Categories
ರಚನೆಗಳು

ಪುರಂದರದಾಸರು

ಹಂಪೆಯಲ್ಲಿರುವ ಪ್ರಾಣದೇವರ ಹೆಸರು
೫೬
ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |ಮಂಗಳನಾಮವ ಪಾಡಿ ರಂಗನ ಕುಣಿಸುವರು ಪ
ಪಾಡಿ ಮಲಹರಿ ಭೈರವ ಸಾರಂಗ ದೇಶಿ |ಗುಂಡಕ್ರಿ ಗುಜ್ಜರಿ ಕಲ್ಯಾಣ ರಾಗದಿ ||ತಂಡತಂಡದಿ ನೆರೆದು ರಂಗನ ಉಡಿಗಂಟೆ |ಢಂ ಢಣ ಢಣಿರೆಂದು ಹಿಡಿದು ಕುಣಿಸುವರು ೧
ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |ಉತ್ತಮ ಶಂಖದ ನಾದಗಳಿಂದ ||ಸುತ್ತಮುತ್ತಿ ನಾರಿಯರು ತಾಥೈಯೆಂದು |ಅರ್ತಿಯಿಂದ ಕುಣಿಸುವರು ಪರವಸ್ತು ತತ್ಥೈಹಿಡಿದು ೨
ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||ಕಾಮಿತ ಫಲವೀವ ಭಕುತಜನರೊಡೆಯ |ಸ್ವಾಮಿ ಶ್ರೀ ಪುರಂದರವಿಠಲರಾಯನ ೩

೯೫
ಅಂಜಬೇಡ ಬೇಡವೆಲೆ ಜೀವ – ಭವ – |
ಭಂಜನ ಹರಿಶರಣರ ತಾವ ಪ.
ಬಂದಷ್ಟರಿಂದಲಿ ಬಾಳಿಕೊ – ಬಲು – |
ಸಂದೇಹಬಂದಲ್ಲಿ ಕೇಳಿಕೊ ||
ನಿಂದಾ – ಸ್ತುತಿಗಳನು ತಾಳಿಕೊ – ಗೋ – |
ವಿಂದ ನಿನ್ನವನೆಂದು ಹೇಳಿಕೊ ೧
ಮಾಧವನಿಗೆ ತನುಮನ ಮೆಚ್ಚು – ಕಾಮ – |
ಕ್ರೋಧಾದಿಗಳ ಕಲಿಮಲ ಕೊಚ್ಚು ||
ಮೋದತೀರ್ಥವಚನವೆ ಹೆಚ್ಚು – ಮಾಯಾ
ವಾದಿಮತೆಕೆ ಬೆಂಕಿಯ ಹಚ್ಚು ೨
ಪರವನಿತೆಯ ರಾಶಿಯ ಬಿಡು – ನೀ
ಹರಿಸರ್ವೋತ್ತಮನೆಂದು ಕೊಂಡಾಡು ||
ಪರಮಾತ್ಮನ ಧ್ಯಾನವ ಮಾಡು – ನಮ್ಮ – |
ಸಿರಿ ಪುರಂದರವಿಠಲನ ನೀ ನೋಡು ೩

೨೧೬
ಅಂಜಲೇತಕೆ ಮನವೆ ಅನುಗಾಲವು
ಕಂಜನಾಭನ ಭಕುತಿ ಕೈಕೊಂಡ ಬಳಿಕ ಪ
ನಾರಾಯಣನೆಂಬ ನಾಲ್ಕು ಅಕ್ಷರದಿಂದ
ಘೋರಪಾಪವನೆಲ್ಲ ಕಳೆಯಬಹುದು ||
ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡು
ವೈರಿಷಡ್ವರ್ಗಗಳ ವಧೆ ಮಾಡಬಹುದು ೧
ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದ
ಕಾಕು ಕರ್ಮಗಳನ್ನು ಕಳೆಯಬಹುದು ||
ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡು
ನೂಕಿ ಯಮಬಂಟರನು ನುಗ್ಗು ಮಾಡಲುಬಹುದು ೨
ಹರಿವಾಸುದೇವನೆಂಬ ಅಮೃತಪಾನಗಳಿಂದ
ಮರಣ ಜನನಗಳೆರಡ ಜಯಿಸಬಹುದು ||
ಅರಿತರೆ ಮನದೊಳಗೆ ಪುರಂದರವಿಠಲನ
ಸರಸ ಸದ್ಗತಿಯನ್ನು ಸವಿಗಾಣಬಹುದು೩

ಹನುಮ – ಭೀಮ – ಮಧ್ವರು
೧೬೭
ಅಂಜಿಕಿನ್ನೇತಕಯ್ಯ-ಸಜ್ಜನರಿಗೆ |
ಅಂಜಿಕಿನ್ನೇತಕಯ್ಯಪ
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಅ.ಪ
ಕನಸಿನೊಳ್ ಮನಸಿನೊಳ್ ಕಳವಳವೇತಕೆ
ಹನುಮನ ನೆನೆದರೆ ಹಾರಿ ಹೋಹುದು ಪಾಪ ೧
ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಹುದು ಪಾಪ ೨
ಪುರಂದರವಿಠಲನ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ೩

೯೬
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |
ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.
ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |
ಸವಿಗಂಡ ಊಟಗಳ ಉಣಲರಿಯದೆ |
ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |
ಜವನ ದೂತರು ಬಂದು ಎಳೆವ ಹೊತ್ತರಿಯೆ ೧
ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |
ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |
ತನ್ನ ದೂತರು ಬಂದು ಎಳೆವ ಹೊತ್ತರಿಯೆ ೨
ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |
ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||
ಹಸನವಾಗಿದೆ ಬದುಕು ಸಾಯಲಾರೆನು ಎನಲು |
ವಿಷಮ ದೂತರು ಬಂದು ಎಳೆವ ಹೊತ್ತರಿಯೆ ೩
ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ ||
ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |
ಮೃತ್ಯು ಹೆಡತಲೆಯಲಿ ನಗುತಿಹುದರಿಯೆ ೪
ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |
ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||
ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ | ಇಷ್ಟರೊಳು ಪುರಂದರವಿಠಲನ ನೆನೆಮನೆವೆ ೫

೯೭
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊ
ಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆಕಿವುಡನೊ ಎಂದೆಂದಿಗೂ ಪ.
ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊ
ಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||
ನರಹರಿ ಪಾದೋದಕ ಧರಿಸದ ಶಿರ ನಾಯುಂಡಹಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೋ ೧
ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಅಸತಿಯ ವ್ರತನೇಮವೊ
ರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳ ಸೂತ್ರ
ಕಮಲನಾಭನ ಪೊಗಳದ ಸಾರ ಸಂಗೀತ ಗಾರ್ದಭರೋದನವೊ
ಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ ೨
ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊ
ಸುರಧೇನು ಇರಲಾಗಿ ಶ್ವಾನನ ಮೊಲೆಹಾಲ ಕರೆದು ಕುಡಿಯಬೇಡವೊ
ಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊ
ಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ ೩

೨೧೭
ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ
ತಂದೆ ಗೋವಿಂದ ಮುಕುಂದ ನಂದನ ಕಂದ ಪ
ಬಲವಂತ ಉತ್ತಾನಪಾದರಾಯನ ಕಂದ
ಮಲತಾಯಿ ನೂಕಲು ಅಡವಿಯೊಳು ||
ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿ
ಒಲಿದು ಧ್ರುವಗೆ ಪಟ್ಟಕಟ್ಟಿದ್ದ ಕೇಳಿ ೧
ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳು
ದುಕ್ಖದಿ ಶ್ರೀಹರಿ ಸಲಹೆನ್ನಲು ||
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ಅಕ್ಕಸ ಪರಿದಾದಿಮೂಲನೆಂಬುದ ಕೇಳಿ ೨
ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ ||
ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನು
ಅಪಮಾನದಿಂದ ಕಾಯ್ದ ಹರಿಯೆಂಬುದನು ಕೇಳಿ ೩
ಹರಿನಾರಾಯಣನೆಂದು ಪ್ರಹ್ಲಾದ ಬರೆಯಲು
ದುರುಳ ದಾನವ ಅವನಿಗೆ ಮುನಿದು ||
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ ೪
ಅಂಬರೀಷಗೆ ದೂರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ ||
ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ ೫
ಛಲಬೇಡ ರಾಮನ ಲಲನೆಯ ಬಿಡು ಎಂದು
ತಲೆಹತ್ತರವಗೆ ಪೇಳಲು ತಮ್ಮನ ||
ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲು
ಸಲೆ ವಿಭೀಷಣಗೆ ಲಂಕೆಯನಿತ್ತುದನು ಕೇಳಿ ೬
ಸುರ-ನರ-ನಾಗಲೋಕದ ಭಕ್ತ ಜನರನು
ಪೊರೆಯಲೋಸುಗ ವೈಕುಂಠದಿಂದ ||
ಸಿರಿಸಹಿತದಿ ಬಂದು ಶೇಷಾಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು ೭

೪೬
ಅಂದೆ ನಿರ್ಣಯಸಿದರು ಕಾಣೋ |
ಇಂದಿರಾಪತಿ ಪರದೈವತವೆಂಬುದ ಪ
ಅಂದು ಚತುರ್ಮುಖ ನಾರದನಿಗೆ ತನ್ನ |
ತಂದೆ ಶ್ರೀಹರಿ ಪರದೈವವೆಂದು ||
ಸಂದೇಹಗಳ ಪರಿಹರಿಸಿಹ ದ್ವಿತೀಯದ
ಸ್ಕಂಧದೊಳಯ್ದನೆಯ ಅಧ್ಯಾಯದಲಿ ೧
ಅಂದು ಕಪಿಲದೇವ ದೇವಹೊಲೆಗೆ ತಾನು |
ಚೆಂದದ ತತ್ತ್ವವನೆಲ್ಲ ಬೋಧಿಸಿದ ||
ಅಂದದಲರ್ಜುನ – ಉದ್ದವರಿಗೆ ಅಂದಾ – |
ನಂದದಿ ಗೀತಾಶಾಸ್ತ್ರವನೊರೆದನೆಂದು ೨
ವೇದೈಶ್ಚ ಸರ್ವೋರಹಮೇವ ವೇದ್ಯಃ |
ವೇದವಿಧಾಯಕ ನಾಮದವನು ||
ವೇದಾಕ್ಷರಗಳು ಹರಿನಾಮಗಳೆಂದು |
ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು ೩
ರಾಜಸ – ತಾಮಸ ಪೌರಾಣಗಳಿವು |
ರಾಜಸ – ತಾಮಸ ಜೀವರಿಗೆ ||
ರಾಜಸ – ತಾಮಸ ಗತಿಗೋಸ್ಕರ ಮುನಿ – |
ರಾಜ ವ್ಯಾಸನು ಮೋಹಕವೆಂದು ಪೇಳಿದ ೪
ಬಿಡು ಪಾಷಂಡಮತದ ದುರ್ಬುದ್ಧಿಯ |
ಬಿಡದೆ ಮಾಡು ವೈಷ್ಣವಸಂಗವ ||
ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |
ಮೃಡಪ್ರಿಯ ಪುರಂದರವಿಠಲನೊಲಿವನೆಂದು ೫

೪೭
ಅಂಬಿಗ ನಾ ನಿನ್ನ ನಂಬಿದೆ – ಜಗ
ದಂಬಾರಮಣ ನಿನ್ನ ಹೊಂದಿದೆ ಪ
ತುಂಬಿದ ಹರಿಗೋಲಂಬಿಗ – ಅದ
ಕೊಂಬತ್ತು ಛಿಧ್ರಗಳಂಬಿಗ ||
ಸಂಭ್ರಮದಿಂದಲಿ ಅಂಬಿಗ ಅದ
ರಿಂಬನರಿತು ನಡೆಸಂಬಿಗ ೧
ಹೊಳೆಯ ಅಬ್ಬರ ನೋಡಂಬಿಗ ಅಲ್ಲಿ
ಸೆಳವು ಬಹಳ ಕಾಣೋ ಅಂಬಿಗ ||
ಸುಳಿಗೊಳಗಾದೆನು ಅಂಬಿಗ – ಎನ್ನ
ಸೆಳೆದುಕೊಂಡು ಒಯ್ಯೋ ಅಂಬಿಗ ೨
ಹತ್ತು ಬೆಂಬಡಿಗರು ಅಂಬಿಗರು – ಅಲ್ಲಿ
ಒತ್ತಿ ಬರುತಲಿಹರಂಬಿಗ
ಹತ್ತುವರೆತ್ತಲು ಅಂಬಿಗ ಎನ್ನ
ಎತ್ತಿಕೊಂಡು ಒಯ್ಯೋ ಅಂಬಿಗ ೩
ಆರು ತೆರೆಯ ನೋಡಂಬಿಗ ಸುತ್ತಿ
ಮೀರಿ ಬರುತಲಿವೆ ಅಂಬಿಗ ||
ಆರೆನೆಂತಿಂತು ಅಂಬಿಗ ಮುಂದೆ
ದಾರಿಯ ತೋರಿಸು ಅಂಬಿಗ ೪
ಸತ್ಯವೆಂಬುವ ಹುಟ್ಟು ಅಂಬಿಗ ಓದು
ಭಕ್ತಿಯೆಂಬುವ ಪಾತ್ರ ಅಂಬಿಗ ||
ನಿತ್ಯಮುಕ್ತ ನಮ್ಮ ಪುರಂದರವಿಠಲನ
ಮುಕ್ತಿಮಂಟಪಕೆ ಒಯ್ಯೋ ಅಂಬಿಗ*೫


ಅಂಬೆಗಾಲಿಕ್ಕುತಲಿ ಬಂದ ಗೋವಿಂದ |
ಅಂಬುಜನಾಭ ದಯದಿಂದೆನ್ನ ಮನೆಗೆ ಪ
ಜಲಚರ ಜಲವಾಸ ಧರಣೀಧರ ಮೃಗರೂಪ |
ನೆಲನಳೆದೀರಡಿ ಮಾಡಿ ಬಂದ ||
ಕುಲನಾಶಿ ವನವಾಸಿ ನವನೀತಚೋರನಿವ |
ಲಲನೆಯರ ವ್ರತಭಂಗ ವಾಹನತುರಂಗ ೧
ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |
ಅಣಕಿಸುವ ಬಾಯ್ದೆರೆದು ಬಾಲತನದಿ ||
ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |
ಮಾನವ ಬಿಟ್ಟು ಕುದುರೆಯನೇರಿ ಮೆರೆವ ೨
ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |
ನರಮೃಗ ಬಲಿಬಂಧ ಕೊರಳಗೊಯ್ಕ ||
ಶರಮುರಿದೊರಳೆಳೆದು ಬತ್ತಲೆ ಹಯವನೇರಿ |
ಪುರಂದರವಿಠಲ ನಮ್ಮ ಮನೆಗೆ ಹರುಷದಲಿ ೩

ಅತ್ರಿ ಮಹರ್ಷಿ
ಪುರಾಣ ಮೂಲದ ಹರಿ ಸ್ತುತಿ
೩೩
ಅಕೊ ಹಾಗಿಹನೆ ಇಕೊ ಹೀಗಿಹನೆ ಪಕಾಲಿಲ್ಲದೆ ನಡಸುವ ಕೈಯಿಲ್ಲದೆ ಹಿಡಿಸುವಹಲ್ಲಿಲ್ಲದೆ ತಿನ್ನಿಸುವ ಹೊಟ್ಟಿಯಿಲ್ಲದೆ ಉಣಿಸುವ೧
ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ ೨
ಶ್ವೇತ ದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿನಿತ್ಯ ವೈಕುಂಠ ವಾಸ ಪುರಂದರವಿಠಲ ೩

ಜಗತ್ತಿಗೆ ಆನಂದವನ್ನು ನೀಡಿದ ಕೃಷ್ಣಲೀಲೆ
೫೫
ಅಕ್ಕ ನಂದಗೋಪನ ಅರಮನೆಯೊಳಗೊಬ್ಬ |ಅಕ್ರೂರ ಬಂದನಂತೆ ಪಹೊಕ್ಕು ಬಳಕೆಯಿಲ್ಲ ಹೊಸಬನು ಇವನಂತೆ |ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ ಅ.ಪಮಧುರಾ ಪಟ್ಟಣವಂತೆ ಮಾವನ ಮನೆಯಂತೆ |ನದಿಯ ದಾಟಲುಬೇಕಂತೆ ||ಎದುರು ಅರಿವಿಲ್ಲದಂತೆ ಏನೆಂಬೆ ಏಣಾಕ್ಷಿ |ಉದಯದಿ ಪಯಣವಂತೆ ೧
ಒಳ್ಳೆ ವೇಳೆಗಳಂತೆ ಬಿಲ್ಲುಹಬ್ಬಗಳಂತೆ |ಎಲ್ಲಾ ಬೀದಿ ಸಿಂಗರವಂತೆ ||ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆ |ಅಲ್ಲೆ ತಾಯ್ತಂದೆಗಳ ಕಾಲಿಗೆ ನಿಗಳವಂತೆ ೨
ಮತ್ತೆ ಪಾಂಡವರಂತೆ ಮೋಹದ ಸೋದರರಂತೆ |ಅತ್ತೆಯ ಮಕ್ಕಳಂತೆ ||ಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆ |ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ ೩
ಅಲ್ಲಿ ಪುಟ್ಟಿದನಂತೆ ಅರಸನಳಿಯನಂತೆ |ಇಲ್ಲಿಗೆ ಬಂದನಂತೆ ||ಕಳ್ಳಕಪಟನಂತೆ ಎಂದಿಗೂ ಹೀಗಂತೆ |ನಿಲ್ಲದೆ ಯಶೋದೆಗೆ ಕಣ್ಣ ನೀರಂತೆ ೪
ತಾಳಲಾರೆವು ನಾವು ಪುರಂದರವಿಠಲನ |ಕಾಣದೆ ನಿಲಲಾರೆವೆ ||ಕಾಲದಲೊಂದಾಗಿ ಕಾಮಿನಿಯರು ಕೂಡಿ |ಆಲಸ್ಯವಿಲ್ಲದೆ ಆಣೆಯಿಡುವ ಬನ್ನಿ * ೫

ಲೋಕನೀತಿ
೯೩
ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |
ರಕ್ಕಸಾಂತಕನ ಭಜಿಸಿ ರಚ್ಚೆ ಗೋಡಾಯಿತೆಂನ ಬದುಕು |
ಅಕ್ಕಟಕ್ಕಟರೆಂನ ಗಂಡ ಪ.
ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |
ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡ
ಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |
ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ ೧
ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವ
ಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವು
ಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮ
ಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯು
ಬಿದ್ದಂತಾಯಿತವ್ವ | ಅಕ್ಕಟ | ೨
ಕಾಲಿಝಂಣ ಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದು
ಕೊಟ್ಟರೆ ದೇವಸುಖವ ಕೊಡುವನೂ |
ವೀರವಿಷ್ಣುವಿಗೆ ಕೊಟ್ಟು ತ್ರಾಹಿ ತ್ರಾಹಿ ಎನ್ನಲಾಗಿ
ಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿ ಹೋಯಿತವ್ವ | ಅಕ್ಕಟ ೩
ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿ
ಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊ
ಅರ್ಥಿಕಚ್ಚೆಯಂನು ಬಿಟ್ಟು ನಿತ್ಯ ಕಚ್ಚೆ ಉಡೆಯಲಾಗಿ
ವಿತ್ತ ಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ ೪
ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿ
ಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನ
ಭಜಿಸಲಾಗಿ | ತುತ್ತ ಗೊಂಬುದೊಂದು ಕೂಳು ಬೆಲ್ಲದಹಾಗೆ ಆಯಿತವ್ವ ೫

ಆತ್ಮ ನಿವೇದನೆ
೨೧೫
ಅಗಲಿ ಸೈರಿಸಲಾರದೀ ಮನ |
ಅಗಲದಿಪ್ಪುದೆ ಜೀವನ ||
ಪೊಗರೊಗೆವ ನಗೆಮೊಗದ ಸೊಬಗಿನ |
ಸುಗುಣಸಿರಿ ಗೋಪಾಲನ ಪ
ಮುನ್ನ ಸಂಸ್ರ‍ಕತಿಪಾಶದೊಳು ಬಿದ್ದನ್ಯಥಾರಕ್ಷಕರ ಕಾಣದೆ |
ಬನ್ನಬಡುತಿಹ ಜನರನೀಕ್ಷಿಸಿ ಪೂರ್ಣ ಕರುಣಕಟಾಕ್ಷದಿ ||
ತನ್ನ ನಾಮದ ಸುಧೆಯನುಣ್ಣಿಸಿ ತನ್ನ ಭಜನೆಯ
ಸುಖವ ತೋರಿಸಿ |
ತನ್ನ ದಾಸರ ಮಾಡಿ ಕೊಂಡಿಹ ಚೆನ್ನಸಿರಿಗೋಪಾಲನ೧
ಶೀಲಗುಣ ಕಥನಗಳನರಸದೆ ಕೀಳು ಚಾರಿತ್ರ್ಯಗಳ ಬಗೆಯದೆ |
ಲೋಲಚಿತ್ತದಿ ಮಾಡುತಿಹ ಅಘಜಾಲ ಕೋಟಿಗಳೆಣಿಸದೆ ||
ಕಾಲದಿಂ ಬಹುನಂಬಿದವರನು ಲೀಲೆಯಿಂದಭಿಮಾನಿಸುತ-ಪರಿ-|
ಪಾಲಿಸುತ್ತಿಹ ಮಂಗಳಾತ್ಮಕ ಶೀಲ ಕಂಠಮೂರ್ತಿಯ ೨
ಭಕ್ತಿ ಕರ್ಮಜ್ಞಾನ ಯೋಗ ವಿರಕ್ತಿಯೆಂಬುದನೇನು ಕಾಣದೆ |
ಮತ್ತೆ ಕೇವಲ ಮೂಢ ಭಾವದ ಚಿತ್ತದಲಿ ನೆರೆ ನಂಬಿದ ||
ಆರ್ತರನು ಅಬಲರ ಅನಾಥರಜ ಮೃತುೈಮುಖದಿಂದವರ
ತಾನೊಲಿ-|
ದೆತ್ತಿ ಸಲಹುತಲಿಪ್ಪ ಸೊಬಗಿನ ಕೀರ್ತಿವಂತ ಮಹಾತ್ಮನ೩
ಕರುಣದಿಂದೆಳಗಂದಿ ಕರುವಿನ ಮೊರೆಯ ಲಾಲಿಸಿ ಬಿಡದೆ ತೃಪ್ತಿಯ |
ಕರೆದು ಮಾಡುವ ಪರಿಯೆ ತನ್ನಯ ಸ್ಮರಿಸುತಿಹ ಕಡುದೀನರ ||
ಹೊರಗೆ ಶಿಕ್ಷಿಸಿ ಒಳಗೆ ರಕ್ಷಿಸಿ ಪಿರಿದು ತನ್ನಯ ನಿಜನವರಿಗೆ |
ತೆರುವ ಕರುಣಾಳುಗಳ ದೇವನ ಶರಣಜನ ಮಂದಾರನ೪
ನೇಮದಲಿ ನಂಬಿದರ್ಗೆ ಸೂಚಿಸಿ ಕಾಮವಾಸನೆಗಳನು ಖಂಡಿಸಿ |
ಪಾಮರರ ಪಂಡಿತರ ಮಾಡಿ ಮಹಾಮಹಿಮೆಗಳ ತಿಳಿಸುತ ||
ರಾಮರಮಣಿಯ ಸಹಿತ ಸಾಲಿಗ್ರಾಮದಲಿ ನೆರೆ ನೆಲಸಿ ಭಕುತರ |
ಪ್ರೇಮದಿಂದಲಿ ಪೊರೆಯುತಿಹ ಸುಖಧಾಮ ಪುರಂದರವಿಠಲನ ೫

೯೯
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡ ಜಗಳವೇ ಲೇಸು ಪ.
ಡಂಭಕರ ಮನೆಯಪಮಾನದೂಟಕ್ಕಿಂತ
ತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳಾಡುವುದೆ ಲೇಸು ೧
ಒಡಲ ಹಂಗಿಸುವರ ಮನೆಯ ಓಗರಕಿಂತ
ಕುಡಿನೀರ ಕುಡಿದುಕೊಂಡಿಹುದೆ ಲೇಸು |
ಬಿಡದೆ ಕಡಿದಾಡುವರ ನೆರೆಯಲಿಹುದಕಿಂತ
ಅಡವಿಯೊಳಜ್ಞಾತವಾಸವೇ ಲೇಸು ೨
ಮಸೆದು ಮತ್ಸರಿಸುವನ ಬಳಿಯಲಿಹುದಕಿಂತ
ಹಸನಾದ ಹಾಳುಗುಡಿಗಳೆ ಲೇಸು |
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು ೩

೯೪
ಅನುಗಾಲವು ಚಿಂತೆ ಮನುಜಗೆ |
ಮನಹೋಗಿ ಮಾಧವನ ಒಡಗೂಡುವನಕ ಪ.
ಹೆಂಡಿರಿದ್ದರು ಚಿಂತೆ ಹೆಂಡಿರಿಲ್ಲದ ಚಿಂತೆ |
ಕೊಂಡು ಕುರೂಪಿಯಾದರು ಚಿಂತೆಯು ||
ತೊಂಡನಾಗಿ ತಿರುಗಿ ತುತ್ತ ತರುವ ಚಿಂತೆ |
ಮಂಡೆ ಬೀಳುವ ತನಕ ಚಿಂತೆ ಕಾಣಣ್ಣಾ ೧
ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ |
ಕೊಡಧನ ಕೈಯೊಳಿದ್ದರು ಚಿಂತೆಯು |
ಬಡವನಾಗಿ ತಿರುಗಿ ತುತ್ತ ತರುವ ಚಿಂತೆ |
ಪೊಡವಿಯೊಳಿಲ್ಲದ ಚಿಂತೆ ಕಾಣಣ್ಣಾ ೨
ಮನೆಯಿದ್ದರೂ ಚಿಂತೆ ಮನೆಯಿಲ್ಲದ ಚಿಂತೆ |
ಮನೆ ಭಾರವತಿಯಾದರೂ ಚಿಂತೆಯು |
ಮನಸಿಜನಯ್ಯ ಶ್ರೀ ಪುರಂದರವಿಠಲನ |
ನೆನೆದರೆ ಚಿಂತೆಯೆ ಇಲ್ಲ ಕಾಣಣ್ಣಾ ೩

ತತ್ವ ವಿವೇಚನೆ
೪೫
ಅನುದಿನದಲಿ ಬಂದು ತನುವ ಸೂರೆಯಗೊಂಡು |
ಎನಗೊಂದು ಮಾತ ಪೇಳೊ ಜೀವವೆ ! ಪ
ಘನಕೋಪದಲಿ ಬಂದು ಯಮನವರಳೆದೊಯ್ವಾಗ |
ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪ
ಬೆಲ್ಲದ ಹೇರಿನಂತೆ ಬೇಕಾದ ಬಂಧು – ಬಳಗ |
ನಿಲ್ಲೊ ಮಾತನಾಡತೇನೆ ಜೀವವೆ ||
ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |
ಬೆಲ್ಲ ಬೇವಾಯಿತಲ್ಲೋ ಕಾಯವೆ ! ೧
ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |
ದಿಕ್ಕೆಟ್ಟು ಹೋಗುತೀಯೋ ಜೀವವೆ ||
ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |
ಸಕ್ಕರೆ ವಿಷವಾಯ್ತೋ ಕಾಯವೆ ! ೨
ಅಂದಣದೈಶ್ವರ್ಯ ದಂಡಿಗೆ – ಪಲ್ಲಕ್ಕಿ |
ಮಂದಗಮನೆಯರು ಜೀವವೆ ||
ಮಂದಗಮನೆ ಯಾರೊ – ಮಡದಿ – ಮಕ್ಕಳು ಯಾರೋ –
ಬಂದಂತೆ ಹೋಗ್ತೀನಿ ಕಾಯವೆ ! ೩
ಸೋರುವ ಮನೆಯಲಿ ಧ್ಯಾನ – ಮೌನಾದಿಗಳು |
ಬೇರಿತ್ತು ನಿನ್ನ ಮನಸು ಜೀವವೆ ||
ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |
ಯಾರಿಗೆ ಯಾರಿಲ್ಲ ಕಾಯವೆ ! ೪
ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |
ಇಟ್ಟದ್ದು ಈ ಊರು ಜೀವವೆ ||
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |
ಗಟ್ಟ ಪೂಜೆಯ ಮಾಡೊ ಕಾಯವೆ ! ೫

೨೧೮
ಅಪಮಾನವಾದರೆ ಒಳಿತು |
ಅಪರೂಪ ಹರಿನಾಮ ಜಪಿಸುವ ಮನುಜಗೆ ಪ
ಮಾನದಿಂದಲಿ ಅಭಿಮಾನ ಪುಟ್ಟವುದು |
ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||
ಮಾನಿ ಕೌರವನಿಗೆ ಹಾನಿಯಾಯಿತು-ಅನು-|
ಮಾನವಿಲ್ಲವು ಮಾನ-ಅಪಮಾನ ಸಮರಿಗೆ ೧
ಅಪಮಾನದಿಂದಲಿ ತಪವೃದ್ಧಿಯಾಹುದು |
ಅಪಮಾನದಿಂ ಪುಣ್ಯ ಸಫಲವಾಗುವುದು ||
ಅಪಮಾನದಿಂದಲಿ ನೃಪ ಧ್ರುವರಾಯಗೆ |
ಕಪಟ ನಾಟಕ ಕೃಷ್ಣ ಅಪರೋಕ್ಷನಾದನು ೨
ನಾನೇನ ಮಾಡಲಿ ಆರಲ್ಲಿ ಪೋಗಲಿ |
ಕಾನನಚರರಾರಾಧ್ಯ ನೀನಿರಲು ||
ದೀನರಕ್ಷಕ ನಮ್ಮ ಪುರಂದರವಿಠಲನೆ |
ಏನು ಬೇಡೆನಗಪಮಾನವೆ ಇರಲಿ ೩

೨೧೯
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ |
ಕಪಟ ನಾಟಕ ಸೂತ್ರಧಾರಿ ನೀನೆ ಪ
ನೀನು ಆಡಿಸಲು ಜಡವೊನಕೆ ಅಭಿನಯಬೊಂಬೆ
ಏನು ಬಲ್ಲದು ಬೇರೆ ಕೃತಿಯನೊಂದ ||
ನೀನಿಟ್ಟ ಸೂತ್ರದಿಂದಲುಗೆ ಕೈಕಾಲುಗಳು |
ನೀನೆ ಮಗ್ಗಿಸಲು ಮಗ್ಗುವ ದೇಹ ತಾನಾಗೆ ೧
ಒಂದೆಂಟು ಬಾಗಿಲುಗಳುಳ್ಳ ಪಟ್ಟಣಕೆ ತನ-
ಗೆಂದು ಇಪ್ಪತ್ತಾರು ಮನೆಯಾಳ್ಗಳ ||
ತಂದು ಕಾವಲುನಿಲಿಸಿ ಎನ್ನ ನೀನೊಳಗಿಟ್ಟು
ಮುಂದೆ ಭವಭವದಿ ದಣಿಪುದು ನಿನ್ನದನ್ಯಾಯ ೨
ಯಂತ್ರವಾಹಕ ನೀನೆ ಒಳಗೆ ಇದ್ದೂ ಎನ್ನ-ಸ್ವ
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ ||
ಕಂತುಪಿತ ಲಕ್ಷ್ಮೀಶ ಎಂತಾದಡಂತಹುದ
ನಂತ ಮೂರುತಿ ನಮ್ಮ ಪುರಂದರ ವಿಠಲ ೩

ಲಕ್ಷ್ಮಿದೇವಿಯೇ ರಮಾ
೫೭
ಅಮ್ಮ ನಿಮ್ಮ ಮನೆಗಳಲ್ಲಿ |ನಮ್ಮ ಕೃಷ್ಣನ ಕಾಣಿರೇನೆ? ಪ
ಸುಮ್ಮನೆ ಸುರಸಜ್ಜನರ ಸಂಘ |ಗಮ್ಮನೆ ಮರುಳ ಮಾಡಿದನಮ್ಮ ಅ.ಪ
ಕುಂಕುಮ – ಕಸ್ತೂರಿ ಕಿರುತಿರು ನಾಮವ |ಶಂಖ – ಚಕ್ರಗಳ ಧರಿಸಿದನ ||ಬಿಂಕದಲ್ಲಿ ಕೊಳಲೂದುವ ಹಾಡುವ-ನಮ್ಮ-ಪಂಕಜನಾಭನ ಕಾಣಿರೇನೆ? ೧
ಕಾಶಿ ಪಿತಾಂಬರ ಕೈಯಲಿ ಕೊಳಲು |ಪೂಸಿದ ಶ್ರೀಗಂಧ ಮೈಯಲಿ ||ಲೇಸಾದ ಪುಷ್ವಮಾಲಿಕೆ ಹಾಕಿದ-ನಮ್ಮ-|ವಾಸುದೇವ ಹರಿ ಬಂದ ಕಾಣಿರೇನೆ? ೨
ಕರದಲಿ ಕಂಕಣ ಬೆರಳಲಿ ಉಂಗುರ |ಕೊರಳಲಿ ಹಾಕಿದ ಹುಲಿಯುಗರಮ್ಮ ||ಅರಳೆಲೆ ಕನಕಕುಂಡಲ ಕಾಲಲಂದಿಗೆ-ನಮ್ಮ-|ಉರಗಶಯನ ಬಂದ ಕಾಣಿರೇನೆ? ೩
ಹದಿನಾರು ಸಾವಿರ ಗೋಪಸ್ತ್ರೀಯರ ಕೂಡಿ |ಚದುರಂಗ-ಪಗಡೆಯನಾಡಿದನ ||ಮದನಮೋಹನರೂಪ ಎದೆಯಲ್ಲಿ ಕೌಸ್ತುಭ-ನಮ್ಮ |ಮಧುಸೂದನ ಬಂದ ಕಾಣಿರೇನೆ? ೪
ತೆತ್ತೀಸಕೋಟಿ ದೇವತೆಗಳು ಕೂಡಿ |ಹತ್ತವತಾರವ ಧರಿಸಿದನ ||ಸತ್ಯಭಾಮೆಯ ಅರಸ ಶ್ರೀ ಪುರಂದರವಿಠಲ |ನಿತ್ಯೋತ್ಸವ ಬಂದ ಕಾಣಿರೇನೆ? ೫

೯೮
ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆ
ಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.
ಮಂಜುನೀರನೆ ತಂದು ತಂದನವ ಹದಮಾಡಿ
ಒಂದಾಗಿ ಕೂಡಿ ಪರಿಮಳವ ಬೇಗ
ಹಂದಿಯನು ಕರೆದು ಸೆಲೆ – ಪೊಸಲು ಅದು ತನ್ನ
ಗಂಜಲವ ನೆನೆನೆನೆದು ಹೋಹಂತೆ ರಮಣಿ ೧
ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿ
ಶ್ವಾನನನು ಕರೆದು ಬಾಯೊಳಗಿರಿಸಲು
ತಾನದನು ಸವಿಸವಿದು ನೋಡಲರಿಯದ ತನ್ನ
ದನದ ಮೂಳೆಯ ನೆನೆದು ಹೋಹಂತೆ ರಮಣಿ ೨
ಅಂತರವನರಿಯದಲೆ ಮಿಯಾ ಹೋಗುವುದರಿಂದ
ಅಂತೆ ಇರುವುದೇ ಲೇಸು ಬಹು ಪ್ರೌಢರು
ಚಿಂತಿತಾರ್ಥವನೀವ ಸುಗುಣ ಪುರಂದರವಿಠಲ
ನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ ೩


ಅರಿಯರು ಮನುಜರು ಅರಿತೂ ಅರಿಯರು
ಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪ
ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು
ಅವನಿ ಪಾಲಿಪ ಜನಕನೃಪ ಬಲ್ಲನು ||
ಯುವತಿಗೆ ಶಾಪವಿತ್ತ ಗೌತಮ ಬಲ್ಲನು
ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು ೧
ನಾರದ ಮುನಿ ಬಲ್ಲ ವಾರಿಜೋದ್ಭವ ಬಲ್ಲ
ಪಾರಾಶರನು ಬಲ್ಲ ಮನು ಬಲ್ಲನು ||
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು
ಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು ೨
ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲ
ದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||
ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲ
ಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು ೩

೧೬೮
ಆ ರಣಾಗ್ರದಿ ಭೀಮಗಡ್ಡಯಿಪರಾರು? |
ವಾರಿಧಿ ಮೇರೆದಪ್ಪಲು ನಿಲ್ಲಿಸುವವರಾರು? ಪ
ನಾನಾ ದೇಶದ ಭೂನಾಯಕರಿದ್ದರಲ್ಲವೆ
ತಾನು ದುಶ್ಯಾಸನನ ತತ್ತರಿವಾಗ ||
ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ
ಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು?೧
ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿ
ತೊಡೆಗಳನು ಗದೆಯಿಂದ ತುಂಡಿಸುವಾಗ ||
ಕಡುಕೋಪದವ ಹಲಧರನೇನ ಮಾಡಿದ?
ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? ೨
ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನ
ಕೊಂದು ಬಿಸುಡುವಾಗ ಮುಂಕೊಂಡರುಂಟೆ? ||
ಚೆಂದದಿ ಪುರಂದರ ವಿಠಲದಾಸರು ಮನ
ದಂದಕೆ ಬಂದಂತೆ ನಡೆದುದೆ ಮಾರ್ಗ ೩


ಆಗಮವ ತಮನೊಯ್ಯೆ | ಅವನ ಪಾತಾಳದಲಿ |
ತಾಗಿದಲೆವರಿದು ವೇದಾವಳಿಗಳಾ |
ಆಗ ತಂದ್ದತ್ತ ಮಚ್ಛಾಮಾರನೆ ವುದಯವಾಗುತಿದೆವುಪ್ಪುವಡಿಸೊ ಪ
ಹರಿಯ ಭಾಗೀರಥಿ ಪಿತನೆ | ಭಾಗವತ ಜನಪ್ರಿಯನೆ |
ಯೊಗಧೆಯ ವಪ್ಪುವಡಿಸೊ ಹರಿಯೆ | ಭಾಗೀರಥಿ ಪಿತನೆ ೧
ದೇವಾಸುರರು ಶಿಂದ್ಧು | ಮಥನದಲಿ ಗಿರಿ ಮುಳುಗೆ |
ದೆವಾ ರಾಕ್ಷಿಸುತಾ ಕ್ಷಿಶನ ಉಳಿದೂ |
ಆನೊಯಲು ವಾಗಿರಿಯ | ನಂತ ಕೂರ್ಮನೆ ವುದಯವಾಗುತಿದೆ
ವಪ್ಪುವಡಿಸೊ ಹರಿಯೆ ೨
ಭೂತಳವ ಕಾದ್ದೊಯಿದ | ಹರಂಣ್ಯಕ್ಷನೆಂಬ ನರಪಾತಳದ |
ಲೊರಶಿನಿಲಿಶಿದ ಜಗಂಗಳಾ | ಖ್ಯಾತಿ ಪಡೆದ ಪ್ರತಿಮ |
ವರಹಾರೂಶಪನೆ ಸುಪ್ರಭಾತದಲಿವುಪ್ಪವಡಿಸೊ ಹರಿಯೇ ೩
ಭೂದೇವದೆವರನು | ಭಾಜಿಸುವ ಶಿವುವ ಪ್ರಹ್ಲಾದಗಾ | ಗಾಹವನು
ಕವಲುಗಿಶಿ ಉಗದೆ | ತೂದ ಕರುಳಿನಮಾಲೆ |
ಯಪ್ಪನರಶಿಂಹ ಕಾರುಣೋದಯದೊ ವಪ್ಪವಡಿಸೊ ಹರಿಯೆ ೪
ಬರಿ ಭಕತಿಯಿಂದ ಮೊರಡಿನೆಲನ ಮಾತು ಕೂಡೆ |
ನೆಲ ನಭನೆ ನೀರಡಿಯ ಮಾಡಿ ಬೆಳೆದೆ |
ನಳಿನ ಜಾಂಡವನೊಡದೆ | ವಾಮನ ತ್ರಿವಿಕ್ರಮನೆ
ಬೆಳಗಾಯಿತುಪ್ಪವಡಿಸೋಹರಿಯೆ ೫
ಕಾತ್ರ್ತವಿಯ್ರ್ಯಾರ್ಜುನನ ಕಡಿದು ಕ್ಷತ್ರಿಯ ಕುಮುದು |
ಮಾತ್ರ್ತಂಡನಾದೆ ಮಾತೆಯ ಮಾತಿಗೆ ಆತ್ರ್ತಜನ
ಬಂಧುವೆ | ಪರಶುರಾಮನೆ ಬ್ರಾಹ್ಮಿ ಮೂಹೋರ್ತದಲ್ಲಿ
ವುಪ್ಪವಡಿಸೊ ಹರಿಯೆ ೬
ಪಂಪಾದಿಪನವರದ | ಅಮರಪತಿಯಾದ ಷ್ಕಂಪ್ಪ
ರಾವಣನಗೆಲಿದವನನುಜಗೆ ಸಂತ್ಪಾರಂಪರೆಯಯಿತ್ತ
ರಘುರಾಮದೆಶೆ | ಕೆಂಪಾಯಿತುಪ್ಪ ವಡಿಸೊಹರಿಯೆ ೭
ಯಿಂದು ರವಿಕುಲಗಳಲಿ | ಜನಿಶಿದಮಜರಾಜ| ಬೃಂದಾರಿಯಾಗಿ
ಭೂಭರವಿಳಿಪಿದೆ | ನಂದನಂದನ ಕೃಷ್ಣ |
ಆಂಗಯಗರಗಾಣ ಬಂದವಿದವುಪ್ಪ ವಡಿಸೊ ಹರಿಯೇ ೮
ತ್ರಿಪುರದಮಕಾರಿಗಳ | ಸತಿಯರಿಗೆವುಪಸತಿಗಳು ಪದೆಶಗಳ ತೊಟ್ಟು
ಭ್ರಮಗೊಳಿಶಿದು ತ್ರಿಪುರ ಹತಗಂಬಾದೆ |
ತ್ರಿಪುರ ಸಾಧಕ ಜಾದ್ಕ ತಪ ನವಿದೆವುಪ್ಪವಡಿಸೊ ಹರಿಯೆ ೯
ಆಶಿ ಖಾಡವಿಡಿದಾಶ್ವವೇರಿ ಕೋಪದಿ ವಿಷ್ಣು |
ಯಶಶಿನಲಿ ಕಲ್ಕ್ಯಾವ | ತಾರನಾದೆ | ಕುಶಿರಿದರಿದಶಸುವೇಪದಶ್ಯೂ
ಗಳಗೆಲಿದೆ | ಬಿಶಿಲಾಯಿತುಪ್ಪವಡಿಸೊ ಹರಿಯೆ ೧೦
ಯಿಂದ ಚಂದ್ದ್ರ್ಯಾದಿಗಳ್ ಬ್ರಹ್ಮ ರುದ್ದ್ರಾದಿಗಳುಪೇಂದ್ರಜಯ |
ಜಯಯೆನುತ ಬಂದೈಧರೆ | ವೀಂದ್ದ್ರ ವಾಹನ ಪುರಂದರವಿಠಲ
ಸೌಭಾಗ್ಯ ಸಾಂದ್ದ್ರನಿಧಿ ವುಪ್ಪವಡಿಸೊ ಹರಿಯೆ ೧೧

೨೨೦
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |
ಈಗ ನೀ ಕಾಯ್ದರೇನು ಕಾಯದಿದ್ದರೇನು ಪ
ಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |
ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||
ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |
ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ ೧
ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |
ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||
ಕಂಠಕೆ ಹೊದ್ದಿದ ಕಾಂತೆಯರೆನಗುಂಟು |
ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ ೨
ಒಂದು ಕ್ಷಣ ಮೊದಲಾದ ವಾತ ಘಾತಗಳಿಂದ |
ಅಂದಿನ ವ್ಯಾಧಿಗಳು ಬಾಧಿಸುತಿರಲು ||
ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |
ಬಂದಿನ್ನು ಕಾಯಬೇಕೊ ಪುರಂದರವಿಠಲ೩

೧೦೦
ಆಚಾರವಿಲ್ಲದ ನಾಲಿಗೆನೀಚಬುದ್ದಿಯ ಬಿಡು ನಾಲಿಗೆವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಡಿರುವಂತ ನಾಲಿಗೆ
ಪ್ರಾರ್ಥಕಾಲದೊಳೆದ್ದು ನಾಲಿಗೆಸಿರಿಪತಿ ಎನ್ನ ಬಾರದೆ ನಾಲಿಗೆಪತಿತ ಪಾವನ ನಮ್ಮ ರತಿಪತಿ ಜನಕನ ಸತತವು ನುಡಿಕಂಡ್ಯ ನಾಲಿಗೆ| ೧ |
ಚಾಡಿ ಹೇಳಲಿ ಬೇಡ ನಾಲಿಗೆ ನಿನ್ನಬೇಡಿಕೊಂಬುವೆನು ನಾಲಿಗೆರೂಢಿಗೊಡೆಯ ಶ್ರೀರಾಮನ ನಾಮವಪಾಡುತಲಿರು ಕಂಡ್ಯ ನಾಲಿಗೆ| ೨ |
ಹರಿಯ ಸ್ಮರಣಿ ಮಾಡೊ ನಾಲಿಗೆನರಹರಿಯ ಭಜಿಸು ಕಂಡ್ಯ ನಾಲಿಗೆವರದ ಪುರಂದರ ವಿಠಲರಾಯನಚರಣ ಕಮಲವ ನೆನೆ ನಾಲಿಗೆ| ೩ |

ಲಕ್ಷ್ಮೀನಾರಾಯಣ

ಆಚ್ಯುತಾನಂತ ಗೋವಿಂದ-ಹರಿ |ಸಚ್ಚಿದಾನಂದ ಸ್ಪರೂಪ ಮುಕುಂದ ಪಕೇಶವ ಕೃಷ್ಣ ಮುಕುಂದ-ಹರಿ |ವಾಸುದೇವ ಗುರು ಜಗದಾದಿವಂದ್ಯ ||ಯಶೋಧೆಯ ಸುಕೃತದ ಕಂದ-ನಮ್ಮ ||ಶೇಷಶಯನ ಭಕ್ತ ಹೃದಯಾನಂದ ೧
ನಾರಾಯಣ ನಿನ್ನ ನಾಮ-ಎನ್ನ |ನಾಲಗೆಯೊಳಗಿರಬೇಕೆಂಬ ನೇಮ ||ನಾನು ಬೇಡುವೆ ನಿನ್ನ ಪ್ರೇಮ-ಎನ್ನ ||ಪಯಣ ಸಮಯಕೊದಗಲಿ ಗುಣಧಾಮ ೨
ಮಾಧವ ಮಂಗಳಗಾತ್ರ-ಸ್ವಾಮಿ |ಯಾದವ ಕೈಲಾಸವಾಸನ-ಮಿತ್ರ ||ಮಹಿಮೆ ಕೇಳಿದರೆ ವಿಚಿತ್ರ-ಎನ್ನ ||ಮನಮೆಚ್ಚಲಿ ಸತ್ಯಭಾಮಾ ಕಳತ್ರ ೩
ಗೋವಿಂದ ಗೋಪಾಲ ಬಾಲ-ಸೋಳ |ಸಾವಿರ ಗೋಪಿಯರ ಆನಂದಲೀಲಾ ||ಜೀವಮಣಿಯ ಮುಕ್ತಾಮಾಲಾ-ನಿನ್ನ ||ನೇನೆಂದು ಕರೆಯಲಿ ಸುಗ್ರೀವಪಾಲ ೪
ವಿಷ್ಣುಚಕ್ರವು ಬಂದು ಸುತ್ತಿ-ಮೂರು |ಸೃಷ್ಟಿಯನೆಲ್ಲವ ತಿರುಗಿ ಬೆನ್ನಟ್ಟಿ ||ಕೃಷ್ಣ ಸಲಹೆಂದು ಮೊರೆಯಿಟ್ಟ-ಮುನಿ ||ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ ೫
ಮಧುಸೂದನ ಮಾರಜನಕ-ನೀನು |ಮದಗಜ ಸೀಳಿ ಮಲ್ಲರ ಗೆಲಿದೆ ತವಕ ||ಒದಗಿ ಕಂಸನ ಕೊಂದ ಬಳಿಕ-ನೀ ||ಮುದುಕಗೆ ಪಟ್ಟವ ಕಟ್ಟಿದೆ ಧನಿಕ ೬
ತ್ರಿವಿಕ್ರಮ ತ್ರೈಲೋಕ್ಯನಾಥ-ದೇವ |ತ್ರಿಪುರರ ಸತಿಯರ ವ್ರತಕೆ ವಿಘಾತ ||ಯದುವಂಶ ಪಾಂಡವ ಪ್ರೀತ-ಎನ್ನ ||ಹೃದಯದೊಳಡಗಿರೊ ಶ್ರೀ ಜಗನ್ನಾಥ ೭
ವಾಮನರೂಪದಿ ಬಂದು-ಬಲಿಯ |ದಾನವ ಬೇಡಲು ಉಚಿತವು ಎಂದು ||ಧಾರೆಯನೆರೆಯಲು ಅಂದು-ಬೆಳೆದು ||ಧಾರಿಣಿಯೆಲ್ಲವನಳೆದೆ ನೀನಂದು ೮
ಶ್ರೀಧರ ಶೃಂಗಾರಾಧಾರ-ದಿವ್ಯ |ಶ್ರೀವತ್ಸಲಾಂಛನ ಶ್ರೀರಘುವೀರ ||ವಾರಿಧಿಸಮ ಗಂಭೀರ-ಗೈದೆ |ಕ್ರೂರರಕ್ಕಸರನೆಲ್ಲರ ಸಂಹಾರ ೯
ಹೃಷೀಕೇಶ ವೃಂದಾವನದಲಿ-ನೀ |ನಿಶೆಯಲಿ ಕೊಳಲನೂದುತ ಇರಲಿಲ್ಲ ||ಋಷಿವೃಂದವಂದ್ಯ ನಿನ್ನಗಲಿ-ನಿ |ಮಿಷವು ಬಿಟ್ಟಿರಲಾರೆ ನಿಲ್ಲೋ ಮನದಲಿ೧೦
ಪದ್ಮನಾಭನೆ ಕೇಳೊ ಮುನ್ನ-ಎನ್ನ |ಸುದ್ದಿಯನೆಲ್ಲವ ಉಸಿರುವೆ ಘನ್ನ ||ಅದ್ವೈತರೂಪ ಪ್ರಸನ್ನ-ಸ್ವಾಮಿ |ಇದ್ದ ಠಾವಿಗೆ ಕರೆದೊಯ್ಯೊ ನೀನೆನ್ನ ೧೧
ದಾಮೋದರ ದನುಜಹರಣ-ಹರಿ |ರಾಮಚಂದ್ರನೆ ರಘುಕುಲ ಸಾರ್ವಭೌಮ ||ಸ್ವಾಮಿ ನೀಲ ಮೇಘಶ್ಯಾಮ-ದೇವ |ಭೂಮಿಜಾಪತಿಯೆಂಬ ಬಹುಪುಣ್ಯನಾಮ ೧೨
ಸಂಕರ್ಷಣ ಸರುವಾಭರಣ-ಇಟ್ಟು |ಪಂಕಜಮುಖಿ ದ್ರೌಪದಿ ಮೇಲೆ ಕರುಣ ||ಕುಂಕುಮಾಂಕಿತ ನೀಲಕಿರಣ-ರತ್ನ |ಕಂಕಣಭೂಷಣ ಕೌಸ್ತುಕಾಭರಣ೧೩
ವಾಸದೇವ ಕೇಳೊ ನಿನ್ನ-ದಿವ್ಯ |ಸಾಸಿರನಾಮವ ನೆನೆವನೆ ಧನ್ಯ ||ಬೇಸರದೆ ಸಲಹಬೇಕೆನ್ನ-ಸ್ವಲ್ಪ |ಗಾಸಿಯ ಮಾಡದೆ ಕರುಣ ಸಂಪನ್ನ೧೪
ಪ್ರದ್ಯುಮ್ನ ನೀನೆಂದು ಕರೆಯೆ-ದುರ್ |ಬುದ್ದಿಯನೆಲ್ಲವ ನನ್ನಿಂದ ಮರೆಯೆ ||ಇದ್ದ ದುರ್ವಿಷಯವ ತೊರೆಯೆ-ಸಾಧು |ಸಜ್ಜನ ಸಂಗನೆ ನಿನ್ನೊಳು ಬೆರೆಯೆ ೧೫
ಅನಿರುದ್ದ ಗೋಕುಲದಲ್ಲಿ-ನೀಅನುದಿನ ಇರಲು ಗೋಪಿಯರ ಮನೆಯಲಿ ||ಸನಕಾದಿವಂದ್ಯ ನಿನ್ನಗಲಿ-ಒಂದು |ಕ್ಷಣವೂ ಬಿಟ್ಟಿರಲಾರೆ ನಿಲ್ಲೋ ಮನದಲಿ ೧೬
ಪುರುಷೋತ್ತಮಗಾರು ಸಾಟಿ?-ಶ್ರೀ |ಪರಬ್ರಹ್ಮಸ್ವರೂಪ ನಿನಗಾರು ಧಾಟಿ? |ನಿರವದ್ಯ ಭಕ್ತಿ ಕಿರೀಟ-ನಿನ್ನ |ಶರೀರದೊಳಗೆ ಕಂಡು ಬ್ರಹ್ಮಾಂಡ ಕೋಟಿ ೧೭
ಅಧೋಕ್ಷಜ ಅಸುರಸಂಹಾರಿ-ದೇವ |ಅದುಭುತ ರೂಪನೆ ಶಿಶುಪಾಲ ವೈರಿ ||ಭಜಕರ ಪಾಲಿಪ ಗೌರಿ-ನೀ |ಅಜಮಿಳ ಕರೆದರೆ ಕಾಯ್ದೆ ಮುರಾರಿ ೧೮
ನರಸಿಂಹರೂಪವ ತಾಳಿ-ಬಂದೆ |ಕರೆಯೆ ಕಂಬದಿ ಕಂದನ ಮಾತಕೇಳಿ ||ದುರುಳ ರಕ್ಕಸನನು ಸೀಳಿ-ನಿನ್ನ |ಕೊರಳಲಿ ಧರಿಸಿದೆ ಕರುಳಿನ ಮಾಲಿ ೧೯
ಅಚ್ಯತ ನೀನಲೆ ಮುದ್ದು-ಗೋಪಿ |ಬಚ್ಚಿಟ್ಟ ಹಾಲು-ಮೊಸರು-ಬೆಣ್ಣೆ ಮೆದ್ದು ||ತುಚ್ಛ ಶಕಟನ ಕಾಲಿಲೊದ್ದು-ಕರು |ಬಿಚ್ಚಿ ಓಡಿದೆ ಚೋರಕಂಡಿಯಲಿ ಕದ್ದು ೨೦
ಜನಾರ್ಧನ ಕೇಳೊ ಬನ್ನಪವ-ನೀ |
ತೊಲಗಿಸು ಬಂದೆನ್ನ ಮನದ ಕಲುಷವ ||ಹೊರಲಾರೆ ಭೂ ಭಾರತನುವ-ನಿನ್ನ |ಸ್ಮರಣೆ ಇದ್ದವ ಮುಕ್ತಿಪಥವನೆ ಗೆಲುವ ೨೧
ಉಪೇಂದ್ರನುರಗನ ತುಳಿಯೆ-ಆಗ |ಅಪರಿಮಿತ ವಿಷದ ಮಡುವು ಕಲಕಿ ಉಳಿಯೆ ||ತ್ರಿಪುರರಕ್ಕ ಸರನು ಗೆಲಯೆ-ನಿನ್ನ |ಚಪಲತನವ ನೋಡಿ ಸುರರೆಲ್ಲ ಬೆರೆಯೆ ೨೨
ಹರಹರಿ ಎಂದರೆ ಪಾಪ-ರಾಶಿ |ಹರಿದು ಹೋಗುವದು ಮನದ ಸಂತಾಪ ||ಸರುವರೊಳಗೆ ವಿಶ್ವರೂಪ-ನಿನ್ನ |ನೆರೆನಂಬಿದವರನು ಸಲಹು ಪ್ರತಾಪ ೨೩
ಕೃಷ್ಣ ಕೃಷ್ಣನೆಂಬ ಸೊಲ್ಲ-ಕೇಳಿ |ನಷ್ಟವಾಗಿ ಹೋಯ್ತು ಪಾತಕವೆಲ್ಲ ||ಮುಟ್ಟಿ ಭಜಿಸಿರಿ ಜನರೆಲ್ಲ, ಪುರಂದರ |ವಿಟ್ಠಲನಲ್ಲದೆ ಪರದೈವವಿಲ್ಲ ೨೪

೧೦೭
ಆಜ್ಞೆಯಿಂದಾಳಬೇಕಣ್ಣ – ಗಂಡ
ನಾಜ್ಞೆಯ ಮೀರಿ ನಡೆವ ಲಂಡಹೆಣ್ಣ ಪ.
ಅತ್ತೆ – ಮಾವನಿಗಂಜದವಳ – ತನ್ನ
ಉತ್ತಮ ಪುರುಷನ ಜರಿದು ಝಂಕಿಪ
ಭೃತ್ಯರ ಕಂಡು ಬಾಧಿಪಳ – ನಡು
ನೆತ್ತಿಯಿಂದಲೆ ಮೂಗ ಕೆತ್ತಬೇಕವಳ ೧
ಹಟ್ಟಿ – ಹಟ್ಟಿ ತಿರುಗುವಳ – ತನ್ನ
ಗಟ್ಟಿತನದಿ ಮಾಕು ಮಲುಕು ನುಡಿಯುವಳ
ಬಿಟ್ಟಕುಚವ ತೋರಿಸುವಳ – ಇನ್ನು
ಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ ೨
ಎಂದೂ ಈ ಪರಿಯಿರುವವಳ – ಇನ್ನು
ಕೊಂದು ಮಾಡುವುದೇನು ಬಿಡಬೇಕವಳ
ಒಂದಿಷ್ಟು ಗುಣವಿಲ್ಲದವಳ – ಪು
ಪುರಂದರವಿಠಲರಾಯನಗಲ್ಲದವಳ ೩

ಮಾಯಾವರಮ್ಮಿನಿಂದ ತಿರುವಾರೂರಿಗೆ ಬರುವಾಗ
೫೮
ಆಡ ಹೋಗಲು ಬೇಡವೊ-ರಂಗಯ್ಯ |ಬೇಡಿಕೊಂಬೆನು ನಿನ್ನನು ಪ
ಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪ
ನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ ೧
ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ ೨
ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ೩

೫೯
ಆಡ ಹೋಗೋಣ ಬಾರೊ ರಂಗ |ಓಡಿ ಹೋಗಲು ಬೇಡೊ ಕೃಷ್ಣ ಪ
ಅಣ್ಣೆಕಲ್ಲು ಗೋಲಿ ಗಜುಗ |ಬೆಣ್ಣಿಕೋಲು ಚೆಂಡು ಬುಗುರಿ ||ಕಣ್ಣು ಮುಚ್ಚಾಲೆ ಹಲವು ಕೂಟ |ಬಣ್ಣದಾಟಗಳನೆಲ್ಲ ೧
ಸೋಲು-ಗೆಲುವಿಗೆಲ್ಲ ನೀನು |ಬಾಲಕರೊಳು ಕೂಡಿಕೊಂಡು ||ಮೇಲೆ ಮಮತೆಯಿಂದೆ ಸಾನು-|ಕೂಲವಾಗಿ ನಡಸುವಂತೆ೨
ಪುಟ್ಟ ಪುಟ್ಟ ಕೊಳಲು ಕಂಬಳಿ |ಕಟ್ಟಿ ಬುತ್ತಿ ಕೈಯಲಿ ಕೋಲು ||ದಿಟ್ಟ ಚೆಲುವನಾದ ಪುರಂದರ-|ವಿಠಲ ಗೋವಳರ ರಾಯ೩

ಯಮುನಾ ನದಿಯ ತೀರದ ಮೇಲೆ ಬಲರಾಮ
೬೦
ಆಡ ಹೋದಲ್ಲಿ ಮಕ್ಕಳು-ಎನ್ನನು-|ಆಡಿಕೊಂಬರು ನೋಡಮ್ಮ ಪ
ನೋಡಿ ನೋಡಿ ಇತ್ತ ಮುಖವ |ಮಾಡಿ ಕಣ್ಣ ವಿೂಟುವರಮ್ಮ ಅ.ಪ
ದೇವಕಿ ಪೆತ್ತಳಂತೆ-ವಸು-|ದೇವನೆಂಬವ ಪಿತನಂತೆ ||ಕಾವಲಿನೊಳು ಪುಟ್ಟಿದೆನಂತೆ |ಮಾವ ಕಂಸಗಂಜಿ ಬಂದೆನಂತೆ ೧
ನೀನೆನ್ನ ಪೆತ್ತಿಲ್ಲವಂತೆ-ಅಮ್ಮಾ |ನಾನಿನ್ನ ಮಗನಲ್ಲವಂತೆ ||ಧೇನು ಕಾಯುವರಿಲ್ಲವೆಂದು ನೀನು |ಸಾನುರಾಗದಿ ಸಲಹಿದೆಯಂತೆ ೨
ವಿಷವು ತುಂಬಿದ ಮೊಲೆಯ-ಕೊಟ್ಟ |ಅಸುರೆಯ ಸಂಹರಿಸಿದೆನಂತೆ ||ಅಸುರನಾದ ಶಕಟನನಾಕ್ಷಣದಲಿ |ಶಿಶುವಾಗಲೆ ಒರೆಸಿದೆನಂತೆ ೩
ವತ್ಸಾಸುರನನು ಕೆಡಹಿದೆನಂತೆ |ಕಿಚ್ಚನೆಲ್ಲವನು ನುಂಗಿದೆನಂತೆ ||ಕಚ್ಚಬಂದ ಕಾಳಿಂಗನಾ ಹೆಡೆ-|ಚಚ್ಚಿ ತುಳಿದು ಓಡಿದೆನಂತೆ ೪
ಕುಸುಮಗಂಧಿಯರಡುವ |ವಸನ ಕದ್ದು ಓಡಿದೆನಂತೆ ||ಹಸುಗೂಸು ಅಲ್ಲ ಇವ |ಅಸುರ ಮಗನು ಎಂತೆಂಬುವರೆ ೫
ಒರಳನೆಳೆತಂದು ಮತ್ತಿ-|ಮರವ ಮುರಿದೋಡಿದೆನಂತೆ ||ತರಳೆಯರ ವಸ್ತ್ರವ ಕದ್ದು |ತರುವನೇರಿದೆನಂತೆ ೬
ಪರಮ ಗಾಡಿಕಾರನಿವ |ಪುರಂದರ ವಿಠಲರಾಯ ||ತರುಣಿಯರ ವಂಚಿಸುತ್ತ |ಠಕ್ಕಿಸಿ ಪೋದನೆಂತೆಂಬುವರು೭

ಕ್ರಿ.ಶ. ೧೫೧೪ರಿಂದ ೧೫೯೫ರ
೬೧
ಆಡಿದನೊ ರಂಗ ಅದ್ಭುತದಿಂದಲಿ |ಕಾಳಿಂಗನ ಫಣಿಯಲಿ-ಆಡಿದೆನೊ ಪ
ಪಾಡಿದವರಿಗೆ ಬೇಡಿದ ವರಗಳ |ನೀಡುತಲಿ-ದಯ ಮಾಡುತಲಿ-ನಲಿ-|ದಾಡುತಲಿ-ಬೆಣ್ಣೆ ಬೇಡುತಲಿ-ಕೃಷ್ಣ ಅ.ಪ
ಅಂಬುರು ಹೋದ್ಭವ ಅಖಿಳ ಸುರರು ಕೂಡಿ |ಅಂಬರದಲಿ ನಿಂತವರು ಸ್ತುತಿಸೆ |ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು ೧
ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು ೨
ಸುರರು ಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ ೩

ಸಂಪ್ರದಾಯದ ಹಾಡುಗಳು
೨೯೬
ಆಡಿದನೋಕುಳಿಯ ನಮ್ಮ ರಂಗ !
ಆಡಿದನೋಕುಳಿಯ ಪ.
ಕುಂದದ ಕಸ್ತುರಿಯ-ಅಳಿ-|
ಗಂಧದ ಓಕುಳಿಯ ||
ಬಂದರು ಹೊರಗಿನ ನಾರಿಯರಾಡುತ|
ಚೆಂದದ ಜೀಕುಳಿಯ ೧
ಪÀಟ್ಟಿ ಮಂಚದ ಮೇಲೆ-ನಮ್ಮ ರಂಗ |
ಇಟ್ಟ ಮುತ್ತಿನ ಹಾರ
ಬಟ್ಟ ಕುಚಕೆ ಕಣ್ಣಿಟ್ಟು ಒಗೆದನು |
ಕುಟ್ಟಿದನೋಕುಳಿಯ ೨
ಆರು ಹತ್ತು ಸಾವಿರ-ಗೋಪ |
ನಾರಿಯರನು ಕೂಡಿ ||
ಮಾರನಯ್ಯ ಶ್ರೀಪುರಂದರವಿಠಲ |
ಹಾರಿಸಿ ಜೀಕುಳಿಯ ೩


ಆತನ ಪಾಡುವೆನನವರತ |
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪ
ಆವಾತನ ಕೀರ್ತಿಯನು ಪರೀಕ್ಷಿತ ಕೇಳೆ |
ಪಾವನನಾದನು ಮೂಜಗವರಿಯೆ ||
ಭಾವಶುದ್ಧಿಯಲಿ ಶುಕನಾರನು ಪೊಗಳುವ |
ಆವಗಂ ಪ್ರಹ್ಲಾದನಾದವನ ನೆನೆವನಯ್ಯ ೧
ಶಿಲೆಯ ಬಾಲೆಯ ಮಾಡಿದ ಪಾದವಾರದು |
ನಳಿನ ಸಂಭವನನು ಪೆತ್ತವನಾರು ||
ಕಲಿಯುಗದ ಮನುಜರಿಗೆ ಆರನಾಮವು ಗತಿ |
ಇಳೆಯ ಭಾರವನಿಳುಹಿ ಸಲಹಿದರಾರಯ್ಯ ೨
ದ್ರುಪದನ ಸುತೆಯ ಮಾನರಕ್ಷಕನಾರು |
ನೃಪಧರ್ಮನಿಗೆ ಸಂರಕ್ಷಕನಾರು |
ಕೃಪೆಯಿಂದ ವಿದುರನ ಮನೆಯಲುಂಡವನಾರು |
ಆಪತ್ಕಾಲದಿ ಗಜವ ಸಲಹಿದರಾರಯ್ಯ ೩
ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |
ರಥವ ಪಿಡಿದು ನಡೆಸಿದವನಾರೊ ||
ಪೃಥಿವಿಯೆಲ್ಲವ ಬಲಿ ಆರಿಗೊಪ್ಪಿಸಿದನು |
ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ ೪
ಸಾಗರನ ಮಗಳಿಗೆ ಆರ ನಾಮವೆ ಗತಿ |
ಯೋಗದಿ ನಾರದನಾರ ಭಜಿಪನಯ್ಯ ||
ರಾಗರಹಿತ ಹನುಮಂತನೊಡೆಯನಾರು |
ಭಾಗವತರ ಪ್ರಿಯ ಪುರಂದರವಿಠಲ ೫

೨೨೧
ಆದದ್ದೆಲ್ಲ ಒಳತೇ ಆಯಿತು ನಮ್ಮ |
ಶ್ರೀಧರನ ಸೇವೆಯ ಮಾಡಲು | —– ಪ
ಸಾಧನ ಸಂಪತ್ತಾಯಿತು ———- ಅ.ಪ
ದಂಡಿಗೆ ಬೆತ್ತ ಹಿಡಿಯುವುದಕ್ಕೆ |
ಮಂಡೆ ತಗ್ಗಿಸಿ ನಾಚುತಲಿದ್ದೆ ||
ಹೆಂಡತಿ ಸಂತತಿ ಸಾವಿರವಾಗಲಿ |
ದಂಡಿಗೆ ಬೆತ್ತ ಹಿಡಿಸಿದಳಯ್ಯ ೧
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ |
ಭೂಪತಿಯಂತೆ ನಾಚುತಲಿದ್ದೆ ||
ಆ ಪತ್ನಿಯು ತಾ ಪ್ರೀತಿಯಿಂದಲಿ |
ಗೋಪಾಳ ಬುಟ್ಟಿಯ ಹಿಡಿಸಿದಳಯ್ಯ ೨
ತುಳಸಿಮಾಲೆಯ ಹಾಕುವುದಕ್ಕೆ |
ಅಲಸಿಕೊಂಡು ನಡೆಯುತಲಿದ್ದೆ ||
ಜಲಜಾಕ್ಷಿಯು ಶ್ರೀ ಪುರಂದರವಿಠಲ |ತುಳಸಿ | ಮಾಲೆಯ ಹಾಕಿಸಿದಳು ೩

ಆರ ಹಾರೈಸಿದರೇನುಂಟು – ಉರಿ
ನೀರ ಕಡೆದರಲ್ಲೇನುಂಟು ? ಪ.
ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಎಂತಾದರಲ್ಲಿಯ ತುಪ್ಪ ಸಾಧಿಸಿ ಯಮ
ನಂತೆ ಕೊಲುವರಲ್ಲೇನುಂಟು ? ೧
ಕೊಟ್ಟೆ – ಕೊಟ್ಟೆನೆಂದು ಕೊಡದುಪಚಾರದ
ಭ್ರಷ್ಟನ ಸೇರಿದರೇನುಂಟು
ಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕ
ನಿಷ್ಟನ ಸೇರಿದರೇನುಂಟು ? ೨
ಪಿಸುಣನ ಕುದುರೆಯ ಮುಂದೋಡಲು ಬಲು
ಬಿಸಿಲಿನ ಹಣ್ಣಲ್ಲದೇನುಂಟು
ವಸುಧೆಯೊಳಗೆ ಪುರಂದರವಿಠಲನ ಭ
ಜಿಸಲು ಮುಕ್ತಿಸಾಧನವುಂಟು ೩

೧೦೧
ಆರ ಹಾರೈಸಿದರೇನುಂಟು – ಉರಿ
ನೀರ ಕಡೆದರಲ್ಲೇನುಂಟು ? ಪ.
ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಎಂತಾದರಲ್ಲಿಯ ತುಪ್ಪ ಸಾಧಿಸಿ ಯಮ
ನಂತೆ ಕೊಲುವರಲ್ಲೇನುಂಟು ? ೧
ಕೊಟ್ಟೆ – ಕೊಟ್ಟೆನೆಂದು ಕೊಡದುಪಚಾರದ
ಭ್ರಷ್ಟನ ಸೇರಿದರೇನುಂಟು
ಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕ
ನಿಷ್ಟನ ಸೇರಿದರೇನುಂಟು ? ೨
ಪಿಸುಣನ ಕುದುರೆಯ ಮುಂದೋಡಲು ಬಲು
ಬಿಸಿಲಿನ ಹಣ್ಣಲ್ಲದೇನುಂಟು
ವಸುಧೆಯೊಳಗೆ ಪುರಂದರವಿಠಲನ ಭ
ಜಿಸಲು ಮುಕ್ತಿಸಾಧನವುಂಟು೩

೨೯
ಆರತಿಯ ಬೆಳಗಿರೆ ಪ
ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ
ಬಿರುದಿನ ಶಂಖವ ಪಿಡಿದ ವಿಠಲಗೆ ||
ಸರಸಿಜ ಸಂಭವ ಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ೧
ದಶರಥರಾಯನ ಉದರದಿ ವಿಠಲ
ಶಿಶುವಾಗಿ ಜನಿಸಿದ ಶ್ರೀರಾಮ ವಿಠಲ
ಪಶುಪತಿ ಗೋಪಿಯ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ ವಿಠಲಗೆ ೨
ಕಂಡಿರ ಬೊಬ್ಬುರ ವೆÉಂಕಟವಿಠಲನ
ಅಂಡಜವಾಹನ ಅಹುದೋ ನೀ ವಿಠಲ ||
ಪಾಂಡುರಂಗ ಕ್ಷೇತ್ರ ಪಾವನ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ೩

ಶ್ರೀ ಲಕ್ಷ್ಮೀದೇವಿ ಸ್ತುತಿ
೧೬೧
ಆರಿಗೆ ವಧುವಾದೆ – ಅಂಬುಜಾಕ್ಷಿ |
ಕ್ಷೀರಾಬ್ಧಿ ಕನ್ನಿಕೆ – ಶ್ರೀ ಮಹಾಲಕುಮೀ ಪ
ಶರಧಿ ಬಂಧನ ರಾಮಚಂದ್ರ ಮೂರುತಿಗೊ |
ಪರಮಾತ್ಮ ಸಿರಿಯನಂತ ಪದ್ಮನಾಭನಿಗೋ ||
ಸರಸಿಜಭವ ಜನಾರ್ದನ ಮೂರುತಿಗೋ |
ಎರಡು ಹೊಳೆಯ ರಂಗಪಟ್ಟಣವಾಸಗೊ೧
ಚೆಲುವ ಬೇಲೂರು ಚೆನ್ನಿಗರಾಯನಿಗೊ |
ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೊ ||
ಇಳೆಯೊಳು ಪಂಢರಪುರ ವಿಠಲೇಶಗೊ ||
ನಳಿನಾಕ್ಷಿ ಹೇಳು ಬದರೀನಾರಾಯಣನಿಗೊ ೨
ಮಲಯಜಗಂಧಿ, ಬಿಂದುಮಾಧವರಾಯಗೊ |
ಸುಲಭದೇವ ಪುರುಷೋತ್ತಮಗೊ ||
ಫಲದಾಯಕ ನಿತ್ಯ ಮಂಗಳನಾಯಕಗೊ |
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ೩
ವಾಸವಾರ್ಚಿತ ಕಂಚೀವರದರಾಜ ಮೂರುತಿಗೊ |
ಆ ಸುರವಂದ್ಯ ಶ್ರೀಮುಷ್ಣದಾದಿ ವರಹನಿಗೊ ||
ಶೇಷಶಾಯಿಯಾದ ಶ್ರೀ ರಂಗನಾಯಕಗೊ |
ಸಾಸಿರ ನಾಮದೊಡೆಯ ಅಳಗಿರಿಯೀಶಗೋ೪
ಶರಣಾಗತರನು ಪೊರೆವ ಶಾರ್ಙಪಾಣಿಗೊ |
ವರಗಳನೀವ ಶ್ರೀನಿವಾಸ ಮೂರುತಿಗೋ |
ಕುರುಕುಲಾಂತಕ ರಾಜಗೋಪಾಲ ಮೂರುತಿಗೊ |
ಸ್ಥಿರವಾದ ಪುರಂದರವಿಠಲರಾಯನಿಗೊ ೫

೨೨೪
ಆರಿದ್ದರೇನಯ್ಯ ನೀನಲ್ಲದೆನಗಿಲ್ಲ
ಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪ
ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರದಿಂದ ಸೆಳೆಯುತಿರೆ ಪತಿಗಳೆಲ್ಲ ||
ಗರ ಹೊಯ್ದರಂತಿದ್ದರಲ್ಲದೇ ನರಹರಿಯೆ
ಕರುಣದಿಂ ನೀನಲ್ಲದಾರು ಕಾಯ್ದವರು ೧
ಅಂದು ನೆಗಳಿನ ಬಾಧೆಯಿಂದ ಗಜರಾಜನನು
ತಂದೆ ನೀ ವೈಕುಂಠದಿಂದ ಬಂದು ||
ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯ
ಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ ೨
ಅಜಮಿಳನು ಕುಲಗೆಟ್ಟು ಕಾಲದೂತರು ಬರಲು
ನಿಜಸುತನ ಕರೆಯಲವನತಿ ವೇಗದಿ ||
ತ್ರಿಜಗದೊಡೆಯನೆ ಪುರಂದರ ವಿಠಲ ಕರುಣದಲಿ
ನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ ೩

೧೦೨
ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ ಪ.
ಪಡೆದ ತಾಯಿ – ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರು ಮುನಿಸು ಮಾಡಿದರೇನು
ಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನು
ಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ ೧
ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯ ಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ೨
ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳ ಬುಧ ಶುಕ್ರಂಗಳ ಬಲುವು ತಪ್ಪಿದರೇನು
ಮಾಣದೆ ಭಜಿಸುವ ಪುರಂದರವಿಠಲನಒಲುಮೆಯುಳ್ಳ ಹರಿದಾಸರಿಗೆ ೩

೧೦೨
ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ ಪ.
ಪಡೆದ ತಾಯಿ – ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರು ಮುನಿಸು ಮಾಡಿದರೇನು
ಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನು
ಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ ೧
ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯ ಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ೨
ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳ ಬುಧ ಶುಕ್ರಂಗಳ ಬಲುವು ತಪ್ಪಿದರೇನು
ಮಾಣದೆ ಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ ೩

ಕಶ್ಯಪ ಮತ್ತು ದನೂ ಇವರ ಮಗನಾದ ವಿಪ್ರಚಿತ್ತ
೬೨
ಆರು ಬಂದವರವ್ವ ಆರವನಲ್ಲದೆ |ಮಾರಜನಕನಾದ ಗೌರಿಯಲ್ಲದೆ ಮತ್ತೆ ಪ
ಹೆಜ್ಜೆಗಳಿಡುತ ಕಾಣಿಸದಂತಿರೆ ಮೃದು-|ಗೆಜ್ಜೆಯ ದನಿಕೇಳಿ ಬರುತಲಿರೆ ||ವಜ್ರಮಾಣಿಕಹಾರ ಹರಿದು ನೆಲಕೆ ಬಿದ್ದು |ಮಜ್ಜಿಗೆಯೊಳಗಿನ ಬೆಣ್ಣೆ ಕಾಣೆನಮ್ಮ ೧
ಕೊಂಬು ಕೊಳಲ ತುತ್ತೂರಿ ಊದುತಲಿಕ್ಕುಇಂಬು ಕಸ್ತುರಿ ಪರಿಮಳ ಸೂಸುತ ||ಪೊಂಬಟ್ಟೆ ಚೆಲ್ಲಣ ಸೋಸಿದ ಮೊಸರಿನ |ಕುಂಭ ಒಡೆದು ಕೆಸರಾಗಿದೆಯಮ್ಮ೨
ಮಿಂಚಿನಂದದಿ ಹೊಳೆಯುತ ಬದಿಯಲಿದ್ದ |ಸಂಚಿತಾರ್ಥಗಳೆಲ್ಲ ಸೂರಾಡಿದ ||ವಂಚನೆಯಿಲ್ಲದೆ ಭಕ್ತರ ಸಲುಹಿದ |ಸಂಚುಕಾರ ಪುರಂದರವಿಠಲನಲ್ಲದೆ ೩

೨೨೨
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರೋ ಈ ಜಗದೋಳಗೆ ಒಬ್ಬರನು ಕಾಣೆ ಪ
ಕಲಹಬಾರದ ಹಾಗೆ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ ||
ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ೧
ಕರಪತ್ರದಿಂದ ತಾಮ್ರಧ್ವಜನ ತಂದೆಯನು
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ||
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ನರಕಾಸುರನ ಹೆಂಡಿರನು ಬೆರೆದೆ೨
ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ ||
ದೊರೆ ಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯಾ ಹುಟ್ಟಲೊಲ್ಲದು ಕೇಳೊ ಹರಿಯೆ ೩

೨೨೩
ಆರು ಬಾರರು ಸಂಗಡಲೊಬ್ಬರು |
ನಾರಾಯಣನ ದಿವ್ಯನಾಮ ಒಂದಲ್ಲದೆ ಪ
ಹೊತ್ತು ನವಮಾಸ ಪರಿಯಂತ ಗರ್ಭದಲಿ |
ಅತ್ಯಂತ ನೋವು ಬೇನೆಗಳ ತಿಂದು ||
ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |
ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ ೧
ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |
ಕರವಿಡಿದು ಕೈಧಾರೆ ಎರಸಿಕೊಂಡ ||
ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |
ನೆರೆ ಏನು ಗತಿ ತನಗೆ ಹೇಳಲಮ್ಮಳಲ್ಲದೆ ೨
ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |
ಘನವಾಗಿ ನಂಬಿರೆ ನನ್ನವೆಂದು |
ಅನುಮಾನವೇತಕೆ ಜೀವ ಹೋದಬಳಿಕ |
ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ ೩
ಆತ್ಮ ಬಳಲಿದಾಗ ಬಂಧುಗಳು ಬಂದು |
ಹೊತ್ತು ಹೊರಗೆ ಹಾಕು ಎಂತೆಂಬರು ||
ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |
ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ ೪
ಹರಣ ಹೋಗದ ಮುನ್ನ ಹರಿಯ ಸೇವೆ ಮಾಡಿ |
ಪರಲೋಕ ಸಾಯುಜ್ಯ ಪಡೆದುಕೊಂಡು |
ಕರುಣಿ ಕೃಪಾಳು ಶ್ರೀ ಪುರಂದರವಿಠಲನ |
ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ೫

ಆರು ಬಿಟ್ಟರೂ ನಿನ್ನ ಬಿಡದೆ ನಾ ನಂಬಿದೆ
ರಾಮರಾಮ – ಸ್ವಾಮಿ |
ನೀ ಬಿಟ್ಟರಿನ್ನು ಅದಾರ ಸೇರಲು ಬೇಕೊ –
ರಾಮರಾಮ ಪ.
ತುಂಬಿದ ನದಿಯಲಿ ಹರಿಗೋಲು ಮುಳುಗಿತೊ
ರಾಮ ರಾಮ – ಅಲ್ಲಿ
ಅಂಬಿಗನಾಶೆಯು ಅನುಗಾಲ ತಪ್ಪಿತೊ –
ರಾಮ ರಾಮ ೧
ನಂಬಿ ಹಿಡಿದರೆ ಬಲು ಕೊಂಬೆಯು ಮುರಿಯಿತೊ –
ರಾಮ ರಾಮ – ಅಲ್ಲಿ
ಹಂಬಲಿಸಿದರೆ ಕೈ ಹಿಡಿವರ ನಾ ಕಾಣೆ ರಾಮ ರಾಮ ೨

೧೦೩
ಆರು ಹಿತವರು ಮನವೆ ಮೂರು ಮಂದಿಗಳೊಳಗೆ
ನಾರಿಯೋ ಧಾರಿಣೀಯೊ ಧನದ ಬಲು ಸಿರಿಯೊ ? ಪ.
ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಯಲ್ಲಿ ಯಜಮಾನಿಯೆನಿಸಿ
ಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ ೧
ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದು ಶಿಲೆಯ ಶಾಸನವ ಬರೆಸಿ
ಬಿನ್ನಾಣದಿ ಮನೆಗಟ್ಟಿ ಕೋಟೆ – ಕೊತ್ತಳಿವಿಕ್ಕಿ
ಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು ೨
ಉದ್ಯೋಗ – ವ್ಯವಹಾರ ನೃಪಸೇವೆ ಮೊದಲಾಗಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯ
ಸದ್ಯದಲಿ ಆರುಂಬವರು ಹೇಳು ಮನುಜಾ ೩
ಶೋಕಗೈದಳುವವರು ಸತಿ – ಸುತರು ಭಾಂದವರು
ಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥ
ಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳು
ಸಾಕಾರವಾಗಿ ಸಂಗಡ ಬಾಹುವಲ್ಲದೇ ? ೪
ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ
ಸ್ವಸ್ಥದಲಿ ನೆನೆಕಾಣೊ ಪರಮಾತ್ಮನ
ಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನ
ಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ ೫

ಶ್ರೀ ವೇದವ್ಯಾಸರು ವಿಷ್ಣುವಿನ ಒಂದು ಸ್ವರೂಪ
೬೩
ಆರೇ ರಂಗನ ಆರೇ ಕೃಷ್ಣನ
ಆರೇ ರಂಗನ ಕರೆಯಬಂದವರು ಪ
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲಿ ಕರೆಯ ಬಂದವರು ೧
ವೇಣುವಿನೋದನ ಪ್ರಾಣಪ್ರಿಯನ |
ಜಾಣೆಯರಸನ ಕರೆಯ ಬಂದವರು ೨
ಕರಿರಾಜವರದನ ಪರಮಪುರಷನ |
ಪುರಂದರವಿಠಲನ ಕರೆಯ ಬಂದವರು ೩

೪೮
ಆರೇನ ಮಾಡುವರು ಆರಿಂದಲೇನಹುದು
ಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪ
ಐದು ವರುಷದ ತರಳ ತಾನೆತ್ತ ತಪವೆತ್ತ |
ಬೈದು ಮಲತಾಯಿ ಅಡವಿಗೆ ನೂಕಲು ||
ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |
ಐದೆ ಬಂಧುಗಳಿದ್ದು ಏನ ಮಾಡಿದರು ೧
ನೃಪರೊಳಗೆ ಅತಿ ಶ್ರೇಷ್ಠ ಬಲವಂತ ರಘುರಾಮ |
ಅಪರಿಮಿತ ಶೂರ ಲಕ್ಷ್ಮಣದೇವರು |
ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |
ವಿಪರೀತ ವೀರರಿದ್ದೇನ ಮಾಡಿದರು ? ೨
ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |
ಕೋಪದಿಂ ಮಾನಭಂಗವ ಮಾಡಲು ||
ಆಪತ್ತು ಬೆನ್ನಟ್ಟಿ ಹಾ ಕೃಷ್ಣ | – ಎನುವಾಗ |
ಭೂಪತಿಗಳೈವರಿದ್ದೇನ ಮಾಡಿದರು ? ೩
ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |
ಸೆಣಸಿ ಷಡುರಥದೊಡನೆ ಹೊಯ್ದಾಡಲು ||
ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |
ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು ೪
ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |
ಸುಮ್ಮನೇ ಜಗವನೆಲ್ಲವ ತಿರುಗಿದ ||
ಬೊಮ್ಮಮೂರುತಿಯಾದ ಪುರಂದರವಿಠಲನೇ
ನಮ್ಮ ಅಳವಲ್ಲ ವಿಧಿಮೀರಿ ಬಾಳುವರೆ೫

೪೯
ಆರೇನ ಮಾಡುವರು ಭುವನದೊಳಗೆ |
ಪೂರ್ವಜನ್ಮದ ಕರ್ಮ ಪಣೆಯಲ್ಲಿ ಬರೆದುದಕೆ ಪ
ಮಾಡಿದಡಿಗೆಯದು ಕೆಡಲು ಮನೆಯ ಗಂಡನು ಬಿಡಲು |
ಕೊಡಿ ಇದ್ದಾಸತಿಯ ಕುಣಿಸಾಡಲು ||
ಗೋಡೆಯಲಿ ಬರೆದ ಹುಲಿ ಘುಡುಘುಡಿಸಿ ತಿನಬರಲು |
ಆಡದಂತಹ ಮಾತ ಅಖಿಳರೂ ನಿಜವೆನಲು ೧
ಹೆತ್ತಾತಾಯ್ ಕರೆದು ಮಕ್ಕಳಿಗೆ ವಿಷ ಹಾಕಿದರೆ |
ಮತ್ತೆ ತಂದೆಯ ಕರೆದು ಹೊರಗೆ ಮಾರಿದರೆ ||
ತೊತ್ತು ಅರಸಿಗೆ ಪ್ರತಿ – ಉತ್ತರವ ನಡೆಸಿದರೆ |
ಕತ್ತಲೆ ಕರಡಿಯಾಗಿ ಬೆನ್ನಟ್ಟಿ ಕಟ್ಟಿದರೆ ೨
ಹೊಲಬೇಲಿ ಮೇದರೆ – ಮೊಲ ಎದ್ದು ಇರಿದರೆ
ತಲೆಗೆ ತನ್ನಯ ಕೈಯ ಪೆಟ್ಟು ತಾಗಿದರೆ ||
ಹೆಳಲು ಹಾವಾದರೆ – ಗೆಳೆಯ ರಿಪುವಾದರೆ |
ಕಲಿಸಿದ್ದ ಅವಲಕ್ಕಿ ಕಲಪರಟಿ ನುಂಗಿದರೆ ೩
ಕಣ್ಣೊಳಗಿನಾ ಬೊಂಬೆ ಕಚ್ಚಾಡ ಬಂದರೆ |
ಹೆಣ್ಣಿನಾ ಹೋರಾಟ ಹೆಚ್ಚಾದರೆ ||
ಅನ್ನ ಉಣ್ಣದ ಮನುಜಗಜೀರ್ಣವಾದರೆ |
ಪುಣ್ಯತೀರ್ಥಂಗಳಲಿ ಪಾಪ ಘಟಿಸಿದರೆ ೪
ಏರಿ ಕುಳಿತಾ ಕುಂಬೆ ಎರಡಾಗಿ ಬಿಚ್ಚಿದರೆ |
ವಾರಿಧಿಗಳು ಉಕ್ಕಿ ಮೇರೆ ಮೀರಿದರೆ ||
ಆರಿದಾ ಇದ್ದಲಿಯು ಅಗ್ನಿಯಾಗುರಿದರೆ |
ಧೀರ ಪುರಂದರ ವಿಠಲನ ದಯವು ತಪ್ಪಿದರೆ ೫

೨೯೮
ಆರೋಗಣೆಯ ಮಾಡೇಳಯ್ಯ ಶ್ರೀಮನ್
ನಾರಾಯಣ ಭೋಗ ಸ್ವೀಕರಿಸಯ್ಯ ಪ.
ಸರಸಿಜಭವಾಂಡದ ಮೇರು ಮಂಟಪದಿ ದಿನ
ಕರಕರ ದೀಪ್ತ ಜ್ಯೋತಿಶ್ಚಕ್ರವು ||
ತರಣಿ ಮಂಡಲ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಿಡಿಸಿಹಳಯ್ಯ ೧
ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್
ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||
ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿ
ಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ ೨
ಹಪ್ಪಳ ಸಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು-ಹಂಪಲವು ||
ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿ
ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ ೩
ಎಣ್ಣೂರಿಗತಿರಸ ಚೆನ್ನಾದ ಮಂಡಿಗೆ
ಅನ್ನ ಕ್ಷೀರಾನ್ನ ಪರಮಾನ್ನಗಳು ||
ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿ
ಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ ೪
ನೀ ನಿತ್ಯತೃಪ್ತನಹುದು ನಿನ್ನ ಉದರದೊಳು
ನಾನಾ ಜನರು ಬಂದು ಉಣ್ಣಬೇಕೋ ||
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧು ಶ್ರೀ ಪುರಂದರವಿಠಲ ೫

೨೯೯
ಆರೋಗಣೆಯ ಮಾಡೋ ಎನ್ನಯ್ಯ
ಆರೋಗಣೆಯ ಮಾಡೋ ಪ.
ನಾರದಾರ್ಚಿತಪಾದ ನಾರಾಯಣ ಸ್ವಾಮೀ ಅ.ಪ
ಸರಸಿಜಾಲಯೆ ಲಕ್ಷ್ಮಿ ಸರಸ್ವತಿ ಭಾರತಿ
ಪರಿಪರಿ ಅಡಿಗೆಯ ಸಿದ್ದ ಮಾಡಿಹರೊ ||
ಪರಿಮಿತಿಯಿಲ್ಲದ ರುಚಿಯ ಪದಾರ್ಥವ
ಪರಮ ಪುರುಷ ಉಂಡು ದಯ ಮಾಡೋ ಸ್ವಾಮಿ ೧
ಅಂಬುಜಮುಖಿ ಲಕ್ಷ್ಮಿ ತಾಂಬೂಲ ಕೊಡುವಳು
ಕಂಬುಕಂಧರನೇ ನೀ ಕೈಕೊಳು ಬೇಗ ||
ರಂಭೆ ಊರ್ವಸಿ ಮೇನಕೆ ಮೊದಲಾದವರು
ಸಂಭ್ರಮದಿ ಬಂದು ನಾಟ್ಯಕೆ ಕಾದಿಹರೊ ಸ್ವಾಮಿ ೨
ಸರಸಿಜಭವನಯ್ಯ ಪುರಂದರವಿಠಲ
ಸರುವ ಭೋಗ ಭುಂಜಿಪ ನರರ ಪಾಲಿಸೊ ದೇವಾ ೩

೧೦೪
ಆವ ಕುಲವಾದರೇನು ಪ.
ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪ
ಅಸುಡೊಂಕು ಕಬ್ದು ಇರಲು – ಅದರೊಳಗಿದ್ದ
ರಸ ತಾನು ಡೊಂಕೇನಲೊ – ಮರುಳೆ
ವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳ
ಹಸನಾಗಿ ಕೇಳು ಕಾಣೋ – ಮನುಜಾ ೧
ನಾನಾವರ್ಣದ ಆಕಳ – ಕ್ಷೀರದಲಿ
ನಾನಾವರ್ಣಗಳಹುದೆ – ಮನುಜಾ
ಹೀನ ಭಾವನೆಗಳನಿಂದಿಟ್ಟು ನೀ ಪೋಗಿ
ಜ್ಞಾನಿಗಳ ಕೇಳು ಕಾಣೋ – ಮನುಜಾ ೨
ಶರಧಿಯೊಳ ತೆರೆನೊರೆಗಳಾ – ಪರಿಯಂತೆ
ಶರೀರವಲ್ಲದೆ ಬೇರಿಹುದೇ ?
ವರಪುರಂದರವಿಠಲನ ಸ್ಮರಿಸುತಿರಲು ನಿನಗೆ
ಸಿರಿಯನು ಮುಕುತಿಯಹುದು – ಮನುಜಾ ೩

೧೦೫
ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.
ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪ
ವರವೇದ – ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |
ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆಎರೆದ ಶ್ರೀ ಕೃಷ್ಣನಾಮ ||
ಗುರುದ್ರೋಣ – ಭೀಷ್ಮ – ಅಶ್ವತ್ಥಾಮ – ಜಯದ್ರಥನಜಯಿಸಿತೈ ಕೃಷ್ಣನಾಮ |
ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ ೧
ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |
ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||
ಗೋಪವನಿತೆಯರೆಲ್ಲ ಕುಟ್ಟುತಲಿ – ಬೀಸುತಲಿ ಪಾಡುವುದು ಕೃಷ್ಣನಾಮ |
ತಾಪಸನು ಸಾಂದೀಪ ಮುಚುಕುಂದರಿಗೆ ಮನೋ – ರಥವು ಶ್ರೀಕೃಷ್ಣನಾಮ ೨
ಸುಖದ ಅವಸಾನದಲಿ ಈ ನಾಮ ಗಾಯನವುಶ್ರೀಕೃಷ್ಣದಿವ್ಯನಾಮ |
ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||
ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||
ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ ೩

೧೦೬
ಆವನಾವನ ಕಾಯ್ವ ಅವನಿಯೊಳಗೆ
ದೇವದೇವೇಶ ಶ್ರೀ ಹರಿಯಲ್ಲದೆ ಪ.
ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಸಲಹಿದಳು ಧ್ರುವರಾಯನ
ಆವ ಸುತ ಸಲಹಿದನು ಆ ಉಗ್ರಸೇನನ
ಜೀವರಿಗೆ ಪೋಷಕನು ಹರಿಯಲ್ಲದೆ ೧
ಆವ ಬಂಧುವು ಸಲಹಿದನು ಗಜರಾಜನನು
ಆವ ಪತಿ ಕಾಯ್ದ ದ್ರೌಪದಿಯ ಮಾನ ||
ಆವ ಸೋದರರು ಸಲುಹಿದರು ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೆ ೨
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕ ಪಕ್ಷಿಜಾತಿಗಳಿಗೆ
ಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆ
ದೇವ ಶ್ರೀ ಪುರಂದರವಿಠಲನಲ್ಲದಲೆ ೩

ಹಾವು ಒಮ್ಮೆ ಆಹಾರ ದೊರೆಕಿತೆಂದರೆ

ಆವಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು |ಅಣು ಮಾತ್ರ ತೋರದಲ್ಲ ಪ
ದೇವ ದೇವೇಶ ನೀನೆಂದು ನಂಬಿರಲು ಕೃಪಾವಲೋಕನದಿ ಸಲಹೊ-ದೇವ ಅ.ಪ
ಫಣಿರಾಜನಾಸನದಿ ಮಲಗಿದವಗೆ ಅರಿವೆಯಾಸನವೆಂತು ನಾ ಹಾಸಲಿ |ಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿ ||ತನುವಿನಾ ಪರಿಮಳವು ಘಮಘಮಿಪನಿಗೆ ಸುಚಂದನವೆಂತು ನಾ ಪೂಸಲಿ |ಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ-ದೇವ ೧
ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯ ಅರಿವೆ ಏನನು ಪೊದಿಸಲಿ?ವರ ಕೌಸ್ತುಭವು ಕೊರಳಿನೊಳಗೆ ಇಪ್ಪವಗೆ ಆಭರಣವಾವುದ ತೊಡಿಸಲಿ?ತರಣಿಶತ ಕೋಟಿ ತೇಜನ ಮುಂದೆ ಹೇಗೆ ನಾ ಪೆರತೊಂದು ದೀಪವಿಡಲಿ?ನೆರಹಿದಾ ಫಣಿಪತಿಯ ಸ್ತೋತ್ರದೂರನ ನಾನು ಸ್ಮರಿಪೆನಂತಯ್ಯ ದೇವ, ದೇವ ೨
ವನಜಜಾಂಡದ ಕೋಟಿಯುದರಂಗೆ ಆವುದನು ಉಣಿಸಿ ತೃಪ್ತಿಯ ಮಾಡಲಿ? |ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀರಿನೊಳೆಂತು ಸಂತವಿಡಲಿ? ||ವಿನತೆಯಾತ್ಮಜಪಕ್ಷದ ನಿಲನಿರೆ ಬೇರೆ ಬೀಸಣಿಗೆಯಿನ್ನೇಂ ಬೀಸಲಿ |ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದಕ್ಷಿಣೆಯೆಂತು ಸುತ್ತಿ ಬರಲಿ-ದೇವ ೩
ಮಿಗೆ ಫಣಿಯ ಫಣದಾತಪತ್ರ ವಿರುವವಗೆ ನೆರಳಿಗೆ ಕೊಡೆಯನೇಂ ಪಿಡಿಯಲಿ |ಪಗಲಿರುಳು ಸಾಮಗಾನಪ್ರಿಯನ ಮುಂದೆ ಗೀತಗಳ ನಾನೇಂ ಪಾಡಲಿ ||ಜಗವರಿಯೆ ಲಕ್ಷ್ಮಿದೇವಿಪತಿಗೆ ಎಷ್ಯು ಹೊನ್ನುಗಳ ದಕ್ಷಿಣೆಯ ಕೊಡಲಿ |ನಿಗಮ ತತಿ ಕಾಣದ ಮಹಾಮಹಿಮನನು ನಮಿಪ ಬಗೆಯ ನಾನರಿವೆನೆಂತೈ-ದೇವ೪
ಒಲಿಸುವುದನರಿಯೆ ಮೆಚ್ಚಿಸುವ ಬಗೆಯನರಿಯೆ ಹೊಗಳುಹ ಹೊಲಬನ್ನರಿಯೆನು |ತಿಳಿದುದಿಲ್ಲವು ಷೋಡಶೋಪಚಾರದ ಪೂಜೆಗಳಲೊಂದು ಪರಿಯಾದರೂ ||ನೆಲೆಯ ಕಾಣೆನು ನಿಗಮ ಶಾಸ್ರ್ತ ನವವಿಧ ಭಕ್ತಿಯೊಳಗೊಂದು ಬಗೆಯಾದರೂ ||ಅಳಿಲು ಸೇವೆಯನೊಪ್ಪಿಕೊಂಡು ಸಲಹೈ ಪುರಂದರ ವಿಠಲನೇ ಸ್ವಾಮಿ-ಪ್ರೇಮಿ ೫

ನಿರ್ಯಾಸ
೩೫
ಇಂತು ವೇದಾಂತಗಳಲ್ಲಿ ಸುರರು ನಿನ್ನಎಣಿಸುವರಹುದಹುದೈ
-ನಿ-ನ್ನಂತವ ತಿಳಿಯಲು ಬ್ರಹ್ಮಾದಿಗಳಿಗೆಅಳವಲ್ಲಹುದಹುದೈ |
ಪರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ |
ಪಂಡಿತರಾದಾ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ ||
ಮಂಡೆನೇವರಿಸಿ ಮೊಲೆಯನಿತ್ತವಳಿಗೆ ಮರಣವು ನಿನ್ನಿಂದೈ |
ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ ೧
ತೋತ್ತಿನ ಮಗನಿಗೆ ಒಲಿದು ನಿನ್ನಭ ಗಿಣ ತೋರಿದ ಅಹುದಹುದೈ |
ಉತ್ತಮರನು ನೀನಡುವಿ ಸೇರಿಸಿದೆ ಉತ್ತಮನಹುದಹುದೈ ||
ಅತ್ತೆಯನುಳುಹಿದೆ ಮಾವನ ಮಡುಹಿದೆ ಏತರ ನ್ಯಾಯವಿದೈ |
ಮತ್ತನಾಗಿ ನಿನ್ನ ಬೈದ ಪಾತರೆಯ ಮೈಯೊಳಗಿರಿಸಿದೆಯೈ೨
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ |
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದ್ಯೆ ||
ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ |
ಮಂದರಧರ ಶ್ರೀ ಪುರಂದರವಿಠಲ ಮಾಡಿದ್ದೇ ಮರಿಯಾದೈ ೩

೧೦೯
ಇಂತು ಶ್ರುತಿ – ಸ್ರ‍ಮತಿ ಸಾರುತಿದೆ ಕೋ |
ಕಂತುಪಿನ ಗುಣಗಳ ತಿಳಿಯಬೇಕೆಂದು ಪ.
ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |
ತನುವ ತೊಂಡರಿಗಡ್ಡ ಕೆಡವಬೇಕು ||
ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |
ಘನತೆಯಲಿ ಹರಿ ಚರಣ ಸ್ಮರಿಸುತಿರಬೇಕು ೧
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |
ಇಂದ್ರಿಯಂಗಳನು ನಿಗ್ರಹಿಸಬೇಕು |
ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |
ಇಂದಿರೇಶನ ಪದದ ಪಥವರಿಯಬೇಕು ೨
ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |
ಹೆಂಟೆ ಬಂಗಾರ ಸಮ ತಿಳಿಯಬೇಕು ||
ಕಂಟಕದ ಭಯಗಳನು ನೀಗುತಿರಬೇಕು ವೈ – |
ಕುಂಠ ಪುರಂದರವಿಠಲನೊಲಿಸಬೇಕು ೩


ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |
ಹೊಂಚತಾರಿ ಕಾಣಿರೊ ಪ
ಸಂತತ ಸುರರಿಗೆ ಅಮೃತವನುಣಿಸಿದ
ಪಂತಿಯೊಳಗೆ ಪರಪಂತಿಯ ಮಾಡಿದ ಅ.ಪ
ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚೆಂದದಿಂದಲಿ ಕಡೆದಮೃತವ ತೆಗೆದು ||
ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |
ದಂಧನೆಯನು ಮಾಡಿ ದೈತ್ಯರ ವಂಚಿಸಿದ ೧
ವಿಸುವಾಸದಿಂದಲಿ ಅಸುರಗೆ ವರವಿತ್ತು |
ತ್ರಿಶುಲಧರನು ಓಡಿ ಬರುತಿರಲು ||
ನಸುನಗುತಲಿ ಬಂದು ಭಸುಮಾಸುರನಿಗೆ |
ವಿಷಯದಾಸೆಯ ತೋರಿ ಭಸುಮವ ಮಾಡಿದ ೨
ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |
ಬಸುರಿಲ್ಲದೆ ಬೊಮ್ಮನ ಪಡೆದಿಹಳು ||
ಕುಸುಮನಾಭ ನಮ್ಮ ಪುರಂದರವಿಠಲನ |
ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು ೩

೧೬೯
ಇಂಥಾತನು ಗುರುವಾದದ್ದು ನಮಗೆ ಇ-
ನ್ನೆಂಥಾ ಪುಣ್ಯದ ಫಲವೊ. ಪ
ಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀ
ಕಾಂತನ ಕಾಣಲಿಕ್ಕಾಯಿತುಪಾಯ ಅ.ಪ
ತಾನು ಇಲ್ಲದೆ ಈ ಜಗದೊಳು ಹರಿಯಿಪ್ಪ
ಸ್ಥಾನವಿಲ್ಲವೆಂದು ಸಾರಿದ
ಹೀನ ದೈವಗಳ ನಂಬಿದ ಜನರಿಗೆ ತನ್ನ
ಜ್ಞಾನದಿಂದಲಿ ಹರಿಯ ತೋರಿದ ||
ನಾನಾ ಜೀವಿಗಳ ಒಳಗೆ ಹೊರಗೆ ಇದ್ದು
ತಾನೇ ಮುಖ್ಯನಾಗಿ ಮೀರಿದ |
ಶ್ರೀನಾರಾಯಣನೆಂದು ಪೇಳುವರಿಗೆ ತನ್ನ
ಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ ೧
ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆ
ಉನ್ನತ ಗುರುವಾಗಿ ಮೀರಿದ |
ಘನ್ನವಾದ ಶ್ರುತಿತತಿಗಳಿಂದಲಿ ಜೀವ
ಭಿನ್ನನು ಎಂತೆಂದು ತೋರಿದ ||
ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-
ಚ್ಛಿನ್ನ ಭಕುತಿಯಿಂದ ಮೆರೆದ |
ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |
ತನ್ನ ನಂಬಿದ ಭಕುತರ ಪೊರೆದ ೨
ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-
ಧಾರವೆಂಬುದ ಕಲಿಸಿದ |
ಭಾರಣೆಯಿಂದಲೊಪ್ಪುತ ಬಲು ಹರುಷದಿ
ಭಾರತಿಯನು ಒಲಿಸಿದ
ಮೂರೇಳು ದುರ್ಭಾಷ್ಯಗಳ ಕಾನನವ ಕು-
ಕಾರದಂತೆ ಕಡಿದಿಳಿಸಿದ
ಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಜ್ಞಾಚಾರ್ಯರೆಂದೆನಿಸಿದ ೩


ಇಂದಿನ ದಿನ ಸುದಿನವಾಯಿತು ಪ
ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ-ಸು- |
ರೇಂದ್ರತೀರ್ಥಮುನಿಯು ತೋರಲು ಅ.ಪ
ಈತನ ಪದಕಮಲಗಳ ವಿಧಾತ ತನ್ನ ಭವನದೊಳಗೆ |
ಸೀತೆಯ ಸಹ ಪೂಜಿಸಿ ಇಕ್ಷ್ವಾಕು ನೃಪಗಿತ್ತನು ||
ಆತನನ್ವಯ ನೃಪರೆಲ್ಲರು ಪ್ರೀತಿಯಿಂದಲಿ ಭಜಿಸಿ ರಘು- |
ನಾಥ ವೇದಗರ್ಭಗಿತ್ತ ಮೂರ್ತಿಯ ಪದಕಮಲ ಕಂಡೆ ೧
ಗಜಪತಿ ಭಾಂಡಾರದಲ್ಲಿ ಅಜಕರತಮಲಾರ್ಚಿತ ಭೂ – |
ಮಿಜೆ ಸಹಿತದಿ ರಾಮನಿರಲು ನಿಜಜ್ಞಾನದಿ ತಿಳಿದು ಬೇಗ ||
ದ್ವಿಜವರಗುರುವೆನಿಸುತಿಪ್ಪ ಸುಜನವಂತ ನರಹರಿಮುನಿ |
ರಜನಿಯಲ್ಲಿ ತಂದ ಸುಲೋಹಜಮಯಪ್ರತಿಮೆಯನೆ ಕಂಡು೨
ಅಂದವುಳ್ಳ ಮೂಲರಾಮಚಂದ್ರನ ಪದಕಮಲಗಳನು |
ವೃಂದಾರಕವೃಂದ ವಂದ್ಯನೆಂದೆನಿಸುವ ಪವನನಾ ||
ನಂದನಗುರು ಶ್ರೀಮದಾನಂದ ತೀರ್ಥರರ್ಚಿಸಿ ನಿಜ |
ಅಂದದನ್ವಯದೊಳಿಟ್ಟ ಪುರಂದರ ವಿಠಲನ ಕಂಡು ೩

ಇವರು ವ್ಯಾಸರಾಯರ ಆಶ್ರಮ ಗುರುಗಳು
೧೧. ವೆಂಕಟರಮಣನ ಸ್ತುತಿ
೪೭
ಇಂದು ನಾನೇನು ಸುಕೃತವ ಮಾಡಿದೆನೊಇಂದಿರೆಯರಸು ವೆಂಕಟ ಬಂದ ಮನೆಗೆ ಪ
ನೊಸಲ ತಿದ್ದಿದ ಬೊಟ್ಟಿನೆಸೆವ ಕಸ್ತೂರಿಯುಎಸಳು ಕಂಗಳ ಢಾಳ ಹೊಸ ಪರಿಯ ನೋಟ ||
ಎಸೆವ ಅಮೃತ ಸಾರ ರಸ ಸವಿ ಮಾತು ಕುಸುಮದ ಸೊಬಗ ವೆಂಕಟ ಬಂದ ಮನೆಗೆ ೧
ಹಾರ ಕೇಯೂರ ಹೊನ್ನುಂಗುರದ ಬೆರಳುಹಾರದ ನಡುವೆ ಹಾಕಿದುವೇಳು ಪದಕ ||
ತೋರ ಮುತ್ತಿನ ಕಂಠಮಾಲೆ ಮಾಣಿಕ ಶೋನೇರಿ ಗಿರಿವಾಸ ವೆಂಕಟ ಬಂದ ಮನೆಗೆ ೨
ಬಿಗಿದು ಸುತ್ತಿದ ನೀಲ ಬಿಡುಮುತ್ತಿನ ಒಂಟಿಮುಗುಳು ಬಿರಿದಂದದ ನಗೆ ದಂತಪಂಕ್ತಿ ||
ಝಗಿಪ ಪೀತಾಂಬರ ಉಡೆಯ ಕಠಾರಿ ಪ-ನ್ನಗಗಿರಿವಾಸ ವೆಂಕಟ ಬಂದ ಮನೆಗೆ ೩
ಬಾಲಚಂದ್ರನ ಪೋಲ್ವ ಕಪೋಲ ಕುಂಡಲವುನೀಲ ಮಾಣಿಕ್ಯದಾಭರಣವನಿಟ್ಟು ||
ಕಾಲ ಪೆಂಡೆಯವು ರತುನದ ಹಾವುಗೆಯುಮೇಲುಗಿರಿವಾಸ ವೆಂಕಟ ಬಂದ ಮನೆಗೆ ೪
ಕರಯುಗಲದಲಿ-ಶಂಖ-ಚಕ್ರವ ಪಿಡಿದುಎರಡೇಳು ಭುವನ ತನ್ನುದರದೊಳಿಟ್ಟು ||
ಗರುಡನ ಹೆಗಲೇರಿ ಜಗವ ಪಾಲಿಸುವಪುರಂದರ ವಿಠಲ ವೆಂಕಟ ಬಂದ ಮನೆಗ ೫

೧೦೮
ಇಕ್ಕಲಾರೆ ಕೈಯಂಜಲು – ಚಿಕ್ಕ
ಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.
ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆ
ಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯ
ತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆ
ನಡೆನಡೆ ಕರಕರೆ ಮಾಡದೆ ದಾಸಯ್ಯ ೧
ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆ
ಹೊಟ್ಟೆನೋವು ಕಾಣು ಹೋಗೋ ದಾಸಯ್ಯ
ಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊ
ಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ ೨
ವೀಸದ ಕಾಸಿದ ದವಸವ ತಂದಾರೆ
ಕೂಸಿಗೆ ಸಾಲದು ಹೇಗೋ ದಾಸಯ್ಯ
ಆಸೆ ಮಾಡಲು ದೋಷಕಾರ್ತಿ ಬೇಡ ನಾನು
ಶೇಷಾದ್ರಿ ಪುರಂದರವಿಠಲದಾಸಯ್ಯ ೩

೧೭೦
ಇದಿರಾರೊ-ಗುರುವೆ-ಸಮರಾರೊ ಪ
ಮದನ ಜನಕಪ್ರಿಯ ಗುರುಮಧ್ವರಾಯ ಅ.ಪ
ಸನ್ನುತ ಮಹಿಮ ಪ್ರಸನ್ನವದನ ನಿನ-
ಗನ್ಯನಲ್ಲವೊ ನೀಯೆನ್ನ ರಕ್ಷಿಸಬೇಕೋ ||
ನಿನ್ನ ನೋಡಿದವರ್ಧನ್ಯರಾಗುವರು
ಎನ್ನ ದಯಾಮೂರ್ತಿ ಮನ್ನಿಸಿ ನೋಡೋ ೧
ದುರ್ಜನರನು ಗರ್ಜೆನೆಯಿಂದ ಓಡಿಸಿ
ಸಜ್ಜನರನು ಸಂರಕ್ಷಿಸಿದಾತನೆ |
ಈ ಜಗದಲಿ ಮಧ್ಯಗೇಹರ ಪತ್ನಿಯ
ಪೂಜ್ಯ ಜಠರದಲಿ ಜನಿಸಿದ ಧೀರ ೨
ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿ
ಸಾಧಿಸಿ ಹರಿಯೆ ಸರ್ವೋತ್ತಮನೆಂದು ||
ಮೋದಭರಿತವಾದ ದಿವ್ಯಶಾಸ್ತ್ರವ ಗೈದ
ಮೋದ ತೀರ್ಥ-ಪುರಂದರವಿಠಲದಾಸ ೩

೩೪೧
ಇದೀಗ ಭಕುತಿಯು ಮತ್ತಿದೀಗ ಮುಕುತಿಯು ಪ.
ಮಧುದ್ವಿಷನ ಪದಕಮಲಕೆ
ಮಧುಪನಂತೆ ಎರಗುತಿಹುದು ಅಪ
ಶ್ರೀಕಾಂತ ಮೂರುತಿ ಬಾಹ್ಯಾಂತರದಿ
ಏಕಾಂತದಿ ನೆನೆದಾನಂದ ತುಳುಕಾಡಿ ||
ಮುಖ ವಿಕಾಸದಿ ತನುವ ಮರೆದು
ವಿಕಳ ಭಾವದಿ ಉಬ್ಬುಬ್ಬಿ ಕುಣಿವುದು ೧
ಡಂಭವ ಸಾರುವರತ್ತತ್ತ ಜಡಿದು
ಕುಂಭಕ ರೇಚಕ ಪೂರಕವಿಡಿದು ||
ಅಂಬುಧಿಶಾಯಿ ಪದಾಂಬುಜ ವೀಕ್ಷಿಸಿ
ಬಿಂಬವ ಕಾಂಬುವ ಹಂಬಲವಿಡಿವುದು ೨
ಕಂಡವರ ಕಾಲಿಗೆ ಕುಮನುಜರಿಗೆ
ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ||
ಉಂಡು ಸಜ್ಜನರ ಕಂಡು ಸುಖಿಸಿ ಪಾ
ಷಂಡ ಸಂಭಾಷಣೆ ಸೋಕದೆ ಬಾಳ್ವುದು ೩
ತಪುತಾರ – ಕಂಬುಲಾಂಛನ ಪಿಡಿದು
ಗುಪಿತ ಮಂತ್ರಗಳೊರೆವ ಗುರುಗ –
ಳುಪದೇಶ ಕ್ರಮವ ಮೀರದೆ ಇತರ
ಕಪಟ ಬಿಟ್ಟು ನಲಿದು ಸುಖಿಪುದು ೪
ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತ
ಸದ್ವಿಷ್ಣು ಸಚ್ಛಾಸ್ತ್ರ ಹೇಳುತ ಕೇಳುತ ||
ದುಗ್ಧ ಸಮುದ್ರೇಶ ಪುರಂದರವಿಠಲಗೆ
ಇದ್ದ ಸಂಪದವ ತಪ್ಪದೆ ಒಪ್ಪಿಸುವುದು ೫

೩೪೨
ಇದು ಏನಂಗ ಮೋಹನಾಂಗ |
ಮದನಜನಕ ತೊರವೆಯ ನರಸಿಂಗ ಪ.
ಸುರರು ತುತಿಸಿ ಕರೆಯೆ ತುಟಿಯ ಮಿಸುಕದವ
ತೆರೆದೆ ಏತಕೆ ಬಾಯ ತೆರನ ಪೇಳೊಮ್ಮೆ ೧
ವರನೀಲರತುನ ಮಾಣಿಕದ ಹಾರಗಳಿರೆ |
ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು ೨
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು ೩

೧೧೦
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದ ಭಜನೆ ಸುಖವಯ್ಯ ಪ.
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಬೇಕು ಬಲ್ಲವರ ಒಳಗೆ ||
ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಭಕುತಜನರೊಳಗೆ ೧
ಬುಧ್ಧಿಯಲಿ ತನ್ನ ಮನ ತಿದ್ದುತ್ತಲಿರಬೇಕು
ಮುದ್ದಾಗಬೇಕು ಮುನಿಯೋಗಿಗಳಿಗೆ ||
ಮಧ್ವಮತದಬ್ಧಿಯೊಳು ಮೀನಾಗಿ ಇರಬೇಕು
ಶುದ್ಧ ಭಕುತಿಯ ಸುಕೃತ ಉಣಲುಬೇಕು ೨
ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕು
ಕುಶಲದಲಿ ಶ್ರೀ ಹರಿಯ ನೆನೆಯಬೇಕು ||
ವಸುಧೆಯೊಳು ನಮ್ಮ ಪುರಂದರವಿಠಲನ
ಹಸನಾಗಿ ನೆನೆನೆನೆದು ಸುಖಿಯಾಗಬೇಕು ೩

೧೧೧
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |
ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.
ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ |
ತೀರದಲಿ ಕುಳಿತು ನೀ ಪಣೆಗೆ ನಿತ್ಯ ||
ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು – |
ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು ೧
ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |
ಆರಾರಿಗೋ ಹಣದ ದಾನಕೊಟ್ಟು |
ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |
ದಾರಿಯಾಯಿತೆ ಹೊರತು ಬೇರೆ ಫಲವುಂಟೇ? ೨
ಕಾಡುದೈವಗಳನ್ನು ಚಿನ್ನ – ಬೆಳ್ಳಿಗಳಿಂದೆ |
ಮಾಡಿಕೊಂಡವರ ಪೂಜೆಯನೆ ಮಾಡಿ |
ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |
ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ ೩
ಮಗನ ಮದುವೆಯು ಎಂದು ಸಾಲವನು ಮಾಡಿ ನೀ |
ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||
ಹಗರಣವ ಪಡಿಸಿದರೆ ಸಾಲಗಾರರು ಬಂದು |
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ ೪
ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |
ತಟ್ಟನೇ ಶ್ರೀಹರಿಯ ಪದವ ನಂಬಿ ||
ದಿಟ್ಟ ಪುರಂದರವಿಠಲನೆ ಎಂದರೆ |
ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು ೫


ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ
ಎನ್ನ ದಯದಿ ಪಾಲಿಸಯ್ಯ ಪ
ನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆ
ಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪ
ಅಮರೇಂದ್ರವಂದಿತನೆ ಅನಂತಮಹಿಮನೆ
ಕಮಲಸಖಾನಂತಕರನೆ ||
ಕಮಲಾಯತಾಂಬಕನೆ ಕಾಮಿತದಾಯಕನೆ
ವಿಮಲ ಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ ೧
ಅಜಮಿಳ ಅಂಬರೀಷ ಅಕ್ರೂರ ವಿದುರಗೆ
ಗಜರಾಜ ಗಿರಿಜೇಶಗೆ ||
ನಿಜಭಕ್ತ ಪ್ರಹ್ಲಾದ ಅಜ ಧ್ರುವ ಅರ್ಜುನಗೆ
ದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ ೨
ಅವರಂತೆ ನಾನಲ್ಲ ಅವರ ದಾಸರ ದಾಸ
ಸವರಿ ಬಿಸುಟೆನ್ನ ದೋಷ ||
ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆ
ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ ೩
ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತು
ಎಂದೆಂದು ನಿನ್ನ ನಾಮಭಜನೆ ||
ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿ
ಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ ೪
ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನು
ಚಿಂತೆಗಳ ಪರಿಹರಿಸೊ ||
ಸಂತತ ಪಾಲಿಸೊ ಪುರಂದರ ವಿಠಲನೆ
ಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ೫

೨೨೫
ಇನ್ನೂ ದಯ ಬಾರದೇ-ದಾಸನ ಮೇಲೆ-
ಇನ್ನೂ ದಯ ಬಾರದೇ ಪ
ಮುನ್ನ ಮಾಡಿದ ದುಷ್ಕರ್ಮಗಳೆಲ್ಲವ
ಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪ
ನಾನಾ ಜನ್ಮಗಳಲಿ ನಾನಾ ಜಾತಿಗಳಲಿ
ನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||
ನಾನು ನನ್ನದು ಎಂದು ನರಕದೊಳಗೆ ಬಿದ್ದು
ನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ ೧
ಕಾಮಾದಿ ಷಡುವರ್ಗ ಗಾಢಾಂಧಕಾರದಿ
ಪಾಮರನಾಗಿ ಇದ್ದಂಥ ಪಾತಕನ ||
ರಮಾಮನೋಹರ ಹರಿ ನೀನೇ ಗತಿಯೆಂದು
ನಾಮಾಮೃತವನು ಪಾನ ಮಾಡಿದ ಮೇಲೆ ೨
ಏನ ಓದಿದರೇನು ಏನ ಕೇಳಿದರೇನು
ಈ ನಾಮ ಸ್ಮರಣೆಗೆ ಸರಿಬಾರದು ||
ಜ್ಞಾನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರ ಪುರಂದರ ವಿಠಲನೆ ೩

ಭಾರತೀದೇವಿಯ ಅವತಾರವಾದ ದ್ರೌಪದಿ
೩೪
ಇನ್ನೇಕೆ ಯಮನ ಬಾಧೆಗಳು? |
ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |
ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||
ಕ್ರುತುಕೋಟಿ ಫಲ ಒಂದೇ ನಾಮ-ಸದ್ |
ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ೧
ಮುನ್ನ ಪ್ರಹ್ಲಾದನೆ ಸಾಕ್ಷಿ – ನಮ್ಮ |
ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||
ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |
ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ ೨
ಹದಿನಾಲ್ಕು ಲೋಕವಾಳುವ – ನಮ್ಮ |
ಮದನ ಜನಕನಾಗಿ ಮಹಿಮೆ ತೋರುವ ||
ಪದುಮನಾಭನಾಗಿ ಮೆರೆವ- ನಮ್ಮ |
ಪುರಂದರವಿಠಲನ ಹರುಷದಿ ಕರೆವ ೩

೨೨೬
ಇನ್ನೇನು ಗತಿ ಎನಗೆಲೊ ಹರಿಯೆ |
ನಿನ್ನನು ನೆನೆಯದೆ ಮೋಸಹೋದೆನಲ್ಲ ಪ
ಅಂಕದೊಳಾಡುವ ಶಿಶುವಿನ ಮುದ್ದಿನ |
ಬಿಂಕದ ನುಡಿಗಳ ಕೇಳುತಲಿ ||
ಕಿಂಕಿಣಿ ಧ್ವನಿಯನು ಕಿವಿಗೊಟ್ಟು ಕೇಳುತ |
ಮಂಕು ಹರಿಣನಂತೆ ಆದೆನಲ್ಲ ೧
ಪರವನಿತೆಯರ ಲಾವಣ್ಯಕೆ ಲೋಚನ |
ಚರಿಸುತಲವರ ಕೂಟಕೆ ಬೆರಸಿ ||
ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |
ಎರಗಿದ ಪತಂಗದಂತಾದೆನಲ್ಲ ೨
ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |
ಮಡದಿಯರಂಗಸಂಗವ ಮಾಡುತ ||
ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|
ಡಡಗಿದ ಮೂಷಕನಂತಾದೆನಲ್ಲ ೩
ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |
ನಲಿದುಂಡು ಹೊಟ್ಟೆಯ ಹೊರೆಯುತಲಿ ||
ಬಲೆಯ ತುದಿಯ ಮಾಂಸಕೆ ಬಂದೆರಗುತ |
ಸಿಲುಕಿದ ವಿೂನಿ ನಂತಾದೆನಲ್ಲ ೪
ಲಂಪಟನಾಗಿ ನಾರಿಯರ ಮುಖಾಬ್ಜದ |
ಸೊಂಪಿನ ಕಂಪನಾಘ್ರಾಣಿಸುತ ||
ಸಂಪಿಗೆ ಹೂವಿನ ಮೇಲೆ ಮಲಗಿ ತನ್ನ
ಸೊಂದಳಿದಳಿಯಂತೆ ನಾನಾದೆನಲ್ಲ ೫
ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆ
ಮುಂತಾಗಿ ತಮ್ಮ ತಾವಲೆಯುತಿರೆ ||
ಸಂತತ ತವತಮ ವಿಷಯಕೆ ಎಳಸಲು
ಕಾಂತಾರದರಸನಂತೆ ಆದೆನಲ್ಲ ೬
ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |
ತಂದು ಪಂಚೇಂದ್ರಿಯಗಳಿಗೆನ್ನಯ ||
ತಂದೆ ಪುರಂದರ ವಿಠಲನ ನೆನೆದರೆ |
ಎಂದೆಂದಿಗೂ ಭವಬಂಧನ ಬಾರದಲ್ಲ ೭

೧೧೨
ಇರಬೇಕು – ಹರಿದಾಸರ ಸಂಗ
ವರಜ್ಞಾನಿಗಳ ದಯ ಸಂಪಾದಿಸಬೇಕು ಪ.
ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿ ಸುತರಿದ್ದು ಮಮತೆಯನು ಬಿಡಬೇಕು
ಗತಿಯೆಂದು ಬಿಡದೆ ಹರಿಯ ಪೋಪರಸಂಗ ೧
ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕು
ಬಿಡದೆ ಹರಿಯ ಪೂಜೆಯ ಮಾಡಬೇಕು
ಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕು
ಬಿಡದೆ ಹರಿಭಜನೆಯ ಮಾಡುವರ ಸಂಗ ೨
ಹರಿ – ಹರ – ವಿರಂಚಿಯರ ಪರಿಯ ತಿಳಿಯಬೇಕು
ತರತಮದಿ ರುದ್ರ – ಇಂದ್ರಾದಿಗಳ
ಅರಿಯದಿದ್ದರೆ ಗುರುಹಿರಿಯರ ಕೇಳಬೇಕು
ಪರಮಾನಂದದಲಿ ಓಲಾಡುವರ ಸಂಗ ೩
ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ –
ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕು
ವಿಷ್ಣುವಿನ ದಾಸರ ದಾಸನಾಗಲುಬೇಕು
ಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ ೪
ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕ್ಕುಲತೆ ಬೀಡಬೇಕು
ಶ್ರೀಕಾಂತ ಪುರಂದರ ವಿಠಲರಾಯನ ಸಂಗ ೫

೧೧೩
ಇರಬೇಕು ಇರದಿರಬೇಕು ಶ್ರೀ – |
ಹರಿದಾಸರು ಸಂಸಾರದೊಳು ಪ.
ಕುಲಸತಿಯಾದರೆ ಕೂಡಿರಬೇಕು |
ಸುಲಭದಿಂದ ಸ್ವರ್ಗ ಸೂರಾಡಬೇಕು ||
ಕಲಹ ಗಂಟಿ ಸತಿ ಕರ್ಕಶೆಯಾದರೆ |
ಹಲವು ಪರಿಯಿಂದಲಿ ಹೊರಗಾಗಬೇಕು ೧
ಮಕ್ಕಳು ತಾವು – ಮತಿವಂತರಾದರೆ |
ಅಕ್ಕರೆಯಿಂದಲಿ ಕೂಡಿರಬೇಕು ||
ಚಿಕ್ಕತನದಿ ಬುಧ್ಧಿ ತೇರುಂಡರಾದರೆ |
ಗಕ್ಕನೆ ಅಲ್ಲಿಂದ ಹೊರಗಾಗಬೇಕು ೨
ದುಷ್ಟರ ಕಂಡರೆ ದೂರವಿರಬೇಕು |
ಶಿಷ್ಟರ ಕಂಡರೆ ಕೈಮುಗಿಯಬೇಕು ||
ದಿಟ್ಟ ಶ್ರೀ ಪುರಂದರವಿಠಲರಾಯನ |
ಗಟ್ಟಿಯಾಗಿ ಆತನ ನೆರೆನಂಬಬೇಕು ೩

೧೧೪
ಇರಲೇ ಬಾರದು – ಇಂಥಲ್ಲಿ ಇರಲೇಬಾರದು ಪ.
ಇರಬಾರದಿಂದ ……… ವರೆ ಭಯಂಕರ ಹರಿತಾಪರಿಹರಿಸುವ ಅಪ
ದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ
ಉರಗಗಳು ಸೇರಿಕೊಂಡ ಸದನಗಳಲ್ಲಿ
ಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿ
ಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ ೧
ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿ
ಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿ
ನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿ
ಅವನಿಯೊಳಗರ್ಥ ಪ್ರಾಪ್ತಿ ಇಲ್ಲದಂಥಲ್ಲಿ ೨
ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿ
ನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿ
ಶ್ರೀನಾಥ ಶ್ರೀ ಪುರಂದರವಿಠಲ ರೂಪಗಳು
ಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ ೩

೫೦
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ |
ಎಲ್ಲೆಲ್ಲಿ ನೋಡಲು ರಾಯಚಂದ್ರನು ಪ
ಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿ
ಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ಅ.ಪ
ರಾವಣನ ಮೂಲಬಲವ ಕಂಡು ಕಪಿಗಳು
ಆವಾಗಲೆ ಹೊರಟೋಡುತಿರೆ
ಈವಾಗ ನರನಾಗಿ ಇರಬಾರದೆಂದೆನುತ
ದೇವ ರಾಮಚಂದ್ರ ಬಹುರೂಪ ತಾನಾದ ೧
ಅವನಿಗೆ ಇವ ರಾಮ ಇವನಿಗೆ ಅವ ರಾಮ
ಬುವಿಯೊಳಗೆ ಬೇರೆ ರೂಪವುಂಟೆ
ಅವನಿಯೊಳಿರುತಿಪ್ಪ ದುರುಳ ಜನರೆಲ್ಲ
ಅವರವರೆ ಹೊಡೆದಾಡಿ ಹತವಾಗಿ ಹೋದರು ೨
ಹನುಮಂತಾದಿ ಸಾಧುಜನರು ಅಪ್ಪಿಕೊಂಡು
ಕುಣಿದಾಡಿದರು ಅತಿ ಹರುಷದಲಿ
ಕ್ಷಣದಲಿ ಪುರಂದರವಿಠಲರಾಯನು
ಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ ೩

೫೧
ಇಲ್ಲಿಯೇ ಕುಳಿತಿದ್ದ ಭೂತವು – ಒಂದು
ಹಲ್ಲಿಯು ನುಂತು ಹದಿನಾಲ್ಕು ಲೋಕವ…………. ಪ
ಸೂಳೆಯ ಮನೆಯಲಿ ಇದೆಯೊಂದು ಕೋಳಿ |
ಕೋಳಿಯ ನಾಲಗೆ ಏಳು ತಾಳೆಯುದ್ಧ ||
ಕೋಳಿ ನುಂಗಿತು ಏಳು ಕಾಳಿಂಗ ನಾಗನ |
ಮೇಲೊಂದು ಬೇಡಿತು ಸಿಂಹದ ಮರಿಯ ೧
ಕಾನನದೊಳಗೊಂದು ಇರುವದು ಕೋಣ |
ಕೋಣನ ಕೊರಳಿಗೆ ಮುನ್ನೂರು ಬಾವಿ ||
ಕೋಣ ನೀರಿಗೆ ಹೋಗಿ ಕ್ಷೋಣಿ ಕಪಿಯ ಕೊಂದು |
ಟೊಣ್ಣನ ಮನೆಯೊಳಗೌತನವಯ್ಯ…………………. ೨
ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |
ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||
ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |
ಶಿಕ್ಷೆಯ ಮಾಡಿದ ಪುರಂದರವಿಠಲ………… ೩

೨೨೭
ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ |
ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ ಪ
ಮರಳಿ ಮರಳಿ ಜನ್ಮ ಮರಣವನೊಲ್ಲೆ |
ದುರುತ ಕೋಟಲೆಯ ಸಂಸಾರವನೊಲ್ಲೆ ||
ತುರುಕಾದು ಕೊಳಲನೂದುವ ಮುರಮರ್ದನ |
ಚರಣಕಮಲಗಳ ಸ್ಮರಣೆಯೊಳಿರಿಸೆನ್ನ ೧
ಬಂದು ಸಂಸಾರದ ಬೇನೆಯೊಳಗೆ ಬಿದ್ದು |
ನೊಂದೆನು ಕಡುಮೋಹದಿಂದ ನಾ ಬೆಂದು ||
ನಂದಗೋಪನ ಕಂದ ವೃಂದಾವನಪ್ರಿಯ |
ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ ೨
ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |
ಕತ್ತಲೆಯೊಳು ಕಡುನೊಂದೆನಯ್ಯ ||
ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ |
ಭಕ್ತವತ್ಸಲ ಶ್ರೀಪುರಂದರವಿಠಲ ೩

೧೧೫
ಇಲ್ಲೇ ವೈಕುಂಠ ಕಾಣಿರೊ – ಸಿರಿ |
ವಲ್ಲಭನಂಘ್ರಿಯ ನೆರೆನಂಬಿದವರಿಗೆ ಪ.
ನುಡಿಯೆರಡಾಗದೆ ಕಡುಕೋಪ ಮಾಡದೆ |
ಬಡತನ ಬಂದರು ಲೆಕ್ಕಿಸದೆ ||
ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |
ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ ೧
ಪಕ್ಷಪಾತವಿಲ್ಲದನ್ನದಾನಂಗಳನು – |
ಪೇಕ್ಷೆಯ ಮಾಡದೆ ಗುರುಹಿರಿಯರನು |
ಮೋಕ್ಷವ ಬಯಸುತ ಅನ್ಯಾಯವಳಿಯುತ |
ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ ೨
ಪರಹಿತವನು ಮಾಡಿ ಕೆರೆಬಾವಿಗಳ |
ಅರವಟಿಗೆಯ ಸಾಲಮರವ ಹಾಕಿ ||
ಸಿರಿಪುರದರಸು ಶ್ರೀ ಪುರಂದರವಿಠಲನ |
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ ೩


ಇವಗೇಕೆ ಪರಿಮಳ ಇವಗೇಕೆ ಶೃಂಗಾರ |
ನವನೀತ ಚೋರ ನಾರುವ ಗೊಲ್ಲಗೆ ಪ
ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ಲೇಪ |
ತಲೆದೋರದವಗೇಕೆ ದಟ್ಟ ಪುನುಗು |
ಬಲು ಕೇಶದವಗೇಕೆ ಬಾವನ್ನದ ಲೇಪ |
ಸಲೆಘೋರರೂಪಿಗೇಕೆ ನೊಸಲ ಸಾದು ೧
ತುಲಸಿಮಾಲೆಯ ಧರಿಸಿದವಗೇಕೆ ಜವ್ವಾಜಿ |
ಕೊಲೆಗಡುಕಗೀಕೆ ಕುಂಕುಮತಿಲಕ ||
ಅಲೆದಾಡುವವಗೇಕೆ ಅಂಗರಾಗದ ಸುಖ|
ಕಳವು ಮಾಡುವವಗೇಕನಂಗ ಸೊಬಗು ೨
ಪರಸತಿಯ ಬಯಸುವಗೆ ಪನ್ನಗಶಯನವೇಕೆ
ಹರಿದಾಡುವನಿಗೇಕೆ ಅಡಪ – ಡವಿಕೆ ||
ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ |
ಧರೆಗಧಿಫ್ನಾದನೀ ಪುರಂದರ ವಿಠಲ ೩

ಈ ಅಸುರನು ಕೃಷ್ಣನನ್ನು ಕೊಲ್ಲಲು ಬಂದ
೬೪
ಇವನ ಹಿಡಿದುಕೊಂಡು ಹೋಗಲೊ ಜೋಗಿ |
ಇವ ನಮ್ಮ ಮಾತು ಕೇಳದೆ ಪುಂಡನಾದನು ಪ
ಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |
ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||
ಓಡುತೋಡುತ ಬಂದು ದಾಡೆಯಿಂದ ಸೀಳ್ವ |
ನೋಡ ಹೋದರೆ ಕಣ್ಣ ತರೆದಂಜಿಸುವ ೧
ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||
ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||
ಬಿಲ್ಲನು ಎಡದ ಕೈಯಿಂದಲಿ ಎತ್ತಿದ |
ಬಲ್ಲಿದ ಮಾವನ ಶಿರವನರಿದು ಬಂದ ೨
ಬತ್ತಲೆ ಕುದುರೆಯ ಹತ್ತಬೇಡೆಂದರೆ |
ಹತ್ತುವ ಶ್ರೀಕೃಷ್ಣ ಚೆಂದದಿಂದ ||
ಭಕ್ತವತ್ಸಲ ನಮ್ಮ ಪುರಂದರವಿಠಲನ |
ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ ೩

೨೨೮
ಇಷ್ಟುಪಾಪವನು ಮಾಡಿದುದೆ ಸಾಕೊ |
ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪ
ಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |
ಕೊಡದೆ ಅನ್ಯರ ಋಣವನಪಹರಿಸಿದೆ |
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ |
ಹಡೆದ ತಾಯಿಯ ಕೂಡ ಹಗೆ ಮಾಡಿದೆ ೧
ಸ್ನಾನ ಸಂಧ್ಯಾನ ಜಪ ಮಾಡದಲೆ ಮೈಗೆಟ್ಟೆ |
ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||
ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |
ಶ್ವಾನ – ಸೂಕರನಂತೆ ಹೊರೆದೆ ಹೊಟ್ಟೆ ೨
ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |
ಅತಿಥಿಗಳಿಗನ್ನವನು ನೀಡಲಿಲ್ಲ |
ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |
ವೃಥವಾಗಿ ಬಹುಕಾಲ ಕಳೆದನಲ್ಲ ೩
ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |
ಮಧ್ವ ಮತಸಿದ್ದಾಂತ ಪದ್ಧತಿಗಳ ||
ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |
ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ ೪
ತಂದೆ – ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |
ಮಂದ ಭಾಗ್ಯದ ಬವಣೆ ತಪ್ಪಲಿಲ್ಲ ||
ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |
ತಂದೆ ಪುರಂದರವಿಠಲ ಮುಂದೆನ್ನ ಕಾಯೊ ೫

೧೧೭
ಈ ಜೀವನಿಂದು ಫಲವೇನು |
ರಾಜೀವಲೋಚನನ ಮರೆದಿಹ ತನುವಿನಲಿ ಪ.
ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |
ಗುರು – ಹಿರಿಯರ ಚರಣಕಮಲಕೆರಗಿ ||
ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |
ವೆರೆಯದೆ ಮರೆಹ ಈ ಪಾಪಿತನುವಿನಲಿ ೧
ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |
ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||
ರನ್ನದುಡಿಗೆಯುಡಿಸಿ ರತುನಗಳಳವಡಿಸಿ |
ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ ೨
ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |
ಹೊಳೆವ ಕಿರೀಟ ಕೊರಳಲಿ ಪದಕ ||
ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |
ಕಳೆಯ ನೋಡಲರಿಯದ ಪಾಪಿತನುವಿನಲಿ ೩
ವರಭಕ್ಷ್ಯಗಳು ಪರಮಾನ್ನ ಶಾಲ್ಯನ್ನವು |
ವರವಾದ ಮಧು ಘೃತ ಕ್ಷೀರವನ್ನು ||
ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ – |
ಎರಡು ಕೈಮುಗಿಯದ ಪಾಪಿತನುವಿನಲಿ ೪
ಉರಗಾದ್ರಿ – ಸ್ವಾಮಿಪುಷ್ಕರಣಿಗಳು ಮೊದಲಾದ |
ಪರಿಪರಿ ತೀರ್ಥಗಳನೆಲ್ಲ ಮಿಂದು ||
ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |
ಚರಣವನು ಭಜಿಸಲಯದ ಪಾಪಿತನುವಿನಲಿ ೫

೨೨೯
ಈ ಪರಿಯ ಅಧಿಕಾರ ಒಲ್ಲೆ ನಾನು |
ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪ
ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |
ಕರುಣದಲಿ ರಚಿಸಿ ನೀ ಈ ದುರ್ಗದಿ ||
ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |
ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು ೧
ದಾರಿಯಲಿ ಹೋಗಿ ಬರುವವರ ಉಪಟಳ ಘನ |
ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||
ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |
ಮಿರಿ ನಿನ್ನಲಿ ಮನವನೂರಿ ನಿಲಗೊಡರು ೨
ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |
ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||
ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |
ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ ೩
ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |
ಸ್ವಾಮಿತ್ವವೋ ನೋಡು ಮನೆಮನೆಯಲಿ ||
ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |
ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು ೪
ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |
ಪಾಳೆಯವನೊಪ್ಪಿಸಿ ಕೊಡುವೆವೆಂದು ||
ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |
ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ ೫
ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |
ಅನುವಾದ ದಿವಸವೊಂದಾದರಿಲ್ಲ ||
ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |
ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ ೬
ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|
ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||
ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |
ಅನುಗಾಲ ಬದುಕುವೆನೊ ಪುರಂದರವಿಠಲ ೭