Categories
ರಚನೆಗಳು

ಪುರಂದರದಾಸರು

೧೨೯
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪ
ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪ
ಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆ
ಫಾಲದ ಅರಳೆಲೆಯು ಕುಣಿಯೆ
ನೀಲದುಡುಗೆಯಿಟ್ಟ ಬಾಲನೆ ಬಾರೆಂದು
ಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ ೧
ಬಣ್ಣದ ಸರಗಳಿಡೆ ರನ್ನದ ನೇವಳ
ಹೊನ್ನ ಘಂಟೆಯು ಘಣ ಘಣರೆನಲು
ಪನ್ನಗ ಶಯನನೆ ಕುಣಿಯೊಮ್ಮೆ ಕುಣಿಯೆಂದು
ಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ ೨
ಕುಕ್ಷಿಯೊಳೀರೇಳು ಜಗವನು ಸಲಹುವ
ರಕ್ಷಿಪರುಂಟೆ ತ್ರೈಜಗದೊಳಗೆ
ಪಕ್ಷಿವಾಹನ ನೀನು ಅಂಜಬೇಡೆನುತಲಿ
ರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ ೩
ಶಂಕ ಚಕ್ರಗದಾ ಪದುಮಧಾರಕನ
ಪಂಕಜ ಮಿತ್ರ ಶತಕೋಟಿ ತೇಜನನು
ಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅ
ಲಂಕರಿಸುವ ಪುಣ್ಯವೆಂತು ಪಡೆದಳಯ್ಯ ೪
ಸಾಗರಶಯನು ಭೋಗೀಶನ ಮೇಲೆ
ಯೋಗನಿದ್ದೆಯೊಳಿಪ್ಪ ದೇವನನು
ಆಗಮ ನಿಗಮಗಳರಸ ಕಾಣದ ವಸ್ತು
ತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ ೫
ಪನ್ನಗ ಶಯನ ಉನ್ನಂತ ಮಹಿಮನ
ಸನ್ನುತ ಭಕುತರ ಸಲಹುವನ
ಪನ್ನಗಾರಿ ವಾಹನ ದೇವರ ದೇವ
ಚೆನ್ನಕೇಶವನ ಪಡೆದಳಯ್ಯಾ *೬

೨೨೧
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |
ಮಡಿ ಮಾಡುವ ಬಗೆ ಬೇರುಂಟು ಪ.
ಪೊಡವಿ ಪಾಲಕನ ಧ್ಯಾನ ಮಾಡುವುದು |
ಬಿಡದೆ ಭಜಿಸುಮದು ಅದು ಮಡಿಯಾ ಅಪ
ಬಟ್ಟೆಯ ನೀರೊಳಗಿಟ್ಟು ಒಣಗಿಸಿ |
ಉಟ್ಟರೆ ಅದು ತಾ ಮಡಿಯಲ್ಲ ||
ಹೊಟ್ಟೆಯೊಳಗಿನ ಕಾಮ – ಕ್ರೋಧಗಳ |
ಬಿಟ್ಟರೆ ಅದು ತಾ ಮಡಿಯೊ ೧
ಪರಧನ ಪರಸತಿ ಪರನಿಂದೆಗಳನು |
ಜರೆದಹಂಕಾರಗಳನೆ ತೊರೆದು ||
ಹರಿಹರಿಯೆಂದು ದೃಢದಿ ಮನದಲಿ
ಇರುಳು ಹಗಲು ಸ್ಮರಿಸಲು ಮಡಿಯೋ ೨
ಎಚ್ಚರವಿಲ್ಲದೆ ಮಲ ಮೂತ್ರ ದೇಹವ |
ನೆಚ್ಚಿ ಕೆಡಲು ಬೇಡಲೊ ಮನವೆ ||
ಅಚ್ಚುತಾನಂತನ ನಾಮವ ಮನಗೊಂಡು |
ಸಚ್ಚಿಂತೆಯಲಿರುವುದೆ ಮಡಿಯೊ ೩
ಭೂಸುರರು ಮಧ್ಯಾಹ್ನಕಾಲದಲಿ |
ಹಸಿದು ಬಳಲಿ ಬಂದರೆ ಮನೆಗೆ ||
ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |
ಹಸನಾಗಿ ಉಂಬುವುದು ಅದು ಮಡಿಯೊ ? ೪
ದಶಮಿ – ದ್ವಾದಶಿಯ ಪುಣ್ಯಕಾಲದಲಿ |
ವಸುದೇವ ಸುತನ ಪೂಜಿಸದೆ ||
ದೋಷಕಂಜದೆ ಪರರನ್ನು ಭುಜಿಸಿ ಯಮ – |
ಪಾಶಕೆ ಬೀಳ್ವುದು ಹುಸಿಮಡಿಯೊ ? ೫
ಸ್ನಾನ – ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |
ಜ್ಞಾನ – ಮಾನ – ಸುಮ್ಮಾನದಿಂದ ||
ದೀನವಂದ್ಯನ ಸುಜನ ಸಂತರ್ಪಣ |
ಅನುದಿನ ಮಾಡುವುದು ಘನಮಡಿಯೊ ೬
ಗುರು ಹಿರಿಯರ ಹರಿದಾಸರ ನೆನೆದು |
ಚರಣಕೆರಗಿ ಭಯ ಭಕ್ತಿಯಿಂದ ||
ಪರಿಪರಿ ವಿಧದಲಿ ಪುರಂದರವಿಠಲನ |
ನೆರನೆಂಬುವುದು ಉತ್ತಮ ಮಡಿಯೊ ೭

೨೨೨
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |
ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.
ಮಡಿಯು ನೀನೆ – ಮೈಲಿಗೆ ನೀನೆ – |
ಸುಡಲಿ ನಿನ್ನ ಮಡಿ ಬಿಕನಾಶಿ ಅಪ
ಎಲವು – ಚರ್ಮ – ಮಲ – ಮೂತ್ರ ಗುಂಡಿಯಲಿ |
ನಲಿಯುತ ನಿಂತೆಯಾ ಬಿಕನಾಶಿ ||
ನೆಲೆಗೊಂಡ ನವದ್ವಾರದ ಹೊಲೆಯೊಳು |
ಅಳಲುತ ನೀ ಬಿದ್ದೆ ಬಿಕನಾಶಿ ೧
ಹುಟ್ಟಲು ಸೂತಕ ಸಾಯಲು ಸೂತಕ |
ನಟ್ಟುನಡುವೆ ಬಂತೆ ಬಿಕನಾಶಿ ||
ಬಿಟ್ಟು ಬಿಡದೆ ಕಾವೇರಿಯ ಮುಳುಗಲು |
ಮುಟ್ಟು ಹೋಹುದೆ ಬಿಕನಾಶಿ ೨
ಚರ್ಮವು ತೊಳದರೆ ಕರ್ಮವು ಹೋಹುದೆ |
ಮರ್ಮವ ತಿಳಿಯದೆ ಬಿಕನಾಶಿ ||
ಬೊಮ್ಮನಯ್ಯ ಪುರಂದರವಿಠಲನ ಪಾಡಿ |
ನಿರ್ಮಲದಿ ಬಾಳೆಲೊ ಬಿಕನಾಶಿ ೩

ಮಣ್ಣಿಂದ ಕಾಯ ಮಣ್ಣಿಂದ |
ಮಣ್ಣಿಂದ ಸಕಲ ವಸ್ತುಗಳೆಲ್ಲ ||ಪ||
ಮಣ್ಣ ಬಿಟ್ಟವರಿಗಾಧಾರವಿಲ್ಲ|
ಅಣ್ಣಗಳೆಲ್ಲರು ಕೇಳಿರಯ್ಯ ||ಅ||ಪ||

ಅನ್ನ ಉದಕ ಊಟವೀಯುದು ಮಣ್ಣು |
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು |
ಉನ್ನತವಾದ ಪರ್ವತವೆಲ್ಲ ಮಣ್ಣು |
ಕಣ್ಣು ಮೂರುಳ್ಳನ ಕೈಲಾಸ ಮಣ್ಣು ||೧||
ದೇವರಗುಡಿ ಮಠ ಮನೆಯೆಲ್ಲ ಮಣ್ಣು |
ಆವಾಗ ಆಡುವ ಮಡಕೆಯು ತಾ ಮಣ್ಣು |
ಕೋವಿದರಸರ ಕೊಡೆಗಳೆಲ್ಲ ಮಣ್ಣು |
ಪಾವನಗಂಗೆಯ ತಡೆಯೆಲ್ಲ ಮಣ್ಣು ||೨||
ಭಕ್ತ ಭರಣ ಧಾನ್ಯ ಬೆಳೆವುದೇ ಮಣ್ಣು |
ಸತ್ತವರನು ಹೂಳಿಸಿಡುವುದೇ ಮಣ್ಣು |
ಉತ್ತಮವಾದ ವೈಕುಂಠವೇ ಮಣ್ಣು |
ಪುರಂದರವಿಠಲನ ಪುರವೆಲ್ಲ ಮಣ್ಣು||೩||

೭೦
ಮತದೊಳಗೆ ಒಳ್ಳೆ ಮತ ಮಧ್ವಮತವು – ರಘು – |
ಪತಿ ಪೂಜಾವಿಧಾನಕೆ ಪಾವನ ಮತವು ಪ.
ನಾರಾಯಣನ ನಾಮ ತುಂಬಿದ ಮತವೇದ – |
ಪಾರಾಯಣಕೆ ಅನುಕೂಲ ಮತವು ||
ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದ
ಧಾರಣಿಸುರರ ಸಂತೋಷದ ಮತವು ೧
ಅಕಲಂಕ ಶ್ರೀಹರಿಗೆ ವಜ್ರಾಂಕಿತ ಮತವು |
ಸಕಲ ದೇಶಕೆ ಸನ್ಮತವಾದ ಮತವು ||
ಅಕುಟಿಲ ಶುಕ – ಸನಕಾದಿ ಮುನೀಂದ್ರರ |
ನಿಖಿಲಕ್ರಿಯ ಪದವೀವ ನಿರ್ಮಲ ಮತವು ೨
ಸರಸ ಸದ್ಗುಣ ಸತ್ಯಸಾತ್ತ್ವಿಕ ಮತವಿದು |
ಗುರುಶಿಷ್ಯರಿಗೆ ಅನುಕೂಲ ಮತವು ||
ಪರಮತ ಖಂಡಿಸಿ ಪಂಡಿತರು ಪೇಳಿದ |
ಪುರಂದರವಿಠಲನ ಮತವೆ ಹನುಮನ ಮತವು ೩

೩೨೫
ಮದ್ದು ಮಾಡಬಾರದೇನೇ ಮುದ್ದು ಮಾಯಾದೇವಿ ? ಪ.
ಮುದ್ದು ಬಾಲಕೃಷ್ಣನಲ್ಲಿ ಮನಸು ನಿಲ್ಲುವ ಹಾಗೆ ಅಪ
ಕರಗಳಿಂದ ಹರಿಯ ಮಂ ದಿರದ ಕಸವ ತೆಗೆಯಲಿಕ್ಕೆ |
ನಿರುತದಲ್ಲೂ ಬೇಸರಿಯದೆ ಹರುಷವು ಪುಟ್ಟವ ಹಾಗೆ ೧
ಶ್ರುತಿ – ರಾಮಾಯಣ ಶ್ರೀ ಭಾಗವತ ಪಂಚರಾತ್ರಾಗಮಾದಿ
ಕಥೆಯ ಕೇಳುವುದಕೆ ಬಹಳ ರತಿಯು ಪುಟ್ಟುವ ಹಾಗೆ ೨
ದೇಹವು ಅನಿತ್ಯವೆಂದು ನೇಹದಿಂದ ಪೋಷಿಸದಲೆ |
ಮಾಹೇಂದ್ರಾವರಜನ ಅಹ ರಹರವು ಭಜಿಸುವ ಹಾಗೆ ೩
ನರರ ಸ್ತವನ ಹೇಯವೆಂದು ಅರಗಳಿಗೆಯು ಅಗಲದಲೆ |
ನರಹರಿಯ ಭಕ್ತರಿಗೆ ಶರಣುಹೋಗುವ ಹಾಗೆ ೪
ಮನಸು ವಾಕ್ಕಾಯಗಳಿಂದ ಸದ್ ಗುಣದಿ ಪುರಂದರವಿಠಲನ
ಅನುರಾಗದಿಂ ಬಿಡದೆ ಪಾಡಿ ಕುಣಿದು ಕುಣಿದು ದಣಿವ ಹಾಗೆ ೫

೩೨೬
ಮದ್ದು ಮಾಡಲರಿಯಾ ಮುದ್ದು ರಮಾದೇವೀ ಪ.
ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ಅಪ
ವಚನಗಳೆಲ್ಲ ವಾಸುದೇವನ ಕಥೆಯೆಂದು
ರಚನೆ ಮಾಡುವರಲ್ಲಿ ರಕ್ತಿ ನಿಲ್ಲುವ ಹಾಗೆ ೧
ಸಂತೆ ನೆರಹಿ ಸತಿ ಸುತರು ತನ್ನವರೆಂಬ
ಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ ೨
ಎನ್ನೊಡೆಯ ಸಿರಿ ಪುರಂದರವಿಠಲನ
ಸನ್ಮತಿಯಿಂದೆ ಹಾಡಿ ಪಾಡುವ ಹಾಗೆ ೩

೭೧
ಮಧ್ವಮತಕಿನ್ನು ಸರಿಯುಂಟೆ – ಪ್ರ – |
ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.
ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |
ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||
ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |
ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ – ನೀ ಕೇಳೊ |
ಪಕ್ಷಿವಾಹನನೆನಿಪ ದೇವ ತಾ ಬಲ್ಲ ೧
ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |
ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||
ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |
ಮುಕುತಿ ಸುಖಗಳಿಗೆಣೆಯಿಲ್ಲ – ನೀ ಕೇಳೊ |
ಅಖಿಳ ಬ್ರಹ್ಮಾಂಡನಾಯಕ ತಾ ಬಲ್ಲ ೨
ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |
ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||
ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |
ರತಿಪತಿಗಿಂತ ಚೆಲುವರಿಲ್ಲ – ನೀ ಕೇಳೊ |
ಕಥೆಯನು ಪುರಂದರವಿಠಲ ತಾ ಬಲ್ಲ ೩

೭೨
ಮಧ್ವಮತದ ಸಿದ್ದಾಂತದ ಪದ್ಧತಿ |
ಬಿಡಬೇಡಿ ಬಿಡಬೇಡಿ ಪ.
ಹರಿ ಸರ್ವೊತ್ತಮನಹುದೆಂಬ ಜ್ಞಾನವ |
ತಾರತಮ್ಯದಲಿ ತಿಳಿವ ಮಾರ್ಗವಿದು ೧
ಘೋರ ಯಮನ ಬಾಧೆ ದೂರಕೆ ಮಾಡಿ ಮು –
ರಾರಿಯ ಚರಣವ ಸೇರುವ ಮಾರ್ಗವು ೨
ಭಾರತೀಶ ಮುಖ್ಯ ಪ್ರಾಣಾಂತರ್ಗತ |
ನೀರಜಾಕ್ಷ ನಮ್ಮ ಪುರಂದರವಿಠಲನ ೩

೧೮೨
ಮಧ್ವಮುನಿಯೆ – ಗುರು – ಮಧ್ವಮುನಿಯೆ ಪ
ಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪ
ಅಂದು ಹನುಮಂತನಾಗಿ | ಬಂದ ರಾಮಪದಾರ-
ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ ೧
ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋ
ಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ ೨
ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿ ಪುರಂದರ |
ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ ೩

೧೮೦
ಮಧ್ವರಾಯರ ನೆನೆದು ಶುದ್ಧರಾಗಿರೊ |
ಹೊದ್ದಿ ವೈಷ್ಣವ ಮತ ಭವಾಬ್ಧಿ ದಾಟಿರೋ ಪ
ಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗ
ಒದಗಿ ನಿತ್ಯ ಕರ್ಮಗಳನು ನಡೆಸುವಾಗ ||
ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗ
ಸದಮಲಾನಂದ ಹನುಮನನ್ನು ನೆನೆಯಿರೊ ೧
ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ
ಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||
ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗ
ನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ ೨
ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗ
ಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗ
ಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕ
ಪುರಂದರ ವಿಠಲಗೆ ಸಮರ್ಪಣೆ ಮಾಡಿರೊ ೩

೧೮೧
ಮಧ್ವರಾಯಾ-ಗುರು-ಮಧ್ವರಾಯಾ
ಮಧ್ವರಾಯಾ-ಗುರು-ಮಧ್ವರಾಯಾ ಪ
ರಾಮಾವತಾರದೊಳೊಮ್ಮೆ ಮಧ್ವರಾಯಾ
ಆ ಮಹಾ ಹನುಮನಾದೆ ಮಧ್ವರಾಯಾ ||
ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||
ಕಾಮಿತಾರ್ಥ ಸುರರಿಗಿತ್ತೆ ಮಧ್ವರಾಯಾ ೧
ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾ
ದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||
ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ – ಶ್ರೀ –
ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ ೨
ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾ
ಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾ
ದುರುಳಮಾಯಿಮತವ ಮುರಿದೆ ಮಧ್ವರಾಯಾ
ಪುರಂದರ ವಿಠಲನ ದಾಸನಾದೆ ಮಧ್ವರಾಯಾ ೩

೨೨೩
ಮನವ ಶೋಧಿಸಬೇಕು ನಿಚ್ಚ – ದಿನ – |
ದಿನದಿ ಮಾಡುವ ಪಾಪ ಪುಣ್ಯದ ವೆಚ್ಚ ಪ
ಧರ್ಮ ಅಧರ್ಮ ವಿಂಗಡಿಸಿ – ದು – |
ಷ್ಕರ್ಮಕೆ ಏರಿದ ಬೇರ ಕತ್ತರಿಸಿ ||
ನಿರ್ಮಲಾಚಾರದಿ ಚರಿಸಿ – ಪರ – |
ಬೊಮ್ಮ ಮೂರುತಿ ಪಾದಕಮಲವ ಭಜಿಸಿ ೧
ತನುವ ದಂಡಿಸಿ ಒಮ್ಮೆ ಮಾಣೊ – ನಿನ್ನ – |
ಮನವ ಶೋಧಿಸಿ ಪರಮಾತ್ಮನ ಕಾಣೊ ||
ನೀನು ನಿನ್ನೊಳಗೆ ಜಾಣನೊ – ಮುಕುತಿ – |
ಯೇನೂ ದೂರಿಲ್ಲವೊ ಒಂದೇ ಗೇಣೊ ೨
ಆತನ ಭಕ್ತರಿಗೆ ಕೇಡಿಲ್ಲ – ಅವ – |
ಪಾತಕ – ಪತಿತಸಂಗವ ಮಾಡ ಸಲ್ಲ ||
ನೀತಿವಂತರು ಕೇಳಿರೆಲ್ಲ – ನಮ -|
ಗೀತನೆ ಗತಿಯೀವ ಪುರಂದರವಿಠಲ ೩

೨೨೪
ಮನವೆ ಚಂಚಲ ಮತಿಯ ಬಿಡು – ನಮ್ಮ |
ವನಜನಾಭನ ಪಾದಭಜನೆಯ ಮಾಡು ಪ.
ಬಡಮನುಜಗೆ ಬಾಯಬಿಡುವ ದೈನ್ಯದಲವನ |
ಅಡಿಗಳಿಗೆರಗಲು ಕೊಡುವನೇನೊ ||
ಕಡಲಶಯನ ಜಗದೊಡೆಯನ ನೆನೆಯಕ್ಕೆ – |
ಪಿಡಿದು ತಾ ಸಲಹುವ ಬಿಡದಲೆ ಅನುಗಾಲ ೧
ಬಲ್ಲಿದ ಭಕುತರ ಬಲ್ಲವ ಬಹುಸಿರಿ |
ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||
ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ ೨
ಮುಗಿಲು ಮೇಲದೆಗಡೆ ಅಗಣಿತವಾದಾಪ – |
ತ್ತುಗಳು ಬಂದಡರಲು ನಗುತಲಿರು ||
ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |
ಪೊಗಳುತ ಬಾಳು ನೀ ಅಘಗಳ ಗಣಿಸದೆ ೩
ಆವಾವ ಕಾಲಕೆ ದೇವನಿಚ್ಛೆಯಿಂದ |
ಆವಾವುದು ಬರೆ ನಿಜಸುಖವೆನ್ನು ||
ಶ್ರೀವರ ಅನಾದಿಜೀವರ ಕ್ಲಪ್ತದಂತೆ |
ಈವನು ನಿಜಸ್ವಭಾವ ಬಿಡದೆ ನಿತ್ಯ ೪
ಕೇಶವಾಚ್ಯುತ ಶ್ರೀನಿವಾಸ ಮುರಾರೇ |
ದೋಷರಹಿತ ದೀನ ಪೋಷಕನೆನ್ನು ||
ಮೋಸಗೊಳಿಪ ಭವಪಾಶವ ಖಂಡಿಪ |
ಶ್ರೀಶ ಪುರಂದರವಿಠಲನು ಜಗಕಿರೆ ೫

೩೨೨
ಮನವೆನ್ನ ಮಾತ ಕೇಳದು – ಮಂದಜ್ಞಾನದಿ |
ತನುವಿನಾಸೆಯ ಬಿಡಲೊಲ್ಲದು ಪ
ವನಜನಾಭನೆ ನಿನ್ನ ನಾಮ ಸಾಸಿರವ |
ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪ
ದೇಹ ಸಂಬಂಧಿಗಳಾದವರೈವರು |
ಮೋಹಪಾಶದಿ ಕಟ್ಟಿ ಬಿಗಿದಿಹರೈ ||
ಕಾಯ ಅನಿತ್ಯವೆಂಬುದನರಿಯದೆ |
ಮಾಯಾ ಪ್ರಪಂಚದಿಂದಲಿ ಬದ್ಧನಾಗಿಹೆ ೧
ಸಾಧುಸಜ್ಜನರ ಸಂಗವ ಮಾಡಿ ಪರಗತಿ-|
ಗಾಧಾರವನು ಮಾಡಲೊಲ್ಲದಯ್ಯ ||
ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನ |
ಬಾಧೆಗೆ ಒಳಗಾಗುವಂತೆ ಮಾಡುತಲಿದೆ ೨
ಮದಗಜ ಮೈಯ ಮರೆತು ಮುಂದುಗಾಣದೆ |
ಕದುವಿನೊಳಗೆ ಬಿದ್ದಂತಾದೆನಯ್ಯ ||
ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |
ಪದುಮಾಕ್ಷ ವರದ ಶ್ರೀ ಪುರಂದರ ವಿಠಲ ೩

೩೪
ಮನಸಿಟ್ಟು ಭ್ರಮಿಸುವರೇನೆ – ಘನ – |
ಗುಣವಂತನೇನವ ಜಾಣೆ ? ಪ
ಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |
ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪ
ಜಲವಾಸಿ ಮುಖವೊಳಸೆಳೆವ – ಇವ |
ನೆಲವ ಕೆದರಿ ಕಂಬದಿ ಬಾಯ್ ತೆಗೆವ ||
ಇಳೆಯನಳೆದ ಕೊರಳಗೊಯ್ಕ ವನವಾಸಿಯ |
ಕೊಳಲಪಿಡಿದ ಕುರುಬಲವನಳಿದಾತಗೆ ೧
ಅಂದು ಮಧುರೆಯಲಿ ಪುಟ್ಟಿದನ – ಆ |
ನಂದಗೋಪ – ಯಶೋದೆ ಕೋಮಲನ ||
ಕಂದನಾಗಿ ಮೊಲೆಯುಂಡು ಪೂತನಿಯನು |
ಕೊಂದು ಕಂಸರ ಪುರ ತಂದೆಗಿತ್ತವಗೆ ೨
ಬತ್ತಲಿರುವ ಶ್ರೀನಿರ್ವಾಣಿ – ತೇಜಿ – |
ಹತ್ತಿ ಪಿಡಿದ ಖಡ್ಗ ಪಾಣಿ ||
ಮತ್ತರನೆಲ್ಲರ ಮರ್ದಿಸಿ ಬಲವಂತ |
ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ ೩

೧೩೧
ಮನಸು ನಿನ್ನ ಮೇಲೆ ಬಹಳ-ಕಾಲ |
ಅನುಕೂಲಿಸದೊ ಗೋಪಾಲ ಪ
ನಿನ ಕೂಡೆ ಈಗ ಕೂಡುವೆನೆಂದರೆ ಮನೆ-|
ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪ
ಗಂಡನೆಂಬವನು ಉದ್ದಂಡ-ಎನ್ನ |
ಕಂಡರೆ ಸೇರನು ಭಾವ ಪ್ರಚಂಡ ||
ಭಂಡೆ ಅತ್ತೆಯು ಲಂಡೆ ಅತ್ತಿಗೆ ಕೇಳೊ |
ಕಂಡರಿಬ್ಬರನು ದಂಡಿಸುವರೊ ರಂಗ ೧
ನೆರೆಹೊರೆಯವರೆನ್ನನೆಲ್ಲ-ಮೈಯ |
ನೆರಳ ಕಂಡರೆ ಸೇರರಲ್ಲ ||
ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |
ಮರೆಮಾತನಾಡಲು ವೇಳೆ ಕೂಡದೊ ರಂಗ ೨
ಮದುವೆ ಮಾಡುವರೊ ಮನೆಯೊಳು-ನಾಳೆ |
ಅದರ ಸಂದಣಿಯ ಹೊಂಚಿನೊಳು ||
ಮುದದಿಂದ ಕೂಡುವೆನಾವ ಪರಿಯೊಳು |
ಮದನ ತಂತ್ರದಿಂದ ಪುರಂದರವಿಠಲ ೩

೨೨೫
ಮನುಜ ಶರೀರವಿದೇನು ಸುಖ – ಇದ
ನೆನೆದರೆ ಘೋರವಿದೇನು ಸುಖ ? ಪ.
ಜನನ – ಮರಣ ಮಲಕೂಪದಲ್ಲಿದ್ದು
ಅನುಭವಿಸುವುದು ಇದೇನು ಸುಖ ?
ತನುವಿದ್ದಾಗಲೇ ಹೃದಯದ ಶೌಚದ
ಸ್ತನಗಳನುಂಬುವುದೇನು ಸುಖ ? ೧
ದಿನವು ಹಸಿವು ತೃಷೆ ಘನ ರೋಗಂಗಳ
ಅನುಭವಿಸುವುದು ಇದೇನು ಸುಖ
ನೆನೆಯಲು ನಿತ್ಯ ನೀರ್ಗುಳ್ಳೆಯಂತಿಪ್ಪ
ತನುಮಲಭಾಂಡವಿದೇನು ಸುಖ ? ೨
ಪರಿಪರಿ ವಿಧದಲಿ ಪಾಪವ ಗಳಿಸುತ
ನರಕಕೆ ಬೀಳುವುದೇನು ಸುಖ ?
ಪುರಂದರವಿಠಲನ ಮನದಿ ನೆನೆದು ಸ ದ್ಧರುಮದೊಳ್ ನಡೆದರೆ ಆಗ ಸುಖ ೩

೧೩೨
ಮನೆಯೊಳಗಾಡೊ ಗೋವಿಂದ-ನೆರೆ-|
ಮನೆಗಳಿಗೇಕೆ ಪೋಗುವೆಯೊ ಮುಕುಂದ ಪ
ನೊಸಲಿಗೆ ತಿಲಕವನಿಡುವೆ-ಅಚ್ಚ-|
ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||
ಹಸನಾಧಾಭರಣಗಳಿಡುವೆ-ಚಿಕ್ಕ-|
ಹಸುಳೆ ನಿನ್ನನು ನೋಡಿ ಸಂತೋಷಪಡುವೆ ೧
ಅಣ್ಣಯ್ಯ ಬಲರಾಮಸಹಿತ-ನೀ-|
ನಿನ್ನೆಲ್ಲಿಯಾದರೂ ಆಡುವುದು ವಿಹಿತ ||
ಹೆಣ್ಣುಗಳೇಕೋ ಸಂಗಾತ-ರಂಗ |
ಬಿನ್ನಪ ಪರಿಪಾಲಿಸೊ ಜಗನ್ನಾಥ ೨
ಜಾರನೆನಿಸಿಕೊಳಲೇಕೆ-ರಂಗ-|
ಚೋರನೆನಿಸಿಕೊಂಬ ದೂರು ನಿನಗೇಕೆ ||
ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|
ಪುರಂದರವಿಠಲರಾಯ ಎಚ್ಚರಿಕೆ ೩

೩೧೮
ದೇವಕಿಯುದರ ಸಂಜಾತನೆ ತ್ರುವಿ
ಕಾವನ ಪಿತ ಕಮಲಾಕ್ಷನೆ ತ್ರುವಿ
ಶ್ರೀ ವೈಭವ ಸಚ್ಚಿದಾನಂದ ತ್ರುವಿ
ಭಾವಕಿ ಗೋಪಿಯ ಕಂದನೆ ತ್ರುವಿ……… ತ್ರುವಿ ೧
ಮಧುರೆಯೊಳುದಿಸಿದ ಮಹಿಮನೆ ಜೋ ಜೋ
ಯದುಕುಲ ತಿಲಕ ಯಾದವರಾಯ ಜೋ ಜೋ ||
ಮಧುಕೈಟಭ ಮುರಮರ್ದನ ಜೋ ಜೋ
ಚದುರನಾಗಿ ತುರುಗಳ ಕಾಯ್ದೆ ಜೋ ಜೋ ೨
ಗೋಕುಲಪಾಲಕ ಗೋವಿಂದ ತ್ರುವಿ
ಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||
ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿ
ಲೋಕವೀರೇಳ ಪೆತ್ತಾತನೆ ತ್ರುವಿ ……….. ತ್ರುವಿ ೩
ಶ್ರುತಿಚೋರ ಸಂಹಾರಕ ದೇವ ಜೋ ಜೋ
ಜತನದಿ ಸುರರಿಗಮೃತವಿತ್ತೆ ಜೋ ಜೋ ||
ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋ
ಮತಿಯುತ ಬಾಲಕನತಿ ರಕ್ಷ ಜೋ ಜೋ ೪
ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿ
ಯತಿವಂಶ ಜನನ ಭಾರ್ಗವ ರೂಪ ತ್ರುವಿ ||
ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿ
ರತಿಪತಿಪಿತ ಸುರನುತ ಕೃಷ್ಣ ತ್ರುವಿ ……… ತ್ರುವಿ ೫
ಗೋಪಿಕಾನಂದ ಮುಕುಂದನೆ ಜೋ ಜೋ
ಭೂಪರೊಳ್ಕಾದಿ ಬಳಲಿದನೆ ಜೋ ಜೋ
ಶ್ರೀ ಪುರುಷೋತ್ತಮ ನರಸಿಂಹ ಜೋ ಜೋ
ಅಪಾರ ಮಹಿಮಾರ್ಣವ ದೇವ ಜೋ ಜೋ……..
ಜೋ ಜೋ ೬
ಮಣ್ಣೊಳಗಾಡಿ ನೀ ಬಂದೆಯ ತ್ರುವಿ
ಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿ
ಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿ
ಚಿಣ್ಣ ಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ………… ತ್ರುವಿ ೭
ತಾರಕ ಸತಿವ್ರತಹಾರಕ ಜೋ ಜೋ
ವಾರಣ ಹಯವೇರಿ ಮೆರೆದನೆ ಜೋ ಜೋ ||
ಸಾರಿದವರ ಸಂತೈಸುವ ಜೋ ಜೋ
ಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ
…….ಜೋ ಜೋ ೮
ಶರಣಾಗತ ವಜ್ರಪಂಜರ ತ್ರುವಿ
ಕರುಣಾಕರ ಕಮಲಾಕ್ಷನೆ ತ್ರುವಿ ||
ಧರಣಿಧರಶಾಯಿ ಶ್ರೀ ವರ ತ್ರುವಿ || ವರದ ಶ್ರೀ ಪುರಂದರವಿಠಲನೆ ತ್ರುವಿ ……….. ತ್ರುವಿ ೯

೩೨೪
ಮನ್ನಾರು ಕೃಷ್ಣಗೆ ಮಂಗಳ ಜಗವ
ಮನ್ನಿಸಿದೊಡೆಯಗೆಮಂಗಳ ಪ.
ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ ಮಂಗಳ ||
ಧರ್ಮಸಂರಕ್ಷಗೆ ದಾನವ ಶಿಕ್ಷಗೆ
ನಮ್ಮ ರಕ್ಷಕನಿಗೆ ಮಂಗಳ ೧
ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದನಿಗೆ ಮಂಗಳ ||
ಪುರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿರ್ವೋತ್ತಮನಿಗೆ ಮಂಗಳ ೨
ದೇವಕಿ ದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ ||
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ ೩

೩೪೭
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.
ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ ಭಕ್ಷಿಸುವುದು ೧
ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡ್ವದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು ೨
ಕಂಜ ವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂರ್ಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿಪ್ಪ
ಸಂಜೀವ ಪಿತ ಪುರಂದರವಿಠಲನೇ ಬಲ್ಲ * ೩

೨೨೬
ಮರುಳಾಟವೇಕೊ – ಮನುಜಾ |
ಮರುಳಾಟವೇಕೊ? ಪ.
ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |
ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||
ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |
ಮಧ್ವಶಾಸ್ತ್ರ ಓದದವನ ವಿದ್ಯೆ ಏತಕೊ – ಮನುಜಾ ೧
ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ – ಜಪವೇಕೊ |
ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||
ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |
ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ ೨
ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |
ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||
ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |
ಕುಸುಮನಾಭಗರ್ಪಿಸದ ಅಶನವೇತಕೊ – ಮನುಜಾ ೩
ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||
ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |
ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |
ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ ೪
ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |
ಭಂಡ ಮಾತನಾಡುವನ ಪಾಂಡಿತ್ಯವೇತಕೊ |
ಪುಂಡರೀಕವರದ ಶ್ರೀ ಪುರಂದರವಿಠಲನ |
ಕಂಡು ಭಜಿಸಲರಿಯದವನ ವಿತಂಡ ಬುಧ್ಧಿಯೇತಕೋ ೫

೧೬೬
ಮರುಳು ಮಾಡಿಕೊಂಡೆಯಲ್ಲೇ – ಮಾಯಾದೇವಿಯೆ ಪ
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪ
ಜ್ಞಾನಿಗಳು ನಿತ್ಯ ಅನ್ನ-ಪಾನದಿಗಳನ್ನು ಬಿಟ್ಟು |
ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ ೧
ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |
ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ ೨
ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ |
ಹಲವು ಆಭರಣಂಗಳು-ಜಲವು ಆಗಿ ಜಾಣತನದಿ ೩
ರಂಗನು ಭುಲೋಕದಿ-ಭುಜಂಗ ಗಿರಿಯೊಳಾಲ ಮೇಲು |
ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ ೪
ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು |
ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ ೫
ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ |
ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ ೬
ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |
ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ ೭

೧೩೩
ಮರೆತೆಯೇನೋ ರಂಗ-ಮಂಗಳಾಂಗ ಪ
ಕೋಲು ಕೈಯಲಿ ಕೊಳಲು, ಜೋಲುಗಂಬಳಿ ಹೆಗಲ |
ಮೇಲೆ ಕಲ್ಲಿಯ ಚೀಲ ಕಂಕುಳಲಿ ||
ಕಾಲಿಗೆ ಕಡಗವು ಕಾಯುತ ಹಸು ಹಿಂಡ |
ಬಾಲಕರ ಮೇಳದಿ ಇದ್ದೆಯೊ ರಂಗ ೧
ಕಲ್ಲುಮಣಿ ಕವಡಿ ಚೆನ್ನೆ ಗುಳ್ಳೆಗುಂಜಿ ಒಡವೆ |
ಎಲ್ಲವು ನಿನ್ನ ಸರ್ವಾಂಗದಲಿ ||
ಅಲ್ಲಲ್ಲಿಗಳವಟ್ಟು ನವಿಲುಗರಿಯ ದಂಡೆ |
ಗೊಲ್ಲ ಮಕ್ಕಳ ಕೂಡೆ ಸಲ್ಲಾಪವಾಡುತೆ ೨
ಸಿರಿದೇವಿ ಬಂದು ಸೇರಿದ ಬಳಿಕ ಲೋಕದೊಳಗೆ |
ಸಿರಿಯರಸನೆಂಬುವರು ||
ವರಮುಖ್ಯ ಪ್ರಾಣವಂದಿತ ಉಡುಪಿಯ |
ಸಿರಿ ಪುರಂದರವಿಠಲ ಶ್ರೀ ಕೃಷ್ಣ * ೩

೨೨೮
ಮರೆಯದಿರು ಶ್ರೀ ಹರಿಯನು ಪ.
ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನ
ಕರೆದವಗೆ ಸಾಯುಜ್ಯವಿತ್ತ ನಾರಾಯಣನ
ಸ್ಮರಣೆಯನು ಮಾಡುವರ ಚರಣ ಸೇವಕರಿಂಗೆ
ಪರಮ ಪದವೀವ ಹರಿಯ ಅಪ
ದೇವಕಿಯ ಬಂಧುವನು ಪರಿದವನ ಪೂತನಿಯ
ಜೀವರಸವೀಂಟಿದನ ಮಾವನನು ಮಡುಹಿದನ
ಪಾವನ ತರಂಗಿಣಿಯ ಪದನಖದಿ ಪಡೆದವನ
ಗೋವರ್ಧನೋದ್ಧಾರನ ||
ದಾವಾನಲನ ಪಿಡಿದು ನುಂಗಿದನ ಲೀಲೆಯಲಿ
ಗೋವತ್ಸ ಗೋಪಾಲ ರೂಪವನು ತಾಳ್ದವನ
ದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನು
ಭಜಿಸು ಮನವೆ ೧
ಕಂಜಸಂಭವಪಿತನ ಕರುಣಾಪಯೋನಿಧಿಯ
ಕುಂಜರನ ನುಡಿ ಕೇಳಿ ಒದಗಿದನ ರಣದೊಳು ಧ-
ನಂಜಯನ ಜೀವವಂ ಕೃಪೆಯಿಂದ ಕಾಯ್ದವನ
ಆಂಜನೇಯನ ನಾಳ್ದನ ||
ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿ
ನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ –
ರಂಜ್ಯೋತಿಮಯನಾಗಿ ಬೆಳಗುವನ
ಶ್ರೀ ಚರಣಕಂಜವಂ ಭಜಿಸು ಮನವೆ೨
ವಾರಿಧಿಯೊಳಾಡಿದನ ವರಗಿರಿಯ ತಾಳಿದನ
ಧಾರಿಣಿಯ ತಂದವನ ದೈತ್ಯನನು ಕೊಂದವನ
ಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯ
ಬಂಧಿಸಿದನ||
ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನ
ಚಾರುಹಯವೇರಿದನ ಸಕಲ ಸುಜನರ ಪೊರೆವ
ಧೀರ ಪುರಂದರವಿಠಲನ ಚರಣಕಮಲವನು
ನಂಬಿ ನೀ ಭಜಿಸು ಮನವೇ ೩

೨೨೭
ಮರೆಯದಿರೆಲೆ ಮನವಿಲ್ಲಿ – ಯಮ
ಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.
ಪರನಾರಿಯರ ಸಂಗವಿಲ್ಲಿ – ಉಕ್ಕು
ಎರೆದ ಸತಿಯರ ತಕ್ಕೈಸುವರಿಲ್ಲಿ
ಗುರು – ಹಿರಿಯರ ನಿಂದೆಯಿಲ್ಲಿ – ಬಾಯೊ
ಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ ೧
ಉಂಡ ಮನೆಯ ಕೊಂಬುದಿಲ್ಲಿ – ಎದೆ
ಗುಂಡಿಗೆಯನು ಸೀಳಿ ಕೊಲುತಿಹರಲ್ಲಿ
ಗಂಡನ ದಣಿಸುವುದಿಲ್ಲಿ – ಯಮ
ಕುಂಡದೊಳಗೆ ಹಾಕಿ ಕುದಿಸುವರಲ್ಲಿ ೨
ಚಾಡಿಯ ಹೇಳುಸುದಿಲ್ಲಿ – ನುಡಿ
ದಾಡುವ ನಾಲಿಗೆ ಕೇಳುವರಲ್ಲಿ
ಬೇಡಿದರಿಗೆ ಧರ್ಮವಿಲ್ಲಿ – ಇದ
ನೀಡದಿರಲು ಒದ್ದು ನೂಕುವರಲ್ಲಿ ೩
ಪುಸಿ – ಠಕ್ಕು – ಠವುಳಿಗಳಲ್ಲಿ – ಕಟ್ಟಿ
ಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿ
ಅಶನಪ್ರಭದಿಗಳಲ್ಲಿ – ಮಾಡೆ
ಬಿಸಿಯ ಕೆಂಡವ ತಂದು ತಿನಿಸುವರಲ್ಲಿ ೪
ಸಿರಿಮದದೊಳಗಿಹುದಿಲ್ಲಿ – ಸೊಕ್ಕ
ಮುರಿದು ಹಲ್ಲುಗಳ ಕಳಚುವರಲ್ಲಿ
ಪುರಂದರವಿಠಲನ ಇಲ್ಲಿ – ನೆನೆಯ
ಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ ೫

೨೨೯
ಮರೆಯದೆ ಮನದಲಿ ಸಿರಿವರನ ಚರಣವನು
ಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.
ಮುರಹರನಿಗೆರಗುವ ಶಿರವು ದ್ವಾರಕಾಪುರವು
ಹರಿಕಥೆ ಕೇಳುವ ಕರ್ಣ ಗೋಕರ್ಣವು
ಬಿರುದು ಪೊಗಳುವ ಜಿಹ್ವೆ ಸ್ಥಿರದಿ ಕ್ಷೀರಾರ್ಣವ
ವರದನ ಪೂಜಿಪ ಕರವು ರಾಮೇಶ್ವರವು ೧
ಸೃಷ್ಟೀಶ ನಿರ್ಮಾಲ್ಯ ಗೃಹಣ ನಾಸಿಕ ಕಾಶಿ
ಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವು
ಅಷ್ಟಮದಗಳ ಜರೆದ ಮುಖ ಮಥುರಾಪುರ
ವಿಷ್ಣುವನು ಪಾಡುವ ಕಂಠ ಭೂ ವೈಕುಂಠ ೨
ಪರಕೆ ನಡೆಸುವ ಜಂಘೆ ಹರಿವ ಗಂಗೆಯು ಈ
ಪರಿಯಲೊಪ್ಪುವ ಅಂಗ ಶ್ರೀರಂಗವು
ಧರೆಯೊಳು ಪುರಂದರ ವಿಠಲರಾಯನ
ಪರಮ ಭಾಗವತರ ಉದರವೆ ಬದರಿ ೩

೨೩೦
ಮರೆಯಬೇಡ ಮನವೆ ನೀನು |
ಹರಿಯ ಚರಣವ ಪ.
ಯಾಗ – ಯಜ್ಞ ಮಾಡಲೇಕೆ
ಯೋಗಿ – ಯತಿಯು ಆಗಲೇಕೆ |
ನಾಗಶಯನ ನಾರದವಂದ್ಯನ
ಕೂಗಿ ಭಜನೆ ಮಾಡು ಮನುಜ ೧
ಸತಿಯು ಸುತರು ಹಿತರು ಎಂದು
ಮತಿಯು ಕೆಟ್ಟು ತಿರುಗಲೇಕೆ |
ಗತಿಯು ತಪ್ಪಿ ಹೋಗುವಾಗ
ಸತಿಸುತರು ಬಾಹೊರೇನೊ ? ೨
ಹರಿಯ ಸ್ಮರಣೆ ಮಾತ್ರದಿಂದ
ದುರಿತ ಘೋರವೆಲ್ಲ ನಾಶ
ಪರಮಪುರುಷ ಪುರಂದರವಿಠಲ
ಪರದ ಪದವಿ ಕೊಡುವನೊ ೩

೩೫
ಮಲಗಯ್ಯ ಜಲಜನಾಭ ಪ
ಆದಿಶೇಷ್ಟನು ಬಂದು ಹಾಸಿಗೆಯಾಗಿಹ
ವೇದವಿನುತ ಜಗದಾದಿ ಪುರುಷ ಕೇಳೊ ೧
ಸಿರಿ ಭೂ ದುರ್ಗೆಯರು ತರುಣಿಯರು ಮೂವರು
ಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು೨
ಸರುವಜ್ಞ ಮುನಿವಂದ್ಯ ಸರುವ ಸ್ವತಂತ್ರನೇ
ಪರಮ ಸುಂದರ ಪುರಂದರವಿಠಲರಾಯಾ ೩

೧೩೪
ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |
ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ಪ
ಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |
ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||
ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |
ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ ೧
ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |
ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||
ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |
ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ ೨
ಬಲು ಪತಿವ್ರತೆಯರ ವ್ರತವನಳಿದ ಬುದ್ಧ |
ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||
ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |
ಚೆಲುವ ಪುರಂದರವಿಠಲ ತೊಟ್ಟಿಲೊಳು ೩

೨೩೧
ಮಲವು ತೊಳೆಯಬಲ್ಲುದೆ
ಮನವ ತೊಳೆಯದನಕ ಪ
ಹಲುವು ನೀರಿನೊಳಗೆ ಪೊಕ್ಕು
ಹಲುಬಿದರಿನ್ನೇನು ಫಲ? ಅಪ
ಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿ
ಭೋಗಬೇಡಿ ಜನರು ಜೀವಕಾಗಿ ಮುನಿವರು
ಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿ
ಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? ೧
ಪರರ ಕೇಡಬಯಸಿ ಗುರು – ಹಿರಿಯರನ್ನು ನಿಂದಿಸುತ
ಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತ
ಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿ
ಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ ೨
ತಂದೆ – ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲ
ಮಂದಗಮನೆಯರೊಡನೆ ಆನಂದದಿಂದ ನಲಿಯುತ
ತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದ
ತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ ೩
ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿ
ದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲು
ಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪ
ವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? ೪
ಏನು ಮಾಡಲೇನು ಫಲ – ಏನು ನೋಡಲೇನು ಫಲ
ಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡು
ದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ ೫

೩೪೮
ಮಹಾದಾದಿದೇವ ನಮೋ ಮಹಾಮಹಿಮನೆ ನಮೋ
ಪ್ರಹಲ್ಲಾದವರದ ಅಹೋಬಲ ನರಸಿಂಹ ಪ.
ತರಣಿಗುಬ್ಬಸವಾಗೆ ತಾರಾಪತಿಯು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು ||
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ ೧
ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿ
ಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||
ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿ
ಬಿಡದೊಡಲ ಬಗೆದ ಕಡುಗಲಿ ನಾರಸಿಂಹ ೨
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಪೂಮಳೆಗರೆಯಲು
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನು
ಕರುಣಿಸುವ ಪುರಂದರವಿಠಲ ನಾರಸಿಂಹ ೩

೨೩೨
ಮಾಡು ದಾನಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ ಪ.
ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||
ಬಾಳು ಬದುಕು ಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |
ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ ೧
ಮೂಢರ ಒಡನಾಡಿ ಮುಂದೆ ಕೆಡಲು ಬೇಡ
ಮೋಸ ನೋಡೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆ
ಕಂಡ್ಯ ನಟನೆ ಬೇಡೆಚ್ಚರಿಕೆ ೨
ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |
ನಿನ್ನಾಯು ಮುಗಿದಿರಲು ಯಮದೂತರು
ಬಂದು ಎಳೆಯುವರೆಚ್ಚರಿಕೆ ೩

ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |
ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂ
ನೆರೆನಂಬು ಎಚ್ಚರಿಕೆ ೪
ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |
ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದು
ಮುಂದೆ ನೋಡೆಚ್ಚರಿಕೆ ೫
ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |
ಎಂದೆಂದು ಅಗಲದ ಬಂಧು ಶ್ರೀ ಹರಿ
ನಮಗೆಂದು ನೋಡೆಚ್ಚರಿಕೆ ೬
ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |
ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ* ೭

೧೩೫
ಮಾಧವ ಮಧುಸೂದನ- ಯಾದವಕುಲರನ್ನ ಯ-|
ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪ
ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |
ಮುಂಗೈಯವಾಕು ಬೆರಳ ಹೊನ್ನುಂಗರ ||
ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |
ಅಂಗನೆಯರು ನಿನ್ನನೊಯ್ವರೊ ||
ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |
ಡಿಂಗರಿಗರು ಕಂಡರೆ ಬಿಡರೊ ನಿ- ||
ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |
ಕಂಗಳ ಸಿರಿಯೆ ಬಾರೋ- ರಂಗಯ್ಯ ೧
ಬಾಲಕರೊಡನಾಟ ಸಾಕು ಬಾ ಬಾರೈಯ |
ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||
ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |
ಸೋಲ್ವರೊ ನಿನಗೇಸೋ ಸೋಗೆಯರು ||
ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|
ಡ್ಡೋಲಗದೊಳು ರಕ್ಕಸರು ಪಂಥವನಾಡೆ ||
ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |
ಕಾಲಿಗೆ ಎರಗುವೆ ಬಾರೊ-ರಂಗಯ್ಯ ೨
ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|
ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||
ಎಮ್ಮ ಮನಕೆ ಅಹಲ್ಲಾದನು ನೀನೆ |
ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||
ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|
ದಮ್ಮೆಯ ಕೊಡುವೆನು ಬಾರೋ-ರಂಗಯ್ಯ ೩

೨೩೩
ಮಾನಭಂಗವ ಮಾರಿ ಮೇಲುಪಚಾರವ
ಏನ ಮಾಡಿದರಿಲ್ಲಿ ಇರಬಾರದಯ್ಯ ಪ.
ಕುಂದುಗಳನಾಡಿ ಕುಚೋದ್ಯಗಳನೆ ಮಾಡಿ
ಕಂದ ಬಾಯೆಂದು ಬಣ್ಣಿಸಿ ಕರೆಯಲು
ಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದು
ಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ ೧
ನಗಗೇಡಿ ಮಾಡಿ ನಾಲುವರೊಳಗೆ ಕೈಯ
ಮುಗಿವೆ ಬಾಯೆಂದು ಬಣ್ಣಿಸಿ ಕರೆಯಲು
ಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲು
ತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ ೨
ಆರ್ಥ ಹೋದರು ಪ್ರಾಣ ಹೋದರೂ ಮಾನ
ವ್ಯರ್ಥವಾಗದ ಹಾಗೆ ಕಾಯಬೇಕು
ಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನ
ಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ ೩

೨೩೪
ಮಾನವಜನ್ಮ ದೊಡ್ಡದು – ಇದ |
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.
ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |
ಮಣ್ಣುಮುಕ್ಕಿ ಮರುಳಾಗುವರೆ ||
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |
ಉಣ್ಣದೆ ಉಪವಾಸವಿರುವರೇನೋ ೧
ಕಾಲನವರು ಬಂದು ಕರಪಿಡಿದೆಳೆವಾಗ |
ತಾಳು ತಾಳೆಂದರೆ ಕೇಳುವರೆ ? ||
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ೨
ಏನು ಕಾರಣ ಯದುಪತಿಯನು ಮರೆತಿರಿ |
ಧ್ಯಾನ್ಯ – ಧನ – ಸತಿ – ಸುತರಿವು ನಿತ್ಯವೆ? ||
ಇನ್ನಾದರು ಶ್ರೀ ಪುರಂದರವಿಠಲನ |
ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ ೩

೨೩೫
ಮಾನಹೀನರಿಗೆ ಅಭಿಮಾನವೇಕೆ – ಪ್ರ
ಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ? ಪ.
ಕಾಡಿನೊಳು ತಿರುಗುವಗೆ ಕನಕ ಭೂಷಣವೇಕೆ ?
ಓಡಿನಲಿ ಉಂಬುವಗೆ ಹರಿವಾಣವೇಕೆ ?
ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ?
ಪಾಡಲರಿಯದೆ ಪ್ರೌಡತನವೇಕೆ ಕೃಷ್ಣಾ ? ೧
ಪತಿ ಮೀರಿ ನಡೆವಳ ವ್ರತ ನೇಮತನವೇಕೆ ?
ಸತಿಗಳುಕಿ ನಡೆವವಗೆ ಸ್ವಾತಂತ್ತ್ಯವೇಕೆ ?
ಮತಿಗೆಟ್ಟು ತಿರುಗುವಗೆ ಮಂತ್ರ – ತಂತ್ರಗಳೇಕೆ ?
ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ ೨
ಕಾಮವಿಲ್ಲದವರಿಗೆ ಕಾಂತಿಯರ ಗೊಡವೇಕೆ ?
ಪ್ರೇಮವಿಲ್ಲದ ಬಂಧು – ಬಳಗವೇಕೆ ?
ಸ್ವಾಮಿ – ಶ್ರೀ ಪುರಂದರವಿಠಲ ನೆನೆಯದ
ತಾಮಸದ ಜನರಿಂಗೆ ಕೈವಲ್ಯವೇಕೆ ? ೩

೧೮೩
ಮಾಮಝ ಭಾಪುರೆ ಭಳಿರೆ ಹನುಮಂತ
ರಾಮಪದ ಸೇವಿಪ ವೀರ ಹನುಮಂತ ಪ
ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ ೧
ಅಂಬರಕೆ ಪುಟನೆಗೆದು ಅಂಬುಧಿಯ ನೆರೆ ದಾಟಿ
ಕುಂಭಿನಿಯ ಮಗಳಿಗುಂಗುರವನಿತ್ತು |
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ ೨
ಅತಿದುರಳ ರಕ್ಕಸನು ರಥದ ಮೇಲಿರಲು ರಘು-
ಪತಿಯು ಪದಚರಿಯಾಗಿ ನಿಂತಿರಲು ನೋಡಿ ||
ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ತ್ವವಂತ ಹನುಮಂತ ೩
ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದು
ದೃಢಭಕ್ತಿಯಿಂದ ಮೌನದಿ ಕುಳಿತು ||
ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ೪
ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯೆನಿಸೀ ||
ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ
ಸುತ್ತ ನಿನಗಾರು ಸರಿ – ವಿಜಯ ಹನುಮಂತ ೫

೩೨೩
ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ |
ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪ
ಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |
ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||
ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |
ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ ೧
ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |
ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||
ನೆಲೆಯ ಮನೆಯ ಮಾಡಿ ಚರ್ಮಹೊಲಿಞ್ಯ ಹೊದಿಕೆ ಹೊದಿಸಿದಂಥ |
ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ ೨
ಎನ್ನ ಸತಿಯು ಎನ್ನ ಸುತರು ಎನ್ನ ಬಂಧು – ಬಳಗವು |
ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||
ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |
ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ ೩
ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |
ಹರಿದು ಪಾಪಕರ್ಮದಿಂದೆ ತೊಪಳಲಿ
ಬಳಲಿ ನೊಂದೆ ನಾ ||
ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |
ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ ೪
ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |
ಅಕ್ಷಯ – ಅನಂತ ನನ್ನನೇಕೆ ಹೊರಗೆ ಮಾಡಿದೆ ||
ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |
ರಕ್ಷಿಸಯ್ಯ ಲಕ್ಷೀಪತಿ ಪುರಂದರ ವಿಠಲನೆ ೫

೩೩೩
ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು
ಶ್ರೀ ರಾಮ ಸೇವೆಗೆ ತಡವಾಯಿತೇಳು ಪ.
ಸೇತುಗಟ್ಟಲು ಬೇಕು ಶರಧಿ ದಾಟಲು ಬೇಕು
ಮಾತೆಗೆ ಉಂಗುರವ ಕೊಡಲು ಬೇಕು ||
ಪಾತಕಿ ರಾವಣನ ಶಿರವನ್ಹರಿಯಲು ಬೇಕು
ಸೀತೆಪತಿ ರಾಮರಿಗೆ ನಮಿಸಬೇಕು ೧
ಇಂತು ಕಳಿಯಲು ಬೇಕು ಅಜ್ಞಾತವಾಸವನು
ಪಂಥದಲಿ ಕೀಚಕರ ಒದೆಯಬೇಕು ||
ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರ
ಕುಂತಿನಂದನನೆಂದು ಹೆಸರಾಗಬೇಕು ೨
ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕು
ತಿದ್ದಿ ಹಾಕಲು ಬೇಕು ಸಕಲಗ್ರಂಥಗಳ ||
ಅದ್ವೈತವಾದಿಗಳ ಗೆದ್ದು ಕೆಡಹಲು ಬೇಕು
ಮುದ್ದು ಪುರಂದರವಿಠಲ ದಾಸನೆನಿಸಲು ಬೇಕು ೩

೨೩೬
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.
ಹಾವ ಹಿಡಿಯಲು ಬಹುದು ಹರಣ ನೀಡಲು ಬಹುದು |
ಬೇವ ಕಿಚ್ಚನು ಹಿಡಿದು ನುಂಗಬಹುದು ||
ಭಾವೆಯ ತಂದ ಮನೆಯಲಿ ಜೀವಿಪುದಕಿಂತ
ಸಾವುದೇ ಲೇಸು ಅಭಿಮಾನಿಗಳಿಗೆ ೧
ಪರರ ಸೇರಲುಬಹುದು ಪತಿತರಲ್ಲಿರಬಹುದು |
ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||
ತರುಣಿಯ ತಂದೆಯ ಮನೆಯವಾಸಕ್ಕಿಂತ |
ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು ೨
ಮಾವ – ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |
ಹೇವವನಿಕ್ಕಿ ಚೂರ್ಣವ ಮಾಡಲು ||
ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದು
ಮಾವ ಹೊರಗಾಡುವನು ಚಿಕ್ಕ ನುಡಿಗಳನು ೩
ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |
ಒಂದೆರಡು ತಿಂಗಳೊಳಗೆ ಹಿತವಾದವು ||
ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |
ಸಂದೇಹವೇಕೆ ಸಂಸಾರಿಗೂ ೪
ಈ ಪರಿಯಲುಂಬಂಥ ಅಳಿಯ ಭೋಜನದಿಂದ |
ಗೋಪಾಳ ಲೇಸು ಅಭಿಮಾನಿಗಳಿಗೆ ||
ಶ್ರೀಪತಿ ನಮ್ಮ ಪುರಂದರವಿಠಲನ
ಈ ಪರಿ ಭಜಿಸಿ ಸುಖಿಯಾಗೊ ಮನವೆ * ೫

೧೮೪
ಮುಖ್ಯಪ್ರಾಣಾ ಎನ್ನ ಗುರುವೇ ಪ
ರಕ್ಕಸಾಂತಕ ಶ್ರೀ ರಾಮನ ನಿಜದಾಸ ಅ.ಪ
ತಂದೆ ನೀನೆ ಎನಗೆ ತಾಯಿ ನೀನೆ | ಬಂಧು ನೀನೆ
ಎನಗೆ ಬಳಗ ನೀನೇ |
ಎಂದೆಂದಿಗೂ ನಮ್ಮೆಲ್ಲರ ರಕ್ಷಪನು ನೀನೇ ೧
ತಾತ ನೀನೇ ಎನಗೆ ಕರ್ತ ನೀನೇ | ವಿತ್ತ ನೀನೆ
ಎನಗೆ ವಿಭವ ನೀನೆ |
ಸತ್ಯ ನೀನೇ ಸದಾಚಾರವು ನೀನೇ ೨
ಸುಖವು ನೀನೇ ಎನಗೆ ಸುಲಭ ನೀನೇ |
ಏಕಾಂತ ಶ್ರೀಪುರಂದರವಿಠಲನ ಭಕುತ ನಿಜವು ನೀನೇ೩

೭೪
ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಮುತ್ತು ಬಂದಿದೆ ಪ.
ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪ
ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತು
ಹಲಧರಾನುಜವೆಂಬ ಪವಿತ್ರ ನಾಮದ ಮುತ್ತು
ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು ೧
ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು
ಭಂಜಿಸದ ಇತರ ಭಯವ ತೋರುವ ಮುತ್ತು
ಸಂಜೀವರಾಯ ಹೃದಯದೊಳಗಿಹ ಮುತ್ತು ೨
ಜ್ಞಾನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತು
ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು
ಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತು
ಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು * ೩

೨೩೮
ಮುತ್ತೈದೆಯಾಗಿರಬೇಕು ಮುದದಿಂದಲಿ |
ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು ಪ.
ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |
ವರವೈರಾಗ್ಯವೆಂಬ ಒಪ್ಪುವ ಮೂಗುತಿ ||
ತಾರತಮ್ಯದರಿಮೆ ತಾಯಿತಿ ಮುತ್ತುಸರ |
ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು ೧
ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |
ನಿರುತ ಸತ್ಕರ್ಮವೇ ನಿಜಕಾಂತಿಯು ||
ಪರಮ ಭಕ್ತರ ಪಾದರಜ ಹರಳು ಬಂಗಾರ |
ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ ೨
ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |
ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||
ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |
ಧೃಡ ಭಕ್ತಿಯೆಂಬಂಥ ಕಡಗ – ಬಳೆ ಇಟ್ಟುಕೊಂಡು ೩

೧೩೬
ಮುದ್ದು ತಾರೊ-ಕೃಷ್ಣ-ಎದ್ದು ಬಾರೊ |
ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪ
ಕಡೆಯುವ ಸಮಯಕೆ ಬಂದು ಕಡೆವ
ಸತಿಯ ಕೈಯಪಿಡಿದು |
ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆ
ಮೆಲುವ ಬಾಯಲೊಮ್ಮೆ ೧
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |
ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ ೨
ಪುರಂದರವಿಠಲನೆ ತೊರವೆಯ ನಾರಸಿಂಹ |
ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ ೩

೨೩೭
ಮುಪ್ಪಿನ ಗಂಡನ ಒಲ್ಲೆನೆ |
ತಪ್ಪದೆ ಪಡಿಪಾಟ ಪಡಲಾರೆನವ್ವ………… ಪ.
ಉದಯದಲೇಳಬೇಕು ಉದಕ ಕಾಸಲು ಬೇಕು |
ಹದನಾಗಿ ಬಜೆಯನು ಅರೆದಿಡಬೇಕು ||
ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |
ಬಿದಿರಕೋಲು ತಂದು ಮುಂದಿಡಬೇಕು ೧
ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |
ಹೊತ್ತು ಹೊತ್ತಿಗೆ ಜೊಲ್ಲ ಚೆಲ್ಲಬೇಕು ||
ಮೆತ್ತನವೆರಡು ಮುದ್ದಿಯ ಮಾಡಲುಬೇಕು |
ಒತ್ತೊತ್ತಿ ಕೂಗಿ ಕರೆಯಲುಬೇಕು ……. ೨
ಜಾಡಿ ಹಾಸಬೇಕು ನೋಡಿ ಬಾಡಬೇಕು |
ಅಡಗಡಿಗೆ ಕಣ್ಣೀರ ಸುರಿಸಬೇಕು ||
ಒಡೆಯ ಶ್ರೀ ಪುರಂದರವಿಠಲನ ನೆನೆಯುತ |
ಮಿಡಿಗೊಂಡು ಮೂಲೆಗೆ ಒರಗಬೇಕು ೩

೧೩೭
ಮುಯ್ಯಕ್ಕೆ ಮುಯ್ಯ ತೀರಿತು – ಜಗ |
ದಯ್ಯ ವಿಜಯ ಸಹಾಯ ಪಂಢರಿರಾಯ ಪ
ಸಣ್ಣವನೆಂದು ನಾ ನೀರು ತಾಯೆಂದರೆ |
ಬೆಣ್ಣೆಗಳ್ಳ ಕೃಷ್ಣ ಮರೆಯಮಾಡಿ ||
ಚಿನ್ನದ ಪಾತ್ರೆಯ ನೀರ ತಂದಿತ್ತರೆ |
ಕಣ್ಣ ಕಾಣದೆ ನಾನು ಟೊಣೆದೆ ಪಂಢರಿರಾಯ – ೧
ಎನ್ನ ಪೆಸರ ಪೇಳಿ ಸೂಳೆಗೆ ಕಂಕಣ |
ವನ್ನು ನೀನು ಕೊಟ್ಟು ನಿಜವಮಾಡೆ ||
ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ |
ನಿನ್ನ ಮುಯ್ಯಕೆ ಮುಯ್ಯ ತೋರಿದೆ ಪಂಢರಿರಾಯ -೨
ಭಕ್ತವತ್ಸಲನೆಂಬ ಬಿರುದು ಬೇಕಾದರೆ |
ಕಿತ್ತು ಈಡಾಡೊ ಇನ್ನೊಂದು ಕಂಕಣವ ||
ಮುಕ್ತಿಗೆ ನೀನಲ್ಲದಾರನು ಕಾಣೆನು |
ಮುಕ್ತೀಶ ಪುರಂದರವಿಠಲ ಪಂಢರಿರಾಯ – ೩

೩೨೪
ಮುರಹರ ನಗಧರ ನೀನೆ ಗತಿ
ಧರಣಿ ಲಕ್ಷ್ಮೀಕಾಂತ ನೀನೆ ಗತಿ ಪ
ಶಕಟ ಮರ್ದನ ಶರಣಾಗತ ವತ್ಸಲ
ಮಕರ ಕುಂಡಲಧರ ನೀನೆ ಗತಿ ||
ಅಕಳಂಕ ಚರಿತನೆ ಆದಿನಾರಾಯಣ
ರುಕುಮಿಣಿಪತಿ ಕೃಷ್ಣ ನೀನೆ ಗತಿ ೧
ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯ
ದಿನ ದಿನ ಮೆದ್ದ ಹರಿ ನೀನೆ ಗತಿ ||
ಅನುದಿನ ಭಕುತರ ಬಿಡದೆ ಕಾಯುವ
ಘನ ಮಹಿಮನೆ ಕೃಷ್ಣ ನೀನೆ ಗತಿ ೨
ಪನ್ನಗಶಯನ ಸುಪರ್ಣಗಮನನೇ
ಪೂರ್ಣ ಚರಿತ ಹರಿ ನೀನೆ ಗತಿ ||
ಹೊನ್ನ ಹೊಳೆಯಲಿಹ ಪುರಂದರ ವಿಠಲ
ಚೆನ್ನ ಲಕ್ಷ್ಮೀಕಾಂತ ನೀನೆ ಗತಿ ೩

೭೫
ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ
ಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.
ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು
ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು
ಸುತ್ತೇಳು ಮೈಗೆರಡು ಜೋಡು ಬಂಗಾರ
ಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ ೧
ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲ
ಬಿಡದೆ ಪಟ್ಟಾವಳಿಯುಟ್ಟು ಬಲ್ಲವಳು
ಅಡವಿಯೊಳಗೆ ಪುಟ್ಟಿ ಪಡೆದಳು ದೇಹವ
ಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ ೨
ಬೇರಾಗಿ ಬೆರಳೈದು ಮೂರು ತಾನೊಂದಾಗಿ
ಯಾರು ಕಂಡರು ಎಂದು ನಸುನಗುತ
ಸೇರಿದ ಭಕುತರ ಪೊರೆವ ರಂಗಯ್ಯನ
ಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ ೩

೨೪೦
ಮೂಡ ಬಲ್ಲನೆ ಜ್ಞಾನ – ದೃಢ ಭಕುತಿಯ ?
ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.
ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆ
ಗೋಣಿ ಬಲ್ಲುದೆ ಎತ್ತಿನಾ ದುಃಖವ
ಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆ
ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು – ಇರಳ ? ೧
ಬಧಿರ ಕೇಳುವನೆ ಸಂಗೀತವನು ಪಾಡಿದರೆ ?
ಚದುರ ಮಾತುಗಳಾಡುವನೆ ಮೂಕನು ?
ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?
ಮಧುರ ವಚನವ ನುಡಿವನೇ ದುಷ್ಟ ಮನುಜ ೨
ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?
ನಿಜಭಕುತಿ ಮುಕುತಿ ಸುಖವನ್ನು ಕೊಡುವ
ಭುಜಗೇಂದ್ರಶಯನ ಶ್ರೀ ಪುರಂದರವಿಠಲನ
ಭಜಿಸಲಕ್ಕರಿಯದವ ಕಡು ಪಾಪಿ ಮನುಜ ೩

೩೨೫
ಮೂರುತಿಯನೆ ನಿಲ್ಲಿಸೋ
ಮಾಧವ ನಿನ್ನ ಪ
ಎಳತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದುಡೆಯಲೊಪ್ಪುವ ನಿನ್ನ ೧
ಮುತ್ತಿನ ಹಾರ ನವರತ್ನದುಂಗುರ ಬೆರಳ
ಮತ್ತೆ ಶ್ರೀಲಕುಮಿಯ ಉರದೊಲೊಪ್ಪುವ ನಿನ್ನ ೨
ಭಕ್ತರ ಕಾಮಧೇನು ಕಲ್ಪತರುವೆಂಬ
ಭಕ್ತ ವತ್ಸಲ ಪುರಂದರವಿಠಲನೆ ನಿನ್ನ ೩

೨೩೯
ಮೂರ್ಖರಾದರು ಇವರು ಲೋಕದೊಳಗೆ
ಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.
ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ
ಗಂಟನೊಬ್ಬನ ಕೈಯಲಿಡುವವನೆ ಮೂರ್ಖ
ನಂಟರಿಗೆ ಸಾಲವನು ಕೊಡುವಾತ ಮೂರ್ಖ – ಜಗ
ಕಂಟಕನಾದವನು ಕಡು ಮೂರ್ಖನಯ್ಯಾ ೧
ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖ
ಸರ್ಪನಲಿ ಗಾರುಡವ ನಡಸುವನೆ ಮೂರ್ಖ
ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪ ರಂಗಯ್ಯನನು ನೆನೆಯದವ ಮೂರ್ಖ ೨
ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖ
ಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖ
ಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖ
ಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ ೩
ಪಡೆದ ಮಗಳನು ಮಾರಿ ಒಡಲಹೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖ
ಬಡತನವು ಬಂದರೆ ಬಯಸಿಕೊಂಬವ ಮೂರ್ಖ
ದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ ೪
ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖ
ಹೇಮವನು ಗಳಿಸಿ ಉಣದಿದ್ದವನೆ ಮೂರ್ಖ
ನೇಮದಲಿ ಹಿರಿಯರನು ನೋಡದವ ಮೂರ್ಖ ದುರ್
ನಾಮವನು ಕೊಂಬಾತ ಕಡು ಮೂರ್ಖನಯ್ಯ ೫
ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖ
ಭೂಸೂರರಿಗನ್ನವನು ಕೊಡದವನೆ ಮೂರ್ಖ
ಶೇಷಪತಿ ಕೃಷ್ಣನ ನೆನೆಯದವ ಮೂರ್ಖ ಹರಿ
ದಾಸನಾಗಿರದವನು ಕಡು ಮೂರ್ಖನಯ್ಯ ೬
ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖ
ಕೊಂಡೆಯವ ಪೇಳಿ ತಿರುಗುವವ ಮೂರ್ಖ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ ೭

೨೪೧
ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ ಪ.
ತಿರುಗಾಡುತ ಮನೆಯೊಳಗಾದರು ಒಮ್ಮೆ – ಕೃಷ್ಣಾ
ಪರಿಪರಿ ಕೆಲಸದೊಳಿದುವೊಂದು ಕೆಲಸವು – ಕೃಷ್ಣಾ ೧
ಮಲಗಿಯೆದ್ದು ಮೈಮುರಿದೇಳುತಲೊಮ್ಮೆ – ಕೃಷ್ಣಾ
ಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ – ಕೃಷ್ಣಾ ೨
ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾ
ಕಂದನ ಬಿಗಿದಪ್ಪಿ ಮುದ್ಧಾಡುತಲೊಮ್ಮೆ – ಕೃಷ್ಣಾ ೩
ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ – ಕೃಷ್ಣಾ
ಮಂದಗಮನೆಯೊಳು ಸರಸವಾಡುತಲೊಮ್ಮೆ – ಕೃಷ್ಣಾ ೪
ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾ
ದ್ವಾರಕಾ ಪುರವಾಸ ಪುರಂದರ ವಿಠಲ ಕೃಷ್ಣಾ ೫

೩೨೭
ಮೋಸ ಹೋದೆನಲ್ಲ – ಸಕಲವು-|
ವಾಸುದೇವ ಬಲ್ಲ ಪ
ಭಾಸುರಂಗ ಶ್ರೀ ವಾಸುಕಿಶಯನನ |
ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪ
ದುಷ್ಟಜನರ ಕೂಡಿ – ನಾನತಿ-|
ಭ್ರಷ್ಟನಾದೆ ನೋಡಿ ||
ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |
ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ ೧
ಕಾಯವು ಸ್ಥಿರವಲ್ಲ-ಎನ್ನೊಳು-|
ಮಾಯೆ ತುಂಬಿತಲ್ಲ ||
ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |
ಕಾಯಜ ಜನಕನ ಧ್ಯಾನವ ಮಾಡದೆ ೨
ಕಂಗಳಿಂದಲಿ ನೋಡೊ-ದೇವಾನಿ-|
ನ್ನಂಗ ಸಂಗವ ನೀಡೋ ||
ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|
ನ್ನಂಗದೊಳಿರುವಂತೆ ದಯವನು ಮಾಡೊ೩

೩೨೬
ಮೋಸ ಹೋದೆನಲ್ಲ -ವಿಠಲ- ಮೋಸ ಹೋದೆನಲ್ಲಾ ಪ
ಆಸೆಬಿಟ್ಟು ಹಂಬಲಿಸಿ |
ಹೇಸಿ ನರಕದೊಳಗೆ ಸಿಲುಕಿ ಅ.ಪ
ಪುಷ್ಪ ಶ್ರೀ ತುಳಸಿಯನ್ನು |
ಒಪ್ಪದಿಂದ ಮನೆಗೆ ತಂದು ||
ಅಪ್ಪ ಕೃಷ್ಣನ ಪೂಜೆಯ ಮಾಡಿ – ಮೇ-|
ಲಿಪ್ಪ ಲೋಕದ ಸೂರೆಗೊಳದೆ ೧
ಕಾಯದಾಸೆಗೆ ಕಂಡುದ ಬಯಸಿ |
ನಾಯಿಯಂತೆ ಮನೆಮನೆ ತಿರುಗಿ ||
ಮಾಯಾಪಾಶದೋಳಗೆ ಸಿಲುಕಿ |
ಜೀಯ ನಿನ್ನನು ಧ್ಯಾನಿಸಲರಿಯದೆ ೨
ಸತಿಸುತರು- ಪಿತೃ-ಬಾಂಧವರು |
ಪಥವ ತೋರಿಸಬಲ್ಲರೆ ಇವರು ||
ಗತಿ ನೀನೇ ಪುರಂದರ ವಿಠಲ |
ಹಿತವ ತಾಯಿ ತಂದೆ ನೀನು ೩

೧೩೮
ಯದುನಂದನನ ನೋಡುವ – ಬಾರೆ ಲತಾಂಗಿ |
ಹದಿನಾಲ್ಕು ಜಗವನ್ನು ಪೊರೆವ – ನೀಲಘನಾಂಗನ ಪ
ಬಿಗಿದುಟ್ಟ ಕನಕಾಂಬರ – ಕಾಂಚಿಯ ದಾಮ |
ನಗೆಯರಳ ಧರಿಸಿದವನ |
ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣನ ೧
ಸಣ್ಣ ಪೊಂಗಳಲೂದುತ – ವನ್ಯದಳಾಕ್ಷ |
ಕಣ್ಣ ಸನ್ನೆಯ ಮಾಡುತ ||
ಚಿಣ್ಣರ ಒಡಗೂಡಿ ಚಿಗಿದು ಬಾಹ ಕೃಷ್ಣನ ೨
ಮಂದಹಾಸ ಮುಖಾಂಬುಜ – ಪೊಂದಿದಂಥ |
ಗಂಧ-ಕಸ್ತೂರಿ ತಿಲಕಾ |
ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ ೩

೩೪೯
ಯಮ ತನ್ನ ಪುರದಿ ಸಾರಿದನು ನಮ್ಮ
ಕಮಲನಾಭನ ದಾಸರ ಮುಟ್ಟದಿರಿ ಎಂದು ಪ.
ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ
ನಿಜ ದ್ವಾದಶನಾಮ ಧರಿಸಿಪ್ಪರ ||
ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳ
ಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು ೧
ತಾಳದಂಡಿಗೆ ಗೀತವಾದ್ಯ ಸಮ್ಮೇಳದಿ
ಊಳಿಗವನು ಮಾಳ್ಪ ಹರಿದಾಸರ ||
ಕೇಳಿದೊಡನೆ ಕರವೆತ್ತಿ ಮುಗಿದು ಯಮ
ನಾಳುಗಳೆಂದು ಹೇಳದೆ ಬನ್ನಿರೊ ಎಂದು ೨
ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟು
ಚಿಮ್ಮುತ ಚೀರುತ ಬೊಬ್ಬೆಯಿಟ್ಟು
ಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ
ಬ್ರಹ್ಮೇತಿಕಾರನೆಳತನ್ನಿರೋ ಎಂದು ೩
ಮಾತಾಪಿತರ ದುರ್ಮತಿಯಿಂದ ಬೈವರ
ಪಾತಕಿಗಳ ಪರದ್ರೋಹಿಗಳ
ನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳು
ಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು ೪
ನರರ ಹಾಡಿ ಪಾಡಿ ನರರ ಕೊಂಡಾಡುವ
ನರಕಿಗಳ ಕೀಳುನಾಯ್ಗಳ ಮನ್ನಿಸುವ
ದುರುಳ ಜ್ಞಾನಿಜನರನೆಳೆತಂದು ಬಾಯೊಳು
ಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು ೫
ಕೇಶವ ಹರಿ ಎಂಬ ದಾಸರ ಹೃದಯದಿ
ವಾಸವಾಗಿಹ ಸಿರಿ ತಿರುಮಲೇಶ
ದಾಸರ ದಾಸರ ದಾಸನೆನಿಪ ಹರಿ
ದಾಸರನ್ನು ಕೆಣಕದೆ ಬನ್ನಿರೋ ಎಂದು ೬
ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿ
ಪನ್ನಗಶಯನನೆ ಗತಿಯೆನ್ನುತ
ತನ್ನ ಭಕ್ತರ ಕಾಯ್ವ ಪುರಂದರವಿಠಲನ
ಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು ೭

೩೬
ಯಮನೆಲ್ಲೊ ಕಾಣೆನೆಂದು ಹೇಳಬೇಡ |
ಯಮನೇ ಶ್ರೀರಾಮನು ಸಂದೇಹ ಬೇಡ ಪ
ನಂಬಿದ ವಿಭೀಷಣಗೆ ರಾಮನಾದ |
ನಂಬದಿದ್ದ ರಾವಣಗೆ ಯಮನೇ ಆದ ೧
ನಂಬಿದ ಅರ್ಜುನನಿಗೆ ಬಂಟನಾದ |
ನಂಬಿದಿದ್ದ ಕೌರವನಿಗೆ ಕಂಟಕನಾದ ೨
ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ ೩
ನಂಬಿದ ಪ್ರಹ್ಲಾದಗೆ ಹರಿಯಾದ |
ನಂಬದಿದ್ದ ಹಿರಣ್ಯಕಗೆ ಅರಿಯಾದ೪
ನಂಬಿದವರ ಸಲಹುವ ನಮ್ಮ ದೊರೆಯು |
ಅಂಬುಜಾಕ್ಷ ಪುರಂದರವಿಠಲ ಹರಿಯು ೫

೩೨೮
ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣ
ನೀ ಕರುಣಾಕರನಲ್ಲವೆ? ಪ
ಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?
ಅತ್ಯಂತ ಅಪರಾಧಿ ನಾನಾದಡೇನಯ್ಯ
ಇತ್ತಿತ್ತ ಬಾ ಎನ್ನಬಾರದೆ ರಂಗ೧
ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?
ಮಂದಮತಿ ನಾನಾದಡೇನು ಕೃಪಾ
ಸಿಂಧು ನೀ ರಕ್ಷಿಸಬಾರದೆ ರಂಗ ೨
ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ ೩

೧೩೯
ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ ಪ
ಸೋದರ ಮಾವನ ಮಥುರಿಲಿ ಮಡುಹಿದ ಯ
ಶೋದೆಯ ನಂದನ ನೀ ಬಾರೋ ಅ.ಪ
ಕಣಕಾಲಂದುಗೆ ಗಣಗಣಕೆನುತಲಿ
ತನನನ ವೇಣು ನಾದದಲಿ ||
ಚಿಣಿಕೋಲು ಚಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ೧
ಶಂಖ ಚಕ್ರವು ತೋಳಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ ಅಕ- ||
ಳಂಕ ಮಹಿಮನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿಬಾರೋ ೨
ಖಗವಾಹನನೆ ಬಗೆ ಬಗೆ ರೂಪನೆ |
ನಗೆ ಮೊಗದರಸನೆ ನೀ ಬಾರೋ ||
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |
ಪುರಂದರ ವಿಠಲ ನೀ ಬಾರೋ ೩

೩೨೯
ಯಾರಲಿ ದೂರುವೆನೋ ಗಿರಿಯ ರಾಯಾ
ಯಾರೆನ್ನ ಸಲಹುವರೋ ಪ
ಸಾರಿದ ಭಕ್ತ ಸಂಸಾರಿ ನಿನ್ನಯ ಪದ
ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪ
ಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳು
ದುಷ್ಟರಿಂದಲಿ ನೊಂದೆನೋ ||
ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ ೧
ಹಿಂದೆ ಮಾಡಿದ ಕರ್ಮವು ಈ ಭವದೊಳು
ಮುಂದಾಗಿ ತೋರುತಿದೆ ||
ಇಂದೇನು ಗತಿ ಅದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ ೨
ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತ
ಹಗೆಗಳ ನಗಿಸುತಿದೆ ||
ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆ
ಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ ೩
ಬಾಡಿದರಳಿಸಸಿಯ ಕಲ್ಲಿನ ಮೇಲೆ
ಈಡಾಗಿ ನಾಟಿದರೆ ||
ಬೇಡಿಕೊಂಡರೆ ತಳಿರು ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದ ಮೇಲೆ ೪
ಹಲವು ಪರಿಯ ಕಷ್ಟವ ನಿನ್ನಯ ಪಾದ
ಜಲಜದ ಕರುಣದಲಿ ||
ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗು ಎನ್ನೊಳು ಪುರಂದರವಿಠಲ ೫

೭೬
ಯಾರೂ ಸಂಗಡ ಬಾಹೋರಿಲ್ಲ
ನಾರಾಯಣ ನಿಮ್ಮ ನಾಮವೊಂದಲ್ಲದೆ ಪ.
ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆಬಾಹಳೆ ೧
ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರಿಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇ
ನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ ೨
ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ಧ ಹಾಕೆಂಬರು
ಎತ್ತಿದ ಕಸಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ ೩
ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು ೪
ಯಮನ ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ * ೫

೧೪೦
ಯಿದ್ದ ಪಾಂಡವರ ಬಳಿಯ ಶುದ್ಧ ಮಾನವ ಮುದ್ದು
ಮೋಹದ ಮುದ್ದು ಗೆಳೆಯಾ ಪ
ಕರುಗಳ ಬಿಟ್ಟ ಕುರುಗಳ ಕರಮಾ | ಕರದಲಿ
ಆಕಳ ಮೊಲೆಗಳ ಪಿಡಿದೂ | ಸುರಿದುಚ್ಚಪ್ಪರಿದು ಕಂಡ
ಕಟಾವಾಯುಲ್ಲಿ ನೊರೆವಾಲ ೧
ತುಡುಡಿಯಂಬ ಕಡವಧನಿಗೆ | ಅಡಗಿ ಅಡಗಿಯೊಳ
ತೊಳನಾಡಿಸುತ | ಮಡದಿಯರೆಲ್ಲರು ಮೋಹಸಿ ಕರೆದರೆ |
ತುಡುಕಿ ಬೆಂಣ್ಣೆಯ ಮೆದ್ದಕಾಣೆ ೨
ಒಂದಾಂಲೊಂದೊಂದು ಕಡವು | ವೊಂದಿತು ಗೋಪಿಯರ
ಮುಂದಕೆ | ತಂದೆ ಪುರಂದರ ವಿಠಲ ರಾಯನ ವಂದಿಸುತ೩

೧೪೧
ರಂಗ ಕೊಳಲನೂದಲಾಗ |
ಮಂಗಳಮಯವಾಯ್ತು ಧರೆ -ಜ – ಪ
ನಂಗಳು ಚೈತನ್ಯ ಮರೆದು |
ರಂಗಧ್ಯಾನಪರರಾದರು ಅ.ಪ
ಬಾಡಿದ ಮಾಮರಗಳು ಗೊನೆಯೊಡೆದವು |
ತೀಡುತ ಮಾರುತ ಮಂದಗತಿಗೊಯ್ಯೆ ||
ಬಾಡಿದ ಬರಲು ಫಲದ ಗೊಂಚಲು |
ಪಾಡಲೊಲ್ಲವಳಿಕುಲಗಳು ||
ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|
ತಾಡದೆ ಕಳೆಗುಂದಿದವು ಕೋಗಿಲೆ ||
ಓಡಾಟ ವೈರಾಟ ಬಿಟ್ಟು ಖಗಮೃಗ |
ಗಾಢ ನಿದ್ರಾವಶವಾದವು ೧
ಕೆಳಗಿನುದಕ ಉಬ್ಬೇರಿ ಬಂದುವು |
ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||
ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |
ಕಲುಕರಗಿ ಕರಗಿ ನೀರಾದುವು ||
ನಳಿನ ಚಂಪಕ ನಾಗ ಪುನ್ನಾಗ ಪಾ-|
ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||
ಕುಲ ಮಾಲತಿ ಜಾಜಿ ಪರಿಮಳಗೂಡಿ |
ನೀಲಾಂಗನಂಘ್ರಿಗೆ ನೆರೆದುವು ೨
ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |
ವತ್ಸದೊಡಲಾಸೆ ಜರಿದು ಎಳೆಹಲ್ಲ||
ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |
ಪುಚ್ಚವ ನೆಗಹಿ ನೀಂಟಿಸಿ ||
ಅಚ್ಯುತನಾಕೃತಿ ನೋಡಲು ಸುರರಿಗೆ |
ಅಚ್ಚರಿಯಾಯಿತು ಆವು ಕಂಡಾನಂದ ||
ಪೆಚ್ಚಿ ಮುಕುಂದನ ಲೀಲಾವಿನೋದಕೆ |
ಮೆಚ್ಚಿ ಕುಸುಮವ ಸುರಿದರು ೩
ಮುದ್ದು ಮೋಹನನ ಮಂಜುಳ ಸಂಗೀತ |
ಸದ್ದನಾಲಿಸಿ ಗೋಪಾಂಗನೆಯರೆಲ್ಲ ||
ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |
ಎದ್ದು ಪರವಶರಾದರು ||
ಸಿದ್ದ ಮುನಿಜನರಿದ್ದ ಸಮಾಧಿಯಿಂ-|
ದೆದ್ದೆದ್ದು ಕುಣಿದೆದ್ದರು ಎದುರಾಗಿ ||
ಗದ್ದುಗೆಯರಸನ ಒಲಿಸಿಕೊಂಡರು |
ಗೆದ್ದರು ಭವದ ಸಮುದ್ರವನು ೪
ಶ್ರೀಮನೋಹರ ಗೋಪಾಲ ಮೂರುತಿ |
ಆ ಮಧು ಕುಂಜ ವನದಿ ತ್ರಿಭಂಗಿಯಲಿ ||
ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |
ನಾಮ ಮುಕುಟದ ಬೆಳಕಿನಲಿ ||
ದಾಮ ವನಮಾಲೆ ಶ್ರೀವತ್ಸ ಕೌಸ್ತುಭ |
ಸ್ವಾಮಿ ಪುರಂದರವಿಠಲರಾಯನ |
ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು ೫

೩೩೧
ರಂಗ ರಂಗ ಎಂಬ ನಾಮವ ನೆನೆವರ |
ಸಂಗದೊಳಿರಿಸು ಎನ್ನ ಪ
ಅಂಗದೊಳ್ಲೆವರು ದೆಸೆದಸೆಗೆಳೆಯುವ |
ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪ
ಹರೆಕೃಷ್ಣ ಎಂದೆಂಬೆ ಜಿಹ್ವೆ ತಾನಿರುತಿರೆ |
ಬರಿಯೆ ಮಾತಾಡುವೆ ನಾ ||
ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |
ಗುರುವಹಂಕಾರತನ ||
ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |
ಮರೆತಿಹೆ ನಾನನುದಿನ |
ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |
ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ ೧
ವೇದ ಶಾಸ್ತ್ರ ಪುರಾಣ ನಾಮವ ನೆನೆವರ |
ಚೋದ್ಯವ ನಾನರಿಯೆನು ||
ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|
ನೋದಗಳ ಮಾಡುತಿಹೆನು ||
ಮಾಧವ ಗೋವಿಂದ ಎನ್ನದೆ ಕಾಲನ |
ಬಾಧೆಗಳಿಗೊಳಗಾದೆನೊ ||
ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |
ಶ್ರೀಧರ ನೀನೆ ಸಲಹೊ-ಸ್ವಾಮಿ ೨
ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |
ಕಡುಲೋಭತನವ ಬಿಡಿಸೊ ||
ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |
ನುಡಿವ ನಾಲಗೆಗಿರಿಸೊ ||
ಪೊಡವಿಯೊಳು ಪುರಂದರ ವಿಠಲರಾಯನೆ ನಿನ್ನ |
ಅಡಿಯದಾಸನೆನಿಸೊ-ಸ್ವಾಮಿ ೩

೧೪೨
ರಂಗ ರಥವನೇರಿದನಕ್ಕ- ಮೋಹ- |
ನಾಂಗ ನಮ್ಮ ಸೇರದೆ ಪೋಗುವನಕ್ಕ ಪ
ಮಾತುಳ ಮಥರೆಯೊಳಿಹನಂತೆ – ಅಲ್ಲಿ |
ಮಾತಾಪಿತರಿಗೆ ಬಂಧನವಂತೆ, ಇವರು |
ನೂತನ ಬಿಲ್ಲಿನ ಅರ್ಥಿಗಳಂತೆ ||
ಪೀತಾಂಬರಧರನ ಪೂಜೆ ನೋಡುವೆನೆಂಬ |
ಆತುರದಿಂದಿರೆ ಅಕ್ರೂರನೊಡನೆ ಈಗ ೧
ಬಲರಾಮ ಬಂಧುವಿನೊಡಗೂಡಿ ನಂದ-|
ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |
ಬಿಡಲಾರೆವೆಂದು ಭಾಷೆಯ ನೀಡಿ ||
ತಡೆಯೆನೆನುತ ತಾಯಿಗೆ ಭರವಸೆಯಿತ್ತು |
ಕಡಲಶಯನನು ಕಾತರದಿಂದಲಿ ಈಗ ೨
ಮಧುರಾ ಪಟ್ಟಣದ ಮಾನಿನಿಯರು ಅತಿ |
ಚದುರೆ ಚೆಂಚಲೆ ಚಾಪಲತೆಯರು-ನಮ್ಮ |
ಮದನನಯ್ಯನ ಮೋಹಿಸುತಿಹರು ||
ಕಧಿಜನಾಭ ನಮ್ಮ ಪುರಂದರವಿಠಲ |
ಪದುಮನಾಭನ ಪಯಣವ ನಿಲ್ಲಿಸಕ್ಕ ೩

ಜೀವರ ಕರ್ಮ
೪೨
ರಂಗನ ನೋಡಿರೆ ರಾಯ ಚೆನ್ನಿಗ ನರ-ಸಿಂಗನ ದೇವಕಿದೇವಿಯ ಸುತನ ಪ
ಥಳಿಥಳಿಸುವ ನಗು ಮೊಗದ ಚಿನ್ನಿಗನ |ಪೊಳೆವ ವಜ್ಜರದ ಕಿರೀಟವಿಟ್ಟವನ ||
ಪ್ರಳಯ ಕಾಲದಿ ವಟಪತ್ರಶಯನನ |ನಳಿನಭವನ ನಾಭಿಯಲ್ಲಿ ಪೆತ್ತವನ ೧
ಆಣಿಮುತ್ತಿನ ದುಂಡು ಮಕರ ಕುಂಡಲನ |ಬಾನುಪ್ರಭೆಯ ಭುಜಕೀರ್ತಿಯೊಪ್ಪುವನ ||
ಕಾಣಿಸೆ ಅಪರಂಜಿ ಕಡಗ ಕಂಕಣ ಹೊಸ |ಮಾಣಿಕದುಂಗುರವಿಟ್ಟು ಮೆರೆವನ ೨
ಕಮಲಾಮನೋಹರ ಕಮಲಜ ಪಿತನ |ರಮಣಿಗೆ ಪಾರಿಜಾತವನೇ ತಂದವನ ||
ಕ್ರಮದಿಂದ ಭಸ್ಮಾಸುರನ ಕೊಂದವನ |ರಮೆಯಾಣ್ಮನೆನ್ನಲು ಇಹಪರವೀವನ ೩
ಶುಕ್ರವಾರ ಪುಲಕು ಪೂಜೆಗೊಂಬವನ |ಸಕ್ಕರೆ-ಹಾಲು-ಬೆಣ್ಣೆಯ ಮೆಲ್ಲುವವನ ||
ಗಕ್ಕನೆ ಸುರರಿಗೆ ಅಮೃತವಿತ್ತವನ |ರಕ್ಕಸದಲ್ಲಣ ರಾವಣಾಂತಕನ ೪
ಪಾಪವಿನಶಾದಿ ಸ್ನಾನವ ಮಾಡಿ |ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ ||
ಈ ಪರಿಯಿಂದಲಿ ಮೂರುತಿ ನೋಡಿ |ಶ್ರೀಪತಿ ಪುರಂದರವಿಠಲನ ಪಾಡಿ ೫

೩೩೪
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ ಪ.
ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ
ಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ ೧
ಸನಕ – ಸನಂದನ – ಸನತ್ಸುಜಾತರು ಬಂದು
ವಿನಯದಿ ಕೈಮುಗಿದು ಓಲೈಪರು ||
ಘನ ಶುಕ – ಶೌನಕ – ವ್ಯಾಸ ವಾಲ್ಮೀಕರು
ನೆನೆದು ಕೊಂಡಾಡುವರೊ ಹರಿಯೇ ೨
ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು ||
ಅರುಣನು ಬಂದುದಯಾಚಲದಲ್ಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ ೩
ಪದುಮನಾಭನೆ ನಿನ್ನ ನಾಮಾಮೃತವನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ ||
ಉದಯದೊಳೆದ್ದು ಸವಿದಾಡುತ ಪಾಡುತ
ದಧಿಯ ಕಡೆವರೇಳು ಮಧುಸೂದನ ಕೃಷ್ಣ ೪
ಮುರುಮಢನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು ||
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೇ ೫

ಪಂಡರಿಗೆಯೆಂಬಲ್ಲಿ ಪುಂಡಲೀಕನೆಂಬ
೪೩
ರಂಗನೆಂಥವನೆಂಥವನೆಲೆ ತಂಗಿ ಪ
ರಂಗನೆಂಥವ ಅವನಂಗ ತಿಳಿಯದು ಬ್ರಹ್ಮಾದಿಗಳಿಗೆ ಅ.ಪ
ಆಗಮವ ತಂದಿಹನೆ | ರಂಗ |ಬೇಗದಿ ಗಿರಿಯ ಪೊತ್ತಿಹನೆ ||
ಮೂಗಿಂದ ಭೂಮಿಯ ಕಿತ್ತಿಹನೆ | ಕಂದ |ಕೂಗಲು ಕಂಬದಿ ಬಂದ ಕಾಣಕ್ಕ ೧
ಧರಣಿಯ ಈರಡಿ ಮಾಡಿದನ | ಭೂ |ಸುರರಿಗೆ ದಾನವ ನೀಡಿದನೆ ||
ನೆರೆದು ಕಪಿಹಿಂಡು ಕೂಡಿದನೆ |ಫಣಿ |ಶಿರದಲ್ಲಿ ಕುಣಿ ಕುಣಿದಾಡಿದನಕ್ಕ ೨
ಉಟ್ಟದ್ದು ಬಿಟ್ಟು ತಾ ನಿಂತಿಹನೆ | ರಂಗ |ದಿಟ್ಟಾದ ಕುದುರೆಯನೇರಿದನೆ ||
ದುಷ್ಟರನೆಲ್ಲ ಅಳಿದಿಹನೆ | ನಮ್ಮ |ಬಿಟ್ಟಾದಿ ಪುರಂದರವಿಠಲ ಕಾಣಕ್ಕ * ೩

೩೭
ರಂಗನೊಲಿದ ನಮ್ಮ ಕೃಷ್ಣನೊಲಿದ |
ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತು ಪ
ಕರಿಯಪುರದ ನಗರದಲ್ಲಿ ಕೌರವರು ಪಾಂಡವರು |
ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||
ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |
ಧರುಮರಾಯ ಧಾರಿಣಿ – ದ್ರೌಪದಿಯ ಸೋತನು ೧
ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |
ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||
ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |
ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು ೨
ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |
ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||
ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |
ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು ೩
ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |
ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||
ದುಷ್ಟ ಕೌರವನು ಎನ್ನ ಲಜ್ಜೆ – ನಾಚಿಕೆಯ ಕೊಂಡು |
ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ ೪
ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |
ಮಾಗಿಯ ಕೋಗಿಲೆಯಂತೆ ಕಾಯ ಒಲೆಯುತ ||
ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |
ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು ೫
ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |
ಕ್ರೂರ ಕೌರವ ದುಃಶಾಸನ ಗುರುಹಿರಿಯರು ||
ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |
ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು ೬
ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |
ಮುಂದರಿಯದೆ ಮುಗುಳುನಗೆಯ ಮಾತನಾಡಿದ ||
ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |
ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು ೭
ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿ
ಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||
ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |
ಹಲ್ಲುಕೀಳುವರೈವರು ಬೇಡವೆಂದಳು ೮
ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |
ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||
ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |
ರಟ್ಟೆಕೀಳುವರೈವರು ಬೇಡವೆಂದಳು ೯
ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |
ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||
ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |
ತೊಡೆಯ ಮೇಲೆ ಒಪ್ಪುವದು ಬೇಡವೆಂದಳು೧೦
ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |
ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||
ಹೆಚ್ಚು – ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |
ಚುಚ್ಚಿ ಹಾಕುವರೈವರು ಬೇಡವೆಂದಳು ೧೧
ಎಷ್ಟು ಬಿಂಕ – ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |
ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||
ಉಟ್ಟ ಸೀರೆ ಸೆಳೆಯಿರಿವಳ ಉಬ್ಬು ಕೊಬ್ಬು ತಗ್ಗಲೆಂದು |
ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ೧೨
ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |
ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||
ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |
ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು೧೩
ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |
ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||
ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |
ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು ೧೪
ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |
ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||
ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |
ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು೧೫
ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |
ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ ||
ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |
ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು ೧೬
ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |
ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |
ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |
ಲಜ್ಜೆ – ನಾಚಿಕೆಯ ಕಾಯೊ ಸ್ವಾಮಿ ಎಂದಳು೧೭
ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯ ಕೇಳಿ |
ಅಂದು ಉಟ್ಟ ವಸ್ತ್ರಗಳು ಅಕ್ಷಯ ವೆಂದನು||
ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |
ನೊಂದು ಬೆಂದು ದುಃಶಾಸನು ನಾಚಿಕುಳಿತನು ೧೮
ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |
ಮಾಡಿದರು ಮಾಧವನ ಮುದ್ದು ಸ್ತೋತ್ರವ ||
ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಪಂಥ – |
ವಾಡಿ ತನ್ನ ಪತಿಗಳೈವರನ್ನು ಗೆಲಿದಳು ೧೯
ಕೇಶಮುಡಿಗಳನ್ನ ಕಟ್ಟಿ ಕ್ಯೆಯಕಾಲಮಣ್ಣನೊರಸಿ |
ಸಾಸಿರನಾಮದ ಕೃಷ್ಣನು ಸುರರ ಪಾಲಿಪ |
ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂ
ತೋಷದಿಂದ ದ್ರೌಪದಿಯು ಮನೆಗೆ ಬಂದಳು ೨೦
ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |
ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |
ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |

೩೩೦
ರಂಗಾ ಬಾರೋ ಪಾಂಡುರಂಗ ಬಾರೋ ಶ್ರೀ
ರಂಗಾ ಬಾರೋ ನರಸಿಂಗ ಬಾರೋ ಪ
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾ ರಮಣ ಮುಕುಂದ ಬಾರೋ ೧
ಅಪ್ಪ ಬಾರೋ ತಿಮ್ಮಪ್ಪ ಬಾರೋ ಕಂ
ದರ್ಪನೈಯನೇ ಕಂಚಿವರದ ಬಾರೋ ೨
ವಿಷ್ಟು ಬಾರೋ ಉಡುಪಿ ಕೃಷ್ಣ ಬಾರೋ ಎ
ನ್ನಿಷ್ಟ ಮೂರುತಿ ಪುರಂದರ ವಿಠಲ ಬಾರೋ ೩

೩೩೨
ರಕ್ಷಿಸೋ ಲೋಕನಾಯಕನೆ-ನೀ ಎನ್ನ-
ರಕ್ಷಿಸೋ ಲೋಕನಾಯಕನೇ ಪ
ಎಷ್ಟೆಷ್ಟು ಜನ್ಮ ಕಳೆದೆನೋ ಇ
ನ್ನೆಷ್ಟೆಷ್ಟು ಜನ್ಮ ಪಡೆವೆನೋ ||
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸು ಇಭರಾಜವರದನೆ ೧
ಬಾಲತನದಿ ಬಹು ಬೆಂದೆನೋ ನಾನಾ
ಲೀಲೆಯಿಂದಲಿ ಕಾಲ ಕಳೆದೆನೋ ||
ಲೋಲ ಲೋಚನ ಎನ್ನ ಮೊರೆಯ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೈ ನರಹರಿ೨
ಮುದುಕನಾಗಿ ಚಿಂತೆಪಡುವೆನೋ ನಾ
ಕದಡು ದುಃಖವ ಪಡಲಾರೆನೋ ||
ಸದರವಲ್ಲವು ಶ್ರೀ ಪುರಂದರ ವಿಠಲ
ಮುದದಿಂದ ರಕ್ಷಿಸೊ ಖಗರಾಜಗಮನ ೩

೭೭
ರಾಗಿ ತಂದಿರಾ – ಭಿಕ್ಷಕೆ –
ರಾಗಿ ತಂದಿರಾ ಪ.
ಯೋಗ್ಯರಾಗಿ ಭೋಗ್ಯರಾಗಿ |
ಭಾಗ್ಯವಂತರಾಗಿ ನೀವು ಅಪ
ಅನ್ನದಾನವ ಮಾಡುವರಾಗಿ |
ಅನ್ನಛತ್ರವನಿಟ್ಟವ ರಾಗಿ ||
ಅನ್ಯವಾರ್ತೆಗಳ ಬಿಟ್ಟವರಾಗಿ |
ಅನುದಿನ ಭಜನೆಯ ಮಾಡುವರಾಗಿ………. ೧
ಮಾತಾಪಿತರನು ಸೇವಿಪರಾಗಿ |
ಪಾತಕಕಾರ್ಯವ ಬಿಟ್ಟವರಾಗಿ |
ಖ್ಯಾತಿಯಲ್ಲಿ ಮಿಗಿಲಾದವರಾಗಿ |
ನೀತಿಮಾರ್ಗದಲಿ ಖ್ಯಾತರಾಗಿ ೨
ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ ||
ಗುರುವಿನ ಪಾದವ ಸ್ಮರಿಸುವರಾಗಿ |
ಪರಮ ಪುಣ್ಯವನು ಮಾಡುವರಾಗಿ ೩
ವೇದ ಪುರಾಣವ ತಿಳಿದವರಾಗಿ |
ಮೇದಿನಿಯಾಳುವಂಥವರಾಗಿ ||
ಸಾಧು ಧರ್ಮವಾಚರಿಸುವರಾಗಿ |
ಓದಿ ಗ್ರಂಥಗಳ ಪಂಡಿತರಾಗಿ ೪
ಆರರ ಮಾರ್ಗವ ಅರಿತವರಾಗಿ |
ಮೂರರ ಮಾರ್ಗವ ತಿಳಿದವರಾಗಿ ||
ಭೂರಿತತ್ವವನು ಬೆರೆತವರಾಗಿ |
ಕ್ರೂರರ ಸಂಗವ ಬಿಟ್ಟವರಾಗಿ ೫
ಕಾಮಕ್ರೋಧಗಳನಳಿದವರಾಗಿ |
ನೇಮನಿಷ್ಠೆಗಳ ಮಾಡುವರಾಗಿ ||
ಆ ಮಹಾಪದದಲಿ ಸುಖಿಸುವರಾಗಿ |
ಪ್ರೇಮದಿ ಕುಣಿಕುಣಿದಾಡುವರಾಗಿ ೬
ಸಿರಿರಮಣನ ಸದಾ ಸ್ಮರಿಸುವರಾಗಿ |
ಕುರುಹಿಗೆ ಬಾಗುವಂತವರಾಗಿ ||
ಕರೆಕರೆಸಂಸಾರ ನೀಗುವರಾಗಿ |
ಪುರಂದರವಿಠಲನ ಸೇವಿಪರಾಗಿ ೭

ಸಂಸಾರದ ವೃಕ್ಷದ ಚಿತ್ರ
೨೧
ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು |
ಪಾಮರರು ತಾವೇನ ಬಲ್ಲರಯ್ಯ ಪ
ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿಪಾಪವನ್ನುಮಾಯವನು ಮಾಡಿ ಮಹಾರಾಯ ಮುಕ್ತಿಯ ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧
ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳುಒತ್ತಿ ಒಳ ಪೊಗದಂತೆಯೆ ಕವಾಟವಾಗಿಚಿತ್ತ ಕಾಯಗಳ ಸುಪವಿತ್ರ ಮಾಡುವ ಪರಿಯಭಕ್ತವರ ಹನುಮಂತ ತಾನೊಬ್ಬ ಬಲ್ಲ ೨
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದುಪರಮ ವೇದಗಳೆಲ್ಲ ಪೊಗಳುತಿಹವುಸಿರಿಯರಸ ಶ್ರೀಪುರಂದರ ವಿಠಲ ರಾಮನನುವರ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ೩

೨೪೨
ರಾಮ ಗೋವಿಂದ ಸೀತಾ – ರಾಮ ಗೋವಿಂದ ಪ.
ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕ
ಭಕ್ತಿಯಹುದೆ ಭಕ್ತಜನರ ಸಲಹದನಕ
ಮುಕ್ತಿಯಹುದೆ ಭಾವಶುದ್ದಿ ಇಲ್ಲದನಕ
ಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ ೧
ಓದಲೇಕೊ ಮನದಿ ಜ್ಞಾನವಿಲ್ಲದನಕ
ಭೇದವೇಕೊ ಗತಿಯು ಗಮನ ತಿಳಿಯದನಕ
ಕಾದಲೇಕೊ ಭುಜದಿ ಶಕ್ತಿಯಿಲ್ಲದನಕ
ವಾದವೇಕೊ ಶ್ರುತಿ – ಶಾಸ್ತ್ರ ತಿಳಿಯದನಕ ೨
ನಳನವಿದ್ದರೇನು ತುಂಬಿಯೊದಗದನಕ
ದಳವು ಇದ್ದರೇನು ಧೈರ್ಯಕೊಡದನಕ
ಲಲನೆಯಿದ್ದರೇನು ಪುತ್ರರಿಲ್ಲದನಕ
ಚೆಲುವನಾದರೇನು ವಿದ್ಯೆ ಕಲಿಯದನಕ ೩
ಮನವಿದ್ದೇಕೊ ಶುಕ – ಪಿಕವಿಲ್ಲದನಕ
ತನುವಿದ್ದೇಕೊ ಪರಹಿತಕೆ ಬಾರದನಕ
ಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕ
ಧನವಿದ್ದರೇನು ದಾನ – ಧರ್ಮಕ್ಕೊದಗದನಕ ೪
ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊ
ಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊ
ಸಿರಿ ಪುರಂದರವಿಠಲನಿರಲು ಭಯವು ಏತಕೊ
ಹರಿಯ ಒಲಿದ ಮನುಜನಿಗೆ ದೈನ್ಯವೇತಕೊ ೫

ಮಣಿಪುರದ ರಾಜ
೨೪
ರಾಮ ನಾಮಾಮೃತವ ಕೊಂಬವರೆಲ್ಲ |
ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |
ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |
ಧರ್ಮದ ಸಂತೆ ನೆರೆದಿದೆ ಬನ್ನಿ ೧
ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||
ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು ೨
ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||
ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ ೩
ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||
ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ ೪
ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ…ದುದು ||
ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ ೫
ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||
ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ ೬
ಇಂದೊಂದು ಸರಶಿಗೆ ಬಹಳ ಲಾಭ | ತಾತಂದು ಕುಳಿತುಂಬುದಕೆ ಉಂಟು ||
ತಂದೆ ಪುರಂದರವಿಠಲ ರಾಯ |ಗಂಧವಾಯಿತು ಬೇಹಾರವು ೭

೨೪೩
ರಾಮ ಮಂತ್ರವ ಜಪಿಸೊ – ಏ ಮನುಜಾ ಶ್ರೀ
ರಾಮ ಮಂತ್ರವ ಜಪಿಸೊ ಪ
ಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡ
ಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪ
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||
ಹಲವು ಪಾತಕಗಳ ಹಸನಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ ೧
ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರ
ಮನುಮುನಿಗಳಿಗೆಲ್ಲ ಮೌನ ಮಂತ್ರ ||
ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರ
ಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ ೨
ಸಕಲ ವೇದಗಳಿಗೆ ಸಾರವಾಗಿಹ ಮಂತ್ರ
ಮುಕುತಿ ಪಢಕೆ ಇದು ಮೂಲ ಮಂತ್ರ ||
ಶಕುತ ಪರಕೆ ಇದು ಬಟ್ಟೆದೋರುವ ಮಂತ್ರ
ಸುಖನಿಧಿ ಪುರಂದರವಿಠಲ ಮಹಾಮಂತ್ರ ೩

೨೪೪
ರಾಮ ರಾಮ ರಾಮ ರಾಮ ರಾಮವೆನ್ನಿರೊ |
ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.
ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |
ಸಿಂಧು ಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು ೧
ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ ೨
ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ ೩
ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |
ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ ೪
ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |
ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ ೫

೨೪೫
ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಪ.
ಇಂದ್ರಿಯಂಗಳೆಲ್ಲ ಕೂಡಿ
ಬಂದು ತನುವ ಮುಸುಕಲು
ಸಿಂಧು ಸುತೆಯ ಪತಿಯಧ್ಯಾನ
ಎಂದಿಗಲ್ಲಿ ದೊರೆಯದೊ ೧
ಭರದಿ ಯಮನ ಭಟರಾಗಲೆ
ಹೊರಡು ಎಂದು ಮೆಟ್ಟಿ ತುಳಿಯೆ
ಕೊರಳಿಗಾತ್ಮ ಸೇರಿದಾಗ
ಹರಿಯ ಧ್ಯಾನ ದೊರೆಯದೊ ೨
ದೋಷ ಕ್ಲೇಶ – ದುಃಖವೆಂಬ
ಶ್ಲೇಷ್ಮದಲ್ಲಿ ಸಿಕ್ಕಿ ಇರಲು
ವಾಸುದೇವ ಕೃಷ್ಣನೆಂಬು
ದಾಸಮಯಕ್ಕೆ ದೊರೆಯದೊ ೩
ಸಿಂಗಾರವಾದ ದೇಹವೆಲ್ಲ
ಅಂಗವಳಿದು ಮುರಿದು ಬೀಳೆ ||
ಅಂಗಳಿಗಾತ್ಮ ಸೇರಿದಾಗ
ರಂಗನ ಧ್ಯಾನವು ದೊರೆಯದೊ ೪
ಕೆಟ್ಟ ಕೆಟ್ಟರಲ್ಲೊ ಬರಿದೆ
ಕಟ್ಟ ಕಡೆಯಲ್ಲಿ ಕಾಯ
ಬಿಟ್ಟು ಹೋಗುವಾಗ ಪುರಂದರ
ವಿಠಲ ಧ್ಯಾನ ದೊರೆಯದೊ ೫

೩೩೩
ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |
ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪ
ಮಕರಕುಂಡಲ ನೀಲಮುತ್ತಿನ ಚೌಕಳಿ ಇಡುತಲಿ |
ಸುಕುಮಾರ ಸುಂದರವಾದ ಉಡುಗೆಯುಡತಲಿ ||
ಮುಖದ ಕಮಲ ಮುಗುಳನಗೆಯ ಸುಖವ ಕೊಡುತಲಿ |
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ ೧
ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |
ದುಂಡುಮಲ್ಲಿಗೆ ತುಂಬಿ ಕೊಳಲನೂದಿ ಪಾಡುತ ||
ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |
ಭಂಡುಮಾಡಿ ಭಾಮೆಯರೊಡನೆ ಸರಸವಾಡುತ೨
ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |
ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||
ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |
ಭಕ್ತ ಜನರಿಗೊಲಿದ ನೀನು ಮುಕ್ತಿದಾತನು ೩