Categories
ರಚನೆಗಳು

ಪುರಂದರದಾಸರು

೯೬
ಗೋಪಿಯ ಭಾಗ್ಯವಿದು |
ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪ
ಅಂಬೆಗಾಲಿಡು ಹರಿಕುಣಿದಾಡೈ ತೋ-|
ಳಂಬಲಿ ತಾ ಹೊಂಗುಬ್ಬಿಯನು ||
ಅಂಬುಜನಾಭ ನೀನಾನೆಯನಾಡೆಂದು |
ಸಂಭ್ರಮದಿಂದ ಮುದ್ದಾಡುವಳೊ ೧
ನಿತ್ಯ ನಿರ್ಮಲನಿಗೆ ನೀರನೆರೆದು ತಂದು |
ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||
ಸತ್ಯಲೋಕವನಾಳುವ ವಿಧಿಜನಕನ |
ಪುತ್ರನೆಂದರಿತು ತಕ್ಕೈಸುವಳೊ ೨
ಪಾಲುಗಡಲು ಮನೆಯಾಗಿ ಮೂಲೋಕವ |
ಪಾಲಿಸುತಿಪ್ಪ ನಾರಾಯಣನ ||
ಕಾಲ ಮೇಲೆ ಮಲಗಿಸಿ ಬಟ್ಟಲ ತುಂಬ |
ಹಾಲು ಕುಡಿಸಿ ಸಂತೈಸುವಳೊ ೩
ಹರಿ ನಿತ್ಯ ತೃಪ್ತನೆಂದರಿಯದೆ ಹೊನ್ನಿನ |
ಹರಿವಾಣದೊಳಗೆ ಮೃಷ್ಟಾನ್ನವನು ||
ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|
ಕರೆದು ಉಣಿಸಿ ತೃಪ್ತಿ ಬಡಿಸುವಳೊ ೪
ಅಂಗಜಪಿತನಿಗೆ ಮೋಹದಿಂದ ಹೊಸ |
ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||
ಬಂಗಾರದರಳೆಲೆ ಬಿಂದುಲಿಗಳನಿಟ್ಟು |
ಸಿಂಗರವನು ಮಾಡಿ ನೋಡುವಳೊ ೫

ರಾಮನ ಪಟ್ಟಾಭಿಷೇಕದ ಕಾಲದಲ್ಲಿ
೩೬
ಗೋವರ್ಧನಗಿರಿಯ ನೆಗಹಿಬಂದು – ನೀನಿಲ್ಲಿಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ? ಪ
ಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ? ೧
ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು | ಅಸುಗುಂದಿ ಮಲಗಿದೆಯೊ- ಶ್ರೀರಂಗ ೨
ಕಡಹದ ಮರದಿಂದ ಧುಮುಕಿ ಕಾಳಿಂಗನ |ಹೆಡೆಯ ತುಳಿದು ಕಾಲ್ನೊಂದು ಮಲಗಿದೆಯೊ? ೩
ಬಾಲ ಬ್ರಹ್ಮಣನಾಗಿ ಬಲಿಯ ದಾನವ ಬೇಡಿ |ನೆಲನನಳೆದು ಕಾಲುನೊಂದು ಮಲಗಿದೆಯೊ? ೪
ಶ್ರೀಶ ಶ್ರೀರಂಗರಾಜ ಪರಮ ಪಾವನ |ಶೇಷಶಯನ ಶ್ರೀಪುರಂದರ ವಿಠಲ ೫

೧೬೩
ಗೋವಿಂದ ಎನ್ನಿರೊ – ಹರಿ ಗೋವಿಂದ ಎನ್ನಿರೊ ||
ಗೋವಿಂದನ ನಾಮವ ಮರೆಯೆದಿರಿರೊ ಪ.
ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು |
ಸಂಭ್ರಮದರಸುಗಳೈದು ಮಂದಿ ||
ಡಂಭಕತನದಿಂದ ಕಾಯುವ ಜೀವವ |
ನಂಬಿ ನಚ್ಚಿ ಕೆಡಬೇಡಿ ಕಾಣಿರೊ ೧
ನೆಲೆಯು ಇಲ್ಲದ ಕಾಯ ಎಲವಿನ ಹಂದರವು |
ಬಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು |
ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ೨
ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ |
ಹರಿಯೇ ಸರ್ವೋತ್ತಮನೆಂದೆನ್ನಿರೊ ||
ಪುರಂದವಿಠಲನ ಸ್ಮರಣೆಯ ಮಾಡಲು |
ದುರಿತ ಭಯಂಗಳ ಪರಿಹರಿಸುವುದು ೩

೧೬೪
ಗೋವಿಂದ ನಮೋ ಗೋವಿಂದ ನಮೋ ಗೋವಿಂದ – ನಾರಾಯಣ |
ಗೋವರ್ಧನ ಗಿರಿಯೆತ್ತಿದ ಗೋವಿಂದ – ನಮ್ಮ ರಕ್ಷಿಸೊ ಪ.
ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |
ಕರ್ತು ಯಮನವರೆಳೆದು ಒಯ್ಯಲು ಅರ್ಥ
– ಪುತ್ರರು ಕಾಯ್ವರೆ ೧
ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |
ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ ೨
ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |
ಬಿಡದೆ ಯಮನವರೆಳದು ಒಯ್ಯಲು ಎಡವಿ
ಬಿದ್ದಿತು ನಾಲಗೆ ೩
ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |
ಪ್ರಾಣ ಹೋಗಲು ಮುಟ್ಟಲಂಜುವಳು
ಜಾಣೆ ಕರೆದರೆ ಬಾರಳು ೪
ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |
ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು ೫
ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |
ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು ೬
ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ |
ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ ೭

೧೭೬
ಘಟಿಕಾಚಲದಿ ನಿಂತ-ಶ್ರೀ ಹನುಮಂತ ಪ
ಘಟಿಕಾಚಲದಿ ನಿಂತ-ಪಟು ಹನುಮಂತ ತನ್ನ
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ಅ.ಪ
ಚತುರ ಯುಗದಿ ತಾನು-ಮುಖ್ಯ ಪ್ರಾಣ- ಚತುರ ಮುಖನಯ್ಯನ |
ಚತುರಮೂರ್ತಿಗಳನು ಚತುರತನದಿ ಭಜಿಸಿ |
ಚತುರ್ಮುಖವಾಣಿ ಜಗಕೆ ಚತುರ್ವಿಧ ಫಲವ ಕೊಡುತ ೧
ಸರಸಿಜಭವಗೋಸುಗ- ಕರ್ಮಠ ದೂಮ ವರ ಚಕ್ರತೀರ್ಥಸರ |
ಮೆರೆವ ಛಲದಿ ನಿತ್ಯ ನರಹರಿಗೆದುರಾಗಿ
ಸ್ಥಿರ ಯೋಗಾಸನದಲಿ ಕರೆದು ವರಗಳ ಕೊಡುತ೨
ಶಂಖಚಕ್ರವ ಧರಿಸಿ-ಭಕ್ತರ ಮನಃ-ಪಂಕವ ಪರಿಹರಿಸಿ |
ಪಂಕಜನಾಭ ಶ್ರೀ ಪುರಂದರವಿಠಲನ |
ಬಿಂಕದ ಸೇವಕ ಸಂಕಟ ಕಳೆಯುತ೩

೧೬೫
ಘಾತಕರಿನ್ನೇಕೆ ಪರಮಾರ್ಥ ಶ್ರವಣ
ನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.
ಕೋತಿಗಂದಣವೇಕನಾಥನಿಗೆ ಮುನಿಸೇಕೆ ?
ಹೋತು ಕಾಳಗವಾಡೆ ಖ್ಯಾತಿಯೇಕೆ ?
ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?
ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? ೧
ದಯವಂತನಲ್ಲದಾ ದೊರೆಯ ಸೇವೆಯು ಏಕೆ ?
ಭಯವು ಉಳ್ಳವಗೆ ರಣರಂಗವೇಕೆ ?
ನಯವಾಕ್ಯವಿಲ್ಲದ – ಪುರುಷ ನಾರಿಯರೇಕೆ
ವ್ಯಯವಾದ ಧನಕಿನ್ನು ಚಿಂತೆಯೇಕೆ ? ೨
ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆ
ಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?
ಚೆಲ್ವ ಶ್ರೀ ಪುರಂದರ ವಿಠಲನ ದಯವಿರಲು
ಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ? ೩

೯೯
ಚಂದ್ರಗಾವಿಯನುಟ್ಟು ದುಂಡು ಮುತ್ತನೆ ಕಟ್ಟಿ |
ಪೆಂಡೆಯರುಳಿಯನಿಟ್ಟು ||
ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |
ಬಂದಾಳು ಬೀದಿಗಾಕೆ ಪ
ಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |
ಮೇಲಿನ ಕೇರಿಯಲಿ ||
ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |
ಹಾಲು ನಿಲ್ಲಿಸೆಂದನು ೧
ಕೊಂಡವನು ನೀನಲ್ಲ ಡಂಭಕರ ಮಾತೇಕೊ |
ಗಂಡನುಳ್ಳವಳ ಕೂಡ ||
ಮಂಡಲವಾಳುವ ಅರಸಿನ ಮುಂದೆ ಹೇಳಿ |
ದಂಡವ ತೆರಸುವೆನೊ ೨
ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |
ತಡೆದವ ನೀನಾರೊ? ||
ನಡೆ ಊರ ಮುಂದಕೆ ತಳವಾರರೈದಾರೆ |
ಗಡನೆ ಪೇಳುವೆನೆಂದಳು ೩
ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |
ಎಲ್ಲಿಹ ತಳವಾರನೆ ||
ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |
ಅಲ್ಲಲ್ಲಿ ದೊರದಿರೆ ೪
ಕೋಲು ಕೈಯಲಿ ಪಣೆಯಲಿ ಸಿರಿನಾಮವು |
ಆಲದ ಮರದಡಿಯೆ ||
ಕಾಲ ಮೊದಲು ಹಾಲ ಮಾರಿದ ಸುಂಕರೆ |
ನಿಲ್ಲೆಂದು ಸೆರಗ ಪಿಡಿದ ೫
ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |
ಅಪ್ಪಯ್ಯ ಸೆರಗ ಬಿಡೊ ||
ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|
ಮ್ಮಪ್ಪನ ಅಳಿಯ ಕಾಣೆ ೬
ಮಾವ ಸೆರಗ ಬಿಡೊ, ಭಾವ ಸೆರಗ ಬಿಡೊ |
ಭಾವಯ್ಯ ಸೆರಗ ಬಿಡೊ ||
ಮಾವನು ನಾನಲ್ಲ, ಭಾವನು ನಾನಲ್ಲ |
ಮಾವನ ಮಗನು ಕಾಣೆ ೭
ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |
ಅಣ್ಣಯ್ಯ ಸೆರಗ ಬಿಡೊ ||
ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|
ಮ್ಮಣ್ಣನ ಭಾವ ಕಾಣೆ ೮
ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |
ಕಂದಯ್ಯ ಸೆರಗ ಬಿಡೊ ||
ಕಂದನು ನಾನಲ್ಲ, ತಂದೆಯು ನಾನಲ್ಲ |
ಕಂದನ ತಂದೆ ಕಾಣೆ ೯
ನೆತ್ತಿ ಮೇಲಿನ ಕೊಡ ಎತ್ತಿ ಈಡಾಡುತ |
ಎತ್ತಿಕೊಂಡಳು ಕೃಷ್ಣನ ||
ಭಕ್ತರ ಸಲಹುವ ಪುರಂದರವಿಠಲ |
ವತ್ಸ ವೆಂಕಟರಾಯನ೧೦

೨೧೦
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾ
ನಿನಗೆ ನಮೋ ನಮೋ ಪ
ಸುಂದರ ಮೃಗಧರ ಪಿನಾಕಧರ ಹರ |
ಗಂಗಾಧರ ಗಜ ಚರ್ಮಾಂಬರಧರ ಅ.ಪ
ನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ |
ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ ||
ಅಂದು ಅಮೃತ ಘಟದಿಂದುದಿಸಿದ ವಿಷತಂದು
ಭುಂಜಿಸಿದವನು ನೀನೆ |
ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿ
ಪೊಗಳುವವ ನೀನೆ ೧
ಬಾಲಮೃಕಂಡನ ಕಾಲನು ಎಳೆವಾಗ
ಪಾಲಿಸಿದಾತನು ನೀನೆ |
ನೀಲಕಂಠ ಕಾಲಕೂಟ ವಿಷವ ಮೆದ್ದ
ಶೂಲಪಾಣಿಯು ನೀನೆ |
ವಾಲಾಯದಿ ಕಪಾಲವ ಪಿಡಿದು ಭಿಕ್ಷೆ
ಕೇಳುವ ದಿಗಂಬರ ನೀನೆ |
ಜಾಲ ಮಾಡುವ ಗೋಪಾಲನೆಂಬ
ಪೆಣ್ಣಿಗೆ ಮರುಳಾದವ ನೀನೆ ೨
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ |
ಕರದಲಿ ವೀಣೆಯ ನುಡಿಸುವ ನಮ್ಮ
ಉರಗಭೂಷಣನು ನೀನೆ ||
ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದ
ಪರಮ ವೈಷ್ಣವನು ನೀನೆ |
ಗರುಡ ಗಮನ ಶ್ರೀ ಪುರಂದರ
ವಿಠಲನ ಪ್ರಾಣ ಪ್ರಿಯನು ನೀನೆ ೩

೧೬೭
ಚಿಂತೆ ಏತಕೊ – ಬಯಲ ಭ್ರಾಂತಿ ಏತಕೊ |
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.
ಏಳುತುದಯ ಕಾಲದಲ್ಲಿ |
ವೇಳೆಯರಿತು ಕೂಗುವಂಥ ||
ಕೋಳಿ ತನ್ನ ಮರಿಗೆ ಮೊಲೆಯ |
ಹಾಲಕೊಟ್ಟು ಸಲಹಿತೆ ? ೧
ಸಡಗರದಲಿ ನಾರಿಜನರು |
ಹಡೆಯುವಾಗ ಸೂಲಗಿತ್ತಿ ||
ಅಡವಿಯೊಳಗೆ ಹೆರುವ ಮೃಗವ |
ಪಿಡಿದು ರಕ್ಷಣೆ ಮಾಳ್ಪರಾರು ೨
ಹೆತ್ತ ತಾಯಿ ಸತ್ತ ಶಿಶುವು |
ಮತ್ತೆ ಕೆಟ್ಟಿತೆಂಬರು ಜನರು ||
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ – |
ನಿತ್ತು ರಕ್ಷಣ ಮಾಡುವರಾರು ೩
ಗಟ್ಟಿಮಣ್ಣಿನ ಶಿಶುವ ಮಾಡಿ |
ಹೊಟ್ಟೆಯೊಳಗೆ ಇರಿಸುವಂಥ ||
ಕೊಟ್ಟ ದೈವ ಕೊಂಡೊಯ್ದರೆ |
ಕುಟ್ಟಿಕೊಂಡು ಅಳುವುದೇಕೆ ೪
ನಂಬಿಗೆಗಿವು ಸಾಲವೆಂದು |
ಹಂಬಲಿಪುದು ಲೋಕವೆಲ್ಲ ||
ನಂಬಿ ಪುರಂದರವಿಠಲ – |
ನೆಂಬ ನಾಮ ನುಡಿದ ಮೇಲೆ ೫

೧೬೬
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ – ಪುಣ್ಯ
ಪಾತಕಗಳನರಿಯದವ ಮನುಜನೆ ಕೃಷ್ಣ ಪ.
ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?
ಊರೊಳಗಿನಾ ಕಳ್ಳ ಅವ ಸುಜನನೆ ?
ಜಾರತನವೆಸಗುವಳು ಕುಲವನಿತೆಯಹುದೆ – ಸಂ
ಸಾರದೆಚ್ಚವಿಲ್ಲದವ ಸುಗಣನೆ ? ೧
ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?
ಕಾನನದೊಳಿಹ ಕಾಗೆ ವನವಾಸಿಯೇ ?
ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕ
ಧ್ಯಾನವನು ಮಾಡಲದು ಮೌನವೇ ಕೃಷ್ಣಾ ?೨
ತೋಳ ಅಡವಿಯಲಿರಲು ಅದು ದಿಗಂಬರನಹುದೆ ?
ಗಾಳಿಯಂಬುವ ಉರುಗ ಉಪವಾಸಿಯೇ ?
ಆಲವದು ಜಡೆಬಿಡಲು ಪರಮ ಋಷಿಯಹುದೆ – ಬಲು
ಕಾಲ ಉಳಿದ ಹದ್ದು ತಾ ಹಿರಿಯದೆ ? ೩
ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?
ಸಿಂಧುಜವು ಎನೆ ವಿಷಯ ಶೀತಕರನೆ ?
ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವು
ಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? ೪
ಮರಣಕ ಗಂಟಲನು ಮಾಡಲದು ಮಂತ್ರವೆ ?
ಗಂಡು ನೀರಲಿ ಮುಳುಗಲದು ಸ್ನಾನವೇ ?
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ತೊಂಡನಾಗದ ನರನ ಬಾಳು ಬಾಳುವೆಯೆ ? ೫

೩೦೬
ಚಿತ್ತೈಸಿದ ವ್ಯಾಸರಾಯ |
ಚಿತ್ತಜನಯ್ಯನ ಬಳಿಗೆ ಪ.
ಮುತ್ತಿ ಮುತ್ತೈದೆಯರೆಲ್ಲ
ಎತ್ತೆ ರತುನದಾರತಿಯ ಅಪ
ಹೇಮಪಿಡಿಗಳುಳ್ಳಂತಹ |
ಚಾಮರಂಗಳನು ಪಿಡಿದು ||
ಕಾಮಿನಿ ಮಣಿಯರು ಕೆಲವರು |
ಸ್ವಾಮಿಯೆಂದು ಬೀಸುತಿರೆ ೧
ಹಾಟಕದ ಬೆತ್ತನೂರು |
ಸಾಟಿಯಿಲ್ಲದಲೆ ಪಿಡಿದು ||
ನೀಟಾದ ಓಲಗದವರ |
ಕೂಟಗಳ ಮಧ್ಯದಲಿ ೨
ಸಾಧುವಿಪ್ರಜನಂಗಳು |
ವೇಧಘೋಷ ಮಾಡುತಿರೆ ||
ಮೋದದಿಂದ ಗೋವಿಂದನ |
ಸಾಧನ ಮಾರ್ಗವ ಪಿಡಿದು೩
ಭೇರಿ ತುತ್ತೂರಿ ಮೃದಂಗ |
ಮೌರಿ ಚಾರುವೇದ್ಯಂಗಳು ||
ಬಾರಿಬಾರಿಗೆ ಹೊಡೆಯೆ |
ನಾರದರು ತಾ ಕೂಡಿಯೆ |೪
ಅರವಿಂದಾಸನನಯ್ಯ |
ಪುರಂದರವಿಠಲನು||
ಸಿರಿಸಹಿತದಿ ಬಂದು |
ಕರಪಿಡಿದೆತ್ತಿದ್ದು ಕಂಡೆ ೫

೨೭೨
ಚಿಹಿ ಹಳಿ – ಥೂ ಖೋಡಿ ಪಾಪಿ ಮನವೇ ಇಂಥ-|
ಕುಹಕ ಬುದ್ಧಿಯ ನೀ ಬಿಡು ಕಾಣೋ ಮನವೇಪ
ಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |
ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||
ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |
ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ೧
ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |
ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||
ಜಗದೀಶ್ವರನ ದಿನದಿ ಜಾಗರಕೆ ಕರೆದರೆ |
ಮುಗಿಲ ಹರಿದು ಧರೆಗಿಳಿದಂತೆ ಮನವೇ ೨
ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||
ಆ ಸಮಯದಲೊಬ್ಬ ಕಾಸು ಕೊಡಲು ಅವನ |
ದಾಸಿಯ ಮಗನಂತೆ ಬೆಂಬಿಡದೆ ಮನವೇ ೩
ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |
ಕರೆಯದ ಮುನ್ನವೆ ಹೊರೆಹೊರಟೆ ||
ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |
ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ ೪
ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |
ಸಂದೇಹ ವಿಲ್ಲವಿದು ಶಾಸ್ತ್ರಸಿದ್ಧ ||
ಎಂದೆಂದಿಗೂ ನಮ್ಮ ಪುರಂದರವಿಠಲನ |
ಹೊಂದಿಹೊಂದಿ ನೀ ಸುಖಬಾಳೊ ಮನವೆ ೫

೯೭
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |
ಹಿಂಡು ಗೋಪಾಲಕರ ಕೊಂಡು ಯಮುನೆಯ ತಡಿಗೆ ಪ
ಓರೆ ತುರುಬನೆ ಕಟ್ಟಿ ಗೀರುನಾಮವನಿಟ್ಟು |
ಹಾರ ಕಂಕಣ ತೋಳಬಂದಿ ಘುಂಗುರ ಘನ-|
ಸಾರ ಕುಂಕುಮ ಕೇಸರಿಗಂಧ ಕೂಡಿಸಿ |
ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |
ಹಾರಾಡುತಲಿ ಬಂದ-ತೊಡರಗಾಲ |
ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |
ಧಾರಿಣಿಗೆ ಪುಟಿಸಿ ನಿಂದ-ವಜ್ರದ ಖಣಿ |
ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ ೧
ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |
ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |
ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆ ಅವರ |
ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |
ಕಿಂಡಿಯಿಂದಲಿ ಬಂದನು-ನಾರಿಯರ |
ಮಂಡೆಗೆ ಚೆಂಡಿಟ್ಟನು-ತೋರಿಸುವರ |
ಕಂಡು ತಾ ನಗುತಿದ್ದನು-ಕೌತುಕವೆಂದು |
ದಿಂಡೆಯರು ಮಡುವಿನೊಳಗೆ ಹಾಕಿ ನಡೆದರು ೨
ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |
ಗುಳುಗುಳಿಸುವ ವಿಷದ ಯಮುನಾ ತಡಿಯಲಿ ನಿಂದು |
ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |
ಕಳಕಳಿಸುವ ಗೋಪಾಲರಳುತಿರೆ |
ಇಳಿದ ನೀರೊಳಗಾಗಲು-ನಾಗರ ಫಣಿ |
ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |
ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |
ನಲಿದು ತಾಳವನಿಟ್ಟು ಕೊಂಡಾಡುತಿದ್ದರು ೩
ಮಗನ ಸುದ್ದಿಯ ಕೇಳಿ ಹರಿದು ಬಂದಳು ಗೋಪಿ |
ನಗರದ ಹೊರಗಾಗಿ ಬಾಯ ನಾದದಿಂದ |
ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |
ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|
ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |
ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |
ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |
ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ ೪
ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |
ಮಾನಿನಿಯರು ಬೆರಗಾಗಿ ಬೀಳುತ ಕರುವ |
ಕಾಣದಿರೆತ್ತಿಗೆ ಕರುವನು ಬಿಡುವರು |
ಆ ನಾಸಿಕದ ಮೂಗುತಿ ಕಿವಿಗಿಡುವರು |
ಧೇನು ಮೇವನೆ ತೊರೆದುವು-ಗೋವುಗಳನ್ಯ-|
ರಾಮನೆಗೋಡಿದುವು-ವತ್ಯಗಳೆಲ್ಲ |
ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |
ವೇಣುನಾದದ ಧ್ವನಿ ಕೇಳದೆ ಮೆಚ್ಚವು ೫
ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |
ತೋರುವ ಸಮಪಾದ ವಿಠಲನೆಂಬೆನೊ |
ಶ್ರೀರಮಣ ವೆಂಕಟನೆಂದು ಒದರುವೆನೊ |
ಶ್ರೀರಂಗಶಯನನೆಂದೆನಲ್ಲದೆ ನಿನ್ನ |
ಚೋರ-ಜಾರನೆಂದೆನೆ-ಹದ್ದಿನ ಮೇಲೆ |
ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |
ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |
ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ ೬
ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |
ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |
ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |
ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |
ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |
ಮನ್ನಿಸಿ ವನಕೆ ಪೋಪರೆ-ಬಲಭದ್ರ |
ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |
ಸಣ್ಣವನೆನ್ನದೆ ಹರಿಯ ಕೊಂಡಾಡಿದೆ ೭
ಎಂದ ಮಾತನು ಕೇಳುವಾ ಸಮಯ ನಾಗಿಣಿ-|
ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |
ಅಂದದ ಮೇಲುದ ಸುತ್ತಿಕೊಂಡಿರೆ ಅರ-|
ವಿಂದನಾಭಾಚ್ಯತ ಕೇಶವ ಮುರಹರ |
ಮಂದರಧರ ಹರಿಯೆ-ನಿನಗೆ ನಾವು |
ಮಂದಾಕಿನಿಯ ಸರಿಯೆ-ಮಾಂಗಲ್ಯದ |
ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|
ಯಿಂದ ಕರೆದು ನಮ್ಮ ಕಾಯಬೇಕೆಂದರು ೮
ಇಂತಿಂತು ಸ್ತವನವ ಮಾಡೆ ಕಾಳಿಂಗನ |
ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |
ಕಂತುಕ ಸಹಿತ ಪಂಕಜನಾಳವನೆ ಕೊಂಡು |
ಸಂತಸದಲಿ ಇಕ್ಕುತ-ಶೋಕದಿ ನೀವು |
ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |
ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |
ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ ೯
ಸುರರಿಗೆ ಸುಧೆ ಮುಂಚೆ ಉಣಿಸಿದ ಪರಬ್ರಹ್ಮ |
ಪರಿಪರಿ ಭೋಜನ ಮಾಳ್ಪ ಕಂಡುವರಾರು? |
ಸುರದುಂದುಭಿ ಪೊಡೆದು ಪಾರಿಜಾತದ ಮಳೆ |
ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |
ತೆರಳಿದನಾಶ್ರಮಕೆ-ಪುರಂದರವಿಠಲ |
ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |
ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ ೧೦

೯೮
ಚೆಂದವ ನೋಡಿರೆ-ಗೋಕುಲಾ-|
ನಂದನ ಮೂರುತಿಯ ಪ
ಅಂದುಗೆ ಪಾಡಗ ಗೆಜ್ಜೆಯ ಧರಿಸಿ |
ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪ
ಕೊರಳ ಪದಕಹಾರ ಬಿಗಿದು |
ತರಳರೆಲ್ಲರ ಕೂಡಿಕೊಂಡು ||
ಕುರುಳುಗೂದಲ ಅರಳೆಲೆತಿಯು |
ಮಿರು-ಮಿರುಗುತ ಮೆರೆವ ಕೃಷ್ಣನ ೧
ಉಡೆಯ ಗಂಟೆ ಘಣಘಣೆನುತ |
ನುಡಿಯೆ ಮೆಲ್ಲನೆ ಪಿಡಿದುಕೊಂಡು ||
ನಡೆದಾಡುತ ಸಡಗರದಲಿ |
ಬೆಡಗ ಮಾಡಿ ಆಡುವ ರಂಗನ ೨
ಬಲುಬಲು ಆಶ್ಚರ್ಯದಿಂದ |
ನಲಿವ ಪುರಂದರವಿಠಲರಾಯ ||
ಹಲವು ಸುಖವ ನಮಗೆ ಇತ್ತ |ಜಲಜಲೋಚನ ಬಾಲಕೃಷ್ಣನ ೩

೧೬೮
ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ
ನೀಚ ವೃತ್ತಿಗಳನು ಬಿಡು ಕಂಡೆಯ ಮನವೆ ಪ.
ಕಿವಿಗೊಟ್ಟು ಮಧುರನಾದಕೆ ಹುಲ್ಲೆಯು
ರವದ ಬಲೆಗೆ ಸಿಕ್ಕಿಬಿದ್ದುದನರಿಯ
ನವಮೋಹನಾಂಗಿಯರ ಕೋಕಿಲಾಪದ
ಸವಿ ಕೇಳದಾತನ ಕಥೆ ಕೇಳು ಮನವೇ ೧
ನಲಿದೆದ್ದು ಕರಿ ಎಳೆಯ ತೃಣ ಸ್ಪರುಷನಕಾಗಿ
ಕುಳಿಗೆ ಬಿದ್ದಿರುವುದ ಕಂಡು ಕಂಡರಿಯ
ನಳಿನಾಕ್ಷಿಯರಂಗಸಂಗವ ಮೆಟ್ಟಿ ಕೆಡದೆ ಶ್ರೀ
ಲಲನೇಶನಂಘ್ರಿಯಾನಪಿವೇಕೋ ಮನವೇ ೨
ಗಾಣದ ತುದಿಯ ಮಾಂಸವ ಮೆಲುವ ಮತ್ಸ್ಯವು
ಪ್ರಾಣವ ಬಿಡುವುದ ಕಂಡು ಕಂಡರಿಯ ?
ಮಾನಿನಿಯ ಬಯಸದೆ ಶ್ರೀ ನಾರಾಯಣನ
ಧ್ಯಾನಾಮೃತವನು ಸವಿದುಣ್ಣೋ ಮನವೆ೩
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದು
ಕಣ್ಣುಗೆಡುವುದನು ಕಂಡು ಕಂಡರಿಯ ?
ಬಣ್ಣರ ಬಾಲೆಯರ ರೂಪಕೆ ಮರುಳಾಗಿ
ಮಣ್ಣು ತಿನ್ನದೆ ಮಾರನಯ್ಯನ ನೆನೆ ಮನವೆ ೪
ಅಳಿ ಪರಿಮಳನಾಗಿ ಕಮಲದೊಳಗೆ ಸಿಲುಕಿ
ಅಳಿದು ಹೋಹುದನು ಕಂಡ ಕಂಡರಿಯ ?
ಬಳಲದೆ ವರಪುರಂದರ ವಿಠಲನಂಘ್ರಿಯ
ತುಳಸಿ ನಿರ್ಮಾಲ್ಯವಾಫ್ರಾಣಿಸು ಮನವೆ೫

೧೦೦
ಜಗದುದ್ಧಾರಕ ತನ್ನ ಮಗನೆಂದು ಬಗೆದು |
ನಿಗಮಗೋಚರನ ಆಡಿಸಿದಳು ಯಶೋದೆ ಪ
ವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-
ಗುಟವ ಪೀರುವನ-ಆಡಿಸಿದಳು೧
ವಿಶ್ವತಶ್ಚಕ್ಷುವ ವಿಶ್ವತೋಮುಖನ |
ವಿಶ್ವವ್ಯಾಪಕನ-ಆಡಿಸಿದಳು ೨
ಅಣೋರಣಿಯನ ಮಹತೋಮಹೀಯನ |
ಗಣನೆಯಿಲ್ಲದವನ-ಆಡಿಸಿದಳು೩
ನಿಗಮಕೆ ಸಿಲುಕದ ಅಗಣಿತ ಮಹಿಮನ |
ಮಗುಗಳ ಮಾಣಿಕ್ಯನ-ಆಡಿಸಿದಳು ೪
ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |
ವಲ್ಲಭ ಪುರಂದರವಿಠಲನ-ಆಡಿಸಿದಳು ೫

೨೭೩
ಜಯ ಪಾಂಡುರಂಗ – ನಾ ನಿನ್ನ ಮನಕೆ ಬಾರೆನೆ ಪ
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದ
ಬಲೆಯೊಳು ಸಿಲುಕುವೆನೆ – ಜಯ ಪಾಂಡುರಂಗ ಅ.ಪ
ಕೆಟ್ಟ ಕಿರಾತನ ಬೆಟ್ಟದಂಥ ಪಾಪವ
ಸುಟ್ಟು ವಾಲ್ಮೀಕಿ ಮುನಿಯೆನಿಸಿದೆ ೧
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆ
ಅಂತಕನ ಬಾಧೆಯ ಬಿಡಿಸಿದೆಯೊ ೨
ತಂದೆ ತಾಯ್ಗಳನು ತೊರೆದ ಧ್ರುವನಿಗೆ
ಚೆಂದದಿಂದ ಮಾರ್ಗವ ತೋರಿದೆಯೊ ೩
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿ
ಶಂಕೆಯಿಲ್ಲದೆ ಅವಳ ಕೂಡಿದೆಯೊ ೪
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದು
ಮತ್ತವಗೆ ಮುಕ್ತಿಯ ತೋರಿದೆಯೊ ೫
ಐದು ಮಂದಿಯ ಕೂಡ ಸರಸವು ದ್ರೌಪದಿಗೆ
ಐದೆ ಲಜ್ಜೆಯ ಕಾಯ್ದೆಯೊ ೬
ದೀನರನುದ್ಧರಿಪ ಪುರಂದರ ವಿಠಲ
ಏನು ಕಾರಣ ನನ್ನ ಮರೆತೆಯೊ ೭

೩೪೩
ಜಯಜಯ ಶ್ರೀ ರಾಮ ನಮೋ |
ಜಯ ಜಯ ಶ್ರೀ ಕೃಷ್ಣ ನಮೋ ಪ.
ಸಿರಿಯರಸನು ಶೃಂಗಾರವ ಮಾಡಿ |
ಸಿರಿಗಂಧವನೆ ಹಣೆಗಿಟ್ಟು ||
ತರುಣ ತುಳಸಿ ವನಮಾಲೆಯ ಧರಿಸಿ |
ಹರಿ ತುರುಕಾಯಲು ಹೊರಗೆ ಹೊರಟನು ೧
ಹೊತ್ತು ಹೋಯಿತು ತುರು ಬಿಡಿಯೆನ್ನುತ |
ಸಾತ್ತ್ವತ ನುಡಿದನು ಗೋಪಿಯೊಡನೆ ||
ತುತ್ತುರು ತುತ್ತುರು ತುರುತುರುಯೆನ್ನುತ |
ಒತ್ತಿ ಸ್ವರಗಳನು ಪೊಂಗೊಳಲೂದುತ ೨
ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |
ಒನಕೆಯಿಂದ ಓಗರ ಹದನೋಡಿ ||
ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |
ವನಕೆ ಹೋಗಲೆಂದು ಹೊರಗೆ ಹೊರಟಳು ೩
ಹರಿಸ್ವರವೆನ್ನುತ ಒಬ್ಬಳು ಕೇಳಿ
ನೆರೆಮನೆಗೆ ಹೋಗಿ ಕಡ ಕೇಳಿದಳು ||
ಒರಳು ಕೊಡುವಿರಾ ಅರಸಿನ ಅರೆದು |
ಮರಳಿ ಬೇಗ ತಂದೀವೆನೆನುತಲಿ ೪
ಹಸುವಿಗೆ ಇಟ್ಟಲು ಹಾಲು ಓಗರ |
ಬಿಸಿಮಡ್ಡಿಯ ಗಂಡಗೆ ಚಾಚಿ ||
ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿ
ಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು ೫
ಗಿಳಿಗೆ ಹಾಸಿದಳು ಹಾಸು ಮಂಚವನು |
ಅಳಿಯನ ಪಂಜರದೊಳಗಿರಿಸಿ ||
ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ – |
ಲೊಳಗೆ ಎಡೆಯನು ಮಾಡಿದಳೊಬ್ಬಳು ೬
ಅಟ್ಟವೆಂದು ಹತ್ತಿ ಅಗಳಿಯ ಮೇಲೇ
ಇಟ್ಟಳು ಸಾದೆಂದು ಸಗಣಿಯನು ||
ಕಟ್ಟಬಾಯಿಗೆ ಕಾಡಿಗೆ ಹಚ್ಚಿ |
ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು ೭
ಅಂಗನೆ ಚೌರಿಯು ಕಾಲಿಗೆ ತಗುಲಿಸಿ |
ಮುಂಗೈಯಲಿ ತಾಳಿಯ ಬಿಗಿದು ||
ಸಿಂಗರ ಸರವನು ನಡುವಿಗೆ ಕಟ್ಟಿ |
ರಂಗನ ಸ್ಮರಿಸುತ ಹೊರಟಳೊಬ್ಬಳು ೮
ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |
ಗಟ್ಟಿ ಕಂಕಣವ ಕಿವಿಗಿಟ್ಟು ||
ತೊಟ್ಟಿಲೊಳಗೆ ಶಿಶು ಅಳುವುದ ಕಂಡು |
ಕಟ್ಟಿದ ನೆಲುವನು ತೂಗಿದಳೊಬ್ಬಳು ೯
ತರುಣಿಯೊಬ್ಬ ಸಂನ್ಯಾಸಿಯ ಕಂಡು |
ನೆರೆಮನೆ ಕೂಸೆಂದೆತ್ತ ಬರಲು ||
ಅರಿದಾವ ಗಾಳಿ ಸೋಕಿತೆನುತಲಿ |
ಪುರಂದರವಿಠಲನು ನಗುತಿದ್ದನು ಸಖಿ ೧೦

೩೦೭
ಜಯಮಂಗಳಂ ನಿತ್ಯ ಶುಭಮಂಗಳಂ
ಜಯ ತುಂಗ ಲಕ್ಷ್ಮೀಪತಿ ನರಸಿಂಹಗೆ ಪ.
ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆ
ಮಂದರೋದ್ಧಾರ ಮಧುಸೂದನನಿಗೆ ||
ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ –
ಇಂದಿರಾ ರಮಣ ಸರ್ವೋತ್ತಮನಿಗೆ ೧
ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆ
ಸರಸಿಜೋದ್ಭವ – ಭವವಂದ್ಯ ಹರಿಗೆ ||
ಗಿರಿಯರಸು ಕಾವೇರಿಪುರದ ರಂಗಯ್ಯಗೆ
ಗಿರಿರಾಜಪತಿವಂದ್ಯ ಸುರರ ನಿಧಿಗೆ ೨
ಅಂಬರೀಷನ ಶಾಪ ಅಪಹರಿಸಿದವನಿಗೆ
ತುಂಬುರ ನಾರದ ಮುನಿವಂದ್ಯಗೆ ||
ಕಂಬುಕಂಧರ ಪುರಂದರ ವಿಠಲರಾಯಗೆ
ಅಂಬುಜನಾಭಗೆ ಅಜನಪಿತಗೆ ೩

ಜಯಮಂಗಳಂ ನಿತ್ಯ ಶುಭಮಂಗಳಂ ಪ.
ದುರುಳತಮ ವೇದವನು ಕದ್ದು ವಾತಾಳದಲಿ
ಇರಲವನ ಕೊಂದು ವೇದಾವಳಿಗಳ
ಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲ
ಪೊರೆದ ಶ್ರೀ ವತ್ಸಾವತಾರಿ ಹರಿಗೆ ೧
ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆ
ಗಿರಿಮುಳಗಿ ಪಾತಳಕಿಳಿದು ಪೋಗೆ
ಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತು
ಸುರರ ಸಂರಕ್ಷಿಸಿದ ಶ್ರೀ ಕೂರ್ಮ ಹರಿಗೆ ೨
ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿ
ಭೀಮ ವಿಕ್ರಮನು ಪಾತಾಳಕೊಯ್ಯು
ತಾಮರಸ ಸಂಭವನು ಬಿನ್ನೈಸಲವನಳಿದು
ಭೂಮಿಯನು ತಂದು ಶ್ರೀ ಭೂ ವರಾಹನಿಗೆ ೩
ಪರಮ ಭಾಗವತ ಪ್ರಲ್ಹಾದನ ಹಿರಣ್ಯಕನು
ಪರಿಪರಿಯ ಭಾದೆಯಿಂದಲಿ ಪೀಡಿಸಿ
ಕರುಣಾಳು ಕೋಪದಲಿ ದೈತ್ಯನುದರವ ಬಗೆದ
ಶರಣ ರಕ್ಷಕನಾದ ಶ್ರೀ ನರಸಿಂಹಗೆ ೪
ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲು
ಇಳೆಯನಳೆದವನ ಸುತಳಕೆ ಕಳುಹಿಸಿದ
ಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀ
ಬಲವಂಥ ಹರಿ ವಾಮಾನಾವತಾರನಿಗೆ ೫
ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ
ಕೀರ್ತಿಯನು ಲೋಕದೊಳು ವಿಸ್ತರಿಸಿದ
ಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆ
ಆರ್ತಬಾಂಧವಗೆ ಭಾರ್ಗವ ರಾಮಗೆ ೬
ದಶರಥನ ಮನೆಯುದ್ಭವಿಸಿ ಆ ರಾವಣನ
ದಶಶಿರವ ನೀಡಾಡಿ ಅವನನುಜಗೆ
ವಸುಧಾಧಿಪತ್ಯವನು ಲಂಕೆಯೊಳಗವಗಿತ್ತ
ಅಸಮವಿಕ್ರಮ ರಾಮಚಂದ್ರ ಹರಿಗೆ ೭
ಯದುಕುಲದಿ ತಾ ಬಂದು ಕೊಂದು ಕಂಸನನಂದು
ಮುದದಿಂದ ಪಾಂಡವರನುದ್ಧರಿಸಿದ
ಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತು
ಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ ೮
ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವ
ಅಪಹರಿಸಿ ದಿವ್ಯ ಮೋಹಕರೂಪದಿ
ತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತ
ಅಪರಮಿತ ಬುದ್ಧಾವತಾರ ಹರಿಗೆ ೯
ಕರಿಯುಗದ ಕಡಯಲಿ ಖಲನೃಪರನೆಲ್ಲರನು
ತುಳಸಿ ಕುದುರೆಯ ಖುರದ ಪುಟಗಳಿಂದ
ಸುಲಭದಿಂ ನಡೆಸುತೀ ಕೃತಯುಗದ ಧರ್ಮವನು
ಒಲಿದಂಥ ಕಲ್ಕಿಯವತಾರ ಹರಿಗೆ ೧೦
ಮಂಗಳ ಪದಂಗಳನು ಭಕ್ತಿಯಲಿ ಮೋಹನತ
ರಾಂಗನೆಯರೆಲ್ಲ ರಾಗದಿ ಪಾಡುತ
ಮಂಗಳಾತ್ಮಕಗೆ ಸಿರಿ ಪುರಂದರವಿಠಲಗೆ
ಅಂಗನೆಯರೆಲ್ಲ ಆರತಿಯೆತ್ತಿರೆ ೧೧

ಜಯಮಂಗಳಂ ನಿತ್ಯ ಶುಭಮಂಗಳಂ ಪ.
ದುರುಳತಮ ವೇದವನು ಕದ್ದು ವಾತಾಳದಲಿ
ಇರಲವನ ಕೊಂದು ವೇದಾವಳಿಗಳ
ಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲ
ಪೊರೆದ ಶ್ರೀ ವತ್ಸಾವತಾರಿ ಹರಿಗೆ ೧
ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆ
ಗಿರಿಮುಳಗಿ ಪಾತಳಕಿಳಿದು ಪೋಗೆ
ಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತು
ಸುರರ ಸಂರಕ್ಷಿಸಿದ ಶ್ರೀ ಕೂರ್ಮ ಹರಿಗೆ೨
ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿ
ಭೀಮ ವಿಕ್ರಮನು ಪಾತಾಳಕೊಯ್ಯು
ತಾಮರಸ ಸಂಭವನು ಬಿನ್ನೈಸಲವನಳಿದು
ಭೂಮಿಯನು ತಂದು ಶ್ರೀ ಭೂ ವರಾಹನಿಗೆ೩
ಪರಮ ಭಾಗವತ ಪ್ರಲ್ಹಾದನ ಹಿರಣ್ಯಕನು
ಪರಿಪರಿಯ ಭಾದೆಯಿಂದಲಿ ಪೀಡಿಸಿ
ಕರುಣಾಳು ಕೋಪದಲಿ ದೈತ್ಯನುದರವ ಬಗೆದ
ಶರಣ ರಕ್ಷಕನಾದ ಶ್ರೀ ನರಸಿಂಹಗೆ೪
ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲು
ಇಳೆಯನಳೆದವನ ಸುತಳಕೆ ಕಳುಹಿಸಿದ
ಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀ
ಬಲವಂಥ ಹರಿ ವಾಮಾನಾವತಾರನಿಗೆ೫
ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ
ಕೀರ್ತಿಯನು ಲೋಕದೊಳು ವಿಸ್ತರಿಸಿದ
ಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆ
ಆರ್ತಬಾಂಧವಗೆ ಭಾರ್ಗವ ರಾಮಗೆ೬
ದಶರಥನ ಮನೆಯುದ್ಭವಿಸಿ ಆ ರಾವಣನ
ದಶಶಿರವ ನೀಡಾಡಿ ಅವನನುಜಗೆ
ವಸುಧಾಧಿಪತ್ಯವನು ಲಂಕೆಯೊಳಗವಗಿತ್ತ
ಅಸಮವಿಕ್ರಮ ರಾಮಚಂದ್ರ ಹರಿಗೆ೭
ಯದುಕುಲದಿ ತಾ ಬಂದು ಕೊಂದು ಕಂಸನನಂದು
ಮುದದಿಂದ ಪಾಂಡವರನುದ್ಧರಿಸಿದ
ಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತು
ಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ೮
ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವ
ಅಪಹರಿಸಿ ದಿವ್ಯ ಮೋಹಕರೂಪದಿ
ತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತ
ಅಪರಮಿತ ಬುದ್ಧಾವತಾರ ಹರಿಗೆ೯
ಕರಿಯುಗದ ಕಡಯಲಿ ಖಲನೃಪರನೆಲ್ಲರನು
ತುಳಸಿ ಕುದುರೆಯ ಖುರದ ಪುಟಗಳಿಂದ
ಸುಲಭದಿಂ ನಡೆಸುತೀ ಕೃತಯುಗದ ಧರ್ಮವನು
ಒಲಿದಂಥ ಕಲ್ಕಿಯವತಾರ ಹರಿಗೆ೧೦
ಮಂಗಳ ಪದಂಗಳನು ಭಕ್ತಿಯಲಿ ಮೋಹನತ
ರಾಂಗನೆಯರೆಲ್ಲ ರಾಗದಿ ಪಾಡುತ
ಮಂಗಳಾತ್ಮಕಗೆ ಸಿರಿ ಪುರಂದರವಿಠಲಗೆ
ಅಂಗನೆಯರೆಲ್ಲ ಆರತಿಯೆತ್ತಿರೆ ೧೧

ಜಯಮಂಗಳಂ ನಿತ್ಯ ಶುಭಮಂಗಳಂ || ಪ.
ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |
ಗೋವರ್ಧನೋದ್ಧಾರ ಗೋವಿಂದಗೆ ||
ಮಾವ ಕಂಸನ ಕೊಂದು ಮಕರಕುಂಡಲ ಧರಿಸಿ |
ಜೀವಾತ್ಮನಾದ ಚಿನ್ಮಯರೂಪಗೆ ೧
ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |
ತುಂಬುರ – ನಾರದ ಮುನಿವಂದ್ಯಗೆ ||
ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |
ಗೊಂಬೆಯನು ಮಾಡಿ ಕುಣಿಸುವ ದೇವಗೆ೨
ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆ
ಸುಂದರ ಮೂರುತಿ ಹರಿ ಸರ್ವೋತ್ತಮನಿಗೆ ||
ಕಂದ ಪ್ರಹ್ಲಾದನ ಕಾಯ್ದ ದೇವನಿಗೆ ಅರ |
……………………………………… ೩
ಪನ್ನಂಗಶಯನಗೆ ಪಾವನ್ನ ಚರಿತೆಗೆ |
ಸನ್ನುತರಾದ ಸಜ್ಜನ ಪಾಲಿಗೆ ||
ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |
ತನ್ನ ನಂಬಿದವರನು ಸಲಹುವವಗೆ ೪
ಕರಿರಾಜವರದಗೆ ಕರುಣಾಸಮುದ್ರಗೆ |
ಗರುಡ ಗಮನನಿಗೆ ವೈಭವಹಾರಗೆ ||
ವರಪುರಂದರವಿಠಲ ಕಂಬುಕಂದರನಿಗೆ |
ಅರವಿಂದನಾಭನಿಗೆ ಅಜನ ಪಿತಗೆ ೫

ಜಯಮಂಗಳಂ ನಿತ್ಯ ಶುಭಮಂಗಳಂ ಪ
ಮಂಗಳವು ಆನಂದ ತೀರ್ಥ ಗುರುರಾಯರಿಗೆ
ಮಂಗಳವು ಮಧುರವಾಕ್ಯ ಸುಭಾಷ್ಯಗೆ ಅಪ
ಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆ
ಸಂಜೀವಿನಿಯ ತಂದ ಹನುಮಂತಗೆ ||
ಸಂಜೆಯಲಿ ಲಂಕಿಣಿಯನಂಜಿಸಿ ಪೊಕ್ಕ ಪ್ರ
ಭಂಜನನ ಕುವರ ಮಂಜುಳ ವಾಕ್ಯಗೆ ೧
ದ್ವಾಪರದಿ ಕುಂತಿಯೊಳ್ ಪರ್ವತದಿ ಜನಿಸಿದಗೆ
ಪಾಪಿ ಜರಾಸಂಧನನು ಸೀಳ್ದವಗೆ ||
ದ್ರೌಪತಿಯ ಸೌಗಂಧಿ ಕುಸುಮವನು ತಂದವಗೆ
ಶ್ರೀಪತಿಯ ದಾಸ ಶ್ರೀ ಭೀಮಸೇನನಿಗೆ ೨
ಕಲಿಯುಗದಿ ಶಂಕರನ ದುರ್ಮತವ ತರೆದವಗೆ
ಖಳ ಬೌದ್ಧ ಚಾರ್ವಾಕ ಮತವ ಗೆಲಿದವಗೆ ||
ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆ
ಸು¯ಭ ಪುರಂದರವಿಠಲನ ದಾಸಗೆ ೩

ಜಯಮಂಗಳಂ ನಿತ್ಯ ಶುಭಮಂಗಳಂ ಪ.
ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟು
ಹರಿಧ್ಯಾನವೆಂಬ ಆಭರಣವಿಟ್ಟು ||
ಪರತತ್ತ್ವವೆಂತೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರತಿಯೆತ್ತಿರೆ ೧
ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದು
ವೇದ ಮುಖವೆಂಬ ಕುಂಕುಮವನಿಟ್ಟು ||
ಸಾಧು – ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದು
ಮೋದದಿಂ ಲಕ್ಷ್ಮೀಗಾರತಿಯೆತ್ತಿರೆ೨
ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿ
ಘನಶಾಂತಿಯೆಂಬ ಆಜ್ಯವನು ತುಂಬಿ ||
ಆನಂದವೆಂತೆಂಬ ಜ್ಯೋತಿಯನು ಹಚ್ಚಿತು
ಚಿನುಮಯ ಹರಿಗೆ ಆರತಿಯೆತ್ತಿರೆ ೩
ಕಾಮಾಂಧವಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನು ಕದಡಿ ||
ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿ
ಸೋಮಧರವರದಗಾರತಿಯೆತ್ತಿರೆ ೪
ನಾರದವಂದ್ಯಗೆ ನವನೀತ ಚೋರಗೆ
ನಾರಾಯಣಗೆ ಶ್ರೀ ವರಲಕ್ಷ್ಮೀಗೆ ||
ಸಾರಿದವರನು ಪೊರೆವ ಪುರಂದರವಿಠಲಗೆ
ನೀರಜ ಮುಖಿಯರಾರತಿಯೆತ್ತಿರೆ ೫

ಜಯಮಂಗಳಂ ನಿತ್ಯ ಶುಭಮಂಗಳಂ ಪ.
ಮಂಗಳ ಮಧು ಕೈಟಭಾಸುರ ಮರ್ದನಗೆ
ಮಂಗಳ ಮದನ ಕೋಟಿ ಲಾವಣ್ಯಗೆ ||
ಮಂಗಳ ಜಗದಂತರಂಗ ಕೃಪಾಂಗಗೆ
ಮಂಗಳ ಯದುಕುಲೋತ್ತಮ ಸಾರ್ವಭೌಮಗೆ ೧
ಶ್ರೀವತ್ಸಲಾಂಛನಗೆ ಸಿರಿದೇವಿಯರಸಗೆ
ಗೋವರ್ಧನೋದ್ಧಾರ ಗೋವಿಂದಗೆ ||
ಮಾವ ಕಂಸನ ಕೊಂದ ಮಕರ ಕುಂಡಲಧರ
ಭಾವಜನಯ್ಯ ಚಿನ್ಮಯ ಮೂರ್ತಿಗೆ ೨
ಅಂಬುಜನಾಭಗೆ ಅಖಿಳಲೋಕೇಶಗೆ
ಶಂಭು – ಅಜ – ಸುರ – ಮುನಿವಂದ್ಯ ಹರಿಗೆ ||
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳ
ಬೊಂಬೆಯ ಮಾಡಿ ಕುಣಿಸುವ ದೇವಗೆ ೩
ಸಕಲಗುಣ ಪೂರ್ಣಗೆ ಸರ್ವಸ್ವಾತಂತ್ರ್ಯಗೆ
ಅಕಳಂಕ ಆದಿ ನಿರ್ದೋಷ ಹರಿಗೆ ||
ಭಕುತ ವತ್ಸಲನಿಗೆ ಭವರೋಗ ವೈದ್ಯಗೆ
ನಿಖಿಳ ಜೀವದಯಾಪರಿಪೂರ್ಣಗೆ ೪
ಪನ್ನಗಶಯನಗೆ ಪಾವನ ಮೂರ್ತಿಗೆ
ಸನ್ನುತಾನಂತ ಸದ್ಗುಣ ಭರಿತಗೆ ||
ಎನ್ನೊಡೆಯ ಪುರಂದರವಿಠಲ ರಾಯಗೆ
ತನ್ನ ನಂಬಿದವರ ಸಲಹುವ ಮೂರ್ತಿಗೆ ೫

೩೪೪
ಜಲದ ನೀಲ ಗಾತ್ರ ಏತರ ಚೆಲುವ ರುಕ್ಮಿಣಿ |
ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.
ಉದಕದೊಳಗೆ ವಾಸವೇಕೆ ಸದನವಿಲ್ಲವೆ |
ಸುದತಿ ಸುಡುವ ಕಾಡಿಗಿಂತ ಲೇಸು ಅಲ್ಲವೆ ೧
ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |
ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ ೨
ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |
ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ ೩
ಕರುಳ ಕೊರಳ ಸರವು ಏಕೆ ಸರವು ದೊರಕದೆ |
ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ ೪
ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆ
ನರಕಪಾಲ ಪಿಡಿವ ಜಗದ ಕರ್ತೃವಲ್ಲವೆ ೫
ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !
ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ ೬
ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |
ಭೂತಗಣಗಳಾಳುವುದಕೆ ಭೀತಿ ಇಲ್ಲವೆ ೭
ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |
ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ ೮
ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |
…………… ಶಾಪ ಹತ್ತಲಿಲ್ಲವೆ ೯
ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿ
ಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ ೧೦

೧೬೯
ಜಾಲಿಯ ಮರದಂತೆ – ದುರ್ಜನರೆಲ್ಲ
ಜಾಲಿಯ ಮರದಂತೆ ಪ.
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣಿಲ್ಲವೊ
ಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲ
ವಿಷಮರ ದುಸ್ಸಂಗ ಪಡೆದರೇನುಂಟು೧
ಊರ ಹಂದಿಗೆ ಅಲಂಕಾರವ ಮಾಡಲು
ನಾರುವ ದುರ್ಗಂಧ ಬಿಡಬಲ್ಲುದೆ
ಸಾರ ತತ್ತ್ವಜ್ಞಾನ ಪಾಪಿಗೆ ಹೇಳಲು
ಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ?೨
ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಣ ಮಾತುಗಳು ಮೊದಲೆ ಇಲ್ಲ
ಪನ್ನಗಶಯನ ಪುರಂದರವಿಠಲನಲ್ಲದೆ
ಅನ್ಯದೈವಂಗಳ ಭಜಿಸದೆ ನರರು ೩

೩೧೪
ಜೋ ಜೋ ಯಶೋದೆಯ ನಂದ ಮುಕುಂದನೆ
ಜೋ ಜೋ ಕಂಸಕುಠಾರಿ ಪ.
ಜೋ ಜೋ ಮುನಿಗಳ ಹೃದಯಾನಂದನೆ
ಜೋ ಜೋ ಲಕುಮಿಯ ರಮಣ ಅಪ
ಹೊಕ್ಕುಳ ಹೂವಿನ ತಾವರೆಗಣ್ಣಿನ
ಇಕ್ಕಿದ ಮಕರ ಕುಂಡಲದ
ಜಕ್ಕುಳಿಸುವ ಕದಪಿನ ಸುಳಿಗುರುಳಿನ
ಚಿಕ್ಕ ಬಾಯ ಮುದ್ದು ಮೊಗದ ||
ಸೊಕ್ಕಿದ ಮದಕರಿಯಂದದಿ ನೊಸಲೊಳ
ಗಿಕ್ಕಿದ ಕಸ್ತೂರಿ ತಿಲಕ |
ರಕ್ಕಸರೆದೆದಲ್ಲಣ ಮುರವೈರಿಯೆ
ಮಕ್ಕಳ ಮಾಣಿಕ್ಯ ಜೋ ಜೋ ೧
ಕಣ್ಣ ಬೆಳಗು ಪಸರಿಸುತಿರೆ ಗೋಪಿ ಅರೆ
ಗಣ್ಣ ಮುಚ್ಚಿ ನೋಡಿ ನಗುತ |
ಸಣ್ಣ ಬೆರಳುಗಳ ಬಾಯೊಳಗಳವಡಿಸಿ
ಪನ್ನಗಶಯನ ತೊಟ್ಟಿಲಲಿ ||
ನಿನ್ನ ಮಗನ ಮುದ್ದ ನೋಡು ಎಂದೆನುತಲಿ
ತನ್ನ ಪತಿಗೆ ತೋರಿದಳು |
ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸ
ರನ್ನದ ಬೊಂಬೆಯೆ ಜೋ ಜೋ ೨
ನಿಡು ತೋಳ್ಗಳ ಪಸರಿಸುತಿರೆ ಗೋಪಿಯ
ತೊಡೆಯ ಮೇಲ್ಮಲಗಿ ಬಾಯ್ದೆರೆಯೆ |
ಒಡಲೊಳಗೀರೇಳು ಭುವನವಿರಲು ಕಂಡು
ನಡುಗಿ ಕಂಗಳನು ಮುಚ್ಚಿದಳು ||
ಸಡಗರಿಸುತ ತಾನರಿಯದಂತೆಯೆ
ಹೊಡೆ ಮರುಳಿ ಮೊಗವ ನೋಡುತಲಿ
ಕಡಲಶಯನ ಮೊಗವ ನೋಡುತಲಿ
ಕಡಲಶಯನ ಶ್ರೀ ಪುರಂದರವಿಠಲನು
ಬಿಡದೆ ನಮ್ಮೆಲ್ಲರ ರಕ್ಷಿಸುವ ೩

೩೧೫
ಜೋ ಜೋ ಶ್ರೀ ಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ ಪ.
ಪಾಲುಗಡಲೊಳು ಪವಡಿಸಿದವನೆ ಒಂ
ದಾಲದೆಲೆಯ ಮೇಲೆ ಮಲಗಿದ ಶಿಶುವೇ ||
ಶ್ರೀ ಲತಾಂಗಿಯರ ಚಿತ್ತವಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ೧
ಹೊಳೆಯುವ ರನ್ನದ ತೊಟ್ಟಿಲ ಮೇಲೆ
ಢಳಿ ಢಳಿಸುವ ಗುಲಗುಂಜಿಯ ಮಾಲೆ ||
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ ೨
ಆರ ಕಂದ ನೀನಾರ ನಿಧಾನಿ
ಆರ ರತ್ನವೊ ನೀನಾರ ಮಾಣಿಕವೋ ||
ಸೇರಿತು ಎನಗೊಂದು ಚಿಂತಾಮಣಿಯು – ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ – ಜೋ ಜೋ ೩
ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ ||
ಮನಸಿಗೆ ಸುಖನಿದ್ರೆ ತಂದುಕೊ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು – ಜೋ ಜೋ ೪
ಅಂಡಜವಾಹನ ಅನಂತ ಮಹಿಮ
ಪುಂಡರೀಕಾಕ್ಷ – ಪರಮ ಪಾವನ ||
ಹಿಂಡು ದೈವದ ಗಂಡ ಉದ್ಧಂಢ ದೇವನ
ಪಾಂಡುರಂಗ ಶ್ರೀ ಪುರಂದರವಿಠಲ – ಜೋ ಜೋ ೫

೪೪
ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ – ಅ
ಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ ಪ
ಹಿಂದೆ ಹರಿಶ್ಚಂದ್ರನ ಅರಣ್ಯವನೆ ಸೇರಿಸಿತು
ಮುಂದಾಗಿ ಕುಳಿತಿತ್ತು ಕರಿರಾಜಗೆ ||
ಚೆಂದದಲಿ ಪಾಂಡವರ ಅರಣ್ಯ ಸೇರಿಸಿತು
ಸುಂದರಿಯ ಸೀತೆಯನು ಲಂಕೆಯೊಳಗಿಟ್ಟಿತು ೧
ಚಂದ್ರಂಗೆ ವಿಧಿ ಕಾಡಿ ಸರ್ಪ ತಾ ನುಂಗಿತು
ಇಂದ್ರಂಗೆ ವಿಧಿ ಕಾಡಿ ಅಂಗ ಭಂಗವಾಯಿತು ||
ಚಂದ್ರಶೇಖರನನ್ನು ಸುಡಗಾಡ ಸೇರಿಸಿತು
ಇಂದಿದನು ತಿಳಿದರೆ ನರರ ಪಾಡೇನು ೨
ವಿಧಿ ಕಾಡುವಾ ಕಾಲಕಿಲ್ಲದ್ದೆಲ್ಲವು ಬಂತು
ವಿಧಿ ಕಳವು ಸುಳ್ಳು ಹಾದರ ಕಲಿಸಿತು ||
ವಿಧಿ ಬೇನೆ ಚಳಿಯುರಿಯ ರೋಗಂಗಳನೆ ತಂತು
ವಿಧಿಯ ಗೆದ್ದವ ನಮ್ಮ ಪುರಂದರ ವಿಠಲ ೩

೨೯೫
ಜ್ಞಾನವೊಂದೇ ಸಾಕು ಮುಕ್ತಿಗೆ – ಇ – |
ನ್ನೇನು ಬೇಕು ಹುಚ್ಚುಮರುಳು ಮಾನವನೆ ಪ.
ಪಿತ ಮಾತೆ ಸತಿ ಸುತರನಗಲಿರಬೇಡ |
ಯತಿಯಾಗಿ ಆರಣ್ಯ ಚರಿಸಲು ಬೇಡ ||
ವ್ರತ – ನೇಮವ ಮಾಡಿ ದಣಿಯಲು ಬೇಡ |
ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ ೧
ಜಪತಪವನೆ ಮಾಡಿ ಸೊರಗಲುಬೇಡ |
ಕಪಿಯಂತೆ ಅಡಿಗಡಿಗೆ ಹಾರಲುಬೇಡ ||
(ಉಪವಾಸಪಾಶಕ್ಕೆ) ಸಿಕ್ಕಲುಬೇಡ |
ಚಪಲತನದಲೇನು ಫಲವಿಲ್ಲೋ ಮೂಢ ೨
ಜಾಗರದಲಿ ನಿದ್ರೆ ಕೆಡಿಸಲು ಬೇಡ |
ಓಗರವನು ಬಿಟ್ಟು ಒಣಗಲು ಬೇಡ ||
ಸೋಗುಮಾಡಿ ಹೊತ್ತು ಕಳಿಯಲು ಬೇಡ |
ಗೊಗೆ ಹಾಗೆ ಕಣ್ಣು ತಿರುಗಿಸಬೇಡ ೩
ಹೊನ್ನು – ಹೆಣ್ಣು – ಮಣ್ಣು ಜರೆದಿರಬೇಡ |
ಅನ್ನ – ವಸ್ತ್ರಗಳನ್ನು ತೊರೆದಿರಬೇಡ ||
ಬಣ್ಣದ ದೇಹವ ನೆಚ್ಚಲುಬೇಡ |
ತಣ್ಣೀರೊಳಗೆ ಮುಳುಗಿ ನಡುಗಲು ಬೇಡ ೪
ಮಹಾವಿಷ್ಣುಮೂರ್ತಿಯ ಮರೆತಿರಬೇಡ |
ಸಾಹಸದಿಂದಲಿ ಶ್ರಮ ಪಡಬೇಡ ||
ಕುಹಕ ಬುದ್ಧಿಯಲಿ ಕುಣಿದಾಡಬೇಡ |
ಮಹಿಮ ಪುರಂದರವಿಠಲನ ಮರೆಯದಿರೊ ಮೂಢ ೫

೧೭೦
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ –
ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.
ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ ೧
ಒಡಲ ಜಾಗಟೆಯ ಮಾಡಿ ಮಿಡಿವ
ಗುಣಿ ನಾಲಗೆಯ ಮಾಡಿ
ಒಡನೆ ಢಣ ಢಣ ಢಣ ಢಣ ಎಂದು
ಕುಣಿದು ಚಪ್ಪಳಿಕ್ಕುತ ೨
ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದು
ಕಂತುಪಿತ ಪುರಂದರವಿಠಲ ಪರದೈವವೆಂದು ೩

೧೭೧
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ – ಹಾರಿ |
ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.
ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |
ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||
ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |
ಅಚ್ಯುತಾನಂತನ ದಯವಿಲ್ಲದೆ ೧
ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |
ಸುಟ್ಟ ಸಂಸಾರದೊಳು ಸುಖವು ಇಲ್ಲ ||
ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |
ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ ೨
ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |
ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||
ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |
ಪನ್ನಗಾದ್ರಿ ಪುರಂದರವಿಠಲನ ದಯವಿರದೆ ೩

೧೭೨
ಡೊಂಕುಬಾಲದ ನಾಯಕರೆ
ನೀವೇನೂಟವ ಮಾಡಿದಿರಿ || ಪ.
ಕಣಕ ಕುಟ್ಟುವಲ್ಲಿಗೆ ಹೋಗಿ |
ಹಣಿಕಿ ಹಣಿಕಿ ನೋಡುವಿರಿ ||
ಕಣಕ ಕುಟ್ಟೋ ಒನಕಿಲಿಬಡಿದರೆ |
ಕುಂಯ್ ಕುಂಯ್ ರಾಗವ ಮಾಡುವಿರಿ ೧
ಹುಗ್ಗಿ ಮಾಡುವಲ್ಲಿಗೆ ಹೋಗಿ |
ತಗ್ಗಿ ಬಗ್ಗಿ ನೋಡುವಿರಿ ||
ಹುಗ್ಗಿ ಮಾಡುವ ಸವಟಿಲಿ ಬಡಿದರೆ |
ಕುಂಯ್ ಕುಂಯ್ ರಾಗವ ಮಾಡುವಿರಿ ೨
ಹಿರಿಯ ಬೀದಿಯಲಿ ಓಡುವಿರಿ |
ಕರಿಯ ಬೂದಿಯಲಿ ಹೊರಳುವಿರಿ ||
ಪುರಂದರವಿಠಲರಾಯನ ಈ ಪರಿ
ಮರೆತು ಸದಾ ನೀವು ತಿರುಗುವಿರಿ* ೩

೧೭೩
ತನಗಲ್ಲದಾ ವಸ್ತು ಎಲ್ಲಿದ್ದರೇನು
ಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.
ಆದರಣೆಯಿಲ್ಲದೂಟ ಅಮೃತಾನ್ನವಾದರೇನು
ವಾದಿಸುವ ಸತಿ – ಸುತರಿದ್ದು ಫಲವೇನು ?
ಕ್ರೋಧ ಬಳೆಸುವ ಸಹೋದರರು ಇದ್ದರೇನು
ಮಾದಿಗರ ಮನೆಯೊಳೆ ಮದುವೆಯಾದರೇನು ? ೧
ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನು
ದೇವಾಂಕಿತವಿಲ್ಲದ ಕವಿತ್ವವೇನು ?
ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನು
ಹಾವಿನ ಘಣಿಯೊಳಗೆ ಹಣವಿದ್ದರೇನು ? ೨
ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನು
ತನ್ನ ತಾನರಿಯದ ಜ್ಞಾನವೇನು ?
ಎನ್ನುತ ಪುರಂದರವಿಠಲನ ನೆನೆಯದವ
ಸಂನ್ಯಾಸಿಯಾದರೇನು ಪಂಡಿತನಾದರೇನು ? ೩

೧೭೪
ತನುವ ನಂಬಲುಬೇಡ ಜೀವವೆ ಪ.
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವದು |
ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ಅಪ
ಜರೆಮರಣಗಳಿಂದ ಭರಿತವಾದುದು ಕಾಯ |
ಸ್ಥಿರವೆಂದು ನಂಬಿ ನೀ ಮರುಳಾಗಬೇಡ ೧
ಧನ – ಧಾನ್ಯ ಪಶು – ಪತ್ನಿ ಸ್ಥಿರವೆಂದು ತಿಳಿದು |
ಮನುಮತನಯ್ಯನ ಮರೆಯದೆ ಮನವೆ ೨
ಶರಣೆಂದರೆ ಕಾವ ಗರುಡಕೇತನ ನಮ್ಮ | ಪುರಂದರವಿಠಲನ ಮರೆಯದೆ ಮನವೆ ೩

೧೭೫
ತನುವ ನೀರೊಳಗದ್ದಿ ಫಲವೇನು
ಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.
ಧಾನ – ಧರ್ಮಗಳನು ಮಾಡುವುದೇ ಸ್ನಾನ
ಜ್ಞಾನ – ತತ್ತ್ವಂಗಳ ತಿಳಿಯುವುದೇ ಸ್ನಾನ
ಹೀನಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನಂಬುವುದೆ ಸ್ನಾನ ೧
ಗುರುಗಳ ಶ್ರೀಪಾದತೀರ್ಥವೆ ಸ್ನಾನ
ಹಿರಿಯರ ದರುಶನ ಮಾಡುವುದೆ ಸ್ನಾನ
ಕರೆದು ಅನ್ನವನು ಇಕ್ಕುವುದೊಂದು ಸ್ನಾನ
ಸಿರಿಹರಿತರಣ ನಂಬುವುದೊಂದು ಸ್ನಾನ ೨
ದುಷ್ಟರ ಸಂಗವ ಬಿಡುವುದೊಂದು ಸ್ನಾನ
ಕಷ್ಟಪಾಪಂಗಳನು ಹರಿವುದೆ ಸ್ನಾನ
ಸೃಷ್ಟಿಯೊಳಗೆ ಸಿರಿಪುರಂದರವಿಠಲನ
ಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ ೩

೫೭
ತನುವಿನೊಳಗೆ ಅನುದಿನವಿದ್ದು
ಎನಗೊಂದು ಮಾತ ಪೇಳದೆ ಪೋದೆ ಹಂಸಾ ಪ.
ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ
ರೂವಾರವೆಂಬ ಒಂಬತ್ತು ಬಾಗಿಲ ದಾಟಿ
ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ
ಕಾಯಕೆ ಹೇಳದೆ ಹೋಯಿತು ಒಂದು ಮಾತ ೧
ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ
ಬಳ್ಳಿ ಕಾಯಿ ಕಾತು ಫಲವಾಯಿತು
ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ
ಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ೨
ಗಟ್ಟಿ – ಬೆಟ್ಟಗಳಲಿ ಶಾಖೆಯ ತುದಿಯಲಿ
ಕಟ್ಟಿತು ಜೇನನು ಸುಖಕಾಗಿ
ಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗ
ಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ ೩
ರವಿವಿಸ್ತಾರವ ಹಂಸ ಕೇಳಿದನೈ ನಿನ್ನ
ಪೆಸರ ಪೇಳಲೆನ್ನಳವಲ್ಲ
ರಸ ವಸ್ತುವನುಂಡು ಜ್ಯೋತಿ ತಾ ಪೋಪಾಗ
ಪಣತಿಗೆ ಪೇಳದೆ ಹೋಯಿತು ಒಂದು ಮಾತು ೪
ಸಿರಿಪುರಂದರ ವಿಠಲನ ಮಾತು ಪುಸಿಯಲ್ಲ
ಹಣೆಯ ಬರೆಹವ ಮೀರಲು ಬಲ್ಲುದೆ ?
ಸರಸವನಾಣೆಯ ಮುತ್ತು ಆಗಲಿ ತಾ ಪೋಪಾಗ
ತಿಪ್ಪಿಗೆ ಪೇಳಿದಾಯಿತು ಒಂದು ಮಾತ ೫

೨೭೪
ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ – ನ-|
ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ಪ
ಸತಿ-ಸುತ ಸಂಸಾರಗಳಿಗೆ |
ಮತಿ ಹೀನನಾದೆನು ವ್ಯರ್ಥ ||
ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |
ಗತಿಯದಾವುದು ಪೇಳೊ ಮುಂದೆನಗೆ ೧
ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|
ದೆಸೆಗೆಟ್ಟು ದೇವ ತಿರುಗಿದೆ ||
ಹಸಿವು-ತೃಷೆಗಳು ಬಹು ಬಾಧಿಸಲು |
ಹುಸಿಯಾಡಿದೆನಯ್ಯ ಹುಟ್ಟು ಮೊದಲು೨
ಸ್ನಾನ-ಸಂಧ್ಯಾವಂದನವರಿಯೆ-ನಾನಾ-|
ದಾನ-ಧರ್ಮದ ಗುರುತುಗಳಿಯೆ ||
ಹೀನಜನರ ಸಂಗವ ಮರೆಯೆ-ಸು-|
ಜ್ಞಾನಿಗಳನು ಬಾಯೆಂದು ಕರೆಯೆ೩
ಗಂಗೆ ಅಗ್ರೋದಕಗಳ ತಂದು – ನಾ-|
ಮಂಗಳ ಮಜ್ಜನ ಮಾಡಲಿಲ್ಲವೆಂದೂ ||
ಹೊಂಗೇದಗೆ ಪುಷ್ಪವನೊಂದು ಶ್ರೀ-|
ರಂಗಗರ್ಪಿಸಲಿಲ್ಲ ಕಾಯೊ ಬಂದು ೪
ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|
ನೂತನವಾದ ಆಭರಣದಿಂದ ||
ಪ್ರೀತಿಪಡಿಸಲಿಲ್ಲಾದರದಿಂದ-ಹೇ-|
ಸೀತಾಪತೆ ಕೃಷ್ಣ ಹರಿಮುಕುಂದ ೫
ಗಂಧಾಕ್ಷತೆ ಪುಷ್ಪಗಳಿಂದ -ಬರಿ-|
ಒಂದು ದಳ ಶ್ರೀ ತುಳಸಿಯಿಂದ ||
ಇಂದಿರೇಶನ ಅರ್ಚಿಸದರಿಂದ -ಬಹು-|
ನೊಂದು ದೂರಾದೆ ಸದ್ಗತಿಯಿಂದ ೬
ಏಕಾರತಿ ದೂಪಾರತಿಯ -ಎಂದು-|
ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||
ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|
ನೀ ಕರುಣಿಸು ಲಕ್ಷ್ಮೀರಮಣ ೭
ಪಾಯಸ ಪಂಚಭಕ್ಷ್ಯಗಳಿಂದ -ಬಲು-|
ಆಯತವಾದ ಶಾಕಗಳಿಂದ ||
ತೋಯೆ ಶಾಲ್ಯನ್ನ ಸದ್ರ‍ಘತದಿಂದ -ಶ್ರೀ-|
ಮಾಯಾಪತಿಗೆ ಅರ್ಪಿಸಲಿಲ್ಲ ೮
ಮಂಗಳಾರತಿಯ ನಾ ಮಾಡಲಿಲ್ಲ-ಜಯ-|
ಮಂಗಳವೆನ್ನುತ ಪಾಡಲಿಲ್ಲ ||
ಕಂಗಳ ನೋಟದಿ ನೋಡಲಿಲ್ಲ -ನರ-|
ಸಿಂಗ ನೀ ಬಾಯೆಂದು ಕರೆಯಲಿಲ್ಲ೯
ಹರಿಯ ಪಾದಕೆ ಬಿದ್ದವನಲ್ಲ -ನರ-|
ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||
ಹರಿದಿನದುಪವಾಸ ವ್ರತವು ಇಲ್ಲ -ಬಲು-|
ಹರಿಯ ದಾಸರ ಸಂಗ ಎನಗಿಲ್ಲ ೧೦
ಹೋಮಾರ್ಚನೆ ಔಪಾಸನವೆಲ್ಲ |
ನೇಮದಿಂದಲಿ ನಾ ಮಾಡಲಿಲ್ಲ ||
ಕಾಮಾತುರನಾಗಿ ಕಂಡಕಂಡ ಕಡೆ |
ಸ್ವಾಮಿಯ ಕಾಣದೆ ತಿರುಗಿದೆನೊ ೧೧
ಅತಿಥಿಗಳ್ ಬಂದರೆ ಮನೆಗೆ -ಅಂದೆ-|
ಗತಿಯಿಲ್ಲವಯ್ಯ ಕೊಡುವುದಕೆ ||
ಯತಿಯ ಕಂಡರೆ ನಿಂದಿಸಿದೆ-ಶ್ರೀ-|
ರತಿಪತಿ ಪಿತ ನೀ ದಯ ಮಾಡೊ ೧೨
ಎಷ್ಟು ಹೇಳಲಿ ಎನ್ನವಗುಣವ -ಅವು-|
ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||
ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|
ಬೆಟ್ಟದ ವೆಂಕಟ ಪುರಂದರವಿಠಲ ೧೩

೨೭೫
ತಲ್ಲಣಿಸದಿರು ಕಂಡ್ಯ ತಾಳು ಮನವೆ ಸ್ವಾಮಿ
ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ಪ
ಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ
ಕಟ್ಟೆ ಕಟ್ಟುತ ನೀರ ಹೊಯ್ವರಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಕೊಟ್ಟು ರಕ್ಷಿಸುವನು ಇದಕೆ ಸಂದೇಹ ಬೇಡ ೧
ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ
ಅಡಿಗಡಿಗೆ ಆಹಾರವಿತ್ತವರದಾರು
ಪಡೆದ ಜನಿನಿಯಂತೆ ಸಾರಥಿಯಾಗಿ ತಾ
ಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ ೨
ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆ
ಅಲ್ಲಿ ಹೋಗಿ ಆಹಾರವಿತ್ತವರದಾರು
ಬಲ್ಲಿದನು ಪುರಂದರವಿಠಲರಾಯ
ನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ *೩

೫೯
ತಾನು ಮಾಡಿದ ಕರ್ಮ ತನಗಲ್ಲದೆ |
ಏನ ಮಾಡಿದರು ಹಿಂದಿನ ಕರ್ಮವಲ್ಲದೆ ಪ.
ಮರಳಿ ಮರಳಿ ನೀರ ಹೊಕ್ಕು ಹೊರಟರೆ ಇಲ್ಲ |
ಹೊರೆ ಹೊತ್ತು ತಲೆಪರಟೆಗಟ್ಟಿದರೂ ಇಲ್ಲ ||
ಬರಿಯೆ ಭೂಮಿಯ ಕೆದರಿ ತೋಡಿ ನೋಡಿದರಿಲ್ಲ |
ಪರರಿಗೆ ಬಾಯ್ದೆರೆದರೇನೊ ಇಲ್ಲ ೧
ಬಲಿದ ದೇಹವನಲ್ಪ ಮಾಡಿ ಬೇಡಿದರಿಲ್ಲ |
ನೆಲದಿ ಕೊಲೆಗಡುಕ ತಾನಾದರಿಲ್ಲ ||
ತಲೆಯಲಿ ಜಡೆಗಟ್ಟಿ ಅಡವಿ ಸೇರಿದರಿಲ್ಲ – |
ಕೊಳಲೂದಿ ತುರುಗಳನು ಕಾಯ್ದರಿಲ್ಲ ೨
ಧೀರತನ ಬಿಟ್ಟು ದಿಗಂಬರನಾದರು ಇಲ್ಲ |
ಮೀರಿದ್ದ ರಾಹುತ ತಾನಾದರಿಲ್ಲ ||
ವರದ ಶ್ರೀ ಪುರಂದರವಿಠಲನ ಚರಣವ |
ಸ್ಮರಿಸುತ ಅನುದಿನ ಸುಖಿಯಾಗಿರಯ್ಯ ೩

೫೮
ತಾಪಡೆದು ಬಂದುದಕುಪಾಯವೇನು |
ಕೋಪದಲಿ ಶ್ರೀಪತಿಯ ಶಾಪಿಸಿದರೇನು ಪ.
ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು |
ಧಾನ್ಯಧನಗಳ ಬೇಡಿ ಧರೆಗಿಳಿದರೇನು |
ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು |
ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು ೧
ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು |
ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||
ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು |
ಅರಿಯದ – ಮನುಜರಿಗೆ ಆಲ್ಪರಿದರೇನು ೨
ಹೋಗದೂರಿನ ದಾರಿ ಕೇಳಿ ಮಾಡುವದೇನು |
ಮೂಗನ – ಕೂಡ ಏಕಾಂತವೇನು ||
ಯೋಗೀಶ ಪುರಂದರವಿಠಲನ ನೆನೆಯದವ |
ತ್ಯಾಗಿಯಾದರೆ ಏನು ಭೋಗಿಯಾದರೆ ಏನು ೩

೬೦
ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ |
ತಾರೆ ಬಿಂದಿಗೆಯ …………………. ಪ.
ತರಲಾಗದಿದ್ದರೆ ಬಲಿಯಿಟ್ಟು ಬರುವೆನು |
ತಾರೆ ಬಿಂದಿಗೆಯ…………… ಅಪ
ಅಚ್ಚುತನೆಂಬುವ ಕಟ್ಟೆಯ ನೀರಿಗೆತಾರೆಬಿಂದಿಗೆಯ – ಅಲ್ಲಿ – |
ಮತ್ಸರ ಕ್ರೋಧವೆಂಬ ಕೊಡವನು ತೊಳೆವೆನು ತಾರೆ ೧
ರಾಮನಾಯವೆಂಬ ಸಾರದ ನೀರಿಗೆ ತಾರೆಬಿಂದಿಗೆಯ – ಹರಿ – |
ರಾಮವೆಂಬುವ ಹರಿದು ಹೋಗುವ ನೀರಿಗೆ ತಾರೆ ೨
ಅಜ್ಞಾನವೆಂಬ ನೀರ ಚೆಲ್ಲಿಬಂದೆನು ತಾರೆ ಬಿಂದಿಗೆಯ |
ಸುಜ್ಞಾವೆಂಬುವ ನೀರಿಗೆ ಹೋಗುವೆ ತಾರೆ ೩
ಗೋವಿಂದನೆಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ |
ಚೆಲ್ವ ಬೆಳದಿಂಗಳೊಳು ಚಿಲುಮೆಯ ನೀರಿಗೆ ತಾರೆ ೪
ಬಿಂದು ಮಾಧವನ ಏರಿಯ ನೀರಿಗೆ ತಾರೆಬಿಂದಿಗೆಯ – ಪು –
ರಂದರವಿಠಲನ ಅಭಿಷೇಕಕೆ ಬೇಕು ತಾರೆ ೫

೧೦೧
ತಾರಮ್ಮಯ್ಯ-ಯದುಕುಲ-
ವಾರಿಧಿ ಚಂದ್ರಮನ ಪ
ಮಾರಜನಕನ-ಮೋಹನಾಂಗನ-|
ಸೇರಿ ಸುಖಿಸೆ ಹಾರೈಸಿ ಬಂದೆವು ಅ.ಪ
ಬಿಲ್ಲು ಹಬ್ಬಗಳಂತೆ_ಅಲ್ಲಿ ಬೀದಿ ಶೃಂಗಾರವಂತೆ ||
ಮಲ್ಲಕಾಳಗೆ ಮದ್ದಾನೆಗಳಂತೆ |
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ೧
ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||
ಒದಗಿದ ಮದಗಜ ತುರಗ ಸಾಲಿನಲಿ |
ಮದನಮೋಹನ ಕೃಷ್ಣ ಮಧುರೆಗೆ ತೆರಳಿದ ೨
ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||
ಭಕ್ತವತ್ಸಲನ ಬಹು ನಂಬಿದ್ದೆವು |
ಉತ್ಸಾಹ ಭಂಗವ ಮಾಡಿದನಮ್ಮ ೩
ರಂಗನ ನೆರೆನಂಬಿ-ಬಂದೆವು-ಸಂಗ ಸುಖವ ಬಯಸಿ ||
ಭಂಗಿಸಿ ನಮ್ಮನು ಹಾಗೆ ಪೋದನಮ್ಮ |
ಮಂಗಳ ಮೂರುತಿ ಮದನ ಗೋಪಾಲನು ೪
ಶೇಷಗಿರಿಯ ಮೇಲೆ-ಹರಿ ತಾ-ವಾಸವಾಗಿಹ ಕಾಣೆ ||
ಸಾಸಿರನಾಮದ ಒಡೆಯನೆಂದೆನಿಸಿದ |
ಶ್ರೀ ಪುರಂದರವಿಠಲರಾಯನ ೫

೨೭೬
ತಾರಿಸೊ ಶ್ರೀಹರಿ ತಾರಿಸೊ ಪ
ತಾರಿಸೊ ಭವವ ನಿವಾರಿಸೊ ನಿನ್ನಡಿಯ
ತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪ
ಪಾಪವಿನಾಶನ ಮಾಡುವಿ ನೀ
ತಾಪಸರನು ನಿತ್ಯ ಸಲಹುವಿ ||
ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವ
ಶ್ರೀ ಪಾಂಡುರಂಗ ಪರಮಾತ್ಮ ಮುಕುಂದ ೧
ಹಿರಣ್ಯಕಶಿಪುವನು ಸೀಳಿದೆ ಅವನ
ಕರುಳನು ಕೊರಳೊಳು ಹಾಕಿದೆ ||
ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದ
ಕರುಣ ದಿಂದಲಿ ಕಂದಗೊಲಿದೆ ಗೋವಿಂದ ೨
ಅಸುರೆ ಪೂತನಿಯ ಸಂಹರಿಸಿದೆ ನೀ
ಶಶಿಮುಖಿಯಭಿಮಾನ ಕಾಯ್ದೆ ||
ಶಿಶುವಾಗಿ ಬಾಲಲೀಲೆಗಳನು ತೋರಿದೆ
ಕುಸುಮನಾಭ ಶ್ರೀ ಪುರಂದರ ವಿಠಲ ೩

೧೭೭
ತಾಸು ಬಾರಿಸುತಿದೆ ಕೇಳಿ – ಹರಿದಾಸರೆಲ್ಲ |
ತಾಸು ಬಾರಿಸುತಿದೆ ಕೇಳಿ ಪ.
ಹಾಸುಮಂತ ಸುಪ್ಪತ್ತಿಗೆಯಲಿ – ಹಗಲು ಇರುಳು |
ಹೇಸರಗತ್ತೆಯಂತೆ ಹೊರಳಿ – ಸ್ತ್ರೀಯರಗೂಡ |
ಬೇಸರದೆ ನಿತ್ಯವು ಉರುಳಿ ||
ಈ ಪರಿ ಕಾಲವ ಕಳೆದೆಯೊ ಕಾಲ ಸ |
ಮೀಪವಾಯಿತು ಎಂದೀಗಲೆ ೧
ವೃಧ್ಧ ಯಾವನ ಬಾಲಕಾಲ – ವಿವೇಕವಿಲ್ಲದ |
ಬುದ್ಧಿ ಮಾಂದ್ಯವು ಹಲವು ಕಾಲ – ಆಹಾರಸಂಗ |
ನಿದ್ರೆಯಿಂದಲಿ ಅತಿಲೋಲ ||
ಈಶನ ಭಜಕರ ಭಜಿಸದೆ ಮಾನುಷಾ |
ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು ೨
ಕಂಡ ವಿಷಯವ ಕಾಮಿಸಿ – ಕಷ್ಟಪಡದೆ |
ತಾಂಡವ ಕೃಷ್ಟನ ಭೇಸಿ – ಪುಂಡನೆನಿಸದೆ
ಭಂಡಧಾವತಿಯನು ತ್ಯಜಿಸಿ ||
ಪುಂಡರೀಕಾಕ್ಷ ಪುರಂದರವಿಠಲನ |
ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು ೩

ಚೆಂಗಲಪೇಟ್
೧೪
ತಾಳಬೇಕು – ತಕ್ಕ – ಮೇಳಬೇಕು – ಶ್ರೀ |ಲೋಲನಚರಿತೆಯ ಹೇಳುವ ದಾಸರಿಗೆ ಪ
ಗಳಶುದ್ಧಿ ಇರಬೇಕು | ತಿಳಿದು ಪೇಳಲು ಬೇಕು |ಕಳವಳಬಿಡಬೇಕು ಕಳೆಮೊಗವಿರಬೇಕು ೧
ಯತಿ ಪ್ರಾಸವಿರಬೇಕು | ಗತಿಗೆ ನಿಲ್ಲಿಸಬೇಕು ||ಶ್ರುತಿಪತಿ ಕೇಳಬೇಕು | ರತಮುಖವಿರಬೇಕು ೨
ಹರಿದಾಸನಾಗಿರಬೇಕು | ಹರುಷ ಪಡುತಿರಬೇಕು |ಪುರಂದರವಿಠಲನಲಿ | ಸ್ಥಿರಚಿತ್ತವಿರಬೇಕು ೩

೧೭೬
ತಾಳಿಯ ಹರಿದು ಬಿಸಾಡೆ ನೀ
ಹೇಳಿದವರ ಮಾತ ಕೇಳೇ ಗೈಯ್ಯಾಳಿ ಪ.
ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮ
ಬುಲ್ಲ ಮಹಿಸಾಸುರ ದೈವವೆಂದೆ
ಎಲ್ಲ ದೈವಗಳು ನಾಯಾಗಿ ಹರಿವಾಗ
ಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ ೧
ಕೊರಳೊಳು ಕವಡಿಯ ಶಿರದಲಿ ಹಡಲಿಗೆ
ಕರದಲಿ ದೀವಟಿಗೆ ಉರಿಸುತಲಿ
ಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿ
ತಿರುಗಿದ ಕೇರಿಗುಂಟ ಮೂಳಿ ೨
ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡು
ಒಡೆಯ ಮಲ್ಲಣನೆಂದು ಜೋಲಾಡು
ಕಡುಹರಿ ಯಮದೂತರು ಬಂದು ಎಳೆವಾಗ
ಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ ೩
ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡು
ಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡು
ಮಿಂಡೆ ಮೈಲಾರಿಯ ಖಂಡೆರಾಯನೆಂದು
ಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ ೪
ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟು
ನನ್ನಯ್ಯ ನಾಗಪ್ಪ ಸಲುಹೆನ್ನುತ
ಚಿನ್ನನಾಗರ ಬಂದು ಓಡಾಡಿ ಕಡಿವಾಗ
ಹೊನ್ನನಾಗರ ಎತ್ತ ಹೋದನೆ ಮೂಳಿ ೫

೧೦೨
ತಾಳು ತಾಳೆಲೊ ರಂಗಯ್ಯ- ನೀ |
ತಾಳು ತಾಳೆಲೊ ಕೃಷ್ಣಯ್ಯ ಪ
ನಾಳೆ ನೀನು ನಮ್ಮ ಮನೆಗೆ ಬಂದರೆ |
ಕಾಲ ಕಂಬಕೆ ಕಟ್ಟಿ ಪೇಳುವೆ ಗೋಪಿಗೆ ಅ.ಪ
ದೊರೆಗಳ ಮಗನೆಂಬುದಕೇನೊ-ಬಹು |
ಧುರದಿ ಮನೆಯ ಪೊಕ್ಕ ಪರಿಯೇನೊ ||
ದುರುಳತನದ ಬುದ್ಧಿ ಸರಿಯೇನೊ-ನೀನು |
ತಿರಿದು ಬೇಡುಂಡದ್ದು ಮರೆತೆಯೇನೊ ೧
ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ |
ಕಕ್ಕೂಲಾತಿಯಿಂದಲಿ ನಿನ್ನ ||
ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ |
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ ೨
ಕಟ್ಟಿದ ತುರುಗಳ ಮೊಲೆಯುಂಡು-ಕರು |
ಬಿಟ್ಟ ಕಾರಣವೇನು ಹೇಳೊ ||
ಸೃಷ್ಟೀಶ ಪುರಂದರವಿಠಲರಾಯನೆ |
ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? ೩

೯ ನದಿ ದೇವತೆಗಳು
೨೧೨
ತುಂಗೆ ಮಂಗಳತರಂಗೆ-ಹರಿಸರ್ವಾಂಗೇ |
ಜಯಜಯ ಜಯತು ತುಂಗೆ ಪ
ಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದ |
ಸಾಧಿಸಿ ರಸಾತಳದಲ್ಲಿರಿಸೆ ||
ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ |
ಆದಿವರಾಹನ ದಾಡೆಯಲಿ ಬಂದೆ ದೇವಿ ೧
ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ |
ಮಳಲುಮಿಟ್ಟೆಗಳೆಲ್ಲ ಮುನಿಮಯವು ||
ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ |
ನಳಿನನಾಳವು ಸರ್ವ ವಿಷ್ಣುಮಯ ೨
ಇದೆ ವೃಂಧಾವನ, ಇದೆ ಕ್ಷೀರಾಂಬುಧಿ |
ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ||
ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ,
ಅಧಿಕವೆಂದೆನಿಸಿದೆ ದೇವಿ ತುಂಗೆ ೩
ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ |
ಪರಮ ಪವಿತ್ರ ಪಾವನ ಚರಿತ್ರೆಯು ನಿನ್ನ ||
ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ |
ಪರಮ ಸಾಯುಜ್ಯದ ಫಲವೀವ ದೇವಿ ೪
ಪರಮಭಕ್ತ ಪ್ರಹ್ಲಾದಗೊಲಿದು ಬಂದ |
ಪರಮ ನರಸಿಂಹಕ್ಚೇತ್ರವೆಂದೆನಿಸಿ ಮೆರೆದೆ ||
ಧರೆಯೊಳಧಿಕವಾದ ಕೂಡಲಿ ಪುರದಲಿ |
ವರದ ಪುರಂದರ ವಿಠಲನಿರಲು ಬಂದೆ ೫

೧೦೩
ತು೦ಟನಿವನು ಕಾಣಮ್ಮ ಗೋಪಾಲನು|
ಉಂಟೋ ಇಲ್ಲವೊ ಕೇಳಮ್ಮ ಪ
ಎಂತೆರಡು ಸಾವಿರ ನಂತರ ಹೆಂಗಳ
ತುಂಟು ಮಾಡಿ ರವಿಕೆಗಂಟು ಬಿಚ್ಚಿ ನಿಂತ ಅ.ಪ
ಹಸಿರು ಪಟ್ಟೆಯನು ಉಟ್ಟು – ನಮ್ಮನೆ ಹೆಣ್ಣು|
ಮೊಸರು ಕಡೆಯುತಿರಲು||
ನಸುನಗುತಲಿ ಬಂದು ಕುಸುಮ ಮಲ್ಲಿಗೆ ಮುಡಿಸಿ|
ಬಸಿರು ಮಾಡಿದನೆಂಥ ಹಸುಳನೆ ಗೋಪಿ || ೧
ಮುದ್ದುನಾರಿಯರು ಕೂಡಿ-ನಮ್ಮನೆಯಲಿ|
ಉದ್ದಿನ ವಡೆಯ ಮಾಡಲು||
ಸದ್ದು ಮಾಡದೆ ಎಂದು ಎದ್ದೆದ್ದು ನೋಡುತ|
ಇದ್ದ ವಡೆಯನೆಲ್ಲ ಕದ್ದು ಮೆದ್ದೋಡಿದ ೨
ಗೊಲ್ಲ ಬಾಲಕರ ಕೂಡಿ-ಮನೆಯಲಿದ್ದ |
ಎಲ್ಲ ಬೆಣ್ಣೆಯ ಮೆಲ್ಲಲು ||
ಗುಲ್ಲು ಮಾಡದೆ ನಾವು ಎಲ್ಲರು ಒಂದಾಗಿ |
ತಳ್ಳ ಹೋದರೆ ನಮಗೆ ಬೆಲ್ಲವ ತೋರಿದ ೩
ಹೊತ್ತು ಮುಳುಗುವ ಸಮಯದಿ-ನಮ್ಮನೆ ಹೆಣ್ಣು |
ಹತ್ತಿ ಹೊಸೆಯುತಿರಲು |
ಮುತ್ತು ಹವಳ ಸರ ಕತ್ತಿಗೆ ಹಾಕಿ ಸೀರೆ |
ಎತ್ತಿ ನೋಡಿದನು ತಾ ಬತ್ತಲೆ ನಿಂತ೪
ತಿಲಕ ಕತ್ತುರಿಯನಿಟ್ಟು-ನಮ್ಮನೆ ಹೆಣ್ಣು |
ಗಿಲುಕು ಮಂಚದಲಿರಲು ||
ತಿಲಕ ತಿದ್ದುತ ಕುಚಕಲಶ ಪಿಡಿದು ತನ್ನ |
ಕೆಲಸವ ತೀರಿಸಿದ ಪುರಂದರವಿಠಲ ೫

೧೭೮
ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡ
ಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ ಪ.
ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡ
ಕುಂದು – ನಿಂದೆಗಳ ಪ್ರಯೋಗ ಮಾಡುವರ
ಪ್ರಸಂಗ ಬೇಡ ೧
ಆಡಿ ಅಳುಕದ ಅಜ್ಞಾನಿ ಮನುಜರ ಸಂಗಬೇಡ
ಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ ೨
ವಿನಯ – ವಿವೇಕವಿಲ್ಲದ ವಿದ್ವಾಂಸರ ಸಂಗಬೇಡ
ತನಗಲ್ಲದ ಬಂಟ – ನಂಟ – ಮಿತ್ರಾಂಗಳ ಸಂಗಬೇಡ ೩
ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡ
ನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ ೪

೩೧೬
ತುರುಕರು ಕರೆದರೆ ಉಣಬಹುದಣ್ಣ |
ತುರುಕರು ಕರೆದರೆ ಉಣಬಹುದು ………. ಪ.
ಕರ ಕರೆ ಚಂಚಲ ಮಾಡದಿರಣ್ಣ |
ತುರುಕರು ಕರೆದರೆ ಉಣಬಹುದು ಅಪ
ತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |
ತುರುಕರುವಿಂದ ಹೋಹದು ಎಂಜಲವು ||
ತುರುಕರು ಕಂಡರೆ ಸರಕನೆ ಏಳಬೇಕು |
ತುರುಕರುವಿನ ಮಂತ್ರ ಜಪಿಸಬೇಕಣ್ಣ…………..೧
ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |
ತುರುಕರುವಿಂದ ನರಕ ದೂರಪ್ಪುದು ||
ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |
ಗರತಿಯರೆಲ್ಲ ಮುತ್ತೈದೆಯರಣ್ಣ……….೨
ತುರುಕರುವಿನ ನೀರೆರಕೊಂಡ ನಮ್ಮ ದೇವ |
ಉರವಕೊಂಡ ನೀರೆಲ್ಲ ಸನಕಾದಿಗೆ ||
ಬೆರಕೆಯ ಮಾಡಿದ ಪುರಂದರವಿಠಲ |
ಅರಿಕೆಯ ಮಾಡಿದ ಹರಿದಾಸರಿಗೆಲ್ಲ………೩

೩೧೭
ತೂಗಿರೆ ರಂಗನ್ನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ಪ.
ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ ಅಪ
ಇಂದ್ರಲೋಕದೊಳುಪೇಂದ್ರ ಮಲಗಿಹನೆ
ಬಂದೊಮ್ಮೆ ತೊಟ್ಟಿಲ ತೂಗಿರೆ
ಮಂದಗಮನೆಯರು ಚೆಂದದಿ ಪಾಡುತ
ನಂದನ ಕಂದನ ತೂಗಿರೆ ೧
ನಾಗಲೋಕದಲ್ಲಿ ನಾರಾಯಣ ಮಲಗಿಹನೆ
ಹೋಗಿ ನೀವ್ ತೊಟ್ಟಿಲ ತೂಗಿರೆ
ನಾಗವೇಣಿಯರು ನಾಲ್ಕು ನೇಣನು ಪಿಡಿದು
ಭಾಗ್ಯವಂತನೆಂದು ತೂಗಿರೆ೨
ಜಲಧಿಯೊಳಾಲದ ಎಲೆಯಲ್ಲಿ ಮಲಗಿದ
ಚೆಲುವನ ತೊಟ್ಟಿಲ ತೊಗಿರೆ
ಸುಲಭ ದೇವರ ದೇವ ಬಲಿಬಂಧಮೋಚಕ
ಎಳೆಯನ ತೊಟ್ಟಿಲ ತೂಗಿರೆ ೩
ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟ
ದೋಷವಿದೂರನ ತೂಗಿರೆ
ಸಾಸಿರ ನಾಮದ ಸರ್ವೋತ್ತಮನೆಂದು
ಲೇಸಾಗಿ ತೊಟ್ಟಿಲ ತೂಗಿರೆ ೪
ಅರಳೆಲೆ ಮಾಗಾಯಿ ಕೊರಳ ಪದಕ ಸರ
ತರಳನ ತೊಟ್ಟಿಲ ತೂಗಿರೆ
ಉರಗಾದ್ರಿವಾಸ ಶ್ರೀ ಪುರಂದರವಿಠಲನ
ಹರುಷದಿ ಪಾಡುತ ತೂಗಿರೆ ೫

೨೭೭
ತೇಲಿಸೊ ಇಲ್ಲ ಮುಳುಗಿಸೊ- ನಿನ್ನ-|
ಪಾಲಿಗೆ ಬಿದ್ದೆನೊ ಪರಮ ದಯಾಳೊ ಪ
ಸತಿ-ಸುತ-ಧನದಾಶೆ ಎಂತೆಂಬ ಮೋಹದಿ |
ಹಿತದಿಂದ ಅತಿನೊಂದು ಬಳಲಿದೆನೊ ||
ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-|
ಪತಿ ನಿನ್ನ ಚರಣದ ಸ್ಮರಣೆಯಿತ್ತೆನ್ನ ೧
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ |
ಶರಧಿಯೊಳಗೆ ಬಿದ್ದು ಮುಳುಗಿದೆನೊ ||
ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ |
ಕರುಣಾಭಯವನಿತ್ತು ಪಾಲಿಸೊ ಹರಿಯೆ ೨
ದೋಷವುಳ್ಳವ ನಾನು ಭಾಷೆಯುಳ್ಳವ ನೀನು |
ಮೋಸ ಹೋದೆನೊ ಭಕ್ತಿರಸವ ಬಿಟ್ಟು ||ದಾಸರ ಸಂಗವಿತ್ತು ಪಾಲಿಸೊ ಹರಿಯೆ ೩

೧೦೪
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |
ನೀಲ ಮೇಘಶ್ಯಾಮ ಕೃಷ್ಣ ತೋಳನ್ನಾಡೈ ಪ
ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|
ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- ೧
ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|
ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|
ಬಟ್ಟಲ ಹಾಲನು ಕುಡಿದು ಕುಣಿವನೆ ತೋ- ೨
ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|
ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|
ಕಂಬದಿಂದಲವತರಿಸಿದವನೆ ನೀ ತೋ-|
ನಂಬಿದವರನು ಹೊರೆವ ಕೃಷ್ಣ ತೋ ೩
ಕಾಲಕೂಟದ ವಿಷವ ಕಲಕಿದ ತೋ-|
ಕಾಳಿಂಗನ ಹೆಡೆಯನು ತುಳಿದ ತೋ-||
ಕಾಳೆಗದಲಿ ದಶಕಂಠನ ಮಡುಹಿದ ತೋ-|
ಶಾಲಕ ವೈರಿಯೆ ಕರುಣಿಗಳರಸನೆ ತೋ ೪

ಕೃಷ್ಣನ ಷಣ್ಮಹಿಷಿಯರಲ್ಲಿ
೩೭
ತ್ರುಟಿಗೆ ಕ್ಷಣಕೆ ನೆನೆಮನವೇ – ಹರಿಯ |ತ್ರುಟಿಗೆ ಕ್ಷಣಕೆ ನೆನೆಮನವೆ ಪ
ತ್ರುಟಿಗೆ ಕ್ಷಣಕೆ ನೆನೆ ಕ್ಷಣಕೆ ಲವಕೆ ನೆನೆ |ಘಟಿಗೆ ಘಟಿಗೆ ನೆನೆ, ಇರುಳು ಹಗಲು ನೆನೆ ಅ.ಪ
ಜಠರದಿ ಜಗತಿಗೆ ಹಿರಿಯ-ಜಗ |ನ್ನಾಟಕಮೋಹ ಸೂತ್ರಧಾರಿಯ ||
ಪಟು ಹಿರಣ್ಯಾಕ್ಷ ಸಂಹಾರಿಯ |ನಿಷ್ಠುರನಾದ ಕಂಸಾರಿಯ ೧
ರಣಿತ ಕಂಕಣ ನೂಪುರಿಯ-ರು |ಕ್ಮಿಣಿಯನಾಳುವ ದೊಡ್ಡ ದೊರೆಯ ||
ಗುಣನಿಧಿ ಗೋವರ್ಧನಧಾರಿಯ-ನೀ- |ಕರುಣಿಯು ಅವನೆಂದರಿಯ ೨
ನವನೀತದಧಿತಸ್ಕರಿಯ -ಈ |ಭವಹರ ಒಡೆಯನೆಂದರಿಯ ||
ಜವನು ಕೇಳಲು ನಿನ್ನ ಮೊರೆಯ -ಚಿಹಿ |ಅವನ ನಾಲಗ್ಗೆ ಮುಳ್ಳು ಮುರಿಯ ೩
ಮನಕಭಾಗಿಗೆ ಶ್ರುತಿಯರಿಯ -ದಂಥ |ಘನಪಾಪಿಗಳಿಗವ ದೊರೆಯ ||
ನೆನೆವರ ಪಾಲಿಪುದ ಮರೆಯ -ಸು |ಮ್ಮನೆ ಇರಲವ ನಮ್ಮ ಪೊರೆಯ೪
ಸ್ಮರಿಸಲು ಯಮ ನಿನ್ನ ದಾರಿಯ -ಹೋಗ |ವರಭಾರತಿಪತಿ ಮರೆಯ |
ಪುರಂದರವಿಠಲ ದೊರೆಯ -ನೆನೆ-ದಿರೆ ಯಮ ನಿನ್ನನು ಕೊರೆಯ ೫
ತ್ರುಟಿಗೆ ಕ್ಷಣಕೆ ನೆನೆಮನವೇ-ಹರಿಯತ್ರುಟಿಗೆ ಕ್ಷಣಕೆ ನೆನೆಮನವೇ ||

೨೭೮
ದಣಿಯ ನೋಡಿದೆನೋ ವೆಂಕಟನ ಮನ
ದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನಪ
ಕೇಸಕ್ಕಿ ಅನ್ನ ಉಂಬುವನ ದುಡ್ಡು
ಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||
ದೋಸೆ ಅನ್ನವ ಮಾರಿಸುವನ
ತನ್ನ ದಾಸರ ಮೇಳದಿ ಕುಣಿದಾಡುತಿಹನ೧
ಗಂಟಿನೊಲ್ಲಿಯ ಹೊದ್ದಿಹನ-ಹೊರ
ಹೊಂಟು ಹೋಗಿ ಬೇಟೆಯಾಡುತಲಿಹನ ||
ಗಂಟೆ ನಾದಕೆ ಒಲಿಯುವನ ಭೂವೈ-
ಕುಂಠವಿದೆಂದು ಹಸ್ತವ ತೋರಿದವನ೨
ಬೆಟ್ಟದೊಳಗೆ ಇದುತಿಹನ ಮನ
ಮುಟ್ಟೆ ಭಜಿಪ ಭಕುತರಿಗೊಲಿದವನ ||
ಕೊಟ್ಟ ವರವ ತಪ್ಪದವನ ಈ
ಸೃಷ್ಟಿಗಧಿಕ ಪುರಂದರ ವಿಠಲನ೩

೨೭೯
ದಯಮಾಡೋ ದಯಮಾಡೋ ದಯಮಾಡೋ ರಂಗ ಪ
ದಯಮಾಡೋ ನಾ ನಿನ್ನ ದಾಸನೆಂತೆಂದು ಅ.ಪ
ಹಲವು ಕಾಲವು ನಿನ್ನ ಹಂಬಲವೆನಗೆ
ಒಲಿದು ಪಾಲಿಸಬೇಕು ವಾರಿಜನಾಭ ೧
ಇಹಪರದಲಿ ನೀನೆ ಇಂದಿರೆರಮಣ
ಭಯವೇಕೋ ನೀನಿರಲು ಭಕ್ತರಭಿಮಾನಿ ೨
ಕರಿರಾಜವರದನೆ ಕಂದರ್ಪನಯ್ಯ
ಪುರಂದರವಿಠಲ ಸದ್ಗುಣ ಸಾರ್ವಭೌಮ ೩

೨೮೦
ದಯೆಮಾಡಿ ಸಲಹಯ್ಯ ಭಯನಿವಾರಣನೆ |
ಹಯವದನ ನಾ ನಿನ್ನ ಚರಣ ನಂಬಿದೆ ಕೃಷ್ಣ ಪ
ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ |
ಎಣಿಸಲಳವಲ್ಲಷ್ಟು ಇಷ್ಟು ಎಂದು ||
ಫಣಿಶಾಹಿ ಅವಗುಣವ ನೋಡದೇ ಚರಣ ಸ್ಮ-
ರಣೆಯ ಮಾಡುವಂಥ ಭಕುತಿಯನಿತ್ತು ೧
ಕಂಡ ಕಂಡ ಕಡೆಗೆ ಪೋಪ ಚಂಚಲಮನಸು
ಲಂಡತನದಲಿ ಬಹಳ ಭ್ರಷ್ಟ ನಾನು ||
ಭಂಡಾಟದವನೆಂದು ಬಹಿರಂಗಕೆಳೆಯದೆ |
ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ ೨
ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು |
ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ||
ಖ್ಯಾತಿಯನು ಕೇಳಿ ಮೊರೆಹೊಕ್ಕೆ ದಯಾನಿಧಿಯೆ -ಬೆ-|
ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ ೩

ಯದುವಂಶದ ಉಗ್ರಸೇನನ ಮಗ
೧೫
ದಾತ ಹರಿಯು ದಯ ಮಾಡುವನಿರಲುಏತರ ಭಯವೋ ಹೇ ಮನುಜಾ ಪ
ಬೆಳಗು ಬೈಗು ಮೈ ಹುಳುಕು ಹರತೆಯಲಿ |ಕೆಲವು ಕಾಲದಲಿ ಗಳಿಗೆಯಾದರೂ ||* ೧
ಸಂಸಾರದ ಸುಖಪ್ರಾಶನ ಮಾಡದೆ |ಕಂಸಾರಿಯ ಪದಪಾಂಸುಗಳ ಭಜಿಸು || * ೨
ನೀರಬೊಬ್ಬಳಿಯಂತೆ ನಿತ್ಯವಲ್ಲದ ದೇಹ |ಘೋರ ಸಂಸಾರದಿ ತೊಳಲದಿರು ||
ಶ್ರೀರಮಣ ಪುರಂದರವಿಠಲ ಪರನೆಂದು |ಸಾರಿದೆಯಲ್ಲವೆ ಸುಮ್ಮನಿರಬೇಡ ೩

೩೪೫
ದಾನವನ ಕೊಂದದ್ದಲ್ಲ ಕಾಣಿರೊ |
ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.
ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |
ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು ೧
ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |
ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ ೨
ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |
ಉರಿಮೋರೆ ದೈವ ನಮ್ಮ ಪುರಂದರ ವಿಠಲ ೩

೨೮೧
ದಾರಿ ಏನಿದಕೆ ಮುರಾರಿ – ನೀ ಕೈಯ ಹಿಡಿಯದಿದ್ದರೆ-|
ದಾರಿ ಏನಿದಕೆ ಮುರಾರಿ? ಪ
ಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |
ಎಷ್ಟಾದರೂ ನುಡಿದೆ ಗುರುಹಿರಿಯರ ||
ದುಷ್ಟರ ಸಂಗವ ಬಹಳ ಮಾಡಿದರಿಂದ |
ಶಿಷ್ಟರ ಸೇವೆಯೆಂದರಾಗದೆನಗೆ ೧
ಪರರ ದೂಷಣೆ ಪರಪಾಪಂಗಳನೆಲ್ಲ |
ಪರಿಪರಿಯಲ್ಲಿ ಆಡಿಕೊಂಬೆ ನಾನು ||
ಹರಿನಾಮಾಮೃತವ ಹೇಳದೆ ಕೇಳದೆ |
ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ ೨
ಪಾತಕ ಕರ್ಮಗಳ ಮಾಡಿದಜಾಮಿಳಗೆ |
ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||
ನೂತನವೇಕಿನ್ನು ಸೂರ್ಯ ಮಂಡಲ |
ರೀತಿಯಾದನು ಸಿರಿಪುರಂದರವಿಠಲ ೩

೨೮೩
ದಾರಿ ಯಾವುದಯ್ಯ ವೈಕುಂಠಕೆ
ದಾರಿ ತೋರಿಸಯ್ಯಾ ಪ
ದಾರಿ ಯಾವುದಯ್ಯಾ ದಾರಿ ತೋರಿಸು ಆ
ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ಅ.ಪ
ಬಲುಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ ||
ಬಳಲುತ ತಿರುಗಿದೆ ದಾರಿಯ ಕಾಣದೆ
ಹೊಳೆಯುವ ದಾರಿಯ ತೋರೊ ನಾರಾಯಣ ೧
ಪಾಪವ ಪೂರ್ವದಲಿ ಮಾಡಿದುದಕೆ
ಲೇಪವಾಗಿರೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪ ನಾರಾಯಣ ೨
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ||
ಪನ್ನಗಶಯನ ಶ್ರೀ ಪುರಂದರ ವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ ೩

೨೮೨
ದಾರಿಯ ತೋರೊ ಮುಕುಂದ – ಹರಿ-|
ನಾರಾಯಣ ಗೋವಿಂದ ಪ
ಬಂದೆನು ಬಹುಜ್ಮನದಲಿ -ನಾ-|
ಬಂಧನದೊಳು ಸಿಲುಕುತಲಿ ||
ಮುಂದಿನದಾವುದು ಪಯಣ -ತೋರೊ-|
ಇಂದು ನೀ ಇಂದಿರೆರಮಣ ೧
ಗತಿಯಿಲ್ಲದವರಿಗೆ ನೀನೆ -ಸದ್-|
ಗತಿಯೆಂದು ಸ್ತುತಿಮಾಡಿದೆನೊ ||
ಗತಿಯೆಂದು ನಂಬಿದೆ ನಿನ್ನ |
ಸತುವ ತೋರು ನರಹರಿಯೆ ಗೋವಿಂದ೨
ಮಡವಿನೊಳಗೆ ಧಮುಕಿದೆನೆ -ಇನ್ನು-
ಕಡಹಾಯಿಸುವರ ನಾ ಕಾಣೆ ||
ಹಡೆದ ತಾಯಿ – ತಂದೆ ನೀನೆ -ಕೈ-|
ಹಿಡಿದು ಸಲಹೊ ಎನ್ನೊಡೆಯ ಮುರಾರಿ೩
ಮಿಕ್ಕಿ ಬರುವ ಹೊಳೆಯೊಳಗೆ -ನಾನು-|
ಸಿಕ್ಕಿದೆ ನಡುನೀರೊಳಗೆ ||
ಕಕ್ಕುಲಾತಿ ನಿನಗಿರದೆ |
ಭಕ್ತವತ್ಸಲ ನೀ ದಯಮಾಡೋ ೪
ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|
ರಕ್ಷಿಸಿ ಸಲಹಬೇಕು ||
ಅಕ್ಷಯ ಅನಂತ ಮಹಿಮನೆ – ನೀನು |
ಪಕ್ಷಿವಾಹನನೆ ಪುರಂದರ ವಿಠಲ ೫

೨೮೪
ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |
ದಾಸನನು ಕರೆದೊಯ್ದು ||
ಸಾಸಿರನಾಮ ವಿಲಾಸನ ಮೂರ್ತಿಯ |
ಲೇಸಾಗಿ ತೋರೆನಗೆ ಪ
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |
ಶಿರದ ಅಂದದ ದೇವನ ||
ಉರುವ ಶಾಪಕೆ ತಾನು ಕಿರಿದಾಗಿ ಇರುವನ |
ಶಿರದೊಳು ಧರಿಸಿದನ ||
ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |
ಸ್ಥಿರವಾಗಿ ನೆಲಸಿಪ್ಪನ ||
ಕರುಣವಾರಿಧಿ ವೆಂಕಟೇಶನ ಚರಣವ |
ಕರೆದೊಯ್ದು ತೋರೆನಗೆ ೧
ವಾರಿಯೊಳುದಿಸಿದ ನಾರಿಯ ಮಧ್ಯದಿ |
ಏರಿಯೆ ಕುಳಿತವನ ||
ವಾರಿಜ ವದನದಿ ತೋರಿದ ಸಾರದಿ |
ಮೂರೊಂದು ಪೆಸರವನ ||
ಮೇರುವಿನಗ್ರದಿ ಊರಿದ ಚರಣವ |
ಸಾರಿದವರ ಜೀವನ ||
ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||
ದಾರವಿಂದವ ತೋರೆನಗೆ ೨
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |
ಮಾತೆಯ ಸಲಹಿದನ ||
ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |
ಘಾತಿಸಿ ತರಿದವನ ||
ನೂತನವಾಗಿಹ ನಾಮ ಶೈಲದ ಮೇಲೆ |
ಕಾತರದೊಳು ನಿಂದನ ||
ಪಾತಕನಾಶನ ಶ್ರೀವೆಂಕಟೇಶನ |
ರೀತಿಯ ತೋರೆನಗೆ ೩
ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |
ವಶತಪ್ಪಿ ನಡೆವವನ ||
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |
ಎಸೆವ ಮಹಾವೀರನ ||
ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |
ಕುಶಲದಿ ನಿಂದವನ ||
ನಸುಮುದ್ದು ಶ್ರೀ ವೆಂಕಟೇಶನ ಚರಣದ |
ಬಿಸರುಹ ತೋರೆನಗೆ ೪
ಪಾದ ನಾಲ್ಕನು ಮೋದಿನಿಯೊಳಗೂರಿಯೆ |
ಆದರಿಸುತ ಬಪ್ಪನ ಮೇ ||
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |
ಕಾದು ಕೊಳ್ಳುತಲಿಪ್ಪನ ||
ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |
ಹಾದಿಯನಿತ್ತವನ ||
ಸಾಧಿಸಿ ಇಂತಹ ಶ್ರೀ ವೆಂಕಟೇಶನ |
ಪಾದವ ತೋರೆನಗೆ ೫
ಆದಿನಾರಾಯಣನೆಂಬ ಪರ್ವತನು |
ಭೇದಿಸಿ ನಿಂತವನ ||
ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |
ಪಾದವನೂರಿದನ ||
ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |
ಕಾದುಕೊಳ್ಳುತಲಿಪ್ಪನ – ವಿ ||
ನೋದ ಮೂರುತಿಯಾದ ಶ್ರೀ ವೆಂಕಟೇಶನ |
ಪಾದವ ತೋರೆನಗೆ ೬
ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |
ಪುತ್ರಿಯ ತಂದವನ ||
ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |
ನಿತ್ಯದೊಳಿರುತಿಪ್ಪನ ||
ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |
ಪುತ್ರನೆಂದೆನಿಸಿದನ ||
ಹತ್ತಿರ ಕರೆದೊಯ್ದು ಪುರಂದರವಿಠಲನ |
ನಿತ್ಯದಿ ತೋರೆನಗೆ ೭

೨೮೬
ದಾಸನ ಮಾಡಿಕೊ ಎನ್ನ – ದಿವ್ಯ
ಸಾಸಿರ ನಾಮದ ವೆಂಕಟಭೂಪರನ್ನ ಪ
ಭವಭಯ ದುಃಖವ ಬಿಡಿಸೋ- ನಿನ್ನ
ಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||
ಆವಾಗಲೂ ನಿನ ನಾಮ ನುಡಿಸೋ – ನಿನ್ನ
ಚರಣ ಕಮಲದಲ್ಲಿ ಆರಡಿಯೆನಿಸೊ ೧
ಗಂಗೆಯ ಪಡೆದಂಥ ಪಾದ ವರ
ಶೃಂಗಾರ ಲಕ್ಷ್ಮಿ ಸ್ಮರಿಸುವಂಥ ಪಾದ ||
ಬಂಗಾರ ರಂಜಿತ ಪಾದ – ಹರಿ
ಮಂಗಳ ಸದ್ಗತಿಗೆ ಚಂದಿರನಾದ ೨
ಸೆರಗೊಡ್ಡಿ ನಾ ಬೇಡಿಕೊಂಬೆ – ನಿನ್ನ
ಹರವಾಣದೆಂಜಲ ನಾನು ಉಂಡೇನೆಂದೆ ||
ಬಿರುದು ನಿನ್ನದು ಹುಸಿ ಮಾಡದೆ – ನಮ್ಮ
ಪುರಂದರ ವಿಠಲ ದಯಮಾಡೊ ತಂದೆ ೩

೨೮೫
ದಾಸನ ಮಾಡಿಕೋ ಎನ್ನ – ಇಷ್ಟು
ಗಾಸಿ ಮಾಡುವುದೇಕೆ ದಯದಿ ಸಂಪನ್ನ ಪ
ದುರುಳ ಬುದ್ದಿಗಳೆಲ್ಲ ಬಿಡಿಸೋ – ನಿನ್ನ
ಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||
ಚರಣದ ಸೇವೆಯ ಕೊಡಿಸೋ – ಅಭಯ-
ಕರ ಮೇಲಿನ ಕುಸುಮ ಶಿರದ ಮೇಲಿರಿಸೋ ೧
ದೃಢಭಕ್ತಿಯಿಂದ ನಾ ಬೇಡಿ – ನಿನ್ನ
ಅಡಿಯೊಳೆರಗುವೆನಯ್ಯ ಅನುದಿನ ಪಾಡಿ ||
ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಪರಭಕ್ತಿ ಮನ ಮಡಿ ಮಾಡಿ ೨
ಮೊರೆಹೊಕ್ಕವರ ಕಾವ ಬಿರುದು ನೀನು
ಕರುಣದಿ ರಕ್ಷಣೆ ಮಾಡೆನ್ನ ಪೊರೆದು ||
ದುರಿತ ರಾಶಿಗಳೆಲ್ಲ ತರೆದು ಒಡೆಯ
ಪುರಂದರವಿಠಲನೆ ಹರುಷದಿ ಕರೆದು ೩

೧೭೯
ದಾಸನೆಂತಾಗುವೆನು ಧರೆಯೊಳಗೆ ನಾನು |
ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.
ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |
ಗೋಟಂಚುಧೋತರ ಮುಡಿಯನುಟ್ಟು ||
ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |
ಬೂಟಕತನ ನೋಡಿ ಭ್ರಮಿಸದಿರಿ ಜನರೆ ೧
ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |
ವ್ಯರ್ಥವಾಯಿತು ಜನ್ಮ ವಸುಧೆಯೊಳು ||
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |
ಸತ್ಯ – ಶೌಚಗಳರಿಯೆ ಸಜ್ಜನರು ಕೇಳಿ ೨
ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |
ಸಂಧ್ಯಾನ – ಜಪ – ತಪವೊಂದನರಿಯೆ ||
ಒಂದು ಸಾಧನ ಕಾಣೆ ಪುರಂದರವಿಠಲನ |
ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ ೩

೧೮೦
ದಾಸರ ನಿಂದಿಸಬೇಡಲೊ ಪ್ರಾಣಿ – ಹರಿ
ದಾಸರ ನಿಂದಿಸಬೇಡ ಪ.
ಮೋಸವಾಯಿತೊ ಮನದೊಳು ಗಾಢ |
ಲೇಸಾಗಿ ಇದ ತಿಳಕೊ ಮೂಢ ಅಪ
ರಾಮನ ನಿಂದಿಸಿ ರಾವಣ ಕೆಟ್ಟ |
ತಮ್ಮಗಾಯಿತು ಸ್ಥಿರಪಟ್ಟ ||
ತಾಮಸದಿಂದಲಿ ಕೌರವ ಕೆಟ್ಟ |
ಧರ್ಮಗೆ ರಾಜ್ಯವ ಬಿಟ್ಟ ೧
ಮನದೊಳಗಿನ ವಿಷಯದ ವಿಷ ಬಿಟ್ಟು |
ಅನುದಿನ ಹರಿಯ ನೆನೆಯಿರಣ್ಣ ||
ಸನಕಾದಿವಂದ್ಯನ ಪೂಜಿಸಿದರೆ ನೀವ್ |
ಘನ ಪದವಿಯ ಕಾಣುವಿರಣ್ಣ ೨
ಕನಕದಾಸನು ಕಬ್ಬಲಿಗನು ಎಂದು |
ಅಣಕಿಸಿ ನುಡಿಬೇಡಿರಣ್ಣ |
ಜನರಂತೆ ನರನಲ್ಲ ತುಂಬುರನೀತನು |
ಜನಕಜೆರಮಣನ ಪಾದಸೇವಕನು ೩
ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ |
ಸುಡದನಕಾ ಬಿಡದಣ್ಣ ||
ಬಡವನಾಗಿ ಕೆಡುಬುದ್ದಿಯ ಬಿಟ್ಟು |
ನಡೆಯ ಕಂಡು ಪಡೆದುಕೊಳ್ಳಣ್ಣ ೪
ದೇವಕಿ ಸೆರೆಯನು ಬಿಡಿಸಿದ ದೇವನ |
ಸೇವಕರು ನರರೆ ನಿಮಗವರು ||
ಭಾವಜನಯ್ಯನ ಪದವ ನೆನೆದರೆ |
ಪಾವನ ಮಾಡುವ ಪುರಂದರವಿಠಲ ೫

೧೮೧
ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?
ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.
ಸ್ನಾನವೇತಕೆ ಸಂಧ್ಯಾ ಜಪತಪವೇತಕೆ
ಮೌನವೇತಕೆ ಮಾಸವ್ರತವೇತಕೆ ||
ಮಾನಸದಲಿ ವಿಷ್ಣುಧ್ಯಾನವ ಮಾಡುವ
ಜÁ್ಞನವಂತರ ಸಂಗಸುಖದೊಳಿಪ್ಪವರಿಗೆ ೧
ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆ
ಗೋತ್ರಧರ್ಮದ ಪುಣ್ಯ ಫಲವೇತಕೆ ? ||
ಸೂತ್ರದಿ ಜಗವ ಮೋಹಿಸುವ ಮುರಾರಿಯ
ಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ ೨
ಅಂಗದಂಡನೆ ಏಕೆ ಆತ್ಮಗಾಸಿಯು ಏಕೆ
ತಿಂಗಳ ಚಾಂದ್ರಾಯಣವೇತಕೆ ? ||
ಮಂಗಳ ಮಹಿಮ ಶ್ರೀ ಪುರಂದರವಿಠಲನ
ಹಿಂಗದರ್ಚನೆ ಮಾಡುವ ಭಕ್ತ ಜನರಿಗೆ ೩

೧೦೫
ದೂರ ಮಾಡುವರೇನೆ ರಂಗಯ್ಯನ ಪ
ದೂರು ಮಾಡುವರೇನೆ | ಚೋರನೆಂದಿವನನ್ನು |
ಮೂರು ಲೋಕವನು ತಾ | ಪಾಡುವ ರಂಗಯ್ಯನ ೧
ನಂದ ಗೋಕುಲದಲ್ಲಿ ಕಂದರೊಡಗೂಡಿ ಆ-|
ನಂದದಿಂದಲಾಡುವ | ಕಂದ ರಂಗಯ್ಯನ ೨
ಗೊಲ್ಲರ ಮನೆಯಲ್ಲಿ | ಕಳ್ಳತನದಲಿ ಪೊಕ್ಕು |
ಗಲ್ಲವನು ಪಿಡಿದು ಮುದ್ದಿಡುವ ರಂಗಯ್ಯನೆಂದು ೩
ಕಾಮಾಂಧಕಾರದಲಿ | ಕಳವಳಗೊಳಿಸಿದ |
ಶ್ಯಾಮಸುಂದರ ರಂಗ | ಸೋಲಿಸಿ ಪೋದನೆಂದು ೪
ಮಂಗಲ ಮೂರುತಿ ಪು | ರಂದರವಿಠಲನು |
ರಂಗ ಮಂಚದಲಿ ನೆರೆದು | ಹಿಂಗಿ ಪೋದನೆಂದು ೫

೬೧
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ – ಧರೆಯ
ದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.
ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವ
ಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪ
ದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀ
ಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲು
ಶಿಷ್ಟ ಜನರ ಸೇವೆಯನು ಮಾಡುವ ಹಾಗೆ ೧
ಪುಟ್ಟಿಸಿದ ತಾಯಿ – ತಂದೆಯಲ್ಲವೆ ನೀನು – ಒಂದು
ಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||
ಪಟ್ಟೆ – ಪಟ್ಟಾವಳಿ ಬೇಡಲಿಲ್ಲ ನಾನು ಎನ್ನ
ಗುಟ್ಟು ಅಭಿಮಾನಗಳ ಕಾಯೋ ನೀನು ೨
ನಟ್ಟನಡು ನೀರೊಳೀಸಲಾರೆ ನಾನು ಎತ್ತಿ
ಕಟ್ಟೆಯ ಸೇರಿಸಬೇಕಯ್ಯ ನೀನು ||
ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನು
ಸುಟ್ಟು ಬಿಡು ಪುರಂದರ ವಿಠಲ ನೀನು ೩

೨೮೮
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ಪ
ಉರಗಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ೧
ಮಂದರೋದ್ಧಾರ ಬಂದ ಮಾಮನೋಹರ ಬಂದ
ವೃಂದಾವನ ಪತಿ ಗೋವಿಂದ ಬಂದ ೨
ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದ೩
ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದ ೪
ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದನಗೆ ಮುಖ ಪುರಂದರ ವಿಠಲ ಬಂದನೋ ೫