Categories
ರಚನೆಗಳು

ಪುರಂದರದಾಸರು

೨೩
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ |ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ ಪಒಮ್ಮನ ಗೊದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ |ಸುಮ್ಮನ ಸಜ್ಜಿಗೆ ತೆಗೆದು | ಸಣ್ಣ ಸೇವಗೆ ಹೊಸೆದು ೧
ಹೃದಯವೆಂಬ ಪಾತ್ರೆಯೊಳಗೆ | ಮನವೆಂಬ ಎಸರನಿಟ್ಟು |ಬುದ್ದಿಯಿಂದ ಪಾಕ ಮಾಡಿ | ಹರಿವಾಣ ತುಂಬಿರೋ ೨
ಆನಂದ ಆನಂದವೆಂಬ ತೇಗು ಬಂದ ಪರಿಯಲಿ |ಆನಂದ ಮೂರುತಿ ನಮ್ಮ ಪುರಂದರವಿಠಲ ೩

೧೮೫
ರಾಯನ ನೋಡಿರೋ – ಮಧ್ವ – ರಾಯನ ಪಾಡಿರೊ ಪ
ಅಂಜನೆಯಲಿ ಹುಟ್ಟಿ ಅಂಬರಕಡರಿದ
ಹರಿಯೋ – ಸಿಂಹದ – ಮರಿಯೋ |
ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂ
ಘಿಸಿದ- ಪುರ – ಸಂಧಿಸಿದ
ಅಂಜದೆ ವನವನು ಕಿತ್ತಿದ ಪುರವನು
ಸುಟ್ಟ – ತಾ ಬಲು – ದಿಟ್ಟಾ |
ಸಂಜೀವನ ಗಿರಿ ತಂದು ವಾನರರ
ಪೊರೆದಾ – ರಾಮನ – ಬೆರೆದಾ ೧
ಕುಂತಿ ಕುಮಾರನು ಶೀಮೆಗೆ ಹರುಷದಿ
ಬೆಳೆದ – ಖಳರನು – ತುಳಿದ |
ಅಂತ ಕೌರವ – ದುಶ್ಯಾಸನರಾ ಶಿರ
ತರೆದಾ – ಚಲವನು – ಮೆರೆದ |
ಸಂತಾಪವ ಪಡಿಸಿದ ಕುಜನಕೆ ಭೀಮ –
ನಾದ – ಸನ್ನುತ – ನಾದ |
ಕಂತುಜನಕ ಶ್ರೀ ಕೃಷ್ಣನ ಪಾದದಿ
ಬಿದ್ದ – ಮದಗಜ – ಗೆದ್ದ ೨
ಮುನಿಕುಲದಲಿ ಉದಿಸಿದ ಗುರುಮಧ್ವ ತಾ
ನಾದ – ಧರೆಯಲಿ – ಮೆರೆದ |
ಅನಿಮಿಷರೊಡೆಯ ಶ್ರೀವೇದವ್ಯಾಸರ
ಚರಣ – ಅನುದಿನ – ಸ್ಮರಣ |
ಕನಸೊಳು ಕಾಣದ ಅದ್ವೈತಂಗಳ
ಮುರಿದ – ತತ್ತ್ವ – ತೋರಿದ |
ಘನಮಹಿಮ ಶ್ರೀ ಪುರಂದರ ವಿಠಲನ
ದಾಸ – ಪಡೆದ – ಸನ್ಯಾಸ ೩

೨೪೬
ರೊಕ್ಕ ಎರಡಕ್ಕೆ ದುಃಖ
ಗಕ್ಕನೆ ಹೋದರೆ ಘಾತ ಕಾಣಕ್ಕ ಪ.
ಚಿಕ್ಕತನಕೆ ತಂದು ಕೆಡಿಸುವುದು ರೊಕ್ಕ
ಮಕ್ಕಳ ಮರಿಗಳ ಮಾಳ್ಪದು ರೊಕ್ಕ
ಸಕ್ಕರೆ ತುಪ್ಪದ ಸಲಿಸುವುದು ರೊಕ್ಕ
ಕಕ್ಕುಲಾತಿಗೆ ತಂದು ಕೆಡಿಸುವುದು ರೊಕ್ಕ ೧
ಕುಂಟರ ಕುರುಡರ ಕುಣಿಸುವುದು ರೊಕ್ಕ
ಗಂಟು ಮಾಡಲಿಕ್ಕೆ ಕಲಿಸುವುದು ರೊಕ್ಕ
ಬಂಟರನೆಲ್ಲ ವಶ ಮಾಡುವುದು ರೊಕ್ಕ
ತುಂಟತನಕೆ ತಂದು ನಿಲಿಸುವುದು ರೊಕ್ಕ ೨
ಇಲ್ಲದ ಗುಣಗಳ ಕಲಿಸುವುದು ರೊಕ್ಕ
ಸಲ್ಲದ ನಾಣ್ಯವ ಸಲಿಸುವುದು ರೊಕ್ಕ
ಬೆಲ್ಲದಹಿಕ್ಕಿಂತಲೂ ಸವಿಯಾದ ರೊಕ್ಕ
ಕೊಲ್ಲಲಿಕ್ಕೆ ಕಾರಣವಾಯಿತು ರೊಕ್ಕ ೩
ಉಂಟಾದ ಗುಣಗಳ ಬಿಡಿಸುವುದು ರೊಕ್ಕ
ನಂಟರ ಇಷ್ಟರ ಮಾಡುವುದು ರೊಕ್ಕ
ಒಂಟೆ – ಆನೆ -ಕುದುರೆ ತರಿಸುವುದು ರೊಕ್ಕ
ಕಂಟಕಗಳನೆಲ್ಲ ಬಿಡಿಸುವುದು ರೊಕ್ಕ ೪
ವಿದ್ವಜ್ಜನರ ವಶ ಮಾಡುವುದು ರೊಕ್ಕ
ಹೊದ್ದಿದವರನು ಹೊರೆವುದು ರೊಕ್ಕ
ಮುದ್ದು ಪುರಂದರವಿಠಲನ ಮರೆಸುವ
ಬಿದ್ದು ಹೋಗುವ ರೊಕ್ಕ ಸುಡು ನೀನಕ್ಕ ೫

೩೩೪
ಲಕ್ಷ್ಮೀಕಾಂತ ಬಾರೋ ಶುಭ ಲಕ್ಷಣವಂತ ಬಾರೋ ಪ
ಪಕ್ಷಿವಾಹನಾ ಬಾರೋ ಪಾವನ ಮೂರ್ತಿ ಬಾರೋ ಅ.ಪ
ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೋ
ಸಾಧುಸಜ್ಜನ ಸತ್ಯಯೋನಿ – ದಾನಿ ನೀನೆ ಬಾರೋ ೧
ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢಿ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ೨
ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋ
ಪನ್ನಂಗ ಶಯನ ಸಿರಿ-ಪುರಂದರ ವಿಠಲ ಬಾರೋ೩

೩೫೦
ಲಟಪಟ ನಾ ಸಟೆಯಾಡುವೆನಲ್ಲ |
ವಿಠಲನ ನಾಮ ಮರೆತು ಪೋದೆನಲ್ಲ ಪ.
ಶೇಷಗಿರಿಯ ಮೇಲೆ ಸವುತೆಯ ಬಿತ್ತಿ |
ದೇವಗಿರಿಯ ಮೇಲೆ ಅವತಾರವಿಕ್ಕಿ ||
ಹಾಳೂರಿಗೊಬ್ಬ ಕುಂಬಾರ ಸತ್ತ |
ಗೋಕರ್ಣದೊಳಗೊಬ್ಬ ಪರದೇಶಿ ಅತ್ತ ೧
ನಾ ಸಮಯದಿ ಮೂರು ರಾಯರ ಕಂಡೆ
ಕುಪ್ಪುಸ ತೊಟ್ಟ ಕೋಳಿಯ ಕಂಡೆ ||
ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ |
ನರಸೂಳೆಗೆಯ್ವುದ ಕಣ್ಣಾರೆ ಕಂಡೆ ೨
ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ
ಆಡೊಂದು ಮದ್ದಳೆ ಬಡಿವುದ ಕಂಡೆ ||
ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ |
ಪುರಂದರವಿಠಲನ ಕಣ್ಣಾರೆ ಕಂಡೆ * ೩

೩೩೫
ಲಾಲಿತ್ರಿಭುವನಪಾವನಲಾಲಿ ಪ.
ಗೋವಳ ಕುಲದೊಳು ಪುಟ್ಟಿದಗೆ ಲಾಲಿ
ಗೋವರ್ಕಳನು ಸಲಹಿದೆಗೆ ಲಾಲಿ ||
ಗೋವುಗಳನೆಲ ಕಾಯ್ದವಗೆ ಲಾಲಿ
ಗೋವಿಂದ ಪರಮಾನಂದಗೆ ಲಾಲಿ ………….. ಲಾಲಿ ೧
ನಖದಲಿ ಗಂಗೆಯ ಪಡೆದಗೆ ಲಾಲಿ
ಶಕಟನ ಮುರಿದು ಒತ್ತಿದವಗೆ ಲಾಲಿ ||
ಅಖಿಳ ವೇದಂಗಳ ತಂದಗೆ ಲಾಲಿ
ರುಕುಮಿಣಿಯರಸ ವಿಠಲನಿಗೆ ಲಾಲಿ ……….. ಲಾಲಿ ೨
ಗಗನವ ಮುರಿದು ಒತ್ತಿದಗೆ ಲಾಲಿ
ನಿಗಮಗಳನು ತಂದಿತ್ತಗೆ ಲಾಲಿ ||
ಹಗೆಗಳನೆಲ್ಲರ ಗೆಲಿದಗೆ ಲಾಲಿ
ಜಗವನು ಉದರದಿ ಧರಿಸಿದಗೆ ಲಾಲಿ …….. ಲಾಲಿ ೩
ಬೊಟ್ಟಿಲಿ ಬೆಟ್ಟವನೆತ್ತಿದಗೆ ಲಾಲಿ
ಮೆಟ್ಟಿಲಿ ಭೂಮಿಯನಳೆದಗೆ ಲಾಲಿ ||
ಜಟ್ಟಿಗರನೆಲ್ಲ ಗೆಲಿದಗೆ ಲಾಲಿ
ಕಟ್ಟುಗ್ರ ಶ್ರೀ ನರಸಿಂಹಗೆ ಲಾಲಿ …………………. ಲಾಲಿ ೪
ಶರಧಿಗೆ ಸೇತುವೆಗಟ್ಟಿದಗೆ ಲಾಲಿ
ಸುರರ ಸೆರೆಯನು ಬಿಡಿಸಿದಗೆ ಲಾಲಿ ||
ಕರಿಮೊರೆಯಿಡಲು ಬಂದೊದಗಿದಗೆ ಲಾಲಿ
ವರದ ಪುರಂದರವಿಠಲಗೆ ಲಾಲಿ ……….. ಲಾಲಿ ೫

೩೩೬
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಸುರ
ನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ಪ.
ರಾಮಲಾಲಿ ಮೇಘಶ್ಯಾಮ ಲಾಲಿ
ಮಾಮನೋಹರ ಅಮಿತ ಸದ್ಗುಣಧಾಮ ಲಾಲಿ ೧
ಕೃಷ್ಣ ಲಾಲಿ ಸರ್ವೋತ್ರ‍ಕಷ್ಟ ಲಾಲಿ
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ ೨
ರಂಗ ಲಾಲಿ ಮಂಗಳಾಂಗ ಲಾಲಿ
ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ ೩
ನಂದ ಲಾಲಿ ಗೋಪಿಕಂದ ಲಾಲಿ
ಮಂದರ ಗಿರಿಧರ ಮಧುಸೂದನ ಮುಕುಂದ ಲಾಲಿ ೪
ಶೂರ ಲಾಲಿ ರಣಧೀರ ಲಾಲಿ
ಮಾರನಯ್ಯ ನಮ್ಮ ಪುರಂದರವಿಠಲ ಲಾಲಿ ೫

೧೪೩
ಲಾಲಿಸಿದಳು ಮಗನ – ಯಶೋದೆ |
ಲಾಲಿಸಿದಳು ಮಗನ ಪ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು |
ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ ೧

ಬಾಲಕನೇ ಕೆನೆವಾಲ ಮೊಸರನೀವೇ |
ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು ೨
ಮುಗುಳು ನಗೆಯಿಂದಲಿ ಮುದ್ದು ತಾ ತಾರೆಂದು |
ಜಗದೊಡೆಯನ ಶ್ರೀ ಪುರಂದರವಿಠಲನ ೩

೨೪೭
ಲೊಳಲೊಟ್ಟೆ – ಬದುಕು – ಲೊಳಲೊಟ್ಟೆ ಪ.
ಆನೆ ಕುದುರೆ ಮಂದಿ ಲೊಳಲೊಟ್ಟೆ – ಬಲು |
ಸೈನ್ಯ ಭಂಡಾರವು ಲೊಳಲೊಟ್ಟೆ ||
ಮಾನನಿಯರ ಸಂಗ ಲೊಳಲೊಟ್ಟೆ – ಮಹಾ |
ಮಾನ್ಯ – ವಿಜಯರೆಲ್ಲ ಲೊಳಲೊಟ್ಟೆ ೧
ಮುತ್ತು – ಮಾಣಿಕ – ಚಿನ್ನ ಲೊಳಲೊಟ್ಟೆ – ಬಲು |
ಛತ್ರ – ಚಾಮರಗಳು ಲೊಳಲೊಟ್ಟೆ ||
ಸುತ್ತಗಳು ಕೋಟೆಯು ಲೊಳಲೊಟ್ಟೆ – ಅಲ್ಲಿ |
ಸುತ್ತುವ ಜನವೆಲ್ಲ ಲೊಳಲೊಟ್ಟೆ ೨
ನೆಂಟರು – ಇಷ್ಟರು ಲೊಳಲೊಟ್ಟೆ – ದೊಡ್ಡ |
ಕಂಟಕಾನಾಹೊದು ಲೊಳಲೊಟ್ಟೆ ||
ಉಂಟಾದ ಗುಣನಿಧಿ ಪುರಂದರವಿಠಲನ |ಬಂಟನಾಗದವ ಲೊಳಲೊಟ್ಟೆ ೩

೨೪೮
ವಂದಿಸಿದವರೆ ಧನ್ಯರು – ನಮ್ಮ – |
ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.
ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |
ಒಂದೊಂದು ನಾಮವ ನೆನೆಯುತಲಿ ||
ಮಂದರೋದ್ಧರನನು ಕುಂದದೆ ಪೂಜಿಸಿ |
ವಂದಿಸುವಾನಂದದಿಂದ ೧
ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |
ವಿಟ್ಠಲ ವಿಟ್ಠಲ ಎನುತ ಮನ – ||
ಮುಟ್ಟಿ ಮಾಡುವ ಭಕ್ತಿ – ಸ್ತೋತ್ರ – ಸ್ತುತಿಗಳಿಂದ |
ಅಷ್ಟಾಂಗದಲಿ ವಂದನೆಯ ಮಾಡುತಲಿ ೨
ಸಿರಿಲಕ್ಷ್ಮೀಪತಿ ಶರಣಾಗತರನು |
ಕರುಣಿಸೆಂದೆನುತ ಕರವ ಮುಗಿದು ||
ಹರುಷ ಪುಳಕದಿಂದ ಹೊರತ ದೇಹವನು ಶ್ರೀ – |
ಪುರಂದರವಿಠಲರಾಯನ ಚರಣಕೆ ೩

ವಂದಿಸುವುದಾದಿಯಲಿ ಗಣನಾಥನ ಪ
ಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು ಅ.ಪ
ಹಿಂದೆ ರಾವಣ ತಾನು ವಂದಿಸದೆ ಗಜಮುಖನನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿತಂದ ವರಗಳನೆಲ್ಲ ಧರೆಗೆ ಇಳಿಸಿದನು ೧
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೆ ಮನದಲಿ ಬಂದು ಪೂಜಿಸಲು ಗಣನಾಥಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ೨
ಇಂದು ಜಗವೆಲ್ಲ ಉಮೆನಂದನನ ಪೂಜಿಸಲುಚೆಂದದಿಂದಲಿ ಸಕಲಸಿದ್ಧಿಗಳನಿತ್ತು
ತಂದೆ ಸಿರಿ ಪುರಂದರವಿಠಲನ ಸೇವೆಯೊಳುಬಂದು ವಿಘ್ನವ ಕಳೆದಾನಂದವನು ಕೊಡುವ ೩

೧೮೬
ವನಿತೆ ನೀ ತೋರಿಸೆ ಹನುಮನ ಬೇಗ |
ತನು-ಮನ-ಧನವನು ನಿನಗೀವೆನೀಗ ಪ
ಆತುರದಿಂದಲಿ ಉದಧಿಹಾರಿದವನ |
ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||
ಘಾತಕರನ್ನು ಮುರಿದಟ್ಟಿದವನ – ಸತಿ |
ಸೀತೆಯ ಪತಿ ರಘುನಾಥಗರ್ಪಿಸಿದನ ೧
ಪಾಂಡುನಂದನನಿಗೆ ಅನುಜನಾಗಿಹನ |
ಪುಂಢರೀಕಾಕ್ಷನ ಚರಣಸೇವಿಪನ ||
ಪುಂಡ ಕೌರವ ಶಿರವ ಚೆಂಡನಾಡಿದವನ ೨
ಎರಡು ಮೂರಾರೊಂದು ಕುಮತ ಖಂಡಿಸಿದನ |
ಭರದಿ ಮಧ್ವಮತ ಉದ್ಧರಿಸಿದನ ||
ಧರೆಯೊಳಧಿಕ ಶ್ರೀಹರಿಯ ಭಜಕನ |
ವರದ ಶ್ರೀ ಪುರಂದರ ವಿಠಲರಾಯನ ೩

೨೪೯
ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು – ಇಂಥಾ
ಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.
ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದು
ಬಡತನ ಬಂದರೆ ನಂಟರ ಬಾಗಿಲ ಸೇರಬಾರದು ೧
ಮಡದಿಯ ನುಡಿ ಕೇಳಿ ಬಡವರ ಜಗಳಕೆ
ಹೋಗಬಾರದು – ಬಹಳ
ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು ೨
ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು – ಕಡು
ಕೋಪಿಗಳಿದ್ದಲ್ಲಿ ಅನುಕೂಲ ಗೋಷ್ಠಿ ಮಾಡಬಾರದು ೩
ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದು
ವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು ೪

೨೫೦
ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ – |
ದೊರೆ ಮಾಧವನ ಭಜಿಸಿರೈ ೩
ಆ ಮಾಘಮಾಸದತಿಶಯವಾದ ಸ್ನಾನವನು |
ಈ ಮಹಾನದಿಯೊಳಗೆ ಮಾಡಲೋಸುಗ ಬೊಮ್ಮ |
ಸೋಮಶೇಖರ ಮುಖ್ಯ ದೇವತೆಗಳೈತಹರು |
ಪ್ರೇಮದಿಂದಲಿ ನಿರುತ ||
ನೇಮವಿದು ದ್ವಿಜಕುಲೋತ್ತಮರಾದವರು ಕೇಳಿ |
ಕಾಮ – ಕ್ರೋದವ ಜರಿದ ಪ್ರಾಯಾಗ ಕ್ಷೇತ್ರದಲಿ |
ರಾಮಣೀಯಕ ಸ್ನಾನನುಷ್ಠಾನ ತೀರ್ಥವಿಧಿ |
ಹೋಮಗಳ ಮಾಡಿರಯ್ಯ ೪
ಆರ್ಯವರ್ತದ ಬ್ರಹ್ಮವರ್ತ ದೇಶದ ಮಧ್ಯೆ |
ಧಾರ್ಯವಾದಲೆ ಪುಣ್ಯವಾರಾಣಾಸೀ ಕ್ಷೇತ್ರ |
ಕಾರ್ಯವಿಶ್ವೇಶತಾರಕ ಮಂತ್ರವುಪದೇಶಿ |
ಸೂರ್ಯಚಂದ್ರಾಗ್ನಿನಯನ||
ತ್ವರ್ಯುಗ್ರನೆನಿಪ ಭೂತೇಶ ಭೈರವನಲ್ಲಿ |
ವೀರ್ಯದಿಂದಘಾಕಾರಿ ಜೀವಿಗಳ ಶಿಕ್ಷಿಸುವ |
ಶೌರ್ಯ ಅಗಣಿತ ಮಹಿಮ ಶ್ರೀ ಬಿಂದು ಮಾಧವಗೆ |
ಕಾರ್ಯದೊರೆತನವು ಅಲ್ಲಿ ೫
ಅರ್ತಿಯಲಿ ಪಂಚಗಂಗೆಯಲಿ ಮಜ್ಜನಮಾಡಿ |
ನಿತ್ಯ ನೈಮಿತ್ತ್ಯ ಕರ್ಮಂಗಳನು ಪತಿಕರಿಸಿ |
ಸುತ್ತಿ ಅಂತರ್ವೇದಿಯನ್ನು ಪಂಚಕ್ರೋಶ – |
ಯಾತ್ರೆಗಳ ಮಾಡಿ ಬಳಿಕ ||
ಮತ್ತೆ ಶ್ರೀ ವಿಶ್ವೇಶ್ವರಗೆ ಪ್ರದಕ್ಷಿಣೆ ಮಾಡಿ |
ಭಕ್ತಿಪೂರ್ವಕವಾಗಿ ಅಲ್ಲಲ್ಲಿ ಇಹ ವೈಷ್ಣ – |
ವೋತ್ತಮರಿಗೆರಗಿ ಸದ್ಧರ್ಮಗಳ ಮಾಡಿ –
ಕೃತ ಕೃತ್ಯರೆಂದೆನಿಸಿದರಯ್ಯ ೬

೨೫೧
ವರುಷ ಕಾರಣವಿಲ್ಲ ಹರಿಭಜನೆಗೆ |
ಅರಿತ ಸಜ್ಜನರೆಲ್ಲ ಕೇಳಿ ಸಮ್ಮುದದಿ ಪ.
ತರಳತನದಲಿ ಕಂಡ ಹರಿಯ ಧ್ರುವರಾಯನು |
ಹಿರಿಯ ತಾನವನಯ್ಯ ಕಂಡನೇನೂ ? ||
ತರಳ ಪ್ರಹ್ಲಾದ ನರಹರಿಯನು ತಾ ಕಂಡ |
ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? ೧
ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |
ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||
ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |
ಮರಿ ದೊಡ್ಡದೆಂತೆಂದು ಪೇಳುವರು ಬುಧರು ೨
ಸುರುವದಾ ಒದರುವರು ಅರಣ್ಯವಾಸಿಗಳು |
ಮರದಡಿಗೆ ಬಿದ್ದ ಎಲೆಗಳ ತಿನ್ನುತ ||
ಪರಮಪಾತಕಿ ಅಜಾಮಿಳನು ನಾರಗ ಎನಲು |
ಭರದಿಂದ ಸಲುಹಿದನು ಪುರಂದರವಿಠಲ ೩

೩೩೭
ವಾಯುಕುಮಾರಗೆ ಮಂಗಳ – ರಘು – |
ರಾಯಸೇವಕಗೆ ಮಂಗಳ ಪ.
ಅಂಜನಿಗರ್ಭಸಂಜಾತಗೆ ಮಂಗಳ |
ರಂಜಿತ ದಿವ್ಯ ಮೂರ್ತಿಗೆ ಮಂಗಳ ||
ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |
ಸಂಜೀವರಾಯಗೆ ಮಂಗಳ ೧
ದನುಜನಿಕರ ಸಂಹಾರಗೆ ಮಂಗಳ |
ಜಾನಕಿ ಶೋಕ ವಿನಾಶಗೆ ಮಂಗಳ ||
ವನಧಿ ವಿರೋಧಿಗೆ ಮಂಗಳ ಜಯ |
ಹನುಮವಿಲಾಸಗೆ ಮಂಗಳ ೨
ಸೇತುವೆಗಟ್ಟಿದಾತಗೆ ಮಂಗಳ |
ಸೀತೆಯ ತಂದ ಬಂಟಗೆ ಮಂಗಳ ||
ಖ್ಯಾತ ಪುರಂದರವಿಠಲನ ಕರುಣೆಗೆ |
ಪಾತ್ರನಾದ ಭಕುತೆಗೆ ಮಂಗಳ ೩

೧೪೫
ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |
ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪ
ಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |
ಒಬ್ಬ ಮಾವನ ಕೂಡೆ ಕಡಿದಾಡಿದ ||
ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |
ಒಬ್ಬ ಭಾವಗೆ ಬಂಡಿ ಬೋವನಾದ ೧
ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |
ಕುಂಭಿನೀಪತಿಯ ಸಂಹಾರ ಮಾಡಿದ ||
ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |
ಅಂಬುಜಾಸನಗೆ ತಾ ಸ್ವಾಮಿಯಾದ ೨
ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |
ಇಮ್ಮೆಯ್ಯವರಿತು ಸಂಹಾರ ಮಾಡಿದ- ||
ರಮ್ಯ ಮೂರುತಿ ಪುರಂದರವಿಠಲ ದೇವೇಶ |
ಬೊಮ್ಮಮೂರುತಿಗೆಲ್ಲಿ ಬಂಧು ಬಳಗ೩

೨೫೪
ವಾಸವನೆ ಮಾಡಿರೋ ಕಾಶಿಯಲಿ ಪ
ವಾಸವನೆ ಮಾಡಿ ಕಾಶಿಯಲಿ ವಸುಧೆಯ ಜನರು |
ಏಸುಜನ್ಮದ ಪಾಪವನೆ ಕಳೆದು ಯಮಪುರಿಯ ||
ಹೇಸಿಕೆಯ ರಾಶಿಗಳ ಒದೆದು ಹೆಚ್ಚಳವಾದ |
ಮೀಸಲಳಿಯದ ಪದವಿ ಸಾರಿರಯ್ಯ ಅಪ
ಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |
ಜೀವಿಗಳ ಸ್ಥಿತಿಯ ನೋಡುತ ಬರಲು ಮರುಗಿ ಆ |
ದೇವಿ ಬಿನ್ನಹ ಮಾಡಲಾಗ ಕರುಣಾಕರನು |
ಭಾವಿಸಿದನೀ ಕೃತಿಯನು |
ದೇವತ್ರಿಧಾಮನವ ದಿವ್ಯ ವೈಕುಂಠದೊಳು |
ಪಾವನಸ್ಥಳವಿದೆಂದೊರೆದ ಧರೆಯೊಳು ಕಾಶಿ |
ಶ್ರೀ ವಾರಣಾಸಿ ಪಂಚಕ್ರೋಶಮಿತಿಯಲ್ಲಿ
ಆ ವಿಪುಳ ಮಣಿಕರಣಿಕೆ ೧
ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ |
ನೆಲನಳೆಯ ಈರಡಿಗೆ ಸಾಲದಿರೆ ಬ್ರಹ್ಮಾಂಡ |
ಬಲಪದದ ನಖದಿ ಸೀಳಲ್ಕೆ ಬಹಿರಾವರಣ |
ಜಲಸುರಿಯೆ ಅಂಗುಟದಲಿ ||
ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ |
ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ – |
ತಲೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ |
ದಿಳಿದಿಹಳು ಕಾಶಿಯಲ್ಲಿ ೨
ಪರಮನಿರ್ಮಲ ಶುಭ್ರತರದ ಭಾಗೀರಥಿಯ
ನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ |
ಸ್ವರವರ್ಣದಿಂದಲ್ಲಿ ಗುಪ್ತಗಾಮಿನಿಯಾದ |
ಸರಸತಿಯ ಸಂಗಮದಲಿ ||
ಮೆರೆಯುವ ತ್ರಿವೇಣಿಯೆನಿಸುವ ತೀರದಲ್ಲಿ ವಟ – |
ತರುಛಾಯೆಯಲ್ಲಿಹುದು ದೇವ ಋಷಿ – ಮೌನೀಗಣ ೩

೩೮
ವಾಸುದೇವ ನಿನ್ನ ವರ್ಮ ಕರ್ಮಂಗಳ
ದೇಶ ದೇಶದೊಳು ಹೇಳಲೆ ? ಪ
ಬೇಸರಿಯದೆ ಎನ್ನ ಹೃದಯ ಕಮಲದಲ್ಲಿ
ವಾಸವಾಗಿ ಸುಮ್ಮನಿರುವೆಯೊ ? ಅ.ಪ
ಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?
ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆಮೆಚ್ಚಿಕೊಟ್ಟದ್ದು ನಾ ಹೇಳಲೆ೧
ಕಡಗೋಲು ಮಂಡೆಯಂದದಿ ಕೈಕಾಲುಮುದುಡಿಕೊಂಡದ್ದು ನಾ ಹೇಳಲೆ ?
ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ ೨
ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?
ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ೩
ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?
ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ ೪
ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯಬೇಡಿದುದನು ಹೇಳಲೆ ?
ಲೀಲೆಯಿಂದಲಿ ಧರೆಯ ಈರಡಿ ಮಾಡಿದ ಜಾಲತನ್ವನುನಾನು ಹೇಳಲೆ ೫
ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯಪಿಡಿದದ್ದು ಹೇಳಲೆ ?
ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡದೋಷತನವ ನಾನು ಹೇಳಲೆ೬
ತಾಯ ಮಾತನೆ ಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?
ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ?೭
ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ
(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದಸುದ್ದಿ ಹೇಳಲೆ೮
…………………………………………………………………………
………………………………………………………………………………೯
ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವಪಿಡಿದದ್ದು ಹೇಳಲೆ ?
ಆಯತದಿಂದ ಕಲಿಯಲಿದ್ದು ಮನುಜರ ಮಾಯವತೋರಿದ್ದು ಹೇಳಲೆ೧೦
ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?
ಕರುಣದಿಂ ಭಕುತರ ಹೊರೆವ ಪುರಂದರವಿಠಲನೆಂದು ನಾ ಹೇಳಲೆ ೧೧*

೩೯
ವಿದುರನ ಭಾಗ್ಯವಿದು |
ಪದುಮಜಾಂಡ ತಲೆದೂಗುತಲಿದೆ ಕೊ ಪ
ಕುರುರಾಯನು ಖಳನನುಜನು ರವಿಜನು |
ಗುರುಗಾಂಗೇಯರು ಎದುರಿರಲು ||
ಹರಿಸಿ ರಥವ ನಡು ಬೀದಿಯಲ್ಲಿ ಬಹ |
ಹರಿಯ ತಾನು ಕಂಡನು ಹರುಷದಲಿ ೧
ದಾರಿಯಲಿ ಬಹ ಮುರವೈರಿಯ ಕಾಣುತ |
ಹಾರುತ ಚೀರುತ ಕುಣಿಯುತಲಿ ||
ವಾರಿಧಾರೆಯನು ನೇತ್ರದಿ ಸುರಿಸುತ |
ಬಾರಿಬಾರಿಗೆ ಹಿಗ್ಗುವ ಸುಖದಿ ೨
ಆಟಕೆ ಲೋಕಗಳೆಲ್ಲಾ ಸೃಜಿಸುವ |
ನಾಟಕಧರ ತನ್ನ ಲೀಲೆಯಲಿ ||
ನೀಟಾದವರ ಮನೆಗಳ ಜರೆದು |
ಕುಟೀರದಲಿ ಬಂದು ಹರಿ ಕುಳಿತ ೩
ಅಡಿಗಡಿಗೆ ತನ್ನ ತನುಮನ ಹರಹಿ |
ಅಡಗೆಡೆಯುತ ಬಲು ಗದ್ಗದದಿ ||
ನುಡಿಗಳ ತೊದಲಿಸಿ ರೋಮವ ಪುಳಕಿಸಿ |
ದುಡುದುಡು ಓಡುವ ದಶದಿಶೆಗೆ ೪
ಕಂಗಳುದಕದಿ ಪದಂಗಳ ತೊಳೆದು |
ಗಂಧವ ಪೂಸಿದ ತನುಪೂರಸಿ ||
ಮಂಗಳ ಮಹಿಮನ ಚರಣಕೆರಗಿ ಪು-
ಷ್ಪಂಗಳಿಂದ ಪೂಜೆಯ ಮಾಡಿದನು ೫
ನೋಡಿದ ಭಕುತನ ಮನದ ಹವಣಿಕೆಯು |
ಪಾಡುವ ಪೊಗಳುವ ಹರುಷದಲಿ ||
ನೀಡಿದ ಕರದಲಿ ಬಿಗಿದಪ್ಪಿದ ಕೊಂ –
ಡಾಡಿದ ಕರುಣದಿ ಜಗದೊಡೆಯ ೬
ಕ್ಷೀರವಾರಿಧಿ ಶಯನಗೆ ವಿದುರನು |
ಕ್ಷೀರವನುಣ ಬಡಿಸಿದ ನೋಡಾ ||
ವಾರಿಜನಾಭನು ಕರಸಂಪುಟದಲಿ |
ಆರೋಗಣಿಸಿದ ಘನತೆಯನು ೭
ಒಂದು ಕುಡಿತೆ ಪಾಲು ಹರಿ ತಾ ಸವಿದು |
ಮುಂದಕೆ ನಡೆಸಿದ ಧರೆಮೇಲೆ ||
ಇಂದಿರೆಯರಸನ ಚರಿತೆ ವಿಚಿತ್ರವು |
ಚೆಂದದಿ ಹರಿದುದು ಬೀದಿಯಲಿ ೮
ಕರುಣಾಕರ ಸಿರಿಹರಿ ತನ್ನ ಭಕುತರ |
ಪೊರೆವನು ಅನುದಿನ ಆಯತದಿ ||
ಸಿರಿಯ ಅರಸು ನಮ್ಮ ಪುರಂದರ ವಿಠಲನ |
ಶರಣರು ಧನ್ಯರು ಧರೆ ಮೇಲೆ ೯

೭೮
ವಿಧಾತೃದೇವತೆಗಳೂ ವಿಷ್ಣುವಿನ ಹಿಂದೆ |
ಇದಕೆ ತಪ್ಪಿದರೆ ಫಣಿಫಣವ ಪಿಡಿವೆ ಪ.
ಸಕಲ ತೀರ್ಥಗಳೆಲ್ಲ ಸಾಲಗ್ರಾಮದ ಹಿಂದೆ |
ಪ್ರಕಟಗ್ರಂಥಗಳೆಲ್ಲ ಭಾರತದ ಹಿಂದೆ ||
ಸಕಲ ವೃಕ್ಷಗಳೆಲ್ಲ ಶ್ರೀ ತುಳಸಿಯ ಹಿಂದೆ |
ಸಕಲ ಪರ್ವತಗಳು ಮೇರುವಿನ ಹಿಂದೆ ೧
ಮತಗಳೆಲ್ಲವು ಮಧ್ವಮತದ ಸಾರದ ಹಿಂದೆ |
ಇತರ ವರ್ಣಗಳೆಲ್ಲ ವಿಪ್ರರ ಹಿಂದೆ ||
ವ್ರತಗಳೆಲ್ಲವು ಹರಿಯ ದಿನದ ವ್ರತದ ಹಿಂದೆ |
ಅತಿಶಯದ ದಾನಗಳು ಅನ್ನದಾನದ ಹಿಂದೆ ೨
ಉತ್ತಮಗುಣಗಳೆಲ್ಲ ಉದಾರತ್ವದ ಹಿಂದೆ |
ಮತ್ತೆ ಕರ್ಮಗಳು ಮಜ್ಜನದ ಹಿಂದೆ ||
ಪೃಥ್ವಿಯೊಳಗೆ ನಮ್ಮ ಪುರಂದರವಿಠಲನ |
ಭಕ್ತವತ್ಸಲನೆಂಬ ನಾಮವೇ ಮುಂದೆ ೩

ಹದಿನೆಂಟು ಪುರಾಣಗಳಲ್ಲಿ
೨೫
ವಿಧಿ ನಿಷೇಧವು ನಿನ್ನವರಿಗೆಂತೊ ಹರಿಯೇ ಪ
ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ರ‍ಮತಿಯೆಂಬವಿಧಿಯನೊಂದನೆ ಬಲ್ಲರಲ್ಲದೇ ಮತ್ತೊಂದು ಅ.ಪ
ಮಿಂದದ್ದೆ ಗಂಗಾದಿ ಪುಣ್ಯತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರು ||
ನಿಂದದ್ದೆ ಗಯೆ ವಾರಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ ಪೋದುದೆ ಬೀದಿ ೧
ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂಮಂಡಲದಿ ಶಯನವೆ ನಮಸ್ಕಾರವು ||
ತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆಮಂಡೆ ಬಾಗಿಸಿ ನಮಿಪ ಭಾಗವತ ಜನಕೆ ೨
ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯುನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರ ||
ಕೊಡುವುದೆಲ್ಲವು ಅಗ್ನಿಮುಖದಲ್ಲಿ ಆಹುತಿದೃಢಭಕ್ತರೇನ ಮಾಡಿದರದೇ ಮರ್ಯಾದೆ ೩
ನಷ್ಟವಾದುದು ಎಲ್ಲ ಸಂಚಿತದ ಕರ್ಮವುಮುಟ್ಟಲಂಜುವುವೆಲ್ಲ ಆಗಾಮಿಕರ್ಮ ||
ಸ್ಪಷ್ಟವಾಗಿರುವ ಪ್ರಾರಬ್ಧ ಕರ್ಮವ ಮೀರಿಸೆಟ್ಟಿಮೆಟ್ಟಿದ್ದೆ ಪಟ್ಟಣವೆಂಬುದೇ ನಿಜವು ೪
ಎಲ್ಲಿ ಕುಳ್ಳಿರಲಲ್ಲಿ ಪ್ರಾಯೋಪವೇಶ ಮತ್ತೆಲ್ಲಿ ನೋಡಲು ಮನವು ಅಲ್ಲಿಯೆ ಸಮಾಧಿ ||
ಎಲ್ಲೆಲ್ಲಿಯೂ ಪುರಂದರವಿಠಲ ರಾಯನಬಲ್ಲವರಿಗೆಲ್ಲಿಹುದು ಪಾಪ ಪುಣ್ಯದ ಲೇಪ ೫

೨೫೫
ವಿಷಯದ ವಿಚಾರ ಬಿಡು ವಿಹಿತಕರ್ಮವ ಮಾಡು |
ವೈರಾಗ್ಯ ಭಾಗ್ಯಬೇಡು ಪ.
ವಿಷವೆಂದು ಕಾಮ – ಕ್ರೋಧಗಳೆಲ್ಲವೀಡಾಡು |
ಮಸಣಮನವೇ ಮಾಧವನನು ಕೊಂಡಾಡು ಅಪ
ಅನುದಿನದಿ ಹರಿಕಥೆಯ ಕೇಳಿ ಸಂತೋಷಪಡು |
ದಿನದಿನವು ಸಜ್ಜನರ ಕೂಡು ||
ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |
ಹಣ – ಹೊನ್ನು ಪರಹೆಣ್ಣು ಹೆಂಟೆಯಂತೆ ನೋಡು ೧
ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡು |
ಮಾಧವನ ಭಕ್ತಿ ಬೇಡು ||
ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು – |
ಸೂದನನ ಕೀರ್ತಿ ಸಂಕಿರ್ತನೆಯ ಮಾಡು ೨
ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |
ನಂಬಿ ನೀ ಕೆಡಲುಬೇಡ ||
ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |
ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ ೩

೧೮೭
ವೀರ ಹನುಮ ಬಹುಪರಾಕ್ರಮ – ಸುಜ್ಞಾನವಿತ್ತು
ಪಾಲಿಸಯ್ಯ ಜೀವರುತ್ತಮ ಪ
ರಾಮದೂತನೆನಿಸಿಕೊಂಡಿನೀ – ರಾಕ್ಷಸರ
ವನವನೆಲ್ಲ ಜಯಿಸಿ ಬಂದೇ ನಿ ||
ಜಾನಕಿಗೆ ಉಂಗುರವಿತ್ತು
ಜಗತಿಗೆಲ್ಲ ಹರುಷವಿತ್ತು
ಜಾತಿಮಣಿಯ ರಾಮಗಿತ್ತು
ಲೋಕದಿ ಪ್ರಖ್ಯಾತನಾದೆ ೧
ಗೋಪಿಸುತನ ಪಾದ ಪೂಜಿಸಿ – ಗದೆಯ ಧರಿಸಿ |
ಕೌರವರ ಬಲವ ಸವರಿಸಿ ||
ದ್ರೌಪದಿಯ ಮೊರೆಯ ಕೇಳಿ
ಕರುಣದಿಂದ – ತ್ವರದಿ ಬಂದು
ಪಾಪಿ ಕೀಚಕನನು ಕೊಂದು
ಭೀಮಸೇನನೆನಿಸಿಕೊಂಡೆ ೨
ಮಧ್ಯಗೇಹನಲಿ ಜನಿಸಿ ನೀ – ಬಾಲ್ಯದಲ್ಲಿ
ಮಸ್ಕರಿಯ – ರೂಪಗೊಂಡೆ ನೀ ||
ಸತ್ಯವತಿಯ ಸುತನ ಭಜಿಸಿ |
ಸಮ್ಮುಖದಲಿ ಭಾಷ್ಯ ಮಾಡಿ
ಸಜ್ಜನರನು ಪಾಲಿಸಿದ – ಪು
ರಂದರವಿಠಲನ ದಾಸ ೩

೨೦೬
ವೃಂದಾವನದೇವಿ ನಮೋನಮೋ-ಚೆಲ್ವ-|
ಮಂದರಧರನ ಮನಃ ಪ್ರಿಯಳೆ ಪ
ನಿನ್ನ ಸೇವಿಸಿ ಉದಕವನು ಎರೆಯಲು |
ಮುನ್ನ ಮಾಡಿದ ಪಾಪವಳಿಯುವುದು ||
ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |
ಉನ್ನತ ವೈಕುಂಠಪದವೀವಳೆ ೧
ಒಂದೊಂದು ದಳದಲಿ ಒಂದೊಂದು ಮೂರುತಿ |
ಸಂದಣಿನೆವೆ ಬಹು ಗುಪಿತದಲಿ ||
ಬಂದು ಕುಂಕುಮ ಶಂಖಚಕ್ರವಿರಿಸಿದರೆ |
ತಂದೆ ನಾರಾಯಣ ಕರೆದೊಯ್ಯುವ ೨
ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||
ದುರಿತ ರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|
ಹರಿಯು ತನ್ನವರೆಂದು ಕೈಪಿಡಿವ ೩
ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |
ಉತ್ತಮ ವೈಕುಂಠ ಪದವೀವಳು ||
ಭಕ್ತಿಯಿಂದಲಿ ಬಂದು ಕೈಮುಗಿದವರನು |
ಕರ್ತೃನಾರಾಯಣ ಕರೆದೊಯ್ವನು ೪
ಆವಾವ ಪರಿಯಲಿ ಸೇವೆಯ ಮಾಡಲು |
ಪಾವನ ವೈಕುಂಠಪದವೀವಳೆ ||
ದೇವ ಶ್ರೀ ಪುರಂದರ ವಿಠಲರಾಯನ |
ದೇವಿ ನಿನ್ನ ಮುಟ್ಟಿ ತ್ರಾಹಿ ಎಂಬೆ ೫

೧೪೪
ವೃಂದಾವನದೊಳಾಡುವನಾರೆ – ಗೋಪ-|
ಚಂದಿರವದನೆ ನೋಡುವ ಬಾರೆ ಪ
ಅರುಣಪಲ್ಲವ ಪಾದಯುಗಳನೆ ದಿವ್ಯ-|
ಮರುಕತ ಮಂಜುಳಾಭರಣನೆ ||
ಸಿರಿವರ ಯದುಕುಲ ಸೋಮನೆ ಇಂಥ-|
ಪರಿಪೂರ್ಣ ಕಾಮ ನಿಸ್ಸೀಮನೆ ೧
ಹಾರ-ಹೀರ ಗುಣಧಾರನೆ – ದಿವ್ಯ |
ಸಾರಶರೀರ ಶೃಂಗಾರನೆ ||
ಆರಿಗಾದರು ಮನೋದೂರನೆ ತನ್ನ-|
ಸೇರಿದವರ ಮಾತ ವಿೂರನೆ ೨
ಮಕರ ಕುಂಡಲ ಕಾಂತಿ ಭರಿತನೆ – ದಿವ್ಯ |
ಆಕಳಂಕರೂಪ ಲಾವಣ್ಯನೆ ||
ಸಕಲರೊಳಗೆ ದೇವನೀತನೆ – ನಮ್ಮ |
ಮುಕುತೀಶ ಪುರಂದರ ವಿಠಲನೆ ೩

೨೦೭
ವೃಂದಾವನವೇ ಮಂದಿರವಾಗಿಹ
ಇಂದಿರೆ ಶ್ರೀ ತುಳಸಿ ||
ನಂದನಂದನ ಮುಕುಂದಗೆ ಪ್ರಿಯಳಾದ |
ಚೆಂದದ ಶ್ರೀ ತುಳಸಿ ಪ
ತುಳಸಿಯ ವನದಲಿ ಹರಿಯಿಹನೆಂಬುದ |
ಶ್ರುತಿ ಸಾರುತಲಿದೆ ಕೇಳಿ |
ತುಳಸೀದರ್ಶನದಿಂದ ದುರಿತಗಳೆಲ್ಲವು
ದೂರವಾಗುವುವು ಕೇಳಿ ||
ತುಳಸೀ ಸ್ಪರ್ಶವ ಮಾಡೆ ದೇಹ ಪಾವನವೆಂದು
ತಿಳಿದಿಲ್ಲವೇನು ಪೇಳಿ |
ತುಳಸೀಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದು
ಸುಖದಿಂದ ನೀವು ಬಾಳಿ ೧
ಮೂಲಮೃತ್ತಿಕೆಯನು ಮುಖದಲಿ ಧರಿಸಲು
ಮೂಲೋಕ ವಶವಹುದು |
ಮಾಲೆ ಕೊರಳಲಿಟ್ಟ ಮನುಜಗೆ ಮುಕ್ತಿಯ
ಮಾರ್ಗವು ತೋರುವುದು ||
ಕಾಲಕಾಲಗಳಲಿ ಮಾಡುವ ದುಷ್ಕರ್ಮ
ಕಳೆದು ಬೀಸಾಡುವುದು |
ಕಾಲನ ದೂತರ ಕಳಚಿ ಕೈವಲ್ಯದ
ಲೀಲೆಯ ತೋರುವುದು ೨
ಧರೆಯೊಳು ಸುಜನರ ಮರೆಯದೆ ಸಲಹುವ
ವರಲಕ್ಷ್ಮಿ ಶ್ರೀ ತುಳಸಿ |
ಪರಮಭಕ್ತರ ಪಾಪಗಳನೆಲ್ಲ ತರಿದು ಪಾ-
ವನ ಮಾಡುವಳು ತುಳಸಿ ||
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು
ಹರುಷವೀವಳು ತುಳಸಿ |
ಪುರಂದರವಿಠಲನ ಚರಣ ಕಮಲಗಳ
ಸ್ಮರಣೆಯೀವಳು ತುಳಸಿ ೩

ಮಾಹೇಂದ್ರನ ಅನುಜನೆಂದರೆ
೫೩
ವೆಂಕಟರಮಣ ವೇದಾಂತ ನಿನ್ನಯ ಪಾದಪಂಕಜ ಕಂಡ ಮೇಲೆ- ಇಂಥಮಂಕುಜನರ ಬೇಡಿಸುವುದುಚಿತವೇಶಂಖಚಕ್ರಾಂಕಿತನೇ ಪಕ್ಷೀರಸಾಗರ ಮಥನಿಸಿ ಪೊಂದಿದಾತಗೆನೀರು ಮಜ್ಜಿಗೆ ಕಡವೆ ||
ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತಂಗೆದೋರೆ ತ್ರಿಂತ್ರಿಣಿ ಬಯಕೆ?೧
ಸಾರ್ವಭೂಪಾಲನ ಸೂನುವೆನಿಸಿಕೊಂಡುಸೋರೆ ಕೂಳಿನ ತಿರುಕೆ ||
ನಾರಿ ಲಕ್ಷ್ಮೀಕಾಂತ ನಿನ್ನ ನಂಬಿದವಗೆದಾರಿದ್ರ್ಯದಂಜಿಕೆಯೆ? ೨
ಸುರನದಿಯಲಿ ಮಿಂದು ಶುಚಿಯಾದ ಬಳಿಕಿನ್ನುತೀರ್ಥದ ಅಟ್ಟುಳಿಯೇ ||
ಕರುಣಾನಿಧಿಯೆಂದು ಮೊರೆಹೊಕ್ಕ ದಾಸಗೆದುರಿತದ ದುಷ್ಫಲವೆ? ೩
ಗರುಡನ ಮಂತ್ರವ ಕಲಿತು ಜಪಿಸುವಂಗೆಉರಗನ ಹಾವಳಿಯೆ ||
ಹರಿಯ ಪಕ್ಕದೊಳು ಮನೆ ಕಟ್ಟಿದಾತಂಗೆಕರಿಗಳ ಭೀತಿಯುಂಟೆ?೪
ಪರಮ ಪುರುಷ ಸುಗುಣಾತ್ಮಕ ನೀನೆಂದುಮೊರೆಹೊಕ್ಕೆ ಕಾಯೊ ಎನ್ನ ||
ಉರಗಾದ್ರಿವಾಸ ಶ್ರೀ ಪುರಂದರವಿಠಲನೆಪರಬ್ರಹ್ಮ ನಾರಾಯಣ ೫

ಈತ ಕುಬೇರನ ಸೇನಾಪತಿ
೫೪
ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ ಪ
ಪಂಕಜನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ ಅ.ಪ
ಅಂಬುಜಭವವಿನುತಂ ಅಗಣಿತ ಗುಣನಾಮಂತುಂಬುರು ನಾರದ ಗಾನ ವಿನೋದಂ
ಅಂಬುಧಿಶಯನಂ ಅಗಣಿತನಾಮಂ೧
ಪಾಹಿ ಪಾಂಡವಪಾಲಂ ಕೌರವ ಹರಣಂಬಾಹು ಪರಾಕ್ರಮ ಫಣಿಪತಿ ಶಯನಂ
ಅಹಲ್ಯಾ ಶಾಪ ವಿಮೋಚನ ಚರಣಂ ೨
ಸಕಲ ವೇದ ವಿಚಾರಂ ಸರ್ವಜೀವಿ ನೇತಾರಂ ಮಕರ ಕುಂಡಲಧರ ಮದನ ಗೋಪಾಲಂ
ಭಕ್ತವಿಪೋಷಣ ಪುರಂದರವಿಠಲಂ ೩

೩೩೬
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-
ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪ
ಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನ
ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೋ ||
ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈ
ಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ ೧
ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-
ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||
ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆ
ಹುಟ್ಟಿ ಬಾಹ ಜನ್ಮಂಗಳ ಎನಗೆ ಬಿಡಿಸೋ ೨
ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉ
ತ್ರ‍ಕಷ್ಟ ಬಂಗಾರದೊಳು ಎನ್ನ ಕೂಡಿಸೋ ||
ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆ
ದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ ೩

೩೩೭
ವೇಣುನಾದ ಬಾರೊ, ವೆಂಕಟರಮಣನೆ ಬಾರೊ |
ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪ
ಪೂತನಿಯ ಮೊಲೆಯುಂಡ ನವ-|
ನೀತ ಚೋರನೆ ಬಾರೊ ||
ದೈತ್ಯರಾವಣನ ಸಂಹರಿಸಿದ |
ಸೀತಾನಾಯಕ ಬಾರೊ ೧
ಹಲ್ಲು ಮುರಿದು ಮಲ್ಲರ ಗೆದ್ದ |
ಘುಲ್ಲನಾಭನೆ ಬಾರೊ ||
ಗೊಲ್ಲತಿಯರೊಡನೆ ನಲಿವ |
ಚೆಲ್ವ ಮೂರುತಿ ಬಾರೊ ೨
ಮಂದಾರವನೆತ್ತಿದಂಥ |
ಇಂದಿರಾ ರಮಣನೆ ಬಾರೊ ||
ಕುಂದದೆ ಗೋವುಗಳ ಕಾಯ್ದ |
ನಂದನಂದನನೆ ಬಾರೋ ೩
ನಾರಿಯರ ಮನೆಗೆ ಪೋಪ |
ವಾರಿಜಾಕ್ಷನೆ ಬಾರೋ ||
ಈರೇಳು ಭುವನವ ಕಾಯ್ವ |
ಮಾರನಯ್ಯನೆ ಬಾರೊ೪
ಶೇಷಶಯನ ಮೂರುತಿಯಾದ |
ವಾಸುದೇವನ ಬಾರೊ ||
ದಾಸರೊಳು ವಾಸವಾದ |
ಶ್ರೀಶ ಪುರಂದರ ವಿಠಲ ಬಾರೊ ೫

೨೫೬
ವೈದ್ಯ ಬಂದ ನೋಡಿ – ವೆಂಕಟನೆಂಬ |
ವೈದ್ಯ ಬಂದ ನೋಡಿ ಪ.
ವೈದ್ಯ ಬಂದನು ವೇದವೇದ್ಯ ನೋಡೀಗಲೇ
ಶ್ರೀದೇವಿರಮಣನು ಶ್ರೀನಿವಾಸನೆಂಬ ಅಪ
ಎಷ್ಟು ದಿನದ ರೋಗಗಳೆಂಬುದ ಬಲ್ಲ |
ಗಟ್ಟಿಯಾಗಿ ಧಾತುರಸಗಳನು ಬಲ್ಲ ||
ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |
ಶಿಷ್ಟವಾದ ದೇಹ ಕೊಟ್ಟು ಕಾಯುವನಿವ ೧
ಹೊನ್ನು – ಹಣಂಗಳ ಅನ್ನವ ಅನುಸರಿಸಿ |
ತನ್ನ ದಾಸನೆಂಬ ನಿಜವ ನೋಡಿ ||
ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |
ತನ್ನ ನಾಮಾಮೃತ ದಿವ್ಯ ಔಷಧವೀವ ೨
ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |
ಈ ತನುವಿಗೆಂದೆಂದು ರೋಗಬರಲರಿಯದು ||
ಈತ ಅನಂತರೂಪದಿ ಜೀವರಿಗೆ ಮುನ್ನ |
ಪ್ರೀತಿಯಿಂದಲಿ ಭವರೋಗ ಬಿಡಿಸುವ ೩
ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |
ಮರ್ಮಬಲ್ಲ ರೋಗಜೀವಂಗಳ ||
ನಿರ್ಮಲವಾಗಿಹ ತನ್ನ ನಾಮಸ್ಮರಣೆ |
ಒಮ್ಮೆ ಮಾಡಲು ಭವರೋಗ ಬಿಡಿಸುವ ೪
ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |
ಅನ್ನ ಮಂತ್ರ – ತಂತ್ರ – ಜಪವೇತಕೆ ? ||
ಚೆನ್ನ ಪುರಂದರವಿಠಲನ್ನ ನೆನೆದರೆ |
ಮನ್ನಿಸಿ ಸಲಹುವ ವೈದ್ಯ ಶಿರೋಮಣಿ ೫

೩೩೮
ವೈದ್ಯವ ನಾನರಿಯೆ – ಭವರೋಗದ-|
ವೈದ್ಯ ನೀನೆ ಹರಿಯೆ ಪ
ನೀ ದಯದಿಂದೆನ್ನ ರಕ್ಷಿಸು-
ಆದಿವೈದ್ಯ ಮುನ್ನ |
ಪಾದೋದಕವನು ಎನಗೆ ಕೊಡಿಸು ಸರ್ವ-||
ವ್ಯಾಧಿನಿವಾರಣ ಕಷಾಯ ನೀ ಕೊಡು ೧
ಹರಿ ನಿನ್ನ ಕರುಣವೆಂಬ-ಸ್ಮರಣೆಯ |
ತ್ವರಿತ ಜ್ಞಾನದಿಂದ ||
ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||
ದುರಿತನಿವಾರಣ ಕಷಾಯ ನೀ ಕೊಡು ೨
ಕೃಷ್ಣ ನೀ ಕೃಪೆವಿಡಿದು-ಕಪಟದ-|
ಉಷ್ಣವಾಯುವಳಿದು ||
ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |
ಇಷ್ಟವ ಸಲಿಸುವ ತೃಪ್ತಿಪಡಿಸುವಂಥ ೩
ನಿನ್ನ ದಾಸ ನಾನು-ದುರಿತಗ-|ಸ
ಳೆನ್ನ ಕಾಡುವುವೇನು ||
ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|
ವನ್ನು ಮಾಡಿ ಶ್ರೀಹರಿ ಸಲಹೆನ್ನನು೪
ಪಂಡಿತ ದಯಾಸಿಂಧು-ಕಾಡುವ-|
ಪಾಂಡುರೋಗ ಕೊಂದು ||
ಪುಂಡರೀಕಾಕ್ಷ ಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು ೫

೨೫೨
ವ್ಯರ್ಥವಲ್ಲವೆ – ಜನುಮ ವ್ಯರ್ಥವಲ್ಲವೆ ಪ.
ತೀರ್ಥಪದನ ಭಜಿಸಿ ತಾ ಕೃ – |
ತಾರ್ಥನಾಗದವನ ಜನುಮ ಅಪ
ಒಂದು ಶಂಖವುದಕದಿಂದ |
ಚೆಂದದಲಭಿಷೇಕ ಮಾಡಿ ||
ಗಂಧ – ಪುಷ್ಪ ಹರಿಗೆ ಅರ್ಪಿಸಿ |
ವಂದನೆ ಮಾಡದವನ ಜನುಮ ೧
ಮುಗುಳುದೆನೆಯ ಎಳೆ ತುಳಸಿ ದ – |
ಳಗಳ ತಂದು ಪ್ರೇಮದಿಂದ ||
ಜಗನ್ಮೋಹನ ಪೂಜೆಯ ಮಾಡಿ |
ಚರಣಕೆರಗದವನ ಜನುಮ ೨
ಕಮಲ ಮಲ್ಲಿಗೆ ಸಂಪಿಗೆ ಜಾಜಿ |
ವಿಮಲ ಕೇದಗೆ ಪ್ರೇಮದಿಂದ ||
ಕಮಲನಾಭನ ಅರ್ಚನೆ ಮಾಡಿ |
ಕರವ ಮುಗಿಯದವನ ಜನುಮ ೩
ಪಂಚಭಕ್ಷ್ಯ ಪಾಯಸ ಘೃತ |
ಪಂಚಾಮೃತ ಹರಿಗರ್ಪಿಸದೆ ||
ಮುಂಚೆ ಉಂಡು ಹೊರಗೆ ತಾ ಪ್ರ – |
ಪಂಚಮಾಡುವವನ ಜನುಮ ೪
ಸಜ್ಜನಸಂಗ ಮಾಡದವನ |
ದುರ್ಜನ ಸಂಗವ ಬಿಡದವನ
ಅರ್ಜುನಸಖ ಪುರಂದರ |
ವಿಠಲನನ್ನು ಭಜಿಸಿದವನ ೫

೩೩೫
ವ್ಯಾಪಾರವೆನಗಾಯಿತು
ಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪ
ಹರಿಕರುಣವೆಂಬಂಗಿ ಗುರು ಕರುಣ ಮುಂಡಾಸು
ಹರಿದಾಸರ ದಯವೆಂಬ ಒಲ್ಲಿ ||
ಪರಮ ಪಾಪಗಳೆಂಬ ಪಾಪೋಸವನೆ ಮೆಟ್ಟಿ
ದುರುಳಾತ್ಮರಾದವರ ಎದೆ ಮೇಲೆ ನಡೆವಂಥ ೧
ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿ
ನಾಲಗೆಯೆಂಬ ಲೆಕ್ಕಣಿಕೆ ||
ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕ
ಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ ೨
ನುಡಿನುಡಿಗಾನಂದ ಬಾಷ್ಪ ರೋಮಾಂಚನ
ಮುಡುಪಿನೊಳಗೆ ಇಟ್ಟ ಕೈಜೀತವು ||
ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನು
ಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ ೩
ಹಿಂದಿನ ಸಂಸಾರ ಆಗಮನದ ಭಯ
ಎಂದೆಂದಿಗದರ ಚಿಂತೆಯು ಬಿಟ್ಟಿತು ||
ಮುಂದಿನ ಸಂಸಾರ ಸ್ಥಾನ ಭಾರಕೆಲ್ಲ
ಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ ೪
ಕಂಡಕಂಡವರ ಕಾಲುಗಳಿಗೆರಗಿ ನನ್ನ
ಮಂಡೆ ದಡ್ಡುಗಟ್ಟಿ ಬಳಲಿದೆನೊ ||
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನು
ಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ ೫

೨೫೭
ಶಕ್ತನಾದರೆ ನಂಟರೆಲ್ಲ ಹಿತರು – ಅ
ಶಕ್ತನಾದರೆ ಆಪ್ತರವರೆ ವೈರಿಗಳು ಪ.
ಕಮಲಾರ್ಕರಿಗೆ ನಿರುತ ಕಡುನಂಟುತನವಿರಲು
ಕಮಲ ತಾ ಜಲದೊಳಗೆ ಆಡುತಿಹುದು
ಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿ ಪೋಗುವುದು ೧
ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆ
ಘನ ಪ್ರಜ್ವಲಸುತಿಹುದು ಗಗನಕಡರಿ
ಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆ
ಘನಶಕ್ತಿ ತಪ್ಪಿ ತಾ ನಂದಿ ಹೋಗುವುದು ೨
ವರದ ಶ್ರೀ ಪುರಂದರವಿಠಲನ ದಯವಿರಲು
ಸರುವ ಜನರೆಲ್ಲ ಮೂಜಗದಿ ಹಿತರು
ಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆ
ಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ ೩

ಮಧ್ವಾಚಾರ್ಯರು ತಾವು ಪ್ರತಿಷ್ಠೆ

ಶರಣು ಶರಣು ಪಶರಣು ಬೆನಕನೆ ಕನಕ ರೂಪನೆ ಕಾಮಿನಿ ಸಂಗ ದೂರನೆ |
ಶರಣು ಸಾಂಬನೆ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ಅ.ಪ
ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೆ
ಏಕವಿಂಶತಿ ಪತ್ರ ಪೈಜಿತನೇಕ ವಿಘ್ನ ವಿನಾಯಕನೆ ೧
ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯ ಶಿವಗುಣ ಸಾಗರನೆ
ಕಂಬುಕಂಧರ ಇಂದು ಮೌಳಿಜ ಚಂದನ ಚರ್ಚಿತಾಂಗನೆ || ೨
ಚತುರ್ಬಾಹು ಚರಣತೊರವಿನ ಚತುರ ಆಯುಧ ಧಾರನೆ
ಮತಿಯವಂತನೆ ಮಲಿನಜನಿತನೆ ಅತಿಯ ಮಧುರಾಹಾರನೆ || ೩
ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೆ
ಚಕ್ರಧರ ಹರಬ್ರಹ್ಮ ಪೂಜಿತ ರಕ್ತವಸ್ತ್ರಾಧಾರನೆ || ೪
ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕನೆ
ದಾಸ ಪುರಂದರ ವಿಟ್ಠಲೇಶನ ಈಶಗುಣಗಳ ಪೊಗಳುವೆ || ೫

೩೩೯
ಶರಣು ಶರಣು ನಿನಗೆಂಬೆನೊ ವಿಠಲ
ಎರವು ಮಾಡದೆಯೆನ್ನ ಕಾಯೊ ವಿಠಲ ಪ
ಅರಸಿ ರುಕ್ಮಿಣಿಗೆ ನೀನೇನೆಂದೆಯೊ ವಿಠಲ
ಸರಸಿಜಸಂಭವ ಸನ್ನುತ ವಿಠಲ ||
ಬಿರುದಿನ ಶಂಖವ ಪಿಡಿದೆಯೊ ವಿಠಲ
ಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ ೧
ಶಶಿಮುಖಿ ಗೋಪಿಯರ ರಾಜನೆ ವಿಠಲ
ಕುಶಲದಿ ಗಜುಗವನಾಡಿದೆ ವಿಠಲ ||
ದಶರಥನಂದನ ರಾಮನೆ ವಿಠಲ
ಕುಸುಮ ಬಾಣನಯ್ಯ ಕಾಯೊ ನೀ ವಿಠಲ ೨
ಕಂಡೆ ಗೋಪುರದ ವೆಂಕಟನೆ ವಿಠಲ
ಅಂಡಜಾಧಿಪ ವಾಹನನೆ ವಿಠಲ ||
ಪಂಡರಿಕ್ಷೇತ್ರದ ಪಾಲನೆ ವಿಠಲ
ಪುಂಡರೀಕ ವರದ ಪುರಂದರ ವಿಠಲ ೩

ಪದ್ಮಾವತಿಗೆ ತಮಿಳುನಾಡಿನಲ್ಲಿ

ಶರಣು ಶರಣು ವಿನಾಯಕಶರಣು ವಿದ್ಯಾ ಪ್ರದಾಯಕ ಪ
ಶರಣು ಪಾರ್ವತಿ ತನಯ ಮೂರುತಿಶರಣು ಮೂಷಕ ವಾಹನ ಅ.ಪ
ನಿಟಿಲ ನೇತ್ರನೆ ವರದ ಸುತನೆ ನಾಗ ಯಜ್ಞೋಪವೀತನೆ
ಕಟಿಯ ಸೂತ್ರದ ಕೋಮಲಾಂಗನೆ ಕರ್ಣಕುಂಡಲಧಾರನೆ ೧
ಬಟ್ಟ ಮುತ್ತಿನ ಪದಕ ಹಾರನೆ ದಿವ್ಯಬಾಹು ಚತುಷ್ಕನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ-ಅಂಕುಶಧಾರನೆ ೨
ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ ಗೆಲಿದನೆ
ಪಕ್ಷಿ ವಾಹನನಾದ ಪುರಂದರ ವಿಠಲನ ನಿಜದಾಸನೆ೩

೩೫೧
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |
ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.
ಶೀಲದಲಿ ಶಿಶು ನಿನ್ನ ನೆನೆಯಲು
ಕಾಲಲೋತ್ತುತ ಖಳರನು |
ಲೀಲೆಯಿಂದಲಿ ಚಿಟಿಲು ಭುಗಿಭುಗಿ –
ಲೆನುತ ಉಕ್ಕಿನ ಕಂಬದಿ ||
ಖೂಳದೈತ್ಯನ ತೋಳಿನಿಂದಲಿ ಸೀಳಿ
ಹೊಟ್ಟೆಯ ಕರುಳನು ||
ಮಾಲೆಯನು ಕೊರಳೊಳಗೆ ಧರಿಸಿದ
ಜ್ವಾಲನರಸಿಂಹಮೂರ್ತಿಗೆ ೧
ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||
ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||
ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||
ಥಳ ಥಳಾ ಥಳ ಹೊಳೆವ ಮಿಂಚಿನೊಲ್
ಹೊಳೆವ ನರಸಿಂಹ ಮೂರ್ತಿಗೆ ೨
ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||
ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||
ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತ
ಘೋರ ರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ ೩
ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||
ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||
ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||
ಸಿರಿ ಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ ೪
ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||
ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||
ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||
ಸಿರಿಯ ಸುಖವನು ಮರೆದಹೋಬಲ ವರದ ಪುರಂದರವಿಠಲಗೆ ೫

೨೦೩
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪ
ವಾಗಭಿಮಾನಿ ವರಬ್ರಹ್ಮಾಣಿ
ಸುಂದರವೇಣಿ ಸುಚರಿತಾಣಿ ಅ.ಪ
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ೧
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರ ವಿಠಲನ ಸೋದರ ಸೊಸೆಯೆ೨

೮ಶೇಷದೇವರು
೨೧೧
ಶೃಂಗಾರವಾಗಿದೆ ಸಿರಿರಂಗನ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ ಪ
ಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |
ಮೃಡನ ತೋಳಲಿ ನೆಲಸಿಹ ಮಂಚ ||
ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |
ಕಡಲ ಶಯನ ಶ್ರೀ ರಂಗನ ಮಂಚ ೧
ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |
ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||
ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |
ಚೆನ್ನಿಗ ಪರೀಕ್ಷೀತನ ಪ್ರಾಣವ ಕೊಂಡ ಮಂಚ ೨
ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |
ನಾಲಗೆಯೆರಡುಳ್ಳ ವಿಷದ ಮಂಚ ||
ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |
ಕಾಳಗದಲಿ ಕಿರೀಟಿಯ ಮುಕುಟ ಕೊಂಡ ಮಂಚ ೩
ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |
ರಕ್ಕಸರೆದೆದಲ್ಲಣನ ಮಂಚ ||
ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |
ಲಕ್ಕುಮಿ ರಮಣ ಶ್ರೀ ಹರಿಯ ಮಂಚ ೪
ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |
ಸಂಕರುಕ್ಷಣನೆಂಬ ಸುಖದ ಮಂಚ |
ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟ ಪುರಂದರ ವಿಠಲ ರಾಯನ ಮಂಚ ೫

೩೩೮
ಶೋಭನ ಶೋಭನವೆ ನಮ್ಮ
ಶ್ರೀ ಭೂದೇವಿಯರ ಅರಸು ವೆಂಕಟಗೆ ಪ.
ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗ
ಇಂದಿರೆ ಹರುಷದಿಂದುದಿಸಿ ಬಂದು ||
ಮಂದಾರ ಮಾಲೆಯ ಹಾಕಿದ ದೇವಗೆ
ಕಂದರ್ಪಕೋಟಿ ಲಾವಣ್ಯ ಮೂರುತಿಗೆ ೧
ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದೆ ಬಂದಿರಲಾಗಿ ||
ಸನಕಾದಿವಂದ್ಯನ ಕಂಡು ಸಂತೋಷದಿ
ಜನಕಜೆ ಮಾಲೆಯ ಹಾಕಿದ ರಾಮಗೆ ೨
ರುಕುಮನು ಶಿಶುಪಾಲಗೀವೆನೆಂಬ ಮಾತಿಗೆ
ಸಕಲ ರಾಯರು ಬಂದಿರಲಾಗಿ ||
ಭಕುತಿ ವತ್ಸಲನ ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ ೩
ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯು
ಮಿತ್ರವಿಂದಾ ಲಕ್ಷಣಾ ಜಾಂಬವತಿ ||
ಮತ್ತೆ ಸೋಳಾಸಾಸಿರ ಗೋಪಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣಗೆ ೪
ಪದ್ಮದೇಶದಲೊಬ್ಬ ದೇವಾಂಗನೆಯು
ಪದ್ಮಮುಖಿಯು ಶ್ರುತಕೀರ್ತಿಯಾಗಿ ||
ಪದ್ಮನಾಭ ಶ್ರೀ ಪುರಂದರವಿಠಲಗೆ
ಪದ್ಮಾವತೀ ಪ್ರಿಯ ಶ್ರೀನಿವಾಸಗೆ ೫

೩೩೯
ಶೋಭನವೆ ಹರಿ ಶೋಭನವೆ ಪ.
ಶೋಭನವೆನ್ನಿರಿ ಶುಭಕರದಿಂದಲಿ
ಶೋಭನ ಶ್ರೀ ಲೋಲ ಗೋಪಾಲನೆನ್ನಿರೆ ಅಪ
ಪಾಲುಗಡಲು ಮನೆಯಾಗಿರಲು
ಆಲದೆಲೆಯ ಮೇಲೆ ಮಲಗುವರೆ ||
ಮೂಲೋಕವೇ ನಿನ್ನುದರದೊಳಿರಲು
ಬಾಲಕನಾಗಿ ಎತ್ತಿಸಿಕೊಂಬುವರೆ ೧
ಸಿರಿ ನಿನ್ನ ಕೈವಶವಾಗಿರಲು
ತಿರುಮಲ ಮಲೆಯನು ಸೇರುವರೆ ||
ಸರಸಿಜಭವ – ಭವ ನಿನ್ನ ಪೂಜಿಸಲು
ನರನ ಬಂಡಿಯ ಬೋವನೆನಿಸುವರೆ ೨
ಕಮ್ಮಗೋಲನ ಪಿತನಾಗಿರಲು
ಗಮ್ಮನೆ ಕುಬುಜೆಗೆ ಸೋಲುವರೆ ||
ಬ್ರಹ್ಮ ಪರಬ್ರಹ್ಮ ಚರಣಕೆ ಶರಣು
ಹಮ್ಮಿನ ದೈವ ಶ್ರೀ ಪುರಂದರವಿಠಲ ೩

೧೮೮
ಶ್ರೀ ತತ್ತ್ವವಾದ ಮತವ ಪ
ಶ್ರೀ ತತ್ತ್ವವಾದ ಮತವಾರ್ದಿ ಶುಭ ಚಂದ್ರಮನ |
ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |
ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳ
ಸಲಿಸುವವಾತಜಾತನ ಸ್ಮರಿಸಿರೈ ಅ.ಪ
ಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |
ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |
ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿ
ಸ್ವಾಮಿಯಾಜ್ಞೆಯನೆ ಕೊಂಡು |
ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |
ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |
ಆ ಮಹದ್ವನದ ದನುಜರನೆಲ್ಲವಳಿದ – ನಿಸ್ಸೀಮ –
ಹನುಮನ ಭಜಿಸಿರೈ ೧
ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |
ದ್ವಾಪರನ ಯುಕ್ತಯಿಂದುತ್ರ‍ಕಷ್ಟರಾಗಿದ್ದ |
ಪಾಪಿಗಳನಳಿದು ಕೀಚಕ – ಜರಾಸಂಧಾದಿ
ಭೂಪಾಲಕರನು ತರಿದು ||
ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ –
ಲಾಪಥದೊಳಸುರ ಮಣಿಮಂತ ಕದನವ ಮಾಡೆ|
ಕೋಪದಿಂದವನ ಮರ್ದಿಸಿದನತಿ
ಬಲವಂತನಾ ಪುರುಷನಂ ಭಜಿಸಿರೈ ೨

ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂ
ದಿಳೆಯೊಳವತರಿಸಿ ಸೋಹಂ ಎಂಬ ಶಂಕರನ
ಹುಲುಮತಂಗಳ ಜರಿದು ಮಾಯಿಗಳ
ಗೆಲಿದು ಮೋಹನ ಶಾಸ್ತ್ರಬಲೆಯನರಿದು
ಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡು
ಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆ
ನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾ
ಅಲವಭೋದರ ಭಜಿಸಿರೈ ೩
ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-
ತತ ಧರೆಯೊಳದ್ವೈತವಂಕುರಿಸದಂತೆ ದು-
ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳ
ಮತಗಳ ಮತ ಹೆಚ್ಚದಂತೆ ||
ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |
ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆ
ಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದ
ಯತಿರಾಯರು ಭಜಿಸಿರೈ ೪
ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |
ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |
ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆ
ಸರಿಗಾಣೆ ಲೋಕದೊಳಗೆ ||
ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |
ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |
ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |
ಪೂರ್ಣಪ್ರಜ್ಞರ ಭಜಿಸಿರೈ ೫
ಅಕಳಂಕ ಚರಿತನೆ ಮುಮುಕ್ಷ ಮಸ್ತಕದ ಮಣಿ |
ನಿಖಿಳ ಪೌರಾಣಶ್ರುತಿ ಶಾಸ್ತ್ರದಾಗಮದ ಖಣಿ |
ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದ ಆಣಿ
ಭಾಗವತ ಚಿಂತಾಮಣಿ ||
ಯುಕುತಿ ಪರಿಪೂರ್ಣಯತ್ಯಾಶ್ರಮಕೆ ಕಟ್ಟಾಣಿ |
ಪ್ರಕಟ ಕವಿಜನ ಕಮಲ ವ್ಯೂಹಕೆ ಗಗನಮಣಿ |
ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿ
ಮುಖ್ಯಪ್ರಾಣರ ಭಜಿಸಿರೈ ೬
ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |
ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |
ಸಂದೇಹವಿಲ್ಲ ತಪ್ಪದು ವೇದವಾಕ್ಯವಿದು
ಹಿಂದೆ ಶ್ರೀಹರಿಸೇವೆಯ ||
ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ –
ನಂದು ಮಾಡಿದ ಸುಕೃತ – ಫಲದಿಂದ ಬ್ರಹ್ಮತ್ವ |
ಬಂದು ಯುಗ -ಯುಗದೊಳವರಿತರಿಸಿ ದೃಷ್ಟವ
ತೋರ್ಪನಂದ ಮುನಿಪರ ಭಜಿಸಿರೈ ೭

೧೯೦
ಶ್ರೀ ಮದಾನಂದ ತೀರ್ಥ ಹನುಮ | ಭೀಮ
ನಿನ್ನ ಸಮಾನ ಪುರುಷರು
ಈ ಮೂಜಗದೊಳಿಲ್ಲವೆಂದು ಶ್ರೀ ರಾಮ
ಸಹಭೋಜನವನೀಯನೆ? ಪ
ಹರಿವಿರಿಂಚಿ ಸಹಾಯದಿಂದ | ಹರನು
ತ್ರಿಪುರವನಳಿಯಲಾಗ |
ಬರಿದೆ ಕೊಂಡಾಡಿದರು ಸರ್ವರು |
ಅರಿಯದೆಯೆ ನಿನ್ನ ಸಾಹಸ ||
ಶರಧಿ ಲಂಘಿಸಿ ದಾನವರನು ತರೆದು
ಸೀತೆಗೆ ಉಂಗುರವಿತ್ತು |
ಪುರವನುರುಹಿ ಹರಿಯಡಿಗೆ ಆ ಕುರುಹ
ತಂದು ಮುಟ್ಟಿಸಿದೆಯೊ ೧
ಸಾಸಿರದ ತನ್ನ ಪೆಡೆಯ ನಡುವೆ | ಈಸು
ಸಚರಾಚರವನೆಲ್ಲ |
ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||
ಆ ಶಕುತಿಯನು ತೋರಿಸಲು
ದಶಾಸ್ಯನೆಳೆಯುವ ಸೌಮಿತ್ರಿಯನು
ದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು೨
ತನ್ನ ಜನನಿಯೊಬ್ಬಳಿಗೆ ಸುಪರ್ಣ ಬಳಲಿ ಸುಧೆಯ ತರಲು
ಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||
ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |
ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ ೩
ಸಕಲ ಪ್ಲವಗನಿಕರ ರಾಮನ | ತ್ರಿಕರಣ
ಸೇವೆಯನು ಮಾಡಿ |
ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದು
ಕೇಳಲು ನೀನು ನಾ ||
ಲುಕು ಪುರುಷಾರ್ಥಗಳ ಜರಿದು | ಭಕುತಿಯ
ಕೊಡು ಎನಲು ನವಕ
ನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನು
ನಿನ್ನ ಪೊಗಳಿದ ೪
ಶರಧಿಯ ಮಥನದೊಳುದಿಸಿದ | ಗರಳ ಜಗತ್ತನು ಅಂಜಿಸೆ
ಸಿರಿಯರಸನ ಪೆರ್ಮೆಯಿಂದ | ಸುರಿದು
ಅದನು ಜೀರ್ಣಿಸಿಕೊಂಡ ||
ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆ
ಮರುಳ ಕೌರವರಿಕ್ಕಿದ ವಿಷವ | ಭರದಿ
ಉಂಡು ತೇಗಿದುದರಿದೆ ? ೫
ಅವನಿ ಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನು
ಬವರ ಮುಖದಿ ನಗುತ ಗೆಲಿದು |
ಹವಿಯ ಕೃಷ್ಣಾನಿಗರುಪಿಸಿ
ದಿವಿಜರೆದುರುಗೊಳಲು ಅವರ |
ನವರತಾರತಮ್ಯದಿ ಮನ್ನಿಸಿ |
ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ೬
ಸುರಾಸುರರ ಸಂಗ್ರಾಮದಲಿ | ಅರಿ
ವಿಪ್ರಚಿತ್ತಿಯ ನೀನು ಕೊಲ್ಲಲು |
ವಿರಿಂಚಿ-ಹರರ ವರದಿಂದವನೆ |
ಜರಾಸಂಧನಾಗಿ ಇಳೆಯೊಳು |
ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆ
ಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ ೭
ನಡುಮನೆಯೆಂಬ ಸಾಧುದ್ವಿಜನ | ಮಡದಿಯ
ಬಸಿರಿನಲಿ ಉದಿಸಿ
ಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||
ತಡೆದು ಆನಂದ ಶುಭಗುಣಗಳ | ಕಡಲು
ಹರಿಸರ್ವೋತ್ತಮನೆಂದು
ಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆ
ಸ್ಥಾಪಿಸಿದೆಯೊ ನೀ ೮
ಮರುತ ನಿನ್ನವತಾರ ತ್ರಯವ | ನರಿತು
ಭಜಿಪಗೆ ಶ್ವೇತದ್ವೀಪ |
ದರುಶನವನೆ ಮಾಡಿಸಿ ಶ್ರೀ | ಪುರಂದರ ವಿಠಲೇಶನ |
ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |
ಪರಮಾನಂದವ ಪಡೆಸಿ ಹೊರೆವೆ |
ಪರಿಪರಿಯ ಭೋಗಗಳನಿತ್ತು ೯

೧೮೯
ಶ್ರೀ ಮಧ್ವರಾಯರ ಸೇವೆ ದೊರಕುವುದು
ಜನುಮ ಸಫಲ ಕಾಣಿರೋ ಪ
ಶ್ರೀಮದಾನಂದ ತೀರ್ಥರ ಪಾದವ ನೆನೆವರು
ಸಾಮಾನ್ಯ ಸುರರು ಕಾಣಿ-ಬೊಮ್ಮನ ಆಣಿ ಅ.ಪ
ಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲ
ಅಗುಣನು ಪರಬೊಮ್ಮನು-||
ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದು
ಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ ೧
ಹರಿ ಸರ್ವೋತ್ತಮ ನಿತ್ಯ ತರುವಾಯ ರಮಾದೇವಿ
ತರುವಾಯ ವಿಧಿಪ್ರಾಣರು
ಸರಸ್ವತಿ ಭಾರತಿ ಗರುಡ ಅನಂತ ರುದ್ರ
ತರುವಾಯ ಆರು ದೇವಿಗಳು ೨
ಸೌಪರ್ಣಿ ವಾರುಣಿದೇವಿ ಅಪರ್ಣಾದೇವಿಯರು ಸಮರು
ದ್ವಿಪದಿ ಮನ್ವಾದಿಗಳು ||
ಈ ಪರಿ ತಾರತಮ್ಯ ಜಪ-ಧ್ಯಾನಾರ್ಚನೆಯಿಂದ
ಅಪವರ್ಗದನ ಸೇವೆಯ ಮಾಡಿರೊ ಎಂಬ೩
ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ
ಚೆಂದದಿಂದಲಿ ಲಾಲಿಸಿ ||
ಇಂದಿರಾರಮಣ ಗೋವಿಂದನೇ ದೈವವೆಂದು |
ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ ೪
ಹಿಮಗಿರಿಯಿಂದ ಸೇತುವೆಯ ಪರ್ಯಂತರ
ಭ್ರಮಿಸುತ ಸುಜನರಿಗೆ ||
ಕ್ರಮತತ್ತ್ವ ಬೋಧಿಸಿ ಕಮಲನಾಭನ ಮೂರ್ತಿ
ಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ ೫
ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದು
ಧಾತ್ರೀ ಮುದ್ರೆಯ ತೋರಿಸಿ ||
ಈತನೇ ಹನುಮಂತ ಈತನೇ ಭೀಮಸೇನ
ಈತನೇ ಭವಿಷ್ಯದ ಬ್ರಹ್ಮ ಜೀವೋತ್ತಮ ೬
ಶ್ರೀಮದನಂತನೆ ಅನಂತಕಾಲಕೆಯೆಂದು
ಯಮಕ ಭಾರತ ತೋರಿಸಿ
ಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದು ಪ್ರೇಮಿ ಪುರಂದರ ವಿಠಲನ ದಾಸನಾದ ೭

೩೪೦
ಶ್ರೀನಿವಾಸಾ ನೀನೇ ಪಾಲಿಸೋ ಶ್ರೀಯುತಜನಪಾಲ
ಗಾನಲೋಲ ಶ್ರೀ ಮುಕುಂದನೇ ಪ
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣು ಗೋಪಾಲಾ ಗೋವಿಂದಾ ವೇದವೇದ್ಯ ನಿತ್ಯಾನಂದಾ ಅ.ಪ
ಎಂದಿಗೆ ನಿನ್ನ ಪದಾಬ್ಜವ-ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವಾ ||
ಅಂಧಕಾರಣ್ಯದಲ್ಲಿ ನೊಂದು ತತ್ತಳಿಸುತಿಹ
ಅಂದದಿಂದ ಈ ಭವದಿ ನಿಂದು ನೊಂದೆನೋ ಮುಕುಂದ ೧
ಎಷ್ಟುದಿನ ಕಷ್ಟಪಡುವುದೋ-ಯಶೋದೆಯ ಕಂದ
ದೃಷ್ಟಿಯಿಂದ ನೋಡಲಾಗದೆ ||
ಮುಟ್ಟಿ ಭಜಿಸುವನಲ್ಲ ಕೆಟ್ಟ ನರಜನ್ಮದವನು
ದುಷ್ಟಕಾರ್ಯ ಮಾಡಿದರು ಇಷ್ಟನಾಗಿ ಕೈಯ ಹಿಡಿದು ೨
ಅನುದಿನ ಅನೇಕ ರೋಗಗಳ-ಅನುಭವಿಸಿದೆನೊ
ಘನಮಹಿಮ ನೀನೆ ಬಲ್ಲೆಯಾ ||
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠಲ ನೀ ಎನಗೆ ಒಲಿದು ೩


ಉಗಾಭೋಗ
ಶ್ರೀಪತಿಯ ನಾಭಿಯಿಂದ ಅಜ ಜನಿಸಿದನು
ಅಜನ ಮಾನಸ ಪುತ್ರರೇ ಸನಕಾದ್ಯರು
ಸನಕಾದ್ಯರ ಶಿಷ್ಯರೇ ದೂರ್ವಾಸರು
ದೂರ್ವಾಸರ ಶಿಷ್ಯರೇ ಪರತೀರ್ಥರು
ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು
ಸತ್ಯಪ್ರಜ್ಞರತೀರ್ಥರೆ ಪ್ರಾಜ್ಞತೀರ್ಥರು
ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತ ಪ್ರೇಕ್ಷರು
ಅಚ್ಯುತ ಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು
ಪೂರ್ಣ ಪ್ರಙ್ಞರೇ ನಮ್ಮ ಭಾಷ್ಯಕಾರರು
ಭಾಷ್ಯಕಾರರೇ ನಮ್ಮ ಗುರು ಮುಖ್ಯಪ್ರಾಣರು
ಗುರುಮುಖ್ಯ ಪ್ರಾಣಪತಿ ನಮ್ಮ ಪುರಂದರವಿಠಲ

೭೯
ಶ್ರೀಪತಿಯು ನಮಗೆ ಸಂಪದವೀಯಲಿ – ವಾ
ಣೀಪತಿಯು ನಮಗೆ ದೀರ್ಘಾಯು ಕೊಡಲಿ ಪ.
ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ಸಹಾಯಕನಾಗಲಿ
ಸರರೊಳುನ್ನತವಾದ ನಿತ್ಯ ಭೋಗಂಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ ೧
ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ
ದಿನದಿನದಿ ಅಶ್ವಿನಿಗಳಾ¥ತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ ೨
ನಿರುತ ಸುಜ್ಞಾನವನು ಈವ ಮಧ್ವರಾಯ |
ಗುರುಗಳಾಶೀರ್ವಾದ ನಮಗಾಗಲಿ
ಪುರಂದರವಿಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ ೩

೧೫೯
ಶ್ರೀಪತಿಯು ನಮಗೆ ಸಂಪದವೀಯಲಿ ವಾ-
ಣೇಪತಿಯು ನಮಗೆ ದೀರ್ಘಾಯು ಕೊಡಲಿ ಪ
ಸುರರ ಗಣವನು ಪೊರೆಯ ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ಸಹಾಯಕನಾಗಲಿ ||
ನರರೊಳುನ್ನತವಾದ ನಿತ್ಯಾಭೋಗಂಗಳನು
ಪರಹೂತ ಪೂರ್ಣ ಮಾಡಸಲಿ ನಮಗೆ ೧
ವಿನೂತಸಿದ್ದಿಪ್ರದನು ವಿಘ್ನೇಶ ದಯದಿಂದ
ನೆನದ ಕಾರ್ಯಗಳೆಲ್ಲ ನೆರವೇರಿಸಲಿ ||
ದಿನ ದಿನದಿ ಅಶ್ವಿನಿಗಳಾಪತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ ೨
ನಿರುತ ಸುಜ್ಞಾನವನು ಈವ ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ ||
ಪುರಂಪರ ವಿಠಲನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ ೩

೨೨೫
ಉಗಾಭೋಗ
ಶ್ವೇತ ದ್ವೀಪದಿ ಆಯುಕ್ತ ಸ್ಥಳದಲ್ಲಿ
ಚತುರ್ಮುಖ – ಭವೇಂದ್ರಾದಿ ಸುರರು
ಭೂಭಾರವ ನಿಳುಹಬೇಕೆಂದು
ನಿನ್ನ ಸ್ತುತಿಸೆ ಸ್ತುತಿಸೆ ಬಹುಕಾಲ
ಮತ್ಸ್ಯ-ಕೂರ್ಮ ವರಾಹನಾಗಿ
ಕಾಲಕಾಲದಲಿ ಶಿಷ್ಟರ ಪಾಲಿಪನೆಂದು
ಬಿರುದು ಸಲ್ಲುವುದು (ನಿನಗೆ) ಶರಣಾಗತ ವಜ್ರ ಪಂಜರ
ಸಿರಿ ಪುರಂದರ ವಿಠಲ.

೨೬೧
ಸಂಗಾವೇತಕೆ ಅಲ್ಪರೊಡನೆ ಗುಣವಿಲ್ಲ
ಮಂಗ ಮನುಜನ ಕೂಡ ಮಾತಾಡಸಲ್ಲ ಪ.
ಪರರ ಕೆಣಕಿ ತನ್ನ ಹಿರಿಯತನ ಕೆಡಲೇಕೆ ?
ಹರಕೆಯಿಲ್ಲದ ಮೇಲೆ ಹಾದಿಯಿಸಲೇಕೆ ?
ಮುರುಕು ಮನೆಯಲಿ ತಾ ಕಷ್ಟವ ಪಡಲೇಕೆ ?
ಸರಿಬಾರದವರೊಡನೆ ಸರಸ ಮಾತುಗಳೇಕೆ ? ೧
ತೊತ್ತಿನ ಕೂಡಾಡಿ ಅತಿದೀಕ್ಷೆ ಕೆಡಲೇಕೆ ?
ಹೊತ್ತಿಗಲ್ಲದವನ ಕೂಡ ಗೆಳೆತನದ ಮಾತೇಕೆ ?
ರತ್ನವನು ನಾಯ ಕೊರಳಿಗೆ ಸುತ್ತಿ ಬಿಡಲೇಕೆ ?
ಕತ್ತೆಯ ಮೇಲೇರಿ ಕೆಡಲೇಕೆ ಮನುಜಾ ? ೨
ನೆಲೆ ತಪ್ಪಿದ ಮೇಲೆ ನಂಟ – ಬಂಧುಗಳೇಕೆ?
ಸಲುಗೆಯಿಲ್ಲದ ಮೇಲೆ ಛಲವು ತನಗೇಕೆ ?
ಬುಲುದೈವ ಪುರಂದರವಿಠಲನಿರಲಿಕ್ಕೆ ?
ಹಲವು ದೈವದ ಗೊಡವೆ ನವಗೇಕೆ ಮನುಜಾ ? ೩

೩೪೨
ಸಂದಿತಯ್ಯ ಪ್ರಾಯವು |
ಸಂದಿತಯ್ಯ ಪ್ರಾಯವು ಪ
ಮೂರು ತಿಂಗಳು
ಸಂದುಹೋಯಿತು ತಿಳಿಯದೆ ||
ಬಂದೆ ತಾಯಿಯ ಜಠರದಲಿ ಮ-|
ತ್ತೊಂದು ಬುದ್ಧಿಯನರಿಯದೆ ||
ಬೆಂದೆ ನವಮಾಸದಲಿ ಗರ್ಭದಿ |
ಒಂದು ದಿವಸವು ತಡೆಯದೆ ||
ಕುಂದದೀಪರಿಯೊಂದು ವರುಷವು |
ಇಂದಿರೇಶನೆ ಕೇಳು ದುಃಖವ ೧
ಕತ್ತಲೆಯೊಳಿರಲಾರೆನೆನುತಲಿ |
ಹೊತ್ತೆ ಹರಕೆಯ ನಿನ್ನನು ||
ಮತ್ತೆ ಜನಿಸಲು ಭೂಮಿಯೊಳು ನಾ |
ಅತ್ತುನಿನ್ನನು ಮರೆತೆನು ||
ಮತ್ತೆ ಮಲ-ಮೂತ್ರದೊಳು ಬಾಲ್ಯದಿ |
ಹೊತ್ತು ದಿನಗಳ ಕಳೆದೆನು ||
ಮತ್ತೆ ನರಕದೊಳುರುಳುತುರುಳುತ |
ಉತ್ತಮೋತ್ತಮ ನಿನ್ನ ನೆನೆಯದೆ ೨
ಚಿಕ್ಕತನವನು ಮಕ್ಕಳಾಟದಿ |
ಅಕ್ಕರಿಂದಲಿ ಕಳೆದೆನು ||
ಸೊಕ್ಕಿ ಹದಿನಾರಲಿ ನಾನತಿ |
ಮಿಕ್ಕಿ ನಡೆದೆನು ನಿನ್ನನು ||
ಸಿಕ್ಕಿ ಬಹು ಸಂಸಾರ ಮಾಯೆಯ |
ಕಕ್ಕುಲಿತೆಯೊಳು ಬಿದ್ದೆನು ||
ಹೊಕ್ಕುದಿಲ್ಲವು ನಿನ್ನ ಪಾದವ |
ರಕ್ಕಸಾರಿಯೆ ಕೇಳು ದುಃಖವ ೩
ಸುಳಿದೆ ಮನೆಮನೆ ಕಳೆದೆ ಕಾಲವ |
ಉಳಿದ ಯೋಚನೆ ಮಾಡದೆ ||
ಬೆಳೆದೆ ತಾಳೆಯ ಮರದ ತೆರದಲಿ ||
ಉಳಿವ ಬಗೆಯನು ನೋಡದೆ ||
ಎಳೆಯ ಮನದೊಳೆ ಇಳೆಯ ಜನರೊಳು |
ಬಳಕೆ ಮಾತುಗಳಾಡಿದೆ ||
ಕಳೆದೆ ಈ ಪರಿಯಿಂದ ಕಾಲವ |
ನಳಿನನಾಭನೆ ನಿನ್ನ ನೆನೆಯದೆ ೪
ಎಡೆಬಿಡದೆಅನುದಿನದಿ ಪಾಪದ |
ಕಡಲೊಳಗೆ ನಾನಾಳ್ದೆನು ||
ದರವ ಕಾಣೆದೆ ಮಧ್ಯದಲಿ ಎ-|
ನ್ನೊಡಲೊಳಗೆ ನಾನೊಂದನು ||
ದೃಢದಿ ನಿನ್ನಯ ಧ್ಯಾನವೆಂಬಾ |
ಹಡಗವೇರಿಸು ಎನ್ನನು ||
ಒಡೆಯ ಪುರಂದರವಿಠಲ ಎನ್ನನು |
ಬಿಡದೆ ಕಾಯೈ ಬೇಗ ಶ್ರೀ ಹರಿ ೫

೮೨
ಸಂಸಾರವೆಂಬ ಸಾಗರವನುತ್ತರಿಸುವರೆ
ಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.
ಯತಿಯಾಗಬೇಡ ವೈರಾಗ್ಯವರಿತು ಸಕಲ
ವ್ರತವ ಮಾಡುವೆನೆಂಬ ನೇಮ ಬೇಡ ||
ಶ್ರುತಿ – ಸ್ರ‍ಮತಿಗಳನರಿತು ನಡೆವೆನೆನಬೇಡ ಶ್ರೀ –
ಪತಿಯ ಶ್ರೀನಾಮವೊಂದೆ ಸಾಕು ಮರುಳೆ ೧
ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ
ವನಿತೆಯನು ಬಿಟ್ಟು ತಪವಿರಲು ಬೇಡ ||
ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |
ವನಜಾಕ್ಷ ನಾಮವೊಂದೇ ಸಾಕು ಮರುಳೆ ೨
ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ – ತಾರ್ಥನಾದೆನೆಂಬ ಹೆಮ್ಮೆ ಬೇಡ ||
ಧೂರ್ತಭಂಜನ ನಮ್ಮ ಪುರಂದರವಿಠಲ ಸಂ –
ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** ೩

ಧರ್ಮಧ್ವಜ ಮತ್ತು ಮಾಧವಿ
೨೬
ಸಕಲ ಗ್ರಹಬಲ ನೀನೆ ಸರಸಿಜಾಕ್ಷ |ನಿಖಿಳವೇತಕೆ ಎನಗೆ ವಿಶ್ವವ್ಯಾಪಕ ಮೋಹಿ ಪ
ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆಕವಿ ಗುರುವು ಶನಿಯು ಮಂಗಳನು ನೀನೆ ||
ದಿವಸ ರಾತ್ರಿಯು ನೀನೆ ನವವಿಧಾನವು ನೀನೆಭವರೋಗಹರ ನೀನೆ ರಕ್ಷಕನು ನೀನೆ ೧
ಪಕ್ಷಮಾಸವು ನೀನೆ ಪರ್ವಕಾಲವು ನೀನೆನಕ್ಷತ್ರಯೋಗ ಕರಣಗಳು ನೀನೆ ||
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದಪಕ್ಷಿವಾಹನ ದೀನ ರಕ್ಷಕನು ನೀನೆ ೨
ಋತು ಕಾಲಗಳು ನೀನೆ ವ್ರತದಿನಂಗಳು ನೀನೆಕ್ರತುವು ಸಂಧ್ಯಾನ ಸದ್ಗತಿಯು ನೀನೆ ||
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆಶ್ರುತಿಗೆ ನಿಲುಕದ ಮಹ್ಮಾತ್ಮನು ಹರಿಯು ನೀನೆ ೩

೨೫೮
ಸಕಲವೆಲ್ಲವು ಹರಿಸೇವೆಯೆನ್ನಿ
ರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.
ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ಹರಿಯಾತ್ರೆಯೆನ್ನಿ ||
ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ ೧
ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಕಂಜನಾಭಗೆನ್ನಿ ||
ಎಸೆವಾಭರಣವು ಯಶೋಧೆನಂದನಗೆನ್ನಿ
ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ ೨
ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿ
ನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||
ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿ
ಕೋಟಲೆ ಸಂಸಾರ ಕಪಟನಾಟಕಗೆನ್ನಿ ೩
ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರಗಜನಿಧಿ ವರದಗೆನ್ನಿ
ರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀ
ಮುದ್ರೆ ಧರಿಸಿದವ ಹರಿದಾಸನೆನ್ನಿ ೪
ಅಣು ರೇಣು ತೃಣ ಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಬಾರದನಂತ ಮಹಿಮನೆನ್ನಿ
ಸೆಣಸುವ ರಕ್ಕಸರ ಶಿರವ ಚಂಡಾಡುವ
ಪ್ರಣವಗೋಚರ ಪುರಂದರವಿಠಲರಾಯನೆನ್ನಿ ೫

೩೪೧
ಸಜ್ಜನರ ಸಂಗ ನಮಗೆಂದಿಗಾಗುವುದೊ |
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪ
ವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |
ಪೋಕರಾಡಿದ ಮಾತು ನಿಜವೆಂಬರು ||
ವಾಕ್‍ಶೂಲಗಳಿಂದ ನೆಡುವರು ಪರರ ನೀ |
ಪೋಕುಮಾನವರಿಂದ ನೊಂದೆ ಹರಿಯೆ ೧
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |
ನ್ಯಾಯವಿಲ್ಲದೆ ನುಡಿವರು ಪರರ ||
ಭಾವಿಸಲರಿಯರು ಗುರುಹಿರಿಯರನಿಂಥ |
ಹೇಯ ಮನುಜರಿಂದ ನೊಂದೆ ಹರಿಯೆ ೨
ಒಡಜನರನು ಕೊಂದು ಅಡಗಿಸಿಕೊಂಬರು |
ಬಿಡಲೊಲ್ಲರು ಹಿಡಿದನ್ಯಾಯವ ||
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡು ಮೂರ್ಖರಿಂದ ನಾ ನೊಂದೆನು ಹರಿಯೆ ೩
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |
ತೆತ್ತಿಗರೊಡನೆ ಪಂಥವ ನುಡಿವರು ||
ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ ೪
ಇಷ್ಟುದಿನವು ನಿನ್ನ ನೆನೆಯದ ಕಾರಣ |
ಕಷ್ಟಪಡುವ ಕೈಮೇಲಾಗಿ ||
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ ೫

೧೪೭
ಸಣ್ಣವನ ಮತವಲ್ಲ ಸಾರಿ ಹೇಳಮ್ಮ |
ಕಣ್ಣ ಮುಚ್ಚಿ ಆಡುವಾಗ ಕಾಕು ಮಾಡಲೇತಕಮ್ಮ ಪ
ಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |
ಪೊಸ ಕುಚಗಳ ಮುಟ್ಟಿ ಪೊಗಲೀಸನಮ್ಮ ||
ಹಸು ಮಗನರಿಯದೆ ಆವಾಗಲೂ ಪಿಡಿವ |
ಬಸುರುಹಬಿ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ ೧
ನವನೀತ ಬೇಡಿದರೆ ನಾವೇನೆಂಬುದಿಲ್ಲ |
ಯುವತಿಯರಧರವ ಬೇಡಬೇಕೆ? ||
ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು |
ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ ೨
ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |
ಕಾಮಿನೆ ಗಂಡನಂದದಿ ಕರೆಯುತೈದಾನೆ ||
ಪ್ರೇಮದಿ ಪುರಂದರವಿಠಲನ ನೆನೆದರೆ |
ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ ೩

೨೬೦
ಸತಿಗೆ ಸ್ವಾತಂತ್ರ್ಯವ ಕೊಡದಿರಿ – ನೀವು
ಮತಿಗೆಟ್ಟು ಭ್ರಮೆಯ ಬಡದಿರಿ ಪ.
ಪತಿಗೆ ಬಣ್ಣನೆ ಮಾತನಾಡ್ಯಾಳು – ತಾನು
ಮತಿಯಿಲ್ಲದೆ ಮೆಚ್ಚನಾಡಳು
ಅತಿ ಹರುಷದಲಿ ಬಂದು ಕೂಡ್ಯಾಳು ಕೂಡಿ
ಖತಿ ಕರಕರೆಯನು ಮಾಡ್ಯಾಳು ೧
ತಂದೆ – ತಾಯ್ಗಳನೆಲ್ಲ ತೋರಿಸ್ಯಾಳು – ನೀ
ಒಂದೆಡೆ ಬಾಯಿಂದು ಬರಿಸ್ಯಾಳು
ನಿಂದಿಸಿ ಬೆಯ್ಯುತ್ತ ಬೆರೆಸ್ಯಾಳು ನಿನ್ನ
ನೊಂದ ಪಡಿ ಭತ್ತಕೆ ಬಾಯ ತೆರೆಸ್ಯಾಳು ೨
ತಂದಿದ್ದರೊಳಗರ್ಧ ಕದ್ದಾಳು ಕದ್ದು
ತಂದು ಸುಳ್ಳಹೇಳಿ ಮೆದ್ದಾಳು
ಮುಂದಿದ್ದ ಕೂಸಿನ ಹೊದ್ದಳು – ಹತ್ತು
ಮಂದಿ ಮುಂದೆ ಅಡ್ಡಬಿದ್ದಾಳು ೩
ಉಂಡ ಊಟವನೆಲ್ಲ ನೆನೆಸ್ಯಾಳು – ತನ್ನ
ಮಂಡೆ ಕೆದರಿಕೊಂಡು ಸೆಣಿಸ್ಯಾಳು
ಭಾಂಡು ಮಾಡಿ ಬಾಯಿ ತೆರಿಸ್ಯಾಳು – ನಿನ್ನ
ಕೊಂಡ ಕೋತಿಯಂತೆ ಕುಣಿಸ್ಯಾಳು ೪
ಕರೆತರೆ ಸಂಸಾರ ಸ್ಥಿರವಲ್ಲ – ಈ
ದುರುಳ ಹೆಣ್ಣಿನ ಸಂಗ ಸುಖವಿಲ್ಲ
ನೆರೆದೊರೆಯವರು ನಗುವರೆಲ್ಲ – ನಮ್ಮ
ಪುರಂದರವಿಠಲನು ತಾ ಬಲ್ಲ ೫

೮೦
ಸತ್ಯ ಜಗತಿದು ಪಂಚಭೇದವು, ನಿತ್ಯ ಶ್ರೀ ಗೋವಿಂದನ |
ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪ.
ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು |
ಜೀವ ಜಡರೊಳು ಭೇದ ಜಡರೊಳು ಭೇದಜಡ ಪರಮಾತ್ಮಗೆ ೧
ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು |
ಜಾನಪಿತರಜಾನ ಕರ್ಮಜರ್ದಾನವಾರಿ ತತ್ತ್ವೇಶರು ೨
ಗಣಪ ಮಿತ್ರರು ಸಪ್ತಋಷಿಗಳು ವಹ್ನಿ – ನಾರದ ವರುಣನು |
ಇನಜಗೆ ಸಮ ಚಂದ್ರ – ಸೂರ್ಯರು ಮನುಸುತೆಯು ಹೆಚ್ಚು ಪ್ರವಹನು೩
ದಕ್ಷಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು ೪
ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು |
ಕೇವಲವು ಈ ಶೇಷ – ರುದ್ರರು ದೇವಿ ಹೆಚ್ಚು ಸರಸ್ವತೀ ೫
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು |
ವಾಯುಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀ ರಮಾ ೬
ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು |
ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ಪದ್ಮವಾಸಗೆ ೭

೨೯೯
ಉಗಾಭೋಗ
ಸತ್ಯಜ ನಾಭನೆ
ಸತ್ಯ ಮಹಿಮನೆ
ಸತ್ಯ ಕಾವನೆ
ಸತ್ಯ ಪೂರ್ಣನೆ
ಸತ್ಯ ಭೂಷಣ
ನಿತ್ಯ ಪುರಂದರವಿಠಲರೇಯ

೧೬೦
ಸತ್ಯಜಗತಿದು ಪಂಚಭೇದವು ನಿತ್ಯ ಶ್ರೀಗೋವಿಂದನ
ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪ
ಜೀವ ಈಶಗೆ ಭೇದ ಸರ್ವತ್ರ ಜೀವಜೀವಕೆ ಭೋದವು
ಜೀವ ಜಡರೊಳು ಭೇದ ಜಡರೊಳು ಭೇದ ಜಡಪರಮಾತ್ಮಗೆ೧
ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವಗಂಧರ್ವರು
ಜಾನ ಪಿತರಸ್ಜಾನ ಕರ್ಮಜರ್ದಾನವಾರಿ ತತ್ಪೇಶರು ೨
ಗಣಪಮಿತ್ರರು ಸಪ್ತ ಖಷಿಗಳು ಮಹ್ನಿ ನಾರರವರುಣನು
ಇನಜಗೆ ಸಮಚಂದ್ರ ಸೂರ್ಯರು
ಮನುಸುತೆಯು ಹೆಚ್ಚುಪ್ರವಹನು ೩
ದಕ್ಞಸಮ ಅನಿರುದ್ಧ ಗುರುಶಚಿ ರತಿ ಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚದಧಿಕನು ಇಂದ್ರನು ೪
ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು
ಕೇವಲವು ಈ ಶೇಷ ರುದ್ರರು ದೇವಿ ಹೆಚ್ಚು ಸರಸ್ವತೀ ೫
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು
ವಾಯು ಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀರಮಾ ೬
ಅನಂತ ಗುಣದಿಂ ಲಕುಮಿಗಧಿಕನು ಶ್ರೀಪುರಂದರವಿಠಲನು
ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ವದ್ಮವಾಸಗೆ ೭

೨೫೯
ಸತ್ಯವೇ ಸ್ನಾನ ಜಪ ನೇಮ – ಹೋಮ – ಅ – |
ಸತ್ಯದಲಿ ನಡೆದು ಮಾಳ್ಪದು ವ್ಯರ್ಥಕರ್ಮ ಪ.
ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |
ಒಪ್ಪದಲಿ ಉಪವಾಸ ವ್ರತವ ಮಾಡಿ ||
ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |
ಸರ್ಪಗಳು ಮಾಡದಪರಾಧವೇನಯ್ಯ ? ೧
ಬಿಡದೆ ಮದ – ಮತ್ಸರಾಹಂಕಾರದೊಳು ಮುಳುಗಿ |
ಒಡನೆ ಬೆರಳುಗಳೆಣಿಸಿ ಮೌನದಿಂದ ||
ತಡೆಯದಲೆ ಪರಲೋಕ ಸುಖವನೈದುವೆನೆಂಬ |
ಬಡ ಬಕವು ಮಾಡಿದಪರಾಧವೇನಯ್ಯ ೨
ಪರಸತಿಯು ಪರಧನವು ಪರನಿಂದೆ ಪರಹಿಂಸೆ |
ಪರಮ ಪಾತಕದ ಕಾರಣವ ತೊರೆದು ||
ಧರೆಗಧಿಕ ಪುರಂದರ ವಿಠಲನ ನೆರೆಭಜಿಸಿ | ವರವನು ಪಡೆಯೆ ಸಾಲೋಕ್ಯವನ್ನೀವ ೩

೮೧
ಸದರವಿಲ್ಲವೆ ನಿಜಯೋಗ | ಸಚ್ಚಿದಾನಂದ |
ಗುರು ದಿನಂಬರನ ಸಂಯೋಗ ಪ.
ಅಡಿಯನಂಬರ ಮಾಡದನಕ | ಅಗ್ನಿ |
ಕಿಡಿಯೆದ್ದು ಮೇಲಣ ಕೊಡನುಕ್ಕದನಕ ||
ಒಡನೆರಡೊಂದಾಗದನಕ | ಅಲ್ಲಿ |
ಒಡಗೂಡಿ ಅಂಗನೆ ನುಡಿ ಕೇಳದನಕ ೧
ನಾಡಿ ಹಲವು ಕಟ್ಟದನಕ | ಬ್ರಹ್ಮ |
ನಾಡಿಯೊಳು ಪೊಕ್ಕು ಮುಳುಗಾಡದನಕ
ಕಾಡುವ ಕಪಿ ಸಾಯದನಕ | ಸತ್ತ
ಓಡಿನೊಳಗೆ ರಸ ಕಟ್ಟಿಕ್ಕದನಕ ೨
ಅರಿಕುಂಭ ಕಾಣದನಕ | ಅಲ್ಲಿ |
ಸಾಧಿಸಿ ಭೇದಿಸಿ ಸವಿಯುಣ್ಣದನಕ ||
ಭೇದವು ಲಯವಾಗದನಕ | ಬಡ |
ದಾದಿಕೇಶವ ನಿಮ್ಮ ನೆಲೆಗಾಣದನಕ* ೩

೧೪೮
ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |
ಬಿದ್ದು ನಾ ಬೇಡಿಕೊಂಬೆ ಪ
ನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|
ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪ
ಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |
ಎಳೆಯದಿರೊ ಸುಮ್ಮನೆ ||
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|
ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ ೧
ನಿರುಗೆಯ ಪಿಡಿಯದಿರೊ – ಕಾಂಚಿಯ ದಾಮ |
ಕಿರುಗಂಟೆ ಧ್ವನಿಗೆಯ್ಯದೆ? ||
ಕಿರುದುಟಿಗಳ ನೀನು ಸವಿದು ಚಪ್ಪರಿಸಲು |
ತರವಲ್ಲ ಗಂಡ ಮತ್ಸರವ ತಾಳುವನಲ್ಲ ೨
ನಾಡ ಮಾತುಗಳೇತಕೊ – ಸಂಗೀತವ |
ಪಾಡುವ ಸಮಯವೇನೊ ||
ಗಾಡಿಕಾರ ಶ್ರೀ ಪುರಂದರವಿಠಲನೆ |
ಪಾಡು ಪಂಥಗಳೆ ಒಡಗೂಡುವ ಸಮಯದಿ ೩

೩೪೩
ಸಲ್ಲದೋ ಕೃಷ್ಣ ಸಲ್ಲದೋ ಸಿರಿ
ವಲ್ಲಭ ಇದ ನೋಡು ಪಾಲಿಸಬೇಕೋ ಪ
ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನು
ಮತ್ತೆ ತುರುವಿಂಡನು ಬಿಟ್ಟು ಮೆಲ್ಲಿಸುವುದು ೧
ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ
ಪಾವಕನುರಿಗೆ ನೀನೊಪ್ಪಿಸಿ ಕೊಡುವುದು೨
ಕುಶಲದಿ ಬಣ್ಣಿಸಿ ಬರೆದು ಚಿತ್ತಾರವ
ಮಸಿ ಮಣ್ಣ ಮಾಡಿ ನೀ ಕೆಡಿಸುವುದು ೩
ಬಲುಕಾಲ ಮುದ್ದಿಸಿ ಕಲಿಸಿ ಮಾತುಗಳನು
ಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು ೪
ಕರುಣಿಸು ಸಿರಿ ಪುರಂದರ ವಿಠಲ ನಮ್ಮ
ಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು ೫

೧೪೯
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪ
ಬೆಟ್ಟು ಬಾಯೊಳಗಿಟ್ಟರೆ ರಂಗ – ಕಚ್ಚಲರಿಯನೆ |
ಕಟ್ಟಿರುವೆಯನು ಕಂಡರೆ ಬವ್ವೆಂದು – ಚಿಟ್ಟನೆ ಚೀರುವನೆ ||
ರಟ್ಟೆಯ ಹಿಡಿದು ನಡಸಲು ರಂಗ – ದಟ್ಟಡಿ ಇಕ್ಕುವನೆ |
ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |
ಪಟ್ಟ ಪಟ್ಟಿಗೆ ರಟ್ಟು ಮಾಡುವುದು೧
ಅರಿಯದಂತೆ ನೊರೆಹಾಲನು ಕುಡಿವನೆ –
ಕರೆಕರೆ ಮಾಡುವನೆ |
ಇರಲು ಮನೆಯೊಳಗೆ ಬರುತ ನಿಮ್ಮ ಮನೆ – ಮೊಸರನು
——————–ಸುರಿಯವನೆ ||
ಸರಸಿಜಾಕ್ಷಿಯರೆ ಪರಿಪರಿಯಿಂದಲಿ |
ಹರಲಿ ಮಾಡುವುದಿದು ತರವೇನಮ್ಮ ೨
ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |
——————–
——————–
ಸಿಕ್ಕಿತೆನುತ ಬಹು ಚಕ್ಕಂದಾಡುತ |
ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ ೩
ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |
ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||
ಬಾಲಕೃಷ್ಣನಿಗೆ ಜೋಲುವ ಕುಚಗಳು |
ನಿಲುಕುವ ಬಗೆ ಹೇಗೆ? ||
ಖೂಳ ಸೆಟವಿಯರು ಕಾಳವಾಗಿಹರು |
ಕೇಳಿಕೇಳಿ ಬೇಸತ್ತಿಹೆನಮ್ಮ ೪
ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |
ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||
——————–
ಸಲ್ಲದು ಈ ನುಡಿ ಪುರಂದರವಿಠಲಗೆ |
ಹಲ್ಲೊಳಗಾತನ ಇಟ್ಟಿರಬೇಡಿ ೫

೩೪೪
ಸಾಕು ಸಾಕಿನ್ನು ಸಂಸಾರಸುಖವು |
ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪ
ಉದಿಸಿದುವು ಪಂಚಭೂತಗಳಿಂದ ಔಷಧಿಗ-|
ಳುದಿಸಿದುವು ಔಷಧಿಗಳಿಂದನ್ನವು ||
ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |
ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ ೧
ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |
ಪತನವಾದಿಂದ್ರಿಯವು ಹೊಲೆ-ರುಧಿರವು ||
ಸುದತಿಯುದರದೊಳೆರಡು ಏಕದಲಿ ಸಂಧಿಸಲು |
ಬುದಬುದನೆ ಮಾಸಪರ್ಯಂತರದಿ ಹರಿಯೆ ೨
ಮಾಸವೆರಡರಲಿ ಶಿರ ಮಾಸ ಮೂರರಲಂಗ |
ಮಾಸ ನಾಲ್ಕರಲಿ ಚರ್ಮದ ಹೊದಿಕೆಯು ||
ಮಾಸವೈದರೊಳು ನಖ ರೋಮ ನವ ರಂಧ್ರಗಳು |
ಮಾಸವೇಳಲಿ ಧಾತು ಹಸಿವು ತೃಷೆಯು ೩
ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |
ಭಂಗವನು ಪಡಲಾರೆ ಭವಭವದೊಳು ||
ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |
ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ ೪
ಇನಿತು ಗರ್ಭದೊಳು ನವಮಾಸ ಪರಿಯಂತರದಿ |
ತನು ಸಿಲುಕಿ ನರಕದಲಿ ಆಯಾಸಗೊಂಡು ||
ಘನಮರುತವೇಗದಿಂ ಅರುಹನಲ್ಲಿಯೆ ಮರೆತು
ಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ ೫
ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |
ಪರವಶದೊಳಿರಲು ನೀರಡಿಸಲಾಗ ||
ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |
ದುರಿತರೂಪದ ತನುವ ಧರಿಸಿದೆನೊ ಹರಿಯೆ ೬
ಶಿಶುತನದೊಳಿರಲು ನೊಣ ಮುಸುಕಲಂದದಕಳಲು |
ಹಸಿದನಿವನೆಂದು ಹಾಲನೆ ಎರೆವರು ||
ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |
ಪಶುವಂತೆ ಶಿಶುತನದೊಳಿರಲಾರೆ ಹರಿಯೆ೭
ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |
ನುಡಿಯಲರಿಯದ ದುಃಖ ವಿಷಮದಿಂದ ||
ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|
ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ೮
ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |
ಗೋಳಿಡುತ ವಿದ್ಯೆ ಕರ್ಮಗಳ ಕಲಿತು ||
ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾ
ಬಾಲೆಯರ ಬಯಸಿ ಬಹು ಮರಳಾದೆ ಹರಿಯೆ |೯
ಜ್ವರದ ಮೇಲತಿಸಾರ ಬಂದಂತೆ ಯೌವನದಿ |
ತರುಣಿಯೊಡನಾಡಿ ಕೂಡಿದ ವಿಷಯದಿ ||
ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |
ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ ೧೦
ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |
ಹತ್ತು ಇಂದ್ರಿಯದ ಬಹುರೋಗದಿಂದ ||
ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||
ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ ೧೧
ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |
ಕಟ್ಟಿ ಕಾದಿಹರು ಮುಪ್ಪಡಸಲಾಗ ||
ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |
ಮುಟ್ಟಿನೋಡರು ಸರಕುಮಾಡರೈ ಹರಿಯೆ ೧೨
ಎಷ್ಟವಜ್ಞೆಯ ಮಾಡೆ ಮತ್ತವನಿಗಳಲುತಿರೆ |
ಕಟ್ಟಳೆಯ ದಿನ ತುಂಬಿ ಮೃತನಾಗಲು ||
ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |
ಮುಟ್ಟದಲೆ ಹೆಣನೆಂದು ದೂರದೊಳಗಿಹರು ೧೩
ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |
ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||
ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |
ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ ೧೪
ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |
ಬನ್ನವನು ಪಡಲರೆ ಭವಭವದೊಳು ||
ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |
ಸನ್ಮತಿಯೊಳಿರಿಸೆನ್ನ ಪುರಂದರವಿಠಲ ೧೫

೮೪
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.
ಆರುಮಂದಿ ಗಂಡರಾಳುವರು ಎನ್ನ
ಆರುಮಂದಿಗೆ ಮೂರು ಸುತರೆನಗೆ
ಆರು ಮೂರೇಳ್ಪರು ಭಾವ – ಮೈದುನರೆಲ್ಲ
ಆರರೆಂದರೆ ಬಿಡರು ಆರಿಗುಸುರಲಮ್ಮ ೧
ಹತ್ತುಮಂದಿ ಬೆನ್ನ ಮುತ್ತಿಕೊಂಡರೆ
ಮತ್ತೆ ಬಿಟ್ಟೆನೆಂದೆ ಬಿಡಗೊಡರು
ಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮ
ನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ ೨
ಪಂತರೈವರು ಎನ್ನ ತೊಂತ ಹಂತಯೆಂದು
ಸಂಚಿತದ ಕರ್ಮವನುಣಿಸುವರು
ವಂಚನೆಯಳಿದ ಪ್ರಪಂಚವನು ಕಳೆದಿಹ
ಮಿಂಚಿನ ಪರಿಯ ವಿರಿಂಚಿ ಬರೆದಿಹನಮ್ಮ ೩
ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿ
ಭ್ರಷ್ಟ ಆತ್ತೆಯು ಮೈತ್ಯುವಾಗಿಹಳು
ಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನು
ದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ ೪
ಒಂಬತ್ತು ಬಾಗಿಲ ಊಳಿಗವನು ಮಾಳ್ಪ
ಕುಂಬತದ ನರತ ಕಾವರ ದಾಳಿ
ಢಂಭಕವನು ಬಿಟ್ಟು ಇಂಬಿನೊಳಟ್ಟು ವಿ
ಶ್ವಂಭರ ಪುರಂದರವಿಠಲ ಧ್ಯಾನದ ಗುಟ್ಟು ೫

೨೬೩
ಸಾಮಾನ್ಯವಲ್ಲ ಶ್ರೀ ಹರಿಸೇವೆ ಪ.
ಪಾಮರಜನರಿಗೆ
ಸಾಮಜವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ ಅಪ
ಅಂತರ ಮಲಿನವಳಿಯಲು ಬೇಕು ಸಂತತ ಶ್ರವಣದಿ ಶ್ರೀ
ಕಾಂತನ ಚರಿತವ ಕೇಳಲು ಬೇಕು ಸಂತಸದಿರಬೇಕು
ಸಂತ ಜನರ ಗುಣ ಸಂತತ ಮನದಿ ನಿ
ರಂತರದಲಿ ತಾ ಚಿಂತಿಸಬೇಕು ೧
ಜ್ಞಾನ ಕರ್ಮೇಂದ್ರಿಯಗಳ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ
ಹಾನಿ ವೃದ್ಧಿಗಳೆರಡನು ತಾ ಸಹಿಸಿ ದೀನತೆಯನು ವಹಿಸಿ ||
ಮಾನಾಪಮಾನ ಸಮಾನವೆಂದರಿದು ನಿ
ಧಾನದಿ ಹರಿಗುಣ ಧ್ಯಾನವ ಮಾಳ್ಪುದು೨
ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು
ಸರ್ವರ ಧಣಿ ಸ್ವರಮಣನೆಂದು ಸರ್ವಾನುರಾಗನೆಂದು
ಸರ್ವ ಮೂರುತಿ ಶ್ರೀ ಪುರಂದರವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು೩

೨೬೪
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋ
ನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.
ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿ
ತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ ೧
ಜ್ಞಾನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿ
ದಾನ – ಧರ್ಮವೆಂಬ ದವಸ ಸರಕುಗಳ ತುಂಬಿರೊ ೨
ನೇಮ – ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿ
ಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ ೩
ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿ
ಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ ೪

೧೫೦
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ |
ಭಕ್ತವತ್ಸಲ ದೇವನು ಪ
ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿ |
ಗಕ್ಕನೆ ಕೃಷ್ಣ ಚೆಪ್ಪಾಳಿಕ್ಕಿದನಮ್ಮ ಅ.ಪ
ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು |
ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ||
ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು |
ಉನ್ನತವಾದ ವೃಕ್ಷವನೇರಿದನೆ ರಂಗ ೧
ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ |
ಎಷ್ಟು ಸ್ವಾತಂತ್ರ್ಯವೆ ಗೋಪಿ ||
ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು |
ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ ೨
ಸಡಗರದಿಂದ ಗೋವಳಿತಿಯರೊಡಗೂಡಿ |
ನುಡಿಸುತ ಕೊಳಲನು ಪುರದೊಳಗೆ ||
ಕಡೆವ ಮಡದಿಯರ ಕೈ ಪಿಡಿದಾಡುವ |
ಒಡೆಯನೆ ನಮ್ಮ ಶ್ರೀಪುರಂದರವಿಠಲ೩

೩೪೫
ಸಿಕ್ಕಿದೆಯೋ ಎಲೆ ಜೀವ-ನಿನ್ನ-
ಕುಕ್ಕಿ ಕೊಲ್ಲದೆ ಬಿಡರು ಪ
ಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |
ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪ
ಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |
ಮೂಳ ಸಂಸಾರಕೆ ನೀ ಗುರಿಯಾಗಿ ||
ತೇಲುತ ಮುಳುಗುತ ಇಲ್ಲಿಗೆ ಬಂದೆ ೧
ಸತಿ-ಸುತರೆಂಬುವರೆ – ಹಿತರೆಂದು ನಂಬಿದೆಯೊ |
ಯತಿಗಳ ತಿಥಿಗಳು ಬಂದರೆ ಮನೆಗೆ-||
ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ೨
ಶುನಕನಂದದಿ ನೀನು ಮನೆಮನೆಯನು ತಿರುಗಿ |
ಘನ ಘನವಾದ ಕೂಳನೆ ತಿಂದು ||
ತನುವ ತಗ್ಗಿಸಿ ಇಲ್ಲಿಗೆ ಬಂದೆ ೩
ಕಂಡವರ ಒಡವೆಯ-ಖಂಡುಗ ಧನವನು |
ಮಿಂಡೆಯರ ಒಡವೆಯ ಭಂಡತನದಲಿ ||
ಕಂಡುಕಾಣದೆ ನೀ ತಿಂದೆಯಲ್ಲೊ ೪
ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |
ಆಪತ್ತೆಲ್ಲ ಪರಿಹಾರ ಮಾಡುವ ||
ಶ್ರೀಪತಿ ಪುರಂದರವಿಠಲನ ನೆನೆಯದೆ೫

೮೬
ಸುಣ್ಣವಿಲ್ಲ ಭಾಗವತರೆ |
ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ……… ಪ.
ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||
ಬಾಳುಗೇಡಿ ಎನ್ನ ಬಾಯನೋಡಿ ||
ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |
ಕೇಳಿದ ಬಳಿಕಿನ್ನು ಹೇಳದೆ ಫಲವೇನು………೧
ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |
ಹೊದ್ದಿತು ಮೂದೇವಿ ಮೈದುನಗೆ ||
ಬದ್ಧತನದಿ ಸಂಜೆಭಂಗಿ ಮುಕ್ಕುವ ಭಾವ |
ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ ೨
ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |
ಗನ್ನ ಘಾತಕಿರಂಡೆ ಅತ್ತಿಗೆ ಮುಂಡೆ ||
ಎನ್ನ ಗೋಳು ತಾಗಿ ಎಂದಿಗೆ ಹೋದಾರು |
ಪನ್ನಗಶಯನ ಶ್ರೀ ಪುರಂದರವಿಠಲ ೩

೧೫೧
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |
ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪ
ಐದು ಮುಖ ಐದು ಈರೈದು ಕಣ್ಣುಗಳಿಂದ |
ಐದು ಪಣೆಯೊಳಗಗ್ನಿ ಕಿಡಿಯುದುರುತ ||
ಐದೆರಡು ತೋಳು ಭುಜಗಳ ಒಲೆದಾಡಿಸುತ |
ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ ೧
ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |
ಮೇಲೆ ಒರಲುವ ಭೂತಗಣ ಸಹಿತದಿ ||
ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |
ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ ೨
ಲಂಡದಾನವರ ಶಿರಗಳ ತರೆದು ಬಿರುದಿನ |
ರುಂಡಮಾಲೆಯ ಧರಿಸಿ ಆರ್ಭಟಿಸುತ ||
ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |
ಪುಂಡರೀಕಾಕ್ಷನ ತೋರು ತೋರೆನುತ೩
ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |
ಕರಿಜಡೆಗಳನೆಲ್ಲ ಕೆದರಿಕೊಳುತ ||
ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|
ಭರಣ ಸಹಿತಾಗಿ ಬಾಗಿಲಿಗೆ ಬಂದಿದೆಕೊ ೪
ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |
ಮದನಾರಿಯೆಂಬಂಥ ಬಲಭೂತವು ||
ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |
ಒದಗಿ ಬಂದಿಹನಿದೊ ಪುರಂದರವಿಠಲ ೫

೨೬೫
ಸುಮ್ಮನೆ ಕಾಲವ ಕಳೆವರೆ – ಯಮ – |
ಧರ್ಮರಾಯನ ದೂತರೆಳೆಯರೆ ಪ.
ನರಿ – ನಾಯಿ ಜನುಮವು ಬಾರದೆ – ಹಾಗೆ – |
ನರಜನ್ಮದಲಿ ಬಂದು ಸೇರದೆ ||
ಹರಿಯ ಸ್ಮರಣೆ ಮಾಡಲಾರದೆ – ಸುಮ್ಮ |
ನಿರಲು ಪಾಪದ ವಿಷವೇರದೆ ೧
ಬಾಲನಾಗಿದ್ದಾಗ ಬಹುಲೀಲೆ – ಮುಂದೆ |
ಲೋಲನಾಗಿ ಬಾಳಿದ ಮೇಲೆ ||
ಮೂಳ ವೃದ್ಧಾಪ್ಯ ಬಂತಾಮೇಲೆ – ಇನ್ನು – |
ಬಾಳುವುದೆಲ್ಲ ನೂಲಮಾಲೆ ೨
ಮಡದಿ – ಮಕ್ಕಳ ಕೂಡಣ ಬಾಳು – ತನ್ನ |
ಒಡಲಿಗಾಗೆ ತಾನು ಕರವಾಳು ||
ಬಿಡದೆ ಸಂಕೀರ್ತನೆ ಮಾಡೇಳು – ಮಿಕ್ಕ – |
ನುಡಿದ ನುಡಿಗಳೆಲ್ಲವು ಬೀಳು ೩
ಮನೆಮನೆ ವಾರ್ತೆಯು ಸ್ಥಿರವಲ್ಲ – ಈ |
ಮನುಜರ ಮಾತೇನು ಘನವಲ್ಲ ||
ವನಜಸಂಭವಗೂ ನಿಶ್ಚಯವಿಲ್ಲ – ಮುಂದೆ |
ಹನುಮಂತ ಪಟ್ಟಕೆ ಬಹನಲ್ಲ ೪
ಇಂದಿನ ಹಮ್ಮು ನಾಳೆಗೆ ಇಲ್ಲ – ಭವ |
ಬಂಧನದೊಳು ಸಿಕ್ಕಿ ನರಳಿದೆನಲ್ಲ ||
ಮುಂದನರಿತು ನಡೆದುದಿಲ್ಲ – ಮೃತ್ಯು |
ಬಂದಾಗ ಬಿಡಿಸಿಕೊಳ್ಳುವರಿಲ್ಲ ೫
ಮರಣವು ಆವಾಗ ಬರುವುದೋ – ತನ್ನ |
ಶರೀರವು ಆವಾಗ ಮುರಿವುದೊ ||
ಕರಣಂಗಳೆಲ್ಲವು ಜರಿವುದೊ – ತನ್ನ |
ಗರುವದುಬ್ಬಸವೆಲ್ಲ ಮುರಿವುದೊ ೬
ಮರಣಕಾಲಕೆ ಅಜಮಿಳನಾಗ – ತನ್ನ |
ತರಳನನಾರಗನೆಂದು ಕರೆದಾಗ ||
ಕರುಣದಿ ವೈಕುಂಠ ಪದವೀಗ – ನಿತ್ಯ – |
ಪುರಂದರವಿಠಲನ ನೆನೆ ಬೇಗ ೭