Categories
ರಚನೆಗಳು

ಪುರಂದರದಾಸರು

೨೦
ದೇವಕಿನಂದ ಮುಕುಂದ ಪ
ನಿಗಮೋದ್ಧಾರ – ನವನೀತ ಚೋರ |
ಖಗಪತಿ ವಾಹನ ಜಗದೋದ್ಧಾರ ೧
ಶಂಖ – ಚಕ್ರಧರ – ಶ್ರೀ ಗೋವಿಂದ |
ಪಂಕಜಲೋಚನ ಪರಮಾನಂದ ೨
ಮಕರಕುಂಡಲಧರ – ಮೋಹನವೇಷ |
ರುಕುಮಿಣಿವಲ್ಲಭ ಪಾಂಡುವಪೋಷ೩
ಕಂಸಮರ್ದನ – ಕೌಸ್ತುಭಾಭರಣ |
ಹಂಸ – ವಾಹನ ಪೂಜಿತ ಚರಣ೪
ವರವೇಲಾಪುರ ಚೆನ್ನಪ್ರಸನ್ನ |
ಪುರಂದರವಿಠಲ ಸಕಲಗುಣ ಪೂರ್ಣ೫

೧೮೨
ದೇಹವೇಕೆ ನಮಗೆ ದೇಹ – ದೇಹ ಸಂಬಂಧಗಳೇಕೆ |
ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.
ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |
ಮುಚ್ಚಿ ಹೂಳಿದ ಹೊನ್ನು ಹಣವೇತಕೆ |
ಪಚ್ಚೆ ಮಾಣಿಕ ವಜ್ರ ವೈಡೂರ್ಯವೇತಕೆ |
ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ ೧
ಹೆಂಡಿರು ಮಕ್ಕಳು ಏಕೆ – ಹಣ ಹೊನ್ನು ಎನಲೇಕೆ |
ಕಂಡ ವೇದ ಶಾಸ್ತ್ರಗಳನೋದಲೇಕೆ – ಭೂ ||
ಮಂಡಲಾಧಿಪತ್ಯವೇಕೆ – ಮೇಲೆ ಸೌಂದರ್ಯವೇಕೆ |
ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ ೨
ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |
ಚೆಂದುಳ್ಳ ವಿಹಿತ ಕರ್ಮಗಳೇತಕೆ |
ಇಂದಿರೇಶ ನಮ್ಮ ಪುರಂದರವಿಠಲನ |
ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ ೩

೧೮೩
ಧನವಗಳಿಸಬೇಕಿಂತಹದು – ಈ
ಜನರಿಗೆ ಕಾಣಿಸದಂತಹದು ಪ.
ಕೊಟ್ಟರೆ ತೀರದಂತಹದು – ತನ್ನ
ಬಿಟ್ಟು ಅಗಲಿ ಇರದಂತಹದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ
ಮುಟ್ಟರು ಆರು ಅಂತಹದು ೧
ಕರ್ಮವ ನೋಡಿಸುವಂತಹದು
ಧರ್ಮವ ಮಾಡಿಸುವಂತಹದು
ನಿರ್ಮಲವಾಗಿದೆ ಮನಸಿನೊಳಗೆ ನಿಜ
ಧರ್ಮವ ತೋರಿಸುವಂತಹದು ೨
ಅಜ್ಞಾನವು ಬಾರದಂತಹದು – ನಿಜ
ಸುಜ್ಞಾನವ ತೋರುವಂತಹದು
ವಿಜ್ಞಾನಮೂರ್ತಿ ಪುರಂದರವಿಠಲನ
ಪ್ರಜ್ಞೆಯನ್ನು ಕೊಡುವಂತಹದು ೩

೨೧
ಧರಣಿಗೆ ದೊರೆಯೆಂದು ನಂಬಿದೆ – ಇಂಥ – |
ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪ
ಕಾಡಿಬೇಡುವರಿಗೆ ಕೊಡಲಾರದೆ ಅಂಜಿ |
ಓಡಿ ನೀರೊಳು ಸೇರಿಕೊಂಡೆ ಬೇಗ ||
ಹೇಡಿಯ ತೆರದಲಿ ಮೋರೆಯ ತೋರದೆ |
ಓಡಿ ಅರಣ್ಯದಿ ಮೃಗಗಳ ಸೇರಿದೆ೧
ಬಡವರ ಬಿನ್ನಪ ಲಾಲಿಸದಲೆ ಹಲ್ಲ |
ಕಡುಕೋಪದಲಿ ತೆರೆದಂಜಿಸಿದೆ ||
ತಡೆಯದೆ ಭಿಕ್ಷುಕನಾದರು ಬಿಡರೆಂದು |
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆಯೊ೨
ಉತ್ತಮನೆಂದರೆ ಮತ್ತೆ ಚೋರನಾದೆ |
ಬತ್ತಲೆ ನಿಂತು ತೇಜಿಯನೇರಿದೆ |
ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ |
ಚಿತ್ತಜ ಜನಕ ಶ್ರೀ ಪುರಂದರವಿಠಲನೆ ೩

೧೮೬
ಧರ್ಮ ದೊರಕುವದೇ | ದುಷ್ಕರ್ಮಿಸತ್ತಿಯೊಳು
ಪುರುಷಾಧಮನಿಗೆ ಧರ್ಮ ದೊರಕುವದೆ ಪ.
ಧನವಿದ್ದರೇನಯ್ಯ ಮನವಿಲ್ಲವು | ಮನವಿದ್ದರೇನಯ್ಯ ಧನವಿಲ್ಲವು |
ಧನವು ಮನವು ಯರಡುಂಡ್ಯಾದ ಮನುಜಗೆ
ಅನುಕೂಲವಾದಂಥ ಸತಿಯಿಲ್ಲವಯ್ಯ ೧
ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡ
ನಾಳ್ಯಾರೊ ನಾವ್ಯಾರೊ ಯಲೊ ಮಾನವಾ | ಊಳಿಗದವ ಬಂದು
ಬಾಬಾರೆಂದೆಳವಾಗ ಆಗ ಮಾಡುವೆನೆಂದರೆ ದೊರಕುವುದೇ ಧರ್ಮ೨
ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆ
ಪರಿಪರಿಯಾಗವನು | ಈ ಬೀಡಬಿಟ್ಟು ಆ ಬೀಡ ಹೋದ ಮೇಲೆ
ಆಗ ಮಾಡುವೆನೆಂದರೆ ದೊರಕುವದೆ ೩
ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡು
ಇನ್ನು ನಾಚಿಕೆಯಿಲ್ಲವೆ ತನಗೆ | ನನ್ನದು ನನ್ನದುಯೆಂಬ
ಭ್ರಾಂತಿಯ ಬಿಟ್ಟು ಕುನ್ನಿ ದೇಹವನಚ್ಚಿ ಕೆಡಬ್ಯಾಡ ಮನುಜ೪
ವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವ
ಮುಂದನ ಜನ್ಮಕೆ ಸಾಧನವು ತಂದೆ ಶ್ರೀ ಪುರಂದರ
ವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ ೫

೧೮೫
ಧರ್ಮಕ್ಕೆ ಕೈಬಾರದೀ ಕಾಲ – ಪಾಪ – |
ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.
ದಂಡದೋಷಕೆ ಉಂಟು ಪುಂಡುಪೋಕರಿಗುಂಟು |
ಹೆಂಡಿರು – ಮಕ್ಕಳಿಗಿಲ್ಲವೀ ಕಲಿಗಾಲ ||
ಭಂಡೆಯರಿಗುಂಟು ದಿಂಡೆಯರಿಗುಂಟು – ಬೇಡಿ – |
ಕೊಂಡಿವರಿಗಿಲ್ಲವು ಈ ಕಲಿಕಾಲ ೧
ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |
ಹೆತ್ತತಾಯಿಗಿಲ್ಲ ಈ ಕಲಿಕಾಲ ||
ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |
ಉತ್ತಮರಿಗೆ ಇಲ್ಲವೀ ಕಲಿಕಾಲ ೨
ಹುಸಿದಿಟವಾಯಿತು ರಸ – ಕಸವಾಯಿತು |
ಮಸಿ ಮಾಣಿಕವಾಯಿತೀ ಕಾಲ ||
ವಸುಧೆಯೊಳಗೆ ನಮ್ಮ ಪುರಂದರವಿಠಲನ |
ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ ೩

೧೮೪
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |
ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊಪ.
ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟ
ಸಾಲ ಕೇಳಗೊಡನು |
ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆ
ಬಿಡನು ಯಮನು ೧
ಮಾಳಿಗೆ ಮನೆಯ ಇರಲು ಜಾಳಿಗೆ ತುಂಬ
ಹೊನ್ನು ಇರಲು |
ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆ
ಯಮನು ಬಿಡನು ೨
ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |
ಕರ್ತು ಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ ೩

೧೮೭
ಧರ್ಮವೇ ಜಯವೆಂಬ ದಿವ್ಯ ಮಂತ್ರ |
ಮರ್ಮಗಳನೆತ್ತಿದರೆ ಒಳಿತಲಾ ಕೇಳಿ ಪ.
ವಿಷವನುಣಿಸಿದಗೆ ಷಡುರಸವನುಣಿಸಲುಬೇಕು |
ದ್ವೇಷಮಾಡುವನ ಪೋಷಿಸಲು ಬೇಕು ||
ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |
ಅಸು ಹೀರಿದನ ಹೆಸರ ಮಗನಿಗಿಡಬೇಕು ೧
ಹಿಂದೆ ನಿಂದಿಸುವರನು ವಂದಿಸುತಲಿರಬೇಕು |
ಬಂಧಿಸಿದವನ ಕೂಡ ಬೆರೆಯಬೇಕು ||
ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |
ಕೊಂದವನ ಗೆಳತನವ ಮಾಡಬೇಕಯ್ಯ ೨
ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು |
ಕಂಡರಾಗದವರ ತಾ ಕರಿಯಬೇಕು ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ – |
ಖಂಡ ಮಹಿಮೆಯನರಿತು ನೆನೆಯಬೇಕಯ್ಯ ೩

೨೮೭
ಧಾನ್ಯ ದೊರಕಿತು ಎನಗೆ
ಧನವು ದೊರಕಿತು ಪ
ಓಣಿಯೊಳಗೆ ಹೋದ ಮಾ-
ಣಿಕ್ಯದ ಹರಳು ದೊರಕಿತೋ ಅ.ಪ
ಕಟ್ಟಿ ಹಗೆಯ ಹಾಕುವುದಲ್ಲ
ಒಟ್ಟಿ ಕೆಸರ ಬಡಿಯುವುದಲ್ಲ ||
ಮುಟ್ಟಿ ಹಿರಿದು ಮೇಯಿಸಿದರೊಂ
ದಿಷ್ಟು ಸೂಡು ಸವಿಯಲಿಲ್ಲ ೧
ಹರಿದು ಗೊಣಸು ಹಚ್ಚುವುದಲ್ಲ
ಮುರಿದು ಸಣ್ಣಗೆ ಮಾಡುವುದಲ್ಲ ||
ಅರಿದು ಇದನು ಪೇಟೆಗೆ ಒಯ್ದರೆ
ಕರೆದು ಬೆಲೆಯನು ಕಟ್ಟುವುದಲ್ಲ ೨
ಪಾಲು ಪಸುಗೆ ಹಂಚುವುದಲ್ಲ
ಮೇಲೆ ಚಾರರು ಒಯ್ಯುವುದಲ್ಲ ||
ಶ್ರೀಲೋಲ ಪುರಂದರ ವಿಠಲನ
ಮೂಲನಾಮ ದೊರಕಿತಲ್ಲ೩

೩೧೯
ಧೂಪಾರತಿಯ ನೋಡುವ ಬನ್ನಿ ನಮ್ಮ
ಗೋಪಾಲಕೃಷ್ಣನ ಪೂಜೆಯ ಸಮಯದಿ ಪ.
ಅಗುರು ಚಂದನ ಧೂಪ ಗುಗ್ಗುಳ ಸಾಮ್ರಾಣಿ
ಮಘಮಘಿಸುವ ಧೂಪದಾರತಿಯು ||
ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮ
ಜಗನ್ನಾಥ ಕೃಷ್ಣನ ದೇವರ ಪೂಜೆಯ ೧
ಮದ್ದಳೆ ಜಾಂಗಟಿ ತಾಳ ತಮ್ಮಟೆ ಭೇರಿ
ತದ್ಧಿಮಿ ಧಿಮಿಕೆಂಬ ನಾದಗಳು ||
ಹೊದ್ದಿದ ಧವಳ ಶಂಖದ ಘೋಷಣಂಗಳ
ಪದ್ಮನಾಭನ ದಿವ್ಯ ದೇವರ ಪೂಜೆಯ ೨
ಢಣ ಢಣ ಢಣರೆಂಬ ತಾಳ ದಂಡಿಗೆ ವೇಣು
ಢಣಕು ಧಿಮಿಕು ಎಂಬ ಮದ್ದಳೆಯು ||
ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳ
ಘನರಾಗದಿಂದಲಿ ಹಾಡುತ ಪಾಡುತ ೩
ಮುತ್ತು ಛತ್ರ ಚಾಮರ ಪತಾಕ ಧ್ವಜ
ರತ್ನ ಕೆಚ್ಚಿದ ಪದಕ ಹಾರಗಳು ||
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ
ಸತ್ಯಭಾಮೆ ರುಕ್ಮಿಣಿಯರರಸನ ೪
ಹರ ಬ್ರಹ್ಮ ಸುರಪತಿ ದೇವತೆ ಮೊದಲಾದ
ಪರಮ ಪಾವನ ಮೂರ್ತಿ ಪುರುಷೋತ್ತಮನ ||
ಪರದೈವತವೆಂದು ಬಿರುದು ಪೊಗಳಿಸಿಕೊಂಬ
ಪುರಂದರವಿಠಲನ ಪೂಜೆಯ ಕಾಲದ ೫

೩೪೬
ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ |
ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ಪ.
ಬಲದಲಬುಜಭವ ಭವಾದಿಗಳೆಡದಲಿ |
ಉಲಿವ ವೇದ – ಉಪನಿಷದುಗಳು ||
ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ |
ಹಲವು ಋಷಿ – ಮುನಿನಿಕರ ಹಿಂದೆ ಬರುತಿರಲು ೧
ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ |
ಚಿತ್ತಜಾತನು ವ್ಯಜನವ ಬೀಸಲು ||
ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು |
ಹಸ್ತದ ಕಾಳಂಜಿ ಹರಿಣಾಂಕನು ಬರೆ ೨
ವರುಣನು ಸ್ವಾದುಜಲವ ಪಿಡಿದು ಬರೆ |
ತರುಣಿ ತನಗೆ ಆಧಾರದಂತಿರಲು ||
ಸುರರು ಸುಮನಗಳಿಂದ ಸರ್ವರು ತಮತಮ್ಮ |
ಪರಿಪರಿ ಆಯುಧಗೊಂಡು ಬಳಸಿಬರೆ ೩
ಮಂದರ ಮಧ್ಯಮ ತಾರಕ ಮೋಹನ |
ದಿಂದ ಗಂಧರ್ವರು ಗಾನಮಾಡೆ ||
ತೋಂಧಿಮಿಧಿಮಿಕೆಂದು ತಾಳಮೇಳದೆ ನಾ – |
ರಂದ ಪಾಡಲು ಆಡುತಾಡುತ ಬರುತಿರೆ ೪
ಲೋಕನಾಯಕ ಲೋಕೈಕ ರಕ್ಷಾಮಣಿ |
ಸಾಕಾರರೂಪ ಸದ್ಗುಣಭರಿತ ||
ವೆಂಕಟೇಶ ವ್ಯಾಸಮುನಿವರದನಾದ ಕರು – |
ಣಾಕರ ಪುರಂದರವಿಠಲನು ಗರುಡ ೫

೧೮೯
ನಂಬದಿರು ಈ ದೇಹ ನಿತ್ಯವಲ್ಲ |
ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ ಪ.
ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ |
ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು |
ಹುಲುದೇಹವನು ನೆಚ್ಚಿ ಕೆಡಬೇಡ ಮನವೆ ೧
ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ |
ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ |
ಗತಿಶೂನ್ಯನಾಗಿ ಕೆಡಬೇಡ ಮನವೆ ೨
ಪರರ ನಿಂದಿಸದೆ ಪರವಧಗಳನು ಬಯಸದೆ |
ಗುರು – ವಿಪ್ರಸೇವೆಯನು ಮಾಡು ಬಿಡದೆ ||
ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು |
ಪರಮ ಪುರಂದರವಿಠಲನೊಲಿದು ಪಾಲಿಸುವ ೩

೧೯೦
ನಂಬಬೇಡ ನಾರಿಯರನು
ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು
ಡಂಬಕವೆಂದು ತಿಳಿಯಿರೊ ಪ.
ನೋಟವೆಲ್ಲ ಪುಸಿಯು – ಸತಿಯ
ರಾಟವೆಲ್ಲ ಸಂಚು – ಸನ್ನೆ
ಕೂಟವೆಲ್ಲ ಗನ್ನ – ಘಾತುಕ
ನೋಟವೆಲ್ಲ ವಂಚನೆ
ವಾತಬದ್ಧ ಹೆಂಗಳಲ್ಲಿ
ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು
ಬೂಟಕವೆಂದು ತಿಳಿಯಿರೊ ೧
ಸೋತನೆಂದು ವಿಟಗೆ ದೈನ್ಯ
ಮಾತನಾಡಿ ಮರುಳಗೊಳಸಿ
ಕಾತರವ ಹುಟ್ಟಿಸಿ ಆವನ
ಮಾತೆ – ಪಿತರ ತೊಲಗಿಸಿ
ಪ್ರೀತಿ ಬಡಿಸಿ ಹಣವ ಸೆಳೆದು
ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ
ಚಾತಿಕಾರ್ತಿ ಹೆಂಗಳೆಯರ ೨
ಧರೆಯ ಜನರ ಮೋಹಕೆಳಸಿ
ಭರದಿ ನೆಟ್ಟು ಕೆಡಲುಬೇಡ
ಎರೆಳೆಂಗಳ ಹೆಂಗಳೊಲುಮೆ
ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ
ಸ್ಥಿರವಿಲ್ಲದ ಜನ್ಮದಲ್ಲಿ
ಕರುಣನಿಧಿ ಪುರಂದರವಿಠಲನ
ಚರಣ ಸ್ಮರಣೆ ಮಾಡಿರೊ ೩

೧೯೧
ನಂಬಿ ಕೆಟ್ಟವರುಂಟೆ – ಕೃಷ್ಣಯ್ಯನ |
ನಂಬಲಾರದೆ ಕೆಟ್ಟರು ಪ.
ಅಂಬುಜನಾಭನ ಪಾದವ ನೆನೆದರೆ |
ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ ಅಪ
ಬಲಿಯ ಪಾತಾಳಕಿಳುಹಿ – ಭಕ್ತನ ಬಾ – |
ಗಿಲವ ಕಾಲುವೆ ನಾನೆಂದ ||
ಛಲದೊಳು ಅಸುರರ ಶಿರಗಳ ತರಿದು ತಾ |
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ ೧
ತರಳ ಪ್ರಹ್ಮಾದಗೊಲಿದು – ಹಿರಣ್ಯಕನ ಉ – |
ಗುರಿನಿಂದಲೆ ಸೀಳಿದ |
ಕರಿರಾಜಗೊಲಿದು ನೆಗಳು ನುಂಗುತಿರಲಾಗ ||
ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ ೨
ಪಾಂಡವರಿಗೆ ಒಲಿದು – ಕೌರವರನು |
ತುಂಡು ಛಿದ್ರಮಾಡಿದೆ ||
ಗಂಡರೈವರ ಮುಂದೆ ದ್ರೌಪದಿ ಕೂಗಲು |
ಕಂಡು ಕರುಣದಿ ಕಾಯ್ದ ಪುರಂದರವಿಠಲನ ೩

೨೮೯
ನಂಬಿದೆ ನಿನ್ನ ಪಾದವ – ವೆಂಕಟರಮಣ
ನಂಬಿದೆ ನಿನ್ನ ಪಾದವ || ಪ
ನಂಬಿದೆ ನಿನ್ನ ಪದಾಂಬುಜಯುಗಳವ
ಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ . ಪ
ತಂದೆಯು ನೀನೆ ತಾಯಿಯು ನೀನೆ
ಬಂಧು ಬಳಗವು ನೀನೆ ||
ಬಂದ ದುರಿತವೆನ್ನ ಹೊಂದಿಕೊಳ್ಳದಂತೆ
ತಂದೆ ಸಲಹೊ ಮುಕುಂದ ಮುರಾರಿ ೧
ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು ||
ಗಕ್ಕನೆ ಜ್ಞಾನವನಕ್ಕರೆಯಲಿ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ ೨
ಮರೆತು ನಾ ಮಾಯೆಯೊಳು ಮುಳುಗಿದೆ ಅದ
ನರಿತು ಅರಿಯದಾದೆ ||
ಮರೆಯದೆ ಎನ್ನನು ಪೊರೆಯೆ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರ ವಿಠಲ ೩

೧೮೮
ನಗೆಯು ಬರುತಿದೆ – ಎನಗೆ
ನಗೆಯು ಬರುತಿದೆ ಪ.
ಜಗದೊಳಿದ್ದ ಮನುಜರೆಲ್ಲ
ಹಗರಣ ಮಾಡುವುದ ನೋಡಿ ಅಪ
ಪರಸತಿಯರ ಒಲುಮೆಗೊಲಿದು
ಹರುಷದಿಂದ ಅವರ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರೆಳನೆಣಿಸುವರ ಕಂಡು ೧
ಪತಿಯ ಸೇವೆ ಬಿಟ್ಟು, ಪರ
ಸತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಡುವರ ಕಂಡು ೨
ಹೀನಗುಣವ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮಾನಿ ಪುರಂದರವಿಠಲನ
ಧ್ಯಾನ ಮಾಡುವವರ ಕಂಡು ೩

೬೨
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ –
ಹೇ ಗಿಣಿ – ಹೇ ಗಿಣಿಯೇ |
ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯ್ತ – ಹೇಗಿಣಿ ಪ.
ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ – ಹೇ ಗಿಣಿ
ತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ – ಹೇ ಗಿಣಿ ೧
ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ – ಹೇ ಗಿಣಿ
ಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ – ಹೇ ಗಿಣಿ ೨
ಬಲೆಯ ಹಾಕಿದರು ಬಲೆಯದಾಟುವದಯ್ಯ – ಹೇ ಗಿಣಿ
ಚೆಲುವ ಪುರಂದರವಿಠಲನೇ ಬಲ್ಲ – ಹೇ ಗಿಣಿ ೩

ಯಾದವ ಕುಲದ ಶೂರ ರಾಜನ ಮಗಳು
೧೬
ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ ನಿನ್ನತೊಡರ ನಿರ್ಣಯಿಸಿಕೊಂಬೆನು ತೋಯಜಾಕ್ಷ ಪ
ಆದಿಯಲ್ಲಿ ಎನ್ನ ತಾತ ಮುತ್ತಾತರುಪಾದ ಸೇವೆಯ ಮಾಡಿ | ಹಲವು ಕಾಲ ||
ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆಆಧಾರವಾದುದನು ಏಕೆ ಕೊಡಲೊಲ್ಲೆ ೧
ಸಾಲವ ಕೇಳಲು ಸಟೆ ಟೌಳಿಯನಾಡಿಕಾಲವ ಕಳೆವೆ ನೀ ಕಪಟದಿಂದ ||
ಮೇಲಿನ ವಿಬುಧರು ಮೆಚ್ಚುವಂತೆ ನಿನ್ನಕಾಲಿಗೆ ಎನ್ನ ಕೊರಳ ಕಟ್ಟಿಕೊಳ್ಳುವೆ ೨
ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆ
ಅನುಮಾನವೇಕೆ ದಯೆಪಾಲಿಸೈ ಈಗವನಜಾಕ್ಷ ತಂದೆ ಪುರಂದರವಿಠಲ ೩

೧೦೬
ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|
ಗುಮ್ಮನು ಎಳೆದೊಯ್ವನು ಪ
ಎಡದ ಕೈಯಲಿ ಕಪಾಲ-ಗೋಪಾಲಾ-|
ಬಲದ ಕೈಯಲಿ ತ್ರಿಶೂಲ ||
ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |
ಅಲೆದು ಸ್ಮಶಾನವ ತಿರುಗುವನಂತೆ ೧
ಮೂರು ಕಣ್ಣಿನವನೊ-ಗೋಪಾಲಾ-|
ಐದು ತಲೆಗಳವನೊ ||
ದಾರಿಯ ಪೋಗುವ ನಾರಿಯನೆಳತಂದು |
ಸೇರಿಸಿ ಶಿರದಲ್ಲಿ ಹೊತ್ತನೊ ೨
ಚಂದ್ರನರ್ಧವ ಪಿಡಿದು-ತಲೆಯ ಮೇಲೆ-
ಚೆಂದಕಿಟ್ಟಿರುವನಂತೆ ||
ಅಂದಗಾರನಂತೆ [ಅನಲನೇತ್ರನಂತೆ] |
ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ ೩
ನಿನ್ನ ಮಗನ ಮಗನೊ-ಗೋಪಾಲಾ-|
ಪನ್ನಗ ಭೂಷಣನೋ ||
ಧನ್ಯನಾಗಿ ಶ್ರೀರಾಮ ನಾಮವನು |
ಚೆನ್ನಾಗಿ ಚಿಂತಿಪನೊ ೪
ಕರಿಯಜಿನ ಪೊತ್ತವನೊ ಗೋಪಾಲಾ-|
ನೆರೆದ ಭೂತ ತಂದವನೊ ||
ಶರಧಿ ಶಯನ ನಿನ್ನ ಚರಣ ಪಂಕಜ ಭೃಂಗ |
ಪುರಂದರವಿಠಲ ಪನ್ನಂಗ ಶಯನನೆ ೫

೧೯೨
ನರನಾದ ಮೇಲೆ |
ಹರಿನಾಮ ಜಿಹ್ವೆಯೊಳಿರಬೇಕು ಪ.
ಭೂತದಯಾಪರನಾಗಿರಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು – ಮಾತಿಗೂ ಹರಿ ಎನಬೇಕು ೧
ವೇದ – ಶಾಸ್ತ್ರಗಳನೋದಲು ಬೇಕು |
ಭೇದಾಭೇದವ ತಿಳಿಯಲು ಬೇಕು |
ಸಾಧು – ಸಜ್ಜನರ ಸಂಗದೊಳಿರಬೇಕು ೨
ತಂದೆ – ತಾಯಿಗಳ ಸೇವೆಯು ಬೇಕು |
ಬಂದುದನುಂಡು ಸುಖಿಸಲು ಬೇಕು |
ತಂದೆ ಪುರಂದರವಿಠಲನ ದಯೆಬೇಕು ೩

೨೨
ನರಸಿಂಹ ಮಂತ್ರ ಒಂದೇ ಸಾಕು -ಮಹಾ – |
ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪ
ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |
ಅಸುರನೊಡಲ ಬಗೆದ ದಿವ್ಯವಇಂತ್ರ ||
ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |
ಪಶುಪತಿಗೆ ಪ್ರಿಯವಾದ ಮೂಲ ಮಂತ್ರ ೧
ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |
ಶಿಷ್ಟ ವಿಭೀಷಣನ ಪೊರೆದ ಮಂತ್ರ ||
ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |
ಮುಟ್ಟಭಜಿಪರಿಗಿದು ಮೋಕ್ಷಮಂತ್ರ ೨
ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |
ಕೊಂಡಾಡೆ ಲೋಕಕುದ್ದಂಡ ಮಂತ್ರ ||
ಗಂಡುಗಲಿ ಪ್ರಚಂಡ ಹಿಂಡು ದಾನವರ |
ಗಂಡ ಪುರಂದರವಿಠಲನ ಮಹಾ ಮಂತ್ರ ೩

೨೦೧
ನಲಿದಾಡೆ ಎನ್ನ ನಾಲಿಗೆ ಮೇಲೆ – ಸರಸ್ವತಿ ದೇವಿ ಪ
ಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪ
ಸಲಿಲಜೋದ್ಬವನ ವದನ ನಿಲಯಳೇ
ಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪ
ಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |
ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |
ತಳಿರ ಪೋಲುವ ದಿವ್ಯ ಪಾದ | ಚೆಲ್ವಪೆಂಡೆಯ ಭೇದ ||
ನಲಿವ ಯುಗಳ ಜಂಘೆ | ಜಲಗುಳ್ಳೆಯಂತೆ ಜಾನು |
ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ೧
ದಿನಕರ ಕೋಟಿ ತೇಜದಿ ಹೊಳೆವ ಅನುಪಮವಾದ |
ಕನಕವಸನದಿಂದಲಿ ಎಸೆವ | ಘನವಾದ ಜಘನಗ-
ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||
ತನು ಜಠರವು ಜಾಹ್ನವಿ ಸುಳಿ ನಾಭಿಯು |
ಘನಸ್ತನಯುಗಳ ಚಂದನಲೇಪಿತಳೆ೨
ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|
ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |
ಸೊಂಡಿಲಿನಂತೆ ಭುಜದ ಭಾರ ನಡೆವ ಒಯ್ಯಾರ ||
ಮಂಡಿತವಾದ ಕಂಕಣ ತೋಳ್ಬಳೆಗಳು |
ದುಂಡು ಹವಳ ಕೈಕಟ್ಟುಳ್ಳವಳೆ ೩
ನಸುನಗು ಮುಖವು ನಾಸಾಭರಣ | ಎಸೆವ ಕಪೋಲ |
ಹೊಸ ಕುಂಡಲ ಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |
ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||
ಶಶಿ ಸೂರ್ಯರ ಆಭರಣ ಸುಶೋಭಿತೆ |
ಕುಸುಮ ಮುಡಿದ ಮೂರ್ಧಜವುಳ್ಳವಳೇ ೪
ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |
ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |
ಹಿಂಗದೆ ಭಕ್ತರ ಸಲಹುವ ಭಾರ | ಕಂಗಳ ಮನೋಹರ ||
ರಂಗ ಪುರಂದರ ವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ ೫

೧೦೭
ನಳಿನಜಾಂಡ ತಲೆಯದೂಗೆ |
ಇಳೆಯು ನಲಿದು ಮೋಹಿಸುತಿರಲು ||
ಕೊಳಲ ಪಿಡಿದು ಬಾರಿಸಿದನು |
ಚೆಲುವ ಕೃಷ್ಣರಾಯನು ಪ
ಪೊಳೆವ ಪೊಂಬಟ್ಟೆಯ ದಟ್ಟಿ |
ಅಳವಡಿಸಿ ನೆಗಹಿನಿಂದ ||
ಹಲವು ರನ್ನದುಂಗುರವಿಟ್ಟ |
ಚೆಲುವ ಬೆರಳ ನಟಿಸುತ ||
|ಲಲಿತ ವಾಮಭಾಗ ತೋಳ-|
ಲೊಲಿದು ಓರೆನೋಟದಿಂದ ||
ಬಲದ ಪಾದ ಎಡಕೆ ಚಾಚೆ |
ನಳಿನಪದಗಳೊಪ್ಪುತಿರಲು ೧
ಸೆಳನಡುವಿನೊಳಗೆ ಕತ್ತರಿ |
ಕಳೆಯ ಸಂಚಿ, ಗಜುಗು ಚೀಲ ||
ಬಿಳಿಯ ಮಣಿಯು ಗುಳ್ಳೆಗಳಿರಲು |
ಮಲಯಜಾನು ಲೇಪನ ||
ಜಲಜನೇತ್ರ ಕೌಸ್ತುಬಾಧಿ-|
ಗಳದಿ ಸ್ವರಗಳೊಪ್ಪುತಿರಲು ||
ಲಲಿತ ವೇಣು ಕಲ್ಪನೆಯಲಿ ಗೋ-|
ವಳರೆಲ್ಲರು ಕುಣಿಯಲು ೨
ಮಾರವಿ ದೇಸಿ ಗುರ್ಜರಿ ಭೈರವಿ |
ಗೌರಿ ನಾಟಿ ಸಾವೇರಿ ಆಹೇರಿ ||
ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|
ಶಕರಾಭರಣ ರಾಗದಿ ||
ಪೂರವಿ ಕಲ್ಯಾಣಿ ವಸಂತ ತೋಡಿ |
ವರಾಳಿ ಗುಂಡಕ್ರಿ ಸಾರಂಗ ಸಾಳಗ ||
———————
ಸೋರಟ ಭೂಪಾಳಿ ಶ್ರೀ ರಾಗದಿಂದಲಿ ೩
ಹರುಷದಿ ಬಾರಿಸುವ ರವಕೆ |
ಪುರದ ಸ್ತ್ರೀ ಜನರು ಎಲ್ಲ ||
ಮರೆದು ಮಕ್ಕಳ ಮನೆಯ ಕೆಲಸ |
ಮರೆದು ಹರಿಯ ಬಳಸಲು ||
ಕರಿಯು ಮೃಗವು ಕೇಸರಿ ಶರಭ |
ಹರಿಣ ನವಿಲು ಉರಗ ಮೋಹಿಸಿ ||
ನೆರೆದು ಮರೆದು ಜಾತಿವೈರವ |
ಸ್ವರವ ಕೇಳುತಿರಲು ೪
ಕರಗೆ ಗಿರಿಯ ಕಲ್ಲು ತರುಗ-|
ಳೆರಗಿ ಪಕ್ಷಿ ತತಿಗಳಿರಲು ||
ಸುರರು ಸುಮನ ಸುರಿಯುತಿರಲು |
ಧರೆಯು ಮುದದಿ ಕುಣಿಯುತಿರಲು ||
ಶರಧಿ ಉಕ್ಕಿ ಸರಿತು ಸೊಕ್ಕಿ |
ಪುರರಿಪು ವಿಧಿ ಪೊಗಳುತಿರಲು ||
ವಿರಚಿಸಿದ ಪುರಂದರವಿಠಲ |
ಮುರಲಿಗಾನ ಮಾಡಿದ ೫

೨೯೦
ನಾ ನಿನಗೇನ ಬೇಡುವುದಿಲ್ಲ – ಎನ್ನ
ಹೃದಯಕಮಲದೊಳು ನೆಲಸಿರು ಹರಿಯೆಪ
ಶಿರ ನಿನ್ನ ಚರಣಕೆರಗಲಿ -ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ ||
ನಿರುಮಾಲ್ಯ ನಾಸ ಘ್ರಾಣಿಸಲಿ -ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ ೧
ನಾಲಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ ||
ಕಾಲು ತೀರ್ಥಯಾತ್ರೆಗೆ ಪೋಗಲಿ -ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ ೨
ಚಿತ್ತ ನಿನ್ನೊಳು ಮುಳುಗಾಡಲಿ -ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ ||
ತತ್ತ್ವಯೋಗಾಭ್ಯಾಸಕ್ಕಾಗಲಿ -ಉಕ್ಕಿ
ಸತ್ಯ ಮೂರುತಿ ನಮ್ಮ ಪುರಂದರ ವಿಠಲ * ೩

೧೯೪
ನಾ ನಿನ್ನ ಧ್ಯಾನದೊಳಿರಲು – ಇಂಥ
ಹೀನ ಮಾನವರಿಂದೇನಾಹೋದು ಹರಿಯೆ ಪ.
ಮಚ್ಚರಿಸಿದರೇನ ಮಾಡಲಾಪರೊ ಎನ್ನ
ಅಚ್ಯುತ ನಿನ್ನದೊಂದು ದಯವಿರಲು ||
ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆ
ಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ ೧
ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲು
ಧೂಳು ರವಿಗೆ ತಾನು ಮುಸುಕುವುದೇ ||
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?
ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ ೨
ಕನ್ನಡಿಯೊಳಗಿನ ಗಂಟ ಕಂಡು ಕಳ್ಳ
ಕನ್ನವಿಕ್ಕಲು ವಶವಾಗುವುದೇ ?
ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆ
ಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ ೩

೨೯೫
ನಾ ಮಾಡಿದ ಕರ್ಮ ಬಲವಂತವಾದರೆ |
ನೀ ಮಾಡುವುದೇನೊ ದೇವಾ ಪ
ಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪ
ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|
ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||
ಮತಿಹೀನನಾಗಿ ಮರುಳಾಗಿದ್ದೆನೋ ದೇವ |
ಗತಿ ಯಾವುದೈ ಎನಗೆ ಗರುಡವಾಹನ ಕೃಷ್ಣ ೧
ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |
ಸ್ನಾನ ಸಂಧ್ಯಾದಿ ಕರ್ಮಂಗಳ ನೀಗಿ ||
ದಾನವಾಂತಕ ನಿನ್ನ ಧ್ಯಾನವ ಮಾಡದೆ |
ಶ್ವಾನನಂತೆ ಮನೆಮನೆ ತಿರುಗುತಲಿದ್ದೆ ೨
ಇನ್ನಾದರು ನಿನ್ನ ದಾಸ ಸಂಗವನಿತ್ತು |
ಮನ್ನಿಸಿ ದಯಮಾಡೊ ಮನ್ಮಥಜನಕ ||
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |
ಪನ್ನಂಗಶಯನ ಶ್ರೀಪುರಂದರವಿಠಲ ೩

೧೦೮
ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|
ನಾಮವೆ ಕಾಯಿತು ನಾನೇನೆಂದೆ ಪ
ಸುರತರು ನೀನು ಫಲ ಬಯಸುವೆ ನಾನು |
ಸುರಧೇನು ನೀನು ಕರೆದುಂಬೆ ನಾನು ||
ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |
ಶರಧಿಕ್ಷೀರನು ನೀನು ತರಳನೈ ನಾನು ೧
ಅನಾಥನೈ ನಾನು ಎನಗೆ ಬಂಧುವು ನೀನು |
ದೀನ ಮಾನವ ನಾನು ದಯವಂತ ನೀನು ||
ದಾನವಂತಕ ನೀನು ಧೇನಿಸುವೆನು ನಾನು |
ಜ್ಞಾನಗಂಭೀರ ನೀನು ಅಜ್ಞಾನಿ ನಾನು ೨
ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |
ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||
ತಂದೆ ಪುರಂದರವಿಠಲರಾಯ ನೀ |
ಬಂದೆನ್ನ ಮನದಲ್ಲಿ ನಲಿನಲಿದಾಡೊ ೩

೧೯೩
ನಾಚಿಕೆಪಡಬೇಡ – ಮನದೊಳು –
ಯೋಚಿಸಿ ಕೆಡಬೇಡ ಪ.
ನಿಚ್ಚ ನೆನೆಯೊ ನಮ್ಮಚ್ಯುತನಾಮವ |
ಮೆಚ್ಚಿ ಕೊಟ್ಟರೆ – ಅಚ್ಯುತ ಪದವೀವ ಅಪ
ಹರಿಹರಿಯೆಂದೊದರೋ – ಹತ್ತಿದ – |
ದುರಿತಗಳಿಗೆ ಬೆದರೋ ||
ವಾರಿಜಾಕ್ಷನ – ವೈಕುಂಠಪುರವ |
ಸೇರಿಸೇರಿ ನೀ ಕುಣಿಕುಣಿದಾಡೊ ೧
ಆರಗೊಡವೆ ಏನೋ – ನರಕದ |
ದಾರಿ ತಪ್ಪಿಸುವರೆ ||
ನೀರಜಾಕ್ಷ ನಮ್ಮ ನಿರ್ಜರ ಪತಿಯಲಿ |
ಸೇರಿ – ಸೇರಿಸಿ ಮನ ನಲಿನಲಿದಾಡೊ ೨
ಭಕ್ತಜನರ ಕೂಡೊ – ಭವಭಯ |
ಬತ್ತಿಪೋಪುದು ನೋಡೊ ||
ಮುಕ್ತಿದಾಯಕ ಶ್ರೀ ಪುರಂದರವಿಠಲನ |
ಭಕ್ತಿಯಿಂದ ನೀ ಹಾಡಿ ಕೊಂಡಾಡೊ ೩

೨೯೨
ನಾನೇಕೆ ಪರದೇಶಿ ನಾನೇಕೆ ಬಡವನೊ
ಮಾನಾಭಿಮಾನದೊಡೆಯ ವಿಠಲ ಎನಗಿರಲು ಪ
ಮೂರುಲೋಕದ ಒಡೆಯ ಶ್ರೀಹರಿಯು ಎನ್ನ ತಂದೆ
ವಾರಿಜಾಂಬಕೆ ಲಕ್ಷ್ಮೀ ಎನ್ನ ತಾಯಿ ||
ಮೂರು ಅವತಾರದವರೆನ್ನ ಗುರು ಕಾಣಿರೊ
ಸಾರ ಹೃದಯರು ಎನ್ನ ಬಂಧು ಬಳಗ೧
ಇಪ್ಪತ್ತುನಾಲ್ಕು ನಾಮಗಳೆಂಬ ಹಳನಾಣ್ಯ
ಒಪ್ಪದಲಿ ಉಣಲುಂಟು ಉಡಲುಂಟು ತೆಗೆದು ||
ತಪ್ಪದಲೆ ನವಭಕ್ತಿಯೆಂಬ ನವರತ್ನಗಳು
ಮುಪ್ಪು ಇಲ್ಲದ ಭಾಗ್ಯ ಎನಗೆ ಸಿದ್ಧವಿರಲಿಕ್ಕೆ ೨
ಎನಗೆ ಎಂಬವನ ಹೆಸರೇನೆಂಬೆ ಶ್ರೀನಿವಾಸ
ತನಗೆಂದರೆಂದು ಬಗೆವನು ಕಾಣಿರೊ ||
ಘನಮಹಿಮನಾದ ಸಿರಿ ಪುರಂದರ ವಿಠಲನು
ಅನುಮಾನವಿರದೆನ್ನ ಶಿರದ ಮೇಲಿರಲಿಕ್ಕೆ ೩

೨೯೧
ನಾನೇಕೆ ಬಡವನೊ -ನಾನೇಕೆ ಪರದೇಶಿ
ನೀನಿರುವತನಕ ಹರಿಯೇ ಪ
ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟೆಲ್ಲ ಬಳಗ ನೀನೆ ||
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ ೧
ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನ ನೀನೆ
ಇಡು-ತೊಡುವ ವಸ್ತು ನೀನೆ ||
ಮಡದಿ ಮಕ್ಕಳನೆಲ್ಲ ಕಡಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ ೨
ವಿದ್ಯೆ ಹೇಳುವ ಗುರು ನೀನೆ ಬುದ್ಧಿ ಹೇಳುವ ಧಣಿ ನೀನೆ
ಉದ್ಧಾರಕರ್ತ ನೀನೆ ||
ಮದ್ದು ಶ್ರೀ ಪುರಂದರ ವಿಠಲನ ಪಾದದಲಿ
ಬಿದ್ದು ಲೋಲಾಡುತಿರು ಕಾಣು ಮನವೆ ೩

೨೯೩
ನಾನೇನ ಮಾಡಿದೆನೊ-ರಂಗಯ್ಯ ರಂಗ
ನೀನೆನ್ನ ಕಾಯಬೇಕೋ ಪ
ಮಾನಾಭಿಮಾನವು ನಿನ್ನದು ಎನಗೇನು
ದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥
ರಕ್ಕಸತನುಜನಲ್ಲೇ – ಪ್ರಹ್ಲಾದನು
ಚಿಕ್ಕ ಪ್ರಾಯದ ಧ್ರುವನು ||
ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನ
ಅಕ್ಕನ ಮಗನು ಮಗನು ಏನೋ -ರಂಗಯ್ಯ ೧
ಕರಿರಾಜ ಕರಿಸಿದನೇ – ದ್ರೌಪದಿದೇವಿ
ಬರದೋಲೆ ಕಳುಹಿದಳೇ ||
ಕರುಣದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲವೋ -ರಂಗಯ್ಯ
ಒಪ್ಪಿಡಿಯವಲಕ್ಕಿಯ -ನಿನಗೆ ತಂದು
ಒಪ್ಪಿಸಿದವಗೊಲಿದೆ ||
ಒಪ್ಪುವೆ ನಿನಗೆ ಶ್ರೀ ಪುರಂದರ ವಿಠಲವ
ರಪ್ಪಂತೆ ಎನ್ನ ಕಾಯೋ -ರಂಗಯ್ಯ ೩

೨೯೪
ನಾಮವನೊದಗಿಸಯ್ಯ -ಶ್ರೀಹರಿ ನಿನ್ನ |
ನಾಮವನೊದಗಿಸಯ್ಯ ಪ
ನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ |
ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ ಅ.ಪ
ಮಾತನಾಡುವಾಗ ಮಲಗುವಾಗ ನಡೆಯುವಾಗ |
ಭೀತಿಗೊಂಡಾಗ ಎಡಹಿಬೀಳುವಾಗ |
ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|
ನಾಥ ಬಾಂಧವ, ಕೃಷ್ಣಾ, ಕೃಷ್ಣಾ ಎಂದು ಕರೆವ ೧
ತನು ತಾಳದಂಥ ಕ್ಷುಧೆ ದಾಹವಿಕಾರಗ-|
ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||
ವನಜನಾಭ ಗೋವಿಂದ, ವಾಣೀಪತಿಪಿತ ಕೃಷ್ಣ |
ದನುಜ ಮರ್ದನ ಭಕ್ತ ವತ್ಸಲನೆಂದು ಕರೆವ ೨
ಆಸಹ್ಯವಾದ ಜರೆ ರೋಗಂಗಳಾವರಿಸಿ |
ಅಸುಗಳು ಕಂಠಗತವಾಗಿ ಧೃತಿತಪ್ಪಿ ||
ವಿಷಮದೂತನ ಕೈವಶವಪ್ಪ ಸಮಯದಲ್ಲಿ |
ಬಿಸಜಾಕ್ಷ ಪುರಂದರವಿಠಲನೆಂದು ಕರೆವ ೩

೧೯೫
ನಾರಾಯಣ ಎನ್ನಬಾರದೆ – ನಿಮ್ಮ |
ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.
ವಾರಣಾಸಿಗೆ ಪೋಗಿ ದೂರ ಬಳಲಲೇಕೆ |
ನೀರ ಕಾವಡಿಯನು ಪೊತ್ತು ತಿರುಗಲೇಕೆ ||
ಊರುರು ತಪ್ಪದೆ ದೇಶಾಂತರವೇಕೆ |
ದಾರಿಗೆ ಸಾಧನವಲ್ಲವೆ ಹರಿನಾಮ ? ೧
ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |
ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||
ಹಸ್ತವ ಪಿಡಿದು ಮಾಡುವ ಜಪ – ತಪವೇಕೆ
ಮುಕ್ತಿಗೆ ಸಾಧನವಲ್ಲವೇ ಹರಿನಾಮ ? ೨
ಸತಿ – ಸುತರನು ಬಿಟ್ಟು ಯತಿಗಳಾಶ್ರಮವೇಕೆ
ವ್ರತ – ಕೃಚ್ಛ್ರ ನೇಮ – ನಿಷ್ಟೆಗಳೇತಕೆ ||
ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |
ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ ೩

೧೯೬
ನಾರಾಯಣ ಎನ್ನಿರೊ – ಶ್ರೀ ನರಹರಿ |
ನಾರಾಯಣ ಎನ್ನಿರೊ ಪ.
ನಾರಾಯಣನೆಂದು ಅಜಮಿಳ ಕೈವಲ್ಯ |
ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪ
ಚೋರರ ಭಯ ಎಲ್ಲವೊ – ಇದಕೆ ನೋಡೈ – |
ದಾರರಂಜಿಕೆ ಇಲ್ಲವೊ ||
ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||
ಘೋರ ಪಾತಕವೆಲ್ಲ ಹಾರಬಿಡುವುದಿದು ೧
ಕಾಶಿಗೆ ಹೋಗಲೇಕೆ – ಕಾವಡಿ ಹೊತ್ತು – |
ಬೇಸತ್ತು ತಿರುಗಲೇಕೆ |
ವಾಸುದೇವನ ನಾಮ ವರ್ಣಿಸಿದವರಿಗೆ |
ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ ೨
ಸ್ನಾನವ ಮಾಡಲೇಕೆ – ಸಂಧ್ಯಾವಂದನೆ – |
ಮೌನ ಮಂತ್ರಗಳೇತಕೆ ||
ದೀನರಕ್ಷಕ ಬೆಟ್ಟದೊಡೆಯನಾದವನ |
ಧ್ಯಾನಕೆ ಸಮವುಂಟೆ ಪುರಂದರವಿಠಲನ ೩

೨೩
ನಾರಾಯಣ ಗೋವಿಂದ – ಹರಿಹರಿ
ನಾರಾಯಣ ಗೋವಿಂದ ಪ
ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ ಅ.ಪ
ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ ೧
ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ ೨
ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ ೩
ದುರುಳ ಹಿರಣ್ಯನ ಕರುಳುಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ ೪
ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ ೫
ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ ೬
ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ ೭
ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ ೮
ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗೆಯಿಂದ ೯
ಧರೆಯೊಳು ಪರಮ ನೀಚರ ಸವರಲು ಕು –
ದುರೆಯನೇರಿದ ಕಲಿ ಚೆಂದ ೧೦
ದೋಷದೂರ ಶ್ರೀ ಪುರಂದರ ವಿಠಲ
ಪೋಷಿಪ ಭಕ್ತರ ವೃಂದ ೧೧

ಜಗನ್ನಾಥ ಪುರಿಯಲ್ಲಿರುವ ದೇವರಿಗೆ
೩೮
ನಾರಾಯಣ ತೇ ನಮೋ ನಮೋ |ನಾರದಸನ್ನುತ ನಮೋ ನಮೋ ಪ
ಮುರಹರ ನಗಧರ ಮುಕುಂದ ಮಾಧವ |ಗರುಡಗಮನ ಪಂಕಜನಾಭ ||
ಪರಮ ಪುರುಷ ಭವಭಂಜನ ಕೇಶವ |ನರಮೃಗ ಶರೀರ ನಮೋ ನಮೋ ೧
ಜಲಧಿಶಯನ ರವಿಚಂದ್ರ ವಿಲೋಚನ |ಜಜರುಹಭವನುತ ಚರಣಯುಗ ||
ಬಲಿಬಂಧನ ಗೋವರ್ಧನಧಾರಿ |ನಳಿನೋದರ ತೇ ನಮೋ ನಮೋ ೨
ಆದಿದೇವ ಸಕಲಾಗಮ ಪೂಜಿತ |ಯಾದವಕುಲ ಮೋಹನರೂಪ ||
ವೇದೋದ್ದರ ಶ್ರೀವೆಂಕಟನಾಯಕ |ಮೋದದ ಪುರಂದರ ವಿಠಲ ನಮೋ ನಮೋ೩

೨೯೬
ನಾರಾಯಣ ನಿನ್ನ ನಾಮದ ಸ್ಮರಣೆಯ |
ಸಾರಮೃತವೆನ್ನ ನಾಲಗೆಗೆ ಬರಲಿ ಪ
ಕೂಡುವಾಗಲು ನಿಂತಾಡುವಾಗಲು ಮತ್ತೆ |
ಹಾಡುವಾಗಲು ಹರಿದಾಡುವಾಗ ||
ಖೋಡಿ ವಿನೋದದಿ ನೋಡದೆ ನಾ ಬಲು |
ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ ೧
ಊರಿಗೆ ಹೋಗಲಿ ಊರೊಳಗಿರಲಿ-|
ಕಾರಾಣಾರ್ಥಗಳೆಲ್ಲ ಕಾದಿರಲಿ ||
ವಾರಿಜನಾಭ ನರ ಸಾರಥಿ ಸನ್ನುತ |
ಸಾರಿಸಾರಿಗೆ ನಾ ಬೇಸರಿಸದ ಹಾಗೆ ೨
ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |
ರಸ-ಕಸವಿರಲಿ ಹರುಷವಿರಲಿ ||
ವಸುದೇವಾತ್ಮಜ ಶಿಶುಪಾಲಕ್ಷಯ ||
ಅಸುರಾಂತಕ ನಿನ್ನ ಹೆಸರು ಮರೆಯದಂತೆ ೩
ಕಷ್ಟದಲ್ಲಿರಲಿ ಉತ್ರ‍ಕಷ್ಟದಲ್ಲಿರಲಿ-|
ಎಷ್ಟಾದರು ಮತಿಗೆಟ್ಟಿರಲಿ ||
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |
ಅಷ್ಟಾಕ್ಷರ ಮಹಾಮಂತ್ರದ ನಾಮದ ೪
ಕನಸಿನೊಳಾಗಲಿ ಕಳವಳಿಕಾಗಲಿ |
ಮನಸುಗೊಟ್ಟಿರಲಿ ಮುನಿದಿರಲಿ ||
ಜನಕಜಾಪತಿ ನಿನ್ನ ಚರಣಕಮಲವನು |
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ ೫
ಜ್ವರ ಬಂದಾಗಲು ಚಳಿ ಬಂದಾಗಲು |
ಮರಳಿ ಮರಳಿ ಮತ್ತೆ ನಡೆವಾಗಲು ||
ಹರಿನಾರಾಯಣ ದುರಿತ ನಿವಾರಣ |
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ೬
ಸಂತತ ಹರಿ ನಿನ್ನ ಸಾಸಿರನಾಮವ |
ಅಂತರಂಗದಾ ಒಳಗಿರಿಸಿ ||
ಎಂತೋ ಪುರಂದರವಿಠಲರಾಯನೆ |
ಅಂತ್ಯಕಾಲದಲಿ ಚಿಂತಿಸುವಂತೆ ೭

೨೪
ನಾರಾಯಣ ನಿನ್ನ ನಾಮವನು ನೆನೆದರೆ |
ಹಾರಿಹೋಹುದು ಪಾಪ ಜನ್ಮಜನ್ಮಾಂತರದಿ |
ಶ್ರೀ ರಮಣ ನಿನ್ನ ಕೃಪೆಯಿತ್ತೆಮಗೆ ಮುಕ್ತಿಯ –
ದಾರಿ ತೋರಿಸೊ ಮುರಾರಿ ಪ
ಸಕಲ ವೇದ ಪುರಾಣ _ ಶಾಸ್ತ್ರವನು ತಿಳಿದೋದಿ |
ತಿಯಿಂಭಕುತ ತಾಯ್ತಂದೆಗಳ ಚಿತ್ತವಿಡಿದರ |
ರಕುಷಣೆಯ ಮಾಡಿ ಜಗದೊಳಗೆ ವಿಖ್ಯಾತ ಸುಕು –
ಮಾರ ತಾನೆಸಿಸಿಕೊಂಡ ೧
ಪ್ರಕೃತಿಯಲಿ ಹೋಮಕೋಸ್ಕರ ಸಮಿಥೆ ತರಹೋಗಿ |
ಶುಕರುಮಗಳಿಂದ ಚಾಂಡಾಲಿಲೆಯ ಕಂಡು ತಾ – |
ಮೂಕನಾಗಿ ನಿಂದು ಮೈಮರೆದು ಪಾತಾಕಿಯ ಬಹ –
ದುರಿತವನು ತಾನರಿಯದೆ ೨
ನಿಲ್ಲು ನಿಲ್ಲೆಲೆ ಕಾಂತೆ, ನಿನಗೊಲಿದೆ ನೀನಾರೆ |
ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ |
ಚೆಲ್ಲೆನ್ನ ಮೇಲೆ ಕರುಣವನಿಂತು ಕೋಮಲೆಯೆ
ನಿಲ್ಲೆಂದು ಸೆರಗ ಪಿಡಿದ ೩
ಎಲೊ ವಿಪ್ರ ಕೇಳು ನಾ ಕುಲಹೀನೆ ನಮ್ಮ ಮನೆ |
ಹೊಲನೆನದು ಗೋಮಾಂಸ ಚರ್ಮದಾ ಹಾಸಿಕೆಯು |
ಎಲುವಿನಾ ರಾಶಿ ಒದರುವ ನಾಯ ಹಿಂಡುಗಳು –
ಬಹು ಘೋರಘೋರ ವಿಹುದು ೪
ಬಲೆಗೆ ಸಿಲ್ಕಿದ ಪಕ್ಷಿ ಬೇಟೆಗಾರನದಲೇ ? |
ಕುಲವನ್ನು ಕೂಡೆ ನಾ ಕಾಮಿನೀರನ್ನಳೆ |
ಚಲದಿಂದ ಬದುಕುವೆನು ಸುಖದಿಂದಲಿರುವೆ ನೀ
ಒಲವು ನನಗೊಂದೆ ಎಂದ ೫
ವ್ಯರ್ಥ ಎನ್ನೊಡನೆ ಮಾತೇತಕೆಲೊ ಹಾರುವಾ |
ಚಿತ್ತ ನನ್ನಲ್ಲಿ ಇದ್ದರೆ ಹೋಗಿ ನೀ ನಿನ್ನ |
ಹೆತ್ತ ತಾಯ್ತಂದೆಯರ ಕೇಳು ಸಮ್ಮತಿಸಿದರೆ –
ಮತ್ತೆ ನಿನಗೊಲಿವೆನೆನಲು ೬
ಅತ್ತ ಕಾಮಿನಿಯ ಒಡಗೊಡಿ ತನ್ನಯ ಪಿತನ |
ಹತ್ತಿರಕೆ ಹೋಗಿ ಕೇಳಿದರೆ ಆತನು ಎಂದ |
ಉತ್ತಮದ ಕುಲವನೀಡಾಡಿ ಈ ಪಾತಾಕಿಯ –
ಹಸ್ತಕೊಳಗಾಗದಲಿರೈ ೭
ಆಗದಾಗದು ನನ್ನ ಕುಲಬಂಧು – ಬಳಗವನು |
ನೀಗಿ ನಿನ್ನೊಡನೆ ಕೂಡುವೆನೆಂಬ ಮತವೆನಗೆ |
ನಾಗಭೂಷಣನ ಪಣೆಗಣ್ಣಿಲುರಿದನ ಬಾಣ
ತಾಗಿತೆನ್ನೆದೆಗೆ ಎಂದ ೮
ಕೂಗಿ ಹೇಳುವೆ ನಿನ್ನ ಕುಲವಳಿಯದಿರು ಎಂದ |
ಹೋಗಿ ಕೂಡದೆ ನಿನ್ನ ಹೆತ್ತ ತಾಯ್ತಂದೆಗಳಿ – |
ಗಾಗದಿದ್ದರೆ ಆಚೆಯಾ ಮನೆಯೊಳಗೆ ಹೋಗಿ
ಇಬ್ಬರೂ ಇರುವೆವೆಂದ ೯
ಹಾಲಂತ ಕುಲವ ನೀರೊಳಗದ್ದಿ ಪೂರ್ವದಾ |
ಶೀಲವನ್ನಳಿದು ಸತಿಯಳ ಕೂಡಿ ತಾನು ಚಾಂ – |
ಡಾಲಿತಿಗೆ ಹತ್ತು ಮಕ್ಕಳನು ಪಡೆಕೊಂಡವರ
ಲೀಲೆ ನೋಡುತಲಿ ಹಿಗ್ಗಿ೧೦
ಬಾಳಿನಲ್ಲೀ ರೀತಿ ಅಜಮಿಳನು ಇರುತಿರಲು |
ಕಾಲ ಬಂದೊದಗಿತ್ತು ಕರೆಯಿರೆವೆ ಪಾತಕನ |
ಜೋಲುದುಟಿ ಡೊಂಕು ಮೋರೆಯ ಅಬ್ಬರದಿ ಯಮನ –
ಆಳುಗಳು ಬಂದರಾಗ೧೧
ಎಡಗೈಯೊಳಗೆ ಪಾಶ ಹಿಡಿದು ಚಮ್ಮತಿಗೆಗಳ |
ಒಡನೆ ಜಾವಳಿನಾಯಿ ವಜ್ರಮೋತಿಯ ಕಾಯಿ |
ತುಡಿಕಿರೋ ಕೆಡಹಿ ಕಟ್ಟಿರೋ ಪಾತಕನನೆಂದು
ಘುಡುಘುಡಿಸಿ ಬಂದರಾಗ೧೨
ಗಡಗಡನೆ ನುಡುಗಿ ಕಂಗೆಟ್ಟು ಅಜಮಿಳನು ತಾ |
ಕಡೆಯ ಕಾಲಕೆ ಅಂಜಿ ಮಗನ ನಾರಗನೆಂದು |
ಒಡನೊಡನೆ ಕರೆಯಲ್ಕೆ ಯಮನಾಳ್ಗಳೋಡಿದರು
ಮುಟ್ಟಿದುದು ಹರಿಗೆ ದೂರು೧೩
ಕೊರಳ ತುಳಸಿಯ ಮಾಲೆಯರಳ ಪೀತಾಂಬರದ |
ವರಶಂಖ ಚಕ್ರದ್ವಾದಶನಾಮಗಳನಿಟ್ಟ |
ಹರಿಯ ದೂತರು ಅಂಜಬೇಡ ಬೇಡನ್ನುತಲಿ
ಹರಿದೋಡಿಬಂದರಲ್ಲಿ೧೪
ಪುಂಡರೀಕಾಕ್ಷನೀ ಭೃತ್ಯನನು ಬಾಧಿಸುವ |
ಲಂಡಿರಿವರಾರು ನೂಕಿರಿ ನೂಕಿರೆಂತೆಂದು |
ದಂಡವನು ತೆಗೆದು ಬೀಸಾಡಿ ಯಮನವರಿಗು – |
ದ್ದಂಡರಿವರೆಂದರಾಗ ೧೫
ತಂದೆ ಕೇಳಿರಿ ಒಂದು ಭಿನ್ನಪವ ಲಾಲಿಸಿರಿ |
ಒಂದು ದಿನ ಹರಿಯೆಂದು ಧ್ಯಾನವನ್ನರಿಯ ನಾವ್ – |
ಬಂದಾಗ ಆತ್ಮಜನ ನಾರಗನೆ ಎಂದೆನಲು
ಕುಂದಿದುವೆ ಇವನ ಪಾಪ ?೧೬
ಹಂದೆ – ಕುರಿಗಳಿಗೆ ನಿಮಗಿಷ್ಟು ಮಾತುಗಳೇಕೆ |
ನಿಂದಿರದೆ ಹೋಗಿ ನಿಮ್ಮೊಡೆಯನಿಗೆ ಪೇಳೆನಲು |
ಸಂದಲಾ ಯಮಭಟರು ಅಜಮಿಳನ ಹರಿಭಟರು
ತಂದರೈ ವೈಕುಂಠಕೆ ೧೭
ಮದ್ಯಪಾನವ ಮಾಡಿ ಪೆಂಗಳನು ಒಡಗೂಡಿ |
ಅದ್ದಿದೆನು ನೂರೊಂದು ಕುಲವ ನರಕದೊಳೆಂದು |
ಹದ್ದಿನಾ ಬಾಯೊಳಗಿನುರಗನಂತಜಮಿಳನು
ಇದ್ದನವ ನೆರೆಮರುಗುತ೧೮
ವಿಪ್ರಕುಲದಲಿ ಹುಟ್ಟಿ ವೇದಶಾಸ್ತ್ರವನೋದಿ |
ಮುಪ್ಪಾದ ತಾಯಿ – ತಂದೆಗಳೆಲ್ಲರನು ಬಿಟ್ಟು |
ಒಪ್ಪಿ ಧಾರೆಯನೆರೆದ ಕುಲಸತಿಯ ಬಿಟ್ಟು ಕಂ –
ದರ್ಪನಾ ಬಲೆಗೆ ಸಿಕ್ಕಿ೧೯

೧೯೭
ನಾರಾಯಣನೆಂಬ ನಾಮದ ಬೀಜವ ನಿಮ್ಮ
ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.
ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |
ಶ್ವಾಸೋಚ್ವಾಸ ಎರಡೆತ್ತಮಾಡಿ ||
ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ ||
ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ ೧
ಮದಮತ್ಸರಗಳೆಂಬ ಮರಗಳನೆ ತರಿದು |
ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||
ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |
ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ ೨
ಉದಯಾಸ್ತಮಾನವೆಂಬ ಎರಡು ಕೊಳಗದಲಿ |
ಆಯುಷ್ಯವೆಂಬ ರಾಶಿ ಅಳೆಯುತಿರೆ ||
ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |
ಪಾಪ ರಾಶಿಯ ಪರಿಹರಿಸುವನಯ್ಯ* ೩

ಇದರ ಕರ್ತೃ ಮಹಿದಾಸ
೩೯
ನಾರಾಯಣಾಯ ನಮೋ ನಾಗೇಂದ್ರ ಶಯನಾಯ |
ನಾರದಾದ್ಯಖಿಳ ಮುನಿನಮಿತ ಪಾದಾಂಭೋಜ |
ಸೇರಿದರೆ ಪೊರೆವ ಕಂಸಾರಿ ರಕ್ಷಿಪನೆಮ್ಮ |
ಕಾರುಣ್ಯದಿಂದ ಒಲಿದು ಪ
ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ |
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ |
ಪುಂಡರೀಕಧ್ಯಾನಪರನಾಗಿ ತಪದೊಳಿರೆಚಂಡತಾಪಸನಗಸ್ತ್ಯ ||
ಹಿಂಡು ಶಿಷ್ಯರುವೆರೆಸಿ ಬರಲು ಸತ್ಕರಿಸದಿರೆ |
ಕಂಡುಗ್ರಶೋಪದಿಂ ಗಜವಾಗಿ ಜನಿಸಲು |
ದ್ದಂಡ ಶಾಪವನಿತ್ತು ಮುನಿ ತಿರುಗತ್ತಲೈಶುಂಡಾಲನಾದನರಸ ೧
ಕ್ಷೀರಸಾಗರದಲೆರಡೀರೈದು ಯೋಜನದ |
ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |
ರಾರಾಜಿಸುವ ತಾಮ್ರ-ರಜತ-ಕಾಂಚನದಿಂದ ನಾರಾಯಣಾಂಶದಿಂದ ||
ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |
ಸೌರಭದಲಶ್ವತ್ಥ ಪೂಗ ಪುನ್ನಾಗ ಜಂ |
ಬೀರ ತರು ಗುಲ್ಮ ಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು ೨
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |
ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |
ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||
ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |
ಲೇನಿದೆತ್ತಣ ರಭಸವೆಂದುಗ್ರಕೋಪದಿಂ |
ಆನೆಗಳು ಬಾಯ್ದೆರೆದು ನುಂಗಿತೊಂದಂಘ್ರಿಯನುಏನೆಂಬೆನಾಕ್ಷಣದೊಳು ೩
ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |
ಮತ್ತ ಇಭರಾಜನೌಡೊತ್ತಿ ನೋಡುತ್ತಂಘ್ರಿ |
ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆ ನೆಗಳೆ ||
ಇತ್ತಂಡದಿಂತು ಕಾದಿದರು ಸಾವಿರ ವರುಷ |
ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |
ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ ೪
ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |
ದಿಂದ ದಿವ್ಯಜ್ಞಾನ ಕಣ್ದೆರೆದು ಮನದೊಳರ |
ವಿಂದನಾಭಾಚ್ಯುತ ಮುಕುಂದ ಮಾಧವ ಕೃಷ್ಣ ನಿಖಿಲ ಮುನಿವೃಂದವಂದ್ಯ ||
ಇಂದಿರಾರಮಣ ಗೋವಿಂದ ಕೇಶವ ಭಕ್ತ |
ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |
ಇಂದು ಸಿಲ್ಕಿದೆನು ಬಲು ದಂದುಗದ ಮಾಯಾ ಪ್ರ-ಬಂಧಕನೆ ನೆಗಳಿನಿಂದ ೫
ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |
ಪರತರ ಪರಂಜೋತಿ ಪರಮ ಪಾವನಮೂರ್ತಿ |
ಪರಮೇಷ್ಟಿ ಪರಬ್ರಹ್ಮ ಪರಮ ಪರಮಾಕಾಶ |
ಪರಿಪೂರ್ಣ ಪರಮಪುರುಷ ||
ನಿರುಪಮ ನಿಜಾನಂದ ನಿರ್ಲಯ ನಿರಾಕಾರ |
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ |
ನಿರವದ್ಯ ನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು ೬
ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |
ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |
ಚಿಂತ್ಯ ಮಹಿಮನು ಕೇಳಿ ಕರುಣದಿಂದಾ ಮಹಾ-ನಂತಶಯನದೊಳೆದ್ದನು ||
ಸಂತವಿಡುತುಡೆ- ಮುಡಿಯ ಗರುಡನೇರದೆ ಬಂದು |
ಚಿಂತೆ ಬೇಡೆನುತಭಯಹಸ್ತವನು ಕೊಡುತ ಶ್ರೀ- |
ಕಾಂತ ಭಕ್ತನ ಬಳಿಗೆ ಬಂದೆಡದ ಕೈಯಿಂದದಂತಿವರನನು ನೆಗಹಿದ ೭
ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |
ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |
ತೆಗೆದುದಾಕ್ಷಣಕೆ ಮಣಿಮುಕುಟ – ಕುಂಡಲದಿಂದ ನಗಧರನು ಓಲೈಸಿದ ||
ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |
ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |
ಮಗುಳಿ ಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು ೮
ಮಣಿಮುಕುಟ ಕುಂಡಲ ಪದಕಹಾರ ಕಡಗಕಂ- |
ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿ ಭೂ- |
ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹ ಹಸ್ತಪಣಿಯ ಕಸ್ತುರಿ ತಿಲಕದಾ ||
ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |
ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |
ಮಣಿದು ಜಂಇÀಇ ಜಯ ಜಯಾ ಎಂಬ ಸುರನರರಸಂ- |
ದಣಿಯಿಂದೆ ಹರಿ ಮೆರೆದನು ೯
ಹರಹರಿಎನುತ್ತಂಘ್ರಿಗೆರಗಲಿಭವರನನಾ- |
ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |
ವಿರಜ ಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||
ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |
ತರಣಿ ಶಶಿ ನವಶಕ್ತಿ ವಿಷ್ಣಧರ್ಮವತಾರು- |
ಪರ ವರಗದಾ ಶಂಖ ಚಕ್ರಾಂಬುಜಂಗಳನುಸ್ಮರಿಸುವರ ಕಾವೆನೆಂದ ೧೦
ಆವಾವನಿದನುದಯದಲ್ಲೆದ್ದು ಭಕ್ತಿಯಲಿ |
ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |
ಘಾವಳಿಯ ಪರಿಹರಿಸಿ ಸುಜ್ಞಾನವೀವೆ ದೇ-ಹಾವಸಾನದಲೆನುತಲಿ ||
ಶ್ರೀವಾಸುದೇವನಾಜ್ಞಾನೆಸಿ ಗಜೇಂದ್ರ ಸಹಿ- |
ತಾವಿಹಂಗಾಧಿಪನನೇರಿ ವೈಕುಂಠಕ್ಕೆ |
ದೇವ ಬಿಜಯಂಗೈದ ಪುರಂದರ ವಿಠಲನಸೇವಕರಿಗಿದುಚಿತ್ರವೆ ೧೧

ಅಗಸ್ತ್ಯ ಋಷಿಯ ಶಾಪದಿಂದ
೧೭
ನಾರಿರನ್ನೆಯ ಕಂಡೆಯಾ ಪ
ವಾರಿಜನಾಥ ದೇವರದೇವ ಸುಗಣ ಬೇಲೂರ ಚೆನ್ನಿಗರಾಯನ ಎನ್ನಪ್ರಿಯನ ಅ.ಪ
ಹೊಸಬಗೆ ಮಾಟದ ಹೊಳೆವ ಕಿರೀಟದ |
ಎಸೆವ ಮಾಣಿಕದೋಲೆಯ ||
ಶಶಿಕಾಂತಕಕಧಿವೆಂದೆನಿಪ ಮೂಗುತಿಯಿಟ್ಟ |
ಬಿಸಜಾಕ್ಷ ಚನ್ನಿಗರಾಯನ ಎನ್ನ ಪ್ರಿಯನ ೧
ತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ |
ಮುದ್ದು ಮೊಗದ ಸೊಂಪಿನ ||
ಹೊದ್ದಿದ ಕುಂಕುಮ ರೇಖೆ ಪೀತಾಂಬರ |
ಪೊದೆದ ಚೆನ್ನಿಗರಾಯನ ಎನ್ನ ಪ್ರಿಯನ ೨
ಮಘಮಘಿಸುವ ಜಾಜಿ ಮಲ್ಲಿಗೆ ಸಂಪಿಗೆ |
ಬಗೆಬಗೆ ಪೂಮಾಲೆಯ ||
ಅಗರು ಚಂದನ ಗಂಧದನುಲೇಪವ ಗೈಯ್ದ |
ಜಗವ ಮೋಹಿಪ ಚೆನ್ನನ ಎನ್ನ ಪ್ರಿಯನ ೩
ಧನುಜರಗಂಡನೆಂದೆನಿಪ ಪೆಂಡೆಯವಿಟ್ಟು |
ಮಿನುಗುವ ಪೊಂಗೆಜ್ಜೆಯ ||
ಘನ ಶಂಖ ಚಕ್ರ ಗದಾಂಕಿತನಾದನ |
ಅನುಪಮ ಚೆನ್ನಿಗರಾಯನ ಎನ್ನ ಪ್ರಿಯನ ೪
ಲೀಲೆಯಿಂದಲಿ ಬಂದು ಮೇಲಾಪುರದಿ ನಿಂತ |
ಪಾಲುಗಡಲ ಶಾಯಿಯಾದನ ||
ಪಾಲಕ ಇಂದು ಶ್ರೀ ಪುರಂದರವಿಠಲ |
ಬೇಲೂರ ಚೆನ್ನಿಗರಾಯನ ಎನ್ನ ಪ್ರಿಯನ ೫

೧೯೯
ನಾಲಗೆ ನಾಲಗೆ ನಾಲಗೆ – ಸಿರಿ – |
ಲೋಲನ ನೆನೆ ಕಾಣೊ ನಾಲಗೆ ಪ.
ವಾಸುದೇವನ ನಾಮ ನಾಲಗೆ – ನೀ
ಲೇಸಾಗಿ ನೆನೆ ಕಾಣೊ ನಾಲಗೆ ||
ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |
ಕೇಶವನ ನಾಮವ ನೆನೆ ಕಾಣೊ ಮರುಳೆ ೧
ಮಾತನಾಡುವಲ್ಲಿ ನಾಲಗೆ – ನೀ ಅ – |
ನೀತಿ ನುಡಿಯದಿರು ನಾಲಗೆ ||
ಆತನ ನಾಮವ ಗೀತದಿ ಪಾಡುತ |
ಸೀತಾಪತಿ ರಘುನಾಥನ ನೆನೆ ಕಾಣೊ ೨
ಅಚ್ಯುತನಾಮವ ನಾಲಗೆ ನೀ – |
ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||
ನೆಚ್ಚಿ ಕೆಡಲಿ ಬೇಡ ನಿಚ್ಚ ಶರೀರವ |
ಅಚ್ಯುತನಾಮವ ನೆನೆ ಕಾಣೊ ಮರುಳೆ ೩
ನನ್ನದು ತನ್ನದು ನಾಲಗೆ – ನೀ- |
ನೆನ್ನದಲಿರು ಕಾಣೊ ನಾಲಗೆ |
ಇನ್ನು ಮೂರು ದಿನದೀ ಸಂಸಾರದಿ |
ಪನ್ನಗಶಯನನ ನೆನೆ ಕಾಣೊ ಮರುಳೆ ೪
ಅನುದಿನ ಹರಿನಾಮ ನಾಲಗೆ – ನೀ |
ನೆನೆಯುತಿರು ಕಾಣೊ ನಾಲಗೆ ||
ಘನಮಹಿಮ ನಮ್ಮ ಪುರಂದರವಿಠಲನ |
ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ ೫

೨೦೪
ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.
ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿಗ ಪುಣ್ಯವನ್ನೆಯ್ಯುವರಯ್ಯ ೧
ದುಷ್ಠ ಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳೂ
ಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ ೨
ದುರುಳ ಜನಂಗಳು ಚಿರಕಾಲ ಇರುವಂತೆ
ಕರವ ಮುಗಿದು ವರ ಬೇಡುವೆನು
ಪರಿಪರಿ ತಮಾಸಿಗೆ ಗುರಿಯಿಲ್ಲದೆ
ಪರಮ ದಯಾನಿಧಿ ಪುರಂದರವಿಠಲ ೩

೨೦೫
ನಿಂದೆಯಾಡಲುಬೇಡ ನೀಚಾತ್ಮ – ನಿನ
ಗೆಂದೆಂದು ದೊರಕನು ಪರಮಾತ್ಮ ಪ.
ನರಜನ್ಮಕೆ ಬಂದು ನೀ ನಿಂತಿ – ಪರಿ
ಪರಿ ಮಾಡಿದೆಯೊ ಪರದ ಚಿಂತಿ
ಗರುವದಿಂದ ಹಲ್ಲುತಿಂತಿ – ಇದು
ಸ್ಥಿರವಲ್ಲ ಮೂರುದಿನದ ಸಂತಿ ೧
ಪರಸತಿಯರ ಕಂಡು ಹೋಗಿ – ಅಲ್ಲಿ
ಪರಮಾತ್ಮನ ಧ್ಯಾನವನ್ನು ನೀ ನೀಗಿ
ಪರಲೋಕ ಹೇಗೆ ಕಾಣುವೆ ಕಾಗಿ – ನೀನು
ಪರಪರಿಯಲಿ ನೋಡಲೊ ಗೂಗಿ ೨
ಬಾಳಿಗೆ ಒಂದೇ ಫಲವು ನೋಡು – ಅಲ್ಲಿ
ಕಳ್ಳಸುಳ್ಳರಿಗೆ ಬಲು ತೋಡು
ಬಾಳ್ವೆವಂತರ ಹುಡುಕಾಡು – ಶ್ರೀ
ಲೋಲ ಪುರಂದರವಿಠಲನೊಳಾಡು ೩

೨೦೦
ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ ಪ.
ಮತ್ತೆ ಮುರಾರಿ ಶ್ರೀ ಕೃಷ್ಣನ ನೆನೆದರೆ |
ಮುಕ್ತಿಸಾಧನವಣ್ಣ ದೇಹ ಅಪ
ಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ |
ನಾನಾ ಪರಿಯಲಿ ಮೋಹಮಾಡದಿರು
ಹೀನಮೂತ್ರದ ಕುಳಿಯಲ್ಲಿ
ಜಾನಕಿರಮಣನ ನಾಮವ ನೆನೆದರೆ
ಜಾಣನಾಗುವೆಯಲ್ಲೋ – ಪ್ರಾಣಿ ೧
ತಂದೆ-ತಾಯಿ ಅಣ್ಣ-ತಮ್ಮಂದಿರು ಮಕ್ಕಳು ಹರಿದು ತಿಂಬರೆಲ್ಲ |
ಹೊಂದಿ ಹೊರೆಯುವಾ ನಂಟರಿಷ್ಟರು
ನಿಂದೆ ಮಾಡುವರೆಲ್ಲ ||
ಮುಂದೆ ಯಮನ ದೂತರು ಎಳೆದೊಯ್ಯಲು
ಹಿಂದೆ ಬರುವರಿಲ್ಲೋ – ಪ್ರಾಣಿ ೨
ಕತ್ತಲೆ ಬೆಳುದಿಂಗಳು ಸಂಸಾರವು ಕಟ್ಟು ಧರ್ಮದ ಮೊಟ್ಟಿ |
ಹೊತ್ತನರಿತು ಹರಿದಾಸರ ಸೇರೆಲೊ ಪೇಳ್ವರು ತತ್ತ್ವವ ಗಟ್ಟಿ |
ಚಿತ್ತಜನಯ್ಯ ಪುರಂದರವಿಠಲನ
ಹೊಂದೋ ನೀ ಸುಖಬುಟ್ಟಿ – ಪ್ರಾಣಿ ೩

ಶಿವನ ಆತ್ಮಲಿಂಗವನ್ನು ಪಡೆಯಲು
೧೮
ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲಎನಗೂ ನಿನಗೂ ನ್ಯಾಯ ಹೇಳುವರಿಲ್ಲ ಪ
ಒಂದೇ ಗೂಡಿನೊಳು ಒಂದು ಕ್ಷಣವಗಲದೆಎಂದೆಂದು ನಿನ್ನ ಪಾದ ಪೊಂದಿರುವೆ ||
ಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂಧಕನಂತೆ ನೀ ನೋಡುವುದುಚಿತವೆ ೧
ಪರಸತಿಗಳುಪಿರೆ ಪರಮ ಪಾಪಿಷ್ಠನೆಂದುಪರಿಪರಿ ನರಕವ ನೇಮಿಸುವೆ ||
ಪರಸತಿಯರ ಒಲುಮೆ ನಿನಗೆ ಒಪ್ಪಿತು ದೇವದೊರೆತನಕಂಜಿ ನಾ ಶರಣೆಂದೆನಲ್ಲದೆ ೨
ನಿನ್ನಾಜ್ಞೆಯವ ನಾನು ನಿನ್ನ ಪ್ರೇರಣೆಯಿಂದಅನಂತವಿಧದ ಕರ್ಮವ ಮಾಡಿದೆ ||
ಎನ್ನಪರಾಧಗಳೆಣಿಸಲಾಗದು ದೇವಪನ್ನಗ ಶಯನ ಶ್ರೀಪುರಂದರ ವಿಠಲ ೩

೩೦೦
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿ
ಧನ್ಯನಾದೆನು ಧರೆಯೊಳು ||
ಇನ್ನು ಈ ಭವ ಭಯಕೆ ಅಂಜಲೇತಕೆ ದೇವ
ಚೆನ್ನ ಶ್ರೀ ವೆಂಕಟೇಶಾ ಈಶಾ ಪ
ಏಸು ಜನುಮದ ಸುಕೃತ ಫಲವು ಬಂದೊದಗಿತೋ
ಈ ಸ್ವಾಮಿ ಪುಷ್ಕರಣಿಯೊಳ್
ನಾ ಸ್ನಾನವನು ಮಾಡಿ ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಸಿನಿಂದಲಿ ಪೊಗಳುತ
ಆ ಸುವರ್ಣದ ಗರುಡ ಗಂಬವನು ಸುತ್ತಿ ಸಂ
ತೋಷದಿಂ ಕೊಂಡಾಡಿದೆ ಬಿಡದೆ ೧
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲು
ದಟ್ಟಣೆಯ ಮಹಾಜನದೊಳು
ಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂ
ಗೆಟ್ಟು ಹರಿಹರಿಯೆನುತಲಿ
ಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿ
ಕಟ್ಟಂಜನಕೆ ಪೋಗುತ
ಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆ
ಸುಟ್ಟೆ ಎನ್ನಯ ದುರಿತವಾ-ದೇವಾ ೨
ಶಿರದಲಿ ರವಿಕೋಟಿ ತೇಜದಿಂದೆಸೆಯುವ
ಕಿರೀಟ ವರ ಕುಂಡಲಗಳ
ಕೊರಳಲ್ಲಿ ಸರ ವೈಜಯಂತಿ ವನಮಾಲೆಯನು
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳ
ವರನಾಭಿಮಾಣಿಕವನು
ನಿರುಪ ಮಣಿಖಚಿತ ಕಟಿಸೂತ್ರ ಪೀತಾಂಬರವ
ಚರಣಯುಗದಂದುಗೆಯನು – ಇನ್ನು ೩
ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷತ್ರಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾಜ್ಜಗನ್ನಾಥನೇ
ರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರ
ಪೇಕ್ಷ ನಿತ್ಯತೃಪ್ತನೇ
ಕುಕ್ಷಿಯೊಳಗಿರೇಳು ಭುವನವನು ಪಾಲಿಪನೆ
ರಕ್ಷಿಸುವುದೊಳಿತು ದಯದಿ -ಮುದದಿ ೪
ಉರಗಗಿರಿಯರಸ ನಿನ್ನ ಚರಣ ನೋಡಿದ ಮೇಲೆ
ಉರಗ ಕರಿ ವ್ಯಾಘ್ರ ಸಿಂಹ
ಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದ
ಪರಿಪರಿಯ ಭಯಗಳುಂಟೇ
ಪರಮ ವಿಷಯಗಳ ಲಂಪಟದೊಳಗೆ ಸಿಲುಕಿಸದೆ
ಕರುಣಿಸುವುದೊಳಿತು ದಯವಾ
ಸ್ಮರಗಧಿಕ ಲಾವಣ್ಯ ಪುರಂದರ ವಿಠಲನೇ
ಶರಣಜನ ಕರುಣಾರ್ಣವಾ ದೇವಾ ೫

೨೯೭
ನಿನ್ನ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರೆ ರಮಣ ಪ
ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ
ಪನ್ನಗ ಶಯನ ನೀ ಪರಮ ಪುರುಷನೆಂದು ಅ.ಪ
ಹರಿಸರ್ವೋತ್ತಮನಹುದೆಂಬ ಬಾಲಕನ
ಹಿರಣ್ಯಕಶಿವು ಪಿಡಿದು ಬಾಧಿಸಲು ||
ನರಹರಿ ರೂಪಿಂದಲವನ ವಕ್ಷವ ಸೀಳ್ದೆ
ಪರಮ ವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ ೧
ಪಾದವ ಪಿಡಿದು ನೀರೊಳಗೆಳೆದ ನಕ್ರನ
ಬಾಧೆಗಾರದೆ ಕರಿಮೊರೆಯಿಡಲು ||
ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದ
ವೇದಾಂತವೇದ್ಯ ಅನಾಥ ರಕ್ಷಕನೆಂದು ೨
ಇಳೆಗೊಡೆಯನ ತೊಡೆ ನಿನಗೇತಕೆಂದು ಆ
ಲಲನೆ ಕೈ ಪಿಡಿದೆಳೆಯಲರ್ಭಕನ ||
ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದ
ಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು೩
ಸುದತಿ ಗೌತಮಸತಿ ಮುನಿಶಾಪದಿಂದಲಿ
ಪಢದಿ ಪಾಷಾಣವಾಗಿ ಬಿದ್ದಿರಲು ||
ಮುದದಿಂದಲಾಕೆಯ ಮುಕ್ತ ಮಾಡಿದ ಯೋಗಿ
ಹೃದಯ ಭೂಷಣ ನಿನ್ನ ಪದ ವೈಭವವ ಕಂಡು ೪
ಪರಮಪಾವನೆ ಜಗದೇಕಮಾತೆಯನು
ದುರುಳ ರಾವಣ ಪಿಡಿದು ಕೊಂಡೊಯ್ಯಲು ||
ಶರಣೆಂದು ವಿಭೀಷಣ ಚರಣಕೆರಗಲಾಗಿ
ಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು ೫
ಅಂಬರೀಷನೆಂಬ ನೃಪತಿ ದ್ವಾದಶಿಯನು
ಸಂಭ್ರಮದಿಂದ ಸಾಧಿಸುತಿರಲು ||
ಡೊಂಬೆಯಿಂದ ದೂರ್ವಾಸ ಶಪಿಸಲಾಗಿ
ಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು ೬
ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆ
ಸರಸಿಜೋದ್ಭವ-ಶೇಷಗಸದಳವು ||
ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತ
ಪುರಂದರ ವಿಠಲ ಜಗದೀಶ ನೀನೆಂದು ೭

೨೯೮
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ
ಎನ್ನ ಗುಣದೋಷಗಳ ಎಣಿಸಬೇಡಯ್ಯ ಪ
ಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತು
ಮೇಲೆ ಯೌವನಮದದಿ ಮುಂದರಿಯದೆ ||
ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನು
ಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು ೧
ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆ
ಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||
ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲ
ಕೇಶವನೆ ಕ್ಲೇಶವನು ನಾಶ ಮಾಡಯ್ಯ ೨
ಈ ತೆರದಿ ಕಾಲವನು ಕಳೆದೆ ನಾನಿಂದಿರೇಶ
ಭೀತಿ ಮೋಹದಿ ಜ್ಞಾನರಹಿತನಾದೆ ||
ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆ
ದಾತ ಶ್ರೀ ಪುರಂದರ ವಿಠಲ ದಯಮಾಡೈ ೩

ಪಂಢರಪುರವು
೪೦
ನಿನ್ನ ನಾನೇನೆಂದನೋ – ರಂಗಯ್ಯ ರಂಗನಿನ್ನ ನಾನೇನೆಂದೆನೊ ಪ
ನಿನ್ನ ನಾನೇನೆಂದೆ ಚಿನ್ಮಯ ಮೂರುತಿಪನ್ನಗಶಯನ ಪಾಲ್ಲಡಲೊಡೆಯನೆ ಕೃಷ್ಣ ಅ.ಪ
ಧೀರಸೋಮಕ ವೇದಚೋರನ ಮಡುಹಿದೆವಾರಿಧಿಗಿಳಿದ ಪರ್ವತವ ಪೊತ್ತೆಧಾರಿಣಿಯನು ತಂದು ದನುಜದಲ್ಲಣನಾದೆನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆನೆ – ಬೆನ್ನಿನ ಮೇಲೆಭಾರ ತಾಳ್ದವನೆಂದೆನೆನೆ – ಮದ್ಲಿನಗಿದುಬೇರ ಮೆದ್ದವನೆಂದೆನೆ – ರಕ್ಕಸರೊಳುಹೋರಾಡಿದವನೆಂದು ಹೊಗಳಿದೆನಲ್ಲದೆ ೧
ಧರೆಯದಾನವ ಬೇಡಿ ನೆಲವ ಮೂರಡಿ ಮಾಡಿಪರಶುವಿಡಿದು ಕ್ಷತ್ರಿಯರ ಸವರಿಚರಣದಿ ಪಾಷಾಣ ಹೆಣ್ಣು ಮಾಡಿದ ಪುಣ್ಯಚರಿತ ಯಾದವ ಸತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ – ಹೆತ್ತ ತಾಯಶಿರಕೆ ಮುನಿಹವನೆಂದೆನೆ – ವನ ದೇಶದಿಧುರಕೆ ನಿಂದವನೆಂದೆನೆ – ಪೂತನಿಯ ಮೊಲೆಯಹರಿದು ಕೊಂದವನೆಂದು ಸ್ತುತಿಸಿದೆನಲ್ಲದೆ ೨
ಚಿತ್ತಜ ಕೋಟಿಲಾವಣ್ಯ ಮುಪ್ಪುರದೊಳುಉತ್ತಮ ಸ್ತ್ರೀಯರ ವ್ರತವಳಿದೆಮತ್ತೆ ಕಲ್ಕಿಯಾದೆ ಮಲೆತರ ಮಡುಹಿದೆಉತ್ತಮ ಶ್ರೀರಾಮನೆಂದು ಸ್ತುತಿಸಿದೆನಲ್ಲದೆ.ಬತ್ತಲೆನಿಂತªನೆಂದೆನೆ ತೇಜಿಯನೇರಿಒತ್ತಿಬಾಹವನೆಂದೆನೆ ಬಾರಿಬಾರಿಗೆಸತ್ತುಹುಟ್ಟುವನೆಂದೆನೆ ಪುರಂದರ ವಿಠಲಹತ್ತವತಾರದ ಹರಿಯೆಂದೆನಲ್ಲದೆ * ೩

ಶ್ರೀ ಮಧ್ವಾಚಾರ್ಯರು ಹುಟ್ಟಿದಾಗ
೧೯
ನಿನ್ನ ನಾಮವೆ ಎನಗೆ ಅಮೃತಾನ್ನವು |ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ಪ
ಓಂಕಾರವೆಂಬ ನಾಮ ಉಪ್ಪು – ಉಪ್ಪಿನಕಾಯಿ |ಶಂಖಪಾಣಿಯ ನಾಮ ಪಾಕಾದಿ ಸೂಪ ||
ಸಂಕರ್ಷಣನ ನಾಮ ದಿವ್ಯ ಶಾಲ್ಯನ್ನವು |ಪಂಕಜಾಕ್ಷನ ನಾಮ ಪಳಿದೆ ಬಗೆಬಗೆ ಸಾರು ೧
ಕೇಶವನೆಂಬ ನಾಮ ಕರಿದ ಹೂರಣಗಡಬು |ವಾಸುದೇವನ ನಾಮ ವಡೆ – ಸೇವಗೆ ||
ಸಾಸಿರದ ನಾಮಗಳು ಸವಿಸವಿಯ ಪರಮಾನ್ನ |ದೋಷದೂರನ ನಾಮ ದೋಸೆ – ಸೂಸಲಗಡಬು ೨
ನಾರಾಯಣನ ನಾಮ ನೊರೆಹಾಲು ಸಕ್ಕರೆ |ಶ್ರೀರಾಮ ನಾಮ ಸರವಳಿ ಸಜ್ಜಿಗೆ ||
ಕಾರಣ್ಯನಿಧಿ ನಾಮ ಕರಿದ ಹಪ್ಪಳ – ಸಂಡಿಗೆ |ಪಾರಾಯಣನ ನಾಮ ಪರಿಪರಿಯ ಪಕ್ವಾನ್ನ ೩
ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ಮಧುಸೂದನನ ನಾಮ ಮಧುರ ಮಂಡಿಗೆಯು ||
ಚದುರಗೋವಳ ನಾಮ ಚೆಲುವ ಬೀಸೂರಿಗೆ |ಪದುಮನಾಭನ ನಾಮ ಪರಿಪರಿಯ ಭಕ್ಷ್ಯ ೪
ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗೋವಿಂದನ ನಾಮ ಗುಳ್ಳೋರಿಗೆ ||
ಮಾವಮರ್ದನನ ನಾಮ ಕಲಸುಮೇಲೋಗರ |ರಾವಣಾರಿಯ ನಾಮ ಇಡ್ಡಲಿಗೆ – ಸಖಯುಂಡೆ ೫
ಗರುಡವಾಹನನ ನಾಮ ಘೃತಪಯೋದಧಿತಕ್ರ |ಪರಮಪುರುಷನ ನಾಮ ಪನ್ನೀರ ಪಾನ ||
ಕರಿವರದ ನಿನ್ನ ನಾಮ ಕರ್ಪುರದ ವೀಳ್ಯವು |ಶರಧಿಶಯನನ ನಾಮ ಶಯನಪರ್ಯಂಕ ೬
ಈ ಪರಿಯ ನಾಮಾವಳಿಯನು ಸವಿದುಂಡು |ಆಪತ್ತು ಬಿಡಿಸೆಕಿನ್ನ ಕ್ಷುಧೆಯ ನೂಕಿ ||
ಗೋಪಾಲ ಉರಗಾದ್ರಿ ಪುರಂದರವಿಠಲನ |ಶ್ರೀಪಾದವನೆ ನಂಬಿ ಅಪವರ್ಗ ಸೇರುವ ೭

ಈ ಪಟ್ಟಣವು ಯಮುನಾ ನದಿಯ
೪೯
ನಿನ್ನ ನೋಡಿ ಧನ್ಯನಾದೆನೊ – ಹೇ ಶ್ರೀನಿವಾಸ ಪ
ನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ಅ.ಪ
ಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿ ರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು ೧
ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ ೨
ಕಂತುಜನಕ ಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯ ಹೊಂತಕಾರಿ ಪುರಂದರವಿಠಲ * ೩

೩೦೧
ನಿನ್ನ ಭಕುತಿಯನು ಬೀರೊ ಎನ್ನ
ಮನ್ನಿಸಿ ಸಲಹುವರಾರೋ ಪ
ಸನ್ನುತ ಸನ್ಮಾರ್ಗ ತೋರೋ ಆ
ಪನ್ನರಕ್ಷಕ ಬೇಗ ಬಾರೋ ಅ.ಪ
ಪನ್ನಗಶಯನ ಲಕ್ಷ್ಮೀಶಾ ವೇದ
ಸನ್ನುತ ಪಾದ ಸರ್ವೇಶಾ
ಇನ್ನು ಬಿಡಿಸು ಭವಪಾಶಾ ಪ್ರ
ಸನ್ನ ರಕ್ಷಿಸೊ ಶ್ರೀನಿವಾಸಾ ೧
ನಾರದ ಗಾನವಿಲೋಲಾ ಸ್ವಾಮಿ
ಭೂರಿ ಭಕ್ತರ ಪರಿಪಾಲಾ
ಶ್ರೀ ರಮಣ ಕರುಣಾಲವಾಲ – ದೇವ
ನೀರದ ಶ್ಯಾಮ ಗೋಪಾಲಾ ೨
ಕರಿರಾಜವರದ ಪ್ರಮೇಯಾ ಎನ್ನ
ನರಿತು ನಡೆಸೊ ಯೋಗಿಧ್ಯೇಯ ||
ಸುರಮುನಿ ಹೃದಯ ನಿಕಾಯ -ನಮ್ಮ
ಪುರಂದರ ವಿಠಲರಾಯಾ ೩

೧೦೯
ನಿನ್ನ ಮಗನ ಮುದ್ದು ನಿನಗಾದರೆ ಗೋಪಿ ಆರಿಗೇನೆ? |
ಎನ್ನ ಕೂಡ ಸರಸವಾಡಲು ಓರಗೆಯೇನೆ? ಪ
ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |
ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? ೧
ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |
ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ ೨
ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |
ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ ೩

೧೧೦
ನಿನ್ನ ಮಗನ ಲೂಟಿ ಘನವಮ್ಮ-ಕರೆದು |
ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪ
ಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |
ಪಸು-ಕರುಗಳಿಗೆ ಮೀಸಲುಗಳಿಲ್ಲ ||
ಮೊಸರ ಮಡಕೆಯಲಿ ಮಾರಿ ಹೊಕ್ಕಂತಾಯ್ತು |
ಶಶಿ ಮುಖಿಯರು ಗೋಳಿಡುತಿಹರಮ್ಮ ೧
ಮರೆತು ಮಲಗಿದ್ದವರ ಮೊಲೆಗಳ ತಾನುಂಬ |
ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||
ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|
ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ ೨
ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |
ಈರೇಳು ಭುವನಕೆ ಒಡೆಯನಂತೆ ||
ವಾರಿಜನಾಭ ಶ್ರೀ ಪುರಂದರವಿಠಲನ |
ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ ೩

೧೧೧
ನಿನ್ನ ಮಗನೇನೇ ಗೋಪಿ-ಗೋಪಮ್ಮ |
ನಿನ್ನ ಮಗನೇನೆ ಗೋಪಿ? ಪ
ಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |
ನಿನ್ನ ಮಗನೇನೆ ಗೋಪಿ? ಅ.ಪ
ಕಟವಾಯ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ |
ಪಟವಾಳಿ ಕೈಪ ಕೊರಳೊಳು ಪದಕ ||
ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |
ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ ೧
ಮುಂಗುರುಳ ಮುಂಜೆಡೆ ಬಂಗಾರದರಳೆಲೆ |
ರಂಗಮಾಣಿಕದ ಉಂಗುರವಿಟ್ಟು ||
ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |
ಅಂಗಳದೊಳಗಾಡುತಿಹ ಮುದ್ದು ಕೃಷ್ಣ ೨
ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |
ಕರುವಾಗಿ ಆಕಳ ಮೊಲೆಯುಣ್ಣುವ ||
ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |
ಧರೆಯೊಳಧಿಕನಾದ ಪುರಂದರವಿಠಲಯ್ಯ೩

೨೯೯
ನಿನ್ನನಾಶ್ರಯಿಸುವೆ – ನಿಗಮಗೋಚರ ನಿತ್ಯ
ಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪ
ಕುಂದಣದ ಆಶ್ರಯವು ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗಳಿಗೆ ||
ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋ
ವಿಂದ ನಿನ್ನಾಶ್ರಯವು ಮರಣಕಾಲದೊಳು ೧
ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||
ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವು
ಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು ೨
ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||
ಮತಿವಂತನಿಗೆ ಹರಿ ಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು ೩

೩೦೨
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾ
ನಿಲ್ಲಬೇಕಯ್ಯಾ ನೀನು ಪ
ನಿಲ್ಲಬೇಕಯ್ಯಾ ನೀ ಮಲ್ಲಮರ್ದನ ಸಿರಿ
ವಲ್ಲಭ ಎನ್ನ ಹೃದಯದಲಿ ಸತತ ಅ.ಪ
ಸುಪ್ಪಾಣಿ ಮುತ್ತಿಟ್ಟು ನೋಡುವೆ ನಿನ್ನ
ಚಪ್ಪಾಳಿ ತಟ್ಟುತ ನಾ ಪಾಡುವೆ ||
ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆ
ಸರ್ಪಶಯನ ಕೃಪೆ ಮಾಡೆಂದು ಬೇಡುವೆ ೧
ಚೆಂದದ ಹಾಸಿಗೆ ಹಾಸುವೆ ಪುನಗು
ಗಂಧದ ಕಸ್ತೂರಿಯ ಪೂಸುವೆ ||
ತಂದು ಮುದದಿ ಮುತ್ತಿನ ಹಾರ ಹಾಕುವೆ
ಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ ೨
ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳನು ಪಾಡುವೆ ||
ಚೆಲ್ವ ಶ್ರೀ ಪುರಂದರ ವಿಟ್ಠಲರಾಯನೆ
ನಿಲ್ಲು ಎನ್ನ ಮನದಲಿ ಒಂದೇ ಗಳಿಗೆ ೩

೧೧೨
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|
ಗೋಕುಲ ಪತಿ ಗೋವಿಂದಯ್ಯ ಪ
ನೋಡುವೆ ನಿನ್ನನು ಪಾಡುವೆ ಗುಣಗಳ |
ಕಾಡುವೆ ಬೇಡುವೆ ನಾಡೊಳಗೆ ||
ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |
ಕಾಡೊಳು ತುರುಗಳ ಕಾಯ್ದರಸನೆ ಹರಿ ೧
ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |
ಗಂಟಿಗೆ ಮೋಸವೆ ದಾಸರಿಗೆ ||
ಎಂಟುಂಟೆನಿಸುವೆ ಬಂಟರ ಬಾಯಲಿ |
ತುಂಟತನವ ಬಿಡು ತುಡುಗರರಸೆ ೨
ಅಪ್ಪನೆ ಅಯ್ಯನೆ ಅಮರರಿಗೊಲಿದನೆ |
ಸರ್ಪನೆ ಮೇಲೆ ಮಲಗಿಪ್ಪವನೆ |
ಒಪ್ಪಿಸಿಕೊಟ್ಟರೆ ಪುರಂದರ ವಿಠಲನೆ |
ಒಪ್ಪವ ತೋರುವೆ ಒಡೆಯನಿಗೆ ೩

೨೦೨
ನೀ ದಯಾಪರನೊ, ನಿನ್ನವರ ಸಾಧನವೊ ? |
ಮುದ್ದು ಹಯವದನ ಪೇಳಿದನ ಪ.
ಮದಕರಿಯು ಸರಸಿಯೊಳು ಮಕರಿಬಾಧೆಗೆ ಸಿಲುಕಿ |
ಪದುಮಾಕ್ಷ ಪದುಮೇಶ ಪದುಮನಾಭ ||
ಪದುಮಸಂಭವನಯ್ಯ ಪಾಹಿ ಪಾಹಿ – ಯೆನಲು |
ಒದಗಿ ರಕ್ಷಿಸದೆ ತವ ದಯೆಯೊ, ಸಾಧನವೊ ? ೧
ಅಂತ್ಯಜೆಯ ಸಹವಾಸದಲಿ ವಿಪ್ರವರನೊಬ್ಬ |
ಸಂತಸದಿಂದ ಬಹುಕಾಲ ಕಳೆದು ||
ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |
ಚಿಂತಾಯತನೆ, ವೈರಾಗ್ಯ ಸಾಧನವೊ ? ೨
ಅವರವರ ಯೋಗ್ಯತೆಯನರಿತು ಪ್ರೇರಕನಾಗಿ |
ಅವರಿಂದ ನುಡಿಸಿ ನುಡಿನುಡಿಗೆ ಹಿಗ್ಗಿ ||
ಅವರಿಗೊಲಿದೆ ನಮ್ಮ ಪುರಂದರವಿಠಲ |
ಅವನೀಶ ನಿನ್ನ ದಯವೊ ಸಾಧನವೊ ? ೩

೨೦೧
ನೀಚ ಮಾನವರಿಗೆ ಸಿರಿ ಬಂದರೇನು
ಈಚಲ ಮರ ದಟ್ಟ ನೆರಳಾದರೇನು ಪ.
ನಾಚಿಕಿಲ್ಲದ ನರರು ಬಾಗಿದರೇನು
ಹೀಚಿನೊಳಿಹ ಫಲ ಹಣ್ಣಾದರೇನು ಅಪ
ಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನು
ಮೊಲೆಯ ತೊರೆಯದ ನಾಯಿ ಈದರೇನು
ಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನು
ಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? ೧
ಕೋತಿಯ ಮೈಯೊಳು ಭಾಂಡ ತುಳಕಲೇನು
ಹೋತಿನ ಗಡ್ಡವು ಹಿರಿದಾದರೇನು
ಯಾತಕೂ ಬಾರದ ಬದುಕು ಬಾಳಿದ್ದರೇನು
ರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು ೨
ರಕ್ಷಣೆಯಿಲ್ಲದ ರಾಜ ರಾಜಿಸಲೇನು
ಭಿಕ್ಷೆ ಹುಟ್ಟದ ಊರು ತುಂಬಿದ್ದರೇನು
ಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನು
ಪಕ್ಷಪಾತವಿಲ್ಲದವನ ಅಶ್ರಯವಿನ್ನೇನು ೩
ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನು
ಉಣಿಸಿ ದಣಿಸದ ಧನಿಯಿದ್ದರೇನು
ಋಣಗೇಡಿ ಮಕ್ಕಳ ರಟ್ಟೆ ಬಲಿತರೇನು
ಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು ೪
ಸಾಕಲಾರದಾತನ ಸತಿಯ ಮೋಹವೇನು
ಜೊತೆ ಮಾಡದಾ ಹಣ ಗಳಿಸದರೇನು
ಕಾಕುಮಾನವರ ಸೇವೆ ಮಾಡಿದರೇನು
ಬೇಕೆಂದು ಭಜಿಸಿರೋ ಪುರಂದರವಿಠಲನ ೫

೩೦೩
ನೀನಲ್ಲದೆನಗಾರಿಲ್ಲ ಗೋವಿಂದ
ನೀನಲ್ಲದೆ ಇಹಪರವಿಲ್ಲ ಪ
ಪರರ ಬೇಡಿ ಪಂಥವಾಡಿ ಹೋಯಿತಲ್ಲ
ನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾತಕದ ಪಂಜರಗೆ ೧
ತನುವು ತನ್ನದಲ್ಲ ತನ್ನವರು ತನಗಿಲ್ಲ
ಧನಧಾನ್ಯ ಸಂಪತ್ತು ಅವಗಿರದು ||
ತನುವು ಹೋಗಿ ಇನ್ನು ಮಣ್ಣು ಕೂಡುವಾಗ
ತನುಮನಕ್ಕೆ – ಇನ್ನಾರಯ್ಯ ಸ್ವಾಮಿ ೨
ಮಾತಾಪಿತರು ಗೋತ್ರಜರು ಮೊದಲಾಗಿ
ಪ್ರೀತಿಯಿಂದ ಬಹಳ ಸತಿಸುತರು ||
ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂ
ಗಾತಿಗಿನ್ನಾರಯ್ಯ ಪುರಂದರ ವಿಠಲ ೩

೧೧೩
ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |
ಮೌನಗೊಂಡರಿಯದಂತಿಪ್ಪ ಮಗುವೆ ಪ
ಅತಿ ಚೆಲುವಿಗೆ ರತಿಪತಿಪಿತನೊ-ನೀ |
ಶ್ರುತಿ ಸಕಲಾನ್ವುಯ ಸನ್ನುತನೊ ||
ಚತುರ್ದಶ ಭುವನವನಾಳಿದನೋ-ನೀ |
ಶತ ತಪ್ಪುಗಳನೆಣಿಸಿದವನೊ?೧
ವರಗೋಕುಲಕೊಪ್ಪವ ದೊರೆಯೊ-ನೀ |
ಕರಿವೈರಿಯ ಮದಪರಿಹಾರಿಯೊ ||
ಗಿರಿಯನುದ್ಧರಿಸಿದ ನಖರುಚಿಯೊ-ನೀ |
ಮುರದೈತ್ಯನ ಮಡುಹಿದ ಸಿರಿಯೊ? ೨
ಮಂಗಳ ಶೋಭನ ಮಣಿಖಣಿಯೊ-ನೀ |
ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||
ಪಾಂಗನೆಯರ ಪ್ರಾಣದ ಧನಿಯೊ-ನೀ |
ಸಿಂಗರ ಸೊಬಗಿನ ಶ್ರೀಪತಿಯೊ ೩
ಆಪತ್ತಿಗೆ ನೆನೆವರ ಗೋಚರನೊ-ನೀ |
ಪಾಪಸಂಹಾರ ಪುರುಷೋತ್ತಮನೊ ||
ಚಾಪದಿಂದಸುರರ ಗೆಲಿದವನೊ-ಸಾಂ-|
ದೀಪನ ಮಗನ ತಂದಿತ್ತವನೊ? ೪
ಬೆಸಗೊಂಡಳು ಗೋಪಿ ನಸುನಗುತ-ಆಗ |
ಯಶೋದೆಗೆ ಚತುರ್ಭುಜ ತೋರಿಸುತ ||
ಅಸುರಾರಿಯ ಕಂಡು ಮುದ್ದಿಸುತ ನೀ ||
ಶಿಶುವಲ್ಲ ಪುರಂದರವಿಠಲೆನುತ ೫

೩೦೫
ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ
ನೀನಲ್ಲದನ್ಯತ್ರ ದೈವಗಳ ನಾನರಿಯೆ ಪ
ನಿನ್ನ ಪಾದಾರವಿಂದದ ಸೇವೆಯನು ಮಾಡಿ
ನಿನ್ನ ಧ್ಯಾನದಲಿರುವ ಹಾಗೆ ಮಾಡು ||
ನಿನ್ನ ದಾಸರ ಸಂಗದಿಂದ ದೂರಿಡದೆನಗೆ
ಸನ್ಮಾರ್ಗವಿಡಿಸೊ ಜಗದೀಶ ಅಘನಾಶ ೧
ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆ
ಕಮಲಸಖ ಕೋಟಿ ಪ್ರಕಾಶ ಈಶ
ಕಮಲಕರ ತಳದಿ ಅಭಯವನಿತ್ತು ಭಕುತರಿಗೆ
ಕಮಲಾಕ್ಷನೆನಿಸಿದೆಯೊ ಕಮಲಾರಮಣನೆ ೨
ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆ
ಪಶುಪತಿಯ ಆಭರಣ ವೈರಿವಾಹನನೆ ||
ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆ
ವಸುಧೇಶ ಸಿರಿ ಪುರಂದರ ವಿಠಲರಾಯಾ ೩

೩೦೭
ನೀನೆ ದಯಾಸಂಪನ್ನನೊ – ಕಾವೇರಿ ರಂಗ
ನೀನೆ ಬ್ರಹ್ಮಾದಿವಂದ್ಯನೊ ಪ
ಬಂಧುಗಳೆಲ್ಲರ ಮುಂದಾ ದ್ರುಪದನ
ನಂದನೆಯೆಳತಂದು ಸೀರೆಯ ಸೆಳೆಯಲು ||
ನೊಂದು ಕೃಷ್ಣ ಸಲಹೆಂದರೆ ಅಕ್ಷಯ
ಕುಂದದಲಿತ್ತ ಮುಕುಂದನು ನೀನೇ ೧
ನಿಂದಿತ ಕರ್ಮಗಳೊಂದು ಬಿಡದೆ ಬೇ-
ಕೆಂದು ಮಾಡಿದನಂದಜಮಿಳನು ||
ಕಂದಗೆ ನಾರಗನೆಂದರೆ ಮುಕುತಿಯ
ಕುಂದದಲಿತ್ತ ಮುಕುಂದನು ನೀನೇ ೨
ಮತ್ತಗಜವನೆಗಳೊತ್ತಿ ಪಿಡಿಯೆ ಬಲು
ಒತ್ತಿ ರಭಸದಿ ಬಿತ್ತರಿಸಲು ಗುಣ ||
ಭೃತ್ಯವರದ ಶ್ರೀ ಪುರಂದರವಿಠಲ
ಹಸ್ತಿಗೊಲಿದ ಪರವಸ್ತುವು ನೀನೇ ೩

ಪಂಚಜನನೆಂಬ ರಾಕ್ಷಸನ
೪೧
ನೀನೆ ಬಲ್ಲಿದನೊ – ಹರಿ ನಿನ್ನ- |
ದಾಸರ ಬಲ್ಲಿದರೊ ಪನಾನಾ ತರದಿ ನಿಧಾನಿಸಿ ನೋಡಲುನೀನೆ ಭಕ್ತಾಧೀನನಾದ ಮೇಲೆ ಅ.ಪ
ಜಲಜಭವಾಂಡದ ಒಡೆಯನೆಂದೆನಿಸಲು |ಬಲುಬಲು ದೊಡ್ಡವನಹುದಹುದಾದಡೆ ||
ಅಲಸದೆ ಹಗಲಿರುಳೆನ್ನದೆ ಅನುದಿನ |ಬಲಿಯ ಮನೆಯ ಬಾಗಿಲ ಕಾಯ್ದ ಮೇಲೆ ೧
ಖ್ಯಾತಿಯಿಂದ ಪುರುಹೂತ ಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||
ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ ೨
ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||
ವರಪಾಂಡವರರ ಮನೆಯೊಳು ಊಳಿಗ |ಕರೆಕರೆದಲ್ಲಿಗೆ ಪೋದಪೋದ ಮೇಲೆ ೩
ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||
ಹರಿ ನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ ೪
ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||
ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ ೫

೧೧೪
ನೀನೇ ಅಚ್ಚುತ ನೀನೇ ಮಾಧವ |
ಹರಿಗೋವಿಂದನು ನೀನೆ ||
ನೀನೆಗತಿಯೆಂದು ನಂಬಿದ ದಾಸಗೆ |
ಅಭಯ ಕೊಟ್ಟಾತನು ನೀನೆ ಪ
ಜಲದೊಳು ಪೊಕ್ಕು ಮೈನಡುಗಿಸಿ ಭಾರವ |
ತಳೆದಾತನು ನೀನೆ ||
ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |
ದೊಳು ಉದ್ಭವಿಸಿದೆ ನೀನೆ ೧
ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|
ಡಲಿಯ ಪಿಡಿದವನು ನೀನೆ ||
ಜಲಧಿಯ ದಾಟಿ-ಅಸುರರ ಕಡಿದು |
ಲಲನೆಯ ತಂದಾತ ನೀನೆ ೨
ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |
ಕಳ್ಳನೆನಿಸಿದವ ನೀನೆ ||
ಬಲ್ಲಿದ ತ್ರಿಪುರದಿ ಬತ್ತಲೆ ನಿಂತು |
ಒಳ್ಳೆ ಹಯವ ಹತ್ತಿದೆ ನೀನೆ ೩
ಪಾಂಡವರಿಗತಿ ಪ್ರಿಯನೆಂದೆನಿಸಿದ |
ಪುಂಡರೀಕಾಕ್ಷನು ನೀನೆ |
ಪುಂಡಲೀಕ ಪುರುಷೋತ್ತಮ ಮೂರುತಿ |
ಪುರಂದರವಿಠಲನು ನೀನೆ ೪

೩೦೪
ನೀನೇ ಅನಾಥ ಬಂಧು, ಕಾರುಣ್ಯ ಸಿಂಧು
ನೀನೇ ಅನಾಥ ಬಂಧು ಪ
ಪತಿಗಳೈವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ ||
ಗತಿ ನೀನೆಂದು ಮುಕುಂದನೆ ನೆನೆದರೆ
ಅತಿ ಚಮತ್ಕಾರದಿಂದೊದಗಿದೆ ಕೃಷ್ಣ ೧
ಮದಗಜವೆಲ್ಲ ಇದ್ದರೇನು
ಅದರ ಸಮಯಕ್ಕೊದಗಲಿಲ್ಲ ||
ಮದನನಯ್ಯ ಮಧುಸೂದನನೆಂದರೆ
ಒದಗಿದೆಯೋ ತಡಮಾಡದೆ ಕೃಷ್ಣ ೨
ಶಿಲೆಯ ಕಾಯ ಕುಲಕ್ಕೆ ತಂದೆ
ಬಲಿಯೆನ್ನದೆ ಸತ್ಪದವಿಯನಿತ್ತೆ ||
ಇಳೆಯೊಳು ನಿನ್ನಯ ದಾಸರ ಸಲಹುವಚೆಲುವ ಮೂರುತಿ ಶ್ರೀ ಪುರಂದರ ವಿಠಲ ೩

೩೦೬
ನೀನೇ ದಯಾಳು ನಿರ್ಮಲಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ ಪ
ಜ್ಞಾನಿಗಳರಸು ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ಅ.ಪ
ಬಗೆಬಗೆಯಲಿ ನಿನ್ನ ಸ್ತುತಿಪೆನೊ ನಗಧರ
ಖಗಪತಿವಾಹನನೆ ||
ಮಗುವಿನ ಮಾತೆಂದು ನಗುತ ಕೇಳುತ ನೀನು
ಬೇಗದಿಂದಲಿ ಕಾಯೋ ಸಾಗರಶಯನನೆ ೧
ದಾನವಾಂತಕ ದೀನ ಜನ ಮಂದಾರನೆ
ಧ್ಯಾನಿಪರ ಮನದೊಳು ಸಂಚರನೆ ||
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿ ವಂದ್ಯನೆ ೨
ಮಂದರೋದ್ಧರ ಅರವಿಂದ ಲೋಚನ ನಿನ್ನ ||
ಕಂದನೆಂದೆನಿಸೂ ಎನ್ನ ||
ಸಂದೇಹವೇತಕೆ ಸ್ವಾಮಿ ಮುಕುಂದನೆ
ಬಂದೆನ್ನ ಕಾಯೊ ಶ್ರೀ ಪುರಂದರ ವಿಠಲನೆ ೩

೨೦೩
ನೀನೇಕೊ ನಿನ್ನ ಹಂಗೇಕೊ – ನಿನ್ನ –
ನಾಮದ ಬಲವೆನಗಿದ್ದರೆ ಸಾಕೊ ಪ.
ಆ ಮರ ಈ ಮರವೆಂದೆನ್ನುತಿರೆ ರಾಮ – |
ನಾಮವೆ ವ್ಯಾಧನ ಮುನಿಪನ ಮಾಡಿತು ೧
ನಾರಾಯಣೆನ್ನದೆ ನಾರಗನೆನ್ನಲು |
ಘೋರ ಪಾತಕಿಯನು ನಾಮವೆ ಕಾಯ್ದಿತೊ ೨
ತಂದೆ ಪ್ರಹ್ಲಾದನ ಬಾಧೆಯ ಪಡಿಸೆ – ಗೋ |
ವಿಂದನೆಂಬ ಸಿರಿನಾಮವೆ ಕಾಯ್ದಿತೊ ೩
ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |
ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ ೪
ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |
ಪರಮಪುರುಷ ಹರಿನಾಮವೆ ಕಾಯ್ದಿತೊ ೫
ನಾರಿಯನೆಳತಂದು ಸೀರೆ ಸೆಳೆಯುತಿರೆ |
ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ ೬
ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |
ವಸುದೇವಸುತ ನಿನ್ನ ನಾಮವೆ ಕಾಯ್ದಿತೊ ೭
ನಿನ್ನ ನಾಮಕೆ ಸರಿಯಾವುದ ಕಾಣೆನೊ
ಪನ್ನಗಶಯನ ಶ್ರೀ ಪುರಂದರವಿಠಲ ೮

೨೫
ನೀನೊಲಿದರೇನಾಹುದು – ಶ್ರೀಹರಿಯೆ – |
ಮುನಿಯೆ ನೀನೆಂತಾಹುದು ಪ
ವಾಲಿ ಬಲ್ಲಿದ ವಾನರರಿಗೆ – ಶ್ರೀಹರಿಯೆ
ನೀ ಮುನಿದು ಎಚ್ಚವನ ಕೊಂದೆ |
ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನ
ವಾಲಿಯ ಪದದಲ್ಲಿಟ್ಟೆ ೧
ಮೂರು ಲೋಕವನಾಳುವ – ರಾವಣನ
ಊರ ಬೂದಿಯ ಮಾಡಿದೆ |
ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆ
ಸ್ಥಿರಪಟ್ಟವನು ಕಟ್ಟಿದೆ ೨
ಪನ್ನಗವನುದ್ಧರಿಸಿದೆ – ಕೌರವರ –
ಹನ್ನೊಂದಕ್ಷೋಣಿ ಬಲವ |
ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆ
ಪಾಂಡವರ ಪದವಿಯಲಿಟ್ಟೆ ೩
ಹಿರಣ್ಯಕನು ಸುತನ ಕೊಲಲು – ಆಗ ನೀ
ಕರುಣದಿಂದೋಡಿ ಬಂದೆ |
ಮರಣವೈದಿಸಿ ಪಿತನ ತರಳ ಪ್ರಹ್ಲಾದನನು
ಶರಣರೊಳು ಸರಿಮಾಡಿದೆ ೪
ಭಾಷೆ ಪಾಲಿಪನೆನುತಲಿ – ನಾ ಬಹಳ
ಆಸೆ ಮಾಡುತಲಿ ಬಂದೆ |
ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯ
ನಾಶಮಾಡೆನ್ನ ಸಲಹೊ೫

೧೯೮
ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ |
ನೀರ ಮೇಲಿನ ಗುಳ್ಳೆ ನಡೆಯೆಂಬ ಡಿಂಭವ ನಂಬದಿರೆಚ್ಚರಿಕೆ ಪ.
ಪರರು ಮಾಡಿದ ಪಾತಕವ ನಾಲಿಗೆಯೊಳುಚ್ಚರಿಸದಿರೆಚ್ಚರಿಕೆ
ಗುರು ಹಿರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ||
ಹರಿದಿನದುಪವಾಸ ಇರುಳ ಜಾಗರವ ನೀ ಮರೆಯದಿರೆಚ್ಚರಿಕೆ
ನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ ೧
ಹೀನ ಮಾನನಿಯರ ಧ್ಯಾನಕಾನನದೊಳಿಳಿಯದಿರೆಚ್ಚರಿಕೆ
ನಾನೆಂಬ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ||
ಜಾಹ್ನವಿ ಸ್ನಾನ ಸಂಧ್ಯಾನ ಧಾನ್ಯವ ಸುಜ್ಞಾನ ಮುಂದೆ ಜ್ಞಾಚ್ಚರಿಕೆ
ಜಾನಕಿರಮಣನ ಧ್ಯಾನವೆ ಧರ್ಮ ಸಂತಾನ ಮುಂದೆಚ್ಚರಿಕೆ ೨
ಮಡದಿ ಮಕ್ಕಳೆಂಬ ಕಡುಮೋಹಕೆ ಸಿಲುಕಿ ಕೆಡಬೇಡವೆಚ್ಚರಿಕೆ
ನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ||
ಕೊಡುಗೈಯ ಮಾಡದೆ ಮಡುಗಿದ ಧನ ಸಂಗಡ ಬಾರದೆಚ್ಚರಿಕೆ |
ಒಡೆಯ ಶ್ರೀ ಪುರಂದರವಿಠಲನ ನೆನೆದು ನೀ ಕಡೆಹಾಯೇ ಎಚ್ಚರಿಕೆ೩

೨೦೬
ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲ
ನೆಚ್ಚದಿರೆಚ್ಚರಿಕೆ
ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ
ಮೆಚ್ಚು ಕೇಳೆಚ್ಚರಿಕೆ ಪ.
ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿ
ನೆಡೆಯದಿರೆಚ್ಚರಿಕೆ
ಕೊಡವನಂಧಕ ಪೊತ್ತು ನಡೆವಂತೆ ಅಧಿಕಾರ
ಕಡೆಉಒಲ್ಲ ಎಚ್ಚರಿಕೆ
ಕಡುಚಪಲನು ತಾನೆಂದು ಪರರವ
ಗಡಿ ಸದಿರೆಚ್ಚರಿಕೆ
ಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚು
ಇಡಬೇಡವೆಚ್ಚರಿಕೆ ೧
ದೊರೆಗಳ ಒಲವಲಂಯಂತೆಂದಲ್ಲರೊಳು ಹಗೆ
ತರವಲ್ಲ ಎಚ್ಚರಿಕೆ
ಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥ
ತೆರನಪ್ಪುದೆಚ್ಚರಿಕೆ
ಗುರುಹಿರಿಯರ ಕಂಡು ಚರಣಕೆ ಶಿರಬಾಗಿ
ನಡೆಯುತಿರೆಚ್ಚರಿಕೆ
ಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನ
ಬಿರುಗಾಳಿ ಎಚ್ಚರಿಕೆ ೨
ಲೋಕಾಪವಾದಕೆ ಅಂಜಿ ನಡೆಯುವುದು ವಿ
ವೇಕ ಕೇಳಚ್ಚರಿಕೆ
ನಾಕೇಂದ್ರನಾದರೂ ಬಿಡದಪಕೀರ್ತಿ ಪ
ರಾಕು ಕೇಳೆಚ್ಚರಿಕೆ
ಕಾಕು ಮನುಜರ ಕೊಂಡೆಯ ಕೇಳೀ ಕೋಪದು
ದ್ರೇಕ ಬೇಡೆಚ್ಚರಿಕೆ
ಭೂಕಾಂತೆ ನಡು – ನಡುಗುವಳು ನಿಷ್ಠುರವಾದ
ವಾಕು ಕೇಳೆಚ್ಚರಿಕೆ ೩
ನಳ – ಮಾಂಧಾತರೆಂಬವರೇನಾದರು
ತಿಳಿದು ನೋಡೆಚ್ಚರಿಕೆ
ಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿ
ಇಳೆಯೊಳಗೆಚ್ಚರಿಕೆ
ಅಳಲಿಸಿ ಪರರನು ಗಳಿಸಿದಂಥ ಹೊನ್ನು
ಉಳಿಯದು ಎಚ್ಚರಿಕೆ
ಉಳಿದಲ್ಪಕಾಲದಿ ಬಡವರಾದವರನು
ಹಳಿಯದಿರೆಚ್ಚರಿಕೆ ೪
ಪರಸತಿ – ಪರಧನಕಳುಪಲು ಸಿರಿಮೊಗ
ದಿರುಹುವಳಚ್ಚರಿಕೆ
ನೆರೆ ಛಿದ್ರಕುಂಭದ ನೀರಿನಂತಾಯುಷ್ಯ
ಸರಿಯುವುದೆಚ್ಚರಿಕೆ
ಬರುವ ಹಾನಿವೃದ್ಧಿ ತನ್ನ ಕಾಲದ ಮೀರ
ಲರಿಯದು ಎಚ್ಚರಿಕೆ
ವರದ ಪುರಂದರವಿಠಲರಾಯನ
ಮರೆಯದಿರೆಚ್ಚರಿಕೆ ೫

೨೦೮
ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾ
ವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.
ಮುತ್ತು – ಮಾಣಿಕ – ನವರತ್ನದ ಗದ್ದುಗೆಯು
ಎತ್ತ ನೋಡಲು ಸಿರಿಕೋ ಎನುತಲಿ
ಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿ
ಎತ್ತುವ ಹಣೆಯಕ್ಕಿ ಹಾಗದ ಕಾಸ ೧
ದೇವತೆಗಳ ಕೈಯ ಸೇವೆಯ ಕೊಳುತಿರ್ದ
ರಾವಣನ ಬದುಕು ಮತ್ತೇನಾಯಿತು?
ಜೀವದ ಪರಿಯರಿತು ನಾವು ದೊರೆಯೆಂಬುವುದೆ
ಸಾವಿನ ಮನೆಹೊಕ್ಕು ಸಾಹಸ ಪಡಲೇಕೆ ೨
ಹದಿನೆಂಟುಕೋಟಿ ಧನ ಉದಯಕೆ ಬರುತಿರಲು
ಒದಗಿತೆ ಆ ರಾಶಿ ದಿನ ಕರ್ಣಗೆ ?
ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವ
ಇದರಿಂದ ಕಡೆಗಂಡರಾರು ಜಗದೊಳಗೆ ? ೩
ಬೆಳ್ಳಿಯ ಗಿಣಿಲು ಬಂಗಾರದ ಹರಿವಾಣ
ಕುಳಿತಲ್ಲಿ ಕನಕದ ರಾಶಿಗಳು
ಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳು
ಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು ೪
ಇಂತು ಈ ಪರಿಯಲನಂತರು ಹೋದರು
ಎಂತು ಪೇಳಲಿ ಅವರ ಪೆಸರುಗಳ ?
ಚಿಂತಾಯತ ಶ್ರೀ ಪುರಂದರವಿಠಲನ
ಸಂತತ ಪಾದಕಮಲವ ಭಜಿಸೊ ಮನುಜಾ ೫

೨೦೭
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದು
ಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.
ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನು
ಮುಚ್ಚಿದ ಮೇಲುಂಟೆ – ನರಜನ್ಮ ಸ್ಥಿರವಲ್ಲ ಅಪ
ಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯ
ಕಟ್ಟಿದ ಮನೆ ಇದ್ದಂತಿಹುದು
ಹೊಟ್ಟೆತುಂಬ ಉಣದೆ ಧನವ ಗಳಿಸಿ – ಬ
ಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ ೧
ಅತಿ ಪ್ರೀತಿಯಿಂದ ಮದುವೆಯಾದ ಮೋಹದ
ಸತಿ ತನ್ನ ಮರಣದ ಕಾಲಕ್ಕೆ
ಗತಿಯಾವುದೆನುತಲೆ ಮರುಗಿದಪ್ಪಳಲ್ಲದೆ
ಜತೆಯಾಗಿ ನಿನ್ನ ಸಂಗಡ ಬಾಹಳಲ್ಲ ೨
ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದ
ಕಂದ ನಿನ್ನಾವಸಾನ ಕಾಲಕೆ
ಮುಂದೇನು ಸಂಸಾರ ನಡೆಸಲುಪಾಯವೇ
ನೆಂದು ಚಿಂತಿಸುವ ಸಂಗಡ ಬಾಹನಲ್ಲ ೩
ನಾಟರಿಷ್ಟರು ಬಂಧು – ಬಳಗವು ಹರಿ ಕೊಟ್ಟು
ದುಂಟಾದರೆ ಬಂದು ಉಣ್ಣುವರು
ಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟು
ಕಂತಿಯ ತಂದೊಟ್ಟಿ ಸುಡುವರು ಕಾಣೊ ೪
ಇಂತಿದು ಒಂದು ಪ್ರಯೋಜನ ನಿನಗಿಲ್ಲ
ಅಂತ್ಯಕಾಲಕ್ಕೆ ಸಂಗಡ ಬಾಹುದು
ಕಂತುಜನಕ ನಮ್ಮ ಪುರಂದರವಿಠಲನ
ಸಂತತ ಧ್ಯಾನದೊಳಿರು ಕಾಣೋ ಮನುಜಾ ೫

೧೭೭
ನೆನೆಯಿರೊ ಭಕುತ ಜನರು-ಅನುದಿನವೂ
ನೆನೆಯಿರೊ ಭಕುತ ಜನರುಗಳು ಪ
ಘನಮಹಿಮನ ಸೇವೆಯ ಮಾಡಿದರಾ
ಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪ
ಒಂದು ಯುಗದಿ ಹನುಮಂತಾವತಾರನಾಗಿ
ಬಂದು ನೆರೆದಯೋಧ್ಯಾಪುರಕಾ ||
ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ ೧
ವಾಯು ಕುಮಾರಕ ದ್ವಾಪರದಲಿ ಭೀಮ-
ರಾಯನೆಂದೆನಿಸಿದ ಕೌರವ ಬಲದಿ ||
ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ೨
ಕಾಯಜಪಿತನ ಮುಂದೆ ಕೌರವರ ತಂದು ರಾಜ-
ಸೂಯಯಾಗವ ಮಾಡಿದ ಬಲವಂತ ||
ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ೩
ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-
ಕರುಣಾಕರನಾಗಿ ಶರಣರ ಪೊರೆವ ||
ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ ೪
ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿ
ಪಂಕಜನಾಭ ಶ್ರೀ ಪುರಂದರವಿಠಲನ
ಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ ೫

೧೭೮
ನೆನೆವೆನು ಅನುದಿನ ನಿಮ್ಮ ಮಹಿಮೆಯನು-ಮಧ್ವರಾಯಾ |
ಸನಕಾದಿ ಮುನಿವೃಂದ ಸೇವಿತ ಪಾದಾಬ್ಜ-ಮಧ್ವರಾಯಾ ಪ
ಕಲಿಮಲದಿ ಜ್ಞಾನ ಕಲುಷಿತವಾಗಲು ಮಧ್ವರಾಯಾ |
ನಳಿನಾಕ್ಷನಾಜ್ಞೆಯಿಂದಿಳೆಯೊಳಗುದಿಸಿದೆ-ಮಧ್ವರಾಯಾ ೧
ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತ-ಮಧ್ವರಾಯಾ |
ಜೀವೇಶರೊಂದೆಂಬ ಮತವ ಭೇದಿಸಿದೆ-ಮಧ್ವರಾಯಾ ೨
ಸೂತ್ರಾರ್ಥಂಗಳನೆಲ್ಲ ವೇತೃಗಳಿಗೆ ತಿಳಿಸಿ-ಮಧ್ವರಾಯಾ |
ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ-ಮಧ್ವರಾಯಾ ೩
ಸುಜನರ ಹೃದಯದಿ ಸೇರಿದ್ದ ತಮಸಿಗೆ-ಮಧ್ವರಾಯಾ |
ನಿಜ ಜ್ಞಾನ ರವಿಯಂತೆ ಕಿರಣವ ಹರಡಿದೆ-ಮಧ್ವರಾಯಾ ೪
ವ್ಯಾಸದೇವರಿಗಭಿವಂದಿಸಿ ಬದರಿಯಲಿ-ಮಧ್ವರಾಯಾ ||
ಶ್ರೀಶಪುರಂದರವಿಠಲ ದಾಸನಾದೆ-ಮಧ್ವರಾಯಾ ೫