Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಿ. ಮಾದೇಗೌಡ

ಜನಸೇವೆಯೇ ಜನಾರ್ದನ ಸೇವೆಯೆಂದು ನಂಬಿ ನಡೆದ ವಿರಳ ರಾಜಕಾರಣಿ ಡಿ. ಮಾದೇಗೌಡ, ಸಾವಿರಾರು ಜನರಿಗೆ ಸೂರು ಕಲ್ಪಿಸಿದ ಜನನಾಯಕ, ಮಾಜಿ ಶಾಸಕರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೯೪೨ರಲ್ಲಿ ಜನಿಸಿದ ಮಾದೇಗೌಡರು ಬಿ.ಎ, ಬಿ.ಎಲ್‌. ಪದವೀಧರರು, ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರಾಜಕಾರಣಿ, ಸಮಾಜಸೇವಕರು, ಜನಪರ ಕಾಳಜಿ, ಸಮಾಜಮುಖಿ ಚಿಂತನೆ ಮಾದೇಗೌಡರ ವಿಶೇಷತೆ, ಮೈಸೂರಿನ ಸಿಐಟಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೮ ಬಡಾವಣೆಗಳನ್ನು ನಿರ್ಮಿಸಿ ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಸೂರು ಕಲ್ಪಿಸುವ ಮೂಲಕ ಮನೆಮನೆ ಮಾದೇಗೌಡರೆಂದು ಜನಜನಿತರಾದವರು, ಆಶಾಮಂದಿರ ವಸತಿ ಯೋಜನೆ ಅನುಷ್ಠಾನಕ್ಕಾಗಿ ಹುಡ್ಕೋ ಸಂಸ್ಥೆಯಿಂದ ಪುರಸ್ಕಾರಕ್ಕೂ ಪಾತ್ರರಾದವರು. ಕುಂಬಾರಕೊಪ್ಪಲು ವಾರ್ಡ್‌ನಲ್ಲಿ ನಿರ್ಮಲನಗರ ಯೋಜನೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಕೀರ್ತಿ ಅವರದ್ದು. ಶೂನ್ಯ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ವಾರ್ಡ್‌ ಆಗಲು ಕಾರಣೀಕರ್ತರು. ಭಾರತ ಸೇವಾದಳ, ಯೂಥ್ ಹಾಸ್ಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ, ನಗರಾಭಿವೃದ್ಧಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರು, ಮೇಲ್ಮನೆಯ ಸದಸ್ಯರಾಗಿ ಅನನ್ಯ ಸೇವೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ರೂವಾರಿ, ಬಡಾವಣೆಗಳಲ್ಲಿ ಸಸ್ಯಾರಾಧನೆ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿರುವ ಪರಿಸರ ಪ್ರೇಮಿ, ದಣಿವರಿಯದ ಸಮಾಜಸೇವಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದೇವಿದಾಸ ಶೆಟ್ಟಿ

ಮುಂಬಯಿ ನೆಲದಲ್ಲಿ ಕನ್ನಡದ ಪ್ರತಿಭಾಶಕ್ತಿಯನ್ನು ಬೆಳಗಿದವರು ದೇವಿದಾಸ ಶೆಟ್ಟಿ, ಚಿತ್ತಕಲಾವಿದ, ಮುಖಪುಟ ವಿನ್ಯಾಸಕ, ಬರಹಗಾರ, ಮ್ಯೂರಲ್ ಕಲಾವಿದರಾಗಿ ಹೆಜ್ಜೆಗುರುತು ಮೂಡಿಸಿರುವ ಪ್ರತಿಭಾಶಾಲಿ. ಮುಂಬಯಿನಲ್ಲೇ ಹುಟ್ಟಿ ಬೆಳೆದ ದೇವಿದಾಸ ಶೆಟ್ಟಿ ಅವರು ಕನ್ನಡದಲ್ಲೇ ವಿದ್ಯಾಭ್ಯಾಸ ಕಲಿತವರು. ಬಾಲ್ಯದಲ್ಲೇ ಸೆಳೆದ ಚಿತ್ರಕಲೆಗೆ ಬದುಕು ಸಮರ್ಪಿಸಿಕೊಂಡವರು. ರೇಖಾಚಿತ್ರ, ಮ್ಯೂರಲ್ ಕಲಾಭಿವ್ಯಕ್ತಿ ಹಾಗೂ ಮುಖಪುಟ ವಿನ್ಯಾಸದಲ್ಲಿ ಕೈಚಳಕ ತೋರಿದ ಕಲಾವಿದರು. ದೇಶ-ವಿದೇಶಗಳಲ್ಲಿ ೭೮ ಏಕವ್ಯಕ್ತಿ ಪ್ರದರ್ಶನ, ೪೫ ಸಾಮೂಹಿಕ ಕಲಾಪ್ರದರ್ಶನದ ಜತೆಗೆ ೨೪೦ ಕಲಾಶಿಖರಗಳಲ್ಲಿ ಭಾಗಿಯಾದ ಹೆಗ್ಗಳಿಕೆ. ಕನ್ನಡ, ಇಂಗ್ಲೀಷ್, ಹಿಂದಿ, ಬಂಗಾಳಿ, ಮರಾಠಿಯ ೨೫೦ ಪುಸ್ತಕಗಳಿಗೆ ಮುಖಪುಟ ವಿನ್ಯಾಸ. ದೇವ್‌ಮಾಣಿಸ್ ಎಂದೇ ಜನಜನಿತರು. ಅತಿದೊಡ್ಡ ಲೋಹದ ಮ್ಯೂರಲ್ ಆರ್ಟ್, ಅತಿಎತ್ತರದ ಗಣೇಶ ಮ್ಯೂರಲ್ ಆರ್ಟ್ ಸೇರಿ ಹಲವು ವಿಭಿನ್ನ ಕಲಾಕೃತಿಗಳಿಂದ ಜನಪ್ರಿಯರು, ಬದುಕು ಬಿಡಿಸಿದ ಚಿತ್ರಗಳು, ಅರಳಿದ ಹೂವುಗಳು, ರೇಖೆಯಲ್ಲಿ ಜೀವನ ಪಯಣ ಮುಂತಾದ ೮ ಕೃತಿಗಳ ರಚನಾಕಾರರು. ೫೦೦೦ಕ್ಕೂ ಅಧಿಕ ರೇಖಾಚಿತ್ರಗಳನ್ನು ರಚಿಸಿರುವ ದೇವಿದಾಸ್ ಶೆಟ್ಟಿ ಬಾಂಬೆ ಆರ್ಟ್ ಸೊಸೈಟಿ, ಆರ್ಟ್ ಸೊಸೈಟಿ ಆಫ್ ಇಂಡಿಯಾದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರು. ರಾಮಾಯಣ-ಮಹಾಭಾರತದ ರೇಖಾಚಿತ್ರಗಳಲ್ಲಿ ನಿರತರಾಗಿರುವ ಅವರು ೫೫ ವರ್ಷಗಳ ಹಿರಿತನವುಳ್ಳ ಕಲಾಚೇತನ.

Categories
ಕ್ರೀಡೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ

ಕ್ರೀಡೆಯೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ವಿಕಲಚೇತನ ದತ್ತಾತ್ರೇಯ ಗೋವಿಂದ ಕುಲಕರ್ಣಿ, ಶಿಕ್ಷಕ, ಪತ್ರಕರ್ತ, ಲೇಖಕ, ತರಬೇತಿಗಾರ, ಜಾನಪದ ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ೧೯೬೫ರಲ್ಲಿ ಜನಿಸಿದ ದತ್ತಾತ್ರೇಯ ಗೋವಿಂದ ಕುಲಕರ್ಣಿ ಅವರು ಹುಟ್ಟು ವಿಕಲಚೇತನರು. ಆದರೆ, ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಾಧಕರಾಗಿ ರೂಪುಗೊಂಡವರು. ಬಿ.ಎ. ಪದವೀಧರರು, ಕಿವುಡ ಮಕ್ಕಳ ವಿಶೇಷ ತರಬೇತಿ ಪಡೆದವರು. ಅನೇಕ ಕಾರ್ಯಾಗಾರಗಳಲ್ಲಿ ಪಾಲ್ಗೊಂಡವರು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯು ಸ್ಥಾಪಿಸಿದ ಕಿವುಡ ಮಕ್ಕಳ ವಸತಿ ಶಾಲೆಯ ಶಿಕ್ಷಕರಾಗಿ ೩೨ ವರ್ಷಗಳಿಂದಲೂ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಗುರು. ಕಿವುಡ–ಮೂಕ ಮಕ್ಕಳನ್ನು ಕ್ರೀಡೆಗೆ ಪ್ರೇರೇಪಿಸಿದವರು. ಶಾಲಾ ಮಕ್ಕಳನ್ನು ಕ್ರೀಡಾಪಟುವಾಗಿ ರೂಪಿಸಿದ ಹಿರಿಮೆ. ಮೂಕವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಉಚಿತ ಪಾಠ, ಕಿರುನಾಟಕಗಳನ್ನು ರಚಿಸಿ ನಿರ್ದೇಶನ, ಮಕ್ಕಳಿಗಾಗಿ ಕೋಲಾಟದ ಪದಗಳನ್ನು ಬರೆದು ಹಾಡಿಸಿದ ಹೆಗ್ಗಳಿಕೆ. ಹಲವಾರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದ ಕ್ರೀಡಾಪಟು. ಪತ್ರಕರ್ತನಾಗಿಯೂ ದುಡಿದ ಅನುಭವ. ಭಾಷಣ, ಉಪನ್ಯಾಸ ಮತ್ತಿತರ ತುಂಬು ಚಟುವಟಿಕೆಗಳಿಂದ ಗಮನಸೆಳೆದ, ವಿಕಲಚೇತನ ಮಕ್ಕಳಿಗೆ ಸ್ಫೂರ್ತಿ ತುಂಬಿದ ಮಾದರಿ ಸಾಧಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಕರಿಯಪ್ಪ

ಗ್ರಾಮೀಣರಿಗೆ ವೈದ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯವನ್ನೇ ಬದುಕಿನ ಕಾಯಕವಾಗಿಸಿಕೊಂಡವರು ಸಿ. ಕರಿಯಪ್ಪ, ಸಾವಿರಾರು ಬಡವರ ಕಣ್ಣಲ್ಲಿ ಬೆಳಕು ಮೂಡಿಸಿದ ಮಾದರಿ ಸಮಾಜಸೇವಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನರಸೀಪುರದ ಭೂಗಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜನಿಸಿದ ಕರಿಯಪ್ಪ ಓದಿದ್ದು ಪಿಯುಸಿ, ಕಣ್ಣಿನ ಕುರಿತ ಡಿಪ್ಲೋಮಾ, ಬಾಲ್ಯದಲ್ಲೇ ಆರ್‌ಎಸ್‌ಎಸ್ ಸಖ್ಯ ಶಿಕ್ಷವರ್ಗಾ ಪಡೆದು ಕಾರ್ಯವಾಹಕನಾಗಿಯೂ ದುಡಿದ ವೇಳೆಯೇ ಸೇವೆಗೆ ಬದುಕು ಮೀಸಲಿಡಬೇಕೆಂಬ ದಿವ್ಯನಿರ್ಧಾರ, ಅಯೋಧ್ಯೆಯ ರಥಯಾತ್ರೆಯಲ್ಲಿ ಭಾಗಿಯಾದ ಮೇಲೆ ಬದುಕೇ ಸೇವಾಕ್ಷೇತ್ರ, ಆರೋಗ್ಯ ಇಲಾಖೆಯ ನೇತ್ರ ಪರೀಕ್ಷಕನಾದ ಬಳಿಕ ಬಡಜನರ ಕಣ್ಣಿನ ಆರೋಗ್ಯರಕ್ಷಣೆಗಾಗಿ ಸಂಕಲ್ಪ, ಹಳ್ಳಿಗಳಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಖರಗಳ ಆಯೋಜನೆ, ಉಚಿತ ಕನ್ನಡಕಗಳನ್ನು ಕೊಡಿಸುವ ಕಾರ್ಯಕ್ಕೆ ಮುಂದಡಿ. ವಾರಕ್ಕೆ ೨೦ ಜನರಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಜತನದಿಂದ ಮಾಡಿಕೊಂಡು ಬಂದ ಕಾಯಕ, ಮೂರು ದಶಕಗಳಲ್ಲಿ ೧೦ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೫ ಸಾವಿರ ಬಡವರಿಗೆ ಉಚಿತ ಕನ್ನಡಕಗಳನ್ನು ದೊರೆಯುವಂತೆ ಮಾಡಿದ ಸಾರ್ಥಕತೆ, ವೃತ್ತಿಯಿಂದ ನಿವೃತ್ತರಾದರೂ ವೈದ್ಯಕೀಯ ಸೇವೆ ತಲುಪಿಸುವ ಕಾರ್ಯದಲ್ಲಿ ಅನವರತ ನಿರತ ಅನುಕರಣೀಯ ಸಮಾಜಮುಖಿ.

Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಶೇಖರ್‌ ನಾರಾಯಣಪುರ

ಬೇಸಾಯ ಲಾಭದಾಯಕ ಎಂಬುದನ್ನು ನಿರೂಪಿಸಿದ ಕೃಷಿಪಂಡಿತರು ಎನ್.ಎಸ್. ಚಂದ್ರಶೇಖರ್, ನೈಸರ್ಗಿಕ ಕೃಷಿಯ ಪ್ರತಿಪಾದಕ, ರೈತರ ಆಶಾಕಿರಣ, ಆದರ್ಶ ಕೃಷಿರತ್ನ, ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಲ್ಲಿ ೧೯೬೦ರಲ್ಲಿ ಜನಿಸಿದ ಚಂದ್ರಶೇಖರ್ ಮೂಲತಃ ಕೃಷಿಕರಾದರೂ ಬಹುರೂಪಿ, ೧೫ ವರ್ಷದ ಅನುಭವವುಳ್ಳ ಪತ್ರಿಕೋದ್ಯಮಿ, ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಧ್ಯಯನಕ್ಕಾಗಿ ೨೪ ಸಾವಿರ ಹಳ್ಳಿಗಳ ವೀಕ್ಷಿಸಿದ ಅಲೆಮಾರಿ, ೨೦೦೯ರಲ್ಲಿ ಕೃಷಿರಂಗಪ್ರವೇಶ, ಉಳುಮೆ ಮಾಡದೇ, ಗೊಬ್ಬರ ಬಳಸದೇ, ಔಷಧಿ ಸಿಂಪಡಿಸದೇ ನೈಸರ್ಗಿಕ ವಾತಾವರಣ ಸೃಷ್ಟಿಸಿ ಬೆಳೆಗಳ ಉತ್ಪಾದಿಸಿ ನೈಸರ್ಗಿಕ ಕೃಷಿಯಲ್ಲಿ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ ತೋರಿಸಿದ ಪ್ರಗತಿಪರ ಕೃಷಿಕ, ಕಾಫಿ, ಕೋಕೋ, ಬಾಳೆ, ೧೦ ವಿಧದ ಹಣ್ಣಿನ ಗಿಡಗಳು, ಜಾಯಿಕಾಯಿ ಬೆಳೆದ ಕೃಷಿಋಷಿ, ನೈಸರ್ಗಿಕ ಕೃಷಿ ಕುರಿತು ೧೫೦೦ ರೈತರಲ್ಲಿ ಅರಿವು ಮೂಡಿಸಿದ ಹೆಗ್ಗಳಿಕೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಸಮ್ಮೇಳನ, ಆಕಾಶವಾಣಿ, ದೂರದರ್ಶನಗಳಲ್ಲಿ ಉಪನ್ಯಾಸ, ರೈತಬಳಗ ರಚಿಸಿ ಕೃಷಿ ಚಟುವಟಿಕೆ ಕುರಿತು ನಿರಂತರ ಸಮಾಲೋಚನೆ, ಪ್ರತಿಷ್ಠಿತ ಕೃಷಿಪಂಡಿತ ಪ್ರಶಸ್ತಿ, ವಾರಣಾಸಿಯ ಕೃಷಿರತ್ನ ಪ್ರಶಸ್ತಿ, ಗುಜರಾತ್ ಸರ್ಕಾರದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇನ್ನಿತರ ಗೌರವಗಳಿಂದ ಭೂಷಿತರು, ಲೇಖಕರೂ ಆಗಿರುವ ಚಂದ್ರಶೇಖರ್ ಮಾದರಿ ಕೃಷಿಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಜಿ. ಶ್ರೀನಿವಾಸನ್

ತಳಸಮುದಾಯದ ಏಳ್ಗೆಗೆ ಶ್ರಮಿಸಿ ಉದ್ಯಮಶೀಲತೆಗೆ ನೆರವಾದ ವಿಶಿಷ್ಟ ಸಮಾಜಸೇವಕ, ಸಿ.ಜಿ.ಶ್ರೀನಿವಾಸನ್, ಬಹುಮುಖಿ ಚಿಂತಕ, ದಲಿತೋದ್ಧಾರದ ಕನಸುಗಾರ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಜನಿಸಿದ ಶ್ರೀನಿವಾಸನ್ ಅಕ್ಷರದಿಂದಲೇ ಅರಳಿದವರು. ಸ್ನಾತಕೋತ್ತರ ಪದವಿ, ಎಲ್‌ಎಲ್‌ಬಿ ಕಲಿತವರು. ವಿದ್ಯಾರ್ಥಿ ಜೀವನದಲ್ಲೇ ನಾಯಕರಾಗಿ ಸೇವೆ. ಹೊಟ್ಟೆಪಾಡಿಗೆ ಕೆಎಸ್‌ಎಸ್‌ಐಡಿಸಿಗೆ ಸೇರ್ಪಡೆಗೊಂಡು ಮುಖ್ಯ ವ್ಯವಸ್ಥಾಪಕ ಹುದ್ದೆಗೇರಿದರೂ ತುಳಿತಕ್ಕೊಳಗಾದ ದಲಿತೋದ್ಧಾರದ ಕನಸಿನ ಸಾಕಾರಕ್ಕಾಗಿ ಸ್ವಯಂನಿವೃತ್ತಿ, ದಲಿತರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಸತತ ಪರಿಶ್ರಮ, ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ, ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿಯಾಗಿ ಅಹರ್ನಿಶಿ ಸೇವೆ. ದಲಿತ ಕೈಗಾರಿಕೋದ್ಯಮಿಗಳಿಗಾಗಿಯೇ ವಿಶೇಷ ಕೈಗಾರಿಕಾ ನೀತಿ ಜಾರಿಗೆ ಬರುವಲ್ಲಿ ಸಾಫಲ್ಯ ಕಂಡ ಹೋರಾಟ, ಸ್ವಯಂ ಕೈಗಾರಿಕೋದ್ಯಮಿ, ಸಮಾಜಸೇವಕ ಹಾಗೂ ವ್ಯವಸಾಯಗಾರರಾಗಿ ಬಹುಮುಖಿ ಕ್ರಿಯಾಶೀಲತೆ, ದಲಿತರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಸಾರ್ಥಕತೆಯ ಸಿ.ಜಿ. ಶ್ರೀನಿವಾಸನ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಸಮಸಮಾಜ ನಿರ್ಮಾಣದ ಆಶಯಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಬಿ. ವಿ. ನಾಯ್ಡು

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ವಿಕ್ರಮಗಳ ಮೂಲಕ ಅಮೂಲ್ಯ ಸೇವೆ ಸಲ್ಲಿಸಿದ ಉದ್ಯಮಿ ಬಿ.ವಿ.ನಾಯ್ಡು. ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್‌ನ ರೂವಾರಿ, ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಿ.ವಿ.ನಾಯ್ಡು ಅವರದ್ದು ಪಾರಮ್ಯ ಸಾಧನೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರರಾದ ಬಿ.ವಿ.ನಾಯ್ಡು ಕೇಂದ್ರ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ಅಧಿಕಾರಿಯಾಗಿ ೧೯೮೭ರಲ್ಲಿ ವೃತ್ತಿ ಬದುಕು ಆರಂಭಿಸಿದವರು. ದೇಶದಲ್ಲಿ ಮೊಟ್ಟಮೊದಲ ಇ-ಮೇಲ್ ಜಾಲ ಮತ್ತು ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದವರು. ೧೯೯೨ರಲ್ಲಿ ಐಟಿ ಉದ್ಯಮವನ್ನು ಉತ್ತೇಜಿಸಲು ಎಸ್‌ಐಪಿಐಗೆ ನಿಯೋಜಿತರಾದ ಬಿ.ವಿ.ನಾಯ್ಡು ಹದಿನೈದು ವರ್ಷಗಳಲ್ಲಿ ಕರ್ನಾಟಕದಲ್ಲಿದ್ದ ಐಟಿಕಂಪನಿಗಳ ಸಂಖ್ಯೆಯನ್ನು ಹದಿಮೂರರಿಂದ ಎರಡು ಸಾವಿರಕ್ಕೆ ಹೆಚ್ಚಿಸಿದ ಪ್ರವರ್ತಕರು. ಬೆಂಗಳೂರಿಗೆ ಸಿಲಿಕಾಲ್ ವ್ಯಾಲಿ ಎಂಬ ಜಾಗತಿಕ ಮನ್ನಣೆ ದೊರೆಯಲು ಕಾರಣೀಕರ್ತರು, ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಡಿಜಿಟಲ್ ಗೇಟ್‌ವೇ ತೆರೆದ ಸಾಧಕರು. ೨೦೦೦ರಲ್ಲಿ ಎಸ್.ಎಂ.ಕೃಷ್ಣ ಅವರು ರಚಿಸಿದ್ದ ಮುಖ್ಯಮಂತ್ರಿಗಳ ಕಾರ್ಯಪಡೆಯ ಸದಸ್ಯರಾಗಿದ್ದವರು. ಮೂವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಐಟಿ ಉದ್ಯಮದಲ್ಲಿ ಅನೇಕ ಗುರುತರ ಸಾಧನೆಗಳನ್ನು ದಾಖಲಿಸಿರುವ ಬಿ.ವಿ. ನಾಯ್ಡು ಕರ್ನಾಟಕ ಜ್ಞಾನ ಆಯೋಗದ ಸದಸ್ಯರು, ಪ್ರಸ್ತುತ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕ ವಿದ್ವತ್ಮಣಿ.

Categories
ಚಲನಚಿತ್ರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅವಿನಾಶ್

ಕನ್ನಡ ಚಿತ್ರರಂಗದ ಮಧ್ಯತಲೆಮಾರಿನ ಅತ್ಯಂತ ಪ್ರಮುಖ ಪೋಷಕ ಕಲಾವಿದರು ಅವಿನಾಶ್, ಚಾರಿತ್ರಿಕ ಪಾತ್ರಗಳಿಗೆ ಜೀವತುಂಬಿದ ಅಭಿಜಾತ ನಟ, ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ವಿಶಿಷ್ಟ ಛಾಪೊತ್ತಿದ ಪಂಚಭಾಷಾ ತಾರೆ, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ೧೯೫೯ರಲ್ಲಿ ಜನಿಸಿದ ಅವಿನಾಶ್ ಅಪ್ಪಟ ಬಹುಮುಖ ಪ್ರತಿಭೆ, ಮೈಸೂರು ವಿವಿಯಲ್ಲಿ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದ ಸುಶಿಕ್ಷಿತರು, ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯಲಿಂಗ್‌ ಹಾಗೂ ಬೆಂಗಳೂರಿನ ಎಂಇಎಸ್‌ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದವರು. ಬಾಲ್ಯದಿಂದಲೂ ನಟನೆ, ರಂಗಭೂಮಿಯೆಡೆಗೆ ಅಪಾರ ಒಲವು, ಲಂಡನ್‌ನ ಮರ್ಮೈಡ್ ಥಿಯೇಟರ್‌ನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತ ಕನಸುಗಾರ, ಬಿ.ಜಯಶ್ರೀ ಅವರ ಸ್ಪಂದನ ಹಾಗೂ ಶಂಕರ್‌ನಾಗ್‌ರ ಸಂಕೇತ್‌ ತಂಡಗಳ ರಂಗಪ್ರಯೋಗಗಳಲ್ಲಿ ಬಣ್ಣ ಹಚ್ಚುವ ಮೂಲಕ ಕಲಾರಂಗಕ್ಕೆ. ಜಿವಿ ಅಯ್ಯರ್‌ರ ಮಧ್ವಾಚಾರ್ಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಂಯುಕ್ತ’ ಚಿತ್ರದಿಂದ ಮುನ್ನೆಲೆಗೆ, ಆನಂತರದ ಮೂರೂವರೆ ದಶಕಗಳು ಅಪ್ಪಟ ಸಿನಿಯಾನ, ಕಠಿಣ ಎನಿಸುವಂತಹ ಸಂಕೀರ್ಣ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆ, ಪೋಷಕಪಾತ್ರಗಳ ಘನತೆ ಹೆಚ್ಚಿಸಿದ ಕಲಾವಂತಿಕೆ, ೨೦೦ಕ್ಕೂ ಹೆಚ್ಚು ನಿರ್ದೇಶಕರ ಗರಡಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಸೇರಿದಂತೆ ಒಟ್ಟು ೭೦೦ ಚಿತ್ರಗಳಲ್ಲಿ ನಟಿಸಿದ ಮಹಾಹಿರಿಮೆ, ಕರ್ನಾಟಕ, ತಮಿಳುನಾಡು ರಾಜ್ಯ ಪ್ರಶಸ್ತಿಗಳಿಗೂ ಪಾತ್ರವಾಗಿರುವ ಅವಿನಾಶ್ ಬೆಳ್ಳಿತೆರೆ ಕಂಡ ಅತ್ಯುತ್ತಮ ಪೋಷಕ ಕಲಾವಿದರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಶೋಕಬಾಬು ನೀಲಗಾರ

ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿಗೈದು ಸೈ ಎನಿಸಿಕೊಂಡ ಅಶೋಕಬಾಬು ನೀಲಗಾರ ಅಪ್ಪಟ ದೇಸೀ ಪ್ರತಿಭೆ. ರಂಗಭೂಮಿ, ಕಿರುತೆರೆ, ಚಲನಚಿತ್ರ ಕ್ಷೇತ್ರದಲ್ಲೂ ಗುರುತು ಮೂಡಿಸಿದ ಬಹುಮುಖಿ ಸಾಧಕ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಶಿಂಧಿಕುರಬೆಟ್ಟ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಅಶೋಕಬಾಬು ಹೆಚ್ಚು ಕಲಿತವರಲ್ಲ, ಓದಿದ್ದು ಮಾಧ್ಯಮಿಕ ಶಿಕ್ಷಣದವರೆಗಷ್ಟೆ, ಹೊಟ್ಟೆ ಹೊರೆಯುವ ಲ್ಯಾಬೋರೇಟಲಿಯಲ್ಲಿ ದುಡಿಯುತ್ತಲೇ ಅನುಭವದ ಬುತ್ತಿ ತುಂಬಿಕೊಂಡವರು. ಅನುಭಾವಕ್ಕೆ ಅಕ್ಷರ ಲೇಪಿಸಿ ಸಾಹಿತ್ಯಲೋಕ ಪ್ರವೇಶಿಸಿ ಎತ್ತಿದ ಅವತಾರಗಳು ಹತ್ತಾರು, ಲೇಖಕ, ಕಾದಂಬರಿಕಾರ, ಕವಿ, ನಾಟಕಕಾರ, ಹಾಡುಗಾರ, ರಂಗನಟ, ನಿರ್ದೇಶಕ, ಸಾಮಾಜಿಕ ಕಾರ್ಯಕರ್ತರಾಗಿ ಬಹುಮುಖಿ ಕಾರ್ಯ. ಮಾಗಿದ ಕನಸು, ಬಿಡಿಸಲಾಗದ ಬೆಸುಗೆ, ನೆಲಕಚ್ಚಿದನೌಕೆ, ಕನಸು-ಮನಸು, ಓ ಪ್ರೇಮಿ ಎಲ್ಲಿರುವೆ ಮುಂತಾದ ಸಾಮಾಜಿಕ ಕಾದಂಬರಿ, ಹಲವು ಕಥಾಸಂಕಲನ, ನಾಟಕಗಳು, ಹತ್ತಕ್ಕೂ ಹೆಚ್ಚು ಧ್ವನಿಸುರುಳಿನಾಟಕಗಳು, ಮೂರು ಆಕಾಶವಾಣಿ ನಾಟಕ, ಭಜನಾಪದಗಳನ್ನು ಸೇರಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ. ನಟ-ಗಾಯಕನಾಗಿ ರಂಗದ ಮೇಲೆ ಬೆಳಗಿದ ಹಳ್ಳಿಹೈದ. ಕಿರುತೆರೆ–ಚಲನಚಿತ್ರದಲ್ಲೂ ನಟಿಸಿ ಮೋಡಿ ಮಾಡಿದರೂ ಎಲೆಮರೆಯ ಕಾಯಿಯಂತೆಯೇ ಉಳಿದಿರುವ ಪ್ರತಿಭಾವಂತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಅರವಿಂದ ಪಾಟೀಲ್

ಕೊಲ್ಲಿ ರಾಷ್ಟ್ರದಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡಿದ ಸಮಾಜಮುಖಿ ಅರವಿಂದ ಪಾಟೀಲ್, ಕನ್ನಡ ಪರಿಚಾರಕರು, ಸಂಸ್ಕೃತಿ ಚಿಂತಕರು. ೧೯೫೮ರಲ್ಲಿ ಜನಿಸಿದ ಅರವಿಂದ ಶಿವಮೂರ್ತಿ ಪಾಟೀಲ್ ಸಿವಿಲ್ ಇಂಜಿನಿಯಲಿಂಗ್‌ ಪದವೀಧರರು. ಪರಿಸರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ. ೧೯೯೩ರಲ್ಲಿ ಕೊಲ್ಲಿ ರಾಷ್ಟ್ರದ ಕತಾರ್‌ನಲ್ಲಿ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದ ಅರವಿಂದ ಪಾಟೀಲ್ ಕತಾರ್‌ನಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರು ಅನುಭವಿಸುತ್ತಿದ್ದ ಸಂಕಟಗಳಿಗೆ ಮರುಗಿದವರು. ಕಾರ್ಮಿಕರ ದನಿಯಾಗಿ ದುಡಿದವರು. ೨೦ ವರ್ಷಕ್ಕೂ ಮಿಗಿಲು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹೆಗ್ಗಳಿಕೆ, ಕರ್ನಾಟಕ ಮತ್ತು ಕತಾರ್ ದೇಶದ ನಡುವಿನ ಸಾಂಸ್ಕೃತಿಕ ಕೊಂಡಿ. ಕತಾರ್ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಕಾಯಕ. ವಿಶ್ವ ಕನ್ನಡ ಸಾಂಸ್ಕೃತಿಕ ಸಮಾವೇಶದ ಸಂಚಾಲಕ, ಇಂಡಿಯನ್ ಸೊಸೈಟಿ ಆಫ್ ದುಖಾನ್ ಅಧ್ಯಕ್ಷರಾಗಿ ಭಾರತೀಯ ಸಾಹಿತ್ಯ-ಸಂಸ್ಕೃತಿಯನ್ನು ಪಸರಿಸುವ ಸ್ತುತ್ಯಾರ್ಹ ಕಾರ್ಯ. ಬಡಮಕ್ಕಳಿಗೆ ಆರ್ಥಿಕ ನೆರವು, ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವಲ್ಲಿ ಮಾನವೀಯ ಸೇವೆ, ಕಾರ್ಮಿಕರಿಗಾಗಿಯೇ ೨೫ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ, ಆಹಾರ-ಬಟ್ಟೆಗಳ ದಾನ ಮುಂತಾದ ಹಲವು ಸೇವಾಕಾರ್ಯಗಳನ್ನು ಕೈಗೊಂಡ ಹೃದಯವಂತ, ನಿವೃತ್ತಿಯ ನಂತರ ಕರ್ನಾಟಕದಲ್ಲೂ ಅನೇಕ ಬಗೆಯ ಸೇವಾಕೈಂಕರ್ಯದಲ್ಲಿ ತೊಡಗಿರುವ, ಹತ್ತಾರು ಪ್ರಶಸ್ತಿ-ಗೌರವಗಳಿಗೂ ಪಾತ್ರವಾಗಿರುವ ವಿರಳ ಸೇವಾಕರ್ತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅ.ರಾ.ಮಿತ್ರ

ಕನ್ನಡ ಸಾರಸ್ವತ ಲೋಕದ ವಿದ್ವತ್ಪರಂಪರೆಯನ್ನು ಬೆಳಗಿದ ಸಾಹಿತಿ ಅ.ರಾ.ಮಿತ್ರ, ಹಾಸ್ಯಜ್ಞ, ಉಪನ್ಯಾಸಕ, ಅಧ್ಯಾಪಕ, ಬರಹಗಾರ, ವಿಮರ್ಶಕರಾಗಿ ನಾಡಿನ ಮನೆಮಾತಾದ ಸಾಧಕರು, ಹಾಸನ ಜಿಲ್ಲೆ ಬೇಲೂರಿನಲ್ಲಿ ೧೯೩೫ರಲ್ಲಿ ಜನಿಸಿದ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತ್ಯಲೋಕದಲ್ಲಿ ಅ.ರಾ.ಮಿತ್ರರೆಂದೇ ಸುವಿಖ್ಯಾತರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ೧೯೫೫ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸೆಂಟ್ ಜೋಸೆಫ್‌ ಕಾಲೇಜಿನಲ್ಲಿ ವೃತ್ತಿಬದುಕಿಗೆ ಮುನ್ನುಡಿ, ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕರಾಗಿ ಮಡಿಕೇರಿ, ತುಮಕೂರು, ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಅಮೆರಿಕನ್ ಪೀಸ್ ಕೋರ್‌ನಲ್ಲಿ ಕನ್ನಡ ಶಿಕ್ಷಕ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ, ಹಾಸ್ಯಪ್ರಜ್ಞೆ, ಸಜ್ಜನಿಕೆ, ಅಸ್ಖಲಿತ ಮಾತುಗಾರಿಕೆ ಅ.ರಾ.ಮಿತ್ರರ ವಿಶೇಷತೆ. ಅಧ್ಯಯನ-ಬರವಣಿಗೆ ನೆಚ್ಚಿನ ಕಾಯಕ, ಕ್ರಿಯಾಶೀಲತೆ ಅಮಿತೋತ್ಸಾಹದ ಮೂಲಧಾತು, ಹಾಸ್ಯಕೂಟಗಳ ಸಹಸಂಚಾಲಕರಾಗಿ ನಗೆಚಿಮ್ಮಿಸಿದ ವಾಗ್ಮಿ, ಬಾಲ್ಕನಿಯ ಬಂಧುಗಳು, ಯಾರೊ ಬಂದಿದ್ದರು, ನಾನೇಕೆ ಕೊರೆಯುತ್ತೇನೆ ಮುಂತಾದ ಪ್ರಬಂಧ ಸಂಕಲನಗಳು, ವಿಮರ್ಶೆ, ವ್ಯಕ್ತಿಪರಿಚಯ, ಗ್ರಂಥಸಂಪಾದನೆ, ಅನುವಾದದ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅ.ರಾ.ಮಿತ್ರ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅನಕೃ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರಗಳಿಂದ ಭೂಷಿತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆಂಜಿನಪ್ಪ ಸತ್ಪಾಡಿ

ಅಳಿವಿನಂಚಿನಲ್ಲಿರುವ ಕಲೆಯ ಉಳಿವಿಗಾಗಿ ಜೀವತೇಯುತ್ತಿರುವ ಅನನ್ಯ ಕಲಾಚೇತನ ಆಂಜಿನಪ್ಪ ಸತ್ಪಾಡಿ, ಏಕಕಾಲಕ್ಕೆ ೩ ವಾದ್ಯಗಳನ್ನು ನುಡಿಸುವ ರಾಜ್ಯದ ಏಕೈಕ ಕಲಾವಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗವಿಕುಂಟನಹಳ್ಳಿ ಗ್ರಾಮದ ಆಂಜಿನಪ್ಪ ಅಪ್ಪಟ ದೇಸೀ ಪ್ರತಿಭೆ, ಏಕಕಾಲದಲ್ಲಿ ಬಾಯಿ ಮತ್ತು ಮೂಗಿನ ಹೊಳ್ಳೆಗಳ ಮೂಲಕ ಮೂರು ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುವ ಮುಖವೀಣೆ ಕಲಾವಿದರು. ಮೂಗಿನ ಒಂದು ಹೊಳ್ಳೆಯಲ್ಲಿ ನೀರು ತೆಗೆದು ಮತ್ತೊಂದು ಹೊಳ್ಳೆಯಲ್ಲಿ ನೀರು ಬಿಡುತ್ತಲೇ ಬಾಯಿಯಿಂದ ವಾದ್ಯವನ್ನು ನುಡಿಸುವುದು ಆಂಜಿನಪ್ಪರ ಮತ್ತೊಂದು ವಿಶೇಷ, ಈ ಜಲವಾದ್ಯ ಹಾಗೂ ಮುಖವೀಣೆ ನುಡಿಸಬಲ್ಲ ರಾಜ್ಯದಲ್ಲಿ ಬದುಕುಳಿದಿರುವ ಏಕೈಕ ಕಲಾವಿದ ಆಂಜಿನಪ್ಪ ಎಂಬುದು ನಿಜಕ್ಕೂ ಹೆಗ್ಗಳಿಕೆ ಮಾತ್ರವಲ್ಲ, ನಾಡಿನ ಹೆಮ್ಮೆ, ವಂಶಪಾರಂಪರ್ಯವಾಗಿ ಅಪ್ಪನಿಂದ ಬಂದ ಈ ಬಳುವಳಿಯೇ ಆಂಜಿನಪ್ಪಗೆ ಸದಾ ಜೀವನಾಧಾರ. ಭಿಕ್ಷೆ ಬೇಡಿ ಬದುಕುವ ಅನಿವಾರ್ಯತೆಯ ನಡುವೆಯೇ ಆರು ದಶಕಗಳಿಂದಲೂ ಕಲಾಸೇವೆಗೈದ ಅಂಜಿನಪ್ಪಗೆ ೮೨ ಇಆವಯಸ್ಸಿನಲ್ಲೂ ಈ ಕಲೆಯನ್ನು ಉಳಿಸುವರಾರೆಂಬ ಕೊರಗು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ನೂರಾರು ಸನ್ಮಾನಗಳ್ಯಾವುದರಿಂದಲೂ ಸಮಾಧಾನಗೊಳ್ಳದೆ “ಮುಂದೇನು” ಎಂಬ ಚಿಂತೆಯ ಆಂಜಿನಪ್ಪ ಕಲೆಗೆ ಅರ್ಪಿತಗೊಂಡ ಜೀವಿ, ಅಪರೂಪದ ಜಾನಪದ ಕಲಾಷುಷ್ಪ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತ ಕುಲಕರ್ಣಿ

ಹಿಂದೂಸ್ಥಾನಿ ಸಂಗೀತದಲ್ಲಿ ವಿಶೇಷ ಕೃಷಿಗೈದ ಸ್ವರಪ್ರತಿಭೆ ಅನಂತ ಕುಲಕರ್ಣಿ, ಆಕಾಶವಾಣಿಯ ಎ ಗ್ರೇಡ್ ಕಲಾವಿದರು, ದಾಸ ಸಾಹಿತ್ಯ ಪ್ರಚಾರಕರು, ಭಕ್ತಿಸಂಗೀತದಲ್ಲಿ ಅನನ್ಯ ಸೇವೆಗೈದ ಹರಿದಾಸ ಸಂಗೀತ ವಿದ್ವನ್ಮಣಿ, ನಾದಲೋಕಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅನಂತಕುಲಕರ್ಣಿ ಜನಿಸಿದ್ದು ೧೯೫೭ರಲ್ಲಿ. ಗ್ವಾಲಿಯರ್ ಘರಾಣದಲ್ಲಿ ಸ್ವರಾಭ್ಯಾಸ, ಸಂಗೀತದಲ್ಲಿ ಬಿಎ ಪದವಿ, ಪ್ರಯಾಗ ಸಂಗೀತ ಸಮಿತಿಯಿಂದ ಸಂಗೀತ ಮಾರ್ತಾಂಡ, ೧೯೮೬ರಿಂದ ಆಕಾಶವಾಣಿ ಎ ಗ್ರೇಡ್ ಕಲಾವಿದರಾಗಿ ನಿರಂತರ ಸ್ವರಸೇವೆ. ೧೯೯೦ರಿಂದ ದಾಸಸಾಹಿತ್ಯ ಸೇವಾನಿರತರು. ರಾಜ್ಯದ ಹಲವೆಡೆ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಬರೋಡಾ, ಗುಜರಾತ್, ಹರಿದ್ವಾರಗಳಲ್ಲಿ ಭಕ್ತಿಸ್ವರಧಾರೆ, ಜಗನ್ನಾಥದಾಸರ ಹರಿಕಥಾಮೃತಸಾರವನ್ನು ಸುಶ್ರಾವ್ಯವಾಗಿ ಹಾಡಿ ಹರಿದಾಸ ಸಾಹಿತ್ಯ ಜನಸಾಮಾನ್ಯರ ನಾಲಿಗೆಯಲ್ಲಿ ಹರಿಯುವಂತೆ ಮಾಡಿದ ಹೆಗ್ಗಳಿಕೆ, ಈ-ಟಿವಿ, ಉದಯ-ಟಿವಿಯಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ. ಹತ್ತಾರು ಸಿ.ಡಿ ಹಾಗೂ ಧ್ವನಿಸುರುಳಿಗಳನ್ನು ಹೊರತಂದ ಕೀರ್ತಿ, ಹರಿಕಥಾಮೃತಸಾರ ಭೂಷಣ, ಹರಿದಾಸ ಸಂಗೀತಬ್ರಹ್ಮ ರಂಗವಿಠಲ ಪ್ರಶಸ್ತಿ, ಹರಿದಾಸನಿಧಿ, ಮೇಘಮಲ್ಹಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಬಿರುದು ಬಾವಲಿಗಳಿಂದ ಭೂಷಿತರಾದ ಅನಂತ ಕುಲಕರ್ಣಿ ಹಿಂದೂಸ್ತಾನಿ ಸಂಗೀತದ ಅನನ್ಯ ಸಾಧಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು

ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವತ್ಮಣಿ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು. ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರ, ಪ್ರೋತೃಗಳ ಮನ ಅರಳಿಸಿದ ಹರಿದಾಸ ತೀರ್ತನಾ ಶಿರೋಮಣಿ, ಧಾರವಾಡದ ಮಾಳಮಡ್ಡಿಯ ಕಟಗೇರಿಯವರಾದ ಅನಂತಾಚಾರ್ಯರು ಸಂಗೀತ ಆಚಾರ್ಯರೆಂದೇ ಜನಜನಿತ, ದಾಸರಪದ ಗಾಯನದ ಜತೆಗೆ ಅವುಗಳ ಅರ್ಥ, ಸಂದರ್ಭ, ಔಚಿತ್ಯ, ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ವಿವರಿಸಬಲ್ಲಷ್ಟು ಆಳ ಜ್ಞಾನವಂತರು. ದಾಸಸಾಹಿತ್ಯದ ಅನನ್ಯ ಪ್ರಚಾರಕರು. ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಾಕ್ ಹಿಡಿತ, ಸ್ವರಶುದ್ಧಿ, ಭಾವಶುದ್ಧಿಯ ಪಂಡಿತೋತ್ತಮರು. ೧೯ ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಭಂಡಾರ. ಸಾವಿರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಗುರು. ಮನೆಮನೆಗೆ ತೆರಳಿ ಮಕ್ಕಳಿಗೆ ದಾಸರ ಪದ ಕಲಿಸಿದ ಮಹಾನುಭಾವರು. ಹರಿದಾಸ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ಜ್ಞಾನವೃದ್ಧರು. ನೂರಾರು ಸನ್ಮಾನ-ಗೌರವಗಳಾಚೆಗೆ ನಿರ್ಲಿಪ್ತರಾಗಿ ಜೀವನಪ್ರೀತಿ–ನಾದಪ್ರೇಮದಲ್ಲಿ ೯೭ರ ವಯದಲ್ಲೂ ಶಾರದೆಯ ಸೇವೆಯಲ್ಲಿ ತನ್ಮಯರಾಗಿರುವ ವಿರಳಾತಿವಿರಳ ಸಾಧಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಮೃತ ಶಿಶು ನಿವಾಸ ಸಂಸ್ಥೆ

ಅನಾಥ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮಾನವೀಯ ಕಾರ್ಯದಲ್ಲಿ ತನ್ಮಯವಾಗಿರುವ ಸಂಸ್ಥೆ ಅಮೃತ ಶಿಶು ನಿವಾಸ, ಸೇವಾಕಾರ್ಯದಲ್ಲಿ ಅಮೃತಮಹೋತ್ಸವವನ್ನು ದಾಟಿ ಮುನ್ನುಗ್ಗುತ್ತಿರುವ ದಯಾಕೇಂದ್ರ, ಬೆಂಗಳೂರಿನ ಬಸವನಗುಡಿಯ ಹೆಗ್ಗುರುತು ಅಮೃತ ಶಿಶು ನಿವಾಸ, ಅನಾಥ ಮಕ್ಕಳ ಲಾಲನೆ ಪಾಲನೆಗೆಂದೇ ೧೯೪೨ರಲ್ಲಿ ಸ್ಥಾಪಿತವಾದ ಸೇವಾಸಂಸ್ಥೆ (೧೯೪೫ರಲ್ಲಿ ಸೊಸೈಟಿಯಾಗಿ ನೋಂದಾಯಿಸ್ಪಟ್ಟಿದೆ. ಪಾರಸ್ಕಲ್ ಪಟೇಲ, ಸುಶೀಲಾ ಚಿಂತೋಪಂತ್‌, ಡಾ. ಶಂಕರಾಂಬಾಟ್ ಸಂಸ್ಥೆಯ ಸಂಸ್ಥಾಪಕರು. ಗಂಜಾಂ ಭೀಮಾಜ ಮತ್ತು ಎಂ.ಸಿ.ಜಯದೇವ್‌ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಪುಣ್ಯಾತ್ಮರು. ಸಮಾಜದಲ್ಲಿ ತ್ಯಜಿಸಲ್ಪಟ್ಟ ಹಾಗೂ ಅದೃಷ್ಟಹೀನ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವು ನೀಡುವುದು ಸಂಸ್ಥೆಯ ಮೂಲಗುರಿ. ಸಂಸ್ಥೆಯ ಸೇವಾಸತ್ಕಾರ್ಯವನ್ನು ೧೯೫೭ದಲ್ಲಿ ಅಂದಿನ ಮೈಸೂರು ಸರ್ಕಾರ ಬಸವನಗುಡಿಯಲ್ಲಿ ೨೫ ಗುಂಟೆ ಜಾಗವನ್ನು ನೀಡಿದ್ದು ವಿಶೇಷ. ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಸ್ಟೀಸ್ ಜುವೆನೈಲ್ ಆಕ್ಟ್ ಮೂಲಕ ಮಕ್ಕಳ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು ನೂರಾರು ಮಕ್ಕಳ ಬಾಳು ಬೆಳಗಿದೆ. ಪ್ರಸ್ತುತ ಶಿಶು ನಿವಾಸದಲ್ಲಿ ೫೦ ಮಕ್ಕಳು ಪಾಲನೆಯಲ್ಲಿದ್ದಾರೆ. ೧೮ ವರ್ಷದ ಬಳಿಕ ಮಕ್ಕಳಿಗೆ ಸ್ವಾವಲಂಬಿಗಳಾಗಲು ಕೌಶಲ್ಯ ತರಬೇತಿಯನ್ನೂ ನೀಡುತ್ತಿರುವ ಸಂಸ್ಥೆ ಬೆಂಗಳೂರಿನ ದೊಡ್ಡಮಾವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಬಾಲಕಿಯರ ವಸತಿ ನಿಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಅಮೃತಮಹೋತ್ಸವ ದಾಟಿ ೮೦ನೇ ವಸಂತಕ್ಕೆ ಕಾಲಿಟ್ಟಿರುವ ಈ ಮಕ್ಕಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದು ಸೇವೆಯ ಅನಂತ ರೂಪಕ್ಕೆ ಸಾಕ್ಷಿಯಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಗಡಿ ತೋಟ ಸಂಸ್ಥೆ

ಹಾವೇರಿ ಜಿಲ್ಲೆಯಲ್ಲಿ ನೆಲೆನಿಂತಿರುವ ಅಗಡಿ ತೋಟ ಸಾವಯವ ಕೃಷಿ ಪದ್ಧತಿ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ. ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ, ಹಾವೇರಿ ಜಿಲ್ಲೆ ಕುನ್ನೂರು ಗ್ರಾಮದ ಹಚ್ಚಹಸಿರಿನ ಪರಿಸರದಲ್ಲಿರುವ ಅಗಡಿ ತೋಟವನ್ನು ಜಯದೇವ್‌ ಅಗಡಿ ಅವರು ೨೦೦೦ರಲ್ಲಿ ಸ್ಥಾಪಿಸಿದರು. ಸಾವಯವ ಕೃಷಿಯನ್ನು ಉತ್ತೇಜಿಸುವುದು, ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈಸರ್ಗಿಕ ಸಾವಯವ ಆಹಾರ ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಧ್ಯೇಯ. ಗೋಡಂಬಿ ಮತ್ತು ಅಡಿಕೆ ಕೃಷಿಯೊಂದಿಗೆ ನಲವತ್ತು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ‘ಅಗಡಿತೋಟ’ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಸಾವಯವ ಆರೋಗ್ಯವಾಗಿರಿ ಎಂಬ ಮಂತ್ರವನ್ನು ಪಠಿಸುತ್ತಲಿದೆ. ಹಳ್ಳಿ, ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಜೀವನಶೈಲಿಯನ್ನು ಸ್ವಂತವಾಗಿ ಅನುಭವಿಸಲು ಶಿಕ್ಷಣ ನೀಡುತ್ತಲೇ ಅಳಿವಿನಂಚಿನಲ್ಲಿರುವ ೧೦೦೦ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳನ್ನು ತೋಟದಲ್ಲಿ ನೆಡಲಾಗಿದೆ. ಮೆಕ್ಕೆಜೋಳ, ಸೋಯಾಬಿನ್ ಮತ್ತು ಭತ್ತದ ಕೃಷಿಯ ಹೊರತಾಗಿ ಬದನೆ, ಟೊಮೊಟೊ, ಬೀನ್ಸ್ ಮತ್ತು ಕೊತ್ತಂಬರಿಯನ್ನೂ ಬೆಳೆಯಲಾಗುತ್ತಿದೆ. ತೋಟದಲ್ಲಿ ಪರಿಸರ ಹಾನಿ ಮಾಡುವ ಸರ್ವ ಚಟುವಟಿಕೆಗಳನ್ನೂ ನಿಷೇಧಿಸಲಾಗಿದ್ದು ಇದೊಂದು ಮಾದರಿ ಸಾವಯವ ಕೃಷಿ ತೋಟವಾಗಿ ಗಮನ ಸೆಳೆದಿದೆ. ತೋಟದ ಸಂಸ್ಥಾಪಕ ಜಯದೇವ್‌ ಅಗಡಿ ಅವರು ಕೃಷಿಪಂಡಿತ್‌, ಕೃಷಿರತ್ನ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದಾರೆ.

Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಡವಯ್ಯ ಚನ್ನಬಸವಯ್ಯ ಹಿರೇಮಠ

ಉತ್ತರಕರ್ನಾಟಕದ ಗಂಡುಕಲೆ ದೊಡ್ಡಾಟದಲ್ಲಿ ಅನನ್ಯ ಸಾಧನೆಗೈದ ಮೌನಸಾಧಕರು ಅಡವಯ್ಯ ಚನ್ನಬಸವಯ್ಯ ಹಿರೇಮಠ, ಭಾಗವತಿಕೆ ಕಲಾವಿದರು, ದೊಡ್ಡಾಟದ ನಿರ್ದೇಶಕರು.ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಅಡವಯ್ಯ ಹಿರೇಮಠ ಅಪ್ಪಟ ದೇಸೀ ಕಲಾಚೇತನ, ಅಕ್ಷರ ಅರಿಯದ ಜಾನಪದ ಪುಷ್ಪ, ಹದಿನೈದನೇ ವಯಸ್ಸಿನಲ್ಲಿ ಗ್ರಾಮದಲ್ಲಿ ನೋಡಿದ ದೊಡ್ಡಾಟದಿಂದ ಪ್ರಭಾವಿತರಾಗಿ ಕಲಾರಂಗ ಪ್ರವೇಶ. ಸತತ ಪರಿಶ್ರಮದಿಂದ ಕಲೆ ಕರಗತ ಮಾಡಿಕೊಂಡು ತಪಸ್ವಿ, ಉತ್ತಮ ಕಂಠ ಹೊಂದಿದ್ದರಿಂದ ಮಾಸ್ತರ ಆಸೆಯಂತೆ ಕತೆಗಾರಿಕೆಯಲ್ಲಿ ತಲ್ಲೀನ, ೨೫ನೇ ವಯಸ್ಲಿನಿಂದ ದೊಡ್ಡಾಟದ ಕತೆಗಾರಿಕೆ, ನಿರ್ದೇಶನ, ಹಳ್ಳಿಯಿಂದ ಹಳ್ಳಿಗೆ ಕಾಲ್ನಡಿಗೆಯಲ್ಲಿ ಅಲೆದಾಡುತ್ತಾ ಆಸಕ್ತರಿಗೆ ದೊಡ್ಡಾಟ ಕಲಿಸಿದ ಗುರು. ಮೂಡಲಪಾಯ ದೊಡ್ಡಾಟ ಹಾಡುಗಾರಿಕೆಯಲ್ಲಿನ ಮೂವತ್ತು ರಾಗಗಳನ್ನು ಈವರೆಗೂ ಉಳಿಸಿಕೊಂಡು ಬಂದಿರುವ ಏಕೈಕ ಕಲಾವಿದ, ೨೦೦ಕ್ಕೂ ಹೆಚ್ಚು ದೊಡ್ಡಾಟಗಳಿಗೆ ನಿರ್ದೇಶನ ಮಾಡಿರುವ ಹೆಗ್ಗಳಿಕೆ, ಧಾರವಾಡದ ಆಕಾಶವಾಣಿಯಿಂದ ಅಡವಯ್ಯರ ಕತೆಗಾರಿಕೆ ದಾಖಲೀಕರಣಗೊಂಡಿದ್ದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರವಾಗಿರುವ ಅಡವಯ್ಯ ೮೪ರ ಇಳಿವಯಸ್ಸಿನಲ್ಲೂ ಕಲಾಧ್ಯಾನದಲ್ಲಿ ತೊಡಗಿರುವ ಅನನ್ಯ ಜಾನಪದ ಸಂಪತ್ತು.

Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ

ಕಿಟ್ಟಿಯ ಕಥೆ

ಕಿಟ್ಟಿಯ ಕಥೆ

ಕೃತಿ – ಕಿಟ್ಟಿಯ ಕಥೆ

ಲೇಖಕರು – ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ        |        Download

Categories
ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ

ಅಕ್ಕಕ್ಕು ಹಾಡುಗಳೆ

ಕೃತಿ – ಅಕ್ಕಕ್ಕು ಹಾಡುಗಳೆ

ಲೇಖಕರು – ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ     |     Download

Categories
ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ

ತಕರಾರಿನವರು

ಕೃತಿ :   ತಕರಾರಿನವರು

ಲೇಖಕರು : ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ     |     Download