Categories
ರಚನೆಗಳು

ಪುರಂದರದಾಸರು

೨೬೬
ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಪ.
ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು |
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ೧
ಭಕ್ತಿರಸದಲಿ ತನ್ನ ಚಿತ್ತಪರವಶನಾಗಿ |
ಅಚ್ಯುತನ ನಾಮವನು ಬಚ್ಚಿಟ್ಟು ಕೊಂಡವಗಲ್ಲದೆ ೨
ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ |
ಆನಂದ ಪೂರ್ಣ ಪುರಂದರವಿಠಲನ ನೋಡಿದವಗಲ್ಲದೆ ೩

೨೬೭
ಸುಮ್ಮನೆ ಬಾಹೂದೆ ಮುಕುತಿ – ನಮ್ಮ |
ಚೆನ್ನಾದಿ ಕೇಶವನ ದಯವಾಗದನಕ ಪ.
ಮನದಲ್ಲಿ ದೃಢವಿರಬೇಕು – ದುರ್ |
ಜನರ ಸಂಗತಿಯನು ನೀಗಲುಬೇಕು ||
ಅನಮಾನಂಗಳ ಬಿಡಬೇಕು – ತನ್ನ |
ತನು – ಮನ ಹರಿಗೆ ಒಪ್ಪಿಸಿ ಕೊಡಬೇಕು ೧
ಕಾಮ – ಕ್ರೋಧವ ಬಿಡಬೇಕು – ಹರಿ |
ನಾಮಸಂಕೀರ್ತನೆ ಮಾಡಲುಬೇಕು ||
ಹೇಮದಾಸೆಯ ಸುಡಬೇಕು – ತ |
ನ್ನಾ ಮನ ಹರಿಯ ಪಾದದಲಿಡಬೇಕು ೨
ಪಾಪಗಳನೆ ಕಳೆಯಬೇಕು – ಜ್ಞಾನ |
ದೀಪ ಬೆಳಕಿನಲಿ ಲೋಲಾಡ ಬೇಕು ||
ತಾಪ ರಹಿತಗೈಯಬೇಕು – ನಮ್ಮ
ಓಪ ಪುರಂದರವಿಠಲನೊಲೆಯ ಬೇಕು ೩

೨೬೮
ಸುಮ್ಮನೆ ವೈಷ್ಣವನೆಂದಿರಿ – ಪರ – |
ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.
ಮುಖವ ತೊಳೆದು ನಾಮವಿಟ್ಟವನಲ್ಲದೆ |
ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||
ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |
ಭಕುತಿಯ ರಸದೊಳು ಮುಳುಗಿದನೇನಯ್ಯ ೧
ಊರ ಮಾತುಗಳೆಲ್ಲನಾಡಿದನಲ್ಲದೆ |
ನಾರಾಯಣ ಕೃಷ್ಣ ಶರಣೆಂದನೆ ? |
ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |
ಗುರುಹಿರಿಯರಿಗೆಲ್ಲ ಎರಗಿದನೇನಯ್ಯ ೨
ಗಂಗೆಯಲಿ ಮಣ್ಣು ತೊಳವವನಲ್ಲದೆ |
ಹಿಂಗದೆ ಸ್ನಾನವ ಮಾಡಿದನೆ ? |
ರಂಗ ಶ್ರೀ ಪುರಂದರವಿಠಲನ ದಾಸರ |
ಸಂಗಡ ಕೂಡಾಡಿ ತಿರುಗಿದನೇನಯ್ಯ ೩

೨೬೯
ಸುಲಭಪೂಜೆಯ ಕೇಳಿ ಬಲವಿಲ್ಲದವರು
ಕಾಲಕಾಲದ ಕರ್ಮ ಕಮಲಾಕ್ಷಗರ್ಪಿಸಿರಿ ಪ.
ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |
ಮರುವುಡುವ ಧೋತರವು ಪರಮವಸ್ತ್ರ ||
ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯು
ಮರಳಿ ಹೊಡಮರುಳುವುದು ನೂರೆಂಟು ದಂಡ ೧
ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವು
ಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||
ನಡುಮನೆಯ ಅಂಗಳವು ಉಡುಪಿ ಭೂವೈಕುಂಠ
ಎಡ ಬಲದ ಮನೆಯವರು ಕಡುಭಾಗವತರು ೨
ಹೀಗೆ ಈ ಪರಿಯಲಿ ನಿತ್ಯ ನೀವರಿತಿರಲು
ಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||
ಬೇಗದಿ ತಿಳಿದು ಕೇಳಿ ಹೋಗುತಿದೆ ಆಯುಷ್ಯ
ಯೋಗಿ ಪುರಂದರವಿಠಲ ಸಾರಿ ಪೇಳಿದನು ೩

೮೭
ಸುಲಭವಲ್ಲವೊ ಮಹಾನಂದ ತ –
ನ್ನೊಳಗೆ ತಿಳಿಯಬೇಕು ಗುರು ದಯದಿಂದ ಪ.
ಬೆಕ್ಕನು ಇಲಿ ನುಂಗುವನಕ – ಕಡು –
ರಕ್ಕಸಿಯನು ಕಂಡು ಗಿಣಿ ನುಂಗುವನಕ ||
ಮಕ್ಕಳ ಭಕ್ಷಿಸುವನಕ – ಮದ –
ಸೊಕ್ಕಿದ ಗಜವನು ನರಿ ನುಂಗುವನಕ ೧
ಇಬ್ಬರೊಡನೆ ಕೊಡುವನಕ – ಮೂರು –
ಹಬ್ಬಿದ ಬೆಟ್ಟವ ನೊಣ ನುಂಗುವನಕ ||
ಒಬ್ಬರೊಡನೆ ಸೇರುವನಕ – ಕೆಟ್ಟ –
ಗುಬ್ಬಿಯ ರಾಜಹಂಸವು ನುಂಗುವನಕ ೨
ಒಳ ಹೊರಗೊಂದಾಗುವನಕ – ತಾನು –
ತಿಳಿದೆನೆಂಬ ಭಾವ ಬಯಲಾಗುವನಕ ||
ಬೆಳಕಿನೊಳಗೆ ಕಾಣುವನಕ ನಮ್ಮ –
ಚೆಲುವ ಪುರಂದರವಿಠಲನ ದಯವಾಗುವನಕ ೩

೧೫೨
ಸೆರಗ ಬಿಡಯ್ಯ ಕೃಷ್ಣ – ಕರೆಯಲು ಪೋಪೆನು |
ಕರುಗಳು ಹಸಿದಿವೆ ಕರುಣಿಗಳರಸನೆ ಪ
ಕೆನೆಮೊಸರನೆ ಕಡೆದು ನಿನಗೀವೆ ಬೆಣ್ಣೆಯ |
ಗೊನೆಯ ಬಾಳೆಯ ಹಣ್ಣ ತಿನಲು ಕೊಡುವೆ ||
ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ |
ತನಯರೊಡನೆ ಆಡಕಳುಹುವೆ ರಂಗಯ್ಯ ೧
ಗೋವಳರೆಲ್ಲ ಬಂದು ಬಾಗಿಲೊಳಗೆ ನಿಂದು |
ಗೋವುಗಳನು ಬಿಡಲು ಸಾರುತಿಹರು ||
ನೋವುಗೊಳಿಸಬೇಡ ಪರರ ಮಕ್ಕಳ ನೀನು |
ಭಾವಜನಯ್ಯನೆ ಲಾಲಿಸೀ ನುಡಿಯನು ೨
ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ |
ಪರಿಪರಿ ವಸ್ತ್ರವ ಸೆಳೆಯಬೇಡ ||
ನೆರೆಮನೆ ಹೊರೆಮನೆ ಕರುಗಳ ಬಿಡಬೇಡ |
ಸುರರಿಗೊಡೆಯ ನಮ್ಮ ಪುರಂದರವಿಠಲ ೩

೧೯೨
ಸೇವಕತನದ ರುಚಿಯೇನಳೆದೆಯೋ |
ದೇವ ಹನುಮರಾಯ ನೀ ವೈರಾಗ್ಯ ಬೇಡಿ ಪ
ಉದಧಿಯ ದಾಟಿ ಸೀತೆಯ ಕಂಡು ಬಂದಾಗ
ಮದುವೆಯ ಮಾಡೆನ್ನಬಾರದಿತ್ತೆ ||
ಪದದಿ ಪಾಷಾಣವ ಪೆಣ್ಣ ಮಾಡಿದನಿಗೆ
ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ ೧
ಕ್ಷಣದೊಳು ಸಂಜೀವನ ಗಿರಿ ತಂದಾಗ
ಧನವನು ಬೇಡಲು ಕೊಡದಿಹನೇ ||
ವಿನಯದ ವಿಭೀಷಣಗೆ ರಾಜ್ಯಪದವನಿತ್ತ
ವನಿಗೆನಾಶ್ಚರ್ಯವೊ ಹನುಮ ನೀನೊಲ್ಲದೆ ೨
ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆ
ಉರ್ಪಿಯ ಬೇಡಲು ಕೊಡದಿಹನೇ
ಸರ್ವವ ತೊರೆದು ಶ್ರೀ ಪುರಂದರವಿಠಲನ
ನಿವ್ರ್ಯಾಜ ಭಕುತಿಯ ಬೇಡಿಕೊಂಡೆಯಲ್ಲದೆ * ೩

೧೫೩
ಸೈಸಲಾರೆನೆ ಗೋಪಿ ನಿನ್ನ ಮಗನ ಲೂಟಿ |
ಏಸೆಂದು ಪೇಳಲಮ್ಮ ||
ವಾಸುದೇವನು ಬಂದು ಮೋಸದಿಂದಲಿ ಎನ್ನ |
ವಾಸವ ಸೆಳಕೊಂಡು ಓಡಿ ಪೋದನಮ್ಮ ಪ
ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |
ಸಾವಿರ ನುಂಗುವನೆ ||
ಭಾವಜನಯ್ಯ ಇದೇನೆಂದರೆ ನಿಮ್ಮ |
ಕಾಮದೇವರು ನಾನು ಕೇಳಿಕೊ ಎಂಬನೆ ೧
ಅಗ್ರೋದಕ ತಂದು ಜಗುಲಿ ಮೇಲಿಟ್ಟರೆ |
ವೆಗ್ಗಳದಲಿ ಕುಡಿವ ||
ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |
ಮಂಗಳಮಹಿಮನ ಅಪ್ಪನಾನೆಂಬುವ ೨
ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |
ಅಷ್ಟು ತಾ ಬಳಿದುಂಬನೆ ||
ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |
ಇಷ್ಟದೇವರು ತೃಪ್ತನಾದನೆಂತೆಂಬುವ ೩
ಋತುವಾದ ಬಾಲೆಯರು ಪತಿಯೆಡೆ ಪೋಪಾಗ |
ಕೃತಕದಿಂದಡಗಿಹನೆ ||
ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |
ಪ್ರತಿಯಾಗಿ ಮಾರನ ಸೂರೆಗೊಂಬುವನೆ ೪
ಅಚ್ಚಪಾಲು-ಮೊಸರು ನವನೀತ ಮಜ್ಜಿಗೆ |
ರಚ್ಚೆ ಮಾಡಿ ಕುಡಿವ ||
ಅಚ್ಚ ಪುರಂದರವಿಠಲರಾಯನ |
ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ ೫

೮೩
ಸ್ಥಳವಿಲ್ಲವೈ ಭಾಗವತರೇ – ಈಗ
ಒಳಗೆ ಹೊರಗೆ ಸಂದಣಿ ತುಂಬಿದೆ ನೋಡಿ ಪ.
ಆಯ್ದೊಕ್ಕಲಿದರೊಳಗುಂಟು – ಮತ್ತೆ
ಆಯ್ಕು ಮಂದಿಯ ಬೇರೆ ಉಂಟು
ಆಯ್ದು ನಾಲ್ಕು ಇದರೊಳಗುಂಟು – ನೀವು
ಬೈದರೆ ಏನು ತೆಗೆಯಿರಿ ನಿಮ್ಮ ಗುಂಟು ೧
ಆರುಮಂದಿ ಕಳ್ಳರುಂಟು – ಮ
ತ್ತಾರು ಮಂದಿಗೆ ಮತ್ತೆ ಪ್ರೇರಕರುಂಟು
ಪ್ರೇರಕರಿಗೆ ಕರ್ತರುಂಟು – ವಿ
ಚಾರಿಸುವುದಕೆ ನಿಮಗೇನುಂಟು ? ೨
ಅತ್ತೆಯವಳು ಬಲು ಖೋಡಿ – ಎನ್ನ
ಒತ್ತಿ ಆಳುವ ಪುರುಷನು ಬುಲುಹೇಡಿ
ಮತ್ತೆ ಮಾವನು ಅಡನಾಡಿ – ಸರಿ
ಹೊತ್ತಿಗೆ ಬರುವ ಮೈದುನ ಬಲುಕೇಡಿ ೩
ನಗೆಹೆಣ್ಣು ಎಂಬುವಳು ಕೋಪಿ – ಮಲ
ಮಗಳು ಕಂಡರೆ ಸೇರಳು ಬಲು ಪಾಪಿ
ಹಗೆಗಾತಿ ಅತ್ತಿಗೆ ಶಾಪಿ – ಸುತ್ತ
ಬೊಗಳುವಳು ತಾಳೆನು ನಾನು ಮುಂಗೋಪಿ ೪
ಎಷ್ಟು ಹೇಳಲಿ ನಿಮಗೆಲ್ಲ – ಈ
ಕಷ್ಟ ಸಂಸಾರದೊಳಗೆ ಸುಖವಿಲ್ಲ
ಸ್ಪಷ್ಟವಾಗಿ ಪೇಳ್ಪೆ ಸೊಲ್ಲ – ದೇವ
ಸೃಷ್ಟೀಶ ಪುರಂದರವಿಠಲ ಬಲ್ಲ ೫

೮೫
ಸ್ನಾನ ಮಾಡಿರಯ್ಯ ಜ್ಞಾನತೀರ್ಥದಲಿ
ನಾನು ನೀನೆಂಬಹಂಕಾರವ ಬಿಟ್ಟು ಪ.
ತನ್ನೊಳು ತಾನೆ ತಿಳಿದರೊಂದು ಸ್ನಾನ
ಅನ್ಯಾಯಗಾರಿ ಕಳೆದರೊಂದು ಸ್ನಾನ
ಅನ್ಯಾಯವಾಡದಿದ್ದರೊಂದು ಸ್ನಾನ
ಚೆನ್ನಾಗಿ ಹರಿಯ ನೆನೆದರೊಂದು ಸ್ನಾನ ೧
ಪರಸತಿಯ ಬಯಸದಿದ್ದರೆ ಒಂದು ಸ್ನಾನ
ಪರನಿಂದೆ ಮಾಡದಿದ್ದರೆ ಒಂದು ಸ್ನಾನ
ಪರದ್ರವ್ಯ ಅಪಹರಿಸದಿರೆ ಒಂದು ಸ್ನಾನ
ಪರತತ್ವ ತಿಳಿದುಕೊಂಡರೆ ಒಂದು ಸ್ನಾನ ೨
ತಂದೆತಾಯಿಗಳ ಸೇವೆ ಒಂದು ಸ್ನಾನ
ಮುಂದಿನ ಮಾರ್ಗ ತಿಳಿದರೊಂದು ಸ್ನಾನ
ಬಂಧನವನು ಬಿಡಿಸಿದರೊಂದು ಸ್ನಾನ
ಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ ೩
ಅತ್ತೆ ಮಾವನ ಸೇವೆಯೊಂದು ಸ್ನಾನ
ಭರ್ತನ ಮಾತು ಕೇಳುವುದೊಂದು ಸ್ನಾನ
ಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನ
ಪಾರ್ಥಸಾರಥಿ ನಿಮ್ಮ ಧ್ಯಾನವೆ ಧ್ಯಾನ೪
ವೇದ ಶಾಸ್ತ್ರಗಳನೋದಿದರೊಂದು ಸ್ನಾನ
ಭೇದಾಭೇದ ತಿಳಿದರೊಂದು ಸ್ನಾನ
ಸಾಧು ಸಜ್ಜನರ ಸಂಗ ಒಂದು ಸ್ನಾನ
ಪುರಂದರವಿಠಲನ ಧ್ಯಾನವೆ ಸ್ನಾನ* ೫

೨೬೨
ಸ್ಮರಣೆಯೊಂದೆ ಸಾಲದೆ – ಗೋವಿಂದನ |
ಸ್ಮರಣೆಯೊಂದೆ ಸಾಲದೆ ? ಪ.
ಪರಿಪರಿ ಸಾಧನ ಭ್ರಾಂತಿಯ ಬಿಡಿಸುವ |
ಪರಮಾತ್ಮನ ಪಾದ ನೆರೆನಂಬಿದವರಿಗೆ ಅಪ
ಕಡುಮೂರ್ಖನಾದರೇನು – ದಾನ – ಧರ್ಮ – |
ಕೊಡದಾತನಾದರೇನು ||
ಬಡವನಾದರೇನು ವಿಜಾತಿಯಾದರೇನು |
ಒಡನೆ ಪ್ರಹ್ಲಾದನುದ್ಧರಿಸಿದ ಶ್ರೀ ಹರಿಯ ೧
ಪಾತಕಿಯಾದರೇನು – ಸರ್ವಲೋಕ – |
ಘಾತಕಿಯಾದರೇನು ||
ಮಾತೆಯಂದದಿ ತನ್ನ ದಾಸರ ಸಲಹುವ |
ಚೇತನಾತ್ಮಕನ ಪಾದವ ನಂಬಿದವರಿಗೆ ೨
ಪಾತಕ ವೆಗ್ಗಳವೊ – ನಾಮವು ಪ್ರಾಯ – |
ಶ್ಚಿತ್ತಕೆ ವೆಗ್ಗಳವೊ ||
ಪಾತಕವೆನಗಿಲ್ಲ ಪ್ರಾಯಶ್ಚಿತ್ತ ಮುನ್ನಿಲ್ಲ |
ಏತರ ಭಯವಯ್ಯ ಪುರಂದರವಿಠಲನ ೩

೧೯೧
ಸ್ವಾಮಿ ಮುಖ್ಯಪ್ರಾಣ-ನೀ-ಮಲೆವರ ಗಂಟಲಗಾಣ ಪ
ಸಕಲ ವಿದ್ಯಾ ಪ್ರವೀಣ-ನೀ-ಹಿಡಿದೆಯೋ ರಾಮರ ಚರಣ ಅ.ಪ
ಏಕಾದಶೀಯ ರುದ್ರ-ನೀ-ಹಿಡಿದೆಯೊ ರಾಮರ ಮುದ್ರಾ
ಸೇತುವೆಗಟ್ಟಿ ಸಮುದ್ರ-ನೀ-ಹಾರಿದೆಯೋ ಬಲಭದ್ರ ೧
ಸಂಜೀವಿನಿ ಪರ್ವತವನ್ನು-ಅಂಜದೆ ತಂದೆಯೊ ನೀನು |
ಅಂಜನೆ ತನುಸಂಭವನು-ನಿನ್ನ-ಬೇಡಿಕೊಂಬೆನೋ ನಾನು ೨
ವೈಕುಂಠಸ್ಥಳದಿಂದ ಬಂದು-ಪಂಪಾಕ್ಷೇತ್ರದಿ ನಿಂದು |
ಯಂತ್ರೋದ್ಧಾರಕನೆಂದು-ಪುರಂದರ ವಿಠಲನೆ ಸಲಹೆಂದು ೩

೨೭೦
ಹಂಚಿನ ಇದಿರಲಿ ಹಲ್ಲನು ತೆಗೆಯಲು
ಮಿಂಚುವ ಕನ್ನಡಿಯಾದೀತೆ ? ಪ.
ಮಿಂಚಿನ ಬೆಳಕಲಿ ದಾರಿಯ ನಡೆದರೆ
ಮುಂಚುವ ಊರಿಗೆ ಮುಟ್ಟೀತೆ ? ಅಪ
ಬಾಲರ ಭಾಷೆಯ ನಂಬಿ ನಡೆದರೆ
ಶೀಲದ ಕೆಲಸಗಳಾದೀತೆ ?
ಜೋಲುವ ಹೋತಿನ ಮೊಲೆಗಳ ಹಿಂಡಲು
ಹಾಲಿನ ಹನಿಯದು ಹೊರಟೀತೆ ?
ಕಾಲುವೆ ಬಚ್ಚಲಕುಣಿ ನೀರಿಗೆ – ಘನ
ಬಾಳೆಯ ತೋಟವು ಆದೀತೆ ?
ಮೇಲುಬಣ್ಣಾದಾ ಆಲದ ಹಣ್ಣು
ನಾಲಿಗೆಸವಿಯನು ಕೊಟ್ಟೀತೆ ? ೧
ಭಾಷೆಯ ನುಡಿಗಳಿಗಾಸೆ ಮಾಡೆ ಮನ
ದಾಸೆಯ ಕಾರ್ಯಗಳಾದೀತೆ ?
ದೋಸೆಯ ಛಿದ್ರದಿ ಆರಿಸೆ ಕಾಳಿನ
ರಾಶಿಯು ಹಸನವು ಆದೀತೆ ?
ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆ
ಮಾಸದ ಮನೆ ಬದುಕಾದೀತೆ ?
ಕಾಸಾರದೆದುರಿಗೆ ಹರಿಕಥೆ ಹೇಳ್ದರೆ
ಸೋಸಿ ಕೇಳ್ದು ತಲೆದೂಗೀತೆ ? ೨
ಮಿಥ್ಯಾವಚನಿಯ ಮಾತನು ನಂಬಲು
ಹೊತ್ತಿಗೆ ಅದು ಬಂದೊದಗೀತೆ ?
ಸತ್ತವನೆದುರಿಗೆ ಸುತ್ತಲು ಕುಳಿತು
ಅತ್ತರೆ ಆ ಹೆಣ ಕೇಳೀತೆ ?
ನಿತ್ಯನಪುಂಸಕನೈದಲು ತರುಣಿಗೆ
ಚಿತ್ತ ಸುಖವು ಸೂರಾದೀತೆ ?
ಕುತ್ತಿಗೆಗೊಯ್ಕನ ಕಾಲು ಹಿಡಿದರೆ
ಹತ್ಯದೊಳ್ ಹೇಸಿಕೆ ಹುಟ್ಟೀತೆ ?೩
ಬೋರಗಲ್ಲಿನ ಮುಂದೆ ಬಡತನ ಹೇಳಲು
ಸಾರಸುಖಕ್ಕನುವಾದೀತೆ ?
ಚೋರನು ಚಂದ್ರಗೆ ಕೈಮರೆ ಮಾಡಲು
ಚೌರ್ಯಕೆ ಕತ್ತಲು ಒದಗೀತೆ ?
ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾ
ಹಾರಿಗೆ ಮೀನವು ದೊರಕೀತೆ
ಕಾರಣವಿಲ್ಲದ ಲೌಕಿಕ ಕಥೆಯಿಂ
ಘೋರ ನರಕ ಭಯ ತಪ್ಪೀತೆ ?೪
ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲು
ಹೊಟ್ಟೆಗೆ ಓದನ ಸಿಕ್ಕಿತೆ ?
ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲು
ಹೊಟ್ಟೆಯಲಿ ಕಳವಳ ಹುಟ್ಟೀತೆ ?
ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲು
ಕೆಟ್ಟ ಮಾತು ಅದು ಬಿಟ್ಟೀತೆ?
ದಿಟ್ಟ ಪುರಂದರವಿಠಲರಾಯನ
ಬಿಟ್ಟರೆ ಸದ್ಗತಿಯಾದೀತೆ? ೫

೨೭೧
ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನು
ಮಿಂಚುಳ್ಳ ಕಂಚು – ಕನ್ನಡಿಯಲ್ಲದೆ ಪ.
ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?
ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?
ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?
ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? ೧
ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?
ಸೂಳೆ ಬಲ್ಲುಳೆ ಮನೆಯ ಬಡತನಗಳ ?
ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?
ಕೇಳಬಲ್ಲನೆ ಕಿವುಡ ಏಕಾಂತವ ? ೨
ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?
ಭೋಗಿ ಬಲ್ಲನೆ ಕೆಲಸ – ಉದ್ಯೋಗವ ?
ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?
ಗೂಗೆ ಬಲ್ಲುದೆ ಹಗಲ ಹರಿದಾಟವ ? ೩
ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?
ಕಾಣಬಲ್ಲನೆ ಕುರುಡ ಕನ್ನಡಿಯನು ?
ದೀನವತ್ಸಲ ನಮ್ಮ ಪುರಂದರವಿಠಲನನು
ಕಾಣಬಲ್ಲನೆ ಜ್ಞಾನವಿಲ್ಲದವನು ? ೪

೮೮
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ ಪ.
ಚೆನ್ನ ಬಾಲಕೃಷ್ಣನೆಂಬ
ಕನ್ನೆಗೊನೆಬಾಳೆಹಣ್ಣು ಅಪ
ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು ೧
ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು
ಸುಜನಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು ೨
ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು

೧೫೪
ಹಣ್ಣು ತಾ ಬೆಣ್ಣೆ ತಾರೆ – ಗೋಪಮ್ಮ-|
ಹಣ್ಣು ತಾ ಬೆಣ್ಣೆ ತಾರೆ ಪ
ಅಡವಿಯೊಳಗೆ ಅಸುರನ ಕೊಂದ ಕೈಗೆ |
ಮಡುವಿನೊಳಗೆ ಮಕರನ ಸೀಳ್ದ ಕೈಗೆ ||
ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |
ಸಡಗರದಲಿ ಭೂಮಿ ಬೇಡಿದ ಕೈಗೆ ೧
ಶಂಖ ಚಕ್ರಗಳ ಪಿಡಿದಂಥ ಕೈಗೆ |
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||
ಬಿಂಕದಿಂದಲಿ ಕೊಳಲೂದುವ ಕೈಗೆ |
ಪಂಕಜಮುಖಿಯರ ಕುಣಿಸುವ ಕೈಗೆ ೨
ದಿಟ್ಟತನದಲಿ ಬೆಟ್ಟವೆತ್ತಿದ ಕೈಗೆ |
ಸೃಷ್ಟಿಯ ದಾನವ ಬೇಡಿದ ಕೈಗೆ ||
ದುಷ್ಟಭೂಪರನೆಲ್ಲ ಮಡುಹಿದ ಕೈಗೆ |
ಕೆಟ್ಟ ದಾನವರನು ಸದೆಬಡಿದ ಕೈಗೆ ೩
ಕಾಳಿಯ ಮಡುವನು ಕಲಕಿದ ಕೈಗೆ |
ಸೋಳಸಾಸಿರ ಗೋಪಿಯರಾಳಿದ ಕೈಗೆ ||
ಮೇಳದ ಭಕ್ತರುದ್ಧರಿಸುವ ಕೈಗೆ |
ಏಳು ಗೂಳಿಯ ಗೆದ್ದ ಯದುಪನ ಕೈಗೆ ೪
ಬಿಲ್ಲು – ಬಾಣಗಳನು ಪಿಡಿದಂಥ ಕೈಗೆ |
ಮಲ್ಲ ಸಾಧನೆಯನು ಮಾಡಿದ ಕೈಗೆ ||
ಎಲ್ಲ ದೇವರದೇವ ರಂಗನ ಕೈಗೆ |
ಬಲ್ಲಿದ ಪುರಂದರವಿಠಲನ ಕೈಗೆ ೫

೧೯೭
ಹನುಮ – ಭೀಮ – ಮಧ್ವ ಮುನಿಯ
ನೆನೆದು ಬದುಕಿರೊ
ಅನುಮಾನಂಗಳಿಲ್ಲದಲೆ ಮನದಭೀಷ್ಟಂಗಳನೀವ ಪ
ಪ್ರಾಣಿಗಳ ಪ್ರಾಣೋದ್ದಾರ ಪ್ರಾಣರಲ್ಲುತ್ತಮ ಮತ್ತೆ
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ರ‍ಕಷ್ಟ ||
ಕಾಣಿರೇನೋ ಕಾಯಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಕೊಟ್ಟು ಸಲಹುವ ಜಾಣಗುರು ಮುಖ್ಯಪ್ರಾಣ೧
ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿ
ಪ್ರೇಮದಿಂದ ನೆನಯುವವರ ಭಾಗ್ಯಕ್ಕೆಣೆಯುಂಟೇ ? ||
ಸಾಮಾನ್ಯವಲ್ಲವೊ ಈಗ ಮೋಕ್ಷಾದಿ ಸಂಪದದಾತ
ಆ ಮಹಾ ಪರೋಕ್ಷಜ್ಞಾನ ದಾಢ್ರ್ಯ ಭಕುತಿ ಕೊಡುವ ೨
ಅವತಾರ ತ್ರಯಗಳಿಂದ ಶ್ರೀಹರಿಯ ಸೇವಿಸುವ
ತವಕದಿ ಪೂಜಿಪ ಮಹಾಮಹಿಮೆಯುಳ್ಳವನು ||
ಕವಿತೆವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವ ಬಂಧನ ಕಳೆದು ಕಾವ ಪುರಂದರ ವಿಠಲನ ದಾಸ ೩

೧೯೩
ಹನುಮ ನಮ್ಮ ತಾಯಿತಂದೆ-ಭೀಮ
ನಮ್ಮ ಬಂಧು ಬಳಗ |
ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ಪ
ತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನ ತಂದೆ ||
ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘು
ರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ ೧
ಬಂಧು ಬಳಗದಂತೆ ಆಪ್ಪದ್ಬಂಧುವಾಗಿ ಪಾರ್ಥನಿಗೆ
ಬಂದ ದುರಿತಂಗಳ ಪರಿಹರಿಸಿ ||
ಅಂಧಕಜಾತಕ ಕೊಂದು ನಂದನಂದನಿಗರ್ಪಿಸಿದ ಗೋ-
ವಿಂದನಂಘ್ರಗಳೆ ಸಾಕ್ಷಿ ದ್ವಾಪರಯುಗದೆ ೨
ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತು
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ |
ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರ ವಿಠಲ ಸಾಕ್ಷಿ ಕಲಿಯುಗದಲ್ಲಿ ೩

೧೯೪
ಹನುಮಂತ ದೇವ ನಮೋ ಪ
ವನಧಿಯನು ದಾಟಿ ರಾವಣನ ದಂಡಿಸಿದೆ ಅ.ಪ
ಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋ
ಕಂಜ ಸಖ ಮಂಡಲಕೆ ಕೈ ದುಡುಕಿದೆ ||
ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ-
ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ ೧
ಹೇಮ ಕುಂಡಲ ಹೇಮ ಯಜ್ಞೋಪವೀತಖಿಳ
ಹೇಮಕಟಿ ಸೂತ್ರ ಕೌಪೀನಧಾರೀ ||
ರೋಮ ಕೋಟಿ ಲಿಂಗ ಸರ್ವಶ್ಯಾಮಲ ವರ್ಣ
ರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ ೨
ರಾಮ-ಲಕ್ಷನರ ಕಂಡಾಳಾಗಿ ನೀ ಮೆರೆದೆ |
ಭೂಮಿಜೆಗೆ ಮುದ್ರೆಯುಂಗುರವನಿತ್ತೆ ||
ಆ ಮಹಾ ಲಂಕಾ ನಗರವೆಲ್ಲವನು ಸುಟ್ಟು
ಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ೩
ಆಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀ
ರಾಕ್ಷಸಾಧಿಪ ರಾವಣನು ರಣದಲಿ ||
ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛೆಯ ಬಗೆಯ
ರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ ೪
ಶ್ರೀಮದಾಚಾರ್ಯ ಕುಲದವನೆಂದೆನಿಸಿದೆಯೈ
ಶ್ರೀ ಮಹಾಲಕುಮಿ ನಾರಾಯಣಾಖ್ಯ ||
ಶ್ರೀ ಮನೋಹರ ಪುರಂದರ ವಿಠಲ ರಾಯನ
ಸೌಮ್ಯಮನದಾಳು ಹನುಮಂತ ಬಲವಂತ ೫

೧೯೫
ಹನುಮಂತ ನೀ ಬಲು ಜಯವಂತನಯ್ಯ |
ಅನುಮಾನವಿಲ್ಲ ಆನಂದತೀರ್ಥರಾಯ ಪ
ರಾಮಸೇವಕನಾಗಿ ರಾವಣನ ಪುರವ ನಿರ್
ಧೂಮವ ಮಾಡಿದೆ ನಿಮಿಷದೊಳಗೆ ||
ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |
ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ೧
ಕೃಷ್ಣಾವತಾರದಿ ಭೀಮನಾಗಿ ಬಂದು
ದುಷ್ಟ ದೈತ್ಯರನೆಲ್ಲ ಸಂಹರಿಸಿದೆ |
ದೃಷ್ಟಿಹೀನ ಧೃತರಾಷ್ಟ್ರನ ವಂಶವನು
ಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ ೨
ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲು
ಮತಿ ಹೀನರಾದ ಸಜ್ಜನರಿಗೆಲ್ಲ ||
ಅತಿ ಬೇಗದಲಿ ಮಧ್ವಯತಿ ರೂಪ ಧರಿಸಿ ಸದ್
ಗತಿ ಪಾಲಿಸಿದೆ ಪುರಂದರ ವಿಠಲನ ದಾಸ ೩

೧೯೬
ಹನುಮನ ಮತವೆ ಹರಿಯ ಮತವು |
ಹರಿಯ ಮತವೇ ಹನುಮನ ಮತವು ಪ
ಹನುಮನು ಒಲಿದರೆ ಹರಿ ತಾನೊಲಿವನು |
ಹನುಮನು ಮುನಿದರೆ ಹರಿಮುನಿವ ಅ.ಪ
ಹನುಮನ ನಂಬಿದ ಸುಗ್ರೀವ ಗೆದ್ದ |
ಹನುಮನ ನಂಬದ ವಾಲಿಯು ಬಿದ್ದ ೧
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿಯಲು ರಾವಣ ಬಿದ್ದ ೨
ಹನುಮನು ಪುರಂದರ ವಿಠಲನ ದಾಸ|
ಹನುಮನೊಳ್ ಪುರಂದರ ವಿಠಲನಾವಾಸ ೩

೨೭೨
ಹಮ್ಮುನಾಡಲಿಬೇಡ ಹಮ್ಮು ಈಡೇರದು
ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ ಪ.
ಮುನ್ನೊಮ್ಮೆ ರಾವಣನು ಜನಕನಾ ಸಭೆಯಲ್ಲಿ
ತನ್ನಳವನರಿಯದಲೆ ಧನುವೆತ್ತಲು
ಉನ್ನತದ ಆ ಧನು ಎದೆಯ ಮೇಲೆ ಬೀಳಲು
ಬನ್ನ ಬಟ್ಟುದ ನೀವು ಕೇಳಿಬಲ್ಲಿರಯ್ಯ ೧
ಕುರುಪತಿಯ ಸಭೆಯಲ್ಲಿ ಕೃಷ್ಣ ತಾ ಬರಲಾಗಿ
ಕರೆದು ಮನ್ನಣೆಯನ್ನು ಮಾಡಿದಿರಲು
ಧರೆಗೆ ಶ್ರೀ ಕೃಷ್ಣನಂಗುಟವನಂದೊತ್ತಲು
ಅರಸು ಆಸನ ಬಿಟ್ಟು ಉರುಳಾಡಿದ ೨
ಅತಿ ವೇಗದಲಿ ಕೃಷ್ಣ ಸತ್ಯಭಾಮೆಯ ಕರೆದು
ಸೀತೆ ನೀನಾಗೆಂದು ನೇಮಿಸಿದನು
ಮತಿವಂತೆ ಬಗೆಬಗೆಯ ಶೃಂಗಾರವಾದರೂ
ಸೀತಾ ಸ್ವರೂಪ ತಾನಾಗಲಿಲ್ಲ ೩
ಹನುಮನನು ಕರೆಯೆಂದು ಖಗಪತಿಯನಟ್ಟಲು
ಮನದಲಿ ಕಡುಕೋಪದಿಂದ ನೊಂದು
ವಾನರನೆ ಬಾಯೆಂದು ಗರುಡ ತಾ ಕರೆಯಲು
ಹನುಮ ಗರುಡನ ತಿರುಹಿ ಬೀಸಾಡಿದ ೪
ಇಂತಿಂತು ದೊಡ್ಡವರು ಈ ಪಾಡು ಪಟ್ಟಿರಲು
ಪಂಥಗಾರಿಕೆ ತರವೆ ನರಮನುಜಗೆ ?
ಚಿಂತಾಯತನು ಚೆಲ್ವ ಪುರಂದರವಿಠಲನ
ಸಂತತವು ನೆನೆ ನೆನೆದು ಸುಖಿಯಾಗೊ ಮನುಜ ೫

೯೦
ಹರಿ – ಹರರು ಸರಿಯೆಂಬ ಅರಿಯದಜ್ಞಾನಿಗಳು |
ಹರನ ಹೃದಯದೊಳಿರುವ ಹರಿಯ ತಾವರಿಯರು ಪ.
ಶರಧಿ ಮಥನದಲಂದು ಸಿಂಧುಸುತೆ ಬಂದಾಗ |
ಹರಿ – ಹರ – ವಿರಂಚಿ ಮೊದಲಾದ ಸುರರ ||
ನೆರೆ ಒರೆದು ನೋಡಿ ಶಂಕೆಯ ಬಿಟ್ಟು ಸಿರಿದೇವೀ
ಹರಿ ಸರ್ವಪರನೆಂದು ಮಾಲೆ ಹಾಕಿದಳು ೧
ಹರಿನಾಮ ಕ್ಷೀರವದು ಹರನಾಮ ನೀರು ಅದು |
ಕ್ಷೀರ ನೀರೊಂದಾದುದಂತೆ ಇಹುದು ||
ಒರೆದಾಡಿ ಪರತತ್ತ್ವವರಿಯದಾ ನರ ತಾನು |
ಹರಿ – ಹರರು ಸರಿಯೆಂದು ನರಕಕೆಳಸುವನು ೨
ಕ್ಷೋಣಿಯೊಳು ಬಾಣನ – ತೋಳುಗಳ ಕಡಿವಾಗ |
ಏಣಾಂಕಧರ ಬಾಗಿಲೊಳಗೆ ಇರಲು |
ಕಾಣರೇ ಜನರೆಲ್ಲ ಹರಿ ಪರನು ತಾನೆಂದು |
ಪೂರ್ಣಗುಣ ಪುರಂದರವಿಠಲನೇ ಪರನು ೩

೨೭೬
ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ |
ಹರಿ ಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿ ಪ.
ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ |
ಅಡಗಿಸಿ ಇಟ್ಟಿಹೆ ಮಣ್ಣೊಳಗೆ ||
ಬಡತನ ಬಂದು ಕಂಬಳಿ ಹೊದೆವಾಗ |
ತುಡುಗು ನಿನ್ನ ಜನ್ಮ ಸುಡು ಕಾಣೊ ಖೋಡಿ೧
ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ |
ಗುಗ್ಗರಿಯನು ಮಾಡಿ ತಿನ್ನುವಿಯೊ ||
ವೆಗ್ಗಳವಾದ ಯಮಧೂತರು ಎಳೆವಾಗ |
ಬುಗ್ಗೆಯ ಹೊಯ್ಕೊಂಡು ಹೋದೆಯೊ ಖೋಡಿ೨
ನಂಟರು – ಬಂಧುಗಳೂರೊಳಗಿರಲಿಕ್ಕೆ |
ಕುಂಟು ಸುದ್ದಿಗಳನು ಆಡುವೆ ನೀ ||
ಕಂಟಕರಾದ ಯಮದೂತರು ಎಳೆವಾಗ |
ನಂಟ ಪುರಂದರವಿಠಲನ ದ್ರೋಹಿ ೩

೨೭೯
ಹರಿ ನಿನ್ನೊಲುಮೆಯು ಆಗುವತನಕ |
ಅರಿತು ಸುಮ್ಮಗಿರುವುದೆ ಲೇಸು ಪ.
ಮರಳಿ ಮರಳಿ ತಾ ಪಡೆಯದ ಭಾಗ್ಯವು |
ಮರುಗಿದರೆ – ತನಗಾದೀತೆ ? ಅಪ
ದೂರು ಬರುವ ನಂಬಿಗೆಯನು ಕೊಟ್ಟರೆ |
ದುರ್ಜನ ಬರುವುದು ತಪ್ಪೀತೆ ||
ದೂರ ನಿಂತು ಮೊರೆಯಿಟ್ಟು ಕೂಗಿದರೆ |
ಚೋರರಿಗೆ ದಯ ಪುಟ್ಟೀತೆ |
ಜಾರನಾರಿ ತಾ ಪತಿವ್ರತೆ ಎನ್ನಲು |
ಜಾಣರಿಗೆ – ನಿಜ ತೋರೀತೆ ||
ಊರ ಬಿಟ್ಟು ಬೇರೂರಿಗೆ ಹೋದರೆ |
ಪ್ರಾರಬ್ಧವು ಬೇರಾದೀತೆ ೧
ಪಾಟುಪಡುವುದು ಪಣೆಯಲ್ಲಿರಲು |
ಪಟ್ಟಮಂಚ ತನಗಾದೀತೆ ||
ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |
ಹುಟ್ಟು ಬಂಜೆಗೆ ಮಕ್ಕಳಾದೀತೆ ?||
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |
ಬೇಟೆಗಾರಗೆ ದಯ ಪುಟ್ಟೀತೆ ||
ಕೆಟ್ಟ ಹಾವು ತಾ ಕಚ್ಚಿದ ವಿಷವದು |
ಬಟ್ಟೆಯಲೊರಸಲು ಹೋದೀತೆ ೨
ಧನಿಕನ ಕಂಡು ಪಾಡಿ ಪೊಗಳಿದರೆ |
ದಾರಿದ್ರ್ಯವು ತಾ ಹಿಂಗೀತೆ ||
ದಿನದಿನ ನೊಸಲೊಳು ನಾಮವನಿಟ್ಟರೆ |
ದೇವರಿಗೆ ತೃಪ್ತಿಯಾದೀತೆ ||
ಎಣಿಸಿಕೊಂಡು ಎಳ ಹಂಜಿಯ ನೂತರೆ |
ಅಣೆಯದ ಸಾಲವು ತೀರೀತೆ |
ಅನುದಿನದಲಿ ಶ್ರೀ ಪುರಂದರವಿಠಲನ |
ನೆನೆಯದಿದ್ದರೆ ಭವ ಹಿಂಗೀತೆ ೩

೩೪೭
ಹರಿ ನೀನೇ ಗತಿಯೆಂದು ನೆರೆನಂಬಿದವರನು
ಮರೆತಿರುವುದು ನ್ಯಾಯವೆ? ಪ
ಗರುಡಗಮನ ನೀ ಸಿರಿಲೋಲನಾರಿಗೆ |
ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯಅ.ಪ
ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ
ದೃಷ್ಟಿಯೆನ್ನೊಳಗಿದೆಯೆ?
ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ
ದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ ೧
ಭುಜಗಶಯನ ನಿನ್ನ ಭಜಕರ ಹೃದಯದಿ
ನಿಜವಾಗಿ ನೀನಿಲ್ಲವೇ?
ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ
ಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು೨
ಭಾಗವತರರಸನೆ ಯೋಗಿಗಳೊಡೆಯನೆ
ಬಾಗಿ ಬಿನ್ನಯಿಪೆ ನಿನ್ನ
ಸಾಗರ ಶಯನನೆ ನೀಗಿಸಿ ಶ್ರಮವನು
ಜಾಗು ಮಾಡದೆ ಎನ್ನ ಬೇಗದಿ ಕಾಯಯ್ಯ೩
ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |
ಎಂಟು ಮಂದಿಯ ಗರುವವನಳಿದು ||
ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |
ಉಂಟಾದ ವೈಕುಂಠ ಬಂಟನೆಂದೆನಿಸೊ೪
ಧರಣಿಯೊಳಗೆ ನೀ ಸುಜನರ ಸಲಹುವ
ಬಿರುದು ಪಡೆದವನಲ್ಲವೆ? ||
ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |
ಪರಮಪುರುಷ ಸಿರಿ ಪುರಂದರ ವಿಠಲ ೫

೨೭೪
ಹರಿಕಥಾ ಶ್ರವಣ ಮಾಡೊ – ನಿರಂತರ
ಪರಗತಿಗಿದು ನಿರ್ಧಾರ ನೋಡೊ ಪ.
ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೊರಕೀಡಾಡೊ – ಮನುಜಾ ೧
ಜ್ಞಾನ – ಭಕುತಿ – ವೈರಾಗ್ಯವೀವ ನಮ್ಮ
ಆನಂದತೀರ್ಥರ ಪಾಡೊ ಮನುಜಾ ೨
ಪರಮ ಪುರುಷ ಶ್ರೀ ಪುರಂದರವಿಠಲನ
ಚರಣ ಕಮಲಗಳ ಕೂಡೊ – ಮನುಜಾ ೩

೨೭೩
ಹರಿಕಥಾಮೃತ ಸವಿಯ ಹರಿದಾಸರಲ್ಲದೆ
ದುರುಳ ಮಾನವರದರ ಪರಿ ಬಲ್ಲಿರೇನಯ್ಯ ಪ.
ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆ
ಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||
ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆ
ಅಣಿ ಮಾಡಿಕೊಡುವ ಆ ಕರ ಬಲ್ಲುದೇನಯ್ಯ ೧
ನವನೀರದಾರ್ಭಟಕೆ ನವಿಲುಗಳು ನಲಿವಂತೆ
ಕಾವು ಕಾವೆಂಬ ಕಾಕವು ಬಲ್ಲುದೆ ? ||
ದಿವಸಕರನುದಯಿಸಲು ಅರಳುವಬ್ಜಗಳಂತೆ
ದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ ೨
ಮೊಲ್ಲೆ – ಮಲ್ಲಿಗೆ ಮುಡಿಯಬಲ್ಲ ಮಾನವರಂತೆ
ಭಲ್ಲೂಕಗಳು ಅದರ ಬಗೆ ಬಲ್ಲುವೆ ?
ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನು
ಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? ೩

೪೦
ಹರಿಕುಣಿದ – ನಮ್ಮ – ಹರಿಕುಣಿದ ಪ
ಅಕಲಂಕಚರಿತ – ಮಕರ ಕುಂಡಲಧರ |
ಸಕಲರ ಪಾಲಿಪ ಹರಿಕುಣಿದ ೧
ಅರಳೆಲೆಮಾಗಾಯಿ ಕೊರಳ ಮುತ್ತಿನಸರ |
ತರಳರ ಕೂಡಿ ತಾ ಹರಿ ಕುಣಿದ ೨
ಪರಮ ಭಾಗವತ ಪುರದೊಳಗಾಡುವ |
ಪುರಂದರವಿಠಲ ಹರಿ ಕುಣಿದ ೩

೨೭೫
ಹರಿಕೃಷ್ಣಾಚ್ಯುತ ಗೋವಿಂದ – ವಾಸುದೇವ |
ನರಹರಿ ಎನಬಾರದೆ ? ಪ.
ಉದಯಕಾಲದಿ ಏಳುತ – ಸಿರಿಯರಸನ |
ಒದಗಿ ಸೇವೆಯ ಮಾಡುತ ||
ತದನಂತರ ಭೋಜನದಲಿ ಸ್ಮರಿಸುತ |
ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ ೧
ಸಿರಿ ಬಂದಡಸಿದಾಗ – ಮೆರೆಯದಿರು |
ಹಿರಿ ಹಿರಿ ಹಿಗ್ಗದಿರು ||
ನೆರೆ ಬಡತನಕೆ ಜರ್ಜರಿತನಾದೆ ನೀನು ?
ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ೨
ದುಷ್ಟರುಪದ್ರದೊಳಾಗಲಿ – ರಣರಂಗದ |
ದಿಟ್ಟ ಸಮರದೊಳಾಗಲಿ ||
ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |
ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ ೩

೧೯೮
ಹರಿಗೆ ಸರಿ – ಮಿಗಿಲೆನಿಪರಿಲ್ಲ ದೈವಂಗಳೊಳು |
ಗುರು ಮಧ್ವರಾಯರಿಗೆ ಸರಿಯಿಲ್ಲ ರಾಯರೊಳು |
ಪರಮವೈಷ್ಣವರಿಗೆಣೆಯಿಲ್ಲ ಲೋಕದೊಳೆಂದು
ಬಿಡದೆ ಡಂಗುರವ ಹೊಯಿಸಿ ||
ಬಿರುದ ಪಸರಿಸಿ ಢಕ್ಕೆಯವ ನುಡಿಸಿ ಎನ್ನುತಲಿ |
ಶರಣು ಹೊಕ್ಕರ ಪಣೆಯ ದುರ್ಲೇಖಮಂ ತೊಡೆದು |
ಬರೆದು ವೈಷ್ಣವಲಿಪಿಯ ಶುದ್ಧಾತ್ಮರಂ
ಮಾಳ್ವ ಗುರುರಾಯರನು ಭಜಿಸಿರೈ ೧
ಭುವನ ಪಾವನರಪ್ಪ ಪೂರ್ಣಪ್ರಜ್ಞರ ಸ್ತೋತ್ರ |
ನವರತ್ನಮಾಲೆಯಿದು ಶ್ರೀ ವಿಷ್ಣುದಾಸರಿಗೆ |
ಶ್ರವಣಮಂಗಳವಪ್ಪ ತತ್ತ್ವಾಮೃತದ ಸಾರ
ಜನ್ಮ ಮೂಲೋತ್ಪಾಟನ ||
ಜವನ ಗಂಟಲನೊಡೆದು ತನ್ನ ನಿಜದಾಸರಿಗೆ |
ಧ್ರುವವಾಗಿ ಪರಮಪದವಿಯನಿತ್ತು ರಕ್ಷಿಸುವ |
ಪವನನಂತರ್ಯಾಮಿ ಪುರಂದರ ವಿಠಲನ
ತವಕದಿಂದಲಿ ಭಜಿಸಿರೈ ೯

೨೭೭
ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಪ.
ಕಾಶಿಗೆ ಹೋಗಲುಬಹುದು
ದೇಶ ತಿರುಗಲುಬಹುದು
ಆಶೆ ಸುಟ್ಟು ತಾನಿರಬಹುದು೧
ಜಪವ ಮಾಡಲುಬಹುದು
ತಪವ ಮಾಡಲುಬಹುದು
ಉಪವಾಸದಲ್ಲಿ ತಾನಿರಬಹುದು೨
ಸ್ನಾನ ಮಾಡಲುಬಹುದು
ದಾನ ಮಾಡಲುಬಹುದು
ದ್ಯಾನದಿ ಪುರಂದರವಿಠಲನ ಚರಣದಿ೩

೩೪೬
ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನು
ವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪ
ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು
ತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು೧
ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು
ಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು ೨
ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನು
ಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು ೩
ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು ೪
ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನು
ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು೫

೨೭೮
ಹರಿದಾಸರಿಗಿನ್ನು ಸರಿಯುಂಟೆ – ನರ – |
ಹರಿಯ ನಂಬಿದವರಿಗೆ ಕೇಡುಂಟೆ ಮನುಜಾ ? ಪ.
ಮಾರಿಯ ಕೈಯಲಿ ನೀರ ಹೊರಿಸುವರು |
ಘೋರ ಮಸಣಿಯಿಂದ ಕಸ ಬಳೆಸುವರು ||
ಕ್ರೂರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು |
ಜವನ ಕೈಯಲಿ ಜಂಗುಳಿ ಕಾಯಿಸುವರು ೧
ಬೊಮ್ಮ ಬೀರ ಬೇತಾಳ ಜಟ್ಟಿಗರೆಲ್ಲ |
ಕರ್ಮದ ಕಡಲೊಳು ಮುಳುಗಿರಲು ||
ಒಮ್ಮೆ ಹರಿದಾಸರ ಪಾದ ಸೋಕಲು ಬೇಗ |
ಕರ್ಮದ ಕಡಲಿಂದ ಕಡೆಹಾಯಿಸುವರು ೨
ಜಕ್ಕಣಿ ಜಲದೇವರು ಮೊದಲಾದ |
ಬಿಕ್ಕಾರಿ ದೈವವ ಪೂಜಿಸಲು ||
ಲೋಕನಾಯಕ ಸಿರಿ ಪುರಂದರವಿಠಲನ |
ಸಾಕಾರವಾದಂಥ ಪರಮ ಭಾಗವತರು ೩

೩೫೨
ಹರಿದಿನದಲಿ ಉಂಡ ನರರಿಗೆ – ಘೋರ |
ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ ಪ.
ಗೋವ ಕೊಂದ ಪಾಪ, ಸಾವಿರ ವಿಪ್ರರ |
ಜೀವಹತ್ಯದ ಮಾಡಿದ ಪಾಪವು ||
ಭಾವಜನಯ್ಯನ ದಿನದಲುಂಡವರಿಗೆ |
ಕೀವಿನೊಳಗೆ ಹಾಕಿ ಕುದಿಸುವ ಯಮನು ೧
ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |
ಅಂದಿನ ಅನ್ನವು ನಾಯ ಮಾಂಸ ||
ಮಂದರಧರನ ದಿನದಲುಂಡವರನು |
ಹಂದಿಯ ಸುಡುವಂತೆ ಸುಡುವನು ಯಮನು ೨
ಅನ್ನ – ಉದಕ ತಾಂಬೂಲ – ದರ್ಪಣಗಳು |
ಚೆನ್ನವಸ್ತ್ರಗಳೆಲ್ಲ ವರ್ಜಿತವು ||
ತನ್ನ ಸತಿಯ ಸಂಗ ಮಾಡುವ ಮನುಜನ |
ಬೆನ್ನಲಿ ಕರುಳ ಉಚ್ಚಿಸುವನು ಯಮನು ೩
ಜಾವದ ಜಾಗರ ಕ್ರತು ನಾಲ್ಕು ಸಾವಿರ |
ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||
ದೇವದೇವನ ದಿನದಿ ನಿದ್ರೆಗೈದರೆ ಹುರಿ – |
ಗಾವಿಲಿಯೊಳು ಹಾಕಿ ಹುರಿಯುವ ಯಮನು ೪
ಇಂತು ಏಕಾದಶಿ ಉಪವಾಸ ಜಾಗರ |
ಸಂತತ ಕ್ಷೀರಾಬ್ಧಿಶಯನನ ಪೂಜೆ ||
ಸಂತೋಷದಿಂದಲಿ ಮಾಡಿದ ಜನರಿಗ – |
ನಂತ ಫಲವನೀವ ಪುರಂದರವಿಠಲ ೫

ಕಂಸನ ಅನುಚರರಲ್ಲಿ ಒಬ್ಬ ರಾಕ್ಷಸ
೨೭
ಹರಿನಾಮಕೀರ್ತನೆ ಅನುದಿನ ಮಾಳ್ಪಗೆ |ನರಕ ಭಯಗಳುಂಟೆ? ಪ
ಕೇಸರಿಗಂಜದ ಮೃಗವುಂಟೆ?-ದಿ-|ನೇಶನಿಗಂಜದ ತನುವುಂಟೆ? ||
ವಾಸದೇವ ವೈಕುಂಠ ಜಗನ್ಮಯ |ಕೇಶವ ಕೃಷ್ಣ ನೀನೆಂದುಚ್ಚರಿಸುವ೧
ಕುಲಿಶವನೆದುರಿಪ ಗಿರಿಯುಂಟೆ?-ಬಲು |ಪ್ರಳಯ ಬಂದಾಗ ಜೀವಿಪರುಂಟೆ?
ಜಲಜನಾಭ ಗೋವಿಂದ ಜನಾರ್ಧನ |ಕಲುಷ ಹರಣ ಕರಿರಾಜ ರಕ್ಷಕನೆಂಬ ೨
ಗರುಡಗೆ ಅಂಜದ ಫಣಿಯುಂಟೆ? -ದ-|ಳ್ಳುರಿಯಲಿ ಬೇಯದ ತೃಣವುಂಟೆ? ||
ನರಹರಿನಾರಾಯಣ ಕೃಷ್ಣ ಕೇಶವ |ಪುರಂದರ ವಿಠಲ ನೀನೆಂದುಚ್ಚರಿಸುವ೩

ವಾಮನಾವತಾರದಲ್ಲಿ
೨೮
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮ ಭಾಗವತರು ಬಲೆಯ ಬೀಸುವರು ಪ
ಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||
ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು ೧
ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||
ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ ೨
ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||
ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು ೩
ಹರಿಯೆ………………………………………… ಪಹರಿ ನಿನ್ನ ಕೃಪೆಯೆನಗೆ ಚಂದ್ರ – ತಾರಾಬಲವು |ಹರಿ ನಿನ್ನ ಕರುಣವೇ ರವಿಯ ಬಲವು ||
ಹರಿ ನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿ ನಿನ್ನ ಮೋಹವೇ ಶನಿಯ ಬಲವು ೧
ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||
ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು ೨
ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನ ಗುಣ ಕಥನವ ||
ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮ ಪುರಂದರ ವಿಠಲ ೩

ಇವನು ಏಕಚಕ್ರನಗರದ ಅಧಿಪತಿ
೪೪
ಹರಿನಾರಾಯಣ ಹರಿನಾರಾಯಣ |ಹರಿನಾರಾಯಣ ನೆನೆ ಮನವೆ ಪ
ನಾರಾಯಣನೆಂಬ ನಾಮದ ಬೀಜವ |ನಾರದ ಬಿತ್ತಿದ ಧರೆಯೊಳಗೆ ಅ.ಪ
ತರಳಧ್ರುವನಿಂದಲಿ ಅಂಕುರಿಸಿತು ಅದು |ವರಪ್ರಹ್ಲಾದನಿಂದ ಮೊಳಕೆಯಾಯ್ತು ||
ಧರಣೀಶ ರುಕ್ಮಾಂಗದನಿಂದ ಚಿಗುರಿತು |ಕುರು ಪಿತಾಮಹನಿಂದ ಹೂವಾಯ್ತು ೧
ವಿಜಯನ ಸತಿಯಿಂದ ಫಲವಾಯ್ತು-ಅದು |ಗಜೇಂದ್ರನಿಂದ ದೋರೆ ಹಣ್ಣಾಯ್ತು ||
ದ್ವಿಜ ಶುಕಮುನಿಯಿಂದೆ ಫಲ ಪಕ್ವವಾಯಿತು |ಅಜಾಮಿಳ ತಾನುಂಡು ರಸ ಸವಿದ ೨
ಕಾಮಿತ ಫಲವೀವ ನಾಮವೊಂದಿರಲಾಗಿ |ಹೋಮ ನೇಮ ಜಪತಪವೇಕೆ ||
ಸ್ವಾಮಿ ಶ್ರೀ ಪುರಂದರವಿಠಲ ರಾಯನ |ನೇಮದಿಂದಲಿ ನೀ ನೆನೆ ಮನವೆ ೩

೨೮೦
ಹರಿಪದಯುಗಲವ ನಿತ್ಯ ನೆನೆದವೆಗೆ |
ಪರಮಪದವಿಯೇ ಸಾಕ್ಷಿ ||
ಹರಿ – ಗುರು ದೂಷಣ ಮಾಡಿದ ಮನುಜಗೆ |
ನರಕರೌರವವೆ ಸಾಕ್ಷಿ ಪ.
ಕಡುಭಕ್ತಿಯಲಿ ಕೃಷ್ಣನ ನೆನೆದರೆ |
ನಡೆಯಲಿ ಸತ್ಯವೆ ಸಾಕ್ಷಿ ||
ದೃಡ ಭಕುತಿಯಿಂದ ಉಣಬಡಿಸಿದವಗೆ |
ಷಡುರಸಾನ್ನವೇ ಸಾಕ್ಷಿ ೧
ತಾನೊಂದುಂಡು ಪರರಿಗೊಂದಿಕ್ಕುವಗೆ |
ಗುಲ್ಮರೋಗವೇ ಸಾಕ್ಷಿ ||
ಹೀನನಾಗಿ ಹಿರಿಯರನು ದೂಷಿಪಗೆ |
ಹೀನ ನರಕವೇ ಸಾಕ್ಷಿ ೨
ಕನ್ಯಾದಾನವ ಮಾಡಿದವಗೆ ದಿವ್ಯ |
ಹೆಣ್ಣಿನ ಭೋಗವೆ ಸಾಕ್ಷಿ ||
ಕನ್ಯಾದಾನವ ಮಾಡದ ಮನುಜಗೆ |
ಹೆಣ್ಣಿನ ದೈನ್ಯವೇ ಸಾಕ್ಷಿ ೩
ಅನ್ನದಾನ ಮಾಡಿದ ಮನುಜಗೆ ದಿ – |
ವ್ಯಾನ್ನವನುಂಬುದೆ ಸಾಕ್ಷಿ ||
ಅನ್ನದಾನ ಮಾಡದ ಮನುಜಗೆ ತಿರಿ –
ದುಣ್ಣುತಿರುವುದೇ ಸಾಕ್ಷಿ ೪
ಕ್ಷೇತ್ರದಾನ ಮಾಡಿದ ಮನುಜಗೆ ಏತ – |
ಛತ್ರವನಾಳ್ವುವದೆ ಸಾಕ್ಷಿ ||
ಪಾತ್ರವರಿತು ಧರ್ಮಮಾಡಿದವಗೆ ಸತ್ –
ಪುತ್ರರಾಗುವುದೆ ಸಾಕ್ಷಿ ೫
ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |
ಗಂಡನು ಕೇಳುವುದೆ ಸಾಕ್ಷಿ ||
ಪುಂಡನಾಗಿ ಪರಸ್ತ್ರೀಯರ ಸೇರುವಗೆ |
ಹೆಂಡಿರ ಕಳೆವುದೆ ಸಾಕ್ಷಿ ೬
ಭಕ್ತಿಯರಿಯದ ಅಧಮನಿಗೊಂದು |
ಕತ್ತಲಮನೆಯೇ ಸಾಕ್ಷಿ ||
ಮುಕ್ತಿಪಡೆವುದಕೆ ಪುರಂದರವಿಠಲನ |
ಭಕ್ತನಾಗುವದೆ ಸಾಕ್ಷಿ ೭

೨೮೧
ಹರಿಭಕುತಿ ಸುಖವು ಅನುಭವಿಗಲ್ಲದೆ ಮಿಕ್ಕ – |
ನರಗುರಿಗಳದರ ಸ್ವಾದವ ಬಲ್ಲವೆ ? ಪ.
ಎಸೆವ ತಂಗಿನಕಾಯ ಎತ್ತು ಮೆಲುಬಲ್ಲುದೆ ?
ರಸಭರಿತ ಖರ್ಜೂರ ಕುರಿ ಮೆಲ್ಲಬಲ್ಲುದೆ ? ||
ಹಸು ಕರೆದ ಪಾಲ ಸವಿಸುಖಿಗಳಿಗೆ ಅಲ್ಲದೆ |
ಕಸದಿ ವಸಿಸುವ ಉಣ್ಣೆಗಳು ಬಲ್ಲವೆ ? ೧
ಸರಸಿಜದ ಪರಿಮಳವ ಮಧುಕರನು ಅರಿವಂತೆ |
ನಿರುತ ಬಳಿಯೊಳಗಿರುವ ಕಷ್ಟಗಳು ಬಲ್ಲುವೆ ? |
ಸರಸ ಪಂಚಾಮೃತವ ಶ್ವಾನ ತಾ ಬಲ್ಲುವೆ ? |
ಹರಿಕಥಾ ಶ್ರವಣಸುಖ ಕತ್ತಯದು ಬಲ್ಲುದೆ ? ೨
ಅಂಧ ದೀಪದ ಬೆಳಕ ಮೂಢ ಮಾತಿನ ಸವಿಯ |
ಮಂದ ಬದಿರನು ಹಾಡ ಕೇಳಿ ಸುಖಿಸುವರೆ ? ||
ಅಂದ ಮುತ್ತಿನ ದಂಡೆ ಕಪಿಗಳಿಡಬಲ್ಲುವೆ ? |
ಮಂದಮತಿ ಪುರಂದರವಿಠಲನನು ಬಲ್ಲನೆ ? ೩

೨೮೨
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ – ಇವರು |
ನರರೆಂದು ಬಗೆವವರೆ ನರವಾಸಿಗಳು ಪ.
ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |
ಮಧುವೈರಿಗೊಲಿದ ಮನ ಮಣಿಕರ್ಣಿಕೆ ||
ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |
ವದನವು ಅಯೋಧ್ಯೆ ಪುರವಾಗಿ ಇಹುದು ೧
ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |
ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||
ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |
ಸಿರಿಧರೆಗೆ ಎರಗುವಾ ಶಿರವೆ ಬದರಿ೨
ಚಕ್ರಧರಗೆ ಪೋಪ ಚರಣ ಮಾಯಾವತಿ ತ್ರಿ – |
ವಿಕ್ರಮನ ಪೂಜಿಸುವ ಕರಿವೆ ಕಂಚಿ ||
ಅಕ್ರೂರಗೊಲಿದ ಸಿರಿ ಪುರಂದರವಿಠಲನ
ಸತ್ರ‍ಕಪೆಯು ಉಳ್ಳವರ ಅಂಗಸಾಯುಜ್ಯವು ೩

೨೮೩
ಹರಿಯ ಚರಣವೆಂಬ ಸುರಧೇನವನು
ಗುರು ಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯ ಪ.
ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿ
ರಕುತಿಯೆಂಬ ಚೆನ್ನದಳಿಯ ಹಾಕಿ ||
ಯುಕುತವಾದ ನಿತ್ಯಕಾಯ ಚರಿಗೆಯೊಳು
ಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ ೧
ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬ
ಹಮ್ಮೆಂಬ ಕುರುಳನೆ ತಾಳಿ ಹಾಕಿ ||
ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯ
ನೇಮದ ನೀರ ಬೆರಸಿ ಕಾಯಲಿಡರೊ ೨
ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆ
ಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||
ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ –
ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು ೩
ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದು
ಶರಣಮಣಿಯೆಂಬ ತುಪ್ಪವನೆ ಕಾಯಿಸಿ ||
ಮರಣವೆಂಬ ನೊರೆ ತೆಗೆದೊಗೆದು ಅಮೃತವ
ನಿರುತ ಹೃದಯವೆಂಬ ಕೊಡವನೆ ತುಂಬಿರೊ ೪
ಅನವರತ ಹರಿಸ್ಮರಣೆಯೆಂಬ ಬೀಸೂರಿಗೆ
ಅನುವಾಗಿ ಕುಳಿತುಂಡು ಸುಖದಿ ತೇಗಿ ||
ಚಿನುಮಯ ಚಿದಾನಂದ ಪುರಂದರವಿಠಲನ
ಅನುದಿನ ನೆನೆ ನೆನೆದು ಸುಖಿಯಾಗಿರಯ್ಯ ೫

೨೮೬
ಹರಿಯ ನೆನೆಯದ – ನರಜನ್ಮವೇಕೆ ? ಶ್ರೀ
ಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.
ಸತ್ಯ – ಶೌಚವಿಲ್ಲದ ಆಚಾರವೇಕೆ ?
ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?
ಭಕ್ತಿ – ಭಾನವಿಲ್ಲದ ದೇವಪೂಜೆ ಏಕೆ ?
ಉತ್ತಮರಿಲ್ಲದ ಸಭೆಯು ಇನ್ನೇಕೆ ? ೧
ಕ್ರೋಧವ ಬಿಡದಿಹ ಸಂನ್ಯಾಸವೇಕೆ ?
ಆದರವಿಲ್ಲದ ಅಮೃತಾನ್ನವೇಕೆ ?||
ವೇದ – ಶಾಸ್ತ್ರವಿಲ್ಲದ ವಿಪ್ರತನವೇಕೆ
ಕಾದಲಂಜುವನಿಗೆ ಕ್ಷಾತ್ರ ತಾನೇಕೆ ? ೨
ಸಾಲದಟ್ಟುಳಿಯೆಂಬ ಸಂಸಾರವೇಕೆ ?
ಬಾಲಕರಿಲ್ಲದ ಭಾಗ್ಯವಿನ್ನೇಕೆ ?
ವೇಳೆಗೆ ಒದಗದ ನೆಂಟರಿನ್ನೇಕೆ ? ಅನು
ಕೂಲವಿಲ್ಲದ – ಸತಿಯ ಸಂಗವೇಕೆ ೩
ಮಾತೆ – ಪಿತರ ತೊರೆದ ಮಕ್ಕಳಿನ್ನೇಕೆ ?
ಮಾತು ಕೇಳದ ಮಗನ ಗೊಡವೆ ಇನ್ನೇಕೆ ||
ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅ
ನಾಥನಾಗಿರುವಗೆ ಕೋಪವಿನ್ನೇಕೆ ? ೪
ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?
ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ಕಾಣದ ಕಂಗಳೇಕೆ ೫

೨೮೭
ಹರಿಯ ನೆನೆಯಿರೋ – ನಮ್ಮ
ಹರಿಯ ನೆನೆಯಿರೊ ಪ.
ಬರದೆ ಮಾತನಾಡಿ ಬಾಯ
ಬರಡು ಮಾಡಿ ಕೆಡಲುಬೇಡಿ ಅಪ
ನಿತ್ಯವಿಲ್ಲದೀ ಶರೀರವ |
ನಿತ್ಯವೆಂದು ನೋಡಿರಯ್ಯ ||
ಹೊತ್ತು ಕಳೆಯಬೇಡಿ ಕಾಲ |
ಮೃತ್ಯ ಬಾಹೊದೇಗಲೊ ೧
ಹಾಳು ಹರಟೆ ಮಾಡಿ ಮನವ |
ಬೀಳು ಮಾಡಿಕೊಳ್ಳ ಬೇಡಿ ||
ಏಳುದಿನದ ಕಥೆಯ ಕೇಳಿ |
ಏಳಿರಯ್ಯ ವೈಕುಂಠಕೆ೨
ಮೆಟ್ಟಿ ಪುಣ್ಯಕ್ಷೇತ್ರಗಳನು |
ಸುಟ್ಟು ಹೋಹುದು ಪಾಪ ಮನ ||
ಮುಟ್ಟಿ ಭಜಿಸಿರಯ್ಯ ಪುರಂದರ
ವಿಠಲನಾ ಚರಣವನ್ನು೩

೨೮೪
ಹರಿಯಧಿಕ ಹರನಧಿಕ ಎಂದು ಹೋರಾಡದಿರಿ |
ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ಪ.
ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ |
ಹರನೆಂದು ಅವನ ಪಿತ ತಾನೆ ಅಳಿದ ||
ಹರಿಯೆಂದ ವಿಭೀಷಣನು ಸ್ಥಿರಪಟ್ಟವೈದಿದ |
ಹರನೆಂದ ರಾವಣನು ಹತನಾದನಯ್ಯ ೧
ಹರಿಯೆಂದು ಭೀಮ ಪರಿಪೂರ್ಣಕಾಮನು ಆದ |
ಹರನೆಂದ ಆ ಜರಾಸಂಧ ಹತನಾದ ||
ಹರಿಯು ಬಾಗಿಲ ಕಾಯ್ದ ಬಲ ಭಾಗ್ಯವಂತನಾದ |
ಹರನು ಬಾಗಿಲ ಕಾಯ್ದ ಬಾಣನಳಿದ ೨
ಹರನ ವರವನು ಪಡೆದ ಭಸ್ಮಾಸುರನು ಅವನ |
ಶಿರದಲ್ಲಿ ತನ್ನ ಕರವಿಡಲು ಬರಲು ||
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು |
ವರದ ಪುರಂದರವಿಠಲ ಕಾಯ್ದುದರಿಯ ? ೩

೨೯
ಹರಿಯೆ………………………………………… ಪಹರಿ ನಿನ್ನ ಕೃಪೆಯೆನಗೆ ಚಂದ್ರ – ತಾರಾಬಲವು |
ಹರಿ ನಿನ್ನ ಕರುಣವೇ ರವಿಯ ಬಲವು ||
ಹರಿ ನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿ ನಿನ್ನ ಮೋಹವೇ ಶನಿಯ ಬಲವು ೧
ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||
ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು ೨
ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನ ಗುಣ ಕಥನವ ||
ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮ ಪುರಂದರ ವಿಠಲ ೩

೪೧
ಹರಿಯೆ, ಕುಣಿಯೆನುತ – ನರ –
ಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪ
ಲೋಕವ ತಾಳ್ದನ ಮನೆಯಲಿ ಪುಟ್ಟಿ |
ತೂಕದ ನುಡಿಗಳ ಕದ್ದವನ ||
ನಾಕರಿಸಲು ನಿಜ ಗೋಪರೂಪದಿಂದ |
ಆಕರಿಸಿದನಾ ಕುಣಿಸಿದರಯ್ಯ೧
ಎಡೆಯಿಲ್ಲದೆ ನಡೆವನ ಕೂಡಿರುವವನ |
ಹಿಡಿಲೆಂಬನ ಒಡಹುಟ್ಟಿದನ ||
ಒಡೆಯನ ಕಂದನ ವೈರಿಯ ಬಂಡಿಯ |
ಹೊಡೆದ ಮಹಾತ್ಮನ ಕುಣಿಸಿದರಯ್ಯ ೨
ಒಣಗಿದ ಮರ ಎಲೆಯಿಲ್ಲದ ಬಳ್ಳಿ |
ಬಣತಿಗೆ ಪುಟ್ಟಿದ ವನದಲ್ಲಿ ||
ಕ್ಷಣ ಮುನ್ನರಿಯದೆ ಅದರ ಆಹಾರಕೆ |
ಫಣಿಯ ಮೆಟ್ಟಿದನ ಕುಣಿಸಿದರಯ್ಯ ೩
ಮಾವನೊಡನೆ ಮನೆಮಾಡಿ ಗೋಕರ್ಣದಿ |
ಆ ವುರಗನ ಮೇಲ್ಮಲಗಿದನ ||
ಮೂವರ ಮೊಲೆಯುಂಡ ಮೂಲೋಕವರಿಯದ |
ಮೂವರಣ್ಣನೆಂದು ಕುಣಿಸಿದರಯ್ಯ ೪
ಗೋಕುಲದೊಳಗಿನ ಗೋಪಿಯರೆಲ್ಲ |
ಏಕಾಂತದಿ ತಮ್ಮೊಳು ತಾವು ||
ಶ್ರೀಕಾಂತನ ನಮ್ಮ ಪುರಂದರವಿಠಲನ |
ಏಕ ಮೂರುತಿಯೆಂದು ಕುಣಿಸಿದರಯ್ಯ ೫

೪೨
ಹರಿಯೆ ಗತಿ ಸಿರಿ ವಿರಿಂಚಿ ಶಿವರಿಗೆ ನರ -|
ಹರಿಯೆ ಗತಿ ಸುರಪತಿ ಸುರರಿಗೆ ಪ
ರುಕುಮಣಿದೇವಿಯ ಶಿಶುಪಾಲಗೀವೆನೆಂದು |
ರುಕುಮ ಸಂಭ್ರಮಿಸಲು ಕೃಷ್ಣ ಬಂದು ||
ಸಕಲ ರಾಯರುಗಳು ಸನ್ನದ್ಧರಾಗಿರೆ |
ರುಕುಮಿಣಿದೇವಿಯ ವರಿಸಿ ಆಳಿದನಾಗಿ ೧
ಹಯ್ಯಾಸನೆಂಬವ ವೇದವ ಕದ್ದೊಯ್ಯೆ |
ಹಯಗ್ರೀವನಾಗಿ ಹರಿಯವನ |
ಕಾಯವ ಖಂಡಿಸಿ ಅಜಗೆ ವೇದವನಿತ್ತು |
ಕಾಯ್ದ ಕರುಣಿ ಕಮಲಾಕ್ಷನೆ ದೈವವೆಂದು ೨
ಭಸುಮಾಸುರನಿಗೊಂದಸಮದ ವರವಿತ್ತು |
ತ್ರಿಸೂಲಧರನು ಓಡಿ ಬಳಲುತಿರೆ |
ಬಿಸಜಸಂಭವನಯ್ಯ ಭಸುಮಾಸುರನನು |
ಭಸುಮವ ಮಾಡಿ ಭಕ್ತನ ಪಾಲಿಸಿದನಾಗಿ೩
ಸುರಪನ ರಾಜ್ಯವ ಬಲಿಯಾಕ್ರಮಿಸಲು |
ಹರಿಯೆ ದಾನವ ಬೇಡಿ ನೀನವನ ||
ಧರೆಯ ಈರಡಿ ಮಾಡಿ ಪಾತಾಳಕೆ ಮೆಟ್ಟ |
ಸುರಪಗೆ ರಾಜ್ಯವನಿತ್ತು ಸಲಹಿದನಾಗಿ ೪
ಸುರ – ಭೂಸುರರನು ಅಸುರ ಬಾಧಿಸುತಿರೆ |
ಹರಿಯವತರಿಸಿ ನೀನಸುರರನು ||
ಶಿರಗಳ ಚಂಡಾಡಿ ಸುರರ ಭೂಸುರರನು
ಪೊರೆಯುತ್ತಲಿಪ್ಪ ನಮ್ಮ ಪುರಂದರವಿಠಲ ೫

೮೯
ಹರಿಯೆ ಸರ್ವೋತ್ತಮ ಹರಿಯೆ ಪರದೈವತ |
ಹರಿಯೆ ಸರ್ವಂ ವಿಷ್ಣುಮಯಂ ಜಗತು ಪ.
ಹರಿಯಲ್ಲದನ್ಯತ್ರ ದೈವಗಳುಂಟೆಂದು |
ಉರುಗನ ಮುಡಿಯನಾರಾದರೆತ್ತಲಿ ಅಪ
ಜಗಂಗಳ ಪುಟ್ಟಿಸುವ ಬೊಮ್ಮ ನಿನ್ನ ಮಗ |
ಜಗದ ಸಂಹಾರಕ ನಿನ್ನ ಮೊಮ್ಮಗನು ||
ಜಗದ ಪಾವನೆ ಭಾಗೀರಥಿ ನಿನ್ನ ಮಗಳು |
ಜಗದ ಜೀವನಮಾತೆ ನಿನ್ನರಸಿಯಲೆ ದೇವ ೧
ವಿಶ್ವತೋಮುಖ ನೀನೆ, ವಿಶ್ವತಶ್ಚಕ್ಷು ನೀನೆ |
ವಿಶ್ವತೋಬಾಹು ವಿಶ್ವ ಉದರ ನೀನೆ ||
ವಿಶ್ವವ್ಯಾಪಾರ ವಿಶ್ವಸೂತ್ರಧಾರಕ ನೀನೆ |
ವಿಶ್ವನಾಟಕ ವಿಶ್ವವಿಷ್ಣುವೇ ನಮೋ ನಮೋ ೨
ಆಗಮನಿಗಮ ಪೌರಾಣ ಶಾಸ್ತ್ರಂಗಳಿಗೆ |
ಯೋಗಿಜನಕಗಮ್ಯ ಮೂರ್ತಿ ನೀನೆ ||
ನಾಗಶಯನ ಸಿರಿ ಭೋಗಿಭೂಷಣ ವಿನುತ |
ಭಾಗವತರ ಪ್ರಿಯ ಪುರಂದರವಿಠಲ ೩

೨೮೮
ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ |
ದುರಿತಪರ್ವತ ಖಂಡಿಪುದು ವಜ್ರದಂತೆ ಪ.
ಮೇರು ಸುವರ್ಣದಾನವ ಮಾಡಲು ಪುಣ್ಯ |
ನೂರು ಕನ್ಯಾದಾನವ ಮಾಡಲು ||
ಧಾರಿಣಿಯೆಲ್ಲವ ಧಾರೆಯ ನೆರೆಯಲು ||
ನಾರಾಯಣ ಸ್ಮರಣೆಗೆ ಸರಿಬಹುದೆ ? ೧
ಹತ್ತುಲಕ್ಷ ಗೋದಾನ ಮಾಡಲು ಪುಣ್ಯ – |
ವ್ರತಗಳ ಅನುದಿನ ಆಚರಿಸಲು ||
ಶತಕೋಟಿ ಯಜ್ಞನ ಮಾಡಲು ಲಕ್ಷ್ಮೀ – |
ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ ೨
ಗಂಗೆ ಕಾಳಿಂದಿ ಗೋದಾವರಿ ಕಾವೇರಿ |
ತುಂಗಭದ್ರೆಯಲಿ ಸ್ನಾನವ ಮಾಡೆ ||
ಮಂಗಳಮೂರುತಿ ಪುರಂದರವಿಠಲ |
ರಂಗನ ಸ್ಮರಣೆಗೆ ಸರಿಯೆನ್ನಬಹುದೆ ? ೩

ನಡೆದಾಡುವಾಗ ನುಡಿಸಲು
೩೦
ಹರಿಯೆಂಬ ನಾಮಮೃತ ರುಚಿಕರವೆಲ್ಲಪರಮಭಕ್ತರಿಗಲ್ಲದೆ – ಮಿಕ್ಕ -|
ಅರಿಯದ ಕಡುಮೂರ್ಖ ಮನುಜರಿಗೆಲ್ಲ ತಾ ಹರುಷವಾಗಬಲ್ಲದೆ? ಪ
ಅಂದುಗೆ ಅರಳೆಲೆಯಿಟ್ಟರೆ ಕೋಡಗಕಂದನಾಗಬಲ್ಲದೆ? |
ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-ಜೇಂದ್ರನಾಗಬಲ್ಲದೆ? ||
ಇಂದು ಪೂರ್ಣಕಳೆಯೊಳು ತಾನು ತೋರಲು ಅಂಧ ನೋಡಬಲ್ಲನೆ? -ನಮ್ಮ- |
ಇಂದಿರೆಯರಸನ ನಾಮದ ಮಹಿಮೆಯಮಂದಜ್ಞಾನಿ ಬಲ್ಲನೆ ೧
ಪರಿಪರಿ ಬಂಗಾರವಿಟ್ಟರೆ ದಾಸಿ ತಾಅರಸಿಯಾಗಬಲ್ಲಳೆ? |
ಭರದಿಂದ ಶ್ವಾನನ ಬಾಲವ ತಿದ್ದಲುಸರಳವಾಗಬಲ್ಲದೆ? ||
ಉರಗಗೆ ಕ್ಷೀರವನೆರೆಯಲು ಅದು ತನ್ನಗರಳವ ಬಿಡಬಲ್ಲದೆ? ||
ಭರದಿಂದ ನೀಲಿಯ ಕರದಿಂದ ತೊಳೆಯಲುಕರಿದು ಹೋಗಬಲ್ಲದೆ? | ೨
ಮೋಡಕೆ ಮಯೂರ ಕುಣಿವಂತೆ ಕುಕ್ಕುಟನೋಡಿ ಕುಣಿಯಬಲ್ಲದೆ? |
ಗೋಡೆಗೆ ಎದುರಾಗಿ ನಾಟ್ಯವಾಡಲುನೋಡಿ ಸುಖಿಸಬಲ್ಲದೆ? ||
ಹಾಡಿನ ಕುಶಲತೆ ಬಧಿರನು ತಾ ಸವಿ-ಮಾಡಿ ಕೇಳಬಲ್ಲನೆ? |
ರೂಢಿಗೊಡೆಯ ನಮ್ಮ ಪುರಂದರ ವಿಠಲಮೂಢಜ್ಞಾನಿ ಬಲ್ಲನೆ೩

೨೮೫
ಹರಿಯೆನ್ನು ಹರಿಯೆನ್ನು ಹರಿಯೆನ್ನು ಪ್ರಾಣಿ
ಹರಿಯೆನ್ನದಿದ್ದರೆ ನರಹರಿಯಾಣೆ ಪ.
ಹೆಂಗಸು ಮಕ್ಕಳು ಹೆರವರು ಪ್ರಾಣಿ |
ಸಂಗಡ ಬರುವವರೊಬ್ಬರ ಕಾಣೆ ೧
ದಾನವಿಲ್ಲದ ದ್ರವ್ಯ ಗಳಿಸದೆ ಪ್ರಾಣಿ
ಪ್ರಾಣ ಹೋಗುವಾಗ ಕಾಣೆ ದುಗ್ಗಾಣೆ೨
ನೀರ ಮೇಲಿನ ಗುಳ್ಳೆ ಸಂಸಾರ ಪ್ರಾಣಿ
ಸಾರಿದ ಪುರಂದರವಿಠಲನ ವಾಣಿ೩

೩೪೮
ಹರಿಹರಿಯೆನಲಿಕ್ಕೆ ಹೊತ್ತಿಲ್ಲ-ರಂಗಯ್ಯ |
ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪ
ಧಾರಣೆಯ ಮಾಡುವಾಗ ಪಾರಣೆಯ ಚಿಂತೆ |
ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ ೧
ನಿತ್ಯ ಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |
ಎತ್ತ ನೋಡಿದರತ್ತ ಉದರದ ಚಿಂತೆ ೨
ಸ್ನಾನವನ್ನು ಮಾಡುವಾಗ ಮಾನಿನಿ ಮೇಲಿನ ಚಿಂತೆ
ದಾನವನ್ನು ಕೊಡುವಾಗ ಧನದ ಮೇಲಿನ ಚಿಂತೆ ೩
ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|
ದಾವಾಗ ನೋಡಿದರು ಪರರ ಕೇಡಿನ ಚಿಂತೆ೪
ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |
ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ೫
ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |
ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ೬

೧೫೫
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |
ಇಂದು ಬಂದ ಭಾಗ್ಯವು ನಿಜವೆ ವೆಂಕಟತಂದೆ? ಪ
ತಲೆಗೆ ಹುಲಗಲ ಹೂವ ಕಟ್ಟಿ ತುರುಗಳ ಕಾಯುತಲಿದ್ದೆ |
ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು ೧
ಒಪ್ಪಿಡಿ ಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |
ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು ೨
ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|
ಭಾಗ್ಯವಂತ ನೀನು ಪುರಂದರ ವಿಠಲ ೩

೨೮೯
ಹಿಗ್ಗುವೆಯೇಕೊ – ಏ ಮನುಜಾ
ಹಿಗ್ಗುವೆಯೇಕೊ ಅ
ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ದಗ್ಧವಾಗುವ ದೇಹಕೆಅಪ
ಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆ
ಪತವಾದಿಂದ್ರಿಯ ಪ್ರತಿಮೆಯ ದೇಹಕೆ ೧
ತೋರುವುದೊಂಬತ್ತು ದಾರಿಯ ಮಲವಾದ
ನೀರಿಲ್ಲದಿದ್ದರೆ ನಾರುವ ದೇಹಕೆ ೨
ಆಗದ ಭೋಗದ ಆಗು ಮಾಡುತಲಿಪ್ಪ
ರೋಗಬಂದರೆ ಬಿದ್ದು ಹೋಗುವ ದೇಹಕೆ ೩
ನರರ ಸೇವೆಯಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಹುಟ್ಟಿ ನರಳುವ ದೇಹಕೆ ೪
ಪುರಂದರವಿಠಲನ ಚರಣ ಕಮಲಕೆ
ಎರಗದೆ ಇರುತಿಪ್ಪ ಗುರುವಿನ ದೇಹಕೆ ೫

೩೪೯
ಹೀಗೆ ಮಾಡಬೇಕೋ-ವಿಠಲ ತಂದೆ
ಹೀಗೆ ಮಾಡಬೇಕೋ ಪ
ಹೇಗಾದರು ದುರಿತಗಳೆನ್ನ ಕಾಡದ
ಹಾಗೆ ಮಾಡ ಬೇಕೋ ಅ.ಪ
ಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮ
ಮುಂದೆ ನಾ ತಾಯ ಉದರದಲಿ ಜನಿಸದ
ಹಾಗೆ ಮಡಬೇಕೋ ವಿಠಲ ತಂದೆ ೧
ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆ
ಹೀನ ಮಾನವರಿಗೆ ನಾನು ಕೈಯಾನದ
ಹಾಗೆ ಮಾಡಬೇಕೋ – ವಿಠಲ ತಂದೆ ೨
ಕರುಣಿ ಪುರಂದರ ವಿಠಲ ತಂದೆ ನೆರೆ ನಂಬಿದೆ ನಿನ್ನ
ಶರಣ ರಕ್ಷಕನೆಂಬ ಬಿರುದು ಬೇಕಾದರೆ
ಹೀಗೆ ಮಾಡಬೇಕೋ – ವಿಠಲ ತಂದೆ ೩

೩೫೦
ಹುಚ್ಚು ಹಿಡಿಯಿತೊ – ಎನಗೆ ಹುಚ್ಚು ಹಿಡಿಯಿತು ಪ
ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ ಅ.ಪ
ವಾಸುದೇವನೆಂಬ ನಾಮ ವದನದಲಿ ಒದರುವೆ – ಮಾಯ
ಪಾಶವೆಂಬ ಬಲೆಯ ಹರಿದು ಹರಿದು ಬಿಸುಡುವೆ ||
ಕೇಶವನ ಹೂವ ಎನ್ನ ಮುಡಿಗೆ ಮುಡಿಸುವೆ – ಭವದ
ಕ್ಲೇಶವೆಂಬ ಗೋಡೆಯನ್ನು ಕೆದರಿಕೆದರಿ ಬಿಸುಡುವಂಥ ೧
ಕೃಷ್ಣನಂಘ್ರಿ ಕಮಲಗಳಲಿ ನಲಿದು ನಲಿದು ಬೀಳುವೆ – ಭವ
ಕಷ್ಟವೆಂಬ ಕುಂಭಗಳನು ಒಡೆದು ಒಡೆದು ಹಾಕುವೆ ||
ನಿಷ್ಠರನ್ನು ಕಂಡವರ ಹಿಂದೆ ಹಿಂದೆ ತಿರುಗುವೆ
ಭ್ರಷ್ಟ ಮನುಜರನ್ನು ಕಂಡು ಕಲ್ಲು ಕಲ್ಲಿಲಿಕ್ಕುವಂಥ ೨
ಮಂದಮತಿಗಳನು ಕಂಡರೆ ಮೂಕನಾಗುವೆನು – ಹರಿಯ
ನಿಂದೆ ಮಡುವವರ ಮೇಲೆ ಮಣ್ಣ ಚೆಲ್ಲುವೆ ||
ಮಂದರಾದ್ರಿಧರನ ದಿನದೊಳನಶನನಾಗುವೆ ಎನ್ನತಂದೆ ಪುರಂದರವಿಠಲನ ಪೊಗಳಿ ಪಾಡಿ ಆಡುವಂಥ ೩

೨೯೦
ಹುಚ್ಚುಕುನ್ನಿ ಮನವೇ ನೀ
ಹುಚ್ಚುಗೊಂಬುದು ಘನವೇ ಅ
ಕಚ್ಚುಕದನತನವ ಬಿಟ್ಟು
ಅಚ್ಯುತನ ಪದವ ಮುಟ್ಟು ಅಪ
ಸ್ನಾನ ಮಾಡಿದರೇನು – ಸಂ
ಧ್ಯಾನವ ಮಾಡಿದರೇನು
ಹೀನತನವ – ಬಿಡಲಿಲ್ಲ
ಸ್ವಾನುಭಾವ ಕೂಡಲಿಲ್ಲ ೧
ಜಪವ ಮಾಡಿದರೇನು – ನೀ
ತಪವ ಮಾಡಿದರೇನು
ಕಪಟ ಕಲ್ಮಷ ಕಳೆಯಲಿಲ್ಲ
ಕಾಮಿತಾರ್ಥ ಪಡೆಯಲಿಲ್ಲ ೨
ಮೂಗು ಹಿಡಿದರೇನು – ನೀ
ಮುಸುಕನಿಕ್ಕಿದರೇನು
ಭೋಗಿಶಯನು ವರ್ತಿಸಲಿಲ್ಲ
ದೇವಪೂಜೆ ಮಾಡಲಿಲ್ಲ ೩
ಗರುವನಾದರೇನು – ನೀ
ಗೊರವನಾದರೇನು
ಗುರುವಿನ ಸ್ವಾಮ್ಯವ ತಿಳಿಯಲಿಲ್ಲ
ಗುರುವುಪದೇಶ ಪಡೆಯಲಿಲ್ಲ ೪
ಹೋಮ ಮಾಡಿದರೇನು – ನೀ
ನೇಮವ ಮಾಡಿದರೇನು
ರಾಮನಾಮ ಸ್ಮರಿಸಲಿಲ್ಲ
ಮುಕುತಿ ಪಥವ ಪಡೆಯಲಿಲ್ಲ ೫
ನವದ್ವಾರವ ಕಟ್ಟು ನೀ
ನಡುವಣ ಹಾದಿಯ ಮುಟ್ಟು
ಅವಗುಣಗಳ ಬಿಟ್ಟು ಭಾನು
ಮಂಡಲ ಮನೆಯ ಮುಟ್ಟು ೬
ಏನು ನೋಡಿದರೇನು ನೀ
ನೇನ ಮಾಡಿದರೇನು
ಧ್ಯಾನವನ್ನು ಮಾಡಲಿಲ್ಲ
ಪುರಂದರ ವಿಠಲನ ಸ್ಮರಿಸಲಿಲ್ಲ ೭

ಉತ್ತರ ಪ್ರದೇಶದಲ್ಲಿರುವ
೪೫
ಹೂವ ತರುವರ ಮನೆಗೆ ಹುಲ್ಲ ತರುವ |ಅವ್ವ ಲಕುಮಿಯ ರಮಣ ಅವಗಿಲ್ಲ ಗರುವ ಪ
ಒಂದು ದಳ ಶ್ರೀ ತುಳಸಿ ಗಂಧ-ಪುಷ್ಪವ ತಂದು |ಇಂದಿರಾಕಾಂತನಿಗೆ ಅರ್ಪಿಸಿರಲು ||
ಬಂಧಗಳ ಪರಿಹರಿಸಿ ಸಿಂಧು ಶಯನನು ತನ್ನ |ಮಂದಿರದೊಳಿರಿಸಿ ಆನಂದ ವುಣಿಸುವನು ೧
ಪರಿಪರಿಯ ಪೂಜೆಗಳ ಕರಿವರದಗರ್ಪಿಸಲು |ಪರಿಪೂರ್ಣ ತಾನವನ ಕರವ ಪಿಡಿದು ||
ಸರಿಸಿಜಾಕ್ಷನು ತ್ವರದಿ ಸಾರೂಪ್ಯವನ್ನಿತ್ತು |ಮರುತನಂತರ್ಗತನು ಹರುಷದಲಿ ಪೊರೆವ ೨
ತೊಂಡರಾ ಮನೆಗಳಲಿ [ತೊಂಡು ಗೆಲಸವ ಗೈವ] |ಪಾಂಡವರ ಮನೆಯಲ್ಲಿ ಕುದುರೆಗಳ ತೊಳೆದ ||
ಅಂಡಜಾಸನ ನಮ್ಮ ಪುರಂದರ ವಿಠಲನು |ತೊಂಡರಿಗೆ ತೊಂಡನಾದ ಹಿಂಡು ದೈವದ ಗಂಡ ೩

೪೩
ಹೆಂಡಿರನಾಳುವಳೀ ಕನ್ನಿಕೆ |
ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪ
ಅಂಥಿಂಥಿವಳೆಂದು ಅಳವಡಿಸಲು ಬೇಡ |
ಇಂಥ ಸೊಬಗನಂತ ಏನೆಂಬೆನೊ ||
ಸಂತತಸುರ – ದನುಜರಿಗೆ ಪ್ರಪಂಚದಿ |
ಪಂಕ್ತಿಯೊಳಮೃತವ ಬಡಿಸಿದಳು ೧
ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |
ಅಸುಮಯಜಲದಲಿ ಮಲಗಿ ಮೈಮರೆದಳು ||
ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |
ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ ೨
ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |
ಭೋಗದ ಸೊಗತೋರಿ ಬೂದಿಯ ಮಾಡಿ ||
ಭಾಗೀರಥಿಯ ಪಿತ ಬೇಲೂರ ಚೆನ್ನಿಗ |
ಯೋಗಿ ಪುರಂದರವಿಠಲನೆಂಬ ೩

೨೯೧
ಹೆಣ್ಣ ನಿಚ್ಛಿಸುವರೆ ಮೂಢ – ಇದನು
ಕಣ್ಣು – ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.
ತಾಯಾಗಿ ಮೊದಲು ಪಡೆದಿಹುದು – ಮತ್ತೆ
ಬಾಯಯೆಂದನಿಸಿ ಕಾಮದಿ ಕೆಡಹುವುದು
ಕಾಯದಿ ಜನಿಸುತ ಬಹುದು – ಇಂತು
ಮಾಯೆಯು ನಿನ್ನ ಬಹು ವಿಧದಿ ಕಾಡುವುದು ೧
ಹಿತ ಶತ್ರುವಾಗಿ ಹೊಂದುವುದು – ನಿಮಿಷ
ರತಿಗೊಟ್ಟು ನಿತ್ಯ ಮುಕ್ತಿಯ ಸೆಳೆಯುವುದು
ಕ್ಷಿತಿಯ ಪೂಜ್ಯತೆ ಕೆಡಿಸುವುದು – ಮುಂದೆ
ಶತ ಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು ೨
ಬಗೆಯದು ತನುವೆಲುವು ನರ – ಖಂಡ – ಅದರೊ
ಳಗೆ ವಾಯುರಂದ್ರ ಕಿಸುಕುಳದ ಉದ್ಧಂಡ
ಭಗವೆಂಬುದು ಮೂತ್ರದ ಭಾಂಡ – ಆದ
ನೊಗಡಿಸದೆ ನಿಜಸುಖವಿಲ್ಲ ಕಂಡೆಯ ೩
ವಶನಾದ ವಾಲಿಯ ಕೊಲಿಸಿಹುದು – ಹೀಗೆ
ಹೆಸರು ಮಾತ್ರದಿ ದಶಶಿರನಳಿದಿಹುದು
ಶಶಿಯಂಗದಲಿ ಕ್ಷಯವಿಹುದು – ಹೀಗೆ
ಹೆಸರು ಪಡೆದ ಕೀಚಕನನಳಿದಿಹುದು ೪
ಪಶುಪತಿಯ ದೆಸೆಗೆಡಿಸಿಹುದು – ಹೀಗೆ
ವಸುಧೆಯೊಳ ಜೀವರ ಹಸಗೆಡಿಸಿಹುದು
ವಸುಧೇಶನ ನಾಮ ಮರೆಸುವುದು – ನಮ್ಮ
ಅಸಮ ಪುರಂದರವಿಠಲನ ತೊರೆಸುವುದು ೫

ಸ್ವರ್ಗವನ್ನು ಆಳುತ್ತಿದ್ದ ದೈತ್ಯ ಚಕ್ರವರ್ತಿ
೩೧
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪ
ಮಂಗಳಾಭಿಷೇಕಕೆ ಉದಕ ತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||
ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ ೧
ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||
ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು ೨
ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||
ಸಾಟಿಗಾಣದ ಸಿರಿ ಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ ೩
ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||
ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ೪
ನಿತ್ಯ ಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||
ಮುಕ್ತಿದಾಯಕ ನಮ್ಮ ಪುರಂದರ ವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ ೫

ಈ ನಗರವು ಇಂದಿನ ಗುಜರಾತದಲ್ಲಿದೆ
೩೨
ಹೇಗೆ ಉದ್ಧಾರ ಮಾಡುವನು – ಶ್ರೀ ಹರಿ |ಹೀಗೆ ದಿನಗಳೆದುಳಿದವನ ಪ
ರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪ
ಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||
ಸಿರಿ ತುಲಸಿಗೆ ನೀರನೆರೆದು ನಿರಂತರ |ಧರಿಸದೆ ಮೃತ್ತಿಕೆ ತಿರುಗುತಲಿಪ್ಪನ ||
ಮರೆತು ಸ್ನಾನ ಮನೆಮನೆ ತಿರುಗುತ ಹೊಟ್ಟಿ |ಕೆರೆದಾಗ ಬೇಯಿಸಿಕೊಂಡು ತಿನ್ನವನ ೧
ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||
ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||
ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ೨
ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||
ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||
ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ ೩

೨೯೨
ಹೇಗೆ ಮಾಡಲಿ ಮಗುವಿಗೇನಾಯಿತೊ – ಇದರ – |
ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.
ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ – |
ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |
ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |
ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ ೧
ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |
ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||
ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |
ಹಿಂಡು ಸತಿಯರ ದೃಷ್ಟಿ ಘುನವಾಯಿತೇನೊ ೨
ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |
ಕಲಕಿತದಲಿ ಎನ್ನ ಕೊಲುವುದೇಕೋ ||
ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |
ಚೆಲುವ ಸಿರಿ ಪುರಂದರವಿಠಲ ತಾ ಬಲ್ಲ ೩

೩೫೧
ಹೇಗೆ ಶ್ರೀ ಹರಿ ದಯ ಮಾಡುವನೋ-ನಮಗೆ-|
ಹೇಗೆ ಶ್ರೀಹರಿ ದಯ ಮಾಡುವನೊ ಪ
ಯೋಗಿವರೋದಿತ ಭಾಗವತಾದಿ-ಸ-|
ದಾಗ ಮಗಳನನುರಾಗದಲಿ ನೆನೆಯದಗೆ ೧
ಶಕ್ತಿಮಿರಿ ಗುರುಭಕ್ತಿಪೂರ್ವಕ ಹರಿ-|
ಭಕ್ತಿ ಇಲ್ಲದ ಕುಯುಕ್ಕಿವಂತರಿಗೆ ೨
ದಾಸದಾಸ ಎನ್ನೀಶಗೆ ಮೊರೆಯಿಡೆ |
ಲೇಸು ಕೊಡುವ ನಮ್ಮ ಪುರಂದರವಿಠಲ೩

೧೫೬
ಹೇಳಬಾರದೆ ಬುದ್ಧಿಯ – ಮಗನ ಊರ-|
ಗೂಳಿಯ ಮಾಡಿದೆನೆ ? ಪ
ಮೇಳದಿ ಓರಗೆಯವರ ಕೂಡಿಕೊಂಡು |
ಹಾಳು ಮಾಡುತಾನೆ ಗೋವಳಗೇರಿಯ ಅ.ಪ
ಅಟ್ಟದ ಮೇಲಿಟ್ಟಹ – ಚೆಟ್ಟಿಗೆ ಹಾಲು |
ಬಟ್ಟನಿಕ್ಕಿ ಚೀಪುವ ||
ದುಷ್ಟತನವ ಮಾಡಬೇಡ ಅಯ್ಯಾ ಎನೆ |
ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ ೧
ಮೊಸರ ಮಥಿಸುತಿರಲು – ಬಂದು ಕುಳಿತ |
ಹಸುಗೂಸು ಎನುತಿದ್ದೆನೆ ||
ಕುಸುಮನಾಭನು ತನ್ನ ವಶವಾಗು ಎನುತಲಿ |
ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ ೨
ಬೆಣ್ಣೆಯ ಕಂಡರಂತೂ – ಅದರರೂಪ |
ಕಣ್ಣಿಗೆ ತೋರನಲೆ ||
ಸಣ್ಣವನೆಂದು ಬಗೆದು ನಾ ಕರೆದರೆ |
ಬಣ್ಣದ ಮಾತಾಡಿ ಬಾ ಎಂದು ಕರೆವನು ೩
ಉಡುವ ಸೀರೆಯ ಕಳೆದು – ತಡಿಯಲಿಟ್ಟು |
ಮಡುವಿನೊಳ್ ಮೈದೊಳೆಯೆ ||
ದಡದಡ ಬಂದೊಯ್ದು ಕಡಹದ ಮರವೇರಿ |
ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ ೪
ಎಷ್ಟು ಹೇಳಲಿ ನಿನಗೆ – ಯಶೋದೆ ಒಂ-|
ದಿಷ್ಟು ಕರುಣವಿಲ್ಲವೆ |
ಸೃಷ್ಟಿಗೊಡೆಯ ನಮ್ಮ ಪುರಂದರ ವಿಠಲ
————————– ೫

೯೧
ಹೊಡೆಯೊ ನಗಾರಿ ಮೇಲೆ ಕೈಯ |
ಆನಂದಮದವೇರಿ ಗಡಗಡ ಪ.
ಮೃಡಸಖನ ಪಾದ ಬಿಡದೆ ಭಜಿಂಸರಫ |
ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು ೧
ವೇದಗಮ್ಯ ಸಕಾಲಾರ್ತಿನಿವಾರಕ |
ಮೋದವೀವ ಮಧುಸೂದನ ದೊರೆಯೆಂದು೨
ಗಾನಲೋಲ ತನ್ನ ಧ್ಯಾನಿಸುವರನೆಲ್ಲ |
ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು ೩
ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |
ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು ೪
ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |
ಶ್ರೀಪತಿ ಪುರಂದರವಿಠಲನು ಧಣಿಯೆಂದು ೫

೯೨
ಹೊಯ್ಯಾಲೊ ಡಂಗುರವ – ಜಗ – |
ದಯ್ಯನಯ್ಯ ಶ್ರೀ ಹರಿ ಅಲ್ಲದಿಲ್ಲವೆಂದು ಪ.
ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |
ಸೃಷ್ಟಿ – ಸ್ಥಿತಿ – ಲಯಕರ್ತನೆಂದು ||
ಗಟ್ಟಿಯಾಗಿ ತಿಳಿದು ಹರಿ ಎನ್ನದವರೆಲ್ಲ |
ಭ್ರಷ್ಟರಾದರು ಇಹ – ಪರಕೆ ಬಾಹ್ಯರು ಎಂದು ೧
ಹರಿಯೆಂಬ ಬಾಲನ ಹರಹರ ಎನ್ನೆಂದು |
ಕರುಣವಿಲ್ಲದೆ ಪಿತ ಬಾಧಿಸಲು ||
ತರಳನ ಮೊರೆ ಕೇಳಿ ನರಮೃಗರೂಪದಿ |
ಹರಿಯ ನಿಂದಕನ ಸಂಹರಿಸಿದ ಮಹಿಮೆಯ ೨
ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |
ಸುರರನು ಕರೆಯಲು ಬಲ್ಲದಿರೆ ||
ಗರುಡನನೇರದೆ ಬಂದು ಮಕರಿಯ ಸೀಳ್ದು |
ಕರಿರಾಜನ ಕಾಯ್ದ ಪರದೈವ ಹರಿಯೆಂದು ೩
ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |
ಸುರಸವು ಉದಿಸೆ ಶ್ರೀ ಹರಿಪಾದದಿ ||
ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |
ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ ೪
ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |
ಬಾಣನ ಬಾಗಿಲ ಕಾಯ್ದಿರಲು |
ದಾನವಾಂತಕ ಸಾಸಿರ ತೋಳ ಕಡಿವಾಗ |
ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು ೫
ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |
ಭಕ್ತನ ಭಯದಿಂದ ಓಡುತಿರೆ ||
ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |
ಶಕನು ಶ್ರೀಹರಿ ಅಲ್ಲದಿಲ್ಲವೆಂದು ೬
ಗರಳಜ್ವಾಲೆಗೆ ಸಿರಿರಾಮ – ರಾಮನೆಂದು |
ಸ್ಮರಿಸುತಿರಲು ಉಮೆಯರಸನಾಗ ||
ಕೊರಳು ಶೀತಲವಾಗೆ ಸಿತಿಕಂಠ ತನ್ನಯ |
ಗಿರಿಜೆಗೆ – ರಾಮಮಂತ್ರವ ಕೊಟ್ಟ ಮಹಿಮೆಯ ೭
ಹರಬ್ರಹ್ಮ ಮೊದಲಾದ ಸುರರನು ದಶಶಿರ |
ಸೆರೆಹಿಡಿದು ಸೇವೆಯ ಕೊಳುತಿರಲು ||
ಶರಧಿಯ ದಾಟಿ ರಾವಣನ ಸಂಹರಿಸಿದ |
ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು ೮
ಜಗದುದ್ಧಾರನು ಜಗವ ಪೊರೆವನೀತ |
ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||
ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |
ಜಗದ ಜನಕ ಪುರಂದರ ವಿಠಲನೆಂದು ೯

೧೫೭
ಹೊರ ಹೋಗಿ ಆಡದಿರೊ ಹರಿಯೆ-|
ಎನ್ನ ದೊರೆಯೆ ಪ
ಮನೆಯೊಳಗಾಡುವುದೆ ಚೆಂದ – ನೆರೆ-|
ಮನೆಗಳಿಗೇಕೆ ಪೋಗುವೆಯೊ ಮುಕುಂದ ||
ವನಿತೆಯರು ಮೋಹದಿಂದ – ನಿನ್ನ |
ಮನವಸಹರಿಸಿಕೊಂಬುವರೋ ಗೋವಿಂದ ೧
ಏನು ಬೇಡಿದರೂ ನಾ ಕೊಡುವೆ-ಕೆನೆ-|
ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||
ನಿನ್ನ ಗುಣಗಳನು ಕೊಂಡಾಡುವೆ – ನಿನಗೆ |
ಚಿನ್ನ ರನ್ನದ ಅಲಂಕಾರಗಳಿಡುವೆ ೨
ಹೊಲಸು ಮೈಯವನೆನ್ನುವರೊ-ದೊಡ್ಡ |
ಕುಲಗಿರಿಯನ್ನು ಪೊತ್ತವನೆನ್ನುವರೊ ||
ಬಲುಕೇಶದವನೆನ್ನುವರೊ-ಆ |
ಎಳೆಯನನೆತ್ತಿದ ಕುರೂಪಿಯೆಂಬುವರೊ ೩
ಭಿಕ್ಷೆ ಬೇಡಿದೆ ಎಂಬುವರೊ-ಭೂಮಿ |
ರಕ್ಷಿಪ ರಾಯರ ಕದಡಿದೆಯೆಂಬುವರೊ ||
ಲಕ್ಷ್ಮಿಯ ಕಳೆದೆಯೆಂಬುವರೊ——-ವೈ-|
ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ ೪
ಮಾನ ಬಿಟ್ಟವನೆನ್ನುವರೊ-ಮಹಾ |
ಹೀನರ ಬೆನ್ನಟ್ಟಿ ಹೋದನೆಂಬುವರೊ ||
ದಾನವವೈರಿಯೆಂಬುವರೊ-ಸುರ-|
ರಾನತ ಪುರಂದರವಿಠಲನೆಂಬುವರೊ ೫

೨೯೩
ಹೊಲೆಯ ಹೊರಗಹನೆ ಊರೊಳಗಿಲ್ಲವೆ
ಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.
ಭಾಳದಲಿ ಭಸಿತ ಭಂಡಾರವಿಡದವ ಹೊಲೆಯ
ಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯ
ಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯ
ಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ ೧
ಇದ್ದ ಧನ ದಾನ – ಧರ್ಮವ ಮಾಡದವ ಹೊಲೆಯ
ಕದ್ದು ತನ್ನೊಡಲ ಹೊರೆವಾತನೇ ಹೊಲೆಯ
ಬದ್ಧವಹ ನಡೆ – ನುಡಿಗಳಿಲ್ಲದಿದ್ದವ ಹೊಲೆಯ
ಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ ೨
ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯ
ಲೇಸು ಉಪಕಾರಗಳನರಿಯದವ ಹೊಲೆಯ
ಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯ
ಹುಸಿ ಮಾತನಾಡುವವನೇ ಸಹಜ ಹೊಲೆಯ ೩
ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆಇÀು
ಭಂಡ ಮಾತುಳಾಡುವವನೆ ಹೊಲೆಯ
ಗಂಡ – ಹೆಂಡಿರ ನಡುವೆ ಭೇದಗೈವವ ಹೊಲೆಯ
ಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ ೪
ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯ
ಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯ
ಅರಿತು ಆಚಾರವನು ಮಾಡದಿದ್ದವ ಹೊಲೆಯ
ಪುರಂದರವಿಠಲನನು ನೆನೆಯದವ ಹೊಲೆಯ ೫

೨೯೪
ಹೊಲೆಯ ಹೊಲತಿ ಇವರವರಲ್ಲ
ಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.
ಸತಿಯಳ ವಶನಾಗಿ ಜನನಿ – ಜನಕರಿಗೆ
ಅತಿ ನಿಷ್ಟುರ ನುಡಿವವ ಹೊಲೆಯ
ಸುತರ ಪಡೆದು ವಾರ್ಧಿಕ್ಯ ಮದವೇರಿ
ಪತಿದ್ಟೇಷ ಮಾಡುವಳೆ ಹೊಲತಿ ೧
ಗುರುಗಳಲ್ಲಿ ವಿದ್ಯೆಗಳನು ಕಲಿತು
ಹಿರಿಯರ ಬಳಲಿಸುವವ ಹೊಲೆಯ
ಪರಪುರಷಗೊಲಿದು ತನ್ನ ಪುರುಷನ
ವಿರಸವ ಮಾಡುವ ಕುಲಕೇಡಿತೆ ಹೊಲತಿ ೨
ಒಡೆಯನನ್ನವನುಂಡು ಅಡಿಗಡಿಗೆ ಬಾಯ್
ಬಿಡದೆ ತರ್ಕಿಸುವ ಜಡ ಹೊಲೆಯ
ಬಡತನ ಬಂದರೆ ಪುರುಷನ ರಚ್ಚೆಗೆ
ಬಿಡದೆ ತಹಳೆ ಶುದ್ಧ ಹೊಲತಿ ೩
ನೂರೊಂದು ಕುಲ ಕುಂಬಿಪಾಕಕಟ್ಟುವ
ಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯ
ಆರೊಳು ಕಲಹಾಪಸ್ಮಾರಿ ದುರ್ಮುಖಿಯು – ಕ
ಠೋರಕುಮತಿ ಶುದ್ಧ ಹೊಲತಿ ೪
ಅಜನುತ ಪುರಂದರವಿಠಲನ ದಾಸರ
ಭಜನೆಯ ದಾರಿಯ ಬಿಟ್ಟವ ಹೊಲೆಯ
ನಿಜವರ್ಯರಾದ ಸಜ್ಜನರ ಪಾದಪದ್ಮವ
ಭಜಿಸದಿರುವಳೆ ಶುದ್ಧ ಹೊಲತಿ ೫

ಉತ್ತರ ಪ್ರದೇಶದ ವಾರಣಾಸಿಯ
೪೬
ಹೊಸಪರಿಯೊ-ರಂಗ-ಹೊಸ ಪರಿಯೊ |ಶಶಿಧರ ವಂದ್ಯನೆ ಕುಸುಮಜ ಜನಕ ಪ
ಬೊಮ್ಮಗೆ ನೀ ಪರಬೊಮ್ಮನಾದೆಯೊ ರಂಗ |ತಮ್ಮಗೆ ನೀ ಮತ್ತೆ ತಮ್ಮನಾದೆಯೊ ರಂಗ ||
ಮಗನ ಮಗಗ ಮೊಮ್ಮಗನಾದೆಯೊ ರಂಗ |ಮಗನ ಮಗಳ ನೀ ಮದುವೆಯಾದೆಯೊ ರಂಗ ೧
ಮಾವಗೆ ನೀ ಮತ್ತೆ ಮಾವನಾದೆಯೊ ರಂಗ |ಮಾವನ ಮಗಳ ನೀ ಮದುವೆಯಾದೆಯೊ ರಂಗ ||
ಭಾವಗೆ ನೀ ಮತ್ತೆ ಭಾವನಾದೆಯೊ ರಂಗ |ಭಾವಜ ವೈರಿಗೆ ಸಖನಾದೆಯೊ ರಂಗ ೨
ಅತ್ತೆಯ ಅರ್ಥಿಯಿಂದಾಳಿದೆಯೋ ರಂಗ |ಅತ್ತೆಯ ಮಗಳ ನೀ ಮದುವೆಯಾದೆಯೊ ರಂಗ ||
ಮತ್ತೊಬ್ಬರಿಗುಂಟೆ ಈ ಪರಿ ಮಹಿಮೆಯು |ಕರ್ತೃ ಶ್ರೀ ಪುರಂದರವಿಠಲನಿಗಲ್ಲದೆ೩

೧೭೯
ಉಗಾಭೋಗ
ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ
ಮೈದೊಳೆದು ಮಡಿಯುಟ್ಟು ನಾಮಗಳಿಟ್ಟು
ಚೆಂದದಲಿ ಸಂಧ್ಯಾವಂದನೆ ಮಾಡೆ ಫಲವಹುದು
ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ
ಇಂದ್ರ ಹದಿನಾಲ್ಕು ಮನುನರಕವೆಂದು
ಅಂದು ಪುರಂದರವಿಠಲ ಪೇಳಿದನೆಂದು ಸಿದ್ಧ.

೯೮
ಉಗಾಭೋಗ
ಅಂದು ಬಾಹೋದು, ನಮಗಿಂದೇ ಬರಲಿ
ಇಂದೆ (ಇಂದು) ಬಾಹುದು ನಮಗೀಗೇ ಬರಲಿ
ಈಗ ಬಾಹೋದು ನಮಗೀಕ್ಷಣವೆ ಬರಲಿ
ಪುರಂದರವಿಠಲನ ದಯೆ(ವೊಂದು) ನಮಗಿರಲಿ.

೨೭೫
ಉಗಾಭೋಗ
ಅಚ್ಚ್ಯುತನ ಭಕುತರಿಗೆ ಮನ
ಮೆಚ್ಚದವನು ಪಾಪಿ
ಆನರನೊಳ್ ಆಡಿ ನೋಡಿ ನುಡಿಯೆ
ಮನುಜವೇಷದ ರಕ್ಕಸನೋಳ್ ಆಡಿನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚನು ಮೆಚ್ಚನು ಕಾಣೊ ಎಂದೆಂದಿಗೂ.

೨೭೬
ಉಗಾಭೋಗ
ಅಣುಕದಿಂದಾಗಲಿ ಡಂಭದಿಂದಾಗಲಿ
ಎಡಹಿದಡಾಗಲಿ ಬಿದ್ದಡಾಗಲಿ
ತಾಗಿದಡಾಗಲಿ ತಾಕಿಲ್ಲದಡಾಗಲಿ
ಮರೆದು ಮತ್ತೊಮ್ಮೆ ಆಗಲಿ
ಹರಿ ಹರಿ ಎಂದವರಿಗೆ ನರಕದ ಭಯವೇಕೆ ?
ಯಮ ಪಟ್ಟಣ ಕಟ್ಟಿದರೇನು
ಯಮ ಪಟ್ಟಣ ಬಟ್ಟ ಬಯಲಾದರೇನು?
ಹರಿದಾಸರಿಗೆ ಪುರಂದರವಿಠಲ.

೨೩೦
ಉಗಾಭೋಗ
ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ
ಜ್ಞಾನ ಸುಗುಣತತ್ತ್ವ ವೇಣುಗೋಪಾಲ ಹರೆ
ಕಾಣಿಸೊ ನಿನ್ನ ಮಹಿಮೆ ಪುರಂದರ ವಿಠಲ.

೨೩೧
ಉಗಾಭೋಗ
ಅಣುವಿಗೆ ಅಣುವಾಗಿ ಘನಕೆ ಘನವಾಗಿ
ಗುಣತ್ರಯ ತತ್ತ್ವಕ್ಕೆ ಮೀರಿದ ದೊರೆಯಾಗಿ
ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ
ಗುಣನಿಧಿ ಪುರಂದರ ವಿಠಲ ನಿನ್ನ ಮಹಿಮೆ
ಎಣಿಕೆ ಮಾಡುವರಾರು ಎನ್ನಪ್ಪನೆ.

೧೮೮
ಉಗಾಭೋಗ
ಅನಾಮಿಕಾ ಮಧ್ಯದ ಎರಡನೆಯ ಗೆರೆ ಆದಿ
ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ
ಎಣಿಸು ತರ್ಜನಿ ಮೂಲ ಪರಿಯಂತ(ರ)
ಘನ ಹತ್ತು ಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪವ.

೨೧೪
ಉಗಾಭೋಗ
ಅನುಕೂಲವಿಲ್ಲದ ಸತಿಯ ವರ್ಜಿಸಬೇಕು
ವಿನಯದಿ ಗುರು ಹಿರಿಯರ ಪೂಜಿಸಬೇಕು
ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು
ವನಜನಾಭನ ದಾಸರ ಸಂಗವಿರಬೇಕು
ನೆನೆಯುತಲಿರಬೇಕು ಪುರಂದರವಿಠಲನ.

೧೯೪
ಉಗಾಭೋಗ
ಅನ್ನ ಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನ ಪಾನಾದಿಗಳೀಯೊ ಆ ಚಂಡಾಲಸಪ್ತರಿಗೆ
ಅನ್ನ ಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ.

೨೫೪
ಉಗಾಭೋಗ
ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆ-
ಪನ್ನರಕ್ಷಕನೆ ಪರಿಪಾಲಿಸೊ ಇನ್ನು |
ಪನ್ನಂಗಶಯನ ಶ್ರೀ ಪುರಂದರ ವಿಠಲನೆ.

೧೯೦
ಉಗಾಭೋಗ
ಅಪರಾಧ ಹತ್ತಕೆ ಅಭಿಷೇಕ ಉದಕ
ಅಪರಾಧ ನೂರಕೆ ಕ್ಷೀರ ಹರಿಗೆ
ಅಪರಾಧ ಸಹಸ್ರಕೆ ಹಾಲು -ಮೊಸರು ಕಾಣೊ
ಅಪರಾಧ ಲಕ್ಷಕೆ ಜೀನು-ಘೃತ
ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ ಹತ್ತು ತೆಂಗಿನಹಾಲು
ಅಪರಾಧ ಕೋಟಿಗೆ ಅಚ್ಚ ಜಲ
ಅಪರಾಧ ಅನಂತ ಕ್ಷಮೆಗೆ ಗಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ತಾಪಸೊತ್ತಮನ ಒಲುಮೆ ವಾಕ್ಯ.

೨೫೫
ಉಗಾಭೋಗ
ಅಪಾಯ (ಕೋಟಿ) ಕೋಟಿಗಳಿಗೆ ಉಪಾಯ ಒಂದೇ
ಹರಿ ಭಕ್ತರು ತೋರಿಕೊಟ್ಟ ಉಪಾಯ ಒಂದೇ
ಪುರಂದರ ವಿಠಲನೆಂದು ಭೋರಿಟ್ಟು
ಕರೆವ ಉಪಾಯವೊಂದೇ.

೨೪೫
ಉಗಾಭೋಗ
ಅರ್ಭಕನ ತೊದಲ್ನುಡಿ (ಗೆ) ತಾಯ್ತಂದೆ (ಯರು) ಕೇಳಿ ಮನ |
ಉಬ್ಬಿ ನಲಿವಂದದಲಿ ಉರಗಶಯನ (ನೆ)
ಕೊಬ್ಬಿ ನಾನಾಡಿದರೆ ತಾಳಿ ರಕ್ಷಿಸುವ ಎನ್ನ |
ಕಬ್ಬು ಬಿಲ್ಲನಯ್ಯ ಪುರಂದರ ವಿಠಲ.

೨೧೨
ಉಗಾಭೋಗ
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಬಲ್ಲಿದರೊಳು ಸೆಣಸಿ ಮೆರೆದವ ಕೆಟ್ಟ
ಲಲ್ಲೆ ಮಾತಿನ ಸತಿಯರ ನಂಬಿದವ ಕೆಟ್ಟ
ಫುಲ್ಲನಾಭ ಸಿರಿಪುರಂದರವಿಠಲನ
ಮೆಲ್ಲಡಿಗಳ ನಂಬದವ ಕೆಟ್ಟ
ನರಗೇಡಿ-ಬಲ್ಲಿದರೊಳು ಸೆಣಸಿದವ ಕೆಟ್ಟ.

೨೧೩
ಉಗಾಭೋಗ
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ
ಎಲ್ಲರೊಳಗೆ ವಿರೋಧಿಸಿದವ ಕೆಟ್ಟ
ಬಲ್ಲಿದರೊಡನೆ ಸೆಣೆಸಾಡುವವ ಕೆಟ್ಟ
ಫುಲ್ಲನಾಭ ಶ್ರೀಪುಂದರವಿಠಲನ
ಮೆಲ್ಲಡಿಗಳನು ನಂಬದವನು ಕೆಟ್ಟ ನರಗೇಡಿ.

೨೨೪
ಉಗಾಭೋಗ
ಅಲ್ಲಿ ವನಗಳುಂಟು ಆ ಪ್ರಾಕೃತವಾದ
ಫಲ ಪುಷ್ಪಗಳಿಂದೊಪ್ಪುತ್ತಲಿಹುದು
ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ
ಕಿಲಕಿಲ ಶಬ್ದವು ರಂಜಿಸುವ ನುಡಿಗಳು
ಮುಕುತರು ಬಂದು ಜಲಕ್ರೀಡೆಗಳ ಮಾಡಿ (ಕುಳಿತು) ಸುಖಿಪರು
ಇಂಥ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು
ಪರಲೋಕ ಸುಖವೀವ ಪುರಂದರ ವಿಠಲನ
ಭಜಿಸು ಜೀವ.

೧೮೨
ಉಗಾಭೋಗ
ಆಕಳ ಕಿವಿಗೆ ಎಣ್ಣೆ ಅಂಗೈ ಹಳ್ಳವಾಗಿರಬೇಕು
ಉದ್ದು ಮುಣಗುವಂತೆ ಇರಬೇಕು
ನೀರ ಸಾಕಾಗದೆ ಹೆಚ್ಚು ಕಡಮೆ ಸಾಕೆಂಬಷ್ಟು ಕುಡಿದರೆ
ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ.

೩೦೨
ಉಗಾಭೋಗ
ಆದಿ ಸೃಷ್ಟಿಯಲಾರು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಕಾಲಾಜಯಾದಿಗಳು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಅವರಂತರಂತರ ಅವರ ನೋಡಯ್ಯ
ಅವರವರೆ ಆಧಿಕರಧಿಕರಯ್ಯ
ಪುರಂದರ ವಿಠಲನ ಸಂತತಿ ನೋಡಯ್ಯ
ಅವರವರೆ ಅಧಿಕರಧಿಕರಯ್ಯ.

೩೫
ಉಗಾಭೋಗ
ಆನೆಯನ್ನು ಕಾಯುವಾಗ ಜ್ಞಾನವಿದ್ದುದು ಏನು|
ನಾನೀಗ ಕೂಗಲು ಕೇಳದಿದ್ದುದು ಏನು |
ದಾನವಾಂತಕ ಹರಿ ದೀನರಕ್ಷಕನೆಂಬ |
ಮಾನ ಉಳಿಸಿಕೊಳ್ಳೋ ಪುರಂದರವಿಠಲ |

೧೮೪
ಉಗಾಭೋಗ
ಆಪೋಶನ ಅಭ್ಯಂಜನ ಆಚಮನ ಮಾಡಲು
ತನ್ನೆಡಗೈಯಿಂದ ತಾನೆ ವರ್ತಿಸಲು
ಆ ಪುರುಷಂಗೆ ಆದ ಪುತ್ರರು ಮಡಿವರು
ಆಪತ್ತು ತಂದು ಬಿಡುವ ಪುರಂದರವಿಠಲ.

೨೦೭
ಉಗಾಭೋಗ
ಆಯುಸ್ಸು ಇದ್ದರೆ ಅನ್ನಕ್ಕೆ ಕೊರತೆಯಿಲ್ಲ
ಜೀವಕ್ಕೆ ಎಂದೆಂದಿಗೂ ತನುಗಳ ಕೊರತೆÉಯಿಲ್ಲ
ಸಾವು-ಹುಟ್ಟು ಸಹಜವೆಂಬ ಲೋಕದೊಳಗೆ
ಕಾಲ ಕಾಲದಿ ಹರಿಯ ಕಲ್ಯಾಣ ಗುಣಗಳ
ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ.

೨೨೩
ಉಗಾಭೋಗ
ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ
ಈ ರೀತಿ ಇಪ್ಪತ್ತು ನಾಲ್ಕು ಅಕ್ಷರಗಳಿಂದ
ತೋರುತಲಿ ಗಾಯತ್ರಿಯ ರಚಿಸಿದ ಹರಿಯು
ಮೆರಿವುವೈ ಪುರುಷ ಸೂಕ್ತಾದಿ ಅನಂತವೇದರಾಶಿ
ದೊರೆ ಎಂದು ಪೊಗಳುವ ಓಂಕಾರ ಶ್ರೀಕಾರ
ಮೆರೆವುವೈ ಅಯ್ವತ್ತೊಂದು ಅಕ್ಷರಗಳು
ಈ ರೀತಿ ಅಶೇಷ ಗುಣಾಧಾರಯೆಂದು
ನಾರಾಯಣೋಥ ಪೂರ್ಣ ಗುಣಯುತ
ಭರದಿ ಜ್ಞಾನ ರೂಪ ಶಬ್ದನೊ
ಮೆರೆವ ದೇವೇಶ ಶತರ್ದನ ಧರಿಸಿದೆ
ಪುರಂದರ ವಿಠಲ.

೬೯
ಉಗಾಭೋಗ
ಆರು ಮುನಿದು ನಿಮಗೆ ಏನು ಮಾಡುವರಯ್ಯ
ಊರು ಒಲಿದು ನಮಗೇನ ಮಾಡುವುದಯ್ಯ
ಕೊಡಬೇಡ ತಮ್ಮೊಡಲಿಗೆ ತುಸುವನು
ಇಡಬೇಡ ನಮ್ಮ ಶುನಕಗೆ ತಳಿಗಿಯನು
ಆನೆಯ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ?
ದೀನ ನಾಥ ನಮ್ಮ ಪುರಂದರವಿಠಲ ಉಳ್ಳನಕ
ಆರುಮುನಿದು…………….||

೧೦೬
ಉಗಾಭೋಗ
ಆವಿನ ಕೊಂಬಿನ ತುದಿಯಲಿ ಸಾಸಿವೆ
ನಿಂತಷ್ಟು ಹೊತ್ತಾದರಾಗಲಿ
ದೇವ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ?
ಸರ್ವಕಾಲದಲ್ಲೂ ಒರಲುತ್ತ ನರಳುತ್ತ
ಹರಿ ಹರಿ ಎಂದವ ಜೀವನ್ಮುಕ್ತನೆಂಬುದು
ಏನು ಆಶ್ಚರ್ಯವಯ್ಯ ಪುರಂದರವಿಠಲ.

೧೦೭
ಉಗಾಭೋಗ
ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ಕಾಳಿದ್ದಷ್ಟೋತ್ತಾಗಲಿ
ದೇವ ನಿನ್ನ ನೆನೆದವ ಜೀವನ್ಮುಕ್ತನಲ್ಲವೇನೈ
ಸರ್ವಕಾಲದಲಿ ನರಳುತ್ತ ಹೊರಳುತ್ತ ವರಲುತ್ತ
ಶ್ರೀಹರಿ ಹರಿ ಯೆಂದವರು
ಜೀವನ್ಮುಕ್ತನೆಂಬದಕ್ಕೆ ಏನು ಆಶ್ಚರ್ಯವಯ್ಯ
ಶ್ರೀ ಪುರಂದರವಿಠಲರೇಯ.

೩೧
ಉಗಾಭೋಗ
ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ |
ನಾಡಿಗೆಂಬಾ ಚಿಂತೆ ತೊತ್ತಿಗೇಕಯ್ಯ |
ಒಡೆಯನುಳ್ಳÀನಕ ಕೊತ್ತಿಗೇತರ ಚಿಂತೆ |
ಅಡಿಗಡಿಗೆ ನಮ್ಮನಾಳವ ಕಾವ ಚಿಂತೆಯವ |
ನೊಡೆಯ ಪುರಂದರವಿಠಲರಾಯನು ಇರುತಿರೆ |
ಒಡೆಯನುಳ್ಳ ಕೊತ್ತಿಗೇತರ ಚಿಂತೆ

೨೯
ಉಗಾಭೋಗ
ಇಂದಿನ ದಿನ ಶುಭದಿನ |
ಇಂದಿನ ವಾರ ಶುಭವಾರ |
ಇಂದಿನ ತಾರೆ ಶುಭತಾರೆ |
ಇಂದಿನ ಯೋಗ ಶುಭಯೋಗ |
ಇಂದಿನ ಕರಣ ಶುಭಕರಣ |
ಇಂದಿನ ಲಗ್ನ ಶುಭಲಗ್ನ |
ಇಂದು ಪುರಂದರವಿಠಲರಾಯನ ಪಾಡಿದ |
ದಿನವೇ ಶುಭದಿನವು |

೨೮
ಉಗಾಭೋಗ
ಇಂದಿನ ದಿನವೇ ಶುಭದಿನವು |
ಇಂದಿನ ವಾರವೆ ಶುಭವಾರ |
ಇಂದಿನ ತಾರೆಯೆ ಶುಭತಾರೆ |
ಇಂದಿನ ಯೋಗವೆ ಶುಭಯೋಗ |
ಇಂದಿನ ಕರಣವೆ ಶುಭಕರಣ |
ಇಂದು ಪುರಂದರವಿಠಲರಾಯನ |
ಸಂದರುಶನ ಫಲವೆಮಗಾಯಿತ್ತು.

೩೦೮
ಉಗಾಭೋಗ
ಇಕ್ಕೊ ನಮ್ಮ ಸ್ವಾಮಿ
ಸರ್ವರಂತರ್ಯಾಮಿ
ಪ್ರಕಟ ಸಹಸ್ರನೇಮಿ
ಭಕ್ತಜನ ಪ್ರೇಮಿ
ಒಳನೋಡಿ ನಮ್ಮ ಹೊಳೆವ ಪರಬ್ರಹ್ಮ
ನರಿಯಬೇಕು ಮರ್ಮ
ವಸ್ತುವಿನ ನೋಡಿ ಸ
ಮಸ್ತ ಮನ ಮಾಡಿ
ಅಸ್ತ ವಸ್ತು ಬೇಡಿ ಸ
ಮಸ್ತ ನಿಚ ಗೂಡಿ
ಮಾಡು ಗುರುಧ್ಯಾನ
ಮುದ್ದು ಪುರಂದರ ವಿಠಲನ ಚರಣವ.