾಟವೇ ಸಾಕ್ಷಿ ೨
ಪರರಿಗೊಂದು ತಾನೊಂದುಂಬುವರಿಗೆ
ಜ್ವರ – ಗುಲ್ಮ ರೋಗವೇ ಸಾಕ್ಷಿ
ಪರಿಪರಿ ವಿಧದಿಂದ ಹಿರಿಯರ ದೂರುವಗೆ
ತಿರಿದು ತಿಂಬುವುದೇ ಸಾಕ್ಷಿ ೩
ಕಂಡ ಪುರುಷಗೆ ಕಣ್ಣಿಡುವ ಸತಿಯು – ತನ್ನ
ಗಂಡನ ಕಳೆಯುದೇ ಸಾಕ್ಷಿ
ಪುಂಡತನದಿ ಪರ ಹೆಂಗಳೆನುಳುಪುವಗೆ
ಹೆಂಡಿರು ಕಳೆವುದೇ ಸಾಕ್ಷಿ ೪
ಕ್ಷೇತ್ರದಾನದ ಮಾಡಿದ ಮನುಜಗೆ – ಏಕ
ಛತ್ರದ ರಾಜ್ಯವೇ ಸಾಕ್ಷಿ
ಮುಕ್ತಿ ಪಡೆದು ತಿಳಿ ಪುರಂದರವಿಠಲನ
ಭಕ್ತನಾಗುವುದೇ ಸಾಕ್ಷಿ ೫

೭೮
ಕಣ್ಣ ಮುಂದಿರೊ-ರಂಗ-ಕಣ್ಣ ಮುಂದಿರೊ ಪ
ಪೂತನಿಯ ಮೊಲೆಯನುಂಡು |
ವಾತಶಕಟಾದಿ ದೈತ್ಯರ ||
ಫಾತಿಸಿದ ರಂಗ ನಿನ್ನ |
ಪೋತತನಕಂಜುವೆನು ೧
ಕಡಹದ ಮರವನೇರಿ |
ಮಡುವ ಧುಮುಕಿ ನೋಡಿ ||
ಹೆಡೆಯ ತುಳಿದ ನಿನ್ನ |
ದುಡುಕಿಗಂಜುವೆನು ೨
ಬಾಲೆಯರ ಮನೆಗೆ ಪೋಗಿ |
ಹಾಲು-ಮೊಸರು ಕದ್ದು ||
|ಲೀಲೆ ಮಾಡದಿರಯ್ಯ |
ಲೋಲ ಪುರಂದರವಿಠಲ ೩

೨೬೧
ಕಣ್ಣಾರೆ ಕಂಡೆನಚ್ಯುತನ-ಕಂಚಿ
ಪುಣ್ಯ ಕೋಟಿ ಕರಿರಾಜವರದನ ಪ
ವರಮಣಿ ಮುಕುಟಮಸ್ತಕನ ಸುರ-
ವರ ಸನಕಾದಿ ವಂದಿತ ಪಾದಯುಗನ ||
ತರುಣಿ ಲಕ್ಷ್ಮೀ ಮನೋಹರನ-ಪೀತಾಂ
ಬರದುಡಿಗೆಯಲಿ ರಂಜಿಸುವ ವಿಗ್ರಹನ ೧
ಕಸ್ತೂರಿ ಪೆರೆನೊಸಲವನ ತೋರ
ಮುತ್ತಿನ ಹಾರ ಪದಕವ ಧರಿಸಿದನ ||
ಎತ್ತಿದಭಯ ಹಸ್ತದವನ ತನ್ನ
ಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ ೨
ನೀಲ ಮೇಘ ಶ್ಯಾಮಲನ ದೇವ
ಲೋಲ ಮಕರ ಕುಂಡಲ ಧರಿಸಿಹನ ||
ಮೂಲೋಕದೊಳಗೆ ಚೆನ್ನಿಗನ ಕಮ
ಲಾಲಯಾಪತಿ ವೈಕುಂಠವಲ್ಲಭನ ೩
ಭಾನುಕೋಟಿ ತೇಜದವನ ಭವ
ಕಾನನ ರಾಶಿಗೆ ಹವ್ಯ ವಾಹನನ ||
ದಾನವರೆದೆಯ ತಲ್ಲಣನ ಮುನಿ
ಮಾನಸೆ ಹಂಸನೆಂದೆನಿಸಿ ಮೆರೆವನ ೪
ತುಂಗ ಚತುರ್ಭುಜದವನ ಶುಭ
ಮಂಗಳ ರೇಖೆ ಅಂಗಾಲಲೊಪ್ಪುವನ ||
ಶೃಂಗಾರ ಹಾರ ಕಂಧರನ ದೇವ
ಗಂಗೆಯ ಪಿತ ಪುರಂದರ ವಿಠಲನ ೫

೧೪೨
ಕಣ್ಣಿನೊಳಗೆ ನೋಡೊ ಹರಿಯ – ಒಳ –
ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.
ಆಧಾರ ಮೊದಲಾದ ಆರು – ಚಕ್ರ
ಶೋಧಿಸಿ ಸುಡಬೇಕು ಈ ಕ್ಷಣ ಮೂರು ||
ಸಾಧಿಸಿ ಸುಷಮ್ನ ಏರು ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು ೧
ಎವೆಹಾಕದೆ ಮೇಲೆ ನೋಡು – ಮುಂದೆ
ತವಕದಿಂದಲಿ ವಾಯು ಬಂಧನ ಮಾಡು ||
ಸವಿದು ನಾದವ ಪಾನ ಮಾಡು – ಅಲ್ಲಿ
ನವವಿಧ ಭಕ್ತಿಯಲಿ ನಲಿನಲಿದಾಡು ೨
ಅಂಡದೊಳಗೆ ಆಡುತಾನೆ – ಭಾನು –
ಮಂಡಲ ನಾರಾಯಣನೆಂಬುವನೆ ||
ಕುಂಡಲಿ ತುದಿಯೊಳಿದ್ದಾನೆ – ಶ್ರೀ ಪು –
ರಂದರ ವಿಠಲನು ಪಾಲಿಸುತಾನೆ ೩

೧೪೩
ಕಣ್ಣೆತ್ತಿ ನೋಡಲುಬೇಡ – ಅವಳ
ಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.
ಕಣ್ಣಿಟ್ಟ ಕೀಚಕ ಕೆಟ್ಟ – ಪರ
ಹೆಣ್ಣಿಗಾಗಿ ರಾವಣ ತಲೆಕೊಟ್ಟ
ಏನು ಮಾಡಿದಳಣ್ಣ ನಷ್ಟ – ಪರ
ಹೆಣ್ಣನು ಮೋಹಿಸಿದವ ಬಲು ಭ್ರಷ್ಠ ೧
ದೂರದಲ್ಲಿಯ ಸುಖದಣ್ಣ – ಅವಳ
ಚಾರು ಕಂಚುಕದೊಳಗಿನ ಕುಚವಣ್ಣ
ಸೀರೆಯ ಬಿಗಿದುಟ್ಟ ಹೆಣ್ಣ – ಅವಳ
ಓರೆನೋಟ ನೋಡಿ ಹಾರಬೇಡಣ್ಣ ೨
ಹಸಿವು ಇಲ್ಲರ ಸವಿಯೂಟ – ತನ್ನ
ವಶಕೆ ಬಾರದ ಪರಹಸ್ವಿನ ಕೂಟ
ದೆಸೆದೆಸೆಗಪಕೀರ್ತಿಯಾಟ – ನಮ್ಮ
ವಸುಧೀಶ ಪುರಂದರವಿಠಲನೊಳ್ನೋಟ ೩

೧೪೪
ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.
ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |
ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪ
ಭಾರತ – ರಾಮಾಯಣ ಪಂಚರಾತ್ರಾಗಮ |
ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು ೧
ಹರಿಯ ಪಾದಾಂಬುಜಯುಗಳವ ನೆನೆವ ಭ – |
ಕ್ತರ ಪಾದದರಜ ಒಳಗೆ ಬಿದ್ದೀತೆಂದು ೨
ಮಂಗಳ ಮೂರುತಿ ಪುರಂದರವಿಠಲನ |
ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು ೩

೧೭೨
ಕರವ ಮುಗಿದ-ಮುಖ್ಯಪ್ರಾಣ-ಕರವ ಮುಗಿದ ಪ
ಕರವ ಮುಗಿದ ಶ್ರೀಹರಿಗೆ ತಾನೆದುರಾಗಿ
ದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪ
ಜೀವೇಶ್ವರೈಕ್ಯವು ಜಗತು ಮಿಥ್ಯವೆಂದು
ಈ ವಿಧ ಪೇಳುವ ಮಾಯಿಗಳನಳಿಯೆಂದು ೧
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬ
ಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು ೨
ತಾರತಮ್ಯ ಪಂಚಭೇದ ಸತ್ಯವೆಂದು
ಮಾರುತ ಮತ ಪೊಂದಿದವರನು ಪೊರೆಯೆಂದು ೩
ಪರಿಪರಿ ಭಕ್ತರು ಹೃದಯ ಕಮಲದೊಳು
ನಿರುತ ಮಾಡುವ ಪೂಜೆ ನಿನಗರ್ಪಿತವೆಂದು ೪
ಹರಿಯ ಮನೋಗತವರಿತು ಮಾಡುವೆನೆಂದು
ಪುರಂದರ ವಿಠಲನ ಚರಣದ ಬಳಿಯಲ್ಲಿ ೫

೨೬೪
ಕರುಣಾಕರ ನೀನೆಂಬುವುದೆತಕೊ |
ಭರವಸೆ ಇಲ್ಲೆನಗೆ ಪ
ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |
ಪೊರೆದವ ಭವದಲಿ ನೀನಂತೆ ||
ಅರಿತು ವಿಚಾರಿಸಿ ನೋಡಲಿದೆಲ್ಲವು |
ಪರಿಪರಿ ಕಂತೆಗಳಂತಿದೆ ಕೃಷ್ಣ ೧
ಕರುಣಾಕರ ನೀನಾದರೆ ಈಗಲೆ |
ಕರಪಿಡಿದೆನ್ನನು ನೀ ಕಾಯೊ ||
ಸರಸಿಜಾಕ್ಷನೇ ಅರಸು ನೀನಾದರೆ |
ದುರಿತಗಳೆನ್ನನು ಪೀಡಿಪುದುಂಟೆ ೨
ಮರಣ ಕಾಲದಲಿ ಅಜಮಿಳಗೊಲಿದೆಯೊ |
ಗರುಡಧ್ವಜನೆಂಬ ಬಿರುದಿನಿಂದ ||
ವರ ಬಿರುದುಗಳ್ನಿನಗುಳಿಯಬೇಕಾದರೆ |
ತ್ವರಿತದಿ ಕಾಯೋ ಪುರಂದರವಿಠಲ ೫

೨೬೨
ಕರುಣಿಸಿ ಕೇಳು ಕಂದನ ಮಾತನು
ಗರುಡ ವಾಹನ ಗಂಗಾಜನಕ ಶ್ರೀಹರಿಯೇ ಪ
ಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||
ತತ್ತರ ಪಡುತಿಹೆ ತಾವರೆಲೆಯ ನೀರಂತೆ
ಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ ೧
ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲ
ಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||
ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲ
ಬಿಂದು ಮಾತ್ರದ ಸುಖ ಕಾಣಿ ನಾ ಹರಿಯೇ೨
ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀ ಹರಿ
ಅಲ್ಲ ತಿಂದಿಲಿಯಂತೆ ಬಳಲುವೆನೊ ||
ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನ
ಸಲ್ಲದ ನಾಣ್ಯವ ಮಾಡುವರೆ ಹರಿಯೇ ೩
ನಖ ಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆ
ಸುಖವೆಂಬುದನು ಕಾಣೆ ಸ್ವಪ್ನದಲು
ಮುಖವರಿಯದ ರಾಜ್ಯಕ್ಕೆನ್ನನು ಎಳತಂದು
ಕಕಮಕ ಮಾಡುವುದುಚಿತವೆ ಹರಿಯೇ ೪
ಇಷ್ಟುದಿವಸ ನಿನ್ನನೆನೆಯದ ಕಾರಣ
ಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||
ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ
ವಿಟ್ಟು ಸಲಹೊ ಶ್ರೀ ಪುರಂದರ ವಿಠಲ ೫

೨೬೩
ಕರುಣಿಸೋ ರಂಗಾ ಕರುಣಿಸೋ ಪ
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪ
ರುಕುಮಾಂಗದನಂತೆ ವ್ರತವನಾನರಿಯೆನು
ಶುಕಮುನಿಯಂತೆ ಸ್ತುತಿಸಲರಿಯೆ ||
ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇ
ವಕಿಯಂತೆ ಮುದ್ದಿಸಲರಿಯೆನು ರಂಗಾ ೧
ಗರುಡನಂತೆ ಪೊತ್ತು ತಿರುಗಲರಿಯೆ ನಾನು
ಕರಿರಾಜನಂತೆ ಕರೆಯಲರಿಯೆ ||
ಮರಕಪಿಯಂತೆ ಸೇವೆಯ ಮಾಡಲರಿಯೆನು
ಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ ೨
ಬಲಿಯಂತೆ ದಾನವ ಕೊಡಲರಿಯೆನು ಭಕ್ತಿ
ಛಲವನರಿಯೆ ಪ್ರಹ್ಲಾದನಂತೆ ||
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರದೇವ ಪುರಂದರ ವಿಠಲ ೩

೧೪೫
ಕರ್ಮಬಂಧನ ಛೇದನ – ಶ್ರೀ – |
ರಾಮನ ನಾಮವ ನೆನೆ ಮನವೆ ಪ.
ಅರ್ಚಿಸಲರಿಯೆನು ಪೂಜಿಸಲರಿಯೆನು |
ಮೆಚ್ಚಿಸಲರಿಯೆನೆಂದೆನ ಬೇಡ ||
ಅಚ್ಯುತಾನಂತ ಗೋವಿಂದನ ನಾಮವ |
ಇಚ್ಛೆ ಬಂದಾಗಲೆ ನೆನೆ ಮನವೆ ೧
ಸ್ನಾನವನರಿಯೆನು ಧ್ಯಾನವನರಿಯೆನು |
ಏನನು ಅರಿಯೆನೆಂದೆನಬೇಡ ||
ಜಾನಕಿರಮಣನ ದಶರಥನಂದನ |
ದಾನವನಾಶನ ನೆನೆ ಮನವೆ ೨
ಮಂತ್ರವನರಿಯೆನು ತಂತ್ರವನರಿಯೆನು |
ಎಂತು ಅರಿಯೆನೆಂದೆನಬೇಡ ||
ಸಂತತಾನಂತ ಗೋವಿಂದನ ನಾಮವ |
ಅಂತರಂಗದೊಳು ನೆನೆ ಮನವೆ ೩
ಜಪವ ನಾನರಿಯೆನು ತಪವ ನಾನರಿಯೆನು |
ಉಪವಾಸವರಿಯೆನೆಂದೆನಬೇಡ ||
ಅಪರಿಮಿತ ಗುಣಗಳ ಅನಂತಮಹಿಮನ |
ಕೃಪೆಯ ಸಮುದ್ರನ ನೆನೆ ಮನವೆ ೪
ಕಲಿಯುಗದೊಳು ಹರಿನಾಮವ ನೆನೆದರೆ |
ಕುಲಕೋಟಿಗಳುದ್ಧರಿಸುವುವು ||
ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |
ಜಲರುಹನಾಭನ ನೆನೆ ಮನವೆ ೫
ತಾಪತ್ರಯಗಳ ತಪ್ಪಿಸಿ ಸುಜನರ |
ಪಾಪಗಳೆಲ್ಲವ ಪರಿಹರಿಸುವುದು ||
ಶ್ರೀಪತಿ ಸದಮಲಧ್ಯಾನಗೋಚರನ |
ಗೋಪೀನಾಥನ ನೆನೆ ಮನವೆ ೬
ವರದ ವೀರನಾರಾಯಣ ಸ್ವಾಮಿಯು |
ಪರಮಪಾವನನು ಹಿತನಾಗಿ ||
ಹರಿಯದ ಇಹಪರ ಕೊಡುವ ಸುಖಂಗಳ |
ಪುರಂದರವಿಠಲನ ನೆನೆ ಮನವೆ ೭

೧೪೬
ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.
ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |
ಗುರುಹಿರಿಯರೊಳು ದೋಷವೆಣಿಸುತಿಹರು |
ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |
ತರುಣಿಯರ ನುಡಿಗಳನು ಲಾಲಿಸುತ್ತಿಹರು ೧
ಕಂಡುದನೆ ಹೇಳರು ಕಾಣದನೆ ಹೇಳುವರು |
ಉಂಡ ಮನೆಗೆರಡನ್ನೆ ಎಣಿಸುತಿಹರು ||
ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |
ದಂಡಿಸುವರಿಂಗೆ ಧನಗಳನು ಕೊಡುತಿಹರು ೨
ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |
ಒಳ್ಳೆಯವರೊಡನೆ ವಂಚನೆ ಮಾಳ್ಪರು ||
ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |
ಬಲ್ಲಿದವರಿಗೆ ಬಾಯ ಸವಿಯನುಣಿಸುವರು ೩
ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |
ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||
ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |
ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು ೪
ಮಾಡಿದುಪಕಾರವನು ಮರೆತುಕಳೆವರು ಮತ್ತೆ |
ಕೂಡಾಡಿ ಬೇಡುವರು ಕುಟಿಲತ್ವದಿಂದ ||
ರೂಢಿಗೊಡೆಯನು ನಮ್ಮ ಪುರಂದರವಿಠಲನ |
ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ ೫

೮೦
ಕಲ್ಯಾಣಂ ತುಳಸೀ ಕಲ್ಯಾಣಂ ಪ
ಕಲ್ಯಾಣವು ನಮ್ಮ ಕೃಷ್ಣ ಶ್ರೀ ತುಳಸಿಗೆ |
ಬಲ್ಲಿದ ಶ್ರೀವಾಸುದೇವನಿಗೆ ಅ.ಪ
ಅಂಗಳದೊಳಗೆಲ್ಲ ತುಳಸೀವನವ ಮಾಡಿ |
ಶೃಂಗಾರವ ಮಾಡೆ ಶೀಘ್ರದಿಂದ ||
ಕಂಗಳ ಪಾಪವ ಪರಿಹರಿಸುವ ಮುದ್ದು |
ರಂಗಬಂದಲ್ಲಿ ನೆಲಸಿಹನು ೧
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು |
ತಂದ ಶ್ರೀಗಂಧಾಕ್ಷತೆಗಳಿಂದ ||
ಸಿಂಧುಶಯನನ ವೃಂದಾವನದಲಿ ಪೂಜಿಸೆ |
ಕುಂದದ ಭಾಗ್ಯ ಕೊಡುತಿಹಳು ೨
ಉತ್ಥಾನ ದ್ವಾದಶಿ ದಿವಸದಲ್ಲಿ ಕೃಷ್ಣ-|
ಉತ್ತಮ ತುಲಸಿಗೆ ವಿವಾಹವ ||
ಚಿತ್ತ ನಿರ್ಮಲರಾಗಿ ಮಾಡಿದವರಿಗೆ |
ಉತ್ತಮ ಗತಿ¬ೂವ ಪುರಂದರವಿಠಲ ೩

೧೪೭
ಕಲ್ಲುಸಕ್ಕರೆ ಕೊಳ್ಳಿರೊ – ನೀವೆಲ್ಲರು |
ಕಲ್ಲುಸಕ್ಕರೆ ಕೊಳ್ಳಿರೊ ಪ.
ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |
ಫುಲ್ಲನಾಭ ಕೃಷ್ಣನ ದಿವ್ಯನಾಮವೆಂಬ ಅ.ಪ
ಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |
ಒತ್ತೊತ್ತಿ ಗೋಣಿಯ ತುಂಬುವುದಲ್ಲ ||
ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |
ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ ೧
ನಷ್ಟಬೀಳುವುದಲ್ಲ ನಾಶವಾಗುವುದಲ್ಲ |
ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||
ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |
ಪಟ್ಟಣದೊಳಗೊಂದು ಲಾಭವೆನಿಸುವಂಥ ೨
ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |
ಎಂತು ಮಾರಿದರದಕಂತವಿಲ್ಲ ||
ಸಂತತ ಪುರಂದರವಿಠಲನ ನಾಮವ |
ಎಂತು ನೆನೆಯಲು ಪಾಪ ಪರಿಹಾರವಲ್ಲದೆ ೩

೫೫
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ
ಭ್ರಷ್ಟಮಾನವ ಹಣೆಯ ಬರಹವನ್ನದೆ ಇಲ್ಲ ಪ
ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ
ಪರಿಪರಿಯಲಿ ವಿದ್ಯ ಕಲಿತರಿಲ್ಲ
ನರಿಯ ಬುಧ್ಧಿಯಲಿ ನಡೆದುಕೊಂಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರಿಲ್ಲ ೧
ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ
ಕಂಡಕಂಡವರಿಗೆ ಕೈ ಮುಗಿದರಿಲ್ಲ
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ
ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ೨
ಕಟ್ಟಾಳು ಕಂಡು ಜಾಣನಾಗಿ ಪುಟ್ಟಿದರಿಲ್ಲ
ಬೆಟ್ಟಗಳನು ಕಿತ್ತಟ್ಟರಿಲ್ಲ
ಸೃಷ್ಟಿಯೊಳು ಪುರಂದರವಿಠಲರಾಯ
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ* ೩

೧೪೮
ಕಷ್ಟವಾವುದು ಸುಖವದಾವುದಯ್ಯ ಪ.
ಹೊನ್ನಳ್ಳವಗೆ ಬಂದ ದಾರಿದ್ರ್ಯ ಬಲು ಕಷ್ಟ
ಅನ್ಯರ ಮನೆಯ ಸೇರುವುದು ಬಹುಕಷ್ಟ
ಅನ್ಯಾಯವಿರದೆ ಅಪಕೀರ್ತಿ ಹೊರುವುದು ಕಷ್ಟ
ಗನ್ನಘಾತಕವ ಮಾಡುವುದು ಕಷ್ಟವಯ್ಯ ೧
ಉದ್ಯೋಗದಲಿ ಒಳ್ಳೆ ಲಾಭವಾದರೆ ಸುಖವು
ಬಧ್ಧನುಡಿ ನುಡಿಯುವುದು ಬಹಳ ಸುಖವು
ಗುದ್ದಾಟವಿರದಣ್ಣ – ತಮ್ಮರಿದ್ದರೆ ಸುಖವು
ಬುದ್ಧಿವಂತನಾಗಿ ಬಾಳುವುದು ಸುಖವಯ್ಯ ೨
ಮತ್ಸರವಿರದ ಸೊಸೆಯು ಮನೆಗೆ ಬಂದರೆ ಸುಖವು
ಪುತ್ರ ತಾ ಬುದ್ಧಿವಂತನಾದರೆ ಸುಖವು
ಹಸ್ತವನು ಎತ್ತಿ ದಾನವನು ಕೊಡುವುದು ಸುಖವು
ವಸ್ತ್ರವನು ಮಾಸದುಡುವುದು ಬಹಳ ಸುಖವಯ್ಯಾ ೩
ಭೂತಳದಿ ಸಮ್ಮತನು ಆಗಿ ಬಾಳ್ವದು ಸುಖವು
ಭೂತೇಶನಾ ಪ್ರೀತಿ ಬಹಳ ಸುಖವು
ನೀತಿ ನಡೆಯನು ನಡೆವುದೇ ಸುಖವು ಹಿರಿಯರ
ಮಾತುಗಳ ನಡೆಸುವುದು ಬಹಳ ಸುಖವಯ್ಯ ೪
ಆಧಾರವಿಲ್ಲದಲೆ ಸಾಲ ಕೊಡುವುದು ಕಷ್ಟ
ಮಾದ ಹುಣ್ಣದು ಮತ್ತೆ ಹುಟ್ಟಿದರೆ ಕಷ್ಟ
ಹಾದಿಯನು ಬರಿಗಾಲಿನಿಂದ ನಡೆಯುವುದು ಕಷ್ಟ
ಆದಿ ಮೂರುತಿ ಪುರಂದರವಿಠಲರಾಯ ೫

ಕಳವು ಕಲಿಸಿದೆಯಮ್ಮ ಗೋಪಿ ಕಮಲನಾಭಗೆ | ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪ
ಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವ ಹಚ್ಚಿ ಹಾರವ ಹಾಕಿ ||
ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ ೧
ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||
ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ ೨
ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||
ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ ೩

೮೧
ಕಳವು ಕಲಿಸಿದೆಯಮ್ಮ ಗೋಪಿ ಕಮಲನಾಭಗೆ |
ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪ
ಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |
ಗೀರುಗಂಧವ ಹಚ್ಚಿ ಹಾರವ ಹಾಕಿ ||
ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |
ವಾರಿಜನಾಭನ ಕಳುಹಿದೆ ವನಜನಯನನ ೧
ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |
ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||
ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |
ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ ೨
ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |
ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||
ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |
ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ ೩
ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |
ದೂರುಬಡಕರೆಂದು ಗೋಪಿ ಬಯ್ವೆ ನಮ್ಮನು ||
ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |
ವಾರಿಜನಾಭನ ಕರೆದು ಬುದ್ಧಿಯ ಹೇಳೆ ೪
ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |
ಇಟ್ಟುಕೊಂಡೀರೇಳು ಭುವನ ಉದರದಲ್ಲಿಯೆ ||
ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |
ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ ೫

೮೨
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |
ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|
ನಾಗಸಂಪಿಗೆ ಅರಳಲು ಪ
ಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |
ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||
ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |
ನಿದ್ದೆ ತಿಳಿದೇಳಯ್ಯ ಕೃಷ್ಣ ೧
ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |
ಹೊಸದಾದ ಹಸುವಿನೀ ತುಪ್ಪವನ್ನು ||
ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |
ಹಸುಳೆ ನಿನಗಾರೋಗಣೆಗೆ ಮಾಡುವೆ ೨
ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |
ಕಂದರೊಳಗತಿ ನೀನು ಹಟಿಯಾದೆಯ ||
ಇಂದು ನೀನತ್ತರೇ ಎತ್ತಿಕೊಳ್ಳುವರಿಲ್ಲ |
ಕಂದ ಅಳಬೇಡವೊ ಪುರಂದರವಿಠಲ ೩

೨೬೬
ಕಾಯಬೇಕೆನ್ನ ಗೋಪಾಲ ಬಂದು |
ಪಾಯ ವನರಿಯೆನು ಭಕುತರ ಪಾಲ ಪ
ಹಲವು ಜನ್ಮಗಳೆತ್ತಿ ಬಂದೆ-ಮಾಯಾ-|
ಮಲವೆಂಬುದರಿಯದೆ ಭವದೊಳು ನೊಂದೆ ||
ಬಲು ಭಯವಾಯಿತು ಮುಂದೆ-ನೀನು-|
ಸುಲಭನೆಂದು ಕೇಳಿ ಶರಣೆಂದೆ ತಂದೆ ೧
ವಿತ್ತದೊಳಗೆ ಮನವಿಟ್ಟು-ನಿನ್ನ-|
ಉತ್ತಮ ನಾಮದ ಸ್ಮರಣೆಯ ಬಿಟ್ಟು ||
ಮತ್ತನಾದೆನು ಮತಿಗೆಟ್ಟು-ಇದ-|
ಚಿತ್ತದಲಿ ತಿಳಿದಿ ಬಲು ದಯವಿಟ್ಟು ೨
ಜರುಗಿದ ಪಾಪಂಗಳೆಲ್ಲ-ಅನ್ಯ-|
ನರರೇನ ಬಲ್ಲರು ಯಮಧರ್ಮ ಬಲ್ಲ ||
ನರಕಕೆ ಒಳಗಾದೆನಲ್ಲ-ಸಿರಿ-|
ವರನಾರಾಯಣ ಪುರಂದರವಿಠಲ ೩

೨೬೭
ಕಾಯಲಾರೆನು ಕೃಷ್ಣಕಂಡವರ ಬಾಗಿಲನು |
ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪ
ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |
ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||
ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |
ಒದಗಿ ಸೇವೆಯ ಮಾಡಿ ಅವರ ಬಾಗಿಲನು೧
ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |
ತೈಲವನು ತೆಗೆದಾದರುಣಲು ಬಹುದು ||
ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |
ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ೨
ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |
ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |
ಅಂತ್ಯವ ನಾ ಕಾಣೆ ಆದರಿಸುವರಿಲ್ಲ |
ಚಿಂತೆಯ ಬಿಡಿಸಯ್ಯ ಪುರಂದರ ವಿಠಲ೩

೧೪೯
ಕಾಳಬೆಳದಿಂಗಳು – ಈ ಸಂಸಾರ –
ಕತ್ತಲೆ ಬೆಳುದಿಂಗಳು ಪ.
ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |
ವ್ಯರ್ಥ ಭಂಢಾರವೆಲ್ಲವನು ಸೋತು ||
ಬತ್ತಲೆ ಪೋಗಿ ವಿರಾಟನ ಮನೆಯೊಳು |
ತೊತ್ತಾದಳು ದ್ರೌಪದಿ ಒಂದು ವರುಷ ೧
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |
ಬೆಂಬತ್ತಿ ತಿರುಗುತಲಿಪ್ಪರು ||
ಎಂಬಾತಗೆ ನೋಡಿ ಬಡತನ ಬಂದರೆ |
ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ ೨
ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |
ಬಂಟರಂತೆ ಬಾಗಿಲ ಕಾಯ್ವರು |
ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |
ಹೆಂಟೆಯಾಗಿ ತಿರುಗುತಿಪ್ಪರಯ್ಯ ೩
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ – |
ಕೊಂಡು ಸಾರಥಿಯಾದ ಫಲ್ಗುಣನ ||
ಮಂಡಲವಾಳವ ಹರಿಶ್ಚಂದ್ರರಾಯನು ||
ಕೊಂಡು ಕಾಯ್ದ ಚಂಡಾಲನ ಮನೆಯ ೪
ನೊಂದಿತು ಕಾಯವು ಬೆಂದಿತು ಒಡಲು |
ಬೆಂದ ಒಡಲಿಗಾಗಿ ಹಾಸ್ಯಮಾಡಿ ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |
ತೊಂಡನಾಗಿ ನೀ ಸುಖವಾಗಿ ಬಾಳು * ೫

೮೩
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |
ಕೇಳಲೊಲ್ಲನು ಎನ್ನ ಮಾತನು ಪ
ದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |
ಬೆಟ್ಟಕೆ ಬೆನ್ನಾತು ನಿಂತನೆ ||
ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ೧
ಮೂರಡಿ ಭೂಮಿಯ ಬೇಡಿದನೆ-ನೃಪರ |
ಬೇರನಳಿಯೆ ಕೊಡಲಿ ಪಿಡಿದನೆ ||
ನಾರಮಡಿಯನುಟ್ಟು ಬಂದನೆ-ಅಹ |
ಚೋರತನದಿ ಪಾಲ್ಬೆಣ್ಣೆಯ ತಿಂದನೆ ೨
ಬತ್ತಲೆ ನಾರಿಯರನಪ್ಪಿದ-ಹೋಗಿ ||
ಉತ್ತಮಾಶ್ವವನು ಹತ್ತಿದ ||
ಹತ್ತವತಾರವ ತಾಳಿದ-ನಮ್ಮ |
ಭಕ್ತವತ್ಸಲ ಸ್ವಾಮಿ ಪುರಂದರವಿಠಲನು ೩

೧೬
ಕುಳಿತೆಯ ಕೃಷ್ಣ ಕುಳ್ಳಿರ ಕಲಿತೆಯ |
ಕುಳಿತೆಯ ಎನ್ನೊಡೆಯ ಪ
ಇಳೆಯೊಳು ಭಕುತರ ಹೃದಯ ಕಮಲದೊಳು |
ಕುಳಿತೆಯ ಎನ್ನೊಡೆಯ ಅ.ಪ
ಜಲಚರರೂಪದಿ ನಿಗಮಗಳೆಣಿಸುತ ಕುಳಿತೆಯ ಎನ್ನೊಡೆಯ |
ಕುಲಗಿರಿಗಳನೆಲ್ಲ ನೆಗಹಿಕೂರ್ಮನಾಗಿ ಕುಳಿತೆಯ ಎನ್ನೊಡೆಯ ||
ಛಲದಿ ವರಾಹನಾಗಿ ಭೂಮಿದೇವಿಯ ತಂದುಕುಳಿತೆಯ ಎನ್ನೊಡೆಯ
ಖಳಹಿರಣ್ಯಾಖ್ಯನ ಕರುಳಬಗಿವೆನೆಂದುಕುಳಿತೆಯ ಎನ್ನೊಡೆಯ ೧
ತೊಡೆ ವಟುವೇಷವ ಸುರರ ರಕ್ಷಿಪೆನೆಂದುಕುಳಿತೆಯ ಎನ್ನೊಡೆಯ |
ಪೊಡವಿಯ ಕ್ಷತ್ರಿಯ ವಂಶ ಸವರುವೆನೆಂದುಕುಳಿತೆಯ ಎನ್ನೊಡೆಯ ||
ಮಡದಿಯ ಒಯ್ದನ ಕೆಡಹಿ ಲಂಕೆಯಲಿಕುಳಿತೆಯ ಎನ್ನೊಡೆಯ |
ಕಡುಮೂರ್ಖ ಕೌರವನನ್ನು ಕೊಲುವೆನೆಂದುಕುಳಿತೆಯ ಎನ್ನೊಡೆಯ೨
ತ್ರಿಪುರರ ಸತಿಯರ ವ್ರತವ ಕೆಡಿಪೆನೆಂದುಕುಳಿತೆಯ ಎನ್ನೊಡೆಯ |
ಉಪಸನಿಷದ್ವಾಹನ ತೇಜಿಯ ಬೆನ್ನಲಿಕುಳಿತೆಯ ಎನ್ನೊಡೆಯ |
ಕೃಪೆಯಿಂದಲಿ ಮನದೊಳು ನೆನೆವವರಲಿಕುಳಿತೆಯ ಎನ್ನೊಡೆಯ |
ಕಪಟನಾಟಕ ಸಿರಿ ಪುರಂದರವಿಠಲ ಕುಳಿತೆಯ ಎನ್ನೊಡೆಯ ೩

೮೪
ಕೂಗದೆ ಉಸುರಿಕ್ಕದೆ- ನೀವು |
ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪ
ಹೆಜ್ಜೆಗಳಿವೆಕೋ ಮನೆಯಲಿ-ಕಾಲ |
ಗೆಜ್ಜೆಯ ದನಿ ಕೇಳಬರುತಲಿದೆ ||
ನಿರ್ಜರಪತಿ ತನ್ನ ಮನಸಿಗೆ ಬಂದಂತೆ |
ಮಜ್ಜಿಗೆ ಓಕುಳಿ ಆಡಿಹನಕ್ಕ ೧
ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |
ಓರಗೆ ಮಕ್ಕಳುಗಳ ನಿಲ್ಲಿಸಿ ||
ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |
ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ ೨
ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |
ಮೇಲಿನ ಕೆನೆಗಳು ಬಳಿದಿಹವೆ ||
ಬಾಲಚೋರ ಶ್ರೀ ಪುರಂದರವಿಠಲನು |
ಚಾಲುವರಿದರಿನ್ನು ಬಿಡಬಾರದಕ್ಕ ೩

೮೫
ಕೂಡಿಕೊಂಡಾಡಲೊಲ್ಲರೊ-ರಂಗಯ್ಯ ನಿನ್ನ |
ಕೂಡಿಕೊಂಡಾಡಲೊಲ್ಲರೊ ಪ
ಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪ
ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |
ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು ೧
ತರಳ ಪುಟ್ಟನೆಂದು ಕರೆದು ಸಲಹಿದರೆ |
ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ ೨
ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |
ಠಾವವಿಲ್ಲ ಮಾಡಿದ ಕೇವಲ ಹೀನನೆಂದು ೩
ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |
ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು ೪
ಕರುಣಾಕರ ಸಿರಿ ಪುರಂದರವಿಠಲನೆ |
ಧರೆಯ ನರರು ನಿನ್ನ ಚರಿಯ ಪರಿಯ ಕಂಡು ೫

೧೭೩
ಕೂಸನು ಕಂಡಿರಾ-ಮುಖ್ಯಪ್ರಾಣನ ಕಂಡಿರಾ ಪ
ಅಂಜನೆಯುದರದಲಿ ಹುಟ್ಟಿತು ಕೂಸು
ರಾಮರ ಪಾದಕ್ಕೆರಗಿತು ಕೂಸು ||
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನು ಸುಟ್ಟಿತು ಕೂಸು ೧
ಬಂಡಿಯನ್ನವನುಂಡಿತು ಕೂಸು |
ಬಕನ ಪ್ರಾಣವ ಕೊಂಡಿತು ಕೂಸು ||
ವಿಷದ ಲಡ್ಡುಗೆಯ ಮೆದ್ದಿತು ಕೂಸು |
ಮುಡದಿಗೆ ಪುಷ್ಪವ ತಂದಿತು ಕೂಸು ೨
ಮಾಯಾವಾದಿಗಳ ಗೆದ್ದಿತು ಕೂಸು |
ಮಧ್ವಮತವನ್ನುದ್ಧರಿಸಿತು ಕೂಸು ||
ಮುದ್ದು ಶ್ರೀ ಪುರಂದರ ವಿಠಲನ ದಯದಿಂದ |
ಉಡುಪಿಯಲ್ಲಿ ಬಂದು ನಿಂತಿತು ಕೂಸು ೩

೮೬
ಕೂಸು ಕಂಡೆವಮ್ಮ-ಅಮ್ಮ ನಿಮ್ಮ-
ಕೂಸು ಕಂಡೆವಮ್ಮ ಪ
ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |
ಶೇಷಗಿರಿಯ ಮೇಲೆ ವಾಸವಾಗಿಪ್ಪನೆ ೧
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |
ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ೨
ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |
ಒಡ್ಡಿ ಜಗನ್ನಾಥ ಗಿಡ್ಡಾಗಿಪ್ಪನೆ ೩
ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |
ಹಡಗನೇರಿ ಬಂದು ಉಡುಪಿಯಲಿಪ್ಪನೆ೪
ಮಂಗಳರೇಖೆ ಪದಂಗಳುಳ್ಳ ನಿಮ್ಮ |
ರಂಗ ಪುರಂದರವಿಠಲ ಶ್ರೀ ಕೃಷ್ಣ ೫

೧೫೦
ಕೃಷ್ಣ ಮಂತ್ರವ ಜಪಿಸೊ – ಏ ಮನುಜ |
ಕೃಷ್ಣ ಮಂತ್ರವ ಜಪಿಸೊ ಪ.
ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪ
ಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |
ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||
ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |
ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ ೧
ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |
ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||
ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |
ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ ೨
ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |
ಜೀವಗಳಿಗೆಲ್ಲ ಸಂಜೀವ ಮಂತ್ರ ||
ಪಾವನ ಮಾಡಿ ಪಾಲಿಪುದೀ ಮಂತ್ರ |
ದೇವ ಪುರಂದರವಿಠಲ ಮಹಾ ಮಂತ್ರ ೩

೨೬೫
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ ಪ
ಮಸ್ತಕದಲಿ ಮಾಣಿಕದ ಕಿರೀಟ
ಕಸ್ತುರಿ ತಿಲಕವು ಹೊಳೆವ ಲಲಾಟ ||
ಹಸ್ತದಿ ಕೊಳಲನೂದುವ ನರೆ ನೋಟ
ಕೌಸ್ತುಭದೆಡ ಬಲದೊಳು ಲೋಲಾಟ೧
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿವನ ಮಾಲೆಯಿಟ್ಟ ಕೊರಳು
ಉಗುರಿಗೆ ಹೊನ್ನ ಮುದ್ರಿಕೆಯಿಟ್ಟ ಬೆರಳು
ಸೊಗಸಿನ ನಾಭಿಯು ತಾವರೆ ಅರಳು ೨
ಉಡುದಾರ ಒಡ್ಯಾಣ ಸಕಲಾಭರಣ
ಬೆಡಗಿನ ಪೀತಾಂಬರ ರವಿಕಿರಣ ||
ಕಡಗ ಗಗ್ಗರ ಗೆಜ್ಜೆ ಇಕ್ಕಿದ ಚರಣ
ಒಡೆಯ ಪುರಂದರ ವಿಠಲನ ಕರುಣ೩

೧೫
ಕೃಷ್ಣೇತಿ ಮಂಗಳಂ ದಿವ್ಯನಾಮ ಪ
ಇಷ್ಟರಿಂದಲಿ ಭವಬಂಧನ
ನಷ್ಟವಾಗಿ ಹೋಹುದೋ ಅ.ಪ
ನಾರದಮುನಿ ತಾನು ನರಕ ಪಟ್ಟಣಕೆ ಹೋಗಿ
ವಾರೀಜನಾಭ ಎಂದು ಒದರಿದಾಗ ||
ಘೋರ ಪಾತಕವೆಲ್ಲ ದೂರವಾಗಿ ಹೋಯ್ತು
ಸೂರೆಯಾಯಿತು ಸ್ವರ್ಗಲೋಕವೆಲ್ಲ ೧
ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆ
ನಿಜಪದವಿಯೈದಿದನು ನಿಮಿಷದಲಿ ||
ಭುಜಗಭೂಷಣನು ತಾ ಶ್ರೀರಾಮನಾಮವ
ನಿಜಕಾಂತೆಯನು ಕರೆದು ಉಪದೇಶವಿತ್ತ೨
ಪಂಚಪಾಂಡವರನು ಪರಿಪಾಲಿಸಿತು ನಾಮ
ಪಾಂಚಾಲೀ ಮೊರೆ ಕೇಳಿ ಪೊರೆಯಿತು ನಾಮ ||
ವಂಚನೆ ಮಾಡಿ ಕೌರವರ ಮಡುಹಿ ನಿ –
ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ ೩
ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿ
ಕರಿರಾಜ ಹರಿಯೆಂದು ಮೊರೆಯಿಡಲು ||
ತ್ವರಿತದಿಂದಲಿ ಬಂದು ಕರಿಯನುದ್ಧರಿಸುತ
ಕರಿರಾಜವರದನೆಂದೆನಿಸಿಕೊಂಡ ನಾಮ೪
ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆ
ಅವನ ಮಲತಾಯಿ ಗರ್ಜಿಸಿದಳಾಗ ||
ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿ
ಸವಿಯಾದಚಲಪದವ ಪಡೆದನಾಗ ೫
ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆ
ಗಿರಿಯ ಶಿಖರದಿಂದೀಡಾಡಲು ||
ನರಹರೆ ನರಹರೆ ರಕ್ಷಿಸೆಂದನ್ನಲು
ನರಸಿಂಹ ರೂಪದಿಂದವನ ಪಾಲಿಸಿದ೬
ಕಂದನ ಅಪರಾಧವ ಕೇಳದೆ ನೃಪನು ತಾ
ನಂದತಿ ದಾರುಣ ಕಡಹದೋಳು ಕೆಡಹೆ ||
ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿ
ಬೆಂದು ಕಂದಿವ ಎಣ್ಣೆ ತಣ್ಣೀರಾಯಿತು ೭
ಅಸುರ ಬಾಧೆಗೆ ಸಿಲುಕಿ ಅಶೋಕವನದಲಿ
ಶಶಿಮುಖಿ ಬೀಜಮಂತ್ರವ ಜಪಿಸೆ ||
ಅಸುರನ ಕೊಂದು ಅಶೋಕವನವ ಬಿಡಿಸಿ
ವಸುಧೀ ಸುತೆಯ ಸಲಹಿದ ರಾಮನಾಮ ೮
ಪರಿಪರಿ ಭಕ್ತರನು ಪಾಲಿಸಿತು ಈ ನಾಮ
ಪರಮ ಮಂಗಲವು ಪಾವನವು ಈ ನಾಮ ||
ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮ
ಧರೆಯೊಳು ಸಿರಿ ಪುರಂದರ ವಿಠಲ ನಾಮ೯

೧೫೩
ಕೆಂಡಕ್ಕೆ ಗೊರಲಿ ಮುತ್ತುವುದುಂಟೆ
ಪಾಂಡುರಂಗನ ದಾಸರಿಗೆ ಭಯವುಂಟೆ ? ಪ.
ಆನೆ ಸಿಂಹನ ಕೂಡ ಅಣಕವಾಡುವುದುಂಟೆ
ಶ್ವಾನಗೆ ಹುಲಿಯೊಳು ಸರಸವುಂಟೆ ?||
ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನ
ಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ?೧
ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆ
ಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||
ಅತ್ತಿತ್ತ ಮನವನು ಹರಿಬಿಡದಲಿ ಏಕ
ಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ ೨
ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆ
ಹೇಮಗಿರಿಗೆ ವಜ್ರ ಸಿಡಿಯಲುಂಟೆ?
ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನ
ನಾಮಧಾರಿಗಳಿಗೆ ನರಕವುಂಟೆ ಸ್ವಾಮಿ? ೩

೧೫೨
ಕೆಟ್ಟಿತು ಕೆಲಸವೆಲ್ಲ – ಲೋಕದಿ ಕಾಮ
ನಟ್ಟುಳಿದಶನವಾಯಿತು ಪ.
ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ
ಬಿಟ್ಟು ಮುಂದಣ ಪಥವ – ಹೇ ದೇವಾ ಅಪ
ಸತ್ಯ ಕಾಮ ಕರ್ಮವು ಧರ್ಮದ ಬಲ
ಮತ್ತೆ ಅಡಗಿಹೋಯಿತು
ಎತ್ತ ನೋಡಲು ನೀಚವೃತ್ತಿಯೆ ತುಂಬಿ
ಅತ್ಯಂತ ಪ್ರಬಲವಾಯ್ತೋ ಹೇ ದೇವಾ ೧
ಹೊತ್ತು ಹೊತ್ತಿಗೆ ಹಲವು ಲಂಪಟತನದಲಿ
ಚಿತ್ತ ಚಂಚಲವಾಯಿತು
ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು
ಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ ೨
ಪೇಳುವುದೇನಿನ್ನು ದುರ್ಜನರ ಸಂಗ
ದೋಲಾಟ ಸೊಗಸಾಯಿತು
ಕೀಳು ಮೇಲು ಮೇಲು ಕೀಳಾಗಿ ನಡೆಯುವ
ಕಾಲ ವೆಗ್ಗಳವಾಯಿತೋ ಹೇ ದೇವಾ ೩
ಆಳುವ ಅರಸರಿಗೆಲ್ಲ ಕಾಂತನದಾಸೆ
ಮೇಲು ಮೇಲಾಯಿತಯ್ಯ
ನೀಲ ಮೇಘಶ್ಯಾಮ ನಿನ್ನಾಳೆಂಬರಿಗೆ
ಕೂಳು ಹುಟ್ಟದೆ ಹೋಯಿತೋ ಹೇ ದೇವಾ ೪
ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದ
ಅರಿವು ಇಲ್ಲದೆ ಹೋಯಿತು
ಕರಣಾಳು ಶ್ರೀ ಪುರಂದರವಿಠಲನೆ ನಿನ್ನ
ಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ ೫

೧೫೧
ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟ
ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.
ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದು
ಉರುವ ಮಾರಿಗೆ ಗ್ರಾಸವಾಗಬಹುದು
ಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದು
ಧರೆಯೊಳಗೆ ದಾರಿದ್ರವಾರಿಗೂ ಬೇಡವೋ ೧
ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದು
ಹಸಿದ ಹುಲಿಬಾಯಿ ತುತ್ತಾಗಬಹುದು
ಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನು
ಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು ೨
ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದು
ಒಡಲಾಸೆಗೊಲ್ಬುರಾಳಾಗಬಹುದು
ಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿ
ಬಡವನಾಗಿಯೇ ಬೇಡಿ ಉಣ್ಣಬಹುದು ೩

೨೬೮
ಕೆಟ್ಟೆನಲ್ಲೊ ಹರಿಯೆ |
ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪ
ಬಂದೆನು ನಾ-ತಂದೆ-ತಾಯಿಗಳುದರದಿ |
ಒಂದನೂ ಅರಿಯದೆ ಬಾಲಕತನದೊಳು ||
ಮುಂದುವರಿದ ಯೌವನದೊಳು ಸತಿ-ಸುತ-|
ರಂದವ ನೋಡುತ ನಿನ್ನ ನಾ ಮರೆತೆನೊ ೧
ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|
ಮಾನವಿಲ್ಲದೆ ಕುಲಹೀನರಾಶ್ರಯದಿಂದ ||
ಜ್ಞಾನಿಗಳೊಡನಾಟವಿಲ್ಲದೆ ಮನದೊಳು |
ದಾನ-ಧರ್ಮದ ಬಟ್ಟೆಯಂತೆಂದು ಮರೆತನು ೨
ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |
ಕದನವು ದಶದಿಕ್ಕಿನುದಯದ ರಾಯರ ||
ಎದೆನೀರು ಬತ್ತಿತು ಅದರಿಂದ ನಿನ್ನಯ |
ಪದಪದ್ಮಯುಗಳದ ತುದಿಯ ನಾ ಮರೆತೆನು ೩
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |
ಕಾಡೊಳಗಾಡುವ ಮೃಗದಂತೆ ಜೀವಿಸಿ ||
ಗೂಡೊಳಗಿರುತಿಹ ಗೂಬೆಯ ತೆರನಂತೆ |
ಮಾಡದೆ ನಿನ್ನಯ ಸ್ಮರಣೆಯ ಮರೆತೆನು ೪
ಬುದ್ದಿಹೀನನು ನಾನು ಉದ್ದರಿಸೆಲೊ ದೇವ
ಮುದ್ದು ಶ್ರೀ ಪುರಂದರ ವಿಠಲನೆನ್ನ ||
ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |
ಪೊದ್ದುವೆ ನಿನ್ನಯ ಚರಣಾರವಿಂದವ ೫

೧೭
ಕೇಶವ – ಮಾಧವ – ಗೋವಿಂದ ವಿಠಲೆಂಬದಾಸಯ್ಯ ಬಂದ ಕಾಣೆ ಪ.
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆಳನು ವೇದವನೊಯ್ಯೆ ಪೊಳೆವ ಕಾನಾದದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯಪೊತ್ತದಾಸಯ್ಯ ಬಂದ ಕಾಣೆ
ಇಳೆಯಕದ್ದ ಸುರನ ಕೋರೆದಾಡಿಯ ಅಳಿದ ದಾಸಯ್ಯ ಬಂದ ಕಾಣೆ
ಛಲದಿ ಕಂಬದಿ ಬಂದು ಅಸುರನ ಸೀಳಿದದಾಸಯ್ಯ ಬಂದ ಕಾಣೆ ೧
ಬಲಿಯ ದಾನವಬೇಡಿ ನೆಲವನಳೆದು ನಿಂದದಾಸಯ್ಯ ಬಂದ ಕಾಣೆ
ಮತಿತ ಕ್ಷತ್ರಿಯರ ಕು¯ವ ಸಂಹರಿಸಿದದಾಸಯ್ಯ ಬಂದ ಕಾಣೆ
ಲಲನೆಯ ನೊಯ್ಯೆ ತಾ ತಲೆ ಹತ್ತಾರನುಕೊಂದ ದಾಸಯ್ಯ ಬಂದ ಕಾಣೆ
ನೆಲ ಕೊತ್ತಿಕಂಸನ ಬಲವನಳಿದ ಮುದ್ದುದಾಸಯ್ಯ ಬಂದ ಕಾಣೆ ೨
ಪುಂಡತನದಿ ಪೋಗಿ ಪುರವನುರುಪಿ
ಬಂದ ದಾಸಯ್ಯ ಕಾಣೆ
ಲಂಡರಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ
ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರ ವಿಠಲ
ದಾಸಯ್ಯ ಬಂದ ಕಾಣೆ ೩

೧೫೪
ಕೇಶವ ನಾರಾಯಣ ಮಾಧವ – ಹರಿ |
ವಾಸುದೇವ ಎನಬಾರದೆ ? ಪ.
ಕೇಶವನ ನಾಮವನು ಏಸು ಬಾರಿ ನೆನೆದರೂ |
ದೋಷಪರಿಹವಪ್ಪುದು – ಏ ಜಿಹ್ವೆ ಅಪ
ಜಲಜನಾಭನ ನಾಮವು – ಈ ಜಗ – |
ದೊಳು ಜನಭಯಹರಣ ||
ಸುಲಭವೇದ್ಯನೆನಲೇಕೆ ಸುಖಕೆ ಸಾಧನವಿದು |
ಬಲಿಯೆಂಬ ಭಕ್ತನು ಬಗೆದು ರಸವನುಂಡು ಹೇ ಜಿಹ್ವೆ ೧
(ಎರಡನೇ ನುಡಿ ಇಲ್ಲ)
ಹೇಮಕಶ್ಯಪ ಸಂಹಾರ – ಭಕ್ತರು ನಿನ್ನ |
ನಾಮವ ಸವಿದುಂಬರು ||
ವಾಮನ ವಾಮನನೆಂದು ವಂದಿಸಿದವರಿಗೆ |
ಶ್ರೀಮದನಂತ ಪುರಂದರವಿಠಲನು
ಕಾಮಿತ ಫಲವೀವನು – ಹೇ ಜಿಹ್ವೆ ೩

೧೫೫
ಕೇಶವನೊಲುಮೆಯು ಆಗುವ ತನಕಹರಿದಾಸರೊಳಿರು ಮನವೆ
ಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರನುತಿಗಳ ಪೊಗಳುತ ಮನದೊಳು ಪ.
ಮೋಸದಿ ಜೀವಿಯ ಘಾಸಿ ಮಾಡಿದ ಫಲ ಕಾಶಿಗೆ ಹೋದರೆ ಹೋದೀತೆ
ದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆ
ಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆ
ಶಶಿವದನೆಯ ಅಧರಾಮೃತ ಸೇವಿಸಿಸುಧೆಯೆಂದಡೆ ನಿಜವಾದೀತೆ ೧
ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯಗಳು ಹೋದಿತೇ
ಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆ
ಭಾನುವಿಕಾಸನ ಭಜನೆಯ ಮಾಡದ ದೀನಗೆಮುಕುತಿಯು ದೊರಕೀತೆ ೨
ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯಮನಸಿಗೆ ತಿಳಿದೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ೩
ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆನರಕವು ತಪ್ಪೀತೆ
ತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆಮುಕ್ತಿಯು ದೊರಕೀತೆ
ಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆ
ಮಾಯಾವಾದಗಳ ಕಲಿತಾ ಮನುಜಗೆಕಾಯಕಷ್ಟ ಬರದಿದ್ದೀತೆ ೪
ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆ
ಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿರೋಗಗಳು ಬಿಟ್ಟೀತೆ
ಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆ
ಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ ೫
ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆ
ಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆ
ಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ ೬
ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆ
ಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆ
ಆರುಶಾಸ್ತ್ರವನು ಮೀರಿದ ಯೋಗಿಗೆ ತಾರಕ ಬ್ರಹ್ಮವು ತಪ್ಪೀತೆ
ವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * ೭

೧೫೭
ಕೇಳನೊ ಹರಿ ತಾಳನೋ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಪ.
ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲ ಧ್ವನಿಸಾರವಿದ್ದು ||
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ ೧
ನಾನಾಬಗೆಯ ಭಾವ ರಾಗ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು ||
ದಾನವಾರಿಯ ದಿವ್ಯ ನಾಮರಹಿತವಾದ
ಹೀನ ಸಂಗೀತ ಸಾಹಿತ್ಯವ ಮನವಿತ್ತು ೨
ಅಡಿಗಡಿಗಾನಂದ ಬಾಷ್ಪ ಪುಳಕದಿಂದ
ನುಡಿನುಡಿಗೂ ಶ್ರೀ ಹರಿಯೆನ್ನುತ ||
ದೃಢಭಕ್ತರನು ಕೊಡಿ ಹರಿಕೀರ್ತನೆಯ ಪಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ ೩

೮೭
ಕೇಳಲೊಲ್ಲನೆ ಎನ್ನ ಮಾತನು-ರಂಗ -|
ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪ
ಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |
ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||
ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ ೧
ಮೂರಡಿ ಭೂಮಿಯ ಬೇಡಿದನೆ-ನೃಪರ-|
ಬೇರ ಕಡಿಯಲು ಕೊಡಲಿ ತಂದನೆ |
ನಾರ ಸೀರೆಯನುಟ್ಟುಕೊಂಡನೆ-ಬೇಗ-|
ಚೋರತನದಿ ಹರವಿ ಹಾಲ ಕುಡಿದನಮ್ಮ ೨
ಬತ್ತಲೆ ನಾರಿಯರನಪ್ಪಿದ-ಬೇಗ-|
ಉತ್ತಮ ಅಶ್ವವ ಹತ್ತಿದ ||
ಹತ್ತವತಾರವನೆತ್ತಿದ-ನಮ್ಮ-|
ಸತ್ಯಮೂರುತಿ ಪುರಂದರವಿಠಲರಾಯನು ೩

೧೫೬
ಕೇಳು ಕೋಪಿಸಬೇಡ ಹೇಳಲಿಕಂಜುವೆ
ಬಾಳು ಬಡತನವ ನಾನು ಪ.
ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲ
ಬಲು ಭಂಡ ನಿನ್ನಯ ಕಿರಿಯ ಮಗ ||
ಲಲನೆಯು ಸೇರಿದಳು ಬಲು ಲೋಭಿಗಳ ಮನೆಯ
ಹೊಲಕುಲವರಿಯಳು ನಿನ್ನ ಸೊಸೆಯು ರಂಗ ೧
ಮಗಳ ಮಾರ್ಗವು ಡೊಂಕು | ಮೈದುನ ಗುರುದ್ರೋಹಿ
ಮಗನ ಮಗನು ಚಾಡಿಗಾರ
ಹಗರಣಕೆ ನೀಚರ ಹಣ್ಣು ಮೆದ್ದೆಂಜಲ
ಜಗದೊಡೆಯನೆನಿಸಿಕೊಂಡೆ – ನೀನುಂಡೆ ೨
ಲಕ್ಷ್ಮೀಪತಿಯು ಎನಿಸಿ ಭಿಕ್ಷೆ ಬೇಡಲು ಪೋದೆ
ಪಕ್ಷಿಯ ಪೆಗಲೇರಿ ರಾಜನೆನಿಸಿದೆ ||
ಸಾಕ್ಷಾತು ಪುರಂದರವಿಠಲನೆ ನಿನ್ನ ಗುಣ
ಲಕ್ಷಣ ಪೇಳಲಳವೆ – ಕಳೆವೆ೩

೮೮
ಕೇಳೆ ಗೋಪಿ ಗೋಪಾಲ ಮಾಡಿದ ಬಲು |
ದಾಳಿಯ ಗೋಕುಲದಿ ಪ
ತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |
ಹೇಳೆ ಕೃಷ್ಣವ ಕರೆದು ಅ.ಪ
ಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |
ಸುರಿದು ಪಾಲ್ಪೆಣ್ಣೆಗಳ ||
ಉರೋಜಗಳಿಗೆ ಕರ ಸರಿಸಿ ಕಣ್ಗಳನು |
ತೆರೆದು ನೋಡುವನೆ ನಮ್ಮ ೧
ಗಂಡನು ಮನೆಯೊಳಗಿರಲು ಬಂದು ಕೃಷ್ಣ |
ಭಂಡ ಮಾತುಗಳ ಬಹು ||
ತುಂಟತನದಲಾಡಿ ಉದ್ದಂಡ ಕಠಿಣಕಾಯ |
ದುಂಡುಕುಚವ ಪಿಡಿದ ೨
_______ವದ ಮೇಲಿರಲು ತಾ |
ಸೀರೆಯ ಸೆಳೆವ ನೋಡೆ ||
ಆರಿವರೆಂದು ವಿಚಾರಿಸಿ ನೋಡಲು |
ಮೋರೆಯ ಬಾಗಿದನೆ ೩
ಕೇರಿಯೊಳಗೆ ದಧಿ ಮಾರುತಿರಲು ಕೃಷ್ಣ |
ಸಾರಿ ಬಂದು ಮೊಸರ ||
ಸೂರೆಗೊಂಡು ಪರನಾರಿಯರ ನೆರೆದು ತಾ |
ಘೋರರೂಪದಿ ಮೆರೆದ ೪
ಆಡಲೇತಕೆ ನಮ್ಮ ಬಾಗಿಲಂಗಳದೊಳು |
ಬೇಡುವ ಜಲ ದೈನ್ಯದಿ ||
ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |
ಮಾಡುವ ರತಿ ಎಂಬನೆ ೫
ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |
ಉಡೆಮುಡಿ ಪಿಡಿದ ನೋಡೆ ||
ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |
ಕೊಡಲಿ ತೋರುವನೆ ಗೋಪಿ ೬
ಮಡದಿಯರೆಲ್ಲರು ಮಿಯುತಲಿರೆ ಮೈ |
ಉಡುಗೆಯ ತೆಗೆದುಕೊಂಡು ||
ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |
ಕೊಡದೆ ಅಡವಿಗೆ ನಡೆದ ೭
ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |
ಚಿಣ್ಣರ ಬಡಿವ ನೋಡೆ ||
ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |
ಬೆಣ್ಣೆಯ ತಿಂದಿರೆಂಬ ೮
ಏಣಲೋಚನೆ ಸರ್ಪವೇಣಿ ನಮ್ಮ ಮನೆ |
ಓಣಿಯೊಳಗೆ ಪೋಗುತ ||
ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |
ತ್ರಾಣವ ತೋರಿದನೆ ೯
ಪದುಮನಾಭನು ಪುರದ ಚದುರಿಯರಿಗೆ ತಾನು |
ಮದನಶಾಸ್ತ್ರವ ಪೇಳುತ ||
ಮುದದೊಳಗಿರಲವರೊಡೆಯ ಬರಲು ಕೃಷ್ಣ |
ಕುದುರೆಯ ನೇರಿದನೆ ೧೦
ಎಷ್ಟುಪದ್ರವ ಕೊಟ್ಟರು ಗೋಕುಲದೊಳು |
ಬಿಟ್ಟವನಿರಲಾರೆವೆ ||
ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|
ವಿಠಲ ಸಲಹುವನೆ ೧೧

೮೯
ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |
ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪ
ಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |
ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||
ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |
ಅಂಗನೆಯರ ಉತ್ತುಂಗ ಕುಚದಲಿಟ್ಟ ಕೈಯ ತೋರೊ ೧
ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |
ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||
ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |
ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ ೨
ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |
ಬಲ್ಲಿದ ಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||
ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |
ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ ೩
ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |
ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||
ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |
ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ ೪
ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |
ನಾಕಪತಿಗೆ ಅಭಯವನಿತ್ತ-ಕೈಯ ತೋರೊ |
ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |
ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ ೫

೧೮
ಕೊಟ್ಟಸಾಲ ಕೊಡದೆ ಭಂಡಾಟ ಮಾಡುತಿಹನೆ |
ಎಷ್ಟು ಕೇಳಿದರೆನಗೆ ಓಯೆನ್ನದಿಹನೆ ಪ
ಭರದಿ ಕೇಳಲು ಜಲದಿ ಕಣ್ಣ ಬಿಡುತಿಹನೆ |
ತರುಬಿ ಕೇಳಲು ಕಲ್ಲು ಹೊತ್ತು ನಿಂತಿಹನೆ ||
ಮರಳಿ ಕೇಳಲು ಊರ ಅಡವಿ ಸೇರುವನೆ |
ಇರುಳು ಹಗಲೆಲ್ಲ ಕಾಣಿಸಿಕೊಳ್ಳದಿಹನೆ ೧
ಕಂಡು ನಿಲ್ಲಿಸಲೊಂದು ಕಾಲಲಿ ನಿಲುವನೆ |
ಕೊಂಡ ಸಾಲಕೆ ಕೊಡಲಿ ಪಿಡಿದು ನಿಲ್ಲುವನೆ ||
ಉಂಡರಾಣಿಯೆಂದು ಉಪವಾಸವಿರುವನೆ |
ಬಂಡನಂದದಿ ಠಕ್ಕುಟೌಳಿ ನಡಿಸುವನೆ ೨
ಕೆಟ್ಟ ಬಯಲುಲಜ್ಜೆ ಹೇವ ತೊರೆಯುವನೆ |
ಕೊಟ್ಟು ಪೋಗೆನ್ನಲು ಕಲಿಯು ಆಗುವನೆ ||
ಸೃಷ್ಟಿಗೊಡೆಯ ಶ್ರೀರಂಗಪಟ್ಟಣದ ಪುರಂದರ |
ವಿಠಲೇಶನು ನಮ್ಮ ಪಶ್ಚಿಮರಂಗನಾಥನು ೩

೯೦
ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ-|
ಬಿಟ್ಟರಂಜುವನಲ್ಲ ಹೊರು ಕಲ್ಲ ಕೃಷ್ಣ ಪ
ಕಾಲನೂರಿ ಅಡಿಯಿಟ್ಟರೆ-ಭೂ-|
ಪಾಲನಾಣೆ ನರಸಿಂಗನೆ ||
ಏಳು ವರ್ಷ ಬಡ್ಡಿ ಮೂಲಸಹಿತವಾಗಿ |
ತಾಳುವನಲ್ಲವೊ ತಿರುಕ ಹಾರುವನೆ ೧
ಕೊರಳುಗೊಯ್ಕ ನೀನು ಸಾಲವ ತೆಗೆದು |
ತಿರುಗುವುದುಚಿತವೆ ವನವನವ ||
ಎರಡೇಳು ವರ್ಷಕೆ ಎನಗಿಂದು ಸಿಕ್ಕಿದೆ |
ಒರಳಿಗೆ ಕಟ್ಟದೆ ಬಿಡುವೆನೆ ಕೃಷ್ಣ ೨
ಬತ್ತಲೆ ನಿಂತರೂ ಬಿಡುವೆನೆ ನಿನ್ನ |
ಉತ್ತಮ ಗುಣಗಳ ತೋರಿದೆ ||
ಹತ್ತಿದ್ದ ಕುದುರೆ ಸಹಿತವಾಗಿ ಹಿಡಿತಂದು |
ಚಿತ್ತದಿ ಕಟ್ಟುವೆ ಪುರಂದರವಿಠಲ ೩

೧೯
ಕೊಡಬಹುದೇ ಮಗಳ – ಸಮುದ್ರರಾಜ
ಕೊಡಬಹುದೇ ಮಗಳ ಪ
ನಡೆದರೆ ಬಡವಹಳೆಂಬ ಕುಮಾರಿಯ |
ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನು ಅ.ಪ
ಕುರುಹಬಲ್ಲವರಾರು, ಕುಲಗೋತ್ರವಾವುದೊ |
ಅರಿತ ರಾಯರೊಳಗೆ ಆರ ಮಗನೊ ಇವ |
ವರುಶಭಾಂಗಿಗೆ ತಕ್ಕ ವರನಹುದೆ ಇವ |
ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |
ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |
ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,
ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |
ಅರುಣಚ್ಛಾಯೆಯ ರೇಖೆ ಅರಳಿಸಿ ಹಾರುವ ||
ಗರುಡಹಕ್ಕಿಯ ನೆಚ್ಚಿದ – ಎದೆಯ ಮೇಲೆ |
ಭರದಿ ಒದೆಯ ಮೆಚ್ಚಿದ – ಘೋರರೂಪ |
ಧರಿಸಿ ಕೋಪದಿ ಹೆಚ್ಚಿದ – ಕರೆವ ಗೋವ |
ಕರುಗಳ ಕೊರಳುಚ್ಚಿದ – ಸಂಸಾರದೊಳ್ |
ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ ೧
ಅಡಿಗಡಿಗೆ ಹತ್ತು ಅವತಾರವ ಮಾಡಿದ |
ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |
ಗಿಡದ ಮರೆಯಲಿದ್ದು ಕಪಿಯ ಕೊಂದನು ಹೊಲ್ಲ |
ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |
ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |
ಮಡುಹಿದ ಮಾವನ ಮಧುರೆಯೊಳಗೆ ಖುಲ್ಲ |
ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |
ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||
ಕಡಹದ ಮರವೇರಿದ – ಅವರ ಮಾನ – |
ಕೆಡಿಸಿ ಭಂಡರ ಮಾಡಿದ – ದಧಿಕ್ಷೀರ – |
ಗಡಿಗೆ ಸೂರೆಯ ಮಾಡಿದ – ಕಾಳಿಂಗನ – |
ಮಡುವ ಕಲಕಿ ನೋಡಿದ – ಸ್ಯಂದನವನು |
ನಡೆಸುವ ಕಾರಣ ನರಗೆ ಸಾರಥಿಯಾದ ೨
ಊದುತ ಕೊಳಲನರಣ್ಯದೊಳ್ ಗೋಗಳ |
ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |
ಓದನವನು ಬೇಡಿ ಹೊಟ್ಟೆಯ ಹೊರೆದನು |
ಯಾದವರೊಳಗಾಡಿ ಎಂಜಲನುಂಡನು |
ಕ್ರೋಧದಿಂದ ಸುರರ ಕೊಂದು – ಕೊಂದಿಡುವನು |
ಪಾದರಿ ಪೆಣ್ಣುಗಳೊಳಗಿರುತಿಪ್ಪನು
ಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |
ಭೂದಿವಿಜರ ಕೂಡ ಬಿಕ್ಷಕೆ ಪೋಪನು ||
ಮೇದಿನಿಯೊಳಗಿರುವ – ಮಸ್ತಕವು ಬೋ – |
ಳಾದವರೊಳಗಿರುವ – ನೋಡಲು ಭೇದಾ – |
ಭೇದದಂದದಿ ತೋರುವ – ಸಭೆಯೊಳಗೆ |
ಬೈದರೆ ಮೈದೋರುವ ಶೇಷಶಾಯಿ – |
ಯಾದಂಥ ಪುರಂದರ ವಿಠಲನೆಂದರಿಯದೆ ೩

೨೬೯
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|
ಕೊಡು ಕಂಡೆಯಾ ಹರಿಯೆ ಪ
ಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪ
ಒಡಲು ತುಂಬದು ಎಂದು ಬಳಲಿಸೆ ಬರಲಿಲ್ಲ |
ಸಡಗರದಿಂ ಭಾಗ್ಯ ಬೇಡಲಿಲ್ಲ ||
ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |
ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ೧
ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |
ನಾನಾಯೋನಿಗಳಲ್ಲಿ ಬಳಲಿ ಬಂದೆ ||
ದೀನರಕ್ಷಕ ನೀನೆ ದಯದಿಂದಲೆನಗಿನ್ನು |
ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ೨
ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |
ಅಲಸಿ ಕೋಟಲೆಯ ಸಂಸಾರದಿಂದ |
ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |
ಸಲಹೊ ದೇವರ ದೇವ ಪುರಂದರ ವಿಠಲ೩

೨೦೦
ಕೊಡು ಬೇಗ ದಿವ್ಯ ಮತಿ – ಸರಸ್ವತಿ
ಕೊಡು ಬೇಗ ದಿವ್ಯಮತಿ ಪ
ಮೃಡ ಹರಿಹಯ ಮುಖರೊಡೆಯಳೆ ನಿನ್ನಯ |
ಅಡಿಗಳಿಗೆರಗುವೆ ಅಮ್ಮನ ಬ್ರಹ್ಮನ ರಾಣಿ ಅ.ಪ
ಇಂದಿರಾರಮಣನ ಹಿರಿಯ ಸೊಸೆಯು ನೀನು|
ಬಂದೆನ್ನ ವದನದಿ ನಿಂದು ನಾಮವ ನುಡಿಸಿ ೧
ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ |
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ೨
ಪತಿತ ಪಾವನೆಯೆ ನೀ ಗತಿಯಂದು ನಂಬಿದ |
ವಿತತ ಪುರಂದರ ವಿಠಲನ ತೋರೆ ೩

೧೫೮
ಕೊಡುವ ಕರ್ತ ಬೇರೆ ಇರುತಿರೆ –
ಬಿಡುಬಿಡು ಚಿಂತೆಯನು ಪ.
ಒಡೆಯನಾಗಿ ಮೂಜಗವನು ಪಾಲಿಪ |
ಬಡವರಾಧಾರಿಯು ಭಕ್ತರ ಪ್ರಿಯನು ಅಪ
ಕಲ್ಲಿನೊಳಗೆ ಇರುವ – ಕಪ್ಪೆಗೆ – |
ಅಲ್ಲೆ ಉದಕಕೊಡುವ |
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |
ವಲ್ಲಭ ಶ್ರೀಹರಿ ಎಲ್ಲಿಯು ಇರುತಿರೆ |೧||
ಆನೆಗೈದುಮಣದಾ – ಆಹಾರವ |
ತಾನೆ ತಂದು ಕೊಡುವ |
ದೀನರೊಡೆಯ ಶ್ರೀನಿವಾಸ ದಯಾನಿಧಿ |
ಮಾನದಿಂದಲಿ ಕಾಯ್ವ ಭಾನುಕೋಟಿ ತೇಜ ೨
ಸರಸಿಜಾಕ್ಷ ತನ್ನ – ಸೇರಿದ |
ನರರನು ಬಿಡನಣ್ಣ |
ಪರಮದಯಾನಿಧಿ ಭಕುತರ ಸಲಹುವ | ಪುರಂದರವಿಠಲನು ಪುಷ್ಪಶರನ ಪಿತ ೩

೨೭೦
ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|
ಪಿಡಿವುದೆಂದು ನೀ ಒಲಿವುದೆಂದು ಪ
ಕೊಡುಕೊಂಬ ಮಹದನುಗ್ರಹದವನೆಂದು ನಿ-|
ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪ
ಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |
ನೀನೇ ತತ್ತದ್ರೂಪನಾದೆಯಲ್ಲ ||
ಹೀನರೊಳ್ ನಾನತಿ ಹೀನನಾಗಿ-ಅಭಿ-|
ಮಾನಿಯಾಗಿ ಕಾಲಕಳೆದೆನಲ್ಲ ||
ವಾನರನಂಗೈಯ ಮಾಣಿಕ್ಯದಂತೆನ್ನ |
ಮಾನದಂತರ್ಯಾಮಿ ಸಿಕ್ಕೆಯಲ್ಲ ||
ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|
ಜ್ಞಾನ-ವೈರಾಗ್ಯ ಭಾಗ್ಯಗಳನು ದೇವ ೧
ಕಾಡಿನ ಮೃಗವು ತಾ ಹಾಡಿದರೆ ನಂಬಿ |
ಆಡುವುದಲ್ಲದೆ ಓಡುವುದೆ? ||
ಕಾಡುವ ಪಶುವಿನ ಬಾಲವ ಕಟ್ಟಿಸಿ |
ಕೂಡೆ ಪಾಲ್ಗರೆಯಲು ಒದೆಯುವುದೆ? ||
ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|
ಡಾಡುವಳಲ್ಲದೆ ದೂಡುವಳೆ ||
ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |
ಮಾಡಬೇಡ ದಯೆಮಾಡಿ ನೀಡಿಷ್ಟವ ೨
ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |
ನಿನ್ನ ಸೇರುವ ಯತ್ನ ಬಿಟ್ಟು ನಾನು ||
ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |
ಸುಣ್ಣಕಿಕ್ಕಿದ ನೀರಿನಂತಾದೆನು ||
ಎನ್ನಪರಾಧವನಂತ ಕ್ಷಮಿಸು ನೀನು |
ಮನ್ನಿಸದಿರಲಾರಿಗೆ ಪೇಳ್ವೆನು ||
ಓಂ ನಮೋ ಶ್ರೀ ಹರಿ ಎಂಬ ಪೂರ್ಣಜ್ಞಾನ-|
ವನ್ನು ಪುರಂದರವಿಠಲನ ಎನ್ನಪ್ಪನೆ ೩

೧೫೯
ಕೊಬ್ಬಿನಲಿರಬೇಡವೊ – ಏ ನಮ್ಮ ನನುಜಾ
ಕೊಬ್ಬಿನಲಿರಬೇಡವೊ ಪ.
ಸಿರಿಬಂದ ಕಾಲಕೆ ಸಿರಿಮದವೆಂಬರು
ಬಿರಿದು ಬಿರಿದು ಮೇಲಕೆ ಮಾಳ್ಪರು
ಸಿರಿಹೋದ ಮರುರಿನ ಬಡತನ ಬಂದರೆ
ಹುರುಕು – ಕಜ್ಜಿಯ ತುರಿಸಿ ತಿರುಗುವರಯ್ಯಾ ೧
ಒಡವೆ ವಸ್ತುವನಿಟ್ಟು ಬಡಿವಾರ ಮಾಳ್ಪರು
ನಡೆಯಲಾರನೆಂದು ಬಳುಕುವರು
ಸಿಡಿಲು ಎರಗಿದಂತೆ ಬಡತನ ಬಂದರೆ
ಕೊಡವ ಹೊತ್ತನಾರ ತರುವರಯ್ಯ ೨
ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರು
ಶಾಪಿಸಿಕೊಂಡರು ಬಡವರ ಕೈಲಿ
ಶ್ರೀಪತಿ ಪುರಂದರವಿಠಲರು ಮುನಿದರೆ
ಭೊಪಾರದೊಳಗೆಲ್ಲ ತಿರಿದು ತಿಂಬರಯ್ಯ ೩

೩೦೫
ಕೋಳಿ ಕೊಗಿತಲ್ಲಾ – ಲಕ್ಷ್ಮೀ
ಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.
ಮೊದಲ ಜಾವದಲಿ ಮುಕುಂದನೆಂದು ಕೂಗಿ
ಎರಡಲಿ ಶ್ರೀ ವೆಂಕಟಾದ್ರಿಯೆಂದು ||
ಉರಗಗಿರಿಯ ವಾಸ ಯಾದವ ಕುಲ ಗೊಲ್ಲ
ಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು ೧
ಮೂರು ಜಾವದಲಿ ಮುರಾರಿಯೆಂದು ಕೂಗಿ
ನಾಕರಲಿ ನಾರಾಯಣಯೆನಲು ||
ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋ
ನೇರಿವಾಸ ವೆಂಕಟಕೃಷ್ಣರಾಯನೆಂದು ೨
ಪರಮಪುರುಷ ಮುಖ್ಯ ಆಧಾರಭೂತ
ಕರುಣದ ಪುಂಜನು ಜಗದಾದಿ ತಾ ||
ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿ
ವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು ೩
ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದ
ಕೊಕ್ಕನು ಮೇಲೆ ನೆಗಹಿಕೊಳುತ ||
ಚಕ್ಕನೆ ಕೇರಿ ಕೇರಿಯಗುಂಟ ಸಾಗುತ
ಮುಕುಂದನಲ್ಲದೆ ಅನ್ಯರಾರಿಲ್ಲವೆಂದು ೪
ಐದು ಜಾವದಲಿ ಅನಂತನೆಂದು ಕೂಗಿ
ಆರರಲ್ಲಿ ಅಳಗಾದ್ರೀಶಯೆಂದು ||
ಏಳರಲ್ಲಿ ಕಾಶಿಯ ಬಿಂದುಮಾಧವ
ಎಂಟಕೆ ಪುರಂದರವಿಠಲರಾಯನೆಂದು ೫

ಇದು ಅನಘ್ರ್ಯ ರತ್ನ
೧೩
ಗಂಗಾದಿತೀರ್ಥ ಫಲಂಗಳ ನೀವುದು- ಹರಿಯ ನಾಮ |
ಹಿಂಗದೆ ಜನರಿಗೆ ಮಂಗಳವೀವುದು- ಹರಿಯ ನಾಮ ಪ
ವೇದಶಾಸ್ತ್ರಂಗಳ ಅರಿಯದ ಜನರಿಗೆ- ಹರಿಯ ನಾಮ ಜಗ |
ದಾದಿಪುರುಷನನು ಪೂಜಿಸಿದವರಿಗೆ- ಹರಿಯ ನಾಮ ||
ಸಾಧಿಸುವೆವು ಪರವೆಂಬಂಥ ಜನರಿಗೆ- ಹರಿಯ ನಾಮ |
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೊ- ಹರಿಯ ನಾಮ ೧
ಸ್ನಾನ ಜಪಂಗಳ ಸಾಧಿಸಿದವರಿಗೆ- ಹರಿಯ ನಾಮ |
ದಾನಧರ್ಮಕೆ ಒದಗದ ಮನುಜರಿಗೆ- ಹರಿಯ ನಾಮ ||
ಧ್ಯಾನವೊಂದರಿಯದ ಮೂಢಾತ್ಮ ಜನರಿಗೆ – ಹರಿಯ ನಾಮ |
ಮನುಷ್ಯ ಜನ್ಮವ ಪಾವನ ಮಾಡುವುದು – ಹರಿಯ ನಾಮ ೨
ವೇಳೆವೇಳೆಗೆ ವೆಚ್ಚ-ವ್ಯಯಗಳ ನೀವುದು- ಹರಿಯ ನಾಮ |
ಜಾಳಿಗೆ ಮಾಳಿಗೆ ಮನೆಯ ನೆಚ್ಚದೆ ಪೇಳಿ- ಹರಿಯ ನಾಮ ||
ಕಾಲನವರು ಬಂದು ಕದಲಲಾಗದ ಮುನ್ನ- ಹರಿಯ ನಾಮ |
ಶ್ರೀಲೋಲ ಪುರಂದರವಿಠಲನ ಒಲುಮೆಗೆ- ಹರಿಯ ನಾಮ೩

೧೬೦
ಗಂಡಬಿಟ್ಟ ಗೈಯಾಳಿ ಕಾಣಣ್ಣ – ಅವಳ
ಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.
ಊರೊಳಗೆ ತಾನು ಪರದೇಶಿಯೊನ್ನವಳು
ಸಾರುತ ತಿರುಗುವಳು ಮನೆಮನೆಯ
ಕೇರಿ – ಕೇರಿಗುಂಟ ಕಲೆಯತ ತಿರುಗುವಳು
ನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ ೧
ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯರ ದೇವರ ಸತ್ಯ ನಿಜವಾದರೆ
ಬತ್ತಲೆ ಅಡ್ಡಂಬಲೂಡೇನೆಂಬುವಳು ೨
ಹಲವು ಜನರೊಳು ಕಿವಿಮಾತನಾಡವಳು
ಹಲವು ಜನರೊಳು ಕಡಿದಾಡವಳು
ಹಲವು ಜನರೊಳ ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಬರಲಿ ಹೆಣ್ಣು ೩
ಪರಪುರುಷರ ಕೂಡಿ ಸರಸವಾಡುತ ಹೋಗಿ
ನೆರೆದಿದ್ದ ಸಭೆಯಲಿ ಕರೆಯುವಳು
ಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳು
ಕರಿರೂಪದವಳ ನೀ ಕೆಣಕದಿರಣ್ಣ ೪
ಏಸು ಗೃಹಗಳೆಂದು ಎಣಿಸಿ ನೋಡಿಬಂದು
ಬೇಸರದೆ ಜನಕೆ ಹೇಳುವಳು
ಲೇಸಾಗಿ ಪುರಂದರವಿಠಲನು ಹೇಳಿದ
ಹೇಸಿ ತೊತ್ತನು ನೀನು ಕೆಣಕದಿರಣ್ಣ ೫

ಯದುಕುಲದ ಶ್ವಫಲ್ಕ

ಗಜವದನ ಬೇಡುವೆ ಗೌರೀತನಯತ್ರಿಜಗವಂದಿತನೆ ಸುಜನರ ಪೊರೆವನೆ ಪ
ಪಾಶಾಂಕುಶ ಧರ ಪರಮ ಪವಿತ್ರ |
ಮೂಷಕವಾಹನ ಮುನಿಜನ ಪ್ರೇಮ ೧
ಮೋದದಿಂದಲಿ ನಿನ್ನ ಪಾದವ ನಂಬಿದೆ |
ಸಾಧುವಂದಿತನೆ ಅನಾದರ ಮಾಡದೆ ೨
ಸರಸಿಜನಾಭ ಶ್ರೀಪುರಂದರ ವಿಠಲನ |
ನಿರುತ ನೆನೆಯುವಂತೆ ವರ ದಯ ಮಾಡೊ ೩

ಕೇರಳ ರಾಜ್ಯದ ತಿರುವಾಂಕೂರಿನ

ವಂದಿಸುವುದಾದಿಯಲಿ ಗಣನಾಥನ ಪ
ಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು ಅ.ಪ
ಹಿಂದೆ ರಾವಣ ತಾನು ವಂದಿಸದೆ ಗಜಮುಖನನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿತಂದ ವರಗಳನೆಲ್ಲ ಧರೆಗೆ ಇಳಿಸಿದನು ೧
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆಮುಂದೆ ಗಣಪನ ಪೂಜಿಸೆಂದು ಪೇಳೆ

೨೭೧
ಗರುಡ ಗಮನ ಬಂದನೋ-ನೋಡಿರೊ ಬೇಗ
ಗರುಡ ಗಮನ ಬಂದನೋ ಪ
ಗರುಡ ಗಮನ ಬಂದ ಧರಣಿಯಿಂದೊಪ್ಪುತ
ಕರೆದು ಬಾರೆನ್ನುತ ವರಗಳ ಬೀರುತ ಅ.ಪ
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನದೊಲ್ ಪೊಳೆವ ವಿಹಂಗ ರಥದಲಿ ||
ಘನ್ನ ಮಹಿಮ ಬಂದಸ್ಚ್ಛಿನ್ನ ಮೂರುತಿ ಬಂದ
ಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ ೧
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||
ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದ
ಸಾಕ್ಷೀ ಭೂತನಾದ ಸರ್ವೇಶ್ವರ ಬಂದ ೨
ತಂದೆ ಪುರಂದರ ವಿಠಲರಾಯ ಬಂದ
ಬಂದು ನಿಂದು ನಲಿದಾಡುತಿಹ ||
ಅಂದು ಸಾಂದೀಪನ ನಂದನನ ತಂದಿತ್ತ
ಸಿಂಧು ಶಯನ ಆನಂದ ಮೂರುತಿ ಬಂದ ೩

೧೬೧
ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ |
ನಾಲಗೆಯಿದ್ದ ಕೈಯಲಿ ನಾರಾಯಣನೆನ್ನಿರೊಪ.
ಕದ್ದು ಹುಸಿಯನಾಡಿ ಅಪಾರ |
ಬುದ್ದಿಯಿಂದ ಕೆಡಲು ಬೇಡಿ ||
ಬುದ್ದಿವಂತರಾಗಿ – ಅನಿ |
ರುದ್ಧನ ನೆನಯಿರೊ ೧
ನಿತ್ಯವಿಲ್ಲ ನೇಮವಿಲ್ಲ |
ಮತ್ತೆ ಧಾನಧರ್ಮವಿಲ್ಲ ||
ವ್ಯರ್ಥವಾಗಿ ಕೆಡದೆ – ಪುರು |
ಷೋತ್ತಮನೆನ್ನಿರೊ ೨
ಭಕ್ತಿಕೊಡುವ ಮುಕ್ತಿಕೊಡುವ |
ಮತ್ತೆ ದಾಯುಜ್ಯ ಕೊಡುವ ||
ಕರ್ತೃ ಪುರಂದರವಿಠಲನ |
ನಿತ್ಯ ನೆನೆಯಿರೊ ೩

೫೬
ಗಿಳಿಯು ಪಂಜರದೊಳಿಲ್ಲ – ಶ್ರೀ ರಾಮ ರಾಮ |
ಗಿಳಿಯು ಪಂಜರದೊಳಿಲ್ಲ ಪ.
ಅಕ್ಕ ಕೇಳೆ ಎನ್ನ ಮಾತು ||
ಚಿಕ್ಕದೊಂದು ಗಿಳಿಯ ಸಾಕಿದೆ ||
ಅಕ್ಕ ನಾನಿಲ್ಲದ ವೇಳೆ |
ಬೆಕ್ಕು ಕೊಂಡು ಹೋಯಿತಯ್ಯೋ ೧
ಅರ್ತಿಗೊಂದು ಗಿಳಿಯ ಸಾಕಿದೆ |
ಮುತ್ತಿನ ಹಾರವನು ಹಾಕಿದೆ ||
ಮುತ್ತಿನಂಥ ಗಿಳಿಯು ತಾನು |
ಎತ್ತ ಹಾರಿ ಹೋಯಿತಯ್ಯೋ ೨
ಹಸಿರು ಬಣ್ಣದ ಗಿಳಿಯು |
ಕುಶಲ ಬುದ್ಧಿಯ ಗಿಳಿಯು ||
ಹಸಗುಂದಿ ಗಿಳಿಯು ತಾ |
ಮೋಸ ಮಾಡಿ ಹೋಯಿತಯ್ಯೋ ೩
ಮುಪ್ಪಾಗದ ಬೆಣ್ಣೆಯ |
ತಪ್ಪದೆ ಹಾಕಿದೆ ಹಾಲು ||
ಒಪ್ಪದಿಂದ ಕುಡಿದು ತಾನು |
ಗಪ್ಪನೆ ಹಾರಿ ಹೋಯಿತಯ್ಯೋ ೪
ಒಂಬತ್ತ ಬಾಗಿಲ ಮನೆಯು |
ತುಂಬಿದ ಸಂರ್ದಶಿ ಇರಲು ||
ಕಂಬ ಮುರಿದು ಡಿಂಬ ಬಿದ್ದು |
ಅಂಬರಕಡರಿ ಹೋಯಿತಯ್ಯೋ ೫
ರಾಮ ರಾಮ ಎಂಬ ಗಿಳಿಯು |
ಕೋಮಲ ಕಾಯದ ಗಿಳಿಯು ||
ಸಾಮಜಪೋಷಕ ತಾನು |
ಪ್ರೇಮದಿ ಸಾಕಿದ ಗಿಳಿಯು ೬
ಅಂಗೈಯಲಾಡುವ ಗಿಳಿಯು |
ಮುಂಗೈಯ ಮೇಲಿನ ಗಿಳಿಯು ||
ರಂಗ ಪುರಂದರವಿಠಲನಂತ |
ರಂಗದೊಳಿಹ ಗಿಳಿಯು ೭

೯೧
ಗುಮ್ಮನ ಕರೆಯದಿರೆ-ಅಮ್ಮ ನೀನು |
ಗುಮ್ಮನ ಕರೆಯದಿರೆ ಪ
ಸುಮ್ಮನೆ ಇರುವೆನು ಅಮ್ಮಿಯ ಬೇಡೆನು |
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲಅ.ಪ
ಹೆಣ್ಣುಗಳಿರುವಲ್ಲಿಗೆ-ಹೋಗಿ ಅವರ-|
ಕಣ್ಣ ಮುಚ್ಚುವುದಿಲ್ಲವೆ ||
ಚಿಣ್ಣರ ಬಡಿಯೆನು ಅಣ್ಣನ ಬೈಯೆನು |
ಬೆಣ್ಣೆಯ ಬೇಡೆನು ಮಣ್ಣ ತಿನ್ನುವುದಿಲ್ಲ ೧
ಬಾವಿಗೆ ಹೋಗೆ ಕಾಣೆ-ಅಮ್ಮ ನಾನು-|
ಹಾವಿನ ಮೇಲಾಡೆ ಕಾಣೆ ||
ಆವಿನ ಮೊಲೆಯೂಡೆ ಕರುಗಳನ್ನು ಬಿಡೆ |
ದೇವರಂತೆ ಒಂದು ಠಾವಲಿ ಕೊಡುವೆ೨
ಮಗನ ಮಾತನು ಕೇಳಬೇಡ-ಗೋಪಿದೇವಿ-|
ಮುಗುಳುನಗೆಯ ನಗುತ ||
ಜಗದ ಒಡೆಯ ಶ್ರೀಪುರಂದರವಿಠಲನ |
ಬಿಗಿದಪ್ಪಿಕೊಂಡಳು ಮೋಹದಿಂದಾಗ ೩

೯೨
ಗುಮ್ಮನೆಲ್ಲಿಹ ತೋರಮ್ಮ-ನಮ್ಮಮ್ಮ-|
ಸುಮ್ಮನಂಜಿಸಬೇಡಮ್ಮ ಪ
ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ |
ವಂಚನೆಯಿಲ್ಲದೆ ತಿರುಗಿ ಬಂದೆನೆ ನಾನು ||
ಹಂಚಿಸಿಕೊಟ್ಟೆನೆ ಅವರವರಿಗೆ ನಾ |
ಅಂತು ನೋಡಿದರೂ ಕಾಣೆನೆ ಗುಮ್ಮನ ೧
ಈರೇಳು ಲೋಕವನುದರದೊಳಗೆ ಇಟ್ಟು |
ತೋರಿದೆ ಬ್ರಹ್ಮಾಂಡ ಬಾಯೊಳಗೆ ||
ಘೋರ ರೂಪದಿ ಬಂದ ಗಾಳಿಯ ಸುರನ ಕೊಂದೆ |
ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ ೨
ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು |
ಮೇಲೆ ನಾಟ್ಯಂಗಳ ನಾನಾಡುತಲಿದ್ದೆ ||
ಓಲೆಯ ಭಾಗ್ಯವನಿತ್ತೆ ನಾಗಪತ್ನಿಯರಿಗೆ |
ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ ೩
ಅಕ್ರೂರನಿಗೆ ವಿಶ್ವರೂಪವ ತೋರಿದೆ |
ಘಕ್ಕನೆ ರಥವೇರಿ ಮಥುರೆಗೆ ಪೋದೆ ||
ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ |
ಹೊಕ್ಕು ನೋಡಿದರೂ ಕಾಣೆನೆ ಗುಮ್ಮನ ೪
ಬಿಲ್ಲು ಹಬ್ಬಕೆ ಹೋಗಿ ಮಲ್ಲರ ಮಡುಹಿದೆ |
ಅಲ್ಲಿ ಮಾವನ ಕೊಂದು ಮುತ್ತಯ್ಯಗೊಲಿದೆ ||
ಚೆಲ್ವಗೋಪಾಲ ಶ್ರೀ ಪುರಂದರವಿಠಲನ |
ಸೊಲ್ಲು-ಸೊಲ್ಲಿಗೆ ನೀ ಬೆದರಿಸಬೇಡಮ್ಮ ೫

೧೭೪
ಗುರುರಾಯರ ನಂಬಿರೋ-ಮಾರುತಿಯೆಂಬ ಪ
ಗುರುರಾಯರ ನಂಬಿ ಬಿಡದೆ ಯಾವಾಗಲು |
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ಅ.ಪ
ವನಧಿಯ ಮನೋವೇಗದಿಂದ ಲಂಘಿಸಿ ಮಹಿ-
ತನುಜೆಯ ಶೋಕತಾಪವ ಕಳೆದು ||
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯ ತನ್ನ ಸಖಗಿತ್ತ ೧
ಕೌರವ ಬಕ ಹಿಡಿಂಬಕ ಕೀಚಕರೆಂಬ |
ಕ್ರೊರಸಂತತಿಯೆಲ್ಲ ನುಗ್ಗಲೊತ್ತಿ ||
ಘೋರ ಪಾತಕಿ ದುಶ್ಯಾಸನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ ೨
ಜೀವೇಶರೊಂದೆಂಬ ದುರ್ವಾದಿಗಳ ಕು-
ಭಾವಶಾಸ್ರ್ತಗಳೆಲ್ಲ ತರಿದೋಡಿಸಿ ||
ಕೋವಿದರಿಗೆ ಸದ್ಛಾಷ್ಯ ಸುಧೆಯನಿತ್ತು
ದೇವ ಪುರಂದರವಿಠಲ ಸೇವಕನಾದ ೩

೧೬೨
ಗುರುವಿನ ಒಲುಮೆಯು ಆಗುವ ತನಕ |
ದೊರೆಯದಣ್ಣ ಮುಕುತಿ ಪ.
ಪರಿಪರಿ ಶಾಸ್ತ್ರವನೇಕವನೋದಿ |
ವ್ಯರ್ಥವಾಯಿತು ಭಕುತಿ ಅಪ
ಆರು ಶಾಸ್ತ್ರಗಳನೋದಿದರೇನು |
ಮೂರಾರು ಪುರಾಣವ ಮುಗಿಸಿದರೇನು ||
ಸಾರಿ ಸಜ್ಜನರ ಸಂಗವ ಮಾಡದೆ |
ಧೀರನಾಗಿ ತಾ ಮೆರೆದರೇನು ? ೧
ಕೊರಳೊಳು ಮಾಲೆಯ ಧರಿಸಿದರೇನು |
ಕರದಲಿ ಜಪಮಣಿ ಎಣಿಸಿದರೇನು ||
ಮರುಳನಂತೆ ತಾ ಶರೀರಕೆ ಬೂದಿಯ |
ಒರಸಿಕೊಂಡು ತಾ ತಿರುಗಿದರೇನು ೨
ನಾರಿಯರ ಸಂಗವ ಅಳಿದರೇನು|
ಶರೀರಕೆ ದುಃಖವ ಪಡಿಸಿದರೇನು|
ಮಾರಯ್ಯ ಶ್ರೀ ಪುರಂದರವಿಠಲನ |
ಮರೆಯದೆ ಮನದೊಳು ಬೆರೆಯುವ ತನಕ ೩

೧೭೫
ಗೆದ್ದೆಯೊ ಹನುಮಂತಾ-ಅಸುರರ
ಒದ್ದೆಯೊ ಬಲವಂತಾ ಪ
ಬದ್ಧಾಂಜಲಿಯಿಂದ ರಘುಪತಿ ಪಾದವ
ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅ.ಪ
ಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ||
ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು |
ಮಂಜುಳವಾರೆಯ ತಂದ ರಾಮನ ದೂತ ೧
ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆ
ವೀರ ಮಹಾಬಲ ಶೂರ ಪರಾಕ್ರಮ |
ಧೀರ ಸಮೀರ ಉದಾರ ಗಂಭೀರ ೨
ವಾಂಛಿತ ಫಲವೀವ-ನಾದ ಮುಖ್ಯ- ಪ್ರಾಣ ಮಹಾನುಭಾವ ||
ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ |
ಪಾಂಚಜನ್ಯ ಪುರಂದರ ವಿಠಲದಾಸ ೩

೯೩
ಗೋಕುಲದ ಗೋಪಿಯರದೆಷ್ಟು ಧನ್ಯರೋ |
ಶ್ರೀಕಾಂತನನುರಾಗದಲಿ ಪಾಡುತಿಹರೊ ಪ
ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |
ತಳಿಸಾರಣಿ ಸಮ್ಮಾರ್ಜಿಸುವಾಗ ||
ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |
ಬೆಳಗುಜಾವದಿ ಮೊಸರ ಕಡೆವಾಗಲು ೧
ನಡೆವಾಗ ನುಡಿವಾಗ ಭೋಜನವ ಮಾಡುವಾಗ |
ಉಡುವಾಗ ಆಭರಣ ಇಡುವಾಗಲು ||
ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |
ಅಡಿಗಡಿಗೆ ತಾಂಬೂಲ ಮೆಲುವಾಗಲು ೨
ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |
ಪರಿಪರಿ ಗೀತಪ್ರಸಂಗದಿಂದ ||
ಪರಿಪೂರ್ಣನಾದ ಶ್ರೀ ಪುರಂದರವಿಠಲನ |
ಹಿರಿದಾಗಿ ಮನದೊಳಗೆ ಸ್ಮರಿಸುತಿಹರು ೩

೯೪
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |
ಗೋಕುಲದೊಳಗಿರಲಾರೆವಮ್ಮ ಪ
ಸಾಕು ಸಾಕು ನಮಗೇಕೆ ರಚ್ಚೆಗಳು |
ಆ ಕೃಷ್ಣನ ಪರಿ ನೀ ಕೇಳಮ್ಮ ಅ.ಪ
ಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||
ರೇಳು ಭುವನದೊಳಾಡುತಲಿರಲಿ |
ಆಲದೆಲೆಯ ನಮ್ಮಾಲಯವನೆ ಪೊಕ್ಕು-|
ಬಾಲೆಯರೆಲ್ಲರ ಬತ್ತಲೆ ಮಾಡಿ ||
ಶಾಲೆಗಳೆಲ್ಲ ಮೇಲಕೆ ಹಾರಿಸಿ |
ಆಲಂಗಿಸಿಕೊಂಡು ಬರುವನಮ್ಮ ೧
ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |
ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |
ಅನುಬಂಧನಾಗಿ ಇದ್ದರೆ ಇರಲಿ ||
ಅನುವು ಕಂಡುಕೊಂಡಾವೇಳೆಯಲಿ |
ಉಣಬಿಟ್ಟಾಕಳ ಕರುಗಳನುಣಿಸಿ ||
ಮನೆಯವರೆಲ್ಲರನೆಬ್ಬಿಸಿ ತಾನೇ |
ಮನೆಯೆಲ್ಲವ ಸೂರಾಡಿದನಮ್ಮ ೨
ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |
ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |
ಯಾರ ಮುಂದೆ ಹೇಳಲಿ ಸೊಲ್ಲ? ||
ಓರಗೆಯಲಿ ಸಂಸಾರ ಮಾಡುವ |
ನಾರಿಯರೆಲ್ಲರ ರಂಬಿಸಿಕರೆದು ವಿ-|
ಕಾರ ಮಾಡದಂತೆ ಪುರಂದರವಿಠಲಗೆ |
ಸಾರಿಸಾರಿ ನೀ ಬುದ್ಧಿ ಹೇಳಮ್ಮ ೩

೯೫
ಗೋಪಿ ನಿನ್ನ ಮಗನಿಗಾಗೆ-ಕೇರಿಯ ಬಿಟ್ಟು |
ಪೋಪೆವೆ ಬೆಳಗಾಗೆ ಪ
ಮಕ್ಕಳನಾಡಗೊಡ-ಮನೆಯ ಹೊಕ್ಕು |
ಉಕ್ಕುವ ಪಾಲ್ ಕುಡಿವ||
ಗಕ್ಕನೆ ಕಂಡರೊಡನೆ ನಮ್ಮೆಲ್ಲರ ಕೈಗೆ |
ಸಿಕ್ಕದೆ ಓಡಿದನೆ ೧
ಮೊಸರನೆಲ್ಲವ ಸುರಿದ-ಮೇಲಿಟ್ಟಂಥ |
ಹೊಸಬೆಣ್ಣೆಗೆ ತಾ ಹಾರಿದ ||
ಕೊಸರಿ ನೆಲುವಿನ ಮೇಲಿರಿದ ಕೃಷ್ಣ ತಾ |
ಮುಸುರೆನೊಳಗೆ ಸುರಿದ ೨
ಅಂತಿಂಥವನಲ್ಲ ಕಾಣೆ-ನಿನ್ನವ ಜಗ-|
ದಂತರ್ಯಾಮಿಯು ಜಾಣೆ ||
ಅಂತರಂಗದಲ್ಲಿ ನೋಡಲು ಪುರಂದರ-|
ವಿಠಲ ಬಂದಿದ್ದ ಕಾಣೆ ೩